ವಿಶ್ವಮಾನವ: ಜಿಮ್ ಹೇಯ್ನ್ಸ್- ಡಾ. ರಾಮಶರಣ್

“ಅನ್ನದಾತ ಸುಖೀಭವ" ಎಂದರು ನಮ್ಮ ಹಿರಿಯರು.ಯಾವುದೇ ಸಭೆ,ಸಮಾರಂಭ,ಹಬ್ಬ,ಸಂತೋಷ ಅಥವಾ ದುಃಖಗಳನ್ನು ಹಂಚಿಕೊಳ್ಳುವ ಆಚರಣೆಯ ಕಾರ್ಯಕ್ರಮಗಳಲ್ಲಿ ಆಹಾರದ ಪಾತ್ರ ಬಹುಮುಖ್ಯ.  ಪ್ರಪಂಚದೆಲ್ಲೆಡೆಯಲ್ಲಿ,ಎಲ್ಲಾ ರೀತಿಯ ಜನರನ್ನು ಭೇದಭಾವವಿಲ್ಲದೆ ಒಂದುಗೂಡಿಸುವುದರಲ್ಲಿ ಆಹಾರಕ್ಕಿಂತ ದೊಡ್ಡ ಸಾಧನವಿಲ್ಲ.ಆಹಾರ ತರುವ ಆನಂದವನ್ನು ಗುರುತಿಸಿ, ಸ್ನೇಹಿತರನ್ನು, ಅಪರಿಚಿತರನ್ನು ಒಂದುಗೂಡಿಸಿದ ಸಜ್ಜನ ಜಿಮ್ ಹೇನ್ಸ್(Jim Haynes)ನ್ನು ಅನಿವಾಸಿ ಒದುಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ರಾಂ-ಸಂ

ತಿಂಡಿ-ತಿನಿಸು ಎಂದಾಗ ಎಲ್ಲರ ಕಿವಿ ನಿಮಿರುವುದು ಸಹಜ. ಇತ್ತೀಚೆಗೆ ಅನಿವಾಸಿಯಲ್ಲಿ ಹರಿದ ಅಡುಗೆ ಮನೆಯ ಸರಣಿಯ ಯಶಸ್ಸು, ಅದಕ್ಕೆ ಸಮಾನಾಂತರವಾಗಿ ನಡೆಯುತ್ತಲೇ ಇರುವ ವಾಟ್ಸಾಪ್ ಸಂದೇಶ ಸರಪಣಿಗಳೇ ಇದಕ್ಕೆ ಸಾಕ್ಷಿ. ಬಾಲ್ಯದ ನೆನಪು, ಹರೆಯದಲ್ಲಿ ಸ್ನೇಹಿತರೊಡನೆ ಕಳೆದ ಕ್ಷಣಗಳೆಂಬ ಮುತ್ತುಗಳನ್ನು ಪೋಣಿಸಿ ಹಾರವನ್ನಾಗಿಸುವುದು ನಮ್ಮ ಆಹಾರದ ಮೇಲಿನ ಪ್ರೀತಿ ಎಂದೆನಿಸುವುದು ಹಲವು ಸಲ. ಚುಮು-ಚುಮು ನಸುಕಿನಲ್ಲಿ ಶಾಲೆಗೆ ಹೊರಡುವ ಮೊದಲು ಮನೆ ಮಕ್ಕಳನ್ನೆಲ್ಲ ಒಲೆಯ ಸುತ್ತ  ತರುವುದು ಅಮ್ಮ ಮಾಡುವ ತಿಂಡಿ. ಕ್ಲಾಸುಗಳ ನಡುವೆ ಕಾಲೇಜಿನ ಮಕ್ಕಳ ಕಾಲು ಸಾಗುವುದು ಕ್ಯಾಂಟೀನ್ ಕಡೆಗೆ. ಸಂಜೆ ಗೆಳೆಯರ ಗುಂಪು ಸೇರುವುದು ತಿಂಡಿ ಗಾಡಿಗಳಿದ್ದಲ್ಲಿ. ತಿಂಡಿ-ಪಾನೀಯಗಳ ಬುನಾದಿಯ ಮೇಲೆ ಬೆಳೆದ ಬಾಂಧವ್ಯ-ಗೆಳೆತನ ಜೀವನದುದ್ದ, ಬಳ್ಳಿಗೆ ಹಂದರದಂತೆ ಆಸರೆಯಾಗಿ ಭದ್ರತೆ ನೀಡುವುದು ಸುಳ್ಳೇ? ಅದಕ್ಕೆ ಅಲ್ಲವೇ ಇರುವುದು ನಾಣ್ಣುಡಿ: “ಮಾನವನ ಹೃದಯಕ್ಕೆ ಹಾದಿ ಆತನ ಹೊಟ್ಟೆ” ಎಂಬುದು? ಹಸಿದ ಹೊಟ್ಟೆ ಸಾಹಸಕ್ಕೆ ಹಾದಿ ತೋರುತ್ತದೆ. ಬೇಟೆಯಾಡಿ, ಸಂಗ್ರಹಿಸಿ ಹೊಟ್ಟೆ ಹೊರೆಯುವ ಯುಗದಿಂದ ಕುಳಿತಲ್ಲೇ ಬೇಕಾದ ತಿನಿಸು ತರಿಸಿ, ತಿನ್ನುವ ಸಿಗುವ ಯುಗಕ್ಕೆ ಮನು ಕುಲ ಕಾಲಿಟ್ಟಿದೆ. ಆದರೂ, ವಿಶೇಷ ತಿನಿಸಿಗಾಗಿ, ವಿಶಿಷ್ಟ ಅನುಭವಕ್ಕಾಗಿ  ಇಂದಿಗೂ ನೂರಾರು ಮೈಲಿ ಪ್ರಯಾಣ ಮಾಡುವವರಿದ್ದಾರೆ. ಇದೇ ಆಧಾರದ ಮೇಲೆ ಜಗದ್ವಿಖ್ಯಾತ ‘ಮಿಶೆಲಿನ್ ಗೈಡ್’ ಅಸ್ತಿತ್ವಕ್ಕೆ ಬಂತು. ನನಗೊಬ್ಬ ಗೆಳೆಯನಿದ್ದಾನೆ. ನಾವು ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆವು. ಮುಂಬೈನಲ್ಲಿ ಯಾವ ಮೂಲೆಯಲ್ಲೂ ಊಟ-ತಿಂಡಿ ದುರ್ಲಭ ಎಂಬುದೇ ಇಲ್ಲ. ಅಂಥದ್ದರಲ್ಲಿ ಈತ ರಾತ್ರಿ ಪಾಳಿ ಮುಗಿದ ಮೇಲೆ ಕಿಕ್ಕರಿದ ರೈಲಿನಲ್ಲಿ ನೇತಾಡಿಕೊಂಡು ವಿ.ಟಿ. ಸ್ಟೇಷನ್ ಹತ್ತಿರವಿದ್ದ ತನ್ನ ನೆಚ್ಚಿನ ಹೋಟೆಲ್ಲಿನಲ್ಲಿ ಊಟ ಮಾಡಿ ಬರುತ್ತಿದ್ದ;  ಕೆಲವೊಮ್ಮೆ ಸ್ನೇಹಿತರನ್ನೂ ಸೇರಿಸಿಕೊಂಡು. ಇನ್ನೊಬ್ಬ ಗೆಳೆಯ ಖಯಾಲಿ ಬಂದಾಗೆಲ್ಲ, ಲಂಕಾಸ್ಟರ್ ನಿಂದ ಬ್ರಾಡ್ಫರ್ಡ್ ಗೆ ಗೆಳೆಯರ ಗುಂಪು ಕಟ್ಟಿಕೊಂಡು ಹೋಗುತ್ತಿದ್ದ. ಹೀಗೆ ಆಲೆಮನೆಗಳಲ್ಲಿ, ಚಹಾ ಅಡ್ಡಗಳಲ್ಲಿ, ಬಾರುಗಳಲ್ಲಿ  ಗೆಳೆತನಗಳು ಬೆಳೆದಿವೆ, ಬೆಳೆಯುತ್ತಲಿವೆ.  ಪಾರ್ಟಿ-ಸಮಾರಂಭಗಳ ನೆವದಲ್ಲಿ ಸಂಘ ಜೀವಿ ಮನುಜ ಬೆರೆಯುವ ಕಾರ್ಯದಲ್ಲಿ ತಿಂಡಿ-ತಿನಿಸುಗಳಿಲ್ಲದಿದ್ದರೆ ಕಳೆಯೇ ಇಲ್ಲ, ಕೊರತೆಯೇ ಜಾಸ್ತಿ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ದಕ್ಕೆ ಒಂದು ಕಾರಣವಿದೆ. ಹೊಟ್ಟೆಯ ಹಾದಿಯಾಗಿ, ವಿಶ್ವ ಭಾತೃತ್ವವನ್ನು ಬೆಳೆಸಿದವನ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳಲು.  ಅವನೇ 1933ರಲ್ಲಿ ಲೂಯಿಸಿಯಾನದಲ್ಲಿ ಜನಿಸಿದ ಜಿಮ್ ಹೇಯ್ನ್ಸ್. ಆತನ ತಂದೆ ಪೆಟ್ರೋಲಿಯಂ ಕಂಪೆನಿಯ ಉದ್ಯೋಗಿಯಾಗಿ ವೆನಿಝುಯೆಲದಲ್ಲಿದ್ದ. ಜಿಮ್ ತನ್ನ ಬಾಲ್ಯ, ಹದಿ ಹರೆಯವನ್ನು ಅಮೆರಿಕೆ-ವೆನಿಝುಯೆಲಾ ಪ್ರವಾಸದಲ್ಲಿ ಕಳೆದದ್ದು ಮುಂದೆ ಆತನ ಪ್ರವಾಸೀ ಮನಸ್ಥಿತಿಗೆ ಕಾರಣವಾಗಿರಬಹುದು. ತಂದೆಯ ಸಂಗ್ರಹದಲ್ಲಿದ್ದ ಪುಸ್ತಕಗಳು ಜಿಮ್ ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಮಿಲಿಟರಿ ವಸತಿ ಶಾಲೆಯಲ್ಲಿದ್ದಾಗ ಸಾಹಿತ್ಯ ಸಂಘವನ್ನು ಕಟ್ಟಿದ್ದ ಜಿಮ್, ಅದ್ಭುತ ಸ್ನೇಹ ಜೀವಿ. ಆ ಶಾಲೆ ಅವನು ಸೇರಿದ್ದು ತನ್ನ ಗೆಳೆಯನಿದ್ದಾನೆಂದು. ಅಂತೆಯೇ ತನ್ನ ನ್ಯೂಯಾರ್ಕ್ ಪ್ರವಾಸಗಳಲ್ಲಿ ನಾಟಕ ನೋಡುವ ಗೀಳನ್ನೂ ಹತ್ತಿಸಿಕೊಂಡಿದ್ದ. ಕೆಲಸಕ್ಕಾಗಿ ವಾಯು ಸೇನೆಯನ್ನು ಸೇರಿದ್ದ ಜಿಮ್ ಲ್ಯಾನ್ಡ್ ಆಗಿದ್ದು ಎಡಿನ್ಬರದಲ್ಲಿ ರಶಿಯನ್ನರ

Jim Haynes obituary | Scotland | The Times
(ಚಿತ್ರ ಕೃಪೆ: ಗೂಗಲ್)

ಸಂದೇಶಗಳನ್ನು ಕದ್ದು ಕೇಳಲು. ಎರಡನೇ ವಿಶ್ವ ಯುದ್ಧ ಮುಗಿದಿತ್ತಷ್ಟೇ. ಎಡಿನ್ಬರದಲ್ಲಿ ಆಗ ತಾನೇ ತೆರೆದಿದ್ದ ಕಾಫಿ ಅಂಗಡಿ ಹಾಗೂ ಶಾಖಾಹಾರಿ ಉಪಹಾರ ಗೃಹವೊಂದು ಎಡಿನ್ಬರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ, ಉಪನ್ಯಾಸಕರ ನೆಚ್ಚಿನ ತಾಣಗಳಾಗಿದ್ದವು. ಎಡಿನ್ಬರ ವಿಶ್ವವಿದ್ಯಾಲಯ ಸೇರಿದ್ದ ಜಿಮ್ ಈ ತಾಣಗಳಲ್ಲಿ ತನ್ನ ಗೆಳೆಯರ ಬಳಗವನ್ನು ಬೆಳೆಸಿಕೊಂಡ. ಅಲ್ಲಿಯೇ ನೆಲೆಸಲು ನಿರ್ಧರಿಸಿ ಉದ್ಯೋಗಕ್ಕಾಗಿ ಪುಸ್ತಕದಂಗಡಿ ತೆಗೆಯುವುದೆಂದು ನಿರ್ಧರಿಸಿದ. ಬಸ್ಸಿನಲ್ಲಿ ಗೆಳೆಯನಾದ, ದೋಣಿ ಕಟ್ಟುವ ವ್ಯಕ್ತಿಯೊಬ್ಬ  ಅವನಿಗೆ ಅಂಗಡಿ ಕಟ್ಟಿ ಕೊಟ್ಟ. ಬ್ರಿಟನ್ನಿನ ಎಲ್ಲ ಪುಸ್ತಕ ವ್ಯಾಪಾರಿಗಳಿಗೆ ಪತ್ರ ಬರೆದು, ತನ್ನ ಅಂಗಡಿಗೆ ಪೇಪರ್ ಬ್ಯಾಕ್ ಪುಸ್ತಕಗಳನ್ನು ತರಿಸಿಕೊಂಡ. ಅದು ಸ್ಕಾಟ್ ಲ್ಯಾನ್ಡ್ ನ ಮೊದಲ ಪೇಪರ್ ಬ್ಯಾಕ್ ಪುಸ್ತಕದ ಅಂಗಡಿಯಾಗಿತ್ತು. ಬಂದವರಿಗೆ ಉಚಿತ ಕಾಫಿ-ಚಹಾ ಸರಬರಾಜಾಗುತ್ತಿತ್ತು. ಎಷ್ಟೋ ಕಡೆ ಸಿಗದ, ನಿಷೇಧಿಸಿದ ಪುಸ್ತಕಗಳೂ ಲಭ್ಯವಿದ್ದುದರಿಂದ ಅಂಗಡಿ ಬಲುಬೇಗ ಜನಪ್ರಿಯವಾಯಿತು. ಇದರ ನೆಲ ಮಾಳಿಗೆಯಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಇದೇ “ಟ್ರಾವರ್ಸ್ ರಂಗಭೂಮಿ” ಯ ಆರಂಭ. ಆಯಸ್ಕಾಂತೀಯ ವ್ಯಕಿತ್ವದ ಜಿಮ್ ಕಲಾತ್ಮಕ ಗೆಳೆಯರೊಡಗೂಡಿ ತೆವಳುತ್ತಿದ್ದ ಎಡಿನ್ಬರ ಹಬ್ಬಕ್ಕೆ (Edinburgh festival) ಹೊಸ ಆಯಾಮ ನೀಡಿದ. ಇಂದು ಅದು “ಫ್ರಿನ್ಜ್” ಎಂದೇ ವಿಖ್ಯಾತವಾಗಿದೆ ಜಗತ್ತಿನೆಲ್ಲೆಡೆಯಿಂದ ಪ್ರತಿಭಾವಂತ ಕಾಲವಿದರನ್ನು ಆಕರ್ಷಿಸುತ್ತಿದೆ. ಟ್ರಾವರ್ಸ್ ರಂಗಭೂಮಿ ಇಂದಿಗೂ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಿದೆ.

ನಾಟಕ ಪ್ರದರ್ಶನವನ್ನು ಲಂಡನ್ನಿಗೆ ತೆಗೆದುಕೊಂಡು ಹೋಗುವ ಮಹದಾಸೆಯಿಂದ ಜಿಮ್ ಎಡಿನ್ಬರ ಬಿಟ್ಟಿದ್ದು 1966ರಲ್ಲಿ. ಅಲ್ಲಿ ನಾಟಕಗಳ ಪ್ರದರ್ಶನ ಮಾಡುತ್ತಾ ‘ಇಂಟರ್ನ್ಯಾಶನಲ್ ಟೈಮ್ಸ್’ ಎಂಬ ಪತ್ರಿಕೆ ಹಾಗು “ದಿ ಆರ್ಟ್ಸ್ ಕ್ಲಬ್” ಎಂಬ ಸಂಘವನ್ನು ಸ್ಥಾಪಿಸುತ್ತಾನೆ. ಇಲ್ಲಿ ಈತನ ಗೆಳೆಯರ ಬಳಗದಲ್ಲಿದ್ದವರು ಜಾನ್ ಲೆನನ್, ಯೋಕೋ ಓನೋ, ಡೇವಿಡ್ ಬೋವಿಯಂತಹ ದಿಗ್ಗಜಗಳು.  ಜಿಮ್ ಯಾರ ಉತ್ಸಾಹಕ್ಕೂ ನೀರೆರಚಿದವನಲ್ಲ. ಗೆಳೆಯರಿಂದ ಹೊಮ್ಮುವ ಸೃಜನಶೀಲ ಕಲ್ಪನೆಗಳಿಗೆ ಪ್ರೋತ್ಸಾಹ ನೀಡುವುದು ಆತನ ಜಾಯಮಾನ. ಇಂತಹ ಒಂದು ಯೋಜನೆಗೆ ಮಣಿದು, ನಾಟಕ ಪ್ರದರ್ಶನವನ್ನು 1969ರಲ್ಲಿ ಆಮ್ಸ್ಟರ್ಡಾಮಿಗೆ ಕೊಂಡೊಯ್ದ ಜಿಮ್ ನನ್ನು ಅಧ್ಯಾಪಕನಾಗಿ ಕರೆದಿದ್ದು ಪ್ಯಾರಿಸ್ ನಗರದ ಹೊಸ ಪ್ರಾಯೋಗಿಕ ವಿಶ್ವವಿದ್ಯಾಲಯ. ಎಲ್ಲ ರೀತಿಯ ವಿಚಾರಗಳಿಗೆ ಪೂರ್ವಗ್ರಹಗಳಿಲ್ಲದೇ ಮನಸ್ಸೊಡ್ಡುಕೊಳ್ಳುವ ಜಿಮ್ ನಂತಹ ವ್ಯಕ್ತಿಗೆ ಸರಿಯಾದ ಸಂಸ್ಥೆ, ಉದ್ಯೋಗ ಇದಾಗಿತ್ತು. ಮಾಮೂಲಿಯಾಗಿ ಜಿಮ್ ಎಲ್ಲರನ್ನೂ  ಸ್ವಾಗತಿಸುತ್ತ, ಮೈತ್ರಿ ಬೆಳೆಸುತ್ತ ಪ್ಯಾರಿಸ್ ನಗರದಲ್ಲೊಂದಾಗಿಬಿಟ್ಟ. ಹ್ಯಾಂಡ್ ಶೇಕ್ ಪ್ರಕಾಶನ, ಧ್ವನಿಸುರುಳಿ ಪತ್ರಿಕೆ (ಕ್ಯಾಸೆಟ್ ಮ್ಯಾಗಝಿನ್) ಗಳನ್ನ ಹುಟ್ಟು ಹಾಕಿ ಸಾಹಿತ್ಯ ಸೇವೆಯನ್ನು ಮುಂದುವರೆಸಿದ. ಸ್ವಚ್ಚಂಧ ಮನೋಭಾವನೆಯ ಜಿಮ್ಮನಿಗೆ ದೇಶಗಳ ನಡುವಿನ ಗಡಿ, ಬಾಂಧವ್ಯ ಮುರಿಯುವ ಅಡ್ಡಗೋಡೆಗಳಾಗಿ ಕಂಡಿದ್ದು ಆಶ್ಚರ್ಯವಲ್ಲ. ಸೀಮಾತೀತ ಜಗತ್ತನ್ನು ನಿರ್ಮಿಸುವ ಕನಸಿನಲ್ಲಿ ತನ್ನದೇ ಜಾಗತಿಕ ಪಾಸ್ಪೋರ್ಟ್ಗಳನ್ನು ಇಂಗ್ಲಿಷ್ ಹಾಗೂ ಎಸ್ಪರಾಂತೋ ಭಾಷೆಗಳಲ್ಲಿ ಛಾಪಿಸತೊಡಗಿದ. ತನ್ನ ಮನೆಗೆ ಬಂದವರಿಗೆ ಅವನ್ನು ಹಂಚುತ್ತಿದ್ದ. ಇದರಿಂದ ಎಷ್ಟೋ ಬಾರಿ ಪೊಲೀಸರಿಂದ ಎಚ್ಚರಿಕೆ ಬಂದರೂ ಆತ ಕೇಳಿರಲಿಲ್ಲ.  ಕೊನೆಯಲ್ಲಿ ಕೋರ್ಟ್ ಕಟ್ಟೆ ಏರಿದ ಮೇಲೆ ಈ ಕಾರ್ಯಕ್ಕೆ ತಡೆ ಬಂತು.

“ಎಲ್ಲರಿಗೂ ಏನಾದರೂ ಒಳ್ಳೆಯದನ್ನು ಮಾಡಬೇಕು” ಎನ್ನುವುದು ಜಿಮ್ ನ ಜೀವನಧ್ಯೇಯ. ಹಾಗಾಗೇ ಅವನನ್ನು ಹುಡುಕಿಕೊಂಡು ಜನ ಜಗತ್ತಿನ ಎಲ್ಲೆಡೆಯಿಂದ  ಬರುತ್ತಿದ್ದರು. ಅಮೇರಿಕೆಯಿಂದ ಒಬ್ಬಳು ಬ್ಯಾಲೆ ನರ್ತಕಿ ಸ್ನೇಹಿತನೊಬ್ಬನ ಸಲಹೆಯಂತೆ ಆಸರೆ ಕೋರಿ ಜಿಮ್ ನ ಮನೆಯ ಬಾಗಿಲು ತಟ್ಟಿದಳು. ಬಂದವಳ ಬಳಿ ದುಡ್ಡಿರಲಿಲ್ಲ. ಅದರ ಬದಲಾಗಿ ಜಿಮ್ ನ ಮನೆಯಲ್ಲಿರುವವರಿಗೆ ವಾರಕ್ಕೊಮ್ಮೆ ಅಡಿಗೆ ಮಾಡಿ ಹಾಕಲು ಶುರು ಮಾಡಿದಳು. ಜಿಮ್ ನ ಮನೆಯಲ್ಲಿ ಬಂದು ಹೋಗುವವರಿಗೆ ಬರವಿರಲಿಲ್ಲ. ಈ ಊಟಗಳೇ ಒಂದು ರೀತಿಯಲ್ಲಿ ಸಂಪ್ರದಾಯವಾಗಿ, ರವಿವಾರ ಸಂಜೆಯ ಔತಣ ಕೂಟವೆಂದೇ ಹೆಸರಾಯಿತು. ರವಿವಾರ ಪ್ಯಾರಿಸ್ಸಿನಲ್ಲಿದೀರಾ? ಜೊತೆ ಬೇಕೇ, ಗೆಳೆತನ ಬೆಳೆಸಬೇಕೇ? ಹಿಂದೆ-ಮುಂದೆ ನೋಡಬೇಡಿ, ಹದಿನಾಲ್ಕನೇ

Jim Haynes: A man who invited the world over for dinner - BBC News
ರವಿವಾರ ಸಂಜೆಯ ಔತಣ ಕೂಟ (ಚಿತ್ರ ಕೃಪೆ: ಗೂಗಲ್)

ಆರ್ಯಾಂಡಿಸ್ಮೆಂಟಿನಲ್ಲಿರುವ ಜಿಮ್ ಹೈನ್ಸ್ ನ ಅಡ್ಡೆಗೆ ಲಗ್ಗೆಇಡಿ. ಅಲ್ಲಿ ಸಂಜೆಯ ಹೊತ್ತಿಗೆ ನಲವತ್ತು- ಐವತ್ತು ಜನ ಇರೋದು ಗ್ಯಾರಂಟಿ. ನಿಮ್ಮ ವೇವ್ ಲೆಂಗ್ತಿಗೆ ಹೊಂದಿಕೆ ಆಗುವವರು ಸಿಕ್ಕೇ ಸಿಗುತ್ತಾರೆ. ಅವರು ಯಾವುದೊ ದೇಶದವರಾಗಿರಬಹುದು. ಹರಟೆ ಕೊಚ್ಚಲಿಕ್ಕೆ ಎಲ್ಲಿಯವರಾದರೇನು? ಯಾರಿಲ್ಲದಿದ್ದರೂ ಅಡ್ಡೆಯ ಒಡೆಯ ಜಿಮ್ ಎಲ್ಲರೊಡನೆ ಬೆರೆಯುತ್ತಾ ಬಾಯ್ತುಂಬ ನಗುತ್ತ ನಿಮಗೂ ಸಾಥ್ ನೀಡುತ್ತಾನೆ. ಉದರ ಪೂಜೆಗೆ ಬಿಸಿ ಊಟ ಕಾದಿರುತ್ತದೆ.  ನೀವೇ ಕಾಗದದ ಪ್ಲೇಟಿನಲ್ಲಿ ಬಡಿಸಿಕೊಂಡು, ಪ್ಲಾಸ್ಟಿಕ್ಕಿನ ಕಪ್ಪಿನಲ್ಲಿ ಪಾನೀಯ ಬಗ್ಗಿಸಿಕೊಂಡರಾಯಿತು. ಹೊಸ ಗೆಳೆಯರೊಡನೆ ಕಾಲ ಕಳೆದು, ಸ್ನೇಹ ಸೇತುವನ್ನು ಕಟ್ಟುವ ಸುಲಭ ಅವಕಾಶ ಮಾಡಿಕೊಟ್ಟಿದ್ದಾನೆ ವಿಶ್ವ ನಾಗರಿಕ ಜಿಮ್. ಅಲ್ಲಿ ಯಾರೂ ಹಣ ಕೇಳುವುದಿಲ್ಲ.  25 ಯುರೋ ವರೆಗೆ ಹಣಕೊಡಬಹುದು. ಆ ಹಣವೆಲ್ಲ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ. ಹೋಗುವ ಮೊದಲು ಜಿಮ್ ಗೆ ಮಿಂಚಂಚೆ ಕಳಿಸಿಯೋ, ಮೆಸ್ಸೇಜ್ ಮಾಡಿಯೋ ಹೋಗಬಹುದು. ಬೇರೆ ಯಾವುದೇ ಶಿಷ್ಟಾಚಾರಗಳಿಲ್ಲ.  1970ರ ದಶಕದಲ್ಲಿ ಶುರುವಾದ ಔತಣ ಕೂಟ  ಸುಮಾರು 120,000  ಜನರನ್ನು ಆಕರ್ಷಿಸಿದೆ! ಮತ್ತೆ ಮತ್ತೆ ಬರುವವರೂ ಇದ್ದಾರೆ. ಇಲ್ಲಿ ಭೇಟಿಯಾಗಿ ಮದುವೆಯಾದವರು, ವಾಣಿಜ್ಯ ವ್ಯವಹಾರಗಳಲ್ಲಿ ಪಾಲುದಾರರಾದವರು, ಅಜೀವ ಸ್ನೇಹಿತರಾದವರು, ಹೀಗೆ ಎಲ್ಲ ಬಗೆಯ ಉದಾಹರಣೆಗಳು ಇಲ್ಲಿವೆ.

ಜಿಮ್ ನ ಮನೆಯಲ್ಲಿ ಊಟ-ತಿನಿಸುಗಳ ಸುತ್ತ ಬೆಸೆದ ಬಾಂಧವ್ಯಗಳಿಗೆ ಮಿತಿಯಿಲ್ಲ.ಹಾಗೆಂದೇ ಅವನನ್ನು ಸಾಮಾಜಿಕ ಜಾಲ ಪ್ರವರ್ತಕನೆಂದೇ ಕರೆಯುತ್ತಾರೆ. ಜಿಮ್ ನ ಅಪ್ಪ ಮದ್ಯ ವ್ಯಸನಿಯಾಗಿದ್ದ. ಜಿಮ್ ತನ್ನ 40ನೆಯ ವಯಸ್ಸಿನ ನಂತರ ಕಾಫಿ ಕುಡಿಯುವುದನ್ನೂ ಬಿಟ್ಟಿದ್ದ. ಆದರೆ ಅಪ್ಪ ಕಲಿಸಿದ ಪಾಠವೊಂದನ್ನು ಎಂದೂ ಮರೆತಿರಲಿಲ್ಲ: “ ನೀನು ಮಾಡಿದ ಉಪಕಾರವನ್ನು ಕೂಡಲೇ ಮರೆತು ಬಿಡು, ಇತರರು ನಿನಗೆ ಮಾಡಿದ ಉಪಕಾರವನ್ನು ಎಂದೂ  ಮರೆಯಬೇಡ”. ಸದಾ ಇತರರ ಸಹಾಯಕ್ಕೆ, ಸಾಹಿತ್ಯ- ಸಾಂಸ್ಕೃತಿಕ ರಂಗಗಳ ಅಭಿವೃದ್ಧಿಗೆ ಜೀವನವನ್ನೇ ಮುಡುಪಾಗಿಸಿದ ಜಿಮ್ ಜನವರಿ 6ರಂದು ಇಹ ಲೋಕ ತ್ಯಜಿಸಿದರೂ, ಆತನ ಸ್ನೇಹವನ್ನು  ಆತ ಜನರೊಡನೆ ಹಂಚಿಕೊಂಡ ರೊಟ್ಟಿಯನ್ನು ಮರೆಯಲು ಸಾಧ್ಯವೇ?

ರಾಂ

(ಉಲ್ಲೇಖ: ಬಿ.ಬಿ.ಸಿ., ಗಾರ್ಡಿಯನ್, Unfinished Histories, http://www.jim-haynes.com)

7 thoughts on “ವಿಶ್ವಮಾನವ: ಜಿಮ್ ಹೇಯ್ನ್ಸ್- ಡಾ. ರಾಮಶರಣ್

  1. ರಾಮಶರಣ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಜಿಮ್ ಹೇಯ್ನ್ಸ್ ಅಂತಹ ವ್ಯಕ್ತಿಯನ್ನು ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನನ್ನ ಮಗಳು ಎಡಿನ್ಬರೋದಲ್ಲಿದ್ದಾಳೆ. ಅವಳಿಗೆ ಇದನ್ನು ತಿಳಿಸಬೇಕು. ನಾವು ಇಪ್ಪತ್ತು ವರ್ಷ ಬ್ರಿಟನ್ನಿನಲ್ಲಿದ್ದರೂ, ಎಡಿನ್ಬರೋಕ್ಕೆ ಹೋಗಲಾಗಲಿಲ್ಲ. ಈ ಕರೋನ ಮಹಾಮಾರಿಯ ಉಪಟಳ ಮುಗಿದ ಮೇಲೆ ಆ ನಗರಕ್ಕೆ ಭೇಟಿ ನೀಡಲೇ ಬೇಕು. ಊಟ ಮತ್ತು ಪಾನೀಯ ವ್ಯವಸ್ಥೆ ಇದ್ದರೆ ಅಲ್ಲಿ ಜನಗಳ ಸಂಘಟನೆ ಆಗುವುದು ಬಹಳ ಸ್ವಾಭಾವಿಕ. ಆದರೆ ಪುಸ್ತಕಗಳ ಅಭಿರುಚಿಗೆ, ಊಟ ಮತ್ತು ಪಾನೀಯಗಳನ್ನ ಬೆಸೆದು ಜನಗಳನ್ನು ಕೂಡಿಸಿದ್ದು ಒಂದು ವಿಶೇಷವಾದ ಸಂಗತಿ.
    ಉಮಾ ವೆಂಕಟೇಶ್

    Like

  2. ಶತಮಾನದಲ್ಲಿ ಅದು ಸಾಧ್ಯವಿಲ್ಲವೇನೋ. ಯಾವದೂ ವಿಶ್ವವಿದ್ಯಾಲಯದಲ್ಲಿ ಕಲಿಸಿದ ಹಿನ್ನೆಲೆಯಿರದಿದ್ದರೂ ಪ್ಯಾರಿಸ್ ನಲ್ಲಿ ಪ್ರಾಯೊಗಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಲು ಆಮಂತ್ರಣ ಬರುವದು ಈಗ ಊಹಿಸಲಸಾಧ್ಯವೇನೋ. ಆತನ ಪೇಪರ್ಬ್ಯಾಕ್ ಅಂಗಡಿಯಿಂದ ಕೊಂಡು ಹೊರಗೆ ಅದರ ಇದುರಿಗೇ ”ಲೇಡಿ ಚಾಟರ್ಲಿ’ ಪುಸ್ತಕಕ್ಕೆ ಬೆಂಕಿ ಹಚ್ಚಿದ್ದು, ತನ್ನದೇ ಪಾಸ್ಪೋಟ್ ಮುದ್ರಿಸಿದ್ದು ಇಂಥ ಅನೇಕ ಘಟನೆಗಳನ್ನು ಓದಿ ತಿಳಿಯುವಂತೆ ಮಾಡಿದ, ಲೇಖನವನ್ನು ಬರೆದ ರಾಂಶರಣ ಅವರಿಗೆ ಧನ್ಯವಾದಗಳು. ಆತನ ಕಥೆ ಅವರಿಗೆ ಎಲ್ಲಿ ’ಭೆಟ್ಟಿ’ಯಾಯಿತೆಂಬ ನನ್ನ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ!

    Like

  3. ಜಿಮ್ ಹೇಯ್ ನ್ಸ್ ಬಗ್ಗೆ ಬರೆದು ರಾಮಶರಣ ಅವರು ನಮ್ಮೆಲ್ಲರ ಕುತೂಹಲವನ್ನು ಕೆರಳಿಸಿದ್ದಾರೆ. ಆತನ ಹೆಸರೇ ಕೇಳಿರಲಿಲ್ಲ ಅಂತ ಇದನ್ನು ಓದಿದ ಮೇಲೆ ಈ ಅಪರೂಪದ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ಓದಬೇಕೆಂದು ಅನಿಸಿತು. ಅರವತ್ತರ ದಶಕದ ಕಾಲದ ಬದುಕಿನ, ಜಗತ್ತಿನ ಕೂಸು ಈತ. Free spirit, unconventional ಬದುಕು ಬಾಳಿದ ಈತ ಸಾವಿರರಾರು ಜನರಿಗೆ ಊಟ, ಆಶ್ರಯ ಕೊಟ್ಟು ಮೈತ್ರಿ ಗಳಿಸಿಕೊಂಡಿದ್ದು ಆಶ್ಚರ್ಯವಲ್ಲ. ಈ ಶತಮಾನದಲ್ಲಿ ಅದು ಸಾಧ್ಯವಿಲ್ಲವೇನೋ. ಯಾವದೂ ವಿಶ್ವವಿದ್ಯಾಲಯದಲ್ಲಿ ಕಲಿಸಿದ ಹಿನ್ನೆಲೆಯಿರದಿದ್ದರೂ ಪ್ಯಾರಿಸ್ ನಲ್ಲಿ ಪ್ರಾಯೊಗಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಲು ಆಮಂತ್ರಣ ಬರುವದು ಈಗ ಊಹಿಸಲಸಾಧ್ಯವೇನೋ. ಆತನ ಪೇಪರ್ಬ್ಯಾಕ್ ಅಂಗಡಿಯಿಂದ ಕೊಂಡು ಹೊರಗೆ ಅದರ ಇದುರಿಗೇ ”ಲೇಡಿ ಚಾಟರ್ಲಿ’ ಪುಸ್ತಕಕ್ಕೆ ಬೆಂಕಿ ಹಚ್ಚಿದ್ದು, ತನ್ನದೇ ಪಾಸ್ಪೋಟ್ ಮುದ್ರಿಸಿದ್ದು ಇಂಥ ಅನೇಕ ಘಟನೆಗಳನ್ನು ಓದಿ ತಿಳಿಯುವಂತೆ ಮಾಡಿದ, ಲೇಖನವನ್ನು ಬರೆದ ರಾಂಶರಣ ಅವರಿಗೆ ಧನ್ಯವಾದಗಳು. ಆತನ ಕಥೆ ಅವರಿಗೆ ಎಲ್ಲಿ ’ಭೆಟ್ಟಿ’ಯಾಯಿತೆಂಬ ನನ್ನ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ!

    Like

    • ನನಗೆ ಬಿಬಿಸಿಯಲ್ಲಿ ಬರುವ ವಿಶೇಷ ಲೇಖನಗಳನ್ನು ಓದುವ ಅಭ್ಯಾಸವಿದೆ. ಅಲ್ಲಿ ಅವನ ಬಗ್ಗೆ ಓದಿದ ಮೇಲೆ ಮಾಡಿದ ಕುತೂಹಲವನ್ನು ತಣಿಸಿಕೊಂಡ ಅನುಭವದ ಮೂರ್ತ ರೂಪ ಈ ಲೇಖನ. ನೀವು ಹೇಳಿದಂತೆ ಈತನ ಅಂಗಡಿಯಲ್ಲಿ ಮಾತ್ರ ಲೇಡಿ ಚಾಟರ್ರ್ಲಿಸ್ ಲವರ್ ಪುಸ್ತಕ ಲಭ್ಯವಾಗಿತ್ತು, ಬ್ರಿಟನ್ನಿನಲ್ಲಿ ನಿಷೇಧವಿದ್ದಾಗ. ಅವನ ಬಗ್ಗೆ ಇನ್ನೂ ಹಲವಾರು ಕುತೂಹಲಕಾರಿ ವಿಷಯಗಳಿವೆ. ಆತನ ಕಿರೀಟದಲ್ಲಿ ಇನ್ನೂ ಕೆಲವು ತುರಾಯಿಗಳಿದ್ದವು. ಅವೆಲ್ಲವನ್ನು ದಾಖಲಿಸಲು ಕಿರು ಹೊತ್ತಿಗೆಯನ್ನೇ ತರಬೇಕು.
      – ರಾಂ

      Like

  4. ಜಿಮ್ ಹೇಯ್ನ್ಸ್ ನ ಊಟದಲ್ಲಿ ಎಳ್ಳು ಹಾಕುತ್ತಾರೋ ಇಲ್ಲವೋ, ಆದರೆ ಅವಮ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಉತ್ತಮ ಮಾಹಿತಿ ‌ಭರಿತ ಲೇಖನ. ಮೊದಲೇ ಗೊತ್ತಿದ್ದರೆ ಅಲ್ಲೊಂದು‌ ಭೋಜನ ಮಾಡಿಬರಬಹುದಿತ್ತು.

    – ಕೇಶವ

    Liked by 1 person

  5. ಎಡಿನ್ಬರೋ ಫೆಸ್ಟಿವಲ್ ಕಂಡ ನನಗೆ ಅಲ್ಲಿ ನಡೆಯುವ ಫ್ರಿಂಜ್ ಫೆಸ್ಟಿವಲ್ ನನ್ನ ಆಸಕ್ತಿಯನ್ನು ಸೆಳೆಯಿತು. ಇದಕ್ಕೆ ಕಾರಣರಾದವರ ಹಿನ್ನೆಲೆ ನನಗೆ ತಿಳಿದಿರಲಿಲ್ಲ. ಅಂದ ಹಾಗೆ ಜೇಮ್ಸ್ ಹೇನ್ಸ್ ಹೆಸರು ನಾನು ಹಿಂದೆ ಕೇಳಿರಲಿಲ್ಲ. ಅವರು ಜನಸಾಮಾನ್ಯರ ಪುಸ್ತಕದ ಪ್ರೀತಿಯನ್ನು ಊಟೋಪಚಾರದ ಮೂಲಕ ಬೆಸೆದಿದ್ದು ಬಹಳ ಪರಿಣಾಮಕಾರಿ ಕೆಲಸ ಎನ್ನಬಹುದು. ಪ್ರಪಂಚದಲ್ಲಿ ಪ್ರಖ್ಯಾತ ಲೇಖಕರು ರಾಜಕಾರಣಿಗಳು ಸೇರುವುದು ಕಾಫಿ ಮೇಜಿನ ಮೇಲೆ ಎಂಬುದಕ್ಕೆ ವಿಯೆನ್ನಾದಲ್ಲಿರುವ ಸೆಂಟ್ರಲ್ ಕೆಫೆ ಸಾಕ್ಷಿ. ನಾನು ಇಲ್ಲಿ ಒಮ್ಮೆ ಭೇಟಿ ನೀಡಿ ಕೇಳಿದ ಇಲ್ಲಿಯ ಐತಿಹಾಸಿಕ ಮಾಹಿತಿ ಸೋಜಿಗವೆನಿಸಿತು. ಕಾಫಿ ಮತ್ತು ಭೋಜನಕ್ಕೆ ಜನರನ್ನು ಒಂದುಗೂಡಿಸುವ ವಿಶೇಷ ಶಕ್ತಿ ಇದೆ. ವೈಯುಕ್ತಿಕವಾಗಿ ನಾನು ಮೆಡಿಕಲ್ ಕಾನ್ಫೆರೆನ್ಸ್ ಗಳಲ್ಲಿ ನೆಟ್ವರ್ಕ್ ಮಾಡಲು ಕಲಿತಿದ್ದು ಕಾಫಿ ಮತ್ತು ಭೋಜನ ಮೇಜಿನಲ್ಲಿ ಮತ್ತು ವಿರಾಮದಲ್ಲಿ ಎನ್ನಬಹುದು. ನಮ್ಮ ಮನೆಯಲ್ಲಿ ತಂದೆ ಜಿ. ಎಸ್ .ಎಸ್ ಪ್ರತಿ ವರ್ಷ ತಮ್ಮ ಸಾಹಿತ್ಯ ಮಿತ್ರರನ್ನು ಹೋಳಿಗೆ ಶೀಕರಣೆ ಊಟಕ್ಕೆ ಕರೆಯುತ್ತಿದ್ದು ಅಲ್ಲಿ ಸಾಹಿತ್ಯದ ಜೊತೆ ಬಾಂಧವ್ಯವೊ ಬೆಳೆಯುತ್ತಿತ್ತು. ಹಲವಾರು ಲೇಖಕರು ಈ ವಿಚಾರದ ಬಗ್ಗೆ ಹಲವಾರು ಸಭೆಯಲ್ಲಿ ಪ್ರಸ್ತಾಪಿಸಿ ಆ ಕಳೆದ ಕ್ಷಣಗಳನ್ನು ನೆನೆಯುತ್ತಾರೆ. ಈ ವಿಚಾರದಲ್ಲಿ ನಮ್ಮ ಮನೆಯಲ್ಲೂ ಒಬ್ಬ ಜೇಮ್ಸ್ ಹೇನ್ಸ್ ಇದ್ದರು ಎಂದು ನನ್ನ ಅನಿಸಿಕೆ.

    ಸೂಕ್ತವಾದ ಪೀಠಿಕೆಯಿಂದ ಮೊದಲುಗೊಂಡ ಬಹಳ ಮಾಹಿತಿಯುಳ್ಳ ಉತ್ತಮವಾದ ವ್ಯಕ್ತಿ ಚಿತ್ರಣ, ಧನ್ಯವಾದಗಳು ರಾಮ್ ಶರಣ್

    Liked by 1 person

  6. ಒಂದು ಉತ್ತಮ ಸ್ನೇಹಮಯಿ ವ್ಯಕ್ತಿತ್ವದವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಅವರಿಗೆ ಸದ್ಗತಿ ದೊರಕಲಿ ಎಂಬುದು ನಮ್ಮೆಲ್ಲರ ಹಾರೈಕೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.