“ಆಚಾರ್ಯ ದೇವೊಭವ” ಎನ್ನುತ್ತದೆ ನಮ್ಮ ಸಂಸ್ಕಾರ. ಉತ್ತಮ ಗುರುವಿನ ಕಾಣಿಕೆ, ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಇಡಿಯ ಸಮಾಜವನ್ನು ಉದ್ಧಾರ ಮಾಡಬಲ್ಲದು. ನಮ್ಮ ಬದುಕಿನ ಜಂಜಾಟದಲ್ಲಿ, ನಮ್ಮನ್ನು ಉತ್ತೇಜಿಸಿದ, ರೂಪಿಸಿದ ಗುರುಗಳನ್ನು ನಾವು ನೆನಪಿಸಿಕೊಳ್ಳುವುದು ಕಡಿಮೆ. ಮಾನವನಲ್ಲಿ ದೇವರನ್ನು ಕಾಣುವ ಅವಕಾಶ ದೊರಕಿದವರು ಭಾಗ್ಯಶಾಲಿಗಳು. ಈ ಭಾವುಕ ಸಣ್ಣಕತೆ ನಮ್ಮ ಸಮಾಜದ ಕೆಲ ಅನ್ಯಾಯ ಮತ್ತು ಕೊರತೆಗಳನ್ನು ಎತ್ತಿ ಹಿಡಿಯುವುದರ ಜೊತೆಗೆ, ಅಂಥಾ ಕಷ್ಟಗಳಲ್ಲೂ ಜೀವನದ ಮೌಲ್ಯಗಳನ್ನು ಮರೆಯದ ಒಬ್ಬ ಶಿಕ್ಷಕಿಯ ಪಾತ್ರವನ್ನು ಪರಿಚಯಿಸುತ್ತದೆ.
ಡಾ ರಾಜಶ್ರೀ ಪಾಟೀಲರ ಚೊಚ್ಚಲ ಪ್ರಕಟಣೆ ನಮ್ಮ ಅನಿವಾಸಿ ಅಂಗಳದಲ್ಲಿ. ಓದಿ ಪ್ರತಿಕ್ರಿಯಿಸಿ – ಸಂ

ಪರಿಚಯ
ನಾನು ಮೂಲತಃ ಗದಗ ಜೆಲ್ಲೆಯ ಶಿಗ್ಲಿ ಎಂಬ ಹಳ್ಳಿಯವಳು. ಮೂಲ ವೈದ್ಯಕೀಯ ತರಬೇತಿಯನ್ನ ದಾವಣಗೆರೆಯಲ್ಲಿ ಮುಗಿಸಿದ್ದು, ನನ್ನ ಪತಿ ಮನೆಯವರು ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಸದ್ಯಕ್ಕೆ ಲೆಸ್ಟರ್ನಲ್ಲಿ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು , ರೇಡಿಯಾಲಜಿ ಸೀನಿಯರ್ ಟ್ರೈನಿಯಾಗಿ ವೃತ್ತಿ ಮಾಡುತ್ತಿದ್ದೇನೆ. ಕವನ ಮತ್ತು ಕಿರು ಲೇಖನಗಳನ್ನ ಬರೆಯುವದು ಹವ್ಯಾಸವಾಗಿದ್ದು, ಲೆಸ್ಟರ್ ಕನ್ನಡ ಸಂಘ ಪ್ರತಿ ವರ್ಷ ನಡೆಸುವ ಯುಗಾದಿ ಸಂಭ್ರಮಾಚರಣೆಯಲ್ಲಿ ಸಕ್ರೀಯ ಭಾಗ ತೆಗೆದುಕೊಳ್ಳುತ್ತೇವೆ.
ಗುರುವೇ ದೇವರೆನಿಸಿದಾಗ
ಸುಂದರ ಹಳ್ಳಿಯ ಸ್ವಚ್ಛಂದ ವಾತಾವರಣದಲ್ಲಿ, ಕಲ್ಮಷವಿಲ್ಲದ ಬಾಂಧವ್ಯಗಳಲ್ಲಿ ಬೆಳೆದ ಸುಂದರ ಪುಷ್ಪ ನನ್ನ ಕಥಾ ನಾಯಕಿ. ಭವಿಷ್ಯದ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಟ ಇವಳು ಶಾರದೆಯ ಕೃಪಾರೂಪವಾಗಿದ್ದಳು. ನಡೆನುಡಿ, ವಿದ್ಯೆ, ವಿಚಾರ ಎಲ್ಲದರಲ್ಲೂ ಮುಂಚೂಣಿ. ತಾಯಿಯ ಕಣ್ಣಮಿಂಚು, ತಂದೆಯ ಅಭಿಮಾನ ಮತ್ತು ಗುರುಗಳ ಅತೀ ಪ್ರೀತಿಯ ಶಿಷ್ಯೆ. ಅವಳಿಗೋ ಶಾಲೆಯೇ ದೇವಸ್ಥಾನ, ಗುರುಗಳೇ ದೇವರು.

ಅತೀ ಪ್ರೀತಿಯ ಗುರುಗಳು ಹಲಗೇರಿ ಟೀಚೆರೆಂದರೆ ಅವಳಿಗೆ ಪ್ರಾಣ. ಅದರಂತೆ ಅವರದ್ದೂ ಕೂಡ ಗೌರವಕ್ಕೆ ಮೀರಿ ನಿಂತ ಬದುಕು, ಸದಾ ಕಲಿಕೆಗೆ ಒತ್ತು, ಎಂದೂ ಗದರಿದವರಲ್ಲ, ನಗುಮುಖ, ಉನ್ನತ ವಿಚಾರೋಕ್ತಿ ಮತ್ತು ಆದರ್ಶಕ್ಕೆ ಇನ್ನೊಂದು ಹೆಸರೇ ಅವರಾಗಿದ್ದರು.
ಒಂದು ದಿನ ಹಲಗೇರಿ ಟೀಚರ್ ರಜೆಯ ಮೇಲಿದ್ದ ಕಾರಣ ಅವರಿಗೆ ಪತ್ರವೊಂದನ್ನು ತಲುಪಿಸುವ ಜವಾಬ್ದಾರಿಯೊಂದನ್ನ ಪುಷ್ಪಾಳಿಗೆ ಮುಖ್ಯೋಪಾಧ್ಯಾಯರು ನೀಡಿದರು. ಅದರಂತೆ ಅವರ ಮನೆಯ ಬಾಗಿಲಲ್ಲಿ ನಿಂತ ಪುಷ್ಪಾಳಿಗೆ ಕಂಡ ಆ ದೃಶ್ಯ ಅವಳ ಜೀವಮಾನದಲ್ಲಿ ಮರೆಯಲಾಗದಂತದು. ಒಂದೇ ಒಂದು ಕೋಣೆಯ ಅವಳ ಟೀಚರ್ ಮನೆಯಲ್ಲಿ ಅವರ ಪತಿ ಕುಡಿದ ಮತ್ತಲ್ಲಿ ಅವರನ್ನ ಕಾಲಿನಿಂದ ಹತ್ತಿಕ್ಕುವದನ್ನ, ಅವಾಚ್ಯ ಶಬ್ದಗಳಲ್ಲಿ ಸಂಶಯಭರಿತ ಮಾತುಗಳಲ್ಲಿ ನಿಂದಿಸುವದನ್ನ ಕಂಡು ಕಣ್ಣೀರ ಧಾರೆ ದಳ ದಳನೇ ಹರಿದು ಮುಖದಿಂದ ಜಾರಿ ಧರೆ ಮುಟ್ಟಿದ್ದು ಅವಳಿಗೆ ಅರಿವಾಗೋ ಮುನ್ನವೇ ಓಡೋಡಿ ಶಾಲೆ ತಲುಪಿದ್ದಳು. ಪುಷ್ಪ ಆ ದಿನ ಕಂಡದ್ದು ಒಂದು ಸುಳ್ಳೆಂದು ಮರೆಯಬೇಕೆಂದುಕೊಂಡಳು. ಇನ್ನೂ ಟೀಚರ್ ಮುಖ ನೋಡಲು ವಾರಗಳೇ ಆಗಬಹುದೆಂದುಕೊಂಡಿದ್ದವಳಿಗೆ ಮರುದಿನ ಕಂಡ ಟೀಚರ್ ನ ನಗುಮುಖ, ನಿನ್ನೆ ನಡೆದದ್ದೆಲ್ಲ ಕನಸೆಬಂತೆ ತೋರುತಿತ್ತು ಮತ್ತು ಆ ಘಟನೆಯು ಅವರಿಗೆ ಹೊಸತೇನಲ್ಲವೆನ್ನುವ ಅರಿವನ್ನು ಮಾಡಿತ್ತು. ಆದಿನ ಟೀಚರ್ ಹೊದ್ದಿಕೊಂಡಿದ್ದ ಸೆರಗಿನಡಿಯಲ್ಲಿ ಅಡಗಿಕೊಂಡ ಹರಿದ ರವಿಕೆ ಅವರ ಬಡತನದ ಇನ್ನೊಂದು ಮುಖವನ್ನೂ ಪರಿಚಯ ಮಾಡಿತ್ತು.
ಪಠ್ಯ ಮತ್ತು ಪಠ್ಯೇತರ ಚಟುವಟಿಗೆಳಲ್ಲಿ ಪ್ರಶಸ್ತಿಗಳ ಸರಮಾಲೆಗಳನ್ನ ಪುಷ್ಪಾ ಜೋಡಿಸುತ್ತಿರುವಾಗ ಅವಳಿಗಿಂತ ಹೆಚ್ಚು ಸಂತಸ ಪಟ್ಟವರು, ಬೆನ್ನುತಟ್ಟಿ ಹುರಿದುಂಬಿಸಿದವರು ಅವಳ ಟೀಚರ್. ಆ ದಿನದ ಘಟನೆ ಅವಳ ಗುರಿ ತಲುಪುವ ಪ್ರಯತ್ನಕ್ಕೆ ಇನ್ನೊಂದು ಕಾರಣ ಒದಗಿಸಿತ್ತು. ಪ್ರಯತ್ನಕ್ಕೆ ದಕ್ಕದ ಫಲವಿಲ್ಲವೆಂಬತೆ ಅವಳು ಗುರಿ ಮುಟ್ಟುವದು ತಡವಾಗಲಿಲ್ಲ. ಒಂದು ಉನ್ನತ, ಗೌರವಾನ್ವಿತ ಹುದ್ದೆ ಸೇರಿಕೊಂಡ ಅವಳಿಗೆ ವೃತ್ತಿಪರ ಬದುಕು, ಜೀವನದ ಪ್ರತಿದಿನದ ಓಡಾಟಗಳಲ್ಲಿ ಹಿಂದೆ ಕಂಡ ಕನಸುಗಳು, ಆದರ್ಶಗಳೊಂದಿಗಿನ ನಂಟುಗಳು ದಿನೇ ದಿನೇ ಮಸುಕಾಗತೊಡಗಿದ್ದವು.
ಹೀಗೆ ದಿನಗಳು ಸಾಗಿ, ಕೆಲವೊಂದು ವರ್ಷಗಳ ನಂತರ ಅವಳ ತಾಯಿ ವಿಚಾರವೊಂದನ್ನ ಫೋನಲ್ಲಿ ತಿಳಿಸಿದಾಗ ಪುಷ್ಪಾಳಿಗೆ ನಿಂತ ನೆಲವೇ ಕುಸಿದಂತಾಯಿತು. ಅವಳ ತಾಯಿ ಬಹುದಿನದ ಮೇಲೆ ಹಲಗೇರಿ ಟೀಚೆರನ್ನ ಭೇಟಿ ಮಾಡಿದ್ದಾಗಿಯೂ, ಉಭಯಕುಶಲೋಪರಿ ಮಾತನಾಡುತ್ತಿರುವಾಗ ಅವರಿಗೆ, ತಮ್ಮ ಹಿರಿ ಮಗಳು ಅವಳ ಕನಸಿನಂತೆ ವೈದ್ಯಕೀಯ ತರಬೇತಿಗೆ ಪ್ರವೇಶ ದೊರಕಿದ್ದಾಗಿಯೂ ಆದರೆ ಹಣಕಾಸಿನ ತೊಂದರೆಯಿಂದ ಅನುಕೂಲವಿರುವ ಸ್ಥಳೀಯ ಕಾಲೇಜಿನಲ್ಲಿ ಬೇರೆ ವಿದ್ಯಾಭ್ಯಾಸ ಮುಗಿಸಿ ಈಗ ಹುದ್ದೆ ಸೇರಿದ್ದಾಳೆ ಎಂದು ತಿಳಿಸಿದರು. ಆದರೆ ಅವಳ ಕನಸನ್ನ ತಾಯಿಯಾಗಿ ಪೂರೈಸಲಾಗಲಿಲ್ಲವಲ್ಲ ಎಂದು ಬೇಸರಗೊಂಡರೆಂದು ತಿಳಿಸಿದರು. ಆಗ ನಿಮ್ಮ ಶಿಷ್ಯೆಯ ನೆನಪಾಗಲಿಲ್ಲವೇ ಎಂದು ನನ್ನ ತಾಯಿ ಕೇಳಿದಾಗ ನಾನು ಅವಳ ಸಹಾಯ ಕೇಳಿದ್ದರೆ ನಾನೇ ’ಅವಳಿಗೆ ಕಲಿಸಿದ ಸ್ವಾಭಿಮಾನ’ ಪಾಠಕ್ಕೆ ಮೋಸವಾಗುತ್ತಿತ್ತೆಂದು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸಂಪರ್ಕವೇ ಇಲ್ಲದಿರುವಾಗ ನನಗೆ ದಾರಿಯೂ ತೋರಲಿಲ್ಲವೆಂಬ ಅವರ ಉತ್ತರ ಪುಷ್ಪಾಳ ಸಾಧನೆಗಳ ಕಂಬವನ್ನೇ ಅಲುಗಾಡಿಸಿತ್ತು.
ತಡಮಾಡದೆ ಊರಿಗೆ ಪ್ರಯಾಣ ಬೆಳೆಸಿ ಅವರನ್ನ ಭೇಟಿಮಾಡಿ ತಾನು ಚಿಕ್ಕವಳಿದ್ದಾಗ ಅವರ ಮಕ್ಕಳನ್ನ ತನ್ನ ಒಡಹುಟ್ಟಿದವರೆಂದು ಭಾವಿಸಿದ್ದು ಮತ್ತು ಅವರ ಭವಿಷ್ಯದಲ್ಲಿ ನೆರವಾಗಬೇಕೆಂದುಕೊಂಡಿದ್ದನ್ನು ಹೇಳಿಕೊಂಡು, ಅದಕ್ಕೆ ತಕ್ಕನಾಗಿ ನಿಲ್ಲಲಾಗದೆ ಋಣಭಾರ ತೀರಿಸುವ ಅವಕಾಶ ಕಳೆದುಕೊಂಡೆನೆಂದು ಕ್ಷಮೆಯಾಚಿಸಿದಳು. ಆಗ ಟೀಚರ್ ನೀನೆಂದು ಅಂದುಕೊಂಡ ಗುರಿ ತಲುಪಿದೆಯೋ ಅಂದೇ ನನ್ನ ಋಣಭಾರ ತೀರಿಸಿದೆಯೆಂದು ಬಾಚಿ ತಬ್ಬಿಕೊಂಡರು. ಪುಷ್ಪಾಳಿಗೆ ನೆಚ್ಚಿನ ಗುರುಗಳ ಆದರ್ಶ ಇನ್ನೂ ಬೃಹದಾಕಾರಕ್ಕೆ ಬೆಳೆದಿದ್ದಲ್ಲದೆ, ಅಂದು ಕಲಿತ ಇನ್ನೊಂದು ಪಾಠ ‘ಸಮಯಕ್ಕಾಗದ ಹಣ, ಕಷ್ಟಕ್ಕಾಗದ ಸಂಬಂಧಗಳೆಂದೂ ವ್ಯರ್ಥ’ ಎಂಬುದು ಕಣ್ಮುಂದೆ ಹಾದು ಹೋಯಿತು. ಇನ್ನೆಂದೂ ಜೀವನದಲ್ಲಿ ಇಂಥ ಘಟನೆಗಳಿಗೆ ಅವಕಾಶಕೊಡಬಾರದೆಂದು ಕಣ್ಣೀರು ಒರೆಸಿಕೊಂಡಳು. ಆಗ ಟೀಚರ್ ನ ದೊಡ್ಡ ಮಗಳು ನಗುಮುಖದೊಂದಿಗೆ ತಿಂಡಿ ತಟ್ಟೆ ತಂದು ಹಿಡಿದು ಅಕ್ಕ, ಅಮ್ಮನ ಬಾಯಲ್ಲಿ ಸದಾ ನಿನ್ನ ಮಾತೆ ಎಂದಾಗ ಎಲ್ಲರ ಮುಖದಲ್ಲಿ ನಗು ತೇಲಿತು.
ಡಾ ರಾಜಶ್ರೀ ಪಾಟೀಲ್
ನಮಸ್ಕಾರ ರಾಜಶ್ರೀ ಅವರಿಗೆ. ಧಾರವಾಡದಲ್ಲಿ ೫ ವರ್ಷ ನನ್ನ ಪಿ.ಎಚ್.ಡಿ ಪದವಿಯ ವ್ಯಾಸಂಗವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿದ್ದಾಗ ನನ್ನ ಗೆಳತಿಯೊಬ್ಬಳ ಅಡ್ಡ ಹೆಸರು ಹಲಗೇರಿ ಅಂತಿತ್ತು. ಆಕೆಯ ನೆನಪಾಯಿತು. ಕಥೆಯ ಮುಖ್ಯ ಪಾತ್ರಧಾರಿ ಪುಷ್ಪಾಳ ಟೀಚರ್, ಮೇಡಂ ಹಲಗೇರಿ ನಿಜಕ್ಕೂ ಸ್ವಾಭಿಮಾನದ ಪ್ರತೀಕವೆನ್ನಬಹುದು. ತಮ್ಮ ಶಿಷ್ಯೆಯ ಹತ್ತಿರ ಸಹಾಯಕ್ಕೆ ಕೈಚಾಚದ ಆಕೆ ನಿಜಕ್ಕೂ ಒಬ್ಬ ಆದರ್ಶವಾದಿ ಉಪಾಧ್ಯಾಯಿನಿ. ಇಂತಹ ಕಿರುಗಥೆಯಲ್ಲೇ ನಿಮ್ಮ ಪ್ರತಿಭೆ ತೋರಿದ್ದೀರಿ. ಬಹಳ ಸಂತೋಷ. ಅನಿವಾಸಿ ವೇದಿಕೆಗೆ ಸುಸ್ವಾಗತ.
ಉಮಾ ವೆಂಕಟೇಶ್
LikeLike
ದೇಸಾಯಿಯವರು ಹೇಳಿರುವಂತೆ ಕನ್ನಡದ ಹಿರಿಯ ಕತೆಗಾರರೇ ಈ ಕತೆಯ ಆಳ ಅಗಲಗಳನ್ನು ವಿಶ್ಲೇಷಿಸಿದ ಮೇಲೆ ನಾನೇನು ಹೇಳಲಿ? ಕತೆ ಮನ ಕಲುಕುತ್ತದೆ ಮತ್ತು ಆಧುನಿಕ ಸಮಾಜದ ಗಿಲ್ಟ್ ಬಗೆಗೆ ಪ್ರಶ್ನೆಗಳನ್ನು ಎತ್ತುತ್ತದೆ.
ಕೇಶವ
LikeLike
ರಾಜಶ್ರೀ ಅವರಿಗೆ ಅನಿವಾಸಿಗೆ ಸುಸ್ವಾಗತ.ಇದು ಶುಭ ಮುಹೂರ್ತೇ ಶುಭ ಕಾಲೇ …. ಈಗಾಗಲೇ E-ಜಗುಲಿಯಲ್ಲಿ”ಹಿರಿಯ’ ಕತೆಗಾರರು ನಿಮ್ಮ ಈ ಕಥೆಯ ಬಗ್ಗೆ ಮಾತಾಡಿರುವದರಿಂದ ನಾನು ವಿಮರ್ಶೆಗೆ ಹೋಗುವದಿಲ್ಲ, ಅದು ಅಸಮಂಜಸ. ಆದರೆ, ನಿಮ್ಮ ಸುಲಲಿತ ಬರವಣಿಗೆಯ ಶೈಲಿ ನನಗೆ ಹಿಡಿಸಿತು. ಕಥೆಯನ್ನು ಅದು ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ನಿಮ್ಮಿಂದ ಇನ್ನು ಮುಂದೆ ಬರಹಗಳನ್ನು ’ಅನಿವಾಸಿ’ಯಲ್ಲಿ ಎದುರು ನೋಡೋಣವೆ? ಈಗ ಮೈಚಳಿ ಬಿಟ್ಟಿದೆಯಲ್ಲ, ಹೊಸ್ತಿಲ ದಾಟಿ ಮೊದಲ ಹೆಜ್ಜೆ ಇಟ್ಟಿರುವಿರೆಂದ ಮೇಲೆ?ನಿಮ್ಮವರೂ ಬರೆಯುತ್ತಾರೆಂದು ವದಂತಿ. ಅವರನ್ನೂ ಪ್ರೇರೇಪಿಸ ಬಹುದಲ್ಲ! ಅಭಿನಂದನೆಗಳು.
LikeLike
ಸರಳ ಸುಂದರ ಕತೆ. ಚೆನ್ನಾಗಿ ಓದಿ ಸಿಕೊಂಡು ಹೋಯಿತು,
LikeLike