ನಾಡಹಬ್ಬದ ಸಂಭ್ರಮಕ್ಕೆ ‘ಅನಿವಾಸಿ’ಯ ಅಕ್ಷರ ತೇರು!

ನಲ್ಮೆಯ ಓದುಗರೇ, 

ತಮಗೆಲ್ಲರಿಗೂ ನಾಡಹಬ್ಬ ವಿಜಯದಶಮಿಯ ಶುಭಾಶಯಗಳು.ನವರಾತ್ರಿ- ದಸರಾ/ದಶೇರಾ, ದುರ್ಗಾಪೂಜಾ, ಎಂಬೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಹಬ್ಬವನ್ನು ಭಾರತದ ಉದ್ದಗಲಕ್ಕೂ ಹಲವು ರೀತಿಯಿಂದ ಆಚರಿಸಲಾಗುತ್ತದೆ. 

ಕನ್ನಡಿಗರಿಗೆ ದಸರಾ ಎಂದರೆ ಬರೀ ಒಂದು ಆಚರಣೆಯಲ್ಲ, ಅದು ನಮ್ಮನಾಡಹಬ್ಬ. ನಮ್ಮರಾಜ್ಯದ ಪ್ರತಿ ಭಾಗದಲ್ಲೂ ದಸರಾ ಆಚರಿಸುವ ರೀತಿ ಬೇರೆ ಬೇರೆ. ಉತ್ತರ ಕರ್ನಾಟಕದಲ್ಲಿ ನವರಾತ್ರಿಯ ನಸುಕುಗಳಲ್ಲಿ ಬನ್ನೀ ಮರಕ್ಕೆ (ಶಮೀ ವೃಕ್ಷ) ಪ್ರದಕ್ಷಿಣೆ ಹಾಕಿ ದಶಮಿಯ ಮುಂಜಾವಿನಂದು ಬನ್ನಿ ಎಲೆಗಳನ್ನು ತಂದು ‘’ಬನ್ನೀ ಕೊಟ್ಟು ಬಂಗಾರ ಧಾಂಗ ಇರೋಣು’’ಎಂದು ಹೇಳುತ್ತಾ ಪರಸ್ಪರ ಹಂಚಿಕೊಳ್ಳುತ್ತಾರೆ. 

ಕರಾವಳಿ ಭಾಗದಲ್ಲಿ ಸರಸ್ವತಿ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಉತ್ಸವ ಮಾಡಲಾಗುತ್ತದೆ. ಆಗ ತಾನೇ ತೆನೆ ಮೂಡಿಸಿಕೊಂಡು ಘಟ್ಟಿಯಾಗುತ್ತಿರುವ ಭತ್ತದ ಕದಿರನ್ನು ದಾರಂದಕ್ಕೆ ಕಟ್ಟಿ ಆ ಹಸಿ ಭತ್ತದ ಸಿಪ್ಪೆಯನ್ನು ಬಿಡಿಸಿ ಆ ದಿನ ಪಾಯಸದಲ್ಲಿ ಹಾಕುತ್ತಾರೆ.’ಹೊಸತು,’ ’ತೆನೆ ಕಟ್ಟುವುದು’ಎಂದು ಈ ಆಚರಣೆಯನ್ನು ಕರೆಯುತ್ತಾರೆ. 

ಆದರೆ ವಿಜಯದಶಮಿ ದಸರಾ ಎಂದರೆ ಪ್ರತಿಯೊಬ್ಬ ಕನ್ನಡಿಗನ ಮನಸಲ್ಲಿ ಮೂಡುವ ಚಿತ್ರಣ ಮೈಸೂರು ದಸರೆಯದು. ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರೆಯ ಉತ್ಸವದ ಕಂಪು ನಾಡು, ದೇಶದ ಗಡಿಗಳ ಮೇರೇ ದಾಟಿ ವಿಶ್ವವಿಖ್ಯಾತವಾಗಿದೆ. ನಮ್ಮನಾಡಿನ ಭವ್ಯ ಪರಂಪರೆಯನ್ನು ಅದರ ಉತ್ಕೃಷ್ಟತೆಯ ಮಹತ್ತನ್ನು ಪಸರಿಸಿದ ಮೈಸೂರು ದಸರಾ ಬಗ್ಗೆ, ಅಲ್ಲಿಯೇ ಹುಟ್ಟಿ ಬೆಳೆದ ಮೂರು ಮಹಿಳಾಮಣಿಗಳು ತಮ್ಮತವರುಮನೆಯ ಹಬ್ಬದ ಸಂಭ್ರಮದ ಕುರಿತು ಮನಸಿನ ಮಾತುಗಳನ್ನ ಅಕ್ಷರದ ಮೂಲಕ ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಅನಿವಾಸಿಯ ಸದಸ್ಯರಾದ ಶ್ರೀಮತಿ ರಮ್ಯಾ ಭಾದ್ರಿ ಅವರು ಕವಿತೆಯ ಮೂಲಕ ಮೈಸೂರು ದಸರಾ ದರ್ಶನ ಮಾಡಿಸಿದ್ದಾರೆ. 

‘ಅನಿವಾಸಿ’ಯ ಅಂಗಳಕ್ಕೆ ಮೊದಲ ಸಲ ಹಬ್ಬದ ದಿನವೇ ಅಡಿಯಿಟ್ಟಿರುವ ಶ್ರೀಮತಿ ಶ್ರೀರಂಜನಿ ವರುಣ್ ಮತ್ತು ಶ್ರೀಮತಿ ರಂಜನಾ ನಿರಂಜನ್ ಹೆಗಡೆ ಅವರು ದಸರಾ ಹಬ್ಬದ ನೆನಪುಗಳ ಬುತ್ತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.   

ಈ ಎಲ್ಲ ಬರಹಗಳಿಗೆ ಗರಿ ಇಟ್ಟಂತೆ ಅನಿವಾಸಿ ಬಳಗದ ನವ ಪೀಳಿಗೆಯ ಪುಟ್ಟ ಬರಹಗಾರ್ತಿ ಕುಮಾರಿ ಯಾಮಿನಿ ಗುಡೂರ್ ತಮ್ಮ ಮನೆಯ ದಸರಾ ಹಬ್ಬದ ಸಂಭ್ರಮದ ಬಗ್ಗೆ ಅದರ ಹಿನ್ನೆಲೆಯ ಕುರಿತು ತಾವು ತಿಳಿದು ಕೊಂಡಿದ್ದನ್ನು ತುಂಬಾ ಮುದ್ದಾಗಿ ಮನ ಮುಟ್ಟುವಂತೆ ಬರೆದಿದ್ದಾರೆ. 

ಜೊತೆಗೆ ಶ್ರೀಮತಿ ಸ್ಮಿತಾ ಕದಡಿ, ಮತ್ತು ಡಾ ಲಕ್ಷ್ಮಿನಾರಾಯಣ್ ಗುಡೂರ್, ಅವರು ತಮ್ಮ ಮನೆಯ ಗೊಂಬೆ ಹಬ್ಬದ ಸುಂದರ ಚಿತ್ರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಈ ವಾರದ ದಸರಾ ವಿಶೇಷ ಸಂಚಿಕೆಯ ಓದಿಗೆ ನಿಮಗೆಲ್ಲರಿಗೂ ಆದರದ ಸ್ವಾಗತ.

-ಸಂಪಾದಕಿ

ನಾ ಕಂಡ ಮೈಸೂರು ದಸರಾ - ರಮ್ಯಾ ಭಾದ್ರಿ
 
ಪಾಡ್ಯದ ಮೂಡಲದಲ್ಲಿ ಮೂಡುವ ಹೊಂಬೆಳಕು 
ಹರಿಯುತಾ ಸರಿಸಲು ಮುಂಜಾವಿನ ಮುಸುಕು 
ಬೆಟ್ಟದ ತುದಿಯಿಂದ ಜಾರಿ ಕಳೆಯುತ ನಸುಕು 
ಬೆಳಗುವುದು ನಾಡನು ನೀಗುತ ಅಂಧಕಾರದಳುಕು 
 
ನಾಡಿಗೆನಾಡೇ ನವರಾತ್ರಿಯ ಸಂಭ್ರಮದಲಿ ತೊಯ್ದಿರಲು
ಮದುಮಗಳಂತೆ ಮೈಸೂರು ಸಜ್ಜಾಗಿ ಕಾದಿರಲು 
ಮನೆಮನ ದೇಗುಲಗಳಲಿ ಮಂತ್ರಘೋಷ ಮೊಳಗಿರಲು
ಧಾವಿಸುವಳು ಚಾಮುಂಡಿ ದೀನರಿಗೆ ನವ ಚೈತನ್ಯ ತುಂಬಲು

ದೇವರಾಜ ಕಟ್ಟೆಯಲ್ಲಿ ನಿಂದ ಬಣ್ಣದ ಗೋಪುರಗಳಿಂದ 
ತಟ್ಟೆಯಲ್ಲಿ ತಲೆಯೆತ್ತ ಸಿಹಿತಿನಿಸುಗಳ ಆಕಾರಗಳಂದ 
ಗಾಳಿಯಲ್ಲಿ ಬೆರೆತ ಮಲ್ಲೆಯ ಗಂಧ ,ಕುಸುಮಗಳ ಸುಗಂಧ 
ಬಾಯಲ್ಲಿ ಕರಗುವ ತುಪ್ಪದ ಮೈಸೂರ್ ಪಾಕೇ ಚಂದ 
 
ಕನ್ನಡ ಬೃಹತ್ ಸಂಸ್ಕೃತಿಯ ಪುಟ್ಟ ಪ್ರತಿಬಿಂಬ, ಬೊಂಬೆಮನೆ 
ಪಟ್ಟದ ಬೊಂಬೆಗಳ ಆಳ್ವಿಕೆಯ ಪುಟ್ಟ ಸಾಮ್ರಾಜ್ಯಕ್ಕಿಲ್ಲ ಎಣೆ 
ದಶಾವತಾರದಿಂದ ದಸರಾವರೆಗಿನ ದೃಶ್ಯಾವಳಿಗಳ ಕಿರುನೋಟ 
ವರ್ಣರಂಜಿತ ಬೊಂಬೆಗಳಾಟ ಕಣ್ಣುಗಳಿಗೆ ರಸದೂಟ
 
ಶತಮಾನಗಳ ಗತವೈಭವ ಮೈಸೂರು ಅರಮನೆ 
ಅರಸರ ಪರಂಪರೆಯ ಬಣ್ಣಿಸುವ ಅದ್ಬುತ ಶಿಲ್ಪಕಲೆ 
ನಂದಿಧ್ವಜಕ್ಕೆ ನಮಿಸುತ ನಾಡಹಬ್ಬವನ್ನಾರಂಭಿಸುವ ಒಡಯರು 
ವಿಶೇಷವಾಗಿ ನಡೆಸುವರು ವಿಧಿವತ್ತವಾದ ಖಾಸಗಿ ದರ್ಬಾರು 
 
ನೇಸರನು ನಂದಿನಿಗೆ ವಂದಿಸುತ್ತಾ ನಿಸ್ತೇಜನಾಗುತ್ತಿದಂತೆಯೇ
ಕತ್ತಲಲಿ ಹೊಳೆಯುತ ನಗರವು ಇಂದ್ರಪುರಿಯಂತಾಗುವುದು
ಅರಮನೆಯ ಲಕ್ಷ ದೀಪಗಳು ಒಮ್ಮೆಲೆ ಬೆಳಗುವ ಕ್ಷಣ
ವೀಕ್ಷಕರ ನರನಾಡಿಗಳಲ್ಲಿ ಮೂಡುವುದು ವಿದ್ಯುತ್ ಸಂಚಲನ
 
ಕಾದಿಹಳು ಕಾತುರದಿ ನಡೆಸುತ್ತಾ ದಶಮಿಯ ತಯಾರಿ 
ವಿಜಯನಗರ ಸಾಮ್ರಾಜ್ಯದಲ್ಲಿ ವಿಜೃಂಭಿಸಿದ ಸುಕುಮಾರಿ 
ಒಡೆಯರ ನಾಡಿನಲಿ ಜಗದೊಡತಿಯ ಮೆರೆಸುವ ಪಟ್ಟದೈಸಿರಿ 
ಚಾಮುಂಡಿ ರಾರಾಜಿಸುವ ಚಿನ್ನದಂಬಾರಿ ಬರುವಳು ಆನೆಯನ್ನೇರಿ 

ಮೈಸೂರು ದಸರಾ ಕಾಣಲು ಕಿಕ್ಕಿರಿದ ಜನಸಾಗರ 
ಸಿಂಹವಾಹಿನಿಯ ಜಂಬುಸವಾರಿ ನಯನ ಮನೋಹರ
ಹಿಂಬಾಲಿಸುತ ನಡೆವ ಗಜಪಡೆಯ ರಾಜ ಗಾಂಭೀರ್ಯ 
ಶ್ರೀಮಂತ ಕಲೆಯ ಬಿಂಬಿಸುವ ಸ್ತಬ್ದ ಚಿತ್ರಗಳ ಸೌಂದರ್ಯ
 
ಅರಮನೆ, ಬನ್ನಿಮಂಟಪದ ನಡುವಿನ ದಸರಾ ಮೆರವಣಿಗೆಗೆ 
ಸಾಕ್ಷಿಯಾಗುವ ಭಾಗ್ಯ ,ಬಾಳಿನ ಸಾರ್ಥಕತೆಯ ಸುಂದರ ಘಳಿಗೆ
ನಾಡಗಣ್ಯರಿಗೆ ವಂದಿಸುತ ಬೀಳ್ಕೊಡುವ ಪಂಜಿನ ಕವಾಯಿತು 
ಮತ್ತೆ ಬರುವೆನೆಂದು ದಸರಾ ಸಂಭ್ರಮಕ್ಕೆ ತೆರೆ ಎಳೆಯುತ್ತಾ ನಿರ್ಗಮಿಸಿತು. 
 *****************************************************************************************

ಶ್ರೀರಂಜಿನಿ ಸಿಂಹ ಅವರು ಲಂಡನ್ ಗೆ ಬಂದು ಆರು ತಿಂಗಳಾದವು .ಇವರು Bachelor of Engineering in Industrial Production ಅಧ್ಯಯನ ಮುಗಿಸಿ ನಂತರ ಸ್ನಾತಕೊತ್ತರ ಪದವಿಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪಡೆದು, ಈಗ ಮಕ್ಕಳಿಗೆ online ಸಂಗೀತ ಪಾಠ ಹಾಗೂ ಬೆಂಗಳೂರಿನ L Subramaniun Academy of performing arts ನಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. -ಸಂ

ನಮ್ಮ ಮನೆಯ ದಸರಾ – ಅಂದು-ಇಂದು

ದಸರಾ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ,ಸಡಗರ. ಮೈಸೂರಿನಲ್ಲಿ ಇದ್ದಾಗ ದಸರಾ ಕೇವಲ ಮನೆಯ ಹಬ್ಬವಲ್ಲ ನಾಡಹಬ್ಬ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮನೆಮನೆಗೆ ಹೋಗಿ ಗೊಂಬೆ ಅಲಂಕಾರ ನೋಡುವುದು, ದೀಪಾಲಂಕಾರ, ಅರಮನೆ ಉತ್ಸವಗಳು, ದೇವಸ್ಥಾನದಲ್ಲಿ ಪ್ರತಿ ದಿನ ದೇವಿಗೆ ಮಾಡುವ ಅಲಂಕಾರ, ಪ್ರಸಾದ, ಚರ್ಪು(ಗೊಂಬೆ ಬಾಗಿನ)ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಗೊಂಬೆ ಅಲಂಕಾರ ಮಾಡುವ ಉತ್ಸಾಹ. ವರ್ಷಕೊಮ್ಮೆ ಬರುವ ಈ ಹಬಕ್ಕೆ ನನ್ನ ಮನಸು ನವ ನವೀನ “theme /concept” ಹುಡುಕುತ್ತಿತ್ತು .ಈ ನಿಟ್ಟಿನಲ್ಲಿ ನನಗೆ ಪ್ರೇರಣೆ ಸಿಕ್ಕಿದ್ದು ಮೈಸೂರಿನ ಪ್ರಖ್ಯಾತ ಓದುಗರು,ಬರಹಗಾರರು ಆದ “ಬೊಂಬೆ ಮನೆಯ’’ಯ ಜ್ಞಾನಿ ಸರ್ ಅವರಿಂದ.

 ಮೈಸೂರಿನಿಂದ ಸ್ವಲ್ಪ ದೂರದಲ್ಲಿ ಇರುವ ಚಾಮರಾಜಪೇಟೆ ಜಿಲ್ಲೆಯಲ್ಲಿ ಸಪ್ತಮಾತ್ರಿಕೆ ದೇವಿಯರ ದೇವಾಲಯವಿದೆ. ಇದರ ಪ್ರತಿಕೃತಿಯಂತೆ ಮೈಸೂರಿನ ವಿಜಯನಗರ ಬಡಾವಣೆಯಲ್ಲೂ ಸಪ್ತಮಾತ್ರಿಕೆ ದೇವಿ ದೇವಸ್ಥಾನವಿದೆ. ನಾನು ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜಿನಿಯರಿಂಗ್  ಅಲ್ಲಿ ಪದವಿ ಪಡೆದಿದ್ದು. ನನ್ನ ಕಾಲೇಜ್ ಹಾಗು ಈ ದೇವಸ್ಥಾನ ಬಹಳ ಹತ್ತಿರ. ಆ ವರ್ಷ ಈ ದೇವಿಯರ ಗೊಂಬೆಗಳನ್ನು ಜೊಡಿಸಿ, ದೇವಿಯ ಶ್ಲೋಕಗಳನ್ನು ಕನ್ನಡಲ್ಲಿ ಬರೆದು, ಗೊಂಬೆ ನೊಡಲು ಬಂದವರು ಶ್ಲೋಕಗಳನ್ನ ಜಪಿಸುವಂತೆ ಮಾಡಿದ್ದೆ. 

ನಾನು ಸಂಗೀತ ಸ್ನಾತಕೊತ್ತರ ಪದವಿ ಶಿಕ್ಷಣಕ್ಕೆ ಸೇರಿದಾಗ ಶ್ರೀ.ತ್ಯಾಗರಾಜರ ರಾಮ ಭಕ್ತಿಯ ಬಗ್ಗೆ ಗೊಂಬೆಗಳನ್ನು ಗುಂಪು ಮಾಡಿದ್ದೆ. ಹೀಗೆ ಪ್ರತಿ ವರ್ಷವೂ ಒಂದು ಹೊಸ ಥೀಮ್ ಆಯ್ದುಕೊಂಡು ಕ್ರಿಯಾತ್ಮಕವಾಗಿ ಕಲಾತ್ಮಕತೆಯಿಂದ ಈ ಗೊಂಬೆಗಳನು ಜೋಡಿಸಿ ಹಬ್ಬವನ್ನು ಆಚರಿಸುವಾಗ ನಮಗೆ ಅರಿವಿಲ್ಲದಂತೆ ನಮ್ಮ ಸಂಸ್ಕೃತಿ ಕುರಿತಾಗಿ ಆಸಕ್ತಿ, ಜ್ಞಾನ, ಹಾಗು ಸಂಪ್ರದಾಯಗಳ ಮೇಲೆ ತಿಳುವಳಿಕೆ ಹೆಚ್ಚಾಗುತ್ತದೆ.

ಈ ಬಾರಿ ಲಂಡನ್ ನಲ್ಲಿ ನನ್ನ ಮೊದಲ ವರ್ಷದ ನವರಾತ್ರಿ/ಗೊಂಬೆ ಹಬ್ಬ ಸರಳತೆಯಿಂದ ಆಚರಿಸುತ್ತಿರುವೆ ಮತ್ತು ತಂದೆ-ತಾಯಿಯರ ಆಶೀರ್ವಾದಗಳೊಂದಿಗೆ ಪಟ್ಟದ ಗೊಂಬೆಗಳು ಮೈಸೂರಿನಿಂದ ಲಂಡನ್ ತಲುಪಿವೆ. ಮೊದಲನೆ ದಿನದಿಂದ ನಾವು ನಮೆಲ್ಲರ ನೆಚ್ಚಿನ ಸಿಹಿ ಕಹಿ ಚಂದ್ರು ಸರ್ ಅವರು ನಡೆಸಿಕೊಡುವ ’ಬೊಂಬಾಟ್ ಭೋಜನ’ ಎನ್ನುವ ಕಾರ್ಯಕ್ರಮವನ್ನ ನೋಡಿ ನೊಡಿ ವಿಧ ವಿಧದ ಪ್ರಸಾದಗಳನ್ನು ಮಾಡಿ ದೇವಿಗೆ ಅರ್ಪಿಸುತಿದ್ದೇವೆ. ನಾವು(ನಾನು ಮತ್ತು ನನ್ನ ಪತಿ ವರುಣ್) ಡಿಡಿ ಚಂದನ ವಾಹಿನಿಯಲ್ಲಿ ಚಿನ್ನದ ಅಂಬಾರಿ ಹೊತ್ತುನಡೆಯಲಿರುವ ಅಭಿಮನ್ಯುವನ್ನು ನೊಡಲು ಕಾತುರದಿಂದ ಕಾಯುತ್ತಿದ್ದೇವೆ. ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

***********************************************************************************************

ಶ್ರೀಮತಿ ರಂಜನಾ ನಿರಂಜನ್ ಹೆಗಡೆ  ಅವರು ಹುಟ್ಟಿ ಬೆಳದದ್ದು ಮೈಸೂರಿನಲ್ಲಿ,ಇಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಂಜನಾ ಅವರು ಕಳೆದ ಎಂಟು ವರ್ಷಗಳಿಂದ ಬೆಲ್ಫಾಸ್ಟ್ ನಿವಾಸಿ.-ಸಂ   

ನನ್ನೂರ ದಸರಾ ನೆನಪುಗಳು 

ನನಗೆ ನಮ್ಮ ನಾಡಹಬ್ಬ ಮೈಸೂರು ದಸರಾ ಅಂದಾಗಲೆಲ್ಲ ನೆನಪಾಗೋ ಸಂಗತಿ ಅಂದ್ರೆ, ನಾನು ಅಪ್ಪ ಇಬ್ಬರೂ   ಅರಮನೆಯ ದೀಪಾಲಂಕಾರ ಹಾಗೆಯೇ ಅಲ್ಲಿ ಆನೆಗಳು ಅಂಬಾರಿ ಹೊರುವ ಅಭ್ಯಾಸ ಮಾಡುವುದನ್ನು ನೋಡಿಕೊಂಡು, ಪಕ್ಕದಲ್ಲೇ ಆಯೋಜಿಸಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿಕೊಟ್ಟು, ಆಮೇಲೆ ಎಲ್ಲಾ ಪ್ರಮುಖ ಕಟ್ಟಡ ಮತ್ತು ರಸ್ತೆಯ ಬಣ್ಣ ಬಣ್ಣದ ದೀಪಾಲಂಕಾರ ನೋಡ್ತಾ ಆಹಾರ ಮೇಳಕ್ಕೆ ಹೋಗಿ ಜೋಳದ ರೊಟ್ಟಿ ಬದ್ನೇಕಾಯಿ ಎಣಗಾಯಿ, ಮೈಸೂರು ಬೆಣ್ಣೆ ಮಸಾಲೆ ದೋಸೆ ತಿಂದು ಮನೆಗೆ ಹೋಗ್ತಿದ್ವಿ. 

ವಿಜಯದಶಮಿ ದಿನ ಎಲ್ಲಾ ಒಟ್ಟಿಗೆ ಕೂತು ಟಿವಿಯಲ್ಲಿ ದಸರಾ ಮೆರವಣಿಗೆ ನೋಡೋದೇ ದೊಡ್ಡ ಸಂಭ್ರಮವಾಗಿತ್ತು. ದಸರಾ ವಸ್ತುಪ್ರದರ್ಶನಕ್ಕೆ , ಸ್ನೇಹಿತರ ಜೊತೆ ಹೋಗಿ ದೊಡ್ಡ ಜೋಕಾಲಿ, ‘ಕಪ್ ಸಾಸರ್ ’ಎಲ್ಲಾ ಆಡಿಕೊಂಡು, ಶಾಪಿಂಗ್ ಮಾಡ್ಕೊಂಡು,ಕಾಟನ್ ಕ್ಯಾಂಡಿ, ಚುರಮುರಿ, ಕೊನೆಯಲ್ಲಿ ಡೆಲ್ಲಿ ಹಪ್ಪಳ ತಿನ್ನೋ ಮಜಾ ನೇ ಬೇರೆ. ದಸರಾ ಹಬ್ಬದ ನೆನಪುಗಳು ತುಂಬಾ ಸುಂದರ ಅವು ಬರೀ ನೆನಪುಗಳಲ್ಲ ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿಹೋಗಿದೆ. ಮೈಸೂರು ದಸರಾ ಎಂದರೆ ಹಾಗೆ. 

 ಈಗ ಈ ದೇಶದಲ್ಲಿ ದಸರಾ ಸಡಗರವನ್ನ ಇಲ್ಲಿಯ ಸ್ನೇಹಿತರ ಜೊತೆ ದೇವಸ್ಥಾನದಲ್ಲಿ ಗರ್ಬಾ ನೃತ್ಯ, ದುರ್ಗಾ ಪೂಜೆ, ಬತುಕಮ್ಮ ಸಂಭ್ರಮದಲ್ಲಿ ಭಾಗವಹಿಸಿ, ಹಬ್ಬದ ಆಚರಣೆ ಮಾಡುತ್ತೇವೆ. ಈಗಲೂ ವಿಜಯದಶಮಿಯ ದಿನ ಟಿವಿಯಲ್ಲಿ  ಮನೆಯ ಎಲ್ಲ ಸದಸ್ಯರು ಸೇರಿ ಜಂಬೂ ಸವಾರಿ ನೋಡುತ್ತಾ ಖುಷಿ ಪಡುತ್ತೀವಿ. ಮನೆಯಲ್ಲಿ ಆಯುಧ ಪೂಜೆ ಮಾಡಿ ಸಿಹಿ ತಿಂಡಿ ತಿನಿಸು ಮಾಡಿ. ಶಾರದಾ ಪೂಜೆಯ ದಿನ ಸ್ನೇಹಿತೆಯರ ಮನೆಗೆ ಕುಂಕುಮಕ್ಕೆ ಹೋಗಿ ಎಲ್ಲಾ ಒಟ್ಟಿಗೆ ಕಾಲ ಕಳೆದು ಬರುತ್ತೇವೆ. ಆದರೂ ಮೈಸೂರಿನ ಆ ಆಡಂಬರವನ್ನ, ದೀಪಾಲಂಕಾರ, ಬಗೆ ಬಗೆಯ ಆಹಾರ, ಅಲ್ಲಿಯ ಸ್ನೇಹಿತರನ್ನ ಬಹಳ ನೆನಪು ಮಾಡಿಕೊಳ್ಳುತ್ತೇನೆ. ಮತ್ತೆ ಯಾವಾಗ ಮೈಸೂರಿಗೆ ಹೋಗುತ್ತೇನೆ ಎಂದು ಕಾಯುತ್ತಿರುತ್ತೇನೆ!

ಶ್ರೀಮತಿ ರಂಜನಾ ನಿರಂಜನ್ ಹೆಗಡೆ 

***************************************************************************************

ಯಾಮಿನಿ ಗುಡೂರ್ ಅವರು ‘ಅನಿವಾಸಿ’ ಯ ಉತ್ಸಾಹಿ, ಕ್ರಿಯಾಶೀಲ ಸದಸ್ಯರಾದ ಡಾ ಲಕ್ಷ್ಮೀನಾರಾಯಣ್ ಗುಡೂರ್ ಮತ್ತು ಶಾರದಾ ಅವರ ದ್ವಿತೀಯ ಪುತ್ರಿ.
ಯಾಮಿನಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. – ಸಂ

ದಸರಾ ಹಬ್ಬ 

ಪ್ರತಿವರುಷ ದಸರಾ ಯಾವಾಗ ಬರುತ್ತದೋ ಅಂತ ಕಾಯುತ್ತಿರುತ್ತೇವೆ.  ಬೊಂಬೆಗಳನ್ನ ಜೋಡಿಸೋದು, ರುಚಿ ರುಚಿಯಾದ ಊಟ (ಎಲ್ಲಕ್ಕಿಂತ ಹೆಚ್ಚು ಮಜಾ ಕೊಡುವುದು ಇದೇ!), ಮತ್ತೆ ಗೆಳತಿಯರು ಮತ್ತವರ ಮನೆಯವರ ಭೆಟ್ಟಿ ಇವೆಲ್ಲ ನೆನಪಾಗುತ್ತವೆ.  ಈ ವರ್ಷದ ದಸರಾ ಗುರುವಾರ, 14ನೇ ಅಕ್ಟೋಬರ್ ನಂದು.

ನಾವ್ಯಾಕೆ ದಸರಾ ಆಚರಿಸುತ್ತೇವೆ? 

ನನ್ನ ಅಪ್ಪನ ಪ್ರಕಾರ ಈ ಹಬ್ಬ ಕೆಟ್ಟದರ ಮೇಲೆ ಒಳ್ಳೆಯದರ ಗೆಲುವನ್ನು ಪ್ರತಿನಿಧಿಸುತ್ತದಂತೆ.  ನಮ್ಮ ತಾತ-ಅಜ್ಜಿಯ ಮನೆಯಲ್ಲಿ ದಸರಾ ಜೋರಾಗಿರುತ್ತಿತ್ತಂತೆ. ಭಾರತದಲ್ಲೆಲ್ಲ ದಸರಾ ಮುಖ್ಯವಾದ ಹಬ್ಬ ಎಂದು ಕೇಳಿದ್ದೇನೆ.  ರಾಮಾಯಣದಲ್ಲಿ ರಾಮ ರಾವಣನನ್ನು ಗೆದ್ದದ್ದೂ ಆಗಲೇ ಅಂತೆ.  ಉತ್ತರ ಭಾರತದಲ್ಲಿ ಈ ಕಥೆಯನ್ನು ರಾಮಲೀಲಾ ಅಂತ ಆಡುತ್ತಾರಂತೆ.  ಕೊನೆಯಲ್ಲಿ ರಾವಣ, ಕುಂಭಕರ್ಣರ ಹುಲ್ಲಿನ ದೊಡ್ಡ ಬೊಂಬೆ ಮಾಡಿ, ಅದರಲ್ಲೆಲ್ಲ ಪಟಾಕಿ ತುಂಬಿ ಬಯಲಲ್ಲಿ ಸುಡುತ್ತಾರಂತೆ – ಒಮ್ಮೆ ಹೋಗಿ ನೋಡಬೇಕು ಅನ್ನಿಸುತ್ತದೆ.

ದಸರಾ ನನಗೆ ಏಕೆ ಇಷ್ಟ?

ನನಗೆ ಅತ್ಯಂತ ಇಷ್ಟವಾಗುವ ಭಾಗವೆಂದರೆ, ನಮ್ಮ ಮನೆಗೆ ಜನರು, ನನ್ನ ಗೆಳತಿಯರು ಬರುವುದು. ಎಲ್ಲರ ಮುಖದಲ್ಲೂ ಎಷ್ಟು ಸಂತೋಷವಿರುತ್ತದೆ!  ಅವರಿಗೆ ನಾವು, ನಮಗೆ ಅವರು ಒಬ್ಬರಿಗೊಬ್ಬರು ಉಡುಗೊರೆ ತರುತ್ತೇವೆ.  ಕೆಲವರು ದೇವರ ಕೋಣೆಗೆ ಬಂದು ಹಾಡನ್ನೋ, ಶ್ಲೋಕಗಳನ್ನೋ ಹೇಳುತ್ತಾರೆ. 

ಬೊಂಬೆಗಳನ್ನು ಜೋಡಿಸುವುದೂ ನನಗೆ ತುಂಬಾ ಇಷ್ಟದ ಕೆಲಸ. ವಿಷ್ಣುವಿನ ಹತ್ತು ಅವತಾರಗಳು, ಇನ್ನೂ ಬೇರೆ ಬೇರೆ ಬೊಂಬೆಗಳನ್ನು ಅಟ್ಟದಿಂದ (attic) ಕೆಳಗಿಳಿಸಿ, ಒರೆಸಿ ಸಾಲಾಗಿಡುವುದು.  ಇದರಲ್ಲಿ ಕೆಲವು ನಮ್ಮ ಅಜ್ಜಿಯ ಮನೆಯಿಂದ ತಂದದ್ದು.  ಗಂಡ-ಹೆಂಡತಿಯ ಜೋಡಿಬೊಂಬೆ ಅಮ್ಮನ ಮದುವೆಯಲ್ಲಿ ಅಜ್ಜಿ ಕೊಟ್ಟದ್ದಂತೆ – ಅಮ್ಮ ಹೇಳಿದ್ದು ನನಗೆ ನೆನಪಿದೆ.

ಇನ್ನು ಅಮ್ಮನ ಅಡುಗೆ, ಅದರಲ್ಲೂ ಹಬ್ಬದ ಅಡುಗೆಯೆಂದರೆ ನನಗೆ ಅಚ್ಚುಮೆಚ್ಚು.  ನನಗೆ ಸಾಧ್ಯವಾದಾಗೆಲ್ಲ ನಾನೂ ಅಡುಗೆ ಮನೆಯಲ್ಲಿ ಸಹಾಯಮಾಡುತ್ತೇನೆ – ತರಕಾರಿ ತೊಳೆದು ಹೆಚ್ಚುವುದು, ಹೇಳಿದಷ್ಟು ಉಪ್ಪು-ಬೆಲ್ಲ ಹಾಕುವುದು, ಏಲಕ್ಕಿ ಕುಟ್ಟುವುದು ಹೀಗೆ.

ಸಂಜೆಯಾದರೆ ಹೊಸ ಸುಂದರ ಬಟ್ಟೆ ಹಾಕಿಕೊಂಡು ತಯಾರಾಗುವುದು ನನಗೆ ಮಜಾ ಕೊಡುತ್ತದೆ.  ಬಂದವರಲ್ಲಿ ಚಿಕ್ಕ ಮಕ್ಕಳಿಗೆ ಸಿಹಿ ಹಂಚುವುದು, ಅಮ್ಮಂದಿರಿಗೆ ಉಡುಗೊರೆ ಕೊಡುವುದು ಇವೆಲ್ಲ ನಾನು ಮತ್ತು ಅಕ್ಕ ಮಾಡುತ್ತೇವೆ.

ಹೋದವರ್ಷ ಕೋವಿಡ್ ಬಂದು ಹೋಗಲಿಲ್ಲವಾದರೂ, ಪ್ರತಿವರ್ಷ ನಮ್ಮೂರಿನ ಗುಜರಾತಿ ಗುಡಿಗೆ ಹೋಗಿ ರಾಸ್ ಗರ್ಬಾ ಆಡುವುದೆಂದರೆ ಬಲು ಖುಶಿ ನಮಗೆ.  ಹಬ್ಬದ ಆಚರಣೆಯೊಂದಿಗೆ, ನಮ್ಮ ಡ್ಯಾನ್ಸಿಂಗ್ ಸ್ಕಿಲ್ಲನ್ನೂ ತೋರಿಸಿಕೊಳ್ಳಬಹುದು!

ಸರಸ್ವತಿ ಪೂಜೆಯ ದಿನ ನಮ್ಮ ಪುಸ್ತಕ, ಪೆನ್ನು ಎಲ್ಲ ಜೋಡಿಸಿಟ್ಟು ಪೂಜೆ ಮಾಡುತ್ತೇವೆ, ದಿನವೂ ಹೊಸದನ್ನು ಕಲಿಯುವ ಬುದ್ಧಿ ಕೊಡೆಂದು ಬೇಡಿಕೊಳ್ಳುತ್ತೇವೆ.

ಇನ್ನೊಂದು ವಿಷಯವೆಂದರೆ, ದುರ್ಗಾಷ್ಟಮಿಯ ದಿವಸ ಉತ್ತರಭಾರತದ ಕಡೆಯವರಾದ ನಮ್ಮ ಪಕ್ಕದ ಮನೆಯವರು ನಮ್ಮನ್ನು ಕರೆದು ಸಿಹಿ ಕೊಡುತ್ತಾರೆ. ಅವರು ಮಾಡುವ ಪೂರಿ-ಚನಾ-ಶಿರಾ ನನಗೆ ತುಂಬಾ ಸೇರುತ್ತದೆ – yummy! 

ಒಟ್ಟಿನಲ್ಲಿ ಹಬ್ಬಗಳು ಅಜ್ಜಿಯ ಮನೆಯ ನೆನಪು ತರುವುದರಿಂದ ನನಗೆ ತುಂಬಾ ಇಷ್ಟ.  ಹೊಸಬಟ್ಟೆ, ತಿಂಡಿಗಳಷ್ಟೇ ಅಲ್ಲ, ಹಬ್ಬಗಳ ಆಚರಣೆ ನನಗೆ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಕಲಿಯಲೂ ಸಹಾಯಮಾಡುತ್ತದೆ.

ಚಿತ್ರಗಳು: ಡಾ ಲಕ್ಷ್ಮೀನಾರಾಯಣ್ ಗುಡೂರ್

********************************************************

ಶ್ರೀಮತಿ ಸ್ಮಿತಾ ಕದಡಿ ಅವರ ಮನೆಯಲ್ಲಿ ದಸರಾ ಗೊಂಬೆಗಳು.

9 thoughts on “ನಾಡಹಬ್ಬದ ಸಂಭ್ರಮಕ್ಕೆ ‘ಅನಿವಾಸಿ’ಯ ಅಕ್ಷರ ತೇರು!

 1. ಈ ವಾರದ ಸಂಚಿಕೆಯನ್ನು ಓದಿ, ಪ್ರೋತಹಿಸಿ, ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.🙏🙏

  Like

 2. ನಾಡಹಬ್ಬ ಅಥವಾ ದಸರಾ ಅಥವಾ ನವರಾತ್ರಿ ಕರ್ನಾಟಕದ ಬಹಳ ಹಳೇ ಸಂಪ್ರದಾಯ, ಇದರಬಗ್ಗೆ ಅನಿವಾಸಿಯಲ್ಲಿ ಸ್ವಾರಸ್ಯವಾದ ಕವಿತೆ ಮತ್ತೆ ಲೇಖನಗಳು ಪ್ರಕಟವಾಗಿರುದು ಸಂತೋಷದ ವಿಷಯ, ಶ್ರೀರಂಜನಿ ಸಿಂಹ ಮತ್ತು ರಂಜಮಾ ಅವರಿಗೆ ಸ್ವಾಗತ ಹಾಗು ಕುಮಾರಿ ಯಾಮಿನಿ ಈ ಚಿಕ್ಕ ವಯಸ್ಸಿನಲ್ಲೇ ಬರೆದಿರುವುದು ಹೆಮ್ಮೆಯ ವಿಷಯ

  ನನ್ನ ಬಾಲ್ಯದ ನೆನಪುಗಳ ಬಗ್ಗೆ ಎರಡು ಮಾತು , ಸುಮಾರು ಎರಡು ತಿಂಗಳ ಹಿಂದೆಯೇ ನಮ್ಮ ಅಜ್ಜಿ ನೇತೃತ್ವದಲ್ಲ ಗೊಂಬೆ ಕೂಡಿಸುವ ಕೆಲಸ ಶುರುವಾಗುತ್ತಿತ್ತು. ಎರಡು ಅಡಿ ಚೌಕಟ್ಟಿನಲ್ಲಿ ಒಂದು ಪಾರ್ಕ್ ನಿರ್ಮಾಣ ಸುತ್ತಲೂ ಮರಳಿನಿನ boundary ಇಲ್ಗಿ ರಾಗಿ ಪೈರು (ಬೇಲಿ ) ಬೆಳೆಯುತಿತ್ತು, ಎರಡು ರಸ್ತೆ ದೀಪ ( ಬ್ಯಾಟರಿ operated ) ಇತ್ಯಾದಿ,
  ಪಟ್ಟದ ಗೊಂಬೆಗಳಿಗೆ ದಿನ ಅಲಂಕಾರ, ಸಾಯಂಕಾಲ ರುಚಿಯಾದ ಚರಪು
  ಸುಮಾರು ನನಗೆ ೧೦ ವರ್ಷ ಇರಬಹುದು , ನಂಜನಗೂಡಿನಿಂದ ಮೈಸೂರು ದಸರಾ ಮೆರವಣಿಗೆ ನೋಡುವುದಕ್ಕೆ ಹೋಗಿದ್ದು ಜ್ಞಾಪಕ ಇದೆ, ಆಗ ಮಹಾರಾಜರು ಅಂಬಾರಿಯಲ್ಲಿ ಕೂತು ಬನ್ನಿ ಮಂಟಪಕ್ಕೆ ಹೋಗುತಿದ್ದರು, ಸಾಯಂಕಾಲ ದರ್ಬಾರ್ ನಡೆಸಿ ಸಿಂಹಾಸನದ ಮೇಲೆ ಕೂತಾಗ
  ಅರಮನೆ ಮತ್ತು ಚಾಮುಂಡಿ ಬೆಟ್ಟದ ದೀಪಗಳು ಬೆಳಗುತಿದ್ದವು.
  ಈಗಲೂ ಈ ಸಂಪ್ರದಾಯಗಳು ನಡೀತಾ ಇದೆ ಇದು ಹೆಮ್ಮೆಯ ವಿಚಾರ

  ರಾಮಮೂರ್ತಿ

  Like

 3. ದಸರೆಯ ಪ್ರಯುಕ್ತ ಬಂದ ಈ ಸಲದ ‘ಅನಿವಾಸಿ’ ಅಮಿತಾ ಅವರೆ ಸಂಪಾದಕತ್ವದ ಪರಿಶ್ರಮವನ್ನು ತೋರಿಸುತ್ತದೆ. ‘ಸಂಪಾದಕರ ನುಡಿ’ಯು ಪ್ರಬಂಧದಷ್ಟು ಸಶಕ್ತವಾಗಿದೆ.

  ರಮ್ಯಾ ಅವರ ಕವಿತೆಯು ನವೋದಯದಂತೆ ಸರಳ, ಸುಂದರ ಮತ್ತು ಪ್ರಾಸಬದ್ಧ. ‘ಪಾಡ್ಯದ ಮೂಡಲಲ್ಲಿ ಮೂಡುವ…’ ಸಾಲಿನಲ್ಲಿ ಬರುವ ಆದಿಪ್ರಾಸ (alliteration) ತುಂಬ ಸುಂದರ. ಅರಮನೆಯಲ್ಲಿ ವಿದ್ಯುತ್ ದೀಪಗಳು ಬೆಳಗಿದರೆ ವೀಕ್ಷಕರ ನರನಾಡಿ(wire)ಗಳಲ್ಲಿ ವಿದ್ಯುತ್ ಸಂಚಲನ(electric shock)ವಾಗುವ ಪ್ರತಿಮೆ ಮನೋಹರ.

  ಶ್ರೀರಂಜನಿ ಸಿಂಹ ಮತ್ತು ರಂಜಮಾ ಹೆಗಡೆಯವರಿಗೆ ಸ್ವಾಗತ (ಅವರಿಬ್ನರಿಗೂ ಈ ವಾಟ್ಸ್ಯಾಪ್ ಗುಂಪನ್ನು ಸೇರುವ ಆಸಕ್ತಿ ಇದೆಯೇ ಎಂದು ಕೇಳಿ, ಇದ್ದರೆ ಸೇರಿಸಿ).

  ಉತ್ತರ ಕರ್ನಾಟಕದಲ್ಲಿ ಬೆಳೆದ ನನಗೆ ಮೈಸೂರಿಗೆ ಬರುವವರೆಗೂ ‘ಬೊಂಬೆ’ಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಬೊಂಬೆಗಳ ಜೊತೆ ಸಂಗೀತವನ್ನೂ ಸೇರಿಸಿ ಕಣ್ಣುಗಳನ್ನಲ್ಲದೇ ಕಿವಿಗಳಿಗೂ ದಸರಾ ಹಬ್ಬ ಮಾಡುವ ರೀತಿ ಅನನ್ಯ‌. ರಂಜನಾ ಅವರು ಮೈಸೂರು ದಸರಾದ ವೈಭವವನ್ನು ಒಣಾಡಂಬರವಿಲ್ಲದೇ ಸರಳವಾಗಿ ಹೇಳಿದರೂ ಕಣ್ಣುಕಟ್ಟುವಂತೆ ಬರೆದಿದ್ದಾರೆ.

  ಯಾಮಿನಿ ಗುಡೂರ್ ಈ ವಾರದ ವಿಸ್ಮಯ! ಅಚ್ಚುಕಟ್ಟಾದ ಲೇಖನ, ಸರಳ, ಸುಂದರ.

  ಜೊತೆಗೆ ಚಿತ್ರಗಳೂ ಮನಸೆಳೆಯುತ್ತವೆ.

  ಇಂಥದೊಂದು ಕವನ-ಲೇಖನ ಗುಚ್ಛವನ್ನು ‘ಅನಿವಾಸಿ’ಗೆ ಕೊಟ್ಟ ಅಮಿತಾ ಅವರಿಗೆ ಅಭಿನಂದನೆಗಳು.

  – ಕೇಶವ

  Like

 4. ರಮ್ಯಾ ಅವರ ಪ್ರಾಸ ಬದ್ಧವಾದ ಕವನ The Spirit of Dasara ವನ್ನು ಚೆನ್ನಾಗಿ ಗ್ರಹಿಸಿದೆ. ಮೈಸೂರಿನ ದಸರಾ ಹಬ್ಬದ ಸಾಮೂಹಿಕ ಆಚರಣೆಯ ಹಲವು ಚಿತ್ತಾರಗಳನ್ನು ಕಟ್ಟಿಕೊಟ್ಟಿದ್ದಾರೆ. ರಂಜನಾ, ರಂಜನಿ, ಯಾಮಿನಿ ( ಭಾಮಿನಿ ಎನ್ನುವ ಹೆಸರು ಸೇರಿದ್ದರೆ ಇನ್ನೂ ಚೆನ್ನಾಗಿರುತಿತ್ತು ! ) ಅವರುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ದಸರಾ ಹಬ್ಬದ ಆಚರಣೆಯ ವಿಶೇಷತೆಯನ್ನು ಸರಳವಾಗಿ ಸುಂದರವಾಗಿ ಚಿತ್ರಿಸಿದ್ದಾರೆ. ಒಂದು ಹಬ್ಬಕ್ಕೆ ಹೇಗೆ ವಿವಿಧ ಸಾಂಸ್ಕೃತಿಕ, ಪೌರಾಣಿಕ ಐತಿಹಾಸಿಕ ಹಿನ್ನೆಲೆಗಳನ್ನು, ಚೌಕಟ್ಟುಗಳನ್ನು ಭಾರತದ ಒಳಗಿನ ಮತ್ತು ಹೊರಗಿನ ಅನೇಕ ಸಮುದಾಯಗಳು ಕಟ್ಟಿಕೊಂಡು ಬಂದಿವೆ ಎನ್ನುವ ವಿಚಾರ ಸ್ವಾರಸ್ಯಕರವಾದದ್ದು. ಹಾಗೆಯೇ ಅದು ಸಾಂಸ್ಕೃತಿಕ ಸಿರಿವಂತಿಕೆಯನ್ನು ವೃದ್ಧಿಸಿದೆ ಎನ್ನ ಬಹುದು. ಯಾಂತ್ರಿಕ ಮತ್ತು ಜಡವಾಗಿರುವ ನಮ್ಮ ಬದುಕುಗಳ ನಡುವೆ ಆಗಾಗ್ಗೆ ಬರುವ ಈ ಹಬ್ಬ ಸಂಭ್ರಮಗಳು ಹೊಸ ಚೇತನವನ್ನು ಉದ್ದೀಪಿಸಲು ಅವಶ್ಯ. ನಾನು ಮೈಸೂರಿನ ಅಳಿಯನಾದರೂ ಕಳೆದ ಹಲವಾರು ದಶಕಗಳಿಂದ ಮೈಸೂರು ದಸರಾ ಖುದ್ದಾಗಿ ವೀಕ್ಷಿಸುವ ಅವಕಾಶ ಒದಗಿಲ್ಲ, ಮುಂದೆ ಈ ಒಂದು ಅವಕಾಶಕ್ಕೆ ಕಾತುರನಾಗಿದ್ದೇನೆ. ರಂಜನಾ ಮತ್ತು ರಜನಿ ಅವರಿಗೆ ಸ್ವಾಗತ.

  Like

 5. ಈ ವಾರ ಅನಿವಾಸಿ ಅಂಗಳದಲ್ಲಿ ದಸರಾ ಸಂಭ್ರಮದ ರಂಗವಲ್ಲಿ. ರಂಜನಾ ಮತ್ತು ಶ್ರೀರಂಜಿನಿ , ಅನಿವಾಸಿಗೆ ಸ್ವಾಗತ. ನಿಮ್ಮಿಬ್ಬರ ಹಬ್ಬದ ಅನುಭವಗಳು ಬಹಳ ಆಪ್ತವೆನಿಸಿತು.ಬಹಳ ಚೆನ್ನಾಗಿ ಬರೆದಿದ್ದೀರ. ಬಾಲ್ಯದ ದಿನಗಳು ಹಾಗೇ ಕಣ್ಣಮುಂದೆ ಹಾದುಹೋದಂತಾಯಿತು. ಹಕ್ಕಿಯಂತೆ ಹಾರುವಂತಾಗಿದ್ದರೆ ತವರೂರ ಸಿರಿಯನ್ನು ಒಮ್ಮೆಲೆ ಹಾರಿ ನೋಡಿಕೊಂಡು ಬರುವಂತಾಗಿದ್ದರೆ ಅನ್ನೋ ಕಲ್ಪನೆಯೇ ಎಷ್ಟು ಚೆನ್ನ! ಯಾಮಿನಿ ಪುಟ್ಟಿ ,ಅಜ್ಜಿ ಮನೆಯ ನೆನಪಿನ ಬುತ್ತಿಯನ್ನು, ತನ್ನ ಮನೆಯ ಹಬ್ಬದ ಸಡಗರವನ್ನು ಮುದ್ದಾಗಿ ಬಿಚ್ಚಿಟ್ಟಿದ್ದಾಳೆ. ಆಕೆಯ ರಾಮಲೀಲಾ ನೋಡುವ ಕನಸು ಬೇಗ ನನಸಾಗಲಿ.

  Like

  • ಗುಡೂರ ಹಾಗೂ ಸ್ಮಿತಾ ಅವರ ಮನೆಯ ಬೊಂಬೆ ಅಲಂಕಾರ ತುಂಬಾ ಸುಂದರವಾಗಿದೆ.🙏🏻

   Like

 6. ಇಂದು ಆ ಲೈವ್ ವರ್ಚುಅಲ್ ಮೈಸೂರು ದಸರಾ ಮೆರವಣಿಗೆ ನೋಡಿದೆ, ಕಣ್ತುಂಬ! ಇದಕ್ಕು ಮೊದಲು ಇಂದು ಬೆಳಿಗ್ಗೆಯಷ್ಟೇ ರಮ್ಯಾ ಅವರು ತಮ್ಮ ಅದ್ಭುತ ಕವನದಲ್ಲಿ ತಾವು ಅನುಭವಿಸಿದ ದಾಸರಾಗಳೆಲ್ಲವನ್ನು ಎರಕ ಹೊಯ್ದಂತಿತ್ತು. ಅವೆಲ್ಲ ದೃಶ್ಯಗಳು ಇವತ್ತು ಪರದೆಯ ಮೇಲೆ. ರೋಮಾಂಚನ!
  ಹೊಸ ಲೇಖಕಿಯರು ಶ್ರೀರಂಜನಿ, ರಂಜನಾ ಮತ್ತು ಯಾಮಿನಿಯರಿಗೂ ಸ್ವಾಗತ! ಅವರ ಹಬ್ಬದ ಅನುಭವಗಳೂ nostalgic! ಇನ್ನೂ ಬರೆಯುತ್ತಿರಿ!

  Like

 7. ರಮ್ಯಾ, ರಂಜಿನಿ, ರಂಜನಾ ಮತ್ತು ಪುಟ್ಟ ಯಾಮಿನಿ ಎಲ್ಲರೂ ಕವನ/ಅನುಭವ/ನೆನಪು/ಬರಹಗಳು ಹಬ್ಬಕ್ಕೆ ಹೊಸ ರಂಗು ತಂದಿವೆ. ಸ್ಮಿತಾ ಮತ್ತು ಗೂಡೂರರ ಚಿತ್ರ ಗಳು ಹಬ್ಬಕ್ಕಾಗಿ ಅವರು ಮಾಡಿರುವ ಆಚರಣೆಗಳು ಹಬ್ಬಕ್ಕೆ ಕಳೆಕಟ್ಟಿವೆ.
  ಅಮಿತಾರ ಪರಿಚಯವೂ ಚೆನ್ನಾಗಿದೆ.
  ಇಂದಿನ ಅನಿವಾಸಿಯ ಅಂಗಳವೇ ಮೈಸೂರು (ಪಾಕದ)ಸಕ್ಕರೆಯಲ್ಲಿ ಅದ್ದಿ ತೆಗೆದು ಚಪ್ಪರಿಸುವಂತೆ ಇದೆ.
  ಅನಿವಾಸಿ ಸದಸ್ಯರು ಯಾರಾದರು ಹಬ್ಬದ ಊಟವನ್ನು ಕೂಡ ಕಳಿಸಿದ್ದಿದ್ದರೆ (atleast Mysore Pak) ಅನ್ನೋದು ಬರೀ ಆಶಯ!

  Like

 8. ರಮ್ಯ, ರಂಜನೀಯ ಅಂಬಾರಿಗಳು
  ಅನಿವಾಸಿಗೆ ಹೊಸ ಆ’ರಂ’ಭದ ವಿಜಯದಶಮಿ

  ಹೊಸ ಲೇಖಕರಿಗೆ ಸ್ವಾಗತ

  ರಂಜನಾ ನಿರಂಜನ ಹೆಸರಿನ ಸಯಾಮಿ ಮುದದಲ್ದಿ ಒಂದಿಷ್ಟು ಚುಟುಕಗಳನ್ವ ಜೋಡಿಸಿತು😊

  ಮುರಳಿ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.