ಈ ವಾರದ ಪ್ರಸ್ತುತಿಯ ಬಗ್ಗೆ ಹೆಚ್ಚಿನದೇನೂ ಹೇಳಬೇಕಿಲ್ಲ. ಎರಡು ಕಂತುಗಳಲ್ಲಿ ಬರಲಿರುವ ಅಮಿತಾ ರವಿಕಿರಣ ಬರೆದಿರುವ ವರದಿ ಮತ್ತು ಪ್ರಸ್ತುತ ಪಡಿಸಲಾದ ಆರು ಕವಿಗಳ ಕವನಗಳು. ಮೊದಲ ಕಂತಿನಲ್ಲಿ ವರದಿ ಮತ್ತು 3 ಕವಿತೆಗಳಿವೆ. ಅಲ್ಲಲ್ಲಿ ಕವಿಗಳ ಟಿಪ್ಪಣಿಗಳಿವೆ. ಎಂದಿನಂತೆ ಓದಿ, ಅನ್ನಿಸಿದ್ದನ್ನು ಹಂಚಿಕೊಂಡು ಪ್ರೋತ್ಸಾಹಿಸುವಿರೆಂದು ತಿಳಿದಿರುವ – ಎಲ್ಲೆನ್ ಗೂಡೂರ್ (ಸಂ.)
ಈ ಹೊತ್ತಿಗೆ ಕಾವ್ಯೋತ್ಸವ -ಅನಿವಾಸಿ ಬಳಗದ ಕಾವ್ಯ ನವರಾತ್ರಿ

ಬುಧವಾರ ಶ್ರೀವತ್ಸ ದೇಸಾಯಿ ಅವರು “ಭಾನುವಾರ ನೀವು ಫ್ರೀ ಇದ್ದೀರಾ? ಒಂದು ಕಾರ್ಯಕ್ರಮವಿದೆ ‘ಈ ಹೊತ್ತಿಗೆ’ಯ ನವರಾತ್ರಿ ಕಾವ್ಯೋತ್ಸವ ಅಂತೆ” ಎಂಬ ಸಂದೇಶ ಕಳಿಸಿದರು . ಈ ಹೊತ್ತಿಗೆಯ ಹೆಸರು ಕೇಳುತ್ತಲೇ ನಾನು ಬೇರೇನೂ ಯೋಚಿಸದೆ ನಾನು ಬಿಡುವಾಗಿದ್ದೇನೆ, ಖಂಡಿತ ನನಗೆ ಭಾಗವಹಿಸುವ ಇಚ್ಛೆ ಇದೆ ಎಂದು ಹೇಳಿದೆ.
”ಈ ಹೊತ್ತಿಗೆ” ಎಂಬ ಗುಂಪಿನ ಕಾರ್ಯಕ್ರಮಗಳನ್ನು, ವರದಿಗಳನ್ನು, ಫೋಟೋಗಳನ್ನು, ಸಿಹಿಅಂಗಡಿಯ ಗಾಜಿನ ಒಳಗಿಟ್ಟ ಜಲೇಬಿಯನ್ನು ನೋಡಿ ಆಸೆಪಡುವ ಮಗುವಿನಂತೆ ನಾನೂ ನೋಡಿ ಖುಷಿ ಪಟ್ಟಿದ್ದೇನೆ; ಅಲ್ಲಿ ಚರ್ಚಿತವಾದ ಕೆಲ ಕತೆಗಳ ಪಿಡಿಎಫ್ ಪ್ರತಿಗಳನ್ನು ಕಾಡಿ ಬೇಡಿ ಪಡೆದು ಓದಿದ್ದೇನೆ. ”ಅದ್ದಿಟ್ಟು” ಎಂಬ ಕತೆಯಂತೂ ನನಗೆ ಬಹುದಿನಗಳ ಕಾಲ ಕಾಡಿದ ಈ ಹೊತ್ತಿಗೆಯಲ್ಲಿ ಚರ್ಚಿತವಾದ ಕಥೆ. ಅಷ್ಟೇ ಅಲ್ಲ, ಇದರ ರೂವಾರಿ ಜಯಲಕ್ಷ್ಮಿ ಪಾಟೀಲ್ ಅವರು ನನಗೆ ಗುರು, ಮಾರ್ಗದರ್ಶಕಿ, ನನ್ನನು ‘ಅಮು’ ಎಂದು ಕರೆಯುವ ಪ್ರೀತಿಯ ಅಕ್ಕ. ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿರುವುದು ನನಗೆ ಹಬ್ಬದ ಸಂಭ್ರಮವೇ!
ಅಷ್ಟು ಆರಾಧನಾಭಾವ ಮೂಡಿಸಿದ ಕಾರ್ಯಕ್ರಮವೊಂದರಲ್ಲಿ ನನ್ನ ಮನೆಯಿಂದಲೇ ಭಾಗವಹಿಸಬಹುದು ಎಂಬುದೇ ನನ್ನ ಉತ್ಸಾಹದ ಕಾರಣವಾಗಿತ್ತು. ನನಗೆ ೬ ಜನ ಕವಿಗಳ ಗುಂಪಿನಲ್ಲಿ ಗಾಯಕಿಯಾಗಿ ಆಯ್ಕೆ ಮಾಡಲಾಗಿತ್ತು, ಹಾಡಲಿಕ್ಕೆ ಪುಸ್ತಕದ ತುಂಬಾ ಭಾವಗೀತೆಗಳಿವೆ, ಯಾವುದಾದರೂ ನವರಾತ್ರಿಗೆ ಹೊಂದುವಂಥದ್ದು ಹುಡುಕಿ ಹಾಡಿದರಾಯಿತು ಎಂಬ ಉಡಾಫೆ ಆಲೋಚನೆಯಲ್ಲಿಯೇ ನಾನು ಗುರುವಾರ ಕಳೆದೆ. ಶುಕ್ರವಾರ ಬೆಳಿಗ್ಗೆ ಪ್ರಮೋದ್ ಅವರು ಭಾಗವಹಿಸಲಿರುವ ಕವಿಗಳು, ಆಯೋಜಕರು ಮತ್ತು ನಿರ್ವಾಹಕರ ಸಂವಹನ ಸುಲಭವಾಗಲು ವಾಟ್ಸಾಪ್ ಗುಂಪನ್ನು,ಮಾಡಿದರು. ಅಲ್ಲಿ ಕಾರ್ಯಕ್ರಮದ ರೂಪರೇಷೆ ನಿಯಮ, ಸಮಯಗಳನ್ನ ಈ ಹೊತ್ತಿಗೆಯ ಸಂಸ್ಥಾಪಕಿ ಜಯಲಕ್ಸ್ಮಿ ಪಾಟೀಲ್ ಅವರು ಅತಿ ಸ್ಪಷ್ಟವಾಗಿ ವಿವರಿಸಿದರು. ಆರು ಕವಿಗಳಲ್ಲಿ ಒಬ್ಬರು ”ಅತ್ಯಾಚಾರದ ವಿರುದ್ಧ ಈ ನವರಾತ್ರಿ” ಎಂಬ ವಿಷಯದ ಬಗ್ಗೆ ಕವನ ಬರೆಯಲಿ ಎಂಬ ಮಾತನ್ನೂ ಹೇಳಿದರು!
ಅದೇ ಸಂದರ್ಭದಲ್ಲಿ ಅವ್ರು ನನ್ನ ಜವಾಬ್ದಾರಿಯನ್ನೂ ಜಾಸ್ತಿ ಮಾಡಿದ್ದು. ಬರೀ ಭಾವಗೀತೆ ಹಾಡಿದರೆ ಆಗದು, ನಿಮ್ಮ ಅನಿವಾಸಿ ಗುಂಪಿನ ಕವಿಗಳು ಯಾರು ಕಾವ್ಯೋತ್ಸವದಲ್ಲಿ ಭಾಗವಹಿಸಿಲ್ಲವೋ ಅವರ ಕವಿತೆಯನ್ನ ಸಂಯೋಜಿಸಿ ಹಾಡಬೇಕು ಎಂದಾಗ ನೆನಪಾಗಿದ್ದು ಮದರ್ಸ್ ಡೇ ದಿನದಂದು ಕೇಶವ್ ಕುಲಕರ್ಣಿ ಅವರು ಬರೆದು ಕಳಿಸಿದ್ದ ಆನ್ ಟೈಲರ್ ಅವರ ಮೈ ಮದರ್ ಪದ್ಯದ ಭಾವಾನುವಾದ ”ಅವಳೇ ಅಮ್ಮ”. ನಾನು ಆಯ್ಕೆ ಮಾಡಿಕೊಂಡ ಮತ್ತೊಂದು ಹಾಡು ದಿನಕರ ದೇಸಾಯಿಯವರು ಬರೆದ ”ಸತ್ತರೂ ಬದುಕಿರಲಿ ಆತ್ಮವಿಶ್ವಾಸ” ಎಂಬ ಗೀತೆ. ಆ ನಂತರ ನನಗೆ ಗೊತ್ತಾದ ಇನ್ನೊಂದು ವಿಷಯ ನಾನು ಕವಿಗಳ ಪಟ್ಟಿಯಲ್ಲೂ ಇದ್ದೆ, ಗಾಯನದಲ್ಲಿ ಕೂಡ! ಪ್ರೇಮಲತಾ, ಜಿ ಎಸ್ ಶಿವಪ್ರಸಾದ್, ಮುರಳಿ ಹತ್ವಾರ್, ರಮ್ಯಾ ಭಾದ್ರಿ, ಎಲ್ಲೆನ್ ಗೂಡೂರ್ ಅವರಂಥ ಕವಿಪುಂಗವರ ಸತ್ವಯುತ ಕವಿತೆಗಳ ಎದಿರು ನನ್ನ ತರಗೆಲೆಗಿಂತಲೂ ಹಗುರಾದ ಕವನ ಓದಲು ನಾಚಿಗೆ ಅನಿಸಿ, ಶ್ರೀವತ್ಸ ಅವರಿಗೆ ಮತ್ತೆ ಕೇಳಿದೆ ‘ಕವಿಗಳು ಇನ್ನಾರಾದರೂ ಸಿಕ್ಕರೆ ದಯವಿಟ್ಟು ಕವಿಗಳ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದು ಬಿಡಿ’ ಅಂತ. ಸಮಯದ ಅಭಾವದಿಂದ ಈ ಬದಲಾವಣೆ ಸಾಧ್ಯವಾಗದೆ ನಾನು ಕವಯಿತ್ರಿಯಾಗಿಯೂ, ಗಾಯಕಿಯಾಗಿಯೂ ಡಬಲ್ ಆಕ್ಟಿಂಗ್ ಮಾಡಬೇಕಾಯ್ತು.
ಶುಕ್ರವಾರ ಸಂಜೆ ಪ್ರಾಯೋಗಿಕ ಕಾರ್ಯಕ್ರಮವನ್ನು ಎಲ್ಲರ ಸಹಮತಿಯೊಂದಿಗೆ ಯೋಜಿಸಲಾಯಿತು. ಆದರೆ ನವರಾತ್ರಿ ಕಾವ್ಯೋತ್ಸವದಲ್ಲಿ ಭಾಗವಹಿಸುವ ಎಲ್ಲ ತಂಡಗಳಲ್ಲಿ ಇಬ್ಬರು ಹಾಡುಗಾರಿದ್ದರು; ನಮ್ಮಲ್ಲಿ ನಾನೊಬ್ಬಳೇ. ಅದಕ್ಕಾಗಿ ಮತ್ತೆ ಹುಡುಕಾಟ ಶುರು ಆಯ್ತು. ಸುಮನಾ ಧ್ರುವ ಅವರು ಸಿಕ್ಕಿದ್ದು, ಮತ್ತು ಕಾರ್ಯಕ್ರಮದ ನಿಯಮದಂತೆ ಅನಿವಾಸಿ ಗುಂಪಿನ ಮತ್ತೊಬ್ಬ ಪ್ರತಿಭಾವಂತ ಕವಯತ್ರಿ ಸ್ಮಿತಾ ಕದಡಿ ಅವರ ಮಳೆ ಕವನಕ್ಕೆ ಸುಮನಾ ರಾಗ ಸಂಯೋಜನೆ ಮಾಡಿದ್ದು ಎಲ್ಲವು ಪೂರ್ವ ನಿಯೋಜಿತ ಎಂಬಂತೆ ನಡೆದು ಹೋಯಿತು. ಕಾರ್ಯಕ್ರಮಕ್ಕೆ ಸಿದ್ಧವಾಗಲು ನಮ್ಮೆಲ್ಲರಿಗಿಂತ ಕಡಿಮೆ ಸಮಯ ಸಿಕ್ಕಿದ್ದು ಸುಮನಾಗೆ. ಬರೀ ಒಂದು ಘಂಟೆಯ ಅವಧಿಯಲ್ಲಿ ಅವರು ನಮ್ಮ ಕರೆಗೆ ಓಗೊಟ್ಟು ರಿಹರ್ಸಲ್ಲಿಗೂ ಬಂದರು. ಶುಕ್ರವಾರದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ನಮಗೆ ಭಾನುವಾರ ಸಂಜೆಯ ತಯಾರಿಗಳ ಬಗ್ಗೆ ಹೇಳಲಾಯಿತು. ಮತ್ತೊಂದು ತಮಾಷೆ ಎಂದರೆ ಜಯಲಕ್ಷ್ಮಿ ಅವರು ”ನಿಮ್ಮ ಗುಂಪಿನಾಗ್ ಬರೀ ಐದ ಮಂದಿ ಕವಿಗಳು ಅದೀರಿ; ಆರನೆಯವರು ಎಲ್ಲ ಅದಾರು? ಯಾಕ್ ಬಂದಿಲ್ಲ?” ಅಂದಾಗ ನಾನೇ ಆ ಆರನೇ ಕವಯಿತ್ರಿ ಎಂದು ಮೆತ್ತಗೆ ಕೈ ಮೇಲೆತ್ತಿದೆ. ಅವರ ಕಣ್ಣಲ್ಲಿ ಇದ್ದ ಆಶ್ಚರ್ಯ, ”ನೀನು ಬರೀತಿs ಅಮು? ನಂಗ್ ಗೊತ್ತಿರಲಿಲ್ಲ!!!” ಅಂದಾಗ ನನ್ನಲ್ಲಿನ ಕವಯಿತ್ರಿ, ಆಟಂನಲ್ಲೇ (autumn) ಡಬಲ್ ಡುವೆ ಹೊದ್ದು ಮಲಗಿಬಿಟ್ಟಳು!
ಇನ್ನು ಭಾನುವಾರ ಮಧ್ಯಾಹ್ನ ೪ ಘಂಟೆಗೆ (UK ಸಮಯ) ಸರಿಯಾಗಿ ನಾವೆಲ್ಲಾ ಸ್ಟ್ರೀಮ್ ಯಾರ್ಡ್ ಕದ ತಟ್ಟಿ ಒಳಗೆ ಹೋಗಿ ಕುಳಿತೆವು. ‘ಈ ಹೊತ್ತಿಗೆ’ಯ ವತಿಯಿಂದ ಶ್ರುತಿ ಅವರು ನಮ್ಮನ್ನು ಸ್ವಾಗತಿಸಿದರು. ಅವರ ಸ್ಪಷ್ಟ ಮಾತು ಕೇಳಲು ನಿಜಕ್ಕೂ ಹಿತವಾಗಿತ್ತು. ನಂತರ ನಮ್ಮ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿದ್ದು ಶ್ರೀವತ್ಸ ದೇಸಾಯಿ ಅವರು. ಅನಿವಾಸಿ ಬಳಗದ ‘ಈ ಹೊತ್ತಿಗೆ’ಯ ನವರಾತ್ರಿ ಕಾವ್ಯೋತ್ಸವವನ್ನ ಪ್ರೇಮಲತ ಅವರು ತಮ್ಮ ಕವಿತೆಯಲ್ಲಿ ದುರ್ಗೆಯನ್ನು ಮತ್ತೆ ಹುಟ್ಟಿಬಾ ಎನ್ನುತ್ತಾ ಆರಂಭಿಸಿದರು. ನಂತರ ನಾನು ಕೇಳಿಸಿಕೊಂಡ ಪ್ರತಿ ಕವಿತೆಯೂ ಅದೆಷ್ಟು ಸುಂದರವಾಗಿ, ವಿಭಿನ್ನ ಶೈಲಿಯೊಂದಿಗೆ ಮನಮೋಹಕವಾಗಿ ಮೂಡಿ ಬಂದವು.
ಸುಮನಾ ಹಾಡಿದ ”ಮಳೆ ಮಳೆ” ಯಮನ್ ರಾಗದಲ್ಲಿ ಹಿತವಾಗಿ ಮೊದಲ ಮಳೆಯ ತುಂತುರು ಮತ್ತು ಮಣ್ಣಿನ ಘಮದಂತೆ ನೆನಪಲ್ಲಿ ಉಳಿಯಿತು. ಎರಡನೇ ಸುತ್ತಿನ ಕವನ ವಾಚನದ ನಂತರ ಹಾಡಿದ ರಾಷ್ಟ್ರಕವಿ ಜಿ ಎಸ್ ಎಸ್ ಅವರ ”ಸ್ತ್ರೀ ಎಂದರೆ ಅಷ್ಟೇ ಸಾಕೆ?” ಸುಪ್ರಸಿದ್ಧ ಕವನದ ಗಾಯನ ಮಾಧುರ್ಯ, ತನ್ಮಯತೆಯಿಂದ ಕೂಡಿತ್ತು. ಕಾರ್ಯಕ್ರಮ ಮುಗಿದ ನಂತರ ಕೇಶವ್ ಕುಲಕರ್ಣಿ ಅವರ ಪದ್ಯದ ಸಾಹಿತ್ಯ ಬೇಕು ಎಂದು ಹಲವರು ನನ್ನಲ್ಲಿ ಕೇಳಿದರು. ಹೀಗೊಂದು ಎಲ್ಲೂ ತಡೆಯಿಲ್ಲದ, ಸಮಯಬದ್ಧ ಯಶಸ್ವೀ ಕಾರ್ಯಕ್ರಮ ನಡೆಸಿಕೊಟ್ಟ ಅನಿವಾಸಿ, ‘ಈ ಹೊತ್ತಿಗೆ’ಯಲ್ಲೇ ಶಿಸ್ತಿನ ತಂಡ ಎಂದು ಹೆಸರಾಗಿದೆ ಎಂದು ಜಯಲಕ್ಷ್ಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೇಳಿ ಮನಸ್ಸು ಖುಷಿಯಿಂದ ಅರಳಿತು.
‘ಈ ಹೊತ್ತಿಗೆ’ಯ ಕುರಿತು
‘ಈ ಹೊತ್ತಿಗೆ’ ಶುರುವಾಗಿದ್ದು ಹೇಗೆ? ಇದು ಯಾರ ಆಲೋಚನೆ? ಇದರ ಬೆಳವಣಿಗೆ ಕುರಿತು ದಯವಿಟ್ಟು ತಿಳಿಸಿ ಎನ್ನುವ ನನ್ನ ಪ್ರಶ್ನೆಗೆ ಜಯಲಕ್ಷ್ಮಿ ಅವರ ಉತ್ತರ ಇಂತಿದೆ.
ಜೆಪಿ: ನಾ ಮುಂಬೈನಾಗ್ ಇದ್ದಾಗ ‘ಮನೆ ಮನೆ ಸಾಹಿತ್ಯ’ ಅನ್ನೋ ಕಾರ್ಯಕ್ರಮ ಆಗ್ತಿತ್ತು, ಭಾಳ ಚಂದದ ಕಾರ್ಯಕ್ರಮ ಅದು. ಬೆಂಗಳೂರಿಗೆ ಶಿಫ್ಟ್ ಆದ ನಂತರ ಅಂಥದ್ದೊಂದು ಕಾರ್ಯಕ್ರಮ ಮಾಡಬೇಕು ಅನ್ನೋ ಆಶಾ ಇತ್ತು. ಹಂಗ ಕೆಲವು ಸಮಮನಸ್ಕ ಸ್ನೇಹಿತರ ಜೋಡಿ ಕೂಡಿ ಪುಸ್ತಕ ಓದಿ ಅದರ ಬಗ್ಗೆ ಚರ್ಚೆ ಮಾಡೋ ಒಂದು ಗುಂಪು ಮಾಡಿದೆ. ಮುಂಬೈನ ಕಾರ್ಯಕ್ರಮದ ರೂಪುರೇಷೆ ಬೇರೇದಿತ್ತು, ಇದು ಬೇರೆನೇ! ಸಾಮ್ಯತೆ ಅಂದ್ರೆ ಸಭಾಂಗಣ ಮತ್ತೊಂದು ಅನ್ನದೇನೇ ಒಂದು ಜಾಗದಲ್ಲಿ ಸಾಹಿತ್ಯಾಸಕ್ತರ, ಸಾಹಿತಿಗಳ ಅನೌಪಚಾರಿಕ ಭೇಟಿ ಮಾತ್ರ. ‘ಈ ಹೊತ್ತಿಗೆ’ ಶುರು ಆಗಿದ್ದು ಒಂದು ಫೇಸ್ಬುಕ್ ಪೋಸ್ಟಿನಿಂದ. ಇದರ ಉದ್ದೇಶ ಇದ್ದಿದ್ದು ಹೊಸ ಪುಸ್ತಕ ಓದೋದು, ಓದಿಸೋದು; ಸಾಮಾನ್ಯ ಓದುಗರಾಗಿ ಅದರ ಬಗ್ಗೆ ಚರ್ಚೆ ನಡೆಸುವುದು. ಇಲ್ಲಿ ಯಾರೂ ವಿಮರ್ಶಕರಲ್ಲ, ಎಲ್ಲ ಸಾಮಾನ್ಯ ಓದುಗರು. ಈವರೆಗೆ ೭೫ ಪುಸ್ತಕಗಳನ್ನು ಓದಿ ನಾವು ಚರ್ಚಿಸಿದ್ದೇವೆ. ‘ಈ ಹೊತ್ತಿಗೆ’ಯು ವಾರ್ಷಿಕೋತ್ಸವದ ನಿಮಿತ್ತ ‘ಹೊನಲು’ ಎಂಬ ಕಾರ್ಯಕ್ರಮ ಆಯೋಜಿಸಿ ವಿಮರ್ಶಾಕಮ್ಮಟ, ಲೇಖಕರ ಜೊತೆ ಓದುಗರ ಚರ್ಚೆ, ಕಥಾಕಮ್ಮಟ, ವಚನಕಮ್ಮಟ ಮತ್ತು ಕಳೆದೆರಡು ವರ್ಷಗಳಿಂದ ಕಥಾ ಸ್ಪರ್ಧೆಗಳನ್ನೂ ಆಯೋಜಿಸುತ್ತಾ ಬಂದಿದೆ.
‘ಈ ಹೊತ್ತಿಗೆ’ ಎಂಬುದು ಆಸಕ್ತರಿಂದ ಬೆಳೆದುಬಂದದ್ದು, ಇದು ಯಾವುದೇ ಅನುದಾನ, ಸರಕಾರೀ ಸೌಲಭ್ಯಗಳ ಹಂಗಿಲ್ಲದೆ ತನ್ನ ಸತ್ವ-ಶಕ್ತಿಗಳಿಂದಲೇ ಮನೆಮಾತಾಗಿದ್ದು, ಸಾಹಿತ್ಯಾಸಕ್ತರ ಪ್ರೀತಿ ಗಳಿಸಿದ್ದು.
ಮೊದಲು ೧೫ ದಿನಕ್ಕೊಮ್ಮೆ ಒಂದು ಪುಸ್ತಕ ಓದ್ತಾ ಇದ್ವಿ,ನಾವು ಮೊದಲು ಓದಿ ಚರ್ಚೆ ಮಾಡಿದ ಪುಸ್ತಕ ಕೆವಿ ಅಯ್ಯರ್ ಅವರ ‘ರೂಪದರ್ಶಿ’. ಆಮೇಲೆ ಪ್ರತಿ ತಿಂಗಳಿಗೊಂದು ಪುಸ್ತಕ ಓದುವ ನಿಯಮವಾಯ್ತು. ೧೦ ಜನರಿಂದ ಶುರು ಆದ ‘ಈ ಹೊತ್ತಿಗೆ’ ಇವತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ ಎಂಬ ಹೆಮ್ಮೆ ನನಗೆ. ಬರುವ ಫೆಬ್ರವರಿ (೨೦೨೧) ೧೦ನೇ ತಾರೀಖಿಗೆ ‘ಈ ಹೊತ್ತಿಗೆ’ಗೆ ೮ ವರ್ಷ ತುಂಬುತ್ತದೆ. ‘ಈ ಹೊತ್ತಿಗೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ https://ehottige.wordpress.com/about/
– ಅಮಿತಾ ರವಿಕಿರಣ್
ಕವಿತೆಗಳು
ಮತ್ತೆ ಹುಟ್ಟಲಿ ದುರ್ಗೆ .. - ಡಾ. ಪ್ರೇಮಲತ ಬಿ. ಮಹಿಷನ ಪೂಜಿಸಿದರೇನಂತೆ ತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲ ಬ್ರಹ್ಮನಿಂದ ವರಪಡೆದರೇನಂತೆ ಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲ ಹುಣ್ಣಿಮೆಯೋ ಮಹಾಲಯವೋ ಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ, ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲ ಕೊನೆಗೆ ಮಹಿಳೆಯೋರ್ವಳ ರೋಷಕ್ಕೆ ಪುರುಷನೊಬ್ಬನ ಅಹಂಕಾರಕ್ಕೆ ಅಲಂಕಾರಿಕ ಅಂತ್ಯ… ತ್ರಿಶೂಲ ಹೊಕ್ಕಿತ್ತು ಕರುಳು ಚೆಲ್ಲಿತ್ತು ಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆ ಮಹಿಷಾಸುರನ ಪ್ರಾಣ ಹಾರಿತ್ತು.... ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ? ಬಣ್ಣ,ವೇಷ, ವಾಸನೆಗಳ ಈ ಜಗ? ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆ ಮತ್ತೆ ಮತ್ತೆ ನಗ್ನವಾಗುತ್ತಲೇ ಇದೆ ಪುರುಷನೊಳಗಿನ ಮೃಗ ಮರಳಿ ಬಾ ದುರ್ಗಾಮಾತೆ … ರಕ್ತ ಬೀಜಾಸುರರಿವರು ಅಬಲೆಯರ ಹುಡುಕುವರು ಹೇಡಿಗಳಂತೆ ಹೊಂಚುವರು, ಒಬ್ಬಳ ಮೇಲೆ ಹಲವು ಹತ್ತು ಜನರು ಕಾಮಾಂಧರಾಗಿ ಎರಗಿ ಭೋಗಿಸಿ ಸಾಯಿಸಿ, ಅಡಗುತ್ತ ತೇಕುವರು ಕಾಲ ಇಂದಿಗೂ ಬದಲಾಗಿಲ್ಲ... ಉಧ್ಬವಿಸಲಿ ಸಾವಿರದಿ ಕಾಳಿಯರು, ದುರ್ಗೆಯರು,ಶುಭಾಂಕರಿಯರು ರಕ್ಕಸರ ಠಕ್ಕತೆಗೆ ಆಗಿ ಉತ್ತರ ಮೀರಿ ಜಗದೆತ್ತರ ಮಾಟದ ಮೈಯ ಕೋಮಲಾಂಗಿಯರು ಹಣೆತುಂಬ ರಕ್ತ ಕಾರಿ ಬಿರು ಬಿರುಸಿನ ಕೇಶ ಕೆದರಿ ಸಾವಿರ ಮಹಿಷರ ಮರ್ದನಕ್ಕೆ ನಾಂದಿ ಹಾಡಿ ಕತ್ತಲೆಗೆ-ಬೆಳಕಿನ ದಾರಿ ತೋರಿ ದುರ್ಗೆಯಾಗಲಿ ಇಂದಿನ ಮಹಿಳೆ -------------------------- ಡಾ.ಪ್ರೇಮಲತ ಬಿ. (ಮಹಿಷಾಸುರ ಮಹಿಷ ದೇವರನ್ನು ಪೂಜಿಸುತ್ತಿದ್ದ ಅಸುರ. ಆತನಿಗೆ ಕೋಣನ (ಮಹಿಷ) ತಲೆಯಿತ್ತು ಎನ್ನಲಾಗಿದೆ. ಬ್ರಹ್ಮನಿಂದ ವರವನ್ನು ಪಡೆದಿದ್ದವನು) ಯಮುನೆ ಮತ್ತು ಗಂಗೆ – ಡಾ. ಜಿ ಎಸ್ ಶಿವಪ್ರಸಾದ್ ಚಲುವೆ ಯಮುನೆ ನಡೆದಳು ಉಲ್ಲಾಸದಿ ಮನೆಗೆ ಗಂಗಾ ನದಿಯ ಬದಿಯಲ್ಲಿ ಹಾಡನು ಗುನುಗುತ ಮನದಲ್ಲಿ ಬೈಕಿನಲಿ ಬಂದಿಳಿದರು ನಾಲ್ಕಾರು ರಾವಣರು ಯಮುನೆಯ ಎಳೆದೊಯ್ದರು ಪಕ್ಕಕ್ಕೆ ತೀರದ ಕಾಮ ದಾಹಕ್ಕೆ ಸಂಜೆ ಬಾನಿನ ತುಂಬಾ ಕೆಂಪು ಕಲೆ ಅಳುವ ಅಸಹಾಯಕ ಅಬಲೆ ಅವಸರದಲಿ ಸಂಭವಿಸಿದ ಸೂರ್ಯಾಸ್ತ ಕೋಗಿಲೆಯ ಸ್ವರವು ಇಂದೇಕೊ ಅಸ್ತವ್ಯಸ್ಥ ಕತ್ತಲಲಿ ಕರಗಿದವು ರಾವಣರ ಕರಾಳ ಛಾಯೆಗಳು ಮೌನದಲ್ಲೊಂದು ಮೆಲ್ಲ ನಿಟ್ಟುಸಿರು ಆಗಾಗ್ಗೆ ಊಳಿಡುವ ನಾಯಿಗಳು ಕರಗಿದ ಕಾಡಿಗೆಯೊಂದಿಗೆ ಹರಿದ ಕಪ್ಪು ಕಣ್ಣೀರು! ಬಾಡಿದ ಮುಖ, ತಗ್ಗಿಸಿದ ತಲೆ ಯಮುನೆಗೆ ಇನ್ನಿಲ್ಲ ನೆಮ್ಮದಿಯ ನೆಲೆ ಮೆಲ್ಲಗೆ ಹೆಜ್ಜೆ ಇಟ್ಟಳು ಅವಳು ಹರಿವ ಗಂಗೆಯ ಕಡೆಗೆ, ಕಣ್ಣು ಮುಚ್ಚಿ ದೃಢ ನಿರ್ಧಾರದಲಿ ಧುಮುಕಿದಳು ತಾಯಿಯ ಮಡಿಲಗೆ ತಾಯಿ ಗಂಗೆಯ ಕಥೆಯೂ ಹೀಗೆ ಮೂಲದಲಿ ನಿರ್ಮಲ ಅವತಾರ ಹರಿದ್ವಾರದಲ್ಲಿ ಪ್ರಶಾಂತ ಸಾಕಾರ ತಾಯಿಗೆ ಆರತಿ, ದೀಪಗಳ ಅಲಂಕಾರ ಬೀಗುತ ಮೊರೆಯುತ ಹರಿದಳು ಪಾವನೆ ಕಡಲನು ಸೇರುವ ತವಕದಲಿ ಕೊಳಚೆ ನೀರಿನ ಅಭಿಷೇಕದಲಿ ಬೆಂದ ಶವಗಳ ನೈವೇದ್ಯದಲಿ ಲೋಕದ ನಾನಾ ಪಾಪವ ತೊಳೆದು ತಾನೇ ಕಲ್ಮಷಗೊಂಡಳು ಗಂಗೆಯು ಇಂದು ನಿಲ್ಲಲಿ ಹೆಣ್ಣಿನ ಅತ್ಯಾಚಾರ ಮೂಡಲಿ ಸದ್ಭಾವನೆ ಸದ್ವಿಚಾರ - ಜಿ ಎಸ್ ಶಿವಪ್ರಸಾದ್ ಟಿಪ್ಪಣಿ: ಯಮುನೆ ಮತ್ತು ಗಂಗೆ ಎಂಬ ಈ ಕವನದಲ್ಲಿ ಯಮುನೆ ಎಂಬ ಯುವತಿ ಅತ್ಯಾಚಾರಕ್ಕೆ ಒಳಗಾಗುವ ಕಥೆ ಇದೆ. ಅತ್ಯಾಚಾರದ ಸನ್ನಿವೇಶವನ್ನು ಮತ್ತು ಅದು ಒಡ್ಡುವ ಮಾನಸಿಕ ಹಿಂಸೆಯನ್ನು ಕವನದಲ್ಲಿ ತರುವ ಪ್ರಯತ್ನವಿದೆ. ಈ ರೀತಿಯ ವಿಷಯವನ್ನು ಕವನದಲ್ಲಿ ಸೂಕ್ಷ್ಮವಾಗಿ ತರಲು ರೂಪಕಗಳನ್ನು ಬಳಸಲಾಗಿದೆ. ಇಲ್ಲಿ ಬರುವ 'ಸಂಜೆ ಬಾನಿನ ತುಂಬಾ ಕೆಂಪು ಕಲೆ' ಯಮುನೆಯ ಮನಸ್ಥಿತಿಯನ್ನು ಮತ್ತು ಇದಕ್ಕೆ ಸಾಕ್ಷಿಯಾಗಿ ನಿಂತ ನಿಸರ್ಗದ ನಿಲುವನ್ನು ಬಣ್ಣಿಸುತ್ತದೆ. ಅವಸರದಲಿ ಸಂಭವಿಸಿದ ಸೂರ್ಯಾಸ್ತ ಎನ್ನುವ ಸಾಲಿನಲ್ಲಿ ಸಾಮಾನ್ಯವಾಗಿ ಸೂರ್ಯಾಸ್ಥದ ಕೊನೆಭಾಗ ಅವಸರದಲ್ಲಿ ಸಂಭವಿಸುವಂತೆ ತೋರುವುದು ಸಾಮಾನ್ಯ, ಇಲ್ಲಿ ಜರುಗಿದ ಹೇಯ ಕೃತ್ಯವನ್ನು ಸಹಿಸಲಾರದ ಸೂರ್ಯ ತಾನು ಅವಸರದಲ್ಲಿ ನಿರ್ಗಮಿಸಿದ ಎಂಬುದು ಕವಿಯ ವರ್ಣನೆ. ಯಮುನೆಯ ದುಃಖಕ್ಕೆ ನಿಸರ್ಗವು ಸ್ಪಂದಿಸಿ ಕೋಗಿಲೆಯ ಸ್ವರವು ಅಸ್ತವ್ಯಸ್ಥಗೊಳ್ಳುತ್ತದೆ. ಯಮುನೆ ಹಚ್ಚಿದ ಕಾಡಿಗೆಯು ಕಣ್ಣೀರಲ್ಲಿ ಕರಗಿ 'ಕಪ್ಪು ಕಣ್ಣೀರು' ಹರಿಯುವುದು ಇಲ್ಲಿಯ ಕರಾಳ ಕೃತ್ಯಕ್ಕೆ ಪ್ರತೀಕವಾಗುತ್ತದೆ. ಯಮುನೆ ಇಲ್ಲಿ ಅಸಹಾಯಕ ಅಬಲೆ, ಅವಮಾನವನ್ನು ಮತ್ತು ಮುಂದಿನ ಪರಿಸ್ಥಿತಿಯನ್ನು ಎದುರಿಸಲಾಗದೆ ಆತ್ಮಹತ್ಯೆಗೆ ತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಿ ನ್ಯಾಯ ದೊರಕಿಸಿಕೊಳ್ಳುವ ಪ್ರಸಂಗಗಳು ಇರಬಹುದು; ಆದರೆ ಇನ್ನೂ ಕೆಲವು ಸೂಕ್ಷಮತಿಯ ಹೆಣ್ಣುಮಕ್ಕಳು ಪರಿಸ್ಥಿತಿಯನ್ನು ಎದುರಿಸಲಾರದೆ ಆತ್ಮಹತ್ಯೆಗೆ ತೊಡಗಿಕೊಳ್ಳಬಹುದು. ಯಮುನೆಯು ಹಾರಿಕೊಳ್ಳುವ ನದಿ ಗಂಗಾನದಿ! ಗಂಗೆಯ ಕಥೆಯೂ ಒಂದು ರೀತಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಪ್ರತಿನಿಧಿಸುತ್ತದೆ. ಕಲ್ಮಷಗೊಳ್ಳುವ ಗಂಗೆಯ ಕಥೆ ಅತ್ಯಾಚಾರದ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ. ಒಂದು ಉಲ್ಲಾಸದಲ್ಲಿ ಶುರುವಾಗುವ ಯಮುನೆಯ ಪ್ರಸಂಗ ಮತ್ತು ಹರಿದ್ವಾರದಲ್ಲಿ ಪೂಜೆಗೆ ಅರ್ಹಳಾದ ನಿರ್ಮಲ ಗಂಗೆಯು ಕೊನೆಗೆ ದಾರುಣ ಪರಿಸ್ಥಿತಿ ತಲುಪುವುದರಲ್ಲಿ ಒಂದು ವ್ಯಥೆ ಇದೆ. ಲೋಕದ ಪಾಪವನ್ನು ತೊಳೆದು ತಾನೇ ಕಲ್ಮಷಗೊಳ್ಳುವ ಪ್ರಸಂಗದಲ್ಲೂ ಒಂದು ವೈದೃಶ್ಯವಿದೆ. ಅಂದಹಾಗೆ ಯಮುನಾ ನದಿ ಸೇರುವುದು ಗಂಗೆಯಲ್ಲಿ ಮತ್ತು ಈ ಕವಿತೆಯಲ್ಲಿ ಯುವತಿ ಯಮುನೆ ಗಂಗಾನದಿಯಲ್ಲಿ ಸೇರಿಕೊಳ್ಳುವ ಹೋಲಿಕೆಯನ್ನು ಗಮನಿಸಬಹುದು. ಈ ಕಾರಣಕ್ಕಾಗಿ ಈ ಕವಿತೆಯನ್ನು ಯಮುನೆ ಮತ್ತು ಗಂಗೆ ಎಂದು ಕರೆಯಲಾಗಿದೆ.
ಅದಿತಿ – ಡಾ. ಮುರಲಿ ಹತ್ವಾರ್ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ: ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ. ಒಂದಿಷ್ಟೂ ಬಿಸಿಯಾಗಲಿಲ್ಲ ಅದು ಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನ ಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದ ಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ. ಬೇರು ಕಿತ್ತು, ಕೈ-ಕಾಲು ಕೊಯ್ದು, ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ, ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮ ಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ. ಆಕೆ "ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು, 'ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ" ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೇಳದಷ್ಟು. ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ" ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ. ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ. ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ. ಕತ್ತಿಯಲಿ ಕೊಚ್ಚಿದ - ನೋವು ಹುಟ್ಟಬಹುದೆಂದು. ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ: ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ; ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದ ಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ. ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ, ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ; ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡ ಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ: ಉಧೋ! ಉಧೋ! ಎನ್ನುತೆದ್ದವು ನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತು ಕುದಿಯುತಲಿ - ಕುಣಿಕುಣಿದು ಕಂಪಿಸಿ. ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಎಲ್ಲವೂ ಛಿದ್ರ, ಛಿದ್ರ, ಛಿದ್ರ; ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ. ಆ ತುಂಬು ಗರ್ಭದ ಮೌನದ ಬಸಿರೊಡೆದು ಹೊಸ ಬೆಳಕೊಂದು ಹುಟ್ಟಿ ಮತ್ತೆ ಅದಿತಿಯಾಯಿತು - ಮುರಲಿ ಹತ್ವಾರ್ ************************************************************** ಟಿಪ್ಪಣಿ: ಕವಿತೆ ಒಂದು ಚಿತ್ರವಿದ್ದಂತೆ. ಲೋಕಾರ್ಪಣೆಯಾದಮೇಲೆ ಅರ್ಥೈಸುವ, ವಿಮರ್ಶಿಸುವ ಅಥವಾ ಅನುಭವಿಸುವ ಎಲ್ಲಾ ಹಕ್ಕು ಓದುಗರದ್ದು. ಬರೆದ ಕವಿ ಮತ್ತು ಬರೆಸಿಕೊಂಡ ಕವಿತೆ ಇಬ್ಬರೂ ಆ ಓದುಗರ ಅಧೀನ. ಹಾಗಿರುವಾಗ, ಕವಿತೆಯನ್ನು ವಿಮರ್ಶಿಸುವುದು ಹುಂಬತನವಾದೀತು. ಆದರೆ, ಈ ಕವಿತೆ ನನ್ನೊಳಗೆ ಬೆಳೆದ ರೀತಿ ಮತ್ತು ಅದಕ್ಕೆ ನೀರೆರದ ಕೆಲವು ಘಟನೆಗಳನ್ನ ಹಂಚಿಕೊಳ್ಳಬೇಕೆನಿಸುತ್ತಿದೆ. ವೃತ್ತಿಯಲ್ಲಿ ವೈದ್ಯನಾದ್ದರಿಂದ ಪ್ರತಿನಿತ್ಯ ಆರೋಗ್ಯ ಸಮಸ್ಯೆಯಿರುವವರ ಭೇಟಿ ಸಾಮಾನ್ಯ. ಆ ರೋಗಿಗಳು ಅವರ ದೈಹಿಕ ಸಮಸ್ಯೆಗಳ ಜೊತೆಗೆ ಆಗಾಗ ಅವರನ್ನು ಕಾಡುವ ಕೆಲವು ವಿಚಾರಗಳನ್ನು ಹೇಳಿಕೊಳ್ಳುವದೂ ಅಪರೂಪವಲ್ಲ. ಹಾಗೆ ಹೊರಬಂದ ಕಥೆಗಳಲ್ಲಿ ಕೆಲವೊಂದು ಮನಸ್ಸಿನ ಆಳಕ್ಕಿಳಿದು ಕೊರೆಯುತ್ತವೆ. ಅಂತಹುದರಲ್ಲಿ ಒಂದು ಒಬ್ಬ ಇರಾಕಿನವ ಹೇಳಿಕೊಂಡ ಅವನ ಮತ್ತು ಅವನ ಮನೆಯವರ ಮೇಲೆ ನಡೆದ ಘೋರ ಅತ್ಯಾಚಾರ. ಇನ್ನೊಂದು ಆಫ್ರಿಕಾ ಮೂಲದ ಮಹಿಳೆಯೊಬ್ಬಳ ಕಥೆ. ಮಧ್ಯವಯಸ್ಕಳಾದ ಆಕೆಯ ಮನೆಯಲ್ಲಿ ಇದ್ದದ್ದು ಮೂರು ಜನ: ಆಕೆ, ಆಕೆಯ ೧೦-೧೧ರ ಮಗಳು, ಮತ್ತು ಆಕೆಯ ಹೊಸ ಪಾರ್ಟ್ನರ್. ಆ ಪಾರ್ಟ್ನರನನ್ನು ಈಕೆ ತನ್ನ ಮಗಳ ತಂದೆಯಂತೆ ಎಂದು ನಂಬಿದ್ದಳು. ಆದರೆ ಆತನ ವಿಚಾರ ಬೇರೆಯದೇ ಆಗಿತ್ತು.... ಈ ಎರಡೂ ಕಥೆಗಳನ್ನು ಕೇಳಿದ ದಿನ ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ಅವರು ಹೋದ ನಂತರ ರೂಮಿನಲ್ಲಿ ಉಳಿದ ಕುರ್ಚಿಗಳಿಗೂ ನನಗೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆ ಕಾಡಲು ಶುರು ಮಾಡಿತು. ಅದು ಹೊರಗೆ ಬರಲು ಒಂದು ದಾರಿ ಹುಡುಕುತಿತ್ತು. ಹೋದ ವಾರ, ಈ-ಹೊತ್ತಿಗೆಯವರ ಕಾವ್ಯ ವಾಚನ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಪಾಟೀಲರು ಅತ್ಯಾಚಾರದ ವಿರುದ್ಧ ಹೋರಾಟದ, ದುರ್ಗೆಯರ ಗೆಲುವಿನ ಬಗ್ಗೆ ಕವನ ಬರೆದರೆ ಚೆನ್ನ ಎಂದದ್ದು, ಮೇಲೆ ಹೇಳಿದ ಕಾಡುವ ವಿಚಾರಗಳು ಹೊರ ಬರಲು ಒಂದು ದಾರಿ ಹುಡಿಕಿ ಕೊಟ್ಟಿತು. ಶೋಷಣೆ ಎನ್ನುವದು ಸರ್ವ ವ್ಯಾಪಿ. ಹಾಗೆಯೇ ಅದನ್ನು ಮಾಡುವ ಬಹುರೂಪಿಗಳೂ ಗೊತ್ತಾಗದಷ್ಟು ನಯವಾಗಿ ಎಲ್ಲೆಲ್ಲೂ ಬೆರೆತಿದ್ದಾರೆ ಎನ್ನುವ ನನ್ನ ನಂಬಿಕೆ ಪಾಟೀಲರ ಮಾತುಗಳಲ್ಲಿ ಹೊಸ ಅರ್ಥ ಹುಡುಕಿಸಿತು. ಆಗ ಅನಿಸಿದ್ದು, ದುರ್ಗೆ ಎಂದರೆ ಶಕ್ತಿ ಅರ್ಥಾತ್ ಸ್ತ್ರೀ ಶಕ್ತಿ. ಇದು ಪಾಸಿಟಿವ್ ಮತ್ತು ಆಕ್ಟಿವ್ ಫೋರ್ಸ್. ಇದರ ವಿರುದ್ಧದ ಪುರುಷ ಶಕ್ತಿ ಪ್ಯಾಸಿವ್ ಮತ್ತು ಸಪ್ಪ್ರೆಸ್ಸಿವ್ ಎನಿಸಿತು. ಇವೆರಡೂ ಶಕ್ತಿಗಳು ದೈಹಿಕವಾದ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಇರಬಹುದು. ಈ ಶಕ್ತಿಗಳ ಸಂಘರ್ಷದಲ್ಲಿ ಇದುವರೆಗೆ ಪುರುಷ ಶಕ್ತಿ ಬಲ ಸಾಧಿಸಿದೆ. ಅದು ಸೋಲಬೇಕಾದರೆ ಒಂದು ರೆವೊಲ್ಯೂಷನ್ ಬೇಕು. ಅದರಲ್ಲಿ ಪುರುಷ ಶಕ್ತಿ ಯಾವುದೊ ಬ್ಲಾಕ್-ಹೋಲ್ ಒಳಗೆ ಮತ್ತೆ ಬರದಂತೆ ಸೇರಿ, ಹೊಸದಾಗಿ ಹುಟ್ಟುವ 'ಬಿಗ್ ಬ್ಯಾಂಗ್' ಶಕ್ತಿ ಅನಂತವಾದ, ಎಲ್ಲೆಯಿಲ್ಲದ, ಅ-ದಿತಿಯಾಗಿ ಹೊಮ್ಮಲಿ ಎನ್ನುವ ಆಶಯ ಹಲವು ದೈವೀ ರೂಪಕಗಳೊಂದಿಗೆ, ಪುರುಷಶಕ್ತಿ ಸ್ತ್ರೀಶಕ್ತಿಯಾಗಿ ಬದಲಾಗುವದನ್ನ ಮತ್ತು ಒಂದು ಕ್ರಾಂತಿಯ ಹೊಸ ಹುಟ್ಟನ್ನ ಬಿಂಬಿಸುವ ಕವಿತೆಯಾಯಿತು. ಆ ಅದಿತಿಯನ್ನೇ ಪುರಾಣಗಳಲ್ಲಿ ಶಕ್ತಿರೂಪಿಯಾಗಿ ತೋರಿಸಿದ್ದಲ್ಲವೇ ಎನ್ನುವ ಆಲೋಚನೆ ನನ್ನ ಕವನಕ್ಕೆ ಬಲ ಕೊಟ್ಟಿತು. ಹಾಗೆಯೇ, ಬಯೋಲಾಜಿಕಲ್ ಸೆಕ್ಸ್ ಮತ್ತು ಜೆಂಡರ್ ಐಡೆಂಟಿಟಿ ಎರಡೂ ಒಂದೇ ಅಲ್ಲ ಎಂದು ನಾನು ಒಪ್ಪುವ ಇತ್ತೀಚಿನ ವಾದವೂ ಸಹ ಸಾಥ್ ಕೊಟ್ಟಿತು. ಒಂದು ರೀತಿಯಲ್ಲಿ ಈ ವಾದ ತುಂಬಾ ಹಳೆಯದೇ ಎಂದು ಅರ್ಧ-ನಾರೀಶ್ವರ ಮತ್ತು ಮೋಹಿನಿಯಿರು ಕುಣಿ-ಕುಣಿದು ನೆನಪಿಸಿದರು. ಈ ಕವನದಲ್ಲಿ ಬರುವ ಮಾರಮ್ಮ, ದುರ್ಗಮ್ಮ, ಅಣ್ಣಮ್ಮ ಇವರೆಲ್ಲ ಒಂದೋ ಊರ ದೇವರುಗಳು ಅಥವಾ ಸಮಾಜದ ಕೆಳಸ್ತರದ ಜನರೆಂದು ಬಿಂಬಿಸುವವರ ದೇವರುಗಳು. ಹಾಗೆಯೇ ರಕ್ತೇಶ್ವರಿ ದಕ್ಷಿಣ ಕನ್ನಡದ ಒಂದು ದೈವ. ಕುರ್ಚಿ ಮತ್ತು ಅದಿತಿ ಎರಡು ಮಾತ್ರ ಈ ಕವಿತೆ ಬರೆಯಲು ಶುರು ಮಾಡಿದಾಗ ನನ್ನ ತಲೆಯಲ್ಲಿ ಗಟ್ಟಿಯಾಗಿ ಇದ್ದದ್ದು. ಎಲ್ಲಾ ಅಮ್ಮಂದಿರೂ ಅವರವರೇ ಬಂದು ಕುಳಿತುಕೊಂಡು ಸಾಲುಗಳನ್ನು ಬೆಳೆಸಿ, ಅ-ದಿತಿಯವರೆಗೆ ತಂದು ಬಿಟ್ಟದ್ದು.
Beautiful program 🙏😊
LikeLike
Enjoyed reading this interesting report. Thank you ,
LikeLike