“Cooking is like snow skiing: If you don’t fall at least 10 times, then you’re not skiing hard enough. ಅಡುಗೆ ಮಾಡುವುದೆಂದರೆ ಸ್ಕೀಯಿಂಗ್ ಮಾಡಿದಂತೆ; ಒಂದು ೧೦ ಬಾರಿಯಾದರೂ ಬಿದ್ದಿಲ್ಲವೆಂದಾದರೆ, ನೀವು ಸ್ಕೀಯಿಂಗ್ ಸರಿಯಾಗಿ ಮಾಡುತ್ತಿಲ್ಲವೆಂದೇ!”
ನಮಸ್ಕಾರ. ಅಡುಗೆ ಅನ್ನೋ ಕೆಲಸ ಒಂದು ದೊಡ್ಡ equalizer ಅನ್ನಬಹುದು, ನೋಡಿ. ಪೂರ್ವ-ಪಶ್ಚಿಮಗಳ, ಬಡವ-ಬಲ್ಲಿದರ ಜಾತಿ-ಪಾತಿಗಳ ಭೇದವಿಲ್ಲದೇ ಎಲ್ಲರನ್ನೂ ಒದ್ದಾಡಿಸುವುದು ಅಡುಗೆ! ಇಷ್ಟಪಟ್ಟು ಮಾಡುವುದಾದರೆ ಸರಿ … ಆದರೆ ಬಾಯಿರುಚಿಯ ಚಪಲಕ್ಕೋ, ನಿರ್ವಾಹವಿಲ್ಲದೆಯೋ ಅಡುಗೆಮನೆಗೆ ಹೋದಿರೋ, ಕಾದಿದೆ ನೂರಾರು ತೊಂದರೆಗಳ ಹರ್ಡಲ್ಸ್ ಓಟ. ನಮ್ಮ ಅಡುಗೆ – ಅಡುಗೆಮನೆ ಸರಣಿಯ ಮುಂದಿನ ಲೇಖಕರು, ಅನಿವಾಸಿಯ ಹಿರಿಯ ಸದಸ್ಯರಾದ ವತ್ಸಲಾ ರಾಮಮೂರ್ತಿ ಮತ್ತು ಶ್ರೀವತ್ಸ ದೇಸಾಯಿ ತಮ್ಮ ಅಡುಗೆಯ ಅವಾಂತರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನೀವೂ ಬರೆದು ಕಳಿಸಿ, ಎಲ್ಲರನ್ನು ನಗಿಸಿ! – ಎಲ್ಲೆನ್ ಗುಡೂರ್ (ಸಂ.)
ಒಂದು ಲಾಸಾನ್ಯದ (Lasagne) ಕಥೆ! – ವತ್ಸಲಾ ರಾಮಮೂರ್ತಿ
ನನಗೂ ನನ್ನ ಚಿಕ್ಕಮ್ಮನಿಗೂ ತುಂಬ ಸಲಿಗೆ. ಅವಳೇ ನಮ್ಮನೆಲ್ಲ ಚಿಕ್ಕರವರಾಗಿದ್ದಾಗ ಜಡೆ ಹಾಕಿ ಹೂವು ಮುಡಿಸಿ, ಸಮವಸ್ತ್ರ ಹಾಕಿ ಸ್ಕೂಲ್ಗೆ ಕಳಿಸುತಿದ್ದಳು. ಪಾಪ! ಅವಳು ಬಾಲವಿಧವೆ. ಶಾಲೆಗೆ ಹೋಗಿಲ್ಲ. ಹಾಗೂ ಹೀಗೂ ಮಾಡಿ ನಮ್ಮ ಹತ್ತಿರ ಕನ್ನಡ ಓದಲು ಬರೆಯಲು ಕಲಿತಿದ್ದಳು. ಆಂಗ್ಲಭಾಷೆ ಗೊತ್ತಿಲ್ಲ. ನಾನು ಯುಕೆಗೆ ಬಂದಮೇಲೆ ವಾರಕ್ಕೊಮ್ಮೆ ಮಾತನಾಡುತ್ತೇನೆ.
ಒಂದು ದಿನ ಹೀಗೆ ಮಾತನಾಡುತ್ತಿರುವಾಗ “ಇವತ್ತು ಏನು ಅಡುಗೆ?” ಅಂತ ಕೇಳಿದಳು. ನಾನು “ಲಾಸಾನ್ಯ ಮಾಡುತ್ತೇನೆ” ಅಂತ ಹೇಳಿದೆ .
“ಹಾಗೆ ಅಂದರೆ ‘ಅಪಹಾಸ್ಯ’ನಾ?” ಅಂದಳು.
“ಅಲ್ಲ ಕಣೆ ಅದು ಒಂದು ತರಹದ ತಿಂಡಿ” ಅಂದೆ.
“ಹಾಗಾದರೆ ನನಗೂ ತೋರಿಸು” ಅಂತ ಕೇಳಿದಳು.
ನಾನು, “ಹೋಗೇ, ನಿನಗೆ ಅರ್ಥವಾಗುವುದಿಲ್ಲ” ಎಂದು ಜಂಬ ಹೊಡೆದೆ.
“ಇಲ್ಲ ಕಣೆ, ಅರ್ಥ ಮಾಡಿಕೂಳ್ಳುತ್ತೇನೆ” ಅಂತ ಗೋಗರೆದಳು.
ಸರಿ ಅಂದು ನನ್ನ ತಮ್ಮನಿಗೆ ಹೇಳಿ ಲೈವ್ ವಿಡಿಯೋ setup ಮಾಡಿಸಿದೆ.
ಮುಂದಿನದೇ ನಾಟಕ.
ನಾನು: “ನೋಡೇ ಲಾಸ್ಯಾನ್ಯ ಹಾಳೆಗಳನ್ನು ಕುದಿಸಬೇಕು”
ಚಿಕ್ಕಮ್ಮ: “ಯಾಕೆ ರಟ್ಟಿನ ತರ ಇದೆ? ಹಲಸಿನ ಹಪ್ಪಳನಾ?”
ನಾನು: “ಇಲ್ಲ ಕಣೆ ಇದನ್ನ ಲಸಾನ್ಯಾ ಹಾಳೆ ಅಂತಾರೆ. ಇದನ್ನ ಕುದಿಸಿ ಮೆತ್ತಗೆ ಮಾಡಬೇಕು.”
ಹಾಳೆಗಳು ಬೆಂದ ಮೇಲೆ ತೆಗೆಯಲು ನೋಡಿದೆ. ಎಲ್ಲ ಅಂಟಿಗೊಂಡುಬಿಟ್ಟಿವೆ.
ಚಿಕ್ಕಮ್ಮ: “ಮಹಾತಾಯಿ ಎಲ್ಲ ಮುದುಡಿದೆ, ಏನು ಮಾಡುವೆ ಈಗ?” ನನಗೆ ಕೋಪ ಬಂತು.
ನಾನು: “ಹೋಗೆ, ಅದನ್ನ ಬಿಡಿಸಬೇಕು” ಅಂತ ಹೇಳಿ ಕಿತ್ತಿದೆ. ಚೂರುಚೂರಾಗಿ ಬಂತು.
ನನ್ನ ತಮ್ಮ ತಲೆ ಹಾಕಿ, “ಅಕ್ಕ, ಲಾಸ್ಯಾನ್ಯನ ಹಾಗೆಲ್ಲ ಹರಿಯಬಾರದು ಕಣೆ. ಒಂದೊಂದೇ ಹಾಳೆ ಸಮವಾಗಿ ಬಿಡಿಸಬೇಕು.” ಇನ್ನೂ ರೇಗಿಸಿದ.
ಅದು ಗೋಂದಿನಂತೆ ಅಂಟಿಬಿಟ್ಟಿತ್ತು . ನನಗೆ ಬಿಡಿಸಲು ಆಗಲೇ ಇಲ್ಲ. ಏನೋ ಮಾಡಿ ೪ ಚೂರು ಮಾಡಿದೆ.
ನಾನು: “ಚಿಕ್ಕಮ್ಮ ನೋಡು, ಈಗ ತಟ್ಟೆ ಮೇಲೆ ಹರಡಬೇಕು ಗೊತ್ತಾ? ಆಮೇಲೆ ಪಲ್ಯನ್ನ ಅದರ ಮೇಲೆ ಹರಡಬೇಕು. ಹೀಗೆ ಒಂದರ ಮೇಲೆ ಒಂದು ಜೋಡಿಸಬೇಕು. ಕಡೆಯಲ್ಲಿ ಚೀಸ್, ಮೈದಾ ಹಿಟ್ಟಿನ ಗಂಜಿ ಸುರಿಬೇಕು.”
ಅವಳು, “ಅಯ್ಯೋ ಭಗವಂತ! ಈ ಪಾಟಿ ಯಾಕೆ ಕಷ್ಟಪಡಬೇಕಾ? ನಂತರ ಹಂಚಿನ ಮೇಲೆ ಸುಡಬೇಕಾ?” ಅಂದಳು.
“ದಡ್ಡಿ, ಓವೆನ್ನಲ್ಲಿ ಇಡಬೇಕು” ಎಂದೆ.
ಅವಳು “ಹೋಗೆ, ನಾನಾಗಿದ್ದರೆ ನಾಲಕ್ಕು ದೋಸೆ, ಬಿಸಿ ಬಿಸಿ ಆಲೂಗಡ್ಡೆ-ಈರುಳ್ಳಿ ಪಲ್ಯ ಹಾಕಿ, ಒಂದರ ಮೇಲೆ ಒಂದು ಹೇರಿಸಿ, ಮೇಲೆ ಬೆಣ್ಣೆ ಹಚ್ಚಿ ಮಜವಾಗಿ ತಿಂತ ಇದ್ದೆ. ಹೋಗೆ, ನಿನ್ನ ಅಪಹಾಸ್ಯ ನೀನೇ ತಿನ್ನು” ಅನ್ನ ಬೇಕೇ?
ನನ್ನ ತಮ್ಮ ಮುಸಿಮುಸಿ ನಗುತ್ತಾ ಇದ್ದಾಗ ಚಿಕ್ಕಮ್ಮ ಹೊರಟುಹೋದಳು!
- ವತ್ಸಲಾ ರಾಮಮೂರ್ತಿ.
******************************************************************************************
ಅಡುಗೆ ಮನೆಯಲ್ಲಿ ಅವಾಂತರಗಳು – ಶ್ರೀವತ್ಸ ದೇಸಾಯಿ
‘ಅನಿವಾಸಿ‘ ವಾಟ್ಸಪ್ಪಿನಲ್ಲಿ ಕಂಪ್ಲೇಂಟು: ‘ನಳ ಮಹಾಶಯರಿಂದ ಲೇಖನ ಬಂದಿಲ್ಲ’ ಅಂದರೆ ಗಂಡಸರಿಂದ ಅಂತ. ಅಡುಗೆಯಲ್ಲಿ ನಾನೇನೂ ನಳನಲ್ಲ, ಬರೀ ‘ಕಾಮಾ ಪೂರ್ತೇ’, ಎಷ್ಟು ಬೇಕೋ ಅಷ್ಟೇ ಅಡುಗೆ ಮಾಡಿಕೊಳ್ಳುವವ. ‘ರಸೋಯಿಘರ್ ಕಾ ರಾಜ’ ಅಲ್ಲ. ಈ ರಾಜ್ಯದ ಮಾತು ಬಂದದ್ದೇಕೆಂದರೆ ಈ ಅಡುಗೆ ಮನೆಯೆಂಬ ರಾಜ್ಯದ ಬಗ್ಗೆ ಒಂದೆರಡು ಮಾತು ಹೇಳೋಣ ಅಂತ.
’ಪ್ರಾದೇಶಕೀಕರಣ”
ಅಡುಗೆ ಮನೆ ನನ್ನಾಕೆಯ ’ಡೊಮೇನ್’ ಆಗಿತ್ತು! ಯಾವಾಗಲಾದರೂ ನಾನು ಅಲ್ಲಿ ಹಣಿಕಿ ಹಾಕಿದರೆ ’ಇಲ್ಲಿ ಒಳಗs ಬಂದು ಅಡ್ಡಗೈ ಹಾಕಬೇಡ’ ಅಂತಿದ್ದಳು. ವರ್ತನ ಸಿದ್ಧಾಂತಿಗಳು (Behaviourists) ಹೇಳುವ ಮಾತೆಂದರೆ ಪ್ರಾಣಿಗಳು ಅಂದರೆ ಮನುಷ್ಯ ಸಹಿತ, ತಮ್ಮ ’ಪ್ರದೇಶವನ್ನು’ ಕಾಯುತ್ತವೆ, ಕಾಯಲು ಹೊಡೆದಾಡುತ್ತವೆ ಅಂತ. ಪ್ರಶ್ನೆ: ’Does man (or woman), like animal, also territorialize?’ ಆ ಪ್ರವೃತ್ತಿ ಪ್ರಾಣಿಗಳಲ್ಲಿ ’ಅಲಲಾ’ದಿಂದ ಹಿಡಿದು ಝಿಬ್ರಾದವರೆಗೆ ಕಾಣುತ್ತೇವೆ. ಮಾನವನಲ್ಲಿಯೂ ಆ ಪ್ರವೃತ್ತಿ ಇರಬಹುದು. ಇಲ್ಲಿ ನಾನು ವೈಜ್ಞಾನಿಕವಾಗಿ ಹೇಳುತ್ತಿಲ್ಲ. ನನ್ನ ಅನುಭವವನ್ನೇ ಲಘುವಾಗಿ ಹೇಳಿದ್ದೇನೆ. ನಾವು ಇಬ್ಬರೂ ವೈದ್ಯರು, ಕೆಲಸಮಾಡುತ್ತ ಮಕ್ಕಳ ಪಾಲನೆಯನ್ನೂ ಮಾಡುವಾಗ ಗಂಡನಿಗೆ ಪಾಕ ಶಾಸ್ತ್ರಜ್ಞಾನವಿರದಿದ್ದರೂ ಸ್ವಲ್ಪವಾದರೂ ಅನ್ನ-ಸಾರು-ಪಲ್ಯ ಮಾಡಲು ಕಲಿತರೆ ಸಹಾಯವಾಗದಿರದೇ? ಅದೂ ಭಾರತದಲ್ಲಿದ್ದಂತೆ ಅವಿಭಕ್ತ ಕುಟುಂಬಗಳ ಸೌಲಭ್ಯ ಅನಿವಾಸಿಗಳಿಗೆ ಇಲ್ಲದಿರುವಾಗ ಈ ಪರಿಣತಿ ಆವಶ್ಯಕವೇ (ಟಿಪ್ಪಣಿ: ಈಗ ಅಲ್ಲೂ ಅವಿಭಕ್ತ ಕುಟುಂಬಗಳು ಕಡಿಮೆಯೇ, ಅದರಲ್ಲೂ ನಗರಗಳಲ್ಲಿ – ಸಂ.). ಹಿಂದೊಮ್ಮೆ ನಮ್ಮವರೇ ಪ್ರೇಮಾ ಸಾಗರ್ ಹೇಳಿದಂತೆ ಪತಿ ಕಾಫಿ ಮಾಡಲು ಕಲಿತರೂ ಸಾಕು. ಡಾಕ್ಟರಾಗಿದ್ದ ನನ್ನವಳು ಹಾಗೆ ಹೇಳಿದ್ದನ್ನು ಆಕೆಯೂ ಸೀರಿಯಸ್ಸಾಗಿ ತೊಗೊಳ್ಳಲಿಲ್ಲ, ನಾನು ಸಹ. ಅದಾದಮೇಲೆ ಕಿಚನ್ ಅಪ್ರೆಂಟಿಸ್ ಆಗಿ ಸ್ವಲ್ಪ ಸ್ವಲ್ಪ ’ಕಲಿನರಿ ಸ್ಕಿಲ್ಸ್’ ಕಲಿತೆ. ನಮ್ಮ ಸಂಸಾರ ನೌಕೆ ಸಾಗಲು ಸ್ವಲ್ಪ ಸಹಾಯವಾಯಿತು ಅನ್ನಿ. ಆದರೆ ನಮ್ಮ ಮನೆಯ ದೋಸೆ ಹೆಂಚುಗಳ, ಅಥವಾ ದೋಸೆ ಹಿಟ್ಟಿನ ’ಬಿಹೇವಿಯರ್’ ಮಾತ್ರ ನಮಗೆ ಕೊನೆಯವರೆಗೂ ಬಿಡಿಸಲಾಗದ ಗಂಟಾಗಿಯೇ ಉಳಿಯಿತು.
ಎಲ್ಲರ ಮನೆಯ ದೋಸೆಗೂ …
ದೋಸೆಯೆಂದರೆ ಯಾವ ಭಾರತೀಯ, ಅದರಲ್ಲೂ ದಕ್ಷಿಣದವ ಬಾಯಿಬಿಡೊಲ್ಲ? ಊರಿಂದ ಈ ದೇಶಕ್ಕೆ ಬಂದು ವರ್ಷಗಳು ಕಳೆದಂತೆ ದೋಸೆ ತಿನ್ನುವ ಬಯಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ ನಮ್ಮ ಮನೆಯಲ್ಲಿ ಮಾತ್ರ ಎಂದೂ ದೋಸೆ ಏಳಲಿಲ್ಲ. ಬರೀ ಮುದ್ದೆ, ಮುದ್ದೆ! ಅಕಸ್ಮಾತ್ ಸ್ವಲ್ಪ ಎದ್ದರೆ, ಮಗುಚುವ ಕೈಯಲ್ಲೆತ್ತಿದ ಅರೆಬೆಂದ ದೋಸೆ ಒಂದೊಂದು ಸಲ ಒಂದೊಂದು ದೇಶದ ನಕಾಶೆಯಂತೆ ತೋರುವುದು! ಚಿಕಿತ್ಸೆಯಿರದ ರೋಗಕ್ಕೆ ಎಡತಾಕುವ ರೋಗಿಯಂತೆ ಮನೆ ಮನೆ ಅಲೆದಾಡಿ ದೋಸೆ ಹುಯ್ಯುವ ಪಟುಗಳ ಅಡ್ವೈಸ್ ಕೇಳಿದ್ದಕ್ಕೆ ಲೆಕ್ಕ ಇಲ್ಲ. ಆಕೆಯ ಹೆತ್ತ ತಾಯಿಯಿಂದ ಶುರುವಾಗಿ, ಎಲ್ಲ ಹಿರಿಯರು, ಸಂಬಂಧಿಕರು, (ಕೆಲಸದಾಕೆ ಸಹ!) ಮಿತ್ರರು, ಯಾರ್ಯಾರ ಮನೆಯಲ್ಲಿ ನಾಚಿಕೆಯಿಲ್ಲದೆ ಒಂದರಮೇಲೊಂದು ದೋಸೆ ಇನ್ನಷ್ಟು ಹಾಕಿಸಿಕೊಂಡು ತಿಂದ ಮೇಲೆ ನಿಮ್ಮ ರೆಸಿಪಿಯ ಗುಟ್ಟೇನು, ಯಾವ ಪ್ರಮಾಣದಲ್ಲಿ ಅಕ್ಕಿ- ಉದ್ದು ಹಾಕುತ್ತೀರಿ, ಎಷ್ಟು ಹೊತ್ತು, ಮತ್ತು ಎಲ್ಲಿ ಫರ್ಮೆಂಟಾಗಲು ಇಡುತ್ತೀರಿ, ಏರಿಂಗ್ ಕಬ್ಬರ್ಡ್ ನಲ್ಲಿಟ್ಟು ಮನೆಯವರಿಂದ ಬಟ್ಟೆಯೆಲ್ಲಾ ಏಕೆ ಗಬ್ಬು ವಾಸನೆ ಅಂತ ಅನಿಸಿಕೊಳ್ಳಲಿಲ್ಲವಾ? ಎಂಥ ಹೆಂಚು, ಊರಿಂದ ಯಾವ ಅಂಗಡಿಯಿಂದ ತಂದದ್ದು, ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಸುರಿಮಳೆ, ವಿಚಾರಣೆ, ಅನ್ವೇಷಣೆ, ಎಲ್ಲವನ್ನೂ ಮಾಡಿದ್ದೇವೆ. ಇನ್ನು ದೋಸೆ ಹೆಂಚಿನ ವಿಷಯಕ್ಕೆ ಬಂದರೆ ಟೆಫ್ಲಾನ್, ಆಂಟಿ-ಸ್ಟಿಕ್ ಕೋಟಿಂಗ್ ಒಂದೇ ಎರಡೇ? ನಮ್ಮ ಪ್ಯಾಂಟ್ರಿ ತುಂಬ ಹೆಂಚುಗಳು, ಬೇರೆ ಬೇರೆ ಮಿಕ್ಸಿಗಳು, ರುಬ್ಬುವ ಕಲ್ಲಿನ ಮೆಶಿನ್, ಎಲ್ಲವನ್ನೂ ಪ್ರಯೋಗಿಸಿಯಾಯಿತು. “ನಿಮ್ಮಲ್ಲಿ ಗ್ಯಾಸಿಲ್ಲ, ಇಲೆಕ್ಟ್ರಿಕ್ ಕುಕರ್ ಅದಕ್ಕ” ಅಂತ ಯಾರೋ ಡಯಗ್ನೋಸಿಸ್ ಕೊಟ್ಟರು ಒಬ್ಬರು. ಅಮೇರಿಕೆಯಿಂದ ಹೊತ್ತು ಕೊಂಡು ಬಂದ ಗ್ರಿಡಲ್ ಸಹ ಸೋತು ವಿಫಲವಾಗಿ ಇನ್ನೂ ಧೂಳು ಕುಡಿಯುತ್ತಾ ಪಾಂಟ್ರಿಯಲ್ಲೆಲ್ಲೋ ಸುದೀರ್ಘ ನಿದ್ರೆಯಲ್ಲಿದೆ. ನಮಗೇಕೆ ಈ ಶಾಪ ಎಂದು ನಾವು ಅಳುವುದೊಂದೇ ಉಳಿದಿತ್ತು. ಎಲ್ಲ ತರದ ದೋಸೆಗಳ ಟ್ರಾಯಲ್ ಆಯಿತು. ಒಮ್ಮೊಮ್ಮೆ ರವೆ ದೋಸೆ ಮಾತ್ರ ಏಳುತ್ತಿತ್ತು. ಆಗಷ್ಟೇ ನನಗೆ ಕಿಚನ್ ಪ್ರವೇಶ ಸಿಕ್ಕು ಆಕೆಯನ್ನು ಕೂಡ್ರಿಸಿ ವರ್ಷಕ್ಕೊಮ್ಮೆ ಎರಡು ಸಲ ಒಂದೋ ಅಥವಾ ಎರಡೂವರೆ ರವೆ ದೋಸೆ ಮಾಡಿ ಹಾಕಿದಾಗ ತಿಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಳು. ಆಗ ರೆಡಿಮೇಡ್ ಹಿಟ್ಟು (batter) ಪ್ಲಾಸ್ಟಿಕ್ ಚೀಲಗಳಲ್ಲಿ ಬರುತ್ತಿರಲಿಲ್ಲ. ಆಕೆಗೆ ಕೊನೆಯ ವರೆಗೆ ಶಾಪ ವಿಮೋಚನೆಯಾಗಿರಲಿಲ್ಲ. ಆಗ ದೋಸೆಗೆ ತೂತು ಇದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಎಷ್ಟು ಬೇಕಾದರೂ ಇರಲಿ, ದೋಸೆ ಎದ್ದರೆ ಸಾಕು ಅಂತ ಬೇಡಿಕೊಳ್ಳುತ್ತಿದ್ದೆವು! ಈಗ ರೆಡಿಮೇಡ್ ಹಿಟ್ಟು ಬಂದ ಮೇಲೆ ಹೊಸ ಜಗತ್ತಿಗೇ ಬಂದಂತೆ ಆಗಿದೆ! ಎಷ್ಟು ಸುಲಭವಾಗಿ ದೋಸೆ ಏಳುತ್ತದೆ, ನನ್ನ ಮನೆಯಲ್ಲೂ!
ಅರ್ಕಿಮಿಡಿಸ್ ತತ್ತ್ವಕ್ಕೂ ಒಗ್ಗರಣೆಗೂ ಏನು ಸಂಬಂಧ?
ಈ ಸರಣಿಯಲ್ಲಿ ಇನ್ನೊಬ್ಬರು ಬರೆದಂತೆ ಒಗ್ಗರಣೆ ಮಾಡೋದು ಅದೆಂಥ ಕಷ್ಟ? ಇಂಗು ಸಾಸಿವೆ, ಬೇಳೆ, ಕರಿಬೇವು ಜೀರಿಗೆ, ಎಲ್ಲ ಒಂದೊಂದಾಗಿ ಹಾಕಿದರೆ ಆಯಿತು ಅನ್ನುವವರು ಹಿಂದೊಮ್ಮೆ ಎಣ್ಣೆ ಹೊತ್ತಿಸಿದ್ದನ್ನು ಮರೆತಿದ್ದಾರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಅಂತ ಅರ್ಥ. ಹಾಗೂ ಹೀಗೂ ನಾನು ಅದನ್ನು ಕಲಿತೆ. ಮೊಟ್ಟಮೊದಲು ಅದೆಷ್ಟೋ ಸಲ ಎಣ್ಣೆ ಕಾದಿದ್ದೂ ಗೊತ್ತಾಗದೆ, ಇನ್ನೊಮ್ಮೆ ಎಲ್ಲ ಹೊತ್ತಿ ಹೋಗಿ ’ಬಿನ್ನಿಗೆ’ ಒಗ್ಗರಣೆ ಸಂತರ್ಪಣೆ ಮಾಡುತ್ತ ಕಲಿತೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡ ಬಳಗದ ಪದಾಧಿಕಾರಿಯಾಗಿದ್ದ ಸುಧಾ ಅವರ ಪರಿಚಯ. ಮೇಲಿಂದ ಮೇಲೆ ಮೀಟಿಂಗ್, ಕಾರ್ಯಕ್ರಮಗಳ ವ್ಯವಸ್ಥೆ ಸಂಬಂಧದಲ್ಲಿ ಫೋನು ಮಾಡುತ್ತಿರುತ್ತಾರೆ. ಆಗ ಹೇಗೋ ನಾನು ಸಾಯಂಕಾಲದ ಅಡುಗೆಯ ಸಮಯದಲ್ಲಿ ಒಗ್ಗರಣೆ ಮಾಡುವ ಹಂತದಲ್ಲಿರುವುದು ಅವರಿಗೆ ಗೊತ್ತಾಗಿ ಬಿಟ್ಟಂತೆ ಅದೇ ಕಾಲಕ್ಕೆ ಅವರ ಫೋನು ಬರುತ್ತದೆ. ಒಮ್ಮೊಮ್ಮೆ ಬೇಗನೆಯೇ ಅಡುಗೆ ಶುರು ಮಾಡಿರಲಿ, ಅಥವಾ ತಡವಾಗಿಯೇ ಅಡುಗೆ ಪ್ರಾಂಭ ಮಾಡಿರಲಿ, ಸರಿಯಾಗಿ ಒಗ್ಗರಣೆ ಹಾಕುವಾಗಲೇ ಅವರ ಫೋನು. ಎಲ್ಲ ಸಮಾಚಾರ ಮಾತಾಡುತ್ತ ಮತ್ತೆ ಒಗ್ಗರಣೆ ಹೊತ್ತಿಸುವದು ಪ್ರಾರಂಭವಾಗಿದೆ. ಬಹಳ ವರ್ಷಗಳ ಕೆಳಗೆ ನನ್ನ ಮಗ ಶಾಲೆಯಲ್ಲಿ ಆರ್ಕಿಮಿಡಿಸ್ ತತ್ತ್ವ ಕಲಿತ ದಿನ ಫಿಸಿಕ್ಸ್ ಕ್ಲಾಸಿನಿಂದ ಮನೆಗೆ ಬಂದು ಹೇಳಿದ ಜೋಕು ನೆನಪಾಗುತ್ತದೆ: What happens when a body is immersed in water? ಉತ್ತರ? The phone rings! ಅದೇ ತರಹ ಸಧ್ಯದಲ್ಲಿ “ಸುಧಾ ತತ್ತ್ವ” ನನ್ನ ಒಗ್ಗರಣೆಗೆ ಬಹಳಷ್ಟು ಸಲ ಅಡ್ಡ ಬಂದಿದೆ! ಇನ್ನುಮುಂದೆ ಅವರಿಗೆ ಫೋನು ಮಾಡಿಯೇ ಒಗ್ಗರಣೆ ಹಾಕುವ ಶಪಥ ಕಟ್ಟಿದ್ದೇನೆ!
ಮೊನ್ನೆ ಯಾರ್ಕ್ ಶೈರ್ ಕನ್ನಡ ಬಳಗದ ಹರಟೆ ಕಟ್ಟೆಯಲ್ಲಿ ಇತ್ತಿತ್ತಲಾಗಿ ಕೊರೋನಾ ಮಾರಿಯಿಂದ ಮನೆಯಲ್ಲೇ ಬಂದಿಯಾಗಿ ತಿಂಗಳುಗಟ್ಟಲೆ ಕಳೆದ ಎಷ್ಟೋ ಗಂಡಸರು ’ನಳಪಾಕ’ ಸಾಧಿಸಿದ್ದಾರೆ ಅಂತ ಕೇಳಿರುವೆ. ಇದನ್ನು ಮನೆ ಹೆಂಗಸರೂ ಸ್ವಾಗತಿಸುವದರಲ್ಲಿ ಸಂದೇಹವಿಲ್ಲ!
– ಶ್ರೀವತ್ಸ ದೇಸಾಯಿ
*********************************************************************

Better late than never .
ವತ್ಸಲಾ ಅವರ ಲಾಸ್ಯಾನ್ಯ ಲೇಖನ ಹಾಸ್ಯಭರಿತವಾಗಿದೆ. ಆ ಹೆಸರನ್ನು ಪ್ರಪ್ರಥಮ ಕೇಳಿದಾಗ ಎಷ್ಟು ಮಧುರವಾಗಿದೆ ಅನಿಸಿತ್ತು. ಲಾಸ್ಯಾನ್ಯ ಯಾವೊದೋ ಭರತನಾಟ್ಯದ ಲಾಸ್ಯ ಒಂದು ಭಂಗಿ ಅಂತ ಅನಿಸಿದ್ದು ಉಂಟು. ಅದನ್ನು ಸವಿದಾಗ ಇಟಲಿಯ ವಿಸ್ಮಯಕರ ಸರೋವರಗಳಂತೆ ಲಾಸ್ಯಾನ್ಯ ಅಧ್ಭುತ. ವತ್ಸಲಾ ಅವರೇ ನಿಮ್ಮ ಮತ್ತು ನಿಮ್ಮ ಚಿಕ್ಕಮ್ಮನವರ ಮಧ್ಯೆ ನಡೆಯುವ ಸಂಭಾಷಣೆ ಸಹಜವಾಗಿ ಹಾಸ್ಯಭರಿತವಾಗಿದೆ. Lockdown ನಲ್ಲಿ lasagne lovely .
ದೇಸಾಯಿ ಅವರ ದೋಸೆ ಮಾಡುವ ಹಗರಣ ಓದಿ, ಪ್ಲೈನ್ ದೋಸೆ, ಮಸಾಲೆ ದೋಸೆ, ಅದರಲ್ಲೂ ಕಾಲಿ ದೋಸೆ ತಿಂದ ನನಗೆ ಅದನ್ನು ಮಾಡುವದರಲ್ಲಿ ಇಷ್ಟೊಂದು ಶ್ರಮ ಅಡಗಿದೆ ಅಂತ ಅರಿವಿರಲಿಲ್ಲ.
ದೇಸಾಯಿ ಅವರ ಅಡಿಗೆ ರುಚಿಸಿರುವ ನನಗೆ ಅವರಿಗೆ ಒಂದು ಸಲಹೆ. ‘Culinary ಕಲಿಯಿರಿ, ಅಂತ ಆನ್ಲೈನ್ ಕ್ಲಾಸೆಸ್ ಅನಿವಾಸಿಗಳಿಗೆ ಆರಂಭಿಸಿದರೆ ಆದ್ದೂರವಾಗಿ ನಡಿಯಬಹುದು. Keep up the good (food )ವರ್ಕ್
LikeLike
ಶ್ರೀರಾಮುಲು ಅವರಿಗೆ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು Better late than never — ಊಟಕ್ಕೆ ಸಹ,ಅರ್ಧಾಂಗಿ ಹೇಳಿದ್ದಂತೆ! ಅಡುಗೆ ಮನೆಯಲ್ಲಿ ಬಹಳಷ್ಟು ಅಡಗಿದೆ. ಬಹಳಷ್ಟು ಪೇಶನ್ಸ್ ಬೇಕು, ರಹಸ್ಯ ಅರಿಯಲು.ಇನ್ನೂ ಕಲಿಯುವದು ಬಹಳ ಇದೆ. ಸಹೃದಯಿಗಳು ಈಗಾಗಲೇ ಬಹಳಷ್ಟು ಟಿಪ್ಸ್ ಕೊಟ್ಟಿದ್ದಾರೆ. ಏಂದು ಕಾರ್ಯರೂಪಕ್ಕೆ ತರಲಾದೀತು ನೋಡುವಾ. ನಿಮ್ಮಸಾಹಸಗಳನ್ನು ಬರೆದು ಉಣಬಡಿಸಿರಲ್ಲ, ನಮ್ಮೆಲ್ಲರಿಗೂ! ಶ್ರೀವತ್ಸ
LikeLike
ಊಟ, ತಿಂಡಿ ಅನ್ನುತ್ತಲೇ ನನ್ನ ಕಿವಿ ನಿಮಿರಿತು. ಸ್ವಾರಸ್ಯಕರ,ರಸಭರಿತ,ಆಹ್ಲಾದಕರವಾದ ಆಹಾರದ ಬಗ್ಗೆ ಬರಹಗಳು ಮನಮೆಚ್ಚುವಂಥದು well ಉದರ ಮೆಚ್ಚವಂತಹುದು.
ಧಾರವಾಡ ಪೇಡ, ಮೈಸೂರುಪಾಕು ಹೆಸರುಗಳೇ ಬಾಯಲ್ಲಿ ನೀರೂರಿ ಬರುತ್ತೆ.
ಸವಿತಾ ಸುರೇಶ ಅವರ ಪ್ರಯೋಗ ನಿಜಕ್ಕೂ ಮನರಂಜಿತ. ಒಳ್ಳೆ ಪ್ರಯೋಜಕ ಹೊಸಗಸುಬಿ ಅವರಿಗೆ. ಈ ಲೇಖನ ರಸವತ್ತವಾಗಿ ಬರೆದ ಸವಿತಾ ಅವರಿಗೆ ಧನ್ಯವಾದಗಳು.
ಪ್ರಪ್ರಥಮವಾಗಿ ಪ್ರಶಂಶೆ ಸಲ್ಲ ಬೇಕಾದ್ದು ಮೈಸೂರು ಅರಮನೆಯ ಪಾಕಶಾಸ್ತ್ರ ಪ್ರವೀಣ ಮಾದಪ್ಪನವರಿಗೆ.
ಮೊತ್ತ ಮೊದಲು ಮೈಸೂರುಪಾಕು ಪ್ರಾರಂಭವಾದದ್ದು ಮೈಸೂರು ಅರಮನೆಯಲ್ಲಿ. ಆಗಿನ ಮಹಾರಾಜರರಾಗಿದ್ದ ಮುಮ್ಮಡಿ ಕೃಷ್ಣರಾಜ ವಡೆಯರ್ ಅವರ ಸೂಚನೆಯಂತೆ ಮೈಸೂರುಪಾಕಅನ್ನು ತಯಾರಿಸಿದರಂತೆ. ( ಗೂಗ್ಲೆಶ್ವರ ಕೃಪೆಯಿಂದ)ಧನ್ಯವಾದ ಸವಿತಾವರೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಹೆಸರನ್ನು ಜ್ಞಾಪಕ್ಕೆ ತಂದಿದ್ದಕ್ಕೆ.
ಈ ಸನ್ನಿವೇಶದಲ್ಲಿ ಇನ್ನೊಂದು ಪ್ರಸಿದ್ಧ ಸಿಹಿ ಅಂಗಡಿ ಗುಂಡಪ್ಪ ಸ್ವೀಟ್ ಸ್ಟಾಲ್ ನೆನೆಸುಕೊಳ್ಳುವುದು ಸಮಂಜಸ.
ಈ ಪ್ರಖ್ಯಾತ ಸಿಹಿ ಅಂಗಡಿ ಪುರಾತನ ಧರ್ಮರಾಯನ ದೇವಸ್ಥಾನದ ಬಳಿ ಇರುವ ಹಳೆ ಕಾಲದ ಗುಂಡಪ್ಪನ ಹೋಟೆಲು, (ಪ್ರಸಿದ್ಧ ಕರಗ ಮಹೋತ್ಸವ ಆರಂಭವಾಗುವದೇ ತಿಗಳರಪೇಟೆ ಯಲ್ಲಿರುವ ಈ ಪುರಾತನ ಧರ್ಮರಾಯನ ದೇವಸ್ಥಾನದಿಂದ).ಅವರ ಮೈಸೂರುಪಾಕು ಸಹ ಬಹು ರುಚಿಕರ.
ಸಹ ಬರಹಗಾರರಾದ ಶಾಂತಲಾಅವರ ಉತ್ತರ ಕರ್ನಾಟಕ ಶೈಲಿ ಲೇಖನ ಬಹು ಆನಂದಕರವಾಗಿದೆ,ರುಚಿಕರ ಪೇಡತರಹ. ಈ ಈರ್ವರಿಗೂ ಮನಪೂರ್ವಕವಾದ ಅಭಿನಂದೆನಗಳು
LikeLike
ಸ್ಕಾಟ್ಲೆಂಡ್ ನ ರಾಜ ರಾಬರ್ಟ್ ದ ಬ್ರೂಸ್ ಹೇಳಿದ ಹಾಗೆ ” If at first you don’t succeed try try try again” ಗಿನಿ ಪಿಗ್ ಗಳು ಸಿಗುವ ತನಕ perfect ಆಗೋವರೆಗೂ ಎಷ್ಟುಸಾರಿ ಬೇಕಾದರೂ try ಮಾಡಬಹುದು. ಆದರೂ ದೋಸೆ ಮಾಡೋದಕ್ಕೆ ಇಷ್ಟೆಲ್ಲಾ ಸರ್ಕಸ್ ಯಾಕೆ? ನಾವು High Protein, Nutritious, Most forgiving, idiot Proof ದೋಸೆ ಮಾಡ್ತೀವಿ. Recipe ಬೇಕಾ?
LikeLiked by 1 person
Yes, please! ಈ ಕೊರೋನಾ ಸಮಯದಲ್ಲಿಯ ಜಾಡ್ಯದಲ್ಲಿ ಎಲ್ಲರ ಆರೋಗ್ಯಕ್ಕಾಗಿ ಇಲ್ಲೇ ಹಂಚಿಕೊಳ್ಳಿ!
LikeLike
ವತ್ಸಲಾ ಅವರ ಹಾಸ್ಯಮಯ ಲಸಾನ್ಯಾ ವೃತ್ತಾಂತ ಅವರ ಗೋಳಿನಲ್ಲಿ ನಮ್ಮ ಹೊಟ್ಟೆ ಹುಣ್ಣು ಮಾಡಿದೆ. ನಿಮ್ಮ ಚಿಕ್ಕಮ್ಮನ ಹಾಸ್ಯ ಪ್ರಜ್ಞೆ, ದೋಸಾಭಿಮಾನ ಎರಡೂ ಲಸಾನ್ಯಾವನ್ನು ಸ್ಟಂಪ್ ಮಾಡಿಬಿಟ್ಟವು.
ದೇಸಾಯಿಯವರ ಮನೆಯ ದೋಸೆಯ ಅವಾಂತರ ಎಲ್ಲ ಅನಿವಾಸಿಗಳ ಮನೆಯ ಕಥೆಯೇ. ನಿಧಾನವಾಗಿ ಎಲ್ಲರೂ ಒಂದಲ್ಲ ಒಂದು ಮಾರ್ಗವಾಗಿ ಸ್ನಾತಕರಾಗಿದ್ದೇವೆ. ಆ ಹಾದಿಯಲ್ಲಿ, ಸರಿಯಾಗಿ ಕಲಿಸಿಲ್ಲ, ಉಪಕರಣ ಸರಿ ಇಲ್ಲ, ಪ್ರಶ್ನೆ ಸಿಲೆಬಸ್ನಿಂದ ಹೊರಗಿಟ್ಟು, ಹೀಗೆ ಹತ್ತು ಹಲವು ಕುಂಟು ನೆಪಗಳನ್ನು ಹೇಳಿಕೊಂಡೇ ಬಂದಿರುತ್ತೇವೆ. ಅಂತೂ ಪ್ಲಾಸ್ಟಿಕ್ ಕೊಟ್ಟೆ (ಪ್ಯಾಕೆಟ್) ವಿದ್ಯಾಲಯದ ಪದವೀಧರರಾಗಿದ್ದಕ್ಕೆ ಅಭಿನಂದನೆಗಳು. ಈಗ ಆನ್ಲೈನ್ನಲ್ಲಿ ದೋಸೆ ಹಿಟ್ಟು ತರಿಸಿಕೊಳ್ಳಬಹುದು. ಒಂದು ಸಲ ಉಪಯೋಗಿಸಿ ನೋಡಿ.
LikeLiked by 2 people
ಧನ್ಯವಾದಗಳು, ರಾಂಶರಣ ಅವರೇ! ಮೈದಾನದಲ್ಲಿ ಓಡುವವನ ಕಡೆ ಯಾರೂ ನೋಡುವದಿಲ್ಲ, ಬಿದ್ದವನಿಗೇ ಸಹಾಯ ಹಸ್ತ ಅನ್ನುವಂತೆ ಎಷ್ಟೊಂದು ಸಲಹೆ, ಸೂಚನೆ, ಸಾಂತ್ವನಪದಗಳು! ಎಲ್ಲರಿಗೂ ಕೈಮುಗಿಯುವೆ. ಜೀವನದಲ್ಲಿ ಕಲಿಯುವುದು ನಿಲ್ಲುವುದೇಯಿಲ್ಲ!
LikeLiked by 1 person
ವತ್ಸಲಾ ನೀವು ನಿಮ್ಮ ಚಿಕ್ಕಮ್ಮನಿಗೆ ಲಸಾನ್ಯ ಮಾಡುವ ಪರಿಯನ್ನು ಹೇಳಿಕೊಟ್ಟಿದ್ದು ನನ್ನ ಅಕ್ಕ ನನ್ನ ಅಮ್ಮನಿಗೆ ಕೇಕ್ ಮಾಡುವ ವಿಧಾನ ತಿಳಿಸಿ ಅವರಿಬ್ಬರೂ ‘ಎಗ್ ಲೆಸ್ ಕೇಕ್’ ಮಾಡಲು ಹೊರಟಾಗ ಆದ ಅನಾಹುತಗಳನ್ನು ನೆನಪಿಗೆ ತಂದಿತು. ಅಂದ ಹಾಗೆ ನನ್ನ ಹೆಂಡತಿ ನನಗೆ ಟೆಸ್ಕೊ ದಿಂದ ಕೊತ್ತುಂಬರಿ ಸೊಪ್ಪು ತರಲು ಆಜ್ಞಾಪಿಸಿ ನಾನು ಒಮ್ಮೆ ಪಾರ್ಸ್ಲಿ ಸೊಪ್ಪು ತಂದಿದ್ದು ನನಗೆ ನೆನಪಿದೆ. ಉಪ್ಪಿಟ್ಟಿಗೆ ಇನ್ನೇನು ಹಾಕುವಾಗ ಅದು ಪಾರ್ಸ್ಲಿ ಎಂದು ಗೊತ್ತಾಗಿ ನಾನು ಹೆಂಡತಿಯಿಂದ ಅಡುಗೆಯ ಮೊದಲ ಪಾಠವನ್ನು ಕಲಿತೆ
ಶ್ರೀವತ್ಸ ಅವರೇ, ನಿಮ್ಮಿಂದ ನಾನಾ ರೀತಿ ಸ್ಫೂರ್ತಿ ಯನ್ನು ಪಡೆದಿರುವ ನಾನು ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿ ಯಾದ ಬಳಿಕ ಅಡುಗೆಮನೆಯನ್ನು ಪ್ರವೇಶಿಸಲು ಕಾತರನಾಗಿದ್ದೇನೆ. ನನ್ನ ಹೆಂಡತಿ ( ಅಡುಗೆ ಮಾಡಿ ಮಾಡಿ ಬೇಸತ್ತು) ಈಗ ಒಪ್ಪಿಗೆ ನೀಡಿದ್ದಾಳೆ. ಕರೋನ ದಿಂದಾಗಿ ನಾನು ಅಡುಗೆಯನ್ನು ಫೋನಿನಲ್ಲಿ ನಿಮ್ಮ ಮಾರ್ಗದರ್ಶನದಲ್ಲಿ ಕಲಿಯಬೇಕೆಂದಿದ್ದೇನೆ. ಸುಧಾ ಅವರನ್ನು ಕಾನ್ಫರೆನ್ಸ್ ಕಾಲ್ ನಲ್ಲಿರಿಸಿ ಇಬ್ಬರು ಒಟ್ಟಿಗೆ ಒಗ್ಗರಣೆ ಹಾಕುವ ಏನಂತೀರಿ ?
ಪ್ರಸಾದ್
LikeLiked by 2 people
ನಿಮ್ಮ ಚಂದನ್ನ ಕಾಮೆಂಟಿಗೆ ಧನ್ಯವಾದಗಳು ಪ್ರಸಾದ್ ಅವರೇ! ನನ್ನಿಂದ ಸ್ಫೂರ್ತಿ ಮತ್ತು ಇನ್ನು ಸಲಹೆ – ಚೆನ್ನಾಗಿದೆಯಲ್ಲವೇ ನಮ್ಮ ಸಹಕಾರ! ನೀವೂ ಯಾರೋ ಹೇಳಿದಂತೆ ಭೀಮ-ನಳ ಕ್ಲಬ್ ಸೇರಿಕೊಳ್ಳಿ, ನಿವೃತ್ತಿಯ ನಂತರ. ಮಜಾ ಮಾಡೋಣ. ನನ್ನಾಕೆ ಎಚ್ಚರಿಸಿದ್ದಂತೆ ‘ಮಾಡಿದ್ದುಣ್ಣೋ ಮಹಾರಾಯಾ!’. ಅಂಜಿಕೆ ಬೇಡ! ಆ ಸುಧಾ ಅವರ ಬೆಂಬಲ ಇದ್ದರೆ ಸಾಕೋ , ಬೆನ್ನು ಬಿಡು ಅನ್ನಬೇಕೋ (ಒಗ್ಗರಣೆ ಮುಗಿಯುವವರೆಗಷ್ಟೇ!). ಕಿಚನ್, ಹಿಯರ್ ವಿ ಕಮ್ !
LikeLike
ವತ್ಸಲಾ ಅವರೇ ನಿಮ್ಮ ಚಿಕ್ಕ ಆದರೆ ಲಾಸ್ಯ-ಹಾಸ್ಯಭರಿತ ಬರಹ ಬಹಳ ಚೆನ್ನಾಗಿದೆ. ಣಿಮ್ಮಮತ್ತು ಚಿಕ್ಕಮ್ಮನ interaction ಸ್ವಾರಸ್ಯಕರ ಮತ್ತು ನಗುವನ್ನುಂಟು ಮಾಡುತ್ತದೆ. ನಮ್ಮ ಶೈಲಿಯನ್ನು ಮೆಚ್ಚಿದೆ. ಡೆಮೋ ಯಾವಾಗಲೂ ಕಷ್ಟವೆ, ಅದೂ ವಿಡಿಯೊದಲ್ಲಿ ತೋರಿಸುವಾಗ ಕಾನ್ಸೆಂಟ್ರೇಷನ್ ಗೆ ತೊಂದರೆಯಾಗುತ್ತದೆ. ರಾಮಮೂರ್ತಿಯವರ ಗುಟ್ಟಿನ ಮಾತಿನಂತೆ ಇನ್ನೊಮ್ಮೆ ತವಾ ತೊಳೆಯದೆ ದೋಸೆ ಮಾಡಿ ಮತ್ತೆ ಫೇಲ್ ಆದರೆ ನೀವು ನನಗೆ ನಿಮ್ಮ ಲಸಾನ್ಯ ಟೆಕ್ನಿಕ್ ಹೇಳಿಕೊಡಿ!
LikeLike
ಅದ್ಭುತ ಸರಣಿ ಬಿಡ್ರಿ ಇದು ಗುಡೂರ್ ಅವರೇ!
ಎಲ್ಲರ ಪಾಕಕಲೆ ಯು ಚಿತ್ತಾರ ಚಿತ್ರ ರಂಗುರಂಗಿನ ಕತೆ ಹೇಳ್ತಿವೆ.
ವತ್ಸಲಾ ಅವರ ಲಾಸಾನ್ಯಾದ ಕತೆ ನಾ ಮೊದಲ ಬಾರಿಗೆ ಮಾಡಿದ ಜಿಲೇಬಿ ಕತೆ ನೆನಪಿಸ್ತು.ದಸರಾಕ್ಕೆ ಜಿಲೇಬಿ ಮಾಡ್ತೀನೀಂತ ಶುರು ಮಾಡ್ಕೊಂಡ್ರೆ ಒಂದಾದ್ರೂ ಜಿಲೇಬಿ ಕೊಳವೆ ಥರ ಬರಲೇ ಇಲ್ಲ.ದೋಸೆ ಥರಾ ಅಗಲಗಲ! ಎಣ್ಣೆಯಿಂದ ಎತ್ತಿದ್ರೆ ಜೀವ ಇಲ್ಲದೇ ಜೋತಾಡೋದು! ಕೊನೆಗೆ ಪೂರಿ ಮಾಡಿ ಜಿಲೇಬಿ ಪಾಕದ ಸುಧಾರಸ ಮಾಡಿದ್ದಾಯ್ತು!
ಶ್ರೀವತ್ಸ ದೇಸಾಯಿಯವರು ಹೇಳಿದ ದೋಸೆ ಪರಿಪಾಟ್ಲು ಜಬರ್ದಸ್ತ್ ಆಗಿದೆ! ಮೊದಲ ಸಲ ಕ್ಕೇ ದೋಸೆ ಯಾರೂ ಯಶಸ್ವಿಯಾಗಿ ಮಾಡೇ ಇಲ್ಲವೇನೋ ಅನ್ನಿಸಿಬಿಡುತ್ತದೆ.ನನ್ನ ಎಂಟು ತಿಂಗಳ ಮಗನನ್ನು ನನ್ನ ಪತಿ ಎದುರು ಕೂರಿಸಿ ಸೀರೆ ನೆರಿಗೆ ಸೆರಗು ಸಿಕ್ಕಿಸಿ ಕೊಂಡು ದೋಸೆ ಮಾಡಿ ಕರೀತೀನಿ ಅಂತ ಗತ್ತಿನಿಂದ ಹೇಳಿ ಒಳಗೆ ಹೋಗಿ ಅರ್ಧ ಗಂಟೆ ಆದ್ರೂ ಕರೆ ಬರಲಿಲ್ಲ ಅಂತ ನನ್ನ ಪತಿ ಒಳಗೆ ಬಂದು ನೋಡಿದ್ರೆ ಬೆವರು ಸುರಿಸಿ ಸೋತು ಹೋದ ನಾನು, ಖಾಲಿ ದೋಸೆ ಹಿಟ್ಟಿನ ಪಾತ್ರೆ, ಕಿಡಕಿ ಆಚೆ ಮುದ್ದೆ ಮುದ್ದೆ ಹಿಟ್ಟು ಕಚ್ಚಾಡುವ ಕಾಗೆಗಳು ಎಲ್ಲಾ ಕಥೆ ಹೇಳಿದಂತೆ ನನ್ನ ಗಂಡ ನಕ್ಕಾಗ ನನ್ನ ಅಹಂ ಜಾಗ್ರತವಾಗಿ ‘ ಮುಂದಿನ ಸಲ ನೋಡೀರಂತ’ ಅಂತ ಹೇಳಿ ಹೊರಗೆ ಹೋಗಿ ದೋಸೆ ತಿಂದು ಬಂದಾಯ್ತು!
ಆದರೆ ಒಗ್ಗರಣೆ ಕಥೆ ಕೇಳಿ ಬಹುಶಃ ಭೀಮಸೇನ-ನಳಮಹಾರಾಜರು ಸಪ್ಪೆ ಮುಖ ಮಾಡಿರಬೇಕು ನಕ್ಕೀ! ಸರಿ ಹೋದೀತು ಬಿಡ್ರಿ.
ಅಂತೂ ವಾರ ವಾರವೂ ರಸದೌತಣ! ದಾರಿ ಕಾಯ್ತಾ ಇರ್ತೀನಿ.ಗುಡೂರ್ ಅವರ ಚಿತ್ರ ಇನ್ನಷ್ಟು ಕಳೆ ಕಟ್ಟಿಸ್ತಾವೆ ಅಡಿಗೆ ಮನೆ ಕತೆಗಳಿಗೆ!
ವತ್ಸಲಾ ಅವರಿಗೂ, ಶ್ರೀವತ್ಸ ದೇಸಾಯಿ ಅವರಿಗೂ ಅಭಿನಂದನೆಗಳು.ಗುಡೂರ್ ಅವರಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLiked by 2 people
ಧನ್ಯವಾದಗಳು, ಸರೋಜಿನಿ ಅವರೇ. ಸಮಾಧಾನ ಹೇಳಿದ ಕೆಲವರಂತೆ, ಈಗಾಗಲೇ ಟಿಪ್ಸ್ ಕೊಟ್ಟ ಕೆಲವರು ಸಹ ತಮ್ಮ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡು ಈ ಸರಣಿಯನ್ನು ಜೀವಂತ ಇಡುತ್ತ ಇನ್ನುಳಿದವರಿಗೂ ಬರೆಯಲು ಹುರಿದುಂಬಿಸಿ ಅವರ ನೆನಪುಗಳ ಸಂಗ್ರಹದ ತಳಕ್ಕೆ ಹತ್ತಿದ ಘಟನೆಗಳನ್ನು ಅಂಟಿದ ದೋಸೆಯಂತೆ ಕೆರೆಯುವ ಕೈಂಕರ್ಯಕ್ಕೆ ನಾಂದಿ ಹಾಡಿದ್ದಾರೆ! ನಿಮ್ಮ ಮೊದಲ ದೋಸೆಯ ಮುದ್ದೆಯನ್ನು ತೂರಿದ ಚೆಂಡಾಟವನ್ನು ಓದಿ ನಗೆ ಸಮಾಧಾನ, ಎರಡೂ. ನಿಮ್ಮ ಆಸ್ಥೆಗೆ ಋಣಿ!
LikeLiked by 1 person
ಕೆಲವು ಮೊದಲ ಸಲವೇ ಒಲಿಯುತ್ತವೆ, ಕೆಲವು ಏನು ಮಾಡಿದರೂ ಒಲಿಯಿವುದಿಲ್ಲ, ದೋಸೆ, ಹೋಳಿಗೆ ಎರಡನೇಯ ಜಾತಿಯವು.
ಲಸಾನಿಯಾ ಮಾಡುವುದು ಕಷ್ಟ ಎನಿಸುವುದಿಲ್ಲ, ರೆಡಿಮೇಡ್ ಲಸಾನಿಯಾ ಹಾಳೆಗಳನ್ನು ಸರಿಯಾಗಿ ಬೇಯಿಸಲು ಅಭ್ಯಾಸ ಮಾಡಿಕೊಂಡರಾಯಿತು. ತಟ್ಟೆಗೆ ಹಾಕಿಕೊಂಡಾಗ ಕಲಗಚ್ಚಿನಂತೆ ಕಾಣುತ್ತದೆ, ಆದರೆ ರುಚಿ ಮಾತ್ರ ಅದ್ಭುತವಲ್ಲವೇ? ವತ್ಸಲಾ ಅವರ ಚಿಕ್ಕಮ್ಮನ ಹಾಸ್ಯಪ್ರಜ್ಞೆ ತುಂಬ ಚೆನ್ನಾಗಿದೆ.
ದೇಸಾಯಿಯವರ ಬರಹ ಆಳ ಅಗಲ ಉದ್ದ, ಅದು ಅಡುಗೆಯ ಲೇಖನವನ್ನೂ ಬಿಟ್ಟಿಲ್ಲ. ನಾನೂ ಸಹ ಅಡುಗೆಯ ವಿಷಯದಲ್ಲಿ ಟೆರಿಟೋರಿಯಲ್. ನಾನು ಅಡುಗೆ ಮಾಡುವಾಗ ನನ್ನ ಹೊರತು ಇನ್ನಾರೂ ಇರಬಾರದು, ಅದರಲ್ಲೂ ಹೆಂಡತಿ ಹತ್ತಿರ ಇರಬಾರದು.
ದೇಸಾಯಿಯವರಿಗೆ ದೋಸೆಯ ಕಥನ ಓದಿ ದೋಸೆ ಅವರನ್ನು ಪೀಡಿಸಿದ ವಿವರಣೆ ಓದುಗರಿಗೆ ನಗು ತರಿಸುತ್ತದೆ, ಆದರೆ ರವೆ ದೋಸೆಗೆ ತೃಪ್ತರಾಗಬೇಕಾದ ಪರಿಸ್ಥಿತಿಯ ನೆನೆಸಿಕೊಂಡರೆ ಅಯ್ಯೋ ಅನಿಸುತ್ತದೆ.
ಒಗ್ಗರಣೆಗೂ ಅರ್ಕಿಮಿಡೀಸನಿಗೂ ಇರುವ ಸಂಬಂಧ ನಿಮಗೊಬ್ಬರಿಗೇ ಹೊಳೆಯಲು ಸಾಧ್ಯ ಮತ್ತು ಅದನ್ನು ಅಷ್ಟೇ ಒಗ್ಗರಣೆ ಹಾಕಿ ಬರೆದಿದ್ದೀರಿ.
ಅಡುಗೆ ಸರಣಿ ಆರಂಭಿಸಿದ ಗುಡೂರ್ ಅವರಿಗೆ ಅಭಿನದನೆಗಳು.
-ಕೇಶವ
LikeLiked by 2 people
ಧನ್ಯವಾದಗಳು, ಕೇಶವ. ನೀವು ಸೂಕ್ಷ್ಮಗ್ರಾಹಿ! ನೀವೂ ಸಹ ಟೆರಿಟೋರಿಯಲ್ ಅಂದರೆ ಸೋಶಿಯಲ್ ಸೈಂಟಿಸ್ಟ ಅವರದು ಖರೆ ಮಾತು. ಟೆರಿಟರಿ ಅದನ್ನು ಕಾಯುವದರಲ್ಲಿ ಲಿಂಗ ಭೇದ ಇಲ್ಲ. ಇನ್ನು ಒಗ್ಗರಣೆ ರೂಲ್ ಗೆ ಕೆಲವರು ಬೆಲ್ ಥೇರಂ ಅಂತಾರೆ,ಅಲೆಕ್ಸಾಂಡರ್ ಗ್ರಹಂ ಹೆಸರಿನಲ್ಲಿ!Body immerse ಮಾಡುವಾಗ ಈಗಿನ ಕಾಲದಲ್ಲಿ ಮೋಬೈಲ್ ಹಿಡಿದು ಮತಾಡುವ ಪ್ರೋಗ್ರಾಮ ಇಟ್ಟುಕೊಂಡೇ ನೀರಿಗಿಳಿದಿರುತ್ತಾರೆ! ಗುಡುರ ಅವರ ಚಿತ್ರದ ಗಂಡಸಿನ ಔಟಫಿಟ ಹಾಕಿ ಒಮ್ಮೆ ಕಿಚನಿಗೆ ಹೋಗಿ ದೋಸೆ ಹಾಕುವ ತವಕ!
LikeLike
ಈ ವಾರದ ಅಡುಗೆ ಕೋಣೆ ಅವಾಂತರದ ಎರಡು ಲೇಖನಗಳು ನಿಜಕ್ಕೂ ನಗೆ ಉಕ್ಕಿಸುತ್ತವೆ . “ಕೋಟಿ ವರಹ ಕೊಟ್ಟರೂ ಕೋಣೆ ಕೊಡೆ ” ಅಂತ ನಮ್ಮ ಯಾವಾಗಲೂ ಹೇಳ್ತಾ ಇದ್ರು ದೇಸಾಯಿ ಅವರೇ. ಹೆಣ್ಣುಮಕ್ಕಳಿಗೆ ಅಡುಗೆ ಕೋಣೆ ಅವರ ಸ್ವಾಧೀನದಲ್ಲಿರುವ ಸಾಮ್ರಾಜ್ಯ . ಅದನ್ನು ಅವರು ಯಾರಿಗೂ ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಗಂಡನಾದರೂ ಅಷ್ಟೇ !. ಅಲ್ಲಿ ಅವರ ಅಧಿಕಾರ ಬಹಳ ಕ್ರಮಭದ್ಧ ರೀತಿಯಲ್ಲಿ ನಡೆದುಕೊಂಡು ಹೋಗುತ್ತದೆ. ಆದರೆ ಇಂದು ಬದಲಾಗಿರುವ ಸಮಾಜದಲ್ಲಿ ಇಬ್ರು ಅಡುಗೆಮನೆಯಲ್ಲಿ ಹೊಂದಿಕೊಂಡು ಹೋಗುವುದರಲ್ಲಿ ಅರ್ಥವಿದೆ. ನಿಮ್ಮ ಲೇಖನದಲ್ಲಿ ದೋಸೆ ಮಾಡುವ ಪ್ರೋಟೋಕಾಲ್ ಓದಿ ನಮ್ಮ ಮನೆಯಲ್ಲಿ ಅದೇ ಘಟನೆಗಳು ನಡೆದ ನೆನಪಾದವು. ರಾಮಮೂರ್ತಿ ಅವರು ಬರೆದಿರುವಂತೆ, ಈಗ ಸುಮಾರು ೧೫ ವರ್ಷಗಳಿಂದ ನಾವು ದೋಸೆಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ. ಮುಂದೆ ನೀವು ನಮ್ಮ ಮನೆಗೆ ಬಂದರೆ, ಸಂಕೇತಿ ಅಡುಗೆಮನೆಯ ದೋಸೆ ಮಾಡಿಕೊಡುತ್ತೇವೆ.! ಆದರೆ ನಮ್ಮ ದೋಸೆ ರೆಸಿಪಿಯ ವಿಧಾನ ಸೀಕ್ರೆಟ್ ಅಲ್ಲ. ಅದನ್ನು ಬಹಳ ಮಂದಿಯೊಂದಿಗೆ ಹಂಚಿಕೊಂಡಿದ್ದೇನೆ. ಟಿಫಾಲ್ ತವೆ ಉಪಯೋಗಿಸಿದರೆ, ಖಂಡಿತ ದೋಸೆ ಹದವಾಗಿ ಎದ್ದುಬರುತ್ತದೆ. ಲೇಖನದ ಮೊದಲಲ್ಲಿ ಬರೆದಿರುವ ಪೀಠಿಕೆ ಬಹಳ ಚೆನ್ನಾಗಿದೆ. ಕುಕಿಂಗ್ ಈಸ್ ಲೈಕ್ ಸ್ಕೀಯಿಂಗ್. ಒನ್ ನೀಡ್ಸ್ ಟು ಸ್ಕೀ ಅಂಡ್ ಫಾಲ್ ಫ್ಯೂ ಟೈಮ್ಸ್ . ದೋಸೆ ಎದ್ದು ಬರದಿದ್ದರೆ, ನಮ್ಮ ಕಂಪ್ಲೇಂಟ್ ಮೊದಲು ಹೋಗುವುದು ಎಲೆಟ್ರಿಕ್ ಸ್ಟವ್ ಕಡೆಗೆ, ಅಥವಾ ಮಿಕ್ಸರ್ ಮೇಲೆ! ನಿಮ್ಮ ಬರವಣಿಗೆಯ ಧಾಟಿ ತುಂಬಾ ಚೆನ್ನಾಗಿದೆ.
ವತ್ಸಲಾ ನಿಮ್ಮ ಲಾಸ್ಯಾನ್ಯದ ಅವಾಂತರವೂ ಅಷ್ಟೇ ಸೊಗಸಾಗಿದೆ. ಇಂಡಿಯನ್ ಜನ ದೋಸೆ ಮಾಡೋದು ಬಿಟ್ಟು, ಲಾಸ್ಯಾನ್ಯ ಮಾಡುವುದು, ಇಟಾಲಿಯನ್ ಜನದ ಕೈಯಲ್ಲಿ ಇಡ್ಲಿ -ಚಟ್ನಿ ಮಾಡಿಸಿದಂತೆ . ನಿಮ್ಮ ಕಸಿನ್ ಕಡೆಯಲ್ಲಿ ಮಾಡಿದ ಘೋಷಣೆ ನಿಜಕ್ಕೂ ಟಿಪಿಕಲ್! ನೀವು ಲಾಸ್ಯಾನ್ಯ ಹಾಳೆಗಳನ್ನು ಅಂಟಿಸಿದ ರೀತಿ ಅದನ್ನು ಬಿಡಿಸುವ ಪರದಾಟ ನೋಡಿ, ಆಕೆಗೆ ಬೆಣ್ಣೆ -ದೋಸೆ ಪಲ್ಯವೇ ಮೇಲು ಎನ್ನಿಸಿರಬೇಕು! ಆಕೆ ಲಾಸ್ಯಾನ್ಯವನ್ನು ಅಪಹಾಸ್ಯವೆಂದು ತಮಾಷೆ ಮಾಡಿರುವುದು ಆಶ್ಚರ್ಯವೇನಿಲ್ಲ! ನಮ್ಮ ತಾಯಿ ನಾನು ಸೂಪ್ ಮಾಡುವುದನ್ನು ಕಂಡು, ಇದೇನು ನಮ್ಮ ಮೆಣಸಿನ ಸಾರಿನಂಟಿದೆ ಎಂದು ಮುಖ ಇಳಿ ಬಿಟ್ಟದ್ದು ನೆನಪಾಯಿತು. ಗುಡೂರ್ ಅವರ ವ್ಯಂಗ್ಯ ಚಿತ್ರಗಳು ಮತ್ತೊಮ್ಮೆ ನಿಮ್ಮ ಲೇಖನಗಳಿಗೆ ರಂಗೇರಿಸಿದೆ. ಒಟ್ಟಿನಲ್ಲಿ ಅಡುಗೆಮನೆ ಸರಣಿಯ ಲೇಖನಗಳು ಯಶಸ್ವಿಯಾಗಿ ಮುಂದುವರೆಯುತ್ತಿರುವುದು ಸಂತೋಷದ ಸುದ್ದಿ. ಮತ್ತಷ್ಟು ಭೀಮಸೇನ-ನಳ ಮಹಾರಾಜರು ಮುಂದೆ ಬಂದು ತಮ್ಮ ಅಡುಗೆಮನೆಯ ಅನುಭವಗಳನ್ನು ಹಂಚಿಕೊಳ್ಳಲಿ ಎಂದು ಆಶಿಸುತ್ತೇನೆ.
ಉಮಾ ವೆಂಕಟೇಶ್
LikeLiked by 1 person
ಉಮಾ ಅವರಿಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕೇಶವ ಅವರು ಬರೆದಂತೆ ಗಂಡಸರು ಸಹ -ಸ್ವಲ್ಪ ಸಮಯಕ್ಕಾದರೂ- ತಮ್ಮ ಆಧಿಪತ್ಯದಲ್ಲಿ ಕೋಣೆಗೆ ಹೆಂಡತಿಗೆ ಸಹ ಪ್ರವೇಶಕೊಡದಂತೆ ತಮ್ಮ ಡೋಮೇನನ್ನು ಸಂರಕ್ಷಿಸುತ್ತಾರೆ! ಅಂತೂ ನೀಉ ಧಾರಾಳಿ, ನಿಮ್ಮ ರೆಸಿಪಿ, ವಿಧಾನವನ್ನು ರಹಸ್ಯವಾಗಿಡುವದಿಲ್ಲ ಎಂದು ಕೇಳಿ. ಒಮ್ಮೆ ಬಂದು ನಿಮ್ಮ ಕೈಲಿ ಉಂಡು ಓಪನ್ ಸೀಕ್ರೆಟ್ ತೊಗೊಂಡು ಹೋಗುವೆ!ಅನಿವಾಸಿಯ ಬಗ್ಗೆ ನಿಮಗೆ ಇನ್ನೂಒ ಎಷ್ಟು ಕಾಳಜಿ ಅಂತ ತಿಳಿದು ಖುಷಿಯಾಗುತ್ತದೆ!
LikeLike
ನಳಪಾಕದ ವಿವರ ಸುಂದರವಾಗಿದೆ. ನಾನೂ ದೇಸಾಯಿಯವರ ಮನೆಗೆ ಹೋಗಿದ್ದೆ. ಆದರೆ ಅವರು ನನಗೆ ದೋಸೆ ಮಾಡಿ ತಿನ್ನಿಸಲಿಲ್ಲ. ದೋಸೆ ಮಾಡಿದ್ದರೆ ದೋಸೆ ಹಂಚಿನಿಂದ ಎದ್ದಿತ್ತೋ ಇಲ್ಲವೋ ಹೇಳಬಹುದಿತ್ತು.
ವತ್ಸಲಾ ಅವರ ಲಾಸಾನ್ಯ ಅಂದರೆ ಏನು ತಿಳಿಯಲಿಲ್ಲ. ಕನ್ನಡದಲ್ಲಿ ಇದಕ್ಕೆ ಏನು ಅನ್ನುತ್ತಾರೆ?
LikeLike
ಧನ್ಯವಾದಗಳು, ಅರುಣ. ನಿನಗೆ ಆ ದೋಸೆಯನ್ನು ತಿನ್ನಿಸಿದ್ದರೆ ನೀನು ನನಗೆ ಹೇಳಿದ ಉಪ್ಪಿಟ್ಟಿನ ಜೋಕ್ (ಡುಂಡಿರಾಜವರ) ತರ ನಿನ್ನ ಮುಖ ಕಪ್ಪಿಟ್ಟಿರುತ್ತಿತ್ತು (ಆಗ batter ಬಂದಿರಲಿಲ್ಲ). ಅಷ್ಟೇ ಅಲ್ಲ ನನ್ನ ನಿನ್ನ ಅರವತ್ತು ವರ್ಷಗಳ ಮೈತ್ರಿ ನಿಂತುಹೋಗುತ್ತಿತ್ತು. ಅದಕ್ಕೆ ರಿಸ್ಕ್ ತೊಗೊಂಡು ಉಪ್ಪಿಟ್ಟೇ ತಿನ್ನಿಸಿದೆ! ನಿನ್ನ ಮುಖ ನಿನ್ನ ಹೃದಯದಷ್ಟೇ ಅರಳಿತ್ತು. ನೀ ಲಾಸಾನಿಯಾ ದುನಿಯಾಗೆ ಕೈ ಹಾಕಬೇಡ. ಮಾಡಲಿಕ್ಕೆ ಹೋದರೆ ತಿನ್ನಬೇಕಾದೀತು (ಲಾಸಾನಿಯಾ – ದೋಸೆ ಅಲ್ಲ) humble pie! SP ಅಂತ ನೀ ಕರೆಯುವ ಶ್ರೀವತ್ಸ
LikeLike
I totally agree with the fact that making of an absolutely tasteless dish ‘Lasagne’ requires too much of silly work. For someone who knows how to make the best Masala Dosas it is a big joke …!
Making Masala Dosas is truly a GANDHARVA VIDYE’ ! It requires life time skills, a vast and in depth knowledge of history and heritage. A touch of punya acquired in the past janma…?
Congratulations to Dr Desai-the only male cook who has volunteered to share his culinary secrets. More male adventureres would be welcome ! Inclusion of Illustrations from Gudur shoud be made mandatory for every article .
LikeLike
Thank you for your comments dear Reader. I wonder if you would let yourself know as we appreciate your following of Anivaasi. Desai
LikeLike
ವಾಹ್! ವಾಹ್!
ವತ್ಸಲರ ಬಳುಕುವ ಲಾಸ್ಯದ ಲಾಸಾನ್ಯ ಮತ್ತು ಶ್ರೀವತ್ಸರ, ಮೆತ್ತಿದ ದೋಸೆ ಎತ್ತಿಸಿದ, ನಳರ ಡೋ’ಮೆನ್’ ತುಂಬಿಸಿದ ಒಗ್ಗರಣೆಯ ‘ಬಿನ್’, ಇವೆರಡೂ ನಗೆಯ ಪರಿಮಳವನ್ನ ಓದುಗರ ಮನದ ತುಂಬಾ ಹರಡಿಸುತ್ತವೆ.
ಅನಿವಾಸಿಯ ‘ಪಾಕ’ಶಾಲೆಯ ಮತ್ತೆರಡು ಪಕ್ವ ಬರಹಗಳು. 👏👏👏
ಮುರಳಿ ಹತ್ವಾರ್
LikeLiked by 1 person
ಢನ್ಯವಾದಗಳು ಮುರಳಿಯವರೆ. ನಿಮ್ಮ ಚಿಕ್ಕ ಚೊಕ್ಕ ಅರ್ಥಗರ್ಭಿತ ಕಾವ್ದಂತೆ ಪ್ರಾಸಮಯ ಪ್ರತಿಕ್ರಿಯೆಗಳನ್ನು ಓದುವದೂ ಖುಷಿಯೇ! ನಿಮ್ಮ ಬರವಣಿಗೆಗೆ ಕಾಯುವೆ!
LikeLike
ವತ್ಸಲಾ ಲಾಸಾಯನ ಬಿಟ್ಟು ನಿಮ್ಮ ಚಿಕ್ಕಮ್ಮ ಹೇಳಿದ ಹಾಗೆ ಮಾಡಿ. ನೀವು ನಮ್ಮ ಮನೆಗೆ ಬಂದಾಗ ನಿಮ್ಮ ಸ್ನೇಹಿತೆ ಸೀತು ಮಾಡುವ ಸೀಮೆಅಕ್ಕಿ ಕಿಚಡಿ ಮತ್ತು ನನ್ನ special Pasta ಸಿಗತ್ತೆ
ಶ್ರೀವತ್ಸ ಅವರೇ, ನಮ್ಮ ಮನೆಯಲ್ಲಿ ಯಾವತ್ತೂ ready made ದೋಸೆ ಹಿಟ್ಟು ಉಪಯೋಗಿಸಿಲ್ಲ ಸೀತು has perfected the art. ಬೇಕಾದಷ್ಟು experiments ಆದಮೇಲೆ ದೋಸೆ ರಹಸ್ಯ ತಿಳೀತು. ಆದರೆ ಇದು ಟ್ರೇಡ್ ಸೀಕ್ರೆಟ್. ತಿಂಗಳಿಗೆ ಒಂದು ಸಾರಿ ಮಸಾಲೆ ದೋಸೆ. ನಮ್ಮ ಮೊಮ್ಮಕ್ಕಳು ಹೇಳುವಹಾಗೆ quote ” ವರ್ಲ್ಡ್’ಸ್ best break fast ” ಅವರು ನಮ್ಮ ಮನೆಗೆ ಬಂದಾಗ ದೋಸೆ ಬಿಟ್ಟರೆ ಇನ್ನೇನು ಬೇಡ , ಅಂದಹಾಗೆ ನೀವು ದೋಸೆ ಮಾಡುವ ತವವನ್ನು ಚೆನ್ನಾಗಿ ತೊಳೆದರೆ ದೋಸೆ ಏಳುವುದಿಲ್ಲ !!! ಹುಷಾರ್
LikeLiked by 1 person
ನಿಮ್ಮ ಕಮೇಂಟಿಗೆ ಧನ್ಯವಾದಗಳು ರಾಮಮೂರ್ತಿಯವರೆ! ಸೀತಾನನ್ನು ಪಡೆದ ರಾಮ ಎಷ್ಟು ಧನ್ಯ! ನಿಮ್ಮ ಕಡೆಯ ಟಿಪ್ ದಂತೆ ತೊಳೆಯದ ತವದಲ್ಲಿ ಮುಂದಿನ ಸಲ ದೋಸೆ ಮಾದುವ ತವಕ! ಆಮೇಲೆ ತಿಳಿಸುವೆ. ಆ ಕೋಕೋಕೋಲಾ ರೆಸಿಪಿ ರಹಸ್ಯದಂತೆ ನೀವಿಬ್ಬರೇ ಅದನ್ನು ಬಚ್ಚಿಟ್ಟುಕೊಂಡು ಕಾಯುವದು ಸಮಾಜ ಸೇವೆ ಆಗುವದಿಲ್ಲ! (ತಮಾಷೆ ಅಷ್ಟೇ!). ಅದು ಹೊರಬರದಿದ್ದರೆ, ಸಿಗದಿದ್ದರೆ ಲಸಾನಿಯಾಗೆ ಕೈ ಹಾಕುವೆ! ವತ್ಸಲಾ ಅವರು ಇದೊಂದು ಬಾರಿ ಡೆಮೋ ಕೊಡಲು ಸಿದ್ಧರಿದ್ದರೆ!
LikeLike
ಶ್ರೀವತ್ಸ ಅವರೇ, ದೋಸೆ ರಹಸ್ಯ trade secret ಅಂತ ಹೇಳಿದ್ದು ತಮಾಷೆಗೆ ಅಷ್ಟೇ . ಒಂದು ಮಾತು ನಿಜ, ನೀವು ಯಾವದೇ recipe ತೊಗೊಂಡು ಕಾಪಿ ಮಾಡಿದರೂ ರಿಸಲ್ಟ್ ಗ್ಯಾರಂಟಿ ಇಲ್ಲ, ಅಲ್ಲಿ ಇಲ್ಲಿ tweek ಮಾಡಬೇಕು ಅಂತ ನನ್ನ ಆಕೆ ಪ್ರಕಾರ. You are welcome to consult Seetu.good luck
LikeLike