ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು-ಡಾ|| ಪ್ರೇಮಲತ.ಬಿ & ಶ್ರೀ.ಜಿ.ವಿ.ಕುಲ್ಕರ್ಣಿ – ಡಾ||ಸತ್ಯವತಿ ಮೂರ್ತಿ

ಪ್ರಿಯ ಓದುಗರೇ !!
‘ಓಂ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ’
ಶ್ರೀಗುರುವಿನ ಈ ಮಹಾಮಂತ್ರದ ನಿತ್ಯ ಪ್ರಾತಃಸ್ಮರಾಮಿ ನಮ್ಮ ಜೀವನವನ್ನು ತಮ್ಮ ಉತ್ತಮ ಶಿಕ್ಷಣ ಹಾಗೂ ಸನ್ಮಾರ್ಗದಿಂದ ನಮ್ಮನ್ನು ನೆಡೆಸುವಂತಹ ಗುರುಗಳನ್ನು ಸ್ಮರಿಸುತ್ತೇವೆ, ಆರಾಧಿಸುತ್ತೇವೆ. ಪ್ರತಿ ಮಾನವನ ಜೀವನವನ್ನು ನಿರೂಪಿಸುವುದು ಓರ್ವ ಗುರು. ಸೆಪ್ಟೆಂಬರ್ ೫ನೇ ತಾರೀಖು ಇಂದು ರಾಷ್ತ್ರೀಯ ಶಿಕ್ಷಕರ ದಿನಾಚರಣೆಯ ಅಂಗವಾಗಿ ಈ ವಾರದ ಸಾಪ್ತಾಹಿಕ ಸಂಚಿಕೆಯಲ್ಲಿ ನಮ್ಮ ಅನಿವಾಸಿ ಸದಸ್ಯಯರುಗಳಾದ ಡಾ||ಪ್ರೇಮಲತಾ. ಬಿ ಅವರು ‘ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು’ ಎಂಬ ಶೀರ್ಷಿಕೆಯಲ್ಲಿ ಹಾಗು ಡಾ।।ಸತ್ಯವತಿ ಮೂರ್ತಿ ಅವರು ತಮ್ಮ ಗುರುಗಳಾದ ‘ ಶ್ರೀ.ಜಿ.ವಿ.ಕುಲ್ಕರ್ಣಿ ಅವರ ಸವಿಸ್ತಾರವಾದ , ಉತ್ಸುಹಕ ಗುರುವಂದಿಪೆಯ ಲೇಖನವನ್ನು ನಿಮ್ಮ ಮುಂದಿಟ್ಟಿದ್ದಾರೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು


ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ
ಪರಿಪಾಟಗಳನ್ನು ಕಲಿಸುವ ಈ ಕೆಲವು ಶಿಕ್ಷಕರು ಬಹಳ ಸೂಕ್ಷ್ಮಮತಿಗಳು.
ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು
ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ಬಂದಿದ್ದ ವಿಶೇಷ ಅತಿಥಿಗಳು ನಮ್ಮ
ಸ್ಪರ್ಧೆಗೆ ಸಮಾನ ಬೆಂಬಲ ನೀಡಿ ಎರಡೂ ತಂಡಗಳಿಗೆ ಸೈ ಎನ್ನುವಂತೆ ಪ್ರೋತ್ಸಾಹ
ನೀಡಿದ್ದರು. ಅವತ್ತು ಮಾಧ್ಯಮಿಕ ಶಾಲೆಯ ಕ್ರೀಡಾದಿನ. ಗಟ್ಟಿಮುಟ್ಟಾಗಿದ್ದ,
ಹುರಿಯಾಳುಗಳಾದ ಈ ವಿಶೇಷ ಅತಿಥಿಗಳು ಸ್ವತಃ ಕ್ರೀಡಾಪಟುಗಳಾಗಿದ್ದುದು ಎಲ್ಲರಿಗೂ
ವೇದ್ಯವಾಗಿತ್ತು. ಆಗ ತಾನೇ ಮಣ್ಣಿನ ನೆಲದಲ್ಲಿ ಆಡಿದ್ದ ನಮ್ಮ ಮೈಕೈಗಳೆಲ್ಲ
ಧೂಳಾಗಿದ್ದವು.
ಅದಿರಲಿ, ಪ್ರತಿ ಶುಕ್ರವಾರ ಶಾಲೆಯ ತಂಡಗಳ ನಡುವೆ ಆಭ್ಯಾಸದ ಮ್ಯಾಚು ನಡೆದು
ವಿಜಯೀ ತಂಡ ಆ ವಾರಾಂತ್ಯಕ್ಕೆ ಬಾಲು ಮತ್ತು ನೆಟ್ಟನ್ನು ಮನೆಗೆ ತಂಗೊಂಡುಹೋಗುವ
ರೂಢಿಯಿತ್ತು. ಸರದಿ ನಮ್ಮದಾದ ದಿನಗಳಲ್ಲಿ ಮನೆಯ ಮುಂದಿನ ರಸ್ತೆಗಳಲ್ಲಿ ಅವತ್ತಿನ
ಸಂಜೆ ಮತ್ತು ವಾರಾಂತ್ಯವೆಲ್ಲ ಹಲವು ಸ್ನೇಹಿತರು ಸೇರಿ ವಾಲಿಬಾಲು ಆಡುತ್ತಿದ್ದೆವು.
ವಾಲಿಬಾಲು ರಸ್ತೆಯ ಅಕ್ಕ ಪಕ್ಕದ ಚರಂಡಿಗಳಲ್ಲಿ, ಸೆಗಣಿ, ಹೊಲಸುಗಳಲ್ಲಿ
ಧಾರಾಳವಾಗಿ ಬೀಳುತ್ತಿತ್ತು, ಅದನ್ನು ನೀರಲ್ಲಿ ತೊಳೆದು ಒಣಗುವ ಮುನ್ನವೇ ನಮ್ಮ ಆಟ
ಮತ್ತೆ ಮುಂದುವರೆಯುತ್ತಿತ್ತು. ಇಂತಹ ಬಾಲೇ ನಮ್ಮ ಅವತ್ತಿನ ಆಟದಲ್ಲೂ
ಬಳಕೆಯಾಗಿತ್ತು.
ಆಟ ಮುಗಿದ ನಂತರ ಅವತ್ತು ದಣಿದ ಕ್ರೀಡಾಪಟುಗಳಿಗೆ ಶಾಲೆಯ ವತಿಯಿಂದ
ಬಿಸ್ಕತ್ತುಗಳನ್ನು ಹಂಚುವ ಕೆಲಸ ನನ್ನ ಪಾಲಿಗೆ ಬಂತು. ತಂಡವೊಂದಕ್ಕೆ ಲೀಡರಳಾಗಿದ್ದ

ಹನ್ನೊಂದು–ಹನ್ನೆರಡು ವರ್ಷದ ನನಗೆ ಎಲ್ಲರಿಗೂ ಬಿಸ್ಕತ್ತು ಹಂಚುವ ಗೌರವ ಸಿಕ್ಕಿದ್ದಕ್ಕೆ
ಕೋಡು ಹುಟ್ಟಿತ್ತು. ರಪ್ಪನೆ ಪೊಟ್ಟಣ ಹರಿದು ಅದೇ ವಾಲಿಬಾಲಿನಲ್ಲಿ ಆಡಿದ್ದ ನನ್ನ ಗಲೀಜು
ಕೈಯನ್ನು ತುರುಕಿ ಎರಡೆರಡು ಬಿಸ್ಕತ್ತುಗಳನ್ನು ಹೊರತೆಗೆದು ಎಲ್ಲರಿಗೂ ನೀಡುತ್ತ
ಹೋದೆ. ಬಂದಿದ್ದ ವಿಶೇಷ ಅತಿಥಿಗಳು ಮಕ್ಕಳು ಮತ್ತು ಮಾಸ್ತರರ ಜೊತೆ ಸರದಿಯಲ್ಲಿ
ನಿಂತಿದ್ದರು. ಅವರ ಸರದಿ ಬಂದಾಗ ನನ್ನ ಕೈಯಿಂದ ಪೊಟ್ಟಣವನ್ನು ಅಚಾನಕ್ಕು
ಎತ್ತಿಕೊಂಡು ನೀನೂ ತಗೋ ಎನ್ನುವಂತೆ ನನ್ನೆಡೆಗೆ ಹಿಡಿದರು. ಅರೆಕ್ಷಣ ಅವಾಕ್ಕಾದ
ನನಗೆ, ನನ್ನ ತಪ್ಪಿನ ಅರಿವಾಗಿ ಹೋಯ್ತು! ಅವರು ಮಾತಿನಲ್ಲಿ ಏನೂ ಹೇಳಿರಲಿಲ್ಲ.
ಮುಖದಲ್ಲಿ ಮಾತ್ರ ಕಿರುನಗೆಯಿತ್ತು. ಪೆಚ್ಚಾದ ನಾನು ಎರಡು ಬಿಸ್ಕತ್ತು ತಗೊಂಡು,
ಪೊಟ್ಟಣವನ್ನೂ ಮರಳಿ ಪಡೆದು, ಅವರೆಡೆ ಅದನ್ನು ಚಾಚಿದೆ. ಯಾವ ಎಗ್ಗಿಲ್ಲದೆ ತಾವೂ
ಎರಡು ಬಿಸ್ಕತ್ತು ತಗೊಂಡು ನಗುತ್ತ ಏನೂ ಆಗಿಲ್ಲವೇನೋ ಎನ್ನುವಂತೆ ಅವರು
ಮಾಸ್ತರುಗಳ ಜೊತೆ ಮಾತು ಮುಂದುವರೆಸಿದರು. ಅವರ ಹೆಸರು ನನಗೆ ನೆನಪಿಲ್ಲ.
ಆದರೆ ಅವತ್ತು ಅವರು ನೀಡಿದ ಪಾಟ ಪಾತ್ರ ಚೆನ್ನಾಗಿ ನೆನಪಿನಲ್ಲುಳಿದಿದೆ.
ಅಂದಿನಿಂದ ಇದುವರೆಗೆ ಶಿಷ್ಟಾಚಾರದ ಹಲವು ಪಾಠಗಳನ್ನು ಕಲಿತಿದ್ದೇನೆ. ಆದರೆ
ಅರೆಕ್ಷಣದಲ್ಲಿ ಯಾರಿಗೂ ತಿಳಿಯದ ಹಾಗೆ ಈ ಅತಿಥಿಗಳು ನನಗೆ ಪಾಠ ಕಲಿಸಿದ ಪರಿ
ಮಾತ್ರ ಇವತ್ತಿಗೂ ಅವರನ್ನು ನನ್ನ ಬದುಕಿನಲ್ಲಿ ಬಂದುಹೋದ ವಿಶೇಷ ವ್ಯಕ್ತಿಗಳನ್ನಾಗಿ
ಮಾಡಿದೆ. ಗಲೀಜು ಕೈಯನ್ನು ಉಪಯೋಗಿಸದೆ ಪೊಟ್ಟಣವನ್ನು ಮುಂದೆ ಚಾಚಿ ಆಯಾ
ಮಂದಿಯೇ ತಮ್ಮ ಕೈಗಳಿಂದ ಬಿಸ್ಕತ್ತುಗಳನ್ನು ತೆಗೆದುಕೊಳ್ಳುವಂತೆ ಮಾಡುವುದು
ಉತ್ತಮ ಎಂದು ಅವತ್ತು ಕಲಿತೆ. ಅದರ ಜೊತೆ ನಿಯಂತ್ರಣ ಮಾಡಿ ಎರಡೆರಡೇ ಬಿಸ್ಕತ್ತು
ಕೊಡುವ ಬದಲು ಅವರಾಗಿ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳುವ ಹಕ್ಕನ್ನು
ಬೇರೆಯವರಿಗೆ ನೀಡುವುದು ಗೌರವಾರ್ಹ ನಡವಳಿಕೆ ಎಂದು ಕೂಡ ತಿಳಿಯಿತು. ಅವತ್ತು
ಏನು ನಡೆಯಿತು ಅನ್ನುವುದು ಯಾರಿಗೂ ತಿಳಿಯದಂತೆ ಸಣ್ಣ ಸಮಯದಲ್ಲಿ ಅವರು
ನೀಡಿದ ಅರೆಕ್ಷಣದ ಶಿಷ್ಟಾಚಾರದ ಶಿಕ್ಷಣ ಬದುಕಿನುದ್ದಕ್ಕೂ ಬಂದಿದೆ.

ಜೀವನದಲ್ಲಿ ಬುದ್ಧಿ ಹೇಳಿಕೊಟ್ಟ ಶಿಕ್ಷಕರು ಹಲವರಿದ್ದಾರೆ. ಆದರೆ ಇಂತಹ ಸೂಕ್ಷ್ಮಗ್ರಾಹಿ
ಶಿಕ್ಷಕರು ಬಹಳ ಕಡಿಮೆ. ಇದ್ದರೂ ಅವರ ಈ ಬಗೆಯ ವಿಶಿಷ್ಟ ಭೋದನೆಯನ್ನು ಗ್ರಹಿಸುವ
ವಿದ್ಯಾರ್ಥಿಗಳು ಕೂಡ ಕಡಿಮೆ ಇರಬಹುದು. ನಮ್ಮ ತಪ್ಪುಗಳನ್ನು ಗ್ರಹಿಸಿಯೂ
ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ
ಕೆಲವರು ಬಹಳ  ಸೂಕ್ಷ್ಮಮತಿಗಳು.

ನನ್ನದು ಗಡಸು ದ್ವನಿ. ಫೋನಿನಲ್ಲಿ ಮೊದಲ ಬಾರಿಗೆ ನನ್ನ ಮಾತನ್ನು ಅತ್ತಕಡೆಯಿಂದ
ಕೇಳುವವರು ‘ನಮಸ್ಕಾರ ಸರ್…’ ಅಂತಲೇ ಶುರುಮಾಡಿಕೊಳ್ಳುವುದು! ಹೈಸ್ಕೂಲಿನಲ್ಲಿ
ಕರ್ನಾಟಕದಿಂದ ಹೈದರಾಬಾದಿಗೆ ಒಮ್ಮೆ ಚರ್ಚಾಸ್ಪರ್ಧೆಗೆ ಹೋದ ಸಂದರ್ಭ.
ದಾರಿಯಲ್ಲಿ ಜೊತೆಯಾದ ಒಬ್ಬರು ನನ್ನೆಡೆ ಬೊಟ್ಟು ಮಾಡಿ “ಇವರೊಂಥರಾ ಲೇಡಿ
ಶಂಕರ್ ನಾಗ್ ಥರಾ ಮಾತಾಡ್ತಾರಲ್ವಾ” ಎಂದು ಹೇಳಿದ್ದೂ ಇದೆ! ಕಾಲೇಜಿನ ದಿನಗಳಲ್ಲಿ
ಬೆಂಗಳೂರಿನ ರೇಡಿಯೋದಲ್ಲಿ ನಾ. ಸೋಮೇಶ್ವರರ ಜೊತೆ ಮುದ್ದಣ-ಮನೋರಮೆಯರ
ಸರಸ ಸಲ್ಲಾಪದ ಒಂದು ಪ್ರಸಂಗದ ರೆಕಾರ್ಡಿಂಗ್ ಗೆ ಅಂತ ಹೋದಾಗ ಮನೋರಮೆ
ಎನ್ನುವ ಹೆಣ್ಣು ಪಾತ್ರದ ಎಲ್ಲ ಲಾಲಿತ್ಯಗಳನ್ನು ಬಿಟ್ಟ ನನ್ನ ದ್ವನಿ ಹತ್ತು ವರ್ಷದ ಬಾಲಕನ
ರೀತಿ ಕೇಳಿಸಿದ್ದೂ ನೆನಪಿದೆ. ‘ನಿನ್ನ ದ್ವನಿಗೆ ಪಾಶ್ಚಾತ್ಯ ಸಂಗೀತ ತುಂಬ ಚೆನ್ನಾಗಿ
ಹೊಂದುತ್ತೆ’ ಎಂದವರೂ ಇದ್ದಾರೆ. ಇದೆಲ್ಲ ಅಂಬೋಣ ಮತ್ತು ಅರಿವಿನೊಂದಿಗೆ
ಮುಂದೊಮ್ಮೆ ಪಾಶ್ಚಾತ್ಯ ಶೈಲಿಯ ಸಂಗೀತ ಕಲಿಯುವ ಕುತೂಹಲದಿಂದ ಬಿಟಿಎಸ್
ಬಸ್ ಹತ್ತಿ ಕಾಕ್ಸ್ ಟೌನಿನ ಬೆಂಗಳೂರು ಮ್ಯೂಸಿಕ್ ಶಾಲೆಗೆ ಸೇರಿದ್ದ ದಿನಗಳವು.
ಅಂದುಕೊಂಡಂತೆಯೇ ಭಾರತೀಯ ಸಂಗೀತಕ್ಕೆ ಒದಗದ ನನ್ನ ಧ್ವನಿ ಶಾಸ್ತ್ರೀಯ
ಪಾಶ್ಚಾತ್ಯ ಸಂಗೀತದ ‘ಟೆನರ್’ ಗುಂಪಿಗೆ ಸುಲಭವಾಗಿ ಸೇರಿಹೋಗುತ್ತಿತ್ತು.

ಹೊರಗಿನಿಂದ ಸಾಧಾರಣವಾಗಿ ಕಂಡರೂ ಇದು ವಿದೇಶೀ ಶೈಲಿಯ ಶಾಲೆಯಾಗಿತ್ತು.
ಬಹುತೇಕರು ಭಾರತೀಯ ವಿದ್ಯಾರ್ಥಿಗಳಾಗಿದ್ದರೂ ಅವರದೇ ವಿಶಿಷ್ಟ ಪಾಶ್ಚಾತ್ಯ ಬಗೆಯ
ಬದುಕನ್ನು ನಡೆಸುತ್ತಿದ್ದವರು. ಶಿಕ್ಷಕರು ಕೂಡ. ಇಲ್ಲಿ ಕೂಡ ನನಗೆ ಅಂಥದೇ ಒಬ್ಬ ವಿಶಿಷ್ಟ
ಗುರುಗಳು ಸಿಕ್ಕರು. ಮೊದಲಿಗೆ ಇವರಿಗೆ ನಾನು ಬೇರೊಂದು ವರ್ಗದ ವಿದ್ಯಾರ್ಥಿನಿ ಎಂಬ
ಮನವರಿಕೆಯಿತ್ತು. ಬಹುಶಃ ಅದನ್ನು ಗ್ರಹಿಸುವುದು ಸುಲಭಸಾಧ್ಯವಾಗಿತ್ತು. ಒಬ್ಬ
ವಿದ್ಯಾರ್ಥಿಗೆ ಒಂದು ಗಂಟೆಯ ಕಾಲ ಪಾಠ ನಡೆಸುತ್ತಿದ್ದ ಕಾರಣ ಆಯಾ ವಿದ್ಯಾರ್ಥಿಗೆ
ತಕ್ಕಂತೆ ಪಾಠ ಮಾಡಲಾಗುತ್ತಿತ್ತು. ಈ ಗುರುಗಳು ನನಗಾಗಿ ಅಳವಡಿಸಿಕೊಂಡ
ತಂತ್ರಗಳು ಹಲವು. ಪಿಯಾನೋ ಬಾರಿಸಿಕೊಂಡು ಅವರು ಹೇಳಿಕೊಡುವ ಹಾಡುಗಳಿಗೆಲ್ಲ
ನನಗೆ ಅರ್ಥವಾಗುವಂತೆ ಹಲವು ವ್ಯಾಖ್ಯಾನಗಳನ್ನು ಕೊಡುತ್ತಿದ್ದರು. ಉದಾಹರಣೆಗೆ
ಕ್ರೈಸ್ತ ಧರ್ಮದವರಾದ ಅವರು ಜೀಸಸ್ ನ ಹಾಡು ಹೇಳಿಕೊಡುವಾಗ ದಾಸರ ಪದಗಳ
ಉದಾಹರಣೆ ನೀಡುತ್ತಿದ್ದರು. ಭಾವುಕತೆ ಇರದಿದ್ದಲ್ಲಿ ಇಡೀ ಕೋಣೆಯಲ್ಲಿ
ಮೋಂಬತ್ತಿಗಳನ್ನು ಹಚ್ಚಿಟ್ಟು ಅದಕ್ಕಾಗಿ ವಿಷೇಶ ವಾತಾವರಣ ಕಲ್ಪಿಸುತ್ತಿದ್ದರು.
ಸಮುದಾಯ ಕಲಿಕೆ ಮತ್ತು ಪ್ರದರ್ಶನಗಳಲ್ಲಿ ನಾನೊಬ್ಬಳು ಭಿನ್ನ ಸಂಸ್ಕ್ರುತಿಯವಳಾಗಿ
ಹೊರಬೀಳದಂತೆ ಕಾಳಜಿವಹಿಸುತ್ತಿದ್ದರು. ಆರ್ಥಿಕವಾಗಿ ಅಷ್ಟೇನು ದುಡಿಮೆಯಿಲ್ಲದಿದ್ದರೂ
ಬೆಳಿಗ್ಗೆ ಛಾಯಾಗ್ರಾಹಕರಾಗಿ ಸಂಜೆ ಸಂಗೀತಕಾರರಾಗಿ ಕಲೆಗಾಗಿ ಅವರು ತೋರುತ್ತಿದ್ದ
ಸಂವೇದನೆಗಳು ಅಮೋಘವಾದವಾಗಿದ್ದವು. ಬಹುಶಃ ಪ್ರತಿ ವಿದ್ಯಾರ್ಥಿಗೂ ಅವರ ಕಾಳಜಿ
ಅಂಥದ್ದೇ ಇತ್ತು ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಇದೇ ಶಾಲೆಯಲ್ಲಿ ಪೋಲೀಸು
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮತ್ತೊಬ್ಬ ಗುರುಗಳೂ ಇದ್ದರು.
ಇವರೆಲ್ಲ ಬೋಧನೆಯ ಪರಿಮಿತಿಯನ್ನು ಮೀರಿ ಇಡೀ ಜೀವನದ ಬಗ್ಗೆ ತಿಳಿಸಿಕೊಟ್ಟಿದ್ದು
ಬಹಳಷ್ಟಿದೆ. ಪ್ರತಿ ದಿನ ಹಲವು ಹತ್ತು ಜನರೊಂದಿಗೆ ಒಡನಾಡುತ್ತೇವೆ. ನೂರಾರು,
ಸಾವಿರಾರು ಮಂದಿ ಬದುಕಿನಲ್ಲಿ ಬಂದು ಹೋಗುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ
ನಮ್ಮಲ್ಲಿ ಮರೆಯದ ಛಾಪನ್ನು ಮೂಡಿಸಿಬಿಡುತ್ತಾರೆ. ಹೊಗಳದೆ, ತೆಗಳದೆ, ಕೊಂಕಾಡದೆ,

ಶಿಕ್ಷಿಸದೆ, ಬೇಸರಿಸಿಕೊಳ್ಳದೆ, ಪಕ್ಷಪಾತಮಾಡದೆ, ಜಾತೀಯತೆ, ಧರ್ಮಗಳನ್ನು,
ಅಂತಸ್ತುಗಳನ್ನು ಎಣಿಸದೆ ಇಂತಹ ವ್ಯಕ್ತಿಗಳು ಎಲ್ಲಕ್ಕೂ ಅತೀತವಾದ ವ್ಯಕ್ತಿತ್ವದವರಾಗಿ
ಅತ್ಯಂತ ಸರಳವಾಗಿ, ಶ್ರದ್ದೆಯಿಂದ ನಮಗೆ ಹಲವು ವಿಶೇಷ ಮಾದರಿಗಳನ್ನು ಸೃಷ್ಟಿಸಿ
ಹೋಗುತ್ತಾರೆ.
ನಾವು ಯಾವುದೋ ಕೆಲವು ನಿಮಿಷಗಳಲ್ಲಿ ಅಥವಾ ಕೆಲವು ಕಾಲ ಮಾತ್ರ ಇವರೊಡನೆ
ಒಡನಾಡಿದರೂ ಜೀವನ ಪೂರ್ತಿ ಇವರು ನಮ್ಮ ನೆನಪಿನಲ್ಲಿ ಸವಿಯನ್ನು ಬಿತ್ತಬಲ್ಲ
ವಿಷೇಶ ವ್ಯಕ್ತಿತ್ವದವರಾಗಿರುತ್ತಾರೆ.

ದಶಕಕ್ಕೂ ಹಿಂದೆ ಸ್ಕಾಟ್ ಲ್ಯಾಂಡಿನಲ್ಲಿ ಮೊದಲ ಬಾರಿಗೆ ಕೆಲಸ ಶುರುಮಾಡಿದ್ದೆ.
ಪರದೇಶದ ಆಸ್ಪತ್ರೆಗಳ ಮೊದಲ ಅನುಭವ. ಇದಕ್ಕೂ ಮೊದಲು 6 ತಿಂಗಳ ಕಾಲ
ಯಾವುದೇ ಪಗಾರವಿಲ್ಲದೆ ಅನುಭವಕ್ಕಾಗಿ ಇದೇ ಆಸ್ಪತ್ರೆಯಲ್ಲಿ ಎಲ್ಲರ ಹಿಂದೆ ಮುಂದೆ
ಓಡಾಡಿಕೊಂಡು ಕೆಲಸ ಕಲಿತಿದ್ದೆ. ನನ್ನ ಈ ಹೊಸ ಕೆಲಸ ನಮಗೆ ಸಂಬಂಧಪಟ್ಟ
ಪರಿಣತಿಯಲ್ಲಿ ಅತಿ ಕೆಳವರ್ಗದ್ದಾಗಿತ್ತು. ಸೀನಿಯರ್ ಹೌಸ್ ಆಫೀಸರ್ ಎಂಬ
ಹೆಸರಾದರೂ ನಾವುಗಳೇ ಜೂನಿಯರ್ ಗಳು! ಇಂಥವರು ಇಬ್ಬರಿದ್ದೆವು. ನಡುವೆ
ಸಾಮಾನ್ಯವಾಗಿ ಇರಬೇಕಿದ್ದ ರಿಜಿಸ್ತ್ರಾರ್ ಹುದ್ದೆ ಇರಲಿಲ್ಲ. ಹಾಗಾಗಿ ನಮ್ಮ ಮೇಲಕ್ಕೆ
ಉನ್ನತ ಹುದ್ದೆಯ ಕನ್ಸಲ್ಟಂಟ್ ಗಳು ಮಾತ್ರ ಇದ್ದರು. ಇವರುಗಳೇ ನಮಗೆ ಕೆಲಸ
ಕಲಿಸುತ್ತಿದ್ದ ಮತ್ತು ನಮ್ಮಿಂದ ಕೆಲಸ ತೆಗೆಯುತ್ತಿದ್ದ ಗುರುಗಳು.
ಇವರಲ್ಲಿ ಅತ್ಯಂತ ಸೀನಿಯರ್ ವ್ಯಕ್ತಿಯಾಗಿದ್ದ ಜೋಸೆಫ್ ಮ್ಯಾಕ್ ಮ್ಯಾನರ್ಸ್ ಎಂಬ
ಸಣಕಲು ದೇಹದ ಆರಡಿ ನಾಲ್ಕಿಂಚು ಎತ್ತರದ 56 ವರ್ಷ ವಯಸ್ಸಿನ ವ್ಯಕ್ತಿಯ ಬಗ್ಗೆ
ಹೇಳಲೇಬೇಕು. ಆತನ ಹುದ್ದೆಗೆ ಆತನದು ಹೊಂದದ ಅಲಂಕಾರ. ಯಾವುದೋ ಬಟ್ಟೆ,

ತೂತಾಗಿರುವ ಕಾಲುಚೀಲ, ಆಗಾಗ ಕೆಟ್ಟು ನಿಲ್ಲುತ್ತಿದ್ದ ಹಳೆಯ ಕಾರನ್ನು ಹೊಂದಿದ್ದ ಆ
ವ್ಯಕ್ತಿ ಆಸ್ಪತ್ರೆಗೆ ಬೆಳಿಗ್ಗೆಯೇ ಬಂದು ಕಾರನ್ನು ನಿಲ್ಲಿಸಿ ರೋಗಿಗಳನ್ನು ಎಲ್ಲರಿಗಿನ್ನ ಮೊದಲು
ನೋಡುತ್ತಿದ್ದ. ನಂತರ ಹತ್ತು ಕಿ.ಮೀ. ದೂರ ಓಡಿ ವ್ಯಾಯಾಮ ಮಾಡಿ ಬಂದು
ನಮ್ಮೆಲ್ಲರೊಡನೆ ಆಸ್ಪತ್ರೆಯ ರೌಂಡಿಗೆ ಅದೇ ಚಡ್ಡಿಯಲ್ಲಿ ಆರಾಮಾಗಿ ಬರುತ್ತಿದ್ದ.
ಆತನ ಕೋಣೆಗೆ ಕಾಲಿಡಲು ಜನರು ಹೆದರುತ್ತಿದ್ದರು. ಕಾರಣ ಆತನಲ್ಲ. ಆತನ ಕೋಣೆಯ
ಅಲಂಕಾರ. ಎಡ್ಡಾದಿಡ್ಡಿ ಎಸೆದುಕೊಂಡಿರುತ್ತಿದ್ದ ಪುಸ್ತಕಗಳು, ಬಟ್ಟೆಗಳು, ಬ್ರೇಕ್ ಫಾಸ್ಟ್
ಬಾರ್ ಗಳು ಇವುಗಳ ಮಧ್ಯೆ ಎಲ್ಲಿ ಹೆಜ್ಜೆ ಇಟ್ಟು ಒಳಹೋಗುವುದು ಎಂದು ಎಲ್ಲರೂ
ಜೋಕ್ ಮಾಡುತ್ತಿದ್ದರು. ಎಲ್ಲಕ್ಕಿನ್ನ ಹೆಚ್ಚಾಗಿ ಆತನಿಗೆ ತನ್ನ ಭಿನ್ನತೆಯ ಬಗ್ಗೆ ಸಂಪೂರ್ಣ
ಅರಿವಿತ್ತು. ಸ್ವತಃ ತನ್ನ ಬಗ್ಗೆ ಆಗಾಗ ಜೋಕುಗಳನ್ನೂ ಮಾಡಿಕೊಳ್ಳುತ್ತಿದ್ದ. ಬ್ರಿಟನ್ನಿನ ಅತಿ
ನಾಜೂಕಿನ ನಡಾವಳಿಯಿರದ, ಮಾತುಕತೆಯಿಲ್ಲದ, ಒಪ್ಪ ಓರಣವಿರದ, ಯಾವುದೇ
ಅಧಿಕಾರದ ಗತ್ತಿರದ ಇಂತಹ ಮನುಷ್ಯ ಮಾದರಿಯಿರಲಿ ನನಗೆ ಸಿಕ್ಕ ಅಚ್ಚರಿ ಎಂದರೆ
ಸುಳ್ಳಲ್ಲ. ಅದರಲ್ಲೂ ಭಾರತದಲ್ಲಿ ಕಾಲೇಜಿನಲ್ಲಿದ್ದಾಗ, ಕೆಲಸ ಮಾಡುತ್ತಿದ್ದಾಗ ಹೆಚ್.ಓ.ಡಿ.
ಬರುತ್ತಿದ್ದಾರೆಂದರೆ ಮೆಡುಸ್ಸಾಗಳೇ ಬರಿತ್ತಿದ್ದಾರೆ ಎಂದು ಹೆದರಿ ಅಡಗುತ್ತಿದ್ದ, ನಮಸ್ಕಾರ
ಸರ್ ಎಂದು ವಿಧೆಯತೆ ತೋರಬೇಕಿದ್ದ ಸಾಮಾನ್ಯ ಪರಿಸ್ಥಿತಿಯಲ್ಲಿ ಬೆಳೆದಿದ್ದ ನನಗೆ
ಇದೆಲ್ಲ ಹೊಸದೇ ಆಗಿತ್ತು.
ಹೀಗಿದ್ದೂ ಎಲ್ಲರಿಗೂ ಪ್ರೀತಿಯ ’ಜೋ ’ ಆಗಿದ್ದ ಆತ ಎಲ್ಲರಿಂದಲೂ ಯಾಕೆ
ಗೌರವಿಸಲ್ಪಡುತ್ತಾನೆ ಎಂಬುದು ನಿಧಾನಕ್ಕೆ ತಿಳಿಯುತ್ತ ಹೋಯಿತು.
ಮುಖ್ಯ ಕಾರಣ ಆತನ ಮನಸ್ಸು. ಆತನಿಗೆ ಬದುಕಲ್ಲಿ ಇದ್ದ ಧ್ಯೇಯಗಳು ಮತ್ತು ಸೇವಾ
ಮನೋಭಾವ. ತನ್ನ ರೋಗಿಗಳೆಂದರೆ ಅವನಿಗೆ ಜೀವ. ಅವರ ಮಂಚದ ಪಕ್ಕವೇ
ಕುಳಿತು, ನಿಂತು ರೋಗಿಗಳನ್ನು ಆತ್ಮೀಯವಾಗಿ ಮಾತಾಡಿಸುತ್ತಿದ್ದ. ಹತ್ತು ಗಂಟೆಗಳ
ಕಾಲ ಸತತ ನಿಂತು ಕತ್ತು-ಮುಖದ ಅತ್ಯಂತ ಕಷ್ಟದ ಸರ್ಜರಿಗಳನ್ನು ಮಾಡುತ್ತಿದ್ದ.

ನಡುವೆ ಅಬ್ಬಬ್ಬಾ ಎಂದರೆ 15-20 ನಿಮಿಷಗಳ ಬ್ರೇಕ್ ತಗೊಂಡರೆ ಹೆಚ್ಚು. ನಂತರವೂ
ರೋಗಿಗಳಿಗಾಗಿ ಸದಾ ಲಭ್ಯವಿರುತ್ತಿದ್ದ ಮನುಷ್ಯ. ಆತನನ್ನು ಬಲ್ಲ ಎಲ್ಲರಿಗೂ ಆತನ ಬಗ್ಗೆ
ಇದ್ದ ಗೌರವಕ್ಕೆ ಪಾರವೇ ಇರಲಿಲ್ಲ.
ಆತ ತನ್ನ ಕ್ಷೇತ್ರದಲ್ಲಿ ಪಡೆದಿದ್ದ ಪರಿಣತಿ, ತಿಳುವಳಿಕೆ ಅಪಾರವಾಗಿತ್ತು. ಇಡೀ
ಪ್ರಾಂತ್ಯದಲ್ಲಿ ಆತನಿಗೆ ಗುರುತರ ಜವಾಬ್ದಾರಿಗಳಿದ್ದವು. ಅಕಸ್ಮಾತ್ ಅದೃಷ್ಟ ಕೈಕೊಟ್ಟು
ರೋಗ ಬಂದರೆ ಜೋನ ಕೈ ಕೆಳಗೆ ರೋಗಿಯಾಗಬಹುದು ಎನ್ನುವಷ್ಟರ ಮಟ್ಟಿಗೆ ಜನರಿಗೆ
ಆತನ ಸೇವಾಮನೋಭಾವದ ಅರಿವಿತ್ತು, ನಂಬುಗೆಯಿತ್ತು. ತಾನು ಗಳಿಸಿದ ಸಂಬಳದ
ಹಣವನ್ನು ಕೂಡ ಘಾನ, ಭಾರತದ ಮುಂತಾದ ದೇಶಗಳ ಬಡ ರೋಗಿಗಳ ಚಿಕಿತ್ಸೆಗೆ
ಬಳುವಳಿ ನೀಡುತ್ತಿದ್ದ. ಬಡ ದೇಶಗಳಿಗೆ ಹೋಗಿ ಅಲ್ಲಿನ ಯೂನಿವರ್ಸಿಟಿಯ
ವೈದ್ಯರುಗಳಿಗೆ ಉಚಿತ ತರಭೇತಿ ನೀಡಿಬರುತ್ತಿದ್ದ. ತೀರ ಏನೂ ತಿಳಿಯದಿದ್ದ ನಮ್ಮಂತೆ
ಹೊಸದಾಗಿ ಹೋಗುವವರಿಗೆ ಕೂಡ ಕಲಿಸುವಲ್ಲಿ ದಿನಮೀರಿ ಕೆಲಸ ಮಾಡುತ್ತಿದ್ದ ಈ
ವ್ಯಕ್ತಿಗೆ ಕೆಲಸವೇ ದೈವವಾಗಿತ್ತು. ಕೆಲಸದ ಹೊರತಾಗಿ ಕೂಡ ಯಾರಿಗೆ ಬೇಕಾದರೂ
ದಿನವೆಲ್ಲ ಖರ್ಚುಮಾಡಿ ಸಹಾಯ ಮಾಡಬಲ್ಲ ಉದಾರ ಗುಣವಿತ್ತು. ತಮ್ಮ
ಐಷಾರಾಮಗಳಿಗೆ ಖರ್ಚು ಮಾಡುತ್ತ, ಟಾಕುಟೀಕಾಗಿ ಬಂದು ಸಂಬಳಕ್ಕೆ ಮಾತ್ರ
ದುಡಿಯುತ್ತ ಇದ್ದಿದ್ದರೆ ಈತ ಇತರರಿಗಿಂತ ಯಾವ ರೀತಿಯೂ ಭಿನ್ನವಾಗಿರುತ್ತಿರಲಿಲ್ಲ.
ತಾನು ಭಿನ್ನವಾಗಿರಬೇಕು ಎಂದು ಕೂಡ ಆತನ ಉದ್ದೇಶವಾಗಿರಲಿಲ್ಲ. ಆತನ ಬದುಕಿನ
ಧ್ಯೇಯಗಳೇ ಹಾಗಿದ್ದವು. ಆತನ ಪರದೇಶದಲ್ಲಿ ನಮಗೆ ದೊರೆತ ಓಯಸಿಸ್
ಎನ್ನಬಹುದು. ಈ ಬಗೆಯ ವ್ಯಕ್ತಿಯಾದ ಕಾರಣ ವರ್ಷ ಕಳೆಯುವಲ್ಲಿ ಯಾರಾದರೂ
ಆತನ ಪರಮ ಹಿತೈಷಿಗಳಾಗುವುದು ಸಾಧ್ಯವಿತ್ತು.ಜೋ ಗೆ ಕೂಡ ಅಂತಹುದೇ ಒಬ್ಬರು
ಗುರುಗಳಿದ್ದರು ಅಂತ ನಂತರ ತಿಳಿಯಿತು.

ದಶಕದಲ್ಲಿ ಜೋನಂಥ ಮತ್ತೊಬ್ಬ ವ್ಯಕ್ತಿಯನ್ನು ಇಲ್ಲಿ ನೋಡಿಲ್ಲ ಎನ್ನುವುದು ಇಂತಹ
ವ್ಯಕ್ತಿಗಳು ಎಷ್ಟು ವಿರಳ ಎಂಬುದನ್ನು ಸಾಬೀತುಪಡಿಸುತ್ತದೆ.

ಬಹಳ ಪ್ರಸಿದ್ಧಿ, ತಿಳುವಳಿಕೆ, ಅನುಭವ, ಪ್ರತಿಭೆ ಎಲ್ಲವೂ ಇದ್ದು ಕಳೆದ ೨೫ ವರ್ಷಗಳ
ಹಿಂದೆ ಪರಿಚಿತರಾಗಿ ಬದುಕಿನಲ್ಲಿ ನನಗೆ ಅತ್ಯಂತ ವಿರಳವಾದ ಅವಕಾಶ,
ಅನುಭವಗಳನ್ನು ನೀಡಿದ ಡಾ.ಸೋಮೇಶ್ವರರು ಪ್ರಾತಃಸ್ಮರಣೀಯರು. ನನ್ನಂತ
ನೂರಾರು ಮಂದಿಗೆ ಅವಕಾಶ, ಉತ್ತೇಜನ, ಮಾರ್ಗದರ್ಶನದ ಜೊತೆಗೆ ಆತ್ಮೀಯವಾದ
ಸ್ನೇಹಪರ ನಡವಳಿಕೆಯನ್ನು ತೋರಿಸಿದ ಗುರುಗಳು.
ಯಾವುದರ ಬಗ್ಗೆಯೂ ಸಹನೆ ಕಳೆದುಕೊಳ್ಳದೆ,ನಿಧಾನವಾದ ತಮ್ಮದೇ ಶೈಲಿಯಲ್ಲಿ
ಅವರು ತಿಳಿ ಹೇಳುವಾಗ, ಯಾವತ್ತೂ ದರ್ಪವನ್ನು ತೋರಿದವರಲ್ಲ. ನಮ್ಮ ಅಲ್ಪ
ಅರಿವನ್ನು ನಿಂದಿಸಿದವರಲ್ಲ. ಅವರ ವಿಶಿಷ್ಥ ಬದುಕಿನ ಪ್ರತಿ ದಿನದಲ್ಲಿ ಬಂದು ಹೋಗುವ
ಮಂದಿಯೆಷ್ಟೋ? ಆದರೆ, ಎಲ್ಲರನ್ನು ನೆನಪಿಡುವ, ಆದರಿಸುವ, ಅವರಿಗಾಗಿ ಸಮಯ
ನೀಡುವ ಇಂಥಹ ವ್ಯಕ್ತಿಗಳು ನಮ್ಮ ಅನುಭವಕ್ಕೆ ಬರುವುದು ಅತ್ಯಂತ ಅಪರೂಪ.
ಬಂದಲ್ಲಿ ಅದು ನಮ್ಮ ಅದೃಷ್ಠ.
ಇಂತಹ ಹಲವರು ಗುರುಗಳಿಂದಲೇ ನಮ್ಮಂಥವರ ಸಾಧಾರಣ ಬದುಕು ಹಲವು
ರೀತಿಯಲ್ಲಿ ಶ್ರೀಮಂತವಾಗುವುದು ಅನ್ನುವುದರಲ್ಲಿ ಸಂದೇಹವಿಲ್ಲ. ಕಲಿಸಬೇಕು ಎನ್ನುವ
ಗೀಳಿರುವ ಗುರುಗಳು ಕೆಲವು ಬಾರಿ ತಮ್ಮ ನಿಯಮಗಳನ್ನು ಸಡಿಲಿಸಿ, ಹೊಸ
ವಿಧಾನಗಳನ್ನು ಅಳವಡಿಸಿಕೊಂಡು, ವಿಶೇಷ ಪ್ರಯತ್ನಗಳನ್ನು ಮಾಡುತ್ತಾರೆ. ಕಲಿಯುವ
ಜನರಿದ್ದರೆ ಅವರಿಗೆ ಇನ್ನಾವ ಬಾಧೆಗಳೂ ಇರುವುದಿಲ್ಲ.

ಒಬ್ಬರ ಜೀವನಕ್ಕೆ ಪಾಠ ಕಲಿಸುವ, ಮಾದರಿಯಾಗುವ, ಮಾರ್ಗದರ್ಶಕರಾಗುವ
ಹಲವರು ಗುರುಗಳು ನಮ್ಮ ಬದಕಲ್ಲಿ ಬಂದು ಹೋಗುತ್ತಾರೆ. ಅವರು ಶಾಲೆಯ ನಾಲ್ಕು
ಗೋಡೆಗಳ ನಡುವೆ ಮಾತ್ರ ಸಿಗುತ್ತಾರೆಂದು ಅಂದುಕೊಳ್ಳಬೇಕಿಲ್ಲ. ಜೀವನ ಪಾಠಕ್ಕೆ
ಹಲವು ಗುರುಗಳು ಬೇಕು. ನನ್ನ ಬದುಕಲ್ಲಿ ಹೀಗೆ ಬಂದು ಹೋದವರು, ಬರಲಿರುವವರು
ಇನ್ನೂ ಹಲವರಿದ್ದಾರೆ.
ಅವರೆಲ್ಲರಿಗೂ ನನ್ನ ಪ್ರಣಾಮಗಳು.

ಡಾ|| ಪ್ರೇಮಲತ.ಬಿ

💢💢💢💢💢💢💢💢💢💢💢💢💢💢💢💢💢💢💢💢💢💢💢💢💢💢

ಜಿ.ವಿ.ಕುಲಕರ್ಣಿ

ಜಿ.ವಿ.ಕುಲಕರ್ಣಿಯವರು- ನನ್ನ ಗುರುಗಳು – ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಯ ಸಂದರ್ಭದಲ್ಲಿ
ಸರ್ವಪಳ್ಳಿ ರಾಧಾಕೃಷ್ಣರ ಜನ್ಮದಿನ – ನನ್ನ ನಮನ
ಅದೃಷ್ಟ ಅರಸಿತಂದ ಗುರು:
ಜಿ. ವಿ. ಕುಲಕರ್ಣಿಯವರ ಪರಿಚಯ ನನಗೆ ಇತ್ತೀಚಿನದು. ಕಡುಬಡವನಿಗೆ ಆಕಸ್ಮಿಕ ಧನರಾಶಿ ಸಿಕ್ಕಂತೆ.
ಆದರೆ ಎಷ್ಟೋ ಜನ್ಮಗಳಿಂದ ಅವರನ್ನು ನಾನು ಬಲ್ಲೆ ಎನಿಸುತ್ತದೆ. ಕಾರಣ ಅವರ ಮಗುವಿನಂತಹ ಮುಗ್ಧ ಮನಸ್ಸು, ಅಪಾರ ವಿದ್ವತ್ತು,ಅಗಾಧ ಜ್ಞಾನ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಡಾ ಬೇಂದ್ರೆಯವರೊಂದಿಗಿದ್ದ ನಂಟು. ಡಾ ದತ್ತಾತ್ರೇಯರ ರಾಮಚಂದ್ರ ಬೇಂದ್ರೆಯವರ ಕಾವ್ಯದ ಬಗ್ಗೆ ಅಪರಿಮಿತ ಆಸಕ್ತಿಯಿರುವ ನನಗೆ ಇವರಂತಹ ಗುರುವನ್ನು ತೋರಿಸಿಕೊಟ್ಟದ್ದು ಆ ನನ್ನ ದೈವ , ದತ್ತನ ಕೃಪೆಯೇ ಸರಿ.
೬ ನೇ ತರಗತಿಯಲ್ಲಿದ್ದಾಗಲೇ ಬೇಂದ್ರೆಯವರ ಸಮ್ಮುಖದಲ್ಲಿ ಇವರು ಬರೆದ ತಮ್ಮ ಮೊಟ್ಟಮೊದಲ ಕವನವನ್ನು ವಾಚಿಸುವ ಅದೃಷ್ಟ ವಂತರು ಜೀವಿ ಯವರು.ಬೇಂದ್ರೆಯವರನ್ನು ಪ್ರತ್ಯಕ್ಷವಾಗಿ ಕಾಣುವ ಸೌಭಾಗ್ಯವಿಲ್ಲದಿದ್ದರೂ , ಜಿ ವಿ ಯವರನ್ನು ನೋಡಿದರೆ ಬೇಂದ್ರೆಯವರನ್ನೇ ನೋಡಿದಷ್ಟು ಸಂತೋಷವಾಗುತ್ತದೆ. ದೇವರನ್ನು ಕಾಣಲಾಗದಿದ್ದರೂ ಅವನ ಪರಮ ಭಕ್ತನನ್ನು ನೋಡಿದಾಗ ಆಗುವ ಆನಂದ!

ಚಿತ್ರ ಕೃಪೆ : ಡಾ।।ಸತ್ಯವತಿ ಮೂರ್ತಿ


ಅವರ ಪರಿಚಯವಾದಂದಿನಿಂದ ಅವರನ್ನು ನನ್ನ ಗುರು ಸ್ಥಾನದಲ್ಲಿಟ್ಟು ಪೂಜಿಸುತ್ತೇನೆ, ಬಹು ಭಾಷಾ ಪರಿಣತರಾದ ಇವರ ಅಪರಿಮಿತ ತಿಳುವಳಿಕೆಯ ಸಂಪತ್ತು, , ಈ ವಯಸ್ಸಿನಲ್ಲೂ ಇರುವ ಅಪರಿಮಿತ ಉತ್ಸಾಹ , ಇವೆಲ್ಲ ನಮಗಷ್ಟೇ ಅಲ್ಲ , ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗುವಂತಹುವು.
ಅವರೊಡನೆ ಒಮ್ಮೆ ಮಾತನಾಡಿದರೆ ಸಾಕು ಅವರಲ್ಲಿರುವ ವಿದ್ವತ್ತಿನ ಆಳ , ಅನುಭವಗಳ ಪರಿಚಯವಾಗುತ್ತದೆ. ಅವರ ಒಂದೊಂದು ಮಾತೂ ಮುತ್ತಿನಂತೆ. ಸದಾ ಹಸನ್ಮುಖದಿಂದ ಇರುವ, ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸುವ ಅವರ ವ್ಯಕ್ತಿತ್ವವನ್ನು ನೋಡಿದ ನಾನು ಇವರ ಶಿಷ್ಯಳಾಗುವ, ಇವರಿಂದ ಹೆಚ್ಚು ಹೆಚ್ಚು ಕಲಿಯುವ ಭಾಗ್ಯ ಇನ್ನೂ ಮೊದಲೇ ಪ್ರಾಪ್ತವಾಗದೆ ಇದ್ದುದಕ್ಕೆ ನನ್ನನ್ನೇ ನಾನು ಶಪಿಸಿಕೊಂಡಿದ್ದೇನೆ. ಈಗಲಾದರೂ ಇವರಿಂದ ಕಲಿಯುವ ಭಾಗ್ಯ ಸಿಕ್ಕಿದುದಕ್ಕೆ ಸಂತೋಷವೂ ಆಗಿದೆ.
ಹೆಚ್ಚುಕಮ್ಮಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಜೀವಿ ಯವರು ನಡೆದಾಡುವ ವಿಶ್ವಕೋಶವೆಂದರೆ ಸರಿಯಾದೀತು. ಇವರ ಒಟ್ಟು ಕೃತಿಗಳ ಸಂಖ್ಯೆ ೩೫ ಹತ್ತಿರವಿದೆ. ’ಆಡು ಮುಟ್ತದ ಸೊಪ್ಪಿಲ್ಲ, ಜೀವಿಯವರು ಮುಟ್ಟದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ’ ಎಂದರೆ ಅತಿಶಯೋಕ್ತಿಯಾಗಲಾರದು.
ಡಾ.ಜೀವಿ- ಡಾ. ಬೇಂದ್ರೆ ಅವಿನಾ ಸಂಬಂಧ:
ಎಷ್ಟರಮಟ್ಟಿಗೆ ಜಿ ವಿಯವರು ಬೇಂದ್ರೆಯವರಿಗೆ ಸಮೀಪವರ್ತಿಯಾಗಿದ್ದರೆಂಬುದನ್ನು ಅವರದೇ ಮಾತುಗಳಲ್ಲಿ ಹೇಳಬೇಕಾದರೆ ’ ಎಷ್ಟೋ ಬಾರಿ ಕನಸಿನಲ್ಲಿ ಬಂದು ಸಲಹೆ ನೀಡುತ್ತಿದ್ದರು ಪದ್ಯಗಳನ್ನು ಓದಿ ತೋರಿಸುತ್ತಿದ್ದರು’ ಅಷ್ಟೇ ಅಲ್ಲ ಜಿ ವಿ ಯವರಿಗೂ ಬೇಂದ್ರೆಯವರಿಗೂ ಜನ್ಮಜನ್ಮದ ನಂಟಿರಬೇಕು ಎಂಬುದಕ್ಕೆ ಈ ಕೆಳಗಿನ ಘಟನೆಯೇ ಸಾಕ್ಷಿ.ಈ ಘಟನೆಯನ್ನು ಕುರಿತು ಜೀವಿಯವರ ಮಾತಿನಿಂದಲೇ ತಿಳಿದರೆ ಚೆನ್ನು.
ಡಾ ಬೇಂದ್ರೆಯವರು ಮುಂಬೈನಲ್ಲಿ “ಹರ್ಕಿಸನ್ ದಾಸ್” ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದು ಮಲಗಿದ್ದರು. ಜಠರದಲ್ಲಿದ್ದ ಗಂಟನ್ನು ತೆಗೆಯುವ ದೊಡ್ಡ ಶಸ್ತ್ರಚಿಕಿತ್ಸೆ ಆಗಬೇಕಿತ್ತು.
ಚಿಕಿತ್ಸೆಗೆ ರಕ್ತ ಬೇಕಾಗಿದ್ದದ್ದರಿಂದ ಬೇಂದ್ರೆಯವರ ಇಬ್ಬರು ಮಕ್ಕಳೂ ರಕ್ತ ಕೊಟ್ಟಿದ್ದರು. ಆದರೂ ಅದು ಸಾಲದಾಗಿತ್ತು. ಅವರನ್ನು ನೋಡಲೆಂದು ನಾವು ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದೆವು. ಹಾಗೆ ಹೋದಾಗ ಒಮ್ಮೆ ನನ್ನ ಕಡೆ ನೋಡಿದ ಬೇಂದ್ರೆಯವರು ಜೀವಿ ’ಹೆಲ್ತ್(HEALTH)’ ಚೆನ್ನಾಗಿದೆ . ಅವನು ಕನಿಷ್ಟ ನಾಲ್ಕು ಬಾಟಲಿ ರಕ್ತ ’ಸ್ಪೇರ್ (SPARE)’ ಮಾಡಬಹುದು ಎನ್ನುತ್ತಾ ನಕ್ಕರು. ನಾನೊಮ್ಮೆ ಮಾತನಾಡುವಾಗ ನಮ್ಮ ಧಮನಿಗಳಲ್ಲಿ ಬೇಂದ್ರೆಯವರ ರಕ್ತ ಹರಿಯುತ್ತದೆ ಎಂದು ಅಂದಿದ್ದೆನಂತೆ. ಅದನ್ನು ನೆನಪು ಮಾಡಿಕೊಂಡು ’ಲೆಟ್ ಅಸ್ ಟೆಸ್ಟ್ ಹಿಸ್ ಬ್ಲಡ್’ (LET US TEST HIS BLOOD) ಎಂದರು. ನನ್ನ ರಕ್ತದ ಪರೀಕ್ಷೆಯಾಯಿತು. ರಕ್ತಪರೀಕ್ಷೆಯಲ್ಲಿ ನನ್ನ ರಕ್ತದ ಗ್ರೂಪ್ ಬೇಂದ್ರೆಯವರಿಗೆ ಹೊಂದದಿದ್ದರೆ ನನ್ನ ಮಾತು ಸುಳ್ಳಾಗುವುದಲ್ಲ ಎಂಬ ಆತಂಕ ಉಂಟಾಯಿತು. ಅಷ್ಟರಲ್ಲಿ ಡಾಕ್ಟರರು ಬಂದು ಹೇಳಿದರು , ’He has B+ ’. ಬೇಂದ್ರೆಯವರ ರಕ್ತದ ಗುಂಪಿಗೆ ನನ್ನ ರಕ್ತ ಹೊಂದಿದ್ದನ್ನು ಕೇಳಿ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.ಆಗ ಬೇಂದ್ರೆಯವರು ಈ ಸಂಗತಿಗೆ ಬೇರೆ ವ್ಯಾಖ್ಯಾನ ಕೊಟ್ಟರು.
” ಕವಿ ಸುಳ್ಳಾಡುವುದಿಲ್ಲ ಎಂಬುದು ಇದರಿಂದ ಸಿದ್ಧವಾಗುತ್ತದೆ. ವಿಜ್ಞಾನಿಯು ಸತ್ಯವನ್ನು ಕಾಣುವುದು ಪ್ರಯೋಗದಿಂದ, ಕವಿ ಅಂತಃಸ್ಪುರಣೆಯಿಂದ’ ಅಂದರು. ಜೀವಿಯವರ ರಕ್ತದ ಗುಂಪು, ಬೇಂದ್ರೆಯವರ ರಕ್ತದ ಗುಂಪೂ ಒಂದೇ ಆಯಿತು. ತಾನು ಮೆಚ್ಚಿ ಆರಾಧಿಸಿದ ಗುರುವಿಗೆ ರಕ್ತಕೊಡುವ ಸೌಭಾಗ್ಯ ಜೀವಿ ಯವರದಾಯಿತು. ಹೀಗಿದ್ದಿತು ಅವರಿಬ್ಬರ ಅವಿನಾ ಸಂಬಂಧ. ಇದು ಜನ್ಮ ಜನ್ಮದ ಬಂಧವಲ್ಲದೆ ಮತ್ತೇನು? ಜೀವಿಯವರು ಮನಬಿಚ್ಚಿ ಮಾತನಾಡುವಾಗ ಬೇಂದ್ರೆಯವರ ಬಗ್ಗೆ ಹೇಳಿದಷ್ಟೂ ಕೇಳಬೇಕೆನಿಸುತ್ತದೆ.
ಜೀವಿಯವರು ಬೇಂದ್ರೆಯವರೊಡನೆ ಹೆಚ್ಚಿನ ಸಂಪರ್ಕವಿಟ್ಟುಕೊಂಡದ್ದನ್ನು ಗಮನಿಸಿ ಅವರ ಕನ್ನಡ ಶಿಕ್ಷಕರಾಗಿದ್ದ ಆರ್. ವೈ. ಧಾರವಾಡಕರ್ ಅವರು
,’ಬೇಂದ್ರೆಯವರ ಬಳಿಗೆ ಹೆಚ್ಚು ಹೋಗಬೇಡ , ಅದರಿಂದ ನಿನಗೆ ಹಾನಿಯಾಗುತ್ತದೆ. ಏಕೆಂದರೆ ಬೇಂದ್ರೆ ಒಂದು ಆಲದ ಮರವಿದ್ದಂತೆ. ಅದರ ಬುಡಕ್ಕೆ ಸಣ್ಣ ಪುಟ್ಟ ಗಿಡ ಗಂಟೆಗಳು ಮಾತ್ರ ಬೆಳೆಯಬಲ್ಲವು. ದೊಡ್ಡ ಮರ ಬೆಳೆಯುವುದಿಲ್ಲ ನೀನು ಹೋದರೆ ಬೆಳೆಯಲಾರೆ, ಹೋಗಬೇಡ’ ಎಂದು ತಾಕೀತು ಮಾಡಿದ್ದರು . ಆ ಮಾತು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಆದರೆ ಆ ಮಾತು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಯಾಕೆಂದರೆ ಬೇಂದ್ರೆಯವರ ಶಿಷ್ಯರೆಲ್ಲ ಸಣ್ಣಪುಟ್ಟ ಕವಿಗಳೇ ಹೊರತು ದೊಡ್ಡಕವಿಗಳಾಗಲಿಲ್ಲ. ಇದ್ದದ್ದರಲ್ಲಿ ಗೋಕಾಕರೊಬ್ಬರು ದೊಡ್ಡ ವ್ಯಕ್ತಿಯಾಗಿ ಬೆಳೆದರು.’ ಎಂದು ಜೀವಿಯವರೆ ಹೇಳುತ್ತಾರೆ.
ಜಿವಿಯವರು, ವಿಧ್ಯಾಭ್ಯಾಸವೆಲ್ಲ ಮುಗಿದು ಎರಡು ವರ್ಷಗಳ ಕಾಲ ಕೆಲಸವಿಲ್ಲದೆ ಅಲೆದಾಡುವ ಸಂದರ್ಭದಲ್ಲಿ ಬೇಂದ್ರೆಯವರು ಹೇಳಿದ ಮಾತುಗಳನ್ನು
ನೆನಪಿಸಿಕೊಳ್ಳುತ್ತಾರೆ . ಆ ಸಂದರ್ಭದಲ್ಲಿ ಬೇಂದ್ರೆಯವರು ಇವರನ್ನು ಕರೆದು ’ ನೋಡು ನೀನು ಬುದ್ಧಿವಂತ, ಬಹಳ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣನಾಗಿದ್ದೀಯ,ನಿನಗೆ ಸ್ಕಾಲರ್ಶಿಪ್ ಸಿಕ್ಕಿದೆ, ಇಷ್ಟೆಲ್ಲ ಆದರೂ ಕೆಲಸ ಸಿಗುತ್ತಿಲ್ಲ ಅಂದರೆ ಇದೇನೋ ದೈವದ ಕೆಲಸವೆನಿಸುತ್ತದೆ.ನಿನ್ನ ಅಪ್ಪ ಅಮ್ಮನ ಕಡೆಯಿಂದ ತಪ್ಪಾಗಿರಬಹುದು. ಅದರ ಪರಿಣಾಮವನ್ನು ನೀನು ಅನುಭವಿಸುತ್ತಿದ್ದೀಯ, ಇದನ್ನು ನಿಮ್ಮ ಅಪ್ಪನೊಡನೆ ವಿಚಾರಿಸು’ ಎಂದು ಹೇಳಿದರಂತೆ. ಅವರು ಹೇಳಿದಂತೆ ಅಪ್ಪನನ್ನು ವಿಚಾರಿಸಿದಾಗ ಅವರ ಆಶ್ಚರ್ಯಕ್ಕೆ ಎಣೆಯಿಲ್ಲದಾಯಿತು ಎನ್ನುತ್ತಾರೆ. ಅಪ್ಪ ತಮಗೆ ಕೆಲಸ ಸಿಗದಿದ್ದ ಸಮಯದಲ್ಲಿ’ಕೆಲಸ ಸಿಕ್ಕರೆ ತಿರುಪತಿಗೆ ಮೊದಲನೆ ಸಂಬಳವನ್ನು ಕಾಣಿಕೆಯನ್ನು ಕೊಡುತ್ತೇನೆ’ ಎಂದು ಹರಸಿಕೊಂಡಿದ್ದರಂತೆ. ಆದರೆ ಯಾವುದೋ ಕಾರಣದಿಂದ ಅದು ನೆರವೇರಲು ಸಾಧ್ಯವಾಗಿರಲಿಲ್ಲ. ಅನಂತರ ಬೇಂದ್ರೆಯವರ ಆದೇಶದಂತೆ ಜಿವಿಯವರ ತಂದೆಯವರು ಮಗನಿಗೆ ಕೆಲಸ ಸಿಗಲಿ, ತನ್ನದನ್ನೂ ಸೇರಿಸಿ ಹರಕೆ ಸಲ್ಲಿಸುತ್ತೇನೆ ಎಂದು ಮತ್ತೆ ಹರಕೆ ಮಾಡಿಕೊಂಡರಂತೆ.ಇದಾದ ಕೆಲವೇ ದಿನಗಳಲ್ಲಿ ಜಿವಿಯವರಿಗೆ ನೌಕರಿ ದೊರೆಯಿತು, ಆ ನಂತರ ಹರಕೆಯನ್ನೂ ತೀರಿಸಿದ್ದಾಯಿತು , ಎನ್ನುತ್ತಾರೆ.

ಜೀವಿ -ಕಾವ್ಯನಾಮ
ಜಿವಿಯವರದು ಹೋರಾಟ ತುಂಬಿದ ಬದುಕು. ತಮ್ಮನ್ನು ತಾವೇ ರೂಪಿಸಿಕೊಂಡವರು ಜೀ.ವಿ. ಧಾರವಾಡದಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಕಳೆದ ೮ ವರುಷಗಳು ಸುವರ್ಣದ ದಿನಗಳಾಗಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. ಕನ್ನಡದ ಕೀರ್ತಿಯ ಕಳಸಗಳಾದ ಬೇಂದ್ರೆಯವರ ಒಡನಾಟ, ವಿ. ಕೃ . ಗೋಕಾಕ್ ರಂತಹ ಗುರುಗಳು ದೊರೆತಿದ್ದು, ಜಿ ವಿ ಯವರು ಕನ್ನಡ ಸಾಹಿತ್ಯದತ್ತ ತಮ್ಮ ಒಲವನ್ನು ಬೆಳೆಸಿಕೊಳ್ಳುವುದು ಸಾಧ್ಯವಾಯಿತು.
ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಎಂ.ಎ ಪದವಿಪಡೆದ ಜೀವಿಯವರು ತಮ್ಮ ನಿರುದ್ಯೋಗದ ಸಮಯವನ್ನೂ ವ್ಯರ್ಥ ಮಾಡದೆ ಎಲ್ ಎಲ್ ಬಿ ಪದವಿಯನ್ನು ಗಳಿಸಿದರು. ನಂತರ ಉದ್ಯೋಗದ ನಿಮಿತ್ತ ಮುಂಬೈಗೆ ಬಂದಮೇಲೆ ಆಂಗ್ಲ ಭಾಷೆಯಲ್ಲಿ ’ವಿ. ಕೃ. ಗೋಕಾಕರ ಬರವಣಿಗೆಯ ಮೇಲೆ ಅರವಿಂದರ ಪ್ರಭಾವ” ವಿಷಯದಲ್ಲಿ ತಮ್ಮ ಸಂಶೋಧನ ಮಹಾ ಪ್ರಬಂಧವನ್ನು ಸಿದ್ಧಪಡಿಸಿ ಪಿ ಎಚ್ ಡಿ ಪದವಿ ಗಳಿಸಿದರು.
ಕನ್ನಡ ,ಇಂಗ್ಲಿಷ್, ಮರಾಠಿ, ಸಂಸ್ಕೃತ ಹಾಗೂ ಹಿಂದಿಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸಿರುವ ಜಿ ವಿ ಯವರು ಅನ್ಯಭಾಷೆಯವರಿಗೆ ಕನ್ನಡ ಸಾಹಿತ್ಯ ಸೊಬಗನ್ನು ನೀಡಿ ಕನ್ನಡ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ. ಮುಂಬೈನಲ್ಲಿ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಿದ ಹೆಮ್ಮೆ ಇವರದು. ಬೇಂದ್ರೆಯವರು ಜೀವಿ ಕಾವ್ಯನಾಮವನ್ನು ಕೊಟ್ಟದ್ದೇ ಅಲ್ಲದೆ ಅವರ ಕಥಾ ಸಂಗ್ರಹಕ್ಕೆ ಮುನ್ನುಡಿಯನ್ನೂ ಬರೆದಿದ್ದಾರೆ. ” ಆಳೈ ಕಾಣದ ಆಳದ ಭಾವಿ ಕಣ್ಣರಳಿದ ಜೀವಿ” ಎಂದು ಬರೆದು ಬೇಂದ್ರೆಯವರು ತಮ್ಮ ಪ್ರಿಯ ಶಿಷ್ಯ ಜೀವಿಯವರನ್ನು ಹರಸಿದ್ದರು
ಆ ಕಾವ್ಯನಾಮವನ್ನು ನೀಡಿದ ಪ್ರಸಂಗ ಬಹಳ ಸೊಗಸಾಗಿದೆ. ಜೀವಿಯವರ ಮಾತುಗಳಲ್ಲಿ ಹೇಳುವುದಾದರೆ ಒಮ್ಮೆ ಅವರು ಬೇಂದ್ರೆ್ಯವರನ್ನು ಭೇಟಿ ಮಾಡಿದಾಗ ’ ಅಣ್ಣಾ ಎಲ್ಲರೂ ಕೋಗಿಲೆಯ ಮೇಲೆ ಪದ್ಯ ಬರೆಯುತ್ತಾರೆ, ನನಗೆ ಮಾತ್ರ ಬರೆಯಲು ಮನಸ್ಸೇ ಬರದು, ಏನು ಮಾಡಲಿ ? ” (ಇಲ್ಲಿ ಜೀವಿ. ಯವರು ಗುರುಗಳನ್ನು ಅಣ್ಣ ಎಂದೇ ಸಲಿಗೆಯಿಂದ ಕರೆಯುತ್ತಿದ್ದುದನ್ನು ನೆನಪಿಸಿಕೊಳ್ಳಬೇಕು.)
“ಯಾವುದನ್ನು ಕುರಿತು ಬರೆಯಲು ಇಚ್ಛೆಯಿಲ್ಲವೋ ಅದನ್ನು ಬರೆಯಬಾರದು” ಆದರೆ ಒಂದುದಿನ ಜೀವಿ ಯವರು ಮನೆಯಲ್ಲಿ ಕುಳಿತಿದ್ದಾಗ ಹೊರಗೆ ಹಿತ್ತಲದಲ್ಲಿ ಮರದ ಮೇಲೊಂದು ಕೋಗಿಲೆ ಹಾಡುತಿತ್ತು. ಯಾಕೋ ಅದರ ಆ ಕೂಗು ಜೀವಿ
ಯವರಲ್ಲಿ ಕವನ ಬರೆಯುವ ಪ್ರೇರೇಪಣೆ ಕೊಟ್ಟಿತು.
“ಇದು ಯಾವ ಸ್ವರವೋ ಮನವನ್ನು ಕದಡಿ ಬೀಸಿಹುದು ಮೋಹ-ಜಾಲ
ಈ ನಾದದೊಡನೆ ತೇಲಿಹುದು ಮನವು ಇದು ಯಾವ ಇಂದ್ರಜಾಲ?
ಧರೆಯಲ್ಲಿ ಇರುವ ಕರುಣೆಯೇ ಇಂದು ಮಿಡಿಯುವುದೊ ಏನೊ ರಾಗ
ಇದು ಒಂದೆ ರಾಗ , ಸ್ವಚ್ಛಂದತಾಳ, ಮೈ ಮರೆಸುವಂಥ ಯೋಗ.
ಪರಭೃತವು ಎಂದು ಕೇಳುವೆವು ನಾವು ಈ ಜೀವಿಗಿಲ್ಲ ತಾಯಿ
ಬೆಳೆಯುವುದು ಕಾಗೆ ಮಲತಾಯಯೊಗೆ ಒಡೆಯದೆಯೆ ತನ್ನ ಬಾಯಿ
ಬಾಯ್ಬಿಟ್ಟ ದಿನವೆ ತನ್ ಮರಿಯು ಅಲ್ಲವೆಂದರಿತು ಕಾಕ -ರಾಣಿ
ದೂಡುವುದು ಹೊರಗೆಮರುಕನು ಪಡದೆ ಅದಕಿಲ್ಲ ಗುಣದ ಗಣನಿ….
ಈ ಕವನವನ್ನು ಬೇಂದ್ರೆಯವರಿಗೆ ಓದಿ ತೋರಿಸಿದಾಗ ಅವರು , ಎರಡನೆಯ ಪ್ಯಾರದ ಮೊದಲ ಸಾಲನ್ನು ಮತ್ತೊಮ್ಮೆ ಓದಲು ಹೇಳಿದರು
“ಈ ಸಾಲುಗಳನ್ನು ಓದುತ್ತಿರುವಂತೆಯೇ ಮತ್ತೊಮ್ಮೆ ಓದು ಅಂದರು ” ಈ ಜೀವಿಗಿಲ್ಲ ತಾಯಿ ” ಎಂಬ ಮಾತನ್ನು ಪುನಃ ಉಚ್ಚರಿಸಿ ನನ್ನ ಕಡೆಗೆ ಬೆರಳು ಮಾಡಿ ತೋರಿಸಿದರು. ” ಇದರಲ್ಲಿ ಬರುವ ಜೀವಿ ಬೇರೆಯಾರೂ ಅಲ್ಲ, ಅದು ನೀನೆ! ಇದು ನಿನ್ನದೇ ಕವಿತೆ ” ಇನ್ನುಮೇಲೆ ’ಜೀವಿ’ ಕಾವ್ಯನಾಮದಿಂದ ಬರೆ ” G V ” ಎಂಬುವ ಅಳಿದರೂ ಈ “ಜೀವಿ ” ಉಳಿಯುವ. ಕವಿ ಜೀವಿ , ಚಿರಂಜೀವಿ “ಎಂದು ಉದ್ಗಾರ ತೆಗೆದು ೧೮-೦೩-೧೯೫೭ ರಂದು ಆಶೀರ್ವದಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ .
ಆಗ ನನಗೆ ತಾಯಿಯಿಲ್ಲದ ನನ್ನನು ನಾನು ಕೋಗಿಲೆಯೊಂದಿಗೆ ಅವಿನಾಭಾವ ವನ್ನು ಕಲ್ಪಿಸಿಕೊಂಡದ್ದರ ಅರಿವಾಯಿತು ” ಎನ್ನುತ್ತಾರೆ ’ಜೀವಿ ’ಯವರು
ಇಷ್ಟೆ ಅಲ್ಲದೆ ಕನ್ನಡದಲ್ಲಿ ಆರತಿ ಪದ್ಯಗಳಿಲ್ಲದ ಕೊರತೆಯನ್ನು ಸೂಚಿಸಿ ಬೇಂದ್ರೆಯವರು , ಜಿ ವಿ ಯವರಿಂದ ಆರತಿ ಪದ್ಯಗಳನ್ನು ಬರೆಸಿದರು.
ಜೀವಿ-ಸಾಹಿತ್ಯ ಜೀವಿಯವರು ಪಾಶ್ಚಾತ್ಯ ಪೌರಾತ್ಯ ಕವಿ ಕಾವ್ಯ ಚಿಂತನೆ, ಹೊಸಗನ್ನಡ , ಹಳೆಗನ್ನಡ ಸಾಹಿತ್ಯ, ವಚನ – ದಾಸ ಸಾಹಿತ್ಯ, ಅರವಿಂದರ ಚಿಂತನೆ ಹೀಗೆ ಹತ್ತು ಹಲವು ಮಜಲುಗಳಲ್ಲಿ ತಮ್ಮ ಕಾವ್ಯ ಚಿಂತನೆಯನ್ನು ತೊಡಗಿಸಿಕೊಂಡವರು .
ಡಾ .ಜಿ. ವಿ. ಕುಲಕರ್ಣಿಯವರ ಆಸಕ್ತಿಯ ಕ್ಷೇತ್ರ ವಿಸ್ತಾರವಾದುದು ಕವಿತೆ , ಕತೆ, ಕಾದಂಬರಿ, ನಾಟಕ, ವಿಮರ್ಶೆ ,ಪ್ರವಾಸ ಸಾಹಿತ್ಯ, ಹರಟೆ, ವಚನ, ವ್ಯಕ್ತಿ ಚಿತ್ರ, ಅನುವಾದ ಮೊದಲಾದ ಸಾಹಿತ್ಯ ಕ್ಷೇತ್ರದಲ್ಲೇ ಅಲ್ಲದೆ ಯೋಗ , ಆರೋಗ್ಯ, ಆಧ್ಯಾತ್ಮ ಮೊದಲಾದ ಕ್ಷೇತ್ರಗಳಲ್ಲೂ ಸಾಹಿತ್ಯ ಕೃಷಿ ಮಾಡಿ ಹೆಸರು ಗಳಿಸಿದ್ದಾರೆ. ಜಿವಿಯವರ ಮೊಟ್ಟಮೊದಲ ಕವನ ಸಂಕಲನ “ಮಧು ಸಂಚಯ”ವಾದರೆ ’ಹುಚ್ಚ ಹುಚ್ಚಿ’ ಅವರ ಮಹತ್ವಾಕಾಂಕ್ಷೆಯ ಕೃತಿ. ನಾಲ್ಕು ಧ್ವನಿ, ದಶಪದಿ, ಜೀವಿ ವಚನಗಳು ಇವರ ಇತರ ಕವಿತಾ ಸಂಕಲನಗಳು. ಮ್ಯೂಸಿಂಗ್ಸ್ ಇವರ ಇಂಗ್ಲಿಷ್ ಭಾಷೆಯ ಕನವ ಸಂಕಲನ, ವಿವಿಧ ವಿಷಯ ವ್ಯಾಸಂಗ ನಿಪುಣ ಕುಲಕರ್ಣಿಯವರು ಮಧುರಚೆನ್ನರ “ನನ್ನ ನಲ್ಲ” ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಜಿ ವಿಯವರು ಬೇಂದ್ರೆಯವರಿಂದ ಸ್ಪೂರ್ತಿ ಪಡೆದಿದ್ದಾರೆ ಆದರೆ ಅವರ ಅನುಕರಣೆ ಮಾಡದೆ ತಮ್ಮತನವನ್ನು ಉಳಿಸಿಕೊಂಡಿದ್ದಾರೆ. ಜಿವಿಯವರ ಪ್ರಥಮ ಸಂಕಲನ ಬಿಡುಗಡೆಯಾದದ್ದು ಕೆ ಎಸ್ ಶರ್ಮಾ ಅವರು ವಾಸಿಸುತ್ತಿದ್ದ”ದತ್ತನಿಲಯ”ದಲ್ಲಿ. ಬಿಡುಗಡೆಯ ಸಮಾರಂಭಕ್ಕೆ ಬೇಂದ್ರೆಯವರನ್ನು ಅಹ್ವಾನಿಸಲು ಶರ್ಮಾ ಅವರು ಹೋದಾಗ ಅವರು ಸಿಕ್ಕದೆ ಹಿಂದಿರುಗಿದ್ದರು. ಕಾರ್ಯಕ್ರಮದ ದಿನವೇ ಅವರಿಬ್ಬರ ಭೇಟಿಯಾದದ್ದು. ಬೇಂದ್ರೆ ಆಗ ’ಈ
ಎಳೆಯನನ್ನು ಭೇಟಿಯಾದದ್ದು ಇದೇ ಮೊದಲು, ಅವನದೇ ಮನೆಯಲ್ಲಿ. ಆದರೆ ಅವನು ’ದತ್ತ ನಿಲಯ ’ ಅಂದರೆ ನನ್ನ ಮನೆಯಲ್ಲೇ ವಾಸ ಮಾಡುತ್ತಾನೆಂದ ಮೇಲೆ ನನ್ನ ಮನೆಗೆ ನಾನೇ ಬಂದು ನನ್ನ ಈ ಎಳೆಯ ಗೆಳೆಯನನ್ನು ಭೇಟಿಮಾಡುವುದು ವಿಚಿತ್ರವಲ್ಲ. ಕರುಳಿನ ಸೆಳೆತ ಎಂದರಂತೆ.
ಜೀವಿಯವರ ’ಮಧುಸಂಚಯ ’ ಕವನ ಸಂಕಲನವನ್ನು ಕುರಿತು ಎಮ್.ಎಸ್ ರಾಘವೇಂದ್ರರಾವ್ ಅವರು ೧೯೬೦ರ ಜನವರಿ ೧೦ನೇ ತಾರೀಖಿನ ‘The Sunday Standard’ ಪತ್ರಿಕೆಯಲ್ಲಿ ‘ Madhusanchaya’ is a fine contribution to kannada literature. The essence of ‘Madhusanchaya’ is that life is not only worth living, but worth living well’ ಎಂದು ಹೊಗಳಿದ್ದಾರೆ.

ಜೀವಿಯವರ ’ಹುಚ್ಚ ಹುಚ್ಚಿ” ಹೆಸರಾಂತ ಕವನ ಸಂಕಲನ. ಅವರಿಗೆ ಕನ್ನಡ ಕಾವ್ಯ ಜಗತ್ತಿನಲ್ಲಿ ಶಾಶ್ವತವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಡಾ ರಾಘವೇಂದ್ರ ರಾಯರ ಮುನ್ನುಡಿಯೊಂದಿಗೆ ಪ್ರಕಟವಾದ ಈ ಕೃತಿ ’ ಕಲೆಕ್ಟರ್’ಸ್ ಐಟಂ’ ಆಗಿದೆ ಎನ್ನುವುದು ಅತಿಶಯೋಕ್ತಿಯಾಗಲಾರದು. ಆರಂಭಕ್ಕೆ ಈ ಕೃತಿಯಲ್ಲಿ ಒಟ್ಟು ೨೫ ಪ್ರಣಯ ಗೀತೆಗಳು ಇದ್ದವು , ಮೂರನೆಯ ಆವೃತ್ತಿಯ ವೇಳೆಗೆ ಅದರೊಳಗಿನ ಕವನಗಳ ಸಂಖೆ ೪೫ ನ್ನು ಮುಟ್ಟಿದೆ. ಈ ಹೆಚ್ಚಿನ ೨೫ ಕವನಗಳಿಗೆ ರೇಖಾಚಿತ್ರವನ್ನು ’ ಶ್ರೀ ದೇವದಾಸ್ ಶೆಟ್ಟಿ” ಯವರು ಬಿಡಿಸಿದ್ದಾರೆ. ಈ ಕವನಸಂಗ್ರಹದ ’ ಪ್ರಣಯ ಕಾಗುಣಿತ ’ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು.
”ಹುಚ್ಚ ಹುಚ್ಚಿ’ ಪ್ರಕಟಮಾಡುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಪೇಪರ್ ಕೊಳ್ಳಲೂ ಹಣ ಇರದ ಪರಿಸ್ಥಿತಿ. ಆಗ ಕರ್ಮವೀರ ಸಂಪಾದಕರಾಗಿದ್ದ ಶಂಕರ ಪಾಟಿಲರು ’ ನೀವು ಒಂದು ಕಾದಂಬರಿ ಬರೆದುಕೊಟ್ಟರೆ ನಿಮಗೆ ನಾನು ೬೦೦ ರೂಪಾಯಿ ಅಡ್ವಾನ್ಸ್ ರಾಯಲ್ಟಿ ಚೆಕ್ ಕೋಡುತ್ತೇನೆ ಎಂದರು. ತಕ್ಷಣ ಜೀವಿ ೨೧ ದಿನಗಳಲ್ಲಿ ಒಂದು ಕಾದಂಬರಿಯನ್ನು ಬರೆದರು ಅದೇ ’ ವ್ಯಥೆಯಾದಳು ಹುಡುಗಿ’ . ಹೀಗೆ ’ಹುಚ್ಚ ಹುಚ್ಚಿ’ ಪ್ರಕಟವಾಯಿತು. ಬೇಂದ್ರೆಯವರು ಅದನ್ನೂ ಬಿಡುಗಡೆ ಮಾಡಿ ಪುಸ್ತಕದ, ಬರೆದವರ ಗೌರವವನ್ನು ಹೆಚ್ಚಿಸಿದರು. ’ಹುಚ್ಚ ಹುಚ್ಚಿ’ ಯನ್ನು ಕುರಿತು ೧೯೬೮ರಲ್ಲಿ ‘The Times india’ – Book reviews ದಲ್ಲಿ ವಿಮರ್ಶೆ ಬರೆಯುತ್ತ ಶ್ರೀ ಎಂ.ವಿ.ಕಾಮತರು ಕೆ ಎಸ್ ನರಸಿಂಹ ಸ್ವಾಮಿಯವರ ”ಮೈಸೂರು ಮಲ್ಲಿಗೆ ’ ಕವನ ಸಂಕಲನಕ್ಕೆ ಹೋಲಿಸುತ್ತಾರಲ್ಲದೆ , ಈ ಕೃತಿಯ ಮುಖಪುಟವನ್ನು ಕುರಿತು ಹೇಳಿರುವ ಮಾತುಗಳು ಗಮನೀಯವಾದದು.” ‘It is not usual , in discussing a work of this kind, to mention the printers; But both the printing and the cover designs deserve ‘kudos’; The cover enhances the contents, and it is a rare happy marriage of poetry and art’ . ಸಂಗ್ರಹದ ಪ್ರಾರಂಭದ ’ಹುಚ್ಚ’ ಕವನದ ಬಗ್ಗೆ ಬಹಳ ಪ್ರಶಂಸನೀಯವಾದ ಮಾತುಗಳನ್ನಾಡುತ್ತ ಕಾಮತರು.
“The little poem stands out like a white cloud in a clear sky in it’s purity of thought and liveliness of sentiment. it will
probably be remembered and quoted whenever lovers meet OR love is born” ಎಂದಿದ್ದಾರೆ.
ಕನ್ನಡ ಪುಸ್ತಕಗಳ ವಿಮರ್ಶೆ ಇಂಗ್ಲೀಷ್ ವಾರಪತ್ರಿಕೆಗಳಲ್ಲಿ ವಿರಳ ” The illustrated weekly ” ಯಂತಹ ಪ್ರಸಿದ್ಧ ವಾರ ಪತ್ರಿಕೆಗಳಲ್ಲಿ ಕನ್ನಡ ಪುಸ್ತಕಗಳ ವಿಮರ್ಶೆ ಬರುವುದಿಲ್ಲವೆಂದೇಹೇಳಬೇಕು . ಶ್ರೀ ಎ.ಎಸ್ ಭಾಸ್ಕರ ಎಂಬುವರು ಜೀವಿಯವರ”ಹುಚ್ಚ ಹುಚ್ಚಿ’ಯ ವಿಮರ್ಶೆಯನ್ನು ಬರೆದದ್ದು ಈ ಕವನ ಸಂಕಲನದ ಪ್ರಸಿದ್ಧಿಯನ್ನು ತಿಳಿಸುತ್ತದೆ. ಈ ಕವನ ಸಂಕಲನದ ಮುಖಪುಟವನ್ನು ರೂಪಿಸಿಕೊಟ್ಟ ಶ್ರೀ ಕೃಷ್ಣ ಪೋತದಾರ ಅವರು ಅಭಿ್ನಂದನಾರ್ಹರು. ಜಿವಿಯವರ ’ನಾಲ್ಕು ಧ್ವನಿ’ ಕವನ ಸಂಕಲನವನ್ನು ತಮ್ಮ ಕಾವ್ಯಗುರು ಅಂಬಿಕಾತನಯದತ್ತರಿಗೆ ಅರ್ಪಿಸಿ ಅವರ ೮೫ ವರ್ಷದ ವರ್ಧಂತಿಯಂದು ಬಿಡುಗಡೆ ಮಾಡಿದರು.
ಇದರಲ್ಲಿ ಜೀವಿಯವರು ಬರೆದಿರುವ ’ಅಂಬಿಕಾತನಯದತ್ತ ಶ್ರೀಗುರುನಮನ’ ಒಂದು ವಿಶಿಷ್ಟವಾದ ಚಿತ್ರಕವಿತ್ವ.
ಸಂಜೀವಿನಿ ಕವನ ಸಂಕಲನ ಜೀವಿ ವಿರಚಿತ ಆರತಿ ಹಾಗೂ ಭಕ್ತಿಗೀತೆಗಳ ಸಂಗ್ರಹ . ಒಟ್ಟು ೪೦ ಗೀತೆಗಳನ್ನು ಹೊಂದಿದೆ ಈ ಕೃತಿ.
ಇನ್ನು ’ದಶಪದಿ ’ ಕವನ ಸಂಕಲನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವಿಶೇಷ ಪ್ರಕಾರದ್ದು . ಹತ್ತು ಎಸಳುಗಳ ಒಟ್ಟು ೫೦ ಕವನಗಳ ಸಂಗ್ರಹ. ಇದರ ಒಂದನೇ ಎಸಳಿನಲ್ಲಿ ಡಾ ಬೇಂದ್ರೆಯವರನ್ನು ಕುರಿತ ೫ ಕವನಗಳಿವೆ. ಕನಸು ಮನಸಿನಲ್ಲಿ ಬೇಂದ್ರೆಯವರನ್ನು ನೆನೆಯುತ್ತ ಅವರ ಬಗ್ಗೆ ಪದ್ಯ ಬರೆದ ಕವಿಗಳೆಂದರೆ ಜೀವಿ ಯವರೊಬ್ಬರೆ ಎನ್ನಬಹುದು “ದಶಪದಿ ಕಾವ್ಯ ಪ್ರಕಾರ ,ವರಕವಿ ಡಾ ಬೇಂದ್ರೆಯವರಿಂದ ಪ್ರಾರಂಭವಾಯಿತು. ಅವರಿಂದಲೇ ಅದು ಮುಕ್ತಾಯಗೊಳ್ಳುವುದೇಕೆ? ನಾವೇಕೆ ಈ ವಿಧಾನದಲ್ಲಿ ಇನ್ನಷ್ಟು ಪದ್ಯಗಳನ್ನು ರಚಿಸಬಾರದು’ ಎನ್ನುವ ಜೀವಿಯವರ ಅಲೋಚನೆಯಿಂದ ಈ ದಶಪದಿಯ ಸೃಷ್ಟಿಯಾಯಿತು.
’ನಮ್ಮ ಆಣ್ಣಾವ್ರು’ ಕವನ ಜೀವಿಯವರು ಕನಸಿನಲ್ಲಿ ಕಂಡ ಬೇಂದ್ರೆಯವರ ಚಿತ್ರಣವನ್ನು ನೀಡುತ್ತದೆ.ಬೇಂದ್ರೆ ಅಂದ್ರೆ ಕನ್ನಡ’ . ಕವನದಲ್ಲಿ ’ಬೇಂದ್ರೆ ತಂತಿಯ ಮಿಂಟಲು ಎಂಟೆದೆಯೆ ಬೇಕು’ ಎಂದು ಹೇಳಿ ಬೇಂದ್ರೆಯವರ ದೈತ್ಯ ಪ್ರತಿಭೆಯನ್ನು ಕೊಂಡಾಡುತ್ತಾರೆ.
ಜೀವಿ ಬರೆದ ವಚನಗಳು ಪ್ರಾರಂಭವಾದದ್ದು ’ಟ್ಯಾಬ್ಲಾಯ್ಡ್’ ಅವರು ನಡೆಸುತ್ತಿದ್ದ ’ಈ ಸಂಜೆ ’ಸುದ್ದಿ ಪತ್ರಿಕೆಗೆ ಬರೆದ ”ಜೀವಿ ಅಂಕಣ’ ದೊಂದಿಗೆ. ೧೯೯೬ ರಷ್ಟು ಹಿಂದೆಯೇ ಅ ಅಂಕಣ ಬರೆಯಲು ಪ್ರಾರಂಭಿಸಿದ್ದರೂ , ಯಾವುದೋ ಕಾರಣದಿಂದ ಸುಮಾರು ಹತ್ತು ವರ್ಷಗಳ ಕಾಲ ವಚನದ ರಚನೆಯಾಗಲಿಲ್ಲ. ೨೦೧೨ ರಲ್ಲಿ ಇವರ ಒಂದುನೂರು ವಚನಗಳುಳ್ಳ ಕೃತಿ ಸಂಪುಟ ೧ ಹೆಸರಿನಿಂದ ಪ್ರಕಟವಾಯಿತು.
೧೮ ಕವಿತೆಗಳುಳ್ಳ ಮ್ಯೂಸಿಂಗ್ಸ್ ಇಂಗ್ಲೀಷಿನಲ್ಲಿ ಜಿವಿ ಯವರು ಬರೆದ ಮೊದಲ ಕವನ ಸಂಗ್ರಹ. ಈ ಕವನ ಸಂಗ್ರಹದ ಬಗ್ಗೆ ಜೀವಿಯವರು ಒಂದು ರೋಮಾಂಚಕ ಘಟನೆಯನ್ನು ವಿವರಿಸುತ್ತಾರೆ. ಇವರಿಗೆ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಕವಿಗೋಷ್ಟಿಯಲ್ಲಿ ಭಾಗವಹಿಸಲು ಆಮಂತ್ರಣ ಬಂದಾಗ., ಅಮೆರಿಕಾಗೆ ಹೋಗಲು ವೀಸಾ ತರಲು ಹೊರಟರು. ಈ ವೇಳೆಗಾಗಲೇ ಇವರ ಸ್ನೇಹಿತರಿಗೆ ಎರಡು ಬಾರಿ ವೀಸ ರಿಜೆಕ್ಟ್ ಆಗಿದ್ದ ಸುದ್ದಿ ತಿಳಿದಿದ್ದರಿಂದ ಸ್ವಲ್ಪ ಆತಂಕವೇ ಇತ್ತು. ಹೇಗಾದರೂ ಮೂರುತಿಂಗಳ ವೀಸಾ ಸಿಕ್ಕಿದರೆ ಸಾಕು ಎಂದುಕೊಂಡು ಸಾಲಿನಲ್ಲಿ ನಿಂತರು. ಸರದಿ ಬಂದಾಗ ಅಲ್ಲಿ ಕುಳಿತಿದ್ದ ಅಧಿಕಾರಿ ಇವರ ಅಮೆರಿಕ ಪ್ರಾವಾಸದ ಉದ್ದೇಶವನ್ನು ಕೇಳತೊಡಗಿದಾಗ, ತಾವು ಕವಿ ಎಂತಲೂ , ತಮಗೆ ಕವಿಗೋಷ್ಟಿಗೆ ಅಹ್ವಾನ ಬಂದಿದೆಯೆಂತಲೂ ಹೇಳಿ , ತಮ್ಮ ಮ್ಯೂಸಿಂಗ್ಸ್ ಪುಸ್ತಕದ ಪ್ರತಿಯೊಂದನ್ನು ಆತನಿಗಿತ್ತರು. ಅದನ್ನು ಅವನು ತಿರುವಿ ಹಾಕಿ ಒಂದು ಪದ್ಯ ಓದಿ . ತಕ್ಷಣವೇ ಹಣ ಕಟ್ಟಿ ಮಧ್ಯಾಹ್ನ ಬಂದು ವೀಸ ಪಡೆದು ಹೋಗಲು ತಿಳಿಸಿದನಂತೆ. ಇವರ ಆಶ್ಚರ್ಯಕ್ಕೆ ೧೦ ವರ್ಷದ ವೀಸಾ ದೊರಕಿತ್ತು. ಅದನ್ನು ನೋಡಿದ ಇವರ ಮಗ ಉದ್ಗರಿಸಿದ ’ಯು ಗಾಟ್ ವಿಸಾ ಫಾರ್ ಎ ಸಾಂಗ್.
’ಈ ಪ್ರಸಂಗ ನನ್ನ ಅನುಭವಕ್ಕೂ ಪೂರಕವಾಗಿದೆ , ನಾನು ಮೊದಲ ಬಾರಿ ಇಂಗ್ಲೆಂಡಿಗೆ ಬರುವಾಗ ನನ್ನ ಪಾಸ್ಪೊರ್ಟ್ ಅವಧಿ ಮುಗಿದುಹೋಗಿದ್ದು ವೀಸಾ ಕೊಡಲು ಹಿಂದೆ ಮುಂದೆ ನೋಡುತ್ತಿದ್ದ ಅಧಿಕಾರಿ ನಾನೊಬ್ಬ ಬರಹಗಾರ್ತಿ ಎಂದು ತಿಳಿದ ಕೂಡಲೆ, ನನ್ನ ಪುಸ್ತಕವೊಂದನ್ನು ಹಸ್ತಾಕ್ಷರದೊಂದಿಗೆ ತೆಗೆದುಕೊಂಡು ತಕ್ಷಣ ನನಗೆ ವೀಸ ಸ್ಟ್ಯಾಂಪ್ ಹಾಕಿ ಕೊಟ್ಟಿದ್ದ. ಅಷ್ಟೇ ಅಲ್ಲ ನನ್ನ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದಾಗ ನಾನು ಲೇಖಕಿ ಎಂಬ ಒಂದು ಅಂಶದಿಂದ ನನ್ನ ಪಾಸ್ಪೋರ್ಟ್ ನನಗೆ ಒಂದೇ ವಾರದೊಳಗೆ ಸಿಕ್ಕಿತ್ತು.
ಬರವಣಿಗೆಯಿಂದ ಹೊರಗೆ ಎನ್ನಿಸಿದರೂ ಇಲ್ಲಿ ಒಂದು ಮಾತು ಹೇಳಬೇಕೆನ್ನಿಸುತ್ತದೆ. ಲೇಖಕರಿಗೆ, ಅಥವ ಯಾವುದೇ ಕಲಾವಿದರಿಗೆ ಪಾಶ್ಚಾತ್ಯದೇಶದ ಜನರು ವಿಶೇಷ ಗೌರವವನ್ನು ಹೊಂದಿದ್ದಾರೆ ಎಂದರೆ ಸುಳ್ಳಾಗದು. ಇತ್ತೀಚೆಗೆ ನನಗೆ ನನ್ನ ಹಲ್ಲು ಕೀಳುವ ವೈದ್ಯೆಯಿಂದಲೂ ಹೆಚ್ಚಿನ ಗೌರವ ಸಿಕ್ಕಿದುದು ನಾನು ಲೇಖಕಿಎಂಬುದರಿಂದ!
ಸೃಜನ ಸಾಹಿತ್ಯದ ಚಟುವಟಿಕೆಗಳಂತೆ ಜೀವಿ ಒಳ್ಳೆ ವಿಮರ್ಶಕರಾಗಿಯೂ ವಿದ್ವಾಂಸರ , ವಿಮರ್ಶಕರ ಗಮನವನ್ನು ಸೆಳೆದಿದ್ದಾರೆ.
’ನಾ ಕಂಡ ಬೇಂದ್ರೆ- ಜೀವನ ಹಾಗೂ ಸಾಹಿತ್ಯ’ ಮತ್ತು ’ ನಾ ಕಂಡ ಗೋಕಾಕ – ಜೀವನ ಮತ್ತು ಸಾಹಿತ್ಯ’ ಇವು ಜೀವಿಯವರು ವಿಮರ್ಶಾ ಲೋಕಕ್ಕೆ ಸಲ್ಲಿಸಿರುವ ಬಹುದೊಡ್ಡ ಕೊಡುಗೆಗಳು. ಧಾರವಾಡದಲ್ಲಿರುವಾಗ ಬೇಂದ್ರೆಯವರ ಹಾಗೂ ಗೋಕಾಕರ ನಿಕಟ ಸಂಪರ್ಕ ಲಭಿಸಿದ್ದರಿಂದ ಜೀವಿಯವರು ಇತರ ಲೇಖಕರಿಗೆ ನಿಲುಕದ ಮಾತುಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಹ. ಮಾ ನಾಯಕರು ’ನಾ ಕಂಡ ಗೋಕಾಕ ” ಪುಸ್ತಕದ ಬಗ್ಗೆ ದೀರ್ಘವಾದ ವಿಮರ್ಶೆಯನ್ನು ’ಸುಧಾ’ ಪತ್ರಿಕೆಯಲ್ಲಿ ಬರೆದು ’ಈ ಪುಸ್ತಕವನ್ನು ಬರೆಸಿಕೊಂಡ ಹಾಗೂ ಬರೆದ ಇಬ್ಬರೂ ಧನ್ಯರು ಎಂದು ಉದ್ಗಾರ ತೆಗೆದಿದ್ದಾರೆ. ಅನಿಲಕುಮಾರ ಗೋಕಾಕರೊಂದಿಗೆ ಸೇರಿ “ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ” ಎಂಬ ಅಪೂರ್ವ ಕೃತಿಯನ್ನು ರಚಿಸಿದ್ದಾರೆ. ಬೇಂದ್ರೆ ಹಾಗೂ ಗೋಕಾಕರ ಜೀವನ ಸಾಧನೆಯ ಮುಚ್ಚಿಹೋದ ಮುಖಗಳನ್ನು ಅನಾವರಣ ಮಾಡ ಜಗತ್ತಿಗೆ ನೀಡಿದ ಕೀರ್ತಿ ಜೀವಿ ಯವರಿಗೆ ಸಲ್ಲುತ್ತದೆ. ಡಾ ಬೇಂದ್ರೆಯವರಿಗೆ ನಾಕುತಂತಿ ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅದನ್ನು ಹಿಂದಿಗೆ ಅನುವಾದ
ಮಾಡುವ ಕಾರ್ಯದಲ್ಲೂ ಜೀವಿಯವರು ಸಹಕರಿಸಿದ್ದರು.
ಬೇಂದ್ರೆ ಎಂದೊಡನೆ ಸಹಸ್ರ ತಂತಿ ವೀಣೆ ಮೀಟಿದಂತಾಗುತ್ತದೆ. ಸಹಸ್ರ ನೆನಪುಗಳು ಘೇಂಕರಿಸುತ್ತವೆ ಎನ್ನುತ್ತಾರೆ ಜೀವಿಯವರು. ಬೇಂದ್ರೆ ಜೀವನ ದರ್ಶನವನ್ನು ಮಾಡಿಕೊಡುವ ಈ ಕೃತಿ (ನಾ ಕಂಡ ಬೇಂದ್ರೆ)೫ ಅಧ್ಯಾಯಗಳನ್ನು ಹೊಂದಿದೆ. ಬೇಂದ್ರೆಯವರು ಗಣಿತ ವಿಜ್ಞಾನಗಳ ಬಗೆಗೆ ಗಂಟೆಗಟ್ಟಲೆ ಮಾತನಾಡುವ ಶಕ್ತಿ ಇದ್ದವರು. ಕನ್ನಡ, ಮರಾಠಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳನ್ನು ರಚನೆ ಮಾಡುತ್ತಿದ್ದರು. ಹಿಂದಿ ಗ್ರಂಥಗಳ , ಜ್ಯೋತಿಷ್ಯ ಶಾಸ್ತ್ರದ ಅಭ್ಯಾಸವನ್ನು ಮಾಡಿದವರು ಬೇಂದ್ರೆಯವರು. ’ಬೇಂದ್ರೆಯವರಿಗೆ ಆಗಿನ ಕಾಲದಲ್ಲಿ ಇದ್ದ ಒಂದೇ ಒಂದು ಹವ್ಯಾಸವೆಂದರೆ ಸಾಹಿತ್ಯಾಭ್ಯಾಸ ಹಾಗೂ ಗ್ರಂಥ ಸಂಗ್ರಹಣೆ ಎನ್ನುತ್ತಾರೆ ಜೀವಿಯವರು.
ಬೇಂದ್ರೆಯವರು ಬಿ. ಎ. ಪರೀಕ್ಷೆ ಮಾಡುತ್ತಿದ್ದ ಸಂದರ್ಭದಲ್ಲಿಯ ಒಂದು ಸ್ವಾರಸ್ಯ ಪ್ರಸಂಗವನ್ನು ಜೀವಿಯವರು ’ನಾ ಕಂಡ ಬೇಂದ್ರೆ’ ಯಲ್ಲಿ ತಿಳಿಸಿದ್ದಾರೆ.
”ಬೇಂದ್ರೆಯವರ ಇಂಗ್ಲೀಷ್ ಅಧ್ಯಾಪಕ ಪಟುವರ್ಧನರಿಗೆ ಕೊಟೇಷನ್ ಮೇಲೆ ಬಹಳ ಮೋಹ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಬೇಂದ್ರೆಯವರಿಗೆ ಇಂಗ್ಲೀಷಿನಲ್ಲಿ ಅತ್ಯಧಿಕ ಗುಣಗಳು ದೊರೆತಿದ್ದವು. ಬೇಂದ್ರೆಯವರು ತಮ್ಮ ಉತ್ತ್ರರ ಪತ್ರಿಕೆಯಲ್ಲಿ ’ಬೆನ್ ರಾಮ್ಸನ್’ ಎಂಬ ಲೇಖಕರ ಅಭಿಪ್ರಾಯವನ್ನು ಉದಾಹರಿಸಿದ್ದರು. ಅವರ ಶಿಕ್ಷಕರು ಆ ಹೆಸರಿನ ಲೇಖಕನ ಪುಸ್ತಕಕ್ಕಾಗಿ ಎಲ್ಲ ಕಡೆ ಹುಡುಕಿ ದೊರಕದಾದಾಗ ಬೇಂದ್ರೆಯವರನ್ನೇ ಕೇಳಿದರಂತೆ. ಅದಕ್ಕೆ ಬೇಂದ್ರೆಯವರು ನಮ್ರತೆಯಿಂದ ಅದು ತಾವೆ ಎಂದು ಹೇಳಿ ಕ್ಷಮಾಯಾಚನೆ ಮಾಡಿದರಂತೆ. ’ಬೆನ್ ರಾಮ್ಸನ್’ ದ ವಿವರಣೆ ಏನು ಎಂದು ಕೇಳಿದಾಗ ’ಬೆನ್ ಎನ್ನುವುದು ಬೇಂದ್ರೆಯ ಕಿರುರೂಪ’ ಹಾಗೂ ’ನನ್ನ ತಂದೆಯ ಹೆಸರು ರಾಮ’. ಆದ್ದರಿಂದ “ರಾಮಾಸ್ ಸನ್” ಅಂದರಂತೆ. ಹೀಗೆ ಬೇಂದ್ರೆಯವರನ್ನು ಕುರಿತು ಕನ್ನಡ ಸಾಹಿತ್ಯದಲ್ಲಿ ಎಲ್ಲಿಯೂ ಬರವಣಿಗೆಗೆ ಸಿಗದ ಕೆಲವು ಸಂದರ್ಭಗಳನ್ನು ಜೀವಿಯವರು ತೆರೆದಿಡುವುದರ ಮೂಲಕ ಬೇಂದ್ರೆಯವರ ಭವ್ಯ ವ್ಯಕ್ತಿತ್ವವನ್ನೂ , ಅವರ ಕಾವ್ಯದ ಆಳ ಅಗಲ ವಿಸ್ತಾರಗಳನ್ನು ಎತ್ತಿ ತೋರಿಸಿದ್ದಾರೆ . ಬೇಂದ್ರೆಯವರ
ಬದುಕಿನ ಒಳಹೊಕ್ಕು ನೋಡಬೇಕಾದರೆ ಜೀವಿಯವರ ’ ನಾ ಕಂಡ ಬೇಂದ್ರೆ’ ಓದಲೇ ಬೇಕಾದ ಕೃತಿ.
ಇದರ ಜೊತೆಜೊತೆಗೇ ಬೇಂದ್ರೆಯವರ ಬಗೆಗೆ ಹೆಚ್ಚು ಹೆಚ್ಚು ತಿಳುವಳಿಕೆ ನೀಡುವ ಜೀವಿಯವರ ಮತ್ತೊಂದು ಕೃತಿ ’ಬೇಂದ್ರೆ ಒಳನೋಟ’ ಬೇಂದ್ರೆಯವರೊಡನೆ ಸಂದರ್ಶನ, ಅವರೊಡನಾಟದ ನೆನಪು , ದರ್ಶನ’, ಇವೆಲ್ಲವನ್ನೂ ಒಳಗೊಂಡು ನಮಗೆ ಬೇಂದ್ರೆಯವರ ಅಪರಿಚಿತ ಮುಖಗಳ ಪರಿಚಯವನ್ನು ವಿಸ್ತಾರವಾಗಿ ಮಾಡಿಕೊಡುತ್ತದೆ. ಈ ಕೃತಿಯಲ್ಲಿ ಮೂರು ಭಾಗಗಳಿದ್ದು ಅವು ’ದರ್ಶನ’ ’ಸಂದರ್ಶನ’ ಹಾಗೂ ನೆನಪುಗಳು ಎಂಬ ಮೂರು ಶೀರ್ಷಿಕೆಗಳನ್ನು ಹೊಂದಿವೆ. ಬೇಂದ್ರೆಯವರ ಸುಪುತ್ರ ಡಾ ವಾಮನ ಬೇಂದ್ರೆಯವರ ಬಗೆಗೂ ತಿಳಿಸಿಕೊಡುವುದು ಈ ಕೃತಿಯ ವೈಶಿಷ್ಟ.
ಇವೆರಡಲ್ಲದೆ ’ಬೇಂದ್ರೆಯವರ ಸಮಗ್ರ ಕಾವ್ಯದರ್ಶನ ’ ಇತ್ತೀಚೆಗೆ ಜೀವಿ ಯವರು ಬೇಂದ್ರೆಯವರನ್ನು ಕುರಿತು ಬರೆದಿರುವ ಕೃತಿ. ಬೇಂದ್ರೆಯವರ ಸಮಗ್ರ ಕಾವ್ಯದರ್ಶನಕ್ಕೆ ಇದೊಂದು ಕೀಲಿಕೈ ಎಂದರೆ ತಪ್ಪಾಗದು.
ಜೀವಿಯವರ ಮತ್ತೊಂದು ಪ್ರಮುಖ ಕೃತಿ ’ನಾ ಕಂಡ ಗೋಕಾಕ್’. ವಿನಾಯಕ ಕೃಷ್ಣ ಗೋಕಾಕರ ಬದುಕು ಬರಹವನ್ನು , ಅವರ ಧೀಮಂತ ವ್ಯಕ್ತಿತ್ವವನ್ನೂ ಈ ಕೃತಿಯಲ್ಲಿ ಜೀವಿ ಯವರು ಬಹಳ ಮನೋಜ್ಞವಾಗಿ ನಿರೂಪಿಸಿದ್ದಾರೆ. ಬೇಂದ್ರೆಯವರನ್ನು ಗೋಕಾಕರು ಗುರು, ಮಾರ್ಗದರ್ಶಕ ಎಂದೇ ನಂಬಿದ್ದರು. ಬೇಂದ್ರೆಯವರಿಂದಲೇ ಗೋಕಾಕರು ಕನ್ನಡಕ್ಕೆ ದೊರೆತದ್ದು ಎನ್ನುವ ಮಾತೂ ನಿಜ. ಆದರೆ ನಿಜ ಜೀವನದಲ್ಲಿ ನಡೆದ ಪ್ರಸಂಗವೆ ಬೇರೆ. ಬೇಂದ್ರೆಯವರು ಕನ್ನಡ ವಿಷಯವನ್ನು ಆರಿಸಿಕೊಂಡು ಎಂ.ಎ ಮಾಡಲು ಪುಣೆಗೆ ಬಂದಾಗ ಅಲ್ಲಿ ಕನ್ನಡವನ್ನು ಬೋಧಿಸಲು ಅರ್ಹ ಶಿಕ್ಷಕರು ಯಾರೂ ಇರಲಿಲ್ಲವಂತೆ. ಆಗ ಗೋಕಾಕರ ಬಿ .ಎ ಹಾಗೂ ಎಂ. ಎ ಪದವಿಯ ಪ್ರತಿಗಳನ್ನು ಮಂಬೈ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿದಾಗ ಅವರಿಗೆ ಎಂ. ಎ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಅರ್ಹತೆ ಇದೆ ಎಂದು ಒಪ್ಪಿಗೆ ನೀಡಿದರಂತೆ.
ಗುರುವಿಗೆ ಗುರುವಾಗಬೇಕಾಗಿ ಬಂದ ಸಂದರ್ಭದಲ್ಲಿ ಗೋಕಾಕರು ಬೇಂದ್ರೆಯವರಿದ್ದ ತರಗತಿಗೆ ಹೋಗಿ ಡೆಸ್ಕಿನ ಮೇಲೆ ಕೂರುತ್ತಿದ್ದರಂತೆ. ಬೇಂದ್ರೆಯವರು ಪಾಠಮಾಡುತ್ತಿದ್ದರಂತೆ .
ಜೀವಿಯವರು ಗೋಕಾಕರ ಮಾರ್ಗದರ್ಶನದಲ್ಲಿ , ಅನಿಲ್ ಗೋಕಾಕರೊಡನೆ ಸೇರಿ ’ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ’ ಎಂಬ ವಿಮರ್ಶಾ ಕೃತಿಯನ್ನು ಹೊರತಂದರು. ಇದರಲ್ಲಿ ಇಂಗ್ಲೀಷ್ ಕಾವ್ಯದ ಜೊತೆಜೊತೆಗೆ ಕನ್ನಡ ಸಾಹಿತ್ಯದ ಉದಾಹರಣೆಗಳನ್ನೂ ಕೊಟ್ಟು ವಿಶ್ಲೇಷಿಸಲಾಗಿದೆ.
ಡಾ ಜೀವಿ ಒಳ್ಳೆಯ ನಾಟಕ ಕಾರರು. ’ಪ್ರಜಾ ಪ್ರಭುತ್ವ’, ’ಗುಂಡನ ಮದುವೆ,’ ’ಕಾದಿರುವಳು ಶಬರಿ’ ’ವಿವೇಕ ಚೂಡಾಮಣಿ’ ಜೀವಣ್ಣನ ಮಹಾ ಪ್ರಸ್ಥಾನ ’ ಮೊದಲಾದ ನಾಟಕಗಳನ್ನು ಆಡಿಸಿ ಯಶಸ್ಸು ಗಳಿಸಿದ್ದಾರೆ. ಭಾರತೀಯ ವಿದ್ಯಾಭವನದವರು ನಡೆಸುತ್ತಿದ್ದ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ’ಪ್ರಜಾಪ್ರಭುತ್ವ ’ನಾಟಕವನ್ನು ಪ್ರದರ್ಶಿಸಿದರು. ಶ್ರೇಷ್ಠ ನಾಟಕಕ್ಕೆ ಮೀಸಲಾಗಿದ್ದ ಶೀಲ್ಡ್ ಅದಕ್ಕೆ ದೊರಕಿತಷ್ಟೇ ಅಲ್ಲ , ಅದನ್ನು ನೋಡಲು ವರಕವಿ ಡಾ ಬೇಂದ್ರೆಯವರು ಬಂದಿದ್ದರು . ವಿದ್ಯಾರ್ಥಿ ಸದಾಶಿವ ಸಾಲಿಯಾನರ ಬೇಡಿಕೆಗೆ ಮಣಿದು ’ಇಂಟರ್ವ್ಯೂ’ ನಾಟಕವನ್ನು ಬರೆದು ಆಡಿಸಿದರು, ಮುಂಬೈ ವಿಶ್ವವಿದ್ಯಾನಿಲಯದ ಶ್ರೇಷ್ಠ ನಟ ಪ್ರಶಸ್ತಿಯನ್ನು ಗಳಿಸಿಕೊಂಡು ಸದಾಶಿವ ಸಾಲಿಯಾನ ಜೀವಿಯವರ ನಾಟಕಕ್ಕೆ ನ್ಯಾಯ ದೊರಕಿಸಿಕೊಟ್ಟರು,
ಇವರ ಪ್ರಜಾ ಪ್ರಭುತ್ವ ನಾಟಕಕ್ಕೆ ಬೇಕಾದ ಇಂಗ್ಲೀಷ್ ಕಾಮೆಂಟರಿಯನ್ನು ಆಗ ಆಕ್ಸ್ ಫರ್ಡ್ ಪ್ರೆಸ್ಸ್ ನಲ್ಲಿ ಮ್ಯಾನೇಜರ್ ಆಗಿದ್ದ ಗಿರೀ್ಶ್ ಕಾರ್ನಾಡರು
ಬರೆದುಕೊಟ್ಟರು. ೧೯೬೮ ರಲ್ಲಿ ಭಾರತೀಯ ವಿದ್ಯಾಭವನದವರು ನಡೆಸಿದ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕಾಂಕ ನಾಟಕ ಇದು. ಇದಕ್ಕಿಂತ ಹೆಚ್ಚಿನ ಸಂತೋಷದ ಸಂಗತಿಯೆಂದರೆ ಜೀವಿಯವರು ಉಳಿದ ನಟರೊಂದಿಗೆ ಶೀಳ್ದನ್ನು ಸ್ವೀಕರಿಸಿದ್ದು ವರಕವಿ ಬೇಂದ್ರೆಯವರು ಉಪಸ್ಥಿತಿಯಲ್ಲಿ ಎನ್ನುವುದು.
’ಎಲ್ಲಿದೆ ನರಕ’, ’ಇಂಟರ್ವ್ಯೂ’,’ಕನ್ನಡಿಯೊಳಗಿನ ಗಂಟು’, ’ಸರಸ ವಿರಸ’, ’ವೆಂಕ ನಾಣಿ ಶೀನಿ ಮತ್ತು ಹನುಮಂತ’, ’ಹಾವು ಅಲ್ಲ ಹಗ್ಗ’, ’ಶಬರಿ’ , ’ವಿಶ್ವಗುರುಮಧ್ವಾಚಾರ್ಯರು’ ಹಾಗೂ ’ಚೂಡಾಮಣಿ’ ಇವರ ಇತರ ನಾಟಕಗಳು. ಇವರ ಹೆಚ್ಚಿನ ನಾಟಕಗಳೂ ಬಹುಮಾನ ಪಡೆದಿರುವುದೇ ಅಲ್ಲದೆ ಶ್ಲಾಘನೆಗೆ ಒಳಗಾಗಿವೆ. ಎಲ್ಲದರ ವಿವರವನ್ನೂ ಬರೆಯಲು ನನ್ನ ಬರಹದ ಮಿತಿ ಅಡ್ಡಿಯಾಗುವುದರಿಂದ ಅವಗಳನ್ನು ಕೈಬಿಡಲಾಗಿದೆ.’ಕಾದಿರುವಳು ಶಬರಿ’ ಇವರ ಶಬರಿ ನಾಟಕದ ಹಾಗೂ ವಿಸ್ತೃತ ರೂಪ. ಇವರ ಬಹುತೇಕ ನಾಟಕಗಳು ಸಾಮಾಜಿಕ ನಾಟಕಗಳು. ಶಬರಿ ಪೌರಾಣಿಕ ನಾಟಕ.
ಜೀವಿ ಯವರ ಕಥಾ ಸಂಕಲನ ’ ಧೃತರಾಷ್ಟ್ರ ಸಂತಾನ” ವರಕವಿ ಬೇಂದ್ರೆಯವರ ಮುನ್ನುಡಿಯನ್ನು ಹೊಂದಿರುವ ಕಥಾ ಸಂಕಲನ.
೬೦ರ ದಶಕದಲ್ಲಿ ಪ್ರಜಾವಾಣಿ, ಕರ್ಮವೀರ, ಪ್ರಜಾಮತ ಮೊದಲಾದ ಹೆಸಾರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳು ಈ ಸಂಕಲನದಲ್ಲಿ ಓದಸಿಗುತ್ತವೆ. ಆತ್ಮಬಲಿ ಈ ಸಂಕಲನದ ಮಹತ್ವದ ಕತೆಗಳಲ್ಲಿ ಒಂದು.ಇದು ಚೇತನಾನಂದ ಸ್ವಾಮಿಗಳ ಕತೆ. ಇದರಲ್ಲಿರುವ ಎಲ್ಲ ಕತೆಗಳೂ ಓದುಗರನ್ನು ಓದಿಸಿಕೊಂಡುಹೋಗುವ ಗುಣವುಳ್ಳವಾಗಿವೆ.
ಇವರ ಕಥಾನಿರೂಪಣಾ ಶೈಲಿ ಹಾಗೂ ಮುಕ್ತಾಯ ಇವುಗಳಲ್ಲಿ ಅಮೆರಿಕನ್ ಕತೆಗಾರ ’ಒ ಹೆನ್ರಿ’ಯ ಪ್ರಭಾವವಿದೆಯೆಂಬುದು ಡಾ. ಜಿ. ಎನ್. ಉಪಾಧ್ಯರ ಅಭಿಪ್ರಾಯ. ಇವರ ’ಸತ್ಯಕಥೆ ಕಲ್ಪನೆಗಿಂತಲೂ ವಿಚಿತ್ರ ’ ೨೬ ಕತೆಗಳನ್ನುಳ್ಳದ್ದಾಗಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ರ ಮಹಿಮಾ ಲೀಲೆಗಳನ್ನು ವರ್ಣಿಸುವ ಕತೆಗಳಿವು.

’ವ್ಯಥೆಯಾದಳು ಹುಡುಗಿ’ ಜೀವಿ ಯವರ ಏಕೈಕ ಕಾದಂಬರಿ . ಗ್ರಾಮೀಣ ಪರಿಸರದಲ್ಲಿ ನಡೆಯುವ ವಿದ್ಯಮಾನಗಳನ್ನು ಚಿತ್ರಿಸುವ ಸಾಮಾಜಿಕ ಕಾದಂಬರಿ ವ್ಯಥೆಯಾದಳು ಹುಡುಗಿ, ಮೊದಲಿಗೆ ಈ ಕೃತಿಯನ್ನು ಕಥೆಯಾದಳು ಹುಡುಗಿ ಎಂದು ಹೆಸರಿಸದ್ದರು ಜೀವಿ, ಆದರೆ ಅದೇ ಶೀರ್ಷಿಕೆಯನ್ನು ಯಶವಂತ ಚಿತ್ತಾಲರು ಉಪಯೋಗಿಸಿದ್ದರಿಂದ , ಗುರು ಬೇಂದ್ರೆಯವರ ಆದೇಶದಂತೆ ವ್ಯಥೆಯಾದಳು ಹುಡುಗಿ ಎಂದು ಬದಲಾಯಿಸಿದರು
ಬಹುಮುಖ ಪ್ರತಿಭೆಯ ಜೀವಿ ಯವರು ಆರೋಗ್ಯ ಹಾಗೂ ಯೋಗ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪರಿಣತಿಯನ್ನು ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ಜನತೆಗೆ ಅದರ ಉಪಯೋಗವನ್ನು ತಿಳಿಹೇಳುತ್ತಾ ಬಂದಿದ್ದಾರೆ. ಯೋಗಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ’ಔಷಧಿ ಇಲ್ಲದೆ ಬದುಕಲು ಕಲಿಯಿರಿ’ ೫ ಬಾರಿ ಮರು ಮುದ್ರಣಗೊಂಡಂತಹ ಮಹತ್ವದ ಕೃತಿ . ಇಂಗ್ಲೀಷಿನಲ್ಲಿ ಬರೆದಿರುವ ’ಯೋಗ ಶಿಬಿರ ’ ಯೋಗಾಭ್ಯಾಸದ ಕುರಿತು ಮಾಹಿತಿಯನ್ನು ನೀಡುವ ಸಚಿತ್ರ ಕೃತಿ ಯಾಗಿದೆ. ಯೋಗಕ್ಕೆ ರೋಗ ನಿರೋಧಕ ಹಾಗೂ ಚಿಕಿತ್ಸಾ ಆಯಾಮಗಳಿವೆ. ಖಾಯಿಲೆ ಬರುವುದಕ್ಕೆ ಮೊದಲು ಅದನ್ನು ನಿರೋಧಿಸಲು ಹಾಗೆಯೇ ರೋಗವನ್ನು ಗುಣಪಡಿಸಲೂ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಎನ್ನುವುದು ಜಿವಿಯವರ ಅಚಲವಾದ ವಿಶ್ವಾಸ. ವಿಶ್ವ ವಿಖ್ಯಾತ ’ಯೋಗಾಚಾರ್ಯ ಬಿ .ಕೆ. ಎಸ್. ಅಯ್ಯಂಗಾರ್’ ಹಾಗೂ ಹಠಯೋಗಿ ‘ನಿಕಂ ಗುರೂಜಿ’ ಅವರುಗಳು ಇವರ ಯೋಗಾಭ್ಯಾಸದ ಗುರುಗಳು. ನಿಸರ್ಗೋಪಚಾರಕರಾದ”ಡಾ. ಬೋಳಾ’ರವರ ಬಳಿ ನಿಸರ್ಗ ಚಿಕಿತ್ಸೆಯನ್ನೂ ಅಭ್ಯಸಿಸಿ ಡಿಪ್ಲೊಮ ಪಡೆದಿದ್ದಾರೆ ಜೀವಿ.


ಜೀವಿ – ಅಮೆರಿಕಾ ಪ್ರವಾಸ:
ಪ್ರವಾಸ ಪ್ರಿಯರಾದ ಜಿ ವಿ ಯವರು ತಮ್ಮ ಅಮೆರಿಕಾ ಪ್ರವಾಸದ ಅನುಭವಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ೨೦೦೦ ದಲ್ಲಿ ಹ್ಯೂಸ್ಟನ್ ನಲ್ಲಿ ನಡೆದ ಪ್ರಥಮ ’ ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನಕ್ಕೆ ಅಹ್ವಾನಿತರಾಗಿ ಹೋಗಿ ಅಲ್ಲಿ ಕಾವ್ಯವಾಚನ ಮಾಡಿದ್ದಾರೆ. ಹಲವಾರು ಕಡೆಗಳಲ್ಲಿ ಹೋಗಿ ಯೋಗ ಶಿಬಿರಗಳನ್ನು ನಡೆಸಿದ್ದಾರೆ, ಬೇಂದ್ರೆ ಹಾಗೂ ಗೋಕಾಕರನ್ನು ಕುರಿತು ಹಲವಾರು ಕನ್ನಡ ಕೂಟಗಳಲ್ಲಿ ಮಾತನಾಡಿದ್ದಾರೆ. ಇವರ ಜಿ ವಿ ಕಂಡ ಅಮೆರಿಕಾ ’ ಎಂಬ ಕೃತಿ ಅಮೆರಿಕಾದ ಡೆಟ್ರಾಯ್ಟ್ ನಲ್ಲಿ ೨೦೦೨ ರಲ್ಲಿ ನಡೆದ ಎರಡನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಇವರ ಎರಡನೆ ಅಮೆರಿಕ ಪ್ರವಾಸ ಸಾಹಿತ್ಯ’ ಇನ್ನೊಮ್ಮೆ ಅಮೆರಿಕ ಪ್ರವಾಸ’ . ಇದರಲ್ಲಿ ಅಮೆರಿಕಾದ ಕನ್ನಡಿಗರಿಗೆ ಇರುವ ಕನ್ನಡ ಪ್ರೇಮದ ಬಗೆಗೂ ತಿಳಿಸುತ್ತಾರೆ. ಇಲ್ಲಿಯೂ ತಮ್ಮ ಗುರು ಬೇಂದ್ರೆಯವರ ಆಶೀರ್ವಾದವನ್ನು ಜೀವಿಯವರು ಗುರುತಿಸುತ್ತಾರೆ. ’ ನಾನು ನಾ ಕಂಡ ಬೇಂದ್ರೆ ಪುಸ್ತಕವನ್ನು ಕೈಯಲ್ಲಿ ಹಿಡಿದು ಅಮೆರಿಕಾಗೆ ಬಂದೆ. ಆದರೆ ಇಲ್ಲಿ ಬಂದ ಮೇಲೆ ಬೇಂದ್ರೆಯವರೇ ನನ್ನ ಕೈಹಿಡಿದು ಎಲ್ಲಕಡೆಗೂ ಕರೆದುಕೊಂಡು ಹೋಗುತ್ತಿರುವ ಭಾಸವಾಯಿತು’ ಎನ್ನುತ್ತಾರೆ.
ಜಿವಿಯವರು ಪತ್ರಕರ್ತರೂ ಆಗಿದ್ದರು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ಇಪ್ಪತ್ತು ವರ್ಷಗಳ ಕಾಲ ,ಮುಂಬಯಿ ಪತ್ರ” ಬರೆದರು. ಒಂದು ವರ್ಷ ’ನಿತ್ಯಾನಂದ ’ಮಾಸ ಪತ್ರಿಕೆಯ ಸಂಪಾದಕರಾಗಿದ್ದರು . ೧೯೯೫ ರಿಂದ ’ಕರ್ನಾಟಕ ಮಲ್ಲ’ ಪತ್ರಿಕೆಗೆ ’ಜೀವನ ಮತ್ತು ಸಾಹಿತ್ಯ ’ ಅಂಕಣವನ್ನು ಬರೆಯುತ್ತಿದ್ದಾರೆ. ಇವರ ಅಂಕಣ ಲೇಖನಗಳು ೧೨೫೦ ನ್ನೂ ಮೀರಿವೆ.
ಆಧ್ಯಾತ್ಮ ವಿಷಯದಲ್ಲಿಯೂ ಜಿವಿಯವರು ಬಹಳ ಆಸಕ್ತರು. ತ್ರಿವಿಕ್ರಮ ಪಂಡಿತರ ’ನೃಸಿಂಹ ಸ್ತುತಿ’ ಹಾಗೂ ’ವಾಯು ಸ್ತುತಿ’ ಗಳನ್ನು ಇಂಗ್ಲೀಷಿಗೆ ಮತ್ತು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ”ವಾಯುಸ್ತುತಿಯ ನಾರೀಕೇಲ ಪಾಕವನ್ನು , ದ್ರಾಕ್ಷಾಪಾಕವನ್ನಾಗಿ ಪರಿವರ್ತಿಸಿದ ಜೀ ವಿಯವರ ಸಾಹಿತ್ಯ ಚಮತ್ಕಾರವನ್ನು ಶ್ರೀ ವಿಶ್ವೇಶ ತೀರ್ಥರು ಹೊಗಳಿದ್ದಾರೆ.ಇವುಗಳ ಜೊತೆಗೆ ಮಧುರ ಚೆನ್ನರ ’ನನ್ನ ನಲ್ಲ’ ಕಾವ್ಯವನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.
್ ’ಶಾಂತಾರಮ ಪಿಕಳೆ’ ’ಶ್ರೀ ಸತ್ಯಧ್ಯಾನ ಸ್ಮರಣೆ ’ ಇವು ಜೀವಿಯವರು ಬರೆದಿರುವ ವ್ಯಕ್ತಿ ಚಿತ್ರಗಳು.
ಜೀವಿ-ಪ್ರಶಸ್ತಿ ಪುರಸ್ಕಾರಗಳು ಮುಂಬೈ ಮಹಾನಗರದಲ್ಲಿ ಕನ್ನಡವನ್ನು ಕಟ್ಟಿಬೆಳೆಸಲು ಶ್ರಮಿಸಿದ ಜೀವಿಯವರು, ಮುಂಬೈ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಇಂತಹ ಅದ್ಭುತ ವಿದ್ಯಾವಂತರನ್ನು ಹಲಾವಾರು ಸಂಘ ಸಂಸ್ಥೆಗಳು ಗೌರವಿಸಿ, ಪ್ರಶಸ್ತಿ ಪುಸ್ಕಾರಗಳನ್ನು ನೀಡಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸಿದ್ದೇನೆ.
ಕನ್ನಡ ಸಾಹಿತ್ಯ ಪರಿಷತ್ತಿನವರು ಇವರಿಗೆ ’ಕರ್ನಾಟಕ ಶ್ರೀ’ ಪ್ರಶಸ್ತಿಯನ್ನು(೨೦೦೩) , ಮುಂಬೈ ಸಾಹಿತ್ಯ ಬಳಗದವರು ’ ಮಹಾರಾಷ್ಟ್ರ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು (೨೦೦೪) ನೀಡಿ ಗೌರವಿಸಿದ್ದಾರೆ.’ದೆಹಲಿ ಕನ್ನಡಿಗ ’ ಪತ್ರಿಕೆಯವರು ಇವರ ಯೋಗ ಸಾಧನೆಯನ್ನು ಮೆಚ್ಚಿ , ಗೌರವಿಸಿ ಮಾನಪತ್ರ ನೀಡಿದ್ದಾರೆ(೨೦೦೬). ಮುಂಬೈಯ”ಶ್ರೀ ವಿಠಲ’ ಪ್ರತಿಷ್ಠಾನದವರು ಜೀವಿಯವರಿಗೆ ’ಯೋಗ -ಸಾಹಿತ್ಯ ರತ್ನಾಕರ ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮುಂಬೈಯ ಬಿಲ್ಲವರ ಅಸೋಸಿಯೇಶನ್ ದವರು “ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ”ಯನ್ನು(೨೦೦೮) ನೀಡಿ ಗೌರವಿಸಿದ್ದಾರೆ.ಬೆಂಗಳೂರಿನ ಅಜಂತಾ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯವರು ರಾಜ್ಯೋತ್ಸವದ ಅಂಗವಾಗ ೩೧-೧೦-೨೦೧೦ ರಂದು ” ಅಜಂತ ರಾಷ್ಟ್ರರತ್ನ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದ್ದಾರೆ. ಕರ್ನಾಟಕ ಸಂಘವು ಜೀವಿಯವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ
ಅನುಪಮ ಸೇವೆಗಾಗಿ ’ ಸಾಧನಾ ಶಿಖರ’ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. (೨೦೧೧). ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ ಹುಬ್ಬಳ್ಳಿ , ಅವರು ೨೦೧೪ ರಲ್ಲಿ ಬೇಂದ್ರೆ ಸಾಹಿತ್ಯದ ಬಹುಮುಖ ಸೇವೆ ಮಾಡಿದವರಿಗೆ ’ಬೇಂದ್ರೆ ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಕೊಡಲು ಪ್ರಾರಂಭಿಸಿದರು.ಈ ಪ್ರಶಸ್ತಿಯನ್ನು ಪಡೆದ ಪ್ರಥಮ ಸಾಹಿತಿ ಡಾ. ಜಿ.ವಿ. ಕುಲಕರ್ಣಿಯವರಾಗಿದ್ದಾರೆ. ೨೦೧೫ರಲ್ಲಿ ಡಾ. ದ ರಾ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅವರು ’ ಅಂಬಿಕಾತನದತ್ತ’ ರಾಷ್ಟ್ರೀಯ ಪ್ರಶಸ್ತಿಯನ್ನು ( ಒಂದು ಲಕ್ಷ ಬಹುಮಾನ ಮತ್ತು ಮಾನಪತ್ರ ) ಜಿ. ವಿ. ಕುಲಕರ್ಣಿ ಹಾಗೂ ಬನ್ನಂಜೆ ಗೋವಿಂದಾಚಾರ್ಯರಿಗೆ ಫೆಬ್ರುವರಿ ೧ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ನೀಡಿ ಗೌರವಿಸಿದರು
ಪೇಜಾವರ ಶ್ರೀಗಳು ತಮ್ಮ ಐದನೆಯ ಐತಿಹಾಸಿಕ ಪರ್ಯಾಯ ಮಹೋತ್ಸ್ವದಲ್ಲಿ ಜೀವಿಯವರಿಗೆ ’ ಶ್ರೀರಾಮ ವಿಠಲ ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
(೨೦೧೬)ವಿಜಾಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದವರು ಜೀವಿಯವರ ಕಾವ್ಯಕ್ಕಾಗಿ ಪ್ರಶಸ್ತಿಯನ್ನು ರೂ ೫೧೦೦೦ ಬಹುಮಾನವನ್ನು ಜೊತೆಗೆ ಮಾನಪತ್ರವನ್ನು ನೀಡಿ ಗೌರವಿಸಿದರು.(೨೦೧೮)
ಜೀವಿಯವರನ್ನು ’ಭಾವ ಜೀವಿ’, ’ಯೋಗ ಜೀವಿ’, ’ಸ್ನೇಹ ಜೀವಿ’ ಎಂದು ಕರೆದಿರುವ ಸುಗುಣ ಮಾಲೆಯ ಸಂಪಾದಕ ”ಮಟ್ಟಿ ರಾಧಾಕೃಷ್ಣರಾವ್’ ರವರ ವಿಶೇಷಣಗಳ ಪಟ್ಟಿಗೆ ’ಸರಸ್ವತಿಯ ವರಪುತ್ರ’, ’ತುಂಬಿದ ಕೊಡ’ ಇವುಗಳನ್ನೂ ಸೇರಿಸಬಹುದು.

’ಜೀವಿಯವರು ನಿವೃತ್ತರಾದಾಗ , ಆಗಿನ ಕನ್ನಡವಿಭಾಗದ ಮುಖ್ಯಸ್ಥರು, ”ಜೀವಿ ಯವರು ನಿವೃತ್ತರಾದಮೇಲೆ ನಿಸರ್ಗ ಚಿಕಿತ್ಸೆಯ ಬಗೆಗೇ ಮಾತನಾಡುತ್ತಾರೆ . ಯೋಗದ ಬಗೆಗೆ ಹೆಚ್ಚು ಚಿಂತಿಸುತ್ತಾರೆ ,ಇದರಿಂದ ಸಾಹಿತ್ಯಕ್ಕೆ ಅಪಾರ ನಷ್ಟವಾಗುತ್ತಿದೆ’ ಎಂದರಂತೆ. ಅದಕ್ಕೆ ಜೀವಿ ಉತ್ತರಿಸಿದರು ’ನಾನು ಕೆಲಸದಲ್ಲಿರುವಾಗ ಹತ್ತು ಪುಸ್ತಕಗಳನ್ನು ಪ್ರಕಟಿಸಿದೆ, ನಿವೃತ್ತನಾದ ಮೇಲೆ ಹತ್ತಕ್ಕೂ ಮೀರಿ ಪುಸ್ತಕಗಳನ್ನು ಪ್ರಕಟಿಸಿದ್ದೇನೆ’ ಎಂದು. ಈಗಲೂ ಜೀವಿಯವರಲ್ಲಿ ತುಂಬಿ ತುಳುಕುವ ಉತ್ಸಾಹ, ಸಾಹಿತ್ಯದ ಬಗೆಗೆ ಇರುವ ಕಾಳಜಿ , ಬರವಣಿಗೆಯಲ್ಲಿ ಅವರು ತೋರಿಸುವ ಉತ್ಸಾಹ, ಇವುಗಳನ್ನು ನೋಡಿದವರಿಗೆ ಈ ಮಾತಿನ ಸತ್ಯದ ಅರಿವಾಗುತ್ತದೆಒಟ್ಟಾರೆ ಜೀವಿ ಸಾಹಿತ್ಯದಲ್ಲಿ ನಿಸರ್ಗ ಪ್ರೇಮ, ಆಧ್ಯಾತ್ಮಿಕತೆ, ನಗರಪ್ರಜ್ಞೆಗಳನ್ನು ಗುರುತಿಸಬಹುದು. ಜೀವಿಯವರ ಅಗಾಧ ಸಾಹಿತ್ಯ ಸಂಪತ್ತನ್ನು ನೋಡಿದಾಗ, ವಿವಿಧ ಭಾಷೆಗಳ, ವಿವಿಧ ಸಾಹಿತ್ಯಕ ವಿಷಯಗಳ ಬಗೆಗಿನ ಅವರ ಆಳವಾದ ಜ್ಞಾನದ ಬಗೆಗೆ ತಿಳಿದಾಗ ವಿಸ್ಮಯವಾಗುತ್ತದೆ. ಇಂತಹ ಕನ್ನಡದ ಅಮೂಲ್ಯ ಆಸ್ತಿಯನ್ನು ಕನ್ನಡ ಸಾಹಿತ್ಯ ಸಮಾಜ ನ್ಯಾಯವಾಗಿ ಗುರುತಿಸಿಲ್ಲ ಎನಿಸುತ್ತದೆ.
ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ದಿನದಂದು ಇಂತಹ ಅಪರೂಪದ ಧೀಮಂತ ವ್ಯಕ್ತಿತ್ವದ ಗುರುವಿಗೆ ನನ್ನ ಅನಂತಾನಂತ ನಮಸ್ಕಾರಗಳನ್ನು ಈ ಕವನದ ಮೂಲಕ ಅರ್ಪಿಸುತ್ತಿದ್ದೇನೆ.

ಗುರುವಿಗೆ ನಮನ
ಗುರುರ್ಬ್ರಹ್ಮ ಗುರುರ್ವಿಷ್ಣುಃ
ಗುರುದೇವೋ ಮಹೇಶ್ವರಃ
ಎಂಬ ಉಕ್ತಿ ನಮ್ಮ ಸಂಸ್ಕೃತಿ
ಗುರುವು ಬ್ರಹ್ಮ ರೂಪನು, ವಿಷ್ಣು ಸ್ವರೂಪನು
ನಿಜದಿ ಗುರುವೆ ಕಾಲ ರುದ್ರನು
ಸೃಷ್ಟಿ ಕರ್ತ ಬ್ರಹ್ಮ ತಾನು ಹೊಣೆಯಹೊತ್ತನು
ಮೂಡಿಸಲು ಜೀವವೆತ್ತ ಮೂರ್ತಿಗಳ
ತನ್ನ ಕುಲುಮೆಯಲ್ಲಿ ರೂಪತಳೆವ ಬೊಂಬೆಗಳ
ಗುರುವೆ ತಾನೆ ಪರಬ್ರಹ್ಮ ಜ್ಞಾನವನ್ನೆ ಮೂಡಿಸುವನು
ಶಿಲೆಗೆ ಕಲೆಯ ಜೀವ ತುಂಬಿ ಲೋಕಕೀವನು
ಜಗದ ಸ್ಥಿತಿಯ ಕಾಯುವುದೇ ವಿಷ್ಣು ಧರ್ಮವು
ಲೋಕ ಹಿತವ ನೋಡುವುದೆ ಅವನ ತಂತ್ರವು
ಗುರುವು ತಾನೆ ಕಾಯುವನು ಬುದ್ಧಿ ಜೀವಿಯ
ಕಲಿತ ವಿದ್ಯೆ ನಶಿಸದಂತೆ ಜ್ಞಾನ ಜ್ಯೋತಿಯ
ಸೃಷ್ಟಿ ಲಯಕೆ ಹೊಣೆಯು ತಾನು ಪರಮೇಶ್ವರನು
ಅಸುರಿ ಶಕ್ತಿ ದಮನಕವನೆ ಪ್ರಳಯ ರುದ್ರನು
ಗುರುವು ತಾನೆ ಶಿವನ ರೂಪ ಎಂಬ ಮಾತು ಸತ್ಯ
ಅಜ್ಞಾನದಸುರಿ ಶಕ್ತಿಯಳಿಪ ವಿಲಯ ರುದ್ರ
ಶಿವವ ಜಗಕೆ ತರುವ ಶಿವನು ಗುರುದೇವನು
ಜ್ಞಾನವೆಂಬ ನಾವೆಯಲ್ಲಿ , ಬುದ್ಧಿಯೆಂಬ ಹುಟ್ಟುಹಾಕಿ
ಗುರಿ ಎಂಬ ದಡಕೆ ಒಯ್ವನೀತ
ಈತನೆ ಬ್ರಹ್ಮ ವಿಷ್ಣು ಮಹೇಶ್ವರ.
ಇವರೆಲ್ಲರ ಪ್ರತಿ ರೂಪ ನನ್ನ ಗುರು.
ಬೇಂದ್ರೆಯವರ ಶಿಷ್ಯರಾದ ಜೀವಿಯವರು.
ತಿಳಿದಷ್ಟು ಹೊಸಬರಾಗಿ ಕಾಣುತ್ತಾರೆ ನನಗೆ
ಒಂದೇ ಎರಡೆ? ಹತ್ತು ಹಲವು ಮುಖಗಳು ಇವರಿಗೆ
ಅವರ ಸಾಹಿತ್ಯ ಸಂಪತ್ತಿಗೆ ನಾಟಕ ಲೋಕಕ್ಕೆ
ಯೋಗ ಸಂಜೀವಿನಿಗೆ , ಬಹು ಭಾಷಾ ಸಂಪತ್ತಿಗೆ
ಕನ್ನಡಕೆ, ಇಂಗ್ಲೀಷಿಗೆ ಅವರಿತ್ತಿರುವ ಕೊಡುಗೆಗೆ
ವಚನ ಶಿರೋಮಣಿಗೆ , ವಿ. ಕೃ. ಗೋಕಾಕರ ಶಿಷ್ಯನಿಗೆ
ಕನ್ನಡ ಸಾಹಿತ್ಯಕ್ಕೆ ಬೇಂದ್ರೆ ಇತ್ತ ಬಳುವಳಿಗೆ
ಎಂಬತ್ತಾರರ ಹರೆಯದ ನವೋತ್ಸಾಹಿ ಗುರುವಿಗೆ
ನನ್ನ ಅನಂತಾನಾಂತ ಪ್ರಣಾಮವು ಈ ಸುದಿನ
ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ದಿನ

-ಡಾ ಸತ್ಯವತಿ ಮೂರ್ತಿ

2 thoughts on “ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು-ಡಾ|| ಪ್ರೇಮಲತ.ಬಿ & ಶ್ರೀ.ಜಿ.ವಿ.ಕುಲ್ಕರ್ಣಿ – ಡಾ||ಸತ್ಯವತಿ ಮೂರ್ತಿ

 1. ಹೃಯಯಸ್ಪರ್ಶಿ ಬರಹಗಳು.

  ಪ್ರೇಮಲತಾ ಅವರು ಬರೆದ ನಾಲ್ವರು ಗುರುಗಳು ಮತ್ತು ಸತ್ಯಮೂರ್ತಿಯವರು ಬರೆದ ಜೀವಿ ಗುರುಗಳು.

  Like

 2. ಈ ವಾರದ ವಿಶೇಷಾಂಕ: ಶಿಕ್ಷಕರ ಬಗ್ಗೆ. ತಮಗೆ ಕಲಿಸಿದ ನಾಲ್ವರು ಮಹನೀಯರ ಬಗ್ಗೆ ಆಪ್ತವಾಗಿ ಬರೆದಿದ್ದಾರೆ ಪ್ರೇಮಲತಾ ಅವರು. ಪ್ರಾಮಾಣಿಕವಾಗಿ ತಮ್ಮ ಅನುಭವಗಳನ್ನು ಹಂಚಿದ್ದಾರೆ. ಅದರಲ್ಲಿ ಜೋ ಅವರಂಥ ವ್ಯಕ್ತಿಗಳು ಅಪರೂಪ. ಅವರ ಚಿತ್ರಣ ಚೆನ್ನಾಗಿದೆ.

  ಜಿ ವಿ ಕುಲಕರ್ಣಿಯವರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಕ್ಕಿಲ್ಲ. ನನಗೂ ಆ ಎಲ್ಲ ವಿಷಯಗಳೂ ಗೊತ್ತಿರಲಿಲ್ಲ. ತಮ್ಮ ಸುದೀರ್ಘ ಲೇಖನದಲ್ಲಿ ಸತ್ಯವತಿ ಎಷ್ಟೊಂದು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಆಗಾಗ ಜೀವಿಯವರ ಲೇಖನಗಳನ್ನು ಓದಿದ್ದೆ ಅಷ್ಟೇ. ಒಂದು ಚಿಕ್ಕ ಘಟನೆ: ಆಗ ನಾನು ಧಾರವಾಡದಲ್ಲಿ ಶಾಲಾ ಬಾಲಕ. ಆಗಾಗ ಸಾಹಿತಿಗಳು ನಮ್ಮ ಮನೆಗೆ ಬರುವದೇನೋ ಆಪರೂಪವಾಗಿರಲಿಲ್ಲ! ಆದರೆ ನನಗೆ ಜಿವಿಯವರ ಪರಿಚಯ ಇರಲಿಲ್ಲ. ಇಲ್ಲಿಯ ವರೆಗೆ ಇದರ ನೆನಪೂ ಮರೆತಿತ್ತು. ಈಗ ಯಾಕೋ ಥಟ್ಟನೆ ನೆನಪಾಯಿತು.
  ೧೯೫೦ರ ದಶಕದ ಕೊನೆಯಲ್ಲಿ ಧಾರಾವಾಡದಲ್ಲಿಯ ಸಪ್ತಾಪುರದಲ್ಲಿ ಒಬ್ಬರು ಬಂದು ನಮ್ವ ತಂದೆಗೆ (ಅಥವಾ ಅಜ್ಜ ನೆನಪಿಲ್ಲ) ತಾವು ಕೊಟ್ಟು ಹೋಗಿದ್ದ ಪುಸ್ತಕವನ್ನು ಓದಿದ್ದರೇನೋ ಅಂತ ಕೇಳಲು ಬಂದಿದ್ದರು. ಎರಡು ವಾರಗಳ ಹಿಂದೆ ಅವರ ಕೈಯಿಂದಲೇ ನಾನು ಅದನ್ನು ಇಸಿದುಕೊಂಡಿದ್ದು ನೆನಪಿತ್ತು. ತದ ನಂತರ ಅದು ಓದಲು ಸಿಕ್ಕಿಲ್ಲ ಹೆಚ್ಚು ನೆನಪಿಲ್ಲವಾದರೂ ಆಗ ಹಿರಿಯರಿಗೆ ತಲುಪಿಸುವ ಮೊದಲು ಕದ್ದು ಓದಿದ್ದ ‘ಹುಚ್ಚ ಅಂದನು, …ಹುಚ್ಚಿ ಅಂದಳು’ ಅಂತ ಪದೇ ಪದೇ ಬರುವ ಸಾಲುಗಳು ಮಾತ್ರ ನೆನಪಿದೆ. ಆಮೇಲೆ ದಶಕಗಳ ನಂತರ ಅವರನ್ನು ಇತ್ತೀಚಿಗೆ ಸತ್ಯವತಿಯವರು ಪ್ರಸ್ತುತಪಡಿಸಿದ ಬೇಂದ್ರೆಯವರ ಉಪನ್ಯಾಸದಲ್ಲೇ ಯೂ ಟಿಯೂಬಿನಲ್ಲೇ ನೋಡಿದ್ದು. ಆ ಕವನಗಳನ್ನು ಮತ್ತು ಅವರ ಬೇರೆ ಪುಸ್ತಕಗಳನ್ನು ಓದುವ ಅವಕಾಶ ಎಂದು ಬರುವದೋ! ಅದ್ಭುತ ಬರಹಗಾರರು. ಬದುಕಿರುವವರಲ್ಲಿ ಅವರೊಬ್ಬರೇ ಬೇಂದ್ರೆಯವರ ಜೀವನದ ಬಗ್ಗೆ ಇಷ್ಟು ಅಧಿಕೃತವಾಗಿ ಮಾತಾಡುವವರು ಅಂತ ಕಾಣುತ್ತದೆ.
  ಶ್ರೀವತ್ಸ ದೇಸಾಯಿ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.