ಆತ್ಮೀಯ ಓದುಗರೇ ! ಜೂನ್ ೫ ೨೦೨೧ ರಂದು ವಿಶ್ವ ಪರಿಸರ ದಿನಾಚರಣೆಯ ಸುಸಂದರ್ಭದಲ್ಲಿ ಅನಿವಾಸಿಯ ತಂಗುದಾಣದ ನೂತನ ವಿಭಾಗ ‘ಹಸಿರು ಉಸಿರು’ ಸೇರ್ಪಡಿಸಲಾಗಿದ್ದು ಈ ಸರಣಿಯಲ್ಲಿ ಡಾ|| ಶ್ರೀವತ್ಸ ದೇಸಾಯಿ ಅವರು ‘ಕೈದೋಟದ ಕೆಸರು’ ಎಂಬ ಶೀರ್ಷಿಕೆಯ ಲೇಖನವನ್ನು ಅನನುಭವಿ ತೋಟಗಾರರಾಗಿದ್ದರೂ ಸ್ವತಃ ತಾವೇ ತಮ್ಮ ಕೈದೋಟದಲ್ಲಿ ತೋಟಗಾರಿಕೆ ಕಾರ್ಯ ನಿರ್ವಹಿಸಿ ಅದರ ಅನುಭವ ಹಂಚಿಕೊಂಡು ಹಸಿರು ದೇವತೆಗೆ ನೈವೇದ್ಯೆ ಸಲ್ಲಿಸಿದ್ದಾರೆ !
ಈ ಸುದಿನ ಆಚರಿಸಲು ನಮ್ಮ ಉತ್ಸುಹಕ ಅನಿವಾಸಿ ಸದಸ್ಯರಾದ ಎಲ್. ಎನ್. ಗುಡೂರ್ ಮತ್ತು ಪ್ರೇಮಲತಾ ಅವರು ತಮ್ಮ ಗೃಹದೋಟದ ಹಸಿರುಭರಿತ ವರ್ಣರಂಜಿತ ಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ . ಓದಿ ಪ್ರತಿಕ್ರಿಯಿಸಿ. -ಸವಿ. ಸಂ
ಹಸಿರು ಉಸಿರು- ಕೈದೋಟದ ಕೆಸರು!

ಕೈಕೆಸರಾದರೆ ಬಾಯಿ ಮೊಸರು ಎನ್ನುವ ಹಳೆಯ ಗಾದೆ ನಮ್ಮ ಊರಲ್ಲಿ. ಅದೇ ತರ ‘Have you got green fingers? ಎನ್ನುವ ಪದಗುಚ್ಛ ಕೇಳಿಬರುವದು ಇಲ್ಲಿ ಇಂಗ್ಲೆಂಡಿನಲ್ಲಿ.
ಇತ್ತೀಚೆಗೆ ಎಲ್ಲೆಡೆ ಆಚರಿಸಿದ ಸಾರ್ವತ್ರಿಕ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ’ಅನಿವಾಸಿ’ಯ ವಾಟ್ಸಪ್ಪಿನಲ್ಲಿ ಸಂಪಾದಕಿ ಕೊಟ್ಟ ಸೂಚನೆ:”ಹಸಿರು ಉಸಿರು’’ ಶೀರ್ಷಿಕೆಗೆ ಈ ವಾರ ಏನಾದರೂ ಲೇಖನ ಬರೆದು ಕಳಿಸಿರಿ ಎಂದಾಗ ನನಗೆ ತೋಚಿದ್ದು, ನನ್ನ ಹಸಿರು ವೆಜಿಟಬಲ್ ಪ್ಯಾಚ್ ಬಗ್ಗೆ ನಾಲ್ಕು ಸಾಲು ಬರೆಯುವಾ ಎಂದು. ಈ ಫೋಟೊದಲ್ಲಿ ಕಾಣುವಂತೆ ಅಪರೂಪಕ್ಕೆ ಹಚ್ಚ ಹಸಿರಾದ ಸ್ಪಿನ್ಯಾಚ್ ಗಿಡಗಳಿಂದ ಕಂಗೊಳಿಸುವ ನನ್ನ ಹಿತ್ತಲಿನಲ್ಲಿಯ ಪುಟ್ಟ ಕೈದೋಟ ಈ ವರ್ಷ ಪ್ರತಿವರ್ಷಕ್ಕಿಂತ ಹೆಚ್ಚು ಹಸಿರಾಗಿ ಕಣ್ಣಿಗೆ ತಂಪು ಕೊಡುತ್ತಿದೆ. ಇದರ ರಹಸ್ಯ ಗೊತ್ತ್ಗಿಲ್ಲ. ನನಗೆ ’ಗ್ರೀನ್ ಫಿಂಗರ್ಸ” ಅಂತ ಬಡಾಯಿ ಕೊಚ್ಚಿಕೊಳ್ಳಲು ಗಾರ್ಡನಿಂಗ್ ವಿಷಯದಲ್ಲಿ ನನಗೆ ನೈಪುಣ್ಯತೆ ಇಲ್ಲ. ಆದರೆ ಈ ದೇಶದಲ್ಲಿ ಸಂಸಾರ ಮಾಡಿ ಮನೆಕಟ್ಟಿಕೊಂಡ ಕಳೆದ ನಾಲ್ಕು ದಶಕಗಳಲ್ಲಿ ಅಲ್ಪ ಸ್ವಲ್ಪ ತೋಟದ ಕೆಲಸದ ನಿಯಮ, ಗತ್ತುಗಳನ್ನು ಅರಿತುಕೊಂಡಿದ್ದೇನೆ, ಅಂತ ನನ್ನ ಗ್ರಹಿಕೆ! ತರಕಾರಿ ತೋಟ ಮಾಡಲು ಅತೀವ ದೈಹಿಕ ಪರಿಶ್ರಮ ಮಾಡುವ ಶಕ್ತಿಯಾಗಲಿ ಇಚ್ಛೆಯಾಗಲಿ ಅವಶ್ಯಕತೆಯಾಗಲಿ ಇಲ್ಲ. ಆದರೆ ನಾವೇ ಬೀಜ ಬಿತ್ತಿ, ನೀರೆರೆದು ಸಸಿ ಬೆಳೆದು ’ಫಲಂ ಪತ್ರಂ’ ಕೊಡುವಾಗ ಅನಿಸುವುದು ನಿಸರ್ಗಕ್ಕೆ ಹತ್ತಿರವಾಗುತ್ತಿದ್ದೇವೆ ಅಂತ. ಪ್ರಕೃತಿಯ ಬಗ್ಗೆ ಗೌರವೂ ಉಂಟಾಗುತ್ತದೆ. ‘From garden to table in half an hour’ ಅಂತ ಬರೀ ಅರ್ಧ ಗಂಟೆಯಲ್ಲಿ ಹಿತ್ತಲಲ್ಲಿ ಬೆಳೆದದ್ದನ್ನು ಕಟಾವ್ ಮಾಡಿ, ಬೇಯಿಸಿ ಟೇಬಲ್ಗೆ ತಂದು ಮನಸ್ಸಿನಲ್ಲೇ ದೇವರಿಗೆ ”ಫಲಂ ಪತ್ರಂ ತೋಯಂ” ಅರ್ಪಿಸಿ ಫಸಲನ್ನು ಉಣ್ಣುವಾಗ ಒಂದು ತರದ ಧನ್ಯತಾ ಭಾವ! ಅತ್ಯಂತ ರುಚಿಕರ ಸಹ. ಅದಲ್ಲದೆ ಆ ಹಚ್ಚ ಹಸಿರೆಲೆಗಳು CO2 ಹೀರಿ ಆಮ್ಲಜನಕವನ್ನು ಕೊಡುತ್ತದೆ ಅನ್ನುವ ನಂಬಿಕೆಯಿಂದ ಪರಿಸರಕ್ಕೆ ನನ್ನದೊಂದು ಪುಟ್ಟ ಸೇವೆ ಅನ್ನುವ ಭಾವ, ಸಹ!
ಮೇಲಿನ ಚಿತ್ರದಲ್ಲಿ ಕಾಣುವ ’ತರಕಾರಿ’ಸಸ್ಯಗಳು ಸ್ಪಿನಾಚ್ ಅಂತ ಹೇಳಿದೆ. ಕೆಲವರು ’ಸ್ಪಿನಕ’ ಅಂತಲೂ ಉಚ್ಚರಿಸುತ್ತಾರೆ. ನೋಡಲು ನಮ್ಮ ದೇಸಿ ’ಪಾಲಕ್’ ತರ ಕಾಣಿಸುತ್ತದೆಯಲ್ಲವೆ? ಇದು ಪರ್ಶಿಯದಿಂದ ಪೂರ್ವಕ್ಕೆ ಹರಡಿ ಭಾರತಕ್ಕೂ ಬಂದಿದೆಯಂತೆ. ಆ ಹೆಸರು ಸಹ ಪರ್ಶಿಯನ್ ಮೂಲದ ಅಸ್ಪನಾಕ್ ಇದರ ತದ್ಭವ ಅಥವಾ ಅಪಭ್ರಂಶ ಇರಬಹುದು. ಭಾರತೀಯ Malabar spinach ನಮ್ಮೂರಿನ ಬಸಳೆ ಸೊಪ್ಪಿನಂತೆ ಕಾಣುತ್ತದೆ (Basella alba). ನನ್ನ ತೋಟದ ಸುಕ್ಕುಗಟ್ಟಿದಂಥ ಎಲೆಯ ಪ್ರಭೇದ ಸೆವಾಯ್ (Savoy) ಅಥವಾ ಸೆಮಿ-ಸೆವಾಯ್ ಇರಬೇಕು. ಈ ವರ್ಷ ಎಪ್ರಿಲ್ನಲ್ಲಿ ಬರಬೇಕಾದ ಮಳೆ ಮೇ ತಿಂಗಳದಲ್ಲಿ ಬಿದ್ದು ಉಷ್ಣತಾಮಾನವೂ ಏರಿ ಎಂದಿಲ್ಲದೆ ಇಷ್ಟು ಹುಲುಸಾಗಿ ಬೆಳೆದಿದೆ. ಅದಕ್ಕೆ ಕಳೆದ ವರ್ಷ ಲಾಕ್ ಡೌನ್ ಪ್ರಾರಂಭವಾದಾಗ ಸಮಯದ ಸದುಪಯೋಗ ಮಾಡಿಕೊಂಡು ಈ 12×8 ಪ್ಲಾಟನ್ನು ಚೆನ್ನಾಗಿ ಅಗೆದು, ಕಳೆ ಕಿತ್ತಿ, ಹುಲ್ಲು ಸೆಗಣಿಯಿಂದಾದ ಫಾರ್ಮ್ ಯಾರ್ಡ್ ಗೊಬ್ಬರ ಹಾಕಿ, ನೀರೆರೆದು ಕೈಕಾಲು ಕೆಸರುಮಾಡಿಕೊಂಡುದರ ಫಲವಾಗಿ ಭೂಮಿಯಲ್ಲಿ ವರ್ಷಾನುಗಟ್ಟಲೆ ಬಿದ್ದಿದ್ದ ಬೀಜಗಳು ಮೊಳೆತು ಎರಡು ಫೂಟಿನಷ್ಟು ತಲೆಯೆತ್ತಿ ನಿಂತಿವೆ. 35 ವರ್ಗಳ ಕೆಳಗೆ ಬರಿ 40ಪೆನ್ಸಿಗೆ ಕೊಂಡ ಸ್ಪಿನಾಚ್ ಬೀಟ್ ಪ್ಯಾಕೆಟ್ಟಿನ ಬೀಜಗಳಿಂದ ಹುಟ್ಟಿ ಮೊದಲು ಸ್ಥಾಪಿಸಿದ ಸಸಿಗಳು ಬೆಳೆದು, ವರ್ಷಂಪ್ರತಿ ಚಳಿಗಾಲದ ವರೆಗೆ ಸತತವಾಗಿ ಅಡುಗೆಗೆ ಎಲೆಗಳ ಸರಬರಾಜು ಮಾಡಿ ಒಂದೆರಡು ಸಸಿಗಳು ಹೂವು ಬಿಟ್ಟು ಬೀಜ ಕಟ್ಟಿ ಮಣ್ಣಿಗೆ ಬಿದ್ದು ಫೀನಿಕ್ಸ್ ತರ ಪ್ರತಿವರ್ಷ ಎದ್ದು ಈಗ ಎಷ್ಟೋ ತಲೆಮಾರುಗಳ ಸೇವೆಯನ್ನು ಒದಗಿಸುತ್ತಿದೆಯೆಂದರೆ ಆಶ್ಚರ್ಯವಾಗುತ್ತದೆ. ಈ ತರಕಾರಿ ಆರೋಗ್ಯಕ್ಕೂ ಒಳ್ಳೆಯದಂತೆ. ಮೂರು ವಿಟಾಮಿನ್ನುಗಳು (A, C, B6), ಕ್ಯಾಲ್ಸಿಯಂ, ಮೆಗ್ನೀಸಿಯಂ ಅದಕ್ಕಿಂತ ಮೇಲಾಗಿ ಕಬ್ಬಿಣದ ಅಂಶ ಹೆಚ್ಚಂತೆ. ದೇಹಧಾರ್ಢ್ಯವನ್ನು ಹೆಚ್ಚಿಸುವಂಥ ಹೆಗ್ಗಳಿಕೆಯ ಈ ’ವೆಜ್’ 1929ರಲ್ಲಿ ಅವತರಿಸಿದ ಕಾರ್ಟೂನ್ ನಾಯಕ ’ಬಾಹು’ಬಲಿ ಪೊಪಾಯ್ (Popeye) ಎನ್ನುವ ಕಲಾಸಿಯ ಹೆಸರು ದೇಶವಿದೇಶದಲ್ಲಿ ಜನಪ್ರಿಯವಾಯಿತು. ಮಕ್ಕಳೆಲ್ಲ You must eat your greens (’ಹಸಿರನ್ನು ಮೇಯು’) ಅಂತ ಹಿರಿಯರಿಂದ ಉಪದೇಶ, ಧಮಕಿ ಕೇಳಿಸಿಕೊಳ್ಳುವಂತಾಯಿತು. ಬೆಂಗಳೂರಿನ ಅವರೆಕಾಳಿನ ಮೇಳ ದಂತೆ ಟೆಕ್ಸಾಸಿನ ಕ್ರಿಸ್ಟಲ್ ಸಿಟಿ ’ಸ್ಪಿನಾಚ್ ಫೆಸ್ಟ’ ಗೆ ಹೆಸರುವಾಸಿಯಾಗಿದೆ. ಕಳೆದ ಸಲ ಭಾರತಕ್ಕೆ ಹೋದಾಗ ಬೆಂಗಳೂರಿನ ಅವರೆಕಾಳಿನ ಜಿಲೇಬಿಯ ರೆಸಿಪಿಯನ್ನು ಸಹ ನೋಡಿದ್ದೆ. ಅದೇ ತರ ಸ್ಪಿನಚ್ ಜಿಲೇಬಿಯೂ ಸಾಧ್ಯವೇ? ಯಾರಿಗಾದರೂ ರೆಸಿಪಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ!
-ಶ್ರೀವತ್ಸ ದೇಸಾಯಿ
*************************************
ಎಲ್. ಎನ್. ಗುಡೂರ್ ಅವರ ಗೃಹದೋಟದ ಹಸಿರು ಸೊಬಗಿನ ಸಿರಿ!







ಕುಸುಮಾಲತೆಯರು ಪ್ರೇಮಲತಾ ಅವರ ಹೂದೋಟದಲ್ಲಿ !





I salute your patience Dr Desai sir. Gardening is highly satisfying but at a same time time consuming and physically draining.. your garden looks very healthy well very taken care all credit to you 🙏🏼
LikeLiked by 1 person
Thank you, Radhika. The bit you saw is only a small vegetable patch, relevant to the topic in question. The rest is a different story!
LikeLike
ಆತ್ಮೀಯ ದೇಸಾಯಿ ಅವರೆ!!!
ನಿಮ್ಮ ಪುಷ್ಟಿಕರ ಪಾಲಕಿನ ಕೈದೋಟದ ಹಸಿರು ನೋಡಿದರೆ ಹೇಳಬಹುದು ನಿಮ್ಮ ಕೃಷಿ ಕೃಚಳಕದ ನೈಪುಣ್ಯತೆಯನ್ನು!!
ಗುಡೂರರ ಹಸಿರು ಭರಿತ ತೋಟದ ಚಿತ್ರಗಳು ನಯನ ಮನೋಹರ!!!!
ಪ್ರೇಮ ನಿಮ್ಮ ಕುಸುಮಾಲತೆಯರು ಮನುಃಲಾದತೆ ನೀಡುತ್ತಿದ್ದಾರೆ!!!
LikeLike
ಈ ವರ್ಷ ಆ ಕರುಣಾಳು ‘ಪಾಲಕಿ’ ಸೃಷ್ಟಿ ಮಾತೆ ಭರ್ಪೂರ್ ಕೊಡುತ್ತಿರುವಾಗ ನನ್ನ ಕೈ ಚಾಲಾಕಿ ಕ್ಷುಲ್ಲಕವೇ! ಕೈಮುಗಿದು ಸ್ವೀಕಾರ ಮಾಡಿದರೆ ಸಾಕು ಧನ್ಯ! ನಿಮಗೂ! ಶ್ರೀವತ್ಸ
LikeLike
ಸಾಹಿತ್ಯ, ವಿಡಿಯೋ ಕೃಷಿಗಳಿಗೆ ಸಮನಾಗಿ ದೇಸಾಯಿಯವರು ಕೈತೋಟದಲ್ಲಿಯೂ ಕೃಷಿ ಮಾಡುತ್ತಿರುವ ಕೈಂಕರ್ಯಕ್ಕೆ ಶರಣು. ವಿಶ್ವ ಪರಿಸರ ದಿನಕ್ಕೆ ತಕ್ಕುದಾದ ಬರಹ.
ಜೊತೆಗೆ ಅನಿವಾಸಿ ಬಳಗದವರ ತೋಟದ ಚಿತ್ರಗಳೂ ಮನಸಿಗೆ ತಂಪು ತಂದವು.
– ರಾಂ
LikeLiked by 1 person
ಆಡು ಮುಟ್ಟದ ಸೊಪ್ಪಿಲ್ಲ. ದೇಸಾಯಿ ಅವರ ರೋಗ ಬಾರದ ಯೋಗ, ಕವನ ಬರೆಯುವ ಕರಗಳು, ಹಸಿರಿಗೆ ಉಸಿರು ಕೊಡುವ ಅಂಗುಲಿಗಳು, ನೇತ್ರದಲ್ಲಿ ನಿಪುಣತೆ .ಪಾಕಶಾಲೆಯಲ್ಲಿ ಪ್ರವೀಣತೆ. ಇವರ ಅಲಿಬಾಬಾ ಗುಹೆಯಲ್ಲಿ ಇನ್ನೇನು ಅತಿಶಯ ಕಾದಿದೆಯೋ!! 👍🏻👏
LikeLiked by 2 people
ನಿಮ್ಮ ಉದ್ಗಾರಕ್ಕೆ ಧನ್ಯವಾದಗಳು ಶ್ರೀರಾಮುಲು ಅವರೇ! ಗುಹೆಯನ್ನು ಬಿಡಿ ಈ ಸೊಪ್ಪು ಮಾತ್ರ ಈ ವರ್ಷ ಸೊಂಪಾಗಿ ಬೆಳೆದು ಕಣ್ಣಿಗೆ ತಂಪು ತಂದಿದೆ!! ಶ್ರೀವತ್ಸ
LikeLike
ದೇಸಾಯಿ ಅವರ hidden skills ಫೋಟೋ ಮತ್ತು ವಿಡಿಯೋ ಮಾತ್ರ ಅಲ್ಲ ತೋಟಗಾರಿಕೆ ಸಹ ಅಂತ ಈಗ ಗೊತ್ತಾಗಿದೆ. ಅಲ್ಲಾ
ಸ್ಪಿನಾಚ್ ಸೊಪ್ಪು ಮಾತ್ರ ಬೆಳಿಯುತ್ತೀರಿ ? ತರಕಾರಿಗಳನ್ನೂ ಟ್ರೈ ಮಾಡಿ. ಈ ಸೊಪ್ಪಿನ ಕೂಟು , ಮತ್ತು ಪಲ್ಯ (ಕಡ್ಲೆ ಹಿಟ್ಟು ಬೆರಿಸಿ ) ಚೆನ್ನಾಗಿರುತ್ತೆ. ಸೀತು ಸಲಹೆ ದೊಡ್ಡಪತ್ರೆ ಸೊಪ್ಪು , ಇದನ್ನ ಮನೆ ಒಳಗೆ ಬೆಳಸಬಹುದು , ಇದರ ತಂಬೂಳಿ ಮತ್ತು ಬಜ್ಜಿ special
LikeLike
ನಿಮ್ಮ ಸಲಹೆಗೆ ಋಣಿ , ರಾಮಮೂರ್ತಿಯವರೇ! Adventurous ಆಗಿ ಅಂಥದೇನಾದರೂ ಬೆಳೆಯುವದರಲ್ಲಿ ಸಫಲನಾದರೆ ಸೀತಾ ಅವರ ‘ಕಲೀನರಿ ಗೈಡನ್ಸ ‘ ಕೇಳುವೆ ಅಡುಗೆಗೆ! ಸಂಪಾದಕಿ ಸವಿತಾ ಅವರ ಹೊಸ ಸರಣಿ ಪ್ರಯೋಗ ಎಲ್ಲರ ಕುತೂಹಲ ಕೆರಳಿಸಿದ್ದು ಸಂತೋಷದ ಸಂಗತಿ. ಬೇರೆಯವರೂ ತಮ್ಮ ‘ಹಸಿರು’ ಬೆರಳಿನ ‘ ಸಿರಿಯ ಅನುಭವಗಳನ್ನು ಹಂಚಿಕೊಂಡರೆ ಎಲ್ಲರೂ ಮೆರೆಯ ಬಹುದು! ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು .
LikeLike
ಹಸಿರೇ ಉಸಿರು ಎಂಬ ಉದ್ಗ್ಘೋಷಕ್ಕೆ ಪುಷ್ಟಿ ಕೊಡುವಂತೆ ತಮ್ಮ ಕೈ ಕೆಸರಾದರೂ ಹಸಿರನ್ನು ಪೋಷಿಸಿ ಬೆಳೆಸಿ ಮೊಸರುಂಡ ಶ್ರೀವತ್ಸ ದೇಸಾಯಿಯವರ ಬರಹ ತುಂಬಾ ಆಸಕ್ತಿ ಪೂರ್ಣ ಹಾಗೂ ಆಪ್ತಬರಹ ಅನ್ನೋದ್ರಲ್ಲಿ ಎರಡು ಮಾತಿಲ್ಲ.ಆಡು ಮುಟ್ಟದ ಸೊಪ್ಪಿಲ್ಲ ಎಂಬ ಹಾಗೆ ದೇಸಾಯಿಯವರು ಕೈಯಾಡಿಸದ ವಿಷಯ, ಕ್ಷೇತ್ರ ಇಲ್ಲ ಅನಕೋತೀನಿ.ಬಸಳೆ ಸಾರು ನನಗೆ ಪರಿಚಯ ಆದದ್ದು , ರುಚಿ ತೋರಿಸಿದ್ದು ನಾವು ಮಲೆನಾಡಿನೂರಲ್ಲಿದ್ದಾಗ.. ಅವರೆಕಾಳು ಜಿಲೇಬಿ, ಕಡಲೆಬೇಳೆ ಜಿಲೇಬಿ ಗೊತ್ತು.ಸ್ಪಿನಾಚ್ ಜಿಲೇಬಿ ಟ್ರೈ ಮಾಡಿ ಖಂಡಿತ ರೆಸಿಪಿ ಕಳಸ್ತೀನಿ ಶ್ರೀ ವತ್ಸ ದೇಸಾಯಿಯವರೇ.ಅಂದರೆ ನಿಮ್ಮ ತೋಟದ ಸ್ಪಿನಾಚ್ ಜಿಲೇಬಿ ಯು ಸಮಾರಾಧನೆ ಗುಡೂರ ಅವರ ಸುಂದರ ಕೈದೋಟದಲ್ಲಾದರೆ ಆ ಜಿಲೇಬಿ ರುಚಿ ದ್ವಿಗುಣ ಆದೀತು.ಪ್ರೇಮಲತಾ ಅವರ ತೋಟದ ಹೂಗಳು ಪುಷ್ಪಪ್ರಿಯಳಾದ ನಂಗೆ ಒಂಥರಾ ಹಾಯಿ ನೀಡಿತು.
ಒಟ್ಟಲ್ಲಿ ಈ ವಾರದ ಅನಿವಾಸಿ ಅಂಕಣ ತುಂಬ ಸುಂದರ!! ದೇಸಾಯಿಯವರಿಗೆ ಅಭಿನಂದನೆಗಳೊಡನೆ ವಂದನೆಗಳು.ಹಾಗೇ ಪ್ರೇಮಲತಾ ಹಾಗೂ ಗುಡೂರ ಅವರಿಗೂ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLiked by 2 people
ನಿಮ್ಮ ಸುಂದರ ಪ್ರತಿಕ್ರೆಯೆಗೆ ಧನ್ಯವಾದಗಳು. ನೀವು ನಳಪಾಕದಲ್ಲಿ ನುರಿತವರಂತೆ ಕಾಣುತ್ತದೆ. ಜಿಲೇಬಿ ರೆಸಿಪಿಗೆ ಕಾಯುತ್ತಿರುವೆ. ಇನ್ನೊಂದು ತಿಂಗಳಲ್ಲಿ ಸ್ಪಿನಾಚ್ ಸೀಸನ್ ಮುಗಿಯುವದರಲ್ಲಿ ಅದು ಬನ್ದು ನನ್ನ ಕೈಸೇರಲಿ. ಬಾಯಿ ಸಿಹಿಯಾಗಲಿ!
LikeLike
ನಮಸ್ಕಾರ ದೇಸಾಯಿ ಅವರೆ. ನಿಮ್ಮ ಲೇಖನ ಸುಂದರವಾಗಿದೆ ಅಲ್ಲದೆ ಮಾಹಿತಿಪೂರ್ಣವೂ ಹೌದು. ನಿಮ್ಮ ಲೇಖನದಲ್ಲಿ ಬರುವ ಸ್ಪಿನಾಚ್ ಮೂಲದಲ್ಲಿ ಸೊಪ್ಪಿನ ಕುಟುಂಬ Amaranthaceae family ಗೆ ಸೇರಿದ್ದು. ಇದನ್ನು ಸಸ್ಯಶಾಸ್ತ್ರದಲ್ಲಿ ಬಳಸುವ ಲ್ಯಾಟಿನ್ ಭಾಷೆಯಲ್ಲಿ Spinacea oleracea ಎನ್ನುತ್ತಾರೆ. ನಿಮ್ಮ ಲೇಖನದಲ್ಲಿ ಬರೆದಿರುವಂತೆ, ಈ ಸೊಪ್ಪು ಆರೋಗ್ಯಕ್ಕೆ ಬಹಳ ಉತ್ತಮವಾದ ಸೊಪ್ಪು. ಖನಿಜಯುಕ್ತವಾಗಿದ್ದು, ರಕ್ತ ಸಮೃದ್ಧಿಗೆ ಬಹಳ ಸಹಕಾರಿಯಾದ ತರಕಾರಿ. ನೀವು ಹೆಸರಿಸಿರುವ ಬಸಳೆ ಸೊಪ್ಪನ್ನು ಸಸ್ಯಶಾಸ್ತ್ರದಲ್ಲಿ Basella alba ಎನ್ನುವುದು ನಿಜ. ಆದರೆ ಬಸಳೆ ಸೊಪ್ಪಿನ ಕುಟುಂಬವನ್ನು Basellaceae ಎನ್ನುತ್ತೇವೆ. ಈ ಕುಟುಂಬ ಮತ್ತು ಸ್ಪಿನಾಚ್ ಕುಟುಂಬಗಳು ಒಂದೇ Order ನಲ್ಲಿದ್ದು, ಅವೆರಡರ ನಡುವೆ ಸಾಮ್ಯಗಳಿವೆ. ಎರಡು ಸೊಪ್ಪುಗಳೂ ಮನೆಗಳ ಕೈತೋಟದಲ್ಲಿದ್ದರೆ ತುಂಬಾ ಸಂತೋಷದ ಸಮಾಚಾರ. ನಮ್ಮ ಮನೆಯಲ್ಲಿ ಸ್ಪಿನಾಚ್ ಸಾರು, ಸೂಪ್, ಪಲ್ಯ ಮತ್ತು ಕೂಟು ನಾನು ಮಾಡುವ ಅಡುಗೆಯಲ್ಲಿ ಸೇರಿವೆ. ನೀವು ನುರಿತ ತೋಟಗಾರರೆಂದು ಈ ಲೇಖನದಿಂದ ತಿಳಿದು ಬಂತು. ಇಲ್ಲಿ ನಮ್ಮ ಮನೆಯಲ್ಲೂ ತರಕಾರಿ ಹೂವುಗಳನ್ನು ಬೆಳೆಸುತ್ತಿದ್ದೇವೆ. ಇತ್ತೀಚಿಗೆ ಸತ್ಯ ಗಾರ್ಡಿನಿಂಗ್ ಕೆಲಸದಲ್ಲಿ ಬಹಳ ಆಸಕ್ತಿ ವಹಿಸುತ್ತಿದ್ದಾರೆ. ಇವತ್ತು ನಾಳೆ ಸಮಯ ಸಿಕ್ಕರೆ ನನ್ನದೊಂದು ಲೇಖನವನ್ನು ಬರೆದು ಫೋಟೋಗಳ ಜೊತೆಗೆ ಕಳಿಸಿಕೊಡುತ್ತೇನೆ. ಈ ಲೇಖನ ಸರಣಿ ಒಂದು ಉತ್ತಮವಾದ ಆರಂಭ. ಗುಡೂರ್ ಮತ್ತು ಪ್ರೇಮಲತಾ ಅವರ ಕೈತೋಟಗಳ ಚಿತ್ರಗಳು ಬಹಳ ಸುಂದರವಾಗಿವೆ.
ಉಮಾ ವೆಂಕಟೇಶ್
LikeLike
ಉಮಾ ಅವರೆ, ಸಸ್ಯ ಶಾಸ್ತ್ರದ ಡಾಕ್ಟರೇಟ್ ಪದವೀಧರರಾದ ನಿಮ್ಮ ಕಾಮೆಂಟಿಗೆ ಧನ್ಯವಾದಗಳು. ನನ್ನಿಂದ ಅಂಥದೇನೂ ಪ್ರಮಾದವಾಗಿಲ್ಲ ಅಂತ ನಿಟ್ಟುಸಿರು ಬಿಡುತ್ತೇನೆ. ನಿಮ್ಮ ಬರವಣಿಗೆ ಲೇಖನವೆನ್ನುವ ತೋಟದಲ್ಲಿಯ ಕಳೆ ಕಿತ್ತಿ ಓರಣ ಮಾಡಿದಂತಾಗಿದೆ. ಮತ್ತು ನಾನೇನೋ weeds ತಂದಿತ್ತು ಗೊಬ್ಬರ ಹಾಕಿ ಯಾ ಒಳ್ಳೆಯ ಗಿಡವನ್ನು ಕಿತ್ತೆಸೆಯುವಂಥ ಅಪರಾಧ ಮಾಡಿಲ್ಲ ಅಂತ ಸಮರ್ಥನೆ ಕೊಟ್ಟಿದ್ದೂ ಸಮಾಧಾನ ಮತ್ತು ಮಾರ್ಗದರ್ಶನಕ್ಕೆ ಋಣಿ. ನಿಮ್ಮವರಾದ ಸತ್ಯಪ್ರಕಾಶರ ಲೇಖನವನ್ನು ಹಸಿರು- ಉಸಿರಿನ ಸರಣಿಯಲ್ಲಿ ಓದುವ ಕಾತುರ ನಮಗೆಲ್ಲ ಇದೆ. ಬೇಗನೆ ಆಗಲಿ!ಶ್ರೀವತ್ಸ ದೇಸಾಯಿ
LikeLike
ಧನ್ಯವಾದಗಳು ಉಮಾ !
LikeLike
ನಮಗೆ ಬಸಳೆ ಸೊಪ್ಪನ್ನು ಬಳಸಿ ಗೊತ್ತು, ಬೆಳೆಸಿ ಗೊತ್ತಿಲ್ಲ. ದೇಸಾಯಿಯವರು ಇದರಲ್ಲೂ ಸಿದ್ಧ (ಹಸಿರು) ಹಸ್ತರು ಎಂದು ಗೊತ್ತಿರಲಿಲ್ಲ. ಅರ್ಥಪೂರ್ಣ ಮಾಹಿತಿಯುಕ್ತ ಲೇಖನ. ಜೊತೆಗೆ ಗುಡೂರ್ ಮತ್ತು ಪ್ರೇಮಲತಾ ಅವರ ಸುಂದರ ಛಾಯಾಚಿತ್ರಗಳು ಈ ಲೇಖನಕ್ಕೆ ಕಳೆ ನೀಡಿವೆ, ಮನಸಿನ ಕಳೆ ನೀಗಿಸಿವೆ. – ಕೇಶವ
LikeLike
ಕಳಕಳಿಯ ಮಾತುಗಳಿಗೆ ಕೇಶವರಿಗೆ ಧನ್ಯವಾದಗಳು. ತೋಟದಲ್ಲಿ ಕಳೆ ಇದ್ದೆ ಇರುತ್ತದೆ. ಲೇಖನ ಕಳಪೆ ಇರಲಿ, ಇಲ್ಲದಿರಲಿ ಅಲ್ಲಿಯೂ ಕಳೆ (typo) ಸೇರಿಕೊಳ್ಳುವದು ಅಪರೂಪವಲ್ಲ. ಆ ಕಳೆಕಿತ್ತುವವರೂ ಆರೋಗ್ಯವರ್ಧಕರು! ಶ್ರೀವತ್ಸ
LikeLike
ಶ್ರೀವತ್ಸ ದೇಸಾಯಿ ಅವರು ಉತ್ತಮ ಮಾತುಗಾರರು, ಬರಹಗಾರರು, ಛಾಯಾಗ್ರಾಹಕರು ಎಂಬುದು ನಮಗೆಲ್ಲ ಗೊತ್ತಿದೆ. ಅವರು ತೋಟಗಾರರಾದದ್ದು ಗೊತ್ತಿರಲಿಲ್ಲ. ಲೇಖನ ಸೊಗಸಾಗಿದೆ (ಎಂದಿನಂತೆ). ಪಾಲಕ ಸಾರನ್ನು ನೆನೆಸಿಕೊಂಡು ಬಾಯಲ್ಲಿ ನೀರು ಬಂತು. ಅವರ ಕೈ ಅಡುಗೆ ರುಚಿ ಡೊಂಕ್ಯಾಸ್ಟರಿಗೆ ಬಂದಾಗ ನೋಡಿದ್ದೇನೆ.
ಅರುಣ ನಾಡಗೀರ
LikeLike
ಧನ್ಯವಾದಗಳು ನನ್ನ ಗುರುಪುತ್ರರಿಗೆ! ನನ್ನ ಶಾಲಾ ಗುರುಗಳಾದ ನಿಮ್ಮ ತಂದೆಯೇ ಕಲಿಸಿದ್ದು, ಕೈಕೆಸರು ಮಾಡಿಕೊಳ್ಳುವದರ ಮಹತ್ವ ಹೇಳಿ , ಕಳೆ ಕಿತ್ತಿ ತಿದ್ದಿ ನಮ್ಮ ಮನಸ್ಸನ್ನು ಹಸನಗೊಳಿಸಿ, ‘ಪಾಲಕ’ರೂ ಆಗಿ , ಕಲಿಕೆಯ ಸ್ಪಿನಾಚ್ ನಂಥ ಗಟ್ಟಿ ಬೀಜಬಿತ್ತಿ ಬೆಳಿಸಿದವರು. ಪ್ರಾತಃಸ್ಮರಣೀಯರು. ಎಳೆ ಮನಗಳ ತೋಟಗಾರರಾಗಿದ್ದರು. ಅವರನ್ನು ಈ ನೆವದಲ್ಲಿ ನೆನೆಯುವ ಅವಕಾಶ ನೀನು ಕಲ್ಪಿಸಿಕೊಟ್ಟಿ! ಅವರ ಹೆಸರು ಸಹ ಡಾಫೋಡಿಲ್ ಲೇಖನದಲ್ಲಿ ಬಂದಿದೆ! ನಿಮ್ಮ ಮನೆಯಲ್ಲಿ ಪ್ರತಿವಾರ ತಪ್ಪದೆ ‘ಅನಿವಾಸಿ” ಓದಲ್ಪಡುವುದನ್ನು ಬಲ್ಲೆ! ಹಾಗೆಯೇ ಮುಂದುವರೆಯಲಿ! ಶ್ರೀವತ್ಸ
LikeLike
ಶ್ರೀವತ್ಸ ಅವರ ಯಾವುದೇ ಬರಹವನ್ನು ನೋಡಿದರೂ ಅಲ್ಲಿ ಕೆಲವು ಸ್ವಾರಸ್ಯಕರ ಘಟನೆ, ಮಾಹಿತಿ, ಲಘು ಹಾಸ್ಯ , ಅಥವಾ ಕೆಲವು ಲೋಕೋಕ್ತಿಗಳು ಇದ್ದೆ ಇರುತ್ತವೆ. ಅಲ್ಲಿ ಭಾರತೀಯ ಮತ್ತು ಆಂಗ್ಲ ಸಂಸ್ಕೃತಿಗಳ ಮುಖಾ ಮುಖಿ ಕೂಡ ನಮಗೆ ದಕ್ಕುತ್ತದೆ. ಬರಹ ಚಿಕ್ಕದಾದರೂ ಅಲ್ಲಿ ಕೆಲವು ಕಲಿಕೆಯ ಅಂಶಗಳು ಇರುತ್ತವೆ. ಮುಂದೊಮ್ಮೆ ಅವರ ಸ್ಪಿನಾಚ್ ಸೊಪ್ಪಿನ ಬಜ್ಜಿ ಅಥವಾ ಸ್ಪಿನಾಚ್ ಸಾರನ್ನು ಸವಿಯಲು ನನಗೆ ಒಂದು ಅವಕಾಶ ಒದಗಿ ಬರಲಿ ಎಂದು ಹಾರೈಸುತ್ತೇನೆ. ಹಾಗೆಯೇ ಮುಂದೊಮ್ಮೆ ಗುಡೂರ್ ಅವರ ಮನೆಯಲ್ಲಿ ‘ಅನಿವಾಸಿ ಗಾರ್ಡನ್ ಮೀಟಿಂಗ್’ ಮಾಡುವ ಅವಕಾಶ ಒದಗಿ ಬರಲಿ ಎಂದು ಹಾರೈಸುತ್ತೇನೆ. ಪ್ರೇಮಲತಾ ಪ್ರೀತಿಯಿಂದ ಬೆಳೆಸಿದ ಕೋಮಲ ಸುಂದರ ಹೂಗಳು ಕಣ್ಣಿಗೆ ತಂಪಾಗಿವೆ.
LikeLiked by 2 people
ತುಂಬಾ ಧನ್ಯವಾದಗಳು, ಪ್ರಸಾದ ಅವರೇ. ರತ್ನಪರೀಕ್ಷಕನಂತೆ ನಿಮ್ಮ ದೃಷ್ಟಿ! ನನ್ನ ಮನೆಯ ಸ್ಪಿನಾಚ್ ಹುಳಿಗೆ ಮುಕ್ತ ಆಮಂತ್ರಣ ನಿಮಗೆ!
LikeLike
ನಿಜ, ಅದು ಮತ್ತು ಹೊರ ಸಿರಿ-ಗಾಳಿಯನ್ನನುಭವಿಸುವದೇ ಟಾನಿಕ್ ಸಹ! ಪ್ರತಿಕ್ರಿಯೆಗೆ ಧನ್ಯವಾದಗಳು, ಅನಾಮಿಕ ರಸಿಕರೇ!
LikeLiked by 1 person
ನನ್ನ ಬಸಳಿ ಪಲ್ಯ ‘ಅನಿವಾಸಿ’ಯ ಟೇಬಲ್ಲಿಗೆ ಬರುತ್ತಿದ್ದಂತೆ ಚಟ್ ಚಟ್ ಅಂತ ತಮ್ಮರಿವಿನ ಒಗ್ಗರಣೆಯ ಕಾಮೆಂಟ್ ಹಾಕಿ ರುಚಿ ಹೆಚ್ಚಿಸಿ ಈ ಚುಟುಕದಿಂದ ಅಸದಳ ಆನಂದ ಕೊಟ್ಟ ಮುರಳಿಯವರಿಗೆ ಧನ್ಯವಾದಗಳು!
LikeLiked by 1 person
ಹರಿವೆಯೇ ಗುರು ಎಂದ
‘ಪಾಲಕ’ನ ಓಲೈಕೆಗೆ
ಸ್ಪಿನಾಚಿನ ನಾಚ್!
— ಮುರಳಿ ಹತ್ವಾರ್
LikeLiked by 3 people
ಹಿತ್ತಲ ಗಿಡವೆ ಮದ್ದು… Green and vibrant- He eats all his spinach to make himself strong…
LikeLiked by 1 person