“ಪಯಣ” ಪುಸ್ತಕ ವಿಮರ್ಶೆ-ಡಾ.ಕೇಶವ ಕುಲಕರ್ಣಿ, ಡಾ. ದಿವ್ಯತೇಜ, ಡಾ.ನವೀನ್

ಪ್ರಿಯ ಓದುಗರೆ, ಅನಿವಾಸಿ ಓದುಗರಿಗೆ ಡಾ. ಪ್ರಸಾದ್ ರವರು, ಈ ಜಗುಲಿಯ ಸದಸ್ಯರಾಗಿ, ಬರಹಗಾರರಾಗಿ ಮತ್ತು ಓದುಗರಾಗಿ ಪರಿಚಿತರು. ಅವರ ಪಯಣ ಪುಸ್ತಕವು ಖ್ಯಾತ ವಿಮರ್ಶಕ ಮತ್ತು ಸಾಹಿತಿ ಟಿ.ಪಿ ಅಶೋಕರವರ ಮುನ್ನುಡಿ ಮತ್ತು ಖ್ಯಾತ, ಜನಪ್ರಿಯ ಕವಿ ಎಚ್.ಸ್. ವೆಂಕಟೇಶಮೂರ್ತಿ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರವರ ಹಿನ್ನುಡಿಯೊಂದಿಗೆ ಸ್ವಪ್ನ ಬುಕ್ ಹೌಸ್ ಪ್ರಕಾಶನದಲ್ಲಿ ೭.೦೨.೨೦೨೧ ರಂದು ಪ್ರಕಟಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕೋವಿಡ್ ಕಾರಣ ಪುಸ್ತಕದ ಪ್ರಕಟಣೆಯನ್ನು ಜಾಲಜಗುಲಿಯಲ್ಲಿ ಶ್ರೀಮತಿ ಸುಧಾಮೂರ್ತಿಯವರು ನೆರವೇರಿಸಿದರು (ವಿವರಗಳು ಕೊನೆಯ ಪುಟದ ಆಹ್ವಾನ ಪತ್ರಿಕೆಯಲ್ಲಿದೆ). ಲೇಖಕರ ಕಿರುಪರಿಚಯವನ್ನು ಕೇಶವ್ ರವರು ಮಾಡಿಕೊಟ್ಟಿದ್ದಾರೆ. ಪುಸ್ತಕವನ್ನು ಓದಿ ತಮ್ಮ ವಿಮರ್ಶೆಯನ್ನು ಕೇಶವ್, ದಿವ್ಯತೇಜ ಮತ್ತು ನವೀನ್ ರವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ-ಸಂ

1 ಪ್ರಸಾದ್ ಅವರ ‘ಪಯಣ’ ಕಾದಂಬರಿ: ಒಂದು ಪರಿಚಯಕೇಶವ ಕುಲಕರ್ಣಿ

ಡಾ. ಜಿ.ಎಸ್. ಶಿವಪ್ರಸಾದ್

‘ಅನಿವಾಸಿ’ಯ ನಿಯಮಿತ ಬರಹಗಾರರಾಗಿರುವ, ‘ಕೆ‍.ಎಸ್‍.ಎಸ್‍.ವಿ.ವಿ’ ಯ ಸಂಸ್ಥಾಪಕರಲ್ಲೊಬ್ಬರಾಗಿರುವ, ‘ಕನ್ನಡ ಬಳಗ, ಯು.ಕೆ’ಯ ಕಾರ್ಯಕಾರಿ ಸಮಿತಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿರುವ, ‘ಕನ್ನಡ ಬಳಗ, ಯಾರ್ಕ್‌ಶೈರ್ ಅಧ್ಯಾಯ’ದ ಸಂಸ್ಥಾಪಕರಾಗಿರುವ, ಕನ್ನಡ ಸಾಹಿತ್ಯ ಮತ್ತು ಸಿನೆಮಾದ ದಿಗ್ಗಜರನ್ನು ಇಂಗ್ಲೆಂಡಿಗೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ, ಮುಂದಾಳುವಾಗಿ, ವ್ಯವಸ್ಥಾಪಕರಾಗಿ, ಕವಿಯಾಗಿ, ಸನ್ಮಿತ್ರರಾಗಿ, ಕನ್ನಡದ ಖ್ಯಾತ ಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಗನಾಗಿ, ಮಕ್ಕಳ ತಜ್ಞರಾಗಿ, ಡಾ. ಜಿ ಎಸ್ ಶಿವಪ್ರಸಾದ್ (ನಮಗೆಲ್ಲ ಅವರು ಪ್ರಸಾದ್) ಅವರನ್ನು ಗೊತ್ತಿಲ್ಲದ ಕನ್ನಡಿಗ ಇಂಗ್ಲೆಂಡಿನಲ್ಲಿ ಇಲ್ಲ ಎಂದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ ಎಂದುಕೊಂಡಿದ್ದೇನೆ. ಈಗಾಗಲೇ ಸಾಕಷ್ಟು ಲೇಖನಗಳನ್ನು ಕವನಗಳನ್ನು ಬರೆದಿರುವ ಪ್ರಸಾದ್ ಅವರು ‘ಅನಿವಾಸಿ ತಾಣದಲ್ಲಿ ಮಾತ್ರವಲ್ಲದೇ, ಕನ್ನಡ ಪತ್ರಿಕೆಗಳಲ್ಲೂ ಪ್ರಕಟಿಸಿದ್ದಾರೆ. 2016ರಲ್ಲಿ ‘ಇಂಗ್ಲೆಂಡಿನಲ್ಲಿ ಕನ್ನಡಿಗ’ ಎನ್ನುವ 60 ಕವನಗಳ (ಇಂಗ್ಲೀಷ್ ಮತ್ತು ಕನ್ನಡ ಭಾಷೆ) ಸಂಕಲನವನ್ನೂ, 2018 ರಲ್ಲಿ ‘ದಕ್ಷಿಣ ಅಮೇರಿಕ – ಒಂದು ಸುತ್ತು’ ಎನ್ನುವ ಪ್ರವಾಸ ಕಥನವನ್ನೂ ಪ್ರಕಟಿಸಿದ್ದಾರೆ. ಇದುವರೆಗೂ ತಮ್ಮನ್ನು ಕವನ ಮತ್ತು ಲೇಖನಗಳಿಗೆ ಸೀಮಿತಗೊಳಿಸಿದ್ದ ಪ್ರಸಾದ್ ಅವರು, ಇದೀಗ ಕಥಾಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ, ಅವರ ಮೊದಲ ಕಾದಂಬರಿ ‘ಪಯಣ’.

“ಒಳ್ಳೆಯ ಮನುಷ್ಯನ ಬದುಕು ಒಳ್ಳೆಯ ಕತೆಯಾಗಲು ಸಾಧ್ಯವಿಲ್ಲ” ಎನ್ನುವ ಮಾತಿದೆ. ಕೆಟ್ಟ ಪಾತ್ರಗಳಿಲ್ಲದಿದ್ದರೆ ಅದು ‘ಕತೆ’ ಹೇಗೆ ಆಗುತ್ತೆ ಎನ್ನುವುದು ವಿಮರ್ಶಕರ  ತಕರಾರು. ಕೆಟ್ಟ ಪಾತ್ರಗಳಿಲ್ಲದಿದ್ದರೂ ಕತೆ ಹೇಳಲು ಸಾಧ್ಯ ಎಂದು ಸವಾಲು ಹಾಕುವಂತೆ ಡಾ. ಜಿ ಎಸ್ ಶಿವಪ್ರಸಾದ್ (ಪ್ರಸಾದ್) ಅವರು ‘ಪಯಣ’ವನ್ನು  ಬರೆದಿದ್ದಾರೆ.

ಇತ್ತೀಚೆಗೆ ‘ಕನ್ನಡ ಬಳಗ’ಕ್ಕಾಗಿ ಪ್ರೋ.ಕೃಷ್ಣೇಗೌಡರು ಮಾತಾಡಿದಾಗ ಪ್ರಸಿದ್ಧ ಲೇಖಕರೊಬ್ಬರ ಬಗ್ಗೆ ಪ್ರಸ್ತಾಪಿಸುತ್ತಾ, ಅವರ ಒಂದು ಕಾದಂಬರಿಯಲ್ಲಿ ಕೆಟ್ಟ ಪಾತ್ರಗಳೇ ಇರಲಿಲ್ಲವಂತೆ. ಅದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದ್ದಕ್ಕೆ, ‘ಪ್ರಪಂಚದಲ್ಲಿ ಎಂಥೆಂಥ ಜನರಿದ್ದರೂ ನಮಗೆ ಒಳ್ಳೆಯವರು ಅನಿಸಿದವರನ್ನು ಮಾತ್ರ ನಮ್ಮ ಮನೆಯೊಳಗೆ ಬಿಟ್ಟುಕೊಳ್ಳುವಂತೆ, ಕಾದಂಬರಿಯಲ್ಲೂಅದನ್ನೇ ಮಾಡಿದ್ದೇನೆ, ಮನೆಯೊಳಗೆ ಬಿಟ್ಟುಕೊಂಡವರ ಬಗ್ಗೆ ಮಾತ್ರ ಕತೆ ಬರೆದಿದ್ದೇನೆ,’ ಎಂದರಂತೆ. ‘ಪಯಣ’ದ ವಿಷಯದಲ್ಲೂ ಅದೇ ಮಾತನ್ನು ಹೇಳಬೇಕಾಗುತ್ತದೆ.  ಪ್ರಸಾದ್ ಅವರ ಜೊತೆ ಸುಮಾರು ವರ್ಷಗಳಿಂದ ಬೇರೆ ಬೇರೆ ಸಂದರ್ಭದಲ್ಲಿ ಮಾತಾನಾಡಿದ್ದೇನೆ, ಒಡನಾಡಿದ್ದೇನೆ, ಅವರ ಮನೆಯ ಆತಿಥ್ಯವನ್ನೂ ಸವಿದಿದ್ದೇನೆ; ಅವರ ಸಭ್ಯತೆ, ವಿನಯಶೀಲತೆ, ಸ್ನೇಹಪರತೆ ಮತ್ತು ಒಳ್ಳೆಯತನಗಳಿಂದಾಗಿ ಅವರು ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಒಳ್ಳೆಯದನ್ನು ಮಾತ್ರ ಕಾಣಬಲ್ಲ ಉದಾರ ಹೃದಯಿಗಳು. ಹಾಗಾಗಿ ಅವರ ‘ಪಯಣ‘ದಲ್ಲಿ ‘ವಿಲನ್‘ ಇಲ್ಲದಿರುವುದು ಆಶ್ಚರ್ಯವೇನಲ್ಲ.

ಇದೊಂದು ನಾಯಿಯ ಕತೆ. ನಾಯಿ ಬೀಗಲ್ ಜಾತಿಯದು. ಮಗಳ ಜೊತೆ ಆಟಕ್ಕೆ ಇರಲಿ ಎಂದು ಪುಟ್ಟಮರಿಯಾಗಿ ಸಿನೆಮಾ ನಿರ್ದೇಶಕನೊಬ್ಬನ ಮನೆಗೆ ‘ಸ್ನೂಪಿ’ಯಾಗಿ ಬರುತ್ತದೆ; ಮನೆಯಲ್ಲಿ ಇನ್ನೇನು ಹೊಂದಿಕೊಳ್ಳುತ್ತಿದೆ ಎನ್ನುವಾಗ ಮನೆಯಿಂದ ತಪ್ಪಿಸಿಕೊಂಡು ಬೀದಿನಾಯಿಯಾಗಿ ತನ್ನ ಹೆಸರನ್ನು ಕಳೆದುಕೊಳ್ಳುತ್ತದೆ. ಕಾರ್ಪೋರೇಷನ್ ಅವರಿಂದಾಗಿ ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು ಹೆಸರಿಲ್ಲದ ನಾಯಿ ಕೈದಿಗಳಂತೆ ‘2025’ ಎನ್ನುವ ಸಂಖ್ಯೆಯಾಗುತ್ತದೆ. ನಂತರ ದತ್ತು ಸ್ವೀಕಾರವಾಗಿ ‘ಆರ್ಚಿ’ಯಾಗುತ್ತದೆ. ಬೆಳೆಯುತ್ತ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತ ಪೋಲೀಸರಿಗೆ ಸಹಾಯ ಮಾಡುತ್ತದೆ. ಪೋಲೀಸ್ ನಾಯಿಪಡೆಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವಾಗ ಮತ್ತೆ ಸಿನೆಮಾ ನಿರ್ದೇಶಕನಿಗೆ ‘ಆರ್ಚಿ’ಯೇ ‘ಸ್ನೂಪಿ’ ಎಂದು ಗೊತ್ತಾಗುತ್ತದೆ. ‘ಆರ್ಚಿ’ ಮತ್ತೆ ‘ಸ್ನೂಪಿ’ಯಾಗುತ್ತಾ, ಮತ್ತೆ ನಿರ್ದೇಶಕನ ಮನೆ ಸೇರುತ್ತಾ ಎನ್ನುವುದೇ ಕತೆ. ಕತೆಯ ಕೊನೆ ತುಂಬ ಸ್ವಾರಸ್ಯಕರವಾಗಿದೆ.

ಪುಟ್ಟ ಮಗುವಾದಾಗಿನಿಂದ ನಿವೃತ್ತ(!)ನಾಗುವವರೆಗಿನ ನಾಯಿಯ ಕತೆಯಿದು. ಟಿಪಿಕಲ್ ಬೆಂಗಳೂರಿಗನಂತೆ ಕನ್ನಡ, ತಮಿಳು ಮತ್ತು ಇಂಗ್ಲೀಷ್ (ನಾಯಿ ತರಬೇತಿಗೆ ಪೋಲೀಸ್ ಇಲಾಖೆಯವವರು ಇಂಗ್ಲೀಷ್ ಬಳಸುತ್ತಾರೆ ಎನ್ನುವ ಊಹೆ ನನ್ನದು) ಮೂರೂ ಭಾಷೆಯಲ್ಲಿ ಪರಿಣಿತಿ ಪಡೆಯುವ ನಾಯಿಯಿದು.

ಇದು ಮೂಲ ಕತೆಯ ಎಳೆಯಾದರೆ, ಇದರಲ್ಲಿ ಮೂರು ಮಕ್ಕಳ ಉಪಕತೆಗಳಿವೆ. ಒಂದೊಂದು ಮಗುವಿನ ಕತೆಯೂ ಈ ನಾಯಿಯ ಬದುಕಿನ ಜೊತೆ ಬೆರೆತುಕೊಂಡಿವೆ. ಯಾವ ಭಾತೃಗಳೂ ಇಲ್ಲವೆಂದು ಒಂಟಿಯಾಗಿರುವ ಮಗುವಿಗೆ ನಾಯಿ ತಮ್ಮನಾಗುತ್ತಾನೆ, ಗೆಳೆಯನಾಗುತ್ತಾನೆ. ಸೂರಿಲ್ಲದ ಹುಡುಗಿಗೆ ಜೊತೆಗಾರನಾಗುತ್ತಾನೆ, ರಕ್ಷಕನಾಗುತ್ತಾನೆ. ಆಟಿಸಂ ಇರುವ ಮಗುವಿನ ಆರೈಕೆಗೆ ಸಹಾಯವಾಗುತ್ತಾನೆ. ಮೂರೂ ಮಕ್ಕಳ ಕತೆಗಳು ಮೂಲ ಕತೆಗೆ ಧಕ್ಕೆ ಬರದಂತೆ ಗುಪ್ತಗಾಮಿನಿಯಾಗಿ ಹರಿಯುತ್ತವೆ. ಮಕ್ಕಳ ದೃಷ್ಟಿಯಿಂದ ನಾಯಿಗಳ ಬಗ್ಗೆ ಇರುವ ಪ್ರೀತಿ ಮತ್ತು ತುಂಟತನವನ್ನು ನಾವು ಕಂಡುಕೊಳ್ಳುತ್ತೇವೆ. ನಾಯಿಗಳಿಗೂ ಮಕ್ಕಳಿಗೂ ಅಂಥ ವ್ಯತ್ಯಾಸವೇನೂ ಇಲ್ಲ ಎನ್ನುವುದನ್ನು ಪ್ರಸಾದ್ ಸೂಕ್ಷ್ಮವಾಗಿ ನಿರೂಪಿಸುತ್ತಾರೆ.

ಕತೆಯ ತಂತ್ರ ಸರಳ ಮತ್ತು ಶೈಲಿ ನೇರ. ಅಲ್ಲಲ್ಲಿ ಮಾಹಿತಿಗಳೂ ಬಂದು ಕತೆಯ ಓಟಕ್ಕೆ ಕಡಿವಾಣ ಹಾಕುತ್ತವಾದರೂ ಕತೆಗೆ ಪೂರಕವಾಗುವಂತೆ ವಿಷಯ ಗೊತ್ತಿಲ್ಲದವರಿಗೆ ಗೊತ್ತಿರಲಿ ಎನ್ನುವಂತೆ ತೋಳ-ನಾಯಿಗಳ ಇತಿಹಾಸ, ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ, ನಾಯಿಗಳ ತರಬೇತಿ, ಪೋಲಿಸ್ ಪಡೆಯಲ್ಲಿ ನಾಯಿಗಳ ಪಾತ್ರಗಳ ಬಗ್ಗೆ ವಿವರವಾದ ಮಾಹಿತಿಗಳಿವೆ.

ಕತೆ ಓದಿ ಮುಗಿಸಿದಾಗ ಒಂದು ಕಾಮಿಕ್ ಪುಸ್ತಕವನ್ನು ಅಥವಾ ಒಂದು ‘ಡಿಸ್ನಿ‘ ಸಿನೆಮಾ ನೋಡಿದಂತಾಯಿತು, ಜೊತೆಗೆ ನಾಯಿಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲಿತಂತಾಯಿತು. ಇದೊಂದು ಸುಂದರ ‘ಮಕ್ಕಳ ಕಾದಂಬರಿ’ ಅಲ್ಲವೇ ಅನಿಸಿತು. ಕನ್ನಡದಲ್ಲಿ ಮಕ್ಕಳ ಕಾದಂಬರಿಗಳಿಲ್ಲ ಎನ್ನುವ ಕೊರತೆಯನ್ನು ಈ ಪುಸ್ತಕ ಖಂಡಿತವಾಗಿಯೂ ನೀಗಿಸುತ್ತದೆ ಎಂದು ನನ್ನ ಅನಿಸಿಕೆ. ಕನ್ನಡ ಭಾಷೆಯಲ್ಲಿ ಕತೆ ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಇಚ್ಛಿಸುವ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಕನ್ನಡದ ಮಕ್ಕಳಿಗೆ ಈ ಪುಸ್ತಕದಿಂದ ಕನ್ನಡದ ಓದನ್ನು ಶುರು ಮಾಡಿದರೆ ಅವರಿಗೆ ಕನ್ನಡದ ಓದಿನಲ್ಲಿ ಆಸಕ್ತಿ ಹುಟ್ಟಬಹುದು.

ಕಾದಂಬರಿಯ ಅಂತ್ಯದಲ್ಲಿ ಬರೆದಿರುವಂತೆ, ಈ ಕಾದಂಬರಿಯನ್ನು ಸಿನೆಮಾ ಮಾಡಬಹುದು, ಒಂದು ಒಳ್ಳೆಯ ಅನಿಮೇಷನ್ ಸಿನೆಮಾ ಮಾಡುವ ಎಲ್ಲ ಸರಕೂ ಈ ಕಾದಂಬರಿಯಲ್ಲಿದೆ. ಪ್ರಸಾದ್ ಅವರು ಇನ್ನೂ ಹಲವು ಕಾದಂಬರಿಗಳನ್ನು ಬರೆಯಲಿ ಎನ್ನುವುದು ನನ್ನ ಅಪೇಕ್ಷೆ.

ಡಾ.ಕೇಶವ ಕುಲಕರ್ಣಿ

2 ಆತ್ಮೀಯತೆಯೆನ್ನು ಒಳಗೊಂಡಿರುವ “ಪಯಣ”ದಿವ್ಯತೇಜ

ಶ್ರೀಯುತ ಡಾ.|ಶಿವಪ್ರಸಾದ್ ಅವರಿಗೆ “ಪಯಣ” ಕಾದಂಬರಿಯ ಪ್ರಕಟಣೆಗೆ ಅಭಿನಂದನೆಗಳು. ಅವರ ಪುಸ್ತಕ ಬಿಡುಗಡೆ ಸಮಾರಂಭ ದಿನದ ನಂತರ ಪುಸ್ತಕ ದೊರಕುವುದಕ್ಕೆ ಕಾತರದಿಂದ ಎದುರು ನೋಡುತ್ತಿದ್ದೆನು. ಪ್ರಸಾದ್ ಅವರು ಬೆಂಗಳೂರಿನಿಂದ ಕೆಲವು ಪುಸ್ತಕಗಳನ್ನು ತರಿಸಿದಾಗ ನಮಗೂ ಒಂದು ಪ್ರತಿಯನ್ನು ಕಳುಹಿಸಿದರು. ಶುಕ್ರವಾರ ಪುಸ್ತಕ ಬಂದು ತಲುಪಿತು. ರಾತ್ರಿ ಮಲಗುವ ಮುನ್ನ ಕಾದಂಬರಿ ಓದಲು ಪ್ರಾರಂಭಿಸಿದೆ. ಕಥೆಯಲ್ಲಿ ಸಂಪೂರ್ಣ ಮಗ್ನನಾದ ನಾನು, ಮಧ್ಯೆ ನಿಲ್ಲಿಸಲು ಮನಸ್ಸೇ ಬರಲಿಲ್ಲ. ಕಾದಂಬರಿ ಮುಗಿಸಿದಾಗ ಸರಿ ರಾತ್ರಿ ಎರಡು ಘಂಟೆ. ಕಾದಂಬರಿಯ ನಿರೂಪಣೆ ಸರಳವಾಗಿ, ಸುಲಲಿತವಾಗಿ ಮೂಡಿ ಬಂದಿದೆ. ಸ್ನೂಪಿ /ಆರ್ಚಿ ಯ ಪಯಣ, ಮಾನವ ಮತ್ತು ಶುನಕದ ನಡುವೆಯ ವಿಶೇಷ ಸ್ನೇಹವನ್ನು ಸುಂದರವಾಗಿ ವಿವರಿಸುತ್ತದೆ.
ಮಾಧ್ಯಮ ವರ್ಗದವರ ಮನೆಯಲ್ಲಿ ಕುಟುಂಬದ ಸದಸ್ಯನಾಗಿದ್ದ ಸ್ನೂಪಿ, ನಂತರ ಬೀದಿ ನಾಯಿಯಾಗಿ ಮಾರ್ಪಟ್ಟಾಗ ಪಡುವ ಕಷ್ಟ, ನಂತರ ಪೊಲೀಸ್ ನಾಯಿಯಾಗಿ ತನ್ನ ಅಸಾಮಾನ್ಯ ಘ್ರಾಣ ಶಕ್ತಿಯಿಂದ ಕಥಾನಾಯಕನಾಗುವುದು ಬಹಳ ಸೊಗಸಾಗಿ ಮೂಡಿ ಬಂದಿದೆ.  ಇದೆಲ್ಲರ ನಿರುಪಣೆ ಬಹಳ ನೈಜತೆಯಿಂದ ಕೂಡಿದ್ದು ನಮ್ಮ ಕಣ್ಮುಂದೆಯೇ ನಡೆದಿರುವ ಕಥೆಯಂತೆ ತೋರುವುದು ಈ ಕಾದಂಬರಿಯ ವಿಶೇಷತೆ. ಪ್ರಸಾದ್ ಅವರ ಪರಿಚಿತರಿಗೆ ಕಾದಂಬರಿಯಲ್ಲಿ ಬರುವ ಪಾತ್ರದಾರಿಗಳಿಗೂ ಮತ್ತು ಪ್ರಸಾದ್ ಅವರ ಕುಟುಂಬ  ಸದಸ್ಯರಿಗೂ ಇರುವ ಸಾಮ್ಯ ಗೋಚರಿಸುತ್ತದೆ. ಇದು ಕಥೆಗೆ ನಮ್ಮದೇ ಅನ್ನುವ ಆತ್ಮೀಯ ಭಾವವನ್ನು ಕೊಡುತ್ತದೆ.

ಪ್ರಸಾದ್ ಅವರು ಈ ಕಾದಂಬರಿಯಲ್ಲಿ ತಮ್ಮ ವೈದ್ಯಕೀಯ ಪರಿಣತಿಯನ್ನು ಪ್ರದರ್ಶಿಸುತ್ತಾ ಕಾದಂಬರಿಗೆ ತಮ್ಮದೇ ಆದ ಛಾಪು ಕೊಟ್ಟಿದ್ದಾರೆ. ಅಲ್ಲದೆ ಕಾರ್ಮಿಕ ವರ್ಗದವರ ಕಷ್ಟ, ವಿವಿಧ ಜನಾಂಗಗಳ ಸಂಸ್ಕೃತಿಯ ಪರಿಚಯ, ಸ್ವಲೀನತೆ (ಆಟಿಸಂ) ನಿಭಾಯಿಸುವಲ್ಲಿ ಪ್ರಾಣಿಗಳ ಸಹಕಾರ, ಹೀಗೆ ಅನೇಕ ವಿಷಯಗಳನ್ನು ನಮಗೆ ಕಾದಂಬರಿಯ ಮೂಲಕ ವಿವರಿಸಿದ್ದಾರೆ. ಕಾದಂಬರಿಯ ಮೂಲ ಕಥೆಗೆ ಪೂರಕವಾಗಿ ಇವೆಲ್ಲವನ್ನೂ ವಿವರಿಸಿರುವುದು ಶ್ಲಾಘನೀಯ ಪ್ರಯತ್ನವೇ ಸರಿ.

ಅವರ ಅನಿಸಿಕೆಯಂತೆ ಈ ಕಾದಂಬರಿಯನ್ನು ದೃಶ್ಯ ಮಾಧ್ಯಮಕ್ಕೆ ಪರಿವರ್ತಿಸಿ ಬಹಳಷ್ಟು ಜನರಿಗೆ ಮುಟ್ಟುವಂತಾಗಲಿ ಎಂದು ಆಶಿಸುತ್ತೇನೆ.

ಹೃ.ದಿವ್ಯತೇಜ

3. ‘ಪಯಣ’ದ ಜೊತೆ ಚಲಿಸುತ್ತಿದ್ದಂತೆ ಮೂಡಿಬಂದ ಭಾವನೆಗಳುನವೀನ

ಯುನೈಟೆಡ್ ಕಿಂಗ್ಡಮಿನ ಕ್ರಿಯಾತ್ಮಕ ಕನ್ನಡ ಬಳಗಗಳು ಕನ್ನಡ ಪ್ರೇಮಿಗಳಿಗೆ ರಸದೌತಣವನ್ನೇ ಉಣ್ಣಿಸುತ್ತಿವೆ ಎನ್ನಬಹುದು. ಅಂತಹ ಒಂದು ಸಂಘದ ಪ್ರತಿಭಾವಂತ ರೂವಾರಿ, ಗೆಳೆಯ ಶಿವಪ್ರಸಾದರು. ಇವರ ಮೊಟ್ಟಮೊದಲಿನ ಕಾದಂಬರಿ, ‘ಪಯಣ’ವನ್ನು ಈಗಷ್ಟೆ ಓದಿ ಮುಗಿಸಿದ್ದೇನೆ. ಹಿಂದೆ, ವಿಶೇಷವಾಗಿ ಶಾಲಾಕಾಲೇಜಿನಲ್ಲಿದ್ದಾಗ, ಬಹಳಷ್ಟು ಕಥೆ ಕಾದಂಬರಿಗಳನ್ನು ಓದಿದ್ದೆ. ನಂತರ, ಜೀವನದ ಜಂಜಾಟ, ಹೋರಾಟ, ಒದ್ದಾಟದಲ್ಲಿ, ಜೊತೆಗೆ ಸುಲಭವಾಗಿ ಹಸ್ತಕ್ಕೆ ನಿಲುಕುವ ‘ಅಲೆಯುಲಿ(ಮೊಬೈಲ್ ಫೋನ್)’ಯಲ್ಲಿ ದೊರಕುವ ’ಜ್ಞಾನ’ದಿಂದಲೊ ಏನೊ, ದಪ್ಪ ಪುಸ್ತಕ ಹಿಡಿದು ಓದುವ ರೂಢಿಯೆ ಕಡಿಮೆಯಾಗಿತ್ತು. ಹಾಗೆ ನೋಡಿದ್ದಲ್ಲಿ ‘ಪಯಣ’ವೆಂಬ ಈ ಕಾದಂಬರಿ ಅಷ್ಟೊಂದು ದೊಡ್ಡದಲ್ಲ. ಕ್ಲಿಷ್ಟ ಪದಗಳಾಗಲಿ, ಗಾಢವಾಗಿ ಆಲೋಚಿಸಿ ಅರ್ಥ ಹುಡುಕುವಂತ ವಾಕ್ಯಗಳಾಗಲಿ ಇಲ್ಲದೆ ಸಾಮಾನ್ಯ ಓದುಗರೂ ಸರಾಗವಾಗಿ ಒಂದೇಸಲ ಕುಳಿತು ಕೊನೆಯವರೆಗು ಓದಿ ಮುಗಿಸುವಂತ ಸರಳ ರಚನೆ. ಹಾಗಂದ ಮಾತ್ರಕ್ಕೆ, ಗಾಢವಾದ ಅಂಶಗಳಿಂದ ಕೂಡಿಲ್ಲವೆಂದಲ್ಲ. ಜೀವನದಲ್ಲಿ ನಮ್ಮ ಹೃದಯಕ್ಕೆ ನಿಕಟವಾಗಿರುವಂತವು ಬಹಳ ಸರಳವೆ ಸರಿ. ‘ಪಯಣ’ ಓದುಗರನ್ನು ಮೊದಲಿನಿಂದ ಅಂತದವರೆಗು ಕುತೂಹಲದೊಂದಿಗೆ ಕರೆದೊಯ್ಯುತ್ತದೆ. ಓದುತ್ತ ಓದುತ್ತ ನಾನೂ ಸ್ನೂಪಿ,ಆರ್ಚಿ ಮತ್ತು ಅವನ ಅನೇಕ ಮನುಜ ಸಂಗಾತಿಯರೊಡನೆ ಒಂದಾಗಿಬಿಟ್ಟೆ.

ಬೃಹತ್ ನಗರದ ಜೀವನ ಮನುಷ್ಯರ ಪ್ರಾಕೃತಿಕ ಸಂಪರ್ಕಕ್ಕೆ ಒಂದು ತರಹದ ಕಡಿವಾಣ ಹಾಕಿದಂತಿದೆ. ವಿಶೇಷವಾಗಿ, ಮಕ್ಕಳು ಮುಂಚಿನ ಹಾಗೆ ಆಚೆ ಹೋಗಿ ಬೀದಿಗಳಲ್ಲಿ ಸಂದಿಗಳಲ್ಲಿ ಆಟವಾಡುವಂತಿಲ್ಲ. ನಾವು ಚಿಕ್ಕವರಿದ್ದಾಗ ಗೋಲಿ, ಬುಗುರಿ, ಗಿಲ್ಲಿದಾಂಡು, ಲಗೋರಿ ಆಡ್ತಿದ್ವಿ. ಶಾಲೆಯಿಂದ ಬರುವುದೆ ತಡ, ಪುಸ್ತಕಗಳ ಚೀಲ ಎಸೆದು ಬೀದಿಗಿಳಿತಿದ್ವಿ; ಪಕ್ಕದ ಮನೆ, ಆಚೆ ಬೀದಿ ಮನೆಗಳ ಮಕ್ಕಳ ಗುಂಪು ಜೊತೆ ಸೇರಿ ಕುಣಿದು ಕುಪ್ಪಳಿಸ್ತಿದ್ವಿ. ಈಗ ಆ ಆತಂಕವಿಲ್ಲದ ದಿನಗಳಿಲ್ಲ ನಮ್ಮ ನಗರಗಳಲ್ಲಿ ಬೆಳೆಯುವ ಮಕ್ಕಳಿಗೆ. ವಿಪರೀತ ವಾಹನ ಚಲನೆ, ಜೊತೆಗೆ ಖಾಲಿ ಜಾಗಗಳಿಲ್ಲ. ಇಂತಹ ಸನ್ನಿವೇಶದಲ್ಲಿ ‘ಪಯಣ’ದ ಮುಖ್ಯ ಪಾತ್ರದಾರಿ ಮಕ್ಕಳಾದ ಅರ್ಚನ, ಸೆಲ್ವಿ ಮತ್ತು ಸಹನರಿಗೆ ‘ಸ್ನೂಪಿ’ ‘ಆರ್ಚಿ’ ತಮ್ಮ ಪ್ರೀತಿ, ಸ್ನೇಹ, ಸುಪ್ತ ಚೈತನ್ಯ ವ್ಯಕ್ತ ಪಡಿಸಲು ಒಂದು ಮಾರ್ಗ ಕಲ್ಪಿಸಿದ. ದೊಡ್ಡವರಿಗಿಂತ ಹೆಚ್ಚಾಗಿ ಮಕ್ಕಳು ನಾಯಿಗಳ ಜೊತೆ ಅವರದೆ ಆದ ವಿಶಿಷ್ಟ ರೀತಿಯಲ್ಲಿ ಸಂಬಂಧ ಬೆಳೆಸಿಕೊಳ್ಳುತ್ತಾರೆ. ನಾಯಿಗಳೂ ಅಷ್ಟೆ. ಮಕ್ಕಳೊಡನೆ ಶೀಘ್ರವಾಗಿ ಒಡನಾಟ ಸಲಿಗೆ ಸ್ನೇಹ ವೃದ್ಧಿಗೊಳಿಸುಕೊಳ್ಳುತ್ತವೆ. ಎಷ್ಟೊಂದು ನಾವು ನೋಡಿಲ್ಲ ಉದ್ಯಾನವನಗಳಲ್ಲಿ ನಡೆಯುವಾಗ. ತಮ್ಮ ಮಾಲಿಕರಲ್ಲದೆ ಇತರರನ್ನು ಆಕರ್ಶಿಸಿ ಅವರೊಡನೆ ಒಂದಷ್ಟು ಆಟವಾಡಿ, ಮೂಸಿ, ಮೈಮೇಲೆತ್ತಿ ಮೈ ಸವರಿಸಿಕೊಂಡು ಚೆಂಡಿನಂತೆ ಪುಟ ಪುಟಿಸುವುವದು ಸಾಮಾನ್ಯ ದೃಶ್ಯ. ನಾಯಿಯಿಂದಾಗಿ ಮನುಷ್ಯರು ಒಂದೆರಡು ಮಾತಾಡಿ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲವರ ಏಕಾಂಗಿತನ ಸ್ವಲ್ಪವಾದರೂ ನಿವಾರಣೆಯಾಗುವುದಕ್ಕೆ ಇದೊಂದು ಅವಕಾಶ.

ಪಯಣ ಓದುತ್ತಿದ್ದಾಗ ನನ್ನ ಕಣ್ಣುಮುಂದೆ ಹಾದುಹೋದವು ಪುಸ್ತಕದಲ್ಲಿ ಬರುವ ನಾಯಿಗಳಿಗೆ ಸಂಬಂಧ ಪಟ್ಟಂತ ನೆನಪುಗಳು. ಬೀದಿನಾಯಿಗಳ ಹಿಂಡು ರಸ್ತೆ ಸಂದಿಗಳಲ್ಲಿ ಹಾವಳಿ ಎಬ್ಬಿಸಿ ನಮ್ಮ ಸಂಜೆಯ ಆಟಕ್ಕೆ ಬಹಳ ಅಡಚಣೆ ತರುತ್ತಿದ್ದವು. ಅವುಗಳು ಓಡಿಸಿಕೊಂಡು ಬಂದು ಕಚ್ಚುವ ಭಯವೂ ತುಂಬಿರುತ್ತಿತ್ತು. ಬೆಂಗಳೂರು ನಗರ ಪಾಲಿಕೆಯವರು ಆಗಾಗ್ಗೆ ವ್ಯಾನಲ್ಲಿ ಬಂದು ನಾಯಿಗಳನ್ನು ಸೆರೆ ಹಿಡಿದುಕೊಂಡು ಹೋಗುತ್ತಿದ್ದರು. ಆ ನಾಯಿಗಳ ಮುಂದಿನ ಗತಿ ನಮಗೆ ತಿಳಿಯುತ್ತಿರಲಿಲ್ಲ. ಪಯಣ ಕಾದಂಬರಿಯಿಂದ ಬೀದಿನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಕಾಶ ಒದಗಿತು. ವಿಶೇಷವಾಗಿ ಅವುಗಳಿಗೆ ಸಂತಾನ ನಿಲ್ಲಿಸಲು ಮಾಡುವ ಶಸ್ತ್ರಕ್ರಿಯೆ, ಪ್ರಾಣಿ ಹಿಂಸೆ ತಡೆಯುವ ಸಂಘಗಳ ಪ್ರಭಾವ, ಬೆಂಗಳೂರು ಪೋಲಿಸ್ ಇಲಾಖೆ ನಾಯಿಗಳಿಗೆ ಏರ್ಪಡಿಸುವ ತರಬೇತಿ ವ್ಯವಸ್ಥೆ, ಅಂತಹ ನಾಯಿಗಳಿಂದ ಆಗುವ ಪ್ರಯೋಜನ – ಅದರಲ್ಲೂ ಮಾದಕ ಸಾಮಾಗ್ರಿ ಮತ್ತು ಭಯೋತ್ಪಾದಕ ಅಥವಾ ಸಿಡಿಮದ್ದುಗಳನ್ನು ಗೊತ್ತು ಹಚ್ಚುವಿಕೆ – ಇಷ್ಟೆಲ್ಲ ಸಂಕ್ಷಿಪ್ತವಾಗಿ ‘ಪಯಣ’ ಮನವರಿಕೆ ಮಾಡುತ್ತೆ.
ಮುಖ್ಯವಾಗಿ ನಾಯಿ ಮನುಷ್ಯರ ಸಂಬಂಧ ಎತ್ತಿ ತೋರಿಸುವಂತ ಕೃತಿ ಇದು. ತಮ್ಮದೆ ಆದ ಜಂಜಟದಲ್ಲಿರುವ, ಒಬ್ಬೊಬ್ಬರ ದೃಷ್ಟಿಕೋನ ವಿಭಿನ್ನದಿಂದಿರುವ ಮಹೇಶ, ನಿರ್ಮಲ, ನಿಖಿಲ್, ರಮ್ಯ ಮತ್ತು ಪುಟ್ಟ ಅರ್ಚನರನ್ನು ಒಂದುಗೂಡಿಸಿ, ಕುಟುಂಬವೆಲ್ಲ ಕುಳಿತು ಆನಂದಿಸುವುದಕ್ಕೆ ಸ್ನೂಪಿ ಹಾದಿ ಮಾಡಿಕೊಡುತ್ತದೆ. ಬೆಳೆಯುತ್ತಿರುವ ಬಾಲಕಿಗೆ ಶಾಲೆನಂತರ ಗೆಳೆಯ ಗೆಳತಿಯರೊಡನೆ ಬೆರೆಯಲಾಗುತ್ತಿಲ್ಲವಲ್ಲ ಎಂಬ ನ್ಯೂನತೆಗೆ ಪರಿಹಾರ ತುಂಬಿಸುತ್ತದೆ. ಮುಂದೆ ಬರುವ ಸೆಲ್ವಿ ಮತ್ತು ಸಹನ ಎಂಬ ಬಾಲಕಿಯರೂ ತಮ್ಮಲ್ಲಿ ಅಜಗಜಾಂತರ ಸಾಮಾಜಿಕ ವ್ಯವಸ್ಥೆಯ ಅಂತರವಿದ್ದರೂ ಅರ್ಚನಳಂತೆ ಸ್ನೂಪಿ ಆರ್ಚಿಗೆ ಹೊಂದಿಕೂಳ್ಳುವುದು ನಾಯಿ-ಮನುಜರ, ಅದರಲ್ಲು ಮಕ್ಕಳು-ನಾಯಿಗಳ ಮಧ್ಯೆ ಉಂಟಾಗುವ ಬಾಂಧವ್ಯವನ್ನು ಮನದಟ್ಟು ಮಾಡುತ್ತದೆ. ನಾಯಿಯೊಂದೆ. ಆದರೆ ಅದೇ ನಾಯಿ ಎಷ್ಟೇ ಸಾಮಾಜಿಕ, ಆರ್ಥಿಕ, ಬೌದ್ಧಿಕ ಅಂತರ ಇದ್ದರೂ, ಆ ಮೂರು ಕುಟುಂಬಗಳಲ್ಲಿ ಸಮಾನಾದ ಪ್ರೀತಿ ವಿಶ್ವಾಸ ಪಡೆದು, ತಾನು ಖುಷಿಯಿಂದ ಕುಣಿದು ಕುಪ್ಪಳಿಸಿ ಮನುಷ್ಯರಿಗೂ ಮನ ತನ ತಣಿಸುತ್ತದೆ. ಇಂತಹ ಸಂಬಂಧ, ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಸಿಗುವುದೆ ಎಂಬ ಸಂಶಯ ಓದುಗರಿಗೆ ಕಾಡದೆ ಇರುವುದಿಲ್ಲ ಎನಿಸುತದೆ.

ಇನ್ನೊಂದು ಕರಾಳ ವಸ್ತು. ಬಡತನ ಬೇಗೆಯಿಂದ ಬಳಲುತ್ತಿದ್ದು, ಸ್ಥಿರವಾದ ನೆಲೆಯಿಲ್ಲದೆ, ಮಗಳ ವಿದ್ಯೆಗೂ ಹಣವಿಲ್ಲದಂತ ಜೀವನ ನಡೆಸುತ್ತಿದ್ದ ಆರ್ಮುಗಂಗೆ ಒದಗಿದ ದುರಂತ. ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ದುಡಿದು ಸಂಸಾರ ಸಾಗಿಸಿ, ಸರಕಾರಿ ಆಸ್ಪತ್ರೆಯಲ್ಲಿ ಮಗಳ ಚಿಕೆತ್ಸೆಗೆ ಲಂಚವನ್ನು ಕೊಟ್ಟು ಉಳಿಸಿಕೊಂಡು, ಮಿಕ್ಕ ಕಾಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ದೇವರ ದರ್ಶನ ಪಡೆಯಲು ಹೋಗಿ ತಾನೇ ಆಹುತಿಯಾದದ್ದು. ಎಂತಹ ದುಷ್ಪರಿಣಾಮ! ಹೆಂಡತಿ ಕನ್ನಗಿ ಮತ್ತು ಮಗಳು ಸೆಲ್ವಿ ಅನಾಥರಾಗುತ್ತಾರೆ. ನಂಬಿಕೆಗೆ ಇದು ದೊರಕಿದ ದೊಡ್ಡ ಪೆಟ್ಟು. ಕನ್ನಗಿ ದೇವರ ಅಸ್ತಿತ್ವವನ್ನೆ ಪ್ರಶ್ನಿಸುವುದರಲ್ಲಿ ತಪ್ಪಿಲ್ಲವೇನೊ!
ಮತ್ತೊಂದು ವಿಷಯ ನನ್ನಲ್ಲಿ ಗಲಿಬಲಿ ಮತ್ತು ಸಂಕಟ ತಂದಿತು. ಆರ್ಚಿ ಸಹನಳ ಆತ್ಮೀಯ ಸಂಗಾತಿಯಲ್ಲದೆ, ಅವಳು ಬಳಲುತ್ತಿದ್ದ, ತಜ್ಞರಿಗೂ ಸವಾಲಾಗಿದ್ದ ಮಾನಸಿಕ ಗೊಂದಲಕ್ಕೆ ಒಂದು ರೀತಿಯ ಚಿಕಿತ್ಸಕನಾಗಿದ್ದ. ಆರ್ಚಿ ಬಂದ ಮೇಲೆ ಆಕೆಯ ಬೆಳವಣಿಗೆಯಲ್ಲಿ ತೃಪ್ತಿ ಕೊಡುವಂತ ಮಾರ್ಪಾಟಾಗಿತ್ತು. ಆಕೆಯ ಸಾಕು ತಂದೆತಾಯಿಯರಿಗು ಸಂತೃಪ್ತಿ ಉಂಟಾಗಿತ್ತು ಮಗಳಲ್ಲಾದ ಬದಲಾವಣೆಯಿಂದ ಮತ್ತು ಆರ್ಚಿಯ ಒಡನಾಟದಿಂದ. ಹಾಗಿದ್ದಲ್ಲಿ ಆರ್ಚಿಯನ್ನು ಅವಳಿಂದ ಬೇರ್ಪಡಿಸಿದ್ದು ಖೇದವೆನಿಸಿತು. ಬೀಗಲ್ ಜಾತಿಯ ನಾಯಿಗಳು ಇನ್ನಿರಲಿಲ್ಲವೆ?ಪೋಲಿಸ್ ಇಲಾಖೆ ಶ್ರಮವಹಿಸಿ ಹುಡುಕಿದ್ದರೆ ಬೇರೆಯವು ಸಿಕ್ಕುತ್ತಿದ್ದವೇನೊ ಎನಿಸಿತು. ಆದರೆ ಆರ್ಚಿ ಆಗಾಗಲೆ ಹೆಸರು ಮಾಡಿದಂತ ಪ್ರಾಣಿ. ಆತನ ಉತ್ತಮ ಮಟ್ಟ ಎಲ್ಲರಿಗು ಅರಿವಾಗಿತ್ತು. ಒಂದು ಕುಟುಂಬಕ್ಕಲ್ಲದೆ, ಸಮಾಜಕ್ಕೆ, ದೇಶದ ಒಳಿತಕ್ಕೆ ಅವನು ಅರ್ಹ ಎಂಬುದು ಮನದಟ್ಟಾಗಿತ್ತು. ಆರ್ಚಿ ಕೊನೆಯವರೆಗು ಇಲಾಖೆಯ ನಿರೀಕ್ಷಿತ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿಕೊಡುವುದು ಪ್ರಶಂಸನೀಯ.

ಕಾದಂಬರಿ ಓದುತ್ತಿದ್ದಂತೆ ನಾನಾತರಹದ ತರಂಗಳು ಚಿಮ್ಮುವುದರಲ್ಲಿ ಸಂಶಯವಿಲ್ಲ. ಓದುಗರೆ, ಉದ್ಭವಿಸುವ ಸಮಸ್ಯೆಗಳಿಗೆ ಅಥವ ದ್ವಂದ್ವಕ್ಕೆ ತಮಗನುಸಾರ ವಿವರಣೆ ಕೊಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಇದೊಂದು ನಿಜ ಕಥೆಯೆನಿಸುತದೆ. ನಿರೂಪಣೆ ಒಂದು ಚಲನ ಚಿತ್ರಕ್ಕೆ ಅನ್ವಯವಾಗುವಂತದು. ಇದನ್ನು ಒಂದು ಅನಿಮೇಷನ್ ಚಿತ್ರವಾಗಿ ನಿರ್ಮಿಸಿದರೆ ಮಕ್ಕಳಿಗೆ (ದೊಡ್ಡವರಿಗು ಸಹ)ಇಷ್ಟವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ನನ್ನ ಅನಿಸಿಕೆ. ಲೇಖಕರ ಸಾಧನೆ ಶ್ಲಾಘನೀಯ.

ನವೀನ, ಲೀಡ್ಸ್

ಪಯಣ” ಪುಸ್ತಕ ಪ್ರಕಟಣೆಯ ಆಹ್ವಾನ ಪತ್ರಿಕೆ

5 thoughts on ““ಪಯಣ” ಪುಸ್ತಕ ವಿಮರ್ಶೆ-ಡಾ.ಕೇಶವ ಕುಲಕರ್ಣಿ, ಡಾ. ದಿವ್ಯತೇಜ, ಡಾ.ನವೀನ್

  1. ನನ್ನ ಚೊಚ್ಚಲು ಕಾದಂಬರಿ ‘ಪಯಣ’ದ ಬಗ್ಗೆ ನಿಮ್ಮ ಅನಿಸಿಕೆಗಳಿಗಾಗಿ ನನ್ನ ಧನ್ಯವಾದಗಳು. ನೀವುಗಳು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಬೆಂಗಳೂರಿನಿಂದ ತರಿಸಿದ ಪಯಣ ಪುಸ್ತಕವನ್ನು ಕೊಂಡು ಓದುವುದರ ಜೊತೆಗೆ ಅದರ ಬಗ್ಗೆ ಉತ್ತಮವಾದ, ಸಮತೋಲನವಾದ, ಪ್ರಾಮಾಣಿಕವಾದ ಅಭಿಪ್ರಾಯಗಳನ್ನೂ ಒದಗಿಸಿದ್ದೀರಿ. ನನ್ನ ಸಾಹಿತ್ಯ ಪಯಣಕ್ಕೆ ಇದು ಉತ್ತೇಜನವಾಗಿದೆ ಎಂದು ಭಾವಿಸುತ್ತ ಮತ್ತೊಮ್ಮೆ ನಿಮಗೆಲ್ಲ ಧನ್ಯವಾದಗಳು.

    ಅನಿವಾಸಿ ಜಲ ತಾಣದಲ್ಲಿ ಅಲ್ಲದೆ ನನಗೆ ವೈಯುಕ್ತಿಕವಾಗಿ ವಾಟ್ಸ್ ಆಪಿನಲ್ಲಿ ಕೂಡ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೀರಿ. ಅವು ಈ ಸಂದರ್ಭಕ್ಕೆ ಉಚಿತವಾಗಿವೆ ಎಂದು ಭಾವಿಸಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅವುಗಳು ಹೀಗಿವೆ;

    Dear Sir, I should Thank you for lending ‘Payana’ Novel by Dr.Prasad. I liked the Novel as the writing is unpretentious and multilayered. His understanding and grasp of rhythm of Life is that of a Novelist. Most of the writers when they make animals a character will only be speaking themselves thru them. Here the Dog is just like any other character and has its autonomous life. While depicting stages of the Dog’s journey, the Author delves into various layers of society and he is not judgemental while characterising. Description of the Tamil labour family is very touching. Characrer of Dog has also come out naturally. He is also able to generate a sense of intimacy among readers. At places it may feel there are lots of factual information. But for this weakness, it makes an engaging reading. Thanks for lending.
    From:
    K.Sathyanarayana ( Noted Kannada writer Sathyanarayana responding to BR Lakshmana Rao; courtesy BRL)

    *

    ಶ್ರೀಯುತ ಡಾ॥ ಜಿ. ಎಸ್. ಶಿವಪ್ರಸಾದರಿಗೆ ಅಭಿನಂದನೆಗಳು.
    ಅವರ ಕಾದಂಬರಿ ಪಯಣ ಬಹಳ ಸುಂದರವಾಗಿ ಮೂಡಿ ಬಂದಿದೆ. ಸುಲಲಿತವಾಗಿ ಓದಿಸಿಕೊಂಡು ಹೊಗುತ್ತದೆ. ಕಥನಶೈಲಿ ಸೊಗಸಾಗಿದೆ. ಪಾತ್ರ ಪೋಷಣೆ, ಸರಳಭಾಷೆ, ಪಾಂಡಿತ್ಯ ಪೂರ್ಣ ನಿರೂಪಣೆ ಗಮನ ಸೆಳೆಯುತ್ತವೆ. ಕಥಾನಾಯಕ ಸ್ನೂಪಿಯ ಪಯಣ ಕೆಲವು ಕುತೂಹಲ ತಿರುವುಗಳಲ್ಲಿ ಸಾಗುವುದು ಈ ಕಾದಂಬರಿಯ ವೈಶಿಷ್ಟ್ಯವಾಗಿದೆ.ಬೆಂಗಳೂರಿನಲ್ಲಿ ವಾಸಿಸುವ ಮೇಲ್ವರ್ಗ (ಶ್ರೀಮಂತ ವರ್ಗ) ಮತ್ತು ಬಡತನದ ರೇಖೆಯ ಕೆಳವರ್ಗಗಳ ಜನಜೀವನದ ಮಧ್ಯೆ ಸ್ನೂಪಿಯ ಪಯಣ ಕಣ್ ಮುಂದಿನ ದೃಶ್ಯದಂತೆ ನಿರೂಪಿಸಲಾಗಿದೆ. ಸ್ನೂಪಿಯು ಈ ಜೀವನದ ಏರಿಳಿತಗಳಿಗೆ ಹೊಂದಿಕೊಳ್ಳುವ ಪರಿ ಮನೋಜ್ಞವಾಗಿ ವಿವರಿಸಲ್ಪಟ್ಟಿದೆ. ಬಡತನ ಸಿರಿತನಗಳ ಅಂತರ ಅದಕ್ಕೆ ನಗಣ್ಯವೆನಿಸಿದೆ. ಶ್ರೀಮಂತರ ಮನೆಯಲ್ಲಿ ಅನುಕೂಲ ವಾತಾವರಣದಿಂದ, ಬೀದಿ ನಾಯಿಯಾಗಿ ಅದರ ಪಯಣ ಕಥೆಗೆ ಹೊಸ ತಿರುವನ್ನು ಕೊಟ್ಟಿದೆ. ಮನುಷ್ಯರಿಗೆ ಇಂಥ ಹೊಂದಾಣಿಕೆ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ನಿಜ ಜೀವನದ ಇಂಥಾ ಪರಿಸ್ಥಿತಿಯಲ್ಲಿ ಮಾನವ ಸಹಜ ವೈಪರೀತ್ಯಗಳ ಪ್ರದರ್ಶನಗಳನ್ನು ಕಾಣುತ್ತೇವೆ. ಆದರೆ ಸ್ನೂಪಿಯ ಹೊಂದಾಣಿಕೆಯ ಸಾಮರ್ಥ್ಯ ಅದ್ಭುತವಾಗಿದೆ. ಅದರ ಮುಂದಿನ ಪಯಣ ಬಹಳ ನವಿರಾಗಿ ಚಿತ್ರಿಸಲಾಗಿದೆ. ಸ್ನೂಪಿಯು ತನ್ನ ವಿಶಿಷ್ಟ ಘ್ರಾಣಶಕ್ತಿಯಿಂದ ಪೋಲಿಸ್ ನಾಯಿಯಾಗಿ ಹೀರೊ ಆಗುವುದು ಕಥೆಗೆ ಸೂಕ್ತ ತಿರುವನ್ನು ಕೊಟ್ಟಿದೆ. ಮಧ್ಯೆ ವೈದ್ಯಕೀಯ ವಿಷಯಗಳ ಪ್ರಸ್ತಾವನೆ ಬೋಧಕವಾಗಿದೆ. ಎಳೆಯ ಪ್ರಾಣಿಗಳ ಮನಸ್ಸು ನಮ್ಮ ಮಕ್ಕಳ ಮನಸ್ಸಿನಂತೆ ಎಂಬ ವಿಶ್ಲೇಶಣೆ ಆಸಕ್ತಿದಾಯಕವಾಗಿದೆ. ವಿಷಯ ಪರಿಣಿತರು ಲೇಖರಾದರೆ ತಾಂತ್ರಿಕ ವಿಷಯ ಸಂಗ್ರಹಣೆ ಉತ್ತಮವಾಗಿರುತ್ತದೆ ಎಂಬುದಕ್ಕೆ ಈ ಕಾದಂಬರಿ ನಿದರ್ಶನವಾಗಿದೆ.
    ಡಾ॥ ಜಿ. ಎಸ್. ಶಿವ ಪ್ರಸಾದರ ಪರಿಣತ ಲೇಖನಿಯಿಂದ ಉತ್ಕೃಷ್ಟವಾದ ವೈದ್ಯಕೀಯ ವಸ್ತುಗಳನ್ನೊಳಗೊಂಡ ಕಾದಂಬರಿಗಳು ಸೃಷ್ಟಿಗೊಳ್ಳ ಲಿ ಎಂಬುದು ನಮ್ಮ ಆಶಯ ಹಾಗೂ ಹಾರೈಕೆ.
    —- ಟಿ. ಆರ್. ನಾರಾಯಣ್.
    ಬೆಂಗಳೂರು ೧೦-೦೩-೨೦೨೧
    *

    From; Dr Sumana Narayan
    Dear Prasad Sir- Finished reading Payana- ಬಹಳ ಸಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. Very compelling story, narrated in a simple but interesting way. Loved all the Characters- some are very familiar (Nirmala and family, Dr. Ashok, Meghana!). Loved the way you have described the little things- attention to detail is amazing…description of JP Nagar, Jayanagar, South Bangalore to Goodshed road Marammana Kovil, Kavadi (ಹರೋಹರ)…all is very nostalgic.
    The final bit (police story) made it very exciting and apt ending (a bit sad for the 2 families but understandable)

    All in all very enjoyable book, which not only shows your mastery over the language but your ability to observe and understand human nature ( ನಿಮ್ಮ ಸೃಜನಶೀಲತೆ) Loved the way you dealt with characters- connect them with emotional bondage yet able to retain a sense of independence and detachment.

    Aruna Prashanth: ನನ್ನದೊಂದು ಪುಟ್ಟ review 🙏

    Snoopy ಜೊತೆಯ ನನ್ನ ಪಯಣ ನಿನ್ನೆ ಮುಗಿಯಿತು. ತುಂಬ ಮುದ್ದಾದ ಪಯಣ ಅಂತಾ ಹೇಳಬಹುದು. Snoopy ಗೆ ಏನಾಗತ್ತೋ ಅನ್ನೋ ಕುತೂಹಲ ಕೊನೇ ತನಕ ಕಾಡತ್ತೆ. ಸೆಲ್ವಿಯ ಜೊತೆಗಿನ ಮತ್ತು ಅರ್ಚನಾಳ ಜೊತೆಗೆ ಅವನ ಆಟದಲ್ಲಿ ಏನೂ ವ್ಯತ್ಯಾಸ ಇರದೇ ಇರುವುದು ಬಡವರೇ ಆಗ್ಲಿ , ಸಿರಿವಂತರೇ ಆಗ್ಲಿ, ಪ್ರಾಣಿಗಳು ಹಾಗೂ ಮಕ್ಕಳು ಬೇಧ ಭಾವ ಮಾಡುವುದಿಲ್ಲ ಎನ್ನುವ ಸೂಕ್ಷ್ಮ ಸಂಬಂಧವನ್ನು ಎಷ್ಟು ಚೆನ್ನಾಗಿ ತೋರಿಸಿದ್ದೀರ. ನಿಮ್ಮ ಕಥೆ ಬರಿ ಒಂದು ವಿಷಯವನಲ್ಲದೆ ಸಮಾಜದ ಎಲ್ಲಾ ಆಗು ಹೋಗುಗಳನ್ನ ಎತ್ತಿ ಹಿಡಿದು ತೋರಿಸುತ್ತದೆ. ಕೊನೆಗೆ Snoopy ಸೊಮ್ಮಣ್ಣನ ಜೊತೆಗೆ ಹೋಗಿದ್ದು ಮನಸ್ಸಿಗೆ ಖುಷಿ ಕೊಟ್ಟಿತು .

    Like

  2. ಕೆಲವೇ ಪುಟಗಗಳನ್ನ ಓದಿದಮೇಲೆ , ಒಂದು ಅರಿವಾಗಿದ್ದು . ಎಲ್ಲೇ ಇರಲಿ ಈ ಪ್ರಾಣಿ ಗಳು ಮನೆ ಸೇರಿದಾಗ ಅದರ ನಡುವಳಿಕೆ ಒಂದೇ. ನಮ್ಮ ಮಗಳ ಮನೆಗೆ ಹೋದ ವರ್ಷ ಎರಡುವಾರದ ಒಂದು ಮರಿ ಸೇರಿತು
    . ಅದಕ್ಕೆ ಮುಂಚೆ , ನಿಖಿಲ್ ಮನೆಯಲ್ಲಿ ನಡೆದ ಚರ್ಚೆ ಇವರ ಮನೆಯಲ್ಲೋ ನಡೀತು. ನಮ್ಮ ಸಲಹೆ ಮತ್ತು
    ಅಭಿಪ್ರಾಯವನ್ನು ತಿಳಿದ ನಂತರ ಈ ಮರಿಯನ್ನು ತಂದರು. ಇದಕ್ಕೆ Olli ಎಂದು ನಾಮಕರಣ ಆಯಿತು
    ಸ್ನೋಪಿ ಮತ್ತು Olli ಅಣ್ಣ ತಮ್ಮ ಇರಬೇಕು ಕಪಿ ಚೇಷ್ಟೆ ಯಲ್ಲಿ. ಲಾಕ್ ಡೌನ್ ಆದ್ದರಿಂದ ನಾವು Olli ಯನ್ನು ಖುದ್ದು ನೋಡಿಲ್ಲ ಆದರೆ ಜೂಮ್ ನಲ್ಲಿ ಅವನ ಆಟ ಮತ್ತು ಚೇಷ್ಟೆ ಗಳನ್ನ ತೋರಿಸುತ್ತಾರೆ. ಅರ್ಚನ Snoopi ಆಡುವ ಹಾಗೆ , ನಮ್ಮ ಇಬ್ಬ ಮೊಮ್ಮಕ್ಕಳು Olli ಜೊತೆ ಆಡುತ್ತಾರೆ. Olli ನ ಇದುವರೆಗೆ ಒಬ್ಬನ್ನೇ ಮನೆಯಲ್ಲಿ ಬಿಟ್ಟಿಲ್ಲ, ಆದರೆ ಸಾಕಷ್ಟು ಅನಾಹುತಗಳು ಮನೆಯಲ್ಲಿ ಮತ್ತು ತೋಟದಲ್ಲಿ ಆಗಿದೆ .
    ಪಯಣ ದಲ್ಲಿ ಬರುವ ಸನ್ನಿವೇಶಗಳು ಮತ್ತು ಸಂಭಾಷಣೆ ಬಹಳ ಸಹಜವಾಗಿದೆ. ಜಯನಗರ ಮತ್ತು ಜೆಪಿ ನಗರದಲ್ಲಿ ಓಡಾಡಿದ್ದು ಮೈಯ್ಯಾಸ್ ನಲ್ಲಿ ಊಟ ಮಾಡಿದ್ದು ಕಣ್ಣುಮುಂದೆ ಬರುತ್ತೆ.Autism ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಇದರ ಬಗ್ಗೆ ಕೊಟ್ಟಿರುವ ಮಾಹಿತಿ ಚೆನ್ನಾಗಿದೆ.. ಸ್ನೋಪಿ ತಪ್ಪಿಸಿಕೊಂಡಾಗ ನನ್ನ ಮಸ್ಸಿಗೆ ಬಂದಿದ್ದು ಖಂಡಿತ ನಿಖಿಲ್ ಮನೆಯವರಿಗೆ ಇವನು ಕೊನೆಗೆ ಸಿಗಬಹುದು ಎಂದು. ಆದ್ದರಿಂದ ನಿರಾಸೆ ಆಗಲಿಲ್ಲ

    ನಿಮ್ಮ ಕಥೆ ವಿಷಯ ಚೆನ್ನಾಗಿದೆ ಹೀಗೆ ಮುಂದುವರೆಸಿ

    Liked by 1 person

  3. ಪ್ರಸಾದ್ ಸರ್ . ಅಭಿನಂದನೆಗಳು . ಇಷ್ಟು ವರ್ಷಗಳಲ್ಲಿ ನಾನು ಎಡೆಬಿಡದೆ ಓದಿದ ಮೊದಲ ಪುಸ್ತಕ ‘ಪಯಣ’ . ನಿಮ್ಮ ಬರಹದಲ್ಲಿ ನಿಮ್ಮ ಬರವಣಿಗೆಯ ಅನುಭವವಷ್ಟೇ ಅಲ್ಲದೆ ಜೀವನ ದ ಅನುಭವವು ಕಂಡುಬರುತ್ತದೆ . ಮಹಿಳೆಯರ ಮನೋಭಾವ ಕೆಲವು ಕಡೆ ತುಂಬಾ ಪ್ರಾಕ್ಟಿಕಲ್ ಆಗಿ ಬರೆದಿದ್ದೀರಿ. ನೀವೇ ಶಬರಿಮಲೈ ಗೆ ಭೇಟಿ ಕೊಟ್ಟಂತೆ ,ನಮ್ಮ ಕಣ್ಣ ಮುಂದೇನೆ ಘಟನೆಗಳು ನಡೆಯುವ ರೀತಿ ಬರೆದಿದ್ದೀರಿ. ತುಂಬಾ ಇಷ್ಟವಾಯಿತು . ಮುಂದೇನು ಮತ್ತೇನು ಅನ್ನುವ ಕುತೂಹಲ ಚೆನ್ನಾಗಿ ಕಾದಿರಿಸಿದ್ದೀರಿ. ನಾಯಿಯ ಪಾಡು ಅನ್ನುವ ಮಾತಿಗೆ ನೀವು ಬೇರೆಯ ಹಾಗು ಒಳ್ಳೆಯ ಅರ್ಥ ನೀಡಿದಿರಿ. ಕಥೆಗೆ ಒಳ್ಳೆಯ ಹಾಗು ನೈತಿಕ ಕ್ಲೈಮಾಕ್ಸ್ ಕೊಟ್ಟಿದ್ದೀರಿ .ತುಂಬಾ ಸರಳ ಭಾಷೆಯಲ್ಲಿ ಒಂದು ಎಮೋಷನಲ್ ಥ್ರಿಲ್ಲರ್ ತರಹದ ಪಯಣ A very well researched book sir. You showed both urbanized and colonized Bangalore.

    Radhika Joshi
    26/3/21

    Like

  4. ಪ್ರಸಾದ್ ಸರ್ . ಅಭಿನಂದನೆಗಳು . ಇಷ್ಟು ವರ್ಷಗಳಲ್ಲಿ ನಾನು ಎಡೆಬಿಡದೆ ಓದಿದ ಮೊದಲ ಪುಸ್ತಕ ‘ಪಯಣ’ . ನಿಮ್ಮ ಬರಹದಲ್ಲಿ ನಿಮ್ಮ ಬರವಣಿಗೆಯ ಅನುಭವವಷ್ಟೇ ಅಲ್ಲದೆ ಜೀವನ ದ ಅನುಭವವು ಕಂಡುಬರುತ್ತದೆ . ಮಹಿಳೆಯರ ಮನೋಭಾವ ಕೆಲವು ಕಡೆ ತುಂಬಾ ಪ್ರಾಕ್ಟಿಕಲ್ ಆಗಿ ಬರೆದಿದ್ದೀರಿ. ನೀವೇ ಶಬರಿಮಲೈ ಗೆ ಭೇಟಿ ಕೊಟ್ಟಂತೆ ,ನಮ್ಮ ಕಣ್ಣ ಮುಂದೇನೆ ಘಟನೆಗಳು ನಡೆಯುವ ರೀತಿ ಬರೆದಿದ್ದೀರಿ. ತುಂಬಾ ಇಷ್ಟವಾಯಿತು . ಮುಂದೇನು ಮತ್ತೇನು ಅನ್ನುವ ಕುತೂಹಲ ಚೆನ್ನಾಗಿ ಕಾದಿರಿಸಿದ್ದೀರಿ. ನಾಯಿಯ ಪಾಡು ಅನ್ನುವ ಮಾತಿಗೆ ನೀವು ಬೇರೆಯ ಹಾಗು ಒಳ್ಳೆಯ ಅರ್ಥ ನೀಡಿದಿರಿ. ಕಥೆಗೆ ಒಳ್ಳೆಯ ಹಾಗು ನೈತಿಕ ಕ್ಲೈಮಾಕ್ಸ್ ಕೊಟ್ಟಿದ್ದೀರಿ .ತುಂಬಾ ಸರಳ ಭಾಷೆಯಲ್ಲಿ ಒಂದು ಎಮೋಷನಲ್ ಥ್ರಿಲ್ಲರ್ ತರಹದ ಪಯಣ A very well researched book sir. You showed both urbanized and colonized Bangalore.

    Radhika Joshi
    26/3/21

    Like

  5. ಕೇಶವ್ , ದಿವ್ಯ ತೇಜ ಮತ್ತು ನವೀನ ಅವರ ‘ಪಯಣದ’ ವಿಮರ್ಶೆಗಳನ್ನು ಓದಿದೆ,

    ನಾನೂ ಇತ್ತೀಚೆಗಷ್ಟೆ ಪಯಣವನ್ನು ಓದಿದ್ದು, ಬಹುತೇಕ ನಿಮ್ಮ ಅನಿಸಿಕೆಗಳೇ ನನ್ನವೂ ಆಗಿವೆ.

    ‘ಪಯಣ’ದ ಜೊತೆ ಪಯಣಿಗನ ಅನುಭವ

    ನನ್ನ ಅನಿಸಿಕೆಗಳು/ ವಿಮರ್ಶೆ:
    ‘ಪಯಣ’ ಪ್ರಾಣಿ ಪ್ರಿಯರನ್ನು ಮತ್ತು ಸಾಕು ಪ್ರಾಣಿಗಳ ಜೊತೆ ಒಡನಾಟ ಇಲ್ಲದವರನ್ನೂ ಆಕರ್ಷಿಸುವ , ಸುಲಭವಾಗಿ ಓದಿಸಿಕೊಂಡು ಸಾಗುವ ಕೃತಿ.
    ಇಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧಗಳ ವಿವಿಧ ಆಯಾಮಗಳನ್ನು ಚೆನ್ನಾಗಿ ವಿವರಿಸಿಕೊಂಡು, ಕತೆಯನ್ನೂ ಸಾಗಿಸಿಕೊಂಡು ಹೋಗುತ್ತದೆ.

    ಇದು G.S. ಪ್ರಸಾದ್ ಅವರ ಮೊದಲ ಕಾದಂಬರಿಯಾದರೂ, ಬರಹದ ಅನುಭವದಲ್ಲಿ ಕೊರತೆ ಕಂಡಿಲ್ಲ.
    ಸ್ನೂಪಿ ಆರ್ಚಿಯಾದ ಬಗೆ ಓದುಗರ ಕುತೂಹಲವನ್ನು ಹೆಚ್ಚಿಸುತ್ತದೆ, ಅದರ ಮುಂದಕ್ಕೆ ಕಾದಂಬರಿಯನ್ನು ಪೂರ್ತಿಯಾಗಿ ಓದಿಮುಗಿಸಿಬಿಡಬೇಕು ಎನ್ನುವ ತವಕ ಹಪಹಪಿಸುತ್ತದೆ.
    ಪ್ರಸಾದ್ ಅವರ ವೈದ್ಯಕೀಯ ವೃತ್ತಿಯಲ್ಲಿ ಕಂಡದ್ದು ಮತ್ತು ಕೇಳಿ, ಓದಿ ತಿಳಿದ ಅನೇಕ ಸಂಗತಿಗಳನ್ನು ಮಕ್ಕಳ ಪಾತ್ರಗಳ ಮೂಲಕ ಓದುಗರಿಗೆ ತಿಳಿಸಿದ್ದಾರೆ.
    ಬಹುತೇಕ ಕಾದಂಬರಿಗಳು ಆ ಲೇಖಕರ ಜೀವನದ ಅನುಭವದ ಕನ್ನಡಿಯಾಗಿರುತ್ತದೆ ಎನ್ನುವ ಮಾತಿದೆ, ಅದನ್ನು ‘ಪಯಣ’ ಉದ್ದಕ್ಕೂ ಕಾಣಬಹುದು.

    ಸಾಕು ಪ್ರಾಣಿಗಳಿಗೂ ಮನೆಯ ಪುಟ್ಟ ಮಕ್ಕಳಿಗೂ ಯಾವುದೇ ವಿಶೇಷವಾದ ಭೇದವಿಲ್ಲ ಎನ್ನುವ ಸತ್ಯ ಮೊದಲಿನಿಂದ ಹಿಡಿದು ಕೊನೆಯವರೆಗೂ ಸನ್ನಿವೇಶಗಳ ಮೂಲಕ ಚೆನ್ನಾಗಿ ವಿವರಿಸಲಾಗಿದೆ.

    ಪ್ರಸಾದ್ ಅವರ ಹಾಸ್ಯ ಪ್ರಜ್ಞೆಯು ಕೆಲವು ಸಂಭಾಷಣೆಗಳಲ್ಲಿ ಎದ್ದು ಕಾಣುತ್ತದೆ, ಅಲ್ಲೆಲ್ಲಾ ನನಗೆ ಗೊರೂರರ ‘ನಮ್ಮ ಊರಿನ ರಸಿಕರು’ ಕಾದಂಬರಿಯಲ್ಲಿನ ಹಾಸ್ಯ ಚಟಾಕಿಗಳು ನೆನಪಿಗೆ ಬಂದವು.

    ನಡುವೆ ಸಹನಾಳ ಪಾತ್ರ ಬಹಳ ಕಾಡುವಂತಹುದು, ಭಾರತದಲ್ಲಿ Autism ಬಗ್ಗೆ ವೈದ್ಯಕೀಯವಾಗಿ ಮತ್ತು ಪೋಷಕರ ಹೊಣೆಯ ಬಗ್ಗೆ ವಿಶೇಷ ಅರಿವಿನ ಕೊರತೆ ಇರುವುದನ್ನು ಸಮಯೋಚಿತವಾಗಿ ಪ್ರಸ್ತಾಪಿಸಿದ್ದಾರೆ.

    ಆರ್ಮುಗಂ ಪರಿವಾರದ ಕತೆಯಲ್ಲಿ ತಮಿಳು ಸಂಭಾಷಣೆಗಳನ್ನು ನೋಡಿ ನನಗೆ ಕೊಂಚ ಆಶ್ಚರ್ಯವಾಗಿದ್ದು ನಿಜ, ಬೆಂಗಳೂರು ಎಷ್ಟೇ ಆದರೂ ‘ಸರ್ವಜನಾಂಗದ ಶಾಂತಿಯ ತೋಟ’ವಲ್ಲವೇ? ಹಾಗಾಗಿ ಲೇಖಕರಿಗೆ ತಮ್ಮ ವೃತ್ತಿಯ ಅವಧಿಯಲ್ಲಿ ತಮಿಳು, ತೆಲುಗು ಇನ್ನಿತರ ಭಾಷೆಗಳು patient ಗಳಿಂದ ಬಂದ ಉಡುಗೊರೆಯಲ್ಲದೆ ಮತ್ತೇನೂ ಅಲ್ಲ ಅನಿಸಿತು.
    ಆರ್ಮುಗಂ ಸಾವಿನ ಬಗ್ಗೆ ಓದುಗರಿಗೆ ಕೊಂಚ ಬೇಸರವೆನಿಸಬಹುದು, ಆದರೆ ಅಂತಹ ಘಟನೆಗಳನ್ನು ಪ್ರತೀ ವರ್ಷ ನಾವು ಓದಿ, ಕೇಳಿದ್ದೇವೆ. ಆರ್ಮುಗಂ ಸಂಸಾರದ ಕತೆ ಮೂಲ ಕತೆಗೆ ಸ್ವಲ್ಪ ಅಸಾಂದರ್ಭಿಕವೆನಿಸಿದರೂ ಅಲ್ಲಿ ದೈವನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಗಳ ಮೊರೆ ಹೋಗಿ ಪ್ರಾಣಗಳನ್ನು ಕಳೆದುಕೊಳ್ಳುವ ದುರ್ದೈವ ನಮ್ಮ ಸಂಸ್ಕೃತಿಯ ಬೇರಿಗೆ ಇಂದಿಗೂ ಅಂಟಿಕೊಂಡಿರುವುದನ್ನು ಲೇಖಕರು ಎತ್ತಿ ಹಿಡಿದಿದ್ದಾರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚಬಾಕತನ ಎಲ್ಲವೂ ವಾಸ್ತವ್ಯದಲ್ಲಿ ಪ್ರಚಲಿತವಿರುವುದನ್ನು ಓದುಗರ ಕಣ್ಣಿಗೆ ಕಟ್ಟುವ ಹಾಗೆ ಪ್ರಸ್ತುತಪಡಿಸಿದ್ದಾರೆ

    ಒಟ್ಟಿನಲ್ಲಿ ಓದುಗನೆಂಬ ಪಯಣಿಗನು ‘ಪಯಣ’ದ ದೋಣಿಯಲ್ಲಿ ಕುಳಿತು ಮಾನವ-ಸಾಕುಪ್ರಾಣಿ ಗಳ ನಡುವಿನ ಸಂಬಂಧವೆಂಬ ತಳವನ್ನು(ವಾಸ್ತವ ಸತ್ಯವನ್ನು) ತಿಳಿಯಲು ಹೊರಟಾಗ ಈ ಕೃತಿ ಓದುಗರ ಪಯಣವನ್ನು ಸರಾಗವಾಗಿ ಸಾಗಿಸಿಕೊಂಡು ಹೋಗುತ್ತದೆ. ನನಗೆ ಮೊದಲ ಬಾರಿ ಕಾರಂತರ ‘ಬೆಟ್ಟದ ಜೀವ’ ವನ್ನು ಓದಿದಾಗ ಇದೇ ತರಹದ ಓದುಗನನ್ನು ಸುಲಭವಾಗಿ ಓದಿಸಿಕೊಂಡು ಹೋಗುವ ಅನುಭವವಾಗಿತ್ತು.

    ಧನ್ಯವಾದಗಳು🙏

    ವಿಜಯನರಸಿಂಹ

    Liked by 1 person

Leave a comment

This site uses Akismet to reduce spam. Learn how your comment data is processed.