‘ ಅಪ್ಪನಿಗೆ ‘ -ಡಾ।।ಸತ್ಯವತಿ ಮೂರ್ತಿ

ಪ್ರಿಯ ಓದುಗರೇ!!
ಪಿತೃ ದೇವೋ ಭವ- ಜೂನ್ ೧೫ ರಂದು ‘ಅಪ್ಪಂದಿರ ದಿನಾಚರಣೆ ‘ವಿಶ್ವಾದ್ಯಂತ ಆಚರಿಸಲಾಗಿದ್ದು ನಮ್ಮ ಈ ವಾರದ ಸಂಚಿಕೆಯಲ್ಲಿ ಡಾ।।ಸತ್ಯವತಿ ಮೂರ್ತಿ ಅವರ ‘ ಅಪ್ಪನಿಗೆ ‘ ಎಂಬ ಶೀರ್ಷಿಕೆಯಡಿಯ ಕವನ ಮತ್ತು ವಿಜಯ್ ನರಸಿಂಹ ಅವರ ‘ ಅಪ್ಪ ‘ ನೀನು ಯಾರು ಎಂಬ ಶೀರ್ಷಿಕೆಯಡಿಯ ಒಂದು ಕಿರು ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ . -ಸವಿ.ಸಂ

ಚಿತ್ರ ಕೃಪೆ: ಗೂಗಲ್

ಡಾ।।ಸತ್ಯವತಿ ಮೂರ್ತಿ ಅವರ ತಂದೆ ವೇದ ಬ್ರಹ್ಮ , ವೇದರತ್ನ ಶ್ರೀ .ಚನ್ನಕೇಶವ ಅವಧಾನಿಗಳು

ಅಪ್ಪನಿಗೆ

ಅಪ್ಪ ನಿನ್ನನ್ನು ನೋಡಿದಾಗಲೆಲ್ಲ ಅಂದುಕೊಳ್ಳುತ್ತೇನೆ

ಎಷ್ಟು ಕಠಿಣ ನೀ ಕಲ್ಲೆದೆಯವನು!

ನಡೆಯಲು ಬರದೆ ನಾ ಅಡಿಗಡಿಗೆ ಬೀಳುತಿದ್ದಾಗ

ಕಣ್ಣೀರು ಕೆನ್ನೆಮೇಲುರುಳಿ ಕೆಳಗಿಳಿಯುವಾಗ

ಅಮ್ಮ ಬಂದು ನನ್ನನೆತ್ತಿ ಮುದ್ದಾಡಿ ರಮಿಸಿರಲು

ಮಡಿಲಿಂದ ನನ್ನ ಬಿಡಿಸಿಬಿಟ್ಟು ಕೆಳಗಿಟ್ಟು

ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು !

ಶಾಲೆಯಲ್ಲಿ ಮೊದಲದಿನ ಅಪರಿಚಿತರೆಲ್ಲ

ಅಮ್ಮನೂ ಬಳಿಯಲ್ಲಿಲ್ಲ,ನನ್ನನರಿತವರಾರೂ ಇಲ್ಲ

ಒಬ್ಬಂಟಿ ನಾನು ಹೆದರಿಕೆಯಲಿ ಅಳಲು

ಮುದ್ದಿಸಲಿಲ್ಲ , ಸಂತೈಸಲಿಲ್ಲ ಬದಲಾಗಿ

ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು!

ಆಟವಾಡುವ ನಡುವೆ ನಾ ಬಿದ್ದು ಪೆಟ್ಟ ತಿಂದು

ಮಂಡಿ ತರಚಿರಲು , ಸಹಿಸಾಲರದ ನೋವಿರಲು

ಗೆಳೆಯರೆನ್ನನು ಛೇಡಿಸುತ್ತ ನಗುತ್ತಿದ್ದರೆ

ಬಳಿಬಂದು ನೀವುತಲಿ ಮಂಡಿಯನು

ನೀಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!

ಕ್ಲಾಸಿನಲಿ ಟೀಚರಿಂದ ಏಟು ತಿಂದುದನು

 ಅಮ್ಮನಿಗೆ ಹೇಳಿ ಅಳುತಿದ್ದರೆ ಅವಮಾನದಲಿ

ಎಲ್ಲಿಂದಲೋ ಬಂದು ಬಳಿ ನಿಲ್ಲುತ್ತಿದ್ದೆ 

ಬಂದುದನು ಎದುರಿಸಬೇಕು, ಅಳದಿರಬೇಕು

ನೀ ಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!

ಎಲ್ಲದಕು ಯಾವುದಕು ಒಂದೆ ಮಂತ್ರವು ನಿನ್ನದು

ನೀ ಗಟ್ಟಿಯಾಗಬೇಕು , ನೀ ಗಟ್ಟಿಯಾಗಬೇಕು.

ಈಗ

ನನ್ನದೊಂದೇ ಮಾತಿದೆ ನೀನೀಗ ಕೇಳಬೇಕು

ನಾ ಕಣ್ಣೆದುರು ಇರುವವರೆಗೆ ಮುಚ್ಚಬಾರದು ನೀ ಕಣ್ಣು

ನಿನ್ನನ್ನಗಲಿ ಬದುಕಿರುವಷ್ಟು ಗಟ್ಟಿಯಾಗಿಲ್ಲ ನಾನಿನ್ನೂ!!

ಡಾ. ಸತ್ಯವತಿ ಮೂರ್ತಿ

࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕ ࿕

ವಿಜಯ್ ನರಸಿಂಹ ಅವರ ಜೊತೆಯಲ್ಲಿ ತಂದೆ ಶ್ರೀ.ಶಿವಣ್ಣ ನವರು

ಅಪ್ಪ’ ನೀನು ಯಾರು?


ಒಬ್ಬ ತಂದೆ ಮಕ್ಕಳ ಜನ್ಮಕ್ಕೆ ಕಾರಣನೆಂದು ಅವನು ತಂದೆಯಾಗಲಾರ, ಮಕ್ಕಳನ್ನು ಸಲಹುವನು ತಂದೆ, ಮಕ್ಕಳ ತಪ್ಪುಗಳನ್ನು ಸಣ್ಣದರಲ್ಲೇ ತಿದ್ದುವವನು ತಂದೆ,‌ಬೆಟ್ಟದಷ್ಟು ಪ್ರೀತಿಯನ್ನು ಒಳಗೇ ಇಟ್ಟುಕೊಂಡು ಹೊರಗೆ ತೋರಲಾರದ ಅಸಹಾಯಕನು ತಂದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕನಾಗುವವನು ತಂದೆ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಮಕ್ಕಳು ಉತ್ತಮರಾಗಿ ಬದುಕಲು ಮಾರ್ಗದರ್ಶನ ಮಾಡುವವನು ತಂದೆ, ಹದಿಹರೆಯ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸುವವನು ತಂದೆ, ದಾರಿ ತಪ್ಪಿದ ಮಕ್ಕಳನ್ನು ಸರಿ ದಾರಿಗೆ ನಡೆಸುವವನು ತಂದೆ, ಹೆಂಡತಿ ಮಕ್ಕಳ ಸುಖಕ್ಕೆ ತನ್ನ ಆಸೆಗಳನ್ನು ಬದಿಗೊತ್ತುವವನು ತಂದೆ, ಮಕ್ಕಳು ಬೆಳೆದು ಪ್ರೌಢರಾದಾಗ ಸ್ನೇಹಿತನಾಗುವವನು ತಂದೆ, ಕಠಿಣ ವ್ಯಕ್ತಿತ್ವದ ಪೊರೆಯ ಕಳಚಿ ಮೃದುವಾಗುವವನು ತಂದೆ, ಮಕ್ಕಳಿಗೆ ತೋರಲಾಗದ ಪ್ರೀತಿಯನ್ನು ಮೊಮ್ಮಕ್ಕಳಿಗೆ ತೋರಲು ಹಪಹಪಿಸುವವನು ತಂದೆ, ಮಕ್ಕಳಮೇಲೆ ಅನವಲಂಬಿಯಾಗ ಬಯಸುವವನು ತಂದೆ, ಜೀವನದಲ್ಲಿ ಸೋತ ಮಕ್ಕಳಿಗೆ ಹೆಗಲು ಕೊಟ್ಟು ಎತ್ತುವವನು ತಂದೆ,ಜೀವನದ ಜೊತೆಗೆ ದೇಹಾರೋಗ್ಯಗಳನ್ನು ಸವೆಸುವವನು ತಂದೆ, ಅನಾರೋಗ್ಯನಾಗಿದ್ದರೂ ಆರೋಗ್ಯವಾಗಿದ್ದೇನೆ ಎನ್ನುವವನು ತಂದೆ, ಬಂಧು ಬಳಗದವರ ಮುಂದೆ ಸಹಾಯ ಹಸ್ತ ಚಾಚದ ಸ್ವಾಭಿಮಾನಿ ತಂದೆ, ಎಲ್ಲವನು ಗಳಿಸಿದ್ದರೂ ಒಂಟಿ ಜೀವನ ಬಯಸುವ ವೈರಾಗಿ ತಂದೆ.

‘ಅಪ್ಪ’ ನೀನು ಆದರ್ಶ 

‘ಅಪ್ಪ’ ನೀನು ಆಕಾಶ’

ಅಪ್ಪ’ ನೀನು ಸ್ವಪ್ರಕಾಶ

‘ಅಪ್ಪ’ ನಿನಗಿಲ್ಲ ಮೋಹ ಪಾಶ

 ‘ಅಪ್ಪ’ ನಿನ್ನ ಜೀವನ ಸಶೇಷ .


-✍️ ವಿಜಯನರಸಿಂಹ

8 thoughts on “‘ ಅಪ್ಪನಿಗೆ ‘ -ಡಾ।।ಸತ್ಯವತಿ ಮೂರ್ತಿ

  1. ಬದುಕಿನಲ್ಲಿ ಗಟ್ಟಿತನವನ್ನು ಕಲಿಸಿದ ತಂದೆಯ ಬಗೆಗಿನ ಆತ್ಮೀಯ ಕವನವನ್ನು ಬರೆದ ಸತ್ಯವತಿಯವರು ಎಲ್ಲ ಮಕ್ಕಳ ಪರವಾಗಿ ಬರೆದಂತೆ ಸರ್ವಕಾಲಿಕವಾಗಿದೆ. ಈ‌ ಕವಿತೆಯಲ್ಲಿ ಲಯ, ಪ್ರಾಸ ಮತ್ತು ಛಂದಸ್ಸು ಇದ್ಸಿದ್ದರೆ ಒಂದು ಉತ್ತಮ ಭಾವಗೀತೆಯಾಗುತ್ತಿತ್ತು.

    ವಿಜಯ ಅವರ ಬರಹ ನೇರ ಹೃದಯದಿಂದ ಬಾವಸಿಂಚನ. ತಂದೆ ಯಾರು ಎಂದು ಹೇಳುತ್ತ ತಂದೆ ಮತ್ತು ಮಗುವಿನ ಜೀವನದ ವಿವಿಧ ಹಂತಗಳಲ್ಲಿ ಅವರಿಬ್ಬರ ಸಂಬಂಧಗಳ ಸೂಕ್ಷ್ಮವನ್ನು ಹೇಳಿದ್ದಾರೆ.

    Liked by 1 person

    • ನಮಸ್ಕಾರ ಕುಲಕರ್ಣಿಯವರಿಗೆ. ನಿಮ್ಮ ತೆರೆದ ಹೃದಯದ ಮಾತುಗಳಿಗೆ ವಂದನೆಗಳು. ನೀವು ಪ್ರಕಟಿಸಿದ ಇದೇ ಅಭಿಪ್ರಾಯವನ್ನು ಇನ್ನೂ ಕೆಲವರು ಹೇಳಿದ್ದರಿಂದ ಈ ಕವನದ ವಾಚನವನ್ನು ಸಂಗೀತಕ್ಕೆ ಹೊಂದಿಸಿ ಹಾಕುವ ಪ್ರಯತ್ನ ಮಾಡುತ್ತಿದ್ದೇನೆ. ಅದಾದ ಕೂಡಲಎ ತಿಳಿಸುತ್ತೇನೆ
      ಧನ್ಯವಾದಗಳು
      ಸತ್ಯವತಿ ಮೂರ್ತಿ

      Like

      • ನಾನು ಈಗಾಗಲೆ ನಿಮ್ಮ ಅನಿಸಿಕೆಗಳಿಗೆ ಉತ್ತರಿಸಿದ್ದೆ. ಕಾರಣಾಂತರದಿಂದ ಅದು ಕಳೆದುಹೋಗಿದೆ. ಅದಕ್ಕಾಗಿ ಕ್ಷಮೆಯಿರಲಿ. ಕವನವನ್ನು ಕುರಿತ ನಿಮ್ಮ ಅಭಿಪ್ರಾಯಗಳಿಗೆ ವಂದನೆಗಳು. ನೀವು ಅಂದಂತೆಯೇ ಇನ್ನು ಕೆಲವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ . ಆದ್ದರಿಂದ ಈ ಕವನವನ್ನು ವಾಚನ ಮಾಡಿಸಿ ಸಂಗೀತ ಸಂಯೋಜನೆ ಮಾಡಿಸುವ ಪ್ರಯತ್ನ ನಡೆದಿದೆ. ಆದಕೂಡಲೆ ತಮಗೆ ಕಳುಹಿಸುತ್ತೇನೆ. ಇದಕ್ಕೆ ಲಯವಿದ್ದು ಛಂದೋಬದ್ಧವಾಗಿದ್ದರೆ ….. ಎಂದು ನನಗೂ ಅನ್ನಿಸಿದೆ
        ವಂದನೆಗಳು

        Like

  2. ಅಪ್ಪಂದಿರ ಬಗ್ಗೆ Father’s Day ಗಾಗಿ ಬರೆದ ಇಬ್ಬರು ಮಗ ಮಗಳು ಕವಿ-ಕವಯಿತ್ರಿಯರ ಆತ್ಮೀಯ ಕವಿತೆ-ಬರಹಗಳು! ಎರಡೂ ನೇರವಾಗಿ ಎದೆಗೆ ಲಗ್ಗೆ ಹಾಕಿವೆ! ಎಷ್ಟೇ ಗಟ್ಟಿಯಾಗಿದ್ದರೂ ಕರಗಿ ನೀರಾಗುವ ಮಗಳು ಒಂದು ಕಡೆ, ‘ಒಂಟಿ ಬೈರಾಗಿಯಾಗಿ’ ಜೀವಿಸುವ ತಂದೆಗೆ ಹೆಗಲು ತಾಗಿಸಿ ನಿಲ್ಲುವ ಮಗ ಇನ್ನೊಂದು ಕಡೆ, ಹೃದಯಂಗಮ ಚಿತ್ರಗಳು. ಎಲ್ಲ ತಂದೆಯರಿಗೆ ನಮಿಸುತ್ತಾ ಇಬ್ಬರೂ ಕವಿಗಳಿಗೆ ಅಭಿನಂದನೆಗಳು! ಸಂಪಾದನೆಯೂ ಪೂರವಾಗಿದೆ!

    Liked by 1 person

    • ದೇಸಾಯಿ ಅವರಿಗೆ ನಮಸ್ಕಾರ. ಕವನವನ್ನು ಕುರಿತ ನಿಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು. ಕವನ ಓದಿದವರಿಗೆ
      ಇಷ್ಟವಾಯಿತು ಎಂದರೆ ನನ್ನ ಶ್ರಮ ಸಾರ್ಥಕ
      ವಂದನೆಗಳು.
      ಸತ್ಯವತಿ ಮೂರ್ತಿ

      Like

  3. ಪಿತೃದೇವೋಭವ… ಮಕ್ಕಳಿಗೋಸ್ಕರ ತಮ್ಮ ಜೀವನವಿಡೀ ತೇಯುವ ಒಬ್ಬ ನಿಸ್ವಾರ್ಥಿ ಎಲ್ಲರ ಅಪ್ಪ.
    ಎಷ್ಟು ಕೃತಜ್ಞತೆ ಎಷ್ಟು ಸಲ್ಲಸಿದರೂ ಸಾಲದು.

    Liked by 1 person

    • ನಮಸ್ಕಾರ . ನಿಮ್ಮ ಅನಿಸಿಕೆಗಳಿಗಾಗಿ ಕೃತಜ್ಞತೆಗಳುನಮಸ್ಕಾರ
      ಸತ್ಯವತಿ ಮೂರ್ತಿ

      Liked by 1 person

Leave a comment

This site uses Akismet to reduce spam. Learn how your comment data is processed.