ವೆಸ್ಟನ್ ಬಿರ್ಟ್ ಅರ್ಬೊರೇಟಂ – ರಜನಿ ರಾಜು

ಪ್ರಿಯ ಓದುಗರೇ !!!
ವಾರದ ಸಾಪ್ತಾಹಿಕ ಸಂಚಿಕೆಯಲ್ಲಿ ನಮ್ಮ ಅನಿವಾಸಿ ತಂಗುದಾಣಕ್ಕೆ ನೂತನ ಸೇರ್ಪಡಿತ ಸದಸ್ಯೆ , ಬೇಸಿಂಗ್ ಸ್ಟೋಕ್ ನಿವಾಸಿಯಾದ ರಜನಿ ರಾಜು ರವರು ಯುನೈಟೆಡ್ ಕಿಂಗ್ಡಮ್ ನಲ್ಲಿ ಶರತ್ ಋತುವಿನ ಪ್ರಾಕೃತಿಕ ವಿಸ್ಮಯವನ್ನು ‘ವೆಸ್ಟನ್ ಬಿರ್ಟ್ ಅರ್ಬೊರೇಟಂ’ ಎಂಬ ಶೀರ್ಷಿಕೆಯಲ್ಲಿ ಕೋಟ್ಸ್ ವೊಲ್ಡ್ಸ್ ನಲ್ಲಿರುವ ಈ ವಿಸ್ಮಯ ತಾಣದ ಕಡೆಗೆ ತಮ್ಮ ಲೇಖನದಲ್ಲಿ ಕೊಂಡೊಯ್ದಿದ್ದಾರೆ . ಓದಿ ಪ್ರತಿಕ್ರಿಯಿಸಿ !! – ಸವಿ. ಸಂ

ಲೇಖಕಿಯ ಕಿರು ಪರಿಚಯ

ರಜನಿ ರಾಜು ರವರು ಹುಟ್ಟಿದ್ದು, ಶಿಕ್ಷಣಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲಿ . ನೌಕರಿಯ ಸಲುವಾಗಿ ಯುನೈಟೆಡ್ ಕಿಂಗ್ಡಮ್ ಗೆ ಬಂದು ಹತ್ತು ವರುಷಗಳಾಗಿ ಪ್ರಸ್ತುತ ಬೇಸಿಂಗ್ಸ್ಟಾಕ್ ನಿವಾಸಿ.
B.E. ಎಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್ ಪದವೀಧರೆ , ಖಾಸಗಿ ಕಂಪನಿ ಒಂದರಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ನೌಕರಿ ಮಾಡುತ್ತಿದ್ದಾರೆ . ಕನ್ನಡಿಗರು ಯು ಕೆ ಕನ್ನಡ ಕಲಿ ಶಿಬಿರದಲ್ಲಿ ಶಿಕ್ಷಕಿಯಾಗಿದ್ದಾರೆ.  
ಕನ್ನಡದ ಖ್ಯಾತ ಬರಹಗಾರರಾದ ಶ್ರೀ ಬಿ ಎಂ ಶ್ರೀ ಅವರ ವಂಶದ ದೂರದ ಕುಡಿ ಇವರು ಎಂಬುದು ಹೇಳಲು ಹೆಮ್ಮೆಯ ವಿಷಯ.
ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ಪ್ರವಾಸಕ್ಕೆ ಹೋಗುವುದು, ರುಚಿಯಾದ ಅಡಿಗೆ ಮಾಡುವುದು ಇಷ್ಟವಾದ ಚಟುವಟಿಕೆಗಳು.

ವೆಸ್ಟನ್ ಬಿರ್ಟ್ ಅರ್ಬೊರೇಟಂ

ಬೇಸಿಗೆ ಮುಗಿಯಿತೆಂದರೆ ಸಾಕು ನಾವೆಲ್ಲರು ಅಯ್ಯಯ್ಯೋ ರಜ ದಿನಗಳು ಹೊರಟೆ ಹೋದವಲ್ಲ, ಇನ್ನು ಏನಿದ್ದರೂ ಬರಿ ಮಳೆ ಚಳಿ ಎಂದು ಆಕ್ರಂದಿಸುತ್ತೇವೆ. ಆದರೆ ನಮ್ಮ ಪರಿಸರ ಎಂತಹ ಅದ್ಭುತವೆಂದರೆ ಪ್ರತಿ ಒಂದು ಋತುವಿನಲ್ಲೂ ಒಂದೊಡನು ವಿಸ್ಮಯವನ್ನು ನಮಗೆ ಕೊಡುಗೆಯಾಗಿ ನೀಡುತ್ತದೆ.  ಬೇಸಿಗೆಗೂ ಚಳಿಗಾಲಕ್ಕೂ ಇರುವ ನಡುವಿನ ಋತುವಿನ ಹೆಸರು ಶರತ್ಕಾಲ. ಪಾಶ್ಚತ್ಯ ದೇಶಗಳಲ್ಲಿ ಇದನ್ನು autumn, ಇಲ್ಲವೇ fall, ಎಂದು ಸಹ ಕರೆಯುತ್ತಾರೆ.
ವೈಜ್ನ್ಯಾನಿಕವಾಗಿ ನಮಗೆ ತಿಳಿದಿರುವ ಹಾಗೆ ಈ ಋತುವಿನಲ್ಲಿ ಗಿಡ ಮರಗಳೆಲ್ಲವೂ ತಮ್ಮ ಎಲೆಗಳನ್ನು ಉದುರಿಸಲು ಸಿದ್ಧವಾಗುತ್ತವೆ ಏಕೆಂದರೆ ಚಳಿಗಾಲದಲ್ಲಿ ನೀರಿನ ಅಭಾವ ಇರುವುದರಿಂದ ಮತ್ತು ಮಂಜು ಬೀಳುವ ಕಾರಣ ಭೂಮಿಯಲ್ಲಿ ನೀರಿನ ಅಂಶವನ್ನು ಹೀರಿಕೊಳ್ಳಲಾಗದೆ ಇರುವುದರಿಂದ ಜಡಗಳಲ್ಲಿ ಅಂತರ್ಜಲವನ್ನು ಹಿಡಿದಿಟ್ಟು ಮೇಲಿನ ಎಲೆಗಳನ್ನು ಉದುರಿಸಿ ಚಳಿಗಾಲದಲ್ಲಿ ತಮ್ಮ ರಕ್ಷಣೆ ಸ್ವತಃ ಮಾಡಿಕೊಳ್ಳುತ್ತವೆ. ನಿಜಕ್ಕೂ ನಮ್ಮ ಪ್ರಕೃತಿಯ ವಿಸ್ಮಯಗಳು ಒಂದೇ ಎರಡೇ.
ಮನುಷ್ಯರು ಹೇಗೆ ತಮ್ಮ ಜೀವನಾವಧಿಯಲ್ಲಿ ಮಗುವಿನಿಂದ ಮುಪ್ಪಿನವರೆಗೂ ದೈಹಿಕವಾಗಿ ಬದಲಾವಣೆಗಳನ್ನು ಕಾಣುತ್ತಾರೋ ಅದೇ ರೀತಿ ಎಲೆಗಳು ಸಹ ಉದುರುವುದರ ಮುನ್ನ ಎಳೆಯ ವಯಸ್ಸಿನ ತಮ್ಮ ಹಚ್ಚ ಹಸಿರನ್ನು ಕಳೆದುಕೊಂಡು ಬರುತ್ತಾ ಬರುತ್ತಾ ಕೆಂಪು, ನಸುಗೆಂಪು, ಹಳದಿ ಮತ್ತು ಕಡೆಯದಾಗಿ ಕಂದು  ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ.
ಈ ಬಣ್ಣ ಬದಲಾಯಿಸುವ ವೃಕ್ಷಗಳಲ್ಲಿ ಮೇಪಲ್ ಮರಗಳು ಅತ್ಯಂತ ಪ್ರಸಿದ್ಧ. ತ್ರಿಕೋನಾಕಾರದ ಎಲೆಗಳು ರಂಗುಗಳನ್ನು ಬದಲಾಯಿಸುವುದನ್ನು ನೋಡಲು ಅತ್ಯಂತ ಸುಂದರ. ಈ ರೀತಿ ಒಂದೊಂದು ಮರವು ಒಂದೊಂದು ಹಂತದಲ್ಲಿ ತನ್ನ ಎಲೆಗಳಲ್ಲಿ  ಬಣ್ಣಗಳನ್ನು ಬಯಲು ಮಾಡಿದಾಗ ಆ ದೃಶ್ಯ ನೋಡುವುದಕ್ಕೆ ರಮ್ಯ ಮನೋಹರ.


ಈ ಸುಂದರ ದೃಶ್ಯವು ಕೇವಲ ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವುದರಿಂದ ಪ್ರಪಂಚದ ಹಲವೆಡೆ ಜನರು ಇದನ್ನು ಅನುಭವಿಸಲು ಬೇರೆ ದೇಶಗಳಿಗೆ ಹೋಗುತ್ತಾರೆ.
ಈ ಮಾಯೆಯನ್ನು ಯು ಕೆ ಯ ಜನಗಳು ಬಹಳ ದೂರವೆಲ್ಲೂ ಹೋಗದೆ  ಇಲ್ಲೇ ಇಂಗ್ಲೆಂಡ್ ನಲ್ಲಿರುವ ವೆಸ್ಟನ್ ಬಿರ್ಟ್ ಅರ್ಬೊರೇಟಂ ನಲ್ಲಿ ಕಾಣಬಹುದು. ಅರ್ಬೊರೇಟಂ ಎಂದರೆ ಸಸ್ಯಶಾಸ್ತ್ರೀಯವಾಗಿ ಮರಗಿಡಗಳನ್ನು ನೋಡಿಕೊಳ್ಳುವ ಒಂದು ಜಾಗ.
 ವೆಸ್ಟನ್ ಬಿರ್ಟ್ ಅರ್ಬೊರೇಟಂ ಇಂಗ್ಲೆಂಡಿನ ಕೋಟ್ಸ್ ವೊಲ್ಡ್ಸ್ ಎಂಬ ಪ್ರದೇಶದಲ್ಲಿ ನೆಲೆಸಿದೆ. ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೂ ಶರತ್ಕಾಲದ ಆಗಮನದ ಜೊತೆಗೆ ಇಲ್ಲಿನ ಇಡೀ ಜಾಗವು ಪ್ರಾಕೃತಿಕ ನರ್ತನೆ ಮಾಡುತ್ತದೆ. ಇದು ಎಷ್ಟು ಸುಂದರವಾಗಿರುತ್ತದೆಯೆಂದರೆ ನಾವು ಯಾವುದು ಒಂದು ಮಾಯಾಲೋಕಕ್ಕೆ ಸಾಗಿದ್ದವೇನೋ ಎಂಬಷ್ಟು ವಿಚಿತ್ರ, ವಿಸ್ಮಯ.
ಒಂದು ದಿನದ ಮಟ್ಟಿಗೆ ಹೋಗಬಹುದಾದ ಇಲ್ಲಿಗೆ ಲಂಡನ್ ನಿಂದ ನೇರ ರೈಲು ಗಳು ಓಡಾಡುತ್ತವೆ. ಹಾಗೆಯೇ ಕಾರಿನಲ್ಲಿ ಹೋಗುವವರು ಕೂಡ ಸುಲಭವಾಗಿ ಎಲ್ಲಿಂದ ಬೇಕಾದರೂ ಒಂದೆರಡು ತಾಸುಗಳಲ್ಲಿ ಇಲ್ಲಿಗೆ ಬಂದು ಸೇರಬಹುದು. ಇಲ್ಲಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳುಗಳಲ್ಲಿ ಹೋಗುವುದು ಬಹಳ ಜನಪ್ರಿಯ. ಅರ್ಬೊರೇಟಂಗೆ ಬೇರೆ ಮಾಸಗಳಲ್ಲೂ ಕೂಡ ಹೋಗಬಹುದು ಆದರೆ ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ತರಹದ ಸಸ್ಯವರ್ಗಗಳನ್ನು ನೋಡಬಹುದು ಇಲ್ಲವೇ ಒಂದು ಶಾಂತ ವಾತಾವರಣದ ಅನುಭವವನ್ನು ಪಡೆದುಕೊಂಡು ಬರಬಹುದು.  ಇಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಎಲ್ಲರೂ ಅಡ್ಡಾಡಿ ಆನಂದಿಸಬಹುದು.
 ಅರ್ಬೊರೇಟಂನನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಒಂದು ಕೆಂಪು ಮಾರ್ಗ ಮತ್ತೊಂದು ಪರ್ಪಲ್ ಮಾರ್ಗ. ಎರಡರಲ್ಲೂ ಅವುಗಳದ್ದೇ ಆದ ವಿಶೇಷಗಳಿವೆ. Red. route. ನಲ್ಲಿ Acer.Glade. ಎಂಬ ಮೇಪಲ್ ಮರಗಳ ಸಂಗ್ರಹವಿದೆ. ಈ ಮರಗಳು ನಾನಾ ತರಹದ ಬಣ್ಣಗಳನ್ನು ಕಾಣಿಸುವುದನ್ನು ನೋಡುವುದು ಕಣ್ಣಿಗೆ ಹಬ್ಬ.
Purple. route. ಸ್ವಲ್ಪ ಉದ್ದವಾದ ಮಾರ್ಗವಾಗಿದ್ದು ಇಲ್ಲಿನ ವಿಶೇಷತೆ ಜಪಾನೀಸ್ ಮೇಪಲ್ ಟ್ರೀಸ್. ಈ ಮೇಪಲ್ ವೃಕ್ಷಗಳು ಬಹಳ ಗಿಡ್ಡ ಮತ್ತು ದಟ್ಟವಾಗಿದ್ದು ಬಣ್ಣಗಳ ಪ್ರದರ್ಶನ್ನಕ್ಕೇನು ಕೊರತೆ ಇರುವುದಿಲ್ಲ.
ಅಲ್ಲೇ ಅತಿಥಿ ಕೇಂದ್ರದಲ್ಲಿ ಒಂದು ಮ್ಯಾಪ್ ಪಡೆದು ಅದನ್ನು ಹಿಡಿದು ಶುರುವಿನಿಂದ ಕೊನೆಯವರೆಗೂ ನಡೆದರೂ ಸಂಪೂರ್ಣ ಅರ್ಬೊರೇಟಂನನ್ನು ಆರಾಮಾಗಿ ಒಂದು 5-6 ಘಂಟೆಗಳಲ್ಲಿ ನೋಡಿ ಮುಗಿಸಬಹುದು.ನಡೆದು ದಣಿವಾದರೆ ಅಲ್ಲಲ್ಲಿ ಇರುವ ಕೆಫೆಟೇರಿಯ ಗಳಲ್ಲಿ ಬಿಸಿ ಚಹಾ ಕಾಫಿ ಗಳು ಮತ್ತು ಉಪಹಾರಗಳನ್ನು ಸೇವಿಸಿ ಸುಧಾರಿಸಕೊಳ್ಳಬಹುದು.
ಒಟ್ಟಾರೆ ನೀವು ಪ್ರಕೃತಿ ಪ್ರೇಮಿಯಾಗಿದ್ದರು ಸರಿಯೇ ಇಲ್ಲವೇ ನಿಸರ್ಗದ  ಸಂಗವನ್ನು ಹೆಚ್ಚಾಗಿ ಇಷ್ಟ ಪಡದವರಾಗಿದ್ದರು ಸರಿಯೇ ವೆಸ್ಟನ್ ಬಿರ್ಟ್ ಅರ್ಬೊರೇಟಂ ತನ್ನ ಸ್ಥಿರ, ಶಾಂತ ಮತ್ತು ವೈವಿಧ್ಯಮಯ ವಾತಾವರಣದಿಂದ ಎಲ್ಲರನ್ನು ಆಕರ್ಷಿಸಿ ಕೈ ಬೀಸಿ ಕರೆಯುತ್ತದೆ.

-ರಜನಿ ರಾಜು.

8 thoughts on “ವೆಸ್ಟನ್ ಬಿರ್ಟ್ ಅರ್ಬೊರೇಟಂ – ರಜನಿ ರಾಜು

 1. ರಜನಿ ರಾಜು ಅವರಿಗೆ ‘ಅನಿವಾಸಿ‘ಗೆ ಸ್ವಾಗತ. ನಿಮ್ಮ ಲೇಖನ ಓದಿದ ಮೇಲೆ ಈ ಸಲದ ಶರ್ತ್ಕಾಲದಲ್ಲಿ ಖಂಡಿತ ಈ ಪ್ರದೇಶಕ್ಕೆ ಭೇಟಿಕೊಡುತ್ತೇನೆ. ನಿಮ್ಮ ಲೇಖನಿಯಿಂದ ಎಲ್ಲ ಕಾಲದ ಲೇಖನಗಳು ಬರಲಿ ಎಂದು ಆಶಿಸುತ್ತೇನೆ.

  Like

 2. ಬಾಯಲ್ಲಿ ನೀರು ಬರುವಂತಹ ಚಿತ್ರಗಳೊಂದಿಗೆ ಉತ್ತಮ ಮಾಹಿತಿಯುಕ್ತ ಲೇಖನ ಬಡಿಸಿದ್ದೀರಿ. ಈ ವರ್ಷ ಶರತ್ ಬಂದಾಗ ಹೋಗಲೇ ಬೇಕು
  – ರಾಂ

  Like

 3. ಮೊದಲನೆಯದಾಗಿ ರಜನಿ ರಾಜು ಅವರಿಗೆ ‘ಅನಿವಾಸಿ’ಬರಹಗಾರರ ಬಳಗಕ್ಕೆ ಸ್ವಾಗತ ಕೋರುತ್ತೇನೆ. ತಮ್ಮ ಪ್ರವಾಸದ ಹವ್ಯಾಸದಲ್ಲಿ ಕಂಡ ವೆಸ್ಟನಬರ್ಟ್ ವೃಕ್ಷೋದ್ಯಾನದ ಅದ್ಭುತ ದೃಶ್ಯಗಳ ವರ್ಣನೆಯನ್ನು ತಮ್ಮ ಸುಲಲಿತ ಶೈಲಿಯಲ್ಲಿ ವರ್ಣಿಸಿದ್ದಾರೆ. ನನ್ನ ಇಷ್ಟು ವರ್ಷಗಳ ಯು ಕೆ ವಾಸದಲ್ಲಿ ಈ ಅರ್ಬೊರೀಟಂ ಗೆ ಇನ್ನೂ ಭೆಟ್ಟಿಕೊಟ್ಟು ಆ ಫೋಟೋಗಳಲ್ಲಿ ಕಾಣುವ ನೇರಳೆ-ಕಂದು ಮಿಶ್ರಿತ ಬಣ್ಣಗಳ ‘ಆರ್ಭಟ’ವನ್ನು ಸವಿಯುವ ತವಕವನ್ನು ಹೆಚ್ಚಿಸಿದ್ದಾರೆ. ಪ್ರಯತ್ನಿಸುವೆ ಮತ್ತು ಅವರ ಬರಹ ಕುಂಚದಿಂದ ಇನ್ನಷ್ಟು ಚಿತ್ತಾರಗಳು ಹೊರಬರಲೆಂದು ಆಶಿಸುವೆ. ಶ್ರೀವತ್ಸ ದೇಸಾಯಿ

  Like

  • ನಿಮ್ಮ ಸ್ಪೂರ್ತಿದಾಯಕ ಶಬ್ದಗಳಿಗೆ ನಮನಗಳು ಶ್ರೀವತ್ಸ ಅವರೇ. ನಿಮ್ಮಂತಹ ನಿಸ್ಸೀಮ ಬರಹಗಾರರ ಈ ಮಾತುಗಳು ನನ್ನನ್ನು ಬಹಳ ಹುರಿದುಂಬಿಸಿವೆ. 🙂

   Like

  • ನಿಮ್ಮ ಸ್ಪೂರ್ತಿದಾಯಕ ಶಬ್ದಗಳಿಗೆ ನಮನಗಳು ಶ್ರೀವತ್ಸ ಅವರೇ. ನಿಮ್ಮಂತಹ ನಿಸ್ಸೀಮ ಬರಹಗಾರರ ಈ ಮಾತುಗಳು ನನ್ನನ್ನು ಬಹಳ ಹುರಿದುಂಬಿಸಿವೆ. 🙂

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.