ಬಾಲ್ಯದ ನೆನಪುಗಳು – ಅಮಿತಾ ರವಿಕಿರಣ ಮತ್ತು ವತ್ಸಲಾ ರಾಮಮೂರ್ತಿ

ಎರಡು ವಾರಗಳ ಹಿಂದೆ ಪ್ರಾರಂಭವಾದ ‘ಬಾಲ್ಯದ ನೆನಪುಗಳು’ ಸರಣಿಯ ಎರಡನೇ ಕಂತು ಇಂದು ಬರುತ್ತಿದೆ. ಅಮಿತಾ ರವಿಕಿರಣ್ ಅವರು ತಮ್ಮ ನನಸಾಗದೇ ಉಳಿದ ಕನಸಿನ ಬಗ್ಗೆ ಬರೆದರೆ, ವತ್ಸಲಾ ರಾಮಮೂರ್ತಿಯವರ ತಮ್ಮ ಹಳೆಯ ಸಿಹಿ-ಕಹಿ ನೆನಪುಗಳ ಮೆಲುಕು ಹಾಕುತ್ತಿದ್ದಾರೆ. ಓದಿ, ಅನಿಸಿಕೆಗಳನ್ನ ಹಂಚಿಕೊಳ್ಳಿ. ನಿಮ್ಮಲ್ಲೂ ಇದ್ದರೆ, ನೆನಪುಗಳ ಬುತ್ತಿಯನ್ನು ಹಂಚಿಕೊಳ್ಳಿ – ಎಲ್ಲೆನ್ ಗುಡೂರ್ (ಸಂ.)

ಹಾಗೊಂದು ಈಡೇರದ ಕನಸನ್ನು ನೆನೆಸುತ್ತಅಮಿತಾ ರವಿಕಿರಣ

ಆ ದೇವರು ವರ ಕೊಡುತ್ತೇನೆ ಎಂದು ಬಂದು ಮತ್ತೆ ಬಾಲ್ಯಕ್ಕೆ ಮರಳುವ ಅವಕಾಶ ಕೊಟ್ಟರೆ ಬೇಡ ಎಂದು ಹೇಳುವವರು ಈ ಜಗದಲ್ಲಿ ಇರಲಿಕ್ಕಿಲ್ಲ, ಬಾಲ್ಯ ಎಂಬುದೇ ಹಾಗೆ ಅದು ನೆನಪಿನ ಕಣಜ, ಬತ್ತದ ಓಯಸಿಸ್ – ಅಂಥ  ಬಾಲ್ಯದ ನೆನಪುಗಳನ್ನು ಮೆಲುಕುವುದು ನನ್ನ ಅತ್ಯಂತ  ಖುಷಿಯ ಕೆಲಸಗಳಲ್ಲಿ ಒಂದು.  ಬಾಲ್ಯದಲ್ಲಿ ಸಾವಿರ ಕನಸುಗಳಿರುತ್ತವೆ ವರುಷಗಳು ಕಳೆದಂತೆ ಅವುಗಳಲ್ಲಿ ಎಲ್ಲವನ್ನು ಅಲ್ಲದಿದ್ದರೂ ಬಹಳಷ್ಟನ್ನು ನಾವು ಸಾಕಾರ ಗೊಳಿಸುತ್ತೇವೆ; ಅಂತೆಯೇ ನಾನೂ ಕಂಡ ಹಲವಾರು ಕನಸುಗಳು ನನಸಾಗಿವೆ, ಆದರೆ ಮನಷ್ಯನ ಸಹಜ ಸ್ವಭಾವ ಎಂಬಂತೆ ಲಭ್ಯವಾದ ಖುಷಿಗಿಂತ, ಆಗದೆ ಉಳಿದು ಹೋದ ಚಿಕ್ಕ ವಿಷಯಗಳ ಬಗ್ಗೆ ನಾವು ಮರುಗುವುದು ಹೆಚ್ಚು.

ಅಂಥದ್ದೇ ಒಂದು ಈಡೇರದ ವಿಲಕ್ಷಣ ಬಾಲ್ಯ ಕಾಲದ ಆಸೆಯ ಬಗ್ಗೆ ಇಂದು ಬರೆಯುವ ಉಮೇದಿ ನನ್ನದು. ತಮಾಷೆಯಾಗಿ ತೆಗೆದುಕೊಳ್ಳುವಿರೆಂಬ ನಂಬಿಕೆಯಲ್ಲಿ ಬರೆಯುತ್ತಿರುವೆ.

ನನ್ನೂರು ಮುಂಡಗೋಡ, ಈ ಊರು ಒಂದು ಮಿನಿ ಭಾರತದಂತೆ; ಊರಿನ ಅಕ್ಕ ಪಕ್ಕ ಹಲವು ಬುಡಕಟ್ಟುಗಳು ತಮ್ಮ ನೆಲೆ ಕಂಡುಕೊಂಡಿವೆ – ನಿರಾಶ್ರಿತರಾಗಿ ಬಂದು ನಮ್ಮ ಊರನ್ನು ಪುಟ್ಟ ಟಿಬೆಟ್ಟಿನಂತೆ ಪರಿವರ್ತಿಸಿರುವ ಟಿಬೆಟನ್ನರು, ಮಲೆಯಾಳಿ ಜನರು, ಒಂದಷ್ಟು ತೆಲುಗಿನವರು, ಬೇಕರಿ ಉದ್ಯಮಕ್ಕೆ ಬಂದ ತಮಿಳಿಗರು, ಮತ್ತೊಂದೆಡೆ ಗೌಳಿಗರ ದೊಡ್ಡಿ, ಹಾಗೆ ಸ್ವಲ್ಪ ಮುಂದೆ ನೋಡಿದರೆ ಸಿದ್ದಿ ಪಂಗಡ. ಇಷ್ಟು ವಿಭಿನ್ನ ಜನ, ಭಾಷೆ, ಆಚರಣೆಗಳ ಮಧ್ಯ ಬೆಳೆದ ಯಾವುದೇ ಮಗುವಿಗೆ ಸಿಗಬಹುದಾದ ಅನನ್ಯ ಅನುಭವಗಳು ನನಗೂ ದೊರೆತಿವೆ.  ಜನರನ್ನು ಇತರಿಗಿಂತ ಬೇಗನೆ ಅರ್ಥ ಮಾಡಿಕೊಳ್ಳುವ ಕಲೆ ನನಗೆ ನಮ್ಮ ಊರಿನ ಗಾಳಿಯೇ ಕಲಿಸಿದೆ.

ನನ್ನ ಪ್ರಾಥಮಿಕ ಶಾಲೆಗೆ ಚಂದದೊಂದು ಹೆಸರಿದ್ದರೂ ಎರಡು ಬುಡುಕಟ್ಟು ಸಮುದಾಯಗಳ ನಡುವೆ ಆ ಶಾಲೆ ಇದ್ದಿದ್ದರಿಂದ ಅದನ್ನು ತಾಂಡೆ ಶಾಲೆ ಅಂತಲೇ ಕರೆಯುತ್ತಿದ್ದರು.  ಪ್ರತೀ ತರಗತಿಯಲ್ಲೂ ಟಿಬೆಟನ್ನರನ್ನು ಬಿಟ್ಟು ಬೇರೆಲ್ಲ ರೀತಿಯ ಭಾಷೆ ಮಾತಾಡುವ ಮಕ್ಕಳು ಇದ್ದರು.  ಹೆಚ್ಚಿನ ವಿದ್ಯಾರ್ಥಿಗಳಿಗೆ ಶಾಲೆಯ ಸ್ವಚ್ಛತೆ, ಸೌಜನ್ಯದ ಬಗ್ಗೆ ಗಂಧಗಾಳಿಯೂ ಇರಲಿಲ್ಲ. ತಮಗಿಂತ ಹಿರಿಯರಿಗೆ ಗೌರವ ಕೊಡುವುದು, ಬಹುವಚನದಲ್ಲಿ ಮಾತಾಡುವುದು ಇತ್ಯಾದಿ ಅಭ್ಯಾಸವಾಗಲಿ, ಆಜ್ಞೆಗಳನ್ನು ಪಾಲಿಸುವ ವಿಧೇಯತೆಯಾಗಲಿ ಅಲ್ಲಿ ಕಾಣಸಿಗುವುದು ಅಪರೂಪವೇ ಆಗಿತ್ತು.

ಘಟ್ಟದ ಕೆಳಗಿನ ಶಿಕ್ಷಕರು ನಮ್ಮ ಶಾಲೆಗೆ ಬಂದರೆ ಹೊಂದಿಕೊಳ್ಳಲು ಬಹುಸಮಯ ಬೇಕಾಗುತ್ತಿತ್ತು.  ಅಪ್ಪಿ ತಪ್ಪಿ ಟೀಚರ್ ಮಕ್ಕಳಿಗೆ ಬೈದೋ, ಕೈತಪ್ಪಿ ಹೊಡೆದರೋ ಅಂದುಕೊಳ್ಳಿ, ಆ ಮಕ್ಕಳ  ಅಪ್ಪ ಅಮ್ಮ ಶಾಲೆಗೆ ಬಂದು ದೊಡ್ಡ ದನಿಯಲ್ಲಿ ಒಪ್ಪತ್ತು ಜಗಳ ಮಾಡುತ್ತಿದ್ದರು.  ಅಂಥ ದಿನ ಯಾವುದೇ ಪಾಠಗಳು ಆಗುವ ಸಂಭವ ತೀರಾ ಕಡಿಮೆ.  ನಾನಂತೂ ಇಂಥ ದಿನಗಳನ್ನೇ ಎದುರು ನೋಡುತ್ತಿದ್ದೆ, ಯಾಕೆಂದರೆ ದೊಡ್ಡ ದನಿಯಲ್ಲಿ ಮಾತಾಡುವುದೇ ನಮ್ಮ ಮನೆಯಲ್ಲಿ ನಿಷಿದ್ಧ; ಇನ್ನು ಜಗಳ, ಎದುರು ಮಾತಾಡುವುದು ಅಂತೂ ಕೇಳಲೇ ಬೇಡಿ, ಬೈಗುಳಗಳನ್ನ ಕೇಳಿದರೂ ಸ್ನಾನ ಮಾಡಿ ಬರಬೇಕು ಎನ್ನುವಂಥಹ ಮಡಿವಂತಿಕೆ ಇತ್ತು.  ಕತ್ತೆ, ಮಂಗಾ, ಹೆಚ್ಚು ಹೆಚ್ಚೆಂದರೆ ನಾಯಿ ಎನ್ನುವಲ್ಲಿಗೆ ನಮ್ಮ ಬೈಗಳ ಸಂಗ್ರಹ ಖಾಲಿಯಾಗುತ್ತಿತ್ತು, ಆದರೆ ನನ್ನ ಸಹಪಾಠಿಗಳಿಗೆ, ಅವರ ಅಪ್ಪ ಅಮ್ಮನಿಗೆ ಅದೆಷ್ಟು ರೀತಿಯ ಬೈಗುಳಗಳು ಬರುತ್ತಿದ್ದವು!! ನಾನಂತೂ ಅವರ ಫ್ಯಾನ್ ಆಗಿಬಿಟ್ಟಿದ್ದೆ. 

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗೂಡೂರ್

ಆ ವಯಸ್ಸಿನಲ್ಲಿ ಅವರು ಉದುರಿಸುವ ಯಾವ ಬೈಗುಳದ ಅರ್ಥವೂ ಗೊತ್ತಿರಲಿಲ್ಲ, ಆದರೆ ಹಾಗೆ ಬಯ್ಯುತ್ತ ಜಗಳಾಡುವುದು ಧೈರ್ಯದ ಸಂಕೇತ, ಹಾಗೆ ಮಾಡಿದರೆ ಎದುರಿನವರು ಸುಮ್ಮನಾಗುತ್ತಾರೆ ಎಂಬುದಷ್ಟೇ ನನ್ನ ಅರಿವಿಗೆ ನಿಲುಕಿದ ವಿಷಯವಾಗಿತ್ತು. ಅದೊಂಥರಾ ಮನೋರಂಜನೆಯ ವಿಷಯವೂ ಆಗಿತ್ತು.

ನಮಗೆ ಸಂವಿಧಾನ ಕಾನೂನು, ಪೋಲಿಸು ಎಂಬ ವ್ಯವಸ್ಥೆ ಇದ್ದರೂ, ಬುಡಕಟ್ಟಿನವರಿಗೆ ಅವರದೇ ಆದ ಒಂದು ನ್ಯಾಯಿಕ ವ್ಯವಸ್ಥೆ ಇದೆ.  ವಾರಕ್ಕೊಮ್ಮೆಯೋ ಹುಣ್ಣಿಮೆ ಅಮಾವಾಸ್ಯೆಗೋ ಒಂದು ಜಗಳ, ಒಂದು ಪಂಚಾಯಿತಿ ಇದ್ದೇ ಇರುತ್ತಿತ್ತು.  ಅದನ್ನು ನೋಡಲು ನಾನು ಓಡೋಡಿ ಹೋಗಿ ನಿಲ್ಲುತ್ತಿದ್ದೆ.  ಅದೊಂಥರಾ ಮಾಯಾಲೋಕ ಅನಿಸುತ್ತಿತ್ತು.  ಕೆಲವೊಮ್ಮೆ ವಾದಿ-ಪ್ರತಿವಾದಿಗಳು ಸೇರಿ ಪಂಚರ ತಲೆ ಒಡೆದದ್ದೂ ಇದೆ, ಅದರ ಮಧ್ಯ ಪೊಲೀಸರು ಬಂದಾಗ ಅವರೆಲ್ಲರೂ ಒಟ್ಟಾಗಿ ಅವರನ್ನು ಎದುರಿಸಿ, ಹೆದರಿಸಿದ್ದೂ ಇದೆ.  ಇಂಥ ಮನೋರಂಜಕ ಜಗಳ ನೋಡಿ ಖುಷಿಯಲ್ಲಿ ನಾನು ಕುಣಿಯುತ್ತ ಮನೆಗೆ ಮರಳಿದರೆ, ಅಜ್ಜಿಯೋ ಅಮ್ಮನೋ ಮಂಗಳಾರತಿ ಎತ್ತಿ, ಪ್ರಸಾದ ಕೊಟ್ಟೇ ಮನೆಯೊಳಗೇ ಬಿಡುತ್ತಿದ್ದರು.  ಅಮ್ಮ ಅಂತೂ ಇಂಥ ಜಾಗೆಯಲ್ಲಿ ಮನೆ ಕಟ್ಟಿದ್ದಕ್ಕೂ, ನನ್ನನ್ನು ಕನ್ನಡ ಪ್ರೀತಿಯ ನೆಪದಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಹಾಕಿದ್ದಕ್ಕೂ ಪಪ್ಪ,ಅಜ್ಜ ಅಷ್ಟೇ ಅಲ್ಲ, ಅವರ ಅಜ್ಜನ ಮೇಲೂ ತನ್ನ  ಸಿಟ್ಟನ್ನು ಪಾತ್ರೆ ಕುಟ್ಟುತ್ತ ವ್ಯಕ್ತ ಮಾಡುತ್ತಿದ್ದಳು.  ಶಾಲೆ ಬದಲಿಸಿ ಎಂಬ ಅಮ್ಮನ ಮಾತಿನೊಂದಿಗೆ ಈ ದೃಶ್ಯಗಳು ಕೊನೆಗೊಳ್ಳುತ್ತಿದ್ದವು.  ಆದರೆ ಬೈಗುಳಗಳ ಲೋಕ ಆಯಸ್ಕಾಂತದಂತೆ ನನ್ನ ಕಡೆಗೆ ಎಳೆಯುತ್ತಿತ್ತು.

ಹೀಗೆ ಈ ಬೈಗುಳಗಳ ಮೇಲೆ ಆಕರ್ಷಣೆ ಹೆಚ್ಚಾಗುತ್ತಲೇ ಒಮ್ಮೆ ಅದನ್ನು ಉಚ್ಚರಿಸಬೇಕು, ಯಾರಿಗಾದರೂ ಅದನ್ನು ಹೇಳಬೇಕು  ಅನ್ನುವ ಭಾವ ತೀವ್ರವಾಗತೊಡಗಿತು.  ಮನೆಯಲ್ಲಿ ಬೈಗುಳು ಬಿಡಿ, ಇಂಥ ಆಲೋಚನೆಗಳಿವೆ ಅನ್ನುವ ವಿಷಯ ಗೊತ್ತಾಗಿದ್ದರೂ ಅಮ್ಮ ಪಪ್ಪಾ ಇಬ್ಬರೂ ಏನು ಮಾಡಬಹುದು ಎಂಬ ಯೋಚನೆ ಬರುತ್ತಲೇ, ನನ್ನ  ಬೈಗುಳಗಳ ಫೇರೀ ದಿಕ್ಕು ತಪ್ಪಿ ಓಡಿ ಮನಸ್ಸಿನ ಮೂಲೆಯಲ್ಲಿ ಅಡಗಿ ಕೊಳ್ಳುತ್ತಿದ್ದವು.  ಒಮ್ಮೊಮ್ಮೆ ಅವು ಬಂದು ನನಗೆ ಅಣಗಿಸಿದಂತೆ ಭಾಸವಾಗುತ್ತಿತ್ತು.  ಹಾಗೆಯೇ ಒಂದು ದಿನ ನಿರ್ಧಾರ ಮಾಡಿದೆ, ನಾಳೆ ಹೆಂಗಾದರೂ ಮಾಡಿ ಒಂದಾದರೂ ಬೈಗುಳ ಬಯ್ಯಲೇಬೇಕು ಎಂದು!  ಯಾರಿಗೆ ಬಯ್ಯೋದು? ನನ್ನದೇ ವಾರಿಗೆಯ, ನನ್ನ ಜೊತೆ ಯಾವಾಗಲೂ ಆಡುತ್ತಿದ್ದ, ಇಂಥ ಎಲ್ಲ ಬೈಗುಳಗಳನ್ನು ಯಾವ ಹಮ್ಮು ಬಿಮ್ಮಿಲ್ಲದೆ ಬಳಸುತ್ತಿದ್ದ ೩ ಮಕ್ಕಳು ನಮ್ಮ ಮನೆಯ ಮುಂದೆ ವಾಸವಿದ್ದರು.  ಅವರನ್ನೇ ಜೊತೆ ಮಾಡಿಕೊಂಡೆ.

ಇನ್ನು ಸ್ಕ್ರಿಪ್ಟ್ ರೀಡಿಂಗ್ ಮಾಡುವ ಸಮಯ, ಅವರಿಗೊಂದು ಕಥೆ ಹೇಳಿದೆ, ”ನಾನು ಅಜ್ಜಿ, ನೀವೆಲ್ಲ ನನ್ನ ಮೊಮ್ಮಕ್ಕಳು.  ಸಂಜೆ ಆದರೂ ಆಟಕ್ಕೆ ಹೋದ ಮಕ್ಕಳು ಮನೆಗೆ ಬಂದಿಲ್ಲ ಎಂದು ನಾನು ನಿಮ್ಮನ್ನು ಬೈಯ್ಯುತ್ತಾ ಹುಡುಕುತ್ತೇನೆ.  ನೀವು ಆಗ ಹೆದರಿ ನನ್ನ ಮುಂದೆ ಬಂದು ನಿಲ್ಲಬೇಕು ..”  ಇಷ್ಟು ಆಟದ ದೃಶ್ಯವಾಗಿತ್ತು.

ನಾನು ಚಿಕ್ಕಪ್ಪನ ಲುಂಗಿಯನ್ನು ಸೀರೆಯಂತೆ ಸುತ್ತಿಕೊಂಡು, ಅಲ್ಲಿಯೇ ಒಲೆಯುರಿಗೆ ತಂದು ಒಟ್ಟಿದ್ದ  ಹತ್ತಿ ಕಟ್ಟಿಗೆಯ ಉದ್ದದ ಕೋಲನ್ನೊಂದು ಹಿಡಿದು, ಜಗತ್ತಿನ ಅತೀ ಕೆಟ್ಟ ಅಜ್ಜಿ, ಬೈಗುಳ ಬಯ್ಯುವ ಅಜ್ಜಿಯನ್ನು ಆವಾಹಿಸಿಕೊಂಡೆ.  ತೀರಾ ಕ್ಲಿಷ್ಟ ಮತ್ತು ಭಯಂಕರವಾಗಿ ಕೇಳಿಸುವ ಬೈಗುಳಗಳ ಗೋಜಿಗೆ ಹೋಗದೆ, ಸರಳವಾದ ಮೂರಕ್ಷರದ ಬೈಗುಳನ್ನು ಆರಿಸಿಕೊಂಡೆ.  ಅಂದರೂ ಅನ್ನದಂತಿರಬೇಕು ಅಂಥದ್ದು.  ಇನ್ನು ಆ ಮೂರು ಮಕ್ಕಳು, ಅವರಿಗಂತೂ ಇದೊಂದು ಕೆಟ್ಟ ಪದವೇ ಅಲ್ಲ, ಆದರೆ ನನಗೆ ನನ್ನ ಕನಸು ನನಸಾಗುವ ಗಳಿಗೆ ಹತ್ತಿರ ಬರುತ್ತಲೇ ಖುಷಿ ಉತ್ಸಾಹ ಹೆಚ್ಚಾಗುತ್ತಲೇ ಹೋಯಿತು. ಮಧ್ಯಾಹ್ನ ಅಮ್ಮ ಅಜ್ಜಿ ಸ್ವಲ್ಪ ಹೊತ್ತು ಮಲಗುತ್ತಿದ್ದರು.  ಆ ಇಪ್ಪತ್ತು ನಿಮಿಷದೊಳಗೆ ನನ್ನ ಕನಸು ನನಸು ಮಾಡಬೇಕು ಎಂಬ ಭೂತ ಹೊಕ್ಕಿದ್ದೇ ಹತ್ತಿಕಟ್ಟಿಗೆ ಹಿಡಿದು ಹೊರಟೆ. ಸಂಜೆ ದೇವರಿಗೆ ದೀಪ ಹಚ್ಚುವಾಗ ಅಪರಾಧ ಕ್ಷಮಾಪಣ ಮಂತ್ರ ಹೇಳಿಕೊಂಡರಾಯಿತು ಅನ್ನುವ ಪರಿಹಾರ ನನ್ನ ಮನಸ್ಸೇ ಕೊಟ್ಟಿದ್ದರಿಂದ ನನಗೆ ನಾನೇ ಭೇಷ್ ಅಂದುಕೊಂಡೆ.

ನನ್ನ ಮನೆಯ ಮುಂದೆ ಒಂದು ಪೇರಳೆ ಮರ, ಎರಡು ಕರವೀರ ಮರಗಳಿದ್ದವು; ಅದರ ಸಂದಿಯಲ್ಲಿ ನಿಂತರೆ ಯಾರಿಗೂ ಕಾಣುವುದಿಲ್ಲ.  ಅಲ್ಲಿ ಅಜ್ಜಿಯಂತೆ ಸೊಂಟ ಡೊಂಕು ಮಾಡಿ ಕೋಲು ಹಿಡಿದು ನಿಂತೆ.   ಎರಡು ಬಾರಿ ನನ್ನ “ಮೊಮ್ಮಕ್ಕಳನ್ನ” ಅವರ ಹೆಸರಿಂದಲೇ ಕರೆದೆ, ಮೂರನೇಬಾರಿ ಇದ್ದ ಶಕ್ತಿಯನ್ನೆಲ್ಲ ಸೇರಿಸಿ ಆ ಮೂರಕ್ಷರದ ಪದ ಜೋರಾಗಿ ಕೂಗಿದೆ.  ಮೂರನೇ ಅಕ್ಷರ ಇನ್ನೂ ಮುಗಿದಿರಲಿಲ್ಲ…. ಬೆನ್ನಮೇಲೆ ರಪ್ಪನೆ ಏನೋ ಬಿದ್ದಂತಾಯಿತು!  ಒಮ್ಮೆ ಕಣ್ಣು ಕತ್ತಲೆಯು ಬಂದು ಹೋಯಿತು, ಹಿಂತಿರುಗಿ ನೋಡುವ ಧೈರ್ಯ ಆಗಲಿಲ್ಲವಾದರೂ ಮರುಕ್ಷಣ ನನ್ನ ಹೆಸರನ್ನು ಕರೆದ ರೀತಿಯಿಂದಲೇ ಕಡಬು ಕೊಟ್ಟವರು ಅಜ್ಜಿ ಮತ್ತು ಇನ್ನು ನನಗೆ ಉಳಿಗಾಲವಿಲ್ಲ ಅನ್ನೋದು ನೆನೆದು ಅಜ್ಜಿಯ ಕಾಲಮೇಲೆ ಬಿದ್ದು, ಸಂಜೆತನಕ ಕಾಯದೆ ಅಪರಾಧ ಕ್ಷಮಾಪಣ ಸ್ತೋತ್ರ ಅಳುತ್ತಲೇ ಒದರಿಬಿಟ್ಟೆ.  “ಪಪ್ಪನಿಗೆ ಹೇಳ್ಬೇಡ ಅಜ್ಜಿ, ಪಪ್ಪನಿಗೆ ಹೇಳ್ಬೇಡ!!” ಅನ್ನುತ್ತಾ ಅಳುತ್ತಲೇ ಅಜ್ಜಿಯೊಂದಿಗೆ ಮನೆಗೆ ಹೋದೆ.  ಅಮ್ಮನಿಗಾಗಲೀ, ಮನೆಯ ಬೇರೆ ಯಾರಿಗೇ ಆಗಲಿ ನಾ ಯಾಕೆ ಅಳುತ್ತಿದ್ದೇನೆ ಅಂತ ಅರ್ಥವೇ ಆಗಲಿಲ್ಲ.  ಅಜ್ಜಿಯೂ ಕೂಡ ಅದನ್ನು ದೊಡ್ಡದು ಮಾಡದೆ, ಅಂಥ ಪದಗಳನ್ನು ನಾವು ಯಾಕೆ ಹೇಳಬಾರದು, ಅದರ ಹಿಂದೆ ಎಷ್ಟು ಕೆಟ್ಟ ಅರ್ಥಗಳಿವೆ ಎಂದು ಸಮಾಧಾನವಾಗಿ ಹೇಳಿದರು.  ಇದೆಲ್ಲ ಬೈಗುಳಗಳ ಅರ್ಥ ನಿನಗೆ ಅರ್ಥವಾದ ದಿನ ನಿನಗೆ ಇನ್ನೂ ಬೈಗುಳ ಹೇಳಬೇಕೆನಿಸಿದರೆ ಖಂಡಿತ ಬಯ್ಯಿ; ಬೇಕಿದ್ದರೆ ನಿನಗೆ ರಿಕ್ಷಾ ಮೇಲೆ ಮೈಕ್ ಹಾಕಿಸಿ ಕೊಡುತ್ತೇವೆ, ಊರ್ ತುಂಬಾ ಬೈಕೊಂಡ್ ಬಾ ಅಂತ ಹೇಳಿದರು.

ಅದೇ ಕೊನೆ ಮತ್ತೆಂದೂ ನಂಗೆ ಬೈಗುಳಗಳಮೇಲೆ ಪ್ರೀತಿ ಹುಟ್ಟಲಿಲ್ಲ.  ಜಾನಪದ ಅಧ್ಯಯನ ಮಾಡುವಾಗ ಮೂರನೇ ಸೆಮಿಸ್ಟರ್ನಲ್ಲಿ ಬೈಗುಳಗಳ ಬಗ್ಗೆ ಒಂದು ಪಾಠವಿತ್ತು.  ಅದರ ಮೊದಲ ಸಾಲೇ ”ಬೈಗುಳಗಳು ನಮ್ಮ ಜನಪದದ ನಿಗಿ ಭಾಗಗಳು ” ಎಂಬುದನ್ನು ಓದಿ ನಗು ಉಕ್ಕಿತ್ತು.  “ಇಂತಹ ನಿಗಿ ಕೆಂಡವನ್ನು ಉರಿಸುವ ಭಾಗ್ಯ ನನಗೆ ಬರಲೇ ಇಲ್ಲ ನೋಡ್ರಿ” ಎಂದು ಈ ಬೈಗುಳದ ಕತೆಯನ್ನು ಸಹಪಾಠಿಗಳೊಂದಿಗೆ ಹಂಚಿಕೊಂಡಿದ್ದೆ.   ಬರಹದುದ್ದಕ್ಕೂ ನಿಮ್ಮಿಂದ ಬೈಗುಳ ಎಂಬ ಪದವನ್ನು ಅದೆಷ್ಟು ಬಾರಿ ಓದಿಸಿಬಿಟ್ಟಿ, ಕ್ಷಮೆ ಇರಲಿ..,, ಮತ್ತೆ ಈಗ ನೀವು ನನ್ನ ಬೈಯ್ಯಬ್ಯಾಡ್ರಿ ಅಷ್ಟೇ !!!!!!

– ಅಮಿತಾ  ರವಿಕಿರಣ್,  ಬೆಲ್ಫಾಸ್ಟ್.

ನನ್ನ ಮನೆಯಲ್ಲಿ ಏಕಾದಶಿ ಮತ್ತು ದ್ವಾದಶಿ – ವತ್ಸಲಾ ರಾಮಮೂರ್ತಿ

ನಾನು ಹುಡುಗಿಯಾದಾಗ ಏಕಾದಶಿ ಬಂದರೆ ಖುಷಿಯೋ ಖುಷಿ.  ಅವತ್ತು ಮಡಿಯವರದೆಲ್ಲ ಉಪವಾಸ. ನಾನು ವಿಪರೀತ ಮಡಿ ಮಡಿ ಅಂತ ಯಾವಾಗಲು ಕೂಗಾಡೋ ಮಂದಿ ಜೊತೆ ಬೆಳೆದಿದ್ದು.  ಅಲ್ಲಿ ಮುಟ್ಟಬೇಡ, ಇಲ್ಲಿ ಲೋಟಕ್ಕಿಡಬೇಡ, ಹೀಗೆ ನಾನಾ ತರಹದ ನಕಾರಗಳು.  ಏಕಾದಶಿ ಮಾತ್ರ ಅಡಿಗೆಮನೆಯಲ್ಲಿ ಅಡಿಗೆ ಮಾಡುವಹಾಗಿಲ್ಲ.  ಹೊರಗೆ ಗ್ಯಾಸ್ stove ಮೇಲೆ ಮಾಡಬಹುದು. ಅವತ್ತು ಮಕ್ಕಳೆಲ್ಲ  ಸೇರಿ ೧೫ ಮಂದಿ.  ಈರುಳ್ಳಿ ಆಲೂಗಡ್ಡೆ ಹುಳಿ, ಕ್ಯಾರಟ್ ಕೋಸುಂಬರಿ, ಹಪ್ಪಳ, ಈರುಳ್ಳಿ ಸಂಡಿಗೆ,  ಮಜಾ ಅಂದರೆ ಮಜಾ!  ಎಲ್ಲರೂ ಬಾಯಿ ಚಪ್ಪರಿಸಿ ತಿಂದಿದ್ದೇ ತಿಂದಿದ್ದು.  ರಾತ್ರಿಗೆ ಫಲಾಹಾರ  ಗೊಜ್ಜವಲಕ್ಕಿ, ಬಾಳೆಹಣ್ಣಿನ ಸೀಕರಣೆ.  ಮಾರನೇ ದಿನ ದ್ವಾದಶಿ ಪಾರಣೆ.  ಮುಂಜಾನೆ ೪ ಗಂಟೆಗೆ  ದೇವರಮನೆಯಲ್ಲಿ ಗಂಟೆಯ ನಾದ, ಮಂತ್ರ ಘೋಷಣೆ; ಹೆಸರುಬೇಳೆ ಪಾಯಸ, ದೋಸೆ, ಅಗಸೆ ಸೊಪ್ಪಿನ ಪಲ್ಯ, ಗೊಜ್ಜು – ಮಡಿ ಹೆಂಗಸರ ಅಡುಗೆ.  ಪೂಜಾರಿ ದೇವರ ನೈವೇದ್ಯ ಮಾಡಿದ ಮೇಲೆ ಊಟ.  ಈಗ ನೆನೆಸಿಕೊಂಡರೆ ಅನ್ನಿಸುತ್ತದೆ, ಚಿಕ್ಕ ವಯಸ್ಸಿನ ವಿಧವೆಯರ ಬಾಳು ಎಂಥ ಘೋರವಾಗಿತ್ತು!

ಚಿತ್ರ ಕಲೆ: ಲಕ್ಷ್ಮೀನಾರಾಯಣ ಗುಡೂರ್

ಪ್ರತಿದಿನ ಮೊಸರಮ್ಮ ಗಡಿಗೆಯಲ್ಲಿ ತಂದು, ಪಾವಿನಲ್ಲಿ ಅಳೆದು, ನೀರು ಬೆರಸಿ ಕೊಡುತ್ತಿದ್ದಳು.  ಆಮೇಲೆ ನಮ್ಮ ಅಮ್ಮನ ಹತ್ತಿರ ಬೈಸಿಕೊಳ್ಳುತ್ತಿದ್ದಳು.  ಗೋಡೆಮೇಲೆ ಹೆಬ್ಬೆಟ್ಟಿನಲ್ಲಿ ಗೀಟು ಎಳದು ಲೆಕ್ಕ ಇಡುತ್ತಿದ್ದಳು.  ಹೀಗೆ ಸೊಪ್ಪಿನವಳು, ಹಾಲಿನವಳು – ಬೆಳಗಿನ ದಿನಚರಿ.  ದ್ರಾಕ್ಷಿ ಮುದುಕ ಒಬ್ಬ ವಾರಕೊಮ್ಮೆ ಬಂದು ಕಾಬೂಲಿ ದ್ರಾಕ್ಷಿ ತರುತ್ತಿದ್ದ.  ಆ ಮುದುಕನ್ನ ನೆನೆಸಿದರೆ ಈಗ ರವೀಂದ್ರನಾಥ ಟಾಗೋರರ ‘ಕಾಬೂಲಿವಾಲಾ’ ಜ್ಞಾಪಕಕ್ಕೆ ಬರುತ್ತಿದೆ.  ನಮಗೆಲ್ಲ ಒಂದೊಂದು ಹಣ್ಣು ಕೊಡುತ್ತಿದ್ದ.

ಬೊಂಬೆಯಾಟ, ಪಗಡೆ, ಚೌಕಾಬಾರಾ, ಕಲ್ಲಿನ ಆಟ, ಸೀಬೆಕಾಯಿ ತಿನ್ನಾಟ.  ಎಷ್ಟೊಂದು
ನೆನಪುಗಳು ಬರುತ್ತಿವೆ.  ಹಾಗೆಯೇ, ಬಡತನ, ಅನರಕ್ಷತೆ ಇತ್ಯಾದಿಗಳ ನಡುವೆಯೂ ಕಷ್ಟಸಹಿಷ್ಣುತೆಯ ಜೀವನವನ್ನು ನಿಭಾಯಿಸಿದ ಆ ಕಾಲದ ಜನರ ಕಲೆಗೆ ದೊಡ್ಡ ನಮಸ್ಕಾರ.

– ವತ್ಸಲಾ ರಾಮಮೂರ್ತಿ


8 thoughts on “ಬಾಲ್ಯದ ನೆನಪುಗಳು – ಅಮಿತಾ ರವಿಕಿರಣ ಮತ್ತು ವತ್ಸಲಾ ರಾಮಮೂರ್ತಿ

 1. ಅಮಿತ ಮತ್ತು ವತ್ಸಲಾ ಅವರ ಬಾಲ್ಯದ ನೆನಪುಗಳು ನಿಜಕ್ಕೂ ಭರ್ಜರಿಯಾಗಿವೆ. ಅಮಿತ ಅವರೇ, ಬೈಗುಳಿನ ಪ್ರಭಾವವನ್ನು ನಾವೆಲ್ಲ ಬಾಲ್ಯದಲ್ಲಿ ಅಳೆದು ಮನೆಯಲ್ಲಿ ಹಿರಿಯರ ಕೈಯಲ್ಲಿ ಬೈಸಿಕೊಂಡಿದ್ದೇವೆ. ಅದ್ಯಾಕೋ ಗೊತ್ತಿಲ್ಲ, ಯಾರಾದರೋ ಜಗಳವಾಡಿ ಬೈದಾಡುತ್ತಿದ್ದರೆ ಮಕ್ಕಳಿಗೆ ಅದರ ಆಕರ್ಷಣೆ. ಬೀದಿಯಲ್ಲಿ ಹೆಂಗಸರು ನಲ್ಲಿ ನೀರಿಗೆ ಜಗಳವಾಡುವಾಗ ನಾವೆಲ್ಲ ಮನೆ ಮುಂದೆ ನಿಂತು ನೋಡುತ್ತಿದ್ದ ನೆನಪು ಇನ್ನು ಮಾಸಿಲ್ಲ. ಜೊತೆಗೆ ಮೈಸೂರಿನ ಮಾರುಕಟ್ಟೆಯಲ್ಲಿ ವಿಳ್ಳೇದೆಲೆ ಮಾರುವ ಹೆಂಗಸರ ಬಾಯಲ್ಲಿ ಅಶ್ಲೀಲ ಬೈಗುಳಗಳ ದೊಡ್ಡ ನಿಘಂಟೇ ಇತ್ತು. ನನ್ನ ತಾಯಿ ಆ ಹೆಂಗಸರ ಹತ್ತಿರ ಎಂದೂ ವಿಳ್ಳೇದೆಲೆ ಖರೀದಿ ಮಾಡುತ್ತಿರಲಿಲ್ಲ. ನಮಗೋ ಆ ಬೈಗುಳಮಾಲೆಯನ್ನು ಕೇಳುವ ಆಸೆ ! ನಿಮ್ಮ ಲೇಖನ ನೋಡಿದ ಮೇಲೆ ಬಾಲ್ಯದ ನೆನಪಿನ ಅಲೆಗಳು ನನ್ನ ಮನದಲ್ಲೇಳುತ್ತಿವೆ.
  ವತ್ಸಲಾ ಮನೆಯಲ್ಲಿ ತಿಂಗಳಿಗೊಮ್ಮೆ ಬರುತ್ತಿದ್ದ ಏಕಾದಶಿ ಫಲಾಹಾರದ ಚಿತ್ರ ಇನ್ನು ನನ್ನ ಕಣ್ಣಿನ ಮುಂದಿದೆ. ನೀವು ಬರೆದಿರುವ ತಿಂಡಿಯ ಸಾಲುಗಳು ನನ್ನ ಬಾಯಲ್ಲಿ ನೀರೂರಿಸಿತು. ಕೆಲಸದ ನಿಂಗಮ್ಮ, ಹಾಲಿನ ಲಕ್ಷಮ್ಮ, ತರಕಾರಿ ಸಿದ್ದ ಹೀಗೆ ಅನೇಕ ವ್ಯಕ್ತಿಗಳು ನಮ್ಮ ಬಾಲ್ಯದ ಚಿತ್ರಗಳಲ್ಲಿ ಮುಖ್ಯ ಪಾತ್ರಧಾರಿಗಳು. ಅವರ ನೆನಪುಗಳು ಎಂದೂ ಮಾಸದ ಚಿತ್ರ. ನಿಮ್ಮಿಬ್ಬರ ಲೇಖನಗಳನ್ನು ಓದಿ ಖುಷಿಯಾಯ್ತು.
  ಉಮಾ ವೆಂಕಟೇಶ್

  Like

 2. ಅಮಿತಾರ ಬಾಲ್ಯದ ನೆನಪಿನ ಭಿತ್ತಿಗಳು, ಭಾಷೆ, ನಿರೂಪಣೆ ಸರಳವಾಗಿ ಮತ್ತು ಸುಂದರವಾಗಿದೆ. ಮಕ್ಕಳ ಎದುರು ಕೆಟ್ಟ ಬೈಗುಳವನ್ನಾಡಬಾರದು ಎಂಬ ನೈತಿಕ ಜವಾಬ್ದಾರಿ ದೊಡ್ಡವರಿಗೆ ಇರಬೇಕು ಇಲ್ಲದಿದ್ದಲ್ಲಿ ಏನಾಗುತ್ತದೆ ಎಂಬುದನ್ನು ನಿಮ್ಮ ಪ್ರಸಂಗದಿಂದ ತಿಳಿದುಕೊಳ್ಳಬಹುದು. ಎಳೆ ಮನಸ್ಸು ಒಳ್ಳೆಯದನ್ನು ಹೇಗೆ ಗ್ರಹಿಸುತ್ತದೆಯೋ ಕೆಟ್ಟದನ್ನು ಅಷ್ಟೇ ಚೆನ್ನಾಗಿ ಗ್ರಹಿಸುತ್ತದೆ! ವತ್ಸಲಾ ಅವರ ಚದುರಿದ ಚಿತ್ತಾರಗಳು ಚಿಕ್ಕದಾದರೂ ಚೊಕ್ಕವಾಗಿದೆ.

  Like

 3. ಅಮಿತಾ ಅವರ ತಾಂಡೆ ಶಾಲೆಯ ವಿವರಗಳು ಸೊಗಸಾಗಿವೆ. ನಿಮಗೆ ಬಯ್ಯಬೇಕೆನ್ನುವ ಮುಗ್ಧಮಗುವಿನ ಉಮೇದು ಬಾಲ್ಯಕ್ಕೇ ಕರೆದೊಯ್ಯುತ್ತದೆ. ಅದರಲ್ಲೂ ನಿಮಗೆ ಅಜ್ಜಿ ಹೇಳುವ ಕಿವಿಮಾತು ಕೂಡ ಮನ ತಟ್ಟುತ್ತದೆ. ಒಂದು ಕತೆ ಬೇಕಾದ ಎಲ್ಲ ಸರಕೂ ನಿಮ್ಮ ಅನುಭವದಲ್ಲಿದೆ. ಒಂದು ಒಳ್ಳೆಯ ಪ್ರಬಂಧ. ಬಿಜಾಪುರ ಬಾಗಲಕೋಟೆ ಮತ್ತು ಹುಬ್ಬಳಿಯಲ್ಲಿ ಬೆಳೆದ ನಾನು ಉತ್ತರ ಕರ್ನಾಟಕದ ಬಯ್ಗಳುಗಳ ಸುರಿಮಳೆಯನ್ನು ಕೇಳುತ್ತ ಬೆಳೆದವನು. ನನಗೂ ಕೂಡ ನಿಮ್ಮಂತೆ ಈ ಬಯ್ಗಳುಗಳ ಮೇಲೆ ವಿಪರೀತ ವ್ಯಾಮೋಹ, ಅನ್ನಲು ಅಲ್ಲ, ಬದಲಿಗೆ ಅವುಗಳ ಅರ್ಥ ಏನಿರಬಹುದು ಎಂದು. ಆದರೆ ಕೇಳಲು ಹೆದರಿಕೆ. ಮನೆಯಲ್ಲಿ ಹೇಗೂ ಶಬ್ದಕೋಶ ಇತ್ತಲ್ಲ. ಅದನ್ನು ತೆಗೆದು ಓದಿ ಆ ಬಯ್ಗಳುಗಳ ಅರ್ಥವನ್ನು ಮನನ ಮಾಡಿಕೊಳ್ಳುತ್ತಿದ್ದೆ. ಉತ್ತರ ಕರ್ನಾಟಕದವರ ಬಯ್ಗಳುಗಳನ್ನು ಅಕ್ಷರಷಃ ತೆಗೆದುಕೊಂಡರೆ ಜಗಳ ವೈರತ್ವ ಕಟ್ಟಿಟ್ಟದ್ದು. ಅಂಥವ ಉದಾಹರಣೆಗನ್ನೂ ನೋಡಿದ್ದೇನೆ.

  ವತ್ಸಲಾ ಅವರ ಏಕಾದಶಿ ಮತ್ತು ದ್ವಾದಶಿಯ ಕತೆಗಳು ನನ್ನ ಬಾಲ್ಯವನ್ನು ನೆನಪಿಸಿದವು.

  – ಕೇಶವ

  Like

 4. ನಾನೂ ಮೊದಲು ಗುಡೂರ ಅವರ ಚಿತ್ರಗಳಿಗೆ ಒಂದು ಸಲಾಂ ಹೊಡೆದೇ ಬರೆಯಲು ಶುರುಮಾಡುತ್ತೇನೆ. ನಿಮ್ಮ ರೇಖೆಗಳು ಅಕ್ಷರಗಳಿಗಿಂತ ಹೆಚ್ಚು ಸಮಥ೯ವಾಗಿ ಮಾತಾಡುತ್ತವೆ ಗುಡೂರ್ ಅವರೇ..ಎರಡೂ ಚಿತ್ರಗಳು ಅಮೋಘ. ನಿಮ್ಮ ಸಂಪಾದಕೀಯತ್ವದಲ್ಲಿ ಅನಿವಾಸಿ ಓದುಗರಿಗೆಲ್ಲ ಅವು ಬೋನಸ್ ಕೊಡುಗೆ. ಗೂಗಲ್ ಬಾಬಾನ ರೆಡಿ ಟು ಈಟ್ ಚಿತ್ರಗಳ ಬದಲಾಗಿ ನಿಮ್ಮ ತಾಜಾ ಚಿತ್ರಗಳು..ಕ್ಲಾಸ್ ರೂಮಿನ ಚಿತ್ರದಲ್ಲಿ ಹಣಕುತ್ತಿರುವ ‘ಅಮಿತಾ’😀😀ಗಾಬರಿಗೊಂಡ ಬಡಪಾಯಿ ಮಾಸ್ತರು..ಹೊಸ್ತಿಲಿನ ರಂಗೋಲಿ, ಪಡಸಾಲಿಯ ಗಣಪತಿಮಾಡದ ‘ ಗಜಾನನ ಪ್ರಸನ್ನ’ ,ಮೊಸರಿನ ‘ಮಂಗಮ್ಮ’ ನ ಸಿಂಬಿ…ಎಲ್ಲವೂ 👌👌👏👏ಚಿತ್ರಕಲೆಯಲ್ಲಿ ನನಗ್ಯಾವ ಪರಿಶ್ರಮವಿಲ್ಲವಾದರೂ ನಿಮ್ಮ ಚಿತ್ರಗಳು ಬರೀ ಗೆರೆಗಳಲ್ಲ..’ಜೀವನ ರೇಖೆಗಳು’.
  ಅಮಿತಾ ಅವರ ಬರವಣಿಗೆ ಅವರ ಹಾಡುಗಾರಿಕೆಯಷ್ಟೇ ಸೊಗಸಾಗಿದೆ. ಬಾಲ್ಯದ ಮೊದ್ದುತನ- ಮುಗ್ಧತನದ ಆ ಭಾವಲೋಕ ಅನನ್ಯವಾದದ್ದು . ಪಾಪ!ಅವರ ಈಡೇರದ ಆ ಅಪೂಣ೯ ಕನಸಿನ ಬಗ್ಗೆ ಮಾತ್ರ ನನಗೆ ತುಂಬಾ ಸಂತಾಪವಿದೆ😀 ಅವರ ಶಾಲೆ, ಊರಲ್ಲಿನ ಜಗಳ ಪಂಚಾಯತಿಗಳು ನಮ್ಮವೇ ಎನಿಸುವಷ್ಟು ಸಾಮ್ಯತೆ ಹೊಂದಿವೆ.
  ವತ್ಸಲಾ ಅವರು ಬರೆದ ಏಕಾದಶಿ-ದ್ವಾದಶಿ ..ಮಡಿನೀರು- ಮಡಿಬಟ್ಟೆಗಳ ಜೊತೆಯೇ ಬೆಳೆದವರು ನಾವೂ. ಏಕಾದಶಿ ಉಪವಾಸ ಮಾಡದಿದ್ದರೂ ದ್ವಾದಶಿ ಪಾರಣೆಯ ಹೆಸರುಬೇಳೆ ಪಾಯಸದಲ್ಲಿ ನಮಗೇ ಸಿಂಹಪಾಲು.ಅವರು ಬರೆದಂತೆ ಆಗಿನ ಹೆಣ್ಣುಮಕ್ಕಳ ಅದರಲ್ಲೂ ಮಡಿಹೆಂಗಸರ ಪಾಡು ಯಾರಿಗೂ ಬೇಡ. ಮಡಿಅಡಿಗೆ ಮಾಡಿ ಎಲ್ಲರಿಗೂ ಹೊಟ್ಟೆ ತುಂಬ ಉಣಿಸಿವ ಆ ಜೀವಗಳಿಗೆ ರಾತ್ರಿ ಒಣಅವಲಕ್ಕಿಯೋ ಇಲ್ಲಾ ಅಳ್ಳಿಟ್ಟುಗಳೇ ಗತಿ. ಚಿಕ್ಕಂದಿನಲ್ಲಿ ಇದೆಲ್ಲ ಅಷ್ಟು ಅಥ೯ವಾಗುತ್ತಿರಲಿಲ್ಲ. ಈಗ ನೆನೆಸಿಕೊಂಡರೆ ಸಂಕಟವಾಗುತ್ತದೆ.
  ಕಾಲವನ್ನು ಮರಳಿ ದೊರಕಿಸಲಾಗದು ಎಂಬ ಮಾತನ್ನು ಈ ಸಲದ ಲೇಖನಗಳು ಕೆಲಸಮಯದ ಮಟ್ಟಿಗಾದರೂ ಸುಳ್ಳು ಮಾಡಿದ್ದು ಮಾತ್ರ ನಿಜ.
  ಗೌರಿಪ್ರಸನ್ನ.

  Liked by 1 person

 5. ವಾವ್ ವಾವ್!! ಏನು ಮಸ್ತ್ ವಿಷಯ ಅನಿವಾಸಿಯಲ್ಲಿ! ನಿಜಕ್ಕೂ ಮಜಾ ಬಂತು.ಅಲ್ರೀ ಅಮಿತಾ ಅವರೇ ಈ ಥರ ಬಚಾವಾಗಬಾರದು ಬರೀ ಅಜ್ಜಿ ಕೊಟ್ಟ ಏಟಿನ ವಿಷಯವಷ್ಟೇ ಹೇಳಿ ಹಾಂ! ನಾನು ನಮ್ಮ ತಂದೆಯ ಕೋಪದ ರುಚಿ ನೋಡಿದ ಜ್ಞಾಪಕ ಬಂದು ನಕ್ಕೆ ನನ್ನಷ್ಟಕ್ಕೇ . ಒಂದು ಕ್ಷಣ ಅದೇ ಹುಡುಗಿ , ಮನೆಗೆ ಲೇಟಾಗಿ ಬಂದು ಅಂಗಳದಲ್ಲಿ ನಿಲ್ಲುವ ಶಿಕ್ಷೆ ಅನುಭವಿಸಿದ ಬಾಲೆಯಾಗಿ ಬಿಟ್ಟೆ.ಎಷ್ಟು ಸುಂದರ ಅಲ್ವಾ ಆ ದಿನಗಳು! ಬಾರದ ಆ ದಿನಗಳ ಹಂಬಲ ಅಪರಿಮಿತ.
  ವತ್ಸಲಾ ಅವರು ಬರೆದ ಮಡಿ ಹುಡಿ ವಿಚಾರ, ದ್ವಾದಶಿ ಊಟ ನಮ್ಮಜ್ಜಿ ಯತ್ತ ಎಳೆದೊಯ್ತು ನನ್ನ ನೆನಪನ್ನು.ಬರೀ ತೀರ್ಥ ತಗೊಂಡು ಏಕಾದಶಿ ಉಪವಾಸ ಆಕೆ ಯದು.ಆದರೆ ಮಕ್ಕಳ ಊಟ ಆಗೋವರೆಗೂ ಉಣ್ಣಳು.ಹೀಗಾಗಿ ಏಳು ಗಂಟೆಗೆ ಸ್ನಾನ ಮುಗಿಸಿ ಊಟಕ್ಕೆ ಹಾಜರಿರಲೇಬೇಕು ನಾವು.ಆ ರುಚಿನೆ ಬೇರೆ.” ರೆಕ್ಕೆ ಕಟ್ಟಿ ಹಾರಲೇ ಆ ದಿನಕ್ಕೆ ಅಥವಾ ಕಾಲವನ್ನೇ ಉಲ್ಟಾ ತಿರುಗಿಸಲೇ ಅನ್ನಿಸ್ತದೆ ಒಮ್ಮೊಮ್ಮೆ.
  ಸುಂದರಬಾಲ್ಯದ ಅನುಭವ ಹಂಚಿಕೊಂಡು ನಮ್ಮ ನೆನಪುಗಳನ್ನೂ ತಾಜಾ ಮಾಡಿದ ‌ಅಮಿತಾ ಹಾಗೂ ವತ್ಸಲಾ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Like

 6. ಅಮಿತಾ ಹಾಗೂ ವತ್ಸಲಾ ಅವರ ಬಾಲ್ಯದ ನೆನಪುಗಳು ನೆನಪುಗಳನ್ನು ಕೆದಕಿ ನೋಡಲು ಪ್ರೇರೇಪಿಸಿವೆ. ಇಬ್ಬರ ಹಾಸ್ಯಮಯ ಶೈಲಿ, ಈ ನೆನಪಿನ ದೋಣಿಗೆ ವಿಶೇಷ ಹಾಯಿಯನ್ನು ಕಟ್ಟಿದೆ; ನಗುವಿನ ತೆರೆಯನ್ನೆಬ್ಬಿಸಿದೆ. ಎಷ್ಟೊ ಹೊತ್ತು ಬಾಲ್ಯದಲ್ಲಿ ಕೇಳಿದ, ಕಲಿತ ಬೈಗುಳಗಳನ್ನೆಲ್ಲ ನೆನಪಿಸಿಕೊಂಡಿದ್ದು, ಮಳೆಗಾಲದಲ್ಲಿ ಬಿಸಿ ‘ಚಹಾದೊಟ್ಟಿಗೆ ಭಜಿ ತಿಂದ ಖುಷಿ ಕೊಟ್ಟಿತು. ವತ್ಸಲಾ ಅವರ ಏಕಾದಶಿಯ ಒಪ್ಪತ್ತಿನ ವಿಚಾರ, ಶನಿವಾರದ ಅಜ್ಜನ ಒಪ್ಪತ್ತಿಗೆ ಅಜ್ಜಿ ಮಾಡುತ್ತಿದ್ದ ‘ಬುಸ್ – ಬುಸಿ’ ಒಗ್ಗರಣೆ ಅವಲಕ್ಕಿಗೆ ಒಲೆಯ ಸುತ್ತ ಬೆಕ್ಕುಗಳಂತೆ ಕುಕ್ಕರಗಾಲಲ್ಲಿ ಕಾಯುತ್ತಿದ್ದ ಮೊಮ್ಮಕ್ಕಳ ಚಿತ್ರ ಮನ: ಪಟಲದಲ್ಲಿ ಹಾಯಿತು.
  -ರಾಂ

  Like

 7. ಅಮಿತಾ ಮತ್ತು ವತ್ಸಲಾ ಅವರ ಬಾಲ್ಯದ ನೆನಪುಗಳು ಮುದ ಕೊಡುತ್ತವೆ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
  ಮಕ್ಕಳಾಗಿದ್ದಾಗ ಬೈಗಳೇ ಒಂದು ಕಲ್ಪನಾತೀತ ”ಗುಹ್ಯ’ ಜಗತ್ತನ್ನು ತೆರೆದಿಡುತ್ತಿತ್ತು. ಅವುಗಳ ಅರ್ಥವಂತೂ ಆಗುತ್ತಿರಲಿಲ್ಲ. ಆದರೆ ಅವು ಕೆಟ್ಟ ಶಬ್ದಗಳು ಅಂತ ಗೊತ್ತಿರುತ್ತಿತ್ತು. ನಮಗೆ ಶಾಲೆಯಲ್ಲಿದ್ದಾಗ ಒಂದಕ್ಕಿಂತ ಒಂದು ವರ್ಣಮಯ ಬೈಗಳನ್ನು ಸಂಗ್ರಹಿಸುವದೇ ಆಟವಾಗಿರುತ್ತಿತ್ತು. ಆದರೆ ಕೆಲ ಅರಸಿಕರಿಗೆ ’ಸ್ಟಾಂಪ್ ಕಲೆಕ್ಟಿಂಗ್ ’ ಹಾಬ್ಬಿ ಆಗ! ಹೆಚ್ಚೆಚ್ಚು ಅವಾಚ್ಯ ಬೈಗಳನ್ನು ಹೇಳುವ ಹುಡುಗರನ್ನು ಒಂದು ತರದ ಹೀರೋಗಳಂತೆ ಕಾಣುತ್ತಿದ್ದೆವು. ಆದರೆ ನಾವು ಅವನ್ನು ಉಪಯೋಗಿಸುತ್ತಿದ್ದುದು ಅಪರೂಪವೇ – ಈಗ ಈ ದೇಶದಲ್ಲಿ ಮಕ್ಕಳು, ಹಿರಿಯರು ಎಲ್ಲರೂ ಮಾತು ಮಾತಿಗೆ ”ಎಫ್ಫಿಂಗ್’ ಮಾಡುತ್ತಿರುವದನ್ನು ಹೋಲಿಸಿದರೆ. ನಾನೊಮ್ಮೆ ನನ್ನ ಮುಗ್ಧ ವಯಸ್ಸಿನಲ್ಲಿ ನನ್ನ ಕಿವಿಗೆ ಬಿದ್ದ ಹಿಂದಿ/ಉರ್ದು ’ಚ’ಕಾರದ ಬೈಗಳೊಂದರ ಅರ್ಥವನ್ನು ಕೇಳಿದಾಗ ನನ್ನ ತಂದೆ ಚಕಾರವೆತ್ತದೆ ಶಾಂತ ರೀತಿಯಿಂದ ಅದರ ತತ್ಸಮ ಪದವನ್ನು ಹೇಳಿದ್ದು ನೆನಪಿದೆ. But I was none the wiser, nor was I physically abused! ಅಮಿತಾ ಅವರ ಶೈಲಿ ಮತ್ತು ಬರವಣಿಗೆ ಸ್ವಾರಸ್ಯಕರವಾಗಿದೆ. ಆ ಮೂರಕ್ಷರಗಳ ಶಬ್ದವನ್ನು ಓದುಗರ ಊಹೆಗೇ ಬಿಟ್ಟು ತಪ್ಪಿಸಿಕೊಂಡಿದ್ದೀರಿ!
  ವತ್ಸಲಾ ಅವರ ಬರಹದಲ್ಲೂ ಬೈಗಳ ವಿಷಯ ಬಂದರೂ ’’ಸಾತ್ವಿಕ” ತರಹದ್ದು. ಅವರು ವರ್ಣಿಸುವ ಮಡಿ ಊಟವಂತೂ ನಿಜವಾಗಿಯೂ ಸಾತ್ವಿಕ ಊಟ. ಸಿಹಿ-ಕಹಿ ಮಿಶ್ರಿತ ಸವಿನೆನಪುಗಳು. ಅವು ನಮ್ಮೆಲ್ಲರ ಬಾಲ್ಯದ ಅನುಭವಗಳನ್ನೂ ನೆನೆಪಿಸುತ್ತವೆ. ಬಾಲ್ಯವೆಂದರೆ ಅದೊಂದು ಸುಂದರ ಕನಸು, ಸರಿ!

  Like

 8. ಬಾಲ್ಯವೆಂದರೆ ಭಾಗ್ಯ ಬಹಳ ಮಂದಿಗೆ . ಯಾವು ಊರು, ಕೇರಿಯ ಬಂಧನ ಅದಕ್ಕಿಲ್ಲ. ಅಮಿತಾ ನಿಮ್ಮ ಊರು ಮಿನಿ ಭಾರತವಾಗಿತ್ತೆನ್ನುವುದು ನನಗೆ ಸೋಜಿಗದ ವಿಷಯ. ನಿಮ್ಮ ಸ್ಕೂಲ್ ಬಗ್ಗೆ ಓದಿದಾಗ, ಇಲ್ಲಿನ ಶಾಲೆಗಳ ನೆನಪು ಬಂತು. ಟೀಚರ್ ಮೇಲೆ ಜಗಳವಾಡುವುದು ಆ೦ಗ್ಲರ ಹಕ್ಕು ಮಾತ್ರ ಎಂದುಕೊಡ್ಡಿದ್ದೆ (Ha Ha ). ಸಣ್ಣ ಊರುಗಳಲ್ಲಿ ಬೆಳೆಯುವ ಸಂತೋಷವೇ ಬೇರೆ. ನಿಮ್ಮ ಬೈಗಳ ಆಟ ಓದಿ ನಗುಬಂತು.

  ವತ್ಸಲಾರವರ ಬಾಲ್ಯದ ಏಕಾದಶಿ ಅಡಿಗೆ ಅವರ ಲೇಖನದ ತರಹ ಮತ್ತು ದ್ವಾದಶಿಯ ಹಬ್ಬಕ್ಕಿಂತ ಸೊಗಸಾಗಿದೆ.

  ವಿಭಿನ್ನ ಬರಹಗಳು ಮತ್ತು ಅನುಭವಗಳು. ಗೂಡುರ್ ರವರ ಚಿತ್ರಗಳು ನಿಮ್ಮಿಬ್ಬರ ಬರಹಗಳಿಗೆ ಮೆರಗು ತಂದಿವೆ

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.