`ಜನಪದ ಜಗುಲಿ` (ಈ-ಜಗುಲಿ ೩) ಕಾರ್ಯಕ್ರಮದ ವರದಿ – ರಮ್ಯ ಭಾದ್ರಿ

ಈ-ಜಗುಲಿಯನ್ನು ತುಂಬಿದ ಜನಪದದ ನಿನಾದ ..  

‘ಸದಾ ಅನಿರೀಕ್ಷಿತಗಳ ನಿರೀಕ್ಷೆಯಲ್ಲಿರುವುದೇ ಪ್ರಬುದ್ಧ ಬದುಕು’ ಎನ್ನುವ ನುಡಿಮುತ್ತಿನಂತೆ ನಮ್ಮೆಲ್ಲರ ಬದುಕಿನಲ್ಲಿ ಬಂದೆರಗಿದ ದೊಡ್ಡ ಅನಿರೀಕ್ಷಿತ ಮಹಾಮಾರಿ ಕರೋನ. ಈ ಕಾಣದ  ಕಂಟಕ ನಮ್ಮ ನಡುವೆಯಿದ್ದರೂ ಅದರೊಂದಿಗೆ ಬದುಕಲು ಕಲಿತಿದ್ದೇವೆ. ಹೊಸ ಸಹಜ (new normal) ಬದುಕಿಗೆ ಹೊಂದಿಕೊಳ್ಳಲು ಸಮಾಜಕ್ಕೂ, ಪರಿಸರಕ್ಕೂ ಸಹಕಾರಿಯಾಗುವಂತಹ, ನಮ್ಮ ಮುಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಬಹುದಾದ ಅನೇಕ ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈ ಹೊಂದಾಣಿಕೆ ಸಾಧ್ಯವಾಗಲು, ಬೀಗಮುದ್ರೆ ತಂದೊಡ್ಡಿದ ಸವಾಲುಗಳನ್ನು ಎದುರಿಸಲು ಬಹುತೇಕ ಜೊತೆಯಾಗಿದ್ದುದು ಅಂತರ್ಜಾಲ ವೆಂದರೆ ಎಲ್ಲರೂ ಒಪ್ಪುವಂತಹ ಮಾತು. ನಮ್ಮ ‘ಅನಿವಾಸಿ’ ಬಳಗಕ್ಕೂ ಇದರೊಂದಿಗಿನ ನಂಟು ಬಹಳ ದಿನಗಳದ್ದು. ಇತ್ತೀಚಿಗಂತೂ ಬಳಗದವರ ಒಡನಾಟದಿಂದ ಹಿಡಿದು, ಈಗಾಗಲೇ ಯಶಸ್ವಿಯಾಗಿ ನಡೆದ ‘ಥಟ್ ಅಂತ ಹೇಳಿ’, ‘ಈ ಹೊತ್ತಿಗೆ’, ಈ-ಜಗುಲಿ  ಕಾರ್ಯಕ್ರಮಗಳ ಫುಲ್ ಆನ್ ಎಂಟರ್ಟೈನ್ಮೆಂಟು! ಕವಿ ನಿಸಾರರ ಸ್ಮರಣೆಯಿಂದ ಪ್ರಾರಂಭವಾದ ನಮ್ಮ ‘ಈ-ಜಗುಲಿ’ಯ ಪಯಣ,  ಜಯಂತ್ ಕಾಯ್ಕಿಣಿಯವರೊಂದಿಗೆ ಸಂವಾದಿಸುತ್ತಾ ಬೆಳೆಯಿತು ಅನ್ನಬಹುದು. ಇದೀಗ ಈ-ಜಗುಲಿ 3 ರಲ್ಲಿ ಜನಪದ ಸಂಗೀತದ ಸಂಭ್ರಮವಿದ್ದುದರಿಂದ ಜನಪದ ಜಗುಲಿ ಎಂದು ನಾಮಕರಣವಾಯಿತು. 

ಜನಪದ ಜಗುಲಿ / ಈ-ಜಗುಲಿ 3 ಕಾರ್ಯಕ್ರಮದ ಪ್ರಚಾರಪತ್ರ

ಈ ಬಾರಿಯ ಈ-ಜಗುಲಿಗೆ ಹಲವು ವಿಶೇಷತೆಗಳಿವೆ. ಕಳೆದ ಎರಡು ಬಾರಿಯೂ ಅನಿವಾಸಿ ಬಳಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಾರ್ಯಕ್ರಮ, ಈ ಬಾರಿ ”ವಿವಿಡ್ಲಿಪಿ’ಯ ಸತ್ಯಪ್ರಮೋದ್ ಲಕ್ಕುಂಡಿ  ಹಾಗು ’ಹೆಚ್ ಎನ್ ಬಿ ಸಿ’ಯ (HNBC) ಹರೀಶ್ ರಾಮಯ್ಯ ಅವರ ಸಹಕಾರದಿಂದ ಪ್ರಪಂಚದ ಮೂಲೆ ಮೂಲೆಗೂ ನೇರಪ್ರಸಾರದಲ್ಲಿ ತಲುಪುವಂತಾಗಿದ್ದು ವಿಶೇಷ. ಜೊತೆಗೆ ಕಲಾವಿದರು ಹಾಡಿದ ತುಣುಕುಗಳ ಟೀಸರ್ ವೀಡಿಯೊ ತಯಾರಿಸಿ ಎಲ್ಲರಿಗೂ ಕಾರ್ಯಕ್ರಮದ ವಿವರಗಳನ್ನು ತಲುಪುವಂತೆ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಉತ್ತಮ ಪ್ರಚಾರ ದೊರೆತದ್ದು; ಪ್ರಮೋದ್ ಹಾಗು ಹರೀಶ್ ಅವರ  ಪ್ರಯತ್ನ ಸಫಲವಾಗಿ ವೀಕ್ಷಕರು ತಮ್ಮ ಮನೆಯ ಜಗುಲಿಯಿಂದ ಜನಪದ ಜಗುಲಿಯನ್ನು ನೋಡುವಂತಾಗಿ ಜನರ ಮೆಚ್ಚುಗೆಯನ್ನು ಪಡೆದದ್ದು ಇನ್ನುಳಿದ ವಿಶೇಷಗಳು. 

ತೆರೆಯ ಹಿಂದೆ 

ಮೊದಲೇ ಹೇಳಿದಂತೆ, ಈ ಕಾರ್ಯಕ್ರಮ ಗೂಗಲ್ ಮಾತೆ, ಫೇಸ್ಬುಕ್ ಅಕ್ಕ, ಯೂ ಟ್ಯೂಬ್ ಅಣ್ಣ, ಜೂಮ್ ರಾಯ, ವಾಟ್ಸ್ ಆಪ್ ದೇವಿ ಇವರೆಲ್ಲರ ಕೃಪಾಕಟಾಕ್ಷದಿಂದ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಿತು ಎಂದರೆ ತಪ್ಪಾಗಲಾರದು! ಈ-ಜಗುಲಿ 1 ಹಾಗು 2 ರ ನಂತರ 3ನೇಯದು ಸಂಗೀತಮಯವಾಗಿದ್ದರೆ ಚಂದ ಎನ್ನುವುದು ‘ಅನಿವಾಸಿ’ಯ ಸದಸ್ಯರ ಒಮ್ಮತದ ಅಭಿಪ್ರಾಯವಾಗಿತ್ತು. ಸಂಗೀತ ಎಂದ ತಕ್ಷಣ ಎಲ್ಲರಿಗೂ ಥಟ್ಟನೆ ಹೊಳೆದ ಹೆಸರು ಅಮಿತಾ ರವಿಕಿರಣ್. ಅಮಿತಾ ತಮ್ಮ ಸುಮಧುರ ಕಂಠ, ಭಾವ ತುಂಬಿ ಹಾಡುವ ಪರಿ, ಸಂಯೋಜನೆ, ಸಾಹಿತ್ಯ, ಕವನಗಳು, ಲೇಖನಗಳು, ಫೋಟೋಗ್ರಫಿ, ಅಡುಗೆಯ ವೈಖರಿ ಹೀಗೆ ಇನ್ನು ಹಲವಾರು ಪ್ರತಿಭೆಗಳ ಮೂಲಕ ಬಳಗದವರಿಗೆ ಅಚ್ಚುಮೆಚ್ಚು . ಹೆಸರು ಸೂಚಿಸಿದೊಡನೆ ಸಂತೋಷದಿಂದ ಒಪ್ಪಿ ಜವಾಬ್ದಾರಿಯನ್ನು ಹೊತ್ತು ಈ ಬಾರಿಯ ಜಗುಲಿಯನ್ನು ಜನಪದಮಯವನ್ನಾಗಿ ಮಾಡಿದರೆ ಹೇಗೆ ಎಂಬ ಹಂಬಲವನ್ನು ವ್ಯಕ್ತಪಡಿಸಿದರು. ಎಲ್ಲರೂ ಜನಪದಕ್ಕೆ ಸೈ ಎಂದ ಕೂಡಲೇ ವಾಟ್ಸ್ ಆಪ್ ದೇವಿಯ ದೆಸೆಯಿಂದ ಗುಂಪುಗಳನ್ನು ಮಾಡಿದ್ದಾಯಿತು. ’ಅನಿವಾಸಿ ಬಳಗ’ದ ದಿಗ್ಗಜರ (ಶ್ರೀವತ್ಸ ದೇಸಾಯಿ , ಕೇಶವ ಕುಲಕರ್ಣಿ, ರಾಂಶರಣ್, ಮುರಳಿ ಹತ್ವಾರ್) ಮಾರ್ಗದರ್ಶನದಲ್ಲಿ ಎಲ್ಲ ಅಭಿಪ್ರಾಯಗಳನ್ನು ಗ್ರಹಿಸಿ ಅಮಿತಾರವರು ಕಾರ್ಯಕ್ರಮದ ರೂಪು-ರೇಷೆಗಳನ್ನು ತಯಾರಿಸಿಯೇಬಿಟ್ಟರು. ಜನಪದ ಜಗುಲಿ ಅಮಿತಾರ ಕನಸಿನ ಕೂಸು – ಅವರೇ ಹೇಳಿದ ಹಾಗೆ ಇದು ಅವರ ಕನಸುಗಳನ್ನು ಆಳಿದ ಕಾರ್ಯಕ್ರಮ. ಅವರ ಕ್ರಿಯಾಶೀಲತೆ, ತನ್ಮಯತೆ, ಪರಿಶ್ರಮ ಮತ್ತು ಇದಕ್ಕೆಲ್ಲ ಅವರಿಗೆ ಜೊತೆಯಾದ ಗೌರಿ ಪ್ರಸನ್ನ ಅವರ ನೆರವು ಜಗುಲಿಯ ಯಶಸ್ಸಿನ ಗುಟ್ಟು ಎಂದರೆ ಅತಿಶಯೋಕ್ತಿಯಲ್ಲ.  ಇದೆಲ್ಲದರ ಹಿಂದೆ ಕಾಲ ಕಾಲಕ್ಕೆ  ಸಲಹೆ-ಸೂಚನೆಗಳನ್ನು ನೀಡುತ್ತಾ ಬೆನ್ನೆಲುಬಾಗಿ ನಿಂತವರು ನಮ್ಮ ದೇಸಾಯಿಯವರು. ಅವರ ಬಗ್ಗೆ ಎಷ್ಟು ಹೇಳಿದರು ಕಮ್ಮಿಯೇ; ಒಟ್ಟಿನಲ್ಲಿ ಅವರ ಎರಡು ಕೈಗಳು ನಮ್ಮ ಮೇಲೆ ಇದ್ದುದರಿಂದ ಈ-ಜಗುಲಿ 3 ಸುಸೂತ್ರವಾಗಿ ನೆರವೇರಿತು ಅನ್ನೋದಂತೂ ಸತ್ಯ. 

ತೆರೆಯ ಮೇಲೆ 

ಜನಪದ ಜಗುಲಿಯ ಮುಖ್ಯ ಉದ್ದೇಶ ಜನಪದ ಗೀತೆಗಳ ಮೂಲಕ ಜೀವನಚಕ್ರದ ದರ್ಶನ. ಕರ್ನಾಟಕದ ನಾಲ್ಕು ದಿಕ್ಕುಗಳಿಂದ ಆಯ್ದು ತಂದ ಪ್ರೀತಿ, ಪ್ರೇಮ, ಮದುವೆ, ಬಸಿರು, ಬಾಣಂತನ, ಜೋಗುಳದ ಹಾಡುಗಳ ಔತಣ ಬಡಿಸಿ, ನಮ್ಮ ಊರು ಕೇರಿಯ ಅಜ್ಜಿ-ಅಜ್ಜಂದಿರು ಹಾಡುತಿದ್ದ ಹಾಡುಗಳನ್ನು ನೆನಪಿಸುವ ಪ್ರಯತ್ನವಾಗಿತ್ತು .  ಈ  ಪ್ರಯತ್ನವು ಸಾರ್ಥಕವಾಯಿತು ಎನ್ನುವುದಕ್ಕೆ ಕಾಮೆಂಟುಗಳ ಮೂಲಕ ಹರಿದು ಬಂದ ವೀಕ್ಷಕರ ಪ್ರಶಂಸೆ, ಪ್ರೋತ್ಸಾಹವೇ ಸಾಕ್ಷಿ . ಅಮಿತಾ ಹಾಗು ಗೌರಿಯವರ ಸೊಗಸಾದ ನಿರೂಪಣೆ ನೋಡುಗರ ಕುತೂಹಲವನ್ನು ಹೆಚ್ಚಿಸಿತು. ಇಬ್ಬರೂ ಒಂದಿಷ್ಟೂ ಸಮಯವನ್ನು ವ್ಯರ್ಥ ಮಾಡದೆ ಸರಾಗವಾಗಿ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ  ನಡೆಸಿಕೊಟ್ಟರು. ಇಷ್ಟೆಲ್ಲಾ ಮೆಚ್ಚುಗೆ ಪಡೆದ ಈ ಜನಪದ ಜಗುಲಿಯ ಜೀವಾಳ ಭಾಗವಹಿಸಿದ ಎಲ್ಲ ಕಲಾವಿದರ ಸುಶ್ರಾವ್ಯ ಗಾಯನ. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ. 

ಜನಪದ ಜಗುಲಿಯಲ್ಲಿ ಪಾಲ್ಗೊಂಡ ಆಹ್ವಾನಿತ ಮತ್ತು ಅನಿವಾಸಿ ಬಳಗದ ಕಲಾವಿದರು

ಕನ್ನಡನಾಡಿನ ಪ್ರತಿಭಾವಂತ ಕಲಾವಿದ ಗಾಯಕ, ವಾದಕ, ನಟ, ಸಂಯೋಜಕ ದೇವಾನಂದ ವರಪ್ರಸಾದ್ ಅವರು ‘ಜನಪದ ಪ್ರೇಮಗೀತೆಗಳು’ ಎಂಬ ವಿಷಯವನ್ನು ಎತ್ತಿಕೊಂಡು ಮೂವತ್ತು ನಿಮಿಷಗಳ ಕಾಲ ಸೊಗಸಾದ ಹಾಡುಗಳು ಮತ್ತು ಅವಕ್ಕೊಪ್ಪುವ ವಿವರಣೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.  ‘ನಿಂಬೆಯ ಹಣ್ಣಂಗೆ ತುಂಬಿದ ಮೈಯ್ಯೋಳೇ ….’ ಎಂದು ಗೆಳೆಯ ತನ್ನ ಗೆಳತಿಯನ್ನು ವರ್ಣಿಸುವ ಗೀತೆಯ ಮತ್ತದರ ಹಿನ್ನೆಲೆಯ ವಿವರಣೆ;  ಕೋಲಾಟದ ಪದಗಳಲ್ಲಿ ಬರುವ ಪ್ರೇಮ, ಕೊಲಾಟದ ಕುಣಿತದ ಪ್ರಕಾರಗಳ ವಿವರಗಳು; ಹಲಗೆಯನ್ನು ಬಾರಿಸುತ್ತಾ ಅವರು ಹಾಡಿದ ‘ನೀರಿಗೋಗೋ ಹೆಣ್ಣೇ  ನೀ … ಕೋಲು ಕೋಲನ್ನ ಕೋಲು’, ‘ಮಾತಾಡ್ ಮಾತಾಡ್ ಮಲ್ಲಿಗೆ …’, ‘ಎಲ್ಲೋ ಜೋಗಪ್ಪ ನಿನ್ನರಮನೆ …’ ಇತ್ಯಾದಿ ಪ್ರೇಮಗೀತೆಗಳನ್ನು ಕೇಳುತ್ತಾ ಕೇಳುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ 

ಪ್ರಣಯದ  ನಂತರ ಮುಂದಿನದು ಮದುವೆ. ಜನಪದ ಕಲಾವಿದೆ ಕವಯಿತ್ರಿ ಶೋಭಾ ಸಾಗರ್, ಕಾಡುಗೊಲ್ಲರ  ಸಮುದಾಯದ ದುಗ್ಗಾಲಮ್ಮನ ಪದ ಮತ್ತು ಧಾರೆ ಹಾಡುಗಳನ್ನ ಹಾಡಿದರು. ಅದಕ್ಕೆ ಪೂರಕವಾಗಿ ಸುಮನಾ ಧ್ರುವ ಅವರು ಜರಿಯುವ ಹಾಡು ಹಾಡಿದರೆ, ವಧುವರರ ಆರತಿಗೆ ಹೇಳುವ ಶೋಭಾನೆಪದವನ್ನ ಸ್ನೇಹ ತಾಯೂರ್ ಹಾಡಿದರು.  ಸುಪ್ರಸಿದ್ಧ ಗಾಯಕಿ ದೀಪಶ್ರೀ ಪ್ರಣವ್ ಹಾಡಿದ ಗಂಡ-ಹೆಂಡಿರ ಮಧ್ಯೆ ನಡೆಯುವ ಒಂದು ಸಂವಾದ ಗೀತೆ ಭಾವಪೂರ್ಣವಾಗಿತ್ತು.

ಮದುವೆಯ ನಂತರ ಮನೆ, ಸಂಸಾರ, ಮಕ್ಕಳು ಅಲ್ಲವೇ? ಅಮಿತಾ ರವಿಕಿರಣ್ ಬಸುರಿಯ ಬಯಕೆ ಹಾಡನ್ನು ಪ್ರಸ್ತುತಪಡಿಸಿದರೆ, ಶಾಲಿನಿ ಸತೀಶ್ ಬಾಣಂತಿ ಹಾಡನ್ನೂ, ರಮ್ಯ ಭಾದ್ರಿ ಜೋಗುಳವನ್ನೂ ಸುಮಧುರವಾಗಿ ಹಾಡಿದರು.

ಉತ್ತರ ಕರ್ನಾಟಕದ ಭಾಷೆಯ ಸ್ಪಷ್ಟ ನುಡಿಗಟ್ಟು, ಶಿಶು ಪ್ರಾಸಗಳನ್ನು ವಾಚಿಸುತ್ತ ಗೌರಿ ಪ್ರಸನ್ನ  ಎಲ್ಲರನ್ನೂ ಬಾಲ್ಯದ ನೆನಪಿನಂಗಳಕ್ಕೆ ಕರೆದೊಯ್ದರು.

ಜನಪದ ಸಂಗೀತ ಅಂದಮೇಲೆ ಗೀಗೀ ಪದವಿದ್ದರೇ ಚಂದ!  ಲಕ್ಷ್ಮೀನಾರಾಯಣ ಗುಡೂರ ಗೀಗೀ ಪದದೊಂದಿಗೆ ಕಾರ್ಯಕ್ರಮದ ಕೊನೆಯ ಗೀತೆಯನ್ನು ಪ್ರಸ್ತುತಪಡಿಸಿದ್ದು ಸೊಗಸಾಗಿತ್ತು.   ಅಮಿತಾ ಭಾಗವಹಿಸಿದ ಕಲಾವಿದರು ಮತ್ತೂ ಈ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಿದವರಿಗೆಲ್ಲ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ‘ಜನಪದ ಜಗುಲಿ’ಗೆ ಇತಿಶ್ರೀ  ಹಾಡಿದರು.

ನನ್ನ ಅನುಭವ 

ಸಾಮಾನ್ಯ, ಸಾಮೂಹಿಕ, ಸರಳ, ಸ್ಪಷ್ಟ ನೇರ ಮಾತಿನ ಅಭಿವ್ಯಕ್ತಿ ಜನಪದ. ಪುರಾತನ ಪರಂಪರೆಯನ್ನು ಎತ್ತಿ ಹಿಡಿಯುವ ಕಂಠಸ್ಥ ಸಂಪ್ರದಾಯ.  ನನಗಂತೂ ಇಂತಹ ಜನಪದ ಜಗುಲಿಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಚಾರ.  ಕಾರ್ಯಕ್ರಮದ ತಯಾರಿಗಾಗಿ ನಡೆಸಿದ ಅಭ್ಯಾಸ, ಜೂಮ್ /ವಾಟ್ಸಪ್ಪ್ ಕರೆಗಳು, ಸಂದೇಶಗಳು, ವಾಯ್ಸ್ ನೋಟ್ ಗಳು, ಕಾರ್ಯಕ್ರಮ ತಂದ ಆ ಸಡಗರ, ಉತ್ಸಾಹ, ಭಯ ಎಲ್ಲವೂ ಒಂದು ಸುಂದರ ಅನುಭವ.  ಅಮಿತಾರವರು ನನಗೆ ಕಲಿಸಿಕೊಟ್ಟ ಹಾಡೇನೊ ಬಹಳ ಚೆನ್ನಾಗಿತ್ತು, ಆದರೆ ಎಲ್ಲರ ಮುಂದೆ ಹಾಡುವುದು ಹೇಗೆ ಎಂಬ ಭಯದಲ್ಲಿದ್ದ ನನಗೆ ಅಮಿತಾ ಹಾಗು ದೇಸಾಯಿಯವರು ‘you can do this’ ಎಂದು ಹುರಿದುಂಬಿಸಿದ ಮೇಲೆ, ಧೈರ್ಯ ಮಾಡಿ ಹಾಡಿದ್ದು ಮನಸ್ಸಿಗೆ  ಮುದನೀಡಿತು. ಒಟ್ಟಿನಲ್ಲಿ ಅದೊಂದು ಅದ್ಬುತ ತಂಡದ ಪರಿಶ್ರಮ   ಹೀಗೆ ಬೆನ್ನು ತಟ್ಟಿ ಒಬ್ಬರನ್ನೊಬ್ಬರು  ಪ್ರೋತ್ಸಾಹಿಸುವ ತಂಡ  ಜೊತೆಯಲ್ಲಿದ್ದರೆ ಗೆಲುವು ಕಟ್ಟಿಟ್ಟಬುತ್ತಿ. ಈ ಚಂದದ ಅವಕಾಶವನ್ನು ಕಲ್ಪಿಸಿಕೊಟ್ಟ ಅನಿವಾಸಿ ಬಳಗಕ್ಕೆ ನಾನು ಆಭಾರಿ. 

ಜನಪದ ಜಗುಲಿ ಕಾರ್ಯಕ್ರಮದ ಯೂ ಟ್ಯೂಬ್ ಆವೃತ್ತಿ ಇಲ್ಲಿದೆ.

********************************************************************************************************

10 thoughts on “`ಜನಪದ ಜಗುಲಿ` (ಈ-ಜಗುಲಿ ೩) ಕಾರ್ಯಕ್ರಮದ ವರದಿ – ರಮ್ಯ ಭಾದ್ರಿ

  1. ರಮ್ಯಾ ಭಾದ್ರಿಯವರ ವರದಿ ತುಂಬ ಚೆನ್ನಾಗಿ ಬಂದಿದೆ.ಮತ್ತೆ ಆ ಜಾನಪದ ಗೀತೆಗಳ ಸೊಗಡಿನಲ್ಲಿ ಮತ್ತೊಮ್ಮೆ ಮುಳುಗಿ ಮುದಗೊಳಿಸಿತು. ಈ ಜಗುಲಿಯ ಕಾರ್ಯಕ್ರಮ ಯೂಟ್ಯೂಬ್ ನಲ್ಲಿ ಮೂಡಿ ಬಂದು ಭಾರತದಲ್ಲೇ ಕುಳಿತು ನಾವೂ ನೋಡುವಂತಾದದ್ದಕ್ಕೆ ವಿವಿಡ್ಲಿಪಿ ಗೆ ಧನ್ಯವಾದಗಳು.ಇಂತಹ ಆಸಕ್ತಿದಾಯಕ ಕಾರ್ಯಕ್ರಮ ನೀಡಿದ ಈ ಜಗುಲಿಗೂ ಧನ್ಯವಾದಗಳು.ಸುಶ್ರಾವ್ಯವಾಗಿ ಹಾಡಿದ ಕಲಾವಿದರಿಗೆ , ವಿಶೇಷ ವಾಗಿ ಅಮಿತಾ ರವಿಕಿರಣ್ ಹಾಗೂ ಗೌರಿ ಪ್ರಸನ್ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.ಅವರ ನಿರೂಪಣೆ ತುಂಬ ಆಪ್ತವೆನಿಸಿದವು.ಮನೇಲಿ ಕುಳಿತು ಮಾತನಾಡಿದಂತೆ. ಇಲ್ಲಿ ಒಂದು ವಿಷಯ ಹೇಳಿದ್ರೆ ತಪ್ಪಾಗಲಾರದು ಅನಕೋತೀನಿ.ಈ ಜಗುಲಿಯ ಈ ಕಾರ್ಯಕ್ರಮದಿಂದ ಪ್ರೇರಿತಳಾಗಿ ನಾನೂ ಒಂದು ಬರಹ ಬರೆದೇ ಬಿಟ್ಟೆ – ” ಜಾನಪದ ಸಾಹಿತ್ಯದಲ್ಲಿ ಲಾಲಿ ಪದಗಳು” ಅಂತ.ಅದಕ್ಕೇ ಇನ್ನೊಮ್ಮೆ ನನ್ನ ‌ಧನ್ಯವಾದಗಳು ಈ ಕಾರ್ಯಕ್ರಮ ದ ರೂವಾರಿಗಳಿಗೆ.
    ಸರೋಜಿನಿ ಪಡಸಲಗಿ

    Like

  2. Ramya, just like your singing your article has the musical flow making the reader enjoy and experience the event again. Thank you 😊

    Radhika Joshi (through Whatsapp)

    Like

  3. Very well written Ramya. Gave excellent recap of activities for those who missed the event. Keep writing!! ✍️
    Lasya B (through whatsapp)

    Like

  4. ಈ ವಾರದ ರಮ್ಯಾರ ಬರಹ ಲವಲವಿಕೆ ಯಿಂದ ಕೂಡಿ ವರದಿ ಮಾತ್ರ ಆಗಿರದೆ ಆತ್ಮೀಯ ಮತ್ತು ಆಕರ್ಷಕವಾಗಿದೆ. ನಿಮ್ಮ ಬರಹಗಳು ಬರುತ್ತಿರಲಿ.

    ಪ್ರೇಮಲತ . ಬಿ (through whatsapp)

    Like

  5. ರಮ್ಯಾ ತುಂಬಾ ಚಂದ ಬರೆದಿದ್ದೀರಿ..
    ಓದ್ತಾ ನೆನಪಿನ ಬಂಡಿಯಲ್ಲಿ ಕೂತು.. ಓಡುತ್ತ ಹಿಂದೆ ಹೋದ ಘಟನೆಗಳನ್ನ ನೋಡಿದಂತೆ ಅನಿಸಿತು..
    ಮತ್ತೆ ಮತ್ತೆ ಇನ್ನು ಹೆಚ್ಚು ಬರೆಯುತ್ತಿರಿ.. ನಿಮ್ಮ ಬರವಣಿಗೆಯಲ್ಲಿ ಓದುಗನನ್ನು ಮೈಮರೆಸುವ ಲಾಲಿತ್ಯವಿದೆ.

    ಅಮಿತಾ ರವಿಕಿರಣ್

    Like

  6. ರಮ್ಯಾ ಅವರ ಲೇಖನ ತುಂಬ ಆಪ್ತವೆನಿಸಿತು. ಬರೀ ವರದಿಯಂತಾಗದೇ ಫೋನಿನಲ್ಲಿ ಆಪ್ತರೊಂದಿಗೆ ಹೇಳುವ ರೀತಿಯಲ್ಲಿ ಕೇಲಿದಂತೆ ಅನಿಸಿತು. `ಜನಪದ ಜಗುಲಿ` ಇಲ್ಲಿಯವರೆಗಿನ ಈ-ಜಗುಲಿಗಳಲ್ಲೇ ಅತ್ಯಂತ ಪ್ರಬುಧ್ಧ ಮತ್ತು ಯಶಸ್ವೀ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ರಮ್ಯಾ ಅವರು ಬರೆಯುವ ಶೈಲಿ ತುಂಬ ಇಷ್ಟವಾಯಿತು. ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. – ಕೇಶವ

    Like

  7. ತುಂಬಾ ಸುಂದರನಾಗಿ, ಸಮರ್ಪಕವಾಗಿ ಬಂದಿದೆ ಈ ವರದಿ ರಮ್ಯಾ ಅವರ ಲೇಖನಿಯಿಂದ. ಜನಪದ ಜಗುಲಿ ನಮ್ಮ ಬಳಗದ ಅತ್ಯುತ್ತಮ ಕಾರ್ಯಕ್ರಮವಾಗಿ ಹೊಮ್ಮಿದ ಪರಿಯನ್ನು ಉತ್ತಮವಾಗಿ ವಿವರಿಸಿ ಮತ್ತೊಮ್ಮೆ ಮೆಲಕು ಹಾಕುವಂತೆ ಮಾಡಿದ್ದೀರಿ.
    – ರಾಂ

    Like

  8. ರಮ್ಯ ಭಾದ್ರಿ ಬಹಳ ಸುಂದರವಾಗಿ ಬರೆದ ಲೇಖನ ಎಲ್ಲ ವಿವರಗಳನ್ನು ಕೊಟ್ಟದ್ದಲ್ಲದೆ ಆ ಕಾರ್ಯಕ್ರಮದ ರಸನಿಮಿಷಗಳನ್ನು ಮತ್ತೆ ಮೆಲಕು ಹಾಕುವ ಅವಕಾಶ ಕೊಟ್ಟಿತು. ಅದೊಂದು ಯಶಸ್ವಿ team work ಅನ್ನುವ ಸತ್ಯವನ್ನು ದಾಖಲಿಸಿದ್ದಾರೆ. ಜೊತೆಗೆ ಅದರ ಯೂಟ್ಯೂಬ ಲಿಂಕ ಕೊಟ್ಟು ಸಂಪಾದಕರು ಉಪಕಾರಮಾಡಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಲೇಖನ ನಾವು ಹೆಮ್ಮೆಪಡಬಹುದಾದ ಈ-ಜಗುಲಿ ೩ ಒಂದು ಮೈಲಿಗಲ್ಲು ಎನ್ನಬಹುದು ಎಂದು ನಿಖರವಾಗಿ ಹೇಳುತ್ತದೆ. ಶ್ರೀವತ್ಸ ದೇಸಾಯಿ

    Like

Leave a comment

This site uses Akismet to reduce spam. Learn how your comment data is processed.