ಹೋದ ವಾರ ಪ್ರಕಟವಾದ `ಈ ಹೊತ್ತಿಗೆ
` ನವರಾತ್ರಿ ಕಾವ್ಯೋತ್ಸವದ ವರದಿ ಮತ್ತು ಕವನಗಳನ್ನು ತಾವೆಲ್ಲಾ ಓದಿದ್ದೀರಿ. ಈ ವಾರ ಆ ಕಾರ್ಯಕ್ರಮದ ಎರಡನೇ ಕಂತು ಕೆಳಗಿದೆ; ಅದರಲ್ಲಿ ಅಂದು ಓದಲ್ಪಟ್ಟ ಉಳಿದ ಕವಿತೆಗಳು ಇವೆ. ಓದಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)
ನೆನಪುಗಳು - ಡಾ. ಪ್ರೇಮಲತ ಬಿ. ಬೆಳ್ಳಂಬೆಳಗು ನಸುನಕ್ಕು ಮತ್ತೆ ಬಂದಿಹೆನೆಂಬ ಹೊತ್ತಲ್ಲಿ ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ ವರ್ತಮಾನವ ಕದಡದಿರಿ ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ ನೋವು ನಲಿವುಗಳ ಚಿತ್ತಾರದ ರಂಗೋಲಿ ಹಾಲುಕ್ಕಿ ಹರಿದ ಬದುಕಿನಲಿ ಒಂದೊಂದೇ ಪಾರಿಜಾತಗಳು ಜಾರಿ ಉದುರಿ ಭೂತದ ನೆರಳುಗಳಿಗೆ ಇಂದು ಹೊಸರೆಕ್ಕೆ ಕಟ್ಟಿ ಅಗಲಿಕೆಯ ನೋವು, ವಿರಹದ ಕಾವು ತುಂಬಿಹ ಬೆಂಗಾಡಿನ ಮಾಯೆ ಮರುಳಿಗೆ ಹೊತ್ತೊಯ್ಯದಿರಿ ಬರಗಾಲದ ಬಿರು ಬಿಸಿಲಿಗೆ ನಿಡುಸುಯ್ದ ಈ ಇಹಕ್ಕೆ ಮರಳಿ ಅರಳುವ ಬಯಕೆ ನೀರು ಹುಯ್ಯುವವರಿಲ್ಲ ಒಂಟಿ ಮರಕ್ಕೆ ಸಂಜೆ ಗಾಳಿಯ ಹಿತ ಆಳಕ್ಕೆ ಇರಿದ ಕೆಂಪಿನಲಿ ಮನಸ್ಸರಳಿ ಹಿತವಾಗಿ ನರಳುತ್ತದೆ ಅವನೆದೆ ಕಾವಿನಲಿ ಕರಗುತ್ತದೆ ಸೆಟೆದ ನರನಾಡಿಗಳು ಅದುರಿ ಹಗುರಾಗಿ ಬಿಡುತ್ತವೆ ಕೂಡಿ ಕಳೆದುಹೋಗುವ ತವಕದಲಿ ಕಣ್ಣೆವೆ ಭಾರವಾಗುವ ಹೊತ್ತಲ್ಲಿ ನಿಮ್ಮ ಒತ್ತಾಸೆಯಿರಲಿ ನನಗೆ ನನ್ನ ಬಿಡದಿರಿ,ಬಿಡದೆ ಕಾಡದಿರಿ ಅಣಕಿಸದಿರಿ ನೆನಪುಗಳೆ, ಬದುಕಿದು ವೃದ್ಧಾಪ್ಯದಲಿ ಒಂಟಿ ಮುದುಕಿ. *****************************************************
ಕಾಯಲೇಬೇಕಲ್ಲ......... - ಅಮಿತಾ ರವಿಕಿರಣ ಬಂದಿಲ್ಲಿ ಜಾವ ಕಳೆದಿಲ್ಲ.. ಅದಾಗಲೇ ಸಮಯ ಸರಿಯುತ್ತಿಲ್ಲ.. ಸೂರ್ಯ ಮುಳುಗುತ್ತಿಲ್ಲ ಚಂದ್ರ ನಗುತ್ತಿಲ್ಲ, ಸಂಜೆಯ ಆ ತುಳಸಿ ದೀಪದ ಮಿಣುಕಿಲ್ಲ ಮಂತ್ರ ಭಜನೆಯ ಜೊತೆಗೆ ಊದುಬತ್ತಿ ಲೊಬಾನದ ಘಮವಿಲ್ಲ ನನಗಿಲ್ಲಿ ಸಮಯ ಸರಿಯುತ್ತಿಲ್ಲ ಸೊಳ್ಳೆಯ ಕಿರಿಕಿರಿಯಿಲ್ಲ ಇರುವೆ ಸಕ್ಕರೆಯ ಮುತ್ತುವುದಿಲ್ಲ ಜಿರಳೆಗಳ ಚಿರಿಪಿರಿಯೂ ಇಲ್ಲ.. ಹಲ್ಲಿ ಲೊಚಗುಡುವುದಿಲ್ಲ, ಸಂಜೆಯ ಸಂಗೀತಕ್ಕೆ ಜೀ ಗೊಡುವ ಜೀರುಂಡೆಯೂ ಇಲ್ಲ.. ಚಾ ಸಮಯಕ್ಕೆ ಸರಿಯಾಗಿ ಟೋಸ್ಟ್ ಬೇಕೆಂದು ಹಿಂದೆ ಮುಂದೆ ಸುತ್ತಿ ಸಿಟ್ಟು ಬರಿಸುವ ನಾಯಿ ಇಲ್ಲ.. ಆದರೂ ಇಲ್ಲಿ ಯಾಕೋ ಸರಿ ಹೋಗುತ್ತಿಲ್ಲ... ಬಿಸಿಲಿಗೆ ಝಳವಿಲ್ಲ, ಮಳೆ ಇದೆ ಗುಡುಗು ಮಿಂಚಿಲ್ಲ... ರಸ್ತೆಬದಿ ನಿಲ್ಲುವ ಕೆಂಬಣ್ಣದ ನೀರ ಓಕುಳಿ ಇಲ್ಲ.. ಎಲ್ಲೆಲ್ಲೂ ಶುಭ್ರ ಸುಭಗ ಎನಿಸುವ ಈ ನಾಡು ನನ್ನದೆನಿಸುತ್ತಿಲ್ಲ... ಟಿವಿಯಲ್ಲಿ ಬಂದು ವೃಥಾ ನಮ್ಮ ಸಮಯ ತಿನ್ನುವ ಮಹದೇವಿ, ನಾಗಿಣಿ, ಸುಬ್ಬಲಕುಮಿ, ಶನಿ ಇನ್ನಿತರರಿಲ್ಲ. ರಸ್ತೆ ಮೇಲೆ ವೃಥಾ ಹಾರ್ನ್ ಮಾಡುತ್ತಾ ಸ್ಪರ್ಧೆಗಿಳಿಯುವ ವಾಹನ ದಟ್ಟಣೆ ಇಲ್ಲ, ಅದರೂ ಸಂಜೆ ಸರಿಯುತ್ತಿಲ್ಲ... ಮನದ ಮಾತು ಕೇಳಲು ಯಾರಿಲ್ಲ.. ನನ್ನ ಹರಟೆ ಕೇಳಲು ಕಿವಿಗಳಿಲ್ಲ.. ಮುದ್ದಿಸಿ ಅದೇ ಮಾಯದಲ್ಲಿ ಬುದ್ದಿಹೇಳುವ ಪಪ್ಪ ಅಮ್ಮನ ಆ ದನಿ ಕೇಳಲು.. ಜಗಳವಾಡಿ ಮತ್ತದೆ ಮಾಯದಲ್ಲಿ ಒಪ್ಪಿ ಅಪ್ಪುವ ತಂಗಿ ತಮ್ಮನ ಹಿತಸ್ಪರ್ಶಕ್ಕೆ ಮತ್ತೆ ಕಾಯಲೇಬೇಕಲ್ಲ??? ************************************************ ಏಕತಾರಿ - ಅಮಿತಾ ರವಿಕಿರಣ ಹೇಗಿರುತ್ತಿ ಹೀಗೆ ? ಹೇ ಏಕತಾರಿ…. ಒಂಟಿ ಒಂಟಿ, ಕಂಟಿಗೆ ಕೊರಳ ಕಟ್ಟಿ ಬಿಗಿದು ಖಾಲಿ ಒಣ ಬಿರಡೆಯೊಳು ಬದುಕ ಸವೆಸಿ ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ... ಅಲ್ಪ ತೃಪ್ತೆ ನೀ ಹೇ ಏಕತಾರಿ… ನೊಡಲ್ಲಿ ಬಗೆ ಬಗೆಯ ವಿಧ ವಿಧದ ನೂರು ನೂರು ತಂತಿ ವಾದ್ಯಗಳು. ಯಾರೂ ಒಂಟಿ ಅಲ್ಲಾ ನಿನ್ನಂತೆ… ಸಪ್ತ ಸ್ವರ, ಗಮಕ, ಖಟ್ಕಾ ಮುರ್ಕಿಗಳ ಗುಂಗಲ್ಲಿ…. ದನಿಗೆ ದನಿಯಂತೆ ಬೆರೆಯಲು ತವಕಿಸುವ ವೀಣೆ ಸಂತೂರ್ ಸಿತಾರು… ನಾಲ್ಕೇ ತಂತಿ ಅದಾಗ್ಯೂ ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು.. ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ. ಗಿಟಾರು ಎಲ್ಲದ್ದಕ್ಕೂ ಖುಶಿಗೂ ದುಖಃಕ್ಕೂ, ನೋಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ ಬೂಜುಕಿಯ ಬಾಜು ನನ್ನ ಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು… ಇನ್ನೂ ಇವೆ ಅದೆಷ್ಟೋ ಮೋಹನ, ರುದ್ರ ವೀಣೆಗಳು; ಸಣ್ಣನೆ ತಂತಿ ಮನಮೀಟಿ ಮಿಡಿಯುವ ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು.. ನೀನ್ಯಾಕೆ ಅಷ್ಟು ಒಂಟಿ ಒಂಟಿ ಓ ಏಕತಾರಿ ತಳಕು ಬಳುಕಿನ ಈ ಭ್ರಮಾಲೋಕದ ನಡುವೆಯೆ ಅವ್ಯಾಹತ ಮಿಡಿಯುವ ವಿಕ್ಷಿಪ್ತ ರಾಗರಂಜಿನಿ… ******************************************************
ರೆಕ್ಸನ ಕಿವಿಮಾತು - ಲಕ್ಷ್ಮೀನಾರಾಯಣ ಗುಡೂರ್ ಕಾಯುತ್ತ ಕುಳಿತಾಗ ಮ್ಯೂಸಿಯಮ್ಮಿನಲೊಮ್ಮೆ ದಿಟ್ಟಿಸುತ ಮೈ ಮರೆತಿದ್ದೆ ಟಿ ರೆಕ್ಸನನ್ನೇ ಇಪ್ಪತ್ತಡಿಯ ಮೇಲಿದ್ದ ಕಣ್ಣು ನನ್ನೆಡೆ ನೋಡಿ, ಚೂಪು ಹಲ್ಲಿನ ಬಾಯಿ ನಸುವೇ ನಕ್ಕಂತಾಗಿ ಗಡಸು ದನಿಯಲಿ ಬಂದ ನಮಸ್ಕಾರ ಕೇಳಿ ತೆರೆದ ಬಾಯ್ ತೆರೆದಂತೆ ನೋಡಿದೆನು ಅತ್ತ 'ನೋಡಯ್ಯ ಮನುಜ, ನನ್ನ ಮಾತು ಕೇಳು ನನ್ನನುಭವದ ಮಾತು, ಹಾಕಿಕೊ ಕಿವಿಯೊಳು.. ನಿನ್ನಂತೆ ನಾನೂ ಒಮ್ಮೆ ಈ ಭುವಿಯಲಿದ್ದೆ ನನ್ನದೇ ಟೈಮೆಂದು ಉರಿಯುತಲೆ ಇದ್ದೆ; ಕೋಟಿ ಕೋಟಿಗಳಲ್ಲಿ ಬಲಶಾಲಿಯಾಗಿ ತಡೆಯುವರು ಇಲ್ಲದೆಲೆ ಮೆರೆಯುತ್ತಲಿದ್ದೆ.. ಸಿಡಿಲಿನೊಲು ಅಪ್ಪಳಿಸಿತಂದೊಮ್ಮೆ ಕಲ್ಲು, ಹೊರ ಗಗನದಿಂದೆಲ್ಲೋ ಬಂದಂಥ ಕಲ್ಲು.. ಹಬ್ಬಿ ಧೂಳಿನ ಮೋಡ, ಸೂರ್ಯ ಮರೆಯಾಯ್ತು ಲಕ್ಷ ವರ್ಷಗಳಿದ್ದ ನಮ್ಮೆಲ್ಲರ ಕೊನೆಯಾಯ್ತು ನಿಮ್ಮನ್ನು ನೋಡುತ್ತಿರೆ... ಹಾ...ಮತ್ತದೆಲ್ಲ ನೆನಪಾಯ್ತು ಉರಿವ ಬೆಂಕಿಗೂ ಕೂಡ ಒಮ್ಮೆ ಕೊನೆಯುಂಟು ನಮ್ಮ ಜೀವನಕ್ಕಂತೂ ಮರಣವೇ ನಂಟು ಅದಕೆ ಹೇಳುವೆ ಕೇಳು ಮತ್ತೆ ನನ್ನ ಮಾತು ಕೈಲಿರದ ಕಾರಣದಿ ನಮ್ಮ ಕೊನೆಯಾಯ್ತು ನಿಮ್ಮ ಬದುಕುವ ಪರಿಯೇ ಸಾವಿಗೆಡೆಯಾಯ್ತು ಇನ್ನಾದರೂ ಏಳು, ನಮ್ಮ ಪಾಠವನೋಡಿ ಕಲಿತು ಪರಿಸರದ ಉಳಿವಿನಲೇ ಮಾನವನ ಒಳಿತು ನಿನ್ನದಲ್ಲವೋ ಭುವಿಯು ಬಾಡಿಗೆಯ ತಾನು ಇರುವ ಭೂಮಿಯನೊಂದ ಉಳಿಸಿಕೊ ನೀನು... ಇರುವುದೊಂದೇ ಭೂಮಿ, ಉಳಿಸಿಕೊ ನೀನು. ************************************************** ನವರಾತ್ರಿ ಮತ್ತು ಅಜ್ಜಿಯ ಮನೆ - ಲಕ್ಷ್ಮೀನಾರಾಯಣ ಗುಡೂರ್ ಮತ್ತೆ ಬಂತು ಪ್ರತಿವರ್ಷ ಬರುವ ನವರಾತ್ರಿ, ದೇವ-ದೇವಿಯರ, ಹಬ್ಬಗಳ ನೆನಪು ತರುವ ನವರಾತ್ರಿ ನನಗೆ ಅಜ್ಜಿಮನೆಯ ನೆನಪ ತರುವ ನವರಾತ್ರಿ ಅಜ್ಜಿಯ ನಗುಮುಖವ ನೆನಪಿಸುವ ನವರಾತ್ರಿ ಶ್ರಾವಣದೊಂದಿಗೇ ಶುರುವಾಗುವ ಗಡಿಬಿಡಿ ಹಬ್ಬ-ಪೂಜೆಗಳ ಅಜ್ಜಿ-ತಾತನ ಮಡಿ-ಮಡಿ! ಹತ್ತು ಮತ್ತೊಂದು ಮೊಮ್ಮಕ್ಕಳ ಗಜಿಬಿಜಿ ಮನೆತುಂಬ ಹರಡಿದ ಸಾಮಾನಿನ ಮಿಜಿ ಮಿಜಿ.. ದೇವರ ಮನೆಗೆ ಹಚ್ಚಲು ಕಲಿಸಿಟ್ಟ ಬಿಳಿಯ ಸುಣ್ಣ ಶ್ರೀಕಾರ ಬರೆಯಲು ತೆಗೆದಿಟ್ಟ ಕೆಂಪು ಬಣ್ಣ ತೋರಣದಲಿ ಅಣ್ಣ ಕಿತ್ತಿದ ಅಚ್ಚ ಹಸಿರು ಮಾವಿನೆಲೆ ತೊಳೆದ ಹೊಸಿಲಿಗೆ ತಂಗಿ ಎಳೆದ ರಂಗೋಲಿಯ ಬಲೆ ಅಡಿಗೆ ಮನೆಯ ಚಿತ್ರಾನ್ನ ಒಗ್ಗರಣೆ ಘಮಲು ಕಡುಬು ಪಾಯಸಗಳ ಮೇಲೆ ತುಪ್ಪದ ಅಮಲು ಪಾತ್ರೆಗಳ ಸೌಟುಗಳ ಬಳೆಗಳ ಝಣಝಣ ಕರ್ಪೂರದಾರತಿಯ ಜೊತೆ ಕೈಗಂಟೆಯ ಢಣಢಣ ರೇಶಿಮೆ ಸೀರೆ ಪಂಚೆ, ಲಂಗಗಳ ಸರಸರ ಸಡಗರದ ಮಾತು, ನಗುಗಳು ಭರಪೂರ ಬನ್ನಿ ಕೊಡಲು ಮನೆಮನೆಗಳ ತಿರುಗಿದ ರೀತಿ ಹಿರಿ-ಕಿರಿಯರೆನ್ನದೆಲೇ ಒಪ್ಪಿಕೊಳ್ಳುವ ಆ ಪ್ರೀತಿ ಅಜ್ಜಿಯ ಮನೆಯ ಹಬ್ಬದ ಹದವೇ ಬೇರೆ ಅಜ್ಜಿ-ತಾತನ ಪ್ರೇಮದ ಮುದವೇ ಬೇರೆ ಮರೆತೇನಂದರೂ ಮರೆಯದಾ ನವರಾತ್ರಿ ಪ್ರತಿ ಕೇಳದ ಆ ಪ್ರೀತಿಯ ಚಿಕ್ಕಂದಿನ ನವರಾತ್ರಿ ..... ...... ಅಜ್ಜಿಯ ಮನೆ ನವರಾತ್ರಿ... ********************************************
ಪ್ರೀತಿಯೆಂಬ ಸತ್ಯ - ಮುರಳಿ ಹತ್ವಾರ್
ತಾ ನುಡಿವುದೆಲ್ಲ ಸತ್ಯವೆನಲು ನಲ್ಲೆ
ನಂಬುವೆ, ತಿಳಿದರೂ ಅದರಡಿಯ ನಿಜ
ಜಗದ ನಾಲಿಗೆಯಾಳವ ಅರಿಯದ
ತರುಣ ನಾನೆಂದು ತಿಳಿಯಲಿ ಬಿಡಿ!
ಆ ಸಿಹಿ ಕಲ್ಪನೆಯ ಜಂಭದ ನಲಿವಲಿ
ನೆನೆವೆ ನಾ ಯೌವನದ ನಿನ್ನೆಗಳ ನಿಧಿ,
ಮನದನ್ನೆಯ ಸವಿಮಾತುಗಳ ನಮಿಸುತಲಿ:
ಸತ್ಯವ ಬಚ್ಚಿಟ್ಟರೂ ನಾವಿಬ್ಬರೂ ಇಲ್ಲಿ,
ಹೇಳಿಲ್ಲ ಅವಳೆಲ್ಲೂ ಸುಳ್ಳಲ್ಲವೆಂದು
ನಾನೂ ನಂಬಿಲ್ಲ ನಾ ತರುಣನೆಂದು.
ಪ್ರೀತಿಯೆಂಬುದು ನಂಬಿದಂತೆ ಕಾಣುವ ಬಳ್ಳಿ
ಬೆಳೆದಷ್ಟೂ ಬಲವದಕೆ ಒಲವಿನ ಹುಸಿಗಳಲಿ
ನನಗವಳು, ಅವಳಿಗೆ ನಾ ಪ್ರೇಮದ ಹೊದಿಕೆ
ಕೊರತೆಗಳು ಕರಗಿವೆ ಹೊಗಳಿಕೆಯ ಹದಕೆ!
(Translation of Shakespeare’s Sonnet 138: When my love swears that she is made of truth)
***********************************************
ಭೂಮಿ - ರಮ್ಯ ಭಾದ್ರಿ ಹಗಲಿರುಳು ದಣಿವಿಲ್ಲದೆ ಸಕಲವೂ ಹೊರುವೆ ಒಡಲಲ್ಲಿನ ಜೀವಜಲವೆರೆದು ಪೊರೆವೆ ವನಸಿರಿಯ ಉಸಿರಾಗಿಸಿ ಪ್ರಾಣವಾಗಿರುವೆ ಮಣ್ಣನ್ನು ಹಸಿರಾಗಿಸಿ ಹಸಿವ ನೀಗಿಸುವೆ ತಾಯೇ ಧರಣಿಯೇ ನಿನಗೆ ವಂದಿಸುವೆ. ಭೇದವರಿಯದ ನಿನಗೆ ಭೇದಭಾವ ಬಾಧಿಸಿದೆ ಒಡಲೊಡಲ ಕಿಚ್ಚಿನ ಕೆನ್ನಾಲಿಗೆ ಎಲ್ಲೆಲ್ಲೂ ಚಾಚಿದೆ ಪ್ರಕೃತಿಯ ಪಾಠವ ಮರೆತು ಸ್ವಾರ್ಥವೂ ಭುಗಿಲೆದ್ದಿದೆ ಬವಣೆಯಾದರೂ ಬಾಗದೆ ಮನ್ನಿಸುತ ನಿಸ್ವಾರ್ಥದ ಪ್ರೀತಿ ಮಳೆಗರೆವೆ ತಾಯೇ ಧರಿತ್ರಿಯೇ ನಿನಗೆ ವಂದಿಸುವೆ. ಯುಗಗಳನ್ನು ಮಡಿಲಲ್ಲಿ ಆಡಿಸಿ ಬೆಳೆಸಿರುವೆ ಪಾಪ ಪುಣ್ಯಗಳ ಪರಾಕಾಷ್ಠೆಯ ನೀ ಬಲ್ಲೆ ಅನೀತಿ ಅಧರ್ಮಗಳಿಗೆ ಪ್ರಾಯಶ್ಚಿತ್ತವು ಈ ಇಳೆಯಲ್ಲೆ ಎನ್ನುವ ಅನಂತ ಸತ್ಯಕ್ಕೆ ಸಾಕ್ಷಿಯಾಗಿರುವ ನ್ಯಾಯ ದೇವತೆಯೇ ತಾಯೇ ಭೂರಮೆಯೇ ನಿನಗೆ ವಂದಿಸುವೆ. (ಈ ಕವಿತೆಯನ್ನು ರಮ್ಯ ಅವರ ಸಹೋದರಿ ಲಕ್ಷ್ಮಿ ಭಾದ್ರಿ ಅವರು ರೇವತಿ ರಾಗಕ್ಕಳವಡಿಸಿ ಹಾಡಿದ್ದಾರೆ; ಆ ಹಾಡನ್ನು ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು - ಭೂರಮೆಯೇ ನಿನಗೆ ವಂದಿಸುವೆ ಅಥವಾ ಪೂರ್ತಿ ಕೊನೆಯಲ್ಲಿನ ಪ್ಲೇಯರ್ ಮೇಲೆ ಕ್ಲಿಕ್ ಮಾಡಿ ಕೇಳಿ) *************************************************** ನವರಾತ್ರಿ - ರಮ್ಯ ಭಾದ್ರಿ ವರುಷಗಳುರುಳಿದರು ಮರಳಿ ಬಂತು ನವರಾತ್ರಿ ಕರುಣಿಸಲು ಎಲ್ಲರಿಗೂ ಸುಖ ಶಾಂತಿ ದುಷ್ಟಶಕ್ತಿಗಳ ನಿಗ್ರಹಿಸಿ ಕಳೆಯಲು ಭೀತಿ ಧರೆಗಿಳಿವಳು ಮಹಾ ತಾಯಿ ಆದಿ ಪರಾಶಕ್ತಿ ಇಳೆಯಲ್ಲ ಮಳೆ ಸುರಿದು ತಂಪಾಗಿ ಕಂಪೆರೆದು ಶಿಶಿರ ಸ್ಪರ್ಶಕ್ಕೆ ವನರಾಶಿಯು ವರ್ಣರಂಜಿತವಾಗಿ ಹೂವ ಹಾಸಿರಲು ನಿಶೆಯನ್ನು ಕಳೆಯಲು ಕಾತುರದಿ ಉಷೆಯು ಕಾದಿರಲು ಸಕಲವೂ ನವೋದಯಕೆ ಮೊಗ ಮಾಡಿ ನಿಂತಿರಲು ಧರೆಗಿಳಿವಳು ದೇವಿ ದೀನರನ್ನುದ್ದರಿಸಲು ಪೂರ್ವದ ಪೆಂಡಾಲುಗಳಲ್ಲಿ ಪ್ರಜ್ವಲಿಸುತ ಧಗಿಸುವ ದುರ್ಗೆಯಾಗಿ ಪಶ್ಚಿಮದ ಜಾನಪದದ ನೃತ್ಯ ಕಲೆಗಳ ಅಧಿದೇವತೆಯಾಗಿ ಉತ್ತರದ ಜಾಗರಣೆಗಳಲ್ಲಿ ಜಗಮಗಿಸುತ ಜಗನ್ಮಾತೆಯಾಗಿ ದಕ್ಷಿಣದ ಅಂಗಳದ ಬೊಂಬೆಗಳ ರೂಪದಿ ಜಗದಂಬೆಯಾಗಿ ಧರೆಗಿಳಿವಳು ದೇವಿ ಅಂಬಾರಿ ಏರಿ ಚಾಮುಂಡಿಯಾಗಿ ಭವ ಬಂಧನದ ಪಯಣದಲಿ ಭಕ್ತರ ಶಕ್ತಿಯಾಗಿ ಸಕಲಾಭಿಷ್ಟಗಳನು ಕರುಣಿಸುವ ಇಷ್ಟದೇವತೆಯಾಗಿ ಮದದಿ ಮತಿಗೆಟ್ಟವರ ತಿಮಿರವನೋಡಿಸುವ ಜ್ಞಾನದೀವಿಗೆಯಾಗಿ ಬಳಲಿದ ಬಡವರ ಬಾಳಿನ ಸಿರಿದೇವಿಯಾಗಿ ಧರೆಗಿಳಿವಳು ತಾಯಿ ಮೊರೆ ಇಡುವವರ ಮೂಕಾಂಬಿಕೆಯಾಗಿ ಇಳೆಯಲ್ಲ ಕಳೆಕಟ್ಟಿದೆ ನಿನ್ನ ಆಗಮನದಿ ಭಕ್ತರೆಲ್ಲ ನಿನ್ನ ಭಜಿಸುತಿಹರು ಆನಂದ ಪರವಶದಿ ಕಾಣದೆ ಕಾಡುತ್ತಿರುವ ಕಂಟಕವ ಕಳೆಯಮ್ಮ ಭರದಿ ಕೈ ಹಿಡಿದು ನಡೆಸಮ್ಮಾ ಶರಣಾದೆವು ನಿನ್ನ ಚರಣದಿ ಸರ್ವರಿಗೂ ಸನ್ಮಾನಗಳವಾಗಲಿ ತಾಯೆ ನಿನ್ನ ಅನುಗ್ರಹದಿ *********************************************
ನವರಾತ್ರಿಯ ಕಾವ್ಯೋತ್ಸವದ ಎರಡನೆಯ ಕಂತಿನ ಕವನಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿ, ಭಾವತುಂಬಿ ಕಂಗೊಳಿಸಿವೆ. ವೈವಿಧ್ಯಮಯ ವಸ್ತುಗಳು, ಸಹ ..
ವೃದ್ಧಾಪ್ಯದಲ್ಲಿ ಪಾರಿಜಾತದಂತೆ, ಉದುರುವಾಗ ಅಣಕಿಸಬಹುದಾದ ನೆನಪುಗಳನ್ನು ನೆನೆಯುವ (ಪ್ರೇಮಲತ ಅವರ ಕವನ), ಊರಿಂದ ಮರಳಿ ಏಕತಾರಿಯಂತೆ ನಿಂತ ಅನಿವಾಸಿ ಅಮಿತಾ ಅವರಿಗೆ ಲಗೇಜ ಸಹ ಬಿಚ್ಚುವ ಮೊದಲೇ ಊರಿನ ನೆನಪು ಕಾಡಿದ ಕವನಗಳಲ್ಲಿ ನೆನಪುಗಳು ಹರಿದು ಕಾಡಿವೆ.
ಲಕ್ಷ್ಮೀನಾರಾಯಣ ಗುಡೂರ್ ಮತ್ತು ರಮ್ಯ ಭಾದ್ರಿಯವರ ಎರಡೂ ಕವನಗಳಲ್ಲೂ ಸಾಮ್ಯತೆ ಇದೆ – ಒಂದು ಜತೆಯಲ್ಲಿ ಮಾನವನ ದುರಾಶೆಗೆ ಎಚ್ಚರಿಕೆ ಕೊಟ್ಟರೆ ( ರೆಕ್ಸ್ , ಭೂಮಿ), ಇನ್ನೆರಡು ಕವನಗಳಲ್ಲಿ ನವರಾತ್ರಿಯ ನೆನಪನ್ನು ಹಸಿರಾಗಿಸಿ ಬರೆದಿದ್ದಾರೆ. ರಮ್ಯ ಅವರ ‘ಭೂಮಿ’ ಯ ವಂದನೆಯನ್ನು ಸುಶ್ರಾವ್ಯವಾಗಿ ಹಾಡಿದ ಲಕ್ಷ್ಮಿ ಭಾದ್ರಿಯವರ ಹಾಡನ್ನು ಕೇಳಲಾಗಿದ್ದು ಇನ್ನೊಂದು ಬೋನಸ್!
ಮುರಳಿ ಹತ್ವಾರ್ ಅವರ ಅನುವಾದ ಮಹಾಕವಿ ಷೇಕ್ಸ್ಪಿಯರನ ಸುನೀತದ ಭಾವವನ್ನು ನೀಟಾಗಿ ಕನ್ನಡಕ್ಕಿಳಿಸಿದೆ. ಎಲ್ಲ ಕವಿಗಳಿಗೂ ತಡವಾದರೂ ಅಭಿನಂದಿಸುವೆ. ಮತ್ತೊಮ್ಮೆ ಈ ಹೊತ್ತಿಗೆಯ ತಂಡ ‘ಅನಿವಾಸಿ’ಗೆ ಕೊಟ್ಟ ಅವಕಾಶಕ್ಕೆ ಧನ್ಯವಾದಗಳನ್ನರ್ಪಿಸುವುದು ಸೂಕ್ತ.
ಶ್ರೀವತ್ಸ ದೇಸಾಯಿ
LikeLike
All poems made a good read.
“ನನಗಿಲ್ಲಿ ಸಮಯ ಸರಿಯುತ್ತಿಲ್ಲ” -my response to this poem written by Amita Ravikiran
ಹೊರಗೆ ಕಾರೆರಡು ಮನೆಯ ಮುಂದಿ ಸದಾ ನಿಂತಿವುದಲ್ಲ !
ಹೋಗಲು ಜಾಗ ಮಾತ್ರ ಎಲ್ಲೂ ಇಲ್ಲ…
ಒಳಗೆ ಸಕ್ಕರೆ ತುಪ್ಪ ಕಾಲುವೆ ಹರಿಯುವದಲ್ಲ …
ಆದರೆ ಬರುವವರೂ ಇಲ್ಲ, ತಿನ್ನುವವರೂ ಇಲ್ಲ
ಹೇಳುವವರು ಕೇಳುವವರೂ ಯಾರೂ ಇಲ್ಲವೇ ಇಲ್ಲ… !
LikeLike