ಈ ಪ್ರೇಮ ಸಂಭಾಷಣೆ – ಡಾ. ದಾಕ್ಷಾಯಿಣಿ ಗೌಡ

ಸನ್ಮಿತ್ರ ಓದುಗರೇ !!!!
ಈ ವಾರದ ಸಂಚಿಕೆಯಲ್ಲಿ ಒಂದು ವಿಶೇಷ ಪ್ರೇಮ ಪ್ರಸಂಗ ಕವನ ‘ ಈ ಪ್ರೇಮ ಸಂಭಾಷಣೆ ‘ಎಂಬ ಶೀರ್ಷಿಕೆಯಲ್ಲಿ ಡಾ।। ದಾಕ್ಷಾಯಿಣಿ ಗೌಡ ಅವರಿಂದ ಹಾಗು ಹಸಿರು ಉಸಿರು ಸರಣಿಯಲ್ಲಿ ವಿಜಯನರಸಿಂಹ ಅವರ ಗೃಹದೋಟದಲ್ಲಿ ಅರಳಿದ ಗುಲಾಬಿಯ ‘ಜೀವಕಳೆ’ ಎಂಬ ಶೀರ್ಷಿಕೆಯಲ್ಲಿ ಮಗದೊಂದು ಕವನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ನನ್ನ ಮದುವೆಯಾದ ಹೊಸತರಲ್ಲಿ, ನನ್ನ ಅತ್ತೆಯ ಮನೆಗೆ ಭೇಟಿಕೊಟ್ಟಾಗಲೆಲ್ಲ, ಅಜ್ಜ ಅಜ್ಜಿಯರ ಈ ಹೊಸಬಗೆಯ ಜಗಳವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಅವರ ಮೊಮ್ಮಕ್ಕಳಿಗೆ ಇದು ಹೊಸದಾಗಿರಲಿಲ್ಲ, ಹಾಗಾಗಿ ಅವರುಗಳು,
ಇವರಿಬ್ಬರ ಕಲಹವನ್ನ ಉದಾಸೀನ ಮಾಡುತ್ತಿದ್ದರು ಅಥವಾ ಮಾಡಿ ತಮಾಷೆ ಮಾಡಿ ನಗುತ್ತಿದ್ದರು.
ಅವರ ಗೇಲಿಗೆ ವಾಗಲೂ ಗುರಿಯಾಗುತ್ತಿದ್ದುದು ಅಜ್ಜನೇ ಹೊರತು ಅಜ್ಜಿಯಲ್ಲ. ನಾನು ಸದಾ ಅಜ್ಜನ ಪರವಹಿಸಿ, ಅಜ್ಜಿಯ ಸಿಡಿಮಿಡಿ ಸ್ವಭಾವನ್ನು ಖಂಡಿಸುತ್ತಿದ್ದೆ.

ಪ್ರೀತಿಗೆ ಹಲವು ಮುಖ. ಬಾರಿ ಬಾರಿಗೆ ” ಲವ್ ಯೂ” ಎಂದು ಮುತ್ತು ಕೊಡುವುದು ಪಾಶ್ಚಿಮಾತ್ಯರ ರೀತಿ. ಕುಂಟುಂಬದ ಮುಂದೆ ಸಹ ಪತ್ನಿ/ ಪತಿಯ ಬಗೆಗಿನ ಪ್ರೇಮವನ್ನು ವ್ಯಕ್ತಪಡಿಸಲು ಸಂಕೋಚಿಸುವುದು ನಮ್ಮ ಹಿರಿಯರ ಪೀಳಿಗೆಯ ಪರಿಯಾಗಿತ್ತು. ಅಜ್ಜ ಅಜ್ಜಿಯರ ಈ ವಿಚಿತ್ರ, ದಿನನಿತ್ಯದ ಕಲಹದ ಹಿಂದಿರುವ ಕಾಳಜಿ, ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಕೆಲ ವರ್ಷಗಳೇ ಬೇಕಾದವು. ಈ ಹೊಸ ರೀತಿಯ, ನಿಜಕ್ಕೂ ನಡೆಯುತ್ತಿದ್ದ ಈ ಪ್ರೇಮ ಸಂಭಾಷಣೆಯನ್ನು ನಿಮ್ಮೊಡನೆ ಇಂದು ಹಂಚಿಕೊಳ್ಳುತ್ತಿದ್ದೇನೆ.

💘 ಈ ಪ್ರೇಮ ಸಂಭಾಷಣೆ 💘

ನಮ್ಮ ಮದುವೆಯಾಗಿ ಅಯಿತು ಅರವತ್ತು ವರುಷ,
ಆರಾಮಕುರ್ಚಿ ತೂಗುತ್ತ, ನಗುತ್ತ ನುಡಿದ ವೃದ್ಧ ಪುರುಷ.
ಮೊಮ್ಮಕ್ಕಳು, ಮರಿಮಕ್ಕಳು, ಬದುಕೆಲ್ಲ ಹರುಷ,
ನಮಗಿನ್ನೇನು ಬೇಕು, ನಮ್ಮದಾಗಿರೆ ಆರೋಗ್ಯ, ಆಯುಷ್ಯ.

ವರ್ಷಗಳು ಉರುಳುತ್ತವೆ ತಂತಾನೆ, ಬೇಕಿಲ್ಲದಿದ್ದರೂ ಮುದುಕ,
ದಿನಾ ಸಂಜೆ ಅದ ಮತ್ತೆ, ಮತ್ತೆ ವದರುತ್ತೀಯ ಯಾಕ?
ಸುಕ್ಕುಗಟ್ಟಿದ, ಲಕ್ಷಣದ, ಬಿಳಿಮೊಗವ ತಿರುಗಿಸಿದಳಾಕೆ,
ತುಟಿಯಂಚಿನಲ್ಲಿ ಹುದುಗಿಸಿ ಕಿರುನಗೆಯ ಪುಳಕ.

ಬಿಳಿಧೋತರ ಕೊಡವಿ, ಊರುಗೋಲ ಅದುಮಿ ಎದ್ದು,
ಪೊಟ್ಟಣದಲ್ಲಿ ಕಟ್ಟಿದ್ದ ಬಿಸಿಬೋಂಡ ಮೆಲ್ಲಗೆ ಮೆದ್ದು.
ಅಜ್ಜನುಲಿದ, “ಹಿಡಿ, ಹಿಡಿ ಬಾಯಿಗೆ ಹಿತ, ನೀನೂ ತಗೋ ಸ್ವಲ್ಪ,
ಮರೆಯದೆ ಕುಡಿ ಹಾರ್ಲಿಕ್ಸನ್ನು, ನೀನು ತಿನ್ನುವುದು ಅಲ್ಪ.”

ಇದಕ್ಕಾಗಿ ಹೋದೆಯಾ ನೀನು ಸಂಜೆಯ ಸಂತೆಗೆ,
ವಾಹನಗಳ, ಎಳುಬೀಳುಗಳ ಭಯವಿಲ್ಲವೆ ನಿನಗೆ.
ನಿನ್ನ ಒಳಿತಿನ ಬಗೆಗೆ ಸದಾ ಚಿಂತೆ ನನಗೆ
ದೂಡುವೆ ಬಹುಬೇಗ ನನ್ನ ನೀ ಚಿತೆಗೆ.

ವಾರಕ್ಕೆರಡು ಬಾರಿಯಾದರೂ ನಡೆವ ಈ ಕದನ,
ರಾಜಿಯಾಗದ, ಮುಗಿಯದ ವಿಚಿತ್ರ ಕವನ.
ಅಜ್ಜ ಅಜ್ಜಿಯ ಜೀವನದ ಈ ಪ್ರಯಾಣ,
ಮೊಮ್ಮಕ್ಕಳಿಗಿದು ಮುಗಿಯದ ಪುರಾಣ.

ಆಳ ಅಂತ್ಯವಿಲ್ಲದ ಈ ಪ್ರೀತಿ,
ಕವಿ ಲೇಖನಿಗರಿವಿಲ್ಲಇದರ ರೀತಿ.
ಕಷ್ಟಸುಖದಲ್ಲಿ ಸಾಗಿ, ಮಾಗಿಬಂದ ಈ ಪ್ರೇಮ,
ಇದಕ್ಕಿಲ್ಲ ಹೋಲಿಕೆ, ಈ ಪ್ರೇಮ ಅನುಪಮ.

ಡಾ. ದಾಕ್ಷಾಯಿಣಿ ಗೌಡ

🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 🌹

ಜೀವ ಕಳೆ

ಮೈ ತುಂಬಿ ಅರಳಿವೆ ಇಲ್ಲಿ ಒಂದೊಂದು ಗುಲಾಬಿ

ಕಣ್ ತುಂಬಲು ನಡೆಸಿವೆ ಒಂದೊಂದು ದಳವೂ ಲಾಬಿ

ಮೊಗ್ಗಲಿ ಕಂಡರೂ ಕಾಣದ ಸಣ್ಣ ಹರಳುಗಳಂತೆ

ಮತ್ತೆ ಬೆರೆತ ಕೆಂಪು ಬಣ್ಣದೋಕುಳಿಯಂತೆ

ದಳಗಳು ಬಲಿತಂತೆ ಬಣ್ಣ ಬದಲಿಸುತ ಬೆಳೆವುದು

ಸುಂದರದ ಹಂದರವದು ಮನಸನು ಸೆಳೆವುದು

ಒಂದೇ ಗಿಡದಲಿ ಕಂಡಂತೆ ಸುಮ ವನವನು

ಸವಿದಿದೆ ಮನಸು  ಅಮೃತದ ಒಂದೊಂದು ಹನಿಯನು

ಬಣ್ಣಗಳ ಮೆರುಗು ನೋಡುವ ಕಣ್ಣು ಧನ್ಯವೋ

ಮೆರುಗನು ಸವಿದು ಮೈ ಮರೆವ ಮನಸು ಧನ್ಯವೋ

ಗಿಡಗಳು ಮಾತನಾಡವು ಎಂಬುದನು ಬಲ್ಲಿರಿ

ಹೂಗಳ ನಗುವಿಗೆ  ನಮ್ಮ ಕಣ್ಗಳು ಕಿವಯಾದವು ಅರಿಯಿರಿ

ಧನ್ಯವಾದಗಳನಿಲ್ಲಿ ಸಲ್ಲಿಸುವುದು ಹೇಳಿ ಯಾರಿಗೋ

ಮಾಲೀಕರಿಗೋ, ಮೇಲೆ ಮಣ್ಣಿಗೋ, ಒಳಗೆ ಬೇರಿಗೋ

ಜೀವ ಕಳೆಯಿಲ್ಲಿ ಎದುರಿಗಿದೆ, ಮರೆ ಮಾಚಿದೆ

ಮುಳ್ಳುಗಳ

ಅಂತೆಯೇ ನಮ್ಮ ಜೀವನವಿರಬೇಕು ಸುಖಿಸುತ

ಮರೆ ಮಾಚುತ ಕಹಿಗಳ

ವಿಜಯನರಸಿಂಹ

6 thoughts on “ಈ ಪ್ರೇಮ ಸಂಭಾಷಣೆ – ಡಾ. ದಾಕ್ಷಾಯಿಣಿ ಗೌಡ

  1. ದಾಕ್ಷಾಯಣಿ ಅವರ ಲೇಖನ ಈ ಸಂಭಾಷಣೆಯಲ್ಲಿ ನಮ್ಮ ಮನೆಗಳಲ್ಲಿ ಅಜ್ಜ-ಅಜ್ಜಿಯರ ನಡುವೆ ನಡೆಯುತ್ತಿದ್ದ ಪ್ರೇಮ ಕಲಹಗಳ ಉತ್ತಮವಾದ ವರ್ಣನೆಯಿದೆ. ಸುಖ ದಾಂಪತ್ಯದಲ್ಲಿ ಸರಸದ ಜೊತೆಗೆ ಕಲಹಗಳು ಇದ್ದರೆ ಅದಕ್ಕೊಂದು ಸ್ವಾರಸ್ಯ. ನನ್ನ ಅಜ್ಜ ಅಜ್ಜಿ ನಾವು ಮಕ್ಕಳಾಗಿದ್ದಾಗ ಸೊಪ್ಪು ತರಕಾರಿ ಬಗ್ಗೆ ಕೂಡ ಜಗಳವಾಡುತ್ತಿದ್ದ ಪ್ರಸಂಗಗಳಿದ್ದವು. ಅಜ್ಜಿಯ ಸಿನಿಮಾ ಹುಚ್ಚಿಗೆ ಅಜ್ಜ ದುಡ್ಡು ಕೊಡದೆ ಸತಾಯಿಸುತ್ತಿದ್ದಾಗ ನಾವೆಲ್ಲ ನಗುತ್ತಿದ್ದ ನೆನಪಾಯಿತು. ಆದರೆ ಈಗ ಅದನ್ನು ನೆನಪಿಸಿಕೊಂಡಾಗ, ಆ ಜಗಳಗಳ ಹಿಂದೆ ಪ್ರೇಮವೂ ಇರುತ್ತಿತ್ತು. ಕಡೆಗೆ ಅಜ್ಜ ಅಜ್ಜಿಯನ್ನು ಸಿನಿಮಕ್ಕಂತೂ ಕರೆದೊಯ್ಯುತ್ತಿದ್ದರು. ಅಜ್ಜಿ ರೇಷ್ಮೆ ಸೀರೆಯುಟ್ಟು ಸಂಭ್ರಮದಿಂದ ಶಿಸ್ತಾಗಿ ಅವರ ಜೊತೆ ಹೋಗುತ್ತಿದ್ದದ್ದು, ಅವರ ನಡುವಿನ ಪ್ರೇಮವನ್ನು ಎತ್ತಿ ತೋರುತ್ತಿತ್ತೇ ಹೊರತು, ಅವರ ನಡುವೆ ಇದ್ದ ವಿರಸವನ್ನಲ್ಲ. ವಿಜಯ ನರಸಿಂಹ ಅವರ ಜೀವಕಳೆಯಲ್ಲಿ ಗುಲಾಬಿ ಗಿಡದ ಸುಂದರತೆಗೆ ಧನ್ಯವಾದವನ್ನರ್ಪಿಸುವುದು ಯಾರಿಗೆ ಎನ್ನುವ ಸಾಲುಗಳಲ್ಲಿ ಬಹಳ ಬಹಳ ಗಂಭೀರವಾದ ವಿಷಯವಿದೆ. ಭಾರತದ ಕಾವ್ಯಗಳಲ್ಲಿ ಕಮಲಕ್ಕಿರುವ ಸ್ಥಾನ, ಆಂಗ್ಲ ಸಾಹಿತ್ಯದಲ್ಲಿ ಗುಲಾಬಿ ಪುಷ್ಪಕ್ಕಿದೆ. ಆದರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಗುಲಾಬಿಯ ಸೌಂಧರ್ಯವನ್ನು ಧಾರಾಳವಾಗಿ ಉಪಮಾನ ಉಪಮೇಯಗಳೊಡನೆ ಬಳಸುವುದು ಸರ್ವೇ ಸಾಮಾನ್ಯ. ಒಟ್ಟಿನಲ್ಲಿ ಎರಡು ಕವನಗಳೂ ಬಹಳ ಸೊಗಸಾಗಿ ಮೂಡಿ ಬಂದಿದೆ.
    ಉಮಾ ವೆಂಕಟೇಶ್

    Like

  2. ಪ್ರೇಮ ಸಲ್ಲಾಪಗಳ ಉಲ್ಲೇಖ ಕನ್ನಡ ಸಾಹಿತ್ಯದಲ್ಲಿ ಬಹಳ ಪುರಾತನವಾದದ್ದು. ನಾನು ಶಾಲೆಯಲ್ಲಿ ಮುದ್ದಣ ಮನೋರಮೆ ಸಲ್ಲಾಪ ಎಂಬ ಹಳೆಗನ್ನಡ ಪಾಠವನ್ನು ಓದಿದ್ದು ನೆನಪಿಗೆ ಬಂದಿದೆ. ಪ್ರೇಮಸಲ್ಲಾಪಕ್ಕೆ ವಯಸ್ಸಿನ ಕಟ್ಟಳೆಗಳಿಲ್ಲ ಎಂಬುದನ್ನು ದಾಕ್ಷಾಯಿಣಿ ನಮ್ಮ ನೆನಪಿಗೆ ತಂದಿದ್ದಾರೆ. ಪ್ರೇಮಸಲ್ಲಾಪದಲ್ಲೂ ಹಲವಾರು ಭಾವನೆ ಮತ್ತು ರಸಗಳಿವೆ ಅಲ್ಲಿ ತುಂಟತನದಿಂದ ಹಿಡಿದು ಹುಸಿಕೊಪ, ಗಂಭೀರ, ಗಹನ ಸಲ್ಲಾಪಗಳ ಸಾಧ್ಯತೆ ಇವೆ ಎಂಬುದನ್ನು ಈ ಕವಿತೆ ನೆನಪಿಸಿದೆ. “ಈ ಸಂಭಾಷಣೆ ಈ ಪ್ರೇಮ ಸಂಭಾಷಣೆ, ಅತಿ ನವ್ಯ ಮಧುರ ಮಧುರ…” ಎಂಬ ಸಿನಿಮಹಾಡು ಜ್ಞಾಪಕಕ್ಕೆ ಬಂದಿದೆ.
    ವಿಜಯ್ ಅವರ ಹೂವಿನ ಬಗ್ಗೆ ಬರೆದ ಕವನದಲ್ಲಿ ಅಭಿನಂದನೆ ಯಾರಿಗೆ? ಹೂವಿಗೊ? ನೆಲಕ್ಕೊ? ಬೆರಿಗೋ? ನೀರು ಉಣಿಸದವಿರಿಗೋ? ಎಂಬ ಹಲವಾರು ನಿಗೂಢವಾದ ಅರ್ಥಗರ್ಭಿತವಾದ ಸನ್ನಿವೇಶವನ್ನು ಹುಟ್ಟುಹಾಕಿದ್ದು ಅದು ನನಗೆ ಇಷ್ಟವಾದ ಸಾಲುಗಳು.

    Like

  3. Very beautifully written Dakshayani avare. This is the case at my in-laws place. They both are quite like this. I had the same feeling during initial days but now I join their children in making fun of them.
    ತಾಸು ದಿನಗಟ್ಟಲೆ ಹೂಹರಿದು
    ಮಡದಿಯ ಕೈಗೆ ಸುರಿದು
    ದೇವರ ಮುಡಿ ಏರಲು
    ಮುಗುಳ್ನಗೆ ಬಿರಿದು
    ಅವಳ ಮಾತು ಕಿವಿಗೆ ಬೀಳದಿರಲು
    ಏನೇ ಅಂದರು ಕಿರು ನಗೆಯ ಹರಿಸಲು
    ಅವಳಿಲ್ಲದೆ ಒಂದೂ ಹೆಜ್ಜೆಯ ನಿಡಲು
    ಸಾವಕಾಶವೊ ಸದಾವಕಾಶವೋ
    ಇಬ್ಬರು ಒಬ್ಬರನೊಬ್ಬರು ಜೊತೆಯಾಗಲು
    ಮಾತೆ ಆಡದ ಅವರ ಮಾತೆ ಮಾತೆಯ ಜೋಗುಳ
    ಹಾಡುತ ಪಾಡುತ ಕಿರುನಗೆಯ ಹರಡುತ ಇಬ್ಬರು
    ನೂರು ಕಾಲ ಜೊತೆಯಾಗಿರಿ ಎಂದಿಗೂ ಎಂದೆಂದಿಗೂ

    Just few days ago it was their wedding anniversary I wrote few lines for them.

    Vijaya Narasimha’s colour lines beautifully compliments the picture.

    Like

  4. “ಜೀವ ಕಳೆಯನ್ನು ತೋರಿಸುವ, ಮುಳ್ಳುಗಳ ಮರೆಮಾಚುವ “ ವರ್ಣನೆ ಎರಡೂ ಬರಹಗಳಲ್ಲಿವೆ, ಈ ದಿನ. ದಾಕ್ಷಾಯಿಣಿಯವರ ಅಜ್ಜ ಅಜ್ಜಿಯರು ಜಗಳ್ಳಾಡಿದರೂ ಒಳಗೆ ಇರುವದು ಪ್ರೀತಿಯೇ ಅಲ್ಲವೆ? ಪ್ರೀತಿಯಿದ್ದಲ್ಲೆ ಜಗಳ, ಮುನಿಸು ಎಲ್ಲ. ಅದು ಎಲ್ಲರಿಗೂ ಗೊತ್ತೆಂದೇ ತಮಾಷೆ ಮಾಡುತ್ತಿದ್ದರು ಅಂತೆ ಕಾಣುತ್ತದೆ.ಅವರ ವರ್ತನೆ ಒಂದು ರೀತಿಯಲ್ಲಿ ‘ಆಯ್ ಲವ್ ಯೂ‘ ನೇ. ಒಂದು ತರದಲ್ಲಿ ‘wearing their heart on their sleeve in public’!
    ವಿಜಯ ನರಸಿಂಹ ಅಂಥ ರಸಿಕ ಕವಿಗಳಿಗೇ ಮುಳ್ಳುಗಳ ಮರೆಮಾಚುವ ಮಾತಾಡದ ಗಿಡಗಳ ಕಿಲ ಕಿಲ ನಗು ಕೇಳುತ್ತದೆ, ಎಂದು ತೋರಿಸಿಕೊಟ್ಟಿದ್ದಾರೆ.
    ಭಿನ್ನ ಭಿನ್ನವಾಗಿ ಕಂಡರೂ ಎರಡೂ ಬರಹಗಳಲ್ಲೂ ಸೌಂದರ್ಯವಿದೆ, ಪ್ರೀತಿಯಿದೆ, ಸುಖವಿದೆ!

    Like

  5. ಪ್ರಕೃತಿಯಲ್ಲಿ ಒಳ್ಳೆಯದನ್ನು ಮಾತ್ರ ನೋಡಬೇಕಂಬ ಕಲೆಯನ್ನು ಮತ್ತೊಮ್ಮೆ ನೆನಪಿಸುತ್ತಿದೆ ಈ ಸುಂದರ
    ಗುಲಾಬಿ ಗಿಡ ಮತ್ತು ಕವನ

    Like

    • ತುಂಬ ಸೊಗಸಾಗಿ ಮೂಡಿಬಂದಿದೆ ದಾಂಪತ್ಯದ ತಿಳಿರು. ಹೌದು; ಕೂಡು ಕುಟುಂಬದಲ್ಲಿ ಬೆಳೆದ ನಾನು ಇದನ್ನೆಲ್ಲ ನೋಡುತ್ತಲೇ ಬಂದಿದ್ದೇನೆ ಅಜ್ಜ-ಅಜ್ಜಿ, ಮಾಮಾ-ಮಾಮಿ,ಅತ್ತೆ-ಮಾವ ಇವರೆಲ್ಲರ ನಡುವಿನ ಇಂಥ ಕೋಳಿಜಗಳಗಳ ಹಿಂದಿರುವ ಭಾವ ಒಂದೇ..ಪರಸ್ಪರ ಪ್ರೀತಿ ಹಾಗೂ ಕಾಳಜಿಗಳು. ಹಿರಿಯರ ಚಿತ್ರಣವನ್ನು ತುಂಬ ಸೊಗಸಾಗಿ ಕವನದಲ್ಲಿ ಕಟ್ಟಿಕೊಟ್ಟಿದ್ಧೀರಿ ದಾಕ್ಷಾಯಿಣಿ ಅವರೇ.
      ಗುಲಾಬಿಯ ವಣ೯ನೆ ಸುಂದರವಾಗಿದೆ. ಮಾತನಾಡದ ಗಿಡಗಳ ನಗುವೇ ಈ ಹೂಗಳೆಂಬ ನಿಮ್ಮ ಮಾತು ತುಂಬ ಸತ್ಯ. ಆಹ್ಲಾದಕಾರಿ ಕವನ-ನೋಟ.
      ಗೌರಿಪ್ರಸನ್ನ.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.