ಅಡುಗೆ – ಅಡುಗೆಮನೆ ಸರಣಿ: ಸವಿತಾ ಸುರೇಶ್ ಮತ್ತು ಶಾಂತಲಾ ರಾವ್

ಮಕರ ಸಂಕ್ರಮಣದ ಶುಭಾಶಯಗಳು, ಎಲ್ಲರಿಗೂ. ಸಂಕ್ರಾಂತಿ ಅಂದೊಡನೆ ನೆನಪಾಗುವುದು – ಕುಸುರೆಳ್ಳು ಸೇರಿಸಿದ ಎಳ್ಳು-ಬೆಲ್ಲ, ಎಳ್ಳು ಅಥವಾ ಶೇಂಗಾ ಹೋಳಿಗೆ, ಸೆಜ್ಜೆ ಭಕ್ಕರಿ (ರೊಟ್ಟಿ), ಬೆಣ್ಣೆ, ಶೇಂಗಾಹಿಂಡಿ, ಹುಗ್ಗಿ-ಗೊಜ್ಜು, ಸಿಹಿ ಪೊಂಗಲ್, ಸಕ್ಕರೆ ಅಚ್ಚುಗಳು, ಕಬ್ಬು; ಉತ್ತರ ಕರ್ನಾಟಕದವರಾದರೆ ಶೀತನಿ (ಜೋಳ / ಗೋಧಿಯ ಹಸಿ ಕಾಳುಗಳು) …. ಎಷ್ಟು ಅಂತ ಪಟ್ಟಿ ಮಾಡೋದು! ನನಗೆ ನೆನಪಿರುವಂತೆ, ಅಜ್ಜಿಗೆ ಭೋಗಿ ಬಾಗಿಣದ ಮೊರ ತಯಾರಿ ಮಾಡುವುದಕ್ಕೆ ಸಹಾಯ ಮಾಡುವ ನೆಪದಲ್ಲಿ, ಒಂದಷ್ಟು ಕಬ್ಬು, ಎಳ್ಳು-ಬೆಲ್ಲ, ಬಾರೆಹಣ್ಣು ತಿಂದು ಖಾಲಿ ಮಾಡಿದ್ದು! ಈಗ, ಅವೆಲ್ಲ ಯಾಕೆ ನೆನಪಾಯ್ತು ಅಂದರೆ, ನಮ್ಮ ಅನಿವಾಸಿ ಗುಂಪಿನ ಮಹಿಳಾಸದಸ್ಯರು ಉತ್ಸಾಹದಿಂದ ಹಂಚಿಕೊಂಡ ಅಡಿಗೆಯ ಫೋಟೊಗಳನ್ನ ನೋಡಿ. ಅದರಿಂದ ಹೊಟ್ಟೆ ಗುರ್ ಅಂದರೂ, ಕಣ್ಣು ತಂಪಾಯಿತೆನ್ನುವುದು ನಿಜ! ಸರಿ, ಎಲ್ಲರೂ ಇನ್ನೊಮ್ಮೆ ನೋಡಿ, ಸಂತೋಷ ಪಡೋಣ (ಕೊನೆಯಲ್ಲಿದೆ); ರಾಧಿಕಾ ಜೋಶಿಯವರ ಪುಟ್ಟ ಕವನದೊಂದಿಗೆ.

ಈಗ, ಹಬ್ಬದ ಪ್ರಯುಕ್ತ ಸಿಹಿ ಪದಾರ್ಥಗಳ ತಮ್ಮ ಅನುಭವಗಳನ್ನು ನಮಗೆ ಹಂಚುತ್ತಿದ್ದಾರೆ, ಸವಿತಾ ಸುರೇಶ್ ಮತ್ತು ಶಾಂತಲಾ ರಾವ್. ತಮ್ಮ ಅಡುಗೆಮನೆಯ ಪ್ರಯತ್ನವನ್ನು ಜಾಗತಿಕ ಮಾಧ್ಯಮಕ್ಕೆ ಒಯ್ದದ್ದನ್ನ ಸವಿತಾ ಅವರು ಹೇಳಿದರೆ, ಬಿಹಾರಿನ ಮೂಲೆಯಿಂದ ಧಾರವಾಡಕ್ಕೆ ತಂದು ಬೆಳೆಸಿದ ಫೇಡೆಯ ಬಗ್ಗೆ ಶಾಂತಲಾ ಅವರು ಬರೆದಿದ್ದಾರೆ. ಎರಡೂ ಅನೇಕರ ಪ್ರೀತಿಯ ತಿಂಡಿಗಳ ಬಗ್ಗೆಯೇ ಆಗಿವೆ. ಓದಿ, ಸವಿದು, ನಿಮ್ಮ ನಿಮ್ಮ ಅನಿಸಿಕೆಗಳನ್ನು ಬರೆದು ನಮಗೆ ತಿಳಿಸಿ. ನೀವೂ ಬರೆದು ಕಳಿಸಿ, ಅನಿವಾಸಿಯ ಬ್ಲಾಗಿಗೆ. – ಎಲ್ಲೆನ್ ಗುಡೂರ್ (ಸಂ.)

ಮೈಸೂರ್ ಪಾಕ್ ಪ್ರಯೋಗದ ಪಯಣ – ಸವಿತಾ ಸುರೇಶ್

ನನಗೆ ಸುಮಾರು ೭ ವರ್ಷ.  ಬಿಜಾಪುರಿಂದ ಬೆಂಗಳೂರಿಗೆ ಅಪ್ಪನ ವರ್ಗಾವಣೆ ಆದ್ಮೇಲೆ ಪ್ರತಿ ತಿಂಗಳು ೧ನೇ ತಾರೀಖು ಆಫೀಸ್ ಕೆಲಸದಿಂದ ಮನೆಗೆ ಬರುವಾಗ “ವೆಂಕಟೇಶ್ವರ ಭವನ್” ನಿಂದ ವೆಜಿಟೇಬಲ್ ಪಫ್ಸ್ ಹಾಗೂ ಸುಪ್ರಸಿದ್ಧ ಘಮ ಘಮ ಹೊಂಬಣ್ಣದ ಮೈಸೂರ್ ಪಾಕ್ ಅಪ್ಪ ಓಡಿಸುತ್ತಿದ್ದ  Yezdi ಯ ಸ್ಟೋರ್ ಬಾಕ್ಸ್ ನಲ್ಲಿ ತಪ್ಪದೇ ಹಾಜರು!  ೧ಕೆ.ಜಿ ಮೈಸೂರ್ ಪಾಕ್ ಬಾಕ್ಸ್ ತೆಗೆದ ಕೆಲವೇ ಕ್ಷಣಗಳಲ್ಲಿ ಸ್ವಾಹಾ!  ಏಕೆಂದರೆ ನಮ್ಮದು ೧೨ ಮಂದಿ ಇದ್ದ ಅವಿಭಕ್ತ ಕುಟುಂಬ. ಬಾಯಲ್ಲಿ ಬೆಣ್ಣೆಯಂತೆ ಕರ್ಗೋಗ್ತಿತ್ತು.

ಹೀಗೆ ನಾನು ೧೪ ವರ್ಷ ವಯಸ್ಸಿಗೆ ಬಂದಾಗ ಈ ಆಹ್ಲಾದಕರ ಮೈಸೂರ್ ಪಾಕ್ ಮಾಡುವುದನ್ನು ಮನೆಯಲ್ಲಿ ಕಲಿಯಬೇಕು ಎಂಬ ಇಚ್ಛೆ ಅಮ್ಮನಿಗೆ ಹೇಳಿದೆ.  ಆದ್ರೆ ಅಮ್ಮ ಕೂಡ ಎಂದೂ ಪ್ರಯತ್ನಿಸಿರಲಿಲ್ಲ.  ಅಡುಗೆ ಮನೆಗೂ ನನಗೆ ಪ್ರವೇಶ ನಿಷೇಧವಾಗಿತ್ತು.  ಏಕೆಂದರೆ ಆ rangeಗೆ ಅಮ್ಮ ಇಲ್ಲದೆ ಇರೋ ಸಮಯದಲ್ಲಿ ದಾಳಿ ಮಾಡ್ತಿದ್ದೆ.  ಆದರೆ ನನ್ನ ಈ ಬೇಡಿಕೆ ಮುಂದೆ ಇಟ್ಟಾಗ ಅಮ್ಮ ಸಾಥ್ ಕೊಟ್ರು.  ಹಾಗಾಗಿ ಬೇಸಿಗೆ ರಜೆಯಲ್ಲಿ ಅಮ್ಮ- ಮಗಳ ಮೈಸೂರ್ ಪಾಕ್ project ಶುರುವಾಯ್ತು.  ಕಡ್ಲೆಹಿಟ್ಟು, ಸಕ್ಕರೆ ಹಾಗೂ ತುಪ್ಪ – ಈ ಸುಲಭ ಸಾಮಗ್ರಿಗಳನ್ನೊಳಗೊಂಡ ಈ ಸಿಹಿತಿಂಡಿ ಮಾಡುವುದು ಬಹಳ ಕಠಿಣ.  ಅಲೆಕ್ಸಾಂಡರ್ ದಂಡಯಾತ್ರೆ ತರಹ ಬಹಳ ವ್ಯಾಯಾಮ ಮಾಡಿಸ್ತು….  ಏಕೆಂದರೆ ಮೈಸೂರ್ ಪಾಕ್ ಹೋಗಿ ಒಮ್ಮೆ ಕಡ್ಲೆ ಹಿಟ್ಟು ಹಲ್ವ, ಮತ್ತೊಮ್ಮೆ ಕಡ್ಲೆ ಹಿಟ್ಟಿನ ಇಟ್ಟಿಗೆ ಆಗ್ತಿತ್ತು.  ೧೨-೧೩ ಸತತ ಪ್ರಯತ್ನಗಳ ನಂತರ ಹಂಗೂ ಗೂಡ್ ಗೂಡ್ ಮೈಸೂರ್ ಪಾಕ್ ರೇಂಜ್ ಗೆ ಬಂತು ಹದ.  ಆದರೆ ವೆಂಕಟೇಶ್ವರ ಭವನದ ಮೈಸೂರ್ ಪಾಕ್ ಹದ ಬರ್ಲೇ ಇಲ್ಲ.  ಒಬ್ಬಳೇ ಪ್ರಯತ್ನಿಸಲು ಅಮ್ಮ ಬಿಡ್ತಾ ಇರ್ಲಿಲ್ಲ.  ಆಗ ದೂರದರ್ಶನ ಬಿಟ್ರೆ ಯಾವ ವಾಹಿನಿಯೂ ಇರ್ಲಿಲ್ಲ.  ಅಡುಗೆ ಕಾರ್ಯಕ್ರಮ ನೋಡಿದ್ದು ಜ್ಞಾಪಕ ಇಲ್ಲ.  ಆದ್ರೆ ಆ ಹದದಲ್ಲಿ ಮೈಸೂರ್ ಪಾಕ್ ಮಾಡುವುದು ಹೇಗೆ ಎಂಬೋದೆ ಸವಾಲಾಗಿತ್ತು.  ಮಾಡಲು ಬರುತ್ತಿದ್ದವರು ಯಾರೂ ನಮಗೆ ಗೊತ್ತಿರುವ ಪೈಕಿಯಲ್ಲಿ ಇರ್ಲಿಲ್ಲ.  ಪರಿಹಾರ ನಾವೇ ಕಂಡ್ಕೋಬೇಕಿತ್ತು.  ನಮ್ಮ ಈ ಪ್ರಯೋಗ ಅಪ್ಪ ಮನೆಯಲ್ಲಿ ಇಲ್ಲದೆ ಇರೋವಾಗ ಮಾಡ್ಬೇಕಿತ್ತು.  ಏಕೆಂದರೆ ಅಪ್ಪ ಸಕ್ಕತ್ Health conscious.  ಅವರೇನಾದರೂ ಮೈಸೂರ್ ಪಾಕ್ ಗೆ ಉಪಯೋಗಿಸುವ ತುಪ್ಪದ ಪ್ರಮಾಣ ನೋಡಿದ್ರೆ ಅಷ್ಟೇ ಕಥೆ!!  ಅಷ್ಟೋತ್ತರ, ಪೂಜೆ ಮಂಗಳಾರತಿ wholesale ಆಗಿ ಆಗೋ ಭಯ!  ಏಕೆಂದರೆ ಅಮ್ಮಮ್ಮ ಊರಿಂದ ಬೆಣ್ಣೆ ಕಳಿಸುತ್ತಿದ್ದರು.  ಅಂಗಡಿ ತುಪ್ಪ ಯಾರಿಗೂ ಸೇರ್ತಿರಲಿಲ್ಲ.  ನಮ್ಮ ಈ ಪ್ರಯೋಗದಲ್ಲಿ ಬಳಸ್ತಿದ್ದ ತುಪ್ಪ ವಿನಾಕಾರಣ ವ್ಯರ್ಥವಾಗ್ತಿತ್ತು ಎಂಬುದೇ ಚಿಂತೆ.  ಆದ್ರೂ ನಮ್ಮ ಪ್ರಯತ್ನ ಬಿಡಬಾರ್ದು ಎಂದು, ಮಾಡುವ ವಿಧಾನದಲ್ಲಿ ಚಿಕ್ಕ ಚಿಕ್ಕ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುವ ಬಾಂಡ್ಲಿ, ಗಿರಣಿಯಲ್ಲಿ ಬೀಸಿಸಿಕೊಂಡು ಬಂದ ಕಡ್ಲೆ ಹಿಟ್ಟು, ಗ್ಯಾಸ್ ಉರಿಯ ಪ್ರಮಾಣ, ಪ್ರಮುಖವಾಗಿ ಸಕ್ಕರೆಪಾಕ ( ಈ ವಿಧಾನ ಸರಿ ಬಂದರೆ ಮೈಸೂರ್ ಪಾಕ್ ಬಂದ ಹಾಗೆ) ಎಲ್ಲ ನೋಡಿಕೊಂಡು ಒಂದು ಶುಕ್ರವಾರ ಶುರು ಮಾಡಿದ್ವಿ.  ಆ ದಿನ ನಮ್ಮ ಸಂತೋಷಕ್ಕೆ ಪಾರ್ವೇ ಇಲ್ಲ.  ಕೊನೆಗೂ ನಮ್ಮ ಕನಸು ನನಸಾಯ್ತು!  ಆದರೆ ಈ ಬಾರಿ ಸಣ್ಣ ಪ್ರಮಾಣದಲ್ಲಿ ಸಾಮಗ್ರಿಗಳನ್ನು ಅಳತೆ ಮಾಡಿದ್ರು ಅಮ್ಮ.  ಆ ದಿನ ಅಮ್ಮಮ್ಮ ಕೂಡ ಊರಿಂದ ಬಂದಿದ್ದರು.  “ವೆಂಕಟೇಶ್ವರ ಭವನ್” ಮೈಸೂರ್ ಪಾಕ್ ಕೊನೆಗೂ ನಮ್ಮ ಮನೆಯಲ್ಲಿ ತಯಾರಾಯ್ತು.  ಸಂಜೆ ಪೂಜೆಗೆ ನೈವೇದ್ಯಕ್ಕಿಟ್ಟು ಪ್ರಸಾದದ ರೂಪದಲ್ಲಿ ಸಿಕ್ಕಿತು.  ಅಪ್ಪನಿಗೆ ಆ ದಿನ ನಮ್ಮ ಮೈಸೂರ್ ಪಾಕ್ ಪ್ರಯೋಗದ ಗುಟ್ಟು ರಟ್ಟಾಯ್ತು!  ಈ ಎಲ್ಲಾ ಪ್ರಯತ್ನದಲ್ಲಿ ಒಂದಂತೂ ಖಚಿತವಾಯ್ತು – ಮೈಸೂರ್ ಪಾಕ್ is not everybody’s cup of tea!

ಈ ಪ್ರಯೋಗ ಎಷ್ಟು ಉಪಯುಕ್ತವಾಯ್ತೆಂದರೆ, ಯು.ಕೆ.ಗೆ ಬಂದ ಮೇಲೆ ಎಲ್ಲಾ ಬರ್ತ್ ಡೇ ಪಾರ್ಟಿ, ಗೆಟ್ ಟುಗೆದರ್ ಗಳಿಗೆ, ಕ್ರಿಸ್ಮಸ್ ಪಾರ್ಟಿಗಳಿಗೆಲ್ಲ ಸ್ನೇಹಿತರ ಬೇಡಿಕೆ ಅದೇ ಆಯ್ತು!  ಎಷ್ಟು ಎಂದರೆ ೪ ವರ್ಷದ ಹಿಂದೆ ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ BBC ಯಲ್ಲೂ ಸಹ ಬರುವಷ್ಟು!  ಚಿತ್ರೀಕರಣ ನನ್ನ ಅಡುಗೆ ಅರಮನೆಯಲ್ಲೇ ನಡೆಯಿತು ಎಂಬುದೇ ನನಗೆ ಹೆಮ್ಮೆಯ ಸಂಗತಿ.  ಚಿತ್ರೀಕರಣಕ್ಕೆ ಬಂದತಹ ಛಾಯಾಗ್ರಾಹಕ ಚಿತ್ರೀಕರಣ ಮಾಡಿದ ಅಂಶ ಯಾವುದು ಗೊತ್ತೇ?  ಮಿಠಾಯಿ ಟ್ರೇನಲ್ಲಿ ಹದವಾಗಿ ಸಜ್ಜಾದ ಮೈಸೂರ್ ಪಾಕ್ ಚೂರಲ್ಲ!  ಬದಲಾಗಿ ಮೈಸೂರು ಪಾಕ್ ಬಾಂಡ್ಲಿಯಲ್ಲಿ ಮಾಡುವಾಗ ಬುರು ಬುರು ಎಂದು ನೊರೆ ನೊರೆಯಾಗಿ ಉಕ್ಕುತ್ತಿದ್ದ, ಇನ್ನೂ ಅರ್ಧ ಹಂತವೂ ಮುಗಿಯದ ಮೈಸೂರ್ ಪಾಕ್!  ಪಾಂಡುರಂಗ!  “ಯಾಕಪ್ಪಾ?” ಎಂದು ಕೇಳಿದ್ರೆ, ಅವನು “That’s a mind blowing process to see.  We need a news angle.” ಅಂದ ಪುಣ್ಯಾತ್ಮ!!  ಹೀಗೂ ಚಿತ್ರೀಕರಣ ಮಾಡ್ತಾರಾ ಅನ್ಕೊಂಡೆ ಮನ್ಸಲ್ಲಿ.

BBC ಯಲ್ಲಿ ಬಂದ ನಂತರ ಮಕ್ಕಳ ಶಾಲೆಯಲ್ಲಿಯೂ ಸಹ ಬೇಡಿಕೆ ಆಯ್ತು.  ಈ ವಿಷಯ ಕೇಳಿದ ಅಮ್ಮನಿಗೆ ಸಂಭ್ರಮ, ಸಂತೋಷ, ಉನ್ಮಾದ ಎಲ್ಲವೂ ಆಯ್ತು!  ಪ್ರಯೋಗದ ಪಯಣ ಸಾರ್ಥಕ ಅಂತ ಮನಸ್ಸಿಗೆ ಮಹದಾನಂದವೂ ಆಯ್ತು!

– Saವಿ✍

*************************************************************************

ಧಾರವಾಡ ಫೇಡೇ – ಶಾಂತಲಾ ರಾವ್

ಪೇಡೇ ಅಂದ್ಕೂಡ್ಲೇ ಏನ್ ಅಕ್ಕೈತ್ರಿ?  ಬಾಯಾಗ್ ನೀರ್ ಬರ್ತಾವಾ??  ಅದಂತೂ ಆಗುದ ಬಿಡ್ರಿ… ಅದ್ ಅಲ್ದ?  ಧಾರವಾಡದ್ ನೆನಪಂತೂ ಬರsಬೇಕ ಅಲ್ರಿ?  ಮದ್ಲ ಕಣ್ಣಿನ ಮುಂದ ಬರೂದು ಬಾಬುಸಿಂಗ್ ಠಾಕೂರ್ ಅವ್ರ್ ಅಂಗಡಿ.  ಅದರ ಮುಂದ ಪಾಳೇ ಹಚ್ಚಿ ನಿಂತಿರೂ ಮಂದಿ… ಮತ್ತ ಲೈನ್ ಬಜಾರಿನ ಸಾಲ್ ಸಾಲಾಗಿರೂ ಅಂಗಡಿ ಕಾಣಸ್ತಾವು …

ಸುಭಾಸ್ ರೋಡಿನ ವಿಜಯ್ ಸ್ವೀಟ್ಸ್ ನ್ಯಾಗ ಒಬ್ರು ಅಜ್ಜಾ ಕುಂದರ್ತಿದ್ರು.  ‘ಮಿಶ್ರ ಅಜ್ಜಾ’ – ಅಲ್ಲಿನ್ ಪೇಡೇನೂ ಭಾಳ್ ರುಚಿ  ರೀ.  ಕ್ಯಾರಕೊಪ್ಪದಾಗ [ಧಾರವಾಡದ ಹತ್ತ್ರ ಹಳ್ಳಿ] ಅವ್ರ್ ಫ್ಯಾಕ್ಟರಿ ನಮ್ ಹೊಲದ್ ಮುಂದ ಐತಿ.  ನಮ್ ಅಜ್ಜಾ ಮತ್ತ ಮಿಶ್ರಾ ಅಜ್ಜಾ ದೋಸ್ತರಾಗಿದ್ರು. ಹಿಂಗಾಗಿ ಅವ್ರ್ ಅಂಗಡಿ ಪೇಡೇ ಮತ್ತ ಬ್ಯಾರೆ ಸಿಹಿ ತಿಂಡಿ, ಫರಾಳ ಭಾಳ್ ತಿಂದೇವಿ.  ಅವ್ರ್ ಸಮ್ಮಂಧಿಕ್ರ್ ಅಂಗಡಿನೂ ಅದಾವು – ಮಿಶ್ರಾ ಸ್ವೀಟ್ಸ್,  ದಿವ್ಯಾ ಸ್ವೀಟ್ಸ್,  ಬಿಗ್ ಮಿಶ್ರಾ, ನ್ಯೂ ವಿಜಯ್ ಸ್ವೀಟ್ಸ್ ಅಂತ. ಹೆಚ್ಚಾಗಿ  ಲೈನ್  ಬಜಾರ್  ಇಲ್ಲಂದ್ರ   ಸುಭಾಸ್  ರೋಡ್  ನ್ಯಾಗ ಅದಾವು. 

ಮಿಶ್ರಾ ಸ್ವೀಟ್ಸ್ ನ ಶ್ರೀ ಯೋಗೇಂದ್ರ ಮಿಶ್ರಾ, ಸಾಲ್ಯಾಗ ನನ್ನ ಸೀನಿಯರ್.  ಅವ್ರ್ ಹೇಳ್ತಿದ್ರು ಅವ್ರ್ ಅಜ್ಜಾರು – ಅವಧ್ ಬಿಹಾರಿ ಮಿಶ್ರಾ ಅವ್ರು ಕಿಶೆದಾಗ ೧ ರೂಪಾಯಿ ಇಟ್ಕೊಂಡು ಉತ್ತರ ಪ್ರದೇಶದಿಂದ ಧಾರವಾಡಕ್ ಬಂದಾಗ ಅವ್ರ್ ಕಿಶೆದಾಗ ಉಳ್ದದ್ದು ೩೩ ಪೈಸೆ ಅಂತ.  ಅವ್ರು ತೀರಿಕೊಂಡಾಗ ಅವ್ರಿಗೆ ೧೦೮ ವರ್ಷ ಅಂತ.  ನೋಡ್ರಿ ಅವ್ರು  ಹಚ್ಚಿದ್ ಗಿಡಾ, ಘಟ್ಟಿ ಬೇರೂರಿ ದೊಡ್ಡ ಗಿಡಾ ಆಗಿ ಬೆಳದ್ ಎಲ್ಲಾ ಕಡೆ ರುಚಿ ಹರಡೇತಿ… ಕಾಲಾ ಕಳಧಾಂಗ ಠಾಕೂರ್ ಪೇಢಾದವ್ರು ಅನಿಯಮಿತ ಪೇಡೇ ತಯಾರಿಸಿದ್ರ,  ಮಿಶ್ರಾ ಅವ್ರು ಧಾರ್ವಾಡಕ್ಕ ಅಷ್ಟ ಸೀಮಿತ ಆಗ್ದ ಕರ್ನಾಟಕದ್ ಉದ್ದಗಲಕ್ಕ ಪೇಡೇ ಸಿಹಿ ಹಂಚ್ಯಾರ.

ಇವೆಲ್ಲಾ ವಿಷಯಾ ನಿಮಗ ಅಂತರ್ಜಾಲದಾಗ ಸಿಗ್ಬಹುದು. ಪೇಡೇ ಮಾಡುದ್ ಹೆಂಗ್ ಅಂತನೂ ಸಾಕಷ್ಟ್ ವಿಡಿಯೋ / ವಿಧಾನ ಸಿಗ್ತಾವು.

ಇಲ್ಲೇ UK ನ್ಯಾಗ ಮಾಡಿದ್ದೆ ನಾನೂ.. ರುಚೀ ಆಗಿದ್ದ್ವು!  ನಂಗs ನಂಬ್ಕಿ ಬರ್ರ್ಲಿಲ್ಲ, ನಾನೂ ಮಾಡಬಹುದು ಇಷ್ಟ್ ರುಚೀ ಪೇಡೇ ಅಂತ … ಲೊಕ್ಡೌನಿನ್ಯಾಗ ಇನ್ನೇನ್ ರೀ ಮತ್ತ ಮಾಡೂದು? ಒಂದ್ ಫೋಟೋ ಐತ್ ನೋಡ್ರಿ ಇಲ್ಲೇ. ನಾ ಮಾಡಿದ್ ಪೇಡೇ…

ಆದ್ರ ಪೇಡೇ ಅಂದ್ರ ಮನಸ್ನ್ಯಾಗ ಏನ್ ವಿಚಾರಾ ಉಕ್ಕಿ ಬರ್ತಾವು ಅಂತ ಗೊತ್ತಾ ನಿಮಗ?  ಪೇಡೇ ಅಂದ್ರ ನಂಗ ಆಗೂ ನೆನಪು –

ಮಲೆನಾಡಿನ ಸೆರಗಾದ  ನನ್ನ ತವರಿನ ನೆನಪು. 

ಬ್ಯಾಸ್ಗಿಗೆ ಕಾದ್ ಉರದಿದ್ದ ಮಣ್ಣಿನ್ ಮ್ಯಾಲೆ ಬಿದ್ದ್ ಮದ್ಲನೇ ಮಳಿ ಹನಿಯ ಘಮ ಘಮದ ನೆನಪು.

ನಮ್ಮ್ ಅಪ್ಪಾಜಿ, ಮನ್ಯಾಗ್ ಕಾಲ್ ಇಟ್ ಕೂಡ್ಲೆ “ಮಗಳೇ” ಅಂತ ಕರ್ದಿದ್ – ಎದಿ ಮುಟ್ಟೂ ಧ್ವನಿಯ ನೆನಪು,

ನಮ್ಮ್ ಅವ್ವ ತೆಲಿ ಮ್ಯಾಲೆ ಕೈ ಸವರಿ ಹಾಡಿದ್ ಲಾಲಿ ಪದದ ನೆನಪು ..

ಪೇಡೇ ಬರೇ ಒಂದ್ ರುಚೀಯಾದ್ ತಿನ್ನೂ ದಿನಸ ಅಲ್ರಿ, ಧಾರ್ವಾಡದವರಿಗೆ.  ನಮಗ ಪೇಡೇ ಅಂದ್ರ ಖುಷಿ; ಪೇಡೇ ಅಂದ್ರ ಊರಿಂದ ದೂರ್ ಇರೂ ದುಃಖ್ಖ…

ಪೇಡೇ ಅಂದ್ರ ಅಜ್ಜಾ, ಅಮ್ಮನ್ ಆಶೀರ್ವಾದದ ನೆನಪಿನ ನೆರಳು .. ಕಾಕಾ, ಅತ್ತಿಗುಳ್ ಕರ್ರ್ಕೊಂಡ್ ಅಡ್ಡ್ಯಾಡ್ಸಿದ್ ಹಾದಿ -ಬೀದಿ ನೆನಪು ..

ಪೇಡೇ ಒಳಗಿನ್ ಹಾಲು – ನನ್ ಹಡೆದವ್ವನ ಊರಿನ ಅಕ್ಕರೆಯ ಕರೆ

ಪೇಡೇ ಒಳಗಿನ್ ಸಕ್ಕ್ರಿ – ನಮ್ಮಪ್ಪಾಜಿ ಮೀಶಿ ತಿರಿವಿ ನಗೂದ್ರಾಗ ಇರೂ ಸಿಹಿ, 

ಪೇಡೇ ಮಾಡು ಬೆಂಕಿ – ನನ್ ಗೆಳೆಯ, ಗೆಳತ್ಯಾರ್ ಸಂಬಂಧದ ಕಾವು

ಪೇಡೇ ಕೆಂಪ್ ಬಣ್ಣ – ನನ್ ಊರಿನ್ ಮಣ್ಣಿನ್ ಚಿತ್ರಣ

ಪೇಡೇ ಮ್ಯಾಲಿನ್ ಸಕ್ಕ್ರಿಪುಡಿ ನನ್ ಆ ಸಿಹಿಕಹಿ ದಿನಗಳ ನೆನಪುಗಳು – ಒಂದಿಷ್ಟ್ ಹತ್ತ್ಕೊಂಡ ಅದಾವು .. ಒಂದಿಷ್ಟ್ ಉದರಿ ಬಿದ್ದ್ ಹೋಗ್ಯಾವು …

❤🙏ನನ್ನ ಅಪ್ಪಾಜಿ ದಿ. ಸಂಗನಬಸವ ಮಟ್ಟಿ ಅವರಿಗೆ ಈ ಬರಹವನ್ನು ಅರ್ಪಿಸುವೆ 🙏❤

– Shantalawz

********************************************************************************

ಅನಿವಾಸಿಗಳ ಅಡಿಗೆಮನೆಯ ಪರಿಣತಿಯನ್ನು ತೋರುವ ಸಂಕ್ರಾಂತಿಯ ಹಬ್ಬದೂಟ. ಆನಿವಾಸಿ ಗುಂಪಿನಿಂದ ಆಯ್ದ ಚಿತ್ರಗಳ ಕೊಲಾಜ್.
ಸಂಕ್ರಾಂತಿಯ ಸಡಗರ... 

ಸಜ್ಜಿ ಭಕ್ರಿ ಗುರೆಳ್ಳು ಹಿಂಡಿ
ಶೇಂಗಾ ಎಳ್ಳು ಹೊಳ್ಗಿ
ಮಜ್ಜಗಿಯೊಳಗ ಅಲ್ಲದ ಒಗ್ಗರಣಿ
ಹುಗ್ಗಿಯ ತಿಂದು ಸುಗ್ಗಿಯ ಮಾಡಿ
ಖಬ್ಬು ಬಾಳೆಯ ನೆರಳಿನಾಗ
ಕೂತು ಭೋಗಿಯನುಂಡು
 
ಶೇಂಗಾ ಕುಸುರೆಳ್ಳು ಬೆಲ್ಲ
ಸಕ್ಕರೆ ಅಚ್ಚು ಕಬ್ಬಿನ ಜಲ್ಲೆ
ಕೈಯಲ್ಲಿ ಸಜ್ಜಾದ ತಟ್ಟೆ
ರೇಷ್ಮೆ ಲಂಗ ಉಟ್ಟು
ಮಕ್ಕಳ ಉತ್ಸಾಹದ ಮಿಶ್ರಣ 
ಭೋಗಿ ಮತ್ತು ಸಂಕ್ರಮಣ
 
- ರಾಧಿಕಾ ಜೋಶಿ

******************************************************************

8 thoughts on “ಅಡುಗೆ – ಅಡುಗೆಮನೆ ಸರಣಿ: ಸವಿತಾ ಸುರೇಶ್ ಮತ್ತು ಶಾಂತಲಾ ರಾವ್

  1. ಸವಿತಾ ಅವರೇ,
    ಮೈಸೂರ್ ಪಾಕ್ ಮಾಡುವ ಪ್ರೋಟೋಕಾಲ್ ಚರ್ಚೆ ನಮ್ಮ ಮನೆಗಳಲ್ಲಿ, ಮೈಸೂರಿನಲ್ಲಿ ಆಗಾಗ ಬಹಳ ಭರಾಟೆಯಲ್ಲಿ ನಡೆಯುತ್ತಿದ್ವು. ನಮ್ಮ ಮನೆಯ ಹೆಂಗಸರಿಗೆ ಮೈಸೂರ್ ಪಾಕ್ ಹದ ತಪ್ಪಿತೆಂದರೆ, ಅವರ ತಲೆಯೇ ಕೆಡುತ್ತಿತ್ತು. ಅಂತೂ ಇಂತು ನೀವು ಮೈಸೂರ್ ಪಾಕ್ ಹದ ಕಲಿತು ಕೊಂಡಿದ್ದೀರಿ ಎನ್ನುವ ವಿಷಯ ಓದಿ ಸಂತೋಷವಾಯ್ತು. ಬಿ.ಬಿ.ಸಿ ದೂರದರ್ಶನದವರಿಗೂ ಮೈಸೂರ್ ಪಾಕ್ ತಿನ್ನಿಸಿದ್ದಿರಿ ಅಂದರೆ ನಿಜಕ್ಕೂ ಬೆನ್ನು ತಟ್ಟುವ ವಿಷಯ. ಲೇಖನ ಚೆನ್ನಾಗಿದೆ.

    ಶಾಂತಲಾ ನಿಮ್ಮ ಧಾರವಾಡದ ಅಪ್ಪಟ ಕನ್ನಡ ಓದಿ, ನನ್ನ ಧಾರವಾಡದ ೫ ವರ್ಷಗಳು ನೆನಪಾದವು. ಲೈನ್ ಬಜಾರ್ ಫೇಡಾ ಬಹಳ ಸಾರಿ ತಿಂದಿದ್ದೇನೆ. ಮಿಶ್ರಾ ಫೇಡೆ ಕೂಡ ಬಹಳ ರುಚಿಯಾಗಿರುತ್ತದೆ.

    ರಾಧಿಕಾ ನಿಮ್ಮ ಕವನ ಓದಿ ನನ್ನ ಶಾಲೆಯ ಸಂಕ್ರಾಂತಿ ದಿನಗಳು ನೆನಪಾದವು.
    ಉಮಾ ವೆಂಕಟೇಶ್

    Like

  2. ಸಂಕ್ರಾಂತಿ ಊಟ-ಸೀತಿನಿಸುಗಳನ್ನು ಗಡದ್ದಾಗಿ ಹೊಡದು ಬರೀಲಿಕ್ಕೆ ಆಲಸ್ಯತನ ಬಂದಬಿಟ್ಟಿತ್ತು. ಸವಿತಾ ಅವರ ಮೈಸೂರ ಪಾಕು, ಶಾಂತಲಾ ಅವರ ಧಾರವಾಡ ಫೇಡೆ ಎರಡರ ಬರಹದ ಸೊಗಡೂ ಅವುಗಳ ರುಚಿಹಂಗೇ ನಾ ಮುಂದು ತಾ ಮುಂದು ಅನ್ನುತ್ತಿವೆ. ಮೈಸೂರು ಪಾಕದ ಹದ ಸಿದ್ಧಿಸುವುದು ಬಹಳ ಕಠಿಣ.. ನಾವೂ ಹಲವಾರು ಪ್ರಯೋಗ ಮಾಡಿ ವಿಫಲರಾಗಿ ಈಗ ‘ಏಯ್! ಸಿಕ್ಲಾಪಟ್ಟೆ ತುಪ್ಪ , ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂಬ ‘ನಿಲುಕಲಾರದ ದ್ರಾಕ್ಷಿ ಹುಳಿ’ ಎಂಬ ಸಿದ್ಧಾಂತಕ್ಕೆ ಬಂದಿದ್ದೇವೆ. ಈಗ ಚಿಂತೆಯಿಲ್ಲ..ತಿನ್ನಬೇಕನ್ನಿಸಿದಾಗ ಸವಿತಾ ಅವರ ಮನೆಗೆ ಹೋದರಾಯ್ತು.
    ಶಾಂತಲಾ ಅವರೇ, ನಿಮ್ಮ ಅಂದ್ರ ಧಾರವಾಡ ಫೇಡೆ ಧಾರವಾಡದ ನೆನಪುಗಳನೆಲ್ಲ ತಾಜಾ ಮಾಡಿತು. ಫೇಡೆ ಜೋಡಿಗೆ ಸವಣೂರ ಖಾರನೂ ನೆನಪಾಗಿ ‘ನೆನೆವುದೆನ್ನ ಮನಂ ಧಾರವಾಡ ದೇಶಮಮ್’ ಅಂತ ಹಲಬೂ ಹಂಗ ಆಗೇದ ನೋಡ್ರಿ. ಸಾಥ೯ಕ ಸಂಕ್ರಮಣ.
    ಗೌರಿಪ್ರಸನ್ನ

    Like

  3. ಸಂಕ್ರಾಂತಿಗೆ ರಸದೌತಣ ತಯಾರಿ ಮಡಿದ ಲೇಖಕರಿಗೆ, ಒಗ್ಗರಣೆ ಹಾಕಿ ಬಡಿಸಿದ ಸಂಪಾದಕರಿಗೆ ಧನ್ಯವಾದಗಳು.

    ದೇಸಾಯಿಯವರು ಹೇಳಿದಂತೆ, ಕಿಂಗ್ ಬ್ರೂಸ್ ನೆನಪಾಗುತ್ತಾನೆ ಸವಿತಾ ಅವರ ಮೈಸೂರ್ ಪಾಕ್ ಮಾಡಿದ ಛಲಬಿಡದ ಪ್ರಯತ್ನವನ್ನು ಓದುವಾಗ. ನಿಮ್ಮೂರಿಗೆ ಬರಲೇ ಬೇಕು ಅದನ್ನು ಸವಿಯಲು. ಹಲ್ವದಂತಹ ವೆಂಕಟೇಶ್ ಸ್ವೀಟ್ಸ್ ನ ಪಾಕಿಗಿಂತ ನನಗೆ ನಮ್ಮೂರಿನ ಸಂತೋಷ್ ಹೋಟೆಲ್ಲಿನ ಬಾಯಲ್ಲೇ ಕರಗುವ ಕಣ್ಣು ಕಣ್ಣು ಇರುವ ಪಾಕ್ ಹೆಚ್ಚು ಹಿತ. ಆದರೂ ಯಾವ ಪಾಕ್ ಕೊಟ್ಟರೂ ಆಸ್ವಾದಿಸಲು ಹಿಂಜರಿಯುವವನಲ್ಲ.

    ಧಾರಾವಾಡದಂತೆ, ನಮ್ಮಲ್ಲೆಲ್ಲ ಶುಭ ಸುದ್ದಿ ಹಂಚಿಕೆಯೊಡನೆ ಫೇಡಾ ಹಂಚುವುದು ವಾಡಿಕೆ. ಶಾಂತಲಾ ಅವರ ಮಣ್ಣಿನ ಭಾಷೆ ಧಾರವಾಡ ಫೇಡಾ ರುಚಿಗೆ ಸರಿಯಾದ ತಾಳ ಹಾಕಿದೆ. ಎಲ್ಲರ ಮನಸಿನಲ್ಲಿ ತವರಿನ ನೆನಪನ್ನು ಕೆದಕಿದೆ.

    Liked by 1 person

  4. ವಾವ್ ವಾವ್! ಈ ಸಲದ ಅಡಿಗೆ ಸರಣಿ ಬರಹ ಓದಿದ್ರೆ ಗುಡೂರ ಅವರು ನಮ್ಮ ಹಸಿವು, ಬಯಕೆ ಗಳ ತಾಳ್ಮೆ ಪರೀಕ್ಷೆ ಮಾಡೋ ಪಣ ತೊಟ್ಟಿರುವ ಹಾಗಿದೆ ಅನ್ಕೊಂಡೆ.ಗುಡೂರ್ ಅವರು ಹೇಳಿದ ಬಾರೀಹಣ್ಣು ಭಾಳ ಪ್ರೀತಿ ನಂಗೆ.ಜವಾರಿ ಹಣ್ಣು ಮತ್ತ, ಈ ದೊಡ್ಡ ದೊಡ್ಡ ಬಾರೀಹಣ್ಣಲ್ಲ.ಜೋಳ ಹಾಕಿ ಆ ಹಣ್ಣು ತಗೊಂಡು ತಿನ್ನೋ ಆ ದಿನಗಳ ನೆನಪು ಬಂತು ನಂಗೆ.
    ಸವಿತಾ ಅವರ ಮೈಸೂರ ಪಾಕ ಕಥೆ ಮಸ್ತ್ ಅದ.13 ಸಲ ಮಾಡಿದ್ರೂ ಕಲಿತು ಪ್ರಸಿದ್ಧಿ ಪಡೆದ ಬಗೆ ಮೆಚ್ಚಲೇ ಬೇಕು. ಸವಿತಾ ಅವರ ಮೈಸೂರು ಪಾಕ್ ರುಚಿ ನೋಡಲೇ ಬೇಕು. ನನಗ ಮಾತ್ರ ಜಮಾಸಲೇ ಇಲ್ಲ ಈ ಮೈಸೂರ ಪಾಕ.ಅದಕ್ಕ ನಾ ಮಂಗ್ಯಾನ ಪಾಕ’ಅಂತೀನಿ.ಆದರ ತಿನೂದೆನ ಬಿಟ್ಟಿಲ್ಲ ಮತ್ತ.ಒಂದ ಸಲ ಈ ಮೈಸೂರ ಪಾಕ ನಾ ಮಾಡುವಾಗ ಭಾಳೆ ಹದಗೆಟ್ಟು ಬಿಡ್ತು.ಆ ಮುದ್ದೆಗೆ ಮತ್ತೆ ಸ್ವಲ್ಪ ತುಪ್ಪ, ಸಕ್ಕರೆ, ಒಂದು ಬಟ್ಟಲು ಹಸಿಕೊಬ್ರಿ ತುರಿ, ಎರಡು ಬಟ್ಟಲು ಹಾಲು ಹಾಕಿ ಸ್ಟವ್ ಮೇಲಿಟ್ಟು ಗೋಟಾಯಿಸಿ ಬರ್ಫಿ ಥರದ ಸ್ವೀಟ್ ಮಾಡ್ದೆ , ಮಸ್ತ್ ಆತು ನೋಡ್ರೀ.ನಾ ಅದಕ ‘ ಮೋಹಕ ಪಾಕ’ ಅಂತ ನಾಮಕರಣ ಮಾಡಿದೆ.(ಮೋಹನ ಪಾಕ ಬೇರೆ ಮತ್ತ) ಹೆಂಗರೇ ಸಮಾಧಾನ ಮನಸ್ಸಿಗೆ!
    ಶಾಂತಲಾ ಅವರ ಧಾರವಾಡ ಫೇಡೆದ ಕಥಿ ನನ್ನ ಮತ್ತ ಧಾರವಾಡಕ್ಕs ಕರಕೊಂಡು ಹೋತು.ಠಾಕೂರಸಿಂಗನ ಫೇಡಾದ ರುಚಿ,ಮಜಾ ಬ್ಯಾರೆನ ಬಿಡ್ರಿ.ಮಿಶ್ರಾನ ಫೇಡೆನೂ ರುಚಿನೇ.ಅದೂ ಈ ಒಂದು ರೂಪಾಯಿ ಕಥಿ ಕೇಳಿದ ಮ್ಯಾಲೆ ಇನ್ನೂ ಹೆಚ್ಚಾಯಿತು ನೋಡ್ರಿ ಶಾಂತಲಾ ಅವರೇ. ನಿಮ್ಮ ಫೇಡೇನೂ ಬಾಯಾಗ ನೀರು ತರಿಸ್ತು.ಧಾರವಾಡ ಬಿಟ್ಟು ಬಂದಿದ್ರೂ ಮನ್ಯಾಗ ಏನೇ ಕಾರ್ಯಕ್ರಮ ಆದರೂ ಧಾರವಾಡ ಫೇಡೆ ಬರಲಿಕ್ಕೇ ಬೇಕು.
    ರಾಧಿಕಾ ಅವರ ಭೋಗಿ ಊಟದ ಕವನ, ಎಲ್ಲಾ ರದೂ ಹಬ್ಬದ ಅಡಿಗೆ ಘಮಲು ಇಲ್ಲಿ ತನಕಾನೂ ಬಂದು ಸಂಕ್ರಾಂತಿ ಸಂಭ್ರಮ ಇನ್ನೂ ಹೆಚ್ಚಾಯಿತು.ಎಲ್ಲರಿಗೂ ಅಭಿನಂದನೆಗಳು, ಧನ್ಯವಾದಗಳು.ಸಂಕ್ರಾಂತಿಯ ಹಾರ್ದಿಕ ಶುಭಾಷಯಗಳು ಅನಿವಾಸಿ ಬಳಗಕ್ಕೆ.
    ಸರೋಜಿನಿ ಪಡಸಲಗಿ

    Liked by 1 person

  5. ಗುಡೂರ್ ಅವರ ಸಂಕ್ರಾಂತಿ ಸ್ಪೇಷಲ್ ಮೆನು ತುಂಬಾ ಚೆನ್ನಾಗಿದೆ.

    ಸವಿತಾ ಅವರು ಛಲ ಬಿಡ ತ್ರಿವಿಕ್ರಮನಂತೆ ತಿರುಗಿ ಯತ್ನವ ಮಾಡುತರ ಸರಿಯಾದ ಪಾಕ ಮಾಡಿ ‘ಮೈಸೂರ್ ಪಾಕ’ನ್ನು ಬಿಸಿ ಬಿಸಿಯಾಗಿ ಬಿಬಿಸಿಗೂ ತಿನಿಸಿದ್ದು ಓದಿದೇ ಬಯೆಲ್ಲ ನೀರು. ಮೈಸೂರಿನ ಗುರು‌ ಸ್ವೀಟ್ಸ್ ಮೈಸೂರ ಪಾಕ ತಿಂದ ಮೇಲೇಯೇ ನನಗೆ ಮೈಸೂರ್ ಪಾಕ ಹೇಗಿರಬೇಕು ಎಂದು ಗೊತ್ತಾದದ್ದು. ಅಲ್ಲಿಯವರೆಗೆ ನಾನು ತಿಂದಿದ್ದೆಲ್ಲ ಗಟ್ಟಿ ಕಾರದಂಟಿನಂಥ ಮೈಸೂರ್ ಪಾಕ್ ಆಗಿತ್ತು. ಪ್ರತಿ ಸಲ ಮೈಸೂರಿಗೆ ಹೋದಾಗಲೂ ‘ಗುರು’ವಿನ ಹೋಗಿ ಡಯಾಬಿಟಿಸ್ ಬರುವಷ್ಟು ಅಲ್ಲೇ ನಿಂತು ಮೈಸೂರ್ ಪಾಕ್ ತಿಂದು ಬರುತ್ತೇನೆ. ಇಲ್ಲಿಗೆ ಬರುವಾಗ ‘ನಂದಿನಿ ಮೈಸೂರ್ ಪಾಕ’ ತಂದು ಭದ್ರವಾಗಿ ಪ್ರೀಜರಿನಲ್ಲಿ ಇಡುತ್ತೇನೆ. ಒಂದು ಸಲವದರೂ ಸವಿತಾ ಅವರ ಕೈಯಿಂದ ಬಿಸಿ ಬಿಸಿ ಮೈಸೂರ್ ಪಾಕ್ ತಿನ್ನುವ ಆಸೆ.

    ಶಾಂತಲಾ ಅವರು ಧಾರವಾಡ ಫೇಡೆಯ ಬಗ್ಗೆ ಬರೆದು ಏನೇನೆಲ್ಲಾ ನೆನಪುಗಳನ್ನ ತಿನಿಸಿದ್ದಾರೆ!

    ಮುಂಜ್ಯಾನೆ ನಾಕ ಗಂಟೆಗೆ ಎದ್ದು ಪಾಳಿ ಹಚ್ಚಿ ಬಾಬು‌ಸಿಂಗ ಫೇಡೆ ತರುವ ಮಜಾ ಸೀದಾ ಮಿಶ್ರಾ ಅಂಗಡಿಗೆ ಹೋಗಿ ಚಕ್ಕಂತ ಫೆಡೆ ತರುದ್ರಾಗ ಬರತಿರಲಿಲ್ಲ. ಹಿಂಗಾಗಿ ಬಾಬುಸಿಂಗ್ ಪೇಡೆ ಜಾಸ್ತಿ ರುಚಿ ಅನಸತಿದ್ದವೋ ಏನೋ! ಯಾಂಬಲ್ಲ?

    ಕೂಸು ಹುಟ್ಲಿ, ಎಸ್ಸೆಸ್ಸಿ ಪಾಸ್ ಆಗ್ಲಿ, ಪಿ ಯು ಆಗ್ಲಿ, ಮಾತುಕತಿ ಆಗ್ಲಿ, ನಿಶ್ಚೆ ಆಗಲಿ, ಯಾರರಾ ಊರಿಂದ ಬರ್ಲಿ, ಮನ್ಯಾಗ ಧಾರವಾಡ ಫೆಡೆ ಇರ್ಲೇಬೇಕು.

    ಧಾರವಾಡ ಫೆಡೆ ಅಂದ್ರ ಹುಬ್ಳಿ ಧಾರವಾಡದ ಮಂದಿಗೆ ಬರೇ ಒಂದು ಸಿಹಿ ಅಲ್ಲ, ಅದು ಸಿಹಿ ಸಿಹಿ ನೆನಪುಗಳ ಆಗರ.

    -ಕೇಶವ

    Liked by 2 people

  6. ಈ ಸಲದ ಅನಿವಾಸಿ ಸಂಚಿಕೆ ಸಂಕ್ರಾಂತಿ ಸಮದಲ್ಲಿ ಪ್ರಕಟವಾಗಿ, ಅಡುಗೆ ಸರಣಿಯಲ್ಲಿ ಸೇರಿ ಖಾದ್ಯಗಳ ಬಗ್ಗೆ ಬರೆದ ಎರಡು ಆಪ್ತ ಬರಹಗಳಿಂದ ಈ ವರ್ಷದ ಸಂಕ್ರಾಂತಿಯನ್ನು ಸ್ಪೇಷಲ್ ಮಾಡಿದೆ! ತಮ್ಮ ಸುಂದರವಾದ ಲೇಖನದಲ್ಲಿ ಸವಿತಾ ಮತ್ತು ಅಮ್ಮ ತಮ್ಮ ಸತತ ಪ್ರಯತ್ನದ ಫಲವಾಗಿ ಕೊನೆಗೆ ಮೈಸೂರ್ ಪಾಕ್ ಮಾಡುವ ಕಲೆಯನ್ನು ೧೩ನೆಯ ಸಲ ಸಾಧಿಸಿದ ಕಥೆಯ ಮುಂದೆ ಜೇಡರ ಹುಳದ ಪ್ರಸಿದ್ಧಿಯ ಸ್ಕಾಟ್ ರಾಬರ್ಟ್ ಬ್ರೂಸನ ಏಳನೆಯ ಅಟ್ಟೆಮ್ಟ್ ಏನೂ ಅಲ್ಲ. ಅದನ್ನು”ಬುರು ಬುರು ನೊರೆಯ’ BBC ಕ್ಯಾಮರಾಮನ್ ಗೆ ಹೇಳಿದಿರೆಂದು ನಂಬುವೆ! ಇನ್ನು ಮುಂದೆ ಮೈಸೂರ್ ಪಾಕ್ ತಿನ್ನುವಾಗೆಲ್ಲ ಸವಿತಾ ಅವರೇ ನೆನಪಾಗುತ್ತಾರೆ ಅಂದುಕೊಳ್ಳುತ್ತೇನೆ!
    ಶಾಂತಲಾ ಅವರೂ ’ಕ್ಯಾರಕೊಪ್ಪದ ಹುಡುಗಿ’ ಅಂತ ಇಂದು ಗೊತ್ತಾಯಿತು. ಮುಂಬಯಿಗೆ ಉಚ್ಚ ಅಭ್ಯಾಸಕ್ಕೆ ಹೋಗುತ್ತಿದ್ದಾಗ ತಿರುಗಿ ಮನೆಗೆ ಬರುವಾಗ ಮುಂಬಯಿ ಎಕ್ಸ್ಪ್ರೆಸ್ ಟ್ರೇನು ಕ್ಯಾರಕೊಪ್ಪ ದಾಟುತ್ತಿದ್ದಂತೆ ಎದೆ ’ಧವ ಢವ’ ಬಡಕೋ ಬೇಕು, ಇನ್ನೇನು ಮುಂದಿನ ಸ್ಟೇಶನ್ನಿಗೆ ಇಳಿಯಲು ಸಾಮಾನು ಬಾಗಿಲಿಗೆ ಒಯ್ಯಿತ್ತಿರುವಂತೆ ಮನದ ಬಾಗಿಲು ತೆರೆದು ಅಕ್ಕರೆಯ ಮನೆಯವರ ನೆನಪು ಕಣ್ಣು ತೇವಮಾಡುವ ಸ್ಟೇಶನ್ ಅದು. ಈಗ ನಮ್ಮ ಮನೆಯಿಲ್ಲ, ಸ್ಟೇಶನ್ ಹೊರಗೆ ಟಾಂಗಾ (ಕುದುರೆ ಗಾಡಿ)ಇಲ್ಲ; ಈಗ ಉಳಿದದ್ದು ಫೇಡೆ ಮಾತ್ರ. ಶಾಂತಲಾ ಅವರ ’ಫೇಡಾಯಣ’ ನನ್ನನ್ನೂ ನನ್ನ ಹುಟ್ಟೂರಿಗೆ ಒಯ್ಯಿತು.”ನಮ್ ಭಾಷಾದಾಗ’’ ಬರೆದ ’ಎದ್ಯಾಗ ನಟ್ಟ’ ಲೇಖನದಿಂದಲೇ ಮೊದಲ ಬಾರಿ ’ಒಂದು ರೂಪಾಯಿ ಮಿಶ್ರಾ ಅಜ್ಜನ’ ಕಥೆ ಗೊತ್ತಾಯಿತು. ಅದನ್ನು ಓದುತ್ತಿದ್ದಂತೆ ನನ್ನಲ್ಲಿ ’ಮಿಶ್ರ’ಭಾವನೆ. ಯಾಕಂದರೆ ಫೇಡೆ ಅಂದರೆ ಠಾಕುರ್ ಫೇಡೇನೇ ಅನ್ನುತ್ತಾ ಬೆಳೆದವ ನಾನು. ನಾನು ಮಿಶ್ರ ಅವರು ಧಾರವಾಡದಲ್ಲಿ ಕಾಲಿಡುವ ದಶಕಗಳ ಮೊದಲೇ ಲೈನ್ ಬಜಾರ್ ಠಾಕುರ್ ಅಂಗಡಿಯ ಮುಂದೆ ’ಪಾಳಿ ಹಚ್ಚಿ’ ಲೈನ್ ಹೊಡಕೋತ ವರ್ಷಕ್ಕ ಹತ್ತು-ಹನ್ನೆರಡು ಸಲ ತಾಸುಗಟ್ಟಲೆ ನಿಂತು ಫೇಢೆ ತಂದು ಊರಿಂದ ಬಂದವರಿಗೆ, ನಾವು ಪರೀಕ್ಷೆ ಪಾಸಾದಾಗ, ಮದುವಿ, ಮಕ್ಕಳ ನಾಮಕರಣಕ್ಕ ಮಂದಿಗೆ ಹಂಚಿ ಜೀವನದ ಎಷ್ಟೋ ಪರ್ಸೆಂಟ್ ಟೈಮ್ ಅಲ್ಲೇ ಕಳೆದಿದ್ದೇನೆ. ನಿಮ್ಮ ಲೇಖನದ ಎರಡನೆಯ ಭಾಗ ಬಹಳ ಟಚಿಂಗ್! ಪಕ್ಕಾ ’ಧಾರ್ವಾಡಿ’ಯಾದ ನಾನು ಬಲ್ಲೆ: ಫೇಢೆ ಅಂದರೆ ಬರಿ ಖಾದ್ಯವಲ್ಲ, ಅದು ಒಂದು ರುಚಿ,ಒಂದು ಸಂಸ್ಕಾರ, ಒಂದು ಕಲೆ (ನೀವೂ ಸಾಧಿಸಿದ್ದಕ್ಕ ಅಭಿನಂದನೆಗಳು), ಒಂದು ನೆನಪುಗಳ ತೋರಣ, ಒಂದು ’ಟೇಸ್ಟಿನ ತೇರು’!
    ಸಂಪಾದಕರು ತಮ್ಮ ಪಕ್ವಾನ್ನದ ಮೊಂಟಾಜಿನಿಂದ ಅನಿವಾಸಿಗಳ ಪಾಕಪ್ರವೀಣರಿಗೊಂದು ’ಚಿತ್ರಾರ್ಪಣೆ’ ಮಾಡಿ ಕೃತಾರ್ಥರಾಗಿದ್ದಾರೆ. ರಾಧಿಕಾ, ರಾಜಶ್ರಿ, ಅಮಿತಾ ಅವರ ತಟ್ಟೆಗಳು ನಾನು ಸಂಕ್ರಾಂತಿ ವಿಡಿಯೋ ಮಾಡುವಾಗ ಬಂದಿರಲಿಲ್ಲ, ಬಂದಿದ್ದರೇ ಅದಕ್ಕೆ ಭೂಷಣವಾಗುತ್ತಿದ್ದವು. ಇಲ್ಲಿ ನೋಡಿ, ಕಲ್ಪನೆಯ ಮೂಗಿನಿಂದಲೆ ಆಘ್ರಾಣಿಸಿ ಸವಿದೆ. ರಾಧಿಕಾ ಜೋಶಿ ಅವರ ಕವನವೂ ಹಬ್ಬದ ಸಂಭ್ರಮದ ಹಿಗ್ಗನ್ನು ಹೆಚ್ಚಿಸಿದೆ. Memorable 2021 Sankranti!

    Liked by 1 person

  7. ರುಚಿ-ರುಚಿ, ಸವಿ ರುಚಿ, ನಿಮ್ಮಭಿರುಚಿ!

    ಪದಪದಗಳ ಪದರಗಳಲಿ ಅರಳಿದೆ
    ಮೈಸೂರಿನ ಪಾಕ!

    ಧಾರವಾಡದ ಸೊಗಡಿನ ಪದಧಾರೆಯಲಿ
    ಕರಗುವ ಪೇಡ, ಪರಮಾಪ್ತರಿಗೆ ಪರಮಾತ್ಮನ ನಾಕ!

    ಮುರಳಿ ಹತ್ವಾರ್

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.