ನಾವು ಏರುವ ದುರ್ಗ – ಡಾ. ಮೈ. ಶ್ರೀ. ನಟರಾಜ್

ಜನವರಿ 20, 2021ರ ಬೈಡನ್ – ಹ್ಯಾರಿಸ್ ವಚನ ಸ್ವೀಕಾರದ ಸಂದರ್ಭದಲ್ಲಿ ಕಪ್ಪು ತರುಣಿ ಕವಯಿತ್ರಿ ಅಮಾಂಡ ಗೋರ್ಮನ್ ಓದಿದ ಕವಿತೆಯ ಕನ್ನಡ ಭಾವಾನುವಾದ: ಡಾ. ಮೈ. ಶ್ರೀ. ನಟರಾಜ.

ಇಂಗ್ಲಿಷ್ ಮೂಲ ಇಲ್ಲಿದೆ: ಅಮಾಂಡ ಗೋರ್ಮನ್ ಓದಿದ ಕವನ.

 ಬೆಳಗಾಗ, ನಮ್ಮ ನಿತ್ಯದ ಸ್ವಗತ
 ’ಮುಗಿಯದ ಕತ್ತಲಲಿ
 ಬೆಳಕನೆಂತು ಕಂಡೇವು?’ 
 ‘ನಷ್ಟದ ಭಾರವನು ಹೇಗೆ ಹೊತ್ತೇವು?’
 ‘ಸಾಗರವ ಸೀಳಿ ಎಂತು ನಡೆದೇವು?’
 ಹೆಬ್ಬುಲಿಯ ತಬ್ಬಿ ಧೈರ್ಯದಲಿ ನಿಂದೇವು?
  
 ‘ನಿಶ್ಶಬ್ದವೆಂದರೆ ಶಾಂತಿ ಎಂದೇನಲ್ಲ’
 ಎಂಬುದನರಿತೆವು.
 ‘ಆದದ್ದೆಲ್ಲ ನ್ಯಾಯವಲ್ಲ’
 ‘ರೂಢಿಯೆಂದ ಮಾತ್ರಕ್ಕೆ
 ನ್ಯಾಯ ಸಮ್ಮತವಲ್ಲ’
 ನಿರತ ಸ್ವಗತದ ಮೌನದಾಚೆಗೆ 
 ಅರುಣ ಬಂದನು ನಭದ ಅಂಚಿಗೆ
  
 ಇನ್ನೇನು ಮುರಿದುಬೀಳುವುದೇನೋ ದೇಶ
 ಎಂಬುದಕೆ ಸಾಕ್ಷಿಗಳಾದೆವು ಸೊರಗಿ
 ಮಳೆಯಲಿ ನೆಂದು ಬಿಸಿಲಲಿ ಒಣಗಿ
 ಛಳಿಯಲಿ ನಡುಗಿ ಹೇಗೋ ಸಹಿಸಿಕೊಂಡೆವು.
 ದೇಶ ಮುರಿದುಬೀಳಲಿಲ್ಲ ದಿಟ, 
 ಆದರೆ ಕಟ್ಟುವ ಕೆಲಸ ಇನ್ನೂ ಮುಗಿದಿಲ್ಲ
  
 ರಾಷ್ಟ್ರದ ವಂಶೋದ್ಧಾರಕರು
 ಯುಗವ ಹೊತ್ತು ಮುನ್ನಡೆವವರು ನಾವು
 ಇಲ್ಲಿ ಒಬ್ಬಳು ತೆಳುವು ದೇಹದ ಶಾಮಲೆ
 ಒಂಟಿ ತಾಯಿ ಬೆಳೆಸಿದ ಕೋಮಲೆ
 ಗುಲಾಮರ ಗೋತ್ರದ ಕೂಸು ಅಬಲೆ
 ರಾಣಿಯಾಗುವ ಕನಸ ಕಾಣಬಲ್ಲವಳು
 ಪಟ್ಟಾಭಿಷೇಕದಲಿ ರಾಜನೆದುರಲಿ ನಿಂದು
 ಕವಿತಾವಾಚನವ ಮಾಡುತಿಹಳಿಂದು.
  
 ಹೌದು ನಾವು ಕಟ್ಟಿದ ದೇಶಕ್ಕಿನ್ನೂ ಬಂದಿಲ್ಲ ಹೊಳಪು
 ಅದು ಪರಿಶುದ್ಧವೂ ಅಲ್ಲ, ಇರಬಹುದು ಬಿಳುಪು
 ಆದರೇನಂತೆ? ಪರಿಪೂರ್ಣದೇಶವಿದೆಂದು 
 ನಾವೆಂದೂ ಸಾರಿಲ್ಲವಲ್ಲ
 ಪರಿಪೂರ್ಣತೆಯತ್ತ ಸಾಗುವುದಷ್ಟೇ
 ಒಕ್ಕೂಟ ರಚಿಸಲು ಹೊರಟವರ ಧ್ಯೇಯ
 ಎಲ್ಲ ಸಂಸ್ಕೃತಿಗಳ ಮೇಳೈಸುವ ಬದ್ಧತೆ
 ಎಲ್ಲ ಬಣಗಳ, ಬಣ್ಣಗಳ, ನಡತೆಗಳ, ಆಯ್ಕೆಗಳ ಒಕ್ಕೂಟ
 ಅದಕೇ ಇಂದು ತಲೆಯೆತ್ತಿ ದಿಟ್ಟಿಸೋಣ
 ನಮ್ಮ ನಡುವಿನ ಗೋಡೆಯನಲ್ಲ 
 ನಮ್ಮೆದುರು ನಿಂದಿರುವ ಬಂಡೆಯನ್ನು
  
 ವಿಭಜನೆಗಳ ಕೂಡಿಸುತ ಭಿನ್ನಮತಗಳ ಕಡೆಗಣಿಸುತ್ತ
 ನಾಡಿನ ನಾಳಿನ ಭವಿತವ್ಯಕ್ಕೆ ಮುಂದೆ ಸಾಗೋಣ
 ಅಸ್ತ್ರಗಳ ಕೆಳಗಿಟ್ಟು ಹಸ್ತಲಾಘವಕೆ ಕೈಯ ಚಾಚೋಣ
 ಯಾರೊಂದಿಗೂ ಬೇಡ ಆಕ್ರೋಶ
 ಎಲ್ಲರೊಂದಿಗು ಇರಲಿ ವಿಶ್ವಾಸ
 ನೋಡುತಿಹ ವಿಶ್ವ ಹೇಳಲಿ ಈಗ
 ಸತ್ಯವೆಂದು ಸಾರಲಿ ಬೇಗ
 ಕಣ್ಣೀರ ಸುರಿಸಿದರೂ ತಲೆಯೆತ್ತಿ ಬೆಳೆದಿಹೆವೆಂದು
 ನೋವಿನಲಿ ಬೆಂದರೂ ಭರವಸೆಯ ಹೊತ್ತಿಹೆವೆಂದು
 ಸೋತು ಸುಣ್ಣವಾದರೂ ಯತ್ನವನು ಬಿಡದಿಹೆವೆಂದು
 ಐಕ್ಯತೆಯ ಬಂಧನದಿ ಜಯಭೇರಿ ಹೊಡೆದಿಹೆವೆಂದು
  
 ‘ಮುಂದೆಂದೂ ಸೋಲಕಾಣೆವು’ ಎಂದೇನೂ ಅಲ್ಲ
 ಆದರೆ ವಿಭಜನೆಯ ಬೀಜವನು ಬಿತ್ತದಿರೋಣ ನಾವೆಂದು
 ಶಾಸ್ತ್ರಗಳು ಸಾರುತಿವೆ ತಿಳಿದುಕೊಳ್ಳಿ
 ಕುಳಿತಿಹೆವು ಸುತ್ತಿಕೊಂಡು ಮೈಮೇಲೆ ಬಳ್ಳಿ 
 ಮುಚ್ಚಿಕೊಳ್ಳಲು ಉಂಟು ಅಂಜೂರದೆಲೆ
 ಇರಿ ಯಾರೂ ಯಾರನೂ ಭಯಪಡಿಸದೆಲೆ
  
 ನಮ್ಮ ಕಾಲದಿ ನಾವೇ ಬಾಳಲುಬೇಕು  
 ಕತ್ತಿಯಲುಗಲಿ ಇಲ್ಲ ಜಯದ ಝಲಕು
 ಕಟ್ಟಿದ ಸೇತುಗಳೆ ನಮಗೆ ಮುಂದಿನ ದಾರಿ
 ನಾವು ಏರುವ ದುರ್ಗ ಛಾತಿಯಿದ್ದರೆ ಏರಿ
 ಅಮೆರಿಕದ ಪ್ರಜೆ ಆಗಿರುವುದೆಂದರೆ 
 ಹಿರಿಯರು ಕೊಟ್ಟ ಕೃಪೆಗೆ ಹೆಮ್ಮೆಪಡುವುದಷ್ಟೇ ಅಲ್ಲ
 ಅದು ನಾವು ಭೂತಕಾಲಕ್ಕಿಡುವ ಹೆಜ್ಜೆ
 ಅಂದಿನ ದುರಂತಗಳ ತಿದ್ದುವ ಮಜ್ಜೆ
  
 ರಾಷ್ಟ್ರವನು ಹಂಚಿಕೊಳ್ಳುವ ಬದಲು 
 ಪುಡಿಮಾಡುವ ದೈತ್ಯಶಕ್ತಿಯನು ಕಂಡೆವಷ್ಟೆ?
 ಪ್ರಜಾತಂತ್ರವನೆ ರದ್ದುಗೊಳಿಸಲು ಹೊರಟವರು 
 ಇನ್ನೇನು ಜಯವ ಗಳಿಸಿಯೇಬಿಟ್ಟಿದ್ದರಲ್ಲ
 ಅದು ತಾತ್ಕಾಲಿಕ ಜಯವಿರಬಹುದು
 ಸಾರ್ವಕಾಲಿಕವಾಗಲಾರದು ಅದೆಂದು
 ಈ ನಿಜವ ನಂಬೋಣ  ನಂಬುಗೆಯ ನಂಬೋಣ
  
 ನಮ್ಮ ಕಣ್ಣಿರಲು ಬರುವ ನಾಳಿನ ಮೇಲೆ
 ಇತಿಹಾಸ ನೋಡುತಿದೆ ನಮ್ಮನಿಂದು
 ಕೂಡಿಟ್ಟ ಪಾಪಗಳ ತೊಳೆದು ಕಳೆಯುವ ಕಾಲ
 ಅದು ಹುಟ್ಟಿದಂದು ನಾವು ನಡುಗಿದ್ದೆವು
 ಎಂಥ ನಡುಗಿಸುವ ಗಳಿಗೆಯದು 
 ಅವರ ತಪ್ಪಿನ ಹೊರೆಗೆ ಸಿದ್ಧರಾಗದ ನಾವು 
 ಅದರಲೇ ಕಂಡುಕೊಂಡೆವು ಶಕ್ತಿ
 ಹೊಸ ಅಧ್ಯಾಯ ಬರೆವ ಯುಕ್ತಿ 
 ಮತ್ತೊಮ್ಮೆ ಭರವಸೆಯ ನಗುವ ರಕ್ತಿ
  
 ‘ಹೇಗೆ ತಾನೇ ಗೆದ್ದೇವು ಇಂಥ ಸಂಕಟವ?’
 ಎಂದು ಕೊರಗುತಿದ್ದವರು 
 ‘ಸಂಕಟ ನಮ್ಮ ಗೆದ್ದೀತು ಹೇಗೆ?’ ಎಂದು ಬೀಗಿದೆವು
 ಕಳೆದ ದಿನಗಳ ಕಡೆಗೆ ಮರಳದಿರೋಣ ಎಂದೂ 
 ಬರುವ ದಿನಗಳ ಕಡೆಗೆ ನಡೆಯೋಣವಿಂದು
 ಗಾಯಗೊಂಡರೂ ದೇಶ ನಿಂದಿಹುದು ಇಡಿಯಾಗಿ
 ಉಳಿದಿದೆ ಇನ್ನೂ ಸನ್ಮಾರ್ಗ, ಧೈರ್ಯ, 
 ರೋಷದಲಿ ಮೆರೆವ  ಸ್ವಾತಂತ್ರ್ಯ
 ಯಾರೂ ಹಿಂದಿರುಗಿಸಲಾರರೆಮ್ಮನು
 ಬೆದರಿಕೆ ಒಡ್ಡಿ ಚದುರಿಸಲಾರರಿನ್ನು
 ಕರ್ಮಹೀನರಾದರೆ ನಾವು 
 ಇದ್ದಲ್ಲೆ ಬಿದ್ದು ನಿದ್ದೆಹೋದರೆ ನಾವು
 ಆಗುವೆವು ಮುಂದಿನ ಪೀಳೆಗೆಯ ಶಾಪ
 ಭವಿಷ್ಯದ ಬಲಹೀನತೆಯ ವಿಲಾಪ
 ನಮ್ಮ ಹೊರೆ ಆಗುವುದು ಅವರ ಹೊರೆ

 ಆದರೆ ಈ ಮಾತು ಸತ್ಯ
 ‘ಕರುಣೆಯೊಂದಿಗೆ ಶಕ್ತಿಯಿದ್ದರೆ, 
 ಶಕ್ತಿಯೊಂದಿಗೆ ನ್ಯಾಯವಿದ್ದರೆ
 ಪ್ರೀತಿಯೇ ಆಗುವುದು ನಮ್ಮ ಆಸ್ತಿ’
 ದೊರಕಾವು ಮಕ್ಕಳಿಗೆ  ಜನ್ಮಸಿದ್ಧ ಹಕ್ಕುಗಳು
  
 ಆದ್ದರಿಂದಲೆ ಕೇಳಿ ದೇಶವಾಸಿಗಳೆ
 ಮುಂದಿನ ಪೀಳಿಗೆಗೆ ಬಿಟ್ಟುಹೋಗೋಣ ಉತ್ತಮ ದೇಶ 
 ನಮಗೆ ದಕ್ಕಿದ್ದಕ್ಕಿಂತಲೂ ಉತ್ತಮ ದೇಶ
 ಇದು ನನ್ನೆದೆಯ ಮಿಡಿತದ ಘಂಟಾಘೋಷ 
 ಘಾಸಿಗೊಂಡಿಹ ವಿಶ್ವವನು  ವಾಸಿಗೊಳಿಸೋಣ
 ಪಶ್ಚಿಮದ ಸ್ವರ್ಣದುರ್ಗಗಳಿಂದ ಏರೋಣ
 ಪೂರ್ವಜರ ಕ್ರಾಂತಿಯ ಈಶಾನ್ಯದಿಂದ 
 ಗಾಳಿಯಂತೇರೋಣ ವೇಗದಿಂದ
 ಸುಂದರ ಸರಸಿಗಳ ನಗರಮಾರ್ಗದಿ ಹೊರಟು 
 ಮೇಲೆ ಮೇಲೇರೋಣ ಮಧ್ಯಪಶ್ಚಿಮದಿಂದ
 ಸುಡುವ ಸೂರ್ಯನ ಜೊತೆಗೆ ತೆರೆದ ತೆಂಕಣದಿಂದ
 ಬಿಸಿಯ ಸೂಸುತಲಿ ಮೇಲಕೇರೋಣ
  
 ಕಟ್ಟೋಣ ದೇಶ ಅಳಿಸೋಣ ದ್ವೇಷ
 ಮತ್ತೊಮ್ಮೆ ಮೇಲೆದ್ದು ತುಂಬೋಣ ಕೋಶ
 ಮೂಲೆ ಮೂಲೆಗಳಲ್ಲಿಎಲ್ಲೆಲ್ಲು ಹುಡುಕಿ
 ಕೋಣೆ ಕೋಣೆಗಳಲ್ಲಿ ಬಿಡದೆಲೆ ತಡಕಿ
 ವಿವಿಧತೆಯ ಸಾಕಾರ ಸುಂದರ ಸುಶೀಲರನು
 ತುಳಿತದಲಿ ತಗ್ಗಿರುವ ತರತರದ ತರಳರನು
 ಎಲ್ಲರನು ಕೂಡಿಸುತ ಹೊರಡಿ ಮೆರವಣಿಗೆ
  
 ಆದಾಗ ಬೆಳಗು ತೊಲಗುವುದು ಕತ್ತಲು
 ಕಣ್ಮರೆಯಾಗುವುದು ಉರಿವ ಬೆಂಕಿಯ ನೆಳಲು
 ನಿರ್ಭಯದಿ ಉಬ್ಬುವುದು ಅರುಣನುದಯದ ಛಾಯೆ
 ಸ್ವಾತಂತ್ರ್ಯದಾರತಿಗೆ ಮುಳುಗುವುದು ಮಾಯೆ
 ಜ್ಯೋತಿ ಎಂಬುದು ಅಮರ ತಿಳಿಯಿರಿಷ್ಟೆ
 ಅದನು ನೋಡುವ ಕಣ್ಗಳಿರಬೇಕು ಅಷ್ಟೆ
 ಜ್ಯೋತಿಯೇ ಆಗುವ ಧೈರ್ಯ ಇರಬೇಕು ನಿಷ್ಠೆ 

- ಡಾ. ಮೈ. ಶ್ರೀ. ನಟರಾಜ್

************************************************************

ಈ ಶಕ್ತಿಯುತ ಭಾವಾನುವಾದವನ್ನು ಬರೆದ ಹಾಗೂ ಅದನ್ನು ಅನಿವಾಸಿಯಲ್ಲಿ ಪ್ರಕಟಿಸಲು ಅನುಮತಿಸಿದ ಡಾ. ಮೈ ಶ್ರೀ ನಟರಾಜ್ ಅವರಿಗೂ, ಕವನವನ್ನು ನನಗೆ ಕಳುಹಿಸಿದ ಶ್ರೀಮತಿ ಉಮಾ ವೆಂಕಟೇಶ್ ಅವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. – ಎಲ್ಲೆನ್ ಗುಡೂರ್ (ಸಂ.)

8 thoughts on “ನಾವು ಏರುವ ದುರ್ಗ – ಡಾ. ಮೈ. ಶ್ರೀ. ನಟರಾಜ್

  1. ಜ್ಯೋತಿ ಎಂಬುದು ಅಮರ ತಿಳಿಯಿರಿಷ್ಟೆ
    ಅದನು ನೋಡುವ ಕಣ್ಗಳಿರಬೇಕು ಅಷ್ಟೆ
    ಜ್ಯೋತಿಯೇ ಆಗುವ ಧೈರ್ಯ ಇರಬೇಕು ನಿಷ್ಠೆ

    ಈ ಅನುವಾದ ಪದಗಳ ಆಶಾವಾದ ಬಹು ಉತ್ಕ್ರಷ್ಟ
    ಓದಿ ನಾನಾದೆ ಬಹು ಸಂತುಷ್ಟ…

    Liked by 1 person

  2. ಕಪ್ಪಿ’ಟೋಲ್ ಮೇಲೆ ಬಿದ್ದ ಬಿಳಿ ಮಸಿಯ ಒರೆಸಿ, ಹೊಸ ನಾಳೆಯ ಬೆಳಕಿಗೆ ಕನ್ನಡಿ ಹಿಡಿವ ಸಾಲುಗಳು ಕನ್ನಡೀಕರಣದಲ್ಲಿ ಬೆಳಕಿನ ಕಮಲದಂತೆ ಅರಳಿವೆ

    Murali Hathwar

    Liked by 2 people

  3. ಅದ್ಭುತ ಅನುವಾದ. ಮೂಲ ಕವಿತೆಯ ವ್ಯಾಚ್ಯತೆಯನ್ನೆಲ್ಲ ಅಳಿಸಿ ಕನ್ನಡದ್ದೇ ಎನಿಸುವಂಥ ಕವನ. ‘ಅಮೇರಿಕನ್‘ ಶಬ್ದದಲ್ಲಿ ಆಯಾ ದೇಶದವರು ತಮ್ಮ ದೇಶದ ಪದ್ಅಗಳನ್ನು ಹಾಕಿಕೊಂಡು ಓದಿದರೆ ಅದು ನಮ್ಮೆ ದೇಶದ ಕವನವೇ ಆಗುತ್ತದೆ. ಕನ್ನಡ ನನ್ನ ಮಾತೃಭಾಷೆಯಾಗಿರುವುದರಿಂದಲೋ ಏನೋ, ನನಗೆ ಮೂಲಕ್ಕಿಂತ ಕನ್ನಡ ಕವಿತೆ ಹೆಚ್ಚು ಮನ ತಟ್ಟಿತು. ‘ಅನಿವಾಸಿ‘ಯ ಗೆಸ್ಟ್ ಕವಿತೆ ಬೆಸ್ಟ್ ಕವಿತೆ! – ಕೇಶವ

    Liked by 1 person

  4. ಜನವರಿ ೨೦ನೆಯ ತಾರೀಖು ಸಿ.ಏನ್.ಏನ್ ಟಿವಿಯಲ್ಲಿ ಅಮಂಡಾ ಗಾರ್ಮನ್ ಈ ಪದ್ಯವನ್ನು ಓದಿದಾಗ ನಿಜಕ್ಕೂ ರೋಮಾಂಚಿತಳಾಗಿದ್ದೆ. ಈ ಯುವತಿಯ ಕವನದಲ್ಲಿನ ಪದಗಳು ಎಷ್ಟು ಸತ್ವಯುತವಾಗಿದೆ, ದೇಶದಲ್ಲಿ ಭುಗಿಲೆದ್ದಿರುವ ದಳ್ಳುರಿಯನ್ನು ತಗ್ಗಿಸಲು ಸಾಧ್ಯವಿದೆ, ಯುವ ಪೀಳಿಗೆಗೆ ಇನ್ನು ತಮ್ಮ ಮನಗಳಲ್ಲಿ ವಿಶ್ವಾಸದ ದೀಪವನ್ನು ಹಚ್ಚಿಟ್ಟು ಉರಿಸುತ್ತಿದ್ದಾರೆ ಎನ್ನುವ ಮಾತುಗಳನ್ನು ಆಕೆಯ ಕವನದಲ್ಲಿ ಕೇಳಿ ಭಾವುಕಳಾಗಿದ್ದೆ. ಮೈಶ್ರೀ ನಟರಾಜ ಅವರು ಈ ಕವನವನ್ನು ಖಂಡಿತ ಕನ್ನಡಕ್ಕೆ ಅನುವಾದಿಸುತ್ತಾರೆ ಎಂದು ನನಗೆ ತಿಳಿದಿತ್ತು. ಆ ಅನುವಾದವು ಅಷ್ಟೇ ಸತ್ವಯುತವಾಗಿರುತ್ತದೆ ಎನ್ನುವ ವಿಶ್ವಾಸವು ಇತ್ತು. ನಟರಾಜ್ ಅವರು ಎಂದಿನಂತೆ ಈ ಕವನದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರಸಕ್ತ ಅಮೆರಿಕೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಡಂಬನಾತ್ಮಕ ಕವನಗಳನ್ನು ರಚಿಸುವ ಅವರ ಪ್ರತಿಭೆಗೆ ಯಾರಾದರೂ ತಲೆತೂಗಲೇ ಬೇಕು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವೈಖರಿ, ಅವನ ಚಲನವಲನಗಳ ಬಗ್ಗೆ ಅವರು ಬರೆದ ಕವನಗಳು ನಿಜಕ್ಕೂ ಸೊಗಸಾಗಿವೆ.
    ಉಮಾ ವೆಂಕಟೇಶ್

    Liked by 2 people

  5. Very powerful indeed by a young woman. That it is so resonating with the younger generation is in itself a real hope.
    ಕನ್ನಡಕ್ಕೆ ಈ ಕವನವನ್ನು ತಂದ ನಟರಾಜರಿಗೆ ಧನ್ಯವಾದಗಳು. ಕನ್ನಡ ಭಾಷೆಯಲ್ಲಿಯೇ ಆ ಕವನ ಉದಿಸಿತೇನೋ ಎನ್ನುವಷ್ಟು ಆಳವಾಗಿ, ಸತ್ವಯುತವಾಗಿ ಮತ್ತು ಮನೋಜ್ಞವಾಗಿ ಭಾವಾನುವಾದ ಮಾಡಿದ್ದಾರೆ. ಪ್ರಪಂಚದಾದ್ಯಂತ ಇಂಗ್ಲಿಷ್ ಭಾಷೆಯಲ್ಲಿರುವ ಮೂಲ ಕವನವನ್ನು ಪದೇಪದೇ ಓದುತ್ತಾ ಅದರ ಬಗ್ಗೆ ಯುವ ಜನಾಂಗವು ಚರ್ಚಿಸುತ್ತಿದೆ. ನಟರಾಜರ ‘ನಿಷ್ಠೆ’ಯಿಂದ ಕನ್ನಡಕ್ಕೆ ಬಂದಿರುವ ಈ ಕವನವು ಕನ್ನಡಿಗರೆಲ್ಲರೂ ಓದಲೇಬೇಕಾದ ಒಂದು ವೇದಿಕೆಯಾಗಿದೆ.
    ವಿನತೆ ಶರ್ಮ

    Liked by 3 people

  6. ಬಹಳ ಉತ್ತಮವಾದ ಅನುವಾದ. ಕವಿತೆಯ ಭಾವನೆಗಳನ್ನು ಲಯವನ್ನು ಬಲವಾಗಿ ಉಳಿಸಿ ಕೊಳ್ಳಲಾಗಿದೆ Impeaching the ex- president may be one way condemning a divisive regimen, but poems like this have far reaching healing effects. This poem has found many interpretations. It will be pertinent to many dictatorial and fascist regimen around the world. Tribalism is a social disorder arising from insecurity. This poem has the recipe to build bridges; ‘ If we merge mercy with might, and might with right, then love becomes legacy and change ’ ಎಂಥ ಅದ್ಭುತವಾದ ಸಾಲುಗಳು.
    ತುಳಿಸಿಕೊಂಡವರು ದುರ್ಗವನ್ನು ಏರಲು ಸಾಧ್ಯವಾಗಲಿ. GSS ಅವರ ಗೋಡೆ ಎಂಬ ಕವನ ನೆನಪಿಗೆ ಬಂತು.
    ಈ ಉತ್ಕೃಷ್ಟವಾದ ನೀಳ್ಗವಿತೆಯನ್ನು ಕನ್ನಡಕ್ಕೆ ಅನುವಾದಿಸಿದ ಮೈ ಶ್ರೀ ನಟರಾಜ್ ಅವರಿಗೆ ಅಭಿನಂದನೆಗಳು.

    Liked by 3 people

  7. ಅದ್ವಿತೀಯ!
    ಒಂದೇ ಓದಿನಲ್ಲಿ ಅಮಾಂಡ ಗೋರ್ಮನ್ ಅವಳ ಮೂಲ ಕವಿತೆ ಮತ್ತು ಮೈ ಶ್ರೀ ನಟರಾಜರ ಭಾವಾನುವಾದದಲ್ಲಿಯ ಶಬ್ದಗಳಲ್ಲಿಯ ಶಕ್ತಿ, ಭಾವ, ಲಾಲಿತ್ಯ, ಅವು ಕೊಡುವ ಸ್ಫೂರ್ತಿ, ತುಂಬುವ ಆಶಾವಾದ ಇವುಗಳನ್ನು ಒಂಡೇ ಪುಟದಲ್ಲಿ ತುಂಬಲಸಾಧ್ಯ. ಜಾನೇವರಿ ೨೦ರಂದು ಮೊದಲ ಸಲ ಆಕೆಯ ಕವಿತಾ ವಾಚನವನ್ನು ಕೇಳಿದಾಗ ಆದಷ್ಟೇ ರೋಮಾಂಚನ ಇಂದು ಮೈ ಶ್ರೀ ಅವರ ಕವಿತೆಯನ್ನು ಓದಿದಾಗಲೂ ಆಯಿತು.ಎರಡರಲ್ಲೂ ತುಂಬಿ ಹರಿದ ಹತ್ತು ಹದಿನೈದು ‘quotable quotes’ ಸಾಲುಗಳನ್ನು ಹೆಕ್ಕುವ ಬದಲು ಮರುವಾಚನ ಮಾಡುವದೇ ಲೇಸು! ಒಂದು ಕೋಮು ಅಥವಾ ದೇಶದ ಜನರನ್ನಷ್ಟೇ ಅಲ್ಲ ವಿಶ್ವದ ಬೇರೆ ಬೇರೆ ಜನಸಮುದಾಯಗಳಿಗೂ ಅನ್ವಯಿಸುವ, ಬಡಿದೆಬ್ಬಿಸುವ ಶಕ್ತಿ ಇವುಗಳಿಗಿದೆ. ಇಂಥ ಕವನದ ಅನುವಾದ ಸುಲಭವಲ್ಲ. ಆದರೆ ’ಆ ಪರಿಪೂರ್ಣತೆಯತ್ತ ಸಾಗಿದ’ ಪ್ರಯತ್ನ ಇದು. ಕೊನೆಯ ಚರಣದ ಸಾಲನ್ನಾದರೂ ಉಲ್ಲೇಖಿಸದೆ ಮುಗಿಸಲಾರೆ: ’(ಜ್ಯೋತಿಯನ್ನು…) ನೋಡುವ ಕಣ್ಗಳಿರಬೇಕು/ ಜ್ಯೋತಿಯೇ ಆಗುವ ದೈರ್ಯ ಇರಬೇಕು ನಿಷ್ಠೆ.’

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.