ಕು.ಚಿ. ಸುರಂಗಗಳು-ದಾಕ್ಷಾಯಿಣಿ ಗೌಡ

ಪ್ರಿಯ ಮಿತ್ರರೆ, ಕೋವಿಡ್ ಮಹಾಮಾರಿಯ ಹಾವಳಕ್ಕೆ ತುತ್ತಾಗಿ ಹೆಣಗುತ್ತಿರುವ ಪ್ರಪಂಚಲ್ಲಿ ವಿದೇಶಗಳ ಪ್ರಯಾಣ ಕಳೆದ ವರ್ಷದಲ್ಲಿ ಬಹು ಕಡಿಮೆಯಾಗಿದೆ. ಶೀಘ್ರದಲ್ಲೇ ಆರಂಭವಾಗಲೆನ್ನುವ ಆಶಾವಾದದೊಂದಿಗೆ, ನಮ್ಮ ಕಳೆದ ವರ್ಷದ ವಿಯಟ್ನಾಮ್ ಭೇಟಿಯನ್ನು ನೆನಪಿಸಿಕೊಳ್ಳುವ ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನನ್ನದು – ದಾಕ್ಷಾಯಿಣಿ

ಕು.ಚಿ. ಸುರಂಗಗಳು ( Cu.Chi tunnels in Vietnam)

ಹೋದ ವರ್ಷ (೨೦೨೦) ಮಾರ್ಚ್ ತಿಂಗಳ ಮೊದಲ ೧೦ ದಿನಗಳನ್ನು, ವಿಯಟ್ನಾಮ್ ದೇಶದಲ್ಲಿ ಕಳೆಯುವ ಅವಕಾಶ ನಮ್ಮದಾಗಿತ್ತು. ನಾವು ಕಾಂಬೋಡಿಯಾದ ಸಿಯಮ್ ರೀಪ್ ನಗರದಿಂದ, ವಿಯಟ್ನಾಮ್ ನ ರಾಜಧಾನಿ ಹನಾಯ್ ತಲುಪಿ, ನಂತರ ಅಲ್ಲಿನ ಇನ್ನೆರಡು ನಗರಗಳಲ್ಲಿ ಕೆಲ ದಿನ ಕಳೆದು, ಕೊನೆಯ ಭಾಗದ ಪ್ರಯಾಣದಲ್ಲಿ ದಕ್ಷಿಣದ ಮುಖ್ಯ ನಗರ ಸೈಗಾನ್ ಗೆ ಭೇಟಿಯಿತ್ತೆವು. ಈ ದೇಶದಲ್ಲಿ ಕೆಲವಾರು ಜಾಗಗಳಿಗೆ ಭೇಟಿಯಿತ್ತಿದ್ದರೂ, ನನ್ನ ಮನದಲ್ಲಿ ತನ್ನದೇ ರೀತಿಯ ಅಚ್ಚುಹೊತ್ತಿದ ಕು.ಚಿ. ಸುರಂಗಕ್ಕೆ ಭೇಟಿಯಿತ್ತ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಹೊ.ಚಿ.ಮಿನ್ ನಗರ ಅಥವಾ ಅದರ ಹಳೆಯ ಹೆಸರಿನಿಂದ ಜನಪ್ರಿಯವಾದ ಸೈಗಾನ್ ನಗರ, ಈ ದೇಶದ ಆರ್ಥಿಕ ರಾಜಧಾನಿಯೆಂದು ಹೇಳಬಹುದು. ಸೈಗಾನ್ ನಿಂದ ಕು.ಚಿ. ಜಿಲ್ಲೆಗೆ ಒಂದು ಘಂಟೆಯ ಪಯಣ. ಪ್ರವಾಸದ ಎಜೆಂಟ್ ನಮ್ಮಿಬ್ಬರಿಗೆಂದೆ ಹೋಟೆಲಿನಿಂದ, ಕಾರು ಮತ್ತು ಆಂಗ್ಲ ಭಾಷೆ ತಿಳಿದಿರುವ ಗೈಡ್ ನ ಮುಂಚೆಯೆ ಯೋಜಿಸಿದ್ದರಿಂದ ಈ ಯಾತ್ರೆಯಲ್ಲಿ ನಮಗೆ ಯಾವ ರೀತಿಯ ತೊಂದರೆಯಾಗಲಿಲ್ಲ.

ನಾನು ಬಹಳಷ್ಟು ಅಮೆರಿಕೆಯ ಚಲನಚಿತ್ರಗಳಲ್ಲಿ ” ವಿಯಟ್ನಾಮ್ ಯುದ್ಧ” ಬಗ್ಗೆ ನೋಡಿದ್ದೆ ಮತ್ತು ಕೇಳಿದ್ದೆನಾದರೂ, ಅದರ ನಿಜವಾದ ಅರ್ಥ ಈ ” ಕು.ಚಿ ಟನ್ನಲ್ಸ್” ನ ವೀಕ್ಷಿಸಿದಾಗಲೆ ತಿಳಿದಿದ್ದು. ನಿಮಗೆ ತಿಳಿದ೦ತೆ ಈ ದೇಶದ ನೆಲ ಮೇಲಿಂದ ಕೆಳಗೆ ಒಂದು ಚಿಕ್ಕ ಪಟ್ಟಿಯಂತಿದೆ. ಆರ್ಥಿಕ, ಗಾತ್ರ, ಸೈನ್ಯಬಲ ಮತ್ತೆಲ್ಲದರಲ್ಲೂ ಚಿಕ್ಕದಾದ ಈ ದೇಶ, ಅತಿ ಭಲಾಡ್ಯವಾದ, ಶ್ರೀಮಂತವಾದ, ಮುಂದುವರಿದ ಅಮೆರಿಕೆಯಂತಹ ದೇಶವನ್ನು ಎದುರಿಸಿ ಯುದ್ಧಮಾಡಿರುವುದು ಒಂದು ರೀತಿಯ ಪವಾಡವೆ ಸರಿ. ಈ ಯುದ್ಧದಲ್ಲಿ ಗೆಲ್ಲಲಾರದೆ, ಪ್ರಂಪಚದ ಖಂಡನೆಗೆ ಪಾತ್ರವಾಗಿ ಅಮೆರಿಕ ರಾಜಿ ಮಾಡಿಕೊಳ್ಳಬೇಕಾಯಿತು. ಈ ಭಾಗದ ಪ್ರಪಂಚದಲ್ಲಿ ಬೆಳೆಯುತ್ತಿರುವ ”ಕಮ್ಯೂನಿಸಂ” ಮತ್ತು ಚೀನಾ ದೇಶದ ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇಂತಹ ಯುದ್ಧವನ್ನು ವರ್ಷಾನುಗಟ್ಟಲೆ ಕಾದ ಅಮೆರಿಕಾ, ಈ ಯುದ್ಧದಲ್ಲಿ ಮಾಡಿದ ಪಾಪಕೃತ್ಯಕ್ಕೆ, ಅಪರಾಧಕ್ಕೆ ಮತ್ತು ಅನ್ಯಾಯಕ್ಕೆ ಯಾವ ರೀತಿಯ ಶಿಕ್ಷೆ ಕೊಟ್ಟರೂ ಕಡಿಮೆಯೆ. ಆದರೆ ಪ್ರಪಂಚದಲ್ಲಿ ಶ್ರೀಮಂತರಿಗೆ ಸಿಗುವ ನ್ಯಾಯವೆ ಬೇರೆಯಲ್ಲವೆ?

ಅರವತ್ತರ ದಶಕದಲ್ಲಿ ಶುರುವಾದ ಈ ಯುದ್ಧ ೧೯೭೫ ರ ತನಕ ನಡೆಯಿತು. ಈ ಗೆರಿಲ್ಲಾ ಯುದ್ಧವನ್ನು ಮಾಡಿದ ವಿಯಟ್ನಾಮ್ ಜನರ, ಕಷ್ಟಸಹಿಷ್ಣುತೆ, ಧೃಢನಿಶ್ಚಯದ ಅಗಾಧತೆ, ಶಕ್ತಿಗಳು ವರ್ಣನೆಗೆ ನಿಲುಕದ್ದು. ಅಮೆರಿಕ, ಫ್ರಾನ್ಸ್, ಜಪಾನ್ ಮುಂತಾದ ದೇಶಗಳ ಪತ್ರಕರ್ತರು ಇಲ್ಲಿಗೆ ಭೇಟಿಕೊಟ್ಟು, ಇಲ್ಲಿ ನೆಡೆದ ಅಮಾನುಷತೆಯ ಚಿತ್ರಗಳನ್ನು, ಲೇಖನಗಳನ್ನು ಪ್ರಕಟಿಸಲು ಶುರುಮಾಡಿದಾಗ, ಪ್ರಪಂಚದಾದ್ಯಂತ ಇದನ್ನು ಖಂಡಿಸಿ ಮುಷ್ಕರಗಳು ನಡೆದು, ಅಮೆರಿಕ ಎಲ್ಲಾ ದೇಶಗಳ ಅವಹೇಳನಕ್ಕೆ ಗುರಿಯಾಗಿ, ನಾಚಿಕೆಯಿಂದ ತಲೆಬಾಗಿ ಈ ಜಾಗ ಖಾಲಿ ಮಾಡಬೇಕಾಯಿತು. ಆ ಯುದ್ಧದಲ್ಲಿ ಹೋರಾಡಿದ ಅಮೆರಿಕೆಯ ಸೈನಿಕರಿಗೆ, ಅಮೆರಿಕೆಯ ಪ್ರವಾಸಿಗರಿಗೆ ಇದು ಜನಪ್ರಿಯ ಗಮ್ಯಸ್ಥಾನ.

Photos from Personal album

ಈ ಕು.ಚಿ ಸುರಂಗಗಳನ್ನು, ನಮ್ಮ ಲಂಡನ್ ಟ್ಯುಬ್ ತರಹ, ವಿಭಿನ್ನ ಮಟ್ಟದಲ್ಲಿ ಕೊರೆಯಲಾಗಿದೆ. ಇದಕ್ಕೆ ಯಾವರೀತಿಯ ಬೆಳಕು ಬೀಳುವುದು ಸಾಧ್ಯವಿಲ್ಲ. ಬಹಳ ಎತ್ತರವಿಲ್ಲದ, ತೆಳುಮೈಕಟ್ಟಿನ ಇಲ್ಲಿಯ ಜನರೆ ಇದರಲ್ಲಿ ಬಗ್ಗಿ ನಡೆಯಬೇಕು ಮತ್ತು ಕೆಲವಡೆ ತೆವಳಬೇಕು. ಬೆಳಿಗ್ಗೆಯಿಡೀ ಈ ಸುರಂಗದಲ್ಲಿದ್ದು, ಅಲ್ಲಿಯೆ ಅಡುಗೆ ಮಾಡಿ, ಅದರಲ್ಲೇ ಬಾವಿ ತೆಗೆದು ನೀರಿನ ವ್ಯವಸ್ಥೆಯನ್ನು ಸಹ ಮಾಡಿಕೊಂಡು, ರಾತ್ರಿಯ ವೇಳೆ ಮಾತ್ರ ಹೋರಾಡಲು ಈ ಜನ ಹೊರಗೆ ಬರುತ್ತಿದ್ದರು. ಇದರಲ್ಲೆ ಯುದ್ಧದ ಗಾಯಾಳುಗಳಿಗೂ ಚಿಕಿತ್ಸೆ ಮಾಡಲಾಗುತ್ತಿತ್ತು. ಮಕ್ಕಳ ಹೆರಿಗೆಯೂ ಈ ಕಗ್ಗತ್ತಲ ಸುರಂಗದಲ್ಲೇ ಆಗುತ್ತಿತ್ತೆಂದು ಊಹಿಸಲೂ ಕಷ್ಟವಾಗುತ್ತದೆ. ಸುರಂಗದಲ್ಲಿ ಒಂದೆಡೆ ಅಡಿಗೆ ಮಾಡಿದರೆ ಅದರ ಹೊಗೆ ಬೇರೆಕಡೆಯೆ ಬರುತ್ತದೆ. ಇದು ವೈರಿಗಳನ್ನು ದೂರವಿಡುವ ಜಾಣತನದ ಬಹು ತಂತ್ರಗಳಲ್ಲಿ ಒಂದು.

ಸುರಂಗವಾಸಿಗಳು, ಕತ್ತಲಾದ ನಂತರ ಹೊರಬಂದು, ಅಮೆರಿಕೆಯ ಸೈನಿಕರು ಸಿಕ್ಕಿಬೀಳುವಂತೆ ಮತ್ತು ಸಾಯುವಂತೆ ಟ್ರಾಪ್ ಗಳನ್ನು ನಿರ್ಮಿಸುವುದಲ್ಲದೆ, ದವಸಧಾನ್ಯ, ಔಷಧಿ, ಕಟ್ಟಿಗೆಗಳನ್ನು ಶೇಖರಿಸುವುದಲ್ಲದೆ, ವ್ಯವಸಾಯವನ್ನು ಸಹ ಮಾಡುತ್ತಿದ್ದರೆಂದು ಹೇಳುತ್ತಾರೆ. ಇವರು ವೈರಿಗಳಿಗೆ ನಿರ್ಮಿಸಿರುವ ಟ್ರಾಪ್ ಗಳು ನಿಜಕ್ಕೂ ಭಯಾನಕ. ಈ ಸುರಂಗಗಳಲ್ಲಿ ವಿಯ್ಟ್ ಕಾಂಗ್ ಸೈನಿಕರು ಮಾತ್ರವಲ್ಲದೆ, ಹೆಂಗಸರು, ಮಕ್ಕಳೂ ಸಹ ವಾಸವಾಗಿದ್ದರು. ಬಹಳ ಬಾರಿ ಬಾಂಬ್ ಗಳ ದಾಳಿಯಾದಗ ವಿಯ್ಟ್ ಕಾಂಗ್ ಯೋಧರು, ದಿನಗಟ್ಟಲೆ ಈ ಸುರಂಗಳಲ್ಲೆ ಇರಬೇಕಾಗುತ್ತಿತ್ತು. ಕತ್ತಲೆಯ ಜೊತೆಗೆ, ಸೊಳ್ಳೆ, ಇರುವೆ, ಹಾವು, ಚೇಳು, ಜೇಡ ಮತ್ತು ಹೆಗ್ಗಣಗಳ ಕಾಟ ಬೇರೆ. ಬಹಳಷ್ಟು ಜನ ಮಲೇರಿಯಾದ ಬೇಗೆಗೆ ತುತ್ತಾಗಿ ಸಾವನ್ನಪಿದರೆಂದು ಹೇಳುತ್ತಾರೆ

ಅಮೆರಿಕಾದ ಸೈನಿಕರು , ಸುರಂಗದೊಳಗೆ, ಬಿಸಿ ಟಾರ್, ಹೊಗೆ, ನೀರು ಸುರಿದರೂ ಈ ಗೆರಿಲ್ಲಾಗಳು, ಸುರಂಗದ ಕತ್ತಲಿನಲ್ಲಿ,ವಿವಿಧ ದಾರಿ ಹಿಡಿದು, ತಪ್ಪಿಸಿಕೊಳ್ಳುತ್ತಿದ್ದರು. ಅದರ ಜೊತೆ ಈ ಸುರಂಗಗಳನ್ನು ನಿರ್ನಾಮ ಮಾಡಲು ಅಮೆರಿಕಾದವರಿಂದ ಸತತ ಬಾಂಬ್ ಗಳ ದಾಳಿ ಬೇರೆ. ನಂತರದ ವರ್ಷಗಳಲ್ಲಿ ತರಬೇತಿ ಪಡೆದ ಅಮೆರಿಕೆಯ ಸೈನಿಕರು ಬೆಳಕಿನ ದೊಂದಿ, ಕತ್ತಿ ಹಿಡಿದು, ಇಂಚು ಇಂಚಾಗಿ ಈ ಸುರಂಗಗಳನ್ನು ಶೋಧಿಸಲು ಶುರುಮಾಡಿದರು. ಈ ಸೈನಿಕರನ್ನು ”ಸುರಂಗದ ಇಲಿ” ಗಳೆಂದು ಕರೆಯಲಾಗುತ್ತಿತ್ತು.ಈ ರೀತಿ ವರ್ಷಾನುಗಟ್ಟಲೆ ವಾಸಿಸಿ, ಆಧುನಿಕ ಆಯುಧಗಳು, ಬಾಂಬ್ ಗಳನ್ನು ಹೊಂದಿದ ವೈರಿಗಳನ್ನು ಎದುರಿಸಿದ ಈ ವಿಯಟ್ನಾಮ್ ಜನರ ದೃಢನಿಶ್ಚಯಕ್ಕೆ, ಪಟ್ಟಕಷ್ಟಕ್ಕೆ, ಎದುರಿಸಿದ ಸಾವುನೋವುಗಳಿಗೆ ಯಾವ ರೀತಿಯ ಹೋಲಿಕೆಯಿರುವುದೂ ಸಾಧ್ಯವಿಲ್ಲ.

ವಿಯಟ್ನಾಮ್ ಸರ್ಕಾರ ಈಗ ೧೨೧ ಕಿ ಮಿ ( ೭೫ ಮೈಲಿ) ಸುರಂಗವನ್ನು ರಕ್ಷಿಸಿ ಇದನ್ನು ಪ್ರವಾಸಿಗರಿಗೆ ನೋಡಲು ಅನುಕೂಲ ಮಾಡಿಕೊಟ್ಟಿದೆ. ಕೆಲವು ಭಾಗಗಳಲ್ಲಿ ಪ್ರವಾಸಿಗರು ಸುರಂಗದಲ್ಲಿ ಇಳಿದು ತೆವಳಿ ಹೊರಬರಬಹುದು. ಪ್ರವಾಸಿಗರಿಗಾಗಿ ಕೆಲವು ಸುರಂಗಗಳನ್ನು ದೊಡ್ಡದು ಮಾಡಿದ್ದಾರೆ. ಬೆಳಕಿಗಾಗಿ ವಿದ್ಯುತ್ ಅನುಕೂಲತೆಯನ್ನು ಈ ಸುರಂಗಗಳಲ್ಲಿ ಒದಗಿಸಿದ್ದಾರೆ. ವಿಯಟ್ ಕಾಂಗ್ ಯೋಧರು ತಿನ್ನುತ್ತಿದ್ದ ಆಹಾರದ ಸ್ಯಾಂಪಲ್ ಸಹ ಸಿಗುತ್ತದೆ. ಯುದ್ದದ ಬಗೆಗೆ ತಿಳಿಸಲು ಅಲ್ಲಲ್ಲಿ ಟಿ.ವಿ ಗಳ ವ್ಯವಸ್ಠೆಯಿದೆ. ಇದೊಂದು ಅಮೋಘ ರೀತಿಯ ನಿರ್ಮಾಣ, ಈ ಸುರಂಗಳು ಕು.ಚಿ ಜಿಲ್ಲೆಯಲ್ಲಿ ನೂರಾರು ಮೈಲಿಗಟ್ಟಲೆ ಇದೆ ಎನ್ನಲ್ಲಾಗುತ್ತದೆ.

ಇಲ್ಲಿನ ವಾರ್ ಮ್ಯೂಸಿಯಂ ನಲ್ಲಿ ಅಮೆರಿಕ ದೇಶ, ಇಲ್ಲಿಯ ಜನರನ್ನು ವಿಷಗಾಳಿಯಿಂದ, ಬಾಂಬ್ ಗಳಿಂದ, ಗೆರಿಲ್ಲಾ ಸೈನಿಕರಿಗೆ ಸಹಾಯ ಮಾಡುತ್ತಿರಬಹುದೆಂಬ ಸಂಶಯದಿಂದ ಮಕ್ಕಳು, ಹೆಂಗಸರು ಮುಗ್ಧರೆಂಬ ಭೇದಭಾವವಿಲ್ಲದೆ ಕೊಂದಿರುವ ಸಾವಿರಾರು ವಿಯಟ್ನಾಮಿಸ್ ಜನರ ಚಿತ್ರಗಳು ಮತ್ತು ಸಂದೇಶಗಳಿವೆ. ಇದು ಕಟುಕನ ಕಣ್ಣಿನಲ್ಲೂ ಕಂಬನಿ ತರಿಸುತ್ತದೆ.

೧೯೭೫ ರ ತನಕ ಒಂದೇಸಮನೆ ಯುದ್ಧದಲ್ಲಿ ಭಾಗಿಯಾಗಿದ್ದ ಈ ದೇಶ ಇತ್ತೀಚಿನ ವರ್ಷಗಳಲ್ಲಿ ಮಾಡಿರುವ ಪ್ರಗತಿ ನಿಜಕ್ಕೂ ಅಭಿನಂದನಾರ್ಹ.

“I appeal for cessation of hostilities, not because you are too exhausted to fight, but because war is bad in essence. You want to kill Nazism. You will never kill it by its indifferent adoption.”
― Mahatma Gandhi, Gandhi: An autobiography

ಡಾ. ದಾಕ್ಷಾಯಿಣಿ ಗೌಡ

6 thoughts on “ಕು.ಚಿ. ಸುರಂಗಗಳು-ದಾಕ್ಷಾಯಿಣಿ ಗೌಡ

 1. ವಿಯೆಟ್ನಾಮ್ ನೋಡಬೇಕೆನ್ನುವುದು ಬಹಳ ದಿನಗಳ ಆಸೆ. ಇದಕ್ಕೆ ನೀರೆರೆದಿದೆ ನಿಮ್ಮ ಪ್ರವಾಸ ಕಥಾನಕ. ಜಗತ್ತಿನ ದೊಡ್ಡಣ್ಣನನ್ನು ಬಗ್ಗಿ ನಿಲ್ಲಿಸಿದ ದೇಶ, ಜಗತ್ತೇ ಕೊರೋನಾದಿಂದ ಬಳಲುತ್ತಿರುವಾಗ, ಚೀನಾದ ಬಗಲಲ್ಲೇ ಇದ್ದರೂ ಸೋಂಕಿನಿಂದ ಬಳಲದೇ ನಳನಳಿಸುತ್ತಿರುವ ವಿಯೆಟ್ನಾಮ್ ನಮಗೆಲ್ಲ ಉತ್ತಮ ಮಾದರಿ.

  – ರಾಂ

  Like

 2. Excellent write up. Its in our bucket list to visit Vietnam.

  There is a long list of movies based on US-Vietnam war. Seen a few. Your article gives us an overview of these tunnels and makes us to dig deep into the history.

  Only a few days ago, I completed reading a novel, ‘The Lover’ by Marguerite Duras (the original novel is written in French), which is set in Vietnam during the French rule and while reading the novel, I was familiarizing with the geography of the Vietnam to understand the novel better. The novel is set in Saigon, describes localities of French people and Chinese people.

  Thank you for such a wonderful article.

  -Keshav

  Like

 3. ಲೇಖನ ತುಂಬಾ ಸೊಗಸಾಗಿದೆ. ಡಾ. ಶ್ರೀವತ್ಸ ದೇಸಾಯಿ ಹಾಗೂ ನಾನು (ನಾವಿಬ್ಬರು ಶಾಲೆಯಲ್ಲಿ ಸಹಪಾಠಿಗಳು) ವಿಯೆಟ್ನಾಯಂ, ಕಾಂಬೋದಿಯಾಗೆ ಹೋಗುವ ಬಗ್ಗೆ ವಿಚಾರ ಮಾಡಿದ್ದೆವು ಆದರೆ ಕಾರಣಾಂತರ ಹೋಗುವದು ಆಗಿರಲಿಲ್ಲ. ನಿಮ್ಮ ಲೇಖನ ಓದಿ ಈಗ ಅಲ್ಲಿಗೆ ಹೋಗುವ ಆಸೆ ಆಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಹೋಗುವದು ಸಾಧ್ಯವಿಲ್ಲ. ಪರಿಸ್ಥಿತಿಯಲ್ಲಿ ಸುಧಾರಣೆ ಆದ ಮೇಲೆ ಡಾ. ದೇಸಾಯಿಯವರ ಜೊತೆ ಚರ್ಚಿಸಿ ಅಲ್ಲಿಗೆ ಹೋಗುವ ವಿಚಾರ ಮಾಡುವೆವು.

  ಅರುಣ ನಾಡಗೀರ

  Like

 4. ಅಮೆರಿಕಾ-ವಿಯೆಟ್ನಾಂ ’ಯುದ್ಧ’ ಒಂದು ರೀತಿಯಿಂದ ಡೇವಿಡ್-ಗೋಲಾಯಥ್ ಹಣಾಹಣಿಯನ್ನು ನೆನಪಿಸುತ್ತದೆ. ಅಮೇರಿಕೆಯಂಥ ದೈತ್ ಯಮತ್ತು ಬಲಾಢ್ಯ ದೇಶವನ್ನು ಮಣ್ಣು ಮುಕ್ಕುವಂತೆ ಮಾಡಿದ್ದು ಆ ದೇಶದ, ತೆಳುಮೈಯ ವಾಮನ ಮೂರ್ತಿ ’ಕುಬ್ಜ’ರು ಜಿಗುಟಿನಿಂದ ತಮ್ಮ ಸತತ ’ಸಣ್ಣ ರೂಪದ’ ಗೆರಿಲ್ಲಾ ಯುದ್ಧತಂತ್ರದಿಂದ. guerillaa ಇದು ಗೆರ್ರಾ (guerra (war) ಸ್ಪಾನಿಷ್ದಲ್ಲಿ ಯುದ್ಧ ಎಂದು ಅರ್ಥ) ಶಬ್ದದ ವಾಮನ ರೂಪ (diminutive form). ನೈತಿಕ ವಿಜಯವೂ ಅವರದೇ ಆಯಿತು. ಪ್ರಸಾದ್ ಅವರು ಬರೆದಂತೆ ದುರದೃಷ್ಟವೆಂದರೆ ಒಂದು ಜನಾಂಗವನ್ನು ಈ ರೀತಿ ದ್ವೇಷ ಮಾಡಿ ಹಿಂಸಿಸಿದ ಉದಾಹರಣೆಗಳು ಇತಿಹಾಸದಲ್ಲಿ ಅನೇಕ. ಮುಂದಿನ ಪೀಳಿಗೆಗೆ ಅರಿವಾಗಲೆಂದು ಅಲ್ಲಿ ಕಾಯ್ದಿಟ್ಟ ಈ ತರದ ಸುರಂಗಗಳು, ಮತ್ತು ಯೂರೋಪದ ಕಾನ್ಸೆಂಟ್ರೇಷನ್ ಕ್ಯಾಂಪ್ ಗಳ ಸ್ಮಾರಕಗಳ ಅವಶ್ಯಕತೆಯಿದೆ. ಅವುಗಳಿಗೆ ಭೇಟಿ ನೀಡಿದವರ ಅನುಭವ ಅನನ್ಯ. ನಿಮ್ಮ ಚಿಕ್ಕ, ಚೊಕ್ಕ ಲೇಖನದಲ್ಲಿ ಅದನ್ನು ವಿವರಿಸಿ ನಮಗೆಲ್ಲ ಪರಿಚಯಿಸಿದ್ದೀರಿ. ನಾನು ಇದರ ಬಗ್ಗೆ ಈ ಮೊದಲು ಕೇಳಿದ್ದಿಲ್ಲ. ನಿಮ್ಮ ಲೈಬ್ರರಿ ಫೋಟೋದಲ್ಲಿ ನಿಮ್ಮ ಕೈಯಲ್ಲಿದ್ದದ್ದು cornetto ಏನೋ ಅಂತ ನೋಡುತ್ತಿದ್ದೆ! ನೀವಿ ನೋಡಿದ ಉಳಿದ ಜಾಗಗಳ ಪ್ರವಾಸಕಥನವನ್ನೂ ಎದುರು ನೋಡಬಹುದೇನೋ. ಮುಂದಿನ ತಿಂಗಳುಗಳಲ್ಲಿ ಎಲ್ಲರೂ ಪ್ರವಾಸಗೈಯಲು ಹಿಂಜರಿಯುವವರೇ, ಈ ಮಹಾ ಮಾರಿಯಿಂದಾಗಿ.

  Like

 5. Dakshayani aware I have been to Vietnam and Cambodia and Lagos. Thank you for narrating the atrocities committed by so called super power. It really brings blood in our eyes when you see the torture inflicted by one human race to another human race. Hope World has learnt its lesson and Future generation is creating more tolerant, inclusive society.It is incredible the way Vietnam is able to put the past behind them and making excellent progress as a country.
  Good write up! VathsalaRamamurthy

  Like

 6. ದಾಕ್ಷಾಯಿಣಿ ಅವರೇ ನಿಮ್ಮ ಪ್ರವಾಸ ಅನುಭವವನ್ನು ಓದಿದಾಗ
  ಪೋಲ್ಯಾಂಡಿನ ಆಶ್ವಿಟ್ಸ್ ಕ್ಯಾಂಪ್ ನೆನಪಿಗೆ ಬಂದಿದೆ.
  ಇತಿಹಾಸದ ಕರಾಳ ಪುಟಗಳನ್ನು ನೋಡುವುದು ಬಹಳ ಕಷ್ಟ
  ಒಬ್ಬರು ಇನ್ನೊಬ್ಬರನ್ನು ದ್ವೇಷಿಸಲು ಅದೆಷ್ಟು ಕಾರಣಗಳಿವೆಯೋ
  ಇನ್ನೊಬ್ಬರನ್ನು ಪ್ರೀತಿಸಲು ಅಷ್ಟೇ ಕಾರಣಗಳಿವೆ
  ಎಂಬುದನ್ನು ತೋರಿಸುವುದು ಎಲ್ಲರ ಜವಾಬ್ದಾರಿ.
  All war is a symptom of man’s failure as a thinking animal.” (Bertrand Russel)

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.