ಕವಿ ಎನ್.ಎಸ್ ಲಕ್ಷೀನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ – ಡಾ.ಉಮಾ ವೆಂಕಟೇಶ್ ಮತ್ತು ಶ್ರೀಮತಿ ಗೌರಿಪ್ರಸನ್ನ

ಕನ್ನಡ ಸಾಹಿತ್ಯ ಲೋಕದಲ್ಲಿಎನ್ನೆಸ್ಸೆಲ್ ಎಂದೇ ಪರಿಚಿತರಾದ ಈ ಕವಿಯ ಭಾವಗೀತೆಗಳನ್ನು ಕೇಳಿ ಆನಂದಿಸದಿರುವ ಕನ್ನಡಿಗನಿಲ್ಲ. “ತೊರೆದು ಹೋಗದಿರೊ ಜೋಗಿ“ , “ಎಲ್ಲಿ ಜಾರಿತೋ ಮನವು“, “ಈ ಬಾನು ಈ ಚುಕ್ಕಿ“ ಕೆಲ ಉದಾಹರಣೆಗಳಷ್ಟೆ.

ಭಾವಗೀತೆ,ಕಾವ್ಯ, ಅನುವಾದ, ವಿಮರ್ಶೆ ಮುಂತಾದ ರೀತಿಯ ಬರಹಗಳಿಂದ ಎನ್ನೆಸ್ಸೆಲ್ ರವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿಶುನಾಳ ಶರೀಫ಼್ ಸಾಹೇಬರ ತತ್ವಪದಗಳನ್ನು ಕಲೆಹಾಕಿ, ಅದಕ್ಕೆ ಟೀಕೆ-ಟಿಪ್ಪಣಿಯನ್ನು ಬರೆದು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಸುಳಿ, ದೀಪಿಕಾ, ಬಾರೋ ವಸಂತ, ಅರುಣ ಗೀತೆ, ಕವಿತಾ, ಬಂದೇ ಬರತಾವ ಕಾಲ, ಮಾಧುರಿ, ಇವು ಅವರ ಜನಪ್ರಿಯ ಕವನ ಸಂಕಲನಗಳಲ್ಲಿ ಕೆಲವು. ಇಂಗ್ಲಿಷ್ ನ ಯೇಟ್ಸ್, ಎಲ್ಲಿಯಟ್ ಇನ್ನೂ ಮುಂತಾದ ಕವಿಗಳ ಸಾನೆಟ್ ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ೧೯೭೪ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ೨೦೧೨ ರಲ್ಲಿ ಅನಕೃ ಪ್ರಶಸ್ತಿ ಇವರಿಗೆ ಸಂದಿದೆ.

ಉಮಾ ವೆಂಕಟೇಶ್ ರವರು ಲಕ್ಷೀನಾರಯಣ ಭಟ್ಟರ ಜೊತೆ ಕಳೆದ ತಮ್ಮ ಸವಿನೆನಪನ್ನು ಈ ಲೇಖನದಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ, ಗೌರಿಪ್ರಸನ್ನ ಅವರು ಭಟ್ಟರ ಭಾವಮಯ, ಪ್ರೇಮಮಯ ಕವನಗಳನ್ನು ನೆನೆದಿದ್ದಾರೆ –ಸಂ

ಕವಿ ಎನ್. ಎಸ್. ಲಕ್ಷ್ಮಿನಾರಾಯಣಭಟ್ಟ

ಕಳೆದ ಶನಿವಾರ ಬೆಳಿಗ್ಗೆ ಎದ್ದೊಡನೆ ಫ಼ೇಸ್-ಬುಕ್ಕಿನಲ್ಲಿ ನನ್ನ ಸ್ನೇಹಿತೆ ತ್ರಿವೇಣಿ, ಕವಿ ಶರೀಫ್ ಭಟ್ಟರು ಇನ್ನಿಲ್ಲ ಎಂದು ಅವರ ಕವನವೊಂದನ್ನು ಪೋಸ್ಟ್ ಮಾಡಿದ್ದರು. ಅದನ್ನು ನೋಡಿದಾಗ ತಕ್ಷಣ ಸ್ವಲ್ಪ ಆಘಾತವಾದರೂ, ಸಾರ್ಥಕ ಜೀವನ ನಡೆಸಿದ ಕವಿಯ ಸಾಹಿತ್ಯ ಕೃಷಿಯ ಬಗ್ಗೆ ಬಹಳ ಹೆಮ್ಮೆಯೆನಿಸಿತು. ಈಗ ೨೦ ವರ್ಷಗಳ ಹಿಂದೆ ಅವರನ್ನು ಕಾರ್ಡಿಫ಼ಿನಲ್ಲಿ ಭೇಟಿಯಾಗಿದ್ದು ನನ್ನ ನೆನಪಿನಲ್ಲಿ ಸುಳಿಯಿತು. ೨೦೦೦ ಆಗಸ್ಟ್ ತಿಂಗಳ ಹಿತವಾದ ಬೇಸಿಗೆಯ ಒಂದು ದಿನ, ನಮ್ಮ ಆತ್ಮೀಯ ಕುಟುಂಬ ಮಿತ್ರ ಡಾ ಆರ್.ಎಸ್.ಎಸ್ ಕೃಷ್ಣಮೂರ್ತಿಯವರು ಫೋನ್ ಮಾಡಿ, ಇಂದು ಸಂಜೆ ನಮ್ಮ ಮನೆಗೆ ಬನ್ನಿ. ಬೆಂಗಳೂರಿನಿಂದ ಕವಿ ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ಬಂದಿದ್ದಾರೆ ಎಂದಾಗ, ನಮಗೆ ಬಹಳ ಸಂತೋಷವಾಯಿತು. ಶಾಲೆಯಲ್ಲಿ ಕವಿ. ಎನ್. ಎಸ್. ಎಲ್ ಅವರ ಕವನವನ್ನು ಪಠ್ಯಪುಸ್ತಕದಲ್ಲಿ ಓದಿದ್ದ ನನಗೆ ಅವರನ್ನು ಮುಖತಃ ನೋಡುವ ಅವಕಾಶ ಸಿಕ್ಕಿತ್ತು. ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹಿರಿಯ ಪುತ್ರ ರವಿಶಂಕರ್ ಅವರ ಜೊತೆಯಲ್ಲಿ ಬಂದಿದ್ದ ಎನ್. ಎಸ್. ಎಲ್ ಅವರನ್ನು ನೋಡಿದಾಕ್ಷಣ, ಅವರ ಸರಳತೆ ಮತ್ತು ವಿನಯಗಳು ನಮ್ಮನ್ನು ಕೂಡಲೆ ಆಕರ್ಶಿಸಿತ್ತು. ಸಂಜೆಯ ಹಿತವಾದ ಬಿಸಿಲಿನಲ್ಲಿ, ಮೌಂಟನ್ ಆಶ್ ಪಟ್ಟಣದ ಸುಂದರವಾದ ಪರಿಸರದಲ್ಲಿ ಕೃಷ್ಣಮೂರ್ತಿ ಮತ್ತು ಅವರ ಪತ್ನಿ ರೋಸಿಲಿ ಅವರು ಕೊಟ್ಟ ಆಂಬೊಡೆ ಮೆಲ್ಲುತ್ತಾ ಭಟ್ಟರ ಜೊತೆ ನಡೆಸಿದ ಸಂಭಾಷಣೆ ನನ್ನ ಮನದಲ್ಲಿನ್ನೂ ಹಸಿರಾಗಿದೆ. ತಮ್ಮ ಬಾಲ್ಯ ಮತ್ತು ಕಾಲೇಜಿನ ದಿನಗಳ ಬಗ್ಗೆ ಬಹಳ ಉತ್ಸುಕತೆಯಿಂದ ಮಾತನಾಡಿದ ಭಟ್ಟರು, ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಅವರದೇ ಆದ ಶೈಲಿಯಲ್ಲಿ ಹೇಳುತ್ತಿದ್ದನ್ನು ಕೇಳುತ್ತಾ ಕುಳಿತ ನಮಗೆ ಸಮಯ ಕಳೆದದ್ದು ತಿಳಿದಿರಲಿಲ್ಲ. ನನ್ನ ಪತಿ ಸತ್ಯಪ್ರಕಾಶ್ ಒಬ್ಬ ವಿಜ್ಞಾನಿ ಎಂದು ಗೊತ್ತಾದಾಗ, ಅವರಿಬ್ಬರ ನಡುವೆ ನಡೆದ ಸಂಭಾಷಣೆ ಬಹಳ ಆಸಕ್ತಿಪೂರ್ಣವಾಗಿತ್ತು.

ಒಬ್ಬ ಪ್ರಮುಖ ಕವಿ, ವಿಮರ್ಶಕ ಹಾಗೂ ಕಾವ್ಯಾನುವಾದಕರಾಗಿ ಕನ್ನಡ ಸಾರಸ್ವತಲೋಕಕ್ಕೆ ಪರಿಚಿತರಾದ ಭಟ್ಟರು, ಕಾವ್ಯಲೋಕದಲ್ಲಿ ತಮ್ಮ ಕವನಗಳು, ಶೇಕ್ಸಪಿಯರ್, ಏಟ್ಸ್ ಮತ್ತು ಟಿ.ಎಸ್. ಎಲಿಯಟ್ಟರ ಕೃತಿಗಳ ಅನುವಾದದಿಂದ ಎತ್ತರದ ಸ್ಥಾನ ಗಳಿಸಿದ್ದಾರೆ. ಜೀವನದ ಸತ್ಯತೆಯನ್ನು ಅನ್ವೇಷಿಸಲು ಸಾಹಿತಿ ಮತ್ತು ವಿಜ್ಞಾನಿಗಳು ಅನುಸರಿಸುವ ಮಾರ್ಗ ಭಿನ್ನವಾದರೂ, ಅವರಿಬ್ಬರ ಗುರಿ ಒಂದೇ ಎನ್ನುವುದನ್ನು ಬಹಳ ಉತ್ಕಟತೆಯಿಂದ ನಮಗೆ ವಿವರಿಸಿದ ಕವಿ ಎನ್. ಎಸ್. ಭಟ್ಟರ ಮಾತುಗಾರಿಕೆ ನಮ್ಮನ್ನು ಮೋಡಿಮಾಡಿತ್ತು. ಮರುದಿನ ನಮ್ಮ ಮನೆಗೆ ಬೆಳಗಿನ ಉಪಹಾರಕ್ಕೆ ಬಂದಾಗ, ನಾನು ಮಾಡಿದ್ದ ಅಕ್ಕಿ ರೊಟ್ಟಿಯನ್ನು ತಿನ್ನುವಾಗ, ಅದರ ರುಚಿ ಅವರ ತಾಯಿಯವರನ್ನು ನೆನಪಿಗೆ ತರುತ್ತಿದೆ ಎಂದಾಗ ನನ್ನ ಮನ ಹಿರಿಹಿರಿ ಹಿಗ್ಗಿತ್ತು. ಅವರ ಬಾಲ್ಯದ ಕಡುಬಡತನ, ಕಷ್ಟದ ಕಾಲೇಜಿನ ದಿನಗಳ ಬಗ್ಗೆ ಅವರ ಅನುಭವವನ್ನು ಕೇಳುತ್ತಿದ್ದಾಗ, ಕೇವಲ ತಮ್ಮ ಪರಿಶ್ರಮ, ಪ್ರತಿಭೆಗಳಿಂದ ಜೀವನದಲ್ಲಿ ಸಾಧನೆಗೈದ ಭಟ್ಟರ ಜೀವನ ನಿಜಕ್ಕೂ ಅಭಿನಂದನೀಯ. ಅಮೆರಿಕೆಯ ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ ಅವರು ನಡೆಸಿದ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಮ್ಮಟ ಮತ್ತು ಶಿಬಿರಗಳ ಬಗ್ಗೆ ಇಂದಿಗೂ ಅಮೆರಿಕೆಯಲ್ಲಿ ನಮ್ಮ ಸ್ನೇಹಿತರು ಬಹಳ ಹೆಮ್ಮೆಯಿಂದ ಮಾತನಾಡುವುದನ್ನು ಕೇಳಿದ್ದೇನೆ. ಶಿಶುನಾಳ ಶರೀಫರ ಅನುಭಾವಗೀತೆಗಳನ್ನು ಸಂಗೀತದ ಮೂಲಕ ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿದ ಕವಿ ಎನ್. ಎಸ್. ಲಕ್ಷ್ಮಿನಾರಾಯನ ಭಟ್ಟರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ.

ತಾಳಿದವರೇ ಗೆಲುವರು
ಆಳಗಳಿಗೆ ಇಳಿವರು
ನೋವು ಕಡೆದ ಮೆಟ್ಟಿಲೇರಿ
ಶಿಖರಗಳಲಿ ಹೊಳೆವರು”

ಅವರ ಕವನದ ಈ ಸಾಲುಗಳಲಿ, ಅವರ ಜೀವನದ ಎಲ್ಲಾ ಸತ್ಯತೆಗಳೂ ಅಡಗಿವೆ.

ಡಾ. ಉಮಾ ವೆಂಕಟೇಶ್

ಎದೆಯ ಬಯಲಲಿ ಭಾವಗಳ ಬಿತ್ತಿ ಬೆಳೆದ ಮಾಂತ್ರಿಕ.

ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೇ?
ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು
ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ,
ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು;
ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು,
ಎಷ್ಟೋ ಸಲ ಅದರ ಹೊಂಬಣ್ಣ ಮಂಕಾಗುವುದು;
ಆಕಸ್ಮಿಕಕ್ಕೋ ಪ್ರಕೃತಿಯ ಒರಟು ಹೊರಳಿಗೋ
ಸಿಕ್ಕು ಒಂದೊಂದೇ ಸೌಂದಯ೯ದೆಳೆ ಕಳಚುವುದು;
ನಿನ್ನ ಅಮೃತವಸಂತ ಕಾಂತಿ ಉಳಿವುದು ನಿತ್ಯ
ಕಾಯ್ದುಕೊಳ್ಳುವುದು ತನ್ನನ್ನು, ಕಾವ್ಯದನಂತ
ರೇಖೆಯಲಿ ಬೆಳೆದಿರಲು ನೀನು, ಸಾವಿಗಸಾಧ್ಯ
ತನ್ನ ನೆರಳಿಗೆ ನಿನ್ನನೆಳೆವೆನೆನ್ನುವ ಪಂಥ.
ಲೋಕ ಬಾಳುವವರೆಗೂ ಕಣ್ಣು ಕಾಣುವವರೆಗೂ
ಉಳಿದು ಇದು ನೀಡುವುದು ಅಮರತ್ವವನು ನಿನಗೂ.

ಕವಿ ಲಕ್ಷ್ಮೀನಾರಾಯಣ ಭಟ್ಟರ ‘ ಷೇಕ್ಸ್‌ಪಿಯರ್  ಸಾನೆಟ್ ಚಕ್ರ’ ದ ಸುನೀತವಿದು. ಹೌದು; ಕವಿ ಶಾಶ್ವತವಾಗಿರದಿದ್ದರೂ ಕವಿತೆ ಅಮರ..ತನ್ಮೂಲಕ ಕವಿಯೂ..ಯಾರಿಗೂ ಜಗ್ಗದ ಕಾಲವೂ ಇಲ್ಲಿ ನಿಸ್ಸಹಾಯಕ.ಅಂತೆಯೇ ತಮ್ಮ ಕಾವ್ಯಭಾವದ ಮಳೆ ಸುರಿಸಿ ನಮ್ಮಂಥ ಅಸಂಖ್ಯ  ಓದುಗ-ಕೇಳುಗರೆದೆಯಲ್ಲಿ ಬೀಜಬಿತ್ತಿ ಬಗೆಬಗೆ ತೆನೆಗಳನ್ನು ಬೆಳೆದ ಮಾಂತ್ರಿಕ ಕವಿಯ  ಐಂದ್ರಜಾಲದ ಮೋಡಿ ಮುಗಿಯುವಂಥದ್ದಲ್ಲ.

ಹೈಸ್ಕೂಲಿನ ಹದಿಹರೆಯದ ದಿನಗಳಿಂದಲೂ ಭಟ್ಟರು ತಮ್ಮ ಕವಿತೆಗಳ ಮೂಲಕ ನನಗೆ ‘ಸಾಥ್’ ನೀಡುತ್ತ ಬಂದಿದ್ದಾರೆ.ಕ್ಯಾಸೆಟ್ ಯುಗದಲ್ಲಿ ರೀಲು ಕಿತ್ತು ಬಂದರೂ ಪೆನ್ನಿಲ್ ನಿಂದ ಅದನ್ನು ಸುತ್ತಿ ಮತ್ತೆ ಮತ್ತೆ ಕೇಳಿದ್ದಿದೆ.’ ಮೈಸೂರು ಮಲ್ಲಿಗೆ’ ಯ ಕ್ಯಾಸೆಟ್ ನಲ್ಲಿ ಅವರು ನೀಡಿದ ಚಂದದ ‘ಕಾಮೆಂಟ್ರಿ’ ಈಗಲೂ ನನ್ನ ಮೊಬೈಲ್‌ ನ ಯು.ಟ್ಯೂಬ್.ಲೈಬ್ರರಿಯಲ್ಲಿ ಅಡಗಿ ಕುಳಿತು ಹಿಟ್ಟು ನಾದುವಾಗ, ಈರುಳ್ಳಿ ಹೆಚ್ಚುವಾಗ ಯಾವಾಗೆಂದರೆ  ಆವಾಗ ನನ್ನೊಡನೆ ಮಾತಾಡುತ್ತದೆ. ಪ್ರತಿ ಹುಣ್ಣಿಮೆಯಂದೂ ‘ಪಕ್ಷಕೊಮ್ಮೆ ಬಿಳಿ ಪತ್ತಲ ನೇಯುವ’ ಹಸ್ತದ ದಶ೯ನ ಮಾಡಿಸುತ್ತದೆ.ಕನ್ನಡದ ಓದಿನಷ್ಟು ಇಂಗ್ಲೀಷ್‌ ಓದು ಸರಳ-ಸುಭಗವೆನ್ನಿಸದೇ ಒದ್ದಾಡಿದಾಗ ಇಂಗ್ಲೀಷಿಗೇ ಮೈಸೂರು ಸಿಲ್ಕ್ ಸೀರೆಯುಡಿಸಿ, ಮೈಸೂರು ಮಲ್ಲಿಗೆ ಮುಡಿಸಿ ‘ಸಾನೆಟ್’ ನ್ನು ಸುನೀತವಾಗಿಸಿದ್ದಾರೆ. ಅರಿವಿಲ್ಲದೇ ಅನಾಯಾಸವಾಗಿ ಕವಿಯೊಬ್ಬ ಅದ್ಹೇಗೆ ಬದುಕನ್ನು ಆಕ್ರಮಿಸಬಲ್ಲ ಎಂಬುದು ಸೋಜಿಗ.

‘ಸುಳ್ಳೇ ನಿರಿಗೆಯ ಚಿಮ್ಮುವ  ನಡಿಗೆಗೆ ಬಳ್ಳಿಯ ಬೆಡಗಿತ್ತೇ’….ಹದಿಹರೆಯದ ದಿನಗಳಲ್ಲಿ ಅಮ್ಮನದೋ,ಮಾಮಿ – ಚಿಕ್ಕಮ್ಮನದೋ ಸೀರೆಯನುಟ್ಟು ಸೆರಗು ಸಾವರಿಸುತ್ತ, ನಿರಿಗೆ ಚಿಮ್ಮುತ್ತ ಡೌಲಿನಿಂದ ನಡೆಯುವಾಗಲೆಲ್ಲ ‘ದೀಪಿಕಾ’ ದ ಸಾಲು ತಲೆಯಲ್ಲಿ..ಎದೆಯಲ್ಲಿ..ಗುನುಗಲ್ಲಿ.

ಮುಂದೆ ಗೆಳೆಯನೊಬ್ಬ ನಲ್ಲನಾದಾಗ ‘ ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೇ..ಮೆಲ್ಲಗೆ  ಉಸುರಿದ ಸೊಲ್ಲಿನ ಸವಿಯು  ಬೆಲ್ಲವ ಮೀರಿತ್ತೆ’…ಮನದ ತುಂಬ ಭಟ್ಟರ ಹಾಡಿನ ಮಧುರಾಲಾಪ. ಇಬ್ಬರ ಮಧ್ಯೆ ಮುನಿಸು ನುಸುಳಿದಾಗ ‘ ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ’ ಎಂಬ ಹಳಹಳಿಕೆ…ಮಾತು ಬೆಳೆದು ಅಂತರ ಹೆಚ್ಚಾದಾಗಲೆಲ್ಲ “ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ’ ಎನ್ನುವ ಒದ್ದಾಟ… ‘ ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ” ಆತ೯ ಒರಲಾಟ… ಭಾವೋತ್ಕಷ೯ದ ರಸಗಳಿಗೆಗಳಲ್ಲೂ”….. “ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ” ….”ಇಂಥ ಭಾವವೇ ನಾಳೆ ಉಳಿಯದೆಯೇ ಕಳೆದೀತು ಎಂಬ ವ್ಯಥೆಯ” ಎಂಬಂಥ ಆತಂಕದ  ಬಡಬಡಿಕೆಗಳು..

ದಾಂಪತ್ಯದ ಅಮೃತಫಲಗಳಾದ ಕಂದಮ್ಮಗಳ ತೊಟ್ಟಿಲ ಜೀಕುವಿಕೆಯಲ್ಲೂ  “ತಾವರೆ ದಳ  ನಿನ್ನ ಕಣ್ಣು, ಕೆನ್ನೆ ಮಾವಿನಹಣ್ಣು..ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಭುವಿಗೆ’, ಸ್ವಗ೯ದ ಸುಗ್ಗಿ ಮನ – ಮನೆಯಂಗಳದಲ್ಲಿ..ಈಗ ನಮ್ಮ ನೆಲದಿಂದ ಗಾವುದ ದೂರವಿರುವ ನಮ್ಮೆದೆಯಲ್ಲಿ”.

“ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ  ಹೂಗಳ ಚೆಲ್ಲಿತ್ತೇ..ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೇ ಕಾಡಿತ್ತೇ..ಅಣ್ಣನ ಕೀಟಲೆ, ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ..ಕಾಣದ ಕೈ ಎಲ್ಲಾ ಕದ್ದು ಉಳಿಯಿತು ನೆನಪಷ್ಟೇ”….ಇದೀಗ ನೆನಪುಗಳೇ ಜೀವದ್ರವ್ಯ…..ಮನವ ಜಾರಿಸಿ, ಅರಿವಿಗಿರುವ ಬೇಲಿಯ ಜಾಡಿಸಿ, ಹಸಿದ ಕಂದನಿರದ ನಾಡಿನ ಕನಸು ಕಂಡ ಕವಿಮನದ ಪಾರಿಜಾತ ಗಂಧ ದೂರ ತೀರದಿಂದ ಸದಾ ತೇಲಿ ಬರುತ್ತಿರಲಿ.. ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದಾ ಕಂಪು ನಮ್ಮಾತ್ಮವನ್ನು ಪೊರೆಯುತ್ತಿರಲಿ.

ಹೋಗಿ ಬನ್ನಿ ಭಟ್ಥರೇ..ಮಸುಕು ಕಂಗಳಿಂದ,ಮಣಭಾರದೆದೆಯಿಂದ ವಿದಾಯ ಹೇಳುತ್ತಿರುವೆ. ನೀವಿತ್ತ ಹಾಡುಗಳು..ಭಾವಗಳು ನನ್ನೊಳಗೆ ಸದಾ ಜೀವಂತ.

ಶ್ರೀಮತಿ ಗೌರಿಪ್ರಸನ್ನ

9 thoughts on “ಕವಿ ಎನ್.ಎಸ್ ಲಕ್ಷೀನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ – ಡಾ.ಉಮಾ ವೆಂಕಟೇಶ್ ಮತ್ತು ಶ್ರೀಮತಿ ಗೌರಿಪ್ರಸನ್ನ

 1. ಶ್ರೀಮತಿ ಉಮಾ ವೆಂಕಟೇಶ್ ಮತ್ತು ಶ್ರೀಮತಿ ಗೌರಿ ಪ್ರಸನ್ನ ಅವರಿಬ್ಬರದೂ ಭಾವಪೂರ್ಣ ಶ್ರದ್ಧಾಂಜಲಿ; ಒಬ್ಬರದು ಮುಖತಃ ಭೆಟ್ಟಿಯ ಅನುಭವವಾದರೆ, ಇನ್ನೊಬ್ಬರದು ಕವಿ-ಓದುಗರ ಕಾವ್ಯಜಗತ್ತಿನ ಬಾಂಧವ್ಯ. ಭಟ್ಟರ ನಿರ್ಗಮನದೊಂದಿಗೆ ಕನ್ನಡ ಸಾರಸ್ವತಲೋಕ ಇನ್ನೊಂದು ಮಹಾಜೀವವನ್ನು ಕಳೆದುಕೊಂಡಿದೆ. ಅವರಿಗೆ ನನ್ನದೂ ಒಂದು ನಮನ.
  -ಲಕ್ಷ್ಮೀನಾರಾಯಣ ಗುಡೂರ್.

  Like

 2. ಉಮಾ ಮತ್ತು ಗೌರಿ,
  ನೀವಿಬ್ಬರೂ ‘ಕನ್ನಡದ ಭಾವಗೀತೆಗಳ ಕವಿ’ ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರ ಕುರಿತು ಹಂಚಿಕೊಂಡಿರುವ ಭಾವಸಂಗಮದ ಮುದ ನೆನಪುಗಳು ನನ್ನನ್ನು ಕಾಲೇಜಿನ ಸಾಹಿತ್ಯದ ಓದು, ಕ್ಯಾಸೆಟ್ ದಿನಗಳಿಗೆ ಕೊಂಡೊಯ್ದಿತು. ‘ಶರೀಫ್ ಭಟ್ಟರು’ – ಆಹಾ, ಎಂಥಹ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಲೋಕಜ್ಞಾನದ ಸಮ್ಮಿಳಿನದ ಅಭಿವ್ಯಕ್ತಿ! ನಿಮ್ಮಿಬ್ಬರ ಖಾಸಗಿ ನೆನಪುಗಳನ್ನು ಭಟ್ಟರ ವ್ಯಕ್ತಿತ್ವ ಮತ್ತು ಅವರ ಚಿರಪರಿಚಿತ ಕವನಗಳೊಂದಿಗೆ ಮೇಳೈಸಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಕೃತಜ್ಞತೆಗಳು.
  ವಿನತೆ ಶರ್ಮ

  Like

 3. I was very much interested in reading both the articles. Uma,s write up describe his humble and human values . Gowre Prasanna,s describes his amazing talent as a poet and his contribution to Kannada literature. Thank you. VathsalaRamamurthy

  Like

 4. ಉಮಾ, ಎಸ್ . ಎಲ್. ಏನ್ ಅವರ ಬಗ್ಗೆ ನಿಮ್ಮ ಬರಹ ಆಪ್ತವಾಗಿದೆ. “ಸಾಹಿತ್ಯ ಮತ್ತು ವಿಜ್ಞಾನ ಅವೆರಡರ ಗುರಿ ಜೀವನದ ಸತ್ಯತೆಯನ್ನು ಸಾಧಿಸುವುದು” ಎಂಬ ಭಟ್ಟರ ವಿಚಾರ ಇಲ್ಲಿ ಬಹಳಷ್ಟು ಚಿಂತನೆಗೆ ಅನುವುಮಾಡಿಕೊಟ್ಟಿದೆ. ವಿಜ್ಞಾನಿ ಲೌಕಿಕ ವಸ್ತುನಿಷ್ಟ ಮಾರ್ಗವನ್ನು ಅನುಸರಿಸಿದರೆ ಕವಿ ಭಾವನಿಷ್ಠ ಮಾರ್ಗದಲ್ಲಿ ಸಾಗುತ್ತಾನೆ. ಎಲ್ಲೋ ಒಂದು ಕಡೆ ವಿಜ್ಞಾನ ಮತ್ತು ಸಾಹಿತ್ಯ ಸಮಾಗಮವಾಗುವುದು ಸೋಜಿಗದ ವಿಚಾರ. ವಿಜ್ಞಾನ ನಮ್ಮ ಮನಸ್ಸನ್ನು ಅರಳಿಸಿದರೆ ಸಾಹಿತ್ಯ ನಮ್ಮ ಹೃದಯವನ್ನು ಅರಳಿಸುತ್ತದೆ. ಎರಡು ನಮ್ಮ ಅರಿವಿನ ವಿಸ್ತಾರವಷ್ಟೇ. ಕಾದಂಬರಿಕಾರಾರು ಸಮಾಜವನ್ನು ತಮ್ಮ ಅನುಭವದ ಮೂಲಕ ಅಳೆದು ವಿಶ್ಲೇಷಣೆ ಮಾಡಿ ಸಾಮಾಜಿಕ ವಿಜ್ಞಾನಿಗಳಾಗುತ್ತಾರೆ. ಇಂಗ್ಲೀಷಿನಲ್ಲಿ ಇದನ್ನೇ ಸೋಷಿಯಲ್ ಸೈನ್ಸ್ ಎಂದು ಗುರುತಿಸಬಹುದು. ವಿಜ್ಞಾನಿ ತನ್ನ ಪ್ರಯೋಗಾಲಯದಲ್ಲಿ ಕುಳಿತು ತನ್ನ ಸತ್ಯತೆಯನ್ನು ಕಂಡುಕೊಳ್ಳುತ್ತಾನೆ, ಸಾಹಿತಿ ಎಲ್ಲರ ಮಧ್ಯೆ ಒಡನಾಡುತ್ತಾ ಈ ಸತ್ಯತೆಯನ್ನು ಕಾಣುತ್ತಾನೆ. ವಿಜ್ಞಾನಿ ಮತ್ತು ಸಾಹಿತಿಯ ಈ ಸಾದೃಶ್ಯ ವೈದೃಶ್ಯಗಳು ಸ್ವಾರಸ್ಯಕರವಾಗಿದ್ದು ನನ್ನ ಈ ಕೆಲವು ಆಲೋಚನೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಅನ್ನುವುದು ಬೇರೆ ಬೇರೆ ಅರ್ಥ ಮತ್ತು ಆಯಾಮಗಳನ್ನು ಕಂಡುಕೊಂಡಿದೆ ಈ ಒಂದು ದೃಷ್ಟಿ ಕೋನದಲ್ಲಿ ಮೇಲಿನ ಚಿಂತನೆಗಳನ್ನು ಇನ್ನೂ ಹಲವು ಮಜಲಿಗೆ ಕೊಂಡೊಯ್ಯಬಹುದು.

  ಗೌರಿ ಅವರೇ ಭಟ್ಟರ ಕವನದ ಉತ್ಕೃಷ್ಟ ಸಾಲುಗಳನ್ನು ನಮಗೆ ಮರು ಪರಿಚಯಿಸಿದ್ದೀರಿ. ಧನ್ಯವಾದಗಳು

  Liked by 1 person

 5. ಕನ್ನಡದ ಒಬ್ಬ ಜನಪ್ರಿಯ ಮತ್ತು ಮಹತ್ವದ ಕವಿ, ವಿಮರ್ಸ್ಕಕ ಅನುವಾದಕರಾಗಿದ್ದ ಎಲ್ಲೆನ್ ಭಟ್ಟರ ಬಗ್ಗೆ ಎರಡು ಭಾವಪೂರ್ಣ ಶ್ರದ್ಧಾಂಜಲಿಗಳು ಇವು. ಉಮಾ ವೆಂಕಟ್ಟೇಶ್ ಅವರ ಸ್ಮರಣೆಯಲ್ಲಿ ಭಟ್ಟರ ಸರಳ ವ್ಯಕ್ತಿತ್ವದ ಆಪ್ತ ಚಿತ್ರವಿದೆ. ಅವರನ್ನು ಭೆಟ್ಟಿಯಾಗಿ ಅವರೊಡನೆ ಸಮಯವನ್ನು ಕಳೆದ ಅವರು ಭಾಗ್ಯವಂತರೆ. ಅದನ್ನು ಹಂಚಿಕೊಂಡು ನಮಗೆ ಅವರ ಅಪರೂಪದ ಮುಖವನ್ನು ಬಣ್ಣಿಸಿದ್ದಾರೆ.
  ಗೌರಿ ಪ್ರಸನ್ನ ಅವರದು ‘involved’ writing. ಭಟ್ಟರು ತಮ್ಮ ಕವನಗಳ ಮುಖೇನ ಹೇಗೆ ಅವರ ಜೀವನದ ವಿವಿಧ ಘಟ್ಟಗಳಲ್ಲಿ ಅವರ ಬದುಕಿನ ಭಾಗಗಳಲ್ಲಿ ವ್ಯಾಪಿಸಿಕೊಂಡಿದ್ದರೆಂಬುದನ್ನು ಆತ್ಮೀಯ ಬರಹದಲ್ಲಿ ತೋರಿದ್ದಲ್ಲದೆ, ಅವರು ಅನುವಾದಿಸಿದ ಶೇಕ್ಸ್ಪಿಯರ್ ನ ಸಾನೆಟ್ ೧೮ರ ಕನ್ನಡ ರೂಪವನ್ನು ಇಡಿಯಾಗಿ ಕೊಟ್ಟಿದ್ದಾರೆ. ಅದು ಹೇಗೆ ಎಲ್ಲ ೧೪ ಸಾಲು ಸಾಲಿಗೂ ಮೂಲದ ನೆರಳಾಗಿದ್ದರೂ ತನ್ನ ಭಾಷೆಯ ಹಿಡಿತದಲ್ಲಿ ಸ್ವತಂತ್ರ ಕವಿತೆಯೆನ್ನುವಂತೆ ನಿಂತಿದೆ ಎಂದು ತೋರಿಸಲು ಆಂಗ್ಲ ಮೂಲವನ್ನು ಕೆಳಗೆ ಕೊಡುವ ಪ್ರಯತ್ನ ಮಾಡಿದ್ದೇನೆ:
  ಶ್ರೀವತ್ಸ ದೇಸಾಯಿ

  Sonnet 18:
  Shall I compare thee to a summer’s day?
  Thou art more lovely and more temperate:
  Rough winds do shake the darling buds of May,
  And summer’s lease hath all too short a date;
  Sometime too hot the eye of heaven shines,
  And often is his gold complexion dimm’d;
  And every fair from fair sometime declines,
  By chance or nature’s changing course untrimm’d;
  But thy eternal summer shall not fade,
  Nor lose possession of that fair thou ow’st;
  Nor shall death brag thou wander’st in his shade,
  When in eternal lines to time thou grow’st:
  So long as men can breathe or eyes can see,
  So long lives this, and this gives life to thee.
  — William Shakespeare

  Like

 6. ಉಮಾ ಮತ್ತು ಗೌರಿಯವರ ಬರಹಗಳು ನಮ್ಮನ್ನು ಭಟ್ಟರ ಹತ್ತಿರ ತಂದು ನಿಲ್ಲಿಸಿವೆ. ಉಮಾ ಅವರು ಭಟ್ಟರನ್ನು ಭೇಟಿ ಮಾಡಿ ಮಾತಾಡಿದ್ದು, ಸಾಹಿತ್ಯ ಮತ್ತು ವಿಜ್ಞಾನದ ಬಗ್ಗೆ ಸಂಭಾಷಣೆ ನಡೆಸಿದ್ದು ತುಂಬ ಆತ್ಮೀಯವೆನಿಸುತ್ತದೆ‌.

  ಗೌರಿಯವರ ಬರಹ ಭಟ್ಟರ ಕಾವ್ಯ ಜೀವನದ ಪರಿಚಯವನ್ನು ಮಾಡಿಲೊಡುತ್ತದೆ‌. ಅವರ ಕಾವ್ಯಗಳಿಂದ ಎಷ್ಟು ಸುಂದರ ಸಾಲುಗಳನ್ನು ಹೆಕ್ಕಿ ನಮಗೆ ಉಣಬಡಿಸಿದ್ದೀರಿ.

  ಅವರ ಕೆಲವು ಭಾವಗೀತೆಗಳು ಯಾವಾಗಲೂ ಅಪ್ಯಾಯಮಯ. ಸಾನೆಟ್-ಗಳಿಗೆ ಸುನೀತಗಳು ಎಂದು ಕರೆದಿರಿವುದೇ ಎಷ್ಟು ಸುಂದರ! ಅವರು ಅನುವಾದಿಸಿರುವ ಸುನೀತಗಳು ಮತ್ತು ಏಟ್ಸ್ ಕವನಗಳು ಉತ್ಕೃಷ್ಟವಾಗಿವೆ.

  ಶರೀಫ ಸಾಹೇಬನನ್ನು ಕರ್ನಾಟಕಕ್ಕೆ ತಂದ ಕೀರ್ತಿ ಅವರಿಗೇ ಸಲ್ಲಬೇಕು. ಭಟ್ಟರು ಸಿ.ಅಶ್ವಥ್ ಅವರ ದುಂಬಾಲು ಬೀಳದಿದ್ದರೆ ಶರೀಫರ ಹಾಡುಗಳು ನನ್ನ ಹಿಂದಿನ ತಲೆಮಾರಿನ ಉತ್ತರ ಕರ್ನಾಟಕದ ಜನರೊಂದಿಗೇ ಸತ್ತುಹೋಗುತ್ತಿತ್ತು.

  ‘ಅನಿವಾಸಿ’ಯಿಂದ ಭಾವಪೂರ್ಣ ಶ್ರದ್ಧಾಂಜಲಿ.

  – ಕೇಶವ

  Liked by 1 person

 7. “ತಾಳಿದವರೇ ಗೆಲುವರು, ಆಳಗಳಿಗೆ ಇಳಿವರು, ನೋವು ಕಡೆದ ಮೆಟ್ಟಿಲೇರಿ, ಶಿಖರಗಳಲಿ ಹೊಳೆವರು”
  ……..ಎಂತ ಅದ್ಭುತ ನುಡಿಗಳು ! Reading this will make anyone think positive. Anivasi doing a great job. Thank you for the article Gowri Prasanna.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.