ಅಡುಗೆ – ಅಡುಗೆಮನೆ ಸರಣಿ: ಉಮಾ ವೆಂಕಟೇಶ್ ಮತ್ತು ಪ್ರೇಮಾ ಸಾಗರ್

ಅಡುಗೆ – ಅಡುಗೆಮನೆ ಸರಣಿಯ ಎರಡನೆಯ ಆವೃತ್ತಿಗೆ ಸ್ವಾಗತ. ಆಧುನಿಕ ಎಲೆಕ್ಟ್ರಿಕ್ ಹಾಟ್ ಪ್ಲೇಟಿನ ಅವಾಂತರ ಹೋದವಾರ ಓದಿ ‘ಹೊಸದರ ಜೊತೆಗೆ ಒದ್ದಾಟವೇ ಗತಿ' ಅಂದ್ಕೊಬಹುದು ನೀವು; ಹಾಗಂತ ಮುಂಚಿನ ಅಡುಗೆಮನೆಯ ಪರಿಕರಗಳೇನೂ ಕಡಿಮೆಯಿರಲಿಲ್ಲ ಅನ್ನೋದು ಉಮಾ ವೆಂಕಟೇಶ್ ಅವರ ಅನುಭವ. ಬರಿಯ ಚಹಾ ಮಾತ್ರವಲ್ಲ, ನಮ್ಮ ಪ್ರೀತಿಯ ಕಾಫಿಯೂ ಒಮ್ಮೊಮ್ಮೆ ಇಕ್ಕಟ್ಟಿಗೆ ಸಿಕ್ಕಿಸಬಹುದೆಂದು ಪ್ರೇಮಾ ಸಾಗರ್ ಹೇಳುತ್ತಾರೆ. ನಡೆಯಿರಿ, ನೋಡೋಣ. – ಎಲ್ಲೆನ್ ಗುಡೂರ್ (ಸಂ.)

ರುಬ್ಬುಗುಂಡಿನ ಪ್ರಸಂಗ – ಉಮಾ ವೆಂಕಟೇಶ್

ಮಧ್ಯಮಿಕ ಶಾಲೆಯ ದಿನಗಳವು. ಮೈಸೂರಿನ ಮಡಿವಂತ ಬ್ರಾಹ್ಮಣ ಕುಟುಂಬಗಳಲ್ಲಿ ಮಹಿಳೆಯರು ತಿಂಗಳ ಮೂರು ದಿನಗಳು ಹೊರಗಿರುತ್ತಿದ್ದ ಸುದ್ದಿ ಎಲ್ಲರಿಗೂ ತಿಳಿದ ಸಾಮಾನ್ಯ ಜ್ಞಾನವಾಗಿತ್ತು.  ಒಟ್ಟು ಕುಟುಂಬಗಳಲ್ಲಿ ಮನೆಯ ಇತರ ಮಹಿಳೆಯರು ಅಡುಗೆಮನೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.  ಹಾಗಾಗಿ ಮಕ್ಕಳಿಗೆ ಆ ಸಮಯದಲ್ಲಿ ಅಡುಗೆಮನೆಯ ಬಗ್ಗೆ ಯಾವ ರೀತಿಯಲ್ಲೂ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ.  ಆದರೆ ೭೦ರ ದಶಕದಲ್ಲಿ ಒಟ್ಟು-ಕುಟುಂಬದ ದೃಶ್ಯ ಬದಲಾಗಿ, ಸಣ್ಣ ಕುಟುಂಬಗಳ ಪದ್ಧತಿ ಶುರುವಾಗಿತ್ತು.  ನಮ್ಮ ಮನೆಯಲ್ಲಿ ನಾವಿಬ್ಬರು, ನಮಗೆ ಮೂರು ಮಕ್ಕಳು ಎನ್ನುವ ಭಾರತ ಸರ್ಕಾರದ ಕುಟುಂಬ ಯೋಜನೆಯ ಜಾಹೀರಾತಿನ ಘೋಷಣೆಯ ಪ್ರಕಾರ ನಾವು ಮೂರು ಮಕ್ಕಳು.  ನಮ್ಮ ತಂದೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರಿಂದ, ತಿಂಗಳ ಆ ಮೂರು ದಿನಗಳ ಅಡುಗೆಮನೆ ಜವಾಬ್ದಾರಿ ಮಾಧ್ಯಮಿಕ ಶಾಲೆಯಲ್ಲಿದ್ದ ನನ್ನ ಅಕ್ಕ, ನಾನು ಮತ್ತು ನನ್ನ ತಮ್ಮನ ಹೆಗಲಿಗೆ ಬಿತ್ತು.  ಸರಿ, ಆಗೆಲ್ಲ ಇನ್ನೂ ಗ್ಯಾಸ್ ಸ್ಟವ್, ಮಿಕ್ಸರ್, ಗ್ರೈಂಡರುಗಳಂತಹ ಸೌಲಭ್ಯವಿರಲಿಲ್ಲ.  ಎಲ್ಲವೂ ನಮ್ಮ ತೋಳ್ಬಲವನ್ನು ಪರೀಕ್ಷಿಸುವ ಕಲ್ಲಿನ ಉಪಕರಣಗಳೇ ಬಳಕೆಯಲ್ಲಿದ್ದ ಕಾಲ. ನಾವೋ ಮಹಾ ಸಂಕೇತಿ ಬ್ರಾಹ್ಮಣ ಜನ!  ಹುಳಿ ಮಾಡಿದರೆ ಅದನ್ನು ತಿರುವಿ ಮಾಡಬೇಕು.  ಪುಡಿ ಹಾಕಿದ ಸಾಂಬಾರ್ ಯಾರಿಗೂ ಹಿಡಿಸುತ್ತಿರಲಿಲ್ಲ.  ಭಾರಿ ಪೊಗರಿನ ಜನ.  ಸರಿ ನಮ್ಮಮ್ಮ, ಮೂಲೆಯಲ್ಲಿ ನಿಂತು ಹೇಗೆ ಮಾಡಬೇಕು ಎನ್ನುವುದನ್ನು ನಿರ್ದೇಶಿಸಿ ನಮ್ಮ ಕೈಯಲ್ಲಿ ಅಡುಗೆ ಮಾಡಿಸುತ್ತಿದ್ದರು.  ನನ್ನ ಅಕ್ಕನಿಗೆ ಅಡುಗೆಮನೆಯ ಬಗ್ಗೆ ಹೆಚ್ಚಿನ ಅಸ್ಥೆಯಿರಲಿಲ್ಲ.  ಅವಳು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವ ಕೆಲಸ ಮಾಡಿ, ಕೈತೊಳೆದುಕೊಳ್ಳುತ್ತಿದ್ದಳು.  ನಾನು, ನನ್ನ ತಮ್ಮ ಇಬ್ಬರಿಗೂ ಅಡುಗೆಮನೆಯ ಬಗ್ಗೆ ಮಹಾ ಕುತೂಹಲ.  ಅಂದು ಈರುಳ್ಳಿ-ಆಲೂಗೆಡ್ಡೆ ಹಾಕಿ ವಿಶೇಷವಾದ ಸಾಂಬಾರ್ ಮಾಡಿ ಎಲ್ಲರ ಮನಗೆಲ್ಲಲು ನಿರ್ಧರಿಸಿದೆವು.  ಸರಿ ತೊಗರಿಬೇಳೆಯನ್ನು ಸ್ಟವ್ ಮೇಲೆ ಬೇಯಿಸಿ ಆಯಿತು.  ತರಕಾರಿಯನ್ನು ಹಾಗೂ ಹೀಗೂ ಹೆಚ್ಚಿ ಅದನ್ನೂ ಬೇಯಿಸಿದ್ದೆವು.  ಆಮೆಲೆ ಬಂತು ಹುಳಿಗೆ ಮಸಾಲೆಯನ್ನು ರುಬ್ಬುಗುಂಡಿನಲ್ಲಿ ತಿರುವಿ ಮಾಡುವ ಸನ್ನಿವೇಶ!  ಅಮ್ಮ ಸಾರಿನ ಪುಡಿ ಹಾಕಿ ಕೆಲಸ ಮುಗಿಸಿ ಎಂದು ನೀಡಿದ ಸಲಹೆಯನ್ನು ನಾನು ನನ್ನ ತಮ್ಮ ಸಾರಾಸಗಟಾಗಿ ತಿರಸ್ಕರಿಸಿದೆವು.  ಮನೆಯಲ್ಲಿದ್ದ ರುಬ್ಬುಗುಂಡಿನ ಗಾತ್ರ ನೋಡಿ ಸ್ವಲ್ಪ ಭಯವಾದರೂ, ಮನಸ್ಸಿಲ್ಲಿದ್ದ ಛಲ, ನಮ್ಮನ್ನು ಆ ಕಾರ್ಯ ಮಾಡಲೇಬೇಕೆಂಬ ನಿರ್ಧಾರಕ್ಕೆ ನೂಕಿತ್ತು.  ಸರಿ ಮೊದಲಿಗೆ ಎಲ್ಲಾ ಸಾಂಬಾರ ಪದಾರ್ಥಗಳನ್ನೂ ಬಾಂಡಲೆಯಲ್ಲಿ ಹುರಿದೆವು.  ನಂತರ ಅದನ್ನು ಕಬ್ಬಿಣದ ಹಾರೆಯಿಂದ ನಾನು ಹಾಗೂ ಹೀಗೂ ಮುಲುಕುತ್ತಾ ಪುಡಿಮಾಡಿಯೇ ಬಿಟ್ಟೆ.  

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಸರಿ ಇನ್ನು ರುಬ್ಬುವ ಕೆಲಸ.  ನನ್ನ ತಮ್ಮ, “ಲೇ ಅಕ್ಕ ನಾ ಮಾಡ್ತೀನಿ ಕಣೆ” ಎಂದು ತನ್ನ ಶೌರ್ಯವನ್ನು ಮೆರೆದಾಗ ನಾನು ತಕ್ಷಣವೇ ಒಪ್ಪಿಕೊಂಡೆ.  ಇಲ್ಲಿ ಒಂದು ಸಮಸ್ಯೆ ಇತ್ತು.  ರುಬ್ಬುವ ವ್ಯಕ್ತಿ ಒಂದು ಕೈಯಿಂದ ಮಸಾಲೆಯನ್ನು ರುಬ್ಬುಗುಂಡಿನ ಕುಳಿಗೆ ನೂಕುತ್ತಾ, ಮತ್ತೊಂದು ಕೈಯಲ್ಲಿ ರುಬ್ಬು ಗುಂಡನ್ನು ತಿರುಗಿಸಿ ಕೆಲಸ ಮುಗಿಸಬೇಕಿತ್ತು.  ಇದು ಒಂದು ರೀತಿಯಲ್ಲಿ ಮಲ್ಟಿ-ಟಾಸ್ಕಿಂಗ್ ಕೆಲಸ.  ಮೊದಲ ಬಾರಿಗೆ ಈ ಕಾರ್ಯವನ್ನು ಯಾವ ಟ್ರಯಲ್ ಇಲ್ಲದೇ ಆ ಎಳೆ ವಯಸ್ಸಿನಲ್ಲಿ ನಿಭಾಯಿಸುವುದು ಸ್ವಲ್ಪ ಚಾಲೆಂಜಿಂಗ್ ಕೆಲಸ.  ಸರಿ ನನ್ನ ತಮ್ಮ ರುಬ್ಬುಗುಂಡಿನ ಮುಂದೆ ಕುಳಿತು ಕಾರ್ಯ ಪ್ರಾರಂಭಿಸಿದ.  ಅವನು ಲೇ ಅಕ್ಕ ನೀನು ನೀರು ಸ್ವಲ್ಪ ಸ್ವಲ್ಪವಾಗಿ ಸೇರಿಸಿದರೆ, ನಾನು ರುಬ್ಬುತ್ತೇನೆ ಎಂದು ಜಾಣ್ಮೆ ಮೆರೆದಾಗ, ನಾನು ಖುಷಿಯಾಗಿ, ಇನ್ನೇನು ಕೆಲಸ ಮುಗಿದೇ ಹೋಯ್ತು ಎಂದು ಉಬ್ಬಿದೆ.  ಸರಿ ಅವನ ಪಕ್ಕದಲ್ಲಿ ನೀರಿನ ಪಾತ್ರೆ ಹಿಡಿದು ಕುಳಿತೆ.  ನನ್ನ ತಮ್ಮ ಇಲ್ಲಿ ಒಂದು ತಪ್ಪು ಮಾಡಿದ.  ಎಲ್ಲಾ ಮಸಾಲೆಪುಡಿಯನ್ನೂ ಒಮ್ಮೆಗೆ ಕುಳಿಗೆ ತುಂಬಿ, ಅದನ್ನು ಬಹಳ ಬೇಗ ತಿರುವಿ ಮುಗಿಸಿಬಿಡುವ ಯೋಚನೆಮಾಡಿದ್ದ.  ನಾನು ಅದನ್ನು ಗಮನಿಸದೆ, ಒಮ್ಮೆಗೆ ನೀರನ್ನು ಕುಳಿಗೆ ಹುಯ್ದೆ.  ಸರಿ ನನ್ನ ತಮ್ಮ ಗುಂಡನ್ನು ಕುಳಿಗೆ ಬಿಟ್ಟಾಗ, ಒಮ್ಮೆಗೆ ಅದರಲ್ಲಿದ್ದ ಮಸಾಲೆಯೆಲ್ಲಾ ನನ್ನ ಕಣ್ಣಿಗೆ ಹಾರಿತು.  ನಾನು ಜೋರಾಗಿ ಅರಚಿಕೊಂಡು, ಅವನ ತಲೆಯ ಮೇಲೆ ಜೋರಾಗಿ ಎರಡು ಸಲ ಕುಟ್ಟಿ ಬಚ್ಚಲು ಮನೆಯತ್ತ ಧಾವಿಸಿದೆ.  ಮನೆಯ ಹೊರಗೆ ಕಾಂಪೌಂಡಿನಲ್ಲಿ ನಿಂತಿದ್ದ ಅಮ್ಮ ಓಡಿ ಬಂದು ನೋಡಿ ತಲೆತಲೆ ಚಚ್ಚಿಕೊಂಡು ನನ್ನ ತಮ್ಮನ ಮೇಲೆ ಹರಿಹಾಯ್ದರು.  ಸರಿ ನಾನು ಭಂಡತನದಿಂದ ಕಣ್ಣು ತೊಳೆದು, ಮತ್ತೊಮ್ಮೆ ರುಬ್ಬುಗುಂಡಿನ ಕಡೆಗೆ ವಾಪಸಾದೆ.  ಈ ಬಾರಿ ಕುಳಿಯಲ್ಲಿದ್ದ ಮಸಾಲೆಯನ್ನು ಹೊರತೆಗೆದು ಅದನ್ನು ಸ್ವಲ್ಪಸ್ವಲ್ಪವಾಗಿ ಒಳಗೆ ನೂಕಿಕೊಂಡು ರುಬ್ಬಬೇಕೆಂದು ಅಮ್ಮನಿಂದ ಆದೇಶ ಬಂತು. ಮತ್ತೆ ಪ್ರಾರಂಭವಾಯ್ತು ರುಬ್ಬುವ ಕಾರ್ಯ.  ನನ್ನ ತಮ್ಮ ಒಂದು ಕೈಯಲ್ಲಿ ಮಸಾಲೆ ನೂಕಿಕೊಳ್ಳುವುದೇನೋ ಮಾಡಿದ, ಆದರೆ ರುಬ್ಬುವ ಗುಂಡನ್ನು ತಿರುಗಿಸುವುದಕ್ಕೆ ಬದಲಾಗಿ, ಅವನ ತಲೆಯನ್ನು ತಿರುಗಿಸಲು ಪ್ರಾರಂಭಿಸಿದ.  ನಾವೆಲ್ಲಾ ಆ ದೃಶ್ಯವನ್ನು ನೋಡಿ ನಗಲಾರಂಭಿಸಿದೆವು.  ಅದನ್ನು ಗಮನಿಸಿದ ನನ್ನ ತಮ್ಮ, “ಲೇ ಅಕ್ಕ ಸ್ವಲ್ಪ ನನ್ನ ತಲೆ ಹಿಡಿದುಕೊ, ನಾನು ಬೇಗ ರುಬ್ಬಿ ಬಿಡುತ್ತೇನೆ” ಎಂದಾಗ ನನ್ನ ತಾಯಿ ಬಿದ್ದುಬಿದ್ದು ನಗಲಾರಂಭಿಸಿದರು.  ಕಡೆಗೆ ರುಬ್ಬುವ ಕಾರ್ಯವನ್ನು ನಾನೇ ನಿರ್ವಹಿಸಿದೆ.  ಈ ಪ್ರಕರಣವನ್ನು ಮನೆಯ ಇತರ ಸಂಬಂಧಿಗಳ ಮುಂದೆ ಹೇಳಿಕೊಂಡು ಲೆಕ್ಕವಿಲ್ಲದಷ್ಟು ಬಾರಿ ನಕ್ಕಿದ್ದೇವೆ.  ನನ್ನ ತಂದೆಯ ಹಲವು ಸೋದರ ಸಂಬಂಧಿಗಳು ಈಗಲೂ ಆ ಪ್ರಕರಣ ಜ್ಞಾಪಿಸಿಕೊಂಡು, ನಮ್ಮ ಶ್ರೀನಿವಾಸ ಹುಳಿಗೆ ರುಬ್ಬಿದ್ದನ್ನು ಮರೆಯುವ ಹಾಗಿಲ್ಲ ಎಂದು ಮೆಲಕು ಹಾಕುತ್ತಾರೆ.  ಇಂದು ಅಡುಗೆ ಮನೆಯಲ್ಲಿ ನಮಗಿರುವ ಸೌಲಭ್ಯಗಳು ಅನೇಕ.  ಕುಕಿಂಗ್-ರೇಂಜ್, ಮಿಕ್ಸರ್, ಗ್ರೈಂಡರ್, ಫ಼ುಡ್-ಪ್ರೊಸೆಸರ್ ಒಂದೆ ಎರಡೇ; ಆದರೂ ಮನೆಯಲ್ಲಿ ಹಿರಿಯರು ಇಂದಿಗೂ ದೋಸೆ, ಇಡ್ಲಿ ನಮ್ಮ ಹಿಂದಿನ ರುಬ್ಬುಗುಂಡಲ್ಲಿ ಮಾಡಿದ ರುಚಿ ಈ ಆಧುನಿಕ ಉಪಕರಣ ಬಳಸಿ ಮಾಡಿದರೆ ಇರುವುದಿಲ್ಲ ಎಂದು ಗೊಣಗುವುದನ್ನು ಕೇಳುತ್ತಿರುತ್ತೇನೆ.  ಹಳೆಯ ಪೀಳಿಗೆಯ ತಲೆಗಳಿಗೆ ಹೊಸತನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಮನಸ್ಸಿಲ್ಲ.  “Old habits die hard”.

*********************************************************************************

ರೀ … ಒಂದ್ ಕಪ್ಪು ಪ್ರೇಮಕಾಫಿ!” – ಪ್ರೇಮಾ ಸಾಗರ್  

ಸುಮಾರು 2 ವರ್ಷಗಳ ಹಿಂದಿನ ಮಾತಿರಬಹುದು.  ಆಫೀಸ್ ನಲ್ಲಿ ಬಹಳ ಕೆಲಸವಿದ್ದ ಸಮಯ. ಒಂದು ದಿನ ಆಫೀಸ್ ಮುಗಿದ ನಂತರ ಮಕ್ಕಳನ್ನು ಪಿಕಪ್ ಮಾಡಿ ಮನೆ ತಲುಪಿದ್ದೆ.  ಸಂಜೆ ಮನೆಗೆಲಸಗಳು ಹೆಚ್ಚಾಗಿ, ಮಕ್ಕಳ ರಗಳೆಯೂ ಹೆಚ್ಚಾಗಿ ಸರಿದೂಗಿಸಲಾರದೆ ಕಣ್ಣೀರು ಬಂದಿತ್ತು.  ಮನೆಯವರು ಗದರುತ್ತಾ “ಅಷ್ಟೇ ತಾನೇ? ನಾನಿಲ್ಲವೆ? ಅಡುಗೆ ಮನೆ ಕೆಲಸ ನನಗೆ ಬಿಡು” ಎಂದಾಗ, ಆಶ್ಚರ್ಯ ದಿಂದ ಕಣ್ಣರಳಿತ್ತು.  ಎಂದೂ ಅಡುಗೆ ಮಾಡಿರದ ಅವರು “ಇರು, ನಿನ್ನ ಮೂಡ್ ಸರಿ ಮಾಡಲು ಏನು ಬೇಕೆಂದು ನನಗೆ ಗೊತ್ತು” ಎಂದು ತಕ್ಷಣ ಅಡುಗೆ ಮನೆಗೆ ನಡೆದರು.

ನಾನು ಇನ್ನೂ ತಲೆಯ ಮೇಲೆ ಕೈ ಹೊತ್ತು ನನ್ನದೇ ಲೋಕದಲ್ಲಿ ಕುಳಿತಿದ್ದೆ.  ಕಾಫಿಯ ಸುಗಂಧ ಬಂದಾಗ ಎದುರಿಗೇ ಬಿಸಿ ಬಿಸಿ ಕಾಫಿ!  “ಕಾಫಿ ಮಾಡಿದಿರಾ?” ಎಂದಾಗ, “ಕುಡಿದು ನೋಡು” ಥಟ್ ಅಂತ ಬಂತು ಉತ್ತರ.  ನನ್ನ ಮನಸ್ಥಿತಿಯೋ, ಕಾಫಿಯ ವಿಶಿಷ್ಟ ರುಚಿಯೋ, “ವಾವ್, ಅಮೇಜಿಂಗ್!” ನಾನು ಉದ್ಗರಿಸಿದ್ದೆ!  ಹೀಗೆ ಶುರುವಾಯಿತು ನಮ್ಮ ಸಂಜೆಯ ಕಾಫಿಯೊಂದಿಗೆ ಪ್ರೇಮ ಸಲ್ಲಾಪ. ನಿಧಾನವಾಗಿ ದಿನನಿತ್ಯ ಕಾಫಿ ಮಾಡುವ ಕೆಲಸ ಪತಿಯ ಪಾಲಾಯಿತು.  ಇಂಡಿಯಾದಿಂದ ಬಹಳ ದೂರವಿದ್ದ ನಮಗೆ ಇದನ್ನು ಗುಟ್ಟಾಗಿಡುವುದು ಕಷ್ಟವಾಗಲಿಲ್ಲ.

ಹೀಗೆ ವರ್ಷವೇ ಕಳೆದಿರಬೇಕು.  ಅತ್ತೆ ಮಾವ ನಮ್ಮೊಂದಿಗೆ ಸ್ವಲ್ಪ ಕಾಲ ಕಳೆಯಲು ಬಂದಿದ್ದರು. ಇಂಡಿಯಾದಿಂದ ಯಾರಾದರೂ ಬಂದರೆ ನಮಗೆ ಎಲ್ಲಿಲ್ಲದ ಖುಷಿ!  ಆಗ ಮನೆಯಿಂದ ಕೆಲಸ ಮಾಡುವುದು ಇಷ್ಟು ಸಾಮಾನ್ಯವಾಗಿರಲಿಲ್ಲ.  ಕೊರೊನ ಬರುವ ಮುಂಚೆ ನಮಗೂ ಆಫೀಸಿಗೆ ಹೋಗದೇ ಕೆಲಸ ಮುಗಿಸಲು ಉತ್ಸಾಹ.  ಅಂತಹದೊಂದು ದಿನ ಲ್ಯಾಪ್ಟಾಪಿನಲ್ಲಿ ಮಗ್ನವಾಗಿದ್ದ ನನಗೆ ಸುತ್ತ ಮುತ್ತಲಿನ ಹರಾಸು ಇರಲಿಲ್ಲ. ಹತ್ತಿರದಲ್ಲಿ ಕುಳಿತಿದ್ದ ಅತ್ತೆ ಮಾವ ಗಮನಕ್ಕೆ ಬರಲಿಲ್ಲ. “ರೀ, ಸ್ವಲ್ಪ ಕಾಫಿ ಮಾಡಿ, ಬ್ರೇಕ್ ತೊಗೊಳ್ಳುವ” ರಾಗವಾಗಿ ಕೂಗು ಹಾಕಿದ್ದೇ ತಲೆಯೆತ್ತಿ ನೋಡಿದೆ!  ಮನೆಯವರ ಮುಖದಲ್ಲಿ ಉದ್ವೇಗ!  ತಕ್ಷಣ ನನ್ನ ಕೈ ತನ್ನಿಂತಾನೇ ಬಾಯಿ ಮುಚ್ಚಿತು.  ಅಷ್ಟರಲ್ಲೇ “ಓಹ್!” ಎಂಬ ಉದ್ಗಾರವೂ ಹೊರ ನುಸುಳಿತ್ತು!

ಭೂಮಿಯೇ ನನ್ನನ್ನು ನುಂಗಬಾರದೇ? ಹ್ಯಾರಿ ಪಾಟರ್ ನಂತೆ ಚಿಟಿಕೆ ಹೊಡೆದು ಮಾಯವಾಗಬಾರದೇ?  ಇದು ಬರೀ ಕನಸಾಗಿರಬಾರದೇ?  ಹೀಗೆ ಎಷ್ಟೆಲ್ಲ ಆಲೋಚನೆಗಳು ಕ್ಷಣದಲ್ಲಿ ಆವರಿಸಿದವು.

“ಹಾಗೇ ನಮಗೂ ಒಂದೊಂದು ಲೋಟ ಕಾಫಿ ಮಾಡು ಮಗ.  ಎಷ್ಟು ಚಳಿ ಇಲ್ಲಿ.  ಇನ್ನೊಮ್ಮೆ ಕಾಫಿ ಚಪ್ಪರಿಸೋಣ”  ಎಂದಾಗಲೇ ಅತ್ತೆಯ ಕಡೆ ನೋಡಲು ಧೈರ್ಯ ಮಾಡಿದ್ದು.  ಅವರ ಕಳ್ಳನೋಟ ನೋಡಿ ಕೃತಜ್ಞತೆಯ ಮುಗುಳು ನಗೆ ನನ್ನದಾಯಿತು.  ಎಲ್ಲರೂ ನಗತೊಡಗಿದಾಗ  ಕಾಫಿಯ ಘಮಘಮದ ಜೊತೆಗೆ ಅಕ್ಕರೆಯ ನಗು ಮನೆಯೆಲ್ಲ ಆವರಿಸಿತು.  ಕಾಫಿಯ ಮಹಿಮೆ ನಮ್ಮನ್ನೆಲ್ಲ ಮತ್ತಷ್ಟು ನಿಕಟವಾಗಿಸಿತ್ತು!

14 thoughts on “ಅಡುಗೆ – ಅಡುಗೆಮನೆ ಸರಣಿ: ಉಮಾ ವೆಂಕಟೇಶ್ ಮತ್ತು ಪ್ರೇಮಾ ಸಾಗರ್

  1. ಓದಿ ಆಸ್ವಾದಿಸಿದ್ದು ಪ್ರಕಟವಾದ ದಿನವೇ ಆದರೂ ‘ಚೆನ್ನಾಗಿದೆ’ಎಂದು ಬರೆಯಲು ಇಷ್ಟು ದಿನ ತೆಗೆದುಕೊಂಡ ಸೋಮಾರಿ ನಾನು. ಉಮಾ ಅವರೇ, ನಿಮ್ಮ ರುಬ್ಬುಗುಂಡಿನ ಕಥೆ ರೋಚಕವಾಗಿತ್ತು. ನಿಮ್ಮ ಬರಹ ಎಷ್ಟು ಸಶಕ್ತವಾಗಿದೆಯೆಂದರೆ ನಿಮ್ಮ ಅಡುಗೆಮನೆಯಲ್ಲೇ ಕುಳಿತು ಅಕ್ಕ-ತಮ್ಮರ ಸಾಹಸಗಾಥೆ ನೋಡುತ್ತಿದ್ದೆ ನಾನು. ತಮ್ಮನೆಲ್ಲಿ ಕೈ ಜಬ್ಬಿಕೊಂಡು ಬಿಡುವನೋ ಎಂದು ಆತಂಕಪಡುತ್ತಿದ್ದ ನನಗೆ ಅವನ ಸುತ್ತುವ ತಲೆ ಕಂಡು ನಗುವೋ ನಗು. ಕಣ್ಣಲ್ಲಿ ಖಾರ ಬಿದ್ದರೂ ಲೆಕ್ಕಿಸದೇ ಮಸಾಲೆ ತಿರುವಿ ಘಮಘಮಿಸುವ ಸಾಂಬಾರ ಪಾತ್ರೆ ಇಳಿಸಿದ ವೀರಬಾಲಕಿಗೊಂದು ಜೈ..
    ಪ್ರೇಮಾ ಅವರ ಕಾಫಿ ಕತೆ ಸೊಗಸಾಗಿದೆ. ಮನೆಮನೆಯಲ್ಲೂ ಗಂಡಂದಿರು ಚಹಾ,ಕಾಫಿ(ಸಾಧ್ಯವಾದರೆ ಅಡುಗೆಯನ್ನೂ) ಮಾಡಿ ಕೌಟುಂಬಿಕ ಸಾಮರಸ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ಸಲ್ಲಿಸಬೇಕಾಗಿ ನಮ್ಮ ಕಳಕಳಿಯ ವಿನಂತಿ.
    ನಮ್ಮ ಸಂಪಾದಕರ ‘ಜೀವೋರೆ ಬಾಹುಬಲಿ’ಗಂತೂ ೧೦೦ ಕ್ಕೆ ೧೦೦ ಅಂಕಗಳು.
    ಗೌರಿಪ್ರಸನ್ನ

    Liked by 1 person

  2. ಎಂದಿನಂತೆ ನಿಮ್ಮ ಲೇಖನ ಸ್ವಾರಸ್ಯಕರವಾಗಿತ್ತು ಉಮಾ!!! ಅಕ್ಕ-ತಮ್ಮ ರ ರುಬ್ಬುಗುಂಡಿನ ಹಾಸ್ಯಮಯ ಪ್ರಸಂಗದ ವಿಶ್ಲೇಷಣೆ ಕೇಳಿಯಂತೂ ನಕ್ಕು ನಕ್ಕು ಸಾಕಾಯಿತು.
    ಈಗಲೂ ಅಮ್ಮ ಮನೆಗೆ ಹೋದಾಗ, ಹೋಳಿಗೆ ಹೂರಣ,ಆಂಬೊಡೆ, ಇಡ್ಲಿ ಸಂಪಣ ಎಲ್ಲಾ ರುಬ್ಬು ಗುಂಡಲ್ಲಿ ರುಬ್ಬಿದರೇ ಅಮ್ಮನಿಗೆ ಸಮಾಧಾನ.
    ನಮ್ಮ ಮಕ್ಕಳು ಸಹ ಉತ್ಸಾಹದಿಂದ ರುಬ್ಬುತ್ತಾರೆ!!!!!!

    ಪ್ರೇಮ ರವರ ಪತಿ ಮಾಡಿದ ಕಾಫಿಯಾಣ ಮಸ್ತ್!!!!!!

    Liked by 1 person

  3. ಉಮಾ ಅವರೇ ನಿಮ್ಮ ಆರ್ಟಿಕಲ್ ಬಹಳ ರಸವತ್ತಾಗಿದೆ. ಇದನ್ನು ಓದಿದ ನಂತರ ಅಮ್ಮ ತನ್ನ ಅನುಭವಗಳನ್ನ ಹೇಳಿಕೊಂಡು, ನಾವು ಬಹಳ ನಕ್ಕೆವು. ಸುಂದರವಾದ ಲೇಖನ!

    -ಪ್ರೇಮ

    Liked by 1 person

  4. ಉಮಾ, ನಿಮ್ಮ ಮತ್ತು ನಿಮ್ಮ ಸೋದರನ ರುಬ್ಬುಗುಂಡಿನ ಕತೆ ಬಹಳ ಸ್ಯಾರಸ್ಯಕರ. ನಿಮ್ಮ ಬರವಣಿಗೆ ಮತ್ತು ಗುಡೂರರವರ ಚಿತ್ರ ಓದುಗರಿಗೆ, ರುಬ್ಬಿ ಹಾಕಿದ ಹುಳಿಯ ರುಚಿಯನ್ನು ಉಣಬಡಿಸಿದೆ. ಗ್ರೈಂಡರ್ ಬಂದ ಹೊಸತರಲ್ಲಿ, ಚಟ್ನಿಯನ್ನು ರುಬ್ಬಿ ಮಾಡಿದರೆ ಮಾತ್ರ ರುಚಿಯೆಂದು ಜನ ಹೇಳುತ್ತಿದ್ದುದು ನೆನಪಾಯಿತು ಮತ್ತು ಕೆಲವರ ಮನೆಗಳಲ್ಲಿ ಇದನ್ನು ಕೈಯಲ್ಲಿ ರುಬ್ಬಿಯೆ ಇಂದಿಗೂ ತಯಾರಿಸುತ್ತಾರೆ.

    ಪ್ರೇಮಾರವರ ಬಿಸಿ, ಬಿಸಿ ಕಾಫಿಯ ಜೊತೆಗೆ, ’ ಗಂಡಸರು ಅಡಿಗೆಯನ್ನು ಮಾಡಿ ಹೆಂಡತಿ ಮತ್ತು ಮಕ್ಕಳಿಗೆ ಉಣಿಸಿದರೆ ತಪ್ಪೇನು? ’ ಎನ್ನುವ ಬಿಸಿ ಚರ್ಚೆಯನ್ನು ಸಹ ಶುರು ಮಾಡಬಹುದು. ಈ ವಿಚಾರದಲ್ಲಿ ನಿಮ್ಮ ಅತ್ತೆಯವರ ಉದಾರ ಧೃಷ್ಟಿಕೋನವನ್ನು ಮೆಚ್ಚಬೇಕು. ನಮ್ಮೊಂದಿಗೆ ಹಂಚಿಕೊಂಡ ಲೇಖಕಿಯರಿಬ್ಬರಿಗೂ ಧನ್ಯವಾದಗಳು

    Liked by 1 person

    • ಖಂಡಿತ ದಕ್ಷ ಅವರೇ! ಮನೆಯಲ್ಲಿ ಗಂಡಸರು ಎಷ್ಟೋ ಕೆಲಸ ಮಾಡುತ್ತಿದ್ದರೂ ಕೆಲವು ಸಲ ಹಿರಿಯರು ಏನು ಅಂದುಕೊಂಡು ಬಿಡುತ್ತಾರೋ ಎನ್ನುವ ಪ್ರಶ್ನೆ ಬಂದುಬಿಡುತ್ತದೆ.

      ಆದರೆ ಉಮಾ ಅವರ article ನಂತೆ ಮೊದಲೆಲ್ಲ ತಿಂಗಳ 3 -4 ದಿನ ಗಂಡಸರು ಅಡುಗೆ ಕೆಲಸಗಳನ್ನ ನೋಡಿಕೊಳ್ಳುವುದು ಸಹಜವೇ ಆಗಿತ್ತು. ಎಲ್ಲೋ ಅದು ಮರೆತಂತಾಗಿದೆ.

      -ಪ್ರೇಮ

      Like

  5. ವಾವ್! ತುಂಬ ರೋಚಕ ಅನುಭವಗಳ ಗಂಟು ಈ ಅಡುಗೆ ಮನೆ ಸರಣಿ.ನಾವು ಉತ್ತರ ಕರ್ನಾಟಕದ ಜನ.ನಮ್ಮಲ್ಲಿ ಹುಳಿಗೆ ತಿರುವಿ ಹಾಕುವ ಗೋಜಿಲ್ಲ.ಉಮಾ ಅವರೇ ನನಗೆ ಈಗ ನಿಜಕ್ಕೂ ನೀವು ಆ ದಿನ ಮಾಡಿದ ‘ಹುಳಿ’ ರುಚಿ ನೋಡುವ ಆಸೆ ಆಗ್ತಿದೇರಿ.ಹೇಗೆ ಮಾಡೋದು? ನಮ್ಮಮ್ಮನ ಮೂರು ದಿನಗಳ ರಜೆಯಲ್ಲಿ ನನಗೆ ಅಡಿಗೆ ಮಾಡುವ ಗೋಜಿರಲಿಲ್ಲ.ನಮ್ಮ ಅಜ್ಜಿ ನಿಭಾಯಿಸೋರು.ಪಕ್ಕಾ ಮಡಿ ಅಡಿಗೆ.ಆದರೆ ಚಹಾ ನನ್ನ ಪಾಳಿ.ನಾ ಎಂದೂ ಇಂದಿನ ವರೆಗೂ ಚಹಾದ ರುಚಿ ನೋಡಿದವಳಲ್ಲ.ಅದೊಂದು ಯಜ್ಞ ಅನ್ನಿಸೋದು ಆಗ.ಒಂದೇ ಕಪ್ಪಿನ ಹದ ಸಾಧಿಸೋದು ನಂಗೆ.ಹೀಗಾಗಿ ಒಂದೊಂದೇ ಕಪ್ಪು ಚಹಾ ಮಾಡಿ ಸರಬರಾಜು ಮಾಡೋದು ನಾ.ಹೇಗೇ ಮಾಡಿದ್ರೂ ಅದು ತಣ್ಣಗಾಗೋದು ಸ್ವಲ್ಪವೇ.ನಮ್ಮ ತಂದೆದು ಖಾಯಂ ಡೈಲಾಗ್ –
    ಅದಕ್ಕೆ ಚಹಾ ಕುಡದೇ ಗೊತ್ತಿಲ್ಲ.ಇನ್ಹೇಗೆ ಮಾಡೀತು ಅದು ಚಹಾ? ನನಗೆ ಸಿಟ್ಟಿನಿಂದ ಮುಖ ಕೆಂಪು.
    ಪ್ರೇಮಾ ಅವರ ಕಾಫಿ ಪ್ರಹಸನ ಮಸ್ತ್ ಮಜಾ.ಆ ಕಾಫಿ ಘಮಲು ಮೂಗಿಗೆ ಬಡೀತಾ ಬಾಯಿ ನೀರೂರತಾ ಇದೇರೀ.ಒಂದು ನೀತಿ ಸಿಕ್ತು ನಂಗೆ ಇಲ್ಲಿ- ಗಂಡ ಕಾಫಿ ಮಾಡಿ ಕೊಟ್ರೆ ಅತ್ತೆ- ಸೊಸೆ ಸಂಬಂಧ ತುಂಬ ಸೊಗಸಾಗಿ ಇರ್ತದೆ,ಸರಸಮಯವಾಗಿ ಇರ್ತದೆ.ಎಲ್ಲ ಗಂಡಂದಿರು ಯೋಚಿಸಬೇಕಾದ ವಿಷಯ ಇದು ಖಂಡಿತವಾಗಿಯೂ!!
    ಇಂಥ ಸುಂದರ ಬರಹಗಳಿಗೆ ಮೆರುಗು ನೀಡಲು ಬಾಹುಬಲಿ ಯನ್ನು ಕರಕೊಂಡು ಬಂದ ಗುಡೂರ್ ಅವರ ಸಾಹಸ ಶ್ಲಾಘನೀಯ.
    ಉಮಾ ವೆಂಕಟೇಶ್, ಪ್ರೇಮ ಸಾಗರ್ ಹಾಗೂ ಗುಡೂರ್ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
    ಸರೋಜಿನಿ ಪಡಸಲಗಿ

    Liked by 3 people

  6. ಕನ್ನಡದ ಮೇಲೆ ಉಮಾ ವೆಂಕಟೇಶ್ ಅವರ ಹಿಡಿತ, ಅನುಭವಿಸಿದ ಘಟನೆಗಳಿಂದ ರಸ ಹಿಂಡುವ ಅವರ ಸಾಮರ್ಥ್ಯ, ಹಿಂಡಿದ್ದನ್ನು ಹದಕ್ಕೆ ಮಸಾಲೆ ಬೆರೆಸಿ ಓದುಗರಿಗೆ ಆಸ್ವಾದಿಸಲು ಹಂಚುವ ಪರಿಣತಿ ಅವರ ಬರಹಗಳಿಗೆ ಬಲವನ್ನು ತುಂಬುತ್ತದೆ. ಅವರೊಬ್ಬ ಉತ್ತಮ narrator, ಘಟನೆಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ. ಅಕ್ಕ – ತಮ್ಮನ ರುಬ್ಬುಗುಂಡು ಪ್ರಸಂಗವನ್ನು ಓದಿ, ನಕ್ಕು ನಕ್ಕು ಸಾಕಾಯ್ತು. ನನ್ನಲ್ಲಿನ ವ್ಯಂಗ್ಯಚಿತ್ರಕಾರನಿಗೆ ಸ್ಫೂರ್ತಿಯೂ ಆಯಿತು. ಓದಿ, ಫ್ರೆಶ್ ರುಬ್ಬಿ ಮಾಡಿದ ಘಮದ ಸಾಂಬಾರನ್ನೇ ತಿಂದಷ್ಟು ಸಮಾಧಾನವೂ ಆಯ್ತು.

    ಗಂಡಂದಿರ ಹಿಡನ್ ಟ್ಯಾಲೆಂಟುಗಳು ಕಷ್ಟಕಾಲಕ್ಕೆ ಮಾತ್ರ ಉಪಯೋಗವಾಗುವ ಅಸ್ತ್ರಗಳಿದ್ದಂತೆ. ಅಲ್ಲದೆ, ಒಮ್ಮೆ ಗೊತ್ತಾದರೆ ಆಮೇಲೆ ದಿನವೂ ಉಪಯೋಗಿಸಬೇಕಲ್ಲ ಅನ್ನುವ ಭಯ ಬೇರೆ ಇರುತ್ತದೆ!! ಅಂತೂ ಇಂತೂ ಕಾಫಿಯಾಯ್ತು. ಆದರೆ ಅಡುಗೆಯ ಟ್ಯಾಲೆಂಟ್ ಹೇಗಿತ್ತು ಅಂತ ಗೊತ್ತಾಗಲಿಲ್ಲ!

    Liked by 1 person

  7. ಎಪ್ಪತ್ತರ ದಶಕದಲ್ಲಿ ಅಕ್ಕಂದಿರಿಗಾಗಿ ತಲೆ ‘ರುಬ್ಬಿ’ ಕೊಂಡ ತಮ್ಮ, ನಾಲಕ್ಕು ದಶಕಗಳ ನಂತರ ಹೆಂಡತಿಗೆ ಕಾಫಿ ಮಾಡುವಂತಹ ಪ್ರಬುದ್ಧನಾಗಿ ಬೆಳೆಯುವಂತಹ ಚಿತ್ರಣವನ್ನು ಈ ವಾರದ ಎರಡು ಪ್ರಸಂಗಗಳ ಕೊಂಡಿ ಬಣ್ಣ-ಬಣ್ಣಗಳಲ್ಲಿ ಅಂದವಾಗಿ ರೂಪಿಸಿದೆ. ಈ ಚಿತ್ರಣ, ‘ಸಂಪ್ರದಾಯ’ಗಳ ಕಟ್ಟುಪಾಡುಗಳ ಗಂಟುಗಳನ್ನು ಒಂದೊಂದಾಗಿ ಬಿಚ್ಚುತ್ತ ಬೆಳೆದ, ಬೆಳೆಯುತ್ತಿರುವ ಮುನ್ನೋಟದ ಸಮಾಜದ summary ಮತ್ತು ಸಂಕೇತಗಳಾಗಿ ಉಳಿಯುತ್ತವೆ. ಸೊಸೆಯ ಆತಂಕ ಕಳೆಯುವ ಅತ್ತೆಯ ಕಾಫಿ, ಅತ್ತೆ-ಸೊಸೊಯರ ಅಂತರದ ಕಾರಣ ಸೊಸೆಯ ಮನಸ್ಸಲ್ಲಷ್ಟೇ ಇರಬಹುದು ಎನ್ನುವದನ್ನ ಕಾಫಿಯ ಪರಿಮಳದಲ್ಲಿ ತೇಲಿಸಿದೆ.

    ಮೇಲ್ನೋಟಕ್ಕೆ ತಮಾಷೆಯ ಹರಟೆಯನ್ನಿಸುವ ಈ ಎರಡೂ ಲೇಖನಗಳು, ಸಮಾಜದ ಬದಲಾವಣೆಯ ಮನಸ್ಥಿತಿಯ ಬಿಂಬಗಳಾಗಿ ಹೊಳೆಯುತ್ತವೆ.

    ಮುರಳಿ ಹತ್ವಾರ್

    Liked by 1 person

    • ಒಂದು ಕಪ್ ಕಾಪಿ
      – ಪ್ರೇಮ ಸಾಗರ್

      ಭಾರತದ ನಮ್ಮ ಮಕ್ಕಳು , ಮೊಮ್ಮಕ್ಕಳ ಜೊತೆಗೆ ಕಾಪಿಯು ಯುಕೆ ಅಲ್ಲಿ ನಳನಳಿಸಿ ಘಮ ಘಮಿಸುತಿದೆ ಎಂಬ ಖುಷಿಯ ಜೊತೆಗೆ ಬಳಲಿ ಬಸವಳಿದ ಸತಿಯನ್ನು ರಮಿಸಿದ ಪತಿಯ ಜಾಣ್ಮೆ .
      ನವಯುವಕರ ಜೊತೆಜೊತೆಯಾಗಿ ಬೆರೆತ ಅತ್ತೆ ಮಾವರ ಉದಾರತೆ , ಗಂಡಸರನ್ನು ಸಮಯ ನೋಡಿ ಅಡಿಗೆಮನೆಯ ಸಹಭಾಗಿಯಾಗಿ ಮಾಡಿಕೊಳ್ಳುವ ಸ್ತ್ರೀಯರ ನೈಪುಣ್ಯತೆ , ಹದಗೆಡುವ ವಾತಾವರಣವನ್ನು ಮುದಗೊಳಿಸುವ ಘಮ ಘಮ ಕಾಪಿ . ಎಲ್ಲವನ್ನು ಚಿಕ್ಕದಾಗಿ ಚೊಕ್ಕವಾಗಿ ಬಿಂಬಿಸಿದ ಒಂದು ಕಪ್ ಕಾಪಿ ಕುಡಿಯಲು ನಾನು ಕಾತರಳಾಗಿದ್ದೇನೆ .

      – ಕಮಲಾ ಅನಂತ

      Like

  8. ಗುಡೂರ್ ಅವರ ಎರಡನೇ ಪಂಕ್ತಿಯ ಊಟವೂ ಮೊದಲಿನಷ್ಟೇ ಸ್ವಾರಸ್ಯಕರವಾಗಿದೆ. ಜೊತೆಗೆ ಬಾಹುಬಲಿ-ರುಬ್ಬುಕಲಿ ‌ಚಿತ್ರವೂ‌.

    ಉಮಾ ಅವರ ರುಬ್ಬುಗುಂಡಿನ ಮಹಿಮೆ ನಿಜಕ್ಕೂ ನಗು ಉಕ್ಕಿಸುತ್ತದೆ. ನಮ್ಮ ಕತೆಯೂ ಹಾಗೆಯೇ, ತಿಂಗಳಿಗೆ ಮೂರು ದಿನ‌ ಅಡುಗೆ ಮಾಡುವ ಕೆಲಸ ನನ್ನ ಅಣ್ಣನಿಗೆ, ಅವನ‌ ಸಹಾಯಕನಾಗಿ ನಾನು. ನನ್ನ ಅಣ್ಣ ಸಿಕ್ಕಾಪಟ್ಟೆ ತಾಳ್ಮೆಯವ ಮತ್ತು ಎಲ್ಲವನ್ಮೂ ಚಾಚೂತಪ್ಪದೇ ಮಾಡುವಾತ. ಹೀಗಾಗಿ ಅಡುಗೆ ಮನೆ ಅವಘಡಗಳು ಅಷ್ಟೇನೂ ಆಗಿಲ್ಲ.

    ಪ್ರೇಮಾ ಸಾಗರ್ ಅವರ ಪತಿ ಮಾಡುವ ಕಾಫಿಯ ಘಮ ಇಲ್ಲಿಯವರೆಗೂ ಬರುವಂತಿದೆ. ಬಿಸಿ ಬಿಸಿ ಬರಹ.

    ಕೇಶವ

    Liked by 1 person

  9. “Rubbugundus” never fail to evoke cosy delicious cooking memories from the past. Whilst enjoying the equal opportunity message in a husband stooping to make some coffee it was impossible not to fall in love with the cartoon -certainly a winner ! Can we have more please !

    Liked by 2 people

  10. ೧)ಈ ವಾರದ ಹೆಲ್ಪಿಂಗ್ ಸಹ ಅಷ್ಟೇ ಸ್ವಾದಿಷ್ಟವಾಗಿದೆ.”ಮಿಸ್-ಸಂಕೇತ’ದ ಅಕ್ಕ-ತಮ್ಮಂದಿರ ರುಬ್ಬುವ ಪ್ರಸಂಗ ಓದಿ ಗಹಗಹಿಸಿ ನಕ್ಕು ಬಿಟ್ಟೆ. ಆ ’ರಾಕ್ಕರ್’ ರೋಲ್ಲಿಂಗ ಸ್ಟೋನ್ ಶ್ರೀನಿವಾಸನ ’ರೋಲಿಂಗ್ ಹೆಡ್” ದೃಶ್ಯದ ಕಲ್ಪನೆ ಮಾಡಿ ಮಾಡಿ ನಕ್ಕೆ. ಪಾಪ ಕಣ್ಣಲ್ಲಿ ಖಾರ ಬಿದ್ದ ಅಕ್ಕನ ಬವಣೆಯ ಬಗ್ಗೆ ಕನಿಕರ. ಆತ ಮಂಗಳಾರತಿ ಹೇಗೆ ಮಾಡುತ್ತಿದ್ದನೋ, ಗಂಟೆ-ದೀಪ ಹಿಡಿದು! ಎಂದಿನಂತೆ ಗುಡೂರ್ ಅವರ ವ್ಯಂಗ ಚಿತ್ರಕ್ಕೆ ಸಾಟಿಯೇ ಇಲ್ಲ. ಬೇರೆಯವರೂ ಬರೆದಾರು. ‘’ಅಟ್ಲಸ್’ ಅಸ್ಥಿಯ ಮೇಲೆ ಶಿವಲಿಂಗವನ್ನು ಹೊತ್ತ ’ಬಾಹುಬಲಿ-ಹರ್ಕ್ಯುಲಿಸ್” ಕಲ್ಪನೆಗೇ ಕೊಡಬೇಕು ನೂರಕ್ಕೆ ನೂರು!
    ೨) ನಾನಂದಂತೆ ಪ್ರೇಮಮಯಿ ಸಾಗರರ ಕಾಫಿ ಪ್ರಸಂಗ ಮಧುರವಾಗಿದೆ, ರಿಫ್ರೆಷಿಂಗ್ ಅವರ ಕಾಫಿಯಂತೆ!
    ನಮ್ಮ ಕಾಲದ ಹಿಂದಿ ಹಾಡನ್ನು ನೆನಪಿಸಿತು. ಅವರ ಪತಿ ಹೀಗೂ ಹಾಡ ಬಹುದೇ?
    ”ತೂ ತೋ ಪ್ರೇಮಾ ಸಾಗರ್ ಹೈ
    ಮೆರೆ ಕಾಫೀ ಕೀ ಬೂಂದ್ ಕೆ ಪ್ಯಾಸೀ ಹೋ ತುಮ್
    ಲೌಟಾ ತೂನೇ ಕಪ್ ಅಗರ್
    ಲೌಟಾ ಭರ್ ಕೇ ದೂಂಗೇ ಕಾಫಿ ಕೆ ಗಾಗರ್ ಸೇ ಹಮ್!”
    (ಖಾಲಿ ಕಪ್ ವಾಪಸ್ ಕೊಟ್ಟರೆ ಲೋಟಾ ತುಂಬಿಸಿ ಕೊಡುವೆ ಡಬರಿಯಿಂದ)
    ನಿಮ್ಮ ದೋಣಿ ಸಾಗಲಿ ಪ್ರೇಮ ಸಾಗರದಲ್ಲಿ, ಕಾಫಿ ಪವರ್ ನಿಂದ!
    ಶ್ರೀವತ್ಸ ದೇಸಾಯಿ.

    Liked by 2 people

    • ಧನ್ಯವಾದಗಳು ದೇಸಾಯಿ ಅವರೇ. ಈ ಹಾಡಿನ ನಿಮ್ಮ ಕಲ್ಪನೆ ಸೊಗಸಾಗಿದೆ.

      -ಪ್ರೇಮ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.