ಲಂಡನ್ನಿನಲ್ಲಿ ವಟ ಸಾವಿತ್ರಿ -ಗೌರಿ ಪ್ರಸನ್ನ

ನೆಚ್ಚಿನ ಓದುಗರೇ !! ಜೇಷ್ಠ ಮಾಸದ ಕಾರುಹುಣ್ಣಿಮೆಯಂದು ಉತ್ತರ ಕರುನಾಡಲ್ಲಿ ಮುತ್ತೈದೆಯರೆಲ್ಲರೂ ವಿಜೃಂಭಣೆಯಿಂದ ಆಚರಿಸುವ ವಿಶೇಷ ಹಬ್ಬ ‘ವಟ ಸಾವಿತ್ರಿ’.
ಕಳೆದ ವಾರ ೨೪ನೇ ಜೂನ್ ರಂದು ನಮ್ಮ ಅನಿವಾಸಿ ಸದಸ್ಯೆಯಾದ ಗೌರಿ ಪ್ರಸನ್ನ ಅವರು ತಮ್ಮ ಸ್ವಗೃಹದಲ್ಲಿ ವಟ ಸಾವಿತ್ರಿ ಹಬ್ಬವನ್ನು ಆಚರಿಸಿ ಮಾಹಿತಿಗಳೊಂದಿಗೆ ‘ಲಂಡನಿನ್ನಲಿ ವಟ ಸಾವಿತ್ರಿ’ ಎಂಬ ಶೀರ್ಷಿಕೆಯ ಲೇಖನವನ್ನು ಹಾಗು ‘ಹಸಿರು ಉಸಿರು’ ಸರಣಿಯಲ್ಲಿ ಬೇಸಿಂಗ್ ಸ್ಟೋಕ್ ನ ರಾಮಮೂರ್ತಿಯವರು ತಮ್ಮ ಗೃಹದೋಟದ ಚಿತ್ರಗಳೊಂದಿಗೆ ‘ತೋಟಗಾರಿಕೆ ‘ ಶೀರ್ಷಿಕೆಯ ಒಂದು ಸಂಕ್ಷಿಪ್ತ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ ! ಸವಿ.ಸಂ

ಲಂಡನ್ನಿನಲ್ಲಿ ವಟಸಾವಿತ್ರಿ

ಸತ್ಯವಾನ್ ಸಾವಿತ್ರಿಯ ಕಥೆ ಕೇಳಿರದ ಭಾರತೀಯನೇ ಇರಲಿಕ್ಕಿಲ್ಲ. ಮಹಾಭಾರತದ ಆರಣ್ಯಕ ಪವ೯ದಲ್ಲಿ ಉಲ್ಲೇಖಿತವಾದ
ಕಥೆಯಿದು. ಮದ್ರ ದೇಶದ ರಾಜಕುಮಾರಿ..ಪ್ರಾಪ್ತ ವಯಸ್ಕಳಾದಾಗ ತಂದೆಯ ಅಪ್ಪಣೆಯೊಂದಿಗೆ ತನ್ನ ವರನನ್ನು ತಾನೇ
ಹುಡುಕಿಕೊಳ್ಳಲು ಹೊರಡುವ ಸಾವಿತ್ರಿ ತನ್ನ ದಿಟ್ಟತನ, ಸ್ವತಂತ್ರ ನಿಲುವುಗಳಿಗಾಗಿ ವೈಯುಕ್ತಿಕವಾಗಿ ನನಗೆ ಬಹಳ
ಇಷ್ಟವಾಗಿಬಿಟ್ಟಿದ್ದಳು ಸಣ್ಣಂದಿನಲ್ಲಿ..ಯಾರೂ ಹೆದರಿ ನಡಗುವ ಯಮರಾಯನ ಜೊತೆಯಲ್ಲೇ ಹೆಜ್ಜೆ ಹಾಕಿ ‘ ಏಳು ಹೆಜ್ಜೆ ಜೊತೆ
ನಡೆದರೆ ಸ್ನೇಹಿತರಾಗಿಬಿಡುತ್ತಾರೆಂದು ಹೇಳಿ ನಿಯಮಗಳ ಕಟ್ಟಾಪಾಲನಧಾರಿ ಯಮನನ್ನೇ ತಬ್ಬಿಬ್ಬು ಮಾಡಿಸಿ ವರ ಪಡೆದು ‘ ಹೋದ
ಜೀವ ಮರಳಿ ಬಾರದು’ ಎಂಬ ಮಾತನ್ನೇ ಸುಳ್ಳು ಮಾಡಿದ ಅಪ್ಪಟ ಛಲಗಾತಿ. ಬಹುಶ: ಅದಕ್ಕಂದೇ ಹಿರಿಯರು ವಿವಾಹಿತ ಸ್ತ್ರೀಯರಿಗೆ ‘
ಮುತ್ತೈದೆ ಸಾವಿತ್ರಿಯಾಗು’ ಎಂದು ಹರಸುತ್ತಿದ್ದರೇನೋ?!

ಚಿತ್ರ ಕೃಪೆ: ಗೌರಿ ಪ್ರಸನ್ನ

ವಟಸಾವಿತ್ರಿ ವ್ರತಾಚರಣೆಯನ್ನು ಕಾರಹುಣ್ಣಿಮೆಯಂದು ಭಾರತದ ಬಹಳಷ್ಟು ಭಾಗಗಳಲ್ಲಿ ಬೇರೆ ಬೇರೆ ಪದ್ಧತಿಗಳ ಪ್ರಕಾರವಾಗಿ
ಆಚರಿಸಲಾಗುತ್ತದೆ.ನನಗೆ ಆ ಹಬ್ಬವೆಂದರೆ ಥಟ್ಟನೇ ನೆನಪಾಗುವುದು ನೇರಳೆಹಣ್ಣು ಹಾಗೂ ಮಾವಿನಹಣ್ಣುಗಳು ಹಾಗೂ ನಮ್ಮ
ಬಲಕುಂದಿಯ ಹಳ್ಳದ ಹಣಮಪ್ಪನ ಗುಡಿಯ ಆ ಬೃಹತ್ ವಟವೃಕ್ಷ..ಅಲ್ಲಿನ ಹಾಗೂ ಮನೆಯಲ್ಲಿನ ವಟಸಾವಿತ್ರಿ ಪೂಜೆ,
ವ್ರತಕಥೆಗಳು..ಅಮ್ಮ, ಮಾಂಶಿ, ಮಾಮಿಯಂದಿರ ಹೊಸ ಸೀರೆಗಳ ಸರಭರ, ಕುಂಕುಮ-ಹೂ-ಉಡಿಗಳ ಸಂಭ್ರಮ, ಒಗಟು ಹಾಕಿ ಗಂಡನ
ಹೆಸರು ಹೇಳುವಾಗಿನ ಅವರ ಮೊಗದಲ್ಲಿ ತುಳುಕುವ ಸಂತಸ-ನಾಚಿಕೆಗಳು, ಮಾತು, ನಗು, ಹರಟೆಗಳು…ಒಟ್ಟಿನಲ್ಲಿ ಮುದಗೊಳಿಸುವ
ಹಿತವಾದ ವಾತಾವರಣ.ಮಧ್ಯಾಹ್ನ ಸೀಕರಣೆ ಪೂರಿಯೋ, ಹೋಳಿಗೆ ಪಾಯಸವೋ ಇರಲೇಬೇಕು ಊಟಕ್ಕೆ. ಅದಕ್ಕೆಂದೇ ಈಗಲೂ
ಹಬ್ಬಗಳೆಂದರೆ ನನಗೆ ಪ್ರೀತಿ..ಯಾವ ತಕಾ೯ತಕ೯ದ ಪ್ರಶ್ನೆಗೂ ಆಸ್ಪದ ನೀಡಹೋಗುವುದಿಲ್ಲ ನಾನು.
೮- ೧೦ ದಿನಗಳ ಮುಂಚಿನಿಂದಲೂ ಫೋನ್ ಮಾಡಿದಾಗೊಮ್ಮೆ ಅಮ್ಮ ನೆನಪು ಮಾಡುತ್ತಿರುತ್ತಾಳೆ..’ ಸಾವಿತ್ರಿ ಫೋಟೊ ಇಲ್ಲಿಂದ
ಒಯ್ದಿದ್ದೀಯಲಾ ಅದು ಅದನೋ ಇಲ್ಲೋ? ಏನ ಭಾಳಿಲ್ಲಾ..ಹರಸಿ ಎಣ್ಣಿ ಹಚಗೊಂಡು ಎರಕೊಂಡು ( ಅಶ್ವತ್ಥಾಮೋ
ಬಲೀರ್ವ್ಯಾಸೋ..ಅಂತ ಚಿರಂಜೀವಿಗಳನ್ನ ನೆನಸಕೋತನೇ ಎಣ್ಣಿ ಹಚ್ಚೂದು ಅಕೀನ ಪದ್ಧತಿ) ತುಪ್ಪದ ದೀಪಾ ಹಚ್ಚಿಟ್ಟು,
ನೀರಲ್ಹಣ್ಣು ಉಡಿ ತುಂಬಿ , ಮಾವಿನಹಣ್ಣೋ, ಹಾಲುಸಕ್ರಿನೋ ನೈವೇದ್ಯ ತೋರಿಸಿದ್ರಾಯ್ತು’ ಅಂತ ಹೇಳತನೇ ಇರತಾಳ. (‘ನಾವು
ನಮಸ್ಕಾರ ಮಾಡಿದ್ರ ‘ಮುತ್ತೈದೆ ಸಾವಿತ್ರಿಯಾಗು..ಅಖಂಡ ಸೌಭಾಗ್ಯವತಿ ಭವ ಅಂತ ನಮ್ಮ ಗಂಡಂದಿರಿಗೆ ದೀಘಾ೯ಯುಷ್ಯದ
ಆಶೀವಾ೯ದ ಮಾಡತೀರಲಾ..ಅನ್ನುವಂಥ ನನ್ನ ಸ್ತ್ರೀವಾದಿ ಮಾತುಗಳನ್ನ ಅವಳು ಹಿಂದೆ ಬಹಳ ಸಲ ನನ್ನ ಬಾಯಿಂದ
ಕೇಳಿದ್ದಾಳಾದ್ದರಿಂದ ಮಗಳು ಇದನ್ನೆಲ್ಲ ಮಾಡೀಯಾಳೇ ಅನ್ನುವ ಸಂಶಯ ಸದಾ ಅವಳಿಗೆ)

ಚಿತ್ರ ಕೃಪೆ: ಗೌರಿ ಪ್ರಸನ್ನ

ಅಂತೂ ಕಾರಹುಣ್ಣಿಮಿ..ಸತ್ಯನಾರಾಯಣ ಹಾಗೂ ವಟಸಾವಿತ್ರಿ ಪೂಜಾ ಸಂಪನ್ನವಾಯಿತು ಕಳೆದ ವಾರ.(ನೀರಲ ಹಣ್ಣಿನ ಬದಲು
‘ಅಕ್ಷತಾನ್ ಸಮಪ೯ಯಾಮಿ’.)
ಈ ದೇವರ ಕೆಲಸಾ ಏನ ಥೋಡೆ ತುಸು ಇರಂಗಿಲ್ರೀ. ಉಪಕಾರಣಿ ತೊಳಿ,ಎಣ್ಣಿ ನಂದಾದೀಪಕ್ಕ ಎಳಿ ಬತ್ತಿ ಪೋಣಸು, lಹೂ ಬತ್ತಿ,
ಮಂಗಳಾರತಿ ಬತ್ತಿ ತೋಯಿಸಿಡು(ಅದೂ ಗ್ಯಾಸ್ ತೊಳಕೊಂಡು ಛಲೋ ಕೈಲೇ ಬೆಣ್ಣಿ ಕಾಸಿ ತುಪ್ಪ ಮಾಡಿ), ಗೆಜ್ಜಿವಸ್ತ್ರಕ್ಕ ೧೮ , ೨೧
ಅಂತೆಲ್ಲ ಎಣಿಸಿಕೊಂಡು ಕೆಂಪು ಹಚ್ಚಬೇಕು,(ನಾಗಪ್ಪನಂಥ ಬ್ರಹ್ಮಚಾರಿ ದೇವರಿದ್ರ ಹಳದಿ ಹಚ್ಚಬೇಕ್ರಿ)
ಪಂಚಪಾಳದಾಗ ಅರಿಶಿಣ -ಕುಂಕುಮ-ಅಕ್ಷತಿ ಬೆಳಿಲಾರದ್ಹಂಗ ಆಗಾಗ ನೋಡಕೋತ, ತುಂಬಕೋತ ಇರಬೇಕ್ರಿ..ತೀಥ೯ಕ್ಕ ಪಚಕಪ೯ರ
ಅದನೋ ಇಲ್ಲೋ, ಊದಿನಕಡ್ಡಿ, ಧೂಪ, ಗಂಧ ಸ್ಟಾಕ್ ಇಟ್ಟಿರಬೇಕು. ದೇವಿಯರಿಗೆ ಉಡಿ ತುಂಬಲಿಕ್ಕೆ ಅಡಕಿ ಬೆಟ್ಟ, ಉತ್ತತ್ತಿ,
ಅರಿಶಿನ ಕೊಂಬು, ನಾಣ್ಯ ಗಳನ್ನ ತಕ್ಕೊಂಡ ಇಟಗೊಂಡಿರಬೇಕು..ಗಣಪ್ಪ , ನಾಗಪ್ಪ , ಕೃಷ್ಣ ..ಇತ್ಯಾದಿ ದೇವರುಗಳಿಗೆ ಆಯಾ ರೀತಿ
ಒಂಟೆಳಿ, ಜೋಡೆಳಿ ಜನಿವಾರ ಅವನ ಇಲ್ಲೋ ನೋಡಕೋಬೇಕ್ರಿ. ಮತ್ತ ಶುಕ್ರವಾರಕ್ಕ ಪುಠಾಣಿ ಸಕ್ರಿ, ಗುರುವಾರಕ್ಕ ಹಣ್ಣುಕಾಯಿ,
ರವಿವಾರಕ್ಕ ಸುದಾಮನ ಅವಲಕ್ಕಿ ಹೀಂಗ ಒಣಪ್ರಸಾದ..ಹಬ್ಬ ಹರಿದಿನಕ್ಕ ನಾಗಪ್ಪಗ ತಂಬಿಟ್ಟು, ಗಣಪ್ಪಗ ಕರಿಗಡಬು,
ವರಮಹಾಲಕ್ಷ್ಮಿಗೆ ಹೋಳಗಿ, ಹಣಮಪ್ಪಗ ಗೋದಿಕುಟ್ಟಿದ ಪಾಯಸ, ಶ್ರಾವಣ ಶನಿವಾರ ಗೌರಿಗೆ ಭಕ್ರಿ, ನುಚ್ಚು…ಹೀಂಗ ಈ ಪೂಜಾ
ಸಿಲ್ಯಾಬಸ್ ನೆನಪಿಟ್ಟುಕೊಳ್ಳೂದು ಭಾಳ ಕಠಿಣ ಬಿಡ್ರಿ. ಇನ್ನ ಒಬ್ಬರಿಗೆ ತುಳಸಿ, ಒಬ್ಬರಿಗೆ ಬಿಲ್ಪತ್ರಿ, ಮತ್ತೊಬ್ಬರಿಗೆ ಕ್ಯಾದಗಿ,
ಮುಗದೊಬ್ಬರಿಗೆ ಕರಕಿ , ಒಬ್ಬರಿಗೆ ಕೆಂಪು ಹೂ, ಇನ್ನೊಬ್ಬರಿಗೆ ಬಿಳಿ ಹೂ , ಮತ್ತೊಬ್ಬರಿಗೆ ಹಳದಿ ಹೂ ..ಹೀಂಗ ಇದರಾಗೂ ಕೆಟಗರಿ
ಬ್ಯಾರೆ ಬ್ಯಾರೆ.

ದೇಶ ಬಿಟ್ಟು ಪರದೇಶದಾಗಿರೂ ನಮ್ಮಂಥಾ ಪರದೇಸಿ ಪಾಡಂತೂ ಯಾರಿಗೂ ಬ್ಯಾಡ್ರಿ..ದೀಪ ಹಚ್ಚಿದ್ರ ಫೈರ್ ಅಲಾರಂ
ಹೊಡಕೋತದ್ರಿ..ಊದಿನಕಡ್ಡಿ ಹಚ್ಚಿದ್ರ ಎಲ್ಲೆ ಅದರ ಕಿಡಿ ಕೆಳಗ ಕಾಪೆ೯ಟ್ ಮ್ಯಾಲ ಬೀಳತದೋ ಅಂತ ದೇವರಕಿಂತ ಅದರದೇ ಧ್ಯಾನ
ಭಾಳ ಆಗತದ. ಕಾಯಿ ಒಡದ್ರ, ಘಂಟಿ- ಜಾಗಟಿ ಬಾರಿಸಿದ್ರ ಎಲ್ಲೆ ಬಾಜೂ ಮನಿಯವರು ತಮ್ಮ ಶಾಂತಿಗೆ ಭಂಗ ಬಂತು ಅಂತ
ಕಂಪ್ಲೇಂಟ್ ಕೊಡತಾರೋ ಅಂತ ಅಂಜಿಕಿ. ಎಲ್ಲೆ ಯಾವ ಕಿಡಿ ಸಿಡದು ನಮ್ಮ ‘ಅರಗಿನ ಮನಿ’ ಹೊತ್ತಿ ಉರದೀತೋ ಅನ್ನೋ ಹೆದ್ರಿಕಿ..
ಇನ್ನ ಮನ್ಯಾಗ ಹುಡುಗೂರಿದ್ರ ಅವರ ನಾನಾ ನಮೂನಿ ಪ್ರಶ್ನೆಗಳು ಬ್ಯಾರೇರಿ.. ‘ಯಾವಾಗಲೂ ಪಾಪ ಆ ದೇವರಿಗೆ ಬೆಂಡಿಕಾಯಿ
ಕಾರೇಸಾ, ಬಟಾಟಿ ಇಲ್ಲಾ ಸೌತಿಕಾಯಿ ಪಲ್ಯಾನೇ ಯಾಕ ಮಾಡತೀ? ಪಾಲಕ ಪನೀರ್ , ಗೋಬಿ ಮಂಚೂರಿ ಯಾಕ
ಮಾಡೂದಿಲ್ಲಾ?’..’ ಎಡಗೈಲೇ ಯಾಕ ಪ್ರಸಾದ ತಗೋಬಾರದು?’.. ‘ ಪ್ರೀತೀಲೇ ಕೊಟ್ಟ್ರ ಏನ ಬೇಕಾದರೂ ತಗೋತೀನಿ ಅಂತ ಕೃಷ್ಣ
ನೇ ಹೇಳ್ಯಾನಲಾ?'( ಸ್ಟಾರ್ ಪ್ಲಸ್ ನ ಮಹಾಭಾರತ , ರಾಧಾಕೃಷ್ಣ ಎಲ್ಲ ನೋಡಿದ್ದರ ಪ್ರಭಾವ) ಹೀಂಗ ಬಗಿಹರೀದ ಅವರ
ಪ್ರಶ್ನೆಗಳಿಗೆಲ್ಲ ಸಮಪ೯ಕ ಉತ್ತರಾ ಕೊಟ್ಟು ಕನ್ವಿನ್ಸ್ ಮಾಡಲಾಗದ ಕೆಲವೊಮ್ಮೆ ಖುದ್ದೂ ಕನ್ವಿನ್ಸ್ ಆಗದಽ..ಇತ್ತ ನಮ್ಮ ಅಮ್ಮ ಅಜ್ಜಿಯರಂತೆ ಆಳ, ಅಲ್ಲಾಡದ ನಂಬಿಗಿನೂ ಇರದೇ ಅತ್ತ ನಮ್ಮ ಮಕ್ಕಳಂತೆನೂ ಯೋಚಿಸಲಾಗದೇ ಅಡ್ಡಗ್ವಾಡಿ ಮ್ಯಾಲ ಕೂತೀವಿ
ಅನಸತದ.
ಆದ್ರೂ ಇಷ್ಟ ಮಾತ್ರ ಖರೇ..ಇಂಥ ಆಚರಣೆಗಳನ್ನೆಲ್ಲ ಮಾಡಕೋತಿದ್ರ ಒಂಥರಾ ಸಮಾಧಾನ..ಬೇರಿನೊಂದಿಗೇ
ಇದ್ದೇನೆ..ಕಳಚಿಹೋಗಿಲ್ಲ ಅನ್ನಿಸುವ ಸುಭದ್ರ ಭಾವ.

-ಗೌರಿ ಪ್ರಸನ್ನ

❈ ❈ ❈ ❈ ❈ ❈ ❈ ❈ ❈ ❈ ❈ ❈ ❈ ❈ ❈ ❈

ತೋಟಗಾರಿಕೆ

ನಮ್ಮ ತೋಟಕ್ಕೆ ನನ್ನ ಸ್ವತಃ “Intellectual input ” ಇಲ್ಲ ಅಂದರೆ ಏನೂ ತಪ್ಪಿಲ್ಲ  , ಹಾಗಿದ್ದರೆ ನನ್ನ
contribution ಏನು ಅನ್ನುವ ಪ್ರಶ್ನೆ ಬರುತ್ತೆ ಅಲ್ಲವೇ ?
ನೀವು ಮಾಲಿ ಅನ್ನುವ ಪದ ಕೇಳಿದ್ದೀರಾ ?  ಮಾಲಿ ಕೆಲಸ, ಗಿಡಕ್ಕೆ ನೀರುಹಾಕುವುದು , weeding
ಮತ್ತು cutting ಲಾನ್ ಇಂತದ್ದು, ಯಾವ ಗಿಡ ತರಬೇಕು ಮತ್ತು ಎಲ್ಲಿ ಹಾಕಬೇಕು ಮುಂತಾದ 
management decisions ಮಾಲಿದಲ್ಲ, ಇದೆಲ್ಲಾ  ಮನೆ ಯಜಮಾನಿಯ ಜವಾದ್ದಾರಿ. 

ಚಿತ್ರ ಕೃಪೆ: ರಾಮಮೂರ್ತಿ


ಆದರೆ ತೋಟಗಾರಿಕೆ ಒಂದು ತರಹದ therapeutic, ಎರಡು ತಾಸು ಇಲ್ಲಿ ಕಳೆದರೆ ಬ್ರೌನಿ ಪಾಯಿಂಟ್ಸ್
ಸಿಗೋದು ಅಲ್ಲದೆ ಮನಸ್ಸಿಗೆ ಒಂದು ಸಮಾಧಾನ ಮತ್ತು ಸಂತೋಷ. 
ನಾನು ಸ್ವಲ್ಪ exaggerate ಮಾಡಿರಬಹುದು, ತೋಟದ ಕೆಲಸಗಳು ಟೀಮ್ ವರ್ಕ್, ಈ ವರ್ಷ
ಸಸಿಗಳನ್ನು ಹಾಕುವುದು ತಡ ವಾಯಿತು . ಏಪ್ರಿಲ್ ಪೂರ್ತಿ frost ಇದರಿಂದ ಮೇ ತಿಂಗಳಿಂದ ಕೆಲಸ
ಶುರುವಾಯಿತು. ಬಾಳೆ ಗಿಡಗಳು ಸುಮಾರು ಆರು- ಏಳು ಅಡಿ ಎತ್ತರ ಬೆಳದು ಮಂಜು ಬಿದ್ದು
ನೆಲಸಮ ಆಗಿತ್ತು. ಸದ್ಯ !!! ಪುನಃ ಚಿಗುರುತ್ತಾ ಇದೆ .
ಗುಲಾಬಿ ಮತ್ತು peony ಬಹಳ ಚೆನ್ನಾಗಿ ಬಿಟ್ಟಿದೆ.

ಚಿತ್ರ ಕೃಪೆ: ರಾಮಮೂರ್ತಿ


ನಮ್ಮ ಕೆಲವು ಸ್ನೇಹಿತರಿಗೆ ತಿಳಿದಂತೆ, ಬೇಸಿಗೆಯಲ್ಲಿ  ಬೆಳೆಯುವ ತರಕಾರಿ
ನಮಗೆ ಸಾಕು, ದೇಸಾಯಿ ಅವರು  spinach ಬೆಳದಷ್ಟು ಇಲ್ಲ ಆದರೆ ಬೇರೆ
ಬೇರೆ ಸೊಪ್ಪು, ಮೆಣಸಿನ ಕಾಯಿ, ಬದನೇಕಾಯಿ,  ಸೌತೆಕಾಯಿ, ಕೋಲ್
ರಾಬಿ, ಬಟಾಣಿ ಮತ್ತು ಹುರಳಿಕಾಯಿ ಮುಂತಾದವು ಸಾಕಷ್ಷ್ಟು ಹೂವು ತರಕಾರಿ ಸಿಗತ್ತೆದೆ. 

ರಾಮಮೂರ್ತಿ 
ಬೇಸಿಂಗ್ ಸ್ಟೋಕ್

10 thoughts on “ಲಂಡನ್ನಿನಲ್ಲಿ ವಟ ಸಾವಿತ್ರಿ -ಗೌರಿ ಪ್ರಸನ್ನ

  1. ಆತ್ಮೀಯ ಗೌರಿ ಅವರೇ!!!! ನಿಮ್ಮ ಈ ಧಾರವಾಡ ಆಡುಭಾಷೆಯ ಶೈಲಿಯ ಲೇಖನ ಬಿಜಾಪುರದಲ್ಲಿ ನನ್ನ ಬಾಲ್ಯದ ಸುವರ್ಣಾಕ್ಷಣಗಳು ಹಾಗೆ ಕಣ್ಣು ಮುಂದೆ ಬಂದವು. ಸೂಕ್ತ ಸಮಯದಲ್ಲಿ ಈ ‘ವಟ ಸಾವಿತ್ರಿ’ ಆಚರಣೆಯ ವೈಚಾರಿಕ ಲೇಖನ ಕಳುಹಿಸಿದಕ್ಕಾಗಿ ಸಂಪಾದಕಿಯ ಹೃತ್ಪೂರ್ವಕ ಧನ್ಯವಾದಗಳು!!!!

    ರಾಮಮೂರ್ತಿ ಯವರ ಲೇಖನದಲ್ಲಿ ‘ Gardening-A stress buster ‘ ಎಂಬ ಮುಖ್ಯಾಂಶವನ್ನು ಮನದಟ್ಟಾಗಿಸಿದ್ದಾರೆ.
    -ಸವಿ.ಸಂ

    Like

  2. ಗೌರಿ ಅವರೆ ಧಾರವಾಡದ ಆಡುಮಾತಿನ ಬರಹ ಎದುತಿಗೆ ಕೂತು ಕತೆ ಹೇಳಿದಂತಿದೆ. ಧಾರವಾಡದ ಕನ್ನಡ ಕೇಳುವುದೇ ಚಂದ‌. ಗೌರಿಯವರು ಮಾತಾಡಿದ್ದನ್ನು ರೇಡಿಯೋ‌ ಗಿರ್ಮಿಟ್ಟಿನಲ್ಲಿ ಕೇಳಿದ್ದರಿಂದ, ಓದುವಾಗಲೂ ಅವರದೇ ನಿಧಾನಗತಿಯ ಧಾಟಿಯಲ್ಲಿ ಓದಿಕೊಂಡು ಹೋಗಲು ಸುಲಭವಾಯಿತು.

    ರಾಮಮೂರ್ತಿಯವರು ರಾಮಮಾಲಿಗಳಾದ ಬರಹವು ಹಿಂದಿನ ಹಿತ್ತಲಿನ ತೋಟಗಳ ಬರಹಗಳ ಧಾರಾವಾಹಿಯಾಗಿದೆ. ಜೊತೆಗೆ ಸುಂದರ ಚಿತ್ರಗಳೂ.

    ಕೇಶವ

    Liked by 2 people

  3. ಧಾರವಾಡದ ಕನ್ನಡ ಅಷ್ಟು ಪರಿಚಯ ಇಲ್ಲದಿದ್ದರೂ ಗೌರಿ ಅವರ ಲೇಖನ ಬಹಳ ಚಲೋ ಇದೆ , ನಮಗೆ ಇಲ್ಲಿ ಗೊತ್ತಿರುವುದು ಮೂರೋ ಅಥವ ನಾಲ್ಕು ಹಬ್ಬಗಳು ಮತ್ತು ಮನೆಯಲ್ಲಿ ಆಚರಿಸುವುದು ಗಣೇಶನ ಹಬ್ಬ , ಇಲ್ಲಿ ಇಬ್ಬರು ಮೊಮ್ಮಕ್ಕಳು ಬಹಳ ಉತ್ಸಾಹದಿಂದ ಪಾಲುಗೊಳ್ಳುತ್ತಾರೆ. ಆದರೆ ವಟ ಸಾವಿತ್ರಿ ಬಗ್ಗೆ ಏನೋ ಗೊತ್ತಿರಲಿಲ್ಲ. You learn something every day

    ದೇಸಾಯ್ ಅವರೇ , ನಿಮ್ಮ ಕಂಮೆಂಟ್ಸ್ ಗೆ ವಂದನೆಗಳು, ಮಾಲಿ ಕೆಲಸ ಸುಲಭ decision making ಜವಾಬ್ದಾರಿ ಇಲ್ಲ , ಎರಡು statue ಗಳ ನಿರ್ಮಾಣ ನಮ್ಮ ಅಳಿಯನ ಕೆಲಸ,

    Like

    • ಧನ್ಯವಾದಗಳು ಸರ್. ಧಾರವಾಡ ಕನ್ನಡವನ್ನು ಕಷ್ಟ ಪಟ್ಟು ಅಥೈ೯ಸಿಕೊಂಡು ಓದಿ ಮೆಚ್ಚಿದ್ದಕ್ಕೆ. ನಿಮ್ಮ ತೋಟದ ಹಸಿರು ಸಿರಿ ಕಣ್ಮನ ತಣಿಸಿತು.’ತೋಟದಿಂದ ಸೀದಾ ತಾಟಿಗೆ’..ತಾಜಾ ತರಕಾರಿಗಳು.. ಕೈ ಕೆಸರಾದರೆ ಬಾಯಿ ಮೊಸರು ಗಾದೆ ನೆನಪಾಯಿತು. ತೋಟದ ನಳನಳಿಸುವಿಕೆಗೆ ‘ಮಾಲಿ’ಯೇ ಕಾರಣಕತ೯ನಲ್ಲವೇ? ತೋಟ,ಬರಹ ಎರಡೂ ಚೆನ್ನ.
      ಗೌರಿಪ್ರಸನ್ನ

      Like

  4. ಪರದೇಶದಾಗ ಬಂದು ಊರಿನ ನೆನಪು ತಾಜಾ ಇಡಲಿಕ್ಕೆ ಆಗಲಿ, ಮಕ್ಕಳಿಗೆ ನಮ್ಮ ಸಂಸ್ಕೃತಿ-ಸಂಸ್ಕಾರದ ಪರಿಚಯ ಇರಲಿ ಅಂತ ಅನಿವಾಸಿಗಳು ಪಡುವ ಕಷ್ಟ ಇಲ್ಲಿ ಬದುಕಿದವರಿಗೇ ಗೊತ್ತು. ಊರಿನಾಗ ಅವರು ನಾವು ಬಂಗಾರದ ಅರಮನ್ಯಾಗಿರ್ತೀವಿ ಅನ್ಕೊಂಡಿರಬೇಕು, ನಾವು ’ಅರಗಿನ ಅರಮನಿ’ನೇ ಸುಡುವ ಹೆದರಿಕೆಯ ನೈಜ ಪರಿಸ್ಥಿತಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಬದುಕೇ ಕ್ಷಣಿಕ ಅನ್ನುವ ಮನವರಿಕೆ ಇಲ್ಲೇ ಹೆಚ್ಚು ಆಗುತ್ತಿದ್ದಂತೆ ಮುದುಡಿಕೊಂಡು ಇರುವಾಗ ಬರೀ ಉಗಾದಿ, ದೀಪಾವಳಿ ಎರಡೇ ಆಚರಿಸಿ ಸಮಾಧಾನಪಟ್ಟುಕೊಳ್ಳುತ್ತಿರುವ ಜನರೇ ಅರ್ಧಕ್ಕಿಂತ ಹೆಚ್ಚು ಪಾಲಿನವರ ಅನುಭವ ಈ ದೇಶದಲ್ಲಿ ಅಂತ ನನ್ನ ಗ್ರಹಿಕೆ ಇರುವಾಗ ಗೌರಿ ಪ್ರಸನ್ನ ಅಂಥವರು ವಟ ಸಾವಿತ್ರಿ ಪೂಜೆ, ಹಬ್ಬವನ್ನು ಇಷ್ಟು ವಿಜೃಂಬಣೆಯಿಂದ ಮಾಡಿದ ವರ್ಣನೆ ಓದಿದಾಗ ಖುಶಿಯಾಯಿತಲ್ಲದೇ, ಅವರ ರೋಮ ರೋಮದಲ್ಲಿ ನರ ನಾಡಿಗಳಲ್ಲಿ ’ತಾಯಿ-ಓನಾಯ” ಹಾಕಿದ ಬುನಾದಿಯ ಅರಿವಾಯಿತು. ತಮ್ಮ ಅವಳಿ ಮಕ್ಕಳಿಂದ ಆಡಿಸಿ-ಮಾಡಿಸಿದ ಇತ್ತೀಚಿನ ಸ್ವಗತ-ನಾಟಕ-ಅಭಿನಯ ನೋಡಿ ಈ ಮೂರು ತಲೆಮಾರುಗಳಲ್ಲಿ ಆ ಸಂಪ್ರದಾಯ ಜೀವಂತವಿದೆ ಅಂತ ನೋಡಿ ಸಂತೋಷ-ಆಶ್ಚರ್ಯ-ಗೌರವ ಎಲ್ಲ ಉಂಟಾಯಿತು ನನಗೆ ಅಂದರೆ ಅತಿಶಯೋಕ್ತಿಯಲ್ಲ. ಅದನ್ನು ಊರಿಂದಲೇ ರಾಘವೇಂದ್ರ ಭಟ್ಟರೂ ಗಮನಿಸಿದ್ದು ಅವರ ಕಮೆಂಟಿನಿಂದ ತಿಳಿಯಿತು. ಗೌರಿಯವರು ಬಳಸಿದ ತಮ್ಮೂರಿನ ಭಾಷೆಯಲ್ಲಿ ಅವರ ತಾಯಿಯ ದನಿ ಸ್ಪಷ್ಟವಾಗಿ ಕೇಳಿ ವೈಯಕ್ತಿಕವಾಗಿ ಅನುಭವಿಸಿದ ನನಗೆ ಇನ್ನಷ್ಟು ಖುಶಿ! ’ಅನಿವಾಸಿ’ಯಲ್ಲಿ ಇಷ್ಟು ವರ್ಷಗಳಲ್ಲಿ ಮೇಲೆ ಹೇಳಿದಂತೆ ಆ ಎರಡು ಹಬ್ಬಗಳ ಬಗ್ಗೆಯಷ್ಟೆ ಲೇಖನಗಳು ಬಂದಿವೆ. (ವಟಗುಟ್ಟಿವೆ, ಅನ್ನಲೇ?) ಮೊದಲ ಸಲ ವಟ ಸಾವಿತ್ರಿಯಿಳಿದು ಬಂದಿದ್ದಾಳೆ. ಆದರದ ಸ್ವಾಗತ! ಗೌರಿಯವರ ಮನೆಯಲ್ಲಿ ಈ ಪದ್ಧತಿ ಮುಂದುವರೆಯಲಿ!

    ರಾಮಮೂರ್ತಿಯವರ ತೋಟದ ವರ್ಣನೆ ಓದಿದೆ. ಅದು ಹೆಮ್ಮೆ ಪಡುವಂಥದೇ. ರಾಮಮೂರ್ತಿ ಅವರಂಥ ’ಮಾಲಿ” ಸಿಕ್ಕರೆ ಸೀತಾ ರ ಬೇಸಿಂಗಸ್ಟೋಕ್ ದ ತೋಟವೂ ಸ್ಯಾಕ್ವಿಲ್ ವಿಟಾ’ಳ ಸಿಸ್ಸಿಂಗ್ ಹರ್ಸ್ಟ್ ಆಗಬಲ್ಲದು. ಹೂ ಹಂಪಲುಗಳ ಯುಗ್ಮದ ಸಮೃದ್ಧಿ ನೋಡಿ ಬೆರಗಾದೆ. ನನ್ನ ಸ್ಪಿನಾಚೂ ನಾಚುತ್ತದೆ ಅದರ ಮುಂದೆ. ಅದಕ್ಕೂ ಮಿಗಿಲಾಗಿ featureಗೆ ಇಟ್ಟ ಗಣಪತಿಗೆ ವಂದಿಸಿದೆ. ವಿರುದ್ಧ ದಿಕ್ಕಿನಲ್ಲಿ ನೋಡುತ್ತಿರುವ ಅಫ್ರೋಡಿಟಿಯೋ ಅಪ್ಸರೆಯೋ ಸಹ ಇದ್ದು ಪೂರ್ವ ಪಶ್ಚಿಮಗಳ ಮಿಲನವಿದೆ ಇಲ್ಲಿ. ಇದು ನಿಮ್ಮೆಲ್ಲರ ಆರೋಗ್ಯವನ್ನೂ ವರ್ಧಿಸುವ ತೋಟ ಇದ್ದಂತಿದೆ. ಅಭಿನಂದನೆಗಳು.

    Liked by 1 person

    • ಧನ್ಯವಾದಗಳು ದೇಸಾಯರೇ..ಏನೋ ತಿಳಿದಷ್ಟು..ಸಾಧ್ಯವಾದಷ್ಟು ಮಾಡುತ್ತಿರುತ್ತೇನೆ.ಹೇಗೋ ಮೂಲದೊಂದಿಗೆ ಅಂಟಿಕೊಂಡಿರಬೇಕು..ತನ್ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬ ಹಂಬಲ.ಅಲ್ಲದೇ ಹಬ್ಬದ ನೆವದಲ್ಲೊಂದು ಸೊಗಸಾದ ಊಟ..

      Like

  5. Smt Gowri Prasanna’s memory is something stupendous ! Her mother’s training as a gruhiNi is really remarkable. I am certain, many of her contemporary patriots may not be observing this Vrata so jealously religious !

    Liked by 1 person

    • ನಿಮ್ಮ ಮೆಚ್ಚುಗೆಗಾಗಿ ಅನಂತ ಧನ್ಯವಾದಗಳು .

      Like

  6. Both the articles are good ,particulrly of Gowri Prasanna. Her North
    Karnataka Kannada is very impressive.r

    On Fri, 2 Jul 2021, 06:01 ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ, wrote:

    > ಸವಿತಾ ಸುರೇಶ್ posted: ” ನೆಚ್ಚಿನ ಓದುಗರೇ !! ಜೇಷ್ಠ ಮಾಸದ ಕಾರುಹುಣ್ಣಿಮೆಯಂದು ಉತ್ತರ
    > ಕರುನಾಡಲ್ಲಿ ಮುತ್ತೈದೆಯರೆಲ್ಲರೂ ವಿಜೃಂಭಣೆಯಿಂದ ಆಚರಿಸುವ ವಿಶೇಷ ಹಬ್ಬ ‘ವಟ
    > ಸಾವಿತ್ರಿ’.ಕಳೆದ ವಾರ ೨೪ನೇ ಜೂನ್ ರಂದು ನಮ್ಮ ಅನಿವಾಸಿ ಸದಸ್ಯೆಯಾದ ಗೌರಿ ಪ್ರಸನ್ನ ಅವರು
    > ತಮ್ಮ ಸ್ವಗೃಹದಲ್ಲಿ ವಟ ಸಾವಿತ್ರಿ ಹಬ್ಬವನ್ನು ಆಚರಿಸಿ ಮಾಹಿತಿಗಳೊಂದಿಗೆ ‘ಲ”
    >

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.