ಬಾಲ್ಯದ ನೆನಪುಗಳು – ಶ್ರೀವತ್ಸ ದೇಸಾಯಿ ಹಾಗೂ ಗೌರಿ ಪ್ರಸನ್ನ

ಪ್ರಿಯ ಓದುಗರೇ, ಕೆಳಗಿನ ಎರಡು ಲೇಖನಗಳು ‘ಬಾಲ್ಯದ ನೆನಪುಗಳು’ ಸರಣಿಯ ಕೊನೆಯ ಲೇಖನಗಳು. ಗೌರಿ ಪ್ರಸನ್ನ ಅವರು ಪ್ರೀತಿಯಿಂದ ತಮ್ಮ ಅಜ್ಜಿಯನ್ನು (ಓಣ್ಯಾಯಿ) ನೆನಪಿಸಿಕೊಂಡರೆ, ದೇಸಾಯಿಯವರು ತಮ್ಮ ಬಾಲ್ಯವನ್ನು ಕಳೆದ ಊರಿನ ಬಗ್ಗೆ ಬರೆಯುತ್ತಾರೆ. ಓದಿ ನನ್ನಂತೆ ನಿಮಗೂ ಅಜ್ಜಿಯ, ಊರಿನ ನೆನಪಾಗದಿದ್ದರೆ ಹೇಳಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಬಾಲ್ಯದ ದಿನಗಳು – ಶ್ರೀವತ್ಸ ದೇಸಾಯಿ

ಸಾಮಾನ್ಯವಾಗಿ childhood ಅಂದರೆ 1 ರಿಂದ 12ರ ವಯಸ್ಸಿನ ವರೆಗಿನ ವರ್ಷಗಳು. ಆ ಸಮಯವನ್ನು ನಾನು ನೀಲಗಿರಿಯ ಮಧ್ಯದಲ್ಲಿ ರಮಣೀಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಪವಡಿಸಿದ್ದ ಊಟಿ ಅಥವಾ ಉದಕಮಂಡಲ ಎನ್ನುವ ಊರಲ್ಲಿ ಕಳೆದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ಕಾಲ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಹುತೇಕ ಎಲ್ಲರಿಗೂ ಬಾಲ್ಯದ ದಿನಗಳೆಂದರೆ ಹಾಗೆಯೇ ’ಹ್ಯಾಪ್ಪಿ ಡೇಸ್’ ಅಲ್ಲವೆ? ಮೊದಲು ನೀಲಗಿರಿ ಜಿಲ್ಲೆ ಮೈಸೂರು ಅರಸರ ಕಾಲದಿಂದಲೂ ಹಳೆಯ ಮೈಸೂರು ರಾಜ್ಯದಲ್ಲಿತ್ತು. 1956ರಲ್ಲಿ ಭಾಷಾವಾರು ಪ್ರದೇಶಗಳ ವಿಂಗಡನೆಯಾದ ನಂತರ ಅದು ತಮಿಳುನಾಡಿಗೆ ಸೇರಿತು. ಅದಕ್ಕೂ ಮೊದಲು ಕನ್ನಡ ಮತ್ತು ತಮಿಳು ಎರಡೂ ಭಾಷೆಗಳನ್ನು ಜನರು ಆಡಿಕೊಳ್ಳುತ್ತಿದ್ದರೂ ಕ್ರಮೇಣ ತಮಿಳಿನ ಪ್ರಭಾವ ಹೆಚ್ಚಾಗಿ ನಾನು ಶಾಲೆಗೆ ಹೋಗುವಾಗ ತಮಿಳೇ ಹೆಚ್ಚು ಬಳಕೆಯಲ್ಲಿತ್ತು. ನಾನು ಹುಟ್ಟಿದ್ದು ಧಾರವಾಡದಲ್ಲಿ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ನಮ್ಮ ತಂದೆ ಊಟಿಯಲ್ಲಿ ಕೇಂದ್ರ ಸರಕಾರದ ಎಪಿಗ್ರಾಫಿ ಮತ್ತು ಆರ್ಕಿಯಾಲಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಊಟಿಯಲ್ಲಿ ಬೆಳೆದೆ. ಮನೆಯಲ್ಲಿ ಕನ್ನಡ ಮಾತೃಭಾಷೆ. ಹೊರಗಡೆ ತಮಿಳು ಆಡು ಮಾತು. ಮೊದಮೊದಲು ನಮಗೆ ಇದು ಗೊಂದಲವನ್ನುಂಟು ಮಾಡಿದರೂ ದಿನ ಕಳೆದಂತೆ ಸರಿಹೋಯಿತು. ವಿಚಿತ್ರವೆಂದರೆ ಮತ್ತೆ ನನ್ನ 12ನೆಯ ವಯಸ್ಸಿನಲ್ಲಿ ಧಾರವಾಡಕ್ಕೆ ವಾಪಸ್ ಬಂದಾಗ ಈ ಗೊಂದಲ ವಿರುದ್ಧ ದಿಕ್ಕಿನಲ್ಲಿ ಮರುಕಳಿಸಿತು.

ಹೊಳಪಿನ ಕಣ್ಣುಗಳು!

ನನ್ನ ನಾಲ್ಕನೆಯ ವಯಸ್ಸಿನಲ್ಲಿಯೇ ನಾನು ಒಂದನೆಯ ಕ್ಲಾಸಿಗೆ ಸೇರಿದ್ದು ನಮ್ಮ ಮನೆಯಿಂದ ಒಂದೇ ಫರ್ಲಾಂಗ್ ದೂರದಲ್ಲಿದ್ದ ಜೆಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ನಲ್ಲಿ. ಕೆಲವೊಂದು ಅಪ್ರಿಯ ಅಥವಾ ಅಹಿತಕರ ಅನುಭವಗಳು ಎಳೆಯ ಮನಸ್ಸಿನ ಮೇಲೆ ವಿಪರೀತ ಭೀತಿಯನ್ನುಂಟು ಮಾಡುವ ಸಾಧ್ಯತೆಯಿದೆ. ಮನೆಯ ಅಕ್ಕಪಕ್ಕದಲ್ಲಿಯ ನಾಯಿಗಳಿಗೆ ನಾನು ಹೆದರಿದ್ದೆನೋ ಏನೋ. ಆಗ ತಾನೆ ಸ್ವಾತಂತ್ರ್ಯ ಸಿಕ್ಕು ಕೆಲವರ್ಷಗಳಷ್ಟೇ ಆಗಿತ್ತು. ತಮಿಳು ನಾಡಿನ ಸುಪ್ರಸಿದ್ಧ ದೇಶಭಕ್ತ ಮತ್ತು  ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಸುಪ್ರಸಿದ್ಧ ಹಾಡು ”ಒಳಿಪಡೈತ್ತ ಕಣ್ಣಿನಾಯ್ ವಾ ವಾ ವಾ” (ಪ್ರಕಾಶಯುಕ್ತ ಕಣ್ಣಿನವನಿಗೆ ಸ್ವಾಗತ) ಎನ್ನುವ ಹಾಡನ್ನು ನಾವು ಶಾಲೆಯಲ್ಲಿ ವಾರಕ್ಕೊಮ್ಮೆ ಸಾಮೂಹಿಕವಾಗಿ ಹಾಡುತ್ತಿದ್ದೆವು. ನನ್ನ ಭಾಷಾ ಗೊಂದಲದ ಕಾರಣ ಅದರಲ್ಲಿಯ ’ನಾಯ್’ ಎನ್ನುವ ಶಬ್ದ (ಅದರರ್ಥ ತಮಿಳಿನಲ್ಲಿ ”ಉಳ್ಳವನು’ ಅಂತ) ಬಂದ ಕೂಡಲೆ ಒಂದು ಹೊಳೆಯುತ್ತಿರುವ ದೊಡ್ಡ ಕಣ್ಣಿನ ಕರಿ ಬೇಟೆ ನಾಯಿ ಬಂದು ಕೂತ ಚಿತ್ರ ನನ್ನ ಕಣ್ಣ ಮುಂದೆ ಬಂದು ಹೆದರಿಕೆಯಾಗುತ್ತಿತ್ತು! ರಾತ್ರಿಯಲ್ಲಿ ಸಹ ನನ್ನ ಕನಸಿನಲ್ಲಿ ಬಂದು ಹೆದರಿಸುತ್ತಿತ್ತು. ಸುಪ್ರಸಿದ್ಧ ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಈ ಹಾಡನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿ ಅಜರಾಮರ ಮಾಡಿದ್ದಾರೆ (https://youtu.be/Jkg0ng6aEs4).  ಆ ಹಾಡಿನಿಂದಲೋ ಏನೋ, ಮುಂದೆ ನಾನು ಕಾಲೇಜಿನಲ್ಲಿದ್ದಾಗ ಶೆರ್ಲಾಕ್ಸ್ ಹೋಮ್ಸ್ ಕಥೆಯನ್ನೋದಿದಾಗ ಕತ್ತಲಲ್ಲಿ ಮಿನುಗುವ ರಂಜಕ ಲೇಪಿತ ಮುಖದ ಆ ನಾಯಿಯ ರೂಪ (ಹೌಂಡ್ ಆಫ್ ಬ್ಯಾಸ್ಕರ್ವಿಲ್ಸ್) ನನ್ನ ಮನಸ್ಸಿನ ಮೇಲೆ ವಿಪರೀತ ಪರಿಣಾಮವನ್ನುಂಟುಮಾಡಿ ಮಧ್ಯರಾತ್ರಿಯಲ್ಲಿ ಹಾಸಿಗೆಯಿಂದ ಬಡಿದೆಬ್ಬಿಸುತ್ತಿತ್ತು!

ಮುಸಲ ಧಾರ ಮಳೆ ಮತ್ತು ಚಿಲ್ ಬ್ಲೇನ್ಸ್!

ನಮ್ಮದು ಮಧ್ಯಮವರ್ಗದ ಕುಟುಂಬವಾಗಿತ್ತು. ನಮ್ಮ ತಂದೆಗೆ ನಾವು ಐದೂ ಗಂಡುಮಕ್ಕಳು. ಕೊನೆಯವನಾದ ನಾನು ಮತ್ತು ನನ್ನ ಇಬ್ಬರು ಅಣ್ಣಂದಿರಷ್ಟೇ ಊಟಿಯಲ್ಲಿದ್ದು ಕಲಿಯುತ್ತಿದ್ದೆವು. ಉಳಿದಿಬ್ಬರು ಹಿರಿಯರು ಉಚ್ಚ ಶಿಕ್ಷಣಕ್ಕೆ ಧಾರವಾಡ – ಪುಣೆಗಳಲ್ಲಿ ಉಳಿದಿದ್ದರು. ನಾವು ಅತಿ ಅನುಕೂಲಸ್ಥರಾಗಿರದಿದ್ದರೂ ಬಡತನವಿರಲಿಲ್ಲ. ಚಳಿ ಹೆಚ್ಚೆಂದು ಒಂದು ಉಣ್ಣೆ ಕೋಟನ್ನು ಹಾಕಿಕೊಂಡೇ ಶಾಲೆಗೆ ಬರಿಗಾಲಲ್ಲೇ ನಡೆದುಕೊಂಡೇ ಹೋಗುತ್ತಿದ್ದೆವು. ನಾವು ಹೋಗುತ್ತಿದ್ದ ಪ್ರಾಥಮಿಕ ಶಾಲೆಯಂತೆಯೇ ಮಾಧ್ಯಮಿಕ ಶಾಲೆ ಸೇಂಟ್ ಜೋಸೆಫ್ ಹೈಸ್ಕೂಲ್ ಸಹ ಕ್ರಿಸ್ತ ಮತದವರ ಮಿಷನ್ ಶಾಲೆಯಾಗಿತ್ತು. ಅದು ಫರ್ನ್ ಹಿಲ್ಲ್ ನಲ್ಲಿದ್ದ ನಮ್ಮ ಮನೆಯಿಂದ ಎರಡು ಮೈಲಿ ದೂರದಲ್ಲಿತ್ತು. ಛಳಿ-ಮಳೆ-ಬಿಸಿಲಲ್ಲಿ ನಡೆದುಕೊಂದು ಹೋಗುವ ರಸ್ತೆ ಊರ ಮಧ್ಯದ ಕೆರೆಯ ದಂಡೆಗುಂಟ ಹಾಯ್ದು ಹೋಗುತ್ತಿತ್ತು. ಊಟಿಯ ಮನ್ಸೂನ್ ಮಳೆಯ ಬಗ್ಗೆ ಹೇಳಲೇ ಬೇಕಿಲ್ಲ.

 ’ಶ್ರಾವಣದ ಕೊಳೆ’ ಎನ್ನುವ ಲೇಖನದಲ್ಲಿ ಎನ್ಕೆ ಕುಲಕರ್ಣಿಯವರು ಮಲೆನಾಡಿನ ಅಂಚಿನಲ್ಲಿದ್ದ ಧಾರವಾಡದ ಮಳೆಯನ್ನು ’ಜಿಟಿ ಜಿಟಿ, ಪಿಸಿ ಪಿಸಿ ಮಳ” ಅಂತ ವರ್ಣಿಸುತ್ತಾರೆ. ಇಂಗ್ಲಿಷ್ನಲ್ಲಿ ಜೋರಾಗಿ ಮಳೆ ಬಂದರೆ ’It rains cats and dog” ಅನ್ನುವ ರೂಢಿ. ಯಾರ್ಕ್ ಶೈರಿನಲ್ಲಿ ಅದಕ್ಕೆ ’’it rained stair rods’ ಅನ್ನುವ ರೂಪಕ ಕೊಡುತ್ತಾರೆ. ಊಟಿಯಲ್ಲಿ ಮಾತ್ರ ನಿಜವಾಗಿಯೂ ಮುಸಲ ಧಾರೆ ಮಳೆ! ಗಾಳಿ ಬೀಸಿದರೆ ೪೫ ಡಿಗ್ರಿಯಲ್ಲಿ ಬಂದು ಅಪ್ಪಳಿಸುತ್ತಿದ್ದ ಆ ಮಳೆಯ ನೀರು ಮನೆಯೊಳಗೆ ಬರದಿರಲು ನಮ್ಮ ಮನೆಯ ತಲಬಾಗಿಲಿನ ಹೊರಗೆ ಭದ್ರತೆಗಾಗಿ ಎರಡನೆಯ ತಗಡಿನ ಬಾಗಿಲು ಕಟ್ಟಿತ್ತು. ರಾತ್ರಿ ರಪ ರಪ ಅಂತ ಮಳೆ ನಿಜವಾಗಿಯೂ ಒನಕೆ (ಮುಸಲ್)ಯಿಂದ ಕುಟ್ಟಿದಂತೆ ಬಂದು ಅಪ್ಪಳಿಸುವುದು. ನನಗೆ ಮಲಗಲೂ ಅಂಜಿಕೆಯಾಗುತ್ತಿತ್ತು. ನರ್ಸರಿ ರೈಮ್ ದ Wee Willie Winkie ಬಂದನೇ ಅಂತ ಮತ್ತೆ ಮುಸುಕೆಳೆದುಕೊಂಡು ನಿದ್ದೆ ಹೋಗುತ್ತಿದ್ದೆ! ಅದರ ಒಂದು ಸಾಲು: Are the children in their bed, for it’s past ten o’clock? ಯಾವಾಗಲೂ ಆರ್ದ್ರ ಹವೆ, ಜೊತೆಗೆ ರಾತ್ರಿ ಹುಲ್ಲಿನಮೇಲೆ frost ಬೀಳುವ ಡಿಸೆಂಬರ್-ಜಾನೇವರಿ ತಿಂಗಳಿನ ಚಳಿಗಾಲದಲ್ಲಿ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ರಕ್ಷಣೆಯಿರದ ನಮ್ಮಕಾಲಿನ ಬೆರಳುಗಳೆಲ್ಲ ಟೊಮೆಟೊದಂತೆ ಬಾತು ವಿಪರೀತ ತುರಿಕೆಯಾಗುತ್ತಿತ್ತು. ಇದು ಪ್ರತಿ ವರ್ಷ ಚಳಿಗಾಲದ ಅನುಭವ. ನಾವು ಚಿಕ್ಕ ಮಕ್ಕಳು. ನಮ್ಮ ಬವಣೆ ನೋಡಿ ನಮ್ಮ ಅವ್ವ – ಪಾಪ ಅವಳಿಗೇನು ಗೊತ್ತು, ಅದು ಏನು ಮತ್ತು ಯಾಕೆ ಅಂತ? – ಹಿತ್ತಾಳೆ ಪರಾತದಲ್ಲಿ ಬಿಸಿನೀರು ಉಪ್ಪು ಹಾಕಿ ಕಾಲುಗಳನ್ನು ಮುಳಿಗಿಸಿ ಕೂತು ಕೊಳ್ಳಲು ಹೇಳುವಳು. ಅದರಿಂದ ತುರಿಕೆಯೇನೂ ಶಮನವಾಗದಿದ್ದರೂ ಒಂದು ಕಾಲು ಗಂಟೆ ಅಣ್ಣ – ತಮ್ಮ ಶಾಲೆಯ ವಿಷಯ ಹರಟಲು ಅನುವಾಗುತ್ತಿತ್ತಲ್ಲ, ಮತ್ತು ತಾಯಿಯ ಪ್ರೀತಿ, ಅದೇ ಸಾಕು. ಮುಂದೆ ಒಂದು ದಶಕದ ನಂತರ ಅಲ್ಲಿಗಿಂತ ಹೆಚ್ಚು ಬೆಚ್ಚಗಿನ ಧಾರವಾಡಕ್ಕೆ ಬಂದ ನಂತರ ಆ ’ಬೇನೆ’ ಪೂರ್ತಿ ಹೋಗಿಯೇ ಬಿಟ್ಟಿತ್ತು – ಈ ದೇಶಕ್ಕೆ ಬರುವ ವರೆಗೆ! ಇಲ್ಲಿಗೆ (ಇಂಗ್ಲೆಂಡಿಗೆ) ಬಂದ ಹೊಸತರಲ್ಲಿ ನಮಗೆ ಕೊಟ್ಟ ಆಸ್ಪತ್ರೆಯೆ ಮನೆಯಲ್ಲಿ ಸರಿಯಾದ ಸೆಂಟ್ರಲ್ ಹೀಟಿಂಗ್ ಇರಲಿಲ್ಲ. ’ಟೆರೇಸ್ ಹೌಸಿನ’ ಅಟ್ಟದ ಕೆಳಗಿನ ಲೌಂಜಿನಲ್ಲಷ್ಟೇ ಒಂದು ಗ್ಯಾಸ್ ಹೀಟರ್. ಪೂರ್ತಿ ಗೋಡೆಯವರೆಗೆ ಸಹ ಚಾಚದ ಕಿರಿದಾದ ಕಾರ್ಪೆಟ್ಟು ಕೋಣೆಯ ಮಧ್ಯದಲ್ಲಿ. ಮಲಗುವ ಕೋಣೆಯಂತೂ ಐಸ್ ಬಾಕ್ಸ್! ಒಂದೇ ವಾರದಲ್ಲಿ ನನ್ನ ಊಟಿಯ ’ಟೊಮೇಟೋ ಪಾದಗಳು’ ಮತ್ತೆ ಹುಟ್ಟಿಬಂದವು! ಡಾಕ್ಟರ ಕಡೆಗೆ ಹೋದಾಗಲೇ ತಿಳಿದಿದ್ದು ನಾವು ಪುಸ್ತಕದಲ್ಲಿ ಓದಿದ್ದರೂ ಆದರೆ ನಮಗೆ ಕಲ್ಪಿಸಿ ಕೊಳ್ಳಲಾಗದ ’ಚಳಿ ಕಜ್ಜಿ” (chilblains) ಎಂದು ಅದಕ್ಕೆ ಕರೆಯುತ್ತಾರೆ ಅಂತ. ಅಂದರೆ ೨೫ ವರ್ಷಗಳ ನಂತರ ನನಗೇ retrospective diagnosis ಸಿಕ್ಕಿತ್ತು! ಕೆಲವರಷ್ಟೇ ಈ ’ದೋಷಕ್ಕೆ’ ಈಡಾಗುತ್ತಾರೆ ಅಂತ ಆಮೇಲೆ ತಿಳಿಯಿತು. ಚಳಿ ಮತ್ತು ತೇವಕ್ಕೆ ಒಡ್ಡಿದ ತುದಿ ಬೊಟ್ಟಿನ ರಕ್ತನಾಳಗಳ ಆಕುಂಚನದಿಂದ ಅವುಗಳು ಉಬ್ಬಿ ಹಾಗಾಗುತ್ತದೆ ಅಂತ. ಪಾಪ, ಅವ್ವನಿಗೆ ಆ ಜ್ಞಾನವಿರಲಿಲ್ಲವಲ್ಲ? ಯಾರು ತಿಳಿಹೇಳಬಹುದಿತ್ತು?

ಮರದ ಮೇಲೊಂದು ತಿತ್ತಿರಿ!

ಕಡುಬೇಸಿಗೆಯನ್ನು ತಾಳಲಾರದೆ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತಂಪು ಆದರೂ ಆಹ್ಲಾದಕರ ಹವೆಯನ್ನು ಹುಡುಕುತ್ತ ಭಾರತದಲ್ಲಿ ಬಿಡಾರ ಬಿಟ್ಟ ಬ್ರಿಟಿಷರು ಉತ್ತರದಲ್ಲಿದ್ದರೆ ಸಿಮ್ಲಾ, ದಕ್ಷೀಣದಲ್ಲಿದ್ದವರು ಊಟಿಗೆ ರಜೆಗೆ ಬರುತ್ತಿದ್ದರು. ಅದಕ್ಕೆ ‘going to the hills’ ಅನ್ನುವ ರೂಢಿ. ತದನಂತರ ಅದೇ ತರಹ ನಿವೃತ್ತ ಶಾಲಾ ಶಿಕ್ಷಕರಾಗಿದ್ದ ನನ್ನ ಅಜ್ಜ ಹಲವಾರು ಸಲ ಧಾರವಾಡದಿಂದ ಊಟಿಗೆ ನಮ್ಮ ಮನೆಗೆ ಬಂದು ಕೆಲ ತಿಂಗಳಿದ್ದು ಮರಳುತ್ತಿದ್ದರು. ನಮ್ಮ ಮನೆಗೆ ಬಂದಾಗ ಪ್ರತಿದಿನ ಬೆಳಿಗ್ಗೆ ನಾವು ಮೂವರು ಅಣ್ಣತಮ್ಮಂದಿರನ್ನು ತಮ್ಮ ಹತ್ತಿರ ಕೂಡ್ರಿಸಿಕೊಂಡು ಉಪನಿಷತ್ತುಗಳ ಶ್ಲೋಕಗಳನ್ನು ಮತ್ತು ಸಂಸ್ಕೃತವನ್ನು ಹೇಳಿಕೊಡುತ್ತಿದ್ದರು.  ಉಪನಿಷತ್: ಉಪ(ಹತ್ತಿರ) + ನಿ(ಶ್ರದ್ಧೆಯಿಂದ) + ಸತ್(ಕುಳಿತು) = ಉಪನಿಷತ್.  ಅದರಲ್ಲಿ ಈಶಾವಾಸ್ಯ, ತೈತ್ತಿರೇಯ ಉಪನಿಷತ್ತುಗಳ ಹಲವಾರು ಶ್ಲೋಕಗಳು ನೆನಪಿನಲ್ಲುಳಿದಿವೆ. ಆಗಲೇ ಬಹುಭಾಷಾವಿಶಾರದರಾಗಿದ್ದ ಅವರಿಗೆ ಇನ್ನು ತಮಿಳು ಭಾಷೆಯನ್ನು ಕಲಿಯುವ ಉತ್ಸಾಹ.  ನಾವು ಅವರಿಗೆ ತಮಿಳು ಓದಿ ಅವರು ಕಲಿಯಲು ಸಹಾಯ ಮಾಡುತ್ತಿದ್ದೆವು. ಆಗ ’ಕಲ್ಕಿ’ ಪತ್ರಿಕೆಯಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರ ರಾಮಾಯಣ ಧಾರಾವಾಹಿಯಾಗಿ ತಮಿಳಿನಲ್ಲಿ ಬರುತ್ತಿತ್ತು. ಇನ್ನುಳಿದ ಸಮಯದಲ್ಲಿ ಆಟ, ಪಾಠಗಳಲ್ಲಿ ನಮ್ಮ ರಜೆಯ ಸ್ವಚ್ಚಂದ ದಿನಗಳನ್ನು ಕಳೆಯುತ್ತಿದ್ದೆವು. ಮನೆಯ ತೋಟದಲ್ಲೇ ಕಾಯಿ ಪಲ್ಯೆ, ತರಕಾರಿ, ವಿವಿಧ ಗಡ್ಡೆಗಳನ್ನು ಬೆಳೆಯುತ್ತಿದ್ದೆವು. ನಮಗೆ ’ಗಿಡಮಂಗನ ಆಟ’ ಆಡಲು ಅನುಕೂಲವಾಗುವಂಥ ಅತಿ ಎತ್ತರವಲ್ಲದ ನಾಲ್ಕೈದು ಪೇರ್ (pear) ಹಣ್ಣಿನ ಮರಗಳು ಸಹ ಇದ್ದವು.

ಕ್ರಿಸ್ತ ಪಾದ್ರಿಗಳು ಕಲಿಸುತ್ತಿದ್ದ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಜೋರಾಗಿ ಆಚರಿಸಲಾಗುತ್ತಿತ್ತು. ಚರ್ಚಿನಲ್ಲಿ ಕ್ರಿಸ್ಮಸ್ ಕ್ಯಾರಲ್ -Ten days of Christmas ಹಾಡುತ್ತಿದ್ದುದು ನಮಗೆ ಬಾಯಿಪಾಠವಾಗಿತ್ತು. On the first day of Christmas my true love sent to me a partridge in a pear tree ಎಂದು ಅದರ ಮೊದಲ ಸಾಲು. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮೊದಲ ದಿನ ಪ್ರೀತಿಯಿಂದ ಬಂದ ಉಡುಗೊರೆ ಪೇರ್ ಮರದಲ್ಲಿಯ ಒಂದು ತಿತ್ತಿರಿ (partridge) ಹಕ್ಕಿ ಅಂತ ಅದರ ಅರ್ಥ. ಪರ್ವತ ಪ್ರದೇಶದ ಊಟಿಯಲ್ಲಿ ಡಿಸೆಂಬರಿನಲ್ಲಿ ಸ್ವಲ್ಪಬೇಗನೆ ಕತ್ತಲೆಯಾಗುತ್ತಿತ್ತು, ಆದರೂ ಏಳೂ ವರೆಗೆ ರಾತ್ರಿಯ ಊಟ. ಅದೊಂದು ದಿನ ರಾತ್ರಿ ಊಟ ಇನ್ನೂ ಸಿದ್ಧವಾಗಿರಲಿಲ್ಲ. ನಮ್ಮ ದೊಡ್ಡ ಅಣ್ಣ ಯಾವುದೋ ವಿಷಯಕ್ಕಾಗಿ ಕೋಪ ಮಾಡಿಕೊಂಡು ಶಟಕೊಂಡು ”’ನಾನು ಮನೆ ಬಿಟ್ಟು ಹೋಗುತ್ತೇನೆ” ಅನ್ನುತ್ತ ಕಾಲು ಅಪ್ಪಳಿಸುತ್ತ ಹೊರಗೆ ಕತ್ತಲೆಯಿದ್ದರೂ ಬಾಗಿಲು ತೆರೆದು ಮನೆಯಿಂದ ಹೊರಗೆ ಓಡಿ ಹೋದ. ಅದೇನು ಮೊದಲ ಸಲವಲ್ಲ. ಮೊದಲೂ ಹೀಗೆಯೇ ಹೆದರಿಸಿದ್ದ! ಹತ್ತು-ಹದಿನೈದು ನಿಮಿಷಗಳಾದರೂ ಪತ್ತೆಯಿಲ್ಲ. ಹೊರಗೆ ದೀಪವಿಲ್ಲ, ಆಗಿನಕಾಲದಲ್ಲಿ. ಹುಳ, ಹುಪ್ಪಡಿ, ಹತ್ತಿರದ ಕಾಡು ಹುಲಿ-ಚಿರ್ಚುಗಳಂಥ ಕಾಡುಪ್ರಾಣಿಗಳ ಹೆದರಿಕೆ ಬೇರೆ. ಊಟ ಸಹ ಆಗಿಲ್ಲ, ತಾಯಿಗೆ ಸಂಕಟ. ನಾವಿಬ್ಬರೂ ಆತನ ಹೆಸರನ್ನು ಕೂಗುತ್ತ ಎರಡು-ಮೂರು ಸಲ ಮನೆಯ ಸುತ್ತ ಚಕ್ಕರ್ ಹೊಡೆದರೂ ಆತನ ಸುಳಿವಿಲ್ಲ, ಯಾವ ಸದ್ದೂ ಇಲ್ಲ. ನಮಗೆಲ್ಲ ಚಿಂತೆ. ಅವ್ವನಿಗ ತಳಮಳ. ನಾವಿಬ್ಬರು ತಮ್ಮಂದಿರು ಆತನನ್ನು ಹುಡುಕುತ್ತ ಹಿಂದಿನ ತೋಟದಲ್ಲಿ ನಿಂತು ‘ಅವನಿಲ್ಲಿಲ್ಲವಲ್ಲ’ ಅಂತ ನಾವು ಮಾತಾಡಿಕೊಂಡಾಗ ಪಕ್ಕದ ಮನೆಯ ನಾಯಿ ಬೊಗಳಲು ನಾವು ಹೆದರಿ ಓಡಲು ಶುರು ಮಾಡಿದೆವು. ಪೇರ್ ಮರದ ಕಡೆಯಿಂದ ಯಾರೋ ಕಿಸಕ್ಕನೆ ನಕ್ಕಂತೆ ಸದ್ದು. ಸ್ವಲ್ಪ ಸಿಟ್ಟು ಇಳಿದು ನಮ್ಮ ಪೇಚಾಟ ನೋಡಿ ತಡೆದುಕೊಳ್ಳಲಾರದೆ ಈ ತಮಾಷೆ ನೋಡಿ ಅಣ್ಣನಿಗೆ ನಗು!  ಅವನನ್ನು ಪುಸಲಾಯಿಸಿ ಒಳಗೆ ಕರೆದುಕೊಂದು ಬಂದ ಮೇಲೆಯೇ ಜೀವ ಬಂದಿತ್ತು ನಮ್ಮ ತಾಯಿಗೆ. ಆತನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಹೊಟ್ಟೆ ತುಂಬ ಉಣಿಸಿದ ದೃಶ್ಯಗಳನ್ನು (ಹೀಗೆ ಎರಡು ಮೂರು ಸಲ ಆಗಿತ್ತು!) ನಾವು ಎಂದೂ ಮರೆತಿಲ್ಲ. ಅದನ್ನು ಕಥೆಯಾಗಿ ನಮ್ಮ ಮಕ್ಕಳಿಗೆ, ಆತನ ಮೊಮ್ಮಕ್ಕಳಿಗೆ ಸಹ ಹೇಳಿ ಹಂಚಿಕೊಳ್ಳುತ್ತ ದಂತ ಕಥೆಯ ಮಟ್ಟಕ್ಕೆ ಏರಿಸಿಬಿಟ್ಟಿದ್ದೆವು! ಪೇರ್ ಮರದದಲ್ಲಿದ್ದುದು ಒಬ್ಬ ಹುಡುಗ ಅಲ್ಲದೆ ತಿತ್ತಿರಿ ಪಕ್ಷಿಯಲ್ಲ (partridge) ಅಂತ ಪ್ರತಿ ಕ್ರಿಸ್ಮಸ್ಸಿನಲ್ಲಿ ನೆನಪಾಗುವುದು. ಕಾಕತಾಳಿಯವೆಂಬಂತೆ ತೈತ್ತಿರೀಯ ಉಪನಿಷತ್ತಿಗೆ ಅ ಹೆಸರುಬಂದದ್ದೂ ತಿತ್ತಿರಿಯಿಂದಲೇ ಎನ್ನುವ ಕಥೆಯನ್ನು ಅಜ್ಜನಿಂದ ಉಪನಿಷತ್ ಪಾಠದಲ್ಲಿ ಕೇಳಿದಂತೆ ನೆನಪು!

ಹೊಲಿ ನಿನ್ನ ತುಟಿಗಳನು!

ನಮ್ಮ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಣ (co-educational) ಇತ್ತು.  ಜೆಲ್ ಮೆಮೋರಿಯಲ್ ಹುಡುಗಿಯರ ಶಾಲೆಯಾಗಿದ್ದರೂ ಮೂರನೆಯ ಕ್ಲಾಸಿನ ವರೆಗೆ ಗಂಡು ಹುಡುಗರಿಗೂ ಪ್ರವೇಶವಿತ್ತು. ಆದರೆ ನಾವು ಹುಡುಗರು ನಿಜಕ್ಕೂ ’ಮೈನಾರಿಟಿ”ಯಲ್ಲಿದ್ದೆವು. 20 ಜನರ ನನ್ನ ವರ್ಗದಲ್ಲಿ ನಾವು ಐದೇ ಹುಡುಗರು. ಶಾಲೆಯಲ್ಲಿ ಪಠ್ಯದ ಜೊತೆಗೆ ಹೊಲಿಗೆ-ಕಸೂತಿಯನ್ನೂ ಕಡ್ಡಾಯವಾಗಿ ಹೇಳಿಕೊಡುತ್ತಿದ್ದರು. ಮುಂದೆ ನಾನು ಕಣ್ಣಿನ ವೈದ್ಯನಾದಾಗ ಇದರ ಲಾಭ ಪಡೆದಿರಬೇಕು. ಯಾಕಂದರೆ ನೇತ್ರತಜ್ಞನಾಗಿ ವೃತ್ತಿ ಆರಂಭಿಸಿದ ಮೇಲೆ ಕಣ್ಣು, ಮತ್ತು ಮುಖದ ಮೇಲೆ ಆಪರೇಷನ್ ಮಾಡುವಾಗ ಪುಟ್ಟ ಪುಟ್ಟ ಸೂಕ್ಷ್ಮ ಹೊಲಿಗೆ (surgical sutures) ಹಾಕಲು ಬಾಲ್ಯದ ಪಾಠ ಸಹಾಯವಾಗಿರಬೇಕು ಅನಿಸುತ್ತದೆ!

ಆಶ್ಚರ್ಯವೆಂದರೆ ಹೊಲಿಗೆಯಲ್ಲಿ ಅವರೆಲ್ಲ ಹುಡುಗಿಯರಿಗಿಂತ ನನಗೇ ಹೆಚ್ಚು ಗುಣಗಳು ಬರುತ್ತಿದ್ದವು. ಅವೆರಡೂ ವರ್ಷ ನನಗೇ ಎಂಬ್ರಾಯ್ಡರಿಯಲ್ಲಿ ಸಹ ಮೊದಲ ಸ್ಥಾನ! ನಾನು ಹೇಳುವ ಉದ್ದೇಶ ಜಂಬಕ್ಕಲ್ಲ. ಮರೆತೇ ಹೋಗಿದ್ದ ಈ ಸಣ್ಣ ವಿಷಯವನ್ನು ಹೇಗೆ ದಶಕಗಳ ನಂತರ ನನಗೆ ಇನ್ನೊಬ್ಬರು ನೆನಪಿಸಿದರೆಂದು ಎನ್ನುವ ಮಾತು ಈಗಲೂ ಅಚ್ಚಾರಿಯನ್ನುಂಟು ಮಾಡುತ್ತದೆ. ಅದು ಆದದ್ದು ಹೀಗೆ:

ನಾನು ಮತ್ತು ನನ್ನ ಅಣ್ಣ ಕಲಿಯುತ್ತಿದ್ದಂತೆ ಒಬ್ಬ ಹುಡುಗಿ ಮತ್ತು ಆಕೆಯ ತಮ್ಮ (ನನ್ನ ಕ್ಲಾಸ್ ಮೇಟ್ ವಿನ್ಸೆಂಟನ ಹೆಸರು ಮಾತ್ರ ನನಗೆ ನೆನಪಿದೆ) ಸಹ ತಮ್ಮ ತಮ್ಮ ವರ್ಗಗಳಲ್ಲಿ ನಮ್ಮಿಬ್ಬರ ಸಹಪಾಠಿಗಳಾಗಿದ್ದರು. ಆ ನಂತರ ಸೆಕೆಂಡರಿ ಸ್ಕೂಲಿನಲ್ಲಿ ನಮ್ಮ ದಾರಿಗಳು ಬೇರೆ ಬೇರೆಯಾದವು. ವರ್ಷಗಳು ಉರುಳುತ್ತಿದ್ದರೂ ಒಂದು ದಿನ ನನ್ನ ಬಾಲ್ಯದ ಊರು, ಶಾಲೆ ಮತ್ತು ನಮ್ಮ ಮನೆಗೆ ಭೆಟ್ಟಿಕೊಡುವ ಕನಸು ಕಾಣುತ್ತಲೇ ಇದ್ದೆ. ಅದು ಕೈಗೂಡಿದ್ದು ಸುಮಾರು ನಲವತ್ತು ವರ್ಷಗಳ ನಂತರ, 1989ರಲ್ಲಿ, ನಾನು ಈ ದೇಶದಲ್ಲಿ ನೆಲೆಸಿದ ನಂತರ ರಜೆಯಲ್ಲಿ ಭಾರತಕ್ಕೆ ಹೋದಾಗ.

ಊಟಿ ಪಟ್ಟಣ ಒಂದು ಗುಡ್ಡದ ಮೇಲೆ. ಪಕ್ಕದ ಗುಡ್ಡ ’ಫರ್ನ್ ಹಿಲ್” ಅಲ್ಲಿಯೇ ನಮ್ಮ ಮನೆಯಿತ್ತು. ಅದಕ್ಕೆ ಪಾದುಕಾ ಎಂದು ಹೆಸರಿಟ್ಟಿದ್ದರು. ಆ ಮನೆಯ ಹಾಲಿ ಮಾಲೀಕರಿಗೆ ಒಂದು ಪತ್ರ ಬರೆದು ನಿಗದಿತ ದಿನದಂದು ಬೆಳಗ್ಗೆ 10 ಗಂಟೆಗೆ ನಾನು ಬಂದು ಭೆಟ್ಟಿಯಾಗುವ ವಿಷಯ ತಿಳಿಸಿದ್ದೆ. ಫರ್ನ ಹಿಲ್ಲಿನಲ್ಲಿ ಮೈಸೂರು ಮಹಾರಾಜರ ”ಭವಾನಿ ಹೌಸ್’ ಅರಮನೆಯಿತ್ತು. ಆ ಅರಮನೆಯ ಪಕ್ಕದಲ್ಲಿಯೇ ನಮ್ಮ ಗೆಸ್ಟ್ ಹೌಸ್. ನಮ್ಮ ಅಪಾಯಿಂಟ್ಮೆಂಟಿನ್ ಸಮಯಕ್ಕೆ  ಕಾಯದೆ ಬೆಳಿಗ್ಗೆ ಎದ್ದ ಕೂಡಲೇ ’ಪಾದುಕಾ’ಗೆ ಧಾವಿಸಿದೆ. ಆ ತಗಡಿನ ಬಾಗಿಲು ಮುಚ್ಚಿತ್ತು. ಈಗ ಕಾಲ್ಬೆಲ್. ಒತ್ತಿದಾಗ ನನ್ನ ಪ್ರತೀಕ್ಷೆಯಲ್ಲಿ ಇದ್ದ ಒಬ್ಬ ಮಧ್ಯವಯಸ್ಸಿನ ಹೆಂಗಸು ಬಾಗಿಲು ತೆರೆದಳು. ನನ್ನ ಹೆಸರು ಹೇಳಿದೆ. ಬರಮಾಡಿಕೊಳ್ಳುವ ಮೊದಲೇ ಆಕೆಯ ಬಾಯಿಂದ ಬಂದ ಮೊದಲ ಪ್ರಶ್ನೆ ನನ್ನನ್ನು ದಂಗು ಬಡಿಸಿತು: ”ನೀವಿಬ್ಬರೂ ಅಣ್ಣ ತಮ್ಮಂದಿರಲ್ಲಿ ಯಾರು ಹೊಲಿಗೆಯಲ್ಲಿ ಮುಂದೆ ಇದ್ದರು?” ಔಪಚಾರಿಕವಾಗಿಯೋ ಉಭಯ ಕುಶಲೋಪರಿ ವಿಚಾರಿಸಲಿಕ್ಕೋ, ಮಾತಾಡುವ ವಿಷಯಗಳಿರಲಿಲ್ಲವೇ ಆಕೆಗೆ ಅಂತ ಅದನ್ನು ನೆನೆದರೆ ಇಂದಿಗೂ ನಂಬಲಿಕ್ಕಾಗುವದಿಲ್ಲ. ”ಅದು ನಿಮಗೆ ಹೇಗೆ ಗೊತ್ತು?” ಅಂದೆ. ಆಗಲೇ ಆಕೆ ಹೇಳಿದ್ದು ಅವರ ಇಬ್ಬರು ಮಕ್ಕಳು- ಒಂದು ಗಂಡು ಒಬ್ಬ ಹೆಣ್ಣು ಮಕ್ಕಳೇ-ನಮ್ಮ ಸಹಪಾಠಿಗಳಾಗಿದ್ದರು ಎಂದು. ’ಸೆಲೆಕ್ಟಿವ್ ಮೆಮರಿ’ ಅಂದರೆ ಇದೇನಾ? ಆಮೇಲೆ ಬಹಳೇ ಸಂತೋಷದಿಂದ ಬರಮಾಡಿಕೊಂಡು ತನ್ನ ಮನೆಯೊಳಗೆ, ಹೊರಗೆ ಎಲ್ಲ ಕಡೆ ಕರೆದುಕೊಂಡು ತೋರಿಸಿದರು. ’ಪಾದುಕಾ’ ದೊಳಗೆ ಕಾಲಿಟ್ಟಾಗ ಆದ ರೋಮಾಂಚನ, ಹಳೆಯ ನೆನಪುಗಳೊಂದಿಗೆ ಹೊಸ ದೃಶ್ಯಗಳನ್ನು ಬೆಸೆದುಕೊಂಡು ಆಕಾಶದಲ್ಲಿ ಹಾರುತ್ತಿರುವಂಥ ಅನುಭವ! ಪಡಸಾಲೆ, ಮಲಗು ಮನೆ ಊಟದ ಮನೆ, ಹಿತ್ತಲ ಬಾಗಿಲಿನಿಂದ ಆ ಪೇರ್ ಮರಕ್ಕೆ ಹೋಗುವ ದಾರಿ ಎಲ್ಲವನ್ನೂ ಫೋಟೋ ಮತ್ತು ವಿಡಿಯೋದಲ್ಲಿ ಸೆರೆಹಿಡಿದೆ.  

ಈ ಘಟನೆಯನ್ನು ಹೇಳುವ ಉದ್ದೇಶ ಈ ’ಮಂಕು ತಿಮ್ಮ”ನ ಬಾಲ್ಯದ ದಿನಗಳ ಸ್ಮರಣೆಗಾಗಿ ಅಷ್ಟೇ. ಜಂಬ ಬೇಡ, ಹೊಲಿ ನಿನ್ನ ತುಟಿಗಳನ್ನು ಅನ್ನುವ ಡಿ ವಿ ಜಿಯವರ ಕಗ್ಗದ ಮಾತು ಎಚ್ಚರಿಸುತ್ತಿದೆ ನನ್ನ ಕಿವಿಯಲ್ಲಿ ಈಗ!

ಇತ್ತೀಚಿನ ಕೋವಿಡ್ ಸ್ಥಿತಿಯಲ್ಲಿ ಇನ್ನೊಮ್ಮೆ ನನ್ನ ಬಾಲ್ಯದ ದಿನಗಳನ್ನು ನೆನಪಿಸುವ ಊಟಿಗೆ ಭೇಟಿ ಕೊಡುವ ಕನಸು ನನಸಾಗುವ ಸಾಧ್ಯತೆಯಿಲ್ಲ ಅಂತ ನಿರಾಶೆಯಾಗಿದೆ.

************************************************************************

ನನ್ನ ಆಯಿ, ಓಣ್ಯಾಯಿ – ಗೌರಿ ಪ್ರಸನ್ನ

   ಬಾಲ್ಯ ಅಂದಕೂಡಲೇ ಥಟ್ಟನೆ ನೆನಪಿಗೆ ಬರುವವರು ಅಜ್ಜ-ಅಜ್ಜಿ. ಯಾವ ಕೊಡ-ತಗೊಳ್ಳೋ ಆಪೇಕ್ಷೆಯಿಲ್ಲದೇ ಅಂತಃಕರಣ ಸುರಿಸೋ ಜೀವಗಳು ಅಂದ್ರ ಈ ಅಜ್ಜ-ಅಜ್ಜಿಯರು. ನಮ್ಮ ಸವ೯ಜ್ಞ ಕವಿ ಹಾಡೂ ಹಂಗ ’ಮಜ್ಜಿಗೂಟಕೆ ಲೇಸು..ಮಜ್ಜನಕೆ ಮಡಿ ಲೇಸು..ಕಜ್ಜಾಯ ತುಪ್ಪ ಉಣಲೇಸು..ಮನೆಗೊಬ್ಬ ಅಜ್ಜಿಯೇ ಲೇಸು  ಸವ೯ಜ್ಞ’.

 ನಂಗ ನಮ್ಮ ಆಯಿ, ಅಂದ್ರ ನಮ್ಮ ಅಮ್ಮನ ಅಮ್ಮ, ಯಾವಾಗಲೂ ಬಹಳ ನೆನಪಾಗತಿರತಾಳ. ನಮ್ಮಜ್ಜಿ ನಮಗೆಲ್ಲ ಭಾಳ ‘ಅಚ್ಛಾ’ ಮಾಡತಿದ್ದಳೇನೋ ಖರೇ.. ಆದ್ರ ನಮ್ಮದೇನರೇ ಮಂಗ್ಯಾನಾಟ ನಡದ್ರ ‘ಉಣಲಿಕ್ಕೆ ಅಚ್ಛಾ..ತಿನಲಿಕ್ಕೆ ಅಚ್ವಾ..ಇದೆಲ್ಲಾ ಏನು ಒಣಾ ತಿರಕಚ್ಛಾ’ ಅಂತ ಜಬರಿಸಿ ಬಿಡಾಕಿ.

ಅಕಿಯಿಂದ ಮನಿ ತುಂಬ ಗದ್ದಲ; ಹಬ್ಬದ ವಾತಾವರಣ. ೪ ಜನ ಹೆಣ್ಣುಮಕ್ಕಳು, ೪ ಜನ ಅಳಿಯಂದಿರು,  ೫ ಜನ ಗಂಡುಮಕ್ಕಳು, ೪ ಜನ ಸೊಸೆಯಂದಿರು, ೨೪ ಮೊಮ್ಮಕ್ಕಳ ದೊಡ್ಡ ಸಂಸಾರ ಅವಳದು. ಬರಹೋಗುವವರಿಗಂತೂ ಬರವಿರಲಿಲ್ಲ.  ಮ್ಯಾಲೆ ಸ್ವಣ೯ಗೌರಿ, ವರಮಹಾಲಕ್ಷ್ಮಿ, ಋಷಿಪಂಚಮಿ, ಅನಂತ ಇತ್ಯಾದಿ ಹತ್ತು  ಹಲವಾರು ವ್ರತಾಚರಣೆಗಳ ನೆಪದಲ್ಲಿ ಮನೆತುಂಬ ಬಂಧು-ಬಾಂಧವರು. ಎಲ್ಲವನ್ನೂ – ಎಲ್ಲರನ್ನೂ ಅದ್ಹೆಂಗ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ಲೋ ಭಗವಂತನೇ ಬಲ್ಲ.

  ಅರಿಶಿನದ ಛಾಯೆಯ ಬಿಳಿಬಣ್ಣದ, ಕುಲುಕುಲು ನಗುವಿನ ಲಕ್ಷಣವಾದ ಮುತ್ತೈದಿ ಅಕಿ. ಓದು ಬರಹ ಕಲಿತಿರದಿದ್ದರೂ ಲೆಕ್ಕ ಬಾಯ್ ತುದಿಯಲ್ಲಿ. ಮೂರುಜನಕ್ಕೂ- ನೂರುಜನಕ್ಕೂ ಬೇಕಾಗುವ ಅಡುಗೆಯ ಅಳತೆಯನ್ನು ಪಾವು-ಸೊಲಗೆಗಳಲ್ಲಿ ಕರಾರುವಕ್ಕಾಗಿ ಹೇಳುವವಳು. ಗೌರಿ ಹಾಡು, ದಶಾವತಾರದ ನಿಂದಾಸ್ತುತಿ, ಸಂಪೂಣ೯ ರಾಮಾಯಣದ ಹಾಡುಗಳಿರಲಿ.. ದೊಡ್ಡ ದೊಡ್ಡ ಗಂಟಿನ ಎಳೆಯ ರಂಗೋಲಿಗಳು; ನಾನಾ ನಮೂನಿ ಕ್ಯಾದಗಿ – ಹೂವಿನ  ಹೆರಳುಗಳು; ಚಿರೋಟಿ, ತರಗು, ಹತ್ತು ಹಲವಾರು ಥರದ  ಖಾದ್ಯಗಳ ರೆಸಿಪಿಗಳು.. ಅವಳೊಂದು ಖಜಾನೆ. ಆಕೆಯ ಹೆಸರು ಶಾರದಾಬಾಯಿ. ನಾನು ‘ಓಣ್ಯಾಯಿ’ ಅಂತಿದ್ದೆ. ಇದೆಂಥಾ ಹೆಸರು ಅಂದ್ಯ್ರಾ? ಅದಕ್ಕೂ ಒಂದು ಇತಿಹಾಸನೋ ,ಪುರಾಣನೋ ಏನಂತೀರೋ ಅನ್ರಿ..ಅದು ಅದ. ನಾನು ನಮ್ಮಾಯಿಗೆ ಮೊದಲನೇ ಮೊಮ್ಮಗಳು. ಹಿಂಗಾಗಿ ಸ್ವಾಭಾವಿಕವಾಗಿಯೇ ಅಚ್ಛಾ, ಪ್ರೀತಿ ಎಲ್ಲಾದಕ್ಕೂ ಏಕಮೇವ ಅಧಿಕಾರ. ಮುಂದ ಒಂದೆರಡು ವಷ೯ದಾಗ ನಮ್ಮ ಮಾಮಾನ ಮಗಳು ಹುಟ್ಟಿದ್ಲಂತ. ಅಕಿನ್ನ ಹೆಸರು ‘ರೋಹಿಣಿ’. ಅದಕ್ಕಽ ನಮ್ಮ ಮಾಮ – ಮಾಂಶಿಯರೆಲ್ಲ ‘ಅಕಿ ನಿಮ್ಮ ಆಯಿ ಅಲ್ಲ..ರೋಹಿಣಿ ಆಯಿ’ ಅಂದಂದು ನನ್ನ ತೊದಲು ಬಾಯಲ್ಲಿ ಅದು ‘ಓಣ್ಯಾಯಿ’ ಆಗಿ ಬರೀ ನಮ್ಮ ಮನೆ ಮಕ್ಕಳಿಗಷ್ಟೇ ಅಲ್ಲದಽ ಇಡಿಯ ಓಣಿಗೇ ‘ಓಣ್ಯಾಯಿ’ ಆಗಿಬಿಟ್ಲು.

    ಆಕೆಯ ತಕ೯ಗಳು,ಆಪದ್ಧಮ೯ಗಳು ಇವುಗಳ ಬಗೆಗೆಲ್ಲ ನೆನೆಸಿಕೊಂಡರೆ ಬಹಳ ಹೆಮ್ಮೆ ಅನಸತದ. ಒಮ್ಮೆ ಮಧ್ಯಾಹ್ನ ೨-೩ ರ ಸುಮಾರಿಗೆ ಬಾಜೂ ಮನಿಯ ಶಿವಮೊಗ್ಗಿ ಪಮ್ಮಕ್ಕಜ್ಜಿ ನಮ್ಮನಿಗೆ ಬಂದು ‘ಒಂದು ಕೊಡ ಮಡಿನೀರು ಇದ್ರ ಬೇಕಾಗಿತ್ತು. ಯಾರೋ ಆಚಾರ್ಯರು ಅಚಾನಕ್ ಆಗಿ ಊರಿಂದ ಬಂದಾರ .ಅವರಿಗೆ ಮಡೀಲೆ ಅಡಿಗಿ, ಪೂಜಾ ಎಲ್ಲ ಆಗಬೇಕು’ ಅಂತ ಕೇಳಿದ್ರು. (ಬಿಜಾಪೂರದಲ್ಲಿ ವಾರಕ್ಕೊಮ್ಮೆ ನಳ ಬರುತ್ತಿದ್ದುದರಿಂದ ತುಳಸಿ ಹಾಕಿ ಮಡಿನೀರನ್ನೂ ಕಾಯ್ದಿಟ್ಟುಕೊಳ್ಳಬೇಕಾಗುತ್ತಿತ್ತು.) ‘ಆಯ್ತು..ತಗೊಂಡ ಹೋಗ್ರಿ’ ಅಂದ ನಮ್ಮಜ್ಜಿ ಒಳಗ ಬಂದು ನೋಡಿದ್ರ ಮಡಿನೀರು ಇಲ್ಲ. ‘ಆ ತುಂಬಿದ ತಾಮ್ರದ ಕೊಡ ಒಯ್ಯಿರಿ’ ಅಂತ ಸಾದಾ ನೀರು ಕೊಟ್ಟು ಕಳಿಸಿದ್ಲು. ನಾ ಮದಲಽ ಉಪದ್ವ್ಯಾಪಿ. ’ಓಣ್ಯಾಯಿ, ಅವರು ಮಡಿನೀರು ಅಂದ್ರ ನೀ ಸಾದಾ ನೀರು ಕಳಿಸಿದ್ಯೆಲಾ’ ಅಂದೆ – ಪುಣ್ಯಾಕ್ಕ ಅವರು ಹೋದಮ್ಯಾಲೆ. ಅಕಿ ಹೇಳಿದ ಉತ್ತರ ನನಗಿನ್ನೂ ನೆನಪದ, ಅಷ್ಟೇ ಅಲ್ಲ ಎಷ್ಟೋ ಸಂದರ್ಭಗಳಲ್ಲಿ ನನ್ನನ್ನು ‘ದುವಿಧಾ’ದಿಂದ  ಪಾರುಮಾಡಿದೆ. ’ಹೀಂಗ ಹೊತ್ತಿಲ್ಲದ ಹೊತ್ತಿನಾಗ ನಮ್ಮ ಮನ್ಯಾಗ ಮಡಿನೀರು ಇದ್ದೇ ಇರತಾವ ಅಂತ ನಂಬಕೀಲೇ ಬಂದಾರ. ಇಲ್ಲ ಅಂತ ಕಳಿಸಿದ್ರ ಆ ಹಸಿದ ಬ್ರಾಹ್ಮಣರ ಪೂಜಿ, ಊಟಾ ಆಗಂಗಿಲ್ಲ. ಈಗ ಪಮ್ಮಕ್ಕ ಮತ್ತ ಆ ಆಚಾರ್ಯರಿಗಂತೂ ಅದು ಮಡಿನೀರೇನಽ. ಅಲ್ಲ ಅಂತ ನಂಗ ಗೊತ್ತದ. ಅದರ  ಪಾಪ ನನಗ ಸುತಗೋತದ.. ನಡೀತದ. ಅವರಿಗೆ ಏನೂ ಆಗಂಗಿಲ್ಲ. ಹಸಿದವರ ಹೊಟ್ಟಿ ತುಂಬಬೇಕು.. ಹಾರುವ ಹಸಕೊಂಡಿರಬಾರದು’ ಅಂದ್ಲು.  ಎಂಥ ಉನ್ನತ ವಿಚಾರ ಅಲ್ಲ?!  ‘ಇಲ್ಲ’ ಅಂದಬಿಡೂದು ಭಾಳ ಸರಳ. ಆದ್ರ ಪಾಪನ್ನೆಲ್ಲ ತನ್ನ ತಲೆಮೇಲೆ ಹೇರಿಕೊಂಡು ಇನ್ನೊಬ್ಬರಿಗೆ ಕೊಡುವುದು ಭಾಳ ಕಷ್ಟದ ಕೆಲಸ. ದೇವರು, ಕಮ೯ಫಲ… ಅನ್ನುವುದೆಲ್ಲ ಇದ್ದರೆ ಖಂಡಿತ ಅಕಿಗೆ ಪಾಪ ಬಂದಿರುವುದಿಲ್ಲ. ಉಲ್ಟಾ ಪುಣ್ಯದ ಒಂದೆರಡು ಪಾಲು ಹೆಚ್ಚಿಗೇ ಸಂದಾಯ ಆಗಿರತಾವ ಅಕಿನ್ನ ಅಕೌಂಟಿನಾಗ.

   ಈ ನಮ್ಮ ಓಣ್ಯಾಯಿ ಒಂಥರಾ snoozeಗೆ ಇಟ್ಟ ಮೊಬೈಲ್ ದ ಆಲಾರಂ ಥರ. ‘ಮುಂಜಾನೆ ಲಗೂ ಎಬ್ಬಸು…ಪರೀಕ್ಷಾಕ್ಕ ಓದಿಕೊಳ್ಳೋದದ’ ಅಂತೇನರೇ ಅಪ್ಪಿತಪ್ಪಿ ಹೇಳಿಬಿಟ್ಟಿದ್ರ ನಸುಕಿನ ೪ ರಿಂದಲೇ ಶುರು. ‘ಏಳು.. ಲಗೂ ಎಬ್ಬಸು ಅಂದಿದ್ದೀ. ೬ ಆಗೇದ ನೋಡು’ ಅಂತ ಯಾರಿಗೂ ಜಗ್ಗದ ಕಾಲರಾಯನನ್ನೇ ಹಿಗ್ಗಾಮುಗ್ಗಾ ಓಡಿಸ್ಯಾಡಬಿಡಕೀರಿ. ಇನ್ನಽ ೬:೩೦, ೭ ಆಗಿರಲಿಕ್ಕಿಲ್ಲ ‘ಇದೇನಽ ತೀರಾ ಇಷ್ಟೊತ್ತು ಮಲಗೂದು..ಸೂರ್ಯ ನೆತ್ತಿ ಮ್ಯಾಲೆ ಬಂದ..ಇನ್ನ ‘ಕು..’ ಮ್ಯಾಲ ಮಾಡಕೊಂಡು ಬಿದ್ದೀದಿ?’ ಅಂತ ಅದೇ ತಾನೇ ಹುಟ್ಟಿದ ಸೂಯ೯ನಿಗೂ ದಿಗ್ಭ್ರಮೆ ಹುಟ್ಟಿಸಿಬಿಡಾಕೀರಿ. ಇನ್ನ ಏನರೇ ಹಬ್ಬ-ಹುಣ್ಣಿಮಿ ಇತ್ತಿಲ್ಲ.. ಬ್ಯಾಡ ತಗೀರಿ ಅದರ ಸುದ್ದಿ. ‘ಇವತ್ತ ಉಗಾದಿ. ಏಳು.. ವರುಷದ ಮದಲನೇ ಹಬ್ಬ.. ಇವತ್ತಽ ಹೀಂಗ ಮಲಕೊಂಡರ ಹೆಂಗ? ಸಣ್ಣ ಹುಡುಗೂರು ಹೆಂಗ ಇರಬೇಕು ಜಿಂಕಿ ಹಂಗಽ..ಭಡಾಭಡಾ ಎದ್ದು, ಲಕಾಲಕಾ ತಯಾರಾಗಿ ಸರಾಭರಾ ಅಂತ ಓಡಾಡಬೇಕು’ ಅನ್ನಾಕಿ.

ಚೌತಿ-ಪಂಚಮಿ ಬಂತಂದ್ರ ‘ಏಳ್ರವಾ. ನಾಗಪ್ಪಗ ಹಾಲು ಹಾಕಬೇಕು. ತಿರುಗಿ ಬಾಜೂಮನಿ ಪಮ್ಮಕ್ಕ, ಎದುರಮನಿ ಶಾರಕ್ಕ ಎಲ್ಲಾರೂ ಹೋಗಿ ಹಾಲು ಹಾಕಿ ಬಂದ್ರು. (ಈಕಿಗೆ ಒಳಗ ಮಂಚದ ಮ್ಯಾಲೆ ಕೂತಲ್ಲೇ ಅವರೆಲ್ಲ ಹೆಂಗ ಕಾಣಸತಿದ್ರು ಅನ್ನೂದು ನನಗಿನ್ನೂ ಯಕ್ಷಪ್ರಶ್ನೆನೇ!) ಈಗಿನ್ನ ಅವರೆಲ್ಲಾರೂ ತಂಬಿಟ್ಟು- ಖಣ ಕೊಡಲಿಕ್ಕೆ ಬರತಾರ. ನೀವ ನೋಡಿದ್ರ ಹಾಸಿಗಿ ಹರವಿಕೊಂಡು ಮಲಗೀರಿ..ಏಳ್ರಿ.. ಒಬ್ಬೊಬ್ಬರೇ ಎದ್ದು, ಎಣ್ಣಿ ಹಚಗೊಂಡು, ಎರಕೊಳ್ಳೂದರಾಗ ‘ಢಣ್’ ಅಂತದ’  ಅನ್ನಾಕಿ. (ನಂಗೂ ಗೊತ್ತಿಲ್ಲ ಏನ ಢಣ್ ಅಂತದೋ ಅಂತ) ಗಣೇಶ ಚೌತಿ ದಿನಾ ಕಡಬು – ಬುರಬುರಿ – ಚಿತ್ರಾನ್ನ ಅಂತ ಮಸ್ತ್ ಪೈಕಿ ಊಟಾ ಗಡದ್ದಾಗಿ ಹೊಡದು ಕಣ್ಣ ಎಳೀತಾವಂತ ಅಡ್ಡಾಗಲಿಕ್ಕೆ ಹೋದರ ‘ಅಯ್ಯ, ಈಗೇನ ಮಲಗತೀಯ? ಇವತ್ತ ಸುಬ್ಭಣಾಚಾರ್ರು ಲಗೂನೇ ೫ ಕ್ಕೇ ಬರತೀನಂದಾರ ಉತ್ತರಪೂಜಾಕ್ಕ. ಹೋಗು ಲಗೂ ಲಗೂ ಹೆರಳು-ಮಾರಿ ಮಾಡಕೊಂಡು ಎಲ್ಲಾರನ್ನೂ ಅರಿಶಿಣ-ಕುಂಕುಮಕ್ಕ ಕರದ ಬಾ. ಹೋದಸಲ ಆ ಬಮ್ಮಣಗಿ ಶಾರಕ್ಕನ್ನ  ಕರಿಯೂದು ಮರತಽಬಿಟ್ಟಿದ್ದೀ.. ಮತ್ತ ಈ ಸಲಾನೂ ಹಂಗೇ ಮಾಡಿಬಿಡಬ್ಯಾಡ.’ ಅಂತ ಗಡಿಬಿಡಿ ಮಾಡಾಕಿ.

ಇನ್ನ ದೀಪಾವಳಿ ಬಂತಂದ್ರಂತೂ ಮುಗದಽ ಹೋತರಿ. ಪುಣ್ಯಾಕ್ಕ ಅವತ್ತ ಎದ್ದು ಹಲ್ಲು ತಿಕ್ಕೊಂಡು ಸೀದಾ ಹೊಸ ಬಟ್ಟಿ ಹಾಕೊಂಡ್ರ ಆತರೀ.. ಆರತಿಗೆ ತಯಾರ. ಮುಂಜಾನೆ ೪ – ೪:೩೦ ಯ ಚುಮುಚುಮು ನಸುಕಿನ್ಯಾಗ ಕೆಟ್ಟ ಥಂಡಿ. ಥಳಿ – ರಂಗೋಲಿ, ಪ್ರಣತಿ -ತುಳಸೀ ದೀಪ ಅಂತ ಇಷ್ಟಗಲ ತಲಬಾಗಲಾ ತಗದಽ ಇಟ್ಟಬಿಟ್ರ ಎರಡೆರಡು ಚಾದರ (ನಮ್ಮ ಬಿಜಾಪೂರದಾಗ ರಗ್ಗು ಅಂದ್ರೇನಂತ ಗೊತ್ತಿರಲಿಲ್ಲ) ಎಳಕೊಂಡ ಎಳಕೊಂಡ ಎಷ್ಟು ಮುದ್ದೆ ಆಗಿ ಮಲಗಿದ್ರೂ ಗಡಗಡ ನಡುಗಿ ನಿದ್ದಿ ಹಾರೇ ಹೋಗತಿತ್ತು ಅನ್ರಿ.

  ಇನ್ನ ಯಾವಾಗರೇ ಸೂಟಿ, ರವಿವಾರ ಅಂತ ಮಧ್ಯಾಹ್ನ ಮಲಕೊಳ್ಳಿಕ್ಕೆ ಹೋದ್ರ ‘ಏನ ನಟ್ಟ ಕಡದೀಯವಾ, ಹೊತಗೊಂಡು ಮಲಕೋಳಿಕ್ಕೆ.. ಎದ್ದು ನಿನ್ನ ಪುಸ್ತಕ ಮಾಡಾ ಸ್ವಚ್ಛ ಮಾಡಕೋಬಾರದ? ಎಷ್ಟು ಹರವಿ ನೋಡು.. ಆ ರಿಬ್ಬನ್ ಹೊಲಸ ಖಮಟ ಆಗ್ಯಾವ. ಒಂಚೂರು ಸಾಬಾಣ ಹಚ್ಚಿ ಒಕ್ಕೋಬಾರದ?’ ಅಂತೆಲ್ಲ ಮಾಡಬೇಕಾದ ಕೆಲಸಗಳ ಇಷ್ಟುದ್ದದ ಲಿಸ್ಟ್ ಹೇಳಿ ನಮ್ಮೊಳಗೆ ‘ಇಷ್ಟ ಕೆಲಸಾ ಇಟಗೊಂಡು ಮಲಗೀನಲಾ’ ಅನ್ನೋ ಅಪರಾಧೀಪ್ರಜ್ಞೆಯನ್ನು ಜಾಗೃತ ಮಾಡಿಬಿಡಾಕೀರಿ ಅಕಿ.

ಬರೀ ನಮ್ಮಾಯಿ ಅಷ್ಟೇ ಅಲ್ಲ; ಓಣಿಯ ಆಯಿ- ಓಣ್ಯಾಯಿ ಈಕಿ. ಮಂಚದ ಮೇಲೆ ಕುಳಿತೇ ದಬಾ೯ರು ನಡೆಸುವಾಕಿ. ಮೈ ಕುಣಿಸುತ್ತ ನಕ್ಕು ಎಲ್ಲರ ಮೈ ಮರೆಸುವಾಕಿ. ‘ಶೆಕೆ’ ಎಂದು ಬೆಂದಾಗ ಸೆರಗಿನ ಚಾಮರದಿಂದ ಗಾಳಿ ಬೀಸುವಾಕಿ. ‘ಥಂಡಿ’ ಎಂದಾಗ ಬೆಚ್ಚಗೆ ಅಪ್ಪಿಕೊಳ್ಳುವಾಕಿ. ಅಳುವಾಗ ರಮಿಸುವಾಕಿ. ಜಗಳಾಡಿದಾಗ ಬಯ್ದು ರಾಜಿ ಮಾಡಿಸುವಾಕಿ. ‘ಬೋಕಾಣಿ ಸಿದ್ಧ್ಯಾರ’ ಎಂದು ಜೋರು ಮಾಡುವಾಕಿ. ಒಂದು ಕೇಳಿದರೆ ಎರಡೆರಡು ಉಂಡಿಗಳನ್ನು ಕೈಗೆ ನೀಡುವಾಕಿ. ‘ಬಾಳೆಕಾಯಿ’ ಗಂಟಿನಿಂದ ನಾಣ್ಯಗಳನ್ನು ತೆಗೆದು ಜಾದೂ ಮಾಡುವಾಕಿ. ಖಲಬತ್ತಲಿನಲ್ಲಿ ಎಲೆಯಡಿಕೆ ಕುಟ್ಟಿ ವೀಳ್ಯದ ರುಚಿ ಹಚ್ದಾಕಿ. ಎರಡು ತುತ್ತು ಕಮ್ಮಿ ತಿಂದರೆ ‘ದೃಷ್ಟಿ’ಯಾಯಿತೆಂದು ಅಯ್ಯನ ಮಠದಿಂದ ತಾಯತ ಮಂತ್ರಿಸಿ ತರುವಾಕಿ. ಮಲಗಿದಾಗ ಕೋಲಿಂದ ತಿವಿದು ಎಚ್ಚರಿಸುವಾಕಿ. ಕುಂಟುತ್ತಲೇ ಕತ್ತಲಲ್ಲಿ ನಮ್ಮ ‘ಜೋಡಿ’ ಬರುವಾಕಿ.

‘ಮತ್ಸ್ಯನೆಂದು ಬಲು ಬಡಾಯಿ ಹೇಳತಿ ಹೆಂಗ ಬಂದ್ಯೋ ನೀ ಊರಾಗ..’ ಎಂದು ದಶಾವತಾರದ ಮಹಾವಿಷ್ಣುವಿಗೇ ‘ಚಾಲೆಂಜ್’ ಮಾಡುವಾಕಿ.’ ‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ. ಬಿದ್ದ ಶಿಲೆಯ  ಪಾದದಿಂದುದ್ಧಾರ ಮಾಡಿದಾ’ ಎಂದು ಇಡಿಯ ರಾಮಾಯಣವನ್ನೇ ನಾಲಗೆ ತುದಿಯಲ್ಲಿ ಇಟ್ಟುಕೊಂಡಾಕಿ. ವರಮಹಾಲಕ್ಷ್ಮಿ – ಸ್ವಣ೯ಗೌರಿಯರೊಡನೆ ನೆಂಟಸ್ತಿಕೆ ಕಟ್ಟಿಕೊಂಡಾಕಿ. ಒಂದಾಣೆಯ ಮುಡಿಪು ಕಟ್ಟಿಟ್ಟು ವಾಯುಜೀವೋತ್ತಮ ಭೋಗಾಪುರೇಶನನ್ನು ಕೆಲಸ ಮಾಡಲು ‘ಮಜಬೂರ್’ ಮಾಡುವಾಕಿ. ಎಲ್ಲರ ಪಾಲಿನ ಹಾಲು ಕುಡಿಸಿ ಚೌತಿಯ ನಾಗಪ್ಪನನ್ನೇ ದಣಿಸಿಬಿಡಾಕಿ.

  ಎದೆಯ ಗೂಡಲ್ಲಿ ಬೆಚ್ಚನೆಯ ನೆನಪಾಗಿ ಉಳಿದಾಕಿ. ನೆನಪಾಗಿ ಕಾಡಿ ಕಣ್ಣಂಚು ಒದ್ದೆ ಮಾಡುವಾಕಿ. ನಮ್ಮಾಯಿ..ಅಲ್ಲ, ಓಣ್ಯಾಯಿ.. ಅಲ್ಲಲ್ಲ, ‘ಮಹಾಮಾಯಿ’ ಆಕೆ.

**************************************************************

ಸಂಪಾದಕರ ಟಿಪ್ಪಣಿ: ಗೌರಿಯವರ ಬರಹ, ಬರಿಯ ಅಜ್ಜಿಯ ಬಗೆಗಲ್ಲದೇ ಶುದ್ಧ ಬಿಜಾಪುರ (ಈಗ ವಿಜಯಪುರ) ದ ನೆಲದ ಮಾತಿನ ಕನ್ನಡದ ಘಮಲನ್ನೂ ಹಂಚುತ್ತದೆ. ಇದನ್ನು ಮನಸ್ಸಿನಲ್ಲಲ್ಲ, ಜೋರಾಗಿ ಅಕ್ಕ-ಪಕ್ಕದವರಿಗೆ ಕೇಳುವಂತೆ ಓದಿ ಮಜಾ ತೊಗೊಳ್ಳೋದು ಒಳ್ಳೆಯದು!

21 thoughts on “ಬಾಲ್ಯದ ನೆನಪುಗಳು – ಶ್ರೀವತ್ಸ ದೇಸಾಯಿ ಹಾಗೂ ಗೌರಿ ಪ್ರಸನ್ನ

 1. ದೇಸಾಯಿ ಮತ್ತು ಗೌರಿ ಅವ್ರ ಬಾಲ್ಯದ ನೆನಪಿನ ಲೇಖನಗಳು ನಿಜಕ್ಕೂ ಮನಮುಟ್ಟುವಂತಿವೆ. ದೇಸಾಯಿ ಅವರೇ ನಾನು ಊಟಿ ನೋಡಿಲ್ಲ. ಆದರೆ ನಿಮ್ಮ ಲೇಖನದಲ್ಲಿ ಊಟಿಯ ಬಗ್ಗೆ ನಿಮ್ಮ ಶಾಲೆಯ ದಿನಗಳ ಬಗ್ಗೆ ಓದಿದಾಗ ನಿಜಕ್ಕೂ ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎನ್ನಿಸಿತು. ಆದ್ರೆ ಇಂದಿನ ಊಟಿಯಲ್ಲಿ ಬದಲಾವಣೆಗಳ ಕಾರಣದಿಂದ ಅಲ್ಲಿನ ಪರಿಸರ ಬೇರೆಯೇ ಇರಬಹುದು. ನಿಮಗೆ ಕಸೂತಿಯಲ್ಲಿ ಪರಿಣಿತಿ ಇರುವ ವಿಷಯ ತಿಳಿದು ಸಂತೋಷವಾಯಿತು. ನಿಮ್ಮ ಪರಿಣಿತಿಯ ಬಗ್ಗೆ ನೆನಪಿಟ್ಟು ನಿಮಗೆ ಜ್ಞಾಪಿಸಿದ ಮಹಿಳೆಯ ನೆನಪಿನ ಶಕ್ತಿಗೆ ತಲೆತೂಗಲೇ ಬೇಕು.

  ಗೌರಿ ಅವರ ಓಣ್ಯಾಯಿ ನಿಜಕ್ಕೂ ಮಮತೆಯ ಮೂರ್ತಿ. ಮನೆಗಳಲ್ಲಿ ಮಡಿ-ಮೈಲಿಗೆಯ ವಿಷಯಗಳಲ್ಲಿ, ಅನೇಕ ಬಾರಿ ಆಕೆಯಂತಹ ಹಿರಿಯ ವ್ಯಕ್ತಿಗಳು ಮಾನವತೆಗೆ ತಲೆಬಾಗಿ, ಸಂಧರ್ಭಕ್ಕೆ ತಕ್ಕ ಜಾಣ್ಮೆ ಮತ್ತು ವಿವೇಕವನ್ನು ತೋರುವುದು ಸ್ವಲ್ಪ ಅಪರೂಪದ ವಿಷಯ. ನಿಮ್ಮಿಬ್ಬರ ಬಾಲ್ಯದ ನೆನಪುಗಳು ನಿಜಕ್ಕೂ ಮನಸಿಗೆ ಮುದ ನೀಡಿತು.
  ಉಮಾ ವೆಂಕಟೇಶ್

  Like

  • ನನ್ನ ನೆನಪುಗಳಿಗೆ ಸ್ಪಂದಿಸಿ ಬರೆದ ಉಮಾ ಅವರ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವಂದಂತೆ ಈಗಿನ ಊಟಿ ಬಹಳ ಬಲಾಗಿರಬೇಕು. ನನ್ನ ಮರುಭೆಟ್ಟಿಯಲ್ಲೇ ಸಾಕಷ್ಟು ಮರಗಳ, ಹಸಿರು ಹುಲ್ಲು, ಪೊದೆಗಳ ನಾಶ ಕಂಡು ಮರುಗಿದ್ದೆ. ಆದರೆ ನನ್ನ ಮನಸ್ಸಿನಲ್ಲಿ ನೆಲೆಸಿದ ಊಟಿ ಮಾತ್ರ ಇನ್ನೂ ಆಪ್ತವಾಗಿದೆ, ಚಂದ ಇದೆ, ಇಂದ್ರವನದಂತಿದೆ! ಇನ್ನು ಆ ಮಹಿಳೆಯ ಮಾತು: ಕೆಲವು ಅನುಭವಗಳು sticky back ದೊಂದಿಗೇ ಹುತ್ತಿರುತ್ತವೆ, ತಲೆಯಲ್ಲಿ ಭದ್ರವಾಗಿ ಅಂಟಿಕೊಂಡು ಕೂತಿರುತ್ತವೆ -ನನ್ನ ಮನದಲ್ಲಿ ಆಗಾಗ ಸುಳಿಯುವ ಆ ದೊಡ್ಡ ಹೊಳೆಯುವ ಕಣ್ಣಿನ ’ನಾಯಿ’ಯಂತೆ!

   Like

 2. ಗೌರಿಯವರೇ,

  ನಿಮ್ಮ ಓಣ್ಯಾಯಿಯವರ ಕತೆ ಓದಿ ನನಗೂ ನನ್ನ ಇಬ್ಬರೂ ಅಜ್ಜಿಯರ ನೆನಪಾಯಿತು.

  ನಿಮ್ಮ ಆಯಿಯವರ ಮಡಿನೀರಿನ ಕತಿ ಅಂತೂ ಮನಸಿಗೇ ನಾಟಿತು.

  ಹಿಂಗ ಹಳೆ ನೆನಪು ಬರಕೋತಿರ್ರಿ. ನಾವೂ ಓದಿ ಖುಷಿ ಮಡ್ತೀವಿ.

  – ಕೇಶವ

  Liked by 1 person

 3. ದೇಸಾಯಿಯವರೆ,

  ನಿಮ್ಮ ಕಥನ ಕಲೆ ಒಳ್ಳೆ ಥ್ರಿಲರ್ ಕತೆ ತರಹ ಇದೆ. ಸುಬ್ರಮಣ್ಯಭಾರತಿಯವರ ಕಣ್ಣಿನಾಯ್ ಮಗುವಿನ ಕಣ್ಣಲ್ಲಿ ಕಂತ್ರಿನಾಯಿಯಾಗುವ ಪವಾಡ ಆ ವಯಸ್ಸಿಗೆ ಮಾತ್ರ ದಕ್ಕುವಂಥದು. ಊಟಿಯ ಮುಸಲಧಾರೆ ಮತ್ತು ಚಳಿಕಜ್ಜಿಯ ವಿವರಗಳು ನಮ್ಮನ್ನೂ ನಿಮ್ಮ ಬಾಲ್ಯಕ್ಕೆ ಅಲ್ಲಿಂದ ಇಂಗ್ಲಂಡಿಗೆ ಕರೆದು ನಿಲ್ಲಿಸುತ್ತವೆ. ನಿಮ್ಮಣ್ಣನ ಉಪಟಳ, ಕ್ರಿಸಮಸ್ ಮರ, ತಿತ್ತಿರಿ ಹಕ್ಕಿ, ತೈತ್ತಿರೇಯ ಉಪನಿಷತ್ತು… ಎಲ್ಲಿಂದ ಎಲ್ಲೆಲ್ಲಿಗೆ ನಮ್ಮನ್ನು ಕೈಹಿಡಿದು ದರ್ಶನಗಳನ್ನು ಮಾಡಿಸುತ್ತೀರಿ.

  ನಿಮ್ಮ ಬಾಲ್ಯ ಮತ್ತು ಭಾರತದ ದಿನಗಳ ಬಗ್ಗೆ ಇನ್ನೂ ಇಂಥಹ ಘಟನೆಗಳನ್ನು ಬರೆಯುತ್ತಿರಿ.

  – ಕೇಶವ್

  Liked by 2 people

  • ಕೇಶವ ಅವರಿಗೆ ಧನ್ಯವಾದಗಳು. ಆ ಬಾಲ್ಯದ ಅನುಭವಕ್ಕೆ ಕಣ್ಣಿನಾಯ್-ಕಂತ್ರಿನಾಯ್ ಮಾರ್ಪಾಡೆಂದು (transformation) ನಾಮಕಾರಣ ಮಾಡಿದ್ದು ಮಾತ್ರ ಥ್ರಿಲ್ಲಿಂಗ್ ಅನಿಸಿತು ನನಗೆ!

   Like

 4. ದೇಸಾಯಿಯ ವರೇ ನಿಮ್ಮ ಬಾಲ್ಯದ ನೆನಪುಗಳನ್ನು ಬಹಳ ಸ್ವಾರಸ್ಯಕರವಾಗಿ ಬರೆದ್ದಿದ್ದೀರಿ. ಊಟಿಗೆ ಸ್ನೇಹಿತರೊಡನೆ ಹಲವಾರು ಬಾರಿ ಹೋಗಿ ದ್ದುಂಟು ಆದರೆ chill Blains ಬರುವಷ್ಟು ಚಳಿಯ ಅನುಭವ ಇಂಗ್ಲೆಂಡ್ ಗೆ ಬರುವವರೆಗೂ ಎಂದು ಆಗಿರಲಿಲ್ಲ ಕಾರಣ ನಾವು ಹೋದ ದ್ದೆಲ್ಲ ಬೇಸಿಗೆಯಲ್ಲಿ. ನಿಮ್ಮ ಪ್ರತಿ ಬರಹದಲ್ಲೂ ಯಾವುದಾದರೂ ನಿಮ್ಮ ಹೊಸ ಪ್ರತಿಭೆ ಅನಾವರಣ ಗೊಳ್ಳುತ್ತಲೆ ಇರುತ್ತದೆ. ಹೊಲಿಯುದರಲ್ಲು ಎತ್ತಿದ ಕೈ ಯಂದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ನೀವು “ಸಕಲ ಕಲಾ ವಲ್ಲವನ್” ಯನ್ನುವುದರಲ್ಲಿ ಸಂದೇಹವೇ ಇಲ್ಲ🙏🙏

  ಗೌರಿಯವರೆ ನಿಮ್ಮ ನೆಚ್ಚಿನ ಒಣ್ಯಾಯಿ ಯ ಹಾವಭಾವ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ದ್ದೀರಿ ಅದರಲ್ಲೂ ಬಿಜಾಪುರದ ಕನ್ನಡದಲ್ಲಿ ಭಾಳ ಚಲೋ ಐತ್ರಿ! ಈ ಬರಹವನ್ನ ನಿಮ್ಮ ಕಂಠದಲ್ಲಿ ಕೇಳಿದರೆ ಇನ್ನೂ ಭಾಳ ಭಾಳ ಚಲೋ ಆಗಿರ್ತೈತ್ರಿ 👌👌ಅನ್ನೋದು ನನ್ನ ಅನಿಸಿಕೆ. ಹಂಚಿಕೊಂಡಿದ್ದಕ್ಕೆ ಇಬ್ಬರಿಗೂ ಧನ್ಯವಾದಗಳು

  Liked by 1 person

 5. ಬಾಲ್ಯದ ನೆನಪುಗಳನ್ನು ಓದುತ್ತಿದಂತೇ ನಮ್ಮ ಬಾಲ್ಯದ ಮೆಲಕು ಹಾಕಿ ಟೈಮ್ ಮೆಷಿನ್ ಹತ್ತಿಸಿದ ಹಿಂದಿನ ಹಾಗೂ ಇಂದಿನ ಸಂಪಾದಕರಿಗೆ ಧನ್ಯವಾದಗಳು. ಈ ಸರಣಿಯ ಕೊನೆಯ ಲೇಖನಗಳು ಉತ್ತಮ ಸಂಗೀತ ಕಛೇರಿಯ ಕೊನೆಯಲ್ಲಿ ಹಾಡುವ ಮಧುರ ಭೈರವಿಯಾಗಿದೆ.

  ಊಟಿಯ ಕಥಾನಕ ನನಗೆ ಅಜ್ಜಿಯ ಮನೆ ಮಡಿಕೇರಿಯಳ್ಳಿ ಕಳೆದ ದಿನಗಳ ನೆನಪೆನ್ನುಣ್ಣಿಸಿತು. ದೇಸಾಯಿಯವರು ನೇಯ್ದ ಕಸೂತಿಯಲ್ಲಿ ಬಂಗಾರದ ಎಳೆಯಂತೆ ಹಾಸ್ಯ ಹಾಸುಹೊಕ್ಕಾಗಿ ಮೆರಗು ನೀಡಿದೆ.

  ಗೌರಿಯವರ ಓಣ್ಯಾಯಿ ಓದುಗರೆಲ್ಲರಿಗೂ ತಮ್ಮ ಅಜ್ಜಿ ಅಥವಾ ಬಾಲ್ಯದಲ್ಲಿ ಒಡನಾಡಿದ ಹಿರಿಯರನ್ನು ಕಣ್ಮುಂದೆ ತಂದು ನಿಲ್ಲಿಸಿದೆ. ಮನೆಯೇ ಮೊದಲ ಪಾಠಶಾಲೆ ಆಗಿರುವುದು ಇಂತಹ ಪ್ರಾಥಸ್ಮರಣಿಯರಿಂದಲ್ಲವೇ! ಉತ್ತರ ಕರ್ನಾಟಕದ ಭಾಷೆಯ ಸೊಗಡು ಲೇಖನಡಾ ಪ್ಲಸ್ ಪಾಯಿಂಟ್.

  Liked by 2 people

  • ರಾಂಶರಣ ಅವರ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ನನಗೆ ಮಾತ್ರ ಮಡಿಕೇರಿಗೆ ಹೋಗುವ ಭಾಗ್ಯ ಇನ್ನೂ ಬಂದಿಲ್ಲ. ಬರುವುದೋ ಇಲ್ಲವೋ ಗೊತ್ತಿಲ್ಲ. ”ಕೊಡಗು ಬೆಡಗಿನ ಬೀಡು, ಸೌಂದರ್ಯದಮೃತಮಂ ಕುಡಿಯಿಮೆಲೆ ಕಣ್ಗಳಿರ!” ಎಂದು ಕವಿ ಬಣ್ಣಿಸಿದ್ದನ್ನೋದಿದಾಗಿನಿಂದ ಆ ತವಕ!

   Like

 6. ದೇಸಾಯಿಯ ವರೇ ನಿಮ್ಮ ಬಾಲ್ಯದ ನೆನಪುಗಳನ್ನು ಬಹಳ ಸ್ವಾರಸ್ಯಕರವಾಗಿ ಬರೆದ್ದಿದ್ದೀರಿ. ಊಟಿಗೆ ಸ್ನೇಹಿತರೊಡನೆ ಹಲವಾರು ಬಾರಿ ಹೋಗಿ ದ್ದುಂಟು ಆದರೆ chill Blain’s ಬರುವಷ್ಟು ಚಳಿಯ ಅನುಭವ ಇಂಗ್ಲೆಂಡ್ ಗೆ ಬರುವವರೆಗೂ ಎಂದು ಆಗಿರಲಿಲ್ಲ ಕಾರಣ ನಾವು ಹೋದ ದ್ದೆಲ್ಲ ಬೇಸಿಗೆಯಲ್ಲಿ. ನಿಮ್ಮ ಪ್ರತಿ ಬರಹದಲ್ಲೂ ಯಾವುದಾದರೂ ನಿಮ್ಮ ಹೊಸ ಪ್ರತಿಭೆ ಅನಾವರಣ ಗೊಳ್ಳುತ್ತಲೆ ಇರುತ್ತದೆ. ಹೊಲಿಯುದರಲ್ಲು ಎತ್ತಿದ ಕೈ ಯಂದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ನೀವು “ಸಕಲ ಕಲಾ ವಲ್ಲವನ್” ಯನ್ನುವುದರಲ್ಲಿ ಸಂದೇಹವೇ ಇಲ್ಲ🙏🙏

  ಗೌರಿಯವರೆ ನಿಮ್ಮ ನೆಚ್ಚಿನ ಒಣ್ಯಾಯಿ ಯ ಹಾವಭಾವ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ದ್ದೀರಿ ಅದರಲ್ಲೂ ಬಿಜಾಪುರದ ಕನ್ನಡದಲ್ಲಿ ಭಾಳ ಚಲೋ ಐತ್ರಿ! ಈ ಬರಹವನ್ನ ನಿಮ್ಮ ಕಂಠದಲ್ಲಿ ಕೇಳಿದರೆ ಇನ್ನೂ ಭಾಳ

  Liked by 2 people

 7. ಈ ವಾರದ ಬಾಲ್ಯದ ನೆನಪುಗಳ ಬಗೆಗಿನ ಬರಹಗಳು ಒಂದಕ್ಕಿಂತ ಒಂದು ಉತ್ತಮವಾಗಿದೆ. ಸಂಪಾದಕರು ಈ ಸರಣಿಯನ್ನು ಮುಕ್ತಾಯಗೊಳಿಸಿದ್ದು ಬಹುಶ: ಇದಕ್ಕೆ ಸಾಟಿಯಾಗುವಂತಹ ಬರಹಗಳು ಬರದಿರುವ ಬಗೆಗಿನ ಅನುಮಾನದಿಂದಿರಬಹುದು.

  ‘ಟೊಮಾಟೊ ಪಾದ‘ ಗಳ ಬಗ್ಗೆ ಇಂಗ್ಲೆಂಡಿಗೆ ಬರುವ ಬಗ್ಗೆ ತಿಳಿದಿರಲಿಲ್ಲ, ಛಳಿ ಎಂದರೇನೆಂದು ಸಹ ಗೊತ್ತಿರಲಿಲ್ಲ. ಊಟಿಯಂತಹ ಸುಂದರ ಜಾಗದಲ್ಲಿ ಬೆಳೆದು, ತಮಿಳನ್ನು ಕಲಿಯುವುದರ ಜೊತೆಗೆ ಅಚ್ಚಕನ್ನಡದಲ್ಲಿ ನಮ್ಮ ಬಾಲ್ಯದ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡ ದೇಸಾಯಿಯವರ ಪ್ರತಿಭೆಗೆ ಕೊನೆಮೊದಲಿಲ್ಲ, ಅದರ ಜೊತೆಗೆ ಅವರು ಕಸೂತಿಯಲ್ಲೂ ಪರಿಣಿತರೆಂದು ಓದಿ ಆಶ್ಚರ್ಯವಾಗಲಿಲ್ಲ.
  “ನಾಯ್“ ಹಾಡಿನ ಬಗ್ಗೆ ಓದಿದಾಗ ನಗು ತಡೆಯಲಾಗಲಿಲ್ಲ.

  ಗೌರಿಯವರೆ, ನಿಮ್ಮ ಓಣ್ಯಾಯಿಯ ಬಗ್ಗೆ ಓದಿದಾಗ ಹೃದಯ ತುಂಬಿ ಬಂತು. ನಮ್ಮೆಲ್ಲರ ಅಜ್ಜಿ, ಮುತ್ತಜ್ಜಿಗಳು ೮-೧೦ ಮಕ್ಕಳನ್ನು ಹೆತ್ತು, ಎಲ್ಲರನ್ನೂ ಮಮತೆಯಿಂದ ಬೆಳೆಸಿ, ಬಡತನ / ಸಿರಿತನವೇನಿದ್ದರೂ ಸದಾ ಸಂಯಮದಿಂದ ಜೀವನವನ್ನು ಹೇಗೆ ನಿಭಾಯಿಸಿದರೆಂದು ದೇವರಿಗೇ ಗೊತ್ತು. ಆಕೆ ಮಡಿನೀರಿನ ಬಗ್ಗೆ ನಿಮಗಿತ್ತ ಉಪದೇಶ, ಪುಸ್ತಕಗಳನ್ನು ಓದುವುದರಿಂದ ಬರಲಾರದು. ಸಣ್ಣ ಪುಟ್ಟ ತೊಂದರೆಗಳ ಬಗ್ಗೆ ಕೊರಗುವ ನಮಗೆಲ್ಲ ಆಕೆಯ ಬದುಕು ಮಾರ್ಗದರ್ಶಿ.

  ದಾಕ್ಷಾಯಿಣಿ

  Liked by 2 people

  • ದಾಕ್ಷಾಯಿಣಿಯವರ ಕಮೆಂಟಿಗೆ ಧನ್ಯವಾದಗಳು! ‘ನಾಯ್’ ನಿಮಗೆ ಮುದಕೊಟ್ಟುದು ಓದಿ ನನಗೂ ನಗು ಬಂತು, ಈಗ. ಆಗ nightmares!
   ಶ್ರೀವತ್ಸ

   Liked by 1 person

 8. ಈ ವಾರದ ಅನಿವಾಸಿಯ ಎರಡೂ ಬಾಲ್ಯದ ನೆನಪುಗಳ ಕಥನ ತುಂಬ ಆಪ್ತವೆನಿಸಿದವು.
  ಶ್ರೀವತ್ಸ ದೇಸಾಯಿಯವರು ತಮ್ಮ ಬಾಲ್ಯದ ದಿನಗಳನ್ನು ಊಟಿಯ ಆ ನಿಸರ್ಗ ಸಿರಿಯಲ್ಲಿ ಕಳೆದಿರುವುದನ್ನ ಓದಿದ್ರೆ, ಅವರಲ್ಲಿಯ ಕವಿ ಆಗಲೇ ಮೈಮುರಿದೆದ್ದಿದ್ದರಲ್ಲಿ ಯಾವ ಸಂಶಯವೂ ಇಲ್ಲ.ಹಾಗೇ ಅವರ ಫೋಟೋ ಗ್ರಾಫಿ ಮುಂದೆ ವಿಡಿಯೋ ಗ್ರಾಫಿಯ ಹುಟ್ಟೂ ಅಲ್ಲೇ ಅನಿಸ್ತದೆ.ಅವರಣ್ಣನ ಸಿಟ್ಟು ನನ್ನಣ್ಣ ಶಟಗೊಂಡು ಕತ್ತಲಲ್ಲಿ ಹೋದದ್ದನ್ನು ನೆನಪಿಸ್ತು.ಅದಕ್ಕೆ ನಾ ಏಟು ತಿಂದಿದ್ದೆ ಅಮ್ಮನಿಂದ.ಆತ ನನ್ನ ಜೊತೆ ಜಗಳ ಮಾಡಿ ಶಟಗೊಂಡ ಹೋಗಿದ್ದ.ಆ ಮುಸಲಧಾರೆಯ ಮಳೆಯಂತೂ ಸ್ವರ್ಗಸಮಾನ! ಬಾಲ್ಯದ ನೆನಪುಗಳು ಅದೆಷ್ಟು ಸುಂದರ!
  ಗೌರಿಯವರ ಅಜ್ಜಿ ಓಣ್ಯಾಯಿಯ ಚಿತ್ರಣ ತುಂಬ ಸಹಜ ಸುಂದರ.ಅದೆಷ್ಟು ಸರಳವಾಗಿ ಸಂಸಾರದ ಸಿಕ್ಕುಗಳನ್ನ ಬಿಡಿಸುತ್ತಾ ಮೇರು ವ್ಯಕ್ತಿತ್ವ ಹೊಂದಿರುವ ಹಿರಿ ಜೀವಗಳು ಅವು! ಅಂತ:ಕರುಣದ ಗಣಿಗಳು.ನನಗೆ ನನ್ನ ಅಜ್ಜಿ ಯನ್ನ ಮುಂದೆ ತಂದು ನಿಲ್ಲಿಸ್ತು ಅವರ ಬರಹ.ಆಕೆ ಹೆಸರು ಸೋನಕ್ಕ,ನಮ್ಮ ಬಾಯಲ್ಲಿ ‘ ಏಕಾ’ ಆಗಿದ್ಲು.ಬಹಳ ಬರೀಬೇಕು ಅವಳ ಬಗ್ಗೆ.ಆ ಹಿರಿ ಜೀವಗಳ ಹಿರಿತನವೇ ಹಾಗೋ ಏನೋ! ಗೌರಿಯವರ ಸರಳ ಶೈಲಿಯಲ್ಲಿ ಮನೆಯ ವಾತಾವರಣವೇ ಸಹಜವಾಗಿ ಮೂಡಿ ನಮ್ಮಮನೆಯೇ ಅಂಬೋ ಭ್ರಮೆಯಲ್ಲಿ ಮುಳುಗಿ ಹೋಗೋದಂತೂ ಖಂಡಿತಾ.
  ಇಂಥ ಆಪ್ಯಾಯಮಾನಕರ ನೆನಪು ಕನಸುಗಳ ಚಿತ್ರಣ ನೀಡಿದ್ದಕ್ಕೆ ಶ್ರೀವತ್ಸ ದೇಸಾಯಿ ಯವರಿಗೂ ,ಗೌರಿಯವರಿಗೂ ಅನೇಕ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 2 people

  • ಆಸ್ಥೆಯಿಂದ ಓದಿ ಸ್ಪಂದಿಸಿ ನಿಮ್ಮ ಅನುಭಗಳನ್ನೂ ಸೇರಿಸಿ ಅನಿಸಿಕೆಗಳನ್ನು ಬರೆದಿರುವ ಸರೋಜಿನಿಯವರಿಗ್ದ್ ಧನ್ಯವಾದಗಳು. ಶ್ರೀವತ್ಸ

   Like

 9. ಶ್ರೀವತ್ಸ ನಿಮ್ಮ ಬಾಲ್ಯದ ನೆನಪುಗಳು ಸ್ವಾರಸ್ಯವಾಗಿದೆ. ಬಿ ಜಿ ಎಲ್ ಸ್ವಾಮಿ ಅವರ ‘ತಮಿಳು ತಲೆಗಳ ನಡುವೆ’ ಎಂಬ ಕೃತಿಯನ್ನು ನೆನಪಿಗೆ ತಂದಿತು. ಊಟಿಯಂಥ ಸುಂದರ ತಾಣದಲ್ಲಿ ಬೆಳೆದ ನಿಮಗೆ ಆ ಕವಿ ಪ್ರಜ್ಞೆ ಮತ್ತು ಸಾಹಿತ್ಯದ ಒಲವು ಸಹಜವಾಗಿ ದಕ್ಕಿರಬಹುದು ( ಕುವೆಂಪು ಅವರಿಗೆ ಮಲೆನಾಡಿದ್ದ ಹಾಗೆ ) ನೀವು ಕಣ್ಣಿನ ತಜ್ಞನಾಗುವುದಕ್ಕೆ ನಿಮ್ಮ ಬಾಲ್ಯ ಹವ್ಯಾಸ ಪೂರಕವಾದದ್ದು ಕೂಡ ಸ್ವಾರಸ್ಯಕರವಾಗಿದೆ. ನಾನು ಹಲವಾರು ಬಾರಿ ಪ್ರವಾಸಿಗನಾಗಿ ಊಟಿಗೆ ಭೇಟಿ ನೀಡಿದ್ದೇನೆ, ಮುಂದೊಮ್ಮೆ ನಿಮ್ಮ ಜೊತೆ ಊಟಿ ಪ್ರವಾಸ ಕೈಗೂಳ್ಳುವ ಹಂಬಲವಿದೆ; ನಿಜವಾದ ಊಟಿಯ ಪರಿಚಯದ ನಿರೀಕ್ಷೆಯಲ್ಲಿ.

  ಗೌರಿ ಅವರೇ ನಿಮ್ಮ ಅಜ್ಜಿ ನಿಜವಾಗಲೂ ಮಲ್ಟಿ ಟಾಸ್ಕಿಂಗ್ ಸೂಪರ್ ಮದರ್ ಮತ್ತು ಅಜ್ಜಿ. ದೇವರ ಪಟದಲ್ಲಿ ಅಷ್ಟೇ ಹತ್ತು ಕೈಗಳನ್ನು ಕಂಡಿದ್ದ ನಮಗೆ ನಿಮ್ಮ ಅಜ್ಜಿಯ ಕಾಣದ ಎಂಟು ಕೈಗಳನ್ನು ತೋರಿಸಿದ್ದೀರಿ . ನಿಮ್ಮ ಅಜ್ಜಿಯ ಬದುಕಿನ ಪ್ರೀತಿ ನಮಗೆ ಆದರ್ಶಪ್ರಾಯವಾಗಿದೆ.

  Liked by 2 people

  • ಡಾ ಪ್ರಸಾದ ಅವರ ಮಾತುಗಳಿಗೆ ಧನ್ಯವಾದಗಳು. ಪ್ರಕೃತಿ ಕವಿಗಳನ್ನು ಹುಟ್ಟಿಸಿದರೆ ಮಲೆನಾಡು ಅವರಿಂದ ತುಂಬಿ ತುಳುಕುತ್ತಿರಬೇಕು! ಕೆಲವರಾದರೂ ಅಪವಾದಗಳಾಗಿರುತ್ತಾರೆ (ನನ್ನಂಥವರು!) ಎನ್ನಲೇ ಬೇಕು. ಅಂದಿನ ರಮಣೀಯ ಊಟಿಯಲ್ಲಿ ನನ್ನ ಜೊತೆಗೆ ನಿಮ್ಮಂಥ ಕವಿ ಮತ್ತು ರಸಿಕರು ಜೊತೆಗೆ ಓಡಾಡಲು ಸಿಕ್ಕರೆ ಸ್ವರ್ಗ! ‘ಸುಹಾನಾ ಸಫರ್ ಔರ್ ಮೌಸಮ್ ಹಸೀ'(ಮಧುಮತಿ) ಹಾಡು ನೆನಪಾಗುತ್ತದೆ.ನಿಜವಾಗಿಯೂ ಆ ಸಿನಿಮಾ ನೋಡುವಾಗ ನನಗೆ ಊಟಿಯದೇ ಪದೇ ಪದೇ ನೆನಪು. ಇನ್ನು, ಆಪರೇಷನ್ ಥಿಯೆಟರ್ ಪಕ್ಕ ಹೊಲಿಗೆ – ಎಂಬ್ರಾಯಿಡರಿ -ವರ್ಕ್ಷಾಪ್ ಇಟ್ಟರೆ suturing ಸುಧಾರಿಸುವದರ ಜೊತೆಗೆ ಥೆರಪಿಯೂ ಆದೀತು!

   Like

 10. ಗೌರಿ ಪ್ರಸನ್ನ ಅವರದು ಎಂಥ ಅದ್ಭುತ ವ್ಯಕ್ತಿಚಿತ್ರ ತಮ್ಮಜ್ಜಿ ಓಣ್ಯಾಯಿಯ ಮೇಲೆ! ಎಂಥ ದೊಡ್ಡ ವ್ಯಕ್ತಿತ್ವ ಆ ’ಓದು ಬರಹ ಬಾರದ’ ಮಹಾಮಾಯಿಯದು! ಪುಟಗಟ್ಟಲೆ ಬರೆಯುವಷ್ಟನ್ನು ತಮ್ಮ ’ಬಾಳೆಕಾಯಿ ಗಂಟಿ’ನೊಳಗಿಂದಿಳಿಸಿದ್ದಾರೆ ಈ ಪುಟ್ಟ ಲೇಖನದಲ್ಲಿ. ನಾನು ಕಂಡಿರದ ”ಸ್ನೂಜ’ಜ್ಜಿಯನ್ನು ಓಣ್ಯಾಯಿಯಲ್ಲಿ ಕಂಡೆ. ಆಗಿನ ಕಾಲದ ಆ ಸಂಸ್ಕೃತಿಯ, ಅಂಥ ವ್ಯಕ್ತಿಗಳನ್ನು ಈಗಿನ ತಲೆಮಾರಿನವರು ಕಾಣಲು ಸಾಧ್ಯವೆ? ಅನಿಸಿತು. ಕೊನೆಯ ಮೂರು ಪ್ಯಾರಾಗಳಲ್ಲಿಯ ಅದ್ಭುತ ವರ್ಣನೆಯನ್ನೋದಿ ಆಕೆಯನ್ನು ಚಿತ್ರಿಸಿಕೊಂಡೆ, ಗುಡೂರರು ಹೇಳಿದಂತೆ ಆಕೆಯ ಮಾತುಗಳನ್ನೂ ಕೇಳಿಸಿಕೊಂಡೆ, ಪಾವು-ಸೊಲಗಗಳ ಪರಿಚಯ ಮಾಡಿಕೊಂಡೆ.ಹಬ್ಬಗಳ ನೆನಪುಮಾಡಿಕೊಂಡೆ. ಖ್ಯಾದ್ಯಗಳನ್ನ್ಯ್ by proxy ಸವಿದೆ!
  ’ಅನಿವಾಸಿ’ ಯ ಹಿಂದಿನ ಸಂಪಾದಕಿ ದಾಕ್ಷಾಯಿನಿಯವರ ಸಲಹೆಯಿಂದ ಪ್ರ್ರಾರಂಭವಾದ ಈ ಸರಣಿ ಪ್ರತಿಸಲ ಎರಡೆರರಂತೆ ಹಲವಾರು ಚೆಂದದ ಲೇಖನಗಳನ್ನು ತಂದಿದೆ, ಗುಡೂರವರ ಸಾರಥ್ಯದಲ್ಲಿ. ನಾ ತಿಳಿದಂತೆ ”ಭಡಾಭಡಾ ಎದ್ದು, ಲಕಾಲಕಾ ತಯಾರಾಗಿ ಸರಾಭರಾ ಓಡಾಡಿ .. ’ಭಡಭಡಾಂತ ಬರದ ಕೊಡದಿದ್ದರ ಢಣ್ ಅಂತ” ಅನ್ನುವ ಅವರ ಎಚ್ಚರಿಕೆಯ ಫಲವಾಗಿ ನಮ್ಮಿಬ್ಬರ ಲೇಖನಗಳು ಬೆಳಕುಕಾಣಲು ಅನುವು ಮಾಡಿಕೊಟ್ಟ ಇಬ್ಬರೂ ಸಂಪಾದಕರಿಗೆ ನಾವು ಋಣಿ. ಊಟಿಯ ಚಳಿಯಲ್ಲಿ ಮಾಡಿದಂತೆ ಎರಡೆರಡು ಚಾದರ್ ಹೊದ್ದು ಮುಸುಕು ಹಾಕಿಕೊಂಡು ಆ ಕನಿಸಿನ ಲೋಕದಲ್ಲಿ ವಿಹರಿಸುವದು ನನಗೂ ಇಷ್ಟವೇ! ಶ್ರೀವತ್ಸ ದೇಸಾಯಿ

  Like

 11. ಎರಡು ಕಥೆಗಳು ಬಹಳ ಚೆನ್ನಾಗಿದೆ. ಕೆಲವು ವರ್ಷದ ಹಿಂದೆ ರಜದಲ್ಲಿ ಊಟಿನಲ್ಲಿ ooty club ಅಲ್ಲಿ ಉಳಿಕೊಂಡಿದ್ದು ಜ್ಞಾಪಕ ಬರುತ್ತೆ ಜಾಕೆಟ್ ಇರಲಿಲ್ಲ ಆದ್ದರಿಂದ dining ರೂಮ್ ನಲ್ಲಿ ಬಿಡಲಿಲ್ಲ. ಹೊರಗೆ ಕೂಡಿಸಿ ಊಟ ಕೊಟ್ಟರು !!!
  ಬಿಜಾಪುರದ ಕನ್ನಡ ಬಹಳ ಚಲೋ ಇದ್ದರು ಓದುವುದು ಸ್ವಲ್ಪ ಕಷ್ಟವಾಯಿತು , ಕಾರಣ, may be Im a typical
  southerner ?

  Liked by 2 people

  • ಓದಿ ಮೆಚ್ಚಿಕೊಂಡ ರಾಮಮೂರ್ತಿಯವರಿಗೆ ಧನ್ಯವಾದಗಳು. ನಾನು ಬರೆದಂತೆ ಆಗ ನಮಗೆ ಊಟಿ ಕ್ಲಬ್ನಲ್ಲಿ ಹೋಗುವ ’ತಾಕತ್ತಿದ್ದಿಲ್ಲ! ನಿಮ್ಮ ಅನುಭವ ’Snooty Ooty’ ಅಂತ (ಕು)ಪ್ರಸಿದ್ಧವಾಗಿದ್ದ ಬ್ರಿಟಿಶರ ಬಳುವಳಿಗೆ ಕನ್ನಡಿ ಹಿಡಿಯುತ್ತದೆ.’ದಾಸಪ್ರಕಾಶ್’ಗೆ ಹೋಗಿದ್ದರೆ ಬಾಳೆ ಎಲೆಯಲ್ಲಿ ಉಣ್ಣಬಹುದಿತ್ತೇನೋ. ಎರಡನೆಯ ಸಲ ಹೋದಾಗ ನಾನು ಅಲ್ಲಿದ್ದೆ. ಆದರೆ ಆಗ ಡಿಸೆಂಬರ್ ತಿಂಗಳು. ಚಿಲ್ ಬ್ಲೇನ್ಸ್ ಮತ್ತೆ ಕಾಣಿಸಿಕೊಂಡಿತು!

   Like

 12. ಎರಡು ಅತಿ ಆತ್ಮೀಯ ಕಥನಗಳು. ದೇಸಾಯಿಯವರೊಟ್ಟಿಗೆ ಮುಸಲ ಧಾರೆಯಲ್ಲಿ ನೆನೆದು, ಊಟಿಗೆ ನಾವೇ ಹೋಗಿ ಬಂದ ಅನುಭವ. ಅಷ್ಟೇ ಆಪ್ತ ಗೌರಿಪ್ರಸನ್ನರ ಮಾಯಿಯ ಮಮತೆಯ ಚಾದರ.

  ಹಂಚಿಕೊಂಡ ಅವರಿಬ್ಬರಿಗೂ ಮತ್ತು ಅವಕಾಶ ಕಲ್ಲಿಸಿಕೊಟ್ಟ ಸಂಪಾದಕರಿಗೂ 🙏🙏

  ಮುರಳಿ ಹತ್ವಾರ್

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.