ಸೀರೆಯೋಟ – ಶಾರದ ಸಕ್ರೆಮಠ್

ಅನಿವಾಸಿಯ ನೆಚ್ಚಿನ ಓದುಗರೇ !
ಈ ವಾರದ ‘ಹಸಿರು ಉಸಿರು’ ಪ್ರವರ್ಗದ ವಿಶೇಷ ಸಾಪ್ತಾಹಿಕ ಸಂಚಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಓಟಗಾರ್ತಿ, ಟೆಲ್ಫೋರ್ಡ್ ನಿವಾಸಿಯಾದ ಶಾರದ ಸಕ್ರೆಮಠ್ ಅವರು ಸೀರೆಯಲ್ಲಿ ೫ಕಿ.ಮೀ , ೧೦ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡತಿಯ ರೋಚಕ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ನನ್ನ ಹೆಸರು ಶಾರದ ಸಕ್ರೆಮಠ್. ಯುನೈಟೆಡ್ ಕಿಂಗ್ಡಂ ನ ಟೆಲ್ಫೋರ್ಡ್ ನಿವಾಸಿ. ಹಾಗೇರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಿಗಳಾಗಿ ಕೆಲಸ ಮಾಡುತ್ತಿದೇನೆ.

ಬಾಲ್ಯದಿಂದಲೂ ನಾನೋರ್ವ ಪರಿಸರ ಪ್ರೇಮಿಯಾಗಿದ್ದು ಧೀರ್ಘಚಾರಣ ಮಾಡುವುದೆಂದರೆ ಬಹುಉತ್ಸಾಹಿ. ಕರ್ನಾಟಕದ ಖ್ಯಾತ ಕವಿಗಳಾದ ಬೇ೦ದ್ರೆ ಅಜ್ಜರ ತವರೂರಾದ ಧಾರವಾಡ ಜಿಲ್ಲೆಯಲ್ಲಿರುವ ಕರ್ನಾಟಕ್ ಕಾಲೇಜ್ ಧಾರವಾಡ (KCD) ಒಳವಲಯದಲ್ಲಿ ಹಾಗು ಡಿ.ಸಿ ಕಾಂಪೌಂಡಿನೊಳಗೆ ಅಮ್ಮನೊಡಗೂಡಿ ಬಾಲ್ಯದಿಂದಲೂ ಧೀರ್ಘಚರಣಿಸಿದ್ದು ಇನ್ನೂ ಸವಿನೆನಪಾಗಿ ಉಳಿದಿವೆ. ಯಾವುದೇ ಸತ್ಕಾರ್ಯ ಪ್ರಾರಂಭಿಸಲು ಶ್ರೀಗಣೇಶನ ಆಶೀರ್ವಾದ ಅತ್ಯವಶ್ಯಕ ಅಲ್ಲವೇ? ಹಾಗಾಗಿ ನನ್ನ ಈ ಚಾರಣ ಪ್ರಾರಂಭಿಸಿದ್ದು KCD ವೃತ್ತದಲ್ಲಿರುವ ಗಣೇಶನ ದೇವಸ್ಥಾನದಿಂದ. ಪ್ರಾಕೃತಿಕ ಪರಿಸರದ ಆವರಣದಲ್ಲಿ ಚಾರಣಿಸುವುದರಿಂದ ದೈಹಿಕ ಚೈತನ್ಯ ಮತ್ತಷ್ಟು ಇಮ್ಮಡಿಯಾಗುವುದು.

ಚಿತ್ರ ಕೃಪೆ : ಶಾರದ ಸಕ್ರೆಮಠ್


ಮೊದಲು ಚಾರಣದಿಂದ ಪ್ರಾರಂಭಿಸಿ ನಂತರ ಓಡ ಬೇಕೆಂದು ನಿರ್ಧರಿಸಿದೆ. ಪ್ರಾರಂಭದಲ್ಲಿ ಕ್ಲಿಷ್ಟಕರವಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದಿಟ್ಟ ಮನಸ್ಸು ಮಾಡಿ ಪ್ರಥಮವಾಗಿ ಅಕ್ಟೋಬರ್,೨೦೧೯ ರಲ್ಲಿ ೫ಕಿ.ಮೀ ಓಟದ ಸಾಹಸಕ್ಕಿಳಿದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯಮತ್ತಷ್ಟು ಹೆಚ್ಚು ಮಾಡಿತು. ತದ ನಂತರ ಕೊಂಚ ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಅನಿಸಿತು. ಹೇಗೆ ಎಂದು ಯೋಚನೆ ಮಾಡುವಾಗ ಹೊಳೆದದ್ದು ನನ್ನ ವಸ್ತ್ರಾಭೂಷಣ. ಓಡುವಾಗ ಸಾಮಾನ್ಯವಾಗಿ ಎಲ್ಲರೂ ಜಾಗಿಂಗ್ ವಸ್ತ್ರದಲ್ಲಿ ಓಡುತ್ತಾರೆ. ಹಾಗೆ ಮಾಡುತ್ತಿದ್ದವಳು ಸೀರೆಯಲ್ಲಿ ಮಾಡಬೇಕೆಂದು ಹೊಳಿಯಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಸೀರೆ ನಾರಿಯ ಸಾಂಕೇತಿಕ ಮಹತ್ವದ ವಸ್ತ್ರವಾಗಿದ್ದು ಅದರದೆಯಾದ ವೈಶಿಷ್ಟ್ಯ ಹೊಂದಿದೆ.ಸೀರೆ ಉಡುವುದರಿಂದ ನಾರಿಯ ಸೌಂದರ್ಯ ಇಮ್ಮಡಿಯಾಗುವುದು. ಸೀರೆ ಉಡುವಾಗೆಲ್ಲ ತಾಯಿ,ತವರು ಹಾಗು ತಾಯ್ನಾಡಿನ ಹಂಬಲ ಹೆಚ್ಚಾಗುವುದು. ಸೀರೆ ಉಡುವುದೆಂದರೆ ಏನೋ ಸಂಭ್ರಮ ಸಡಗರ. ಅದರಲ್ಲೂ ಅಮ್ಮನ ಸೀರೆಯೆಂದರೆ ಏನೋ ಮನೋಲ್ಲಾಸ, ಮುದ ನೀಡುವುದು. ಅದರ ಸ್ಪರ್ಶವೇ ಅಮ್ಮ ನಮ್ಮೊಟ್ಟಿಗೆ ಇದ್ದಂತೆ. ತವರಿನ ಸವಿನೆನಪುಗಳು ಕಣ್ಣಮುಂದೆ ಬರುತ್ತವೆ. ನನಗೆ ಸೀರೆಯ ಮೇಲೆ ಅಪಾರ ಒಲವು. ಅದರಲ್ಲೂ ಇಳ್ಕಲ್ ಸೀರೆ, ರೇಷ್ಮೆ, ಮೈಸೂರು ರೇಷ್ಮೆ ಎಂದರೆ ತುಂಬ ಇಷ್ಟ.

ಚಿತ್ರ ಕೃಪೆ : ಶಾರದ ಸಕ್ರೆಮಠ್

ನಮ್ಮ ಭಾರತೀಯ ಇತಿಹಾಸದಲ್ಲಿ ಮಹಿಳೆಯರು ಸೀರೆಯುಟ್ಟು ಯುದ್ಧಭೂಮಿಯಲ್ಲಿ ಹೇಗೆ ಹೋರಾಡುಡ್ಡಿದ್ದಾರೆಂಬುದು ಅಚ್ಚರಿಗೊಳಿಸುವುದು. ಅದನ್ನು ವೀಕ್ಷಿಸುವುದೇ ರೋಚಕ. ಹಾಗಾಗಿ ನನಗೆ ಪ್ರೇರಣೆಯಾಗಿದ್ದು ಕರುನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ.
ಹಾಗಾಗಿ ಮೊದಲು ಈ ಸೀರೆಯುಟ್ಟು ಪ್ರಸಿದ್ದವಾದ ಟೆಲ್ಫರ್ಡ್ ಪಾರ್ಕ್ ಓಟದಲ್ಲಿ ಇತರೆ ಮಹಿಳೆಯರೊಂದಿಗೆ ೫ ಕಿ.ಮೀ ಓಟ ಓಡುತ್ತಿದ್ದೆ. ದಿನದಿಂದ ದಿನಕ್ಕೆ ಉತ್ಸುಹಕಳಾಗಿ ಮಾಡುವಾಗ ನನಗೆ ಓಟದ ಆಯೋಜಕರಿಂದ ಹಾಗು ಸಹಓಟಗಾರ್ತಿಯರಿಂದ ಪ್ರಶಂಸೆ ಹಾಗು ಉತ್ತೇಜನ ದೊರೆಯುತ್ತಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತ್ತಿತ್ತು. ಏಕೆಂದರೆ ನಮ್ಮ ಟೆಲ್ಫೋರ್ಡ್ ನ ಸ್ಥಳೀಯ ಪತ್ರಿಕೆಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿತ್ತು.ಸತತ ಪಾರ್ಕ್ ಓಟದಿಂದ ಕರುನಾಡಿನ ಕಾವಿಡ್ ರಿಲೀಫ್ ಫಂಡ್ ಗಾಗಿ ಫಂಡ್ ಗಳನ್ನೂ ಸಹ ಸಂಗ್ರಹಿಸಿದೆ. ಅಲ್ಲದೆ ನಾನು ಓಡುವಾಗ ಸ್ಪೋರ್ಟ್ಸ್ ಇಂಗ್ಲೆಂಡ್ ತಂಡದವರು ನನ್ನನ್ನು ಗುರುತಿಸಿ ‘ THE GIRL CAN CAMPAIGN’ ಎಂಬ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಹುರಿದುಂಬಿಸಿದರು. ಈ ಲಕ್ಷ್ಯಗಳು ಪೂರ್ಣಗೊಳಿಸಿ ಯುನೈಟೆಡ್ ಕಿಂಗ್ಡಮ್ ನ ಪ್ರಖ್ಯಾತ ಮ್ಯಾರಥಾನ್ ಗಾಗಿ ಓಡಲು ನನ್ನ ಹೊಂಗನಸ್ಸಾಗಿತ್ತು . ಹಾಗಾಗಿ EDINBURGH MARATHON 2020 ಗಾಗಿ ನೋಂದಾಯಿಸಿ ನನ್ನ ಓಟ ಮತ್ತಷ್ಟು ವೈಶಿಷ್ಟ್ಯ , ವೈವಿಧ್ಯಮಯವಾಗಿರಲೆಂದು ಬರಿಗಾಲಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯ ಪ್ರಬಲವಾಗುತ್ತ ಹೋಯಿತು.

ಆದರೆ ಕೋವಿಡ್-19 ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರ್ವರಿಗೂ ಪ್ರಭಾವ ಬೀರಿದಂತೆ ಈ ಓಟಕ್ಕೂ ಸಹ ಕಡಿವಾಣ ಹಾಕಿತು. ಹಾಗಾಗಿ ಮೇ ೨೦೨೧ಕ್ಕೆ ಮುಂದೂಡಲಾಯಿತು. ನಾನು ಕುಗ್ಗದೆ ಇನ್ನಷ್ಟು ಅಭ್ಯಾಸ ಮಾಡತೊಡಗಿದೆ. ಇದಕ್ಕೆ ನನ್ನ ಪತಿ ಹಾಗು ಪುತ್ರನಿಂದ ಬೆಂಬಲ ಪ್ರತಿ ಬಾರಿ ದೊರಕುತ್ತಿತ್ತು. ಪುತ್ರನಂತೂ ನನ್ನ ೧೦ ಕಿ.ಮೀ ಸೀರೆಯೋಟದಲ್ಲಿ ನನ್ನ ಬದಿಯಲ್ಲಿ ತನ್ನ ಸೈಕಲ್ ನಲ್ಲಿ ಚಲಿಸಿ ಉತ್ತೇಜಿಸಿದ. EDINBURGH MARATHON ಓಟವು ವಸ್ತುತಃ ಓಟವಾಗಿ ಬದಲಾಗಿ ಸಹ ಓಟಗಾರರಿಲ್ಲದೆಯೇ ಏಕಾಏಕಿ ಓಡುವುವುದೆಂದು ನಿರ್ಧರಿಸಲಾಯಿತು .

ಚಿತ್ರ ಕೃಪೆ : ಶಾರದ ಸಕ್ರೆಮಠ್

ಆ ದಿನ ನಾನು ಕರುನಾಡ ಧ್ವಜದ ಸಾಂಕೇತಿಕ ಬಣ್ಣಗಳಾದ ಹಳದಿ ಹಾಗು ಕೆಂಪು ಬಣ್ಣದ ಸೀರೆಯನ್ನುಟ್ಟು ನಮ್ಮ ಮನೆಯ ಆಸುಪಾಸಿನಲ್ಲಿರುವ ತೋಟದ ಬೀದಿಗಳಲ್ಲಿ ಓಡಲಾರಂಭಿಸಿದೆ. ಅರ್ಧ ಮ್ಯಾರಥಾನ್ ನಂತರ ತುಂತುರು ಹನಿಗಳು ಪ್ರಾರಂಭವಾಯಿತು. ಆದರೂ ಕುಗ್ಗದೆ ಮುಂದುವರಿಸಿದೆ. ಈ ಪಯಣದುದ್ದಕ್ಕೂ ಪತಿ ಹಾಗು ಪುತ್ರನ ಆಗಾಗಿನ ಆರೈಕೆಯಿಂದ ಹುರಿದುಂಬಿಸಿದರು. ೪೨.೪ ಕಿ.ಮೀ ನ ಈ ಮ್ಯಾರಥಾನ್ ಅಂತೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಿ ೫ಗಂಟೆ ೫೦ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿದೆ. ನಂತರ ನಮ್ಮ ಭಾರತ ದೇಶದ ತಿರಂಗ ಧ್ವಜ ಮೇಲೆತ್ತಿಡಿದು ಛಾಯಾಚಿತ್ರದ ಭಂಗಿಗೆ ಹೆಮ್ಮೆಯಿಂದ ನಿಂತೆ.
ನನ್ನ ಈ ಆತ್ಮಸ್ತೈರ್ಯ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಮತ್ತಷ್ಟು ಸಾಹಸಗಳೊಂದಿಗೆ ಮುಗಿಲೇರುವ ಆಸೆ !!

ಸ್ನೇಹಿತರೆ ! ನಮ್ಮ ಸಂಸ್ಕೃತಿ ನಮ್ಮ ಹಿರಿಮೆ ನಮ್ಮ ಅಸ್ತಿತ್ವ .
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ !
ಜೈ ಕರ್ನಾಟಕ ಜೈ ಹಿಂದ್ .

ಶಾರದ ಸಕ್ರೆಮಠ್

  1. ರಾಜಶ್ರೀಯವರ ವರದಿ ಕೆಬಿಯುಕೆ- ಲೆಸ್ಟರ್ ಕನ್ನಡಿಗರು ವೃಜುಂಭಣೆಯಿಂದ ಆಚರಿಸಿದ ಅದ್ಭುತ ಯುಗಾದಿ ಕಾರ್ಯಕ್ರಮ ನಡೆದ ಒಂದು ವಾರ ಮುಗಿಯುವದರೊಳಗೆ ಪ್ರಕಟವಾಗಿದೆ. ಅದು ಸಹ ಕಾರ್ಯಕ್ರಮದಷ್ಟೇ ಒಪ್ಪವಾಗಿ ಮೂಡಿ…

  2. ಅಜ್ಜಿ ಹೇಳೋ ಕತಿ ಬಗ್ಗೆ ಎಷ್ಟ ಛಂದ ಬರದೀರಿ. ನಿಮ್ಮ ಅಜ್ಜಿ ಹೇಳುವ ಕತೆಗಳ ಬಗ್ಗೆ ಭಾಳ ಆತ್ಮೀಯವಾಗಿ ಬರದೀರಿ! ಅದನ್ನ ಓದಕೋತ ನನಗೂ ನನ್ನ ಅಜ್ಜಿಯ…

  3. ಕತೆ ಚನ್ನಾಗಿದೆ. ಕತೆಯಲ್ಲಿ ಓಟವೂ ಇದೆ. ಬರೆಯುತ್ತ ಬರೆಯುತ್ತ ಇನ್ನೂ ಪಳಗುತ್ತೀರಿ. ಮೇಟಿಯವರು ವಿಕ್ರಂ ನನ್ನು ಸೃಷ್ಟಿ ಮಾಡಿದ್ದಾರೆ. ಮೇಟಿಯವರಿಗೆ ಪತ್ತೇದಾರಿ ಜಾನರ್ ಇಷ್ಟ ಅನಿಸುತ್ತದೆ. ವಿಕ್ರಂ…

  4. ಪತ್ತೇದಾರಿ ಕಥೆಗಳು ಯಾರನ್ನು ಆಕರ್ಷಿಸಲಾರದು? ಮಾನವನ ದೌರ್ಬಲ್ಯ ಕ್ರೂರತೆಗಳು ಹತ್ಯೆಗೆ ನೂಕುವ ಪ್ರೇರಣೆ ಇರುವವರೆಗೆ ಈ ಜಾನ್ರ (genre) ಇದ್ದೇ ಇರುತ್ತದೆ. ಪುರುಷೋತ್ತಮನಿಂದ ಶೆರ್ಲಾಕ್ ಹೊಲ್ಮ್ಸನ ವರೆಗೆ…

17 thoughts on “ಸೀರೆಯೋಟ – ಶಾರದ ಸಕ್ರೆಮಠ್

  1. ನಿಮ್ಮ ಸೀರೆಗಳಬಣ್ಣ ಉಟ್ಟಿರುವ ನಾಜುಕು ನಯನಮನೋಹರವಾಗಿದೆ. ನಿಮ್ಮ marathon ಓಟ, ನಿಮ್ಮ determination ಬಹಳ ಉತ್ತೆೇಜನಕಾರಿಯಾಗಿದೆ. ಹಿೀಗೆ ನಿಮ್ಮ ಉತಾೃಹ ಮುಂದುವರೆಯಲಿ ಎಂದು ಹಾರೈಸುತೇನೆ. Vathsala

    Like

  2. ಶಾರದಾ ನಾನು ಕಳೆದ ವಾರ ಪ್ರವಾಸದಲ್ಲಿದ್ದು ನಿಮ್ಮ ಸೀರೆಯೋಟ ಎಂಬ ಬರಹಕ್ಕೆ ಸಮಯೋಚಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ನಮ್ಮ ಸಂಸ್ಕೃತಿಗೆ ತಕ್ಕಂತೆ ಒಪ್ಪುವ ಸೀರೆಯಲ್ಲಿ ನೀವು ಮ್ಯಾರಥಾನ್ ಓಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ಇಂಗ್ಲೆಂಡಿನ ಸಾರ್ವಜನಿಕ ಸ್ಥಳಗಳಲ್ಲಿ ಸೀರೆ ತೊಡಲು ಮತ್ತು ನಮ್ಮ ಕನ್ನಡ ಭಾಷೆಯನ್ನು ಜೋರಾಗಿ ಮಾತನಾಡಲು ಅನೇಕರು ಹಿಂಜರಿಯುವುದು ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲಿ ನೀವು ಆ ಸಾಂಸ್ಕೃತಿಕ ಮೈ ಚಳಿಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಸೀರೆ ಉಟ್ಟು ಮ್ಯಾರಥಾನ್ ಮುಗಿಸಿರುವುದು ಶ್ಲಾಘನೀಯ.

    ಇಂಗ್ಲೆಂಡಿನ ಸಂಸ್ಕೃತಿಯ ಜೊತೆ ಬೆರೆಯುವುದರ ಜೊತೆಗೆ ನಮ್ಮ ಮೂಲ ಬೇರುಗಳನ್ನ ಉಳಿಸಿಕೊಳ್ಳುವುದು, ನಮ್ಮ ಸಂಸ್ಕೃತಿಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯೇ ಮತ್ತು ಅದು ತರುವ ವೈವಿಧ್ಯತೆ ಖುಷಿಕೊಡುವ ವಿಚಾರ. ಎರಡು ಸಂಸ್ಕೃತಿಗಳ ಸಮ್ಮಿಲನ ಪರಸ್ಪರ ಅರಿವು ಮತ್ತು ಗೌರವಗಳನ್ನು ಹೆಚ್ಚಿಸುತ್ತವೆ. ಬಹುಮುಖಿ ಸಮಾಜದಲ್ಲಿ ಈ ರೀತಿಯ ಸಾಂಸ್ಕೃತಿಕ ಪ್ರಜ್ಞೆ ಮತೀಯ ದ್ವೇಷ ಮತ್ತು ರೇಸಿಸಂ ಪಿಡುಗುಗಳನ್ನು ಕಡಿಮೆಮಾಡುತ್ತವೆ ಎಂದು ನಾನು ಭಾವಿಸುತ್ತೇನೆ.

    Liked by 1 person

    • ಪ್ರಸಾದ್ ಅವರೇ, ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ತುಂಬಾ ಧನ್ಯವದಗಳು. I am deeply touched by your words.

      Like

  3. ಸೀರೆಯಲ್ಲಿ ಓಡುವುದನ್ನು ನಾನೆವತ್ತೂ ನೋಡಿಲ್ಲ, ಅದರಲ್ಲೂ ನೀವು ಪೂರ್ಣ ಮ್ಯರಾಥಾನ್ ಮಾಡಿದ್ದು ದಾಖಲೆಯೇ. ನೀವು ಎಲ್ಲರಿಗೂ ಮಾದರಿ. ಸೀರೆಯ ಸಂಕೇತದಲ್ಲಿ ಭಾರತವನ್ನು ಪ್ರತಿನಿಧಿಸುವ ರಾಯಭಾರಿಗಳು ನೀವು.

    – ಕೇಶವ

    Like

  4. ಸ್ಪೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು ಪ್ರೇಮಾ ಅವರೇ

    Like

  5. ಶಾರದಮ್ಮ, ಇತ್ತೀಚಿಗೆ ನಾನು ಸೀರೆ ಉಟ್ಟವರನ್ನ ನೋಡುವುದೇ ಬಹಳ ಅಪರೂಪ , ಕನ್ನಡ ಬಳಗದಲ್ಲಿ ನೋಡಬಹುದು ಅಷ್ಟೇ ನೀವು ಸೀರೆ ಉಟ್ಟಿಕೊಂಡು ಮೆರಥಾನ್ ಓಡುವುದು Guinness book ನಲ್ಲಿ ಧಾಖಲೆ ಆಗಬೇಕು!!
    best wishes
    Ramamurthy

    Like

  6. ಓಟದ ನೋಟಕ್ಕೂ ಮೆರುಗು ತಂದ ಸೀರೆಯ ನೀರೆಯ ಉತ್ಸಾಹ, ಪ್ರಯತ್ನ ಮತ್ತು ಆತ್ಮ ವಿಶ್ವಾಸ ಮೆಚ್ಚುವಂತದ್ದು. ಹೊಸತನ್ನು ಹುಟ್ಟು ಹಾಕಿ ಅದಕ್ಕೆ ಕರ್ನಾಟಕದ ಮೆರುಗು ನೀಡಿ, ಗ್ಲೋಬಲ್ ವೇದಿಕೆಯಲ್ಲಿ ಹೊಸ ಮಿಂಚನ್ನು ಸೃಷ್ಟಿಸಿದ ಶಾರದ ಸಕ್ರೆಮಟ್ ಅವರು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. Well done and run safe.

    Liked by 1 person

    • ನಿಮ್ಮ ಪ್ರಶಂಸೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪ್ರೇಮ-ಸವಿ

      Liked by 1 person

  7. ಕೆಚ್ಚೆದೆಯ ಕಿತ್ತೂರು ಚೆನ್ನಮ್ಮನಿಂದ ಪ್ರೇರಿತರಾದ ಕಚ್ಚೆಸೀರೆಯುಟ್ಟು ಓಡುವ ಶಾರದಾ ಅವರ ವೃತ್ತಾಂತ ರೋಚಕವಾಗಿದೆ.ಕನ್ನಡ ರಮಣಿಯ ಆತ್ಮಸ್ಥೈರ್ಯ ಶ್ಲಾಘನೀಯ. ಅವರಿಗೆ ಜೈಕಾರಹಾಕುವಾಗ ಕನ್ನಡತಿ ಎನ್ನುವ ಹೆಮ್ಮೆ ನಮ್ಮದು! ಬರಿಗಾಲಲ್ಲಿ ಓಡುವ ಧೈರ್ಯಕ್ಕೆ ಮೆಚ್ಚಿದೆ!ಇನ್ನು ಮುಂದೆ ಪೂರ್ತಿ ಮಾರಾಥನ್ ಓಡಿದ ನಂತರ ಮತ್ತೆ ಬರೆಯಿರಿ! Goodluck! ಶ್ರೀವತ್ಸ ದೇಸಾಯಿ

    Liked by 1 person

    • ತುಂಬ ಧನ್ಯವದಗಳು, ನಾನು ಮಾಡಿರುವುದು Edinburgh Full Marathon – 42.2 kms.
      ನಿಮ್ಮಂತಹ ಎಲ್ಲ ಹಿರಿಯರ ಆಶೀರ್ವಾದ ಮುಂಬರುವ ದಿನಗಳಲ್ಲಿ ಸೀರೆಯುಟ್ಟು ಹೆಚ್ಚು ಹೆಚ್ಚು ಪೂರ್ಣ ಮ್ಯಾರಥಾನ್ ಮಾಡಲು ನನ್ನನ್ನು ಪ್ರೇರೇಪಿಸುತ್ತದೆ.

      Like

    • ನಿಮ್ಮ ಮೆಚ್ಚುಗೆಯ ಹಿತನುಡಿಗಳಿಗೆ ಧನ್ಯವಾದಗಳು ದೇಸಾಯಿ ಅವರೆ

      Like

Leave a comment

This site uses Akismet to reduce spam. Learn how your comment data is processed.