ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಿಣಿ ಗೌಡ ಮತ್ತು ರಾಧಿಕಾ ಜೋಶಿ

ನಮಸ್ಕಾರ! ಬರ್ರಿ.. ಬರ್ರಿ… ಇಲ್ಲೆ ಒಳಗ ಬರ್ರಿ, ಅಡಿಗಿಮನ್ಯಾಗೇ ಬಂದ್ ಬಿಡ್ರಿ! ಇವತ್ತ ನಮ್ ಹೊಸ ಸಿರೀಸು, ‘ಅಡುಗೆ - ಅಡುಗೆಮನೆ' ಅನ್ನೋ ಹೆಸರಿಂದು, ಶುರು ಮಾಡೋಣ ಅಂತ …. ಏನಂತೀರಿ? ಅಡಿಗ್ಯಾಗ ಎಷ್ಟು ಥರ, ಎಷ್ಟು ರುಚಿ ಇರತಾವೋ ಅಷ್ಟೇ ವೆರೈಟೀವು ಅದಕ್ಕ ಸಂಬಂಧಪಟ್ಟಂಥ ಇನ್ಸಿಡೆಂಟ್ಸೂ ಇರತಾವ ಜೀವನದಾಗ, ಅಲ್ಲಾ? ಅವನ್ನೆಲ್ಲ ಬರದು ಕಳಸ್ರೀ ಅಂತ ಕೇಳಿದ್ದಕ್ಕ ಬಂದಿರೋ ಮೊದಲಿನ ಎರಡು ಲೇಖನಗಳು ಕೆಳಗವ. ದಾಕ್ಷಾಯಣಿ ಗೌಡ ಅವರು ತಮ್ಮ ಒಬ್ಬಟ್ಟಿನ ಒದ್ದಾಟದ ಬಗ್ಗೆ ಬರದರ, ರಾಧಿಕಾ ಜೋಶಿಯವರು ಒಂದ್ ಅವಾಂತರಗಳ ಲಿಸ್ಟೇ ಮಾಡ್ಯಾರ. ಓದಿ, ನಕ್ಕು ಮಜಾ ತೊಗೊಂಡು (ಅವರ ಖರ್ಚಿನಾಗ, ಐ ಮೀನ್ ಅಟ್ ದೇರ್ ಎಕ್ಸ್ಪೆನ್ಸ್) ನಿಮಗ ಏನನ್ನಿಸಿತು ಅದನ್ನ ಈ ಬ್ಲಾಗಿನ ಕೆಳಗ ಬರೀರಿ; ನಿಮ್ಮ ಅನಿಸಿಕೆಗಳ ಕೆಳಗ ನಿಮ್ಮ ಹೆಸರ ಹಾಕೋದು ಮಾತ್ರ ಮರೀಬ್ಯಾಡ್ರಿ ಮತ್ತ.. ಅಷ್ಟೇ ಅಲ್ಲ, ನಿಮ್ಮಲ್ಲೂ ಅಂಥ ಘಟನೆಗಳಿದ್ರ – ಹಾಸ್ಯನೇ ಇರ್ಲಿ, ಸೀರಿಯಸ್ಸೇ ಇರ್ಲಿ – ಬರದು ಸಂಪಾದಕರಿಗೆ ಕಳಸ್ರಿ. ಹಾಸ್ಯದ್ದೇ ಇದ್ರ, ನೀವೊಬ್ರೇ ನೆನೆಸಿಕೊಂಡು ನಗೋದಕ್ಕಿಂತ ಎಲ್ಲರನ್ನೂ ನಗಸ್ರಿ; ವಿಚಾರಮಂಥನಕ್ಕ ತಳ್ಳೋ ಅಂಥ ವಿಷಯ ಇದ್ದರ ಅದೂ ಒಳ್ಳೇದೇ. ಮತ್ತ್ಯಾಕ ಕಾಯೋದು, ಪೆನ್ನಿನ ಸೌಟೆತ್ತಿ ಶಬ್ದಗಳನ್ನ ಹದಕ್ಕ ಕಲಿಸಿ, ಕಾಗದದ ತವಾಕ್ಕ ಹುಯ್ದು, ಕಾಯ್ಕೊಂಡು ಕೂತಿರವ್ರಿಗೆ ಬಿಸಿ-ಬಿಸಿ ಲೇಖನ ಹಂಚರಿ! – ಎಲ್ಲೆನ್ ಗುಡೂರ್ (ಸಂ.)

ಒಬ್ಬಟ್ಟು- ಬಿಕ್ಕಟ್ಟು ಮತ್ತು ನಂಟುದಾಕ್ಷಾಯಣಿ ಗೌಡ

ಒಬ್ಬಟ್ಟು, ಹೋಳಿಗೆ ಇಂದಿಗೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಬಹು ಜನಪ್ರಿಯ ಸಿಹಿ ಅಡಿಗೆ.  “ಹೋಳಿಗೆ ಊಟ” ಕ್ಕೆ ಇಂದಿಗೂ  ಸಸ್ಯಾಹಾರಿಗಳ ಮನೆಗಳಲ್ಲಿ ವಿಶಿಷ್ಟ ಸ್ಥಾನವಿದೆ. ಕೆಲ ಧಾರ್ಮಿಕ ಹಬ್ಬಗಳಲ್ಲಿ (ಯುಗಾದಿ ಮತ್ತು ಗೌರಿಹಬ್ಬ)  ಈ ಸಿಹಿಯ ನೈವೇದ್ಯ ದೇವರಿಗೆ ಆಗಲೇಬೇಕು. ಸಿಹಿಗಳಲ್ಲಿ ಇದಕ್ಕೆ ರಾಜಯೋಗ್ಯವಾದ ಸ್ಥಾನವಿದೆಯೆನ್ನಬಹುದು. ಪೂರಣ ಪೋಳಿ ಯೆಂದು ಸಹ ಇದನ್ನು ಕರೆಯಲಾಗುತ್ತದೆ. ಈಗಿನ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹೋಳಿಗೆಗಳು ಬಂದಿದ್ದರೂ, ಬೇಳೆ-ಬೆಲ್ಲದ ಹೋಳಿಗೆಯ ತಯಾರಿ ಸಂಪ್ರದಾಯ ಮತ್ತು ಜನಪ್ರಿಯ ಸಹ. ತುಪ್ಪ, ಮಾವಿನ ಹಣ್ಣಿನ ಸೀಕರಣೆ, ಹಸಿ ತೆಂಗಿನಕಾಯಿಯ ಹಾಲು, ಬಾಳೆಹಣ್ಣಿನ ಜೊತೆಗೆ ಈ ಸಿಹಿಯನ್ನು ತಿನ್ನುವುದನ್ನು ನಾನು ನೋಡಿದ್ದೇನೆ.  ಈ ಒಬ್ಬಟ್ಟು ಎನ್ನುವ ಸಿಹಿಅಡಿಗೆ ನನ್ನ ಜೀವನದ ವಿವಿಧ ಹಂತಗಳಲ್ಲಿ ಭಾಗವಹಿಸಿ ತನ್ನದೇ ಆದ ಸಂಬಂಧವನ್ನು ಕಲ್ಪಿಸಿಕೊಂಡಿದೆ.

ಬಾಲ್ಯದಲ್ಲಿ ಸಿಹಿ ಅಡಿಗೆ ಎಂದರೆ ಸಾಕು, ನನ್ನ ಮುಖ ಕಹಿಯಾಗುತ್ತಿತ್ತು. ನಾನು, ನನ್ನ ಅಕ್ಕ ಇಬ್ಬರೂ ಯಾವುದೇ ರೀತಿಯ ಸಿಹಿಯನ್ನು ಬಾಯಿಯಲ್ಲಿಡಲು ಸಹ ನಿರಾಕರಿಸುತ್ತಿದ್ದವು. ನನ್ನ ತಾಯಿ ನಮಗಿಷ್ಟವಾದ  ಖಾರದ ತಿಂಡಿಗಳನ್ನು ಏನೇ ಸಿಹಿ ಅಡಿಗೆ ಮಾಡಲಿ, ತಪ್ಪದೇ ತಯಾರಿಸುತ್ತಿದ್ದರು. ನಮ್ಮ ಮನೆಯಲ್ಲಿ ಇದು ಅಸಹಜ ವಿಷಯವಾಗಿರಲಿಲ್ಲ.

ನನ್ನ ಕಹಿಸಿಹಿಯ ಪ್ರೇಮದ ಬಗ್ಗೆ ಮದುವೆಗೆ ಮುಂಚೆಯ ನನ್ನ ಪತಿಗೆ ತಿಳಿದಿದ್ದು, ಸಿಹಿ ಎಂದರೆ ಬಾಯಿಬಿಡುವ ಆತನಿಗೆ ಇದೊಂದು ರೀತಿಯ ಪ್ರಯೋಜನಕಾರಿ ಗುಣವಾಗಿತ್ತು. ಮದುವೆಯ ನಂತರ ಮೊದಲ ಹಬ್ಬಕ್ಕೆ ಅತ್ತೆ ಮನೆಗೆ ಹೋದಾಗ ಹೊಸ ಸೊಸೆ ಬಂದಳೆಂದು “ಹೋಳಿಗೆ ಊಟ” ತಯಾರಾಗಿತ್ತು. ಮೇಜಿನ ಸುತ್ತ ಊಟಕ್ಕೆ ಕುಳಿತಾಗ ಎರಡು ಬಿಸಿ ಒಬ್ಬಟ್ಟು, ತುಪ್ಪ ತಟ್ಟೆಯಲ್ಲಿಟ್ಟು ನನ್ನ ಅತ್ತೆ ನನ್ನ ಮುಂದಿಟ್ಟಾಗ ನಾನು ಹೌಹಾರಿಬಿಟ್ಟೆ. ನನ್ನ ತಟ್ಟೆಯಲ್ಲಿದ್ದುದನ್ನು ತೆಗೆದು ಪತಿಯ ತಟ್ಟೆಗೆ ವರ್ಗಾಯಿಸೋಣವೆಂದರೆ ಎಲ್ಲರ ಕಣ್ಣೂ ನನ್ನ ಮೇಲೆಯೆ ಮತ್ತು ಆತ ನನ್ನ ಪಕ್ಕದಲ್ಲೇ ಬೇರೆ ಕೂತಿಲ್ಲ. ಬರೀ ಪಲ್ಯ, ಕೋಸಂಬರಿಗಳನ್ನು ತಿನ್ನೋಣವೆಂದರೆ ಅವು ಬೇರೆ, ಸಿಹಿಯನ್ನು ಸ್ಪರ್ಷಿಸಿ ಬಿಟ್ಟಿದ್ದವು. ಮೆಲ್ಲಗೆ “ಅತ್ತೆ ಈ ತಟ್ಟೆ ಬೇರೆಯರಿಗೆ ಕೊಡಿ, ಊಟದ ನಂತರ ಅರ್ಧ ಒಬ್ಬಟ್ಟು ತಿನ್ನುತ್ತೇನೆ” ಎಂದೆ.  ಮೇಜಿನ ಸುತ್ತ ಸಿಹಿಯೆಂದರೆ ಬಾಯಿಬಿಡುವ, ಅತ್ತೆಯ ಸಂಬಂಧಿಕರೆಲ್ಲ ನನ್ನನ್ನು ಒಂದು ವಿಚಿತ್ರ ಪ್ರಾಣಿಯ ತರಹ ನೋಡತೊಡಗಿದರು. ವ್ಯಂಗ್ಯದ ಮಾತಿನಲ್ಲಿ ಪರಿಣಿತಿ ಹೊಂದಿದ್ದ ನನ್ನ ಪತಿಯ ಅಜ್ಜಿ “ಹೋಳಿಗೆ ತಿನ್ನುವುದಿಲ್ಲವೆ? ಇಂಥಾ ವಿಚಿತ್ರ ಯಾವತ್ತೂ ನೋಡಿರಲಿಲ್ಲ ಬಿಡವ್ವಾ” ಎನ್ನುವುದೆ?

“ನನ್ನ ಸೊಸೆಯನ್ನು ನೀನು ಏನೂ ಅನ್ನಕೊಡದು” ಎಂದು ನನ್ನ ಅತ್ತೆ ಅವರ ತಾಯಿಯನ್ನು ತರಾಟೆಗೆ ತೆಗೆದುಕೊಂಡರು.  ಒಂದು ರೀತಿಯ ಜಗಳದ ವಾತಾವರಣ ಕ್ಷಣದಲ್ಲಿ ಸೃಷ್ಟಿಯಾಗಿ ಹೋಯಿತು. ಎಲ್ಲಾ ಈ ಒಬ್ಬಟ್ಟಿನ ತಪ್ಪು ತಾನೆ?

ನಾನು “ಹೋಳಿಗೆಯ ಸಾರು ಸಹ ನನಗೆ ಸೇರುವುದಿಲ್ಲ” ಎಂದು ಹೇಳುವುದು ಹೇಗೆ ಎನ್ನುವ ಬಿಕ್ಕಟ್ಟಿನ ಕಗ್ಗಟ್ಟಿನಲ್ಲಿ ಕಳೆದು ಹೋದೆ. ನನ್ನ ಮುಂದೆ ಬೇರೆ ತಟ್ಟೆ ಬಂತು. ಸಿಹಿ ತಿನ್ನುವ ಶಿಕ್ಷೆಯಿಂದ ನಾನು ಅಂದು ಪಾರಾದರೂ, ತಪ್ಪಿತಸ್ಥ ಮನೋಭಾವನೆ ಇಡೀ ದಿನ ನನ್ನನ್ನು ಕಾಡಿತು.

ವರ್ಷಗಳು ಕಳೆದಂತೆ ನನ್ನ ಪತಿಯ ಕುಟುಂಬದವರಷ್ಟೇ ಅಲ್ಲ, ನನ್ನ ಸ್ನೇಹಿತರೂ ಸಹ ನನಗೆ ಸಿಹಿ ತಿನ್ನಲು ಬಲವಂತ ಮಾಡುವುದಿಲ್ಲ. ಡಯಾಬಿಟೀಸ್ ನ ಭಯದಿಂದ ನನ್ನ ತಟ್ಟೆಯಿಂದ ಸಿಹಿತಿಂಡಿಯನ್ನು ವರ್ಗಾಯಿಸುವುದನ್ನು ನನ್ನ ಪತಿಯೂ ಒಪ್ಪುವುದಿಲ್ಲ. ಈಗೆಲ್ಲ ಅಂದರೆ ವಯಸ್ಸಾದಂತೆ “ಸಿಹಿ ಬೇಡ” ಎಂದರೆ  “ಸಕ್ಕರೆ ಕಾಯಿಲೆಯೆ?” ಎನ್ನುವ ಸಂತಾಪ ತುಂಬಿದ ಪ್ರಶ್ನೆ ತಕ್ಷಣ ಎದುರಾಗುತ್ತದೆ.  ಉತ್ತರವಾಗಿ ಇಲ್ಲವೆಂದು ತಲೆಯಾಡಿಸಿದರೂ ಬಾಯಲ್ಲಿ “ಇನ್ನೂ ಬಂದಿಲ್ಲ” ಅನ್ನುವ ತುಂಟ ಉತ್ತರ ಕೆಲವೊಮ್ಮೆ ಯಾಂತ್ರಿಕವಾಗಿ ಬಾಯಿಂದ ಬಂದುಬಿಡುತ್ತದೆ. ಇದರಿಂದಾದ ಒಂದು ಅನುಕೂಲತೆ ಅಥವಾ ಅನಾನುಕೂಲತೆ ಅಂದರೆ, ನನಗೆ ಪ್ರಿಯವಾದ ಕರಿದ ಖಾರದ ತಿಂಡಿಗಳು ಎಲ್ಲಾ ಕಡೆ ಹೆಚ್ಚುಪ್ರಮಾಣದಲ್ಲಿ ದೊರೆಯುತ್ತದೆ.

ಒಬ್ಬಟ್ಟಿನ ಜೊತೆ ನಂಟು ಬಲಿತಿದ್ದು ನಾನು ತಾಯಿಯಾದ ಮೇಲೆ. ಚಾಕೋಲೇಟ್ ಸೇರಿದ ಎಲ್ಲಾ ಪಾಶ್ಚಿಮಾತ್ಯ ಸಿಹಿಗಳನ್ನೆಲ್ಲ ಆನಂದದಿಂದ ಆಸ್ವಾದಿಸುವ ನನ್ನ ಮಗಳು ತಿನ್ನುವ ನಮ್ಮ ನಾಡಿನ ಒಂದೇ ಸಿಹಿಯೆಂದರೆ ಒಬ್ಬಟ್ಟು. ಎರಡು ವರ್ಷದ ನನ್ನ ಮಗಳು, ಒಂದೇ ಬಾರಿಗೆ ಎರಡು ಒಬ್ಬಟ್ಟುಗಳನ್ನು ಕಬಳಿಸಿದಾಗ `ಇವಳು ನಿಜವಾಗಿಯೂ ನನ್ನ ಮಗಳೇ` ಎನ್ನುವ ಅನುಮಾನ ನನಗೆ ಬಾರದಿರಲಿಲ್ಲ. ನಾನು ಮೊದಲ ಬಾರಿಗೆ ಇಂಗ್ಲೆಂಡಿನಿಂದ ನನ್ನ ಮಗಳ ಜೊತೆ ಬೆಂಗಳೂರಿಗೆ ಕಾಲಿಟ್ಟಾಗ, ಮೊಮ್ಮಗಳು ತಿನ್ನುತ್ತಾಳೆಂದು  ನನ್ನ ಅಮ್ಮ ಒಬ್ಬಟ್ಟು ಮಾಡಿ ಡಬ್ಬಿಯಲ್ಲಿ ವಿಮಾನ ನಿಲ್ದಾಣಕ್ಕೆ  ತಂದದ್ದು ಸಿಹಿ, ಸಿಹಿ, ಸವಿನೆನಪು.

ನಂತರದ ವರ್ಷಗಳಲ್ಲಿ ನನ್ನ ಕುಟುಂಬದವರಿಗೆ ಅತಿಪ್ರಿಯವೆಂದು ಒಬ್ಬಟ್ಟು ಮಾಡುವುದನ್ನು ಚೆನ್ನಾಗಿ ಕಲಿತಿದ್ದೇನೆ, ಇದು ನನ್ನ ಸ್ಪೆಷಾಲಿಟಿ  ಸಿಹಿ ಅಡಿಗೆ ಎಂದರೆ ನಿಮಗೆ ಮಾತ್ರವಲ್ಲ ನನಗೂ ಆಶ್ಚರ್ಯವಾಗುತ್ತದೆ. ವಯಸ್ಸಾದಂತೆ ಅರ್ಧ ಹೋಳಿಗೆ ತಿನ್ನುವುದನ್ನು ಸಹ ಕಲಿತು ಬಿಟ್ಟಿದ್ದೇನೆ. ಸಮಯಕ್ಕೆ, ಸ್ಥಳಕ್ಕೆ ತಕ್ಕದಾಗಿ ನಮ್ಮ ಅಡಿಗೆಯೂ, ರುಚಿಯೂ ಬದಲಾಗುವುದು ಒಂದು ರೀತಿಯ ಸೋಜಿಗವೆ ತಾನೆ? ಪ್ರಿಯ ಸ್ನೇಹಿತರೆ, ಸಿಹಿಯನ್ನು ಆಸ್ವಾದಿಸುವುದು ಪ್ರಪಂಚದ ಸಹಜ ನಡವಳಿಕೆ, ನನ್ನ ಅಸಹಜ ನಡೆಯಿಂದ ನಿಮ್ಮಲ್ಲಿ ನನ್ನ ಬಗ್ಗೆ ಅಸಮಧಾನ ಮೂಡದಿರಲಿ, ಸ್ವಭಾವದಿಂದ ನಾನು ಈ ಅಂಗ್ಲರು ಹೇಳುವಂತೆ sweet enough.

(ಹಾಸ್ಯವೆಂದು ಮನ್ನಣೆಯಿರಲಿ)

– ದಾಕ್ಷಾಯಿಣಿ

****************************************************************************

ಅನನುಭವಿಯ ಅಡಿಗೆ ಪ್ರಯೋಗಗಳು – ರಾಧಿಕಾ ಜೋಶಿ

ಅಡಿಗಿ, ಅಡಿಗಿಮನ್ಯಾಗ ಏನಾದರೂ ಪ್ರಯೋಗ, ಪ್ರಯತ್ನಗಳು ಸದಾ ನಡೀತಾನೇ ಇರ್ತಾವ. ಅಮ್ಮನ ಅಪ್ಪನ ನೋಡಿ ಕಲಿತು ಅಡಿಗೆ ಮಾಡೋದು ಶುರು ಮಾಡ್ತೀವಿ.  ಸಂಪೂರ್ಣವಾಗಿ ನಮ್ಮ್ಯಾಲ್ ಜವಾಬ್ದಾರಿ ಬಿದ್ದಾಗ ನಾವು ಕೆಲವೊಮ್ಮೆ overconfidence ನಿಂದ ಅಡಿಗಿ ಮಾಡ್ಲಿಕ್ಕೆ ಹೋಗಿ ಮುಖಭಂಗ ಆಗಿದ್ದಿದೆ.  ಈ ದೇಶಕ್ಕೆ ಬಂದ ಮೇಲೆ ಆದ ನನ್ನ ಒಂದೆರಡು ಅನುಭವಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಛಾ!
ಎಲ್ಲಿಂದ ಬಂದ್ರೂ ಪ್ರಥಮ ನಮಗ ಛಾ ಬೇಕ್ ನೋಡ್ರಿ.  ಏರ್ಪೋರ್ಟಿಂದ ಮನಿಗೆ ಬಂದು ಛಾ ಮಾಡೋಣ ಅಂತ ಹೋದ್ರ… electric hot plate ವಲಿ.  ಎಲ್ಲೋ ನೋಡಿದ್ದೆ, ಆದ್ರ ಎಂದೂ ಅಡಿಗಿ ಮಾಡಿದ್ದಿಲ್ಲ.  ಆತ್… ಇನ್ ಅದ ಪಜೀತಿ ಅಂತ ಒಂದರ ಮ್ಯಾಲೆ ನೀರಿಟ್ಟೆ ಮತ್ತೊಂದರ ಮ್ಯಾಲೆ ಹಾಲು.  ಈಗ ಮರಳ್ತದ … ಆಗ್ ಮರಳ್ತದ … ಸಕ್ಕರಿ ಛಾಪುಡಿ ಹಾಕೋಣಂತ ನಾನು ಕಾದೆ.  ನೀರು ಕಾದು ಕಡೀಕೂ ಛಾ ಆತ!  ಈಕಡೆ ಹಾಲು ಇನ್ನೂ ಕುದಿಬೇಕಿತ್ತು.  ನನಗೇನ್ ಗೊತ್ತ, ಉಕ್ಕಿ ಬಂದ್ಕೂಡ್ಲೇ ವಲಿ ಆರ್ಸಿದೆ (ಗ್ಯಾಸ್ ವಲಿಗೆ ಮಾಡೊಹಂಗ). ಆದರೂ ಏನದು ಪ್ರವಾಹಧಾಂಗ ಉಕ್ಕಿ ಹರಿದು ಪೂರ್ತಿ ವಲಿಯೆಲ್ಲ ಕ್ಷೀರ ಸಾಗರ.  ಅಷ್ಟೇ ಅಲ್ಲ, ಆ ಶಾಖಕ್ಕ ಪಟ್ಟನೆ ಹಾಲೆಲ್ಲ ಹೊತ್ತ್ಹೋತು.   ಆ ಕಡೆಯಿಂದ ‘ಅಯ್ಯೋ ಇದರ ಮ್ಯಾಲೆ ಅಡಗಿ ಸ್ವಲ್ಪು ನೋಡ್ಕೊಂಡು ಮಾಡ್ಬೇಕs’ ಅಂತ ಆಕಾಶವಾಣಿ ಬಂತು. ಕಡಿಕೆ ಡಿಕಾಕ್ಷನ್ಗೆ ಹಸಿ ಹಾಲ್ ಹಾಕಿ ಛಾ ಕತಿ ಮುಗಿಸಿದ್ದಾಯ್ತು.  ನಮಗ ಕುದ್ದಿದ್ ಹಾಲಿನ ಛಾನೇ  ರುಚಿ.  ಇಲ್ಲೇ  ಮಂದಿ ಹಾಲು ಕಾಯಿಸುದಿಲ್ಲ ಅಂತ ಆಮ್ಯಾಲೆ ತಿಳೀತು! ಮನಿಗೆ ಬಂದೋರೆಲ್ಲಾರ ಮುಂದ ಇಂತ ಪ್ರಸಂಗ ಸದಾ ಆಗ್ತಿತ್ತು, ಅದಕ್ಕ ಅವರೆಲ್ಲ ನೀವ್ ಹಾಲ್ ಯಾಕ್ ಕಾಯ್ಸ್ತೀರಿ ಹಸಿದೇ ಹಾಕ್ರಿ ಅನ್ನೋರು, ಆದ್ರ ನಂಗ್ಯಾಕೋ ಛೊಲೊ ಅನ್ಸೋದಿಲ್ಲ.  ೨ ವರ್ಷ ಹಾಟ್ ಪ್ಲೇಟ್ ವಲಿ ಮ್ಯಾಲೆ ಅಡಿಗೆ ಮಾಡಿದ್ರೂ, ಹಾಲ್ ಇಟ್ಟಾಗ ಮೈಯಲ್ಲ ಕಣ್ಣಾಗಿ ಇಕ್ಕಳ ಕೈಯಾಗ ಹಿಡಿದು ಉಕ್ಕಿ ಬಂದ್ ಕೂಡ್ಲೇ ಪಟ್ಟ್ನ ಭಾಂಡಿ ಬಾಜೂಕ ಇಡೋದು ರೂಡಿ ಮಾಡ್ಕೊಂಡೆ.


ಒಗ್ಗರಣೆ
ಮ್ಯಾಲೆ ಹಾಲಿನ ಕಥಿ ಕೇಳಿದ್ಮ್ಯಾಲೆ ಒಗ್ಗರಣಿ ಕಥಿಯು ನೀವೆಲ್ಲ ಊಹಿಸಿರಬಹುದು!!  ಒಗ್ಗರಣಿ?!!  ಅದರಾಗೇನದ? ಒನ್ ಚಮಚ ಎಣ್ಣಿ, ಸ್ವಲ್ಪ ಸಾಸಿವಿ, ಜೀರಗಿ, ಕರಿಬೇವು, ಚೂರ್ ಇಂಗ್ … ಮುಗಿತು, ಅಷ್ಟೇ!?
ನಾನು ಹಂಗ ಅನ್ಕೊಂಡಿದ್ದೆ, ಲಂಡನ್ನನಿಗೆ ಬರೋ ತನಕ.  ಇಲ್ಲೂ ನಮ್ಮೂರ್ನಂಗ ಗ್ಯಾಸ್ ಮ್ಯಾಲೆ ಅಡಗಿ ಮಾಡಿಧಾಂಗ ಸಸಾರ ಅಂದುಕೊಂಡು ಶುರು ಮಾಡಿದೆ. ಸಾರಿಗೆ, ಪಲ್ಯಾಕ್ಕ ಒಂಚೂರು ಒಗ್ಗರಣಿ ಹೊತ್ತಿದ್ರ ನಡೀತದ ನೋಡ್ರಿ ಹೆಂಗೋ adjust ಮಾಡ್ಕೋಬಹುದು; ಆದ್ರ ಈ ಹಚ್ಚಿದ ಅವಲಕ್ಕಿಗೇನರ ಒಗ್ಗರಣಿ ಹೊತ್ತೋ ಮುಗಿತು.  ಅಷ್ಟೇ ಅಲ್ಲ, ಆ ಅವಲಕ್ಕಿಯೊಳಗಿನ ಶೇಂಗಾ ನೋಡ್ರಿ ಬಂಗಾರ ಇದ್ಧಾಂಗ, ಹೊಳಿತಿರಬೇಕು ಆದ್ರ ಹೊತ್ತಬಾರ್ದು.  ಈ ಒಗ್ಗರಣಿ ಕಾಲಾಗ ಸಾಕಾಗಿತ್ತು. ವಲಿ ಲಗೂ ಆರಿಸಿದ್ರ ಕಾಳು ಇನ್ನೂ ಹಸೀನೇ ಉಳಿತಾವ; ಸ್ವಲ್ಪ ಬಿಟ್ಟನೋ ಹೊತ್ತ್, ಖರ್ರಗಾಗಿ ಕಡೀಕೆ ಪೂರ್ತಿ ಅವಲಕ್ಕಿ ಮಜಾನೇ ಹೋಗಿಬಿಡ್ತದ.  ಪ್ರತಿ ಮುಕ್ಕಿಗೂ ‘ಹೊತ್ಸಿದಿ… ಹೊತ್ಸಿದಿ…’ ಅಂತ ಅನ್ನಿಸ್ಕೊಬೇಕು ಮತ್ತ.  ಪೂರ್ತಿ ಅವಲಕ್ಕಿ ಕೆಡಸೋದ್ಕಿಂತ ಶೇಂಗಾನೇ ತಿಪ್ಪಿಗೆ ಚೆಲ್ಲಿದ್ರಾತು ಅಂತ ಎಷ್ಟ್ ಸಲೆ ದಂಡ ಮಾಡೀನಿ!  ಒಗ್ಗರಣಿ ಮಾಡೋದು ಒಂದ್ ಕಲಾ ಅಂತ ತಿಳ್ಕೊಂಡೆ ನೋಡ್ರಿ.

ಅಕ್ಕಿಯ ವಿವಿಧತೆ
ನನ್ನ ಅಪ್ಪನ ಜೊತೆ ಅಕ್ಕಿ ಅಂಗಡಿಗೆ ಹೋಗಿ ಅಕ್ಕಿ ತಂದದ್ದು ಸುಮಾರು ಬಾರಿ, ಆದರೆ ಒಮ್ಮೆಯೂ ಸೂಕ್ಷ್ಮವಾಗಿ ಅವುಗಳ ಜಾತಿ, ಆಕಾರ, ಬಣ್ಣ ನೋಡಿ ಗುರುತಿಸಿಲ್ಲ.  ನನಗೆ ಗೊತ್ತಿದುದ್ದು ಸೋನಾ ಮಸೂರಿ ಮತ್ತು ಬಾಸ್ಮತಿ ಅಷ್ಟೇ.  ರೇಷನ್ ಅಕ್ಕಿ ಅಂತ ಬರ್ತಿತ್ತು, ಅದನ್ನು ದೋಸೆ ಇಡ್ಲಿಗೆ ಉಪಯೋಗಿಸುತ್ತಿದ್ದರು.  ಈಗ ಲಂಡನ್ನಿಗೆ ಬಂದ ಮೇಲೆ ಮನೆಯ ಹತ್ತಿರ ಇಂಡಿಯನ್ ಗ್ರೋಸರಿ ಸ್ಟೋರ್ಸ್ ಇರಲಿಲ್ಲ.  ಹಾಗಾಗಿ Asdaದಲ್ಲಿ ಯಾವ್ ಅಕ್ಕಿ ಸಿಕ್ತೋ ಅದನ್ನೇ ತಂದು ದೋಸೆಗೆ ನೆನೆ ಹಾಕಿದೆ. ನನ್ನ ಪರಮಾಶ್ಚರ್ಯಕ್ಕೆ ಡಿಸೆಂಬರ್ ಚಳಿಯೊಳಗೂ ಹಿಟ್ಟು ಉಕ್ಕಿ ಉಕ್ಕಿ ಮರುದಿನಕ್ಕೆ ತಯಾರು ಆಯಿತು.  ನಾನು ತುಂಬಾ ಜಂಬದಿಂದ ನನ್ನ ಪತಿಗೆ, ‘ನಿಮ್ಮ ಸ್ನೇಹಿತರನ್ನ ಸಂಜಿಗೆ ಛಾಕ್ಕ ಕರೀರಿ; ಮಸಾಲಾ ದೋಸೆ ಮಾಡ್ತೀನಿ’ ಅಂತ.  ಪಲ್ಯ, ಚಟ್ನಿ ಎಲ್ಲ ತಯ್ಯಾರಿ ಆಯಿತು.  ಮಂದಿನೂ ಬಂದ್ರು.  ಒಂದು ಸೌಟು ತೊಗೊಂಡು ಕಾದ ಹಂಚಿನ ಮೇಲೆ ಹಾಕಕ್ಕೆ ಹೋಗ್ತಿನಿ, ಹಿಟ್ಟು ಹಂಚಿಗೆ ಅಂಟ್ ತಾನೇ ಇಲ್ಲ!!  ತುಂಬಾ ಮೃದುವಾಗಿ ಮುದ್ದೆ ಮುದ್ದೆಯಾಗಿ ಒಂದು ದೊಡ್ಡ ಹಿಟ್ಟಿನ ಚಂಡಿನಂತೆ ಸೌಟಿಗೆ ಅಂಟಿಕೊಂಡು ಬಂತು.  ಅಯ್ಯೋ ಇದೇನು ಗ್ರಹಚಾರ!  ಹಂಚು ಬದಲಿಸಿದೆ, ಎಣ್ಣೆ ಜಾಸ್ತಿ ಹಾಕಿದೆ – ಏನಾದ್ರೂ ದೋಸೆ ಹಂಚಿಗೆ ಅಂಟಿ ತಿರುವಲಿಕ್ಕ್ ಬರ್ಲೆ ಇಲ್ಲ.  ಏನೋ, ಮೊದಲ ಸಲಾನೂ ಇಷ್ಟು ಕೆಟ್ಟದಾಗಿ ಬಂದಿರ್ಲಿಲ್ಲ ಅಂತ ಅಳುಬರೋದೊಂದೇ ಬಾಕಿ!  ಪಾಪ, ಬಂದ ಮಂದಿ ಇರ್ಲಿ ಬಿಡಿ ಅಂದು, ಒಬ್ಬ ಸ್ನೇಹಿತೆ ಏನೋ ಅಕ್ಕಿ ಹಿಟ್ಟು ಮೈದಾ ಹಿಟ್ಟು ಸೇರಿಸಿ ಕೊನೆಗೆ ದೋಸೆ ಆಕಾರಕ್ಕೆ ತಂದರು.  ಅವತ್ತಿನ ಮಸಾಲೆ ದೋಸೆ ಒಂದು ಕಥೆಯೇ  ಆಯಿತು.  ಈಗಲೂ ಆ ಸ್ನೇಹಿತೆ ನೆನಪಿಸಿ ನಗುತ್ತಾಳೆ.  ಅದು ಯಾವ ಅಕ್ಕಿ ಆಗಿರಬಹುದೆಂದು ಊಹಿಸುತ್ತಿದೀರ?  ಅದೇ … ಲಾಂಗ್ ಗ್ರೇನ್ boiled ಬ್ರೌನ್ ರೈಸ್… ಮತ್ತೆ ಅದರ ತಂಟೆಗೆ ಹೋಗಲಿಲ್ಲ.
ಆಮೇಲೆ ಅಕ್ಕಿಯ ವೆರೈಟಿ ಮೇಲೆ ಒಂದು ಅಧ್ಯಯನ ಮಾಡಿ ಎಚ್ಚರಿಕೆ ಇಂದ ಅಕ್ಕಿ ಖರೀದಿ ಮಾಡೋದಾಯ್ತು.  ಮಂದಿಯನ್ನು ಕರಿಯುವ ಮುನ್ನ ಹಿಟ್ಟನ್ನ ಒಂದ್ ಸಲ ಚೆಕ್ ಮಾಡಿ, ದೋಸೆ ಆಗ್ತದೋ ಇಲ್ಲೋ ಅಂತ ನೋಡಿ ಕರೀತೀನಿ.

– ರಾಧಿಕಾ ಜೋಶಿ

*****************************************************************

11 thoughts on “ಅಡುಗೆ – ಅಡುಗೆಮನೆ ಸರಣಿ: ದಾಕ್ಷಾಯಿಣಿ ಗೌಡ ಮತ್ತು ರಾಧಿಕಾ ಜೋಶಿ

  1. ದಾಕ್ಷಾಯಣಿಯವರ ಮತ್ತು ರಾಧಿಕಾ ಅವರ ಪಾಕಶಾಸ್ತ್ರದ ಕಲಿಕೆಯ ಆರಂಭದ ಪರದಾಟ ಕೇಳಿ ತುಂಬಾ ನಗೆ ಬಂತು 👌👌
    ಧನ್ಯವಾದಗಳು ಹೊಸ ವರ್ಷ ಮನಸು ಬಿಚ್ಚಿ ನಗೆಸಿದ ಈ ಎರಡು ಲೇಖನಗಳನ್ನು ಹಂಚಿಕೊಂಡಿದ್ದಕ್ಕೆ.

    ಇಂಜಿನಿಯರಿಂಗ್ನಲ್ಲಿ ೪ ವರ್ಷ ಹೊಸ್ಟೇಲ್ ಊಟದಿಂದ ಹೆದರಿದ ನನ್ನ ಜೀವಕ್ಕೆ ಆಸರೆಯಾಗಿ ಬಂದಿದ್ದು ಮ್ಯಾಗಿ!
    ಓದು ಮುಗಿಸಿ ಮನೆಗೆ ಬಂದ ನಾನು ಮೊದಲು ಮಾಡಿದ್ದು ಅಮ್ಮನ ಹತ್ತಿರ ಸ್ವಲ್ಪ ಅಡುಗೆ ಕಲಿತಿದ್ದು. ಸ್ವಲ್ಪ ದಿನದಲ್ಲಿ ಇನ್ಫೋಸಿಸ್ ಕಂಪನಿ ಸೇರಿದ್ದ ನನಗೆ ಕೇವಲ ನನ್ನ ಕಂಪೂಟರ್ ಪ್ರೋಗ್ರಾಮಿಂಗ್ ಅಲ್ಲದೇ ಅಲ್ಲಿಯ ಫುಡ್ ಕೋರ್ಟಗಳು(ಮಾರು ಮಾರಿಗೂ ಕರ್ನಾಟಕದ ವಿವಿಧ ಭಾಗದ ಅಡುಬಗೆ ಇರುವ ಫುಡ್ ಕೋರ್ಟಗಳನ್ನು ಇನ್ಫೋಸಿಸ್ ಕ್ಯಾಂಪಸ್ನಲ್ಲಿ ನೋಡಬಹುದು) ಅಡುಗೆಯಲ್ಲೂ ಆಸಕ್ತಿಯನ್ನು ಹುಟ್ಟಿಸಿದ್ದವು. ಹಾಗಾಗಿ ನನ್ನ ಅಮ್ಮ ಮತ್ತು ಇನ್ಫೋಸಿಸ್ ಗೆ ನಾನು ಜೀವನ ಪರ್ಯಂತ ಚಿರಋಣಿ 😊

    Like

  2. ಅನಿವಾಸಿ ಮಿತ್ರರೇ!!!! ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
    ಹೊಸ ವರ್ಷದ starter ತರಹ ಇತ್ತು ದಾಕ್ಷಾಯಿಣಿ ಹಾಗೂ ರಾಧಿಕ ಇಬ್ಬರ ಲೇಖನ….👏👏👏👏👏👏👏
    ದಾಕ್ಷಯಿಣಿ ಅವರ sweets strictly prohibited ಆದ್ರೂ ಅತ್ತೆ ಮನೆಯಲ್ಲಿ ಪರದಾಡಿದ ವ್ಯಥೆಯ ಕಥೆ ಹಾಗೂ ರಾಧಿಕ ಅವರ ದ್ವಾಸಿ, ಛಾ ಪ್ರಕರಣಗಳು ಹಾಸ್ಯಮಯವಾಗಿದ್ವು!!!!😉😉😉😉
    ಏಕೆಂದರೆ ಯು.ಕೆ ಬಂದ ಹೊಸದರಲ್ಲಿ kettle ನಲ್ಲಿ ಛಾ ಮಾಡೋದಕ್ಕೆ ಬರ್ತಿರಲಿಲ್ಲ.
    -Saವಿ

    Like

  3. ಪ್ರಿಯ ಅನಿವಾಸಿ ಮಿತ್ರರೆ,
    ನನ್ನ ಸಣ್ಣ ಲೇಖನವನು ಓದಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.
    ಗೌರಿಯವರೇ ‘”ವಿಚಿತ್ರ ಆದರೂ ನಿಜ ” ಎನ್ನುವ ಗುಂಪಿಗೆ ಈಗ ಅರ್ಧ ಉಪ್ಪಿನಕಾಯಿ ತಿನ್ನುವ ದೇಸಾಯಿಯವರನ್ನೂ ಸೇರಿ ಸಬಹುದಲ್ಲವೆ?😃
    ರಾಮ್, ನನ್ನ ಅತ್ತೆಯವರು ತನ್ನ ಹತ್ತಿರದವರನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿ ನಿಪುಣರಾಗಿದ್ದರು ಮತ್ತು ಅದಕ್ಕಾಗಿ ಯಾವ ರೀತಿಯ ತ್ಯಾಗವನ್ನು ಸಹ ಮಾಡಲು ಸಿದ್ದರಾಗಿದ್ದರು.
    ಹೋಳಿಗೆ ಸಾರಿಗೆ ಒಂದು ರೀತಿಯ ಸಿಹಿಯ ರುಚಿಯಿರುತ್ತಾದಲ್ಲವೆ?😔
    ಇಂಗ್ಲೆಂಡ್ ಗೆ ಬಂದು ತಣ್ಣನೆಯ ಸ್ಯಾಂಡ್ ವಿಚ್ ಕಡಿದಾಗ, ನನ್ನ ಆಹಾರದ ಬಗೆಗಿನ ಹಠಗಳೆಲ್ಲ ತಣ್ಣಗೆ ಮೂಲೆ ಸೇರಿದಂತೆನಿಸಿತು.
    ರಾಧಿಕಾ, ನಿಮ್ಮ ಭಾಷೆಯ ಸೊಗಡು, ಮೈದಾ ಹಿಟ್ಟು ಬೇರೆತ ನಿಮ್ಮ ದೋಸೆಯನ್ನ ಘಮ್ ಎನಿಸಿ, ಬಾಯಲ್ಲಿ ನೀರೂರಿಸಿತು
    ಲೇಖಕಕ ಮತ್ತು ಲೇಖಕಕಿ ಇಬ್ಬರಿಂದಲೂ ಮತ್ತಷ್ಟು ಅನುಭವಗಳ ಹಂಚಿಕೆಯಾಗಾಲಿ
    ದಾಕ್ಷಾಯಿನಿ

    Like

  4. ಅಂತೂ ವರ್ಷದ ಕೊನೆಗೆ ಶುರುವಾಗಿದೆ ಈ ಸರಣಿ, ಸಂಪಾದಕರ ಉಪ್ಪು-ಕೋಸಂಬರಿ-ಪಾಯಸದ ಪೀಠಿಕೆಯಿಂದ!
    ಫರ್ಸ್ಟ್ ಸರ್ವಿಂಗ್ ದಾಕ್ಷಾಯಿಣಿಯವರ (ಅವರಿಗೆ ಈಗ ಅರ್ಧವೇ ಹಿಡಿಸುವ) ಒಬ್ಬಟ್ಟಿನ ಸಿಹಿ! ಒಬ್ಬೊಬ್ಬರಿಗೆ ಒಂದು idiosyncrasy. ನನಗೆ ಹಾಗೆಯೇ ಉಪ್ಪಿನಕಾಯಿ-ಸಂಡಿಗೆ ಅರ್ಧವೇ ಸೇರುವುದು! ನಿವೆಷ್ಟು ಸ್ವೀಟ್ ಅಂದರೆ ತಮ್ಮ ತಾಯಿಯನ್ನೇ ಎದುರು ಹಾಕಿಕೊಳ್ಳಬಲ್ಲಂಥ ಅತ್ತೆ! ಅದೇನು ಸಾಮಾನ್ಯವಲ್ಲ, ಒಳ್ಳೆಯ ಒಗ್ಗರಣೆ ಹಾಕಿದಂತೆ, ರಾಧಿಕಾ ಅವರನ್ನು ಕೇಳಿ!
    ಎರ್ಡನೆಯ ಸರ್ವಿಂಗ್ ನಲ್ಲಿ ಬಂದ ಹಲವಾರು ಐಟಂಗಳಿಗೆ ನಾನೂ ಸಹ ’ಟಿಕ್ ಬಾಕ್ಸ” (√) ಹಾಕುವೆ.ನಮ್ಮ ಮನೆಯಲ್ಲೂ ಎಲೆಕ್ಟ್ರಿಕ್ ಕುಕರ್. ”ಮುಂದಿನ ವರ್ಷ ಗ್ಯಾಸ್ ಗೆ ಬಲಾಯಿಸೋಣ’’ ಅಂತ ಹೇಳುತ್ತ ಈಗ 40 ವರ್ಷ ಆಯಿತು! ಅಂದ್ಮೇಲೆ ನಿಮ್ಮ ತ್ರಾಸ್ ನಂಗೂ ಗೊತ್ತು. ದೋಸೆ ಏಳದಿರುವದಕ್ಕೆ ಅದೂ ಒಂದು ಕಾರಣವೋ? ನಮ್ಮ ಮನೆಯಲ್ಲಿ ೩೦ ವರ್ಷ ಎದ್ದಿಲ್ಲ, ಈಗ ರೆಡಿಮೇಡ್ ಬ್ಯಾಟ್ಟರ್ ವರದಾನವಾಗಿ ಬಂದಿದೆಯಲ್ಲ. ಇದಕ್ಕೂ ಮೊದಲು ದ್ವಾಸಿ ಅಂದ್ರೆ ನಮ್ಮ ಮನ್ಯಾಗ ರವಾ ದ್ವಾಸಿನೇ ಏಳತಿತ್ತು. ಅದೆಷ್ಟು ಹಂಚು ಬಲಾಯಿಸಿದೆವು? ಕಳೆದ ವರ್ಷ ಗುರುವಾರಕ್ಕಷ್ಟs ಉಪಯೋಗಕ್ಕ ಬಂದವು- NHS ಹೆಲ್ತ್ ವರ್ಕರ್ಸ್ ಗೆ ”ಚಪ್ಪಾಳೆ’’ ಬದಲಾಗಿ ಬಾರಿಸಿದ್ದಾಯಿತು! ಹಚ್ಚಿದವಲಕ್ಕಿ ಶೇಂಗಾ ಹೊತ್ತದೆ ಇರಲಿಕ್ಕೆ ಒಂದೇ ದಾರಿ: ಬೇರೆಯಾಗಿ ಕರಿದಿಟ್ಟುಕೊಳ್ಳೋದು! ಕಲಿತುಕೊಳ್ಳೋಕ್ಕೂ ಹೊತ್ತು ಬರಬೇಕು. ಎಲ್ಲರೂ ಕಮೆಂಟ್ ಮಾಡಿಧಂಗ ನಿಮ್ಮ ಶೈಲಿ ಭಾಳ ಚ್ಲೋ ಅದ. ಅದು ಮಾತ್ರ ಹೊತ್ತಿಲ್ಲ! ಮುಂದಿನ ವಾರದ ಮೆನ್ಯೂ ಏನದನೋ ಕಾಯ್ತಾ ಇದ್ದೀನಿ!

    Liked by 1 person

  5. ಹೊಸ ವರ್ಷದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ.ಹೊಸ ಸರಣಿ ಭಾಳೇ ಸ್ವಾದಿಷ್ಟ ಅನಸ್ತದ.ಪಾಪ ದಾಕ್ಷಾಯಿಣಿ ಅವರ ಪರದಾಟ ಅದೂ ಮೊದಲನೇ ಬಾರಿ ಹೋದಾಗ! ನಿಮ್ಮತ್ತೆಯವರಿಗೆ ಥ್ಯಾಂಕ್ಸ್ ಹೇಳಿರಬೇಕು ನೀವು.ನನಗೆ ಈ ಥರದ್ದ ಪರದಾಟ ಹಾಲಿನೊಳಗಿನ ಕೆನೀದು ಆಗಿತ್ತು.ನಾ ಮೆಲ್ಲಗೆ ಆ ಕಪ್ಪು ನಮ್ಮ ಭಾವನವರ ಮಗಳ ಮುಂದೆ ಸರಿಸಿ ಎದ್ದು ಬಿಟ್ಟಿದ್ದೆ.
    ರಾಧಿಕಾ ಅವರ ಫಜೀತಿ ಬಲು ಜೋರ ಅದರೀ. ಆದ್ರ ಆ ಹೊತ್ತಿಗೆ ಹುಚ್ಚ ಹಿಡದ್ಹಾಂಗ ಅನಸ್ತದ .ಹೌದಲ್ರೀ? ನನ್ನ ಈ ಫಜೀತಿ ಒಂದ ಸಲಾ ಹೊಸ ರೆಸಿಪಿನ s‌ಹುಟ್ಟ ಹಾಕಿಬಿಟ್ತು.ಅದರ ಹೆಸರೂ ಈಗ ” ಘೋಟಾಳಾ ಖೀರ್” ಆಗಿ ಬಿಟ್ಟಿದೆ.ಅಂತೂ ಎರಡೂ ಬರಹ ಏಕದಂ ಮಸ್ತ್ ಆಗ್ಯಾವ.ಜೋರ‌ಮಜಾ ಬಂತು ನೋಡ್ರಿ.
    ದಾಕ್ಷಾಯಿಣಿ ಹಾಗೂ ರಾಧಿಕಾ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.ಸಂಪಾದಕರಿಗೂ ಧನ್ಯವಾದಗಳು ಈ ಮಸ್ತ್ ಬರಹಗಳ ಸರಣಿ ಶುರು ಮಾಡಿದ್ದಕ್ಕೆ.
    ಸರೋಜಿನಿ ಪಡಸಲಗಿ

    Liked by 2 people

  6. ಅಡುಗೆ-ಅಡುಗೆಮನೆ ಶೀರ್ಷಿಕೆಯಲ್ಲಿ ಈ ವರದ ಎರಡು ಲೇಖನಗಳು ಭರ್ಜರಿಯಾಗಿವೆ. ಮಹಿಳೆಯರ /(ಕ್ಷಮಿಸಿ ಪುರುಷರ) ಅನುಭವ ಭಂಡಾರದಲ್ಲಿ ದಾಕ್ಷಾಯಣಿ ಮತ್ತು ರಾಧಿಕಾ ಅವರು ಬರೆದಿರುವಂತಹ ಘಟನೆಗಳು ಹೇರಳವಾಗಿರುತ್ತವೆ. ಆದರೆ ಅದನ್ನು ಆಸಕ್ತಿಪೂರ್ಣವಾಗಿ ಅವರಂತೆ ಬರೆಯುವುದು ಉತ್ತಮ ಕಲೆ. ಎಲ್ಲರ ಪಾಲಿಗೂ ದಕ್ಕುವಂತಹದಲ್ಲ. ಬಹಳ ಚೆನ್ನಾಗಿ ಬರೆದಿದ್ದೀರಿ. ರಾಧಿಕಾ ಅವರ ಉತ್ತರ ಕರ್ನಾಟಕ ಕನ್ನಡ ಸೊಗಸಾಗಿದೆ. ನನ್ನ ಧಾರವಾಡದ ದಿನಗಳು ನೆನಪಾಯಿತು.
    ಉಮಾ ವೆಂಕಟೇಶ್

    Liked by 1 person

  7. ಹೊಸ ವರ್ಷಕ್ಕೆ ಹೊಸ ರೆಸಿಪಿ ಸಂಪಾದಕರೇ, ಧನ್ಯವಾದ. ಎರಡೂ ಅಡುಗೆಗಳು ರಸಭರಿತವಾಗಿವೆ. ದಾಕ್ಷಾಯಿಣಿಯವರ ಅತ್ತೆ, ತನ್ನ ತಾಯಿಯನ್ನೇ ಎದುರು ಹಾಕಿಕೊಂಡು, ಹೊಸ ಸೊಸೆಯ ರಕ್ಷಣೆಗೆ ಬಂದಿದ್ದು ಮನತಟ್ಟಿದೆ. ಒಬ್ಬಟ್ಟು ಹೋಗಲಿ, ಖಾರವಾದ ಒಬ್ಬಟ್ಟಿನ ಸಾರು ಕೂಡ ನಿಮಗೆ ದೂರವಾದದ್ದು ಆಶ್ಚರ್ಯ! ಸಿಹಿ ಹಿಡಿಸದಿದ್ದರೂ ಮನೆಯವರಿಗೆ ಮಾಡಿ ಅಟ್ಟುವುದು ನಿಮ್ಮ ವಿಶಾಲ ಅಂತಃಕರಣಕ್ಕೆ ಸಾಕ್ಷಿ.
    ರಾಧಿಕಾ, ನಿಮ್ಮ ಮನಿ ಮಾತಿನ ಭಾಷಾದಾಗ ಬರದ ಲೇಖನದ ಮಸ್ತ್ ಮಜಾ ಕೊಡತ್ರಿ. ಈಗಾದ್ರೂ ಗ್ಯಾಸಿನ ಸಿಗಡಿ ಸಿಕ್ಕಯ್ತಿ ಅಂದ್ಕೋತೀನಿ. ಹಿಂಗs ಬರೀರಿ, ಬರದು ನಗಿಸ್ರಿ.

    Liked by 2 people

  8. ಸಂಪಾದಕರು ಹೊಸ ವರ್ಷದ ಕೊಡುಗೆಯೊಂಬಂತೆ, ‘ಸಂಪಾದಕ’ ದಲ್ಲಿನ ‘ಪಾಕ’ ತೆಗೆದು ಸೊಂಪಾದ ಅಡುಗೆಯಲ್ಲಿ ಈ ಸಂವತ್ಸರವನ್ನು ಸ್ವಾಗತಿಸಿದ್ದಾರೆ.

    ಇಬ್ಬರು ಕುಶಲ ಪಾಕ ಪ್ರವೀಣರು ತಮ್ಮ ಅನುಭವದಡುಗೆಯ ರುಚಿಕರ ಒಬ್ಬಟ್ಟು-ಚಾ ಬಡಿಸಿದ್ದಾರೆ. ಹಾಗೆಯೇ ಅಡುಗೆ ಮನೆ ಕಲಿಸುವ ಜೀವವದ ಪಾಠಗಳ ರೆಸಿಪಿಯನ್ನ ಒಗ್ಗರಣೆಯಿಲ್ಲದೆ ಕಲಿತು ಹಂಚುವದು ಹೇಗೆ ಎನ್ನುವದನ್ನ ತೆರೆದಿಟ್ಟಿದ್ದಾರೆ.

    ಈ ಪಾಕ-ತ್ರಯರಿತ್ತ ಅಕ್ಷರಾನ್ನದ ಊಟ ವರ್ಷವಿಡೀ ದೊರಕುವಂತಾಗಲಿ…

    ಮುರಳಿ ಹತ್ವಾರ್

    Liked by 2 people

  9. ಹೊಸ ವರುಷದ ಮದಲನೇ ದಿನಾ ಕಣ್ ಬಿಡೂದರಾಗೇ ಬಿಸಿಬಿಸಿ ಅಡಿಗೆ ಮನೆ ಲೇಖನ ಉಣ ಬಡಿಸಿದ ಸಂಪಾದಕರು ಹಾಗೂ ಲೇಖಕಿಯರಿಗೆ ವಂದನೆಗಳು. ದಾಕ್ಷಾಯಿಣಿ ಅವರ ಒಬ್ಬಟ್ಟಿನ ಒದ್ದಾಟ ಅಂದ್ರ ಮಾಡೂದರ ಬಗ್ಗೆ ಅಂದುಕೊಂಡಿದ್ದೆ. ಹೋಳಿಗಿ ತಿನ್ನಲಿಕ್ಕೂ ಒದ್ದಾಡವ್ರು ಇರತಾರ ಅಂತ ಇವತ್ತೇ ಗೊತ್ತಾದದ್ದು.😀 ನಾನೂ ನಿಮ್ಮನಿಯವರ ಅಜ್ಜಿಯ ಮಾತಿಗೆ ಅನುಮೋದನೆ ಮಾಡುತ್ತೇನೆ.😂 ಲೇಖನ ಧಾಟಿ ಬಹಳ ಸೊಗಸಾಗಿದೆ. ನಿಮ್ಮ ಫಜೀತಿಯ ಬಗ್ಗೆ ಪಾಪ ಎನ್ನಿಸಿತು. ಅಂತೂ ನಿಮ್ಮ ಮಗಳಿಗೆ ಜೈ ಎನ್ನಬೇಕು. ಅವಳಿಂದಾಗಿ ಅಧ೯ಹೋಳಿಗೆಯ ಸಾಲಿಗೆ ಬಂದಿದ್ದೀರಲ್ಲಾ. ಇನ್ನು ರಾಧಿಕಾ ಅವರ ಫಜೀತಿಗಳು ಎಷ್ಟೋ ಸಲ ನಮ್ಮವೂ ಆಗಿರುತ್ತವೆ . ಇಡ್ಲಿ-ದೋಸೆಯಂತೂ ಮಂದ್ಯಾಗ ಮಾನ ಕಳದೇ ತೀರತಾವ. ನಿಮ್ಮ ಉತ್ತರ ಕನ್ನಡ ಭಾಷಾ ಶೈಲಿ ಬಹಳ ಆಪ್ತ ಎನಿಸಿತು ರಾಧಿಕಾ ಅವರೇ..ಇಬ್ಬರೂ ಲೇಖಕಿಯರಿಗೆ ಅಭಿನಂದನೆಗಳು.
    ಗೌರಿಪ್ರಸನ್ನ.

    Liked by 1 person

  10. ಗುಡೂರ್ ಅವರು ಬರೆದ ಮುನ್ನುಡಿಯೇ ಬಾಯಲ್ಲಿ ನೀರು ಬರುವಂತಿದೆ. ಎಷ್ಟು ರುಚಿ ರುಚಿಯಾದ ಮುನ್ನುಡಿ.
    ದಾಕ್ಷಾಯಣಿಯವರ ‘ಸಿಹಿಯೆಂದರೆ ಆಗುವುದಿಲ್ಲ’ ಎನ್ನುವ ಪ್ರಸಂಗ ಈಗ ನಗು ತರುವಂತಿದ್ದರೂ ಆಗ ಮುಜುಗರದ ವಿಷಯವಾಗಿತ್ತು. ಈ ದೇಶದಲ್ಲಿ ಬಹಳಷ್ಟು ಜನರಿಗೆ ಖಾರ ‌ತಿಂದರಾಗುವುದಿಲ್ಲ, ಆದರೆ ಎಲ್ಲರೂ ಸಿಹಿ‌ಭಕ್ಷಕರೇ, ಬೆಳಗಿನ ಸೀರಿಯಲ್ ನಿಂದ ಹಿಡಿದು ರಾತ್ರಿ ತಿನ್ನುವ ಡಿಸರ್ಟ್ ವರೆಗೆ ಎಲ್ಲವೂ ಸಿಹಿಮಯ. ಭಾರತದಲ್ಲಿ ಎಲ್ಲವೂ ಮಸಾಲೆ ಅಥವಾ ಖಾರ, ಸಿಹಿ ಏನಿದ್ದರೂ ಹಬ್ಬಕ್ಕೆ ಮಾತ್ರ. ಆದರೆ ಆ ಹಬ್ಬದ ಸಿಹಿಗೆ ಕಾಯುವುದೇ ಹಬ್ಬ. ಅದರಲ್ಲೂ ಹೂರಣದ ಹೋಳಿಗೆ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಇದಕ್ಕೆ ಬಿಸಿ ತುಪ್ಪ ಮತ್ತು ಹಾಲು‌ ಇರಲೇಬೇಕು.
    ರಾಧಿಕಾ ಅವರ ಯುಕೆಯ ಛಾ, ಒಗ್ಗರಣಿ ಮತ್ತ‌ ದ್ವಾಸಿ ಪ್ರಕರಣಗಳು ಭಾಳ ಮಜಾ ಅದಾವ. ನಮಗೂ ಇಂಥಾ ಅನುಭವ ಅಗ್ಯಾವ.
    ಇಂಥ ಸರಣಿಯನ್ನು ಆರಂಭಿಸಿದ ಗುಡೂರ್ ಅವರಿಗೆ ಅಭಿನಂದನೆಗಳು.
    ಹೊಸ ವರ್ಷ ರುಚಿಕರವಾಗಿರಲಿ.
    ಕೇಶವ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.