ಅಡುಗೆ – ಅಡುಗೆಮನೆ ಸರಣಿ: ವೆಂಕಟ್ ಶ್ರೀರಾಮುಲು ಮತ್ತು ಲಕ್ಷ್ಮೀನಾರಾಯಣ ಗುಡೂರ್

ನಮಸ್ಕಾರ ಅನಿವಾಸಿಗರೆ, ಇಲ್ಲಿರುವುದು ಅಡುಗೆ-ಅಡುಗೆಮನೆ ಸರಣಿಯ ಮುಂದಿನ ಕಂತು. ಅಡುಗೆಮನೆಯಲ್ಲಿ ಸಿಗುವ ಸಂತೋಷಗಳ ಬಗ್ಗೆಯೂ ಸ್ವಲ್ಪ ಓದೋಣವೇ? ಶ್ರೀ ವೆಂಕಟ್ ಶ್ರಿರಾಮುಲು ಮತ್ತು ನನ್ನ ಅಡುಗೆಮನೆಯ ನಂಟಿನ ಬಗೆಗಿನ ಬರಹಗಳು ಕೆಳಗಿವೆ. ಓದಿ ಏನನ್ನಿಸಿತು ತಿಳಿಸಿ. ಮತ್ತೆ ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳೋದಕ್ಕೆ ತಯಾರಾಗಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಮೊದಲ ಉಪ್ಪಿಟ್ಟು ವೆಂಕಟ್ ಶ್ರೀರಾಮುಲು

ನಾನು ಮೊದಲೇ disclaimer ಡಿಕ್ಲೇರ್ ಮಾಡುವುದು ಉಚಿತ.  ಅಡುಗೆ ಮತ್ತು ಬರಹ ಎರಡರಲ್ಲೂ ಅನುನುಭವಿ.  ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಜೋಡಿಸುವುದಲ್ಲಿ ಸ್ವಲ್ಪ ಪರಿಣಿಯಿತಿ ಇರಬಹುದು. ಈ ಐದು ದಶಕಗಳ ದಾಂಪತ್ಯದಲ್ಲಿ ಅಕ್ಷರ ಪದ ಜೋಡಿಸಿವುದರಲ್ಲಿ ಅಷ್ಟಕಷ್ಟೆ.  ಅನಿವಾಸಿ ಓದುಗರೇ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ; ಏನಾದರೂ ಎಡವಟ್ಟು ಇದ್ದಲ್ಲಿ ಕ್ಷಮಿಸಿ.  

ಅಡಿಗೆ ಅಂದ ಕ್ಷಣವೇ ಮನಸ್ಸಿಗೆ ಬರುವುದು, ರುಚಿ,ರುಚಿಯಾದ ಘಮಿ ಘಮಿಸುವ ಆಹಾರ ತಿಂಡಿಗಳು. ಅನಿವಾಸಿಯಲ್ಲ ಪ್ರಕಟವಾದ, ಸ್ವಾದಕರವಾದ ಲೇಖನಗಳನ್ನು ನೋಡಿ ನಾನು ಯಾಕೆ  ಒಂದು ಕೈ ಹಾಕಬಾರದು ಅನಿಸಿತು.  ಯಾರೋ ನೀವು ಶಾkAಹಾರಿಯೇ ಎಂದು ಕೇಳಿದರು, ಅಲ್ಲ ಆದರೆ ನನ್ನ ಅಡಿಗೆ ತಿಂದವರು shock ಆಗಿ ಹಾರುತ್ತಾರೆ.

ನನ್ನ ಈ ಲೇಖನದ ಬಗ್ಗೆ ನನ್ನಾಕೆಗೆ  ಹೇಳಿದರೆ ಇಮಾಂಸಾಬಿ ಮತ್ತು ಗೋಕುಲಾಷ್ಟಮಿ ಸಂಬಂಧ ಅಂಥ ಟೀಕ್ ಟಾಕ್ ಆಗಿ ಟೀಕೆ ಬರುತ್ತೆ ನಿರೀಕ್ಷಿಸಿದೆ.  ಆದರೆ ಬದಲಾಗಿ “ನೀವು ಕೆಲವರಿಗಿಂತ ಪರವಾಗಿಲ್ಲ ಬಿಡಿ, ಅವರಿಗೆ SATNAV ಬೇಕು ಅಡಿಗೆ ಮನೆಗೆ ಹೋಗೋಕೆ” ಅನ್ನಬೇಕೆ!

ಅದು ನಿಜ; ನಾನು ಸಾಕಷ್ಟು ವೇಳೆ ಅಡಿಗೆಮನೆಯಲ್ಲಿ ಕಳೆಯುತ್ತೇನೆ.  ಪಾಕಪ್ರವೀಣತೆಯಿಂದ ಅಲ್ಲ, ಮಾಡಿದ್ದನ್ನು ಟೇಸ್ಟ್ ಮಾಡುವ ಅಭ್ಯಾಸವಿಲ್ಲದ ನಮ್ಮಾಕೆಯ ಆ ಮಧುರವಾದ ಉಸ್ತುವಾರಿ ನನಗೆ ಸೇರಿದ್ದು.  ಒಂದು ತರಹ ವೈನ್ ಟೆಸ್ಟರ್ – ಅವನು ನುಂಗಲ್ಲ ಅಷ್ಟೇ!

ಲೊಕ್ಡೌನ್ ಪ್ರಯುಕ್ತ, ನನ್ನ job description ಬದಲಾಯಿಸ ಬೇಕಾದ ಪ್ರಸಂಗ ಬಂತು. ನನ್ನ ಪ್ರಪ್ರಥಮ ಸಾಹಸ, ದಕ್ಷಿಣ ಭಾರತದ ಪ್ರಸಿದ್ಧ ಉಪ್ಪಿಟ್ಟು, (ವಿವಿಧಾತ್ಮಕವಾದ ವಿಷಯ) ಮಾಡುವದಕ್ಕೆ ಸಿದ್ದವಾಗಿದ್ದು.  ಒಂದೆರಡು ಥಿಯರಿ ಕ್ಲಾಸೆಸ್ ಆದ ಮೇಲೆ ನನ್ನ ಪಾಕ ಪ್ರಯೋಗ ಪ್ರಾರಂಭ.  ಪ್ರಾರಬ್ಧಕರ್ಮಾ, ನನ್ನ ಕಲನರಿ ಕೌಶಲ್ಯತೆ ಕುಂಠಿತವಾಗಿ ಕೊನೆಗೊಂಡಿತು. ಫಲಿತಾಂಶ: ತಳ ಕಚ್ಚಿದ, ಹೆಸರಿಗೆ ತಕ್ಕಹಾಗೆ ಉಪ್ಪು ಮತ್ತು ಹಿಟ್ಟು!

Can we have take away today? ಮೇಲಿಂದ ಧ್ವನಿ.  ಅಂದು ಹೇಗೋ ನಿರ್ವಹಿಸಿದೆವು..

ಅಲ್ಲಿಂದ ಮುಂದುವರಿದಿದ್ದನೇ ಈಗ ನನ್ನ ಉಪ್ಪಿಟ್ಟು ನನ್ನವಳ ಮೆಚ್ಚುಗೆ, ಬಡ್ತಿ ಸಿಕ್ಕಿದೆ.  ಪ್ರಸ್ತುತ ನನ್ನ ಪ್ರಯೋಗ ಮೂಲಂಗಿ ಸಾಂಬಾರ್. ನಳಪಾಕ ಪ್ರವೀಣ ಮಿತ್ರನಿಂದ ಪ್ರಮಾಣ ಪತ್ರ ಸಹ ಸಿಕ್ಕಿದೆ.

ಅನಿವಾಸಿ ಓದುಗೆರಿಗಲ್ಲ ನನ್ನ ಕಿಚನ್ ಗೆ ಸ್ವಾಗತ. ನನ್ನ ಪಾಕ, ನಿಮ್ಮ ಪಚನ. ಏನಂತೀರಿ?

  • ಡಾ. ವಿ. ಶ್ರೀರಾಮುಲು  

******************************************************************************

ನನ್ನ ಅಡುಗೆ – ಊಟದ ನಂಟು!ಲಕ್ಷ್ಮೀನಾರಾಯಣ ಗುಡೂರ್

ಇಬ್ಬರು ತಂಗಿಯರು ಮತ್ತು ತಾಯಿ ಇದ್ದ ಮನೆಯ ಚೊಚ್ಚಲ ಮಗನಾದ ನನ್ನನ್ನು ಅಡುಗೆಮನೆಯಲ್ಲಿ ಬರದಂತೆ ತಡೆಯದಿದ್ದರೂ, ನನಗೆ ಅಡುಗೆ ಮಾಡುವುದನ್ನು ಕಲಿಯಲೇಬೇಕೆಂಬ ಜರೂರತ್ತೇನೂ ಇರಲಿಲ್ಲ.  ಆದರೆ, ಅಜ್ಜಿಯ ಮನೆಯಲ್ಲಿದ್ದು, ಅಮ್ಮನಿಂದ ದೂರವಿದ್ದ ನನಗೆ ಅಡುಗೆಮನೆಯಲ್ಲಿ ಸಮಯ ಕಳೆಯುವುದಕ್ಕೆ ಎರಡು ಕಾರಣಗಳಿದ್ದವು.  ಒಂದನೆಯ ಕಾರಣ, ಅಮ್ಮನ ಜೊತೆಗೆ ಅಡುಗೆಯಲ್ಲಿ ಸಹಾಯ ಮಾಡುತ್ತ ಹರಟೆ ಹೊಡೆಯುವ ಅಮ್ಮನ ಜೊತೆ ಹೊತ್ತು ಕಳೆಯುವುದು; ಎರಡನೆಯ ಕಾರಣ, ಅಜ್ಜಿಯ ಮನೆಯಲ್ಲಿ ಅಜ್ಜಿ ಮಡಿ ಅಡಿಗೆ ಮಾಡುವಾಗ ನಮಗೆ ಬೇಕಾದಂತೆ ಅವಲಕ್ಕಿ ಕಲಿಸಿಕೊಳ್ಳಲು ಅವಕಾಶವಿದ್ದುದು – ಅದಕ್ಕೆ ಯಾವ ಪುಡಿ, ಎಷ್ಟು ಎಣ್ಣೆ ಹುಯ್ದು ಯಾವ ರೀತಿ ರುಚಿಕಟ್ಟಾಗಿ ಮಾಡುವುದು ಅಂತ ಅಮ್ಮನಿಂದ ಹೇಳಿಸಿಕೊಳ್ಳುವುದು.  ಆಗ ಕಲಿತದ್ದು ಮುಂದೆ ಸಹಾಯಕ್ಕೆ ಬಂತೆನ್ನುವುದನ್ನೂ ನೊಡೋಣ.

ಅವಲಕ್ಕಿಅವಲಕ್ಕಿಅವಲಕ್ಕಿ!

ಹೆಸರಿಗೆ ಅವಲಕ್ಕಿಯಾದರೂ (ಅವ-lucky) ಅಜ್ಜಿಯ ಮನೆಯಲ್ಲಿ ಅದಕ್ಕೆ ದೇವರ ನಂತರದ ಸ್ಥಾನವೇ ಸರಿ!  ಅಜ್ಜಿ-ತಾತನ ಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದು, ದಿನವೂ ಸಾಂಗೋಪಾಂಗ ಪೂಜೆ-ನೈವೇದ್ಯವಿಲ್ಲದೇ ಊಟವಿರಲಿಲ್ಲ. ನಾನೋ ಬೆಳಗ್ಗೆ ಎಂಟಕ್ಕೆ ಕಾಲೇಜಿನಲ್ಲಿರಬೇಕು.  ಬೇರೆ ಯಾವ ಮುಸುರಿಯ ತಿಂಡಿಗಳಿಗೆ ಅವಕಾಶವಿರಲಿಲ್ಲ.  ಮತ್ತೇನು, ಅವಲಕ್ಕಿಯೇ ಗತಿ.  ಅದೂ ಒಣ ಅವಲಕ್ಕಿ.  ಹಾಗಂತ ಅವಲಕ್ಕಿ ಇಷ್ಟವಿಲ್ಲವೆಂದಲ್ಲ – ಅವಲಕ್ಕಿ ಯಾವತ್ತೂ ಬೇಜಾರಾಗಲಿಲ್ಲ.  ಅದು ಹೇಗೆ ಅಂತೀರಾ, ಅಮ್ಮನ ಅಡಿಗೆಮನೆಯ ಚಾಟ್ ಸೆಶನ್ನುಗಳ ಮಹಿಮೆ.  ಎಷ್ಟು ವಿಧದಲ್ಲಿ ಅವಲಕ್ಕಿ ಮಾಡಬಹುದು, ಆಹಾ!  ಹುರಿದು ಶೇಂಗಾ – ಪುಠಾಣಿ ಒಗ್ಗರಣೆ ಹಾಕಿ (ರಾಧಿಕಾ ಜೋಶಿಯವರು ಮುಂಚೆ ಹೇಳಿದಂತೆ ಹೊತ್ತಿಸದೇ) ಡಬ್ಬದಲ್ಲಿ ತುಂಬಿಟ್ಟು ವಾರಗಟ್ಟಲೆ ತಿನ್ನಬಹುದು.  ಅದಕ್ಕೆ ಎಷ್ಟು ಬೇಕೋ ಅಷ್ಟು ಸಿಂಗಾರ ಮಾಡಬಹುದು; ಉದಾಹರಣೆಗೆ – ಉಪ್ಪುಮೆಣಸಿನಕಾಯಿ ಕರಿದು ತುಂಡು ಮಾಡಿ ಹಾಕಬಹುದು, ಅರಳು ಸಂಡಿಗೆ ಹಾಕಿದರಂತೂ ಸರಿಯೇ ಸರಿ!  ಇಲ್ಲಾ, ದಿಢೀರನೆ ಮೆಂಥೆದಹಿಟ್ಟು, ಖಾರಪುಡಿ, ಪುಠಾಣಿಪುಡಿ, ಶೇಂಗಾಪುಡಿ, ಚಟ್ಣಿಪುಡಿ, ಗುರೆಳ್ಳುಪುಡಿ – ಯಾವುದು ಸಿಗುತ್ತದೋ ಅದನ್ನು ಹಾಕಿ, ಉಪ್ಪು-ಎಣ್ಣೆ ಹಾಕಿ ಕಲಿಸಿದರಾಯ್ತು.  ಅಥವಾ, ಅವಲಕ್ಕಿ ತೊಳೆದು ಮೇಲಿನ ರೀತಿಯಲ್ಲೇ ಕಲಿಸಿಕೊಂಡು ತಿನ್ನೋದು.  ಖಾರಪುಡಿಯ ಬದಲು ಮಾವಿನಕಾಯಿ ಉಪ್ಪಿನಕಾಯಿ ಇದ್ದರೆ ಅದನ್ನೇ ಉಪಯೋಗಿಸೋದು (ನನ್ನ ಫೇವರಿಟ್ಟು ಇದು).  ಬೇಡ ಅಂದರೆ, ತೊಳೆದು ಮೊಸರವಲಕ್ಕಿ ಮಾಡಿ ಮೇಲಿನ ಲಿಸ್ಟಿಂದ ಯಾವ್ದೋ ಒಂದು ಪುಡಿ ಹಾಕ್ಕೊಂಡು ಮಜಾ ತೊಗೋಬಹುದು.  ಅಂತೂ ನನ್ನ ಜೀವನದಾಗ ಒಂದಷ್ಟು ಟನ್ನು ಅವಲಕ್ಕಿ ತಿಂದಿರಬಹುದು; ಆದರೂ ಇನ್ನೂ ಅವಲಕ್ಕಿಯ ಪ್ರೀತಿ ಹೋಗಿಲ್ಲ.  ಅದರ ಚಟವನ್ನು ಮಕ್ಕಳಿಗೂ ಹಚ್ಚಿದ್ದೇವೆ.  ಇಲ್ಲೇ ಹುಟ್ಟಿ ಬೆಳೆದರೂ, ಅವಲಕ್ಕಿ ಅಂದರಾಯ್ತು ಆಸೆಪಟ್ಟು ತಿನ್ನುತ್ತಾರೆ.  ಅವಲಕ್ಕಿಯ ಬದಲು ಮಂಡಾಳಿನಂತೆ ಇಲ್ಲೇ ಸಿಗುವ ರೈಸ್ ಪಾಪ್ಸ್ (rice pops) ಹಾಕಿದರಂತೂ ಒಂದೆರಡು ದಿನಗಳಲ್ಲಿ ಡಬ್ಬಿಗಟ್ಟಲೆ ಖಾಲಿಯಾಗುತ್ತದೆ, ಸ್ನಾಕ್ಸ್ ತರಹ ಹೋಗ್ತಾ-ಬರ್ತಾ ತಿಂದು. 

|| ಇತಿ ಅಜ್ಜಿಮನಿಪುರಾಣೇ ತಿಂಡಿತೀರ್ಥಾಧ್ಯಾಯೇ ಅವಲಕ್ಕೀ ಮಹಾತ್ಮ್ಯಮ್ ಸಂಪೂರ್ಣಮ್ ||     

ಮೊದಲ ಕೆಲಸ – ಮೊದಲ ಮನೆ.

ಎಂಬಿಬಿಎಸ್ ಮುಗಿಸಿದರೆ ಮುಗಿಯುವುದಿಲ್ಲವಲ್ಲ ಮೆಡಿಕಲ್ ಓದು!  ಡೊನೇಶನ್ ಕೊಡಲಾಗದ ಕೆಳ ಮಧ್ಯಮವರ್ಗದ ಹುಡುಗರ ಮುಂದಿನ ಕಾರ್ಯಕ್ರಮವೆಂದರೆ, ಆಲ್ ಇಂಡಿಯಾ ಅಥವಾ ಅಂಥದ್ದೇ ಹಲವಾರು ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವುದು.  ಖಾಲಿ ಕೂತು ತಯಾರಿ ಮಾಡಲಾಗದು, ಎಲ್ಲೋ ಒಂದುಕಡೆ ಕೆಲಸಮಾಡುತ್ತ ಖರ್ಚಿಗೆ ಬೇಕಾಗುವಷ್ಟು ಗಳಿಸುತ್ತ ಓದಬೇಕು.  ಸರಿ, ನನ್ನ ಗೆಳೆಯರು ಸೇರಿದ್ದ ದಂತವೈದ್ಯ ಕಾಲೇಜಿನಲ್ಲೇ ಕೆಲಸ ಸಿಕ್ಕಿತು, ಅಧ್ಯಾಪಕನಾಗಿ.  ಆಗಿನ ನನ್ನ ಪರಿಸ್ಥಿತಿಗೆ ಒಳ್ಳೆಯ ಕೆಲಸವೇ – ವಾರಕ್ಕೆರಡು ತರಗತಿಗಳು, ಸಾಕಾಗುವಷ್ಟು ಸಂಬಳ ಅಲ್ಲದೇ ಪ್ರವೇಶ ಪರೀಕ್ಷೆಯ ತಯಾರಿಗೆ ಸಾಕಷ್ಟು ಸಮಯ.  ನಾವು ಮೂರು ಜನ ಒಂದು ಮನೆ ಮಾಡಿಕೊಂಡು ತಯಾರಾದೆವು.  ನಾನು ಬಂದು ಸೇರುವುದಕ್ಕೆ ಮೊದಲು ನನ್ನ ಮಿತ್ರರು ಹೊರಗಿನಿಂದ ಊಟ ತರಿಸಿಕೊಳ್ಳುತ್ತಿದ್ದರು.  ಅದರಲ್ಲಿ ಸ್ವಲ್ಪ ಹೆಚ್ಚೇ ಅನ್ನ ಕೊಡುತ್ತಿದ್ದರು ಅನ್ನಿ.  ನಾನು ಬಂದ ಮೊದಲನೇ ದಿನ ಬೆಳಗ್ಗೆ ಅವರು ಚೆಲ್ಲಲು ಪಕ್ಕಕ್ಕಿಟ್ಟಿದ್ದ ಹಿಂದಿನ ರಾತ್ರಿಯ ಅನ್ನಕ್ಕೆ, ಈರುಳ್ಳಿ-ಹಸಿಮೆಣಸಿನಕಾಯಿ-ಕರಿಬೇವು-ಕೊತ್ತಂಬರಿ ಹಾಕಿ ಚಿತ್ರಾನ್ನ ಮಾಡಿದೆ ನೋಡಿ – ಅಲ್ಲಿಂದ ಶುರುವಾಯ್ತು ನಮ್ಮ ಸ್ವಯಂಪಾಕ!  ಅವತ್ತೇ ಸಾಯಂಕಾಲ ಅಂಗಡಿಗೆ ಹೋಗಿ ಪಾತ್ರೆ-ಪಗಡ, ಸ್ಟವ್ವು ಮತ್ತಿತರ ಪರಿಕರಗಳನ್ನು ತಂದೆವು.  ಮುಂದಿನ ವಾರ ಊರಿಗೆ ಹೋದವರ ಜೊತೆಗೆ ಮನೆಯಲ್ಲಿ ಮಾಡಿದ ಸಾರಿನಪುಡಿ, ಹುಳಿಪುಡಿ, ಭಾತಿನಪುಡಿ, ಸಂಡಿಗೆ, ಹಪ್ಪಳ, ಉಪ್ಪು ಮೆಣಸಿನಕಾಯಿ, ಬೇಳೆಗಳೂ, ಇನ್ನೊಂದಷ್ಟು ಅನುಕೂಲವಾಗುವ ಝಾಲಿಸೌಟು ಇತ್ಯಾದಿ ಸಲಕರಣೆಗಳೂ ಬಂದವು.  ಅನ್ನಕ್ಕೆ ಒದಗುವ ಪುಡಿಗಳನ್ನೂ, ಉಪ್ಪಿನಕಾಯಿಗಳನ್ನೂ ಮರೆಯಲಾದೀತೇ?  ಮನೆಯಲ್ಲಿ ಕಾಯಿಸಿದ ತುಪ್ಪದ ಬಾಟಲಿಗಳೂ ಬೇಕಲ್ಲ, ಅನ್ನಕ್ಕೆ ಕಲಿಸಿಕೊಳ್ಳಲು?  ಇದರೊಂದಿಗೆ ಬೀದರಿನಲ್ಲಿ ಸಿಗುತ್ತಿದ್ದ ರತ್ನಸಾಗರ ಅನ್ನುವ ಸಣ್ಣಕ್ಕಿಯ ರುಚಿಯನ್ನು ಇನ್ನೂ ಮರೆತಿಲ್ಲ ನಾನು!  ಪ್ರತಿ ಸಲ ಊರಿಗೆ ಹೋದಾಗ, ನಾವು ಮೂವರೂ ನಮ್ಮ ಅಮ್ಮಂದಿರಿಂದ ಹೊಸ ರುಚಿ ಕಲಿತು ಬರೋದು, ಮಾಡಿ ತಿನ್ನೋದು.  ಅದೇ ಊರಿನವರಾದ ನಮ್ಮ ಸಹೋದ್ಯೋಗಿಗಳೂ ನಮ್ಮ ಮನೆಗೆ ಹೇಳಿಕೊಂಡು ಬಂದು ಊಟ ಮಾಡೋದು!

ಬೆಳಗಿನ ತಿಂಡಿ ಮನೆಯೆದುರಿಗಿದ್ದ ಒಂದು ಚಿಕ್ಕ ಹೋಟೆಲಿನಲ್ಲಿ ತಿನ್ನುತ್ತಿದ್ದೆವು.  ಊಟ ಮಧ್ಯಾಹ್ನ ಕಾಲೇಜಿನ ಕ್ಯಾಂಟೀನಿನಲ್ಲಿ.  ಮೂರೂ ಗೆಳೆಯರೂ ತಿಂದು ಬಿಲ್ಲಿನ ದುಡ್ಡನ್ನು ಸಮನಾಗಿ ಹಂಚಿಕೊಂಡು ಕೊಡುವ ರೂಢಿಯಿತ್ತು.  ಈ ಪದ್ಧತಿ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು – ಕೆಟ್ಟದ್ದು ಯಾಕೆ ಅಂದ್ರಾ – ಸಮಾ ದುಡ್ಡು ಕೊಟ್ಟ ಮೇಲೆ ಮೂರೂ ಜನ ಸಮಾ… ತಿನ್ನದೇ ಇರುವುದು ಹೇಗೆ?  ಮೊದಲೇ ತಿಂಡಿಬಾಕರಿದ್ದ ನಾವು ಅದರಿಂದ ಸ್ವಲ್ಪ ಹೆಚ್ಚೇ ತಿನ್ನುತ್ತಿದ್ದೆವು ಅನ್ನಿ.  ನಮ್ಮ ಜೊತೆಗೆ ಹಂಚಿಕೊಂಡು ತಿಂಡಿಗೆ ಬರುತ್ತಿದ್ದ ಇನ್ನೊಬ್ಬ ಗೆಳೆಯ 3 ಪೂರಿ ತಿನ್ನುವುದರೊಳಗೆ, ನಾವು ಮೂವರೂ ಒಂಚೂರೂ ಕಷ್ಟವಿಲ್ಲದೇ ಮೂರು-ಮೂರು ಪ್ಲೇಟು ತಿಂದಿರುತ್ತಿದ್ದೆವು.  ಒಂದು ವಾರಕ್ಕೆ ನಮ್ಮ ಹೊಸ ಜೋಡಿದಾರ ನಮ್ಮ ಜಠರಾಗ್ನಿಗೆ ನಮಸ್ಕಾರ ಹಾಕಿ ಬರುವುದನ್ನು ಬಿಟ್ಟ!     

ಸಾಯಂಕಾಲ ನಮ್ಮ ಕೈಯಡಿಗೆ – ಅನ್ನ, ಹುಳಿ, ಪಲ್ಯ, ಖಾನಾವಳಿಯಿಂದ ತಂದ ಭಕ್ಕರಿ (ಜೋಳದ ರೊಟ್ಟಿ) / ಚಪಾತಿ ಮತ್ತು ಅಂಗಡಿಯ ಗಟ್ಟಿ ಮೊಸರು.  ಜೊತೆಗೆ ಮನೆಯಲ್ಲಿ ಕಾಯಿಸಿದ ಘಮ್ಮೆನ್ನುವ ತುಪ್ಪ!  ಸುಖವೋ ಸುಖ!  ಹುಳಿಪುಡಿಯ ಘಮದ ಅಡಿಗೆಯ ವಾಸನೆ ತಡೆಯಲಾಗದೇ ನಮ್ಮ ಮನೆಯ ಮಾಲೀಕರು ಒಂದಷ್ಟು ಸಲ ಏನ್ರೀ ಅಡಿಗೆ ಇವತ್ತು ಅಂದು ಬಂದು ನೋಡಿದ್ದೂ ಇದೆ.  ಮಾಡಿದ ಅಡಿಗೆ ಅವತ್ತಿಗೆ ಖಾಲಿ ಮಾಡುವುದೇ ಕೆಲಸ (“ಫುಲ್ ಜಸ್ಟಿಸ್”) .  ರಾತ್ರಿ 9 ಕ್ಕೆ ಹೊಟ್ಟೆ ತುಂಬಾ ಉಂಡು, ಮನೆಯಿಂದ ತಂದ ಅಡಿಕೆಪುಡಿ ಹಾಕಿಕೊಂಡು, ಕೈಯಲ್ಲಿ ರೇಡಿಯೋ ಹಿಡಿದುಕೊಂಡು ವಾಕಿಂಗ್ ಹೋಗುವುದು; ಅಲ್ಲಿಂದ ಬಂದು ಓದುವುದು.  ಇದು ನಮ್ಮ ನಿತ್ಯದ ದಿನಚರಿ.  ಎರಡು ದಿನಕ್ಕೆ ನಮ್ಮಲ್ಲಿರಲು ಬಂದ ಗೆಳೆಯನೊಬ್ಬ ಅವನ ಹೆಂಡತಿಯ ಕೈಯಡುಗೆಯನ್ನು ಬೈಯುತ್ತ, ನಮ್ಮ ಅಡಿಗೆಯ ರುಚಿಯನ್ನು ಹೊಗಳಿ ಹೋದ; ಅಷ್ಟೇ ಅಲ್ಲ ನಮ್ಮ ಕಾಲೇಜಿನ ಮಿತ್ರರಲ್ಲೆಲ್ಲ ಹಬ್ಬಿಸಿದ ಕೂಡ.

ಬೀದರಿನಲ್ಲಿರುವ ಪ್ರಸಿದ್ಧ ನಾನಕ್ ಝರಾದ ಗುರುದ್ವಾರಾದ ಹತ್ತಿರ ಇರುವ ಪಂಜಾಬಿ ಧಾಬಾಗಳಿಗೆ, ಪ್ರತಿ ರವಿವಾರ ಬೆಳಗ್ಗೆ 7.30ಕ್ಕೆ ಹಾಜರ್ ನಾವು ಮೂವರೂ! ಒಬ್ಬೊಬ್ಬರು ಎಂಟಿಂಚಿನ ಅಗಲದ 6 ಆಲೂ ಪರಾಠಾಗಳನ್ನು ಬೆಣ್ಣೆ-ಮೊಸರು-ಉಪ್ಪಿನಕಾಯಿಗಳೊಂದಿಗೆ ನುಂಗಿ ಬಂದು ಹೆಬ್ಬಾವಿನಂತೆ ಮಲಗಿದರೆ, ಒಮ್ಮೆಲೆ 3 ಗಂಟೆಗೆ ಎದ್ದು, ಚಹಾ ಕುಡಿದು – ಮತ್ತೆ ಸಾಯಂಕಾಲದ ಅಡಿಗೆಯ ತಯಾರಿಗೆ ರೆಡಿ!!  

ಓಡಾಡುವುದಕ್ಕೆ ಗೆಳೆಯ ಅನುರೂಪನ ಬಜಾಜ್ ಸ್ಕೂಟರ್ರು ಇತ್ತು.  ಮೊದಲು ಮೂರೂ ಜನ ಆರಾಮವಾಗಿ ಒಂದೇ ಸ್ಕೂಟರಿನ ಮೇಲೆ ಕೂತು ಓಡಾಡುತ್ತಿದ್ದೆವು.  ನಮ್ಮ ತಿಂಡಿ-ಊಟದ (ಫುಲ್ ಜಸ್ಟಿಸ್!) ಪರಿಣಾಮದಿಂದ, ಮೂವರೂ ಕೂತು ಓಡಿಸುತ್ತಿದ್ದ ಅನುರೂಪನ ಸ್ಕೂಟರಿನ ಹ್ಯಾಂಡಲ್ಲು ಹತ್ತಿರ ಹತ್ತಿರವೆನ್ನಿಸತೊಡಗಿತು.  “ಲೇ, ಸ್ವಲ್ಪ ಮುಂದೆ ಸರಿಯಲೇ, ಹಿಂದೆ ಜಾಗ ಇಲ್ಲ” ಅಂತ ನಾವನ್ನುವುದು, “ಜಾಗ ಎಲ್ಲದರಲೇ, ನಾನಿನ್ನು ಹ್ಯಾಂಡಲ್ ಆ ಕಡೆ ಹೋಗಬೇಕಷ್ಟೇ!” ಅಂತ ಅವನನ್ನುವುದೂ ಶುರುವಾಯ್ತು.  ನಮ್ಮ ಕಾಲೇಜಿನ ಸೀನಿಯರ್ ಹುಡುಗಿಯರು ನಮ್ಮನ್ನು ಒಂದೇ ಸ್ಕೂಟರಿನ ಮೇಲೆ ನೋಡುವ ರೀತಿ ಯಾಕೋ ಬದಲಾಗಿದೆ ಅನ್ನಿಸಲು ಶುರುವಾಗಿ ಅದನ್ನು ನಿಲ್ಲಿಸಿದೆವು.  ಆದರೆ, ದಿನಕ್ಕೆ ಇಬ್ಬರು ಸ್ಕೂಟರಿನ ಮೇಲೆ ಹೋಗುವುದು ಮತ್ತು ಮೂರನೆಯವರು ಕಾಲೇಜು ವ್ಯಾನಿನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು.  ರೂಲ್ಸ್ ಪ್ರಕಾರ ಪ್ರತಿ ಮೂರನೆಯ ದಿನ (ಸ್ಕೂಟರಿಟ್ಟವನು ಅವನೇ ಆದರೂ) ಅನುರೂಪನನ್ನು ಎಬ್ಬಿಸಿ, ಬಸ್ಸಿಗೆ ಹೋಗಲು ಹೇಳುತ್ತಿದ್ದೆವು!

ಮುಂದೆ ಪುಣೆಯಲ್ಲಿ 3 ವರ್ಷ, ವೆಲ್ಲೂರಿನಲ್ಲಿ 1 ವರ್ಷ ಇದ್ದು ಚೆನ್ನಾಯಿಗೆ ಬಂದೆ.  ಚೆನ್ನಾಯಿಯಲ್ಲಿ ಒಂದು ದೊಡ್ಡ ಫ್ಲಾಟಿನಲ್ಲಿ 5 ಹುಡುಗರೊಂದಿಗೆ ಇದ್ದೆ.  ಅಲ್ಲಿ 2-3 ವಾರಕ್ಕೊಮ್ಮೆ ನಮ್ಮ ಮ್ಯಾಗ್ಗಿ ನೂಡಲ್ಸ್ ಸಮಾರಾಧನೆ.  9-10 ಪಾಕೀಟುಗಳಿಗೆ, ಇತರ ತರಕಾರಿ ಹಾಕಿ ಒಂದಿಡೀ ಅಮುಲ್ ಬಟರ್ ಬ್ಲಾಕ್ ಹಾಕಿ ಮಾಡಿದ ನೂಡಲ್ಸ್ ಅನ್ನು, ಬೆಣ್ಣೆ ಹಚ್ಚಿ ಹಂಚಿನ ಮೇಲೆ ಘಮ್ಮನ್ನುವಂತೆ ಬೇಯಿಸಿದ ಬ್ರೆಡ್ಡಿನೊಂದಿಗೆ ತಿನ್ನುವುದು! ಆಹಾ!

ಪ್ರಸ್ತುತ….

ಮದುವೆಯಾದಾಗಿನಿಂದ, ಅದೂ ಇಂಗ್ಲಂಡಿಗೆ ಬಂದ ಮೇಲೆ, ವಾರ-ಎರಡು ವಾರಕ್ಕೊಮ್ಮೆ (ಹೆಂಡತಿಯ on call ಬರುತ್ತವಲ್ಲ!) ಮಕ್ಕಳೊಂದಿಗೆ ಏನೋ ಒಂದು ಐಟಮ್ ಅಡಿಗೆ ಮಾಡುವುದು ಬಿಟ್ಟರೆ, ಉಳಿದಂತೆ ನನ್ನ ಕೆಲಸ ತರಕಾರಿ ಹೆಚ್ಚುವುದು, ದೋಸೆ ಹುಯ್ದು ಕೊಡುವುದು ಮುಂತಾದ ಸಹಾಯಕ ಕೆಲಸಗಳಷ್ಟೆ.  ಅದೊಂದು ರೀತಿಯ ನಿಶ್ಚಿಂತೆಯ ಕೆಲಸ – ಆದೇಶ ಪರಿಪಾಲನೆ.  ಅದರಲ್ಲೂ ತರಕಾರಿ ಹೆಚ್ಚುವುದು ನನ್ನ ಇಷ್ಟದ ಕೆಲಸ – ಅದಕ್ಕೋಸ್ಕರ ಹೋದಲ್ಲೆಲ್ಲ ಬೇರೆ ಬೇರೆ ತರಹದ ಚಾಕುಗಳನ್ನು ನೋಡುವುದು, ತರುವುದು ಮಾಡಿ ಮನೆಯಲ್ಲೀಗ ಒಂದು ಹನ್ನೆರಡು ಚಾಕುಗಳಿವೆ!  ಇನ್ನೂ ಜಪಾನಿನ ಉಕ್ಕಿನದೊಂದು ತೊಗೊಳ್ಳುವ ಆಸೆಯಿದೆ.  

ಅಡುಗೆಮನೆಯಲ್ಲಿ ಬರಿಯ ಅವಾಂತರಗಳಷ್ಟೇ ಆಗಬೇಕಿಲ್ಲ, ಅಲ್ಲವೇ?  ಅಲ್ಲಿ ಒಂದು ರೀತಿಯ ಮಾನಸಿಕ ಥೆರಪಿ ಸಿಗುತ್ತದೆ.  ತರಕಾರಿ ಸಣ್ಣಗೆ ಹೆಚ್ಚುವುದರ ಕಡೆಗೋ, ದೋಸೆಯನ್ನು ಪರ್ಫೆಕ್ಟ್ ವೃತ್ತಾಕಾರವಾಗುವಂತೆ ಹುಯ್ಯುವುದರ ಕಡೆಗೋ ಮನಸ್ಸನ್ನು ಫೊಕಸ್ ಮಾಡಿ, ಹೊರಜಗದ ಚಿಂತೆ ಮರೆಯಬಹುದು.  “ಪಪ್ಪ ಮೇಕ್ಸ್ ಬೆಟರ್ ದೋಸೆ” ಅಂತಲೋ, ಯಾವತ್ತೋ ಒಮ್ಮೆ ಮಾಡುವ ಸೌತೆಕಾಯಿ ಭಾತನ್ನು “ಹಿಸ್ ಭಾತ್ ಇಸ್ ದ ಬೆಸ್ಟ್, ಅಮ್ಮಾ” ಅಂತಲೋ ಮಕ್ಕಳು ಹೇಳುವಾಗ – ಹೆಮ್ಮೆಯಿಂದ ಹೆಂಡತಿಯ ಕಡೆಗೆ ನೋಡಿ ಬೀಗಬಹುದು!

– ಲಕ್ಷ್ಮೀನಾರಾಯಣ ಗುಡೂರ್.

************************************************************************

14 thoughts on “ಅಡುಗೆ – ಅಡುಗೆಮನೆ ಸರಣಿ: ವೆಂಕಟ್ ಶ್ರೀರಾಮುಲು ಮತ್ತು ಲಕ್ಷ್ಮೀನಾರಾಯಣ ಗುಡೂರ್

  1. ಈ ವಾರದ ಅಡುಗೆಮನೆ ಸರಣಿ ಲೇಖನದ ಕಂತು ಭರ್ಜರಿಯಾಗಿದೆ. ಶ್ರೀರಾಮುಲು ಅವರ ಉಪ್ಪಿಟ್ಟಿನ ಮತ್ತು ಮೂಲಂಗಿ ಹುಳಿ ಸಾಹಸ ನಿಜಕ್ಕೂ ಆಸಕ್ತಿಪೂರ್ಣ. ಲಾಕ್-ದೌನ್ ಪರಿಸ್ಥಿತಿ ಜನರಿಗೆ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಸಿ ಎಲ್ಲರ ಜೀವನಕ್ಕೆ ಒಂದು ನೂತನವಾದ ಆಯಾಮವನ್ನೇ ನೀಡಿದೆ ಎನ್ನಬಹುದು. ಅಂದ ಹಾಗೆ ಗಂಡಸರಿಗೆ ಈ ಉಪ್ಪಿಟ್ಟಿನ ಬಗ್ಗೆ ಇಷ್ಟೊಂದು ಮೋಹ ಯಾಕೆ ಅನ್ನುವುದು ನನ್ನ ಪಾಲಿಗೆ ಇನ್ನು ಬಿಡಿಸಲಾಗದ ಒಗಟು! ಉಪ್ಪಿಟ್ಟು ಮಾಡುವುದನ್ನು ಕಲಿತು ಬಿಟ್ಟರೆ, ಅಡುಗೆ ಕಲೆಯನ್ನೇ ತಮ್ಮ ಬುಟ್ಟಿಗೆ ಹಾಕಿಕೊಂಡಂತೆ ಎನ್ನುವ ವಿಚಾರವಿದೆ. ಅದೇನೇ ಇರಲಿ, ಶ್ರೀರಾಮುಲು ಅವರ ಲೇಖನ ಸೊಗಸಾಗಿದೆ. ಅನಿವಾಸಿ ವೇದಿಕೆಯಲ್ಲಿ ಅವರ ಲೇಖನಗಳು ಮತ್ತಷ್ಟು ಪ್ರಕಟವಾಗಲಿ.
    ಮಾನ್ಯ ಗುಡೂರ್ ಅವರು ಒಬ್ಬ ಸವ್ಯಸಾಚಿ! ಕೇವಲ ವ್ಯಂಗ್ಯಚಿತ್ರ ಕಲೆಯನ್ನು ಅರೆದು ಕುಡಿದಿದ್ದಾರೆ ಎಂದುಕೊಂಡಿದ್ದೆ. ಅವರ ಈ ಲೇಖನ ಓದಿದ ಮೇಲೆ, ಅವರ ಬತ್ತಳಿಕೆಯಲ್ಲಿ ಇನ್ನು ಅನೇಕ ಅಸ್ತ್ರಗಳಿವೆ ಎನ್ನುವುದು ಜಾಹಿರಾತಾಗಿದೆ. ಅವರು ಚಿತ್ರಿಸಿರುವ ಅಡುಗೆಮನೆಯ ಕಲ್ಪನೆ, ನಮ್ಮೆಲ್ಲರ ಮನೆಗಳಲ್ಲಿ ಗಂಡುಮಕ್ಕಳು ಏನು ಮಾಡ್ತಾ ಇದ್ರು ಎನ್ನುವುದನ್ನು ತುಂಬಾ ಚೆನ್ನಾಗಿ ತಿಳಿದುಬರುತ್ತದೆ. ಅವಲಕ್ಕಿಯ ಬಹುಮುಖ ಮಹಿಮೆಯಂತೂ, ನನ್ನ ನೆನಪನ್ನು ತಾಜಾಗೊಳಿಸಿತು. ಮನೆಗಳಲ್ಲಿ ಶನಿವಾರದ ದಿನಗಳಲ್ಲಿ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ, ಅವಲಕ್ಕಿಯೇ ನಮ್ಮೆಲ್ಲರಿಗೆ ಬೆಳಗಿನ ಉಪಹಾರ. ಅದರ ಜೊತೆಗೆ ಮೋಸರೇನು, ಮನೆಯ ಡಬ್ಬಗಳಲ್ಲಿ ಇರುತ್ತಿದ್ದ ಹಲವು ಹತ್ತು ಪುಡಿಗಳನ್ನು ಎಣ್ಣೆ ಬೆರೆಸಿ ತಿನ್ನುತ್ತಿದ್ದದ್ದು ಮರೆಯುವುದಿಲ್ಲ. ಇಂದಿಗೂ ಅವಲಕ್ಕಿ ಜೊತೆ ಸಾರಿನಪುಡಿ ಸೇರಿಸಿ ತಿನ್ನುವುದು ಬಿಟ್ಟಿಲ್ಲ. ಬಿದರಿನ ಅವರ ಬ್ರಹ್ಮಚಾರಿಯ ದಿನಗಳ ಅಡುಗೆ ಅನುಭವವನ್ನು ಬಹಳ ರಸವತ್ತಾಗಿ ವರ್ಣಿಸಿದ್ದಾರೆ. ಜೊತೆಗೆ ಇಲ್ಲಿ ನಮ್ಮ ಅಡುಗೆಮನೆಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾದ ಚಿತ್ರವೂ ಇದೆ. ಈಗಂತೂ ಮಕ್ಕಳಿಗೆ ರೈಸ್ ಪಪ್ಸ್, ಮ್ಯಾಗಿ ನೂಡಲ್ಸ್ ನಂತಹ ಇನ್ಸ್ಟಂಟ್ ಸ್ನಾಕ್ಸ್ ಲಭ್ಯವಿದೆ. ಹಾಗಾಗಿ ಅವಲಕ್ಕಿ ಬಹುಶಃ ತನ್ನ ಸ್ಥಾನ ಕಳೆದುಕೊಳ್ಳುವ ಸಂಭವವಿದೆ!
    ಒಟ್ಟಿನಲ್ಲಿ ಅಡುಗೆಮನೆ ಸರಣಿಯ ಲೇಖನಗಳು ಯಶಸ್ವಿಯಾಗಿ ಮುಂದುವರೆಯುತ್ತಿರುವುದು ಸಂತೋಷದ ವಿಷಯ.
    ಉಮಾ ವೆಂಕಟೇಶ್

    Liked by 2 people

  2. .ದೇಸಾಯಿಅವರೇ ಲೇಖನ ಬರೆಯಲು ಪ್ರೋತ್ಸಹಿಸಿದೆಕ್ಕೆ ಧನ್ಯವಾದಗಳು. “recurrent
    ಗ್ರಾಸೆ ಮಕ್ಷಿಕಾ ಪಾತಹ” ಆಗದಿದ್ದರೆ ಸರಿ. ದಾಕ್ಷಾಯಣಿಯವರು ಮತ್ತು ದಕ್ಷ ಗೌಡ ಅವರಿಗೂ ನನ್ನ ಧನ್ಯವಾದಗಳು.

    Liked by 1 person

  3. ಕೇಶವ್ ಅವರೇ,ವತ್ಸಲಾಅವರೇ , ಸರೋಜಿನಿಅವರೇ ಮತ್ತು ರಾಮಮೂರ್ತಿಗಳವರೆ, ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
    ರಾಮಮೂರ್ತಿಯವರೇ ನೀವು ಹೇಳಿದ್ದನ್ನು ಸಮರ್ಥಿಸುತ್ತೇನೆ . ನಮ್ಮ ಮೂವರು ಅಳಿಯಂದರು ಇಲ್ಲಿಯವರು,ಸ್ವದೇಶೀಆಗಲಿ ಅಥವಾ ಸ್ಥಳೀಯ ಅಡಿಗೆ ಆಗಲಿ ನಿಪುಣರು,ಒಬ್ಬ ಅಳಿಯ vegan ಮತ್ತು ಮಗ ಕಾರ್ತಿಕ್ ಸೇರಿದ್ದಾನೆ ಆ ಗುಂಪಲ್ಲಿ.. ಪ್ರತಿ ವಾರ ಹೊಸ ಹೊಸ ಅಡಿಗೆ ಪ್ರಯೋಗ ಮಾಡುತಿರುತ್ತಾರೆ.

    Like

  4. ಶ್ರೀರಾಮುಲು ಅವರು ಹಾಸ್ಯ ಬೆರೆಸಿ ಮಾಡಿದ ಉಪ್ಪಿಟ್ಟು, ಮೂಲಂಗಿ ಹುಳಿಗಳ ರುಚಿ ಅದ್ಭುತ. ಅವರು ನಳ ಪಾಕಗಳಲ್ಲಿ ಮುಂದುವರೆದಂತೇ, ಅನಿವಾಸಿಯ ಅಂಗಳದಲ್ಲೂ ರಂಗವಲ್ಲಿಗಳನ್ನು ಬರೆಯಲಿ. ಅವರ ಶೈಲಿ ಚೇತೋಹಾರಿ.

    ಗುಡೂರರು ತಮ್ಮ ಬಹುಮುಖ ಪ್ರತಿಭೆಯನ್ನು ಇನ್ನೊಮ್ಮೆ ತೆರೆದಿಟ್ಟಿದ್ದಾರೆ ನಮ್ಮೆದುರು. ಅವಲಕ್ಕಿ ನಮ್ಮೆಲ್ಲರ ಪ್ರೀತಿಯ ಸಾಮಗ್ರಿ, ಅವಸರ ಅಥವಾ ಕಷ್ಟದ ಕಾಲದಲ್ಲಿ ಧಿಡೀರನೆ ಕೃಷ್ಣನು ಅವತರಿಸಿದಂತೆ ಗೃಹಿಣಿಯರ ಸಹಾಯಕ್ಕೆ ಒದಗುತ್ತದೆ. ಕೃಷ್ಣನಂತೆಯೇ ಫೂಲ್ ಪ್ರೂಫ್ ಕೂಡಾ. ಹಾಗಾಗೇ ಭಾಗವತದಲ್ಲೂ ಕೃಷ್ಣ- ಕುಚೇಲ – ಅವಲಕ್ಕಿಗಳ ಸಮಾಗಮ ಕಾಕತಾಳೀಯವೇ?
    ಗುಡೂರರ ಹಲವು ಅವಲಕ್ಕಿ ಪ್ರಕಾರಗಳು ಹಾಳಾಗದೇ ಉಳಿಯುವಂತಹುದಾಗಿರುವುದರಿಂದ, ಲಾಕ್ ಡೌನ್ ಮುಗಿಯುವವರೆಗೂ ಕಾಯದೇ, ಧಿಡೀರನೇ ಪಾರ್ಸಲ್ ಸರ್ವಿಸ್ ಶುರು ಮಾಡಿ ಎಂದು ಅನಿವಾಸಿಯವರ ಪರ ಬಿನ್ನಹ.
    – ರಾಂ

    Liked by 2 people

  5. ಶ್ರೀರಾಮುಲು ಅವರು disclaimer ಹಾಕಿ ಬರೆದರೂ ಅವರ ಹಾಸ್ಯಪ್ರಜ್ಞೆ ಮತ್ತು ಬರೆದಿರುವ ರೀತಿಯಲ್ಲಿ ಸೊಗಸಿದೆ. ಉಪ್ಪಿಟ್ಟು ತಿನ್ನುವುದು ಸುಲಭ, ‘ಇವತ್ತೂ ಉಪ್ಪಿಟ್ಟಾ?‘ ಎಂದು ಬಯ್ಯುವುದು ಇನ್ನೂ ಸುಲಭ. ಆದರೆ ಉಪ್ಪಿಟ್ಟು ಮಾಡುವುದು ಅಷ್ಟು ಸುಲಭವಲ್ಲ. ಕೊನೆಗೂ ನೀವು ಮಾಡಿ ಸಾಧಿಸಿದಿರಿ. SATNAV ಕಲ್ಪನೆಯೇ ಅದ್ಭುತ! ನಾನು ಏನೇನೆಲ್ಲ ಅಡುಗೆ ಮಾಡಿದ್ದೀನಿ, ಆದರೆ ಇನ್ನೂ ಉಪ್ಪಿಟ್ಟು ಮಾಡುವ ಸಾಹಸಕ್ಕೆ ಕೈಹಾಕಿಲ್ಲ. ಇನ್ನೂ ಹೀಗೇ ಬರೆಯುತ್ತಿರಿ, ‘ಅನಿವಾಸಿ‘ಯನ್ನು ಸಮೃದ್ಧಿಗೊಳಿಸಿರಿ.

    ಅಡುಗೆ ಸರಣಿ ಶುರು ಮಾಡಿದ ಗುಡೂರ್ ಅವರು ತಮ್ಮ ಅಡುಗೆಯ ಬಗ್ಗೆ ಯಾವತ್ತು ಬರೆಯುತ್ತಾರೆ ಎಂದು ಕಾಯುತ್ತಲೇ ಇದ್ದೆ. ನಾನೂ ಅಷ್ಟೇ ನನ್ನ ಹೆಚ್ಚಿನ ಸಮಯ ಅಡುಗೆ ಮನೆಯಲ್ಲೇ ಕಳೇದಿದ್ದೇನೆ. ಅಮ್ಮ ಅಡುಗೆ ಮಾಡುತ್ತಿದ್ದರೆ ನಾನು ದೇವರ ಕಟ್ಟೆ ಮೇಲೆ ಕೂತು ಓದುತ್ತಿದ್ದೆ. ‘ಅದನ್ನ ಕೊಡು, ಇದನ್ನ ಕೊಡು‘ ಎಂದರೆ ಖುಷಿಯಲ್ಲಿ ಕೊಡತಿದ್ದೆ. ಅಮ್ಮ ಹೇಳುವ ಬಂಧು ಬಳಗದ ಎಲ್ಲ ಕತೆಗಳನ್ನೂ ಕೇಳಿಸಿಕೊಳ್ಳುತ್ತಿದ್ದೆ.

    ನಾನೂ ಅವಲಕ್ಕಿಯ ಭಕ್ತನಽ, ಆದ್ರ ನಿಮ್ಮಷ್ಟ ತರಹದ ಅವಲಕ್ಕಿ ತಿಂದಿಲ್ರಿ. ನನ್ನ ಫೆವರೇಟ್ – ಹಚ್ಚಿದ ಅವಲಕ್ಕಿಗೆ ಮೊಸರು! ಮುಂಜ್ಯಾನಿಂದ ಸಂಜೀತನಕ ಅವಲಕ್ಕಿ ತಿನ್ನು ಅಂದ್ರ ತಿನ್ನೂ ಮನಶ್ಯಾ ನಾ. ಮೊಸರವಲಕ್ಕಿಗೆ ಒಂಚೂರ್ ಮಸಾಲಿ ಪುಡಿ ಖಾರಪುಡಿ ನನ್ನ ಪ್ರಾಣ. ಮೊಸರವಲಕ್ಕಿಗೆ ಯಾವ್ದೇ ಚಟ್ನೀಪುಡೀನೂ ಉಪ್ಪಿನಕಾಯಿಯೂ ನಡೀತದ. ಹಚ್ಚಿದ ಅವಲಕ್ಕಿಗೆ ಸೌತೀಕಾಯಿ, ಉಳ್ಳಾಗಡ್ಡಿ, ಕೋತಂಬ್ರಿ, ಟೊಮ್ಯಾಟೋ (ಯಾವುದೇ ಪರ್ಮುಟೇಷನ್ ಕಾಂಬಿನೇಷನ್ ಇದ್ರೂ ಅದು ರುಚಿ) ಇದ್ದರಂತೂ ಸ್ವರ್ಗ. ಅಷ್ಟ ಅಲ್ಲ, ನಾನು ಮೆಂತೆ ಪಲ್ಯ ಸಣ್ಣಗ ಕತ್ತರಿಸಿ, ಮೂಲಂಗಿ ತುರುದು ಕೂಡ ಹಚ್ಚಿದವಲಕ್ಕಿಗೆ ಹಾಕಿ ತಿಂದೇನಿ. ಬಿಳಿ ಅವಲಕ್ಕಿಗೆ ಕಾಫಿ ಕಲಸಿಕೊಂಡೂ ತಿಂದೇನಿ. ಮೆಂತೆ ಮೆಣಸಿನಕಾಯಿ, ಸಂಡಿಗಿ… ನಿಮ್ಮ ಬರವಣಿಗೆ ಓದಕೋತ ಇದ್ರ ಈಗಽ ಹೋಗಿ ಅವಲಕ್ಕಿ ಹಚ್ಚೂಣು ಅನಸಲಿಕತ್ತದ. ಊರಿಂದ ತಂದ ಮೆಂತೆಹಿಟ್ಟೂ ಅದ.

    ನಿಮ್ಮ ಹಾಸ್ಟೆಲ್ ಜೀವನದ ಭೀಮಸೇನ ನಳಮಹಾರಾಜ ಪಾಕ ಭಾಳ ಮಸ್ತ ಬರ್ದೀರಿ. ಮುಂದಿನ ‘ಅನಿವಾಸಿ‘ ಮೀಟ್‍ನ್ಯಾಗ ನಿಮ್ಮದಽ ನಳಪಾಕ ಆಗ್ಲಿ, ಉಳ್ಳಾಗಡ್ಡಿ ಬಟಾಟಿ ಕತ್ತರಿಸಲಿಕ್ಕೆ ನಾನು ರೆಡಿ.

    – ಕೇಶವ

    Liked by 2 people

  6. Enjoyed reading both the writing. Hilarious Uppittu experiment. I never knew so many varieties and dressings of Good old Avalakki. Bangalore people don’t know the AVALAKKI MAhatme. Thank you for writing.
    Vathsala

    Liked by 2 people

  7. ವಾವ್ ವಾವ್ ಅನ್ನಲೇ ಬೇಕು ಈ ಅಡುಗೆ ಮನೆ ಅಡಿಗೆ ಸರಣಿಗೆ.ಶ್ರೀರಾಮುಲು ಅವರೇ ಚಿಂತೆ ಬೇಡ.ಎಡವದೇ, ಬೀಳದೇ ನಡೆಯೋದನ್ನ ಕಲಿಯಲಾದೀತಾ? ಆವಾಂತರ ಗಳಿಲ್ಲದ ಅಡಿಗೆ ಮನೆ ಉಂಟಾ? ಈಗ ನಿಮ್ಮ ಉಪ್ಪಿಟ್ಟಿನ ರುಚಿ ಸಕತ್ ಆಗಿರಬೇಕು.ಹೊರಗೆ ಹೋಗಿ ತಿನ್ನುವ ಪ್ರಮೇಯ ಬರಲಿಕ್ಕಿಲ್ಲ ಅನಕೋತೀನಿ.ಲಾಕ್ಡೌನ್ ಕೆಲ ಒಳ್ಳೇ ಕೆಲಸ ಮಾಡಿದೆ ಅನಬಹುದು!
    ಗುಡೂರ ಅವರ ಅವಲಕ್ಕಿ ಪ್ರೀತಿ ನಾವು ಉತ್ತರ ಕರ್ನಾಟಕ ದವರ ಜನ್ಮಸಿದ್ಧ ಹಕ್ಕು.ಅವಲಕ್ಕಿ ತಿನ್ನಲ್ಲ ಅನ್ನೋರು ರಸರುಚಿಗಳ ಗುರುತು ಪರಿಚಯ ಇಲ್ಲದವರು ಅನಲಿಕ ಅಡ್ಡಿಯಿಲ್ಲ.
    ನಿಮಗೆ ಬೇಕೂಂದ್ರ ಇನ್ನೂ ಹಲವಾರು ಬಗೆಯ ಅವಲಕ್ಕಿ ಪಾಕಗಳನ್ನ ಹೇಳಿಕೊಡ್ತೀನಿ ಗುಡೂರ್ ಅವರೇ.ಉದಾಹರಣೆಗೆ ಕೊಲ್ಹಾಪುರ ದ ಅಲೀಪಾಕ. ರಾತ್ರಿ ಭಕ್ಕರಿ ಹುಳಿ ತುಪ್ಪದ ರುಚಿ ಅಂತೂ ಬರೋಬ್ಬರಿ.ಬಿಸಿ ಝುಣಕಾ , ಮಸ್ತ್ ಪೈಕಿ ತುಪ್ಪ, ಭಕ್ಕರಿ ತಿಂದ ನೋಡ್ರಿ.ಯಾವ‌ ಪಕ್ವಾನ್ನ ನೂ ರದ್ದ ಅದರ ಮುಂದ.ಆವಾಂತರಗಳಿಲ್ಲದ ಅಡಿಗೆ ಮನೆ ಇರತಾವೋ ಇಲ್ಲೋ ಸಂಶಯ.ಯಾಕಂದ್ರ ನಿಮ್ಮನ್ನು ನಿಮ್ಮ ಮನೆಯಾಕೆ ಸಣ್ಣಗೆ ಅಡಿಗೆ ಮನೆ ಯಿಂದ ದೂರ ಇಟ್ಟಹಾಂಗ ಅನಿಸ್ತು.
    ಮಸ್ತ್ ಮಜಾ ಬಂತು ಈ ಕಂತು ಓದಿ.ಇಬ್ಬರ ಶೈಲಿನೂ ಜಬರ್ದಸ್ತ್ ಅದ.
    ಶ್ರೀರಾಮುಲು ಅವರಿಗೂ, ಗುಡೂರ ಅವರಿಗೂ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 2 people

    • ನನ್ನ ಅಡಿಗೆಮನೆ ಪ್ರವೇಶ ಸುಮಾರು ಆರು , ಏಳು ವರ್ಷದಿಂದ ಮಾತ್ರ. ಉಪ್ಪಿಟ್ ನಿಂದ ಶುರುವಾಯಿತು with reasonable success . ನಮ್ಮ ಅಳಿಯ ಟೋನಿ ಉಪ್ಪಿಟ್ authority ಅಂತ ಹೇಳಿಕೊಳ್ಳುತ್ತಾನೆ , ಅವನಿಂದ ಸಹ ಹೊಗಳಿಕೆ ಬಂದಿದೆ. ಈಗ ನನ್ನ ಸ್ಪೆಸಿಯಾಲಿಟಿ (?) ( ಜನಪ್ರಿಯವಾದ್ದು ) jeera rice , veg chilli concarne, ಸಾರು,ಹುಳಿ ಮತ್ತು pesto based pasta. ಜಂಬಕ್ಕೆ ಹೇಳುತ್ತಿಲ್ಲ ಆಗಾಗ್ಗೆ ಮಡದಿಯಿಂದ ಸಹ
      “ಪರವಾಗಿಲ್ಲ” ಅನ್ನುವ comment ಸಹ ಬಂದಿದೆ. ಮಗಳು ಮತ್ತು ಮೊಮ್ಮಗಳಿಂದ ಸಹ ಪ್ರಶಸ್ತಿ. ಇನ್ನೇನು ಬೇಕು
      ಹೇಳಿ . To be honest I enjoy cooking, ಸೀತು short cut ಗಳ ಭೋದನೆಯಿಂದ ಕೆಲಸ ಕಡಿಮೆಯಾಗಿದೆ ಅಂತ ಹೇಳಿದರೆ ತಪ್ಪಿಲ್ಲ ಶ್ರೀರಾಮುಲು ಅವರೇ, ನೀವು ಉಪ್ಪಿಟ್ ನಿಂದ ನಿಮ್ಮ ಹೊಸ ಕೆರಿಯರ್ ಶುರುಮಾಡಿದ್ದೀರ ಇಲ್ಲಿಗೆ ನಿಲ್ಲಸಬೇಡಿ ಮುಂದೆವರಿಸಿ

      Liked by 1 person

  8. ..ಇಷ್ಟು ದಿನ incognito ಆಗಿದ್ದ ನಾನು ಈಗ ನನ್ನ good old ಉಪ್ಪಿಟ್ಟಿನಿಂದ ಸಾಕಷ್ಟು ಮಂದಿಗೆ ತಿಳಿಯಿತು.
    ದಾಕ್ಷಾಯಿಣಿಯವರೇ, ನಿಮ್ಮ ಉತ್ತೇಜನಕ್ಕೆ ಮತ್ತು ಸಲಹೆಗೆ ಹೃತ್ಪೂರಕವಾದ ಧನ್ಯವಾದಗಳು.
    ನನ್ನ ಬರಹಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಬೆಂಬಲಿಸಿದ ಶ್ರೀವತ್ಸ ದೇಸಾಯಿ ಅವರಿಗೂ ಆತ್ಮಪೂರಕವಾದ ವಂದನೆಗಳು.
    ಗುಡೂರುವರು ತಮ್ಮ ಲೇಖನ ಜೊತೆಗೆ ನನ್ನ ಲೇಖನವನ್ನು ಸೇರಿಸಿದ್ದಾರೆ ಅವರಿಗೂ ಚಿರಋಣಿ. ಹೂವಿನ ಜೊತೆಗೆ ನಾರು ಗಾದೆ ಜ್ಞಾಪಕಕ್ಕೆ ಬಂತು. ಅವರ ಸುಂದರವಾದ ಲೇಖನಕ್ಕೆ ಒಂದು ಧೃಷ್ಟಿ ಚುಕ್ಕೆ ಇದ್ದಂತೆ ನನ್ನ ಕಿರು ಲೇಖನ. ಅನಿವಾಸಿಯಲ್ಲಿ ಪ್ರಕಟವಾಗಿರುವ ಲೇಖಕ, ಲೇಖಕಿಯರ ಬರಹಗಳು ಬಹು ಉತ್ತಮವರ್ಗಕ್ಕೆ ಸೇರಿದವು ಅಂದರೆ ಅತಿಶೋಯಿಕ್ತಿ ಅಲ್ಲ.
    ಹಿಂದೆಯಿಂದ i ಪ್ಯಾಡ್ನಿಂದ ಪ್ರಖ್ಯಾತ ಕರ್ನಾಟಕ ಸಂಗೀತ ಕೃತಿಗಳ ವಿರಚಿತ ತ್ಯಾಗರಾಜರ, ಗಾಯಕ ಡಾ ಬಾಲಮುರಳಿಕೃಷ್ಣ ಅವರ ಮಧುರ ಧ್ವನಿ ಯಿಂದ ‘ಎಂದರೋ ಮಹಾನಭಾವುಲು ಅಂದರಿಕಿ ವಂದನಮುಲು ‘ ಕೇಳುತ್ತಿತ್ತು ..

    Like

  9. ವೆಂಕಟ್ ಶ್ರೀರಾಮುಲು ಅವರಿಗೆ ಅನಿವಾಸಿ ಬಳಗದಿಂದ ಸ್ವಾಗತ. ನಿಮ್ಮ ಉಪ್ಪಿಟ್ಟು ಉಲ್ಟಾ ಆದರೂ ನಿಮ್ಮ ಬರವಣಿಗೆ ಬಹುರುಚಿಯಿಂದ ಮೂಡಿಬಂದಿದೆ. ಮುಂದೆಯೂ ಬರೆಯುತ್ತಿರಿ. ನಿಮ್ಮ ಶ್ರೀಮತಿಯವರ satnav ಜೋಕ್ ಸಕತ್ತಾಗಿದೆ.

    ಗೂಡುರ್ ರವರ ಅವಲಕ್ಕಿಯ ಮೇಲಿನ ಪ್ರೇಮದ ಪರಿಚಯ ಈ ಮೊದಲು ಆಗಿತ್ತಾದರೂ, ಮತ್ತೆ ಓದಿದಾಗ ಹೊಸತಾಗಿ ಓದಿದಂತೆನಿಸಿತು. ಅವಲಕ್ಕಿಯನ್ನು ಅಷ್ಟೊಂದು ಬಗೆಯಲ್ಲಿ ತಿನ್ನಬಹುದೆಂದು ಗೊತ್ತೇ ಇರಲಿಲ್ಲ. ಮ್ಯಾಗಿ ನೂಡಲ್ ನ ಹೊಸ ರುಚಿಯನ್ನು ತಿಳಿದಹಾಗಾಯಿತು. ನಿಮ್ಮ ಸ್ನೇಹಿತರೊಡನೆ ಬಿಲ್ಲ್ ಹಂಚಿಕೊಳ್ಳುವ ನೆಪದಲ್ಲಿ ಮೂರು ಪ್ಲೇಟ್ ತಿಂಡಿ ಖಾಲಿ ಮಾಡಿದ್ದು, ಸ್ಕೊಟರ್ ಇಟ್ಟಿದ್ದ ಸ್ನೇಹಿತನನ್ನು ಸರತಿಯ ನೆಪದಲ್ಲಿ ಬಸ್ ಹತ್ತಿಸಿದ್ದು ಓದಿ ನಗು ಬಂತು. ನಿಮ್ಮ ಅವಲಕ್ಕಿ ಪ್ರೇಮ ರಕ್ತದಲ್ಲಿ( hereditary) ನಿಮ್ಮ ಮಕ್ಕಳಿಗೂ ಹರಿದು ಬಂದಂತೆ ಕಾಣುತ್ತದೆ. ನಿಮ್ಮ ಈಗಿನ ಅಡುಗೆ ಮನೆಯ ಕೆಲಸ ಓದಿದಾಗ ನಮ್ಮ ಮನೆಯ ಸ್ಥಿತಿಯನ್ನು ನೆನಪಿಸಿದಹಾಗಾಯಿತು. ನನ್ನ ಪತಿಯೂ ತರಕಾರಿ ಹೆಚ್ಚುವುದರಲ್ಲಿ ನಿಪುಣರು,( ಅವರೆ ಹೇಳುವ ಹಾಗೆ surgical precision ) ಒಳ್ಳೆಯ ಚಾಕುವಿಗಾಗಿ ನೋಡುತ್ತಿರುತ್ತಾರೆ. ಎರಡೂ ಲೇಖನಗಳು ಸಂಜೆಯ ಲಫ಼ುಆಹಾರದಂತೆ ಹಗುರ ಹಾಗೂ ರುಚಿಕರವಾಗಿವೆ.

    ದಾಕ್ಷಾಯಿಣಿ

    Liked by 1 person

  10. ಈ ವಾರದ ಸ್ಪೇಶಲ್ ಆಫರಿಂಗ್:
    Lockdown ನಲ್ಲಿ ಅಪ್ಗ್ರೇಡಾಗಿ ತಮ್ಮ ಅಡುಗೆ ಕೌಶಲ್ಯ ಬೆಳೆಸಿದವರಲ್ಲಿ ಡಾ ಶ್ರೀರಾಮುಲು ಅವರು ಮೊದಲಿಗರಲ್ಲದಿದ್ದರೂ ’ಅನಿವಾಸಿ’ಗೆ ಹಂಚಿಕೊಂಡವರಲ್ಲಿ ಮೊದಲಿಗರು ಅನಿಸುತ್ತದೆ. ಆದರೆ “ಪ್ರಥಮಗ್ರಾಸೇ ಮಕ್ಷಿಕಾ ಪಾತಃ’‘ ಅನುಭವದಲ್ಲೇನೋ ಮೊದಲಿಗರಲ್ಲ. ಆ ಕಪ್ಪಿಟ್ಟ ಪಾತ್ರೆಯ ತಳದಿಂದ ಅಣಕಿಸಿದ ಹೊತ್ತಿದ ಉಪ್ಪಿಟ್ಟಿನ ನೆನಪು ಅವರಿಗೆ ಮುಂದೆಯೂ ’ಕಲಿ’ಸುತ್ತ‘ ಹೋಗುವದರಲ್ಲಿ ಸಂಶಯವಿಲ್ಲ ಅಂತ ಅನುಭವಿಯಾಗಿ ನಾನು ಭರವಸೆ ಕೊಡುತ್ತೇನೆ. ಲೇಖನಕ್ಕೆ sense of humour ದ ಅಪ್ಪು ಬೆರೆಸಿ ರುಚಿ ಹೆಚ್ಚಿಸಿದ್ದಾರೆ. ಇದೇ ಅವರ ಮೊದಲ ಆಫರಿಂಗ್ ಅಲ್ಲದಿದ್ದರೂ (ರಾಣಿಯ ತೋಟಕ್ಕೆ ಒಮ್ಮೆ ಭೆಟ್ಟಿ ಕೊಟ್ಟಿದ್ದರಲ್ಲವೆ?) ಅವರಿಂದ ಇನ್ನಷ್ಟು ಲೇಖನಗಳನ್ನು ಅಪೇಕ್ಷಿಸೋಣವೇ? ಅವರ ಮುಂದಿನ ಮೆನ್ಯೂ ದಲ್ಲಿ ಏನಿದೆಯೋ!
    ಗುಡೂರ್ ಅವರು born with a drawing pencil ಒಂದು ಕೈಯಲ್ಲಿ, ಸೌಟು ಇನ್ನೊಂದರಲ್ಲಿ ಅನ್ನುವಂತೆ ಈ ಸಲ ಚಿತ್ರ ಬಿಡಿಸುವ ಬದಲು ತಮ್ಮ ಸುದೀರ್ಘ ಅಡುಗೆ ಅನುಭವಗಳ (ಬುತ್ತಿ) ಗಂಟು ಬಿಚ್ಚಿಟ್ಟು ಬಹುಮುಖ ಪ್ರತಿಭೆಯ ಪ್ರದರ್ಶನ ಮಾಡಿದ್ದಾರೆ! ಜೊತೆಗೆ ತಮ್ಮ ರಸಿಕತೆಯ ರುಚಿಯನ್ನೂ ಕೊಟ್ಟಿದ್ದಾರೆ. ಅವರ ಬಾಣಸಿಗನ ಸೆಲ್ಫಿ ಕಾರ್ಟೂನ್ ಇದ್ದರೆ ಅಜ್ಜಿಯ ಅವಲಕ್ಕಿಗೆ ಹಚ್ಚಿಕೊಂಡ ಉಪ್ಪಿನಕಾಯಿಯ ಸ್ವಾದ ಬರುತ್ತಿತ್ತೇನೋ! ಈಗೇನೂ ಸಿಹಿ ಕಡಿಮೆಯಿಲ್ಲ. ನಿಮ್ಮ ಗುಂಪಿನಲ್ಲಿ ”ಹೆಣ್ಣುಮಕ್ಕಳಿಗಿಂತ ಮೇಲು’’ ಅನ್ನಿಸಿಕೊಳ್ಳುವವರೇ ತುಂಬಿದ್ದಾರೆಯೋ ಅಥವಾ narcissistic male trait? ಗೊತ್ತಾಗಲಿಲ್ಲ.
    ರುಚಿ ರುಚಿಯಾದ ಬರಹಗಳನ್ನು ಬಡಿಸಿದ ಇಬ್ಬರೂ ‘ಬಾವರ್ಚಿ‘ಗಳಿಗೆ ಅಭಿನಂದನೆಗಳು
    ಸರಣಿ ಮುಂದುವರೆಯಿಲಿ.

    Liked by 1 person

Leave a comment

This site uses Akismet to reduce spam. Learn how your comment data is processed.