ಕಾವ್ಯ ಭಾವ – ಸಂಗೀತ ಸೌರಭ – ೨೯ ಆಗಸ್ಟ, ೨೦೨೦

ಆಗಸ್ಟ್ ೨೯ ರಂದು ನಡೆದ ಈ ಕಾರ್ಯಕ್ರಮ ನೋಡುಗರ ಮನದಣಿಯುವಂತೆ, ಪಾಲ್ಗೊಂಡ ಕವಿದ್ವಯರ ಮಾತು-ವಿವರಣೆಗಳ, ಹಾಡುಗಾರರ ಮಧುರಕಂಠಗಳಿಂದ ಹೊಮ್ಮಿದ ಗಾಯನದ ರಸದೌತಣ ಬಡಿಸಿದ್ದು ಇನ್ನೂ ನಮ್ಮ-ನಿಮ್ಮ ಮನದಲ್ಲಿ ತಾಜಾ ನೆನಪಾಗಿ ಇದ್ದೇ ಇದೆ. ಅದನ್ನೇ ಮತ್ತೆ ಮೆಲುಕು ಹಾಕಿ, ಅದರ ಘಮವನ್ನು ಇನ್ನೊಮ್ಮೆ ನಮಗೆಲ್ಲ ಮರುಕಳಿಸುವಂತೆ ಮಾಡಲು ಪ್ರಕಟಿಸುತ್ತಿದ್ದೇವೆ, ಮೂವರು ಅನಿವಾಸಿಯ ಬಂಧುಗಳ ವರದಿ – ಶ್ರೀಯುತರಾದ ಶ್ರೀವತ್ಸ ದೇಸಾಯಿ, ರಾಮಶರಣ ಲಕ್ಷ್ಮೀನಾರಾಯಣ ಮತ್ತು ಸಿ ನವೀನ್ ಅವರಿಂದ. ಎಂದಿನಂತೆ ಓದಿ, ನಿಮಗನ್ನಿಸಿದ್ದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಬನ್ನಿ ಮತ್ತೆ. – ಎಲ್ಲೆನ್ ಗುಡೂರ್ (ಸಂ.)

ಕಾವ್ಯ ಭಾವ – ಸಂಗೀತ ಸೌರಭ” – ಪೀಠಿಕೆ – ಶ್ರೀವತ್ಸ ದೇಸಾಯಿ

“ಮಾಡುವವನದಲ್ಲ ಹಾಡು, ಹಾಡುವವನದು” – ಪು ತಿ ನ

ಆಗಸ್ಟ್ 29, 2020 ರಂದು ಕನ್ನಡ ಬಳಗ ಯು ಕೆ ಮತ್ತು ಅದರ ಸಾಹಿತ್ಯಿಕ ಅಂಗವಾದ “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ” (ಕ ಸಾ ಸಾಂ ವಿ ವೇ – KSSVV) ಎರಡೂ ಕೂಡಿ “ಕಾವ್ಯ ಭಾವ – ಸಂಗೀತ ಸೌರಭ” ಎನ್ನುವ ಕಾರ್ಯಕ್ರಮವನ್ನು Zoom ಪ್ರಸಾರ ವೇದಿಕೆಯಲ್ಲಿ ಏರ್ಪಡಿಸಿದ್ದವು. ಕೋವಿಡ್ ಮಾರಿ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ತಂದಾಗಿನಿಂದ ಜನರು ಸಂವಹನಕ್ಕೆ ಮತ್ತು ಸಾರ್ವತ್ರಿಕ ಸಭೆಗಳನ್ನು ಏರ್ಪಡಿಸಲು ತಂತ್ರಜ್ಞಾನವನ್ನು ಮೊರೆಹೊಕ್ಕು ಝೂಮ್, ಸಿಸ್ಕೋ ವೆಬೆಕ್ಸ್, ಏರ್ಮೀಟ್, ಗೂಗಲ್ ಮೀಟ್ ಇತ್ಯಾದಿ ಪ್ಲಾಟ್ಫಾರ್ಮ್ಗಳನ್ನು ಹೆಚ್ಚೆಚ್ಚಾಗಿ ಉಪಯೋಗಿಸುತ್ತಿದ್ದಾರೆ.

ಯುನೈಟೆಡ್ ಕಿಂಗ್ಡಮ್ ನ ಕನ್ನಡ ಬಳಗ ಸಹ ಈ ಆರು ತಿಂಗಳಿನಲ್ಲಿ ಭಾಷಣ, ಸಂಗೀತ, ಸಂವಾದ ಇತ್ಯಾದಿ ಸೇರಿ ಹನ್ನೊಂದು ಝೂಮ್ ಪ್ರೋಗ್ರಾಂಗಳನ್ನು ಆಯೋಜಿಸಿತ್ತು. ಅವರು ಆಗಸ್ಟ್ ತಿಂಗಳ ಕೊನೆಯಲ್ಲಿ KSSVVಗೆ ಒಂದು ಕಾರ್ಯಕ್ರಮವನ್ನು ನಡಿಸಿಕೊಡಲು ಕೇಳಿಕೊಂಡಾಗ ಆ ಹೊಣೆಯನ್ನು ಹೊತ್ತವರು, ಮತ್ತು ಹೆಚ್ಚೆಸ್ವಿ ಹೇಳಿದಂತೆ ’ಸೂತ್ರಧಾರರು’ ಡಾ ಜಿ ಎಸ್ ಶಿವಪ್ರಸಾದ್. ಅವರು ನನ್ನನ್ನೂ ಸಲಹೆ-ಸಹಾಯಕ್ಕೆ ಕರೆದಾಗ ನಾನು ಸಂತೋಷದಿಂದ ಒಪ್ಪಿಕೊಂಡರೂ ಮುಕ್ಕಾಲು ಪಾಲಿಗಿಂತ ಹೆಚ್ಚು ಕೆಲಸವನ್ನು ಮಾಡಿದವರು ಅವರೊಬ್ಬರೇ! ಎಲ್ಲ ಭಾಷಣಕಾರರಿಂದ ಹಿಡಿದು, ಹಾಡುಗಾರರವರೆಗೆ ಹುಡುಕಿ, ಅಲ್ಲದೆ ಪ್ರತಿಯೊಂದು ಹಾಡನ್ನೂ ಸಹ ಅವರೇ ಆಯ್ದು ಪೋಣಿಸಿದರು, ನಿರೂಪಣೆಯನ್ನು ಸಹ ಮಾಡಿದರು. ಪ್ರಸಾದ್ ಅವರಿಗೆ ಕವಿ-ಗಾಯಕರೆಲ್ಲರ ವೈಯಕ್ತಿಕ ಪರಿಚಯವಿದ್ದುದರಿಂದ ಕಾರ್ಯಕ್ರಮ ಅಡೆತಡೆಯಿಲ್ಲದೆ ನೆರೆವೇರಿತು. KSSVVಯನ್ನು ಅದು ಪ್ರಕಟಿಸುವ ಜಾಲಜಗುಲಿಯಾದ ’ಅನಿವಾಸಿ’ಯ ಹೆಸರಲ್ಲೂ ಕೆಲವರು ಗುರುತಿಸುತ್ತಾರೆ. ಅದರ ಸಂಕ್ಷಿಪ್ತ ಪರಿಚಯವನ್ನು ನಾನು ಮಾಡಿಕೊಟ್ಟದ್ದೊಂದೇ ನನ್ನ ಕೆಲಸವಾಗಿತ್ತು.

“ಕಾವ್ಯ ಭಾವ – ಸಂಗೀತ ಸೌರಭ”  ಕಾರ್ಯಕ್ರಮ ಕವಿತೆ, ಅದರ ಭಾವ ಮತ್ತು ಸಂಗೀತಗಳ ಸಮ್ಮಿಲನವಾಗಿತ್ತು. ಭಾಗವಹಿಸಿದ ಹಿರಿಯ ಕವಿ ಹೆಚ್ ಎಸ್ ವೆಂಕಟೇಶ ಮೂರ್ತಿಯವರು ಹೇಳಿದಂತೆ ಆ ದಿನ “ಕೋವಿಡ್ ಸಹ ಜನರನ್ನು ಅಗಲಿಸುವ ಪ್ರಯತ್ನ ಮಾಡಲಿಲ್ಲ, ಕೂಡಿಸಿತ್ತು!”. ಅದನ್ನು ಯುಕೆಯ ವೀಕ್ಷಕರಲ್ಲದೆ ಅಮೆರಿಕಾ, ಭಾರತ, ದಕ್ಷಿಣ ಆಫ್ರಿಕಾ, ಮಲೇಶಿಯಾ ಮತ್ತು ಇಟಲಿಯಿಂದ ಕನ್ನಡಿಗರು ಆಸ್ಥೆಯಿಂದ ಕೂತು ನೋಡಿ ಆನಂದಿಸಿದ್ದರು. ಬೆಂಗಳೂರಿನ ಒಂದು ಸ್ಟುಡಿಯೋದಲ್ಲಿ ಆ ದಿನ ಕವಿಗಳಾದ ಹೆಚ್ ಎಸ್ ವಿ, ಮತ್ತು ಬಿ ಆರ್ ಲಕ್ಷ್ಮಣರಾವ್ ಅಲ್ಲದೆ ಗಾಯಕ ಪಂಚಮ್ ಹಳಿಬಂಡಿ ಸಹ ಕೂಡಿದ್ದರು. ಇದು ತಾಂತ್ರಿಕವಾಗಿ ಝೂಮ್ ಬಿತ್ತರಣೆಗೆ ಅನುಕೂಲವಾಯಿತು. ಅಮೇರಿಕೆಯಿಂದ ಸುನಿತಾ ಅನಂತಸ್ವಾಮಿ (ಮಿಚಿಗನ್) ಮತ್ತು ಅವರ ಸೋದರಿ ಅನಿತಾ ಅನಂತಸ್ವಾಮಿ-ಬರು (ಪೆನ್ಸಿಲ್ವೇನಿಯಾ), ಹಾಗೂ ಬೆಲ್ಫಾಸ್ಟ್ ನಿಂದ ಅಮಿತಾ ರವಿಕಿರಣ್ ಅವರು ಸಹ ಎರಡೆರಡು ಹಾಡುಗಳನ್ನು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಎಲ್ಲರ ಮನದಣಿಸಿದರು. ಅದಕ್ಕೂ ಮೊದಲು ಕವಿತೆ, ಭಾವಗೀತೆ, ಅವುಗಳ ಹಾಡುಗಾರಿಕೆ – ಇವುಗಳ ನಡುವಿನ ವ್ಯತ್ಯಾಸ ಮತ್ತು ಸಂಬಂಧಗಳನ್ನು ತಮ್ಮ ಪೀಠಿಕೆಯಲ್ಲಿ ಇಬ್ಬರೂ ಕವಿಗಳು ಸವಿಸ್ತಾರವಾಗಿ ಹೇಳಿದ್ದಲ್ಲದೇ, ಎರಡನೆಯ ಭಾಗದಲ್ಲಿ ಪ್ರತಿಯೊಂದು ಹಾಡಿನ ಮೊದಲು ಅವುಗಳ ಹಿನ್ನೆಲೆ, ಭಾವ ಮತ್ತು ಅವುಗಳ ರಸಸ್ವಾದವನ್ನು ವಿವರಿಸಿದರು. ಆ ವರದಿಯನ್ನು ಕೆಳಗೆ ಓದಿರಿ.

ಶ್ರೀವತ್ಸ ದೇಸಾಯಿ

ಕಾವ್ಯದ ಭಾವದ ಜೊತೆಗೆ ಸಂಗೀತ ಸೌರಭ ಹರಿಸಿದವರು, ಮತ್ತದನ್ನು ನಮಗೆ ತಂದವರು..

ಬಾಗಿಲಲಿ ಭಾವಗೀತೆ ಅಂತರಂಗದಲಿ ಕವಿತೆರಾಮಶರಣ

‘ಕಾವ್ಯ ಭಾವ – ಸಂಗೀತ ಸೌರಭ’, ಕವಿ ಹಾಗೂ ಗಾಯಕರನ್ನು ಒಂದೇ ವೇದಿಕೆಗೆ ತಂದು, ಕಾವ್ಯ ವಿಶ್ಲೇಷಣೆ – ಗಾನ ಸುಧೆ ಇವೆರಡನ್ನೂ ರಸಿಕರಿಗೆ ತರ್ಪಣ ಮಾಡಿ ಮಾಯಾಲೋಕಕ್ಕೆ ಕರೆದೊಯ್ದ ವಿಶೇಷ ಕಾರ್ಯಕ್ರಮ. ಇದು ಡಾ. ಶಿವಪ್ರಸಾದ್ ಅವರ ಕನಸಿನ ಕೂಸು. ಈ ಕೂಸು ತೂಗಿದ್ದು ಅನಿವಾಸಿ-ಕನ್ನಡ ಬಳಗ (ಯು.ಕೆ) ಗಳ ಜಂಟಿ ತೊಟ್ಟಿಲಲ್ಲಿ ಆಗಸ್ಟ್ ೨೯ರಂದು. ಕೋವಿಡ್ ಕಾಲದಲ್ಲಿ ಜನಪ್ರಿಯವಾಗಿರುವ ಜೂಮ್ ಜಾಲಾಂಗಣದಲ್ಲಿ ಭಾರತ, ಇಂಗ್ಲೆಂಡ್, ಉತ್ತರ ಐರ್ಲೆಂಡ್, ಅಮೇರಿಕ ದೇಶಗಳಲ್ಲಿ ನೆಲೆಸಿರುವ ಕವಿಗಳನ್ನು, ಗಾಯಕರನ್ನು ಒತ್ತಟ್ಟಿಗೆ ತಂದು ಜಗತ್ತಿನೆಲ್ಲೆಡೆ ನೆಲೆಸಿರುವ ರಸಿಕರನ್ನು ತಲುಪಿದ್ದು ಈ ಕಾರ್ಯಕ್ರಮದ ವಿಶೇಷತೆ. ಕವಿಗಳನ್ನು ಪ್ರತಿನಿಧಿಸಿ ನಮ್ಮ ಮೆದುಳನ್ನು ಚುರುಕುಗೊಳಿಸಿದವರು ನಾಡಿನ ಪ್ರಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ (ಎಚ್ಚೆಸ್ವಿ) ಹಾಗೂ ಬಿ. ಆರ್. ಲಕ್ಷ್ಮಣ ರಾಯರು (ಬಿಆರೆಲ್). ತಮ್ಮ ಸುಶ್ರಾವ್ಯ ಗಾಯನದಿಂದ ನಮ್ಮ ಕಿವಿಗಳಿಗೆ ತಂಪೆರೆದವರು ನಮ್ಮ ಅನಿವಾಸಿಯವರೇ ಆದ ಆಪ್ತ ಶ್ರೀಮತಿ ಅಮಿತ ರವಿಕಿರಣ್, ಪ್ರಖ್ಯಾತ ಗಾಯಕ ದಿ.ಮೈಸೂರು ಅನಂತಸ್ವಾಮಿಯವರ ಪುತ್ರಿದ್ವಯರಾದ  ಶ್ರೀಮತಿ ಸುನೀತಾ-ಅನಿತಾ ಅನಂತಸ್ವಾಮಿ ಹಾಗು ಇನ್ನೊಬ್ಬ ಪ್ರಸಿಧ್ಧ ಗಾಯಕ ದಿ. ಯಶವಂತ ಹಳಿಬಂಡಿ ಅವರ ಪುತ್ರ ಪಂಚಮ್ ಹಳಿಬಂಡಿ. 

ಮೊದಲಲ್ಲಿ ಸ್ವಾಗತ ಕೋರಿದವರು ಡಾ. ಶಿವಪ್ರಸಾದ್.  ನಂತರ ಎಚ್ಚೆಸ್ವಿ ಹಾಗೂ ಬಿಆರೆಲ್ ಅವರ ಪರಿಚಯವನ್ನು ಕ್ರಮವಾಗಿ ಕೇಶವ ಕುಲಕರ್ಣಿ ಮತ್ತು ವಿಜಯನಾರಸಿಂಹ ಮನ ತಟ್ಟುವಂತೆ ಮಾಡಿಕೊಟ್ಟರು. ಗಾಯಕರ ಪರಿಚಯವನ್ನು ಡಾ. ಪೂರ್ಣಿಮಾ ಶಿವಪ್ರಸಾದ್ ಮತ್ತು ಶ್ರೀಮತಿ ಅರುಣಾ ಪ್ರಶಾಂತ್ ಅವರು ಒಪ್ಪವಾಗಿ ಮಾಡಿಕೊಟ್ಟರು. ಔಪಚಾರಿಕ ಭಾಗದ ನಂತರದ ಮುಖ್ಯ ಕಾರ್ಯಕ್ರಮವನ್ನು ಎರಡು ಭಾಗಗಳನ್ನಾಗಿ ನಡೆಸಲಾಯಿತು. ಮೊದಲಲ್ಲಿ ಕವಿದ್ವಯರು ಕವಿತೆ ಹಾಗೂ ಭಾವಗೀತೆ ಎಂದರೇನು, ಅವೆರಡೂ ಹೇಗೆ ಒಬ್ಬನೇ ಕವಿಯ ಲೇಖನಿಯಿಂದ ಹೊಮ್ಮುತ್ತವೆ ಎಂದು ವಿವರಿಸಿದರು. ನನ್ನ ವರದಿಯ ಮುಖ್ಯ ಅಂಶ ಡಾ. ಎಚ್ಚೆಸ್ವಿ ಅವರು ಮಾಡಿದ ವಿಶ್ಲೇಷಣೆ. ಬಿಆರೆಲ್ ಅವರ ವಿಶ್ಲೇಷಣೆಯ ವರದಿ ಅನಿವಾಸಿ ಗೆಳೆಯ ನವೀನ್ ಮಾಡಿದ್ದಾರೆ.

ಎಚ್ಚೆಸ್ವಿ ಅವರ ವಿವರಣೆ ಕವಿತೆಯಂತೆ ಚಿಕ್ಕದಾದರೂ ಅರ್ಥದ ವ್ಯಾಪ್ತಿ ಮಾತ್ರ ಅಪಾರ. ಕವಿತೆಗಳೆಲ್ಲ ಗೀತೆಗಳಲ್ಲ. ಕವಿತೆಯ ಭಾವವನ್ನು ಸ್ಫುರಣಗೊಳಿಸುವ ಶಕ್ತಿ ಭಾವಗೀತೆಗಿದೆ. ಭಾವಗೀತೆ ಒಂದು ಸುಕುಮಾರ ರಚನೆ. “ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತೆ” ಎಂದು ವರಕವಿಯೇ ಹೇಳಿದ್ದಾರೆ. ಕೆಲವಷ್ಟು ಸಲ ಭಾವಗೀತೆ ಅರ್ಥಮಾಡಿಕೊಳ್ಳಲು ಸರಳ, ಆದರೆ ಕವಿತೆ ಗಂಭೀರ – ಸಂಕೀರ್ಣ ಎಂದೆನಿಸುವುದು ಸಹಜ. ಎಷ್ಟೋ ಸಲ ಅದು ಸತ್ಯ. ಭಾವಗೀತೆ ಕಾವ್ಯಾಂತರಂಗದ  ಮಾಧುರ್ಯ ಸವಿಯಲು ಅವಕಾಶ ಮಾಡಿಕೊಡುವ ಬಾಗಿಲು. ಸಂಕೀರ್ಣವಾದರೂ ‘ಯಾವ ಮೋಹನ ಮುರಳಿ’ಯ ಆಕರ್ಷಣೆ ‘ಭೂಮಿಗೀತ’ವನ್ನು ತೆರೆಯುತ್ತದೆ; ‘ನಾಕುತಂತಿ’ ಬೇಂದ್ರೆಯವರ ಹುಚ್ಚು ಹಿಡಿಸುತ್ತದೆ.

ಭಾವಗೀತೆಗಳು ಕವಿಯನ್ನು ಜನರ ಮನದೊಳಗಿಳಿಸುವ ಸಾಧನವೆಂದರೂ ಆದೀತು. ಹಾಗಾಗಲು ಅದಕ್ಕೆ ಪೂರಕವಾಗಿ ಗಾಯಕರೂ ಬೇಕು. ಓದಿದಾಗ ಆಗದ ಸಂವೇದನೆಗಳು, ಹೊಸ ಅನುಭವಗಳು ಹಲವು ಬಾರಿ ಗಾಯಕರ ಬಾಯಲ್ಲಿ ಕೇಳಿದಾಗ ಆಗುವುದಿದೆ. ಅದು ಎಲ್ಲ ಗಾಯಕರಿಗೆ ದಕ್ಕುವ ಸಾಮರ್ಥ್ಯವಲ್ಲ.  ಹಲವರು ಹಾಡನ್ನು ಹಾಡಿ ಒಪ್ಪಿಸುವವರು. ಕೆಲವರು ಹಾಡನ್ನು ಅರ್ಪಿಸುವವರು; ವಾಹಕವಾಗಿ ಕವಿತೆಯನ್ನು, ಕವಿಯನ್ನು ಜನಸಾಮಾನ್ಯರ ಮನದಲ್ಲಿ ಬಿತ್ತುವವರು. ಅವರೇ ‘ಹೃದಯ ಗಾಯಕರು’. ಗಾಯಕರು ಕಾವ್ಯಲೋಕದ ಅಪ್ಸರೆ-ಗಂಧರ್ವರು, ಆನಂದ ಲೋಕದ ನಿರ್ಮಾತೃರು. ಪುತಿನ ಹೇಳಿದರು, “ಮಾಡುವವನದಲ್ಲ ಹಾಡು, ಹಾಡುವವನದು.” ಒಂದು ಹೆಜ್ಜೆ ಮುಂದೆ ಹೋಗಿ ಅನಂತಸ್ವಾಮಿಯವರು ಹೇಳುತ್ತಾರೆ, “ಹಾಡುವವನದಲ್ಲ ಸ್ವಾಮಿ, ಅದು ಕೇಳುವವನದು.” ಹಾಡಿಗೆ ಲಿಂಗವಿಲ್ಲ, ಹಾಡುಗನ ಕಂಠದಲ್ಲಿ ಆಹ್ವಾನಿತವಾದಾಗ ಅದು ಲಿಂಗಾತೀತವಾಗುತ್ತದೆ. ಎಚ್ಚೆಸ್ವಿಯವರ ಪಾಂಡಿತ್ಯಪೂರ್ಣ ವಿವರಣೆ ಕೇಳುಗರ ಜ್ಞಾನ ಪರಿಧಿಯನ್ನು ಹಿಗ್ಗಿಸಿ, ಮುಂದಿನ ಕಾವ್ಯ-ಭಾವ-ಗಾನ ಸಮ್ಮಿಲನದ ಹೆಬ್ಬಾಗಿಲನ್ನು ತೆರೆಯಿತು. ಪಂಚಭಕ್ಷ ಪರಮಾನ್ನದ ಸವಿಯುವ ತವಕವನ್ನು ಇಮ್ಮುಡಿಯಾಗಿಸಿತ್ತು.

ಈ ಭಾಗದ ತೆರೆ ಏರಿಸುವ ಗೀತೆಯನ್ನಾಗಿ ಕವಿ ತಮ್ಮದೇ ಆದ ಸುಪ್ರಸಿದ್ಧ ಭಾವಗೀತೆ “ಲೋಕದ ಕಣ್ಣಿಗೆ ರಾಧೆ ಕೂಡ ಎಲ್ಲರಂತೆ ಒಂದು ಹೆಣ್ಣು” ಆಯ್ದುಕೊಂಡಿದ್ದರು. ಇದು ಎಚ್ಚೆಸ್ವಿ, ಧ್ವನಿಸುರುಳಿಗೆ ತಾವೇ ಆಯ್ದ ಹಾಡು. ಇದಕ್ಕೆ ರಾಗ ಸಂಯೋಜಿಸಿದವರು ಅನಂತಸ್ವಾಮಿ. ಹಾಡಿನ ಕೊನೆಯಲ್ಲಿ ಬರುವ ಸಾಲು “ರಾಧೆಯ ಪ್ರೀತಿಯ ರೀತಿ”. ಈ ಸಾಲು ಮರುಕಳಿಸುವಾಗ ‘ಇದು’ ಎಂಬ ಶಬ್ದವನ್ನು ಸೇರಿಸಿದರೆ ಅಭ್ಯಂತರವಿಲ್ಲ ಎಂದು ಕವಿಯ ಅಪ್ಪಣೆ ಪಡೆದು ಹಾಡಿನ ಮೆರಗನ್ನಿಷ್ಟು ಜಾಸ್ತಿ ಮಾಡಿದರು ಅನಂತಸ್ವಾಮಿ ಎಂದು ನೆನಪನ್ನು ಮೆಲಕು ಹಾಕಿದರು. ಹೇಗೆ ಅಪ್ರತಿಮ ಗಾಯಕರು ಉತ್ತಮ ಕವಿಗೆ ಸಮನಾಗಿ ಕಾವ್ಯದ ಮೌಲ್ಯವನ್ನು ಮೇಲೊಯ್ಯುತ್ತಾರೆ ಎಂದು ಉದಾಹರಿಸಿದರು.

ಎಚ್ಚೆಸ್ವಿಯವರ ‘ನಾಕುತಂತಿ’ ವಿಶ್ಲೇಷಣೆ ನಮಗೆ ಆ ಸಂಕೀರ್ಣ ಕವನದ ಹಲವು ಮುಖಗಳನ್ನು  ಅನಾವರಣಗೊಳಿಸಿತು. ಸ್ಥೂಲವಾಗಿ ಇದೊಂದು ನಾಲ್ಕು ತಂತಿಗಳಿರುವ ವಾದ್ಯ. ಹಾಡಿನ ಶಬ್ದಗಳಲ್ಲಿ ಬರುವಂತೆ ಈ ತಂತಿಗಳು ಗಂಡು, ಹೆಣ್ಣು, ಮಿಲನ ಹಾಗೂ ಮಗು – ಸಂಸಾರದ ಸಾರ. ಮಿಲನ ಇಲ್ಲಿ ಬರೀ  ಭೋಗವಾಗದೇ ಸೃಷ್ಟಿಶೀಲವಾದ ವಿಶಿಷ್ಟ ಪದವಾಗುತ್ತದೆ. ಆಕಾಶ-ಭೂಮಿ ಮಿಲನಿಸಿ ಆಗುವ ಸೃಷ್ಟಿ; ಪ್ರಕೃತಿ-ಪುರುಷರ ಮಿಲನದ ಸೃಷ್ಟಿ (ಚಿತ್ತಿ ಮಳಿ ತತ್ತಿ ಹಾಕುತಿತ್ತು ಸ್ವಾತಿ ಮುತ್ತಿನೊಳಗ). ಮಾತು-ಧಾತುಗಳ ಮಿಲನದಿಂದಾದ ಕವನ; ಅರ್ಥ-ಲಯ (ವಾಗರ್ಥ) ಮಿಲನಗಳಿಂದಾದ ಕಾವ್ಯ (ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ, ಗಣನಾಯಕ, ಮೈ ಮಾಯಕ ಸೈ ಸಾಯಕ ಮಾಡಿ). ಇದಕ್ಕೆ ಸರಿ ಸಮನಾಗಿ ರಾಗ ಸಂಯೋಜನೆ ಮಾಡಿ ಹಾಡಿದರು ಅನಂತಸ್ವಾಮಿ. ಇದು ಭಾವಗೀತೆ- ಕವಿತೆಗಳ ಭಿನ್ನತೆಯ ಕಲ್ಪನೆಯನ್ನು ತಲೆಕೆಳಗು ಮಾಡುವ ಸೃಷ್ಟಿ. ಗಾಯಕ ಇದರ ವಿಶಿಷ್ಟತೆಯನ್ನು ಆಂತರ್ಯಗೊಳಿಸಿದ್ದಾರೆ. ಇಬ್ಬರು ಗಾರುಡಿಗರು ಸೇರಿ ವಿಚಿತ್ರ ಸ್ಥಿತಿಯನ್ನು ನಿರ್ಮಿಸಿದ ಗೀತೆ ಎಂದು ಸಮರ್ಥವಾಗಿ ವಿವರಿಸಿದರು.

ನವ್ಯ ಕಾವ್ಯದಲ್ಲಿ ಪದೇ ಪದೇ ಬರುವ ಶಕ್ತಿಯ ಅವಾಹನೆಯನ್ನು ತೋರಿಸುವ ಕುವೆಂಪು ಅವರ ‘ಬಾ ಇಲ್ಲಿ ಸಂಭವಿಸು’ ಗೀತೆಯಲ್ಲಿ  ಕವಿ ಹೇಗೆ ಶಕ್ತಿಯನ್ನು ತನ್ನ ಎದೆಯಲ್ಲಿ ಬಂದು ನೆಲೆಯಾಗು ಎಂದು ಕರೆಯುತ್ತಾನೆ ಎಂದು ವಿವರಿಸಿದರು. ಅಪೂರ್ವ ಶಕ್ತಿ ಹೇಗೆ ನಮ್ಮೆದುರು ಮತ್ತೆ ಮತ್ತೆ ಮೈದೋರುತ್ತದೆ ಹಲವು ರೂಪಗಳಲ್ಲಿ (ರಾಮ, ಕೃಷ್ಣ, ಬುದ್ಧ, ಜೀಸಸ್, ಗಾಂಧಿ), ಯಾವುದೋ ಸ್ಥಳಗಳಲ್ಲಿ (ಅರಮನೆ, ಸೆರೆಮನೆ, ಕಾಡು, ಗುಡಿಸಲು). ಅವತರಿಸುವ ಶಕ್ತಿಯನ್ನು ದಾರಿ ತೋರಿಸಲು ಆಹ್ವಾನಿಸಿದ್ದಾರೆ ಕವಿ ಇಲ್ಲಿ. ಹಾಡಿನ ಹೃದಯಕ್ಕಿಳಿದು ಸಿ.ಅಶ್ವಥ್ ಅಷ್ಟೇ ಶಕ್ತಿಯುತವಾಗಿ ಹಾಡಿ ಕೇಳುಗನಲ್ಲಿ ಭಾವಾವೇಶವನ್ನೇ ತುಂಬಿದ್ದಾರೆ. ಗಾಯಕನ ಶೈಲಿ ಶಕ್ತಿಯನ್ನು ಹೆದರಿಸಿ ಬರಿಸುವಂತಿದೆ ಎಂದು ನಗೆಚಾಟಿಕೆ ಹಾರಿಸಿದರು.

ತಮ್ಮ ಪರೋಕ್ಷ ಗುರುಗಳಾದ ನಿಸಾರ್ ಅಹಮದ್ ಅವರ ‘ಈ ದಿನಾಂತ’ ಕವಿತೆಯಲ್ಲಿ ಬರುವ ಗಂಭೀರ ಶಬ್ದಗಳಾದ ದಿನಾಂತ, ಉಪವನ, ಸಾಮಾನ್ಯ ಶಬ್ದಗಳಾದ ಸಂಜೆ, ಪಾರ್ಕ್ ಗಳನ್ನ ರಮ್ಯ, ರೊಮ್ಯಾಂಟಿಕ್ ಲೋಕಕ್ಕೆ ಎಳೆದೊಯ್ಯುತ್ತವೆಂದು ಭಾವುಕರಾದರು. ಕೊನೆಯಲ್ಲಿ ಡಿವಿಜಿಯವರನ್ನು ಆಧುನಿಕ ಕಾವ್ಯಸಂದರ್ಭದ ತತ್ವಪದಕಾರನೆಂದು ಬಣ್ಣಿಸಿದರು.

ಪ್ರತಿಯೊಬ್ಬ ಗಾಯಕರೂ ತಮ್ಮ ‘ಹೃದಯ ಗಾಯನ’ದಿಂದ ನಮ್ಮನ್ನು ರಂಜಿಸಿದರು. ಅವರ ಗಾಯನಕ್ಕೆ ಹೆಚ್ಚಿನ ಮೆರುಗೆಂದರೆ ಕೇವಲ ತಾಳದ ಸಾಂಗತ್ಯ (ಹಳಿಬಂಡಿಯವರ ಹೊರತಾಗಿ). ಕಾವ್ಯದ ಹೊಳಪು ಇದರಿಂದ ಹೆಚ್ಚಾಗಿ ಪ್ರಕಾಶಿತವಾಯಿತೆಂಬುದು ನನ್ನ ಅಂಬೋಣ. ಅಮಿತಾ ತಂದ ಸೂಕ್ಷ್ಮ ನಾವೀನ್ಯತೆಗಳು ಮೂಲ ಸಂಯೋಜನೆಗೆ ಹೊಸ ಮೆರುಗನ್ನು ನೀಡಿತು. ಇವರು ’ಅನಿವಾಸಿ’ಯವರೇ ಎಂಬ ಆಪ್ತತೆ ಮನಸ್ಸಿಗೆ ಕೊಂಚ ಹೆಚ್ಚೇ ಮುದವನ್ನು ಕೊಟ್ಟಿತು. ನವೀನ ಅವರ ಆಭಾರಮನ್ನಣೆ ಸಮರ್ಪಕವಾಗಿ ಕಾರ್ಯಕ್ರಮಕ್ಕೆ ತೆರೆಯೆಳೆಯಿತು. ಇಂಥ ಸುಂದರ ಅಪರಾಹ್ನವನ್ನು ಸಜ್ಜುಗೊಳಿಸಿದ ಡಾ.ಶಿವಪ್ರಸಾದ್ ಹಾಗೂ ನಿರ್ವಹಿಸಿದ ಕನ್ನಡ ಬಳಗ (ಯು.ಕೆ) ಗೂ, ಅನಿವಾಸಿ (ಕೆ.ಎಸ್.ಎಸ್.ವಿ)ಗೂ ನಾವೆಲ್ಲ ಆಭಾರಿಗಳು.

– ರಾಮ್.

ಚಿತ್ರಕೃಪೆ: ಗೂಗಲ್

‘ಸುಬ್ಬಾಭಟ್ಟರ ಮಗಳೇ ಇದೆಲ್ಲಾ ನಂದೇ ತೊಗೊಳ್ಳೆ’ ಬಿಆರೆಲ್ ಶೈಲಿ – ಸಿ ನವೀನ್

ಕನ್ನಡ ಬಳಗಕ್ಕೆ ಈ ನಾವಿನ್ಯ ’ಝೂಮ್’ ಕಾರ್ಯಕ್ರಮ, ‘ಕೋವಿಡ್’ ಒದಗಿಸಿಕೊಟ್ಟ ವಿಚಿತ್ರ ಅವಕಾಶ.  ಇಲ್ಲಿಯವರೆಗೂ ಮುಖಾನುಮುಖಿ ನೋಡಿ ಆನಂದಿಸುತ್ತಿದ್ದ ನಮಗೆ ಇದೊಂದು ವಿಶಿಷ್ಟ ಅನುಭವವಾದರೂ, ಸಂತೃಪ್ತಿಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ.  ಕಾವ್ಯ ಭಾವ – ಸಂಗೀತ ಸೌರಭ ಮೇಲುನೋಟಕ್ಕೆ ಎರಡು ಭಾಗಗಳೆನಿಸಿದರೂ ಅವಿಭಾಜ್ಯ ಅಂಗಗಳಾಗಿ ನಮ್ಮನ್ನು ತಣಿಸಿದಲ್ಲದೆ, ಭಾವಗೀತೆಯ ಸಾರಾಂಶವನ್ನು ಮನದಟ್ಟು ಮಾಡಿಕೊಡಲು ಸಮಕಾಲೀನ ಪ್ರಸಿದ್ಧ ಕವಿಗಳನ್ನು ನಮ್ಮ ಮುಂದೆಯೇ ಕೂರಿಸಿ ಅದೆಷ್ಟು ಆನಂದ ಉಂಟುಮಾಡಿತು.

ಬಳಗದ ಬಹಳಷ್ಟು ಸದಸ್ಯರಿಗೆ ಕವಿ ಶ್ರೀ ಬಿ.ಆರ್.ಲಕ್ಷ್ಮಣರಾವರು ಪರಿಚಿತರೇ.  2015ರಲ್ಲಿ ನಮ್ಮ ಯುಗಾದಿ ಕಾರ್ಯಕ್ರಮಕ್ಕೆ ದಯಮಾಡಿಸಿ ಅವರ ಕಾವ್ಯ ಪ್ರಜ್ಞೆಯನ್ನು ನಮ್ಮೊಡನೆ ಹಂಚಿಕೊಂಡಿದ್ದು ಮರೆಯಲಾಗದ್ದು.  ತಮ್ಮ ಮಿತ್ರ, ಕವಿ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರೊಡಗೂಡಿ ಬೆಂಗಳೂರಿನ ಕ್ರಾಸ್ಫೇಡ್ ಸ್ಟುಡಿಯೊದಿಂದ ಅದೆಷ್ಟು ಸರಳವಾಗಿ ನಮಗೆ ಭಾವಗೀತೆಯ ಬಗ್ಗೆ ವಿವರಿಸಿದರು.  ಇವರ ಕಿರು ಪರಿಚಯವನ್ನು ಶ್ರೀ ವಿಜಯನರಸಿಂಹರವರು ಸಂಕ್ಷಿಪ್ತವಾಗಿ ಮಾಡಿಕೊಟ್ಟರು.  ಇವರ ಸಾಧನೆ ಅನೇಕ ಪ್ರಾಕಾರಗಳನ್ನು ಹೊಂದಿದೆ: ಕವನ ಸಂಕಲನ, ಕಥಾಸಂಕಲನ, ನಾಟಕಗಳು, ಹನಿಗವನಗಳು, ಇತ್ಯಾದಿ.  ಸಾಹಿತ್ಯ ಅಕಾಡಮಿ, ರಾಜ್ಯೊತ್ಸವ ಮತ್ತೂ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ ಇವರಿಗೆ.  ಬಿ ಆರ್ ಎಲ್ ರ ಅನೇಕ ಕೃತಿಗಳು ಭಾಷಾಂತರಗೊಂಡಿವೆ.  ಚಲನ ಚಿತ್ರಗಳು ಇವರ ಕಥೆಗಳನ್ನು ಅಳವಡಿಸಿಕೊಂಡಿವೆ.

ಭಾವಗೀತೆಗಳ ಬಗೆಗಿನ ವಿವರಣೆ ನಮಗೆ ಸಾಕಷ್ಟು ದೊರೆಯಿತು.  ಜನಸಾಮಾನ್ಯರನ್ನು ರಂಜಿಸಿ,  ಸಂಗೀತರಚನೆಗೆ ಅನುಕೂಲವಾಗುವಂತಹ ಭಾವಗೀತೆಯ ಉದ್ಗಮ 18ನೇ ಶತಮಾನದಲ್ಲಿ ವರ್ಡ್ಸವರ್ತ್ ಮತ್ತು ಕೊಲ್ರಿಡ್ಜರವರ ‘ಲಿರಿಕಲ್ ಬಲ್ಲಾಡ್ಸ’ (Lyrical Ballads) ಮೂಲಕ.  ಇದು ಸಾಹಿತ್ಯ ಲೋಕದಲ್ಲಿ ಒಂದು ಹೊಸ ಚಳುವಳಿಯನ್ನೇ ಆರಂಭಿಸಿತು.  ನಮ್ಮ ಕನ್ನಡಕ್ಕೂ ಇದರ ಪ್ರಭಾವ ಹರಿದು, ನಮ್ಮ ನೆಚ್ಚಿನ ಕವಿಗಳಾದ ಬಿ. ಎಮ್. ಶ್ರೀಕಂಠಯ್ಯ, ಕುವೆಂಪು, ಬೇಂದ್ರೆ, ಪುತಿನ, ನರಸಿಂಹಸ್ವಾಮಿ, ಶಿವರುದ್ರಪ್ಪ ಮತ್ತು ಇತರರು ತಮ್ಮ ಕಾವ್ಯರಚನೆಯಿಂದ ನಮ್ಮ ಮನಸೂರೆಗೊಂಡಿದ್ದಾರೆ.

ಕವಿತೆ ಮತ್ತು ಭಾವಗೀತೆಯ ವ್ಯತ್ಯಾಸವನ್ನು ಶ್ರೀ ಲಕ್ಷ್ಮಣರಾವರು ತುಂಬ ಸರಳವಾಗಿ ಆದರೂ ಸುದೀರ್ಘವಾಗಿ ನಮ್ಮ ಮುಂದಿಟ್ಟರು.  ಕವಿತೆ ಕವಿಯ ಒಂದು ಸಂಕೀರ್ಣ ಛಂದೋಬದ್ಧವಾದ ರಚನೆಯಾದರೆ, ಭಾವಗೀತೆ ಸರಳವಾದ ಎಲ್ಲ ಜನರಿಗೂ ಅರ್ಥವಾಗುವಂತಹ, ಹಾಡಲೂ ಅನುಕೂಲವಾಗುವಂತಹ ಕೃತಿಯೆಂದರು.  ಉದಾಹರಣೆ ಕೊಡುತ್ತ ಬಿಆರೆಲ್ ಹೀಗೆ ವಿವರಿಸಿದರು: ಬೇಂದ್ರೆಯವರ ‘ಜೋಗಿ’, ಅಡಿಗರ ‘ರಾಮನವಮಿ ದಿವಸ’ ಮಹಾನ್ ಕೃತಿಗಳು; ಆದರೆ ಅವನ್ನು ಅರ್ಥ ಮಾಡಿಕೊಳ್ಳಲು ಅಥವಾ ಹಾಡಿಗೆ ಅಳವಡಿಸಿಕೊಳ್ಳಲು ಕಠಿನವಾಗಬಹುದು. ಭಾವಗೀತೆ ಹೃದಯಕ್ಕೆ ನೇರವಾಗಿರುವಂತಹ ಮತ್ತು ಸುಲಭವಾಗಿ ಸಂಗೀತ ರಚನೆಯೊಂದಿಗೆ ಹಾಡಿನ ಮೂಲಕ ಹೊರಹೊಮ್ಮುವ ಸಂಯೋಜನೆ.  ಕವಿತೆ ಎಲ್ಲಿಂದಲೊ ಹುಟ್ಟಿ, ಅನೇಕ ಉಪ ನದಿಗಳನ್ನು ಸೇರಿಸಿಕೊಂಡು ಹರಿದು ಸಾಗರ ಸೇರುವಂತಾದರೆ, ಭಾವಗೀತೆ ಒಂದು ಸಣ್ಣ ಕೊಳದಲ್ಲಿ ವರ್ತುಲಾಕಾರದ ತರಂಗವೆಬ್ಬಿಸಿ ತಕ್ಷಣ ಮನವರಿಕೆಯಾಗುವಂತಹದು.  ಕವಿತೆ ರಚಿಸುವಾಗ ಕವಿಯ ಧ್ಯೇಯ ಸಂಕೀರ್ಣತೆ, ಛಂದೋಬದ್ಧತೆ, ಲಯಬದ್ಧತೆಗಳೊಂದಿಗೆ ಕಾವ್ಯದ ವಸ್ತುವನ್ನು ವೈವಿಧ್ಯಮಯವಾಗಿ ವಿವರಿಸುವುದರಲ್ಲಿ ಅಡಗಿರುತ್ತದೆ.  ಇದನ್ನು ಹಾಡಿನ ರೂಪದಲ್ಲಿ ತರಲು ಸಾಧ್ಯವೆ ಅನ್ನುವ ಯೋಜನೆ ಇಲ್ಲಿ ಅಸಂಗತವಿರಬಹುದು.  ಆದರೆ ಭಾವಗೀತೆಗಳಿಗೆ ಮತ್ತು ಅವುಗಳ ರಚನೆಕಾರರಿಗೆ ಸಾಕಷ್ಟು ಸ್ವಾತಂತ್ರ್ಯ ಇರುವುದರಿಂದ ಭಾವನೆಗಳನ್ನು ಎತ್ತಿ ಹಿಡಿಯುವುದರಲ್ಲಿ ಯಶಸ್ವಿಯಾಗಿ ಜನಮನ ಮುಟ್ಟುತ್ತವೆ.  ಭಾವಗೀತೆಗಳಲ್ಲಿನ ಭಾವ ಭಕ್ತಿಯಿರಬಹುದು, ಪ್ರೀತಿಯಿರಬಹುದು ಅಥವಾ ವಿಷಾದವೂ ಇರಬಹುದು.  ಕವಿತೆ ಓದಲು ಬಹಳ ಚೆನ್ನಾಗಿರಬಹುದಾದರೆ, ಭಾವಗೀತೆ ಗಾಯಕರು ತಮ್ಮ ಮಧುರ ಕಂಠದಲ್ಲಿ ಹಾಡಿ ಜನಸಾಮಾನ್ಯರ ಮನ ಮುಟ್ಟುವಂತೆ ಮಾಡಲು ಅವಕಾಶ ಮಾಡಿಕೊಡುವುದು.  ಈ ದಿಸೆಯಲ್ಲಿ ಪ್ರಸಿದ್ಧ ಗಾಯಕರಾದ ಕಾಳಿಂಗರಾಯ, ಸಿ ಅಶ್ವತ್ಥ್, ಮೈಸೂರು ಅನಂತಸ್ವಾಮಿ ಮುಂತಾದವರು ಭಾವಗೀತೆಗಳನ್ನು ಜನಪ್ರಿಯಗೊಳಿಸಿದ್ದಾರೆ. ಚಲನ ಚಿತ್ರ ಗೀತೆಗಳ ಬಗ್ಗೆಯೂ ಪ್ರಸ್ತಾಪಿಸಿ, ಅವು ಸಂದರ್ಭಕ್ಕೆ ತಕ್ಕಂತೆ ಬರೆಯುವಂಥದು, ಗೀತೆ ರಚನೆಗೆ ಅವಕಾಶವಿರುವಂತಹುದಲ್ಲ, ಒಂದು ತರಹ ಖಾಲಿ ಜಾಗ ತುಂಬುವ (fillers) ಪ್ರಯತ್ನ ಎಂದರು.  ಇಷ್ಟೆಲ್ಲ ಸ್ಥೂಲ ಪರಿಚಯ ಮಾಡಿಕೊಟ್ಟರೂ, ಇನ್ನೂ ಬಹಳಷ್ಟು ಬಿಟ್ಟಿರಬಹುದು, ಅದನ್ನು ವೆಂಕಟೇಶಮೂರ್ತಿಯವರು ವಿವರಿಸುತ್ತಾರೆ ಅನ್ನುವ ವಿನಮ್ರತೆ ಲಕ್ಷ್ಮಣರಾವರದು.

ಈ ನಂತರ ನಮ್ಮ ಕಾರ್ಯಕ್ರಮದ ಎರಡನೆಯ ಭಾಗವಾದ ‘ಸಂಗೀತ ಸೌರಭ’ದಲ್ಲಿ ನಮ್ಮ ಗಾಯಕರು ಹಾಡುವ ಮೊದಲು ಪ್ರತಿ ಗೀತೆಗೆ ಒಂದು ಸಣ್ಣ ಮುನ್ನುಡಿ ಕೊಟ್ಟರು.  ಹಾಡಿನ ಭಾವರ್ಥ ಜೊತೆಗೆ ಕವಿಯ ಕಿರು ಪರಿಚಯ, ಮತ್ತು ಹಾಡಿದಾದಮೇಲೆ ಗಾಯಕ ಗಾಯಕಿಯರಿಗೆ ಸಲ್ಲಿಸಿದ ಪ್ರಶಂಸೆ ಇವರಲ್ಲಿ ಎದ್ದು ಕಾಣಿಸಿದಂಥ ದೊಡ್ಡ ಗುಣ.  ತಮ್ಮದೇ ಆದ ರಚನೆ ‘ಸುಬ್ಬಭಟ್ಟರ ಮಗಳೇ ಇದೆಲ್ಲಾ ನಂದೆ ತಗೊಳ್ಳೆ’ ಬಗ್ಗೆ ಕೊಟ್ಟ ಸ್ವಾರಸ್ಯಕರ ವಿವರಣೆ ಬಹಳ ಸೊಗಸಾಗಿತ್ತು; ಅಷ್ಟೇ ಅಲ್ಲ, (ಕೇಳುಗರು ತಪ್ಪು ಕಲ್ಪಿಸುವುದನ್ನು ತಪ್ಪಿಸಲು!) ಸುಬ್ಬಾಭಟ್ಟರು ತಮ್ಮ ಮಾವನೇ ಎಂದೂ, ಆ ಹಾಡು ಬರೆದದ್ದು ತಮ್ಮ ಹೆಂಡತಿಗಾಗಿಯೇ ಎಂದೂ ಹೇಳಿ ನಗೆ ಚಟಾಕಿ ಹಾರಿಸಿದರು.  ಈ ಹಾಡನ್ನು ಪಂಚಮ್ ಹಳಿಬಂಡಿ ಅದ್ಭುತವಾಗಿ ಹಾಡಿದರು.  ಅದೇ ರೀತಿ ಅಡಿಗರ ಗಂಭೀರ ಗೀತೆ ‘ಅಳುವ ಕಡಲೊಳು ತೇಲಿ ಬರುತಲಿದೆ’, ಶಿವರುದ್ರಪ್ಪನವರ ‘ಶಕ್ತಿಯ ಕೊಡು’, ರಾಜರತ್ನಂರವರ ‘ಮಡಕೇರಿಮೇಲ್ ಮಂಜು’, ಮತ್ತು ನರಸಿಂಹಸ್ವಾಮಿಯವರ ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ಎನ್ನುವ ಭಾವಗೀತೆಗಳನ್ನು ತಮ್ಮದೆ ವಿಶಿಷ್ಟ ರೀತಿಯಲ್ಲಿ ನಮಗೆಲ್ಲ ಪರಿಚಯಿಸಿದರು. ಈ ಭಾವಗೀತೆಗಳನ್ನು ಅನಿತ ಅನಂತಸ್ವಾಮಿ, ಸುನೀತ ಅನಂತಸ್ವಾಮಿ ಮತ್ತು ಪಂಚಮ್ ಹಳಿಬಂಡಿಯವರು ಹಾಡಿದರು.

ಕನ್ನಡ ಕಾವ್ಯಲೋಕದ ದಿಗ್ಗಜರಾದ ಶ್ರೀ ವೆಂಕಟೇಶ ಮೂರ್ತಿಯವರು ಮತ್ತು ಶ್ರೀ ಲಕ್ಷ್ಮಣ ರಾವರು ನಮ್ಮೊಡನೆ ಬೆರೆತು, ತಮ್ಮ ವಾಗ್ಝರಿಯಿಂದ ಕೊವಿಡ್ ತಂದ ಒಂಟಿತನವನ್ನು ಬಹಳಷ್ಟು ದೂರ ಮಾಡಿದರು ಅನ್ನುವುದರಲ್ಲಿ ಸಂಶಯವೇ ಇಲ್ಲ.

– ಸಿ ನವೀನ್

ಕೊನೆಯ ಕೊಸರು: ಪೂರ್ತಿ ಕಾರ್ಯಕ್ರಮದ ಯುಟ್ಯೂಬ್ ವಿಡಿಯೋ ಕೊಂಡಿ (link) ಇಲ್ಲಿದೆ, ನೋಡಿ.

7 thoughts on “ಕಾವ್ಯ ಭಾವ – ಸಂಗೀತ ಸೌರಭ – ೨೯ ಆಗಸ್ಟ, ೨೦೨೦

  1. ಪ್ರಸಾದ್ ಅವರ ಕನಸಿನ ಈ ಕಾರ್ಯಕ್ರಮ ಅನನ್ಯವಾಗಿತ್ತು. ಕೆಬಿಯುಕೆಯಲ್ಲಿ ಎಚ್ಎಸ್ ಅವರು ಬಂದಾಗ ಇದೇ ತರಹದ ಕಾರ್ಯಕ್ರಮ ಮನಸಿನಲ್ಲಿ ಇನ್ನೂ ಹಚ್ಚಹಸಿರಾಗಿದೆ.

    ಎಚ್ಎಸ್ ಮತ್ತು ಬಿ ಆರ್ ಅವರು ಕೊಟ್ಟ ವಿವರಣೆಗಳು ಮತ್ತು ಹಿನ್ನೆಲೆ ಸಂಗೀತದ ಅಬ್ಬರ ಮತ್ತು ಇಂಟರ್ ಫೆರನ್ಸ್ ಇಲ್ಲದೇ ಭಾವಗೀತೆಗಳು ಅರ್ಥ ತುಂಬಿ ಹೊಮ್ಮಿದವು.

    ಮುತುವರ್ಜಿಯಿಂದ ಲೇಖನ ಬರೆದ ಅನಿವಾಸಿ ಸದಸ್ಯರಿಗೆ ಮತ್ತು ಸಂಪಾದಕರಿಗೆ ವಂದನೆಗಳು,

    ಕೇಶವ

    Like

  2. ಈ ಕಾರ್ಯಕ್ರಮವನ್ನು ಮೊದಲಿಂದ ಕೊನೆವರೆಗೆ ನೋಡಿದ್ದರೂ ವಿವರಣೆಯನ್ನು ಓದಿ ಮತ್ತೊಮ್ಮೆ ಅದರ ಮಾಧುರ್ಯವನ್ನು ಸವಿದಂತಾಯಿತು.
    ಬಗಲಲ್ಲಿ ಭಾವಗೀತೆ ಅಂತರಂಗದಲ್ಲಿ ಕವಿತೆ,, ಬಹು ಸುಂದರ ಶೀರ್ಷಿಕೆ.

    ನವೀನ್ ಅವರಿಂದ ಅನಿವಾಸಿಗೆ ಹೆಚ್ಚಿನ ಬರಹಗಳು ಸಲ್ಲಲಿ.

    Like

    • ಧನ್ಯವಾದಗಳು. ದಯವಿಟ್ಟು ಕೊನೆಯಲ್ಲಿ ತಮ್ಮ ಹೆಸರು ಹಾಕಿ.

      Like

  3. ಕಾರ್ಯಕ್ರಮವನ್ನೇ ನೋಡಿದವರಿಗೆ ಇಂಥ ವರದಿಯನ್ನು ಓದುವ ಉತ್ಸಾಹ ಇರುತ್ತದೆಯೇ ಅಂತ ಪ್ರಶ್ನಿಸ ಬಹುದು. ಆದರೆ KSSVV ಹುಟ್ಟಿದಾಗಿನಿಂದ ಅದರದೇ ಬ್ಲಾಗ್ ಅನ್ನಿ ಈ-ಮ್ಯಾಗಝಿನ್ ಅನ್ನಿ, ಅದರಲ್ಲಿ ಕನ್ನಡ ಬಳಗ ಯು ಕೆ ಯ ದೀಪಾವಳಿ, ಉಗಾದಿ, ಮತ್ತು ಸ್ಪೇಶಲ್ ಕಾರ್ಯಕ್ರಮಗಳ ವರದಿಗಳು ತಪ್ಪದೇ ಪ್ರಕಟವಾಗುತ್ತ ಬಂದಿವೆ.. ಈಗ ನಮ್ಮ ಬ್ಲಾಗ್ ”ಅನಿವಾಸಿ” ಆಗಿದೆ. ಅನಿವಾಸಿ ನಮ್ಮ ಚಟುವಟಿಕೆಗಳ ಐತಿಹಾಸಿಕ ದಾಖಲೆಯೂ ಸಹ. ಸಿನಿಮಾ, ನಾಟಕ ನೋಡಿದ ಮೇಲೆಯಾಗಲಿ. ಕಥೆ-ಕಾದಂದರಿ ಓದಿದ ಮೇಲೆಯಾಗಲಿ ಮರುದಿನ ಪತ್ರಿಕೆಗಳಲ್ಲಿ ಅದರ ಬಗ್ಗೆ ವರದಿ ಅಥವಾ ವಿಮರ್ಶೆಯನ್ನು ಕಾತುರದಿಂದ ಕಾಯ್ದು ಓದುವ ಹವ್ಯಾಸ ಹಲವರಿಗೆ. ಅದರಲ್ಲೂ ಕೆಲ ಸಿದ್ಧಹಸ್ತರು ತಮ್ಮ ಅನುಭವಗಳನ್ನೂ ಸೇರಿಸಿ, ತಮ್ಮದೇ ಆದ ಶೈಲಿಯಲ್ಲಿ, ಮತ್ತು ಒಮ್ಮೊಮ್ಮೆ ಹೊಸ ಮಾಹಿತೆಗಳನ್ನು ಸೇರಿಸಿ ಬರೆಯುವದನ್ನು ಓದುವದರಲ್ಲಿ ಸಿಗುವ ಆನಂದವೇ ಬೇರೆ. ಜೊತೆಗೆ ಓದುವಾಗ ಓದುಗನು ತಾನೂ ಮನದಲ್ಲೇ ಆ ಘಟನೆ, ಸಂವಾದಗಳನ್ನು ’ರಿ ಪ್ಲೇ’ ಮಾಡಿ ರಸಾಸ್ವಾದನೆ ಮಾಡುವ ಅವಕಾಶವೂ ಇರುತ್ತದೆ. ಇವೆಲ್ಲವನ್ನೂ ಅಳವಡಿಸಿಕೊಂಡು ನಮ್ಮ ಮುಂದೆ ನಿಂತಿದೆ ಮೇಲಿನ ವರದಿ. ಅದನ್ನು ಲೇಖಕರಿಂದ ಬರೆಸಿ, ಸಂಗ್ರಹಿಸಿ ಪ್ರಕಟಿಸಿದ ಸಂಪಾದಕರಿಗೂ ನೆನಪಿಸಿ ಕೊಟ್ಟ ’ವಿಮರ್ಶಕ’ ಲೇಖಕರಿಗೂ ಅಬಿನಂದನೆಗಳು. ಜೊತೆಗೆ ಕೊನೆಯಲ್ಲಿ ಕಾರ್ಯಕ್ರಮದ ಯೂ ಟೂಬ್ ಕೊಂಡಿಯೂ ಇರುವದರಿಂದ ಮತ್ತೊಮ್ಮೆ ನೈಜ ದನಿಯಲ್ಲೆ ಭಾಷಣ ಮತ್ತು ಹಾಡುಗಳನ್ನು ಕೇಳುವ ಸಾಧ್ಯತೆ ಇರುವುದು ಇನ್ನೊಂದು ಬೋನಸ್. ಈ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವಿರೆಂದು ನನ್ನ ಕೋರಿಕೆ.

    Like

  4. ಶ್ರೀವತ್ಸ , ರಾಮ್ ಮತ್ತು ನವೀನ್ ಅವರಿಗೆ ಧನ್ಯವಾದಗಳು. ಸವಿವರವಾದ ವರದಿ. ನೀವೆಲ್ಲಾ ಕವಿಗಳು ಹೇಳಿದ ಮಾತುಗಳನ್ನು ಚೆನ್ನಾಗಿ ಗ್ರಹಿಸಿ ಭಾವಗೀತೆ ಎಂದರೇನು ಎಂಬ ವಿಚಾರದ ಬಗ್ಗೆ ತಿಳಿಪಡಿಸಿದ್ದೀರಿ. ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಹಾಡುಗಳ ಕಾವ್ಯಾರ್ಥವನ್ನು ನಮ್ಮ ನೆನಪಿಗೆ ಮತ್ತೆ ತಲುಪಿಸಿದ್ದೀರಿ. ನನಗೆ ತಿಳಿದ ಮಟ್ಟಿಗೆ ನನ್ನ ಮಿತ್ರರಾದ ಸಿ. ನವೀನ್ ಅವರು ಅನಿವಾಸಿಯಲ್ಲಿ ಬರೆದಿರುವ ಮೊದಲ ಲೇಖನ ಇದಾಗಿದೆ , ಉತ್ತಮ ಪ್ರಯತ್ನ , ಅಭಿನಂದನೆಗಳು ಹೀಗೆ ಬರೆಯುತ್ತಿರಿ ನವೀನ್.

    Like

  5. ಬಹಳ ಉತ್ತಮವಾದ ಕಾರ್ಯಕ್ರಮವಾಗಿತ್ತು , ಇದೆ ರೀತಿ ಮುಂದೆವರೆಸಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.