ಬಾಲ್ಯದ ನೆನಪುಗಳು – ಜಿ ಎಸ್ ಶಿವಪ್ರಸಾದ್

ಪ್ರಿಯರೇ, ಬಾಲ್ಯದ ನೆನಪುಗಳ ಸರಣಿಯ ಪರಿಣಾಮ ಹೇಗಿದೆಯೆಂದರೆ, ಅನಿವಾಸಿಯ ಸ್ಥಾಪಕ-ಸದಸ್ಯರಲ್ಲೊಬ್ಬರಾದ ಜಿ ಎಸ್ ಶಿವಪ್ರಸಾದ್ ತಮ್ಮ ನೆನಪಿನ ಅಟ್ಟ ಹತ್ತಿ, ಒಂದಷ್ಟು ಕಡತಗಳನ್ನು ಝಾಡಿಸಿ ಕೆಳಗಿಳಿಸಿ, ಕೆಲವು ಮರೆಯದಂಥ ಸ್ವಾರಸ್ಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದರೊಡನೆ ಆಯ್ದ ಚಿತ್ರಗಳನ್ನೂ ಅಲ್ಲಲ್ಲಿ ಹೆಣೆದಿದ್ದಾರೆ. ಓದಿ, ನಕ್ಕು ಮಜಾ ತೊಗೊಳ್ಳೋಣ ಬನ್ನಿ. – ಎಲ್ಲೆನ್ ಗುಡೂರ್ (ಸಂ.)

೧. ಅಣ್ಣ ಜಯದೇವನೊಂದಿಗೆ. ೨. ಸ್ಕೂಟರ್ ಸವಾರಿ

1963ರ ವೇಳೆಗೆ ಮೈಸೂರು ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆಯವರಿಗೆ ಹೈದರಾಬಾದಿನ ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಬೋಧಕರಾಗುವ ಕರೆ ಬಂದಿತ್ತು.  ಅವರು ಮುಂಚಿತವಾಗಿ ಅಲ್ಲಿ ತೆರಳಿ  ಯುನಿವೆರ್ಸಿಟಿ ಕ್ಯಾಂಪಸ್ಸಿನಲ್ಲಿ ಒಂದು ಮನೆಮಾಡಿ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುವುದಕ್ಕೆ ಸಿದ್ಧತೆ ಮಾಡಿಕೊಂಡರು.  ನನಗೆ ಆಗ ಏಳು ವರ್ಷ ವಯಸ್ಸಾಗಿತ್ತು.  ದೂರದ ಹೈದರಾಬಾದಿಗೆ ಆಗಿನ ಕಾಲಕ್ಕೆ ದೀರ್ಘ ಪ್ರಯಾಣ ಎನ್ನಬಹುದು.  ಹೊಸ ಜಾಗ, ಹೊಸ ಭಾಷೆ ಇವುಗಳ ಬಗ್ಗೆ ನಾನು ಬಹಳ ಪುಳಕಿತನಾಗಿದ್ದೆ.

ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಹೈದರಾಬಾದಿಗೆ ರೈಲು ಪ್ರಯಾಣ ಕೈಗೊಂಡೆವು.   ಚಿಕ್ಕಂದಿನಿಂದ ನನಗೆ ರೈಲು  ಮತ್ತು ರೈಲು ಪ್ರಯಾಣ ಬಹಳ ವಿಸ್ಮಯವನ್ನು ಮತ್ತು ಸಂತೋಷವನ್ನು ನೀಡಿದ್ದವು.  ಇದಕ್ಕೆ  ಕೆಲವು  ಕಾರಣಗಳಿದ್ದವು.  ನನ್ನ ಬಾಲ್ಯದಲ್ಲಿ ಬೇಸಿಗೆ ರಜವನ್ನು ತರೀಕೆರೆಯಲ್ಲಿದ್ದ  ನನ್ನ ಅಜ್ಜನ  (ತಾಯಿಯ ಕಡೆ) ಮನೆಯಲ್ಲಿ ಕಳೆಯುತ್ತಿದ್ದೆವು.  ಅಜ್ಜನ ಮನೆ ಹತ್ತಿರವೇ ರೈಲ್ವೆ ಹಳಿ  ಇದ್ದು ಹಲವಾರು ಬಾರಿ ಶಿವಮೊಗ್ಗಕ್ಕೆ ಸಾಗುವ ರೈಲು ಹಾದುಹೋಗುತ್ತಿತ್ತು.  ರೈಲಿನ ‘ಕೂ’ ಎಂಬ ಶಬ್ದ ಕೇಳಿದ ಕೂಡಲೇ ನಾನು ಮತ್ತು ನನ್ನ ಕಸಿನ್ (ಚಿಕ್ಕಮ್ಮನ ಮಗಳು) ಮಾಡುತ್ತಿದ್ದುದನ್ನು ಬಿಟ್ಟು ರೈಲ್ವೆ ಹಳಿ ಬಳಿ ಓಡಿಹೋಗಿ ನಿಂತು ‘ಡಬ ಡಬ’ ಎಂದು ಶಬ್ದ ಮಾಡುತ್ತಿದ್ದ ರೈಲನ್ನು ಬೆರಗಿನಿಂದ ನೋಡಿ ಎಂಜಿನ್ ಡ್ರೈವರುಗಳಿಗೆ, ಪ್ರಯಾಣಿಕರಿಗೆ ಕೈ ಬೀಸಿ ಟಾಟಾ ಮಾಡಿ ರೈಲು ದೂರ ಸಾಗುವವರೆಗೆ ದೃಷ್ಟಿಸಿ, ಅದು ಮರೆಯಾದಾಗ ಖುಷಿಯಿಂದ ಧನ್ಯತೆಯಿಂದ ಮನೆಗೆ ವಾಪಸ್ಸಾಗುತ್ತಿದೆವು.  ಕೆಲವೊಮ್ಮೆ ರೈಲು ಬರುವ ಮುಂಚಿತವಾಗಿ ಅಲ್ಲಿ ನಮ್ಮ ಬಿಡಿ ಪೈಸೆಗಳನ್ನು ಹಳಿಯ ಮೇಲೆ ಇಟ್ಟು  ರೈಲು ಹೋದಮೇಲೆ ಅದು ಚಪ್ಪಟ್ಟೆಯಾಗುವುದನ್ನು ನೋಡಿ ರೈಲಿನ ಅಗಾಧವಾದ ಶಕ್ತಿಯನ್ನು ಕಣ್ಣಾರೆ ಕಂಡು ಬೆರಗಾಗುತ್ತಿದ್ದೇವು.  ಈ ವಿಚಾರದ ಬಗ್ಗೆ ಅಪ್ಪ,  ಅಮ್ಮ ಅಥವಾ ಅಜ್ಜನಿಗೆ ಸುಳಿವು ಕೊಡುತ್ತಿರಲಿಲ್ಲ.

ಹೈದರಾಬಾದಿಗೆ ಸುಮಾರು 24 ಗಂಟೆಗಳ ಪಯಣ. ಆಂಧ್ರಪ್ರದೇಶದ ಅನಂತಪುರ, ಗುಂತಕಲ್, ಕರ್ನೂಲ್  ಹೀಗೆ ಅನೇಕ ಊರುಗಳನ್ನು ದಾಟಿ ಸಾಗುವ ಪಯಣದಲ್ಲಿ ಅನೇಕ ರೈಲ್ವೆ ಸ್ಟೇಷನ್ನು,  ಅಲ್ಲಿಯ  ತರಾವರಿ ಪ್ರಯಾಣಿಕರು, ತಿಂಡಿಗಳನ್ನು ಮಾರುವವರು, ವಾಸನೆ  ಮತ್ತು  ನೋಟ  ನನ್ನ ಪಂಚೇಂದ್ರಿಯಗಳನ್ನು ಚುರುಕುಗೊಳಿಸಿದ್ದವು.  ರೈಲಿನ ಬೋಗಿಯಲ್ಲಿ  ಮೂರು ಮಜಲಿದ್ದ ಸ್ಲೀಪರ್ ನಮ್ಮ ಸಂಸಾರಕ್ಕೆ ಸೂಕ್ತವಾಗಿತ್ತು. ಕಿಟಕಿ ಬದಿಯಲ್ಲಿ ಕೂರಲು ನಾನು, ಅಣ್ಣ ಮತ್ತು ಅಕ್ಕನ ಜೊತೆ ಜಗಳವಾಡಿ ಜಾಗ ಗಿಟ್ಟಿಸಿಕೊಳ್ಳುತ್ತಿದ್ದೆ.  ಊಟದ ಸಮಯಕ್ಕೆ ಸರಿಯಾಗಿ ರೈಲ್ವೆ ಸಿಬ್ಬಂದಿಗಳು ಒಂದರ ಮೇಲೊಂದು 8-10  ಸ್ಟೀಲ್ ಊಟದ ತಟ್ಟೆಗಳನ್ನು  ಸರ್ಕಸ್ ಮಾಡುತ್ತಾ ಹೊತ್ತು ತರುತ್ತಿದ್ದರು.  ಕೆಲವು ಸಮಯದ ನಂತರ ಇನ್ನೊಬ್ಬ ಬಂದು ತಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ .  ಸಂಜೆ ವೇಳೆಗೆ ಮತ್ತೊಬ್ಬ ಸಿಬ್ಬಂದಿ 6 ಕಾಫಿ ಮತ್ತು ಟೀ ಲೋಟಗಳನ್ನು ವರ್ತುಲಾಕಾರದ  ಲೋಹದ ಹಿಡಿಯೊಳಗೆ ಹಿಡಿದು ತರುತ್ತಿದ್ದ.  ಧೀರ್ಘ ಪ್ರಯಾಣ ಮಾಡುವವರು ರೈಲನ್ನು ಇಳಿಯುವ ಪ್ರಮೇಯವೇ ಇರಲಿಲ್ಲ. ಕೂತಲ್ಲೇ ಎಲ್ಲ ಸರಬರಾಜಾಗುತ್ತಿತ್ತು. ಇನ್ನೊಂದು ವಿಚಾರ ನಾನು ಗಮನಿಸಿದ್ದು;  ಮೈಸೂರು ಶಿವಮೊಗ್ಗ ರೈಲುಗಳಲ್ಲಿ ಕಾಣುತ್ತಿದ್ದ ಮತ್ತು ಕಾಡುತ್ತಿದ್ದ ಅಂಧ ಭಿಕ್ಷುಕರು, ಹಾರ್ಮೋನಿಯಂ ಹಿಡಿದು ಸಿನಿಮಾ ಹಾಡುಗಳನ್ನು ಅಥವಾ ದಾಸರ ಪದಗಳನ್ನು ಹಾಡುತ್ತ ಬರುತ್ತಿದ್ದ  ವ್ಯಕ್ತಿ ಮತ್ತು ಅವನೊಡನೆ ಚಿಲ್ಲರೆ ಸಂಗ್ರಹಿಸಲು ಒಂದು ಲೋಹದ  ಮಗ್ಗನ್ನು (Mug)   ಹಿಡಿದು ಚಿಲ್ಲರೆ ಕಾಸುಗಳನ್ನು   ‘ಝಲ್  ಝಲ್’  ಎಂದು ಕುಲುಕುತ್ತಾ ದೈನ್ಯ ದೃಷ್ಟಿಯನ್ನು ಬೀರುತ್ತಾ ಬರುವ ಪುಟ್ಟ ಬಾಲಕಿ ಈ  ಬೆಂಗಳೂರು-ಹೈದರಾಬಾದ್ ಎಕ್ಸ್ ಪ್ರೆಸ್  ರೈಲುಗಳಲ್ಲಿ  ಕಾಣುತ್ತಿರಲಿಲ್ಲ. ಇಲ್ಲಿ ಎಲ್ಲವು ಒಂದು ರೀತಿ ವ್ಯವಸ್ಥಿತವಾಗಿದ್ದವು. ಕರಿಯ ಬ್ಲೇಜರ್ ಧರಿಸಿ ಶಿಫ್ಟಿನಲ್ಲಿ ಕೆಲಸ ಮಾಡುತ್ತಿದ್ದ ಟಿಕೆಟ್ ಕಲೆಕ್ಟರುಗಳು ಎರಡು ಮೂರು ಬಾರಿ ಟಿಕೆಟ್ಟುಗಳನ್ನು ಪರೀಕ್ಷಿಸುತ್ತಿದ್ದರು.  ಆಗಿನ  ಕಾಲಕ್ಕೆ  ಒಂದು ಇಂಚಿನ  ದಪ್ಪ ಕಾಗದದ ರೈಲು ಟಿಕೆಟ್ಗಳು ಚಾಲನೆಯಲ್ಲಿದ್ದವು. ಟಿ.ಸಿ.ಗಳು ಅದನ್ನು ತೂತುಮಾಡಿ ಹಿಂತಿರುಗಿಸುತ್ತಿದ್ದರು.  ಪ್ರತಿ ಸ್ಟೇಷನ್ನುಗಳಲ್ಲಿ ರೈಲು ಹೊರಡುವ ಮುಂಚೆ ಗಾರ್ಡ್ ಶಿಳ್ಳೆ ಊದಿ, ಹಸಿರು ಬಾವುಟ ಅಲುಗಿಸಿ, ರೈಲು ‘ಕೂ’ ಎಂದು ಒಮ್ಮೆ ಶಬ್ದ ಮಾಡಿ ನಿಧಾನವಾಗಿ ಚಕ್ರಗಳು ಉರುಳುವ ಈ ಕ್ರಮಬದ್ಧ ಪದ್ಧತಿ ಮತ್ತು ಶಿಷ್ಟಾಚಾರಗಳು ನನ್ನನ್ನು ಬಹಳ ಆಕರ್ಷಿಸಿದ್ದವು.   ಹಿಂದೆ ಸ್ಟೀಮ್ ರೈಲುಗಳಿಗಿದ್ದ ವೈಭವ, ಆರ್ಭಟ, ವಿನ್ಯಾಸ, ಡೈನಮಿಸಂ ಈಗಿನ ಕಾಲದಲ್ಲಿ ಸದ್ದಿಲ್ಲದೇ ಹಾವಿನಂತೆ ಹರಿಯುವ ಡೀಸಲ್ ಅಥವಾ ಎಲೆಕ್ಟ್ರಿಕ್ ರೈಲುಗಳಿಗೆ ಇಲ್ಲವೆನ್ನಬಹುದು. 

ಕೃಪೆ: ಗೂಗಲ್ ಇಮೇಜ್ ಸರ್ಚ್

ಚಲಿಸುತ್ತಿರುವ ರೈಲಿನ  ಕಿಟಕಿಯ ಮೂಲಕ ಆಚೆ ತಲೆ ಹಾಯಿಸಿ ರೈಲಿನ ಉದ್ದಗಲವನ್ನು ನೋಡುವ ತವಕ ನನಗೆ. ಹಾಗೆ ಬೀಸುವ ಹಿತವಾದ ಗಾಳಿಗೆ ತಲೆಯೊಡ್ಡುವುದು ಅದೊಂದು ಖುಷಿ.  ಅಪ್ಪ ಅಮ್ಮ ಬೇಡವೆಂದರೂ ನಾನು, ಅಣ್ಣ ಮತ್ತು ಅಕ್ಕ ಆಗಾಗ್ಗೆ ಕಿಟಕಿಯ ಹೊರಗೆ ತಲೆಹಾಕಿದ್ದುಂಟು.  ಆಗಿನಕಾಲಕ್ಕೆ ಬರಿಯ ಸ್ಟೀಮ್ ಎಂಜಿನ್ ಗಳಿದ್ದು  ಸಣ್ಣ ಸಣ್ಣ ಕಲ್ಲಿದ್ದಿನ ಚೂರುಗಳು ಎಂಜಿನ್ ಕಡೆಯಿಂದ ಗಾಳಿಯಲ್ಲಿ ತೇಲಿ ಬಂದು ಕಣ್ಣಿಗೆ ಬೀಳುತಿತ್ತು.  ನಾವು ‘ಹಾ’ ಎನ್ನುವಷ್ಟರಲ್ಲಿ ಅಮ್ಮ ನಮ್ಮ ರೆಪ್ಪೆಗಳನ್ನು ಬಿಡಿಸಿ ಉಫ್ ಎಂದು ಊದಿ, ಅದು ವಿಫಲವಾದಲ್ಲಿ ತಮ್ಮ ಸೀರೆ ಸೆರೆಗಿನ ತುದಿಯನ್ನು ಬತ್ತಿಯಂತೆ ಹೊಸೆದು, ಚೀಪಿ  ‘ಕಣ್ಣು ಬಿಡು, ಕಣ್ಣು ಉಜ್ಜಬೇಡ , ತಲೆ ಎತ್ತು’ ಎಂದು ಹೇಳುತ್ತಾ ಕಲ್ಲಿದ್ದಿನ ತುಣುಕನ್ನು ಸರಿಸಿ ತೆಗೆದುಬಿಡುತ್ತಿದ್ದರು. ನಮ್ಮ ಈ ಪ್ರಯಾಣದಲ್ಲಿ ಅಮ್ಮ ನಮ್ಮ ನೇತ್ರತಜ್ಞರಾಗಿಬಿಟ್ಟರು!

ಹೈದರಾಬಾದಿಗೆ ಸುಮಾರು ಅರ್ಧದಷ್ಟು ಪ್ರಯಾಣ ಮಾಡಿದ ಮೇಲೆ ಗುಂತಕಲ್ ಜಂಕ್ಷನಿನಲ್ಲಿ  ರೈಲು ಸ್ವಲ್ಪ ಸಮಯದವರೆಗೆ ನಿಲ್ಲುತ್ತಿತ್ತು.  ಅಲ್ಲಿ ರೈಲಿಗೆ ನೀರು ತುಂಬುತ್ತಿದ್ದರು.  ಆ ಒಂದು ಅರ್ಧ ತಾಸು ಜನರು ಇಳಿದು ಕೈಕಾಲಾಡಿಸಬಹುದಾಗಿತ್ತು.  ನಾನು ಅಪ್ಪನನ್ನು ಕಾಡಿ ಅವರ ಉಸ್ತುವಾರಿಯಲ್ಲಿ ರೈಲ್ವೆ ಎಂಜಿನ್ ಬಳಿ ಅಡ್ಡಾಡಿ ಎಂಜಿನ್ನಿನ ದೊಡ್ಡ ಮತ್ತು ಸಣ್ಣ ಚಕ್ರಗಳ ಬೆಸುಗೆ, ಪಿಸ್ಟನಿನ್ನಿಂದ ಆಗಾಗ್ಗೆ ‘ಚುಸ್’ ಎಂದು ಹೊರಬರುತ್ತಿದ್ದ ಬಿಳಿ ಸ್ಟೀಮನ್ನು, ಮತ್ತು ಎಂಜಿನ್ ಒಳಗೆ ಕಲ್ಲಿದ್ದಲನ್ನು ಸ್ಪೇಡಿನಿಂದ  ಎತ್ತಿ ಉರಿಯುತ್ತಿರುವ ಬೆಂಕಿಯೊಲೆಗೆ ಹಾಕುತ್ತಿದ್ದ ಡ್ರೈವರುಗಳನ್ನು ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದೆ.   ಶಿರಡಿ ಬಾಬಾ ರೀತಿಯಲ್ಲಿ ಅವರು ತಲೆಗೆ ಕರ್ಚಿಫ್ ಕಟ್ಟಿದ್ದು, ಕಲ್ಲಿದ್ದಲ ಮಸಿಯಿಂದ ಅವರ ಕರಿಬಡಿದ ಮುಖ ಅದರೊಳಗೆ ಕಾಣುತ್ತಿದ್ದ ಬಿಳಿ ಕರಿ ಪಿಳಿ ಪಿಳಿ ಕಣ್ಣು ನನ್ನ ನೆನಪಿನಲ್ಲಿ ಇಂದಿಗೂ ಉಳಿದಿದೆ.  ಅಷ್ಟು ದೊಡ್ಡದಾದ ರೈಲನ್ನು ನಿಯಂತ್ರಿಸುತ್ತಿದ್ದ ರೈಲ್ವೆ ಡ್ರೈವರುಗಳು ನನ್ನ ಪಾಲಿಗೆ ಹೀರೋಗಳಾಗಿದ್ದರು.  ಹೀಗಾಗಿ ನಾನು ನನ್ನ ಎಳೆವಯಸ್ಸಿನಲ್ಲಿ ಅಪ್ಪ, ಅಮ್ಮ ಮತ್ತು ಪರಿವಾರದ ಮಿತ್ರರ ಬಳಿ ಮುಂದಕ್ಕೆ ದೊಡ್ಡವನಾದ ಮೇಲೆ ರೈಲ್ವೆ ಎಂಜಿನ್ ಡ್ರೈವರ್ ಆಗುವೆನೆಂದು ಕೊಚ್ಚಿಕೊಳ್ಳುತ್ತಿದ್ದೆ.   ಆ ಸಂದರ್ಭದಲ್ಲಿ ಅಪ್ಪ ಅಮ್ಮ ಮುಸಿ ಮುಸಿ ನಕ್ಕಿದ್ದು ಮಬ್ಬಾಗಿ ನೆನಪಿದೆ.  Rest is history!

***

ಹೈದರಾಬಾದಿನಲ್ಲಿ ದೊರಕುವ ದಪ್ಪ ಹಸಿರು ದ್ರಾಕ್ಷಿಗೆ ಅಂಗೂರ್ ಎಂದು ಸ್ಥಳೀಯರು ಕರೆಯುತ್ತಿದ್ದರು.  ಅದು ಮೈಸೂರು ಸೀಮೆಯಲ್ಲಿ ಸಿಗುವ ಕರಿದ್ರಾಕ್ಷಿಗೆ ಹೋಲಿಸಿದರೆ ಗಾತ್ರದಲ್ಲಿ ಮತ್ತು ಸಿಹಿಯಲ್ಲಿ ಹೆಚ್ಚಿನದು ಎನ್ನಬಹುದು. ಅಮ್ಮ ನನಗೆ, ಅಕ್ಕ ಮತ್ತು ಅಣ್ಣನಿಗೆ ಬಟ್ಟಲಲ್ಲಿ ಒಂದು ಹಿಡಿಯಷ್ಟು ದ್ರಾಕ್ಷಿಯನ್ನು ತಿನ್ನಲು ಕೊಟ್ಟಿದ್ದರು. ನನ್ನ ಅಣ್ಣ ಜಯದೇವ ಬಹಳ ಚೇಷ್ಟೆ ಹುಡುಗ (Trouble Maker), ಅವನಿಂದ ನಾನು ನಾನಾ ಚೇಷ್ಟೆಗಳನ್ನು ಕಲಿಯುತ್ತಿದ್ದೆ. ಅಮ್ಮ ಕೊಟ್ಟ ಈ ಅಂಗೂರ್ ಗಳನ್ನೂ ಸ್ವಲ್ಪ ಮೇಲಕ್ಕೆ ಎಸೆದು ಅದನ್ನು ಕೈ ಉಪಯೋಗಿಸದೆ ಬಾಯಿಯಲ್ಲಿ ಹಿಡಿಯುವ ಆಟ ಅಣ್ಣ ತೋರಿಸಿಕೊಟ್ಟ. ನಾವು ಆ ಆಟವನ್ನು ಆಡುತ್ತಿದ್ದೆವು.  ನಾನು ಒಂದೆರಡು ದ್ರಾಕ್ಷಿಯನ್ನು ಬಾಯಲ್ಲಿ ಹಿಡಿದಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಾಯಿತು, ಆಟ ಮುಂದುವರೆಯಿತು.  ಅಲ್ಲಿ ಒಂದು ಅನಾಹುತ ಸಂಭವಿಸಿತು. ನಾನು ತಲೆಯೆತ್ತಿದ್ದಾಗ ತೆರೆದ ಬಾಯಲ್ಲಿ ಬಿದ್ದ ಒಂದು ದ್ರಾಕ್ಷಿ, ಬಾಯಲ್ಲಿ ನಿಲ್ಲದೆ ಸೀದಾ ಗಂಟಲಿಗೆ ಇಳಿದು ನನ್ನ ಉಸಿರಾಟದ ಕೊಳೆವೆಯ ದ್ವಾರದಲ್ಲಿ ಸಿಕ್ಕಿಕೊಂಡುಬಿಟ್ಟಿತು. ನಾನು ಎಷ್ಟು ಕೆಮ್ಮಿದರೂ  ದ್ರಾಕ್ಷಿ ಮೇಲಕ್ಕೆ ಬರುತ್ತಿಲ್ಲ! ಕೊನೆಗೆ ಕೆಮ್ಮಿನ ಜೊತೆ ಉಸಿರಾಟದ ಕಷ್ಟ ಶುರುವಾಯಿತು. ಇದನ್ನು ಗಮನಿಸಿದ ಅಕ್ಕ ಅಮ್ಮನಿಗೆ ತಿಳಿಸಿ ಅಮ್ಮ ಬಂದು ನೋಡಿ ಕೂಗಿಕೊಂಡರು. ಅಪ್ಪ ಮತ್ತು  ಅವರ ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ ಮುಂದಿನ ಕೋಣೆಯಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದು ಅಮ್ಮನ ಕೂಗು ಕೇಳಿ ಗಾಬರಿಯಿಂದ ಓಡಿಬಂದರು. ಅಪ್ಪನ ವಿದ್ಯಾರ್ಥಿ ಕೂಡಲೇ ನನ್ನ ಕುತ್ತಿಗೆಯನ್ನು ಬಗ್ಗಿಸಿ ಬೆನ್ನಿನ ಮೇಲ್ಭಾಗವನ್ನು ಹಲವಾರು ಬಾರಿ ಗುದ್ದಿದರು. ಆ ಗುದ್ದಿನ ಒತ್ತಡಕ್ಕೆ ಗಂಟಲಲ್ಲಿ ಸಿಕ್ಕಿಕೊಂಡ ದ್ರಾಕ್ಷಿ ಮೇಲೆ ಬಾಯಿಗೆ ಬಂದು ಕೂಡಲೇ ಅದನ್ನು ಹೊರಕ್ಕೆ ಉಗಿಯಲು ಸಾಧ್ಯವಾಯಿತು.  ಹಾಗೆಯೇ ಕೆಮ್ಮಿ ಕೆಮ್ಮಿ ಸುಸ್ತಾಗಿದ್ದ ನನಗೆ ಸರಾಗವಾಗಿ ಉಸಿರಾಡಲು ಸಾಧ್ಯವಾಯಿತು.  ನನ್ನ ಪ್ರಾಣಕ್ಕೆ ಅಪಾಯವಿದ್ದ ಪರಿಸ್ಥಿತಿಯಲ್ಲಿ ಅಪ್ಪನ  ವಿದ್ಯಾರ್ಥಿ ನನ್ನನ್ನು ಉಳಿಸಿದರು.  ಆ ಮಹನೀಯರಿಗೆ ನಾನು ಎಂದೆಂದೂ ಚಿರಋಣಿ.  ವೈದ್ಯರಾದವರಿಗೆ ಈ ಪರಿಸ್ಥಿತಿಯನ್ನು (Foreign Body Aspirations) ನಿಭಾಯಿಸಲು ಲೈಫ್ ಸಪೋರ್ಟ್ ಕೋರ್ಸ್ ಗಳಲ್ಲಿ ಕಡ್ಡಾಯ ತರಬೇತು ನೀಡುತ್ತಾರೆ. ಅದನ್ನು ಹೀಮ್ಲಿಕ್ಸ್ ಮೆನುವರ್ (Heimlich Manoeuvre) ಎಂಬ ಹೆಸರಿನಲ್ಲಿ ವೈದ್ಯರು ಗುರುತಿಸಬಹುದು.  ನಮ್ಮೆಲ್ಲರ  ಜೀವನದಲ್ಲಿ ಅಪಾಯದ ಅಂಚಿಗೆ ಹೋಗಿ ಬಂದಿರುವ ಹಲವಾರು ಘಟನೆಗಳಿರಬಹುದು, ಅದರಲ್ಲಿ ನನ್ನ ಈ ಘಟನೆಯೂ ಒಂದು ಎಂದು ಹೇಳಬಹುದು.  ಅಂದಹಾಗೆ ದ್ರಾಕ್ಷಿ ಹಣ್ಣು ನನಗೆ ಅತ್ಯಂತ ಪ್ರಿಯವಾದ ಹಣ್ಣು , ಅದನ್ನು ಇಂದಿಗೂ ಸವಿಯುತ್ತೇನೆ;  ಸ್ವಲ್ಪ ಎಚ್ಚರಿಕೆಯಿಂದ!

*** 

ಕೃಪೆ: ಗೂಗಲ್ ಇಮೇಜ್ ಸರ್ಚ್

ಉಸ್ಮಾನಿಯಾ ಯುನಿವರ್ಸಿಟಿ ಹೈದರಾಬಾದಿನ ಹೊರವಲಯದಲ್ಲಿತ್ತು.  ಬಹಳ ಸುಂದರವಾದ ಕಟ್ಟಡ.  ರೀಡರ್ಸ್ ಕ್ವಾರ್ಟರ್ಸ್ ನಲ್ಲಿ ನಾವು ವಾಸವಾಗಿದ್ದು, ನಗರದ ನೃಪತುಂಗ ಶಾಲೆಯಲ್ಲಿ ಕನ್ನಡ ಕಲಿಯುವ ಅವಕಾಶವಿತ್ತು. ನಗರದ ಒಳಗೆ ಇದ್ದ ಶಾಲೆಗೆ ಮಕ್ಕಳಾದ ನಾವು ಒಟ್ಟಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದೆವು.  ನಮ್ಮ ಮನೆಯ ಸುತ್ತ  ಸಾಕಷ್ಟು ಬಯಲು.  ಎತ್ತರಕ್ಕೆ ಬೆಳೆಯುತ್ತಿದ್ದ ಹುಲ್ಲುಗಾವಲಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ಸಣ್ಣ ಕೊಳಗಳು  ಮೂಡುತ್ತಿದ್ದವು.  ಒಟ್ಟಾರೆ ನೋಡುವುದಕ್ಕೆ ಆಫ್ರಿಕಾದ ಹುಲ್ಲುಗಾವಲಿನಂತೆ (Savannah) ಇತ್ತು.  ಪಕ್ಕದ ಹಳ್ಳಿಗಳಿಂದ ಸಾಕಿದ ಹಂದಿಗಳು ಬಂದು ಹುಲ್ಲುಗಾವಲಿನ  ನಡುವೆ ಓಡಾಡಿಕೊಂಡಿರುತ್ತಿದ್ದವು.  ಒಂದು ದಿನ ಅಪ್ಪ ನಮ್ಮನ್ನು ‘ಹಟಾರಿ’ ಎಂಬ ಹಾಲಿವುಡ್ ಸಿನಿಮಾಗೆ ಕರೆದುಕೊಂಡು ಹೋಗಿ ಸಿನಿಮಾವನ್ನು ತೋರಿಸಿದರು.  ಆ ಸಿನಿಮಾದಲ್ಲಿ ಆಫ್ರಿಕಾದ ಘೇ೦ಡಾಮೃಗವನ್ನು ಸೆರೆ ಹಿಡಿಯುವ ದೃಶ್ಯ ಅತ್ಯಂತ ರೋಮಾಂಚಕಾರಿಯಾಗಿತ್ತು. ಆಫ್ರಿಕಾ ಹುಲ್ಲುಗಾವಲಿನಲ್ಲಿ ಜೀಪಿನ ಅಂಚಿನಲ್ಲಿ ಕುಳಿತ ಆಗಿನ ಕಾಲದ ಸೂಪರ್ ಹೀರೋ ಜಾನ್ ವೈನ್ ಒಂದು ಉದ್ದವಾದ ಗಳುವಿಗೆ  ಬಲವಾದ  ಹಗ್ಗದ ಕುಣಿಕೆಯನ್ನು ಹೊಂದಿಸಿ ಘೇ೦ಡಾಮೃಗಗಳನ್ನು ಅಟ್ಟಿಸಿಕೊಂಡು ಹೋಗಿ ಅದನ್ನು ಹಿಡಿದು ಮೃಗಾಲಯಗಳಿಗೆ ಸಾಗಿಸುವ ಕಥೆ ನಮಗೆ ಬಹಳ ವಿಸ್ಮಯವೆನಿಸಿತ್ತು.  ಬಹಳ ರೋಚಕವಾದ ಸಿನಿಮಾ, ಆಫ್ರಿಕಾದ ಬಲಿಷ್ಠ ಮತ್ತು ಅಪಾಯಕಾರಿಯಾದ ಘೇ೦ಡಾಮೃಗ ಮನುಷ್ಯರ ಮೇಲೆ ಧಾಳಿ ಮಾಡುವುದು, ಜೀಪುಗಳನ್ನು ಎತ್ತಿ ಉರುಳಿಸುವುದು ನಮ್ಮ ಕುತೂಹಲನ್ನು ಕೆರಳಿಸಿದ್ದವು.  ಸಿನಿಮಾ ನೋಡಿ ಬಂದ ಕೆಲವು ದಿನಗಳಲ್ಲಿ, ಅದೇ ಗುಂಗಿನಲ್ಲಿದ್ದ ನಮಗೆ ಮನೆ ಸುತ್ತ ಮುತ್ತ ಅಡ್ಡಾಡುತ್ತಿದ್ದ ಹಂದಿಗಳು ಮಿನಿ ಘೇ೦ಡಾಮೃಗಗಳಂತೆ ಕಾಣಿಸತೊಡಗಿದವು.  ಹಾಗೆ ಕೆಲವು ಸಾಹಸ ಆಲೋಚನೆಗಳು ಮನಸ್ಸಿನಲ್ಲಿ ಮೂಡತೊಡಗಿದವು.  ಸರಿ, ಅಣ್ಣ  ಜಯದೇವ ಅಪ್ಪನನ್ನು ಕಾಡಿ ಬೇಡಿ ಒಂದು ಬಾಡಿಗೆ ಸೈಕಲನ್ನು ತಂದುಬಿಟ್ಟ.  ಯಾಕೆ? ಏನು? ಎಂಬ ವಿಚಾರ ಅವರಿಂದ ಗುಟ್ಟಾಗಿಯೇ ಇಟ್ಟಿದ್ದೆವು.  ಉದ್ದವಾದ ಗಳುವನ್ನು ಹುಡುಕಿ ಒಂದು ಬಿಳಿ ಹಗ್ಗವನ್ನು ತೆಗೆದುಕೊಂಡು ಅದನ್ನು ಕುಣಿಕೆಯಾಗಿಮಾಡಿ ಹಾಟಾರಿ ಸಿನಿಮಾದಲ್ಲಿ ಕಂಡ ಘೇ೦ಡಾಮೃಗ ದೃಶ್ಯವನ್ನು ನಾವು ನಿಜ ಜೀವನದಲ್ಲಿ ಆಡಿಬಿಡೋಣ ಎಂದು ನಿರ್ಧರಿಸಿದೆವು.  ಸರಿ, ಅಣ್ಣ ನನ್ನ ಕೈಗೆ ರೆಡಿಯಿದ್ದ ಗಳು ಮತ್ತು ಹಗ್ಗವನ್ನು ಕೊಟ್ಟು ಹಿಂದಿನ ಕ್ಯಾರಿಯರ್ ಮೇಲೆ ಕುಳಿತು ಹಂದಿಗಳು ಹತ್ತಿರವಾದಾಗ ಗಳುವನ್ನು ಚಾಚಿ ಅದರ ಕುತ್ತಿಗೆಗೆ ಕುಣಿ ಸುತ್ತಿಕೊಂಡಾಗ ಹಗ್ಗವನ್ನು ಎಳೆಯಬೇಕೆಂದು ಸೂಚನೆ ನೀಡಿದ.  ಪುಳಕಿತಗೊಂಡಿದ್ದ ನಾನು ಸಂತಸದಿಂದ ಒಪ್ಪಿಕೊಂಡೆ.  ಅಣ್ಣ ಸೈಕಲ್ ಸಾರಥ್ಯದಲ್ಲಿ ತೊಡಗಿ ಹಂದಿಯನ್ನು ಅಟ್ಟಸಿಕೊಂಡು ಹೊರಟು ಸೈಕಲ್ ತುಳಿಯುತ್ತಿದ್ದ.   ನಾನು ಸರಿಯಾದ ಸಮಯಕ್ಕೆ ಕಾದು ಹಗ್ಗವನ್ನು ಹಂದಿಯ  ಕುತ್ತಿಗೆಗೆ ಹಿಡಿಯುವ ಪ್ರಯತ್ನ ನಡೆಸಿದೆ.  ಹಂದಿಗಳು ಒಂದೇ ದಿಕ್ಕಿನಲ್ಲಿ ನಮಗೆ ಅನುಕೂಲವಾಗುವಂತೆ ಓಡದೆ ಅಡ್ಡಾ ದಿಡ್ಡಿ ಓಡತೊಡಗಿದವು.  ಇನ್ನೇನು ಸಿಕ್ಕಿಬಿಟ್ಟಿತು ಎನ್ನವಷ್ಟರಲ್ಲಿ ಹಂದಿ ತಪ್ಪಿಸಿಕೊಂಡು ಬಿಡುತ್ತಿತ್ತು.  ಸ್ವಲ್ಪ ಸಮಯದ ನಂತರ ಆ ಜವುಗು ಪ್ರದೇಶದಲ್ಲಿ ಸೈಕಲ್ ಒಮ್ಮೆ ಕೊಚ್ಚೆಯಲ್ಲಿ ಸಿಕ್ಕು ಅಣ್ಣ ತನ್ನ ಆಯ ತಪ್ಪಿ ಇಬ್ಬರು ಕೊಚ್ಚೆಯಲ್ಲಿ ಬಿದ್ದೆವು.  ಬಟ್ಟೆ, ಕೈ, ಮೈ ಎಲ್ಲವು ಕೊಚ್ಚೆ!  ಅಂಗಿಗಳೆಲ್ಲಾ ವದ್ದೆ,  ಜೊಂಡು ನೀರಿನ ದುರ್ವಾಸನೆ.  ಅಲ್ಲಿದ್ದ ಹಂದಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಓಡಿಹೋದವು . ನಮ್ಮ ದುಸ್ಸಾಹಸ ಹೀಗೆ ಕೊನೆಗೊಂಡು, ಅಪ್ಪ ಅಮ್ಮನಿಗೆ ಯಾವ ಸಬೂಬು ಹೇಳುವುದೆಂದು ಚಿಂತಾಕ್ರಾಂತರಾಗಿ ಕೊನೆಗೆ ನಾನು ಸೈಕಲ್ ಕಲಿಯಲು ಹೋಗಿ ಹೀಗಾಯಿತೆಂದು ಹೇಳಿ ಬೈಸಿಕೊಂಡು ಸ್ನಾನಕ್ಕೆ ಇಳಿದೆವು. ಹಂದಿ ಹಿಡಿಯುವ ‘ಹಟಾರಿ’ ಪ್ರಸಂಗ ನಮ್ಮಿಬ್ಬರ ನಡುವೆ ಬಹಳ ವರ್ಷ ಗುಟ್ಟಾಗಿತ್ತು.

ನಾವು ಹೈದರಾಬಾದಿನಲ್ಲಿದ್ದ ಕಾಲದಲ್ಲಿ ಎನ್ ಟಿ ರಾಮರಾವ್ ತಮ್ಮ ಸಿನಿಮಾ ಕ್ಷೇತ್ರದ ಉತ್ತುಂಗದಲ್ಲಿದ್ದು ಕೇಂದ್ರ ಬಿಂದುವಾಗಿದ್ದರು.  ಅವರು ನಟಿಸಿದ ಲವ-ಕುಶ, ನರ್ತನ ಶಾಲಾ ಚಿತ್ರಗಳು ಬಹಳ ಜನಪ್ರಿಯವಾಗಿದ್ದವು.  ಈ ಪೌರಾಣಿಕ ಚಿತ್ರಗಳನ್ನು ಅಪ್ಪ ಅಮ್ಮನ ಜೊತೆ ನೋಡಿದ ನಮಗೆ ಅಷ್ಟು ಹೊತ್ತಿಗೆ ತೆಲುಗು ಮತ್ತು ಹಿಂದಿ ಚೆನ್ನಾಗಿ ಮಾತನಾಡಲು ಬರುತ್ತಿತ್ತು.  ಅಮ್ಮ ಮನೆಗೆಲಸಕ್ಕೆ ಬರುತ್ತಿದ್ದವರಿಂದ ಮತ್ತು  ಅಕ್ಕಪಕ್ಕದವರೊಡನೆ ವ್ಯವಹರಿಸುತ್ತಾ ತೆಲುಗು ಕಲಿತುಬಿಟ್ಟರು.  ನಾವು  ಮಕ್ಕಳು ಶಾಲೆಯಲ್ಲಿ ತೆಲುಗು ಮತ್ತು ಹಿಂದಿ ಮಾತನಾಡಲು ಕಲಿತು ಬಿಟ್ಟೆವು.  ಅಪ್ಪ ಯುನಿವರ್ಸಿಟಿಯಲ್ಲಿ ಎಲ್ಲರೊಡನೆ ಇಂಗ್ಲೀಷಿನಲ್ಲಿ ವ್ಯವಹರಿಸುತ್ತಿದ್ದು ಅವರಿಗೆ ತೆಲುಗು ಮತ್ತು ಹಿಂದಿ ಸ್ವಲ್ಪ ಮಟ್ಟಿಗೆ ಅರ್ಥವಾಯಿತೇ ಹೊರತು ಮಾತನಾಡಲು ಸಾಧ್ಯವಾಗಲಿಲ್ಲ.  ಚಿಕ್ಕ ವಯಸ್ಸಿನಲ್ಲಿ ಒಟ್ಟಿಗೆ ಹಲವಾರು ಭಾಷೆಗಳನ್ನು ಕಲಿಯುವುದು ಸುಲಭ.  ಈ ಪೌರಾಣಿಕ ಚಿತ್ರ ಗಳ ಕ್ಲೈಮಾಕ್ಸ್ ಯುದ್ಧ ದೃಶ್ಯಗಳಲ್ಲಿ ಕಂಡ ಬಿಲ್ಲು ಬಾಣ, ಬ್ರಹ್ಮಾ ಸ್ತ್ರ ಇತ್ಯಾದಿಗಳು ನಮ್ಮನ್ನು ಪುಳಕಿತಗೊಳಿಸಿದ್ದವು.  ನಾನು ಅಣ್ಣ ಮನೆಯಲ್ಲಿ ಬಿಲ್ಲು ಬಾಣಗಳನ್ನು ತಯಾರಿಸಿ ಒಬ್ಬರ ಮೇಲೆ ಒಬ್ಬರು ಬಾಣಗಳನ್ನು ಬಿಟ್ಟು ಆಟವಾಡುತ್ತಿದ್ದೆವು.  ಸದ್ಯ ಯಾವ ಅನಾಹುತ ಜರುಗಲಿಲ್ಲ.  ಬಾಣಗಳಿಗಾಗಿ ಅಂಚಿಕಡ್ಡಿಗಳನ್ನು ಯಥೇಚ್ಛವಾಗಿ ಉಪಯೋಗಿಸಿ ಅಮ್ಮನ ಅಂಚಿಕಡ್ಡಿ ಪೊರಕೆ ಸೊರಗಿಹೋಗಿತ್ತು, ಅವರು ನಮ್ಮನ್ನು ಇದರ ಬಗ್ಗೆ ಪ್ರಶ್ನಿಸಿದಾಗ ನಾನು ಅಣ್ಣ ಗೊತ್ತಿಲ್ಲ ಎಂದು ತಲೆ ಅಲ್ಲಾಡಿಸಿಬಿಟ್ಟೆವು!  ಮಕ್ಕಳ ಮೇಲೆ ಸಿನಿಮಾ ಎಷ್ಟು  ಗಾಢವಾದ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಈ ಘಟನೆಗಳು ಒಳ್ಳೆಯ ಉದಾಹರಣೆ ಎನ್ನಬಹುದು.

***

ಕೃಪೆ: ನಾಸಾ ಜೆಟ್ ಪ್ರೊಪಲ್ಶನ್ ಲ್ಯಾಬ್ ಐತಿಹಾಸಿಕ ಚಿತ್ರಸಂಗ್ರಹ

ನಾವು ಹೈದರಾಬಾದಿನಲ್ಲಿದ್ದಾಗ 1965ರ ಚಳಿಗಾಲದ ಸಮಯ. ಅಪ್ಪ ನಮ್ಮನ್ನೆಲ್ಲಾ ಬೆಳಗಿನ ಜಾವ 4 ಗಂಟೆಗೆ ಎಚ್ಚರಿಸಿ ಮಕ್ಕಳಾದ ನಮ್ಮನ್ನು ಮತ್ತು ಅಮ್ಮನನ್ನು ಮನೆಯಿಂದ ಆಚೆ ರಸ್ತೆಯಲ್ಲಿ ನಾಲ್ಕು ಹೆಜ್ಜೆ ಕರೆದುಕೊಂಡು ಹೋಗಿ ನಿಸರ್ಗದ ಒಂದು ಅದ್ಭುತವನ್ನು ತೋರಿಸಿದರು. ಅದು ಆಕಾಶದಲ್ಲಿಯ ಒಂದು ಉಜ್ವಲವಾದ ಧೂಮಕೇತು!  ಅದಕ್ಕೆ ಒಂದು ದೊಡ್ಡ ತಲೆ ಇದ್ದು ಉದ್ದನೆಯ ಬಾಲವಿತ್ತು.  ಸುಮಾರು ಹೊತ್ತು  ಚಲಿಸುವಂತೆ  ಕಂಡು ಬೆಳಕು ಹರಿದಾಗ ಮಾಯವಾಗುತ್ತಿತ್ತು.  ಚಳಿಯಲ್ಲಿ ನಡುಗುತ್ತಾ ಶಾಲು ಹೊದ್ದು ಎಲ್ಲರ ಜೊತೆ ಧೂಮಕೇತುವನ್ನು ನೋಡಿದ್ದ ನೆನಪು  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.  ಇದರ ಬಗ್ಗೆ ಇತ್ತೀಚಿಗೆ ಗೂಗಲ್ ಮಾಡಿದಾಗ ಇದರ ಹೆಸರು ‘ಇಕೆಯ–ಸೆಕಿ’ ಎಂದು ಗುರುತಿಸಲಾಗಿತ್ತು  ಮತ್ತು ಸಾವಿರಾರು ವರ್ಷದಲ್ಲಿ ಕಂಡ 9-10 ಪ್ರಖರವಾದ ಧೂಮಕೇತುಗಳಲ್ಲಿ ಇದೂ ಒಂದು ಎಂದು ದಾಖಲಿಸಲಾಗಿದೆ.  ಈ ಧೂಮಕೇತು ಕಾಣಿಸಿಕೊಂಡ ಮುಂದಿನ ಮೂರು ತಿಂಗಳಲ್ಲಿ ನಮ್ಮ ದೇಶದ ಆಗಿನ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ತಾಷ್ಕೆಂಟಿನಲ್ಲಿ ಅನಿರೀಕ್ಷಿತವಾಗಿ ತೀರಿಕೊಂಡರು.  ಜನ ಸಾಮಾನ್ಯರು ಧೂಮಕೇತು ಅಶುಭ ಸೂಚಕವೆಂದು ಶಾಸ್ತ್ರಿಯವರ ಅಕಾಲಮರಣಕ್ಕೆ ಕಾರಣವಾಯಿತು ಎಂದು ಅವೈಜ್ಞಾನಿಕ ವದಂತಿಯನ್ನು ಹಬ್ಬಿಸಿದರು.  ಗ್ರಹಣದಿಂದ ಹಿಡಿದು ಬಾಹ್ಯಾಕಾಶದಲ್ಲಿ ಸಂಭವಿಸುವ ನಿಸರ್ಗದ ಕ್ರಿಯೆಗಳನ್ನು ಅಶುಭವೆಂದು ಪರಿಗಣಿಸುವುದು ನಮ್ಮ ಸಂಸ್ಕೃತಿಗಳಲ್ಲಿ ಬೆಸೆದುಕೊಂಡು ಬಂದಿರುವ ವಿಚಾರ.

ಈ ಹಿನ್ನೆಲೆಯಲ್ಲಿ ಇನ್ನೊಂದು ಘಟನೆ ನನ್ನ ನೆನಪಿಗೆ ಬಂದಿದೆ.  ನನ್ನ ತರೀಕೆರೆ ಅಜ್ಜ ಸಂಪ್ರದಾಯಸ್ಥರು, ವ್ಯವಹಾರ ಚತುರರು, ಕನ್ನಡ ಓದು ಬರಹ ಬಲ್ಲವರು, ಅನುಕೂಲಸ್ಥರು; ಹಾಗೆಯೇ ತಮ್ಮ ಮುಗ್ಧತೆಯನ್ನು ಉಳಿಸಿಕೊಂಡವರು. 1969ರ ಜುಲೈ ತಿಂಗಳು ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಒಂದು ಸಣ್ಣ ಹೆಜ್ಜೆ ಇಟ್ಟು ಅದು ಮನುಕುಲದ ಮಹತ್ವದ ಹೆಜ್ಜೆಯಾಗಿತ್ತು.  ಆ ಹೊತ್ತಿಗೆ ಅಜ್ಜನಿಗೆ ಎಂಬತ್ತು ವರ್ಷ ಕಳೆದಿರಬಹುದು.  ನನ್ನ ಅಣ್ಣ ಜಯದೇವನಿಗೆ ವಿಜ್ಞಾನದಲ್ಲಿ ಬಹಳ ಆಸಕ್ತಿ.  ನ್ಯಾಷನಲ್ ಕಾಲೇಜಿನ ಡಾ. ಎಚ್ ಎನ್ ಅವರ ವಿದ್ಯಾರ್ಥಿಕೂಡ, ಅವನಿಗೆ ಇದು ಬಹಳ ರೋಮಾಂಚಕಾರಿಯಾಗಿದ್ದ ವಿಷಯ.  ಅಜ್ಜನ ಬಳಿ ಬಂದು ‘ಅಜ್ಜ, ಮನುಷ್ಯ ಚಂದ್ರನ ಮೇಲೆ ಕಾಲಿಟ್ಟಿದ್ದಾನೆ  ಗೊತ್ತಾ’ ಎಂದು ಸುದ್ದಿಯನ್ನು ಮುಟ್ಟಿಸಿದ.  ಅಜ್ಜ ಅವನು ತಮಾಷೆ ಮಾಡುತ್ತಿದ್ದಾನೆ ಎಂದು ನಕ್ಕು ‘ಹೋಗೊ ಹೋಗೊ ಅದು ಹೇಗೆ ಸಾಧ್ಯ’ ಎಂದು ಅಲ್ಲಗೆಳೆದರು.  ಅಣ್ಣ ಓಡಿಹೋಗಿ ಅವತ್ತಿನ ಪೇಪರ್ ಕೈಗೆತ್ತಿಕೊಂಡು ಅಂದು ಪ್ರಕಟವಾದ ಸುದ್ದಿಯನ್ನು ಅಜ್ಜನ ಮುಂದೆ ಹಿಡಿದುಬಿಟ್ಟ.  ಅಜ್ಜನ ನಂಬಿಕೆಗೆ ಒದಗಿದ ‘ಶಾಕ್ ‘ ನಮಗೆಲ್ಲಾ ಅರಿವಾಯಿತು.  ಅವರು ಬಹಳ ಹೊತ್ತು ಆ ಸುದ್ದಿಯನ್ನು ಮತ್ತೆ ಮತ್ತೆ ಓದಿ ಮೌನವಾಗಿ ಕುಳಿತುಬಿಟ್ಟರು.  ಅವರು ಪ್ರತಿ ದಿನ ಪೂಜೆ ಮಾಡುತ್ತಿದ್ದ ಚಿತ್ರದಲ್ಲಿನ ಗಂಗೆ ಮತ್ತು ಚಂದ್ರರಿಂದ ಅಲಂಕೃತ ತಲೆಯ ಶಿವನ ಸುಂದರ ಮುಖ ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿ ಅವರ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿದ್ದಿರಬಹುದು.  ಅವರಿಗೆ ಆ ಪವಿತ್ರವಾದ ಚಂದ್ರನ ಮೇಲೆ ಮನುಷ್ಯ ಪಾದಾರ್ಪಣೆ ಮಾಡಿದ್ದು ಅಶುಭವೆಂದು ಅನಿಸಿರಬಹುದು.

***

ಇಂಥವೇ ಎಷ್ಟೋ ಬಾಲ್ಯದ ನೆನಪುಗಳು ಮನದಲ್ಲಿ ಅಚ್ಚಳಿಯದಂತೆ ಮನೆಮಾಡಿವೆ. ಆಗಾಗ ಮನದ ಸ್ಕ್ರೀನಿನಲ್ಲಿ ಈ ಫೈಲುಗಳು ತಾನೇ ತಾನಾಗಿ ಸಿನಿಮಾದಂತೆ ಓಡಿ ಮುದ ಕೊಡುತ್ತವೆ. ಮುಂದೆ ಸಮಯ ಸಿಕ್ಕರೆ ಒಂದು ಪುಸ್ತಕವನ್ನೇ ಬರೆದುಬಿಡೋಣ ಅನ್ನಿಸುವಂತೆ ಮಾಡಿವೆ.

  • ಡಾ. ಜಿ ಎಸ್ ಶಿವಪ್ರಸಾದ್.

8 thoughts on “ಬಾಲ್ಯದ ನೆನಪುಗಳು – ಜಿ ಎಸ್ ಶಿವಪ್ರಸಾದ್

  1. ನಿಮ್ಮ ಬಾಲ್ಯದ ನೆನಪುಗಳು ಮನರಂಜನೀಯವಾಗಿವೆ. ರೈಲು ಪ್ರಯಾಣದ ರೋಚಕತೆ ನನ್ನನ್ನು ಇಂದಿಗೂ ಕಾಡುತ್ತದೆ. ದಾಂಡೇಲಿಯ ಸುತ್ತಮುತ್ತ ಇಂದಿಗೂ ಕೋಲು – ಕುಣಿಕೆ ಹಿಡಿದು ಹಂದಿ ಬೇಟೆ ಆಡುತ್ತಾರೆ. ಕಸಬರಿಗೆ ಕಡ್ಡಿ ( ಹಿಡಿಕಡ್ಡಿ) ಬಳಸಿ ಮಾಡುವ ಆಟಿಕೆಗಳು ನಮ್ಮೆಲ್ಲರ ಬಾಲ್ಯದ ಅವಿಭಾಜ್ಯ ಅಂಗ. ಹಿತ್ತಲಲ್ಲೇ ತೆಂಗಿನ ಮರ ಇರುತ್ತಿದ್ದರಿಂದ ಅಮ್ಮನ ಬೈಗುಳ ಕೇಳುವ ಸಂಕಷ್ಟ ಬರಲಿಲ್ಲವಷ್ಟೆ!

    ಲಘು ಹಾಸ್ಯಬರಿತ ನಿಮ್ಮ ಶೈಲಿ ಲೇಖನಕ್ಕೆ ಮೆರಗು ನೀಡಿದೆ.

    – ರಾಂ

    Like

  2. ನಿಮ್ಮೆಲ್ಲರ ಅನಿಸಿಕೆ ಮತ್ತು ಉತ್ತೇಜನಕ್ಕಾಗಿ ಧನ್ಯವಾದಗಳು

    Like

  3. ಪ್ರಸಾದ್ ಅವರೇ, ನಿಮ್ಮ ಬಾಲ್ಯದ ಅನುಭವಗಳು ಅದ್ಭುತವಾಗಿವೆ. ಶೈಲಿ ಯಲ್ಲಿ ಬ್ರಾಡ್ಗೇಜ್ ಎಕ್ಸ್ಪ್ರೆಸ್ ತರದ ಓಟ! ಸರಣಿಗೆ ರೆಡ್ ಸಿಗ್ನಲ್ ಹಾಕಿ ಸಿಗ್ನಲ್ ಬಾಕ್ಸ್ ಗೆ ಬೀಗ ಹಾಕಿ ಮನೆಗೆ ಹೊರಟ (ಸಂಪಾದಕ) ಗುಡೂರ್ ರೇಲ್ವೆಮನ್ ಅವರನ್ನು ಕರೆಸಿ ಹಸಿರು ಬಾವುಟ ಬಿಟ್ಟು ಚುಕ್ ಬುಕ್ ಅಂತ ‘ಬುಕ್ಕಿನ’ ಕಡೆ ಸಾಗಿದೆ ಈ ಬಾಲ್ಯದ ನೆನಪಿನ ಗಾಡಿಯ ಸವಾರಿ. ಬಗ್ಗಿ ಬಗ್ಗಿ ನೋಡಬೇಕು ಎಷ್ಟು ವೆರೈಟಿ ಬಣ್ಣದ ‘ಡಬ್ಬಿಗಳು'(ಅನುಭವ). ನಿಮ್ಮ ಉಸ್ಮಾನಿಯಾ ಪ್ರಯಾಣದಂತೆ! ಈ ಸರಣಿಯ ಸ್ಫೂ ರ್ತಿ ಒಂದು ‘ಅನಿವಾಸಿಗಳ ರೈಲು ಬುತ್ತಿಯಿಂದ’ ಅಂತ “ಚಿಕ್ಕ ‘ಬುಕ್ಕು'” ಹೊರಡಿಸುವಾ! ನಿಮ್ಮ ಕಣ್ಣಲ್ಲಿಯ ಕಿಡಿಯನ್ನು ತಿರುಚಿದ ಸೀರೆಯ ತುದಿಯಿಂದ ತೆಗೆದ ತಾಯಿಗೆ ಅನಂತ ಅಭಿನಂದನೆಗಳು. ಈ ದೇಶದ ಕಲ್ಲಿದ್ದಲು ಗಣಿಗಳಲ್ಲಿ ಯಾ ಫ್ಯಾಕ್ಟರಿಯಲ್ಲಿ ಸರ್ವೇಸಾಮಾನ್ಯವಾಗಿ ಮುರಿದ ಮ್ಯಾಚ್ ಸ್ಟಿಕ್ ತುದಿಯಿಂದ ತೆಗೆಯುವದು ರೂಢಿ. ನಮಗೂ ನಮ್ಮ ತಾಯಿ ’ಹತಾರಿ’ (ಸ್ವಾಹಿಲಿಯಲ್ಲಿ ‘ಗಂಡಾಂತರ-ಎಚ್ಚರಿಕೆ‘) ಹೇಳುವರು. ಅವರ ಮಿತರು ಒಬ್ಬರು ಆಗಿನ ಐವತ್ತು ರೂಪಾಯಿ ಕೊಟ್ಟು FB ತೆಗೆಸಿದ್ದರಂತೆ. nನಾನು ಅದಕ್ಕೇ ಈ ವೃತ್ತಿಗಿಳಿದೆನಾ? ಸುಳ್ಳು.
    ನಿಮ್ಮ ಕವಿ ಕಲ್ಪನೆಯ ಉಸ್ಮಾನಿಯಾದ ಸವಾನಾ, ಹಂದಿ-ಘೇಂಡಾ ಗ್ಹರಣ ಬಹಳ ಸಾಹಸೀ ಕಥೆಯಾಗಿದೆ. ನನ್ನ ಅಣ್ಣ ಆ 1965 ರ ಧೂಮಕೇತುವಿನ ವರ್ಣನೆ ಮಾಡಿದ್ದು ನೆನಪಿದೆ. ನಾನು ಮಾತ್ರ ಮೊದಲನೆಯ ಎಂಬಿಬಿಯೆಸ್ ಪರೀಕ್ಷೆಯ ತಯಾರಿಯಲ್ಲಿ ಧುಮುಕಿ ಮುಳುಗಿದ್ದೆ.
    ಹಸಿರು ಬಾವಟವಿದೆ, ಮುಂದಿನ ಗಾಡಿಗೆ. ಹಳಿಯ ಮೇಲೆ ನನ್ನ ತೂತಿನ ಕಾಲಾಣೆಯನ್ಟಿಟ್ಟಿರುವೆ, ಯಾರ ಬಾಲ್ಯದ ನೆನಪುಗಳ ಮೂಟೆಯನ್ನು ಹೊತ್ತ ಯಾವ ರೈಲು ಗಾಡಿ ಅದನ್ನು ಚಪ್ಪಟೆ ಮಾಡುವುದು ಅಂತ ಕಾಯುತ್ತ!

    Like

  4. ಶಿವ ಪ್ರಸಾದ್ ಅವರ ಬಾಲ್ಯದ ನೆನಪುಗಳು ಬಹಳ ಸೊಗಸಾಗಿದೆ. ನಾನು ಕೈವಾರ (ಕೋಲಾರ ಡಿಸ್ಟ್ರಿಕ್ಟ್ ) ದಲ್ಲಿ ಬಾಲ್ಯವನ್ನು ಕಳೆದೆ. ನನ್ನ ಕಸಿನ್ ನಾರಾಯಣ ನಮ್ಮ ಮನೆಯಲ್ಲಿ ಇದ್ದ. ನಮ್ಮ ಸ್ಕೂಲ್ ಹತ್ತಿರ ದೊಡ್ಡ ಅಶ್ವಥಕಟ್ಟೆ ಯಲ್ಲಿ ಅರಳಿ ಮರ, ಇಲ್ಲಿ ಸುಮಾರು ಇಪ್ಪತ್ತು ಮೂವತ್ತು ಕೋತಿಗಳು. ನಾರಾಯಣನಿಗೆ ಒಂದು ಕೋತಿ ಹಿಡಿಯಬೇಕೆಂದು ಐಡಿಯಾ ಬಂತು. ಇಬ್ಬರು ಯೋಚನೆ ಮಾಡಿ, ಮರದ ಕೆಳಗೆ ಒಂದು ಸಣ್ಣ ಗುಂಡಿ ತೋಡಿ ಅದರಲ್ಲಿ ಕಡ್ಲೆಪುರಿ ಉದರಿಸುವುದು. ಒಂದು ಹಗ್ಗ ಸಂಪಾದಿಸಿ , ಒಂದು ತುದಿಯನ್ನು ಮರಕ್ಕೆ ಕಟ್ಟಿ ಗುಂಡಿಯಮೇಲೆ ಬರುವಂತೆ ಸರಿಯಾಗಿ ಗಂಟು ಹಾಕಿ ಹಗ್ಗದ ಕೊನೆಯಲ್ಲಿ ನಾವು ಕೂತು ಕೋತಿ ಬಂದು ಗುಂಡಿಯಲ್ಲಿ ಕೈ ಹಾಕಿದಾಗ ನಾವು ಹಗ್ಗವನ್ನು ಎಳೆದರೆ ಕೋತಿ ಯನ್ನು ಹಿಡಿಯಬಹುದು ಅಂತ ಪ್ಲಾನ್ . ಸುಮಾರು ಹತ್ತು ನಿಮಿಷದ ನಂತರ ಒಂದು ಕೋತಿ ಬಂತು ಕೈ ಹಾಕಿತು ನಾವು ಹಗ್ಗ ಯೆಳದ್ವಿ ಕೋತಿ ಕೈ ಹಗ್ಗದಲ್ಲಿ ಸಿಕ್ಕಿತು. ಅಷ್ಟರಲ್ಲಿ ನಮ್ಮ ಪ್ಲಾನ್ ಸಕ್ಸಸ್ ಆಯಿತು ಅಂದಾಗ ಒಬ್ಬ ರೈತ ನಾವು ಮಾಡಿದ್ದ ಕೆಲಸ ನೋಡಿ ಚೇಷ್ಟೆ ಮುಂಡೇವಾ ಅಂತ ಬೈದು ನಮ್ಮ ಪ್ಲೇನ್ನೆಲ್ಲ ಹಾಳು ಮಾಡಿದ. ಆ ಕೋತಿಯನ್ನು ಹಿಡಿದಮೇಲೆ ಅದನ್ನು ಏನು ಮಾಡಬೇಕು ಅನ್ನುವ ವಿಚಾರ ನಮ್ಮ ಗಮನಕ್ಕೆ ಬರಲಿಲ್ಲ. ಆದರೆ ಪ್ಲಾನಿಂಗ್ ಮತ್ತು execution ಚೆನ್ನಾಗಿತ್ತು. ಅಲ್ಲಿಂದ ಓಡಿದ್ದರಿಂದ ಕೋತಿ ಗತಿ ಏನಾಯಿತು ಗೊತ್ತಾಗಲಿಲ್ಲ.

    Liked by 1 person

  5. ಪ್ರಸಾದ್ ಅವರ ರೈಲು ಪ್ರಯಾಣ ಮತ್ತೆ ನನ್ನನ್ನೂ ಬಾಲ್ಯಕ್ಕೆ ಕರೆದುಕೊಂಡು ಪಯಣಿಸಿತು. ರೈಲು ಪ್ರಯಾಣ ಅವಿಸ್ಮರಣೀಯ.

    ಹಂದಿ ಹಿಡಿಯುವ ಪ್ರಸಂಗ ಓದಿ ನಕ್ಕೂ ನಕ್ಕೂ ಸಾಕಾಯಿತು. ಬಬ್ರುವಾಹನ ಸಿನೆಮಾ ಬಂದಾಗ ನಾವೂ ಅಷ್ಟೇ, ಮನೆಯ ಕಸಬರಿಗೆಯನ್ನು ಖಾಲಿ ಮಾಡಿದ್ದೆವು.

    ಬಹಳ ಆಪ್ತ ಬರಹ.

    -ಕೇಶವ

    Liked by 1 person

    • ಬಹಳ ಚೆನ್ನಾಗಿದೆ ಪ್ರಸಾದ್ ಅವರೇ!!! ಬಾಲ್ಯದ ದಿನಗಳಲ್ಲಿ ರೈಲು ಪ್ರಯಾಣ ಮುದ ನೀಡುವ ಅನುಭವ. ನನ್ನ ಮೊದಲ ರೈಲು ಪ್ರಯಾಣ ಕೊಡಗಿಂದ ಬಿಜಾಪುರ ಜಿಲ್ಲೆಯ ಸುದೀರ್ಘ ಪಯಣ!!!!!
      ” ಚಿಕುಬುಕು ಚಿಕುಬುಕು ರೈಲು ಬಂತು ರೈಲು” ಅದೇ ಹಾಡು ಗುನುಗುನುಗುತಾ ಕೊನೆಗೂ ಬಿಜಾಪುರ ತಲುಪಿದ ದಿನ ಜ್ಞ್ನ್ಯಾಪಕವಾಯಿತು!!!
      ವರಹಸ್ವಾಮಿ ಹಿಡಿಯುವ ಸನ್ನಿವೇಶ ಮಸ್ತು😂😂😂

      – Saವಿ

      Liked by 1 person

  6. ತುಂಬಾ ಚಂದದ ಬರಹ,
    ನನಗೂ ರೈಲಿನ ಹಳಿ , ರೈಲು ಓಡುವ ಪರಿಯ ಬಗ್ಗೆ ಯಾವಾಗಲೂ ಒಂದು ವಿಸ್ಮಯವಿತ್ತು.
    ಮೊತ್ತ ಮೊದಲ ಬಾರಿಗೆ ಮಂಗಳೂರಿನಲ್ಲಿ ರೈಲು ನೋಡಿದಾಗ, ಆದ ಖುಷಿ ಅಷ್ಟಿಷ್ಟಲ್ಲ.
    ಕಲ್ಲಿದ್ದಿಲಿನಿಂದ ರೈಲು ಓಡುತ್ತದೆ ಅನ್ನುವ ವಿಷಯ ಹೇಗೋ ತಿಳಿದುಕೊಂಡಿದ್ದೆ, ಆದರೆ ಹಳಿಯಲ್ಲಿ ಇರುವ ಜಲ್ಲಿ ಕಲ್ಲುಗಳನ್ನೇ ಕಲ್ಲಿದ್ದಿಲು ಅಂದುಕೊಂಡಿದ್ದೆ. ಬಿಸ್ಕಿಟ್ ನಂತಿದ್ದ ಟಿಕೆಟ್ ಅದರಮೇಲೆ ಕಪ್ಪು ಶಾಯಿಯಲ್ಲಿ ಬರೆದಿರುತ್ತಿದ್ದ ನಂಬರ್ಗಳು.ರೈಲಿನ ಬಗೆಗಿನ ಬೆರಗು ಹೇಳತೀರದು.
    ನಿಮ್ಮ ಹಂದಿ ಹಂಟಿಂಗ್ , ಗಾಳಿಪಟ ಚಿತ್ರದಲ್ಲಿನ ದೃಶ್ಯಗಳನ್ನ ನೆನಪಿಸಿತು.
    ಪುಸ್ತಕ ಬೇಗ ಬರಲಿ
    ಓದಲು ಕಾಯುತ್ತಿದ್ದೇನೆ.
    ಅಮಿತಾ ರವಿಕಿರಣ್

    Liked by 1 person

  7. ನಿಮ್ಮ ಬಾಲ್ಯದ ನೆನಪುಗಳ ಬುತ್ತಿ ನಿಜಕ್ಕೂ ಸೊಗಸಾಗಿದೆ. ನಿಮ್ಮ ಬರವಣಿಗೆಯ ಶೈಲಿ ಅದನ್ನು ಮತ್ತಷ್ಟು ಆಸಕ್ತಿಪೂರ್ಣವಾಗಿಸಿ, ಬಹಳ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ನೀವು ಬರೆದಿರುವ ರೈಲ್ ಪ್ರಯಾಣ ೬೦ರ ದಶಕದಲ್ಲಿ ನಾವು ನಮ್ಮ ಕುಟುಂಬದೊಡನೆ ಬಳ್ಳಾರಿಗೆ ಹೋದ ಅನುಭವವನ್ನು ಜ್ಞಾಪಿಸಿತು. ಚುಕ್ ಬುಕ್ ರೈಲಿನ ಆ ಸ್ವಾರಸ್ಯವಾದ ಪ್ರವಾಸ ಎಂದಿಗೂ ಮರೆಯಲಾಗದು. ನೀವು ವರ್ಣಿಸಿರುವ ಪ್ರತಿ ದೃಶ್ಯವೂ ನನ್ನ ಕಣ್ಣಿನ ಮುಂದೆ ಬಂದು ನಿಂತಂತಾಯ್ತು. ೬೦ರ ದಶಕದಲ್ಲಿ ಬೆಳೆದ ನನಗೆ ಹಠಾರಿ ಸಿನಿಮಾದ ವರ್ಣನೆ ನನ್ನ ಚಿಕ್ಕಪ್ಪನವರಿಂದ ಕೇಳಿದ್ದು ಇನ್ನು ನೆನಪಿದೆ. ಅದರಲ್ಲೂ ನೀವು ಬರೆದಿರುವ ರೈನಾಸಿರೋಸ್ ಸೆರೆಹಿಡಿಯುವ ದೃಶ್ಯವನ್ನು ನನ್ನ ಚಿಕ್ಕಪ್ಪ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು. ಆದರೆ ನೀವು ಮತ್ತು ನಿಮ್ಮ ಅಣ್ಣ ನಡೆಸಿದ ಸಾಹಸವನ್ನು ನಮಗೆ ನಿಜ ಜೀವನದಲ್ಲಿ ಪ್ರಯೋಗಿಸುವ ಅವಕಾಶ ಸಿಕ್ಕಲಿಲ್ಲ. ನಿಮ್ಮ ಸಾಹಸವನ್ನು ಮೆಚ್ಚುವಂತಹದೇ! ಲಾಲ್ ಬಹಾದ್ದೂರ್ ಶಾಸ್ತ್ರೀ ಅವರು ಸತ್ತಾಗ ಗೋಚರಿಸಿದ್ದ ಆ ಧೂಮಕೇತುವಿನ ಬಗ್ಗೆ ನಮ್ಮ ಮನೆಯಲ್ಲಿ ಬಹಳಷ್ಟು ಚರ್ಚೆ ನಡೆದಿತ್ತು. ಅದನ್ನು ಮೈಸೂರಿನ ನಿರ್ಮಲವಾದ ಆಕಾಶದಲ್ಲಿ ನೋಡಿದ್ದ ನೆನಪು ಮಸುಕು ಮಸುಕಾಗಿದೆ. ಇನ್ನು ಚಂದ್ರನ ಮೇಲೆ ಅಮೆರಿಕನ್ನರು ಕಾಲಿಟ್ಟ ಘಳಿಗೆಯಂತೂ ಮರೆಯುವ ಹಾಗೆ ಇಲ್ಲ. ನನ್ನ ತಾಯಿಯವರ ಅಕ್ಕ ನಮ್ಮ ಮನೆಗೆ ಬಂದಾಗ ಆ ವಿಷಯದ ಪ್ರಸ್ತಾಪವಾಗಿತ್ತು. ಇವರಿಗೆ ಚಂದ್ರನ ಮೇಲೆ ಕಾಲಿಡುವ ಯೋಗ್ಯತೆ ಇದೆಯೇ ! ಎಂದು ಆಕೆ ಗುಡುಗಿದ್ದು ನನಗೆ ಚೆನ್ನಾಗಿ ನೆನಪಿದೆ. ವಿಜ್ಞಾನವನ್ನು ಹಳಿಯುವ ಜನ ಬಹಳ ಮಂದಿ ಇದ್ದರು. ನನ್ನ ತಂದೆ ಒಬ್ಬ ಭೂಗರ್ಭಶಾಸ್ತ್ರಜ್ಞ. ಅವರು ನಮ್ಮ ತಾಯಿಯ ಕೈಯಲ್ಲಿ, ನಿನ್ನ ಅಕ್ಕನ ತಲೆ ಕೆಟ್ಟಿರಬೇಕು ಎಂದು ವಾಗ್ವಾದ ಮಾಡಿದ್ದೂ ಸಹ ಮರೆತಿಲ್ಲ. ಒಟ್ಟಿನಲ್ಲಿ ನಿಮ್ಮ ಬಾಲ್ಯದ ನೆನಪಿನ ಸರಣಿಯ ಲೇಖನವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು.
    ಉಮಾ ವೆಂಕಟೇಶ್

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.