ಅಡುಗೆ – ಅಡುಗೆಮನೆ ಸರಣಿ: ಮುರಳಿ ಹತ್ವಾರ್ ಮತ್ತು ವೀರೇಶ ಪಾಟೀಲ್

ಬರ್ರಿ ಬರ್ರಿ, ಬೆಳ್ ಬೆಳಿಗ್ಗೆ ಫ಼್ರೆಶ್ ಆದ್ರಿ ಅಲ್ಲ. ಅಡುಗೆಮನೆಗೆ ಹೋಗಿ ನೋಡೊಣಾ, ಇವತ್ತೇನು ತಿಂಡಿಗೆ ಅಂತ? ಬರೇ ಗದ್ಯ ಸಾಕಾಯ್ತು ಅಂತ ಮುರಳಿ ಹತ್ವಾರ್ ಅವರು ಬಿಸಿ ಬಿಸಿ ಹಬೆಯಾಡೋ ಪದ್ಯ ಬಡಿಸಿದರ, ವೀರೇಶ ಪಾಟೀಲರು ತಮ್ಮ ಗೌಡತಿ ಸಲುವಾಗಿ ತಮ್ಮ ಕೈಯಾರೆ ಮಾಡಿದ ಪೇಶಲ್ ಉಂಡಿ ಹಂಚಲಿಕ್ಕೆ ತಂದಾರ! ಬರ್ರಿ, ಇಲ್ಲೇ ಥಣ್ಣಗ ಕೂತು ಸವಿದು, ಒಂದ್ ಹನಿ ಬಿಸಿ ಕಾಫಿ ಗುಟುಕು ಹಾಕ್ಕೊಂಡು ಹೋಗೋಣಂತ. ಆಮ್ಯಾಲೆ ನಿಮ್ಮ ನಿಮ್ಮ ಪೆನ್ನು-ಪೇಪರು ತೊಗೊಂಡು ನಿಮ್ಮ ಮನ್ಯಾಗಿನ ಅಡಿಗಿಮನಿ ವಿಶೇಷಗಳ ಪಟ್ಣ ಕಟ್ಟಿ ನಮಗ ಕಳಸವಂತ್ರ್ಯಂತ! ಸರೇನಾ? ಹುಂ ಅನ್ನರಿ ಮತ್ತ! – ಎಲ್ಲೆನ್ ಗುಡೂರ್ (ಸಂ.)

ತಿನುಗವನಗಳು ಅರ್ಥಾತ್ ದಿ ಡೆಲೆಕ್ಟಬಲ್ ಪೋಯೆಮ್ಸ್ಮುರಳಿ ಹತ್ವಾರ್

 1. ಇಡ್ಲಿಗೆ ಸೋತ ಮನ........ 
 
ಚಟ್ನಿ-ಸಾಂಬಾರು ಮೇಳದಲ್ಲಿ 
ಹರಿಯುವ ಬೆಣ್ಣೆಯ ರಾಗದಲ್ಲಿ 
ಮರೆತ ನಿನ್ನೆಗಳ ಮತ್ತೆ ಹಾಡಿಸಿತು 
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
 
ಬೆಳೆದೂರಿನ ಬೀದಿ-ಬೀದಿಗಳಲ್ಲಿ 
ಹೋಟೆಲು, ಕ್ಯಾಂಟೀನು, ಗಾಡಿಗಳಲಿ
ನಿತ್ಯ ಉಣಿಸಿದ ಕೈಗಳ ನೆನಪಿಸಿತು 
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
 
ಹಣ್ಣೆಲೆಗಳ ನೆಲಕೊಪ್ಪಿಸಿದ ಬೋಳು
ಮರಗಳ, ಕೊರೆಕೊರೆವ ಚಳಿಯೂರಿನ
ಮನೆಯೊಳಗೆ ಮನವ ಬೆಚ್ಚಗಾಗಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
 
ಕೆಲಸಗಳ ಬಿಸಿಯೇರಿ ಬೆವೆತು
ಮೌನದಾಳಕೆ ಇಳಿದ ಮನವನೆತ್ತಿ 
ತಣಿ-ತಣಿಸಿ ಮತ್ತೆ ಕುಣಿಕುಣಿಸಿತು 
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
 
ಬಿಸಿ ತುಪ್ಪದೊಂದಿಗೆ ಬೆರೆತು 
ಹಾಲುಹಲ್ಲಿನ ಬಾಯಿ ತುಂಬುತ 
ನಗುನಗುವ ನಾಳೆಯ ಇಣುಕಿಸಿತು 
ಭಾನುವಾರದ ಬೆಳಗಿನ ಬಿಸಿ ಇಡ್ಲಿ!

******

 2. ಹೀಗೊಂದು ಭೋಜನ
 
ಅನುಭವದ ತಟ್ಟೆಗಳಲಿ
ಅಕ್ಷರಗಳ ಅನ್ನವರಳಿ
ವಿಚಾರಗಳ ಬಿಸಿ ಸಾರು
ನಯದ ತುಪ್ಪದೆ ಬೆರೆಯೆ, 
ಮಾತದು ಒಗ್ಗರಣೆಯ ಪಲ್ಯ!
 
ರಸವ ಕೆರಳಿಸುವ ಹುಳಿಯ
ಹೋಳುಗಳೊಂದು ಕಡೆ
ಮಣಿಸಿ ತಣಿಸುವ ತಂಬುಳಿಯ
ಹರಿವಿನ್ನೊಂದು ಕಡೆ
ಸುರಿಸುರಿಯೆ ಸಾಮರಸ್ಯದ ಸರಸ!
 
ಮನದಡಿಯ ಕಾಯಿ-ಬೆಲ್ಲ
ತುಟಿ ತಲುಪೆ, ಚಿರೋಟಿ-ಪೇಣಿ!
ಕೇಳುವ ಮನಸುಗಳಿಗೆ
ಸಿಹಿಹಾಲಲದ್ದಿದ ಮಂಡಿಗೆ;
ಉಂಡೆ, ಪಾಯಸ, ಹೋಳಿಗೆ! 
 
ಕಡೆಗುಳಿವುದು ಕಡೆಕಡೆದ
ಮಜ್ಜಿಗೆಯ ಒಳಗಿಳಿದ ಶುಂಠಿ
ಎಳೆ-ಎಳೆದ ಉದರ ವೀಣೆಯ
ಮಾತಿನಾಚೆಯ ಮಧುರ ರಾಗ.
ಏರಿಳಿವ ರಾಗದೊಳೆಲ್ಲ ಸರಾಗ! 

******

 3. Haiku 
ಬಿಸಿ ಕಾಫಿ:
ಗುಟುಕು ಗುಟುಕಲಿ
ತಂಗಾಳಿ!

- ಮುರಳಿ ಹತ್ವಾರ್

**********************************************************************

ತೀರದಿದ್ದರೂ ಮರೆಯದ ಬೈಕೆಯ ಉಂಡಿ – ವೀರೇಶ ಪಾಟೀಲ

ಅವತ್ತು ಮುಂಜಾನೆ ವಾರದ ಕೊನೀ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಬಂದಾಗ ಮೂರು ದಿನ ರಜೆ ಇರೋದನ್ನ ನೆನಸಿಕೊಂಡೂ ಏನೋ? ನಿದ್ದಿಗಿ  ಅಡ್ಡಾಗದೆ ಏನಾದರು ಅಡುಗೆ ಮಾಡೊ ಯೋಚನೆ ಮಾಡಿದೆ. ಶೇಂಗಾ ಉಂಡಿ ಮಾಡೋನು ಅಂತ ತಯಾರಾದೆ. ಹನ್ನೆರಡು ತಾಸು ಶಿಫ್ಟಿನಿಂದ ದಣಿದ ದೇಹ ಬೆಲ್ಲದ ಆಣ ತೆಗೆದು ವಿಧಿವತ್ತಾಗಿ ಉಂಡಿ ಮಾಡೋ ಗೊಂದಲಕ್ಕೆ ಹೋಗದೆ ಒಂದು ಶಾರ್ಟ್ ಕಟ್ ಯೋಚನೆ ಮಾಡತು .

ಇದು ಫಾಸ್ಟ್ ಫುಡ್ ಶೇಂಗಾ ಉಂಡಿ ಆಕ್ಕತಿ ಅಂತ ನನಗ ನಾನ ಶಭಾಷಗಿರಿ ಹೇಳಕೊಂಡು ಉಂಡಿ ಮಾಡಾಕ ಹತ್ತಿದ್ಯ.  ಭಡಾ ಭಡಾ ಬೆಲ್ಲದ ಕಣ್ಣಿ ವಡದು, ಶೇಂಗಾ ಹುಡಿಕಿ, ಎರಡುನೂ ಮಿಕ್ಸರ್ ಜಾರಿಗೆ ಹಾಕಿ, ಒಂದಿಷ್ಟು ತುಪ್ಪ ಸುರಿದು ಬರ್ರನೆ  ಮಿಕ್ಸರ್ ತಿರ್ಗಿಸಿದೆ.  ಜಾರಿನಿಂದ ಬೆಲ್ಲ ಮತ್ತ ತುಪ್ಪದ ಅಂಟನ ಮೆತ್ತಗೊಂಡ ಸಣ್ಣ ಬ್ಯಾಳ್ಯಾಗಿದ್ದ  ಶೇಂಗಾ ಮಿಶ್ರಣ ತಗದು ಎರಡೂ ಅಂಗೈಯ್ಯಾಗ ದುಂಡಗ ಮಾಡಿ ತಾಟನ್ಯಾಗ ಇಟ್ಟೆ, ಒಂದಿಷ್ಟು ದುಂಡಗ ಆದ್ವು,  ಆದ್ರ ಬಹುತೇಕ ಸೊಟ್ಟ-ಡೊಂಕ ಆಗಿದ್ವು. ಏನಾದ್ರೇನಂತ  ಫಾಸ್ಟ್ ಫುಡ್ ಸ್ಟೈಲ್ನ್ಯಾಗ ಉಂಡಿ ಮಾಡೇನಿ ಅನ್ನೋ ವಣ ಅಹಂಕಾರದಾಗ ಆಕಾರದ ಕೊರತೆ ಏನು ದೊಡ್ಡದ ಅನ್ನಿಸಲಿಲ್ಲ.

ಆ ಹುಸಿ ಧೀಮಾಕಿಗೆ ಕಾರಣ ಏನಂದ್ರ? ನಾನೇನು ಅಡುಗೆ ಪ್ರವೀಣನಲ್ಲ. ಮನೆ ಮತ್ತು ಊರಿಂದ ದೂರದ ಪರದೇಶದಲ್ಲಿ ಕೆಲವು ವರ್ಷಾ ಒಬ್ಬಂಟಿಯಾಗಿದ್ದಿದ್ದರಿಂದ ಬ್ಯಾರೆ ದಾರಿ ಇಲ್ಲದ ಚೂರು-ಪಾರು ಅಡುಗಿ  ಕಲ್ತಿದ್ದೆ;  ಶಾವಗಿ ಉಪ್ಪಿಟ್ಟು, ಒಗ್ಗರಿಣಿ ಮಂಡಕ್ಕಿ, ಅವಲಕ್ಕಿ, ಅನ್ನಾ, ಸಾರು, ದ್ವಾಸಿ, ಇಡ್ಲಿ, ಚಟ್ನಿ ಮಾಡೋದು ಒಂದ್ಚೂರು ಅಭ್ಯಾಸಾಗಿತ್ತು.  ಜೊತಿಗೆ ನನ್ನ ನಾಲಿಗೆ ಚಟಕ್ಕೆ ಬಗ್ಗಿ ಮಿರ್ಚಿ ಮತ್ತ ಹತ್ತಿಕಾಯಿ ಬಜಿ ಮಾಡಾಕ ಅವ್ವನ ಹತ್ರ ಸಣ್ಣವಿದ್ದಾಗ ಕಲ್ತಿದ್ದೆ. ಆದ್ರ ಸಿಹಿ ಅಡಗಿಗೂ ನಮಗೂ ಅಷ್ಟಕ್ಕ ಅಷ್ಟರಿ, ನಾ ಸಿಹಿ ಅಡಿಗೀ ಮಾಡಿದವನ ಅಲ್ರಿ. ಏನೋ ಹಬ್ಬ ಗಿಬ್ಬ ಇದ್ದಾಗ ಅವ್ವ ಫೋನ್ನ್ಯಾಗ ಜೋರ್ ಮಾಡಿ ಹೇಳಿದ್ರ ರೆಡಿಮೇಡ್ ಶಾವಗಿ ಹುಗ್ಗಿ ಮಿಕ್ಸ್ ಹಾಕಿ ಎರಡ ತುತ್ತು ಮಾಡಿದ್ದ ಐತಿ, ಇಲ್ಲಂದ್ರ ಸೀ-ಗೀ ನಮಗ ಆಗೇ ಬರದಿಲ್ರಿ.

ಹಂಗಂದ್ರ ಅವತ್ತ್ಯಾಕ ಉಂಡಿ ಮಾಡಿದ್ಯಾ ಅಂತೀರೇನು? ನನ್ನ ಹೆಂಡತಿ ಹೊಟ್ಟಿಲೆ ಇದ್ಲು, ಎರಡ ದಿನದಹಿಂದ ಶೇಂಗಾ ಉಂಡಿ ತಿನ್ನಂಗಾಗೇತಿ ಅಂತ ಹಂಗ ಮಾತ್ನ್ಯಾಗ  ಅಂದಿದ್ಲ. ನನ್ನ ಕಟ್ಟಗೊಂಡು ಹೊರದೇಶಕ್ಕ ಬಂದು ಆಗಿನ್ನೂ ಮೊದಲನೇ ಕೆಲಸ ಶುರು ಮಾಡಿದ್ಲು ಮ್ಯಾಲೆ ಮನೆವರೆಲ್ಲರಿಂದ ದೂರ ಇದ್ದ ಆಕಿ ಹೇಳಿದ ಬೈಕೆನಾ ನಾನs ಹೆಂಗರ ತೀರಿಸಬೇಕಲ್ಲ ಅಂತ ಶೇಂಗಾ ಉಂಡಿ ಮಾಡೋ ಸಾಹಸಕ್ಕ ಕೈ ಹಾಕಿದ್ರೀ.

ನಾ ಮುಂಜಾನೆ ಮನಿಗೆ ಬರೋದ್ರಾಗ ಅಕಿ ಡೇ ಶಿಫ್ಟ್ ಗೆ  ಹೋಗಿದ್ಲು. ಇದ ಛೋಲೋ ಅವಕಾಶ, ಅಕಿಗೆ ಸರಪ್ರೈಸ್ ಕೊಡೋಣಾಂತ ಈ ಕಸರತ್ತು ನಡಿದಿತ್ತು. ಸಂಜಿಕ ನನ್ನ ಗೌಡಶಾನಿ ಮನಿಗೆ ಬಂದ್ಲು. ನಾನು ಸುಸ್ತಾಗಿ ಸೋತಿದ್ದ ಮೊಕಾದಾಗ ನಕ್ಕೊಂತ ಕೆಲಸ ಹೆಂಗಿತ್ತು ಅಂತ ವಿಚಾರಸ್ಕೊಂತ ಅಕಿ ಕೈಕಾಲು ಮುಖ ತೊಕ್ಕೊಂಡು ಬಂದಕೂಡಲೇ ತಾಟಿನ್ಯಾಗ ನಾಕ  ಉಂಡಿ ಇಟ್ಟು ಕೊಟ್ರೀ.  ನನ್ನ ಸೊಟ್ಟಾ- ಡೊಂಕ ಉಂಡಿ ನೋಡಿ ಇನ್ನೇನು ಕೂಸು ಹೊರಗ ಬರಾಕ ದಿನ ಎಣಸತಿದ್ದ ನನ್ನ ಗೌಡಶಾನಿ ಕೆಲಸದ ಸುಸ್ತನ್ನೆಲ್ಲಾ ಮರತು ಸಣ್ಣದೊಂದು ನಗೆ ಬೀರಿ  “ಅಯ್ಯೋ ರೀ ನಾ ಸುಮ್ನ ಅಂದಿದ್ದು, ನೀವ್ ಉಂಡಿ ಮಾಡಾಕ ಟ್ರೈ ಮಾಡಿದ್ರೇನು?” ಅಂದ್ಲು. ನಾ ಅಗ್ದಿ ಖುಶಿಲೆ “ತಿಂದರ ತಿನ್ನ ನೀನು” ಅಂದೇ. ಗೌಡಶಾನಿ ಒಂದು ತುತ್ತು  ತಿಂದಕಿನ ಏನು ಹೇಳ್ಬಕು ಅಂತ ತಿಳಿದನ  ಮುಖದಾಗ ನಗು ಆಶ್ಚರ್ಯ ಎಲ್ಲಾ ಒಮ್ಮಿಗೇ ತುಂಬಕೊಂಡು ಎದ್ದು, ಬಂದಿದ್ದ ಭಾವನೆ ತಡ್ಕೊಂಡು  “ಶೇಂಗಾ ಎಲ್ಲಿವು ಹಾಕಿದ್ರಿ?” ಅಂತ ಕೇಳಿದ್ಲು.  ನಾ ತಡಾ ಮಾಡದ, ಕೆಂಪು ಮುಚ್ಚಳದ ಬಾಟಲ್ಯನವು ಅಂದ್ಯ.  “ರೀ, ಅವು ಉಪ್ಪು ಹಾಕಿ ಹುರಿದಿರೋ  ಶೇಂಗಾ ಬ್ಯಾಳಿ!” ಅಂತ ಜೋರಾಗಿ ನಕ್ಕಳು… ಹಂಗ ನಕ್ಕೋತನ ಕೈಯಾಗಿದ್ದ ತನ್ನ ಗೌಡಪ್ಪ ಮಾಡಿದ್ದ ಶೇಂಗಾ ಉಂಡಿನ ತಿಂದು ಮುಗ್ಸಿದ್ಲು. ಇಬ್ರು ನನ್ನ ನಿದ್ದಿ ಗುಂಗನ್ಯಾಗ ಮಾಡಿದ್ದ ಎಡವಟ್ಟು ಉಂಡಿ ಕೆಲ್ಸಕ್ಕ ಬಿದ್ದು ಬಿದ್ದು ನಕ್ವಿ. ಈ ಪ್ರಸಂಗಾನ ಮಾರನೇದಿನ ಭಾರತದಾಗಿದ್ದ ನನ್ನ ಅವ್ವಗ ಫೋನ್ ಮಾಡಿ ವಿವರಿಸಿ ಹೇಳಿದೆ; ಅಕಿನೂ ಪುಸುಕ್ಕನ ನಕ್ಕಿದ್ಲು.

ಏನಿದು ಉಂಡಿ ಮಾಡಿದ್ಮ್ಯಾಲೆ ತಿಂದು ನೋಡಲಿಲ್ಲನು ಅಂತ ಯೋಚನಿ ಮಾಡಿದ್ರೇನು?  ನಂಗ ಅಡುಗೆ ಮಾಡುವಾಗ ರುಚಿ ನೋಡೋ ರೂಢಿನ ಇಲ್ರಿ.  ಈಗೂ ನಾ ಅಡುಗಿ ಮಾಡಿದ್ರ ಗೌಡಶಾನಿ ಇದ್ರ ರುಚಿ ನೋಡು ಅಂತ ಹೇಳ್ತಿನಿ , ಯಾವಾಗ್ಲೂ ನನ್ನ ಅಡಿಗಿಗೆ ಉಪ್ಪು ಕಡಿಮಿ ಅಂತ ಅಕಿನ ಮತ್ತ ಉಪ್ಪು ಹಾಕ್ತಾಳ ಆದ್ರ ಅವತ್ತ ಉಪ್ಪು ಎಷ್ಟು ಇರಬಾರದ  ಉಂಡ್ಯಾಗ ಉಪ್ಪ ಹೆಚ್ಚಾಗಿತ್ರಿ. ಮರದಿನ ನಮ್ಮ ಹತ್ತಿರದ ಬೀಗರೆಲ್ಲ ಫೋನ ಮಾಡಿ ಕೇಳಿ ನಗುವಂಗ ಆತ್ರಿ ಕಥಿ.

ಹಿಂಗ ನನ್ನ ಫಾಸ್ಟ್ ಫುಡ್ ಶೇಂಗಾ ಉಂಡಿ ಸಾಹಸ ಮನ್ಯಾಗ ನಗೆಪಾಟಲಾತು, ಆದ್ರ ಆ ನಗು ಭಾವಪೂರ್ಣವಾಗಿತ್ರಿ. ಅವ್ವನ ನಗುವಿನ ನಡುವೆ ದೂರ ಇರದಕ  ಸೋಸಿ ಕೇಳಿದ್ದ ಸಣ್ಣ ಉಂಡಿ ನಮಗ ಮಾಡಕಾಗವಲ್ದು ಅನ್ನೋ ಸಂಕಟ ಮತ್ತ ಮಗ ಸೋಸಿ ನಡವಿನ ಅನ್ಯೂನ್ಯತೆಗೆ ಖುಷಿ ಇತ್ತು. ಗೌಡಶಾನಿ ಮತ್ತು ನನ್ನ ನಗುವಿನಲ್ಲಿ ಪ್ರೀತಿ ತುಂಬಿತ್ತು. ಹಂಗ ಮನೆಯಿಂದ ದೂರ ಅದಿವಿ ಅನ್ನೋ ಸಂಗತಿನು ನೆನಪಾತು. ಅದೇ ನಗುವಿನಲ್ಲೇ ಹೊಟ್ಟೇಲಿದ್ದ ಕೂಸು ಮಿಸುಕಾಡಿದ್ದ ಮುಟ್ಟಿ ಅನುಭವಿಸಿ ಇಬ್ಬರ ಖುಷಿ ಖುಷಿಯ ಹನಿ ಕಣ್ಣಿಂದ ಜಾರಿದ್ವು. ಈಗೂ ಮನ್ಯಾಗ ನನ್ನ ಮಗಳಿಗೆ ಆ ಕಥಿ ಹೇಳಿ ಹೇಳಿ ಗೌಡಶಾನಿ ನಗೋದು ನಡೀತಾನ ಇರತೈತ್ರಿ. ಅಂದು ಬೈಕೆನಾ ತಿರ್ಸತೋ ಇಲ್ವೋ ಆದ್ರೆ ಅದರ  ಆ ಫಾಸ್ಟ್-ಫುಡ್ ರುಚಿನಾ ಇವತ್ತಿಗೂ ಇದಕ್ಕೆಲ್ಲ ಕಾರಣ ಆದ ಮಗಳೊಂದಿಗೆ ಇವತ್ತಿಗೂ ಸವಿತಿದ್ದಿವ್ರಿ.

 “ನೀ ತಿಂದಿದ್ದಿ ಪೇಡೆ, ಜಿಲೇಬಿ, ಕರ್ಚಿಕಾಯಿ ಇನ್ನು ನಾನಾ ತಿಂಡಿ  
ಆದ್ರ ಬೈಕ್ಯಾಗಿ ಕಾಡಿದ್ದು ಊರ ಶೇಂಗಾ ಉಂಡಿ.
ನಾ ಆ ಬೈಕೆನಾ ತೀರ್ಸೋ ಸಾಹಸಕ್ಕಿಳಿದ ಭೂಪ
ಅರ್ಧ ನಿದ್ದ್ಯಾಗ ಮರ್ತಾ ಬಿಟ್ಟ್ಯಾ ಶೇಂಗಾದಾಗಿನ ಉಪ್ಪ
ಎಂತ ನಗೆಪಾಟಲು, ಈ ಉಪ್ಪಿನ ಶೇಂಗಾದುಂಡಿ ಸಾಹಸ
ಉಪ್ಪಿನ ರುಚಿ ಸರಿದ್ಮ್ಯಾಲೆ  ಉಳಿದಿದ್ದು ....
ಆ ನಗೆಯ ಮೀರಿ ಮನದ ಭಾವನೆಗಳ ನೆನಪಿಸೋ ಸಣ್ಣ ಮಂದಹಾಸ.
ಅದನ್ನ ಇದಕ್ಕೆಲ್ಲ ಕಾರಣ ಆದ  ಮಗಳೊಂದಿಗೆ ಇವತ್ತಿಗೂ ಸವಿತಿದ್ದಿವ್ರಿ….”

– ವೀರೇಶ್ ಕೆ ಪಾಟೀಲ್

***************************************************************************

13 thoughts on “ಅಡುಗೆ – ಅಡುಗೆಮನೆ ಸರಣಿ: ಮುರಳಿ ಹತ್ವಾರ್ ಮತ್ತು ವೀರೇಶ ಪಾಟೀಲ್

 1. ಮುರಳಿ ಅವರೇ ನಿಮ್ಮ ಇಡ್ಲಿ ಕವನದಲ್ಲಿ ಇಡ್ಲಿಯ ಅಗಾಧ ಶಕ್ತಿಯನ್ನು ಅದು ತರುವ ಸಾಧ್ಯತೆಗಳನ್ನು ಮತ್ತು ನೀವು ಅದಕ್ಕೆ ಶರಣಾಗಿ ಸೋತಿದ್ದನ್ನು ರಸವತ್ತಾಗಿ ವರ್ಣಿಸಿದ್ದೀರಿ. ಇಡ್ಲಿಗೆ ವಡೆ ಕಾಫಿಯನ್ನು ಬೆರೆಸಿದಾಗ ಅದರ ಸೊಬಗು ಇನ್ನೂ ಹೆಚ್ಚಾಗಬಹುದು. ಮುಂದಿನ ಸಲ ಘಮ ಘಮಿಸುವ ವಡೆಯ ಮೇಲೆ ನಿಮ್ಮ ಕವನವನ್ನು ನೀರೀಕ್ಷಿಸ ಬಹುದೇ?
  ನಿಮ್ಮ ಹೀಗೊಂದು ಭೋಜನದಲ್ಲಿ ನಮ್ಮ ಮನದಾಳದ ಅನಿಸಿಕಗಳನ್ನು , ಬದುಕಿನ ಅನುಭವವನ್ನು ಒಗ್ಗರಣೆಯಷ್ಟೇ ಚುರುಕಾದ ಮಾತಿನಲ್ಲಿ ಹೇಳುತ್ತಾ ಬದುಕಿನಲ್ಲಿ ಬರುವ ಅನುಭವವನ್ನು ಮತ್ತು ಭಾರಿ ಭೋಜನದಲ್ಲಿ ಒಂದಾದ ಮೇಲೆ ಒಂದರಂತೆ ಬರುವ ವೈವಿಧ್ಯಮಯ ಸಿಹಿ, ಹುಳಿ ನಾಲಿಗೆ ರುಚಿಗಳು ಇವೆರಡಕ್ಕೂ ಇರುವ ಸಾದೃಶ್ಯವನ್ನು ಚೆನ್ನಾಗಿ ತಂದಿದ್ದೀರಿ. ಭೋಜನ ಇಲ್ಲಿ ಬದುಕಿನ ಮೆಟಫೋರ್ ಆಗಿ ರೂಪುಗೊಂಡಿದೆ.

  ವೀರೇಶ್ ಪಾಟೀಲ್ ಅವರೇ ನಿಮ್ಮ ಅಡುಗೆ ಮನೆಯಲ್ಲಿ ಸಂಭವಿಸಿದ ಅನಾಹುತದಿಂದಾಗಿ ಶೇಂಗಾ ಉಂಡೆ ನಾಲಿಗೆಗೆ ಉಪ್ಪಾಗಿದ್ದರೂ ನಿಮ್ಮಾಕೆಯ ಮನಸಿನಲ್ಲಿ ರುಚಿಯಾಗಿದ್ದಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಸಾರ್ಥಕವೆನ್ನ ಬಹುದು.

  ಪ್ರಸಾದ್

  Like

 2. ಮುರಳಿಯವರ ಕಾವ್ಯ ರಸದೌತಣ ಬೆಳಗಿನ ತಿಂಡಿ, ಕಾಪಿ, ಮೃಷ್ಟಾನ್ನಗಳನ್ನು ಅಟ್ಟಿ ವರ್ಚುವಲ್ ಜಗತ್ತಿನಲ್ಲಿ ವರ್ಚುವಲ್ಲಾಗಿ ಹೊಟ್ಟೆ ತುಂಬಿಸಿದೆ.

  ವೀರೇಶ್ ನಿಮ್ಮ ಸಾಹಸಗಾಥೆ ಹಾಸ್ಯಮಯವಾದರೂ, ಗೌಡಶಾನಿಯ ಮೇಲಿನ ಪ್ರೇಮದ ಉತ್ಕಟತೆಯನ್ನು ಹರಳುಗಟ್ಟಿಸಿದೆ. ಚಿಟಿಕೆ ಉಪ್ಪು ಸಿಹಿಯ ರುಚಿಯನ್ನು ಹಿಗ್ಗಿಸಿದಂತೆ, ಉಪ್ಪಿನ ಸೇಂಗಾ ಉಂಡಿ ನಿಮ್ಮ ದಾಂಪತ್ಯ ಜೀವನದ ಸಿಹಿಯನ್ನು ಇನ್ನೊಂದು ಮಜಲಿಗೆ ಏರಿಸಿದೆಯೆನ್ನಬಹುದು.

  Like

 3. ಭರ್ಜರಿ ಔತಣ ಈ ವಾರದ ಸ್ಪೇಷಲ್ ಗಳಲ್ಲಿ ಗುಡೂರ್ ಅವರೇ, ಅದೂ ನಿಮ್ಮ ಆಪ್ತತೆ ತುಂಬಿದ ಆತಿಥ್ಯದೊಂದಿಗೆ !
  ಮುರಳಿಯವರ ಬಿಸಿ ಇಡ್ಲಿ ತುಪ್ಪ ಬಾಯಲ್ಲಿ ನೀರೂರಿಸಿ ಭಾನುವಾರದ ಇಡ್ಲಿ ಶನಿವಾರವೇ ಬರೋ ಹಾಗೆ ಮಾಡಿ ಬಿಡ್ತು.ಈ ಬಿಸಿ ಬಿಸಿ ಇಡ್ಲಿ ತುಪ್ಪ ಜೊತೆ ಜೊತೆಗೆ ತಲೆಗೂ ಕೆಲಸ ಕೊಟ್ಟು ಮನ ತುಂಬಿಸುವ ನಿಮ್ಮ ಶೈಲಿ ತುಂಬ ಇಷ್ಟ ಆಯ್ತು.ಒಂದೊಂದು ಪ್ರತಿಮೆಯೂ ಅಪ್ರತಿಮ!ಆ ಮೇಲಿನ ಕಾಫಿ ಇನ್ನಷ್ಟು ಸ್ವಾದಿಷ್ಟ!
  ಗೌಡರ ಬಯಕೆಯೂಟ ಭರ್ಜರಿ ಆಗೇತಿ ಬಿಡ್ರಿ. ಒಂದ ಮಾತ ಮರೀಬ್ಯಾಡ್ರಿ ಗೌಡರs ಆ ಉಪ್ಪಿನ ಶೇಂಗಾದ ಉಂಡಿ ಮಾಡೀರಂತs‌ ಅದೊಂದು ಸವಿ ನೆನಪರೀ ನಿಮ್ಮ ಗೌಡಶಾನಿಗೆ. ನಿಮ್ಮ ಕಕ್ಕಲಾತಿ ನೋಡಿ ಗೌಡಶಾನಿಗೆ ಉಪ್ಪನೂ ಬೆಲ್ಲಧಾಂಗನs ಅನಿಸಿ ಜಬರ್ದಸ್ತ್ ಉಡಗೋರಿ ಸಿಕ್ಕಿರಬೇಕ. ಹೌದಲ್ರೀ? ಆ ಉಂಡಿ ನೆನಪಾಗಿ ಮತ್ತ ಬಯಕಿಯೂಟ ಬೇಕನಸ್ತಿರಬೇಕ ನಿಮ್ಮ ಗೌಡಶಾನಿಗೆ. ಕೇಳಿ ನೋಡ್ರಿ ಬೇಕಾರ. ಏನs‌ಹೇಳ್ರೀ ನಿಮ್ಮ ಶೇಂಗಾದ ಉಂಡಿ ಬಾಯಾಗ ನೀರ ಬಿಡಿಸ್ತ್ರಿ.ಈಗ ಇಲ್ಲಿ ಇನ್ನೊಂದ ಮಾತ ಹೇಳsಬೇಕ.ಅಡಿಗಿ ಮನಿ ಹೆಂಗಸರ ಸಾಮ್ರಾಜ್ಯ ಯಾಕ ತಿಳೀತಲಾ ಎಲ್ಲಾರ್ಗೂ. ಒಟ್ಟಲ್ಲಿ ಭರ್ಜರಿ ಭೋಜನ!
  ಮುರಳಿ ಹತ್ವಾರ್, ವಿರೇಶ ಗೌಡರಿಗೆ, ಗುಡೂರ್ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 2 people

 4. ಮುರಳಿ ಅವರೇ, ನಿಮ್ಮ ಬಿಸಿ ಇಡ್ಲಿ ಕವನ ಭರ್ಜರಿಯಾಗಿದೆ. ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯವಾದ ಸಂಗತಿ. ಹಬೆಯಾಡುವ ಬಿಸಿ ಇಡ್ಲಿ ತಟ್ಟೆ ಕೈಯಲ್ಲಿದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನುವ ಸರ್ವಜ್ಞನ ಪದದ ಸಾಲುಗಳು ನೆನಪಾಯಿತು. ಮಲ್ಲಿಗೆಯಂತೆ ಹಗುರವಾಗಿ ಅರಳಿದ ಬಿಸಿ-ಇಡ್ಲಿಯ ಖಯಾಲಿಯೇ ಮನಸ್ಸಿಗೆ ಮುದ ನೀಡುವ ವಿಷಯ. ಇನ್ನು ನಿಮ್ಮ ಭೋಜನದ ಸಾಲುಗಳಲ್ಲಿ, ಭಕ್ಷ್ಯಗಳ ಜೊತೆಗೆ ಬೆರೆತ ಪದಗಳು ಮತ್ತಷ್ಟು ಮಧುರವಾಗಿದ್ದು, ಭೋಜನದ ಸ್ವಾದಿಷ್ಟತೆಯನ್ನು ನೂರ್ಮಡಿಗೊಳಿಸಿದೆ.

  ವೀರೇಶ್ ಪಾಟೀಲರು ಗರ್ಭಿಣಿ ಮಡದಿಯ ಮನದಾಸೆಯನ್ನು ಪೂರೈಸುವ ಅವಸರದಲ್ಲಿ ಉಪ್ಪಿನ ಕಡ್ಲೆಕಾಯಿ ಉಂಡೆ ಮಾಡಿದ್ದು ನಗೆ ಉಕ್ಕಿಸಿದರೂ, ಅವರ ಪ್ರಯತ್ನವನ್ನು ಮೆಚ್ಚಬೇಕಾದ್ದೇ. ಗಂಡಸರು ಅಡುಗೆ-ಮನೆಯಲ್ಲಿ ಎಬ್ಬಿಸಬಹುದಾದ ದಾಂಧಲೆ ನಿಜಕ್ಕೂ ವಿನೋದಮಯ. ಒಟ್ಟಿನಲ್ಲಿ ನಿಮ್ಮಿಬ್ಬರ ಬರವಣಿಗೆಯಲ್ಲಿ ಬರುವ ತಿಂಡಿಗಳ ಹೆಸರುಗಳು ಬಾಯಲ್ಲಿ ನೀರೂರಿಸಿತ್ತು . ಧನ್ಯವಾದಗಳು.

  ಉಮಾ ವೆಂಕಟೇಶ್.

  Liked by 1 person

 5. ಭಾನುವಾರದ ಬಿಸಿ ಇಡ್ಲಿ ಬೆಂಗಳೂರಿನ ವಿವಿಧ ಫಾಸ್ಟ್ ಫುಡ್, ಹೋಟೆಲ್, ತಟ್ಟೆ ಇಡ್ಲಿ ತರಾವರಿ ಇಡ್ಲಿ ವೆರೈಟಿ ಜ್ಞ್ನ್ಯಾಪಕ ಬರುತ್ತಿದೆ ಮುರುಳಿ ಅವರೆ.

  ಗೌಡಶಾನಿ ಅವರ ಬೈಕಿ ತೀರ್ಸ್ಲಿಕ ಸರ್ಪ್ರೈಸ್ ಶೇಂಗಾ ಉಂಡಿ ಸಾಹಸ ಮಸ್ತ್ ಗೌಡ್ರೇ!!!!!

  Like

 6. ಇವತ್ತಿನ ಬೆಳಿಗ್ಗೆಯ ಮೇಜವಾನಿಗೆ ಸಂಪಾದಾರಿಗೆ ಮತ್ತು ಉಣಬಡಿಸಿದ ಮುರಳಿ ಮತ್ತು ವಿರೇಶ ಅವರಿಬ್ಬರಿಗೂ ಧನ್ಯವಾದಗಳು.
  1)ಮುರಳಿಯವರ ಇಡ್ಲಿ ಜೊತೆಗೆ 4-ಕೋರ್ಸ್ ಮೀಲ್ , ಕೊನೆಗೆ ಅದರ ಮೇಲೆ (ಸು-ಫಿ) ’’ಸುಶಿ ಹೈಕು ಮತ್ತು ಕಾಫಿ” ಅಂದ ಮೇಲೆ ಸ್ವರ್ಗಕ್ಕೆ ಹೈಕಿಕ್ ಕೊಟ್ಟಂತೆ!
  2)ಇನ್ನು ವಿರೇಶ ಅವರ ಚೊಚ್ಚಿಲ ಬಯಕೆಯ ಫಾಸ್ಟ್ ಫುಡ್ ಶೇಂಗಾ ಉಂಡಿ — ಅನಿವಾಸಿಗೂ ಅವರ ಚೊಚ್ಚಿಲ ಬರಹ. ರಿಸಲ್ಟ್ ಗಂಡೋ ಹೆಣ್ಣೋ ? ಹೆಣ್ಣೇ ಚೆಂದ! ಬಹಳೇ ಸ್ವಾರಸ್ಯಕರವಾಗಿದೆ. ಏನಾದ್ರೂ ಘೋಟಾಳೆ ಆದರೇನೇ ರುಚಿ. ಪರ್ಫೆಕ್ಟ್ ಆಗಿದ್ದರೆ ಗೌಡಸಾನಿ ಬರಸೆಳೆದು ಬೆಲ್ಲ ಕೊಡತಿದ್ದಳೇನೋ. ಅಲ್ಲಿಗೇ ಮುಗಿತಿತ್ತು ಕಥಿ! ಈಗ ನೋಡ್ರಿ ನಿಮ್ಮೂರನಾಗಿನ ಎರಡೂ ಕಡೆ ಕುಟುಂಬಗಳು, ಅವರ ನೆರೆಹೊರೆ, ಮಗಳು, ಅವಳ ಪೀಳಿಗೆ ಎಲ್ಲರೂ ನೆನಸುವಹಂಗ ಮಾಡಿದ್ದು ಆ ಉಪ್ಪು- ಉಪ್ಪಿನ ಶೇಂಗಾ. ಉಪ್ಪಿಲ್ಲದೆ ಅಡಿಗೆಯಲ್ಲೂ ಸ್ವಾದವಿಲ್ಲ, ಜೀವನದಲ್ಲೂ ರಸವಿಲ್ಲ, ಬರಹದಲ್ಲೂ ಸ್ವಾರಸ್ಯವಿಲ್ಲ. ಸೈಂಟಿಫಿಕ್ ಆರ್ಟಿಕಲ್ಸ್ ಬರೆಯುವ ಉತ್ಸಾಹದ ನನ್ನ ಜೂನಿಯರ್ಸ್ ಗೆ ಹೇಳುತ್ತಿದ್ದಂತೆ ಕಾಂಪ್ಲಿಕೇಷನ್ ಆದರೇನೇ ರಿಪೋರ್ಟ್ ಮಾಡಲಿಕ್ಕೆ ಮಟೀರಿಯಲ್ಸಿ ಸಿಗೋದು! ಎಲ್ಲ ಆಪರೇಷನ್ ಹಂಕಿ -ಡೋರಿ ಆದ್ರೆ ಬರೀಗೈಯೇ! (ಆದ್ರೆ ಬೇಕಂತ ಮಾಢಾಂಗಿಲ್ಲ. ಅಲ್ಲಿ GMC ಅದ!).
  ಇನ್ನು ಇದೇ ಉಂಡೆ ಪ್ರಕರಣದ ಮೇಲೆ ಗೌಡಸಾನಿಯ ಆಂಗಲ್ ಲೆ ಒಂದು ಲೇಖನ ಬರ್ಲಿ. ಏನೇ ಆಗಲಿ, all’s well that ends well!
  ಗೌಡರಿಗೆ ಅನಿವಾಸಿಗೆ ಸುಸ್ವಾಗತ. ಬರೀತಾ ಬರ್ರಿ! ಫಾಸ್ಟ್ ಆಗಲಿ!
  3) ಪ್ರತಿಸಲ ಗುಡೂರರನ್ನು ನೆನೆಸದೆ ಕಮೆಂಟುಗಳು ಮುಗಿತಿದ್ದಿಲ್ಲ. ಈ ಸಲವೂ ಅವರನ್ನ ನೆನಸೋಹಂಗ ಅದ – cartoons conspicuous by absence!

  Liked by 2 people

 7. ‘ಬಿಸಿ ತುಪ್ಪದೊಂದಿಗೆ ಬೆರೆತು
  ಹಾಲುಹಲ್ಲಿನ ಬಾಯಿ ತುಂಬುತ
  ನಗುನಗುವ ನಾಳೆಯ ಇಣುಕಿಸಿತು
  ಭಾನುವಾರದ ಬೆಳಗಿನ ಬಿಸಿ ಇಡ್ಲಿ! ‘

  ತುಂಬ ಇಷ್ಟವಾದ ಸಾಲುಗಳು. ಬಿಸಿಬಿಸಿ ಇಡ್ಲಿಯಂತೆಯೇ ಬಿಸಿಬಿಸಿ ರುಚಿರುಚಿಯಾಗಿದೆ ಕವನ. ಛಂದಸ್ಸಿನ ಮಾತ್ರೆಗಳ ಬಗ್ಗೆಯೂ ಗಮನವಿಟ್ಟು ಎಡಿಟ್ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನ್ನುವುದು ನನ್ನ ಅನಿಸಿಕೆ.

  —————————-

  ‘ಅನುಭವದ ತಟ್ಟೆಗಳಲಿ
  ಅಕ್ಷರಗಳ ಅನ್ನವರಳಿ
  ವಿಚಾರಗಳ ಬಿಸಿ ಸಾರು
  ನಯದ ತುಪ್ಪದೆ ಬೆರೆಯೆ,
  ಮಾತದು ಒಗ್ಗರಣೆಯ ಪಲ್ಯ“

  ತುಂಬ ಇಷ್ಟವಾದ ಸಾಲುಗಳು. ಮುರಳಿಯವದು ಅದ್ಭುತ ಪ್ರತಿಮಾ ಪ್ರತಿಭೆ. ಅಡುಗೆಯ ರೂಪಕಗಳ ಕವನಗಳು ಇಡೀ ಅಡುಗೆ ಮನೆಯ ಸರಣಿಯ ಉಪ್ಪಿನಕಾಯಿ ಒಗ್ಗರಣೆಯಂತಿವೆ.

  ——————————-

  ಹೈಕುವಿನ ಮಾತ್ರೆಗಳಲ್ಲೇ ಬರೆದ ಕಾಫಿ ಹೈಕುವಂತೂ ಬಿಸಿ ಬಿಸಿ ಮೈಸೂರ್ ಫಿಲ್ಟರ್ ಕಾಫಿ ಕುಡಿದಷ್ಟೇ ರುಚಿಯಾಗಿದೆ.

  ————————–

  ವೀರೇಶ ಪಾಟೀಲರಿಗೆ ಮತ್ತೊಮ್ಮೆ ಸ್ವಾಗತ.

  ಪಾಟೀಲರ ಬರೆಯುವ ಸ್ಟೈಲು ಭಾಳ ಇಷ್ಟ ಆತು. ಕನ್ನಡದ ಉತ್ತಮ ಲಲಿತ ಪ್ರಬಂಧಕಾರರಾಗುವ ಅಲ್ಲ ಲಕ್ಷಣಗಳೂ ನಿಮಗ ಆದಾವ. ಇನ್ನೂ ಹಿಂಗಽ ಬರೀರಿ. ಓದಕೋತ ನಿಮ್ಮೊಳಗ ಪರಕಾಯ ಪ್ರವೇಶ ಮಾಡಿದಂಗ ಆತು, ಅಷ್ಟ ಕಣ್ಣ ಕಟ್ಟೂಹಂಗ ಬರದೀರಿ.

  ಶೇಂಗಾದುಂಡಿ ಅಂದ್ರ ನನಗೂ ಪಂಚಪ್ರಾಣ, ಬಯಕಿ ಇರ್ಲಿ ಬಿಡ್ಲಿ, ಶೇಂಗಾದುಂಡಿ ಅಂದ್ರ ಆತು.

  ನಾನೂ ನಿಮ್ಮಂಗನಽ, ಅಡಿಗಿ ಮಾಡುಮುಂದ ಮತ್ತ ಮಾಡಿದಮ್ಯಾಲ ಅದರ ರುಚಿ ನೋಡೂದುಲ್ಲ, ಅದನ್ನ ಬ್ಯಾರೆಯವರ ನೋಡಿಯೇ ಹೇಳಬೇಕು. ನಾನೂ ಒಂದ್ಸಲ ಶೇಂಗಾದ ಐಸ್‍ಕ್ರೀಮ್ ಮಾಡಬೇಕಾದರೆ ಉಪ್ಪಿನ್ಯಾಗ ಹುರದಿದ್ದ ಶೇಂಗಾ ಹಾಕಿ ಹಾಳು ಮಾಡುವವನಿದ್ದೆ, ಹುರದಿದ್ದ ಶೇಂಗಾ ಮಿಕ್ಸಿಗೆ ಹಾಕಿ ಇನ್ನೇನ ತಿರುಗಿಸುವವನಿದ್ದೆ, ಆದ್ರ ಶೇಂಗಾ ಅಂದ್ರ ಸತ್ತಾಗಲೂ ಬಾಯ್ಬಿಡಾಂವ ನಾ, ನಾಕು ಶೇಂಗಾ ತಿಂದು ಮಿಕ್ಸಿ ಹಾಕೂಣಂತ ನಾಕ ಕಾಳ ಬಾಯಾಗ ಹಾಕೊಂಡೆ, ಉಪ್ಪುಪ್ಪು ಶೇಂಗಾ. ಹಿಂಗಾಗಿ ನನ್ನ ಅವತ್ತಿನ ಐಸ್ಕ್ರೀಮು ಬಚಾವಾತು.

  ಹಿಂಗಽ ಬರಕೋತ ಇರ್ರಿ.

  – ಕೇಶವ

  Like

 8. I love my anonymosu status ! So please let me be… it gives me a wonderful sense of freedom to express myslef freely. Hope you understand…

  Like

  • I personally don’t! Sorry to say. We are having a ball of a time, but it is not a masquerade ball! ಸಹನಾವವತು, ಸಹನೌ ಭುನಕ್ತು!
   ಸಹವಿರ್ಯಮ್ ಕರವಾವಹೈ
   ಮಾ ವಿದ್ವಿಷಾವಹೈ!
   ಶ್ರೀವತ್ಸ ದೇಸಾಯಿ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.