ಜಯ ಕರ್ನಾಟಕ ಮಾತೆ – ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ರಾಜ್ಯೋತ್ಸವದ ಶುಭಾಶಯಗಳೊಂದಿಗೆ, ಅನಿವಾಸಿ ಬಳಗದ ಕೊಡುಗೆ ಇಲ್ಲಿದೆ; ಕೆಲವು ಕವನಗಳು, ಹರಕೆಗಳು, ಶುಭಾಶಯಗಳು; ಕೆಲವು ಕೈಬರಹದಲ್ಲೂ ಇವೆ. ವಾರದ ಮಧ್ಯೆ ರಾಜ್ಯೋತ್ಸವದ ಪ್ರಯುಕ್ತ. ಕೈಬರಹದಲ್ಲಿ ಕಳಿಸುವಂತೆ ಕೇಳುವ ಸಲಹೆ ಕೊಟ್ಟದ್ದಕ್ಕೆ ಧನ್ಯವಾದಗಳು ಸಲ್ಲುವುದು ಅಮಿತಾ ರವಿಕಿರಣ ಅವರಿಗೆ. – ಎಲ್ಲೆನ್ ಗುಡೂರ್ (ಸಂ.)

 ನಮ್ಮ ಹೆಮ್ಮೆಯ ನಾಡು - ಡಾ. ಜಿ ಎಸ್ ಶಿವಪ್ರಸಾದ್
 
 ಸುಸಂಸ್ಕೃತ  ಸಜ್ಜನ ಸುಪ್ರಜೆಗಳ ನಾಡು 
 ಶರಣರ ದಾಸರ ಅರಸರ ಬೀಡು 
 ತಾಮರ ಕಬ್ಬಿಣ ಬಂಗಾರದ ಗೂಡು 
 ಸಸ್ಯ ಸರೋವರ ಸಮೃದ್ಧಿಯ ಕಾಡು 
  
 ಸುಂದರ ಸಹ್ಯಾದ್ರಿಯ ನಿನ್ನಯ ಸೆರಗು 
 ಶಿಲ್ಪ ಶೃಂಗಾರದ ಬೇಲೂರಿನ ಬೆರಗು 
 ಭೋರ್ಗರೆಯುವ ಜೋಗದ ಗುಂಡಿಯ ಗುಡುಗು 
 ಮೊರೆಯುವ ಕಡಲಿನ ತೀರದ ಮೆರುಗು 
  
 ಕೃಷ್ಣ ತುಂಗೆ ಕಾವೇರಿಯ ಸವಿಯು 
 ರಸಋಷಿ, ಬೇಂದ್ರೆಯ ಕಾವ್ಯದ ರಸವು 
 ನಿರ್ಮಲ ನಿರಂತರ ನಿನ್ನಯ ಚೆಲುವು 
 ತಂದಿದೆ ನಮಗೆ ಇನ್ನಿಲ್ಲದ ಒಲವು 
****************************************
 ಭಾಷಾಭಿಮಾನ - ರಾಮಶರಣ್ ಲಕ್ಷ್ಮೀನಾರಾಯಣ
  
 ವರ್ಷಕ್ಕೊಮ್ಮೆ
 ನವಂಬರ್ ಒಂದರಂದು
 ಕರ್ನಾಟಕವೇ ಉಸಿರೆಂದು
 ಕೇವಲ ರಾಜ್ಯೋತ್ಸವದ ಹೊತ್ತಿಗೆ 
 ಓಡುವರು ಕೊಳ್ಳಲು ಕನ್ನಡದ ಹೊತ್ತಿಗೆ
    
 ಸದಾ ಮನದಲ್ಲಿ
ಕರೆದರೆ ಕರೆಯಲಿ ಬಿಡಿ
 ಎಲ್ಲರೆದುರೆ ಮಮ್ಮ
 ಪುಳಕ ಜಾಸ್ತಿ ಒಂದು ಹಿಡಿ
 ಮಗು ಕರೆದರೆ ಅಮ್ಮ
  
 ಹೊರ ದೇಶದಲ್ಲಿ
 ಕನ್ನಡ ಕೇಳಿದೆನೆಂಬ ಅನುಮಾನ
 ತಿರುಗಿ ನೋಡಲೇಕೆ ಬಿಗುಮಾನ
 ಆದರಿದು ಸೂಪರ್ ಮಾರ್ಕೆಟ್ ಐಲು
 So what, ಕನ್ನಡವೇ ನಮ್ಮ ಐಲು
  
 ಕರುನಾಡಿನಲಿ ಕನ್ನಡವ
 ಬೆಳೆಸದವ ಅನಿವಾಸಿ
 ಇಂಗ್ಲೆಂಡಿನಲಿ ಕನ್ನಡವ 
 ಬೆಳೆಸಿದವ 'ಅನಿವಾಸಿ'
********************************* 
ಕನ್ನಡ ಈಸ್ ದ ಬೆಸ್ಟ್.... - ಮುರಳಿ ಹತ್ವಾರ್

 ಕನ್ನಡ ಇಸ್ ದ ಬೆಸ್ಟು ಲ್ಯಾಂಗ್ವೇಜು ಟು ಸ್ಪೀಕು 
 ಅನ್ನೊ ಇಂಗ್ಲಿಷಿನ ಪದಗಳ 'ಉ'(ಪ್)ಕಾರ ಸಾಕು 
 ಕೃಷ್ಣ-ತುಂಗೆ-ಕಾವೇರಿ ಪೊರೆದ ಪದಗಳ ಸಿರಿ ಬೇಕು  
 ಆ ಸವಿಗನ್ನಡದ ರುಚಿ ನಮ್ಮ ನಾಲಿಗೆಯಲರಳುತಿರಬೇಕು
 
-  ಮುರಳಿ ಹತ್ವಾರ್ 
 ೩೧.೧೦.೨೦೨೦
 (ಕೈಬರಹದಲ್ಲೂ ಒಂದು ಚುಟುಕವಿದೆ - ಸಂ.)  
***********************************
 
ಕನ್ನಡದ ರುಚಿ ಮತ್ತಿತರ ಚುಟುಕಗಳು - ಲಕ್ಷ್ಮೀನಾರಾಯಣ ಗುಡೂರ್ 
 ೧.
 ಬೆಳಗಾವಿಯ ಕುಂದಾದಲಿ, ಕಲಬುರಗಿಯ ಕರದಂಟಿನಲಿ
 ಮದ್ದೂರಿನ ವಡೆಯಲ್ಲಿ, ಉಡುಪಿಮಠದ ಹುಳಿಯಲ್ಲಿ
 ಕಾಣುವ ರುಚಿವೈವಿಧ್ಯವೇ ಕಾಣುವುದು ನನಗೆ
 ಹೋಗೂಣು-ಬರೂಣು; ಶರಣರೀ ಯಪ್ಪಾ;
 ಬತ್ತೈತೇ ಬಾರಲಾ ಮತ್ತು ಎಂತದು ಮಾರಾಯಗಳಲ್ಲೂ..!
  
 ೨.
 ಇಪ್ಪತ್ತೈದು ವರ್ಷ ಪಳಗಿದ ಐತಾಳರ-ಭಟ್ಟರ
 ಅಡುಗೆಗೆ ಬಾಯಿಚಪ್ಪರಿಸುವ ನನಗೆ,
 ಸಾವಿರಾರು ವರ್ಷ, ರನ್ನ, ಪಂಪ, ನಾರಣಪ್ಪ,
 ದಾಸರು, ಬಸವಣ್ಣ, ಕುವೆಂಪು, ಬೇಂದ್ರೆ, ಮಾಸ್ತಿ
 ಇತ್ಯಾದಿ ಭಾಷಾಭಟ್ಟರ ಕೈಯಲ್ಲಿ ಪಕ್ವವಾದ
 ಕನ್ನಡದ ಪಾಕಧಾರೆಯ ಸವಿ ಹೇಗಿರಬೇಡ!
  
 ೩.
 ಕನ್ನಡಸಾರಸ್ವತಲೋಕದ ಘಟಾನುಘಟಿಗಳು
 ಕನ್ನಡಕ್ಕಾಗಿ ತಮ್ಮ ಜೀವಮಾನವನ್ನೇ
 ತೇಯ್ದಿರುವಾಗ,
 ನನ್ನ ಸೇವೆ ನಲ-ನೀಲ-ಜಾಂಬವರೊಂದಿಗೆ ಸೇತುವೆಗೊಂದು ಪುಟ್ಟ ಕಲ್ಲು ಹಾಕಿದ
 ಅಳಿಲಿನಷ್ಟೆಂದರೂ ಅದು ......
 ಅಹಂಕಾರವೇ ಆದೀತು! 

೪.
ಅತ್ತ ಎಕ್ಕಡ, ಇತ್ತ ಎನ್ನಡ...
ನಡುವೆ ಎಲ್ಲಿದೆ ಕನ್ನಡ?
ತೆಲುಗು-ತಮಿಳು ಪಕ್ಕದಲ್ಲಿವೆ…
ನಮ ಹೃದಯಲ್ಲಿದೆ ಕನ್ನಡ! 
***********************************
 "ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" 
  
 ನವೆಂಬರ್ ಒಂದರಂದು ಶುಭಾಶಯಗಳ ಮಳೆಯೊಂದು ಹರಿಯುವುದಂತೆ, 
 ಹೌದೇ?
 ಕನ್ನಡನಾಡು-ನುಡಿಗಳ ಕೊಂಡಾಡುವ ಹೊಳೆಯಂತೆ, ನಿಜವೇ? 
 ಆದರೆ ಈ ಹೆಮ್ಮೆಯ ಸಂಭ್ರಮ ಕೇವಲ ನವೆಂಬರಿಗೆ ಏಕೆ ಸೀಮಿತ? 
 ದಿನವೂ ಆಚರಿಸಬಹುದಲ್ಲವೇ ನಮ್ಮ ಕನ್ನಡ ಹಬ್ಬ?
  
 'ಡೋರ್ ಕ್ಲೋಸ್ ಮಾಡು' ಅನ್ನುವ ಕನ್ನಡಕ್ಕಿಂತ 'ಬಾಗಿಲು ಹಾಕು' ಅನ್ನುವ 
 ಕನ್ನಡ ಚೆಂದ ಅಲ್ಲವೇ?
 'ಸ್ಕೂಲ್ ಗೆ ಹೋಗು' ಅನ್ನುವ ಕನ್ನಡಕ್ಕಿಂತ 'ಶಾಲೆಗೆ ಹೋಗು' ಅನ್ನುವ 
 ಕನ್ನಡ ಚೆಂದ ಅಲ್ಲವೇ?
 ಹೀಗೆ ಒಂದೊಂದು ಮಾತಿನಲ್ಲೂ ನಮ್ಮ ಭಾಷೆಯ ಸವಿಯನ್ನು 
 ಆನಂದಿಸಬಹುದಲ್ಲವೇ ?
 ಮುಂದಿನ ಪೀಳಿಗೆಗೆ ನಾವೇ ತಾನೇ ಈ ಅಮೂಲ್ಯ ಸಂಪತ್ತನ್ನು 
 ಒಪ್ಪಿಸಬೇಕು ?
  
 ಇಂಗ್ಲಿಷ್, ಇನ್ನಿತರ ಭಾಷೆಗಳಿಗೆ, ಅಣ್ಣತಮ್ಮಂದಿರ, ಅಕ್ಕತಂಗಿಯರ, 
 ಸ್ನೇಹಿತರ ಸ್ಥಾನ ಕೊಡಬಹುದಲ್ಲವೇ ?
 ಕನ್ನಡಕ್ಕೆ ಮಾತ್ರ ಉನ್ನತವಾದ ತಾಯಿಯ ಸ್ಥಾನವೊಂದೇ ಸರಿ ಅಲ್ಲವೇ?
  
 ಹೌದು!! ಹೌದು!! 
  
 ದಿನ ನಿತ್ಯವೂ ಪಾಲ್ಗೊಳ್ಳೋಣ, ಕನ್ನಡದ ಉತ್ಸವದಲ್ಲಿ. 
 ದಿನ ನಿತ್ಯವೂ ಆಚರಿಸೋಣ ಕನ್ನಡತನವನ್ನು. 
  
 ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
  
 - ಸುಮನ ಧ್ರುವ 

************************************************************************

6 thoughts on “ಜಯ ಕರ್ನಾಟಕ ಮಾತೆ – ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  1. ಗುಡೂರವರಿಗೆ ಎರಡೆ ದಿನದಲ್ಲಿ ಕೈಬರಹಗಳನ್ನು ಸಂಗ್ರಹಿಸಿ, ಸಂಯೋಜಿಸಿ, ಅಂದದ ವಿನ್ಯಾಸ ಮಾಡಿ ಪ್ರಕಟಿಸಿದ್ದಕ್ಕೆ, ಪದ್ಯಗಳನ್ನು ಬರೆದು ಕಳಿಸಿದ ಮತ್ತು ರಚಿಸಿದ ಎಲ್ಲ ಅನಿವಾಸಿ ಸದಸ್ಯರಿಗೆ ಅಭಿನಂದನೆಗಳು!

    Liked by 1 person

  2. ಗುಡೂರವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಎಷ್ಟು ಚಂದದ ಕಲ್ಪನೆ ಮತ್ತು ಕೈಬರಹಗಳು!

    ನಿಮ್ಮ ಕವನವನ್ನು ಓದುತ್ತ ಬಾಯೆಲ್ಲ ನೀರು!

    Like

  3. ಕನ್ನಡವೆಂದರೆ ಬರೀ ನವೆಂಬರ್ ನಲ್ಲಿ ನೆನಪಾಗುವ ಬಾಷೆಯಾಗದೆ ಮನಸ್ಸಿನ ಕನ್ನಡಿಯಾಗಿ
    ಹೃದಯಕ್ಕೆ ಕನ್ನ ಹೊಡೆವ ಚಕೋರಿಯಂತಿರಬೇಕು
    ಚೋರಿಯರ ಮನಕದಿಯುವ ‘ಕಣ್ಣ’ನಂತಿರಬೇಕು
    ಮನದಾಳದ ಭಾವನೆ ಕೆದಕುವಂತಿರಬೇಕು ನಮ್ಮ ಕನ್ನಡ ನುಡಿ
    ಜೈ ಕನ್ನಡಾಂಬೆ
    ರವಿ ಭಟ್

    Liked by 1 person

  4. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು….
    ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು …
    ಜೈ ಕರ್ನಾಟಕ!

    Like

Leave a comment

This site uses Akismet to reduce spam. Learn how your comment data is processed.