ಜುಂ…………..ಯ್! – ಮುರಳಿ ಹತ್ವಾರ್ ಮತ್ತು ಲಕ್ಷ್ಮೀನಾರಾಯಣ ಗೂಡೂರ್

ಈ ವಾರಕ್ಕೆ ಜುಂ.. .. .. .. ಯ್! ಅಂತ ಬರುತ್ತಿವೆ ಎರಡು ಹಗುರ-ಹೃದಯದ (ಲೈಟ್-ಹಾರ್ಟೆಡ್) ಕವನಗಳು. ಮುರಳಿ ಹತ್ವಾರ್ ತಮ್ಮ ಸೈಕಲ್ಲಿನ ಸವಾರಿ ಮಾಡಿದರೆ, ನಾನು ನನ್ನ ಮಿತ್ರ ಅನಿಲನೊಂದಿಗೆ ಪೂನಾದಲ್ಲಿ ಅವನ ಲೂನಾದ ಮೇಲೆ ತಿರುಗಿದ್ದರ ನೆನಪನ್ನು ಹಂಚಿಕೊಂಡಿರುವೆ. ಓದಿ, ಸವಾರಿಯ ಮಜಾ ತೊಗೊಳ್ಳಿ – ಎಲ್ಲೆನ್ ಗೂಡೂರ್ (ಸಂ.)

ಸೈಕಲ್ ಸವಾರಿ 
 
ಕಂಬ, ಕಂಬ, ಕಂಬ 
ಹಿಂದಿಕ್ಕಿ ಮತ್ತೊಂದು ಕಂಬ
ಮುಂದೋಡುವದೇ ಸವಾರಿ
ಮಣ್ಣು, ಕಲ್ಲು, ಟಾರು
ಯಾವುದಿದ್ದರೂ ದಾರಿ 
 
ಅಯ್ಯೋ! ಅಪ್ ಬಂತು ಅಪ್
ಉಸ್... ಉಸ್...
ಅಂಡನೆತ್ತಿ ಕಾಲ್ಗಳೊತ್ತಿ, ಒತ್ತಿ
ಹೊಯ್ಯ...ಹೊಯ್ಯ...!
 
ರೊಯ್yyyyyyyyyyyy...!
ಇಳಿಜಾರಿನಲಿ ಇಳಿ; ಜಾರಿ ನಲಿ.
ಹಿಂದೋ? ಮುಂದೋ?
ಮೇಲೋ? ಕೆಳಗೋ?
ತಿರುಗುವ ಚಕ್ರ ಮಾಯೆಯ ಸೋಗೋ?
 
ಸ್ಥಿರ, ಸ್ತಬ್ದ, ಒಮ್ಮನದ ಏಕಾಂತದಲಿ ಲೀನ:
ಹ್ಯಾಂಡಲ್, ಪೆಡಲ್, ಮತ್ತು ನಾನು.
 
- ಮುರಳಿ ಹತ್ವಾರ್
೩೧/೦೭/೨೦೨೦
ವ್ಯಂಗ್ಯ ಚಿತ್ರ: ಲಕ್ಷ್ಮೀನಾರಾಯಣ ಗೂಡೂರ್
ಲೂನಾಗಾಥೆ 
 
ಗೆಳೆಯನೊಬ್ಬನಿರುವ ನನಗೆ ಅನಿಲನವನ ಹೆಸರು
ಓಡುತ್ತಿತ್ತು ಅವನ ಲೂನಾ ಹಿಡಿದು ಹಿಡಿದು ಉಸಿರು
 
ಹಿಂದೆ ಉಂಟು ಮುಂದೆ ಇಲ್ಲ ಅದರ ಲೈಟು ಬೆಳಕು
ಕಾಲನಿಟ್ಟೆ ಹಾಕಬೇಕು ಕೈಯಲಿಲ್ಲ ಬ್ರೇಕು
 
ಓಡುವಾಗ ವಾಯುವೇಗ ನಿಲ್ಲಿಸೋದೆ ಕಷ್ಟ
ಓಡುವುದೋ ನಿಲ್ಲುವುದೋ ಅದರದೇ ಇಷ್ಟ
 
ಮಾಡಬೇಕು ಅದನು ಸ್ಟಾರ್ಟು ತಳ್ಳಿ, ಹಾರಿ ಕೂತು
ಕೂತದ್ದಷ್ಟೇ, ಸುಖವೇನಿಲ್ಲ ಸೀಟು ತುಂಬಾ ತೂತು!
 
ಸುಗಮ ರಸ್ತೆಯಲ್ಲಿ ಹಾರೋ ಗಾಳಿಯಂತೆ ಕಾಣಿ
ಬಂತೋ ಬಂಪು, ಚುಚ್ಚುವವು ಬುಡಕೆ ಸೀಟಿನಾಣಿ!
 
ಒನ್ ವೇ ಇರಲಿ, ಕೆಂಪೇ ಬರಲಿ ನುಗ್ಗಿದ್ದೊಂದೇ ವರಸೆ
ತಿಂಗಳಲ್ಲಿ ಎರಡು ಬಾರಿ ಠಾಣೆಗಳಿಗೆ ವಲಸೆ
 
ಮಳೆಯೇ ಬರಲಿ ಚಳಿಯೇ ಇರಲಿ ಲೂನಾ ನಮ್ಮ ಹಾಥಿ
ವರುಷ ವರುಷ ಕಷ್ಟ ಸುಖದಿ ಅದುವೇ ನಿಜದ ಸಾಥಿ
 
ಲೂನಾ ಹೋಗಿ ಕಾರು ಬಂದ್ರೂ ಮೊದಲ ಗಾಡಿಯ ಒನಪು
ಹರೆಯ, ಗೆಳೆಯ, ಮತ್ತವನ ಲೂನಾ ಮರೆಯದಂಥ ನೆನಪು!
 
- ಲಕ್ಷ್ಮೀನಾರಾಯಣ ಗೂಡೂರ್  
ಪ್ರೆಸ್ಟನ್, ೧೫.೧೦.೨೦೨೦

7 thoughts on “ಜುಂ…………..ಯ್! – ಮುರಳಿ ಹತ್ವಾರ್ ಮತ್ತು ಲಕ್ಷ್ಮೀನಾರಾಯಣ ಗೂಡೂರ್

 1. ಸೈಕಲ್ ಮತ್ತು ಲೂನಾ ಸವಾರಿಯ ಒಂದೇ ವಸ್ತುವಿನ ಮೇಲೆ ಬರೆದ ಇಬ್ಬರು ಕವಿಗಳ ಕವನಗಳು ಮುದ ನೀಡುವುದಲ್ಲದೇ ಮನಸ್ಸನ್ನು ಬಾಲ್ಯಕ್ಕೂ ಮೆದುಳನ್ನು ಜಿಜ್ಞಾಸೆಗೂ ಕರೆದೊಯ್ದವು.

  ಸೈಕಲ್ ಕವನ ಸೈಕಲ್ ಸವಾರಿಯ ಮುಕ್ತ ಶೈಲಿಯಲ್ಲಿ ಮತ್ತು ಲೂನಾ ಸವಾರಿಯನ್ನು ರೈಮ್ ಮತ್ತು ರಿದಮ್ಮಿನಲ್ಲಿ ಸುಂದರವಾಗಿ ಮೂಡಿಬಂದಿವೆ.

  ಕವನಗಳಿಗೆ ಪೂರಕವಾಗಿ ಗುಡೂರ್ ಅವರ ಚಿತ್ರಗಳೂ ಸಕತ್ತಾಗಿವೆ.

  – ಕೇಶವ

  Like

 2. ಅನಿವಾಸಿಯಲ್ಲಿನ ಈ ಎರಡೂ ಕವನಗಳು ತುಂಬ ಚೆಂದ.ಮುರಳಿ ಹತ್ವಾರ್ ಅವರ ಸೈಕಲ್ ಸವಾರಿ ಪೂರ್ತಿ ಜೀವನ ದರ್ಶನ ವನ್ನೇ ಮಾಡಿಸುತ್ತದೆ ಅಂದ್ರೆ ಅದು ಅತಿಶಯೋಕ್ತಿಯಲ್ಲ.ಜೀವನದ ಒಂದು ಮಜಲಿನಿಂದ ಇನ್ನೊಂದು ಮಜಲಿಗೆ ಸಾಗುತ್ತಾ, ದಾರಿಯಲ್ಲಿ ಸಿಗುವ ಏರಿಳಿತಗಳಲ್ಲಿ ಹತ್ತಿ ಇಳಿದು ಕಾಲಚಕ್ರದ ಗತಿಗುಂಟ ಸಾಗುವುದೇ ಈ ಜೀವನ ಅಲ್ವಾ? ಅದೇ ಚಕ್ರದ ಗತಿ, ಅದನ್ನು ಸಾವರಿಸಿಕೊಳ್ಳಲು ಅದೇ ಪ್ರಯತ್ನ ಮನದ ಹ್ಯಾಂಡಲ್, ಚಕ್ರದ ಪೆಡಲ್ ಸಾಗುವ ದಾರಿಯ ಅವಗಾಹನೆ ಒಂದೇ ಲಕ್ಷ್ಯ! ಸರಳ ಪದಗಳಲ್ಲಿ ಜೀವನ ಸತ್ಯ! ತುಂಬ ಸುಂದರ!
  ಈ ಗೂಢತೆಯ ಗುಂಗಿನಲ್ಲಿರುವ ಜೀವಕ್ಕೆ ಒಂದು ಹಗೂರ ಎಳೆ ನಗು ಮೂಡಿತು ಗುಡೂರ್ ಅವರ ಕವನ ಓದಿದಾಗ ನನ್ನ ಲೂನಾ ಸವಾರಿ ನೆನಪಿಸಿ.ಮನ ಹಾರಿ ಲೂನಾ ಸವಾರಿ ಮಾಡಿ ಯೇ ಬಿಟ್ತು.ಮಜಾ ಬಂತು!
  ಇಬ್ಬರೂ ಕವಿಗಳಿಗೆ ಅಭಿನಂದನೆಗಳು.
  ಸರೋಜಿನಿ ಪಡಸಲಗಿ

  Like

 3. Kamba made me think about life journey. We come across so many Kambas.
  Some times we are able to avoid or go around Kambas at other times we bump right into it.
  Life teaches lesson. Last paragraph attain peace,calm is brilliant end.
  Luna riding made me remember my Efforts to learn riding it. It was a carefree young life.
  I was fed up of waiting for BTS bus in Bangalore.
  Prasa and Hasya rasa are enjoyable.

  Like

 4. ಮುರಳಿ ಮತ್ತು ಎಲ್ಲೆನ್ ಅವರ ಕವಿತೆ ಬಹಳ ಲವಲವಿಕೆಯಿಂದ ಕೂಡಿದೆ. ಸೈಕಲ್ ಕಲಿಯುವುದು ನಮೆಲ್ಲರ ಪಾಲಿಗೆ ಬದುಕಿನಲ್ಲಿ ದಾಟಬೇಕಾಗಿರುವ ಒಂದು ಮುಖ್ಯ ಮೈಲಿಗಲ್ಲು. ಕಲಿತಾಗ ಬರುವ ಉತ್ಸಾಹ ಆ ಘಳಿಗೆಗೆ ಅಪಾರವಾದದ್ದು. ಅಂಬೆಗಾಲು ಇಡುತ್ತಿದ್ದ ಕೂಸು ಎದ್ದು ನಿಂತು ನಡೆಯಲಾರಂಭಿಸಿದಾಗ ತರುವಂತ ಖುಷಿ ಅದು. ಎಲ್ಲೆನ್ ಅವರ ಲೂನಾಗಾಥೆ ಸರಳ, ಸ್ಪಷ್ಟ ಮತ್ತು ಪ್ರಾಸಬದ್ಧವಾಗಿದೆ. ಇತ್ತೀಚಿಗೆ ಓದಿದ ಲಘುಕವಿತೆಗಳಲ್ಲಿ ನನ್ನ ನೆನಪಿನಲ್ಲಿ ಉಳಿಯುವಂತದ್ದು.

  Liked by 1 person

 5. ಜುಮ್,,,, ಎಂದು ಅನಿವಾಸಿಯಿಂದ ಹೊರಟು ಬಂದಿವೆ ಇಂದು ಕವಿತೆಗಳು.

  ಕಂಬ, ಕಂಬ ಎಂದು ಎಚ್ಚರಿಕೆ ಕೊಟ್ಟರೂ ತಪ್ಪದೇ ಹೋಗಿ ಕಂಬಕ್ಕೆ ಗುದ್ದುತ್ತಿದ್ದ ನನ್ನ ಸೈಕಲ್ ಕಲಿಕೆಯ ದಿನಗಳು ನೆನಪಿಗೆ ಬಂತು 😃.

  ಸೀಟಿಲ್ಲದ ಲೂನಾ ಸವಾರಿ ಹರೆಯ, ಗೆಳೆಯ ಮತ್ತದರ ಮತ್ತನ್ನು ನೆನಪಿಸಿತು. ಗುಡೂರ್ ಅವರ ಚಿತ್ರಗಳ ಬಗ್ಗೆ ಏನು ಹೇಳಿದರೂ ಕಡಿಮೆಯೇ.

  ದಾಕ್ಷಾಯಿನಿ

  Like

 6. ಇಂದಿನ ಎರಡೂ ಕವನಗಳು ನಾನು ಶಾಲೆಯಲ್ಲಿ ಓದಿ ಆನಂದಿಸಿದ Henry Charles Beeching ಬರೆದ Going Down Hill on a Bicycle – A Boy’s song-ಅನ್ನು -ನೆನಪಿಗೆ ತಂದವು. ಮುರಳಿಯವರಂತೆ ಕತ್ತರಿ ಹೊಡೆದೋ ಸೀಟಿನಮೇಲೆ ಕುಳಿತೋ, ಎತ್ತಿಯೋ ತಿಣುಕಿ ಎತ್ತರದ ‘ಶಿಖರ’ದಿಂದ ‘ಹಾರುತ್ತ’ ಕೆಳಗೆ ಬರುವ ಆನಂದವನ್ನು ಅನುಭವಿಸಿದವರಿಗೇ ಗೊತ್ತು. ಬ್ರೇಕ್ ಇಲ್ಲದ ಲೂನಾ ಸವಾರಿ ಮಾಡುವಾಗ ಗೂಡು ಬಿಟ್ಟ ‘ಎಲ್ಲೆನ್’ ಅವರು ಚಂದ್ರನ ಮೇಲಿದ್ದಂತೆ ಗುರುತ್ವಾಕರ್ಷಣೆ ಮೀರಿ ಹಾರಿ ಹರಕು ಸೀಟಿನ ಮೇಲೆ ಕುಪ್ಪಳಿಸುವ ದೃಶ್ಯ ನೆನೆದು ಮುಗುಳ್ನಕ್ಕವರೇ ಎಲ್ಲ! ಅವರ ವ್ಯಂಗ ಚಿತ್ರಗಳು ಎಂದಿನಂತೆ ನೂರಾರು ಡಿಟೇಲ್ಸ್ ಹೊತ್ತು ಲಂಡನ್ನಿನ ಮುರಳಿ, ಪುಣೆಯ ಗಾಳಿ ಕಣ್ಣಿಗೆ ತರುತ್ತವೆ. ಇವುಗಳಡಿಯಲ್ಲಿಯ ದರ್ಶನವನ್ನೂ ಗಮನಿಸಬೇಕು. ‘ಒಮ್ಮನದ ಏಕಾಂತದಲಿ ಲೀನ /ಹ್ಯಾಂಡಲ್ ಪೆಡಲ್ ಮತ್ತು ನಾನು’ ಸಾಲುಗಳಲ್ಲಿ ಮತ್ತು ಬೀಚಿಂಗ್ ನ ಪದ್ಯದ ಕೊನೆಯ ಸಾಲುಗಳಲ್ಲಿಯ ನಿತ್ಯ ಸತ್ಯದ ಸಾಮ್ಯತೆ ಸರಳ ಮಕ್ಕಳ ಕವಿತೆಗಳಲ್ಲೂ ಕವಿ ಕೊಡುವ ಸಂದೇಶಕ್ಕೆ ಬೆರಗಾಗುತ್ತೇವೆ.

  My feet to the treadles fall…
  …who climbs with toil,
  wheresoe’er
  Shall find wings waiting there.
  (Henry Charles Beeching)
  ಶ್ರೀವತ್ಸ ದೇಸಾಯಿ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.