ಓದುಗರೆ, ಹೋದವಾರದ ಲೇಖನದಲ್ಲಿ ಯುಗಾದಿಹಬ್ಬದ ಹಿನ್ನೆಲೆಯ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆವು. ಈ ವಾರ ಯುಗಾದಿಯನ್ನು ಆಚರಿಸಿಯಾಯಿತು. ಈ ಕೆಳಗಿನ ಲೇಖನ ಹಬ್ಬದ ದಿನದಂದು ಮನೆಯೊಡತಿಯ ಸಂಭ್ರಮದ ಏರಿಳಿತಗಳನ್ನೂ , ತಿಳಿಸುವುದರ ಜೊತೆಗೆ, ನಾವು ಹಬ್ಬವನ್ನು ಎಷ್ಟು ಹಗುರವಾಗಿ ಒಂದು ಸಾಮಾಜಿಕ ಸಂಭ್ರಮವನ್ನಾಗಿ ತೆಗೆದುಕೊಂಡು ಮುಗಿಸಿಬಿಡುತ್ತೇವೆ, ಅದರ ಆಗಮನದ ಹಿಂದಿರುವ ಔಚಿತ್ಯವನ್ನು, ಅದರ ಆಚರಣೆಯಲ್ಲಿ ಹುದುಗಿರುವ ತತ್ವವನ್ನು ಗಮನಿಸದೆ ಹೋಗುತ್ತೇವೆ, ಎಂದು ತಿಳಿಸಲು ಪ್ರಯತ್ನಿಸಿದೆ. ಈ ವಾರದ ಲೇಖಕಿ ಡಾ. ಸತ್ಯವತಿ ಮೂರ್ತಿ. ಅವರ ಕಿರುಪರಿಚಯ ಅವರದೇ ಮಾತುಗಳಲ್ಲಿ. ಡಾ. ಸತ್ಯವತಿಯವರನ್ನು ಅನಿವಾಸಿ ಬಳಗಕ್ಕೆ ಸ್ವಾಗತಿಸೋಣ-ಸಂ.
ಲೇಖಕಿಯ ಕಿರು ಪರಿಚಯ
ಡಾ ಸತ್ಯವತಿ ಮೂರ್ತಿ ವೇದ ರತ್ನ ಚೆನ್ನಕೇಶವ ಅವಧಾನಿಗಳ ಮಗಳು. ಬರಹಗಾರ್ತಿ, ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ. ಇವರ ಪಿ.ಎಚ್.ಡಿ ಯ ನಿಬಂಧವೂ ಸೇರಿದಂತೆ 4 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 25 ವರ್ಷಗಳಿಂದ ಮ್ಯಾಂಚೆಸ್ಟರ್ನಲ್ಲಿ ನೆಲೆಸಿದ್ದಾರೆ. ಹಿಂದೂ ಪ್ರಿಸನ್ ಮಿನಿಸ್ಟರ್, ಫೈನ್ಯಾನ್ಶಿಯಲ್ ಅಕೌಂಟೆಂಟ್ ಹಾಗೂ ಕಂಪೆನಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಇವರು, ಇತ್ತೀಚೆಗೆ ನಿವೃತ್ತರಾಗಿ ಇಲ್ಲಿಯ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಯಗಾದಿ ಬರುತ್ತೆ ಬರುತ್ತೆ ಬಂತು — ಓಡಿಹೋಯಿತು
ನಾಳೆ ಯುಗಾದಿ ಹಬ್ಬ. ಸಂಭ್ರಮವೋ ಸಂಭ್ರಮ. ಕೆಲಸದಿಂದ ನೇರವಾಗಿ ಮಾರ್ಕೆಟ್ಗೆ ಹೋಗಿ ಬೇಕಾದ ಪದಾರ್ಥಗಳನ್ನೆಲ್ಲ ತಂದಾಯಿತು. “ಬೆಳಗ್ಗೆ ಎಲ್ಲರೂ ಬೇಗನೆ ಏಳಬೇಕು. ಎದ್ದು ತಲೆಗೆ ಸ್ನಾನ ಮಾಡಿ , ಪೂಜೆಗೆ ಬರಬೇಕು.ಅಪ್ಪ , ಅಜ್ಜ ಇಬ್ರು ಪೂಜೆ ಮಾಡಿದಮೇಲೆ ಮಂಗಳಾರತಿ ತೆಗೆದುಕೊಂಡು ಬೇವುಬೆಲ್ಲ ತಿನ್ನಬೇಕು. ತಿಳೀತಾ?” ಮನೆಯಲ್ಲಿ ಹಿಂದಿನ ರಾತ್ರಿಯೇ ಎಲ್ಲರಿಗೂ ತಾಕೀತು ಮಾಡಿಯಾಗಿತ್ತು. ಶೆಲ್ಫಿನ ಹಿಂದಕ್ಕೆ ಹೋಗಿ ಕುಳಿತಿದ್ದ ’ಯುಗ ಯುಗಾದಿ ಕಳೆದರೂ’ ಹಾಡಿನ ಧ್ವನಿ ಮುದ್ರಣವನ್ನು ಹುಡುಕಿ ತೆಗೆದಿಟ್ಟಾಯಿತು .
ಬೆಳಗ್ಗೆ6 ಗಂಟೆಗೆ ಅಲಾರಂ ಹೊಡೆದ ಕೂಡಲೆ ಎದ್ದು ಯುಗಾದಿ ಹಾಡನ್ನು ಹಚ್ಚಿ, ಪೊರಕೆಯಿಂದ ಅಂಗಳವನ್ನು ಗುಡಿಸಿ ಮನೆಮುಂದೆ ಅಂದವಾದ ರಂಗೋಲಿಯನ್ನು ಬಿಡಿಸಿ ನನ್ನ ಕಲಾಕೃತಿಗೆ ನಾನೇ ಮೆಚ್ಚಿಕೊಂಡು, ಒಳಗೆ ಬಂದು ದೇವರ ಪೂಜೆಗೆ ಅಣಿಮಾಡಿಯಾಯಿತು. ಅಷ್ಟರಲ್ಲಿ ಫೋನ್ನಲ್ಲಿ ಮೆಸ್ಸೇಜ್ ಬಂದ ಶಬ್ದವಾಯಿತು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುತ್ತ ಸಂದೇಶಗಳನ್ನು ಕಳುಹಿಸುತ್ತಿರುವ ಮಿತ್ರರು ಬಂಧುಗಳಿಗೆಲ್ಲ ನಾನೂ ಸಂದೇಶ ಕಳುಹಿಸಿದ್ದಾಯಿತು.(ಇಂಡಿಯದಲ್ಲಾಗಲೇ ಮಧ್ಯಾಹ್ನ ಅಲ್ಲವೆ?) ಆ ವೇಳೆಗೆ ಗಂಟೆ 9 ಹೊಡೆಯಿತು.
ಅಷ್ಟು ಹೇಳಿದ್ದರೂ ಇನ್ನೂ ರಜೆಯ ಗುಂಗಿನಲ್ಲಿ ಮಲಗೇ ಇದ್ದ ಮಕ್ಕಳನ್ನು ಬಲವಂತವಾಗಿ ಏಳಿಸಿ ಸ್ನಾನಕ್ಕೆ ಕಳುಹಿಸಿಯಾಯಿತು, ಸ್ನಾನ ಮಾಡಿ ಸಿದ್ಧವಾಗಿದ್ದ ನನ್ನ ಮಾವ ಹಾಗೂ ಯಜಮಾನರ ಪೂಜೆಗೆ ಎಲ್ಲ ಸಾಮಗ್ರಿ ಇದೆಯೇ ಎಂದು ನೋಡಿಯಾಯಿತು. ಇಷ್ಟು ಹೊತ್ತಿಗೆ ಅಡುಗೆ ಮನೆ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಯುಗಾದಿ ಹಬ್ಬ! ಇಡ್ಲಿ ಕಡುಬು ಬೆಳಗಿನ ತಿಂಡಿಗೆ, ದೇವರ ನೈವೇದ್ಯಕ್ಕೆ ಇರಲೇಬೇಕಲ್ಲವೆ? ಅದಕ್ಕೆಂದೇ ಮತುವರ್ಜಿಯಿಂದ ನೆನ್ನೆಯೇ ಹಿಟ್ಟು ರುಬ್ಬಿಟ್ಟಿದ್ದಾಗಿತ್ತು. ಹಾಗಾಗಿ ಅವೆರಡನ್ನೂ ಸಿದ್ಧಮಾಡುವುದರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ವಾಯಿತು. ಯಜಮಾನರ ಪೂಜೆ ಮುಗಿಯುತ್ತ ಬಂದಿತ್ತು. ಮಕ್ಕಳೂ ಸಿದ್ಧರಾಗಿದ್ದರು. ಎಲ್ಲರೂ ಸೇರಿ ಮಂಗಳಾರತಿ ಮಾಡಿ ದೇವರ ಅನುಗ್ರಹಕಾಗಿ ಪ್ರಾರ್ಥಿಸಿ “ಶತಾಯುಃ ವಜ್ರದೇಹಾಯಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ” ಶ್ಲೋಕ ಹೇಳಿ, ಹೇಳಿಸಿ ಬೇವು ಬೆಲ್ಲ ಸ್ವೀಕರಿಸಿಯಾಯಿತು. ಬೇವು ಬೆಲ್ಲ ಹಂಚುವಾಗ ಮಕ್ಕಳಿಗೆ ಹೆಚ್ಚಾಗಿ ಬೆಲ್ಲವೇ ಬರುವಂತೆ ಕೈಚಳಕ ತೋರಿಸಿದ್ದು ಮಕ್ಕಳ ಮೇಲಿನ ಪ್ರೀತಿಗಾಗಿ, ಮತ್ತೆ ಅವರಿಗೆ ಯಾವ ನೋವೂ ಬಾರದಿರಲಿ ಎಂಬ ತಾಯಿ ಮನಸ್ಸಿನ ಸದಾಶಯ ಎಂದು ಹೇಳಬೇಕಾಗಿಲ್ಲ ಅಲ್ಲವೇ? ಅಂತೂ ಬೇವು ಬೆಲ್ಲದ ಸೇವನೆ ಮುಗಿದು ಇಡ್ಲಿ ಕಡುಬುಗಳನ್ನು ಧ್ವಂಸಮಾಡಿ ಉಟ್ಟ ಹೊಸ ಬಟ್ಟೆಗಳ ಅಂದವನ್ನು ಒಬ್ಬರಿಗೊಬ್ಬರು ಗುಣಗಾನ ಮಾಡುತ್ತ ನಡುನಡುವೆ ಸ್ನೇಹಿತರು, ಬಂಧುಗಳೊಡನೆ ಫೋನಿನಲ್ಲಿ ಮಾತನಾಡುವ ವೇಳೆಗೆ ಗಂಟೆ 11:30. ಮಧ್ಯಾಹ್ನಕ್ಕೆ ಹಬ್ಬದಡುಗೆ ಮಾಡಬೇಕು.

ತಿಂದ ತಿಂಡಿಯಿನ್ನೂ ಗಂಟಲಿನಿಂದ ಇಳಿದಿರಲಿಲ್ಲ, ಅಡುಗೆಗೆ ತರಕಾರಿಗಳನ್ನು ಹೆಚ್ಚಿಕೊಂಡದ್ದಾಯಿತು. ಯುಗಾದಿ ಅಂದಮೇಲೆ ಒಬ್ಬಟ್ಟು ಮಾಡದಿರಲು ಆದೀತೆ? ನಮ್ಮ ಮನೆಯವರಿಗೆ ಕಾಯೊಬ್ಬಟ್ಟು ಇಷ್ಟವಾದರೆ, ಮಕ್ಕಳಿಗೆ ಬೇಳೆ ಒಬ್ಬಟ್ಟು ಬೇಕು. ಹಾಗಾಗಿ ಎರಡೂ ರೀತಿಯ ಒಬ್ಬಟ್ಟೂ ತಯಾರು ಮಾಡಿ ಅಡುಗೆ ಮುಗಿಸುವ ವೇಳೆಗೆ ಎಲ್ಲರೂ ಊಟಕ್ಕೆ ಸಿದ್ಧರಾಗಿದ್ದರು. ಅದೆಷ್ಟು ಬೇಗ ಇಡ್ಲಿ ಕಡುಬು ಅರಗಿಹೋಯಿತೋ ಕಾಣೆ. ಅಂತೂ ಎಲ್ಲರಿಗೂ ಹಬ್ಬದೂಟವನ್ನು ಬಡಿಸಿ ನಾನು ಊಟ ಮಾಡುವ ವೇಳೆಗೆ ಗಂಟೆ 3:30. ಅಡಿಗೆ ಮಾಡಿದರಾಯಿತೆ? ಪಾತ್ರೆ ತೊಳೆದು ಇಡಬೇಕಲ್ಲವೇ? ಇಲ್ಲದಿದ್ದರೆ ಮಾರನೆಯ ದಿನ ಕೆಲಸಕ್ಕೆ ಹೋಗುವ ಮುನ್ನ ಅಡಿಗೆ ಮಾಡುವುದಕ್ಕೆ ಪಾತ್ರೆ ಇರಬೇಕಲ್ಲ!
ಪಾತ್ರೆಗಳನ್ನೆಲ್ಲ ತೊಳೆದು ಅಡಿಗೆ ಮನೆ ಶುದ್ಧಿಮಾಡಿ “ಉಸ್ಸಪ್ಪಾ” ಎನ್ನುವ ವೇಳೆಗೆ ಸಂಜೆ 6 ಗಂಟೆ. ’ದೇವರಿಗೆ ದೀಪ ಹಚ್ಚಿ ಮುಚ್ಚಂಜೆಯಾಗ್ತಾ ಇದೆ’ ಅಂದ ನನ್ನ ಮಾವನವರ ಕೂಗಿಗೆ ಓಗೊಟ್ಟು ದೀಪ ಹಚ್ಚಿ ಬಂದಾಯಿತು. ಈ ನಡು ನಡುವೆ ಕಾಫಿಯ ಸೇವನೆಯಂತೂ ಇದ್ದೇ ಇತ್ತು.
ಇನ್ನು ರಾತ್ರಿಗೆ ಏನು ಅಡಿಗೆ ಮಾಡುವುದು ಎಂದು ಯೋಚಿಸುತ್ತಿರುವಾಗ ನನ್ನ ಕೆಲಸದ ಒತ್ತಡ ನೋಡಿದ ನನ್ನವರು “ಇನ್ನೇನೂ ಮಾಡಬೇಡ , ಏನಿದೆಯೋ ಅದನ್ನೇ ಹಂಚಿಕೊಂಡು ತಿಂದರಾಯಿತು” ಎಂದರು
ಬೇಳಗಿನಿಂದ ಒಂದೇ ಸಮನೆ ಕೆಲಸಮಾಡುತ್ತಿದ್ದ ನನಗೂ ಅದೇ ಬೇಕಾಗಿದ್ದಿತು. ಅಲ್ಲದೆ ಅಷ್ಟು ಹೊತ್ತಿಗೆ ಹಬ್ಬದ ಅಮಲು ಇಳಿಯತೊಡಗಿತ್ತು. ಮಧ್ಯಾಹ್ನದ ಅಳಿದುಳಿದ ಅಡುಗೆಯನ್ನೇ ಊಟಮಾಡಿ ಮಲಗುವವೇಳೆಗೆ ರಾತ್ರೆ 9:30. ಬೆಳಗ್ಗೆ ಬೇಗನೇ ಏಳಬೇಕು. ಕೆಲಸಕ್ಕೆ ಹೊರಡುವ ವೇಳೆಗೆ ತಿಂಡಿ ಅಡುಗೆ ಎಲ್ಲ ಆಗಬೇಕಲ್ಲ. ಅಂತೂ ಉಕ್ಕಿದ ಸಂಭ್ರಮದಿಂದ ಕಾಯುತ್ತಿದ್ದ ಯುಗಾದಿ ಬಂತು, ಓಡಿಯೂ ಹೋಯಿತು. ಯುಗಾದಿಯ ದಿನವೆಲ್ಲ ಎಲ್ಲರಿಗೂ ಶುಭ ಹಾರೈಸಿದ್ದೂ ಹಾರೈಸಿದ್ದೇ! ಜೀವನದ ಅತ್ಯಮೂಲ್ಯವಾದ ದಿನ ಕಳೆದುಹೋಯಿತೆಂಬ ಪರಿವೆಯೂ ಇಲ್ಲದೆ ಹಬ್ಬವನ್ನು ಆಚರಿಸಿಯಾಯಿತು.
ಮರುದಿನ ಬೆಳಗ್ಗೆ ಮಾಮೂಲಿ ಹಾಡು .
ನಿಜವಾಗಿಯೂ ಬೇವು ಬೆಲ್ಲದ ಸೇವನೆಯ ಹಿಂದಿರುವ ತತ್ವವನ್ನು ತಿಳಿದರೆ ಯುಗಾದಿಯ ನಿಜವಾದ ಅರ್ಥ ತಿಳಿದಂತೆ!
ಅಷ್ಟಿಲ್ಲದೆ ದತ್ತಾತ್ರೇಯ ಬೇಂದ್ರೆಯವರು ಹೇಳಿದರೆ ? “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ನಮ್ಮನಷ್ಟೆ ಮರೆತಿದೆ “.
ಡಾ.ಸತ್ಯವತಿ ಮೂರ್ತಿ
When I read this article about our Ugadi festival it just took me back to memory lane of my childhood. It is so beautifully written and described each and every detail of the festivity.
Now being a mother of two I can so relate to what my mum had to go through the whole day doing chores and at the same time make sure everything went smoothly and everyone is happy
The food on Ugadi is the one to die for, that too cooked by Amma. No food in the world can beat the taste and love that goes in preparation of food by a Mother.
Hats off to all the women who are the core strength of whole family
Throughly enjoyed reading every line of your article. Thank you so much aunty for sharing it with us and binding us to the roots of our traditional and proud culture. Please keep writing 👏🏻👏🏻👏🏻👏🏻👏🏻
LikeLike
ಡಾ.ಸತ್ಯವತಿಮೂರ್ತಿಯವರ ಯುಗಾದಿಯ ಲೇಖನ ಓದುತ್ತ ಬಾಲ್ಯದ, ಭಾರತದ, ಇಲ್ಲಿನ ಯುಗಾದಿಯ ಸಂಭ್ರಮ ಮತ್ತು ಅಡುಗೆ ನೆನಪಾದವು; ಜೊತೆಗೆ ಚಿಂತನೆಗೂ ಹಚ್ಚಿದವು. ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಲಿರಿ, ಅನಿವಾಸಿಗೆ. – ಕೇಶವ
LikeLike
ಕೇಶವ್ ಅವರಿಗೆ ಧನ್ಯವಾದಗಳು. ತುಂಬ ತಡವಾಗಿ ಉತ್ತರಿಸುತ್ತಿದ್ದೇನೆ. ನಾನು ಇದೇ ಮೊದಲ ಸಾರೆ ನೋಡುತ್ತಿದ್ದುದರಿಂದ ಹಾಗಾಯಿತು. ಕ್ಷಮೆಯಿರಲಿ.
LikeLike
ತುಂಬ ಚೆನ್ನಾಗಿದೆ ಸತ್ಯವತಿಅವರೇ. ನನಗೆ ನನ್ನ ಬಾಲ್ಯದ ನಮ್ಮ ಮನೆಯ ಯುಗಾದಿ ಹಬ್ಬದ ನೆನಪಾಯಿತು.
ಕೊನೆಯ ಸಾಲುಗಳು ಕೂಡ ಅದ್ಭುತವಾಗಿದೆ.
LikeLike
ವಂದನೆಗಳು ಲಕ್ಷ್ಮಿ ಅವರಿಗೆ. ಕೊನೆಯ ಸಾಲುಗಳನ್ನು ಗ್ರಹಿಸಿ ಅದನ್ನು ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು
LikeLike
ಯುಗಾದಿಯ ಮತ್ತು ಇನ್ನಿತರೆ ಹಬ್ಬಗಳಂದಿನ ದಿನಚರಿ ಹೀಗಿಯೇ ಇರುತ್ತದೆ, ಹಬ್ಬಕ್ಕೆ ಒಂದು ವಾರದ ಮೊದಲೇ ಕಾಯುವುದು ಆಚರಣೆಗೆ plan ಮಾಡುವುದು, ಬಂದ ಮೇಲೆ ಹಬ್ಬದ ಅಡುಗೆ ಮಾಡುವುದು ಮತ್ತು ಹೊಸ ಉಡುಗೆ ತೊಡುವುದು, ದೇವರ ಪೂಜೆ, ಸ್ನೇಹಿತರಿಗೆ, ಬಂಧುಗಳಿಗೆ ಶುಭಾಶಯದ ಸಂದೇಶ ಕಳಿಸುವುದು ತೀರಾ ಆತ್ಮೀಯರಿಗೆ ಕರೆಮಾಡಿ ಶುಭಾಷಯ ಹೇಳುವುದು.
ಹಬ್ಬ ಬಂದದ್ದೂ ಗೊತ್ತಾಗಲ್ಲ , ಹೋದದ್ದೂ ಗೊತ್ತಾಗಲ್ಲ. ಕಾಲದ ಓಟದಲ್ಲಿ ಎಲ್ಲವೂ ವೇಗವಾಗಿ ಬಂದು ಹೋದ ಭಾವ ಇರುತ್ತದೆ. ಆದರೆ ನಮ್ಮ ಪರಿವಾರದ ಜೊತೆ ಹಬ್ಬದ ದಿನದ ಕಳೆದ ಆನಂದದ ಕ್ಷಣಗಳ ನೆನಪುಗಳಷ್ಟೇ record ಆಗಿ ಮತ್ತೆ ಮತ್ತೆ Rewind ಮಾಡಿಕೊಂಡಾಗ ನಮಗೆ ಆನಂದದ ಪುನರಾವರ್ತನೆಯಾಗುತ್ತದೆ.
ಆ ಕ್ಷಣಗಳೇ ನಮಗೆ ವರ್ಷ ವರ್ಷವೂ ಹಬ್ಬಗಳನ್ನು ಎದುರು ನೋಡಲು, ಕಾಯಲು, ಬಂದ ಮೇಲೆ ಮತ್ತದೇ ಸಂಭ್ರಮ ಪಡಲು ಕಾರಣ.
ಸತ್ಯವತಿ ಅವರ ಲೇಖನ ಹಬ್ಬದ ಬರುವಿಕೆ, ಇರುವಿಕೆ ಹೋಗುವಿಕೆಯ ಸಂಪೂರ್ಣ ಚಿತ್ರವನ್ನು ಕಟ್ಟುಕೊಟ್ಟಿದೆ.
-ವಿಜಯನರಸಿಂಹ
LikeLiked by 1 person
ವಂದನೆಗಳು ವಿಜಯ ನಾರಸಿಂಹ ಅವರಿಗೆ.
ಸರಿಯಾಗಿ ಹೇಳಿದಿರಿ. ಹಬ್ಬದ ಸಡಗರ ಮುಗಿದು ಹೋದಮೇಲೆ ಅದರ ನೆನಪೇ ಉಳಿದಿರುತ್ತದೆ ಎನ್ನುವುದು ನಿಜ. ಅವೇ ನೆನಪುಗಳೇ ನಮ್ಮನ್ನು ಇನ್ನೊಂದು ಹಬ್ಬವನ್ನು ಸ್ವಾಗತಿಸಲು ಸಿದ್ಧರಾಗಿಸುತ್ತವೆ.
LikeLike
ತುಂಬ ಸುಂದರ ಬರಹ, ಹಬ್ಬದ ಸಂಭ್ರಮ, ಆ ತಯಾರಿಯ ಸಡಗರ ಮುದ ನೀಡಿ ಯುಗಾದಿ ಬಂದು ಓಡಿ ಹೋದರೂ ಮುಂಬರುವ ಹಬ್ಬದ ದಾರಿ ಕಾಯುವಂತಾಗುತ್ತದೆ ಆ ಸಡಗರದಲ್ಲಿ ಮುಳುಗುವ ಚೆಂದದ ಚೆಲುವಿನ ಸಮಯಕ್ಕೆ.ಹೌದು ಎಷ್ಟೋ ಕೆಲಸಗಳಲ್ಲಿ ಮುಳುಗಿದ್ರೂ, ಹೊರಗೆ ದುಡಿಯುವ ಸ್ತ್ರೀ ಯಾದರೂ ತನ್ನವರಿಗೆ ಸಂಭ್ರಮದ ಸವಿ ಉಣಿಸಿ ತರಹೇವಾರಿ ತಿನಿಸು ಉಣಿಸು ತಿನಿಸಿ ತೃಪ್ತಿ ಪಡುವುದು ಹೆಣ್ಣಿನ ಮೂಲಭೂತ ಗುಣ- ಕಾಲ ಯಾವುದೇ ಆದರೂ , ಪದ್ಧತಿಗಳಲ್ಲಿ, ಸೌಕರ್ಯ ಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಆದರೂ ಆ ಸಹಜ ಪ್ರಕ್ರಿಯೆ ಹಾಗೇನೇ ಇರ್ತದೆ ಸಹಜ ಸರಳವಾಗಿ. ಆಗಲೇ ಹಬ್ಬದ ಸಂಭ್ರಮ ಕ್ಕೆ ಕಳೆಕಟ್ಟುವುದು.ತನ್ನವರ ತೃಪ್ತಿಯೇ ಆಕೆಯ ತೃಪ್ತಿ.ಎಷ್ಟೇ ಬದಲಾವಣೆ ತರತೀನಿ, ಬಂದಿದೆ ಅಂದ್ರೂ ಎಲ್ಲವೂ ಅಲ್ಲಲ್ಲೇ, ಹಾಗೇ ಇರೋದು ಸಹಜ.ಆ ಕ್ಷಣಕ್ಕೆ ದಣಿವಾದರೂ ಯಾರಾದರೂ ಏನಾದರೂ ಕೇಳಿದರೆ ಆ ದಣಿವು ಮಂಗಮಾಯ!
ನಿಜವಾಗಲೂ ಯುಗಾದಿ ಮರಳಿ ಬಂದು ಓಡಿ ಹೋದರೂ ನಮ್ಮನ್ನು ಮರೆತಿಲ್ಲ.ಒಂದು ಹಂತ ಮೇಲೇರಿಸಿದೆ.ಅದೇ ಅಲ್ವೇ ಸ್ತ್ರೀ? ಹಾಗೆಂದು ಕೀಳರಿಮೆ, ನಿಕೃಷ್ಟತೆ ಖಂಡಿತಾ ಅಲ್ಲ.ಆ ಅಕ್ಷಯಪಾತ್ರೆ ಯಂಥ ಹೃದಯ ದೇವರ ದೇಣಿಗೆ ಸ್ತ್ರೀಗೆ.ಸ್ತ್ರೀ ಎಂದರೆ ಅಷ್ಟೇ ಸಾಕು- ಇಡೀ ಪ್ರಪಂಚವೇ ಅಡಗಿದೆ ಅಲ್ಲಿ.ಡಾ.ಸತ್ಯವತಿಯವರ ಈ ಸುಂದರ ಬರಹ ಚಿಂತನೆ ಉಂಟು ಮಾಡಿದ ಪರಿಯೂ ಸುಂದರವೇ.ಅಭಿನಂದನೆಗಳು ತಮಗೆ. ಹಾಗೆಯೇ ಅನಿವಾಸಿ ಬಳಗಕ್ಕೆ ಪ್ಲವ ನಾಮ ಸಂವತ್ಸರದ , ಯುಗಾದಿಯ ಶುಭಾಶಯಗಳು!
ಸರೋಜಿನಿ ಪಡಸಲಗಿ
LikeLiked by 1 person
ಸರೋಜಿನಿ ಅವರಿಗೆ ವಂದನೆಗಳು. ಬಹಳ ಸೊಗಾಸಾಗಿ ಗೃಹಿಣಿಯ ಮನೋಭಾವಗಳನ್ನು ಗುರುತಿಸಿದ್ದೀರಿ. ಹಬ್ಬ ಎಂದರೆ ಮನೆ ಮಂದಿಯೆಲ್ಲ ಸಂಭ್ರಮದಲ್ಲಿರಲಿ ಎಂದು ಆಶಿಸುವಳು . ಸಂಭ್ರಮದ ಜೊತೆ ಜೊತೆಗೆ ಶಿಸ್ತಿನಿಂದ ಎಲ್ಲ ನಡೆಯಲಿ ಎಂದು ಆಶಿಸುವವಳು
LikeLike
ನಮಸ್ಕಾರ ಸತ್ಯವತಿ. ಅನಿವಾಸಿ ವೇದಿಕೆಯಲ್ಲಿ ನಿಮ್ಮ ಲೇಖನ ಓದಿ ಸಂತೋಷವಾಯಿತು. ಯುಗಾದಿ ಹಬ್ಬದ ದಿನ ಮನೆಯೊಡತಿಯ ದಿನಚರಿಯನ್ನು ಬಹಳ ರಸವತ್ತಾಗಿ ವರ್ಣಿಸಿ ಬರೆದಿದ್ದೀರಿ. ಇದನ್ನು ಓದುತ್ತ ನನ್ನ ಮನಸ್ಸು ೬೦-೮೦ ರ ದಶಕಕ್ಕೆ ಜಾರಿತು. ಅಮ್ಮ ಮನೆಯಲ್ಲಿ ಹಬ್ಬದ ಹಿಂದಿನ ದಿನ, ಹಬ್ಬದ ದಿನ ಸಂಭ್ರಮದಿಂದ ದುಡಿಯುತ್ತಿದ್ದ ವೈಖರಿ ನೆನಪಾಯಿತು. ನಿಮ್ಮ ಮಾತು ನಿಜ. ಹಬ್ಬ ಬರತ್ತೆ ಅನ್ನುವ ಸಂಭ್ರಮದಲ್ಲಿ ಓಡಾಡುತ್ತಿದ್ದ ಅಮ್ಮನಿಗೆ, ಹಬ್ಬದ ದಿನ ಪುರುಸೊತ್ತಿಲ್ಲದ ಅಡುಗೆಮನೆ ಕೆಲಸ. ಕಡೆಗೆ ಸಂಜೆ ಅವರು ದೀಪ ಹಚ್ಚಲು ಕುಳಿತು ಅಯ್ಯಪ್ಪ ಎಂದು ಉಸಿರು ಬಿಟ್ಟಾಗಲೇ ಅವರಿಗೆ ಸ್ವಲ್ಪ ಬಿಡುವು. ಹಬ್ಬದ ಅಮೂಲ್ಯ ಕ್ಷಣಗಳನ್ನು ಸವಿಯುವ ಸಮಯ ಅವರಿಗೆ ಸಿಗುತ್ತಿರಲಿಲ್ಲ. ಯುಗಾದಿ ಮರಳಿ ಬಂದರೂ, ಮನೆಯ ಹೆಂಗಸರ ಜೀವನದಲ್ಲಿ ಬದಲಾವಣೆ ಕಾಣುತ್ತಿರಲಿಲ್ಲ. ಬಹುಶಃ ಈಗ ನಮ್ಮ ದೇಶದಲ್ಲಿ ಮನೆಯೊಡತಿಗೆ ಸಿಗುವ ಸೌಲಭ್ಯಗಳು, ಅವಳಿಗೆ ಹಬ್ಬದ ಮಹತ್ವವನ್ನು ಸವಿಯಲು ಅವಕಾಶ ಮಾಡಿಕೊಟ್ಟಿರಬಹುದು.
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ನಮ್ಮನಷ್ಟೆ ಮರೆತಿದೆ “. ಬೇಂದ್ರೆ ಅವರ ಈ ಮಾತುಗಳು ನೂರಕ್ಕೆ ನೂರು ಸತ್ಯವಾದದ್ದು.
ಉಮಾ ವೆಂಕಟೇಶ್
LikeLiked by 1 person
ಆತ್ಮೀಯ ಸತ್ಯ!!
ನಿಮ್ಮ ಲೇಖನದಲ್ಲಿ ಹಬ್ಬದ ದಿನ ಓರ್ವ ಉದ್ಯೋಗಸ್ಥೆ ಮಹಿಳೆಯ ಇಡೀ ದಿವಸದ ಸಾರಾಂಶವನ್ನು ಬಹಳ ಚೆನ್ನಾಗಿ ವರ್ಣಿಸಿದ್ದೀರಿ!! ಅದ್ರಲ್ಲೂ ಹೋಳಿಗೆ ರೇಜಿಗೆ ಇದ್ದಿದ್ದೂ ಕೇಳೋಹಾಗಿಲ್ಲ!!!! ಲೇಖನ ಓದಿ ನಮ್ಮ ಅಮ್ಮಮ್ಮ,ಅಮ್ಮ ಜ್ಞ್ನ್ಯಾಪಕವಾಯಿತು.ಹಬ್ಬದ ಹಿಂದಿನ ದಿವಸ ಎಲ್ಲಾ ತಾಮ್ರದ ಬಿಂದಿಗೆಗಳು,ಹಿತ್ತಾಳೆಯ ಕೊಳಗಗಳು ಸ್ವಚ್ಛಪಡೆಸಿ,ಅಡುಗೆ ಮನೆ ಸ್ವಚ್ಛಗೊಳುವಷ್ಟರಲ್ಲೇ ಅರ್ಧಜೀವವಾಗುತ್ತಿದ್ದರು.ಇನ್ನು ಹಬ್ಬ ಮುಗಿಸಿ ರಾತ್ರಿ ಹೊತ್ತಿಗೆ “ಉಸ್ಸಪ್ಪ!!” ಅನ್ನೋ ಒಂದು ದೀರ್ಘ ಕೂಗು ನೆನಪಾಗುತ್ತದೆ. ನಿಮ್ಮಿಂದ ಮತ್ತಷ್ಟು ಲೇಖನಗಳು ಬರಲಿ ಅನಿವಾಸಿ ಅಂಗಳಕ್ಕೆ!!!!
ಸವಿ.
LikeLike
ವಂದನೆಗಳು ಸವಿತ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
LikeLike
ವಂದನೆಗಳು ಉಮ ಅವರಿಗೆ. ಬರಿ 70 ಅಥವ 80 ರ ದಶಕಗಳೇ ಅಲ್ಲದೆ ಈಗಲೂ ಬೇಕಾದಷ್ಟು ಕುತುಂಬಗಳಲ್ಲಿ ಈ ಸಂಭ್ರಮ ಕಾಣ ಸಿಗುತ್ತದೆ. ಎಷ್ಟೇ ಆದರೂ ಅಮ್ಮನ ಕೈಯ ಅಡಿಗೆಯ ರುಚಿಯೇ ರುಚಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
LikeLike
ಸತ್ಯವತಿ ಅವರೇ ನಿಮ್ಮ ಈ ಲೇಖನ ಓದುತ್ತ ನನಗೆ ನನ್ನ ಅಮ್ಮನ ನೆನಪು ಮೂಡಿಬಂತು. ಹಾಗೆ ತಂದೆಯವರು ಬರೆದ ಸ್ತ್ರೀ ಎಂಬ ಕವನದ ಸಾಲುಗಳು:
“ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ”?
ನನ್ನ ಮನಸಿನಲ್ಲಿ ಮೂಡಿ ಬಂತು. ಕಾಲ ಬದಲಾಗಿದೆ. ನಮ್ಮ ಅಮ್ಮನ ಪೀಳಿಗೆ ಮಹಿಳೆಯರು ಸಂಸಾರ ನಡೆಸುತ್ತಿದ್ದ ಸಂಧರ್ಭಕ್ಕೂ ಮತ್ತು ಪ್ರಸ್ತುತ ಕೌಟುಂಬಿಕ ಪರಿಸ್ಥಿತಿಗೂ ಬಹಳ ವ್ಯತ್ಯಾಸಗಳಿವೆ. ಈಗ ಇಂಗ್ಲೆಂಡಿನ ಅನಿವಾಸಿಗಳಿಗೂ ಹಬ್ಬದ ಊಟವನ್ನು ಒದಗಿಸುವ ಕೇಟರಿಂಗ್ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹೋಳಿಗೆ ಅಂಗಡಿಗಳೇ ಇವೆ, ಪಾತ್ರೆ ತೆಗೆದುಕೊಂಡು ಹೋದರೆ ಲೀಟರ್ ಗಟ್ಟಲೆ ಸಾಂಬಾರ್ ದೊರೆಯುತ್ತದೆ. ಎಂಟಿಆರ್ ಇನ್ಸ್ಟಂಟ್ ಅಡಿಗೆಗಳಿವೆ, ಡಿಶ್ ವಾಷರ್ ಗಳಿವೆ. ಈ ರೀತಿಯ ಅನುಕೂಲಗಳ ಕರ್ನಾಟಕದ ಮಧ್ಯಮ ವರ್ಗದ ಕುಟುಂಬಕ್ಕೆ ಲಭ್ಯವಿದೆ. ಶ್ರೀಮಂತರಿಗೆ ಅಳು ಕಾಳುಗಳು ಇದ್ದೇ ಇರುತ್ತಾರೆ. ಕಾಲ ಬದಲಾದಂತೆ ಹಿಂದಿನ gender role ಈಗ ಮಬ್ಬಾಗಿ ಸಂಸಾರದ ಚೌಕಟ್ಟಿನಲ್ಲೇ cooperative movement ನಡೆಯುತ್ತಿದೆ.
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೆಂಗಸರನ್ನಷ್ಟೇ ಮರೆತಿದೆ” ಎಂಬ ವಿಚಾರ ಎಲ್ಲ ಸ್ತ್ರೀಯರಿಗೆ ಬಹುಶಃ ಅನ್ವ್ಯಯಿಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಈ ನನ್ನ ವಿಶ್ಲೇಷಣೆಯಲ್ಲಿ ಸ್ತ್ರೀಯರ ಸಂಸಾರದೊಳಗಿನ ಕೊಡುಗೆಯನ್ನು ನಿಕೃಷ್ಟವೆಂದು ನಾನು ಹೇಳುತ್ತಿಲ್ಲ. ಒಟ್ಟಾರೆ ನಿಮ್ಮ ಲೇಖನ ಹಲವಾರು ಚಿಂತನೆಗೆ ಅನುವು ಮಾಡಿಕೊಟ್ಟಿದೆ. ಸ್ತ್ರೀಯರ ಕಷ್ಟ ಸುಖಗಳ ಬಗ್ಗೆ ಒಳನೋಟವನ್ನು ನೀಡಿದೆ.
LikeLiked by 1 person
ವಂದನೆಗಳು ಪ್ರಸಾದ್ ಅವರಿಗೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
LikeLike
ವಂದನೆಗಳು ದೇಸಾಯಿ ಅವರಿಗೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
LikeLike
ಡಾ ಸತ್ಯವತಿಯವರು ಈ ಲೇಖನದಲ್ಲಿ ಯುಗಾದಿ ಯವರ್ಣನೆಯ ಜೊತೆಗೆ ಮನೆಯ ಯಜಮಾನಿಯ ಕೆಲಸದ ಭರಾಟೆ, ಹಬ್ಬವನ್ನು ಸಾಂಗವಾಗಿ ಆಚರಿಸಿ ಮುಗಿಸುವ ದಕ್ಷತೆ ಇವೆಲ್ಲವನ್ನು ಓದುತ್ತ ಆ ಓಘದಲ್ಲಿ ಓದುಗನನ್ನೂ ಎಳೆದುಕೊಂಡು ಹೋಗುತ್ತಾರೆ. ಅದಕ್ಕೇ ಈ ದೇಶದಲ್ಲಿ ಒಂದು ಮಾತಿದೆ:
Man may work from sun to sun,
But woman’s work is never done.!
ಅದೇಷ್ಟು ನಿಜ! ಕೊನೆಯಲ್ಲಿ ಬರುವ ‘ಹಬ್ಬದ ಅಮಲು ಇಳಿಯುವ‘ದನ್ನು ಓದಿ ಮುದಕೊಟ್ಟಿತಾದರೂ, ಅದರ ಹಿಂದಿನ ಸತ್ಯಾಂಶವನ್ನು ಅಲ್ಲಗಳೆಯಲಾದೀತೆ? ಕೊನೆಯ ಪದಗುಚ್ಚ ಇಡೀ ಲೇಖನದ ಸಾರಾಂಶ: ಅಹುದು, ಹೆಣ್ಣನ್ನು ಮಾತ್ರ ಮರೆತಿರುತ್ತದೆ ಮರಳಿ ಮರಳಿ ಬರುವ ಯುಗಾದಿ!
LikeLike
ಸುಂದರ ಲಘು ಬರಹ. ಹಾಗೆನಿಸಿದರು, ಇಡೀ ದಿನ ದುಡಿವ ಹೆಣ್ಣಿನ ದೃಶ್ಯ ವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಹಬ್ಬ ಮಿಕ್ಕೆಲ್ಲರಿಗೆ. ಆದರೆ ಇಡೀ ದಿನ ಕಾಯಕದಲ್ಲೆ ಮುಳುಗಿ ಮತ್ತೊಂದು ಯುಗಾದಿಗೆ ಹಂಬಲಿಸುವ ಕೊನೆ ಮಾರ್ಮಿಕವಾಗಿ ಮೂಡಿಬಂದಿದೆ.
ಬಹುಶಃ ನಾವೇ ಬದಲಾವಣೆ ಗಳನ್ನು ಮಾಡಿಕೊಂಡು ಇತರರನ್ನು ಬದಲಾಯಿಸಬೇಕೇನೋ?
LikeLiked by 1 person
ಪ್ರೇಮಲತ ಅವರಿಗೆ. ಬರಹದ ವಿಶ್ಲೇಶಣೆಗೆ ವಂದನೆಗಳು. ನಿಮ್ಮೆಲ್ಲರ ವಿಶ್ಲೇಷಣೆ, ವಿಚಾರಗಳು ನನ್ನಂತಹರನ್ನು ಬೆಳೆಸುತ್ತದೆ, ವಂದನೆಗಳು
LikeLike