ಸೆಕೆಂಡ್ ವೇವ್ – ಡಾ।।ಶಿವ ಪ್ರಸಾದ್

ಸನ್ಮಿತ್ರ ಓದುಗರೇ ! ನಮಗೆಲ್ಲರಿಗೂ ತಿಳಿದಿರುವ ಹಾಗೆ ಕೋವಿಡ್-೧೯ ೨ನೇ ಅಲೆ ಕರುನಾಡನ್ನು ಭೀಕರವಾಗಿ ಅಲ್ಲೋಲ ಕಲ್ಲೋಲ ಮಾಡಿದೆ. ಈ ಅವಧಿಯಲ್ಲಿ ಮಾನವಕುಲದ ಅಮಾನುಷ ಕೃತ್ಯಗಳನ್ನು ಡಾ।।ಶಿವ ಪ್ರಸಾದ್ ತಮ್ಮ ‘ಸೆಕೆಂಡ್ ವೇವ್’ ಎಂಬ ಶೀರ್ಷಿಕೆಯ ಕವನದಲ್ಲಿ ವ್ಯಕ್ತಪಡಿಸಿದ್ದಾರೆ.
ನಮ್ಮ ಸಾಪ್ತಾಹಕ ಸಂಚಿಕೆಯ ‘ಹಸಿರು ಉಸಿರು’ ಸರಣಿಯಲ್ಲಿ ಅನ್ನಪೂರ್ಣ ಆನಂದ್ ಮತ್ತು ಸ್ಮಿತಾ ಕಡಾಡಿ ಅವರ ಹೂದೋಟದ ಹಾದಿಯತ್ತ ಹೋಗಿ ಬರೋಣವೇ ? ಓದಿ ಪ್ರತಿಕ್ರಿಯಿಸಿ.
-ಸವಿ.ಸಂ

ಚಿತ್ರ ಕೃಪೆ: ಗೂಗಲ್

ಸೆಕೆಂಡ್ ವೇವ್

ಮಾಸ್ಕ್ ಎಂಬ ಮುಸುಕನ್ನು
ಮನೆಯಲ್ಲಿ ಬಿಚ್ಚಿಟ್ಟು
ಮುಂಜಿ ಮದುವೆಗಳ ನೆಪದಲ್ಲಿ
ಮನೆಯಾಚೆ ಕಾಲಿಟ್ಟು


ಕುಂಭ ಮೇಳದಲಿ ಮಿಂದು
ನಂಬಿಕೆಯಂಬ ಮಡಿಯುಟ್ಟು
ಚುನಾವಣೆಯ ಬಿಸಿಯಲ್ಲಿ
ಧುರೀಣರಿಗೆ ವೋಟುಕೊಟ್ಟು


ವೈದ್ಯರು ಕೊಟ್ಟ ಸಲಹೆಗಳನು
ನಿರ್ಲಕ್ಷಿಸಿ ಕೈಬಿಟ್ಟು
ಇಂದು ಎದುರುಸುತ್ತಿದ್ದೇವೆ
ಸೆಕಂಡ್ ವೇವ್ ಬಿಕ್ಕಟ್ಟು!


ವ್ಯಾಕ್ಸೀನ್ ಕೊಡಲು ಬಂದಾಗ
ನೆಪಗಳನ್ನೆತ್ತಿ ನಿರಾಕರಿಸಿದ್ದೇವೆ
ಪಿಡುಗು ಮಹಾಮಾರಿಯಾದಾಗ
ವ್ಯಾಕ್ಸೀನ್ ಇಲ್ಲವೆಂದು ಪರಿತಪಿಸಿದ್ದೇವೆ


ಲಸಿಕೆಗಳನು ವಿದೇಶಗಳಿಗೆ ಮಾರಿ
ವಾಟ್ಸ್ ಆಪಿನಲ್ಲಿ ಮೆರೆದಿದ್ದೇವೆ
ಕರೋನ ಕುರುಡು ಕುಣಿತದಲ್ಲಿ
ಕೈ ಚೆಲ್ಲಿ ಕಂಗಾಲಾಗಿ ಕುಳಿತ್ತಿದ್ದೇವೆ


ಪಾಶ್ಚಿಮಾತ್ಯ ಮಾಧ್ಯಮಗಳ
ಮೇಲೆ ಕೆಂಡ ಕಾರುತ್ತಾ
ಪಾಶ್ಚಿಮಾತ್ಯ ಸಜ್ಜನರಿಂದಲೇ
ಔಷಧಿ ವೆಂಟಿಲೇಟರ್ಗಳನು ಬೇಡಿದ್ದೇವೆ

ಜನ ಸೇವೆಯೇ ಜನಾರ್ಧನ ಸೇವೆ,
ಕಾಯಕವೇ ಕೈಲಾಸವೆನ್ನುತ್ತ
ಆಕ್ಸೀಜನ್ ಸಿಲಿಂಡರ್ಗಳನ್ನು
ಬ್ಲ್ಯಾಕ್ ಮಾರ್ಕೇಟಿನಲ್ಲಿ ಮಾರುತ್ತಿದ್ದೇವೆ


ಹತಾಶೆ, ನೋವುಗಳನು,
ಆಕ್ರೋಶ, ಆವೇಶಗಳನೂ ನೋಡಿದ್ದೇವೆ
ಹೆಣಗಳ ರಾಶಿಯನ್ನು ಕಂಡು ಮರುಗಿದ್ದೇವೆ
ಕಂಬನಿಗಳ ಕೋಡಿಯನ್ನೇ ಹರಿಸಿದ್ದೇವೆ


ಅವರಿವರ ಪರ-ವಿರೋಧ
ವಾದ ವಿವಾದಗಳು ದಿನ ನಿತ್ಯ
ಸರಿ ತಪ್ಪುಗಳ ನಡುವೆಯೆಲ್ಲೋ ಸತ್ಯ
ಮಾಸ್ಕ್, ಲಸಿಕೆ, ಸಾಮಾಜಿಕ ಅಂತರಗಳು ಅಗತ್ಯ


ಪ್ರಗತಿಶೀಲ ಭಾರತಕ್ಕೆ
ಹೆಮ್ಮೆ, ಆತ್ಮವಿಶ್ವಾಸಗಳು ಮುಖ್ಯ
ಗರ್ವ, ಒಣಜಂಭಗಳು ಅನಗತ್ಯ
ಒಳನೋಟ, ಆತ್ಮವಿಮರ್ಶೆಗಳು ಅತ್ಯಗತ್ಯ

-ಡಾ. ಜಿ. ಎಸ್. ಶಿವಪ್ರಸಾದ್

🔆〰〰〰〰〰〰〰〰〰〰〰〰🔆

ಅನ್ನಪೂರ್ಣ ಆನಂದ್ ಅವರ ಹೂದೋಟದ ರಮ್ಯಚಿತ್ರಗಳು

🔆〰〰〰〰〰〰〰〰〰〰〰〰🔆

ಸ್ಮಿತಾ ಕಡಾಡಿ ಅವರ ಗೃಹದ ಲಿಲ್ಲಿ ಲಾವಣ್ಯವತಿಯರು

5 thoughts on “ಸೆಕೆಂಡ್ ವೇವ್ – ಡಾ।।ಶಿವ ಪ್ರಸಾದ್

  1. ಸರಳ ಭಾಷೆಯಲ್ಲಿ ಎರಡನೇ ಅಲೆಯ ಕಾರಣ, ಅದರ ಭೀಕರತೆ ಇವನ್ನೆಲ್ಲ ಸುಂದರವಾಗಿ ಹಿಡಿದಿಟ್ಟಿದ್ದೀರಿ.

    ಪಾಶ್ಚಾತ್ಯ ದೇಶಗಳು ಮಾಡಿದ ತಪ್ಪಿನಿಂದ ಕಲಿತು ನಮ್ಮವರು ಇದನ್ನು ಇನ್ನೂ ಉತ್ತಮವಾಗಿ ಸಂಭಾಳಿಸಬಹುದಿತ್ತೆಂದು ಖೇದವಾಗುತ್ತಿದೆ.

    – ರಾಂ

    Like

    • Very well said sir! The reality is hard hitting, though the so called educated dis barbaric acts like mass gatherings literally meaning to kill by spreading the disease. We should act more responsibly. Thanks for sharing . I echo your thoughts 🙏🏼

      Like

  2. ಅಲೆಅಲೆಯಾಗಿ ಬಂದು ವಾಟ್ಸಾಪ್ಪಿನಲ್ಲಿ ಅಪ್ಪಳಿಸುವ ಅರ್ಧ ಸತ್ಯ, ಅರ್ಧ ಬೈಗಳುಗಿಂತ ಇಂಥ ವಸ್ತುನಿಷ್ಠವಾದ ಕವಿತೆಯಲ್ಲಿ ಹೆಚ್ಚು ಮೈಲೇಜ್ ಇದೆ. ಅಥವಾ ವೇವ್ ಲೆಂಗ್ತ್ ಇದೆ ಅನ್ನಲೇ, ವೇವ್ ಬಗ್ಗೆ ಮಾತಾಡುವಾಗ?
    “ಪಾಶ್ಚಿಮಾತ್ಯ ಮಾಧ್ಯಮಗಳ
    ಮೇಲೆ ಕೆಂಡ ಕಾರುತ್ತಾ
    ಪಾಶ್ಚಿಮಾತ್ಯ ಸಜ್ಜನರಿಂದಲೇ
    ಔಷಧಿ ವೆಂಟಿಲೇಟರ್ಗಳನು ಬೇಡಿದ್ದೇವೆ“ ಎನ್ನುವಲ್ಲಿ ವಿಷಮ ಪರಿಸ್ಥಿತಿಯಲ್ಲಿಯ ವಿಪರ್ಯಾಸಕ್ಕೆ ವ್ಯಂಗೋಕ್ತಿಯ ಚುಚ್ಚು ಮದ್ದು ಕೊಟ್ಟಿದ್ದಾರೆ. ಕೊನೆಯಲ್ಲಿ ಭಾರತಕ್ಕಎ ಅಗತ್ಯವಿರುವ ಎಚ್ಚರಿಕೆಯ ‘ಔಷಧಿಯನ್ನೂ‘ ಸೂಚಿಸಿದ್ದಾರೆ, ಡಾ ಪ್ರಸಾದ್ ಅವರು!
    ಅನ್ನಪೂರ್ಣಾ ಮತ್ತು ಸ್ಮಿತಾ ಅವರ ತೋಟದ ರಂಗಿನ ಚಿತ್ರಗಳು ಕಣ್ಣಿಗೆ ಆನಂದ ಕೊಡುತ್ತಿವೆ. ಬರಹದಲ್ಲಿ ಪಳಗಿದ ಅವರುಗಳುಈ ‘ಹಸಿರು ಉಸಿರಿನ‘ ಸರಣಿಗೆ ಹೊಂದುವಂತೆ ‘ಹಸಿರು‘ ಬರಹದ ವಿವರಣೆಯ ರೂಪದಲ್ಲಿ ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿದ್ದವು.

    Like

  3. ಎರಡನೇ ಅಲೆಯ ಸಾಮಾಜಿಕ ಮತ್ತು ರಾಜಕೀಯವನ್ನು ಕವನದ ರೂಪದಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ ಪ್ರಸಾದ್ ಅವರು.

    ಹಿತ್ತಲಿನ‌ ಚಿತ್ರಗಳು ಮುದ ನೀಡುತ್ತವೆ.

    -ಕೇಶವ

    Like

  4. ಸದ್ಯದ ಪರಿಸ್ಥಿತಿಯ ಸಾರವನ್ನು ಈ ಕವನದಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಡಾ. ಶಿವಪ್ರಸಾದ್ ಯಶಸ್ವಿಯಾಗಿದ್ದಾರೆ.
    ಅನ್ನಪೂರ್ಣಾ ಆನಂದ್ ಅವರ ತೋಟವೂ, ಸ್ಮಿತಾ ಕಡದಿಯವರ ಲಿಲಿಯೂ ಸುಂದರವಾಗಿವೆ, ಒಳ್ಳೆಯ ಬೇಸಿಗೆಯ ಆಸೆಯ ಹುಟ್ಟುಹಾಕುತ್ತವೆ.
    ಎಲ್ಲರಿಗೂ ಅಭಿನಂದನೆಗಳು.
    – ಲಕ್ಷ್ಮೀನಾರಾಯಣ ಗುಡೂರ್.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.