ಜಾಗತಿಕ ಪುರಂದರೋತ್ಸವ…ಒಂದು ಇಣುಕು ನೋಟ – ಶ್ರೀಮತಿ ಗೌರಿಪ್ರಸನ್ನ

ಜಾಗತಿಕ ಪುರಂದರ ಉತ್ಸವವನ್ನು ಈ ವರ್ಷ ೧೨ ದಿನಗಳ ಕಾಲ (ಫೆ ೨೨-ಮಾರ್ಚ್ ೫) ಆಚರಿಸಲಾಯಿತು. ಇಂದು ಈ ಕಾರ್ಯಕ್ರಮದ ೧೨ ನೆಯ ದಿನ. ದಾಸ ಸಾಹಿತ್ಯ ಮತ್ತು ಸಂಗೀತ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ. ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿರೂಪಿಸಿದ ಶ್ರೀಮತಿ ಗೌರಿಪ್ರಸನ್ನ ಈ ಕಾರ್ಯಕ್ರಮದ ಪಕ್ಷಿನೋಟವನ್ನು ಈ ಲೇಖನದಲ್ಲಿ ನಮ್ಮ ಮುಂದಿಟ್ಟಿದ್ದಾರೆ.

‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ಎಂದು ವರಕವಿ ಬೇಂದ್ರೆಯವರು ಹಾಡಿದಂತೆ ಕನ್ನಡ ಸಾಹಿತ್ಯದ ಐಸಿರಿ ರಸಿಕರ,ಭಾವುಕರ ಮೈಮರೆಸುವಂಥದ್ದು.ಕನ್ನಡ ಸಾಹಿತ್ಯ ನಡೆದು ಬಂದ ದಾರಿಯಲ್ಲಿ ದಾಸ ಸಾಹಿತ್ಯಕ್ಕೆ ತನ್ನದೇ ಆದ ಒಂದು ವಿಶಿಷ್ಟ ಹೆಜ್ಜೆ ಗುರುತಿದೆ. ದಾಸ ಸಾಹಿತ್ಯವು ಯಾವೊಂದು ವಗ೯ ಅಥವಾ ಮತಕ್ಕೆ ಸೀಮಿತವಾಗದೇ ಅಪಾರ ಜ್ಞಾನಕೋಶವನ್ನೂ, ಸಶಕ್ತ ಸಾಹಿತ್ಯ ಭಂಡಾರವನ್ನೂ, ಭಕ್ತಿ -ಭಾವ,ವೈರಾಗ್ಯಗಳನ್ನೂ, ಸಾಮಾಜಿಕ ಕಳಕಳಿ, ವಿಡಂಬನೆ, ಸಮಕಾಲೀನ ಪ್ರಜ್ಞೆ ಇತ್ಯಾದಿಗಳನ್ನೊಳಗೊಂಡ ಅಪೂವ೯ ಕಣಜ. ಜನಸಾಮಾನ್ಯರಿಗೂ ಅಥ೯ವಾಗುವಂಥ ಸುಲಭ ಸರಳ ಭಾಷೆಯಲ್ಲಿದ್ದು ಸುಮಾರು ಆರುನೂರು ವರುಷಗಳನಂತರವೂ ಇಂದಿಗೂ ಎಲ್ಲರ ನಾಲಗೆಯ ಮೇಲೆ ನಲಿದಾಡುವ ಸತ್ವ, ಪ್ರಸ್ತುತತೆಯನ್ನು ಉಳಿಸಿಕೊಂಡದ್ದು ಈ ದಾಸ ಸಾಹಿತ್ಯ.

ಅಂಥ ದಾಸವರೇಣ್ಯರಲ್ಲಿ ಅಗ್ರಗಣ್ಯರಾದವರು ಪುರಂದರ ದಾಸರು. ತಮ್ಮ ಗುರುದೇವನಿಂದಲೇ ‘ದಾಸರೆಂದರೆ ಪುರಂದರ
ದಾಸರಯ್ಯ’ ಎಂಬ ಹೆಗ್ಗಳಿಕೆ ಪಡೆದುಕೊಂಡವರು. ‘ಕನಾ೯ಟಕ ಸಂಗೀತದ ಪಿತಾಮಹ’ರಾದ ಇವರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಹಾಗೂ ‘ಲಂಬೋದರ ಲಕುಮಿಕರ’ ದೊಂದಿಗೇ ಸಂಗೀತಾಭ್ಯಾಸ ಆರಂಭವಾಗುವುದು ಇಂದಿಗೂ ರೂಢಿಯಲ್ಲಿದೆ.
ನವಕೋಟಿ ನಾರಾಯಣನಾಗಿ ಸಿರಿಸಂಪತ್ತು ತುಂಬಿ ತುಳುಕಾಡುತ್ತಿದ್ದರೂ ಒಂದಗಳನ್ನೂ ಹೆರವರಿಗೆ ನೀಡಲರಿಯದ ಜಿಪುಣಾಗ್ರೇಸರ ಶೀನಪ್ಪನಾಯಕ ಅದಾವುದೋ ಪುಣ್ಯ ಗಳಿಗೆಯಲ್ಲಿ ಐಹಿಕ ಭೋಗದ ನಶ್ವರತೆಯನ್ನರಿತು ಇದ್ದೆಲ್ಲ ಆಸ್ತಿಯ ಮೇಲೆ
ತುಳಸೀದಳವನ್ನಿಟ್ಟು’ಕೃಷ್ಣಾಪ೯ಣ’ ಎಂದವರೇ ಕಾಲಿಗೆ ಗೆಜ್ಜೆ ಕಟ್ಟಿ,ಗೋಪಾಳಬುಟ್ಟಿ,ತಂಬೂರಿ ಹಿಡಿದು ಹೊರಟೇ ಬಿಟ್ಟರು. ಮುಂದೆ ಕನ್ನಡನಾಡಿನ ಮಹಾನ್ ಸಾಮ್ರಾಟ್ ಕೃಷ್ಣದೇವರಾಯ ನೀಡ ಬಯಸಿದ ಪದವಿ-ಪುರಸ್ಕಾರಗಳನ್ನೆಲ್ಲ ತಿರಸ್ಕರಿಸಿ ‘ನಿಮ್ಮ ಭಾಗ್ಯ ದೊಡ್ಡದೋ ..ನಮ್ಮ ಭಾಗ್ಯ ದೊಡ್ಡದೋ’ ಎಂದು ಅರಸನಿಗೇ ಸವಾಲು ಹಾಕಿದವರು.
ತಮ್ಮ ಜೀವಮಾನದಲ್ಲಿ ಇಡಿಯ ದಕ್ಷಿಣ ಭಾರತವನ್ನೆಲ್ಲ ಸಂಚರಿಸಿದ ಇವರು ಸುಮಾರು ೪ ಲಕ್ಷ ೭೫ ಸಾವಿರ ಕೃತಿಗಳನ್ನು
ರಚಿಸಿದ್ದಾರೆಂಬ ಪ್ರತೀತಿಯಿದೆ. ಸಂಗೀತ-ಸಾಹಿತ್ಯ-ಅನುಭಾವಗಳ ಸಂಗಮವಾದ ಇಂಥ ದಾಸವಯ೯ರು ಇಡಿಯ ಕನ್ನಡನಾಡಿನ ಪುಣ್ಯ.

ಅಂಥ ಪುರಂದರದಾಸರ ಆರಾಧನೆಯು ಕಳೆದ ಫೆಬ್ರುವರಿ ೧೧, ೨೦೨೧ ರಂದು ಜರುಗಿತು. ಅದರ ಅಂಗವಾಗಿ ವಿದ್ವಾನ್ ಅರಳುಮಲ್ಲಿಗೆ ಪಾಥ೯ಸಾರಥಿಯವರ ಮಾಗ೯ದಶ೯ನದಲ್ಲಿ ಅಂತರಾಷ್ಟ್ರೀಯ ಕನ್ನಡ ಬಾನುಲಿ ರೇಡಿಯೊ ಗಿರಮಿಟ್,ಮೂಕಟ್ರಸ್ಟ್, ವಿವಿಡ್ಲಿಪಿ ಹಾಗೂ ಅರಳುಮಲ್ಲಿಗೆ ಫೌಂಡೇಶನ್ ಸಹಯೋಗದಲ್ಲಿ ‘ ಜಾಗತಿಕ ಪುರಂದರ ಉತ್ಸವ – ೨೦೨೧’ ಕಾಯ೯ಕ್ರಮ ಬಲು ಸಡಗರದಿಂದ ಫೆಬ್ರುವರಿ ೨೨ ರಂದು ಆರಂಭವಾಯಿತು. ಮಾಚ್೯ ೫ ರವರೆಗೆ (*ಈಗ ೬ನೆಯ ತಾರೀಖಿಗೆ ಮುಂದೂಡಲಾಗಿದೆ. -ಸಂ) ನಡೆಯಲಿರುವ ಈ ಕಾಯ೯ಕ್ರಮದ ಹೆಗ್ಗಳಿಕೆಯೆಂದರೆ ವಿಶ್ವದ ನಾನಾ ಮೂಲೆಗಳಿಂದ ನಾನಾ ವಿಖ್ಯಾತ ಕಲಾವಿದರು, ಮಕ್ಕಳು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ, ಶ್ರದ್ಧಾಭಕ್ತಿಗಳನ್ನು ತೋರುತ್ತಿರುವುದು. ಬೇರೆ ಬೇರೆ ಸಮಯ ವಲಯದಲ್ಲಿರುವ, ಬೇರೆ ಬೇರೆ ಖಂಡಗಳಲ್ಲಿರುವ ಕಲಾವಿದರನ್ನೆಲ್ಲ ಒಂದೇ ತತ್ವದಡಿ ಒಂದೇ ವೇದಿಕೆಯಲ್ಲಿ ಕಲೆಹಾಕಿರುವುದರ ಹಿಂದಿರುವ ಶ್ರಮ, ಸಂಘಟನಾ ಜವಾಬುದಾರಿಗಳಿಗೆ ಬೆಲೆ ಕಟ್ಟಲಾಗದು.ಭಾರತ, ಆಸ್ಟ್ರೇಲಿಯಾ , ಸಿಂಗಾಪುರ, ಯು.ಎಸ್.ಎ. ಮತ್ತು ಯು.ಕೆ.ಯ ಖ್ಯಾತ ಹಾಗೂ ಹವ್ಯಾಸಿ ಕಲಾವಿದರು ನಡೆಸಿಕೊಟ್ಟ ಕಾಯ೯ಕ್ರಮಗಳು ವಿಭಿನ್ನ ಮಾದರಿಯವು.

ಫೆಬ್ರವರಿ ೨೨ ರಂದು ಡಾ.ಅರಳುಮಲ್ಲಿಗೆಯವರ ವಿದ್ವತ್ಪೂರ್ಣ ಭಾಷಣದೊಂದಿಗೆ ಕಾಯ೯ಕ್ರಮವು ಉದ್ಘಾಟಿಸಲ್ಲಟ್ಟಿತು. ಹೆಸರಿಗೆ
ತಕ್ಕಂತೆ ಅರಳು ಮಲ್ಲಿಗೆಯವರ ಮಾತು ಮಲ್ಲಿಗೆ ಅರಳಿದಂತೆ..ಅರಳು ಸಿಡಿದಂತೆ. ಹಲವಾರು ದಶಕಗಳಿಂದ ಹರಿದಾಸ ಸಾಹಿತ್ಯದ
ಅಧ್ಯಯನ, ಸಂಶೋಧನೆ, ಗ್ರಂಥ ಸಂಪಾದನೆಯಂಥ ಕಾಯ೯ಗಳಲ್ಲಿ ತಮ್ಮನ್ನು ಸಂಪೂಣ೯ವಾಗಿ ತೊಡಗಿಸಿಕೊಂಡ
ಪಾಥ೯ಸಾರಥಿಯವರು ಈಗಷ್ಟೇ ಕೆಲಸಮಯದ ಹಿಂದೆ ‘ಹತ್ತುಸಾವಿರ ಹರಿದಾಸರ ಹಾಡುಗಳು’ ಎಂಬ ಸುಮಾರು ನಾಲ್ಕೂವರೆ
ಕೆ.ಜಿ. ತೂಕದ ಬೃಹತ್ ಪುಸ್ತಕವೊಂದನ್ನು ಹೊರತಂದಿದ್ದು ಅದಕ್ಕಾಗಿ ಕನಾ೯ಟಕದ ಹಳ್ಳಿ ಹಳ್ಳಿಗೂ ಅಲೆದು ಹಾಡುಗಳನ್ನು
ಸಂಗ್ರಹಿಸಿದ್ದಾರೆ.

ಅದಲ್ಲದೇ ‘ಪುರಂದರ ಸಂಪುಟ’ ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ. ಈ ಎರಡೂ ಪುಸ್ತಕಗಳ ಬಗ್ಗೆ ಅವುಗಳನ್ನಾಗಲೇ ಓದಲು ತೊಡಗಿದ ನಮ್ಮ ಅನಿವಾಸಿಯ ನಿಯಮಿತ ಓದುಗರೂ, ಬೆಂಬಲಿಗರೂ ಆದ ಶ್ರೀಮತಿ ಸರೋಜಿನಿ ಪಡಸಲಗಿಯವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. (ಕೆಳಗೆ ನೋಡಿರಿ).
ಅನಿವಾಸಿಯ ಹಿರಿಯ ಸದಸ್ಯರೊಬ್ಬರ ಆ ಪುಸ್ತಕದ ನಂಟಿನ ಅಚ್ಚರಿಯ ವಿಚಾರ ತಾವೂ ತಿಳಿಯಬಹುದು (ಕೊನೆಯ ಪ್ಯಾರಾಗ್ರಾಫ್).

ಫೆಬ್ರುವರಿ ೨೩ ರಂದು ಯು.ಎಸ್.ಎ.ದ ವ್ಯಾಸ ಭಜನಾ ಮಂಡಳಿಯಿಂದ ಸಂಗೀತಗೋಷ್ಟಿ, ಫೆ.೨೪ರಂದು ಖ್ಯಾತ ಸಂಗೀತ ನಿದೇ೯ಶಕಿ ಜಯಶ್ರೀ ಅರವಿಂದ ಅವರ ನಿರೂಪಣೆಯೊಂದಿಗೆ ರಕ್ಷಾ ಪ್ರಿಯರಾಮ್ ಅವರಿಂದ ಸಂಗೀತ ಸುಧೆ, ಫೆ. ೨೫ ರಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಅನಂತ ಭಾಗವತ್ ಅವರಿಂದ ಸಂಗೀತ ಸೇವೆ, ಫೆ.೨೬ ರಂದು ನಮ್ಮ ಅನಿವಾಸಿಯ ಶ್ರೀಮತಿ ಅಮಿತಾ ರವಿಕಿರಣ್ , ಶ್ರೀಮತಿ ಸುಮನಾ ಧ್ರುವ್ ಅವರೇ ಮೊದಲಾದ ಯು.ಕೆ. ಯ ಹಲವಾರು ಕಲಾವಿದರಿಂದ ‘ಪುರಂದರ ಗೀತ ನಮನ’ ಕಾಯ೯ಕ್ರಮಗಳು ತುಂಬ ಸುಂದರವಾಗಿ ಮೂಡಿಬಂದವು.( ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಯು.ಕೆ.ಯ ಕಾಯ೯ಕ್ರಮವನ್ನು ತಾವು ವೀಕ್ಷಿಸಬಹುದಾಗಿದೆ.).

ಒಟ್ಟಿನಲ್ಲಿ ಈ ಪುಸ್ತಕಗಳು ಸಂಗ್ರಹಯೋಗ್ಯವಾದ, ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬಹುದಾದ ಅತ್ಯುತ್ತಮ ಕಾಣಿಕೆಗಳೆನ್ನಲಡ್ಡಿಯಿಲ್ಲ.

ಫೆ.೨೭ರಂದು ದೇಶವಿದೇಶದ ಚಿಣ್ಣರಿಂದ ‘ಆದದ್ದೆಲ್ಲ ಒಳಿತೇ ಆಯಿತು’ ಎಂಬ ದಾಸರ ಜೀವನಾಧಾರಿತ ನಾಟಕ ಹಾಗೂ ದಾಸರ ಹಲವಾರು ರಚನೆಗಳ ಸುಂದರ ಪ್ರಸ್ತುತಿ ಜರುಗಿತು.ಫೆ.೨೮ರಂದು ವಿದುಷಿ ಪುಷ್ಪಾ ಜಗದೀಶ ಹಾಗೂ ಆಸ್ಟ್ರೇಲಿಯಾದ ಗಾಯಕಿಯರು ಪುರಂದರ ಸಂಗೀತ ಕಾಯ೯ಕ್ರಮ ನಡೆಸಿಕೊಟ್ಟರು.ಮಾಚ್೯ ೧ ರಂದು ಸಿಂಗಾಪುರದ ಡಾ.ಭಾಗ್ಯಮೂತಿ೯ ಹಾಗೂ ತಂಡದವರಿಂದ ಸಂಗೀತ ಕಾಯ೯ಕ್ರಮ , ಮಾಚ್೯ ೨ ರಂದು ಸುವಣ೯ ಮೋಹನ್ ಹಾಗೂ ತಂಡದವರಿಂದ, ಮಾಚ್೯ ೩ ರಂದು ಡಾ. ಅಚ೯ನಾ ಕುಲಕಣಿ೯ಯವರಿಂದ ಹಾಗೂ ಮಾಚ್೯ ೪ ರಂದು ಸಖಿ ವೃಂದ ತಂಡದಿಂದ ಪುರಂದರ ಸಂಗೀತ ಕಾಯ೯ಕ್ರಮ ನಡೆಯಿತು.ಇಂದು ಮಾಚ್೯ ೫ ರಂದು ಪಾಥ೯ಸಾರಥಿಯವರ ಉಪನ್ಯಾಸ ಹಾಗೂ ವಿಭಿನ್ನ ಸಂಗೀತ ನಾಟಕ ಪ್ರದಶ೯ನ ನಡೆಯಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ http://www.vividlipi.com/gpf ನ್ನು ನೋಡಬಹುದು.

ಒಟ್ಟಾರೆ ಕಾಯ೯ಕ್ರಮದಲ್ಲಿ ಹಲಕೆಲವು ಕುಂದು ಕೊರತೆಗಳಿರಬಹುದಾದರೂ ಕಾಯ೯ಕ್ರಮದ ಹಿಂದಿನ ಉದ್ದೇಶ್ಯ, ಪಟ್ಟ ಪರಿಶ್ರಮ ಶ್ಲಾಘನೀಯ. ಇದರ ರೂವಾರಿಯಾದ ಸತ್ಯಪ್ರಮೋದ ಲಕ್ಕುಂಡಿ ಹಲವಾರು ದೈಹಿಕ ತೊಂದರೆ, ಅನಾನುಕೂಲದ ಮಧ್ಯೆ, ನಿದ್ದೆಗೆಟ್ಟು,ಕೆಲಸಲ ಊಟಬಿಟ್ಟು ಕೆಲಸ ಮಾಡಿದ್ದಾರೆ. ಅವರ ಹುಚ್ಚಿಗೆ, ಕೆಚ್ಚಿಗೆ ನನ್ನ ಮೆಚ್ಚುಗೆಯಿದೆ. ರಾತ್ರಿ ೧೦ ಗಂಟೆಯ ಮೇಲೆ ಊಟ-ಕೆಲಸ ಮುಗಿಸಿ ಸೀರೆಯುಟ್ಟು ತಯಾರಾಗಿ ಮಧ್ಯರಾತ್ರಿಯವರೆಗೆ ರೆಕಾಡಿ೯೦ಗ್ ಮಾಡಿದ್ದು..ಹತ್ತುಸಲ ಚಿಕ್ಕಪುಟ್ಟ ತಪ್ಪುಗಳಾಗಿ ಇದಕ್ಕಿಂತ ನೂರು ಜನರ ಸಭೆಯಲ್ಲಿ ಮುಖಾಮುಖಿಯಾಗಿ ಮಾತಾಡುವುದೇ ಒಳ್ಳೆಯದೆನ್ನಿಸಿ ಕಿರಿಕಿರಿ ಮಾಡಿಕೊಂಡರೂ ಇದೊಂದು ಅನನ್ಯ ಅನುಭವವೆಂಬುದು ಸುಳ್ಳಲ್ಲ. ಸುಮನಾ ಧ್ರುವ್ ಅವರೂ ಅಷ್ಟೇ..’ ಅಯ್ಯೋ ಏನ ಕೇಳತೀರಾ? ಮಕ್ಕಳೆಲ್ಲ ಮಲಗಿದ ಮೇಲೆ ಸೀರೆ ಉಟಗೊಂಡು, ಸಿಂಗಾರ ಮಾಡಿಕೊಂಡು , ಅಲ್ಲೊಂಚೂರು ವಿಡಿಯೋ ಸರಿಬರಲಿಲ್ಲ, ಇಲ್ಲೊಂಚೂರು ರಾಗ ಸರಿಯಾಗಲಿಲ್ಲ ಅಂತ ಎಡಿಟ್ ಮಾಡಿ ಅಂತೂ ಮುಗಿಸಿದಾಗ ಬೆಳಗಿನ ೪:೩೦ ಗೌರಿಯವರೇ’ ..ಅಂತ ಹೇಳಿದಾಗ ನಗುವಿನ ಜೊತೆಗೇ ಪಾಪ ಅಂತಲೂ ಅನ್ನಿಸಿತ್ತು. ( sorry ಸುಮನಾ..ನಿಮ್ಮನ್ನು ಕೇಳದೇ ನಿಮ್ಮ ಮಾತು ಬರೆದುಬಿಟ್ಟೆ) ಬಹುಶ: ಈ ಕಾಯ೯ಕ್ರಮದ ಎಲ್ಲ ಕಲಾವಿದರದೂ ಇಂಥದೇ ಪರಿಶ್ರಮದ ಕಥೆಗಳಿದ್ದರೂ ಇರಬಹುದು. ಸಹೃದಯರಾದ ತಾವು ಕುಂದು ಕೊರತೆಗಳನ್ನು ಅವಗಾಣಿಸಿ ಕಾಯ೯ಕ್ರಮಕ್ಕೊಂದು ಮೆಚ್ಚುಗೆಯ ಮಾತಾಡಿದರೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮತ್ತೊಂದಿಲ್ಲ. ಅಂತೂ ಇದೊಂದು “ನ ಭೂತೋ ನ ಭವಿಷ್ಯತಿ” ಎನ್ನುವಂಥ ಕಾಯ೯ಕ್ರಮಗಳ ಸಾಲಿನಲ್ಲಿ ನಿಲ್ಲುವುದರಲ್ಲಿ ಯಾವ ಸಂಶಯವಿಲ್ಲ.

​–ಶ್ರೀಮತಿ ಗೌರಿಪ್ರಸನ್ನ

ಅನಿವಾಸಿ ಓದುಗರಾದ ಸರೋಜಿನಿ ಪಡಸಲಗಿಯವರು ದಾಸಸಾಹಿತ್ಯದ ತಮ್ಮ ಅನುಭವವನ್ನು ಈ ಕೆಳಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ:

ಅರಳು ಮಲ್ಲಿಗೆ ಪಾರ್ಥಸಾರಥಿಯವರ ಎರಡು ಬೃಹದ್ಗ್ರಂಥಗಳ ಬಗ್ಗೆ ಎರಡು ಮಾತು:

ಈ ವರ್ಷ ವಿವಿಡ್ಲಿಪಿ ಯವರು ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಸಾರಥ್ಯದಲ್ಲಿ ಆಚರಿಸಿದ , ಇನ್ನೂ ನಡೆದಿರುವ ಪುರಂದರದಾಸರ ಆರಾಧನೆ ಒಂದು ವಿಶೇಷ ಹಾಗೂ ವಿಶಿಷ್ಟ.ಅದಕ್ಕೆ ಅರಳು ಮಲ್ಲಿಗೆ ಪಾರ್ಥಸಾರಥಿ ಯವರ “ಹರಿದಾಸರ ಹತ್ತು ಸಾವಿರ ಹಾಡುಗಳು” ಹಾಗೂ ” ಪುರಂದರ ಮಹಾಸಂಪುಟ” ಎಂಬ ಎರಡು ಬ್ರಹದ್ಗೃಂಥಗಳ ಸ್ವರ್ಣ ಗರಿಯುಳ್ಳ ಕಿರೀಟ! ಅವರ ಅನಂತ, ಅನುಪಮ ಶ್ರದ್ಧೆ , ಸಾಧನೆಯ ಫಲ ಈ ಅಪ್ಪಟ ಚಿನ್ನವೇ ಎಂಬಂತಹ ಅಮೂಲ್ಯ ಕೃತಿಗಳು !ಹರಿದಾಸರ ಹತ್ತು ಸಾವಿರ ಹಾಡುಗಳು ಒಂದೇ ಕಡೆ ಸಿಗುವಂತಾದದ್ದು ನಮ್ಮ ಅಹೋಭಾಗ್ಯ! ಈ ಒಂದೊಂದು ಬೆಳಕಿನ ಕಿರಣಗಳ ಸಂಗ್ರಹಕಾರ್ಯ ಅರಳು ಮಲ್ಲಿಗೆ ಪಾರ್ಥಸಾರಥಿಯವರು ಹೇಗೆ ಮಾಡಿದರೆಂಬುದು ಊಹೆಗೂ ಮೀರಿದ್ದು, ಎಟುಕದ ವಿಷಯ.ಎಲ್ಲವೂ ಗ್ರಂಥಸ್ತವಾಗಿದ್ದಿಲ್ಲ ಎಂಬುದು ಗಮನಾರ್ಹ ಅಂಶ.
ಇನ್ನು “ಪುರಂದರ ಮಹಾಸಂಪುಟ”ವಂತೂ ಪುರಂದರದಾಸರ ಒಂದೊಂದು ವಿಶೇಷತೆಗಳ, ಪ್ರತಿ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿತೋರಿಸುವ , ಬೆಳಕು ಚೆಲ್ಲುವ ವೇದಸದೃಶ ಗ್ರಂಥ. ಪ್ರವಚನಕಾರರಿಗೆ, ಸಾಹಿತ್ಯಾಸಕ್ತರಿಗೆ ಮಹಾನಿಧಿ ಅದು.ಅದರಲ್ಲಿಯ  180 ನೇ ಪುಟದಲ್ಲಿರುವ ಒಂದು ವಿಶೇಷ ವಿಷಯ ಬಲು ಆಸಕ್ತಿ ಪೂರ್ಣ! ಪುರಂದರದಾಸರ ಬಗ್ಗೆ ಅಧಿಕೃತ ಮಾಹಿತಿಯ ,ಮೊದಲ ಐತಿಹಾಸಿಕ ಆಧಾರವಾದ ಮೊದಲ ಶಿಲಾಶಾಸನವನ್ನು ಕಮಲಾಪುರದಲ್ಲಿ ಸಂಶೋಧಿಸಿದ್ದು ಡಾ.ಪಾಂಡುರಂಗ ದೇಸಾಯಿಯವರು- ಶ್ರೀವತ್ಸ ದೇಸಾಯಿಯವರ ತಂದೆಯವರು !

ಜನ್ಮಾಂತರಗಳ  ಪುಣ್ಯದಿಂದ ದೊರಕಿದ ಅಮೂಲ್ಯ ಆಸ್ತಿ ಈ ಬೃಹದ್ಗ್ರಂಥಗಳು ಎಂಬುದು ಅನಂತ ಸತ್ಯ!

ಸರೋಜಿನಿ ಪಡಸಲಗಿ
03-03-2021

ಯು ಕೆ ತಂಡದವರು ೨೬ ಫೆಬ್ರುವರಿ, ೨೦೨೧ ರಂದು ಪ್ರಸ್ತುತ ಪಡಿಸಿದ ಪುರಂದರ ಸಂಗೀತ ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿಯನ್ನು ಒತ್ತಿರಿ.

6 thoughts on “ಜಾಗತಿಕ ಪುರಂದರೋತ್ಸವ…ಒಂದು ಇಣುಕು ನೋಟ – ಶ್ರೀಮತಿ ಗೌರಿಪ್ರಸನ್ನ

  1. GPF -Global Purandara Festival: ಈ ಕಾರ್ಯಕ್ರಮ ನಿಜವಾಗಿಯೂ ಒಂದು ಜಾಗತಿಕ ಕಾರ್ಯಕ್ರಮವಾಗಿತ್ತು.ನಾಲ್ಕೂ ಖಂಡಗಳಿಂದ ದಾಸವಾಣಿ ಆಸಕ್ತರು, ಪುರಂದರರ ಜೀವನದಿಂದ, ಸಾಹಿತ್ಯದಿಂದ ಸ್ಫೂರ್ತಿ ಪಡೆದ ನೂರಕ್ಕೂ ಹೆಚ್ಚು ಹಾಡುಗಾರರು, ನಟರು, ಎಲ್ಲರನ್ನೂ, ಕೂಡಿಸಿ, ಇದರಲ್ಲಿ ತೊಡಗಿಸಿ, ರೆಕಾರ್ಡ್ ಮಾಡಿ ಪ್ರಸಾರ ಮಾಡಿದ ವಿವಿಡ್ಲಿಪಿಯ ಸತ್ಯಪ್ರಮೋದ ಲಕ್ಕುಂಡಿಯವರನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ಕಾರ್ಯಕ್ರಮಕ್ಕೆ ಕಳಸಪ್ರಾಯವಾಗಿದ್ದ ಅರಳುಮಲ್ಲಿಗೆ ಪಾರ್ಥಸಾರಥಿಯವರ ಪ್ರಾಸ್ತಾವಿಕ ಭಾಷಣ ನನಗಂತೂ ಮೈನವಿರೇಳಿಸಿತು. ಹನ್ನೆರಡು ದಿನ (ಕೊನೆಗೆ ಹದಿಮೂರನೆಯದಕ್ಕೂ ಹರಡಿತು!) ಕಾತುರನಾಗಿ ನೋಡಿದೆ. ಎಲ್ಲವೂ A-1+ ಇರದಿದ್ದರೂ ಯಾವುದೂ ಕಳಪೆಯಾಗಿರಲಿಲ್ಲ. ಅದಕ್ಕೆ ಅದರ ಹಿಂದಿನ ದಾಸರ ಪ್ರೇರಣೆಯಿರಬೇಕು. ಅವೆಲ್ಲವುಗಳ ಸಾರ ಅತ್ಯಲ್ಪ ಸಮಯದಲ್ಲಿ ಬರೆದುಕೊಟ್ಟ ಗೌರಿ ಪ್ರಸನ್ನ ಅವರ ಲೇಖನದಲ್ಲಿದೆ. ಇನ್ನೂ ಹೆಚ್ಚು ಆಸ್ಥೆಯಿದ್ದವರು ಇಂಟರ್ನೆಟ್ ನಲ್ಲಿ VL FB ನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದು ಎಂದು ತಿಳಿದು ಬರುತ್ತದೆ.
    ಆ ಲೆಖನದ ಜೊತೆಗೆ ಅನಿವಾಸಿಯ ಕಾಯಂ ಓದುಗರಾದ ಸರೋಜಿನಿಯವರು ಆ ಹೊತ್ತಿಗೆಗಳು ಪ್ರಕಟವಾದ ಸ್ವಲ್ಪೇ ಸಮಯದಲ್ಲಿ ತಾವು ದೊರಕಿಸಿಕೊಂಡು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸೂಕ್ತ ಪರಿಚಯ ಬರೆದಿದ್ದಾರೆ. ಇದೂ ಸ್ವಾಗತಾರ್ಹ.

    Like

  2. ಈ ಸಲದ ಪುರಂದರದಾಸರ ಆರಾಧನೆ ನಿಜಕ್ಕೂ ಒಂದು ವೈಶಿಷ್ಟ್ಯ ಪೂರ್ಣ ಉತ್ಸವ.ವಿವಿಡ್ಲಿಪಿಯವರು ಹಮ್ಮಿಕೊಂಡಿದ್ದ ಜಾಗತಿಕ ಪುರಂದರೋತ್ಸವ ಹರಿದಾಸ ಸಾಹಿತ್ಯದ ಕ್ಷೇತ್ರದಲ್ಲಿ ಹೊಸ ಆಯಾಮ ರೂಪಿಸಿತು.ದಾಸ ಸಾಹಿತ್ಯಾಸಕ್ತರಿಗೆ,ಆರಾಧಕರಿಗೆ ಒಂದು ರಸದೌತಣ ,ಹಬ್ಬ! ವಿಶ್ವದಾದ್ಯಂತ ಹರಡಿದ ಕನ್ನಡಿಗರನ್ನು, ಕಲಾವಿದರನ್ನು ಕಲೆಹಾಕಿ ಕಲೆಯ ಹೊಳೆಯನ್ನೇ ಹರಿಸಿದ ಸತ್ಯಪ್ರಮೋದರ ಈ ಘನ್ನಕಾರ್ಯ ಸ್ತುತ್ಯ ಅಂದರೆ ಔಪಚಾರಿಕ ಆದೀತು. ಅವರಿಗೂ ಅವರೊಡನೆ ಶ್ರಮಿಸಿದ ಅವರ ತಂಡಕ್ಕೂ ಅನಂತ ನಮನಗಳು.ಗೌರಿಯವರ ಈ ಬರಹ ಅದನ್ನು ತುಂಬ ಚೊಕ್ಕವಾಗಿ ಸ್ಥೂಲವಾಗಿ ಹೇಳಿದ್ದು ಸುಂದರ.ಅದು ಅವರ ವಿಷಯ ಪ್ರೌಢಿಮೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.ಅಲ್ಲಲ್ಲಿ ಹುದುಗಿದ್ದ ಪ್ರತಿಭೆಗಳನ್ನೂ ಅನಾವರಣಗೊಳಿಸುವ ಈ ಕಾರ್ಯಕ್ರಮ ತುಂಬ ಚೆನ್ನಾಗಿ ಮೂಡಿ ಬಂತು.ದಿನಾಲೂ ಆ ವೇಳೆಗೆ ಸರಿಯಾಗಿ ಹಾಜರು ನಾನು.ಅದೊಂದು ನಿತ್ಯದ ರೂಢಿಯಾಗಿ, ಆ ಮೇಲೆ ಏನೋ ಕಳೆದುಕೊಂಡ ಭಾವ!
    ಅರಳು ಮಲ್ಲಿಗೆ ಪಾರ್ಥಸಾರಥಿಯವರ ಎರಡು ಬ್ರಹದ್ಗ್ರಂಥಗಳ ಬಗ್ಗೆ ಎರಡು ಮಾತು ಬರೆಯಲು ಅವಕಾಶ ನೀಡಿದ್ದಕ್ಕಾಗಿ ತುಂಬ ಧನ್ಯವಾದಗಳು! ನಿಜಕ್ಕೂ ಅವು ಅಮೂಲ್ಯ ಆಸ್ತಿ.ಹತ್ತುಸಾವಿರ ಹಾಡುಗಳನ್ನು ಹೇಗೆ ಕಲೆಹಾಕಿರಬಹುದು ಅಂತ ಊಹಿಸುವುದೂ ಕಷ್ಟ.ವಿಜಯದಾಸರ ಒಂದು ಹಾಡು – ಒಂದಾಲದೆಲೆಯ ಮೇಲೆ ಮಲಗಿದ ಗೋಪಾಲಕೃಷ್ಣ ನ್ನ ನೋಡಬನ್ನಿ- ನನಗೆ ಬೇಕಾಗಿತ್ತು ಈಗ ಸುಮಾರು ವರ್ಷಗಳ ಹಿಂದೆ.ಎಷ್ಟೋ ಪುಸ್ತಕ ಕಿತ್ತು ಹಾಕಿದೆ.ಧಾರವಾಡ ಪೂರ್ತಿ ಹುಡುಕಾಡಿದೆ.ಗೊತ್ತಿದ್ದವರಿಗೆಲ್ಲ ಫೋನಾಯಿಸಿದೆ.ಕೊನೆಗೆ ಧಾರವಾಡದ ತೇಜಸ್ವಿ ನಗರದ ಒಬ್ಬ ತೀರ ವಯಸ್ಸಾದ ಅಜ್ಜಿ ಹತ್ರ ಆ ಹಾಡು ಸಿಕ್ತು ನಂಗೆ. ಪರಿಸ್ಥಿತಿ ಹೀಗಿದ್ದಾಗ ಬರೆದಿಟ್ಟಿರದ ಹಾಡುಗಳನ್ನೂ ಹೇಗೆ ಸಂಗ್ರಹಿಸಿದರು ಎಂಬುದು ಊಹೆಗೂ ಮೀರಿದ್ದು.ಒಟ್ಟಲ್ಲಿ ಈ ಜಾಗತಿಕ ಪುರಂದರೋತ್ಸವ ಅನೇಕ ಹೊಸ ವಿಷಯ ಗಳ ತಿಳಿಸುತ್ತಾ ಅಭೂತಪೂರ್ವ ಸಾಧನೆ ಮಾಡಿದ್ದರಲ್ಲಿ ಎರಡು ಮಾತಿಲ್ಲ! ಇನ್ನೊಮ್ಮೆ, ಮತ್ತೊಮ್ಮೆ ಪ್ರಮೋದ ಹಾಗೂ ಅವರ ಜೊತೆ ಶ್ರಮಿಸಿದ,ಸಹಕರಿಸಿದ ಸರ್ವರಿಗೂ ಅನಂತ ಧನ್ಯವಾದಗಳು!
    ಸರೋಜಿನಿ ಪಡಸಲಗಿ

    Liked by 1 person

  3. ಜಾಗತಿಕ ಪುರಂದರೋತ್ಸವವನ್ನು ೧೨ ದಿನಗಳ ಕಾಲ ಪ್ರಪಂಚದ ಮೂಲೆ ಮೂಲೆಯಲ್ಲಿ‌ ಚೆಲ್ಲಿಹೋದ ಕನ್ನಡ ಸಂಗೀತಗಾರರನ್ನು, ನಾಟಕಕಾರರನ್ನು ನಮ್ಮ ನಮ್ಮ ಮನೆಯಲ್ಲೇ ಪುಗಸಟ್ಟೆಯಾಗಿ ತೋರಿಸಿದ ನಿಮ್ಮ ಈ ಸಾಧನೆಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

    ಎಲೆಮರೆಯ ಕಾಯಿಯಂತೆ ವನಸುಮದಂತೆ ನೀವು ಮತ್ತು ನಿಮ್ಮ ತಂಡ. ಆಡದಲೇ ಮಾಡುವವನು ರೂಢಿಯೊಳಗುತ್ತಮನು ಎನ್ನುವ ಮಾತಿಗೆ ವಿವಿಡ್ಲಿಪಿ ಮತ್ತು ಮೂಕ ಟ್ರಸ್ಟ್-ಗಳು ಸೇರುತ್ತವೆ. ಪ್ರಮೋದ ಅವರು ಮಾಡುವ ಕೆಲಸದಲ್ಲಿ ಎಷ್ಟೊಂದು ಆಳ ಅಗಲ. ಮಾತು ಕಡಿಮೆ ಕೆಲಸ ಜಾಸ್ತಿ.

    ನಾನು ಇನ್ನೂ ಎಲ್ಲ ಕಾರ್ಯಕ್ರಮಗಳನ್ನು ನೋಡಲಾಗಿಲ್ಲ. ಆದರೆ ೫೦% ಮುಗಿಸಿದ್ದೇನೆ. ಒಂದಕ್ಕಿಂತ ಒಂದು ಸುಂದರವಾಗಿ ಮೂಡಿಬಂದಿವೆ. ಇದೆಲ್ಲ ಎಷ್ಟು ತಿಂಗಳ ತಯಾರಿ?

    ಈ ಕಾರ್ಯಕ್ರಮದಲ್ಲಿ ಎಷ್ಟು ವೈವಿಧ್ಯಮಯವಾದ ಹಾಡುಗಳನ್ನು ಹಾಡುಗಳ‌ ಶೈಲಿಗಳನ್ನು ಕೇಳಲು ಸಿಕ್ಕಿತು!

    Liked by 1 person

  4. ಗೌರಿ,
    ನೀವು “ಕಾಯ೯ಕ್ರಮಕ್ಕೊಂದು ಮೆಚ್ಚುಗೆಯ ಮಾತಾಡಿದರೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮತ್ತೊಂದಿಲ್ಲ,” ಅಂದಿದ್ದೀರಿ. ಬರೀ ಒಂದು ಮೆಚ್ಚುಗೆಯ ಮಾತೇ??!! ಉಹುಂ, ಅದು ಸಾಲದು! ಜಾಗತಿಕ ಮಟ್ಟದಲ್ಲಿ, ಖಂಡಗಳ ನಡುವೆ ಸಂವಹನವನ್ನು ಏರ್ಪಡಿಸಿ, ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಕಲಾವಿದರನ್ನು ಒಪ್ಪಿಸಿ, ಹೊಂದಿಸಿ, ಕಾರ್ಯಕ್ರಮದ ರೂಪು-ಯೋಜನೆಗೆ ಎಲ್ಲರನ್ನೂ, ಎಲ್ಲವನ್ನೂ ಒಗ್ಗಿಸಿ ಈ ಉತ್ಕೃಷ್ಟ ಸಂಗೀತ ರಸಧಾರೆಯನ್ನು ಚಿಮ್ಮಿಸಿರುವುದು ಸುಲಭಸಾಧ್ಯದ ಮಾತೇ?! ನೀವೆಂದಂತೆ ಇಂದಿಗೂ ಗಣೇಶ ಹಬ್ಬದ ದಿನ “ಲಂಬೋದರ ಲಕುಮಿಕರ ಅಂಬಾಸುತ …” ಗೀತೆಯನ್ನು ನಾನು ಹಾಡದೆ ಇರಲಾರೆ. ಬಾಲ್ಯದಲ್ಲಿ ಕಲಿತ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನನಗೆ ಗೀತೆಗಳೇ ಹೆಚ್ಚು ಇಷ್ಟವಾಗಿತ್ತು. ಬಹುಶಃ ಅದಕ್ಕೆ ಕಾರಣ ಪುರಂದರರ ದಾಸ ಸಾಹಿತ್ಯವೇ ಇರಬಹುದು. ಅವರಿಗೆ ನಮೋ ನಮಃ! ಕಾರ್ಯಕ್ರಮದ ಹಿಂದೆ, ಮುಂದೆ ಇದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
    ವಿನತೆ ಶರ್ಮ

    Liked by 1 person

  5. ಕರ್ನಾಟಕಸಂಗೀತದ ಪಿತಾಮಹಾ ಪುರಂದರ ದಾಸರ ಹಾಡುಗಳನ್ನು ಬಾಲಕನಾಗಿ ರಾಮಕೃಷ್ಣ ಆಶ್ರಮದಲ್ಲಿ ಹಾಡುತ್ತ ಬೆಳೆದ ನನಗೆ
    “ಎನಗು ಆಣೆ ರಂಗ ನಿನಗೂ ಆಣೆ , ಬಿನ್ನಹಕೆ ಬಾಯಿಲ್ಲವಯ್ಯ” “ಈ ಪರಿಯ ಸೊಬಗಾವ ದೇವರಲ್ಲಿ ನಾ ಕಾಣೆ”
    ‘ಹುವ್ವ ತರುವರ ಮನೆಗೆ ಹುಲ್ಲ ತರುವ” ಬಹಳ ಇಷ್ಟವಾದ ಪದಗಳು. ಉಪಮೆಗಳನ್ನು ಬಳೆಸಿ ಭಕ್ತಿ ಪ್ರಧಾನವಾದ ಸರಳ ಸುಂದರ ಪದಗಳನ್ನು ದಾಸರು ನಮಗೆ ಒದಗಿಸಿದ್ದಾರೆ. ಮುಂದಕ್ಕೆ ಭೀಮಸೇನ ಜೋಶಿ, ಸಂಗೀತ ಕಟ್ಟಿ ಮತ್ತು ಇನ್ನು ಅನೇಕ ಗಾಯಕರು ಶಾಸ್ತ್ರೀಯ ಸಂಗೀತದ ನೆಲೆಯಲ್ಲಿ ದಾಸರ ಪದಗಳನ್ನು ಹಾಡಿ ಜನಪ್ರೀಯಗೊಳಿಸಿದ್ದಾರೆ. ಹರಿದಾಸರ ೧೦,೦೦೦ ಹಾಡುಗಳ ಸಂಗ್ರಹವನ್ನು ಪಾರ್ಥಸಾರಥಿಯವರು ಸಂಪಾದಿಸಿರುವುದು ಶ್ಲಾಘನೀಯ. ದಾಸರ ಬಗ್ಗೆ ಇಷ್ಟು ಹಿರಿದಾದ ಒಂದು ವರ್ಚುಯಲ್ ಉತ್ಸವ ವನ್ನು ಆಯೋಜಿಸಿದ ಪ್ರಮೋದ್ ಅವರಿಗೂ ಮತ್ತು ಯು.ಕೆ ಯಿಂದ ತಮ್ಮ ಕಾರ್ಯಕ್ರಮವನ್ನು ನೀಡಿದ ಅನಿವಾಸಿ ಮಹಿಳೆಯರಿಗೆ ಮತ್ತು ಕುಟುಂಬದವರಿಗೆ ಅಭಿನಂದನೆಗಳು

    Liked by 1 person

  6. ಗೌರಿ,
    ನೀವು “ಕಾಯ೯ಕ್ರಮಕ್ಕೊಂದು ಮೆಚ್ಚುಗೆಯ ಮಾತಾಡಿದರೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮತ್ತೊಂದಿಲ್ಲ,” ಅಂದಿದ್ದೀರಿ. ಬರೀ ಒಂದು ಮೆಚ್ಚುಗೆಯ ಮಾತೇ??!! ಉಹುಂ, ಅದು ಸಾಲದು! ಜಾಗತಿಕ ಮಟ್ಟದಲ್ಲಿ, ಖಂಡಗಳ ನಡುವೆ ಸಂವಹನವನ್ನು ಏರ್ಪಡಿಸಿ, ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಕಲಾವಿದರನ್ನು ಒಪ್ಪಿಸಿ, ಹೊಂದಿಸಿ, ಕಾರ್ಯಕ್ರಮದ ರೂಪು-ಯೋಜನೆಗೆ ಎಲ್ಲರನ್ನೂ, ಎಲ್ಲವನ್ನೂ ಒಗ್ಗಿಸಿ ಈ ಉತ್ಕೃಷ್ಟ ಸಂಗೀತ ರಸಧಾರೆಯನ್ನು ಚಿಮ್ಮಿಸಿರುವುದು ಸುಲಭಸಾಧ್ಯದ ಮಾತೇ?! ನೀವೆಂದಂತೆ ಇಂದಿಗೂ ಗಣೇಶ ಹಬ್ಬದ ದಿನ “ಲಂಬೋದರ ಲಕುಮಿಕರ ಅಂಬಾಸುತ …” ಗೀತೆಯನ್ನು ನಾನು ಹಾಡದೆ ಇರಲಾರೆ. ಬಾಲ್ಯದಲ್ಲಿ ಕಲಿತ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನನಗೆ ಗೀತೆಗಳೇ ಹೆಚ್ಚು ಇಷ್ಟವಾಗಿತ್ತು. ಬಹುಶಃ ಅದಕ್ಕೆ ಕಾರಣ ಪುರಂದರರ ದಾಸ ಸಾಹಿತ್ಯವೇ ಇರಬಹುದು. ಅವರಿಗೆ ನಮೋ ನಮಃ! ಕಾರ್ಯಕ್ರಮದ ಹಿಂದೆ, ಮುಂದೆ ಇದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
    ವಿನತೆ ಶರ್ಮ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.