ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಣಿ ಗೌಡ ಮತ್ತು ರಾಧಿಕಾ ಜೋಶಿ.

ನಮಸ್ಕಾರ. ಅಡುಗೆ – ಅಡುಗೆಮನೆ ಸರಣಿಯ ಮುಂದಿನ ಕಂತು ಇಲ್ಲಿದೆ. ಡಾ. ದಾಕ್ಷಾಯಣಿ ಗೌಡ ಅವರು ಬಿಸಿಬೇಳೆ ಭಾತಿನ ಮಸಾಲೆಯನ್ನು ಬಡಿಸಿದರೆ, ರಾಧಿಕಾ ಜೋಶಿಯವರು ಮಸಾಲೆಗಳ ಸುಂದರ ರಾಣಿಯ ಬಗ್ಗೆ ಬರೆಯುತ್ತಾರೆ. ಓದಿ ನೋಡಿ, ನಿಮ್ಮ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೀರೆಂದುಕೊಂಡಿದ್ದೇನೆ. ದಯವಿಟ್ಟು ನೀವೂ ನಿಮ್ಮ ಅನುಭವಗಳನ್ನು ಬರೆದು ಕಳುಹಿಸಿ.

ಈ ಸಂಚಿಕೆ ನನ್ನ ಸಂಪಾದಕೀಯದ ಕೊನೆಯ ಪ್ರಸ್ತುತಿ. ನನಗೆ ಈ ಅವಕಾಶ ಕೊಟ್ಟ ಅನಿವಾಸಿಯ ಪದಾಧಿಕಾರಿಗಳಿಗೆ ನನ್ನ ಅಭಿವಾದನಗಳು. ಕಳೆದ ಹೆಚ್ಚು-ಕಡಿಮೆ ಆರು ತಿಂಗಳ ಅವಧಿಯಲ್ಲಿ ಲೇಖನಗಳನ್ನು ಬರೆದುಕೊಟ್ಟವರಿಗೂ, ಕೇಳಿದಾಗೆಲ್ಲ ಸಹಾಯ ಮತ್ತು ಮಾರ್ಗದರ್ಶನ ಮಾಡಿದವರಿಗೂ ನಾನು ಆಭಾರಿ. ನನ್ನ ಕೈಯಿಂದ ಸಂಪಾದಕನ ದಂಡವನ್ನು (baton) ಇಸಿದುಕೊಂಡು ಈ ಬ್ಲಾಗಿನ ಚುಕ್ಕಾಣಿ ಹಿಡಿಯಲಿರುವವರು ಡಾ. ದಾಕ್ಷಾಯಣಿ ಗೌಡ. – ಎಲ್ಲೆನ್ ಗುಡೂರ್ (ಸಂ.)

*********************************************************************************************

ಹೊಸ ಬಿಸಿಯ ಬಿಸಿಬೇಳೆ ಭಾತು – ದಾಕ್ಷಾಯಣಿ ಗೌಡ

ನನ್ನ ಈ ಅಡಿಗೆಯ ಬರಹಕ್ಕೆ ಪೀಠಿಕೆಯ ಅಗತ್ಯವಿದೆ.

ನಮ್ಮ ಮದುವೆಯಾಗಿ ಕೆಲ ತಿಂಗಳ ನಂತರ,  ಮದುವೆ ಮಾಡಿದ ನಮ್ಮ ತಂದೆತಾಯಿಗಳಿಗೆ ನಮ್ಮಿಂದಾದ ಓಳ್ಳೆಯ ಉಡುಗೊರೆಯನ್ನು ಕೊಡಬೇಕೆಂದು ನಾವಿಬ್ಬರೂ ನಿರ್ಧರಿಸಿದವು.  ನಾವು ಕೊಡಿಟ್ಟಿದ್ದ ಸ್ವಲ್ಪ ಹಣದಲ್ಲಿ ಅವರಿಗೆ  ಕಾಶಿಯಾತ್ರೆ ಮಾಡಿಸುವುದೆನ್ನುವ ಯೋಜನೆಯನ್ನ ಹಾಕಿಕೊಂಡೆವು.  ಈಗ ಹಿಂತಿರುಗಿ ನೋಡಿದರೆ ಅವರಿಗೆ ಕಾಶಿಯಾತ್ರೆಯ ವಯಸ್ಸಾಗಿರಲಿಲ್ಲ.  ನಮ್ಮ ಅಮ್ಮಂದಿರಿಬ್ಬರಿಗೂ ಆಗ ೫೦ ವರ್ಷ ಮತ್ತು ಅಪ್ಪಂದಿರಿಬ್ಬರಿಗೂ ೬೦ಕ್ಕಿಂತ ಕಡಿಮೆ ವಯಸ್ಸು.

ನಮ್ಮ ಸಣ್ಣ ಉಳಿತಾಯದಲ್ಲಿ ಕಾಶಿಯ ಜೊತೆಗೆ, ಅವರನ್ನು ಉತ್ತರಭಾರತದ ಯಾತ್ರೆ (ಕಾಶಿ, ಹರಿದ್ವಾರ, ಡೆಲ್ಲಿ, ಜಯಪುರ, ಅಗ್ರಾ, ಮಥುರಾ) ಮಾಡಿಸುವುದೆಂದು ನಿರ್ಧರಿಸಿ, ಅವರೊಡನೆ ಹಂಚಿಕೊಂಡಾಗ, ಅವರೂ ಖುಷಿಯಾಗಿ ಹೊರಟೇಬಿಟ್ಟರು. ಈಗಿನ ಹಾಗೆ ಇಂಟರ್ನೆಟ್ ಇರಲಿಲ್ಲ,  ಟೂರ್ ಕಂಪನಿಗಳೂ ಬಹಳ ಕಡಿಮೆ ಇದ್ದವು.  ಕಂಪನಿಗಳು ಇದ್ದರೂ ನಾವು ಕೊಡಿಟ್ಟ ಹಣ ಅದಕ್ಕೆಲ್ಲ ಸಾಕಾಗುತ್ತಿರಲಿಲ್ಲ.  ಏನಿರದಿದ್ದರೂ ಆಗ ಭಂಡದೈರ್ಯಕ್ಕೆ ಕೊರತೆಯಿರಲಿಲ್ಲ ಎಂದು ಈಗ ಅರ್ಥವಾಗುತ್ತದೆ.

ರೈಲ್ವೆ ಟಿಕೆಟ್ ಮಾತ್ರ ಪ್ರಯಾಣಕ್ಕೆ ಮೊದಲೆ ಬುಕ್ ಮಾಡಿದ್ದೆವು.  ಈ ಪ್ರವಾಸಕ್ಕೆ ನನ್ನ ನಾದಿನಿ (ಪತಿಯ ಅಕ್ಕ) ತನ್ನ ೧೦ ಮತ್ತು ೧೨ ವರ್ಷದ ಮಕ್ಕಳ ಜೊತೆ ಬರುವುದಾಗಿ ಹೇಳಿದಾಗ ಸ್ವಲ್ಪ ಭಯವೇ ಆಯಿತು.  ಆಕೆಯ ಪತಿ ತನ್ನ ಕೆಲಸದ ಒತ್ತಡದ ಕಾರಣ ಬರುವುದಿಲ್ಲವೆಂದರು.  ನನ್ನ ನಾದಿನಿ ತನ್ನ ಖರ್ಚನ್ನು ತಾನೇ ಕೊಡುವುದಾಗಿ ಹೇಳಿದಾಗ ಬೇಡ ಎನ್ನುವಷ್ಟು ಹಣ ನಮ್ಮಲ್ಲಿರದುದರಿಂದ ಆಯಿತು ಎಂದು ಸಂಕೋಚಿಸದೆ ಒಪ್ಪಿಕೊ೦ಡೆವು.  ಇದು ೧೯೯೧ ನೇ ವರ್ಷ.  ನಮ್ಮ ಬಳಿ ಮೊಬೈಲ್ ಫೋನಿರಲಿ, ಮನೆಯಲ್ಲಿ ದೂರವಾಣಿ ಸಹ ಇರಲಿಲ್ಲ. ನಮ್ಮ ದೂರವಾಣಿಯ ಕೋರಿಕೆಯ ಪತ್ರದ ಜೊತೆಗೆ ಲಂಚದ ಹಣವನ್ನು ಲಗತ್ತಿಸಿರಲಿಲ್ಲದ ಕಾರಣ ಅದು, ಅಧಿಕಾರಿಗಳ ಮೇಜಿನಿಂದ ಮುಂದಕ್ಕೆ ಸರಿದಿರಲಿಲ್ಲ.

ರೈಲು ಸೋಮವಾರ ಸಾಯಂಕಾಲ ಡೆಲ್ಲಿಗೆ ಹೊರಡುವುದಿತ್ತು.  ಭಾನುವಾರ ಸಂಜೆ ಯಾವ ರೀತಿಯ ಕುರುಹು ಕೊಡದೆ, ನನ್ನ ಅತ್ತೆ, ಮಾವ, ನಾದಿನಿ, ಅವರ ಮಕ್ಕಳು ಮತ್ತು ನನ್ನ ಅಪ್ಪ, ಅಮ್ಮ ದಢೀರನೆ ಮನೆಗೆ ಬಂದಿಳಿದರು.  ಪ್ರತಿ ಭಾನುವಾರ ನಾವಿಬ್ಬರೂ ಹೋಟೆಲ್ಲಿನಲ್ಲಿ ಅಥವಾ ಸ್ನೇಹಿತರ ಮನೆಗಳಲ್ಲಿ ಊಟಮಾಡುವುದು ಆಗ ನಮ್ಮ ಪರಿಪಾಠವಾಗಿತ್ತು.  ಹಾಗಾಗಿ ಅಡಿಗೆ ಮಾಡುವ ಯಾವ ತಯಾರಿಯನ್ನು ನಾನು ಮಾಡಿರಲಿಲ್ಲ.  ಇವರುಗಳು ಸೋಮವಾರ ಮಧ್ಯಾಹ್ನ ಬರಬಹುದೆಂದು ನಮ್ಮ ಊಹೆಯಾಗಿತ್ತು.

ಮನೆಗಿಳಿದ ಜನರ ದಂಡನ್ನು ನೋಡಿ ನಾನು ಹೌಹಾರಿಬಿಟ್ಟೆ.  ನನ್ನ ಮೊದಲ ಚಿಂತೆ ಇಷ್ಟೊಂದು ಜನರಿಗೆ ರಾತ್ರಿಯ ಊಟಕ್ಕೆ ಹೇಗೆ ಅಡಿಗೆ ಮಾಡುವುದು ಎಂದು. ಹೋಟೆಲಿಗೆ ಹೋಗೋಣ ಎಂದು ಹೇಳುವ ಧೈರ್ಯ ನಮ್ಮಿಬ್ಬರಿಗೂ ಬರಲಿಲ್ಲ.   ನನ್ನ ಮುಖ ನೋಡಿದ ನನ್ನ ನಾದಿನಿ ”ದಾಕ್ಷಾಯಿಣಿ ಯೋಚನೆ ಮಾಡಬೇಡ, ರಾತ್ರಿ ಅಡಿಗೆ ನಾನು ಮಾಡುತ್ತೇನೆ” ಎಂದಾಗ ನನ್ನ ಮುಖ ಅರಳಿತು ಮತ್ತು ಆಕೆ ”ಬಿಸಿಬೇಳೆ ಭಾತ್ ಮಾಡುತ್ತೇನೆ” ಅಂದಾಗ ಮನಸ್ಸೂ ಅರಳಿಬಿಟ್ಟಿತು.  ನನ್ನ ನಾದಿನಿ ಅಂದು ಮತ್ತು ಇಂದಿಗೂ ಬಹುರುಚಿಯ ಬಿ.ಬೇ.ಭಾ. (ಬಿಸಿಬೇಳೆಭಾತ್ ) ಮಾಡುವುದರಲ್ಲಿ ನಿಪುಣಿ.

ನಾದಿನಿ ಕೊಟ್ಟ ತರಕಾರಿಯ ಲಿಸ್ಟ್ ಹಿಡಿದು ಸ್ಕೂಟರ್ ಹತ್ತಿ ವ್ಯಾಪಾರ ಮಾಡಿಕೊಂಡು ಬಂದಾಯಿತು.  ಆಕೆ ’ಕಾರದ ಪುಡಿ’ ಕೊಡು ಅಂದಾಗಲೆ ನಮ್ಮ ಮನೆಯಲ್ಲಿ ಅದು ಮುಗಿದಿದೆ ಎನ್ನುವ ನೆನಪು ನನಗೆ ಬಂದದ್ದು.  ಹಸಿಮೆಣಸಿನಕಾಯಿಯೂ ಮನೆಯಲ್ಲಿರಲಿಲ್ಲ.  ಕಾರಕ್ಕೆ ಏನು ಮಾಡುವುದೆಂದು ಚಿಂತಿಸುತ್ತಿರುವಾಗ, ನಮ್ಮ ಅಪಾರ್ಟ್ಮೆಂಟ್ ಕೆಳಗೆ ಯಾವಾಗಲೋ ನೋಡಿದ್ದ ಮೆಣಸಿನಕಾಯಿಯ ಗಿಡ ನನ್ನ ನೆನಪಿಗೆ ಬಂತು.  ನಾದಿನಿ ಹೇಳಿದ ಹಾಗೆ ಕೆಂಪಗಿರುವ ೬-೮ ಮೆಣಸಿನಕಾಯಿ ಕಿತ್ತು ತಂದಾಗ ಸಮಯಕ್ಕೆ ಸರಿಯಾಗಿ ಯೋಚಿಸಿದ ಬಗ್ಗೆ, ನನ್ನ ಬೆನ್ನು ನಾನೆ ತಟ್ಟಿಕೊಂಡಿದ್ದಾಯಿತು.

ಅಂತೂ, ಇಂತೂ ಭಾತು ತಯಾರಾಯಿತು.  ನಮ್ಮ ಮನೆಯಲ್ಲಿದ್ದ ಬೇರೆ ಬೇರೆ ಸೈಜಿನ ತಟ್ಟೆ-ಲೋಟಗಳೊಂದಿಗೆ, ಹಸಿದ ಹೊಟ್ಟೆಯೊಂದಿಗೆ, ನಾವೆಲ್ಲ ಚಾಪೆಯ ಮೇಲೆ ಕಾತುರದಿಂದ ಕುಳಿತಾಯಿತು.  ಘಮಘಮವೆನ್ನುವ ಭಾತು ತಟ್ಟೆಗೆ ಬಿತ್ತು.  ಬಾಯಿಗಿಟ್ಟಿದ್ದೇ ತಡ ಎಲ್ಲರ ಕೈಗಳು ನೀರಿನ ಕಡೆಗೆ.  ಕಣ್ಣಿನಲ್ಲಿ ನೀರು, ಮಾತನಾಡಲು ಬಾಯಿ ತೆರೆದರೆ ಕೆಮ್ಮು.  ನೀರು ಕುಡಿದು, ಹೊಟ್ಟೆಯ ಕರೆ ತಡೆಯಲಾಗದೆ ಮತ್ತೊಂದು ತುತ್ತು ಬಾಯಿಗಿಟ್ಟಾಗ ನೀರಿನ ಬದಲು ಸಕ್ಕರೆ ಡಬ್ಬಕ್ಕೆ ಕೈ ಹಾಕುವ ಹಾಗಾಯಿತು.  ಮಾಡಿದ್ದೆಲ್ಲ ಚೆಲ್ಲಿ ಮರುದಿನ ಪ್ರಯಾಣಕ್ಕೆಂದು ತಂದಿದ್ದ ಬಿಸ್ಕತ್ತು, ಬಾಳೆಹಣ್ಣುಗಳಲ್ಲಿ ಹೊಟ್ಟೆ ತುಂಬಿಸಿಕೊಂಡಿದ್ದಾಯಿತು.

ಈಗಲೂ ಆ ಚಿಕ್ಕ ಮೆಣಸಿನಕಾಯಿಗಳನ್ನು ನೋಡಿದಾಗ ಹೊಟ್ಟೆಯಲ್ಲಿ ಅಸಿಡ್ ತಂತಾನೆ ಸ್ರವಿಸುತ್ತದೆ.  ”ಇದು ಜೀರಿಗೆ ಮೆಣಸಿನಕಾಯಿ ಅಂಥಾ ಕಾರವಿರುವುದಿಲ್ಲ” ಅಂತೆಲ್ಲ ಯಾರು ಹೇಳಿದರೂ ಅದರ ಕಡೆ ತಿರುಗಿ ನೋಡಲೂ ನನಗೆ ಭಯ.

ಕೇಳಿದವರು ಅತ್ತೆ, ಮಾವ ಮತ್ತು ಅಮ್ಮ, ಅಪ್ಪನನ್ನು ಜೊತೆಗೂಡಿಸಿ (ಬೀಗರ ಗುಂಪು ಸರಿಯಾದ ಜೊತೆಯಲ್ಲವೆಂದು ಜನ ಹೇಳುತ್ತಾರೆ) ಯಾತ್ರೆ ಮಾಡಿಸಿದ ಸಾಹಸ ನಮ್ಮದೆಂದು ಹೊಗಳುತ್ತಾರೆ.  ಎರಡು ವಾರ ಯಾವ ಅನುಭವವೂ, ಅನುಕೂಲವೂ ಇಲ್ಲದೆ, ನಮ್ಮ ಉಳಿತಾಯದಲ್ಲಿ, ಮದುವೆಯಾದ ಮೊದಲ ವರ್ಷದಲ್ಲೇ, ನಮ್ಮಿಬ್ಬರ ಪೋಷಕರನ್ನು ಉತ್ತರಭಾರತದ ಯಾತ್ರೆ ಮಾಡಿಸಿದ ಹೆಮ್ಮೆ ನಮ್ಮಿಬ್ಬರಿಗೆ ಇಂದಿಗೂ ಇದೆ.  ಇದೆಲ್ಲದರ ಜೊತೆಗೆ ಸಣ್ಣ ಮೆಣಸಿನಕಾಯಿಯ ಭಯವೂ ಬೇರುಬಿಟ್ಟಿದೆ.  ವರ್ಷಕ್ಕೊಮ್ಮೆ ತಪ್ಪದೇ ನಾದಿನಿಯ ಮನೆಯಲ್ಲಿ ಬಿ.ಬೇ.ಭಾ ತಿಂದಾಗೆಲ್ಲ ಇದು ನೆನಪಿಗೆ ಬರುತ್ತದೆ.

– ಡಾ. ದಾಕ್ಷಾಯಿಣಿ ಗೌಡ.

******************************************************************************************

ಸ್ವರ್ಗದ ಸೌಗಂಧಿಕಾ ಪುಷ್ಪ – ರಾಧಿಕಾ ಜೋಶಿ

ಇದು ನೋಡಲು ನಮ್ಮ ಹಿತ್ತಲಿನ ಕೈತೋಟದಲ್ಲಿ ಅನಾಯಾಸವಾಗಿ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಚಿಗುರುವ ನೇರಳೆ ಕ್ರೋಕಸ್ ಹೂವಿನಂತೆ ಕಾಣುತ್ತದೆ. ವರ್ಷದ ಕೇವಲ ೨ ವಾರಗಳಲ್ಲಿ ಕಾಶ್ಮೀರದ ಪರ್ವತ ಶ್ರೇಣಿಗಳ ನಡುವೆ ಹರಡಿದ ಫಲವತ್ತಾದ ಅತಿ ವಿಸ್ತಾರವಾದ ಜಮೀನಿನಲ್ಲಿ ಬೆಳೆಯುವುದು ಅತ್ಯದ್ಭುತವಾದ “ಕೆಂಪು ಬಂಗಾರ”. ಹಿಮಾಲಯದ ಗರ್ಭದಿಂದ  ಹೊರಹೊಮ್ಮುವ ನೇರಳೆ ಬಣ್ಣದ ಹೊದಿಕೆ ಹೊತ್ತ ಈ ಸುಂದರ ಹೂವಿನ ರತ್ನಗಂಬಳಿ “ಕೇಸರಿ”. ವಿಶ್ವದ ಅತ್ಯಂತ ಬೆಲೆಬಾಳುವ ಹಾಗು ಕೆಲವೇ ಪ್ರದೇಶದಲ್ಲಿ ಬೆಳೆಯುವ ಈ ಮಸಾಲೆ ಪದಾರ್ಥ ನೋಡಲು ಎಷ್ಟು ಮನೋಹರ ಅಷ್ಟೇ ಶೇಷ್ಠ ಹಾಗು ಉನ್ನತ. ಮೂಲತಃ ಇದು ಭಾರತ ದೇಶದ ಬೆಳೆಯಲ್ಲ. ಪರ್ಷಿಯಾ ,ಅಫ್ಘಾನ್ ಇಂದ ಬಂದಿರಬಹುದೆಂಬ ವಿಭಿನ್ನ ಕಥೆಗಳಿವೆ. ಹನ್ನೆರಡನೆಯ ಶತಮಾನದಲ್ಲಿ ಕೇಸರಿ ಗಡ್ಡೆಗಳನ್ನು ಸ್ಥಳೀಯ ಮುಖ್ಯಸ್ಥರಿಗೆ ಸೂಫಿ ಸಂತರಾದ ಖವಾಜಾ ಮಸೂದ್ ವಾಲಿ ಮತ್ತು ಶೇಖ್ ಷರೀಫ್-ಯು-ದಿನ್ ಉಡುಗೊರೆಯಾಗಿ ನೀಡಿದರು ಅನ್ನುವುದು ಒಂದು ಕಥೆಯಾದರೆ, ಪರ್ಷಿಯನ್ನರಿಂದ ಹಿಡಿದು ಹಿಂದೂ ತಾಂತ್ರಿಕ ರಾಜರವರೆಗೆ, ಪ್ರತಿಯೊಬ್ಬರಿಗೂ ಕೇಸರಿಯು ಕಣಿವೆಯವರೆಗೆ ಕೊಟ್ಟ ವರವೆಂದು ನಂಬುತ್ತಾರೆ. ಕೇಶರಕ್ಕೆ ಗುಣಗಳ ತಕ್ಕಂತೆ ಹಲವಾರು ಹೆಸರು: ಜಾಫ್ರಾನ್, ಕೇಸರ್, ಕಾಂಗ್ ಪೋಶ್ ಮತ್ತು ಕುಂಕುಮ ಅನ್ನುವುದು ಜನಪ್ರಿಯ. ಕಾಶ್ಮೀರದಲ್ಲಿ ಶರತ್ಕಾಲ ಮುಗಿಯಲು ಪ್ರಾರಂಭಿಸಿದಾಗ ಕಾಶ್ಮೀರಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗಳಲ್ಲಿ ಕಾಣುತ್ತಾರೆ. ಅವರು ಕೇಸರಿ ಕ್ರೋಕಸ್ ಎಂಬ ಸೂಕ್ಷ್ಮ ನೇರಳೆ ಹೂವನ್ನು ಆರಿಸಿಕೊಳ್ಳುವಾಗ ತಮ್ಮ ಬೆತ್ತದ ಬುಟ್ಟಿಗಳೊಂದಿಗೆ ಅವುಗಳನ್ನು ಬಾಚಿಕೊಳ್ಳುವ ದೃಶ್ಯ ಸುಂದರ. ಪಾರಿಜಾತದಂತೆ ಇರುವ ಈ ಸ್ವರ್ಗೀಯ ಗುಲಾಬಿ ನೇರಳೆ ಹೂವನ್ನು ಸೂಕ್ಷ್ಮವಾಗಿ ಆರಿಸಿಕೊಳ್ಳುವ ಈ ನೋಟ ಹಾಗು ಸ್ಪರ್ಶ ಒಂದು ಆಧ್ಯಾತ್ಮಿಕ ಅಭೌತಿಕ ಅನುಭವವೇ ಸರಿ! ಕೇಸರಿ ಹೂವಿನ ದಳಗಳನ್ನು ಸಾಮಾನ್ಯವಾಗಿ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಕೆಂಪು ಎಳೆಗಳ ಮಧ್ಯದಲ್ಲಿ ಇರುವುದೇ ಶುದ್ಧ ಕೇಸರಿ. ಪ್ರತಿಯೊಂದು ಹೂವು ಕೇವಲ ಮೂರು ಎಳೆಗಳನ್ನು ಉತ್ಪಾದಿಸುತ್ತದೆ. ಅಂತಹ ಸುಮಾರು 350 ಕೆಂಪು ಎಳೆಗಳಿಂದ ಒಂದು ಗ್ರಾಂ ಕೇಸರಿ ತಯಾರಾಗುತ್ತದೆ. ಇದನ್ನು ಎಲ್ಲಾ ರೀತಿಯ ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಹಾಲಿನಲ್ಲಿರುವ ಕೇಸರಿ ಎಳೆಯು ಹಿಮಾಲಯದ ಕಣಿವೆಯ ಸೂರ್ಯೋದಯವನ್ನು ನೆನಪಿಸುತ್ತದೆ. ಕೆಂಪು, ಕಿತ್ತಳೆ ಮತ್ತು ಚಿನ್ನದ ಬಣ್ಣಗಳು ಅತ್ಯಂತ ನಯಮನೋಹರವಾದ ಮುಂಜಾವಿನ ಆಕಾಶವನ್ನು ಹೋಲುತ್ತದೆ. ಅಪರೂಪದ ಮಸಾಲೆ, ಇದು ಭಾರತೀಯ ಪಾಕಪದ್ಧತಿಯ ಆತ್ಮದ ಅತ್ಯಂತ ಅಮೂಲ್ಯವಾದ ಅಂಶ. ಹಾಲು, ಚಹಾ, ಅನ್ನದ (ಬಿರಿಯಾನಿ, ಪುಲಾವ್) ವೈವಿಧ್ಯಗಳು ಮತ್ತು ಇತರ ಭಕ್ಷ್ಯಗಳಲ್ಲಿ ಹಲವಾರು ಸಿಹಿತಿಂಡಿಗಳ ರುಚಿಯನ್ನು ಅಮರಗೊಳಿಸಲು ಕೇಸರಿಯ ಬಳಕೆಯಾಗುತ್ತದೆ.

ಈ ಕೆಂಪು ಕಾಂಚಾಣದ ಉತ್ಪಾದನೆಯು ವೇಗವಾಗಿ ಕುಸಿಯುತ್ತಿದೆ. ನಾವೀನ್ಯತೆಯತ್ತ ಕೆಲವು ಹೆಜ್ಜೆಗಳ ಹೊರತಾಗಿಯೂ, ಈ ದೇಶೀಯ ಉದ್ಯಮವು ಹೆಣಗಾಡುತ್ತದೆ. ಕೇಸರಿಯ ಅಭಾವದ ಕಾರಣ ಮೂಲ ಕೇಸರಿಯು ಈಗ ರಾಸಾಯನಿಕ ಪದಾರ್ಥಗಳಿಂದ ಬೆರೆತು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಕೇಸರಿಯ ದೈವಿಕ ಸುಗಂಧವು ಈ ಗಡಿ ಸಮಸ್ಯೆಯ ಹೋರಾಟದ ತೀಕ್ಷ್ಣ ವಾಸನೆಯೊಂದಿಗೆ ಬೆರೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಪಾಕಶಾಸ್ತ್ರ ಮತ್ತು ನೈಸರ್ಗಿಕ ಪರಂಪರೆಯು ಪುನರ್ಕಲಿಕೆಗೆ ಕಾಯುತ್ತಿದೆ.

– ರಾಧಿಕಾ ಜೋಶಿ.

******************************************************************************************

2 thoughts on “ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಣಿ ಗೌಡ ಮತ್ತು ರಾಧಿಕಾ ಜೋಶಿ.

  1. ದಾಕ್ಷಾಯಣಿ ಅವರ ಬಿಸಿಬೇಳೆಬಾತಿನ ತಯಾರಿಕೆಯ ಕ್ಲೈಮ್ಯಾಕ್ಸ್ ನಿಜಕ್ಕೂ ರೋಚಕವಾಗಿದೆ. ಮೆಣಸಿಕಾಯಿಯ ಒಳಹೊಕ್ಕು ನೋಡಲು ಸಾಧ್ಯವೇ? ಅದರ ಖಾರದ ತೀಕ್ಷ್ಣತೆ ತಿಳಿಯದೆ ಆಗುವ ಆಭಾಸವನ್ನು ದಾಕ್ಷಾಯಣಿ ಅವರ ಲೇಖನದಲ್ಲಿ ಕಾಣಬಹುದು. ಲೇಖನ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
    ರಾಧಿಕಾ ಅವರು ಕೇಸರಿ ಬಗ್ಗೆ ಬಹಳ ಮಾಹಿತಿಪೂರ್ಣ ಲೇಖನ ಬರೆದಿದ್ದಾರೆ. ಕೆಂಪು-ಚಿನ್ನವೆಂದು ಹೆಸರಾದ ಈ ಅಮೂಲ್ಯ ಗಿಡದ ಮೂಲ ಇಂದಿನ ಇರಾನ್ ದೇಶ. ಇರಾನ್ ೭೦ರ ದಶಕದಲ್ಲಿ ಅಮೆರಿಕೆಯ ಜೊತೆ ತನ್ನ ಸಂಬಂಧ ಹಳಸಿಕೊಂಡಾಗ, ಇರಾನಿನ ಜೊತೆಗೆ ಎಲ್ಲ ರೀತಿಯ ವ್ಯಾಪಾರವು ಕಡಿದು ಹೋಯಿತು. ಆಗ ಇರಾನ್ ತನ್ನ ಕೇಸರಿ ಬೆಳೆಯ ಉತ್ಪಾದನೆಯನ್ನು , ಸ್ಪೇನ್ ದೇಶಕ್ಕೆ ರಫ್ತು ಮಾಡಲಾರಂಭಿಸಿತು. ಈಗಲೂ ಸ್ಪೇನಿನಲ್ಲಿ ಸಿಗುವ ಮತ್ತು ಅಲ್ಲಿಂದ ಬರುವ ಕೇಸರಿ, ಮೂಲತಃ ಇರಾನ್ ದೇಶದ್ದು. ಕೇಸರಿಯ ಮಹತ್ವ ಬಲ್ಲವರೆಲ್ಲ ಅದರ ಸುಗಂಧಕ್ಕೆ ಮಾರುಹೋದವರೇ. ಕೇಸರಿಭಾತ್, ಶರಬತ್, ಇತರ ಸಿಹಿಖಾದ್ಯಗಳ ರುಚಿಗೆ ತನ್ನ ಸ್ವಾದವನ್ನು ಸೇರಿಸುವ ಕೇಸರಿಯ ಮಹಿಮೆ ನಿಜಕ್ಕೂ ತಲೆದೂಗುವಂತಹದೇ! ಆದರೆ ಮಾರುಕಟ್ಟೆಯಲ್ಲಿ ಇದಕ್ಕೆ ಕಲಬೆರಕೆ ಮಾಡಿ ಮಾರುವ ಜನರಿದ್ದಾರೆ. ಕುದುರೆಯ ಕೂದಲು, ಮೆಕ್ಕೆಜೋಳದ ಹೂವಿನ ಕೇಸರದ ಎಳೆಗಳನ್ನು ಬಣ್ಣ ಹಚ್ಚಿ , ಮಾರುಕಟ್ಟೆಯಲ್ಲಿ ಮಾರುವ ಕಳ್ಳವ್ಯಾಪಾರಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
    ಉಮಾ ವೆಂಕಟೇಶ್

    Like

  2. ದಾಕ್ಷಾಯಿಣಿಯವರ ಅನುಭವ ಅನನ್ಯ. ಬಿಸಿಬೇಳೆ ಭಾತ್ ನನ್ನ ಅಚ್ಚುಮೆಚ್ಚಿನ ಅನ್ನ.

    ರಾಧಿಕಾ ಅವರ ಕೇಸರಿ ಲೇಖನ ಓದುತ್ತ ಕೇಸರಿಭಾತ್ ತಿಂದಷ್ಟೇ ಖುಶಿಯಾಯಿತು. ಇರಾನಿಗಳು ಕೇಸರನ್ನು ತುಂಬ ಉಪಯೋಗಿಸುತ್ತಾರೆ ಎಂದು ಕೇಳಿದ್ದೇನೆ.

    – ಕೇಶವ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.