‘ಕತೆ: ಕಾಯ್ಕಿಣಿ ಜೊತೆ’ ಮತ್ತು ಈ-ಜಗುಲಿಯಲ್ಲೊಂದು ಕಾಯಕದ ಗಣಿ ಜಯಂತರೊಡನೆ ಪಟ್ಟಾಂಗ

1. ಕತೆ : ಕಾಯ್ಕಿಣಿ ಜೊತೆ

“ಸರ್ವಂ ಕೋವಿಡ್ ಮಯಂ ಜಗಂ” ಆಗಿರುವಾಗ ಮಿತ್ರರ, ಸಮಾನ ಮನಸ್ಕರ ಭೇಟಿ ದುಸ್ತರ. Zoom ರಾಯ, ಅವನಂಥ ಇತರ ತಂತ್ರಾಂಶಗಳು ಅಂತರ್ಜಾಲ  ಮಿಲಾಪಗಳನ್ನು ಸರಾಗಗೊಳಿಸಿವೆ. ಕಾಲಾಂತರದಿಂದ KBUK ಕಾಯ೯ಕ್ರಮಗಳ ನಡುವೆ ತೆವಳುತ್ತಿದ್ದ ಅನಿವಾಸಿಗಳ ಭೇಟಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಈ ಹಿನ್ನಲೆಯಲ್ಲಿ ಹುಟ್ಟಿದ ಈ- ಜಗುಲಿ ಹಾಗೂ ಜಗುಲಿಯಲ್ಲಿ ನಡೆದ  ಸಂವಾದದ ವಿವರಗಳನ್ನು ಈಗಾಗಲೇ ಓದಿರುತ್ತೀರಿ. ಎರಡನೇ ಬೈಠಕ್ ನ  ನಿರ್ವಹಣೆಯ ಜವಾಬ್ದಾರಿ ಬಂದಿದ್ದು ನನ್ನ ಹಾಗೂ ಮುರಳಿ ಹತ್ವಾರ್  ಹೆಗಲಿಗೆ.  ಬೈಠಕ್ಕಿ ಗೆ  ತಕ್ಕುದಾದ ವಿಷಯ ಬೇಕಲ್ಲವೇ? ಮಾಚ್೯ ತಿಂಗಳಲ್ಲಿ ಕನ್ನಡ ಬಳಗದ ಯುಗಾದಿ ಆಚರಣೆಗೆ ನಾಡಿನ ಹೆಸರಾಂತ, ಪ್ರಭಾವಿ ಸಾಹಿತಿ ಶ್ರೀ ಜಯಂತ  ಕಾಯ್ಕಿಣಿ ಅವರ ಸಮ್ಮುಖದಲ್ಲಿ  ಅನಿವಾಸಿ ಸದಸ್ಯರು ಬರೆದ ಮಿನಿ ಕತೆಗಳನ್ನು ಓದುವ ತಯಾರಿ ಜೋರಾಗಿ ನಡೆದಿತ್ತು.  ಕೋವಿಡ್ ಸೋಂಕಿಗೆ ಯುಗಾದಿ ಕಾರ್ಯಕ್ರಮ  ಬಲಿಯಾದ ಸುದ್ದಿ ಹೊಸತಲ್ಲ. ಆಗ ನಮಗಾದ ನಿರಾಸೆ ಅಷ್ಟಿಷ್ಟಲ್ಲ! ಅಂದು ತಪ್ಪಿ ಹೋದ ಅವಕಾಶಕ್ಕೆ ಮತ್ತೊಮ್ಮೆ  ಪ್ರಯತ್ನಿಸುವುದೇ ಸೂಕ್ತ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಈ ಪ್ರಸ್ತಾವಕ್ಕೆ ಸದಸ್ಯರೆಲ್ಲ ಉತ್ಸಾಹದಿಂದಲೇ ತಲೆದೂಗಿದರು. ಈ-ಜಗುಲಿಯ ಹರಟೆಗೆ ಶಿವಪ್ರಸಾದ್ ಕೊಟ್ಟ ಆಹ್ವಾನಕ್ಕೆ ಕಾಯ್ಕಿಣಿ ಯವರು ಸಮ್ಮತಿಸಿದಾಗ, ರಂಗದ ಹಿನ್ನಲೆಗೆ ನಮ್ಮ ಪ್ರವೇಶವಾಯ್ತು ಅಧಿಕೃತವಾಗಿ. ನಾನು, ಮುರಳಿ  ಸಭೆಯ ದಿನ, ಸಮಯ, ಕಚ್ಚಾ ರೂಪರೇಷೆಗಳನ್ನು ಚರ್ಚಿಸಿ ನಿರ್ಧರಿಸಿದಾಗ ಸ್ವಲ್ಪ ಧೈರ್ಯ ಮೂಡತೊಡಗಿತು ಕಾಯ್ಕಿಣಿಯವರ ಜೊತೆ ಮಾತಾಡಲು. ಕಡೆಗೂ, ವಾಟ್ಸ್ಯಾಪ್ ಮೂಲಕ ಅವರಿಗೆ ಒಂದು ಸಂದೇಶ ರವಾನಿಸಿಬಿಟ್ಟೆ.  ತಡ ಮಾಡದೇ  ಅವರ ಉತ್ತರವೂ ಬಂತು. ಆದರೂ, ಗೋಕರ್ಣದ ಜಾತ್ರೆಯ ಜನ ಜಂಗುಳಿಯಂತೆ ಮನದಲ್ಲಿ ಅಡರಿತ್ತು ಅಳುಕು. ಎಷ್ಟೇ  ಆದರೂ ಅವರು ಸುಪ್ರಸಿದ್ಧರು, ನಮ್ಮಂತವರನ್ನು ಸಾಕಷ್ಟು ನೋಡಿರುತ್ತಾರಲ್ಲ? ಅವರ ಹಸನ್ಮುಖ, ಹಮ್ಮು- ಬಿಮ್ಮಿಲ್ಲದ ವ್ಯಕ್ತಿತ್ವದ ಎದುರು, ಹೆಪ್ಪುಗಟ್ಟಿದ್ದ ಹೆದರಿಕೆ ಬೆಳಕು ಕಂಡ ಕತ್ತಲೆಯಂತೆ ಓಟ ಕಿತ್ತಿತ್ತು. ಮುಂದಿನ ಎರಡು-ಮೂರು ವಾರಗಳ ಅವಧಿಯಲ್ಲಿ ನಮ್ಮ- ಅವರ ನಡುವೆ ನಡೆದ ವಿಚಾರ ವಿನಿಮಯಗಳು ಸಭೆಗೆ ಸುಂದರ ರೂಪ ಕೊಡುವಲ್ಲಿ ನೆರವಾದವು. ಈ ಸಂಭಾಷಣೆಗಳು ವೈಯಕ್ತಿಗವಾಗೂ ನಮ್ಮ ನಡುವೆ ಬಾಂಧವ್ಯವನ್ನು ಹುಟ್ಟಿ ಬೆಳೆಸಲು ಕಾರಣವಾದದ್ದು ನಮ್ಮ ಸುದೈವ.

ಚಿತ್ರಕೃಪೆ: ಶ್ರೀ ಜಯಂತ  ಕಾಯ್ಕಿಣಿ

ಈ-ಜಗುಲಿಗೆ ಅವಶ್ಯವಾಗಿ ಬೇಕಾಗುವುದು ಜಾಲ ವೇದಿಕೆಯಲ್ಲವೇ? ಇರುವುದರಲ್ಲಿ ಜೂಮ್ ಮಾತ್ರ ಬೇಕಾದ ಸೌಲಭ್ಯಗಳನ್ನೊದಗಿಸುವ ತಂತ್ರಾಂಶ ಎಂಬುದು ಹಲವರ ಅಂಬೋಣ. ಇದನ್ನು ನಾವು ಹೇಗೆ ಅಳವಡಿಸುವುದು ನಮ್ಮ ವೇದಿಕೆಗೆ ಎಂಬ ಚರ್ಚೆ ಹಿನ್ನಲೆಯಲ್ಲಿ ಬಿರುಸಾಗಿ ಸಾಗಿತ್ತು. ನಮಗೆ ತುರ್ತಾಗಿ ಬೇಕಾದ ಸಾಧನಕ್ಕೆ ನಡೆಸಿದ ಹುಡುಕಾಟದಲ್ಲಿ ಮಿತ್ರರಾದ ಶ್ರೀವತ್ಸ ದೇಸಾಯಿ ಹಾಗೂ ಕೇಶವ ಕುಲಕರ್ಣಿಯವರ ಸಹಕಾರದಲ್ಲಿ Micosoft Teams ತಂತ್ರಾಂಶವನ್ನು ಪರೀಕ್ಷಿಸಿ ಬದಲೀ  ಬಾಣದಂತೆ ನಮ್ಮ ಬತ್ತಳಿಕೆಯಲ್ಲಿ ಸಿದ್ಧವಾಗಿಟ್ಟುಕೊಂಡಿದ್ದೆವು. ಈ ಬಾಣದ ಅವಶ್ಯಕತೆ ಬರದೇ ಇರಲು ಕಾರಣ, ಸಹೃದಯೀ  ಕನ್ನಡ ಬಳಗದ ಪದಾಧಿಕಾರಿಗಳಾದ  ಡಾ. ಸ್ನೇಹ ಕುಲಕರ್ಣಿ ಹಾಗೂ ಡಾ. ಗಿರೀಶ್ ವಶಿಷ್ಠ ಅವರ ಸಹಾಯ ಹಸ್ತ. ಕನ್ನಡ ಬಳಗದ ವತಿಯಿಂದ ಅವರು ಜೂಮ್  ವ್ಯವಸ್ಥೆಗೆ ಒಪ್ಪಿಗೆ ನೀಡಿ ಬಿಕ್ಕಟ್ಟಿನ ಪರಿಹಾರ ಮಾಡಿದರು. ಹಾಗೆಯೇ ನೀಲ್ ತಲಗೇರಿಯವರು ಕಾರ್ಯಕ್ರಮಕ್ಕೆ  ಮುನ್ನ, ಕಾರ್ಯಕ್ರಮದ  ಸಮಯದಲ್ಲಿ ಹಾಗೂ  ನಂತರ ನೀಡಿದ ತಾಂತ್ರಿಕ ಬೆಂಬಲ ಸದಾ ಸ್ಮರಣೀಯ.

ಆಗಸ್ಟ್ ೯ರಂದು ನಡೆದ ಸಭೆಯ ಪರಿಯನ್ನು ಗೆಳೆಯ ಮುರಳಿ ವಿವರಿಸಿದ್ದಾರೆ. ನಮ್ಮ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮದಲ್ಲಿ ದಾಖಲಿಸಲಾಗಿದೆ. ಈ ಮುದ್ರಿಕೆ ನಮ್ಮ ಜಾಲ ಜಗುಲಿಯ ಹೆಮ್ಮೆಯ ಸ್ವತ್ತಾಗಿ ಮುಂದಿನ ದಿನಗಳಲ್ಲಿ ಚಹಾದೊಂದಿಗೆ ಮೆಲಕು ಹಾಕಲು ಉತ್ತಮ ಕುರುಕಲು ತಿಂಡಿಯಾಗಿ ಸದಾ ಜೋಬಿನಲ್ಲಿ ತುಂಬಿರುವುದೆಂದು ನಮ್ಮ ನಂಬಿಕೆ.

ಡಾ ರಾಮಶರಣ

2. ಈ-ಜಗುಲಿಯಲ್ಲೊಂದು ಕಾಯಕದ ಗಣಿ ಜಯಂತರೊಡನೆ ಪಟ್ಟಾಂಗ

‘ಕಿಟಕಿಯಲ್ಲಿ ಇಣುಕುತ್ತಿದ್ದ ಮುಖಗಳು‘

ನಮ್ಮದೊಂದು ‘ಅನಿವಾಸಿ’ ಹೆಸರಿನ ಪುಟ್ಟಗುಂಪು. ಚೂರು-ಪಾರು ಸಾಹಿತ್ಯ ಓದಿರುವ, ಬರೆಯುವ ಯುನೈಟೆಡ್ ಕಿಂಗ್ಡಮಿನ ಕನ್ನಡದ ಅಮೇಚೂರಿಗಳು ತಾವು ಬರೆದಿದ್ದನ್ನು ಹಂಚಿಕೊಳ್ಳಲು ಹುಟ್ಟಿಸಿಕೊಂಡ ಗುಂಪು. ಇಲ್ಲಿನ ಕನ್ನಡದ ಹಿರಿಯ ಸಂಘ ಕನ್ನಡ ಬಳಗಕ್ಕೆ ಮಾರುದೂರಕ್ಕೆ ಅಂಟಿಕೊಂಡಿರುವ ‘ಅನಿವಾಸಿ’ಗಳು, ಕನ್ನಡ ಬಳಗ ವರ್ಷಕ್ಕೆರಡು ಬಾರಿ – ಯುಗಾದಿ, ದೀಪಾವಳಿ – ನಡೆಸುವ ಕಾರ್ಯಕ್ರಮಗಳಲ್ಲಿ ಸಾಹಿತ್ಯಾತ್ಮಕ ಚಟುವಟಿಕೆಗಳ ನಡೆಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ವೆಂಕಟೇಶ ಮೂರ್ತಿ, ಭೈರಪ್ಪ, ಗಿರೀಶ್ ಕಾಸರವಳ್ಳಿ ಹೀಗೆ ಹೆಸರಾಂತ ಸಾಹಿತಿ, ಸಿನೆಮಾ ಜನಗಳೊಂದಿಗೆ ಸಂವೇದನೆಯ ಸಂವಾದದ ಆಯೋಜನೆಯ ಗರಿ ಈ ಗುಂಪಿಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಬಳಗದ ಯುಗಾದಿ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆ ನಡೆದಿತ್ತು. ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಆ ಕಾರ್ಯಕ್ರಮಕ್ಕೆ ಕನ್ನಡದ ಪ್ರಸಿದ್ಧ ಮತ್ತು ಪ್ರಭಾವಿ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಯವರು ಬರುವದಿತ್ತು. ಅವರೊಂದಿಗೆ ಕಥೆ ಕಟ್ಟುವ ಕಲೆಯ ಬಗ್ಗೆ ಸಂವಾದ ನಡೆಸಲು ‘ಅನಿವಾಸಿ’ಗಳ ಗುಂಪೂ ಸಜ್ಜಾಗಿತ್ತು. ಆ ಗುಂಪಿನ ಏಳೆಂಟು ಜನ ನಾಲ್ಕು ನಿಮಿಷದಲ್ಲಿ ಓದಿ ಮುಗಿಸುವಷ್ಟು ಗಿಡ್ಡದ ಕಥೆಗಳನ್ನು ಬರೆದು, ಶಾಲೆಯ ಇನ್ಸ್ಪೆಕ್ಷನ್ನಿಗೆ ಬರಲಿರುವ ದೊಡ್ಡ ಮೇಷ್ಟರೊಬ್ಬರ ಮುಂದೆ ಕೈಕಟ್ಟಿ ಬಾಯಿಪಾಠ ಒಪ್ಪಿಸುವ ಮಕ್ಕಳ ಹಾಗೆ ತಯಾರಾಗಿದ್ದರು.

ಅಷ್ಟರಲ್ಲಿ, ಚೀನಾದವರು ಕರೆಯದೆ ಕಳಿಸಿಕೊಟ್ಟ ಕರೋನ ಎಂಬ ಮಾರಿ ದೇಶಗಳ ಧೂಳೆಬ್ಬಿಸಿ, ಗಡಿಗಳ ಗುಡಿಸುತ್ತಾ ಸಾಗಿ, ತನ್ನ ದಾರಿಗುಂಟ ಸಿಕ್ಕಿದ ವಿಶಾಲ ಆಗಸದಿಂದ ಯಂತ್ರದ ಹಕ್ಕಿಗಳನ್ನೆಲ್ಲ ಕೆಳಗಿಳಿಸಿ, ಮಾನವನ ಶಕ್ತಿಯ ಮತ್ತೆ ಅವನ ಕೃತಕತೆಯ ಜೀವನವನ್ನ ಅಣಕಿಸಿ ಆಡಿಕೊಳ್ಳಲು ಶುರುಮಾಡಿತು. ಇದರ ಕಾಲ್ತುಳಿತಕ್ಕೆ ಸಿಕ್ಕಿ ಅಪ್ಪಚ್ಚಿಯಾದ ಕೋಟ್ಯಾಂತರ ಕಾರ್ಯಕ್ರಮಗಳಂತೆ  ಕನ್ನಡಬಳಗದ ಯುಗಾದಿ ಕಾರ್ಯಕ್ರಮವೂ  ನರಳಿ ಮೂಲೆಗೆ ಸರಿದಿತ್ತು. ಆದರೆ, ಕರೋನದ ಕಾಲ್ಬುಡದಲ್ಲೇ ಪಾರ್ಥೇನಿಯಂನಂತೆ ಬೆಳೆದ ಇಂಟೆರ್ನೆಟ್ಟು ಎಂಬ ದೈತ್ಯಾಸುರ ಎಲ್ಲರ ಮನೆ-ಮನದ ಮೂಲೆ-ಮೂಲೆ ಬಿಡದಂತೆ ನುಗ್ಗಿ ಹರಡಿ, ಮೊಬೈಲು-ಲ್ಯಾಪ್ಟಾಪ್-ಡೆಸ್ಕ್ಟಾಪುಗಳ ತಟ್ಟೆಗಳಲ್ಲಿ ಡೇಟಾಗಳ ಭೂರಿ ಭೋಜನ ಸವಿಯುತ್ತ, ಕುರ್ಚಿಗಳ ದಿಂಬುಗಳನು ಬಿಸಿಯಾಗಿಟ್ಟು ಅವುಗಳ ಮೇಲೆ ಕೂರುವವರ ಸೊಂಟದ ಸುತ್ತುಗಳನ್ನು ಹಿಗ್ಗಿಸಿ, ಆರಾಮದ ಮಂಪರು ಹೊದೆಸಿ ಆರೋಗ್ಯದ ಚರ್ಚೆಯನ್ನೇ ನಗಣ್ಯಗೊಳಿಸುತ್ತಾ, ಕೊರೋನಾಕ್ಕೆ ಆಪ್ತವಾದ ಕೊಬ್ಬನ್ನು ಸಂತೋಷದಿಂದ ಪೇರಿಸಿಕೊಳ್ಳುತ್ತಿರುವ ಕುಲವನ್ನ ಹೀಯಾಳಿಸುತ್ತ ಆಟವಾಡಿಸುತಿತ್ತು. ಮನೆಗಳೆಲ್ಲ ಕೆಲಸ ಮಾಡುವವರಿಗೆ ಆಫೀಸುಗಳಾಗಿ, ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿಯರಿಗೆ ಹಗಲಿನಲ್ಲೂ ಗಂಡಂದಿರ ಭಾರ ಹೊರಲಾಗದ ಹೊರಳು ಕಲ್ಲಾಗಿ, ಶಾಲೆಗೆ ಹೋಗಲಾಗದ ಮನೆಯ ಮಕ್ಕಳಿಗೆ ಸಜೆಯ ಸೆರೆಮನೆಯ ಸರಳುಗಳಾಗಿ  ಗೋಚರವಾಗುತ್ತಿತ್ತು. ಆಗಾಗ ಡೇಟಾಗಳ ಭಾರಕ್ಕೆ ಕುಸಿದ ಇಂಟರ್ನೆಟ್ಟಿಗಾಗಿಯೂ, ದೊಡ್ಡ ಸೈಝಿನ ಸ್ಕ್ರೀನ್ ಯಾರಿಗೆ ಬೇಕೆಂಬ ಕಾರಣಕ್ಕೂ ನಡೆಯುತ್ತಿದ್ದ ವಾದಗಳು ಕೆಲವೊಮ್ಮೆ ಮುಗಿಯದ ಯುದ್ಧಗಳಂತೆ ಕೆಲವರಿಗೆ ಅನಿಸಿದ್ದೂ ಉಂಟು.

ಈ ಹಿನ್ನೆಲೆಯಲ್ಲಿ, ಬೇರೆ-ಬೇರೆ ಗಾತ್ರಗಳ ಸ್ಕ್ರೀನಿಗಂಟಿದ ಕಣ್ಣುಗಳಿಗೆ ಆ ಸ್ಕ್ರೀನುಗಳಲ್ಲಿ ಆಪ್ತರ ದನಿಯ ಜೊತೆಗೆ ಮುಖದರ್ಶನ ಸಿಗುತ್ತಿದ್ದುದು ಭಾಗ್ಯವೆಂದೇ ಹೆಚ್ಚಿನವರಿಗೆ ಅನ್ನಿಸಿ, ಆ ಸ್ಕ್ರೀನುಗಳ ಕಿಟಕಿಗಳಲಿ ಪ್ರಪಂಚದೆಲ್ಲೆಡೆ ಹರಡಿರುವ ತಮ್ಮಾಪ್ತರ ದೃಷ್ಟಿ-ದನಿಗಳಲಿ ತಮ್ಮ ಮನ ತಣಿಸಿಕೊಂಡವರೇ ಮೊದಮೊದಲ ದಿನಗಳಲ್ಲಿ ಹೆಚ್ಚು. ಸಮಯ ಸರಿದಂತೆ, ತಮ್ಮ ತಮ್ಮ ‘ಹೊಸ’ ನಿತ್ಯ ವಿಧಿಗಳಿಗೆ ಒಗ್ಗಿಕೊಳ್ಳುತ್ತಾ, ಕರೋನಾದ ಕರಾಳತೆ ನುಂಗಿದ ನಂಬರ್ಗಳನ್ನೂ ಫುಟ್ಬಾಲಿನ ಲೀಗ್ ಟೇಬಲ್ಲಿನ ರ್ಯಾಂಕಿನಂತೆ ಇನ್ನೊಂದು ಪಟ್ಟಿಯಂತೆ ನೋಡುವುದನ್ನು – ಹತ್ತು ಹೆಣ ಮದುವೆಗೆ ಸಮಾನ ಎಂಬ ನಾಣ್ಣುಡಿಯ ನಿಜ ದರ್ಶನದಂತೆ – ಸಮಾಧಾನಗೊಳಿಸಿಕೊಳ್ಳುವ ಅಭ್ಯಾಸವಾಗಿ ಕಲಿತುಕೊಂಡ ಜನ ಮಾನಸಕ್ಕೆ, ಆ ಸ್ಕ್ರೀನುಗಳಲ್ಲಿ ಸಾಹಿತ್ಯ, ನೃತ್ಯ, ನಾಟಕ ಹೀಗೆ ನಾನಾ ತರದ, ಮನ ಸಂತೈಸುವ, ಸಾಮಾಜಿಕ ಚಟುವಟಿಕೆಗಳ ದರ್ಶನವಾಗಿದ್ದು, ಸ್ಕ್ರೀನುಗಳ ಮತ್ತೊಂದು ಸ್ಫೋಟಕ್ಕೆ ನಾಂದಿಯಾಯಿತು.

ಆ ಸ್ಫೋಟದ ಸಂಧಿಯಲ್ಲಿ ಹುಟ್ಟಿದ್ದು: ಈ-ಜಗುಲಿ. ಮೇಲೆ ವರ್ಣಿಸಿದ ‘ಅನಿವಾಸಿ’ಗಳು ತಮ್ಮ-ತಮ್ಮ ಯಂತ್ರ ಪರದೆಗಳ ಕಿಟಕಿ ತೆರೆದು ಒಂದಿಷ್ಟು ಇಷ್ಟದ ಕಥೆ-ಕವನಗಳ ಹಿನ್ನೆಯಲ್ಲಿ ಹರಟಲಿಕ್ಕೆಂದು ಮೇಲರ್ಥದಲ್ಲಿ ಅನಿಸಿದರೂ, ಆಪ್ತರೊಂದಿಗಿನ ಹರಟೆಯಲ್ಲಿ ಒಂದಿಷ್ಟು ಸಮಾಧಾನ ಹುಡುಕುವ, ಬೇಗುದಿ ಮರೆಯುವ ಮನುಷ್ಯನ ಮನಸಿನ ಒಳಸೆಳೆತ ಈ-ಜಗುಲಿಯನ್ನು ಕಟ್ಟಿದ ಇಟ್ಟಿಗೆಗಳು ಎನ್ನಬಹುದೇನೋ. ಏನೇ ಇರಲಿ, ಹೀಗೆ ಶುರುವಾದ ಈ-ಜಗುಲಿಯ ಮೊದಲ ಕಾರ್ಯಕ್ರಮದಲ್ಲಿ ನಿಸ್ಸಾರರ ನೆನಪು, ಹಾಡು, ಕವನ, ಅವರೊಂದಿಗೆ ಕಳೆದ ಕ್ಷಣ ಇವುಗಳಲ್ಲಿ ಹರಡಿ ಮೆರೆದಿತ್ತು. ಅದರೊಂದಿಗೆ, ಜಗುಲಿಯಲ್ಲಿ ಮತ್ತೆ ಬೆರೆತು ಹರಟುವ ಉತ್ಸಾಹವೂ ಸಹ ಬೆಳೆದಿತ್ತು. ಈ ಸಂಧರ್ಭದಲ್ಲಿ ನಡೆದ ಚರ್ಚೆಯಲ್ಲಿ, ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ತಪ್ಪಿದ ಜಯಂತರ ಭೇಟಿಯನ್ನು ಈ-ಜಗುಲಿಯಲ್ಲಿ ಮಾಡುವ ಎನ್ನುವ ಆಸೆಯ ಮೊಳಕೆ ಮೊದಲ ಎಲೆ ಮೂಡಿಸಿತ್ತು. ಆ ಆಸೆಗೆ ನೀರೆರೆದ ‘ಅನಿವಾಸಿ’ಯ ಹಿರಿಯ ಸದಸ್ಯ ಶಿವಪ್ರಸಾದ್ ಅವರ ಕರೆಗೆ ಒಮ್ಮನದಲ್ಲಿ ಸಮ್ಮತಿಸಿದ ‘ಕಾಯ್ದಿಟ್ಟ ಮಗುವಿನ ಮನಸಿನ’ ಜಯಂತ ಕಾಯ್ಕಿಣಿಯಂತಹ ಕಥೆ ಕಟ್ಟುವ ಕಲೆಯ ಮಾಂತ್ರಿಕನನ್ನ ‘ಅನಿವಾಸಿ’ಗಳ  ಮನೆಯಂಗಳದ ತೆರೆಗಳ ಮೇಲೆ  ಭಾನುವಾರ, ಆಗಸ್ಟ್ ೯ ಕ್ಕೆ ತರಲು ಈ-ಜಗುಲಿ ಸಿದ್ಧವಾಯಿತು.

(ಜಗುಲಿಯನ್ನು ತೊಳೆದು, ಜಮಖಾನ ಹಾಸಿ, ಚಕ್ಕುಲಿ-ಕೋಡುಬಳೆ, ಮಂಡಾಳ್-ಒಗ್ಗರಣಿ ರೆಡಿ ಮಾಡಿದ ಮಜದ ಕೆಲಸವನ್ನು ಜೊತೆಗಾರ ರಾಮಶರಣ್ ಈ ಮುಂಚಿನ ಲೇಖನದಲ್ಲಿ ಹಂಚಿಕೊಂಡಿದ್ದಾರೆ.  
ಸೂ: ಕುಡಿಯಲಿಕ್ಕೆ, ಲೋಟದೊಳಗಿನ ಬಿಸಿ ಪೇಯವೋ, ಗಾಜಿನೊಳಗಿಂದ ತಣ್ಣಗಿಳಿದು ಒಳಗಿಂದ ಬಿಸಿ ಮಾಡುವ ಬಣ್ಣ-ಬಣ್ಣದ ರಸವೋ ಎಂಬುದನ್ನ ಅವರವರ ಆಯ್ಕೆಗೆ ಬಿಡುವದು ಕ್ಷೇಮವೆನಿಸಿ ಖಾಲಿ ಲೋಟ-ಗ್ಲಾಸುಗಳನ್ನಷ್ಟೇ ಒದಗಿಸಲಾಗಿತ್ತು!)

ಚಿತ್ರಕೃಪೆ: ಶ್ರೀ ಜಯಂತ  ಕಾಯ್ಕಿಣಿ

ಕಾರ್ಯಕ್ರಮದ ಆರಂಭ, ಜಯಂತರ ಆತ್ಮೀಯ ನಗುವಿನೊಂದಿಗೆ ಶುರುವಾದದ್ದು ಮೂವತ್ತಕ್ಕೂ ಹೆಚ್ಚು ಕಿಟಕಿಗಳಲ್ಲಿ ಇಣುಕುತ್ತಿದ್ದ ಮುಖಗಳ ನಗೆಯ ಹೊಳಪನ್ನ, ಕನ್ನಡಿ ಹರಡಿದ ಸೂರ್ಯನ  ಬೆಳಕಿನಂತೆ, ಹೆಚ್ಚಿಸಿತ್ತು. ಆ ಬೆಳಕಿನಲ್ಲಿ ಬೆಳೆದ ಈ-ಜಗುಲಿಯ ಪಟ್ಟಾಂಗ ಸುಮಾರು ಮೂರು ಘಂಟೆಗಳ ಕಾಲ ಇಳಿಜಾರಿನಲ್ಲಿ ಬ್ರೇಕಿಲ್ಲದೆ ರೊಯ್ಯನೆ ಸಾಗುವ ಸೈಕಲ್ಲಿನ ಸವಾರಿಯಂತೆ ಅತಿವೇಗದ ಪರಿ-ಪರಿಯ ಆನಂದೋತ್ಸಾಹದ ಪಯಣದ ಅನುಭವ ನೀಡುತ್ತಾ, ಮೆಲುಕಿಡುವ ಮನಸ್ಸಿಗೊಂದಿಷ್ಟು ಹೊಸ ಮೇವು ಕೊಡುತ್ತ ಸಾಗಿತ್ತು.

ಮೊದಲ ಭಾಗದಲ್ಲಿ, ಜಯಂತರು ಅವರ ಜೀವನದ ಇಲ್ಲಿನವರೆಗಿನ ಯಾನದ ಸ್ಪೂರ್ತಿದಾಯಕ ತುಣುಕುಗಳು, ಅವರಿಗೆ ತಿರುವು ನೀಡಿದ ಘಟನೆಗಳು, ಅವರನ್ನು ಬೆಳೆಸಿದ ಗೋಕರ್ಣ-ಮುಂಬೈ ಗಳ ಜೀವನದ ಸಾಮ್ಯತೆ ಮತ್ತು ವೈರುಧ್ಯತೆ, ಕಥೆ-ಕವನಗಳಲ್ಲಿ ಅವರು ಬೆಳೆದ ಮತ್ತು ಅವುಗಳು ಅವರನ್ನು ಬೆಳೆಸಿದ ಕಥನಗಳನ್ನ ಗೆಳೆಯರೊಂದಿಗೆ ಹರಟುವಷ್ಟು ಸ್ವಾಭಾವಿಕವಾಗಿ ಹಂಚಿಕೊಂಡರು. ಹೊಸಬರೊಂದಿಗೆ ಆತ್ಮೀಯವೆನಿಸುವಷ್ಟು ಮಾತನಾಡುವದು ಸಾರ್ವಜನಿಕ ಜೀವನಕ್ಕೆ ಒಗ್ಗಿಕೊಂಡವರಿಗೆ ಕಷ್ಟವೇನಲ್ಲ, ಆದರೆ, ಜಯಂತರ ಮಾತುಗಳಲ್ಲಿ ವಿಚಾರಗಳ, ಘಟನೆಗಳ ವಿಮರ್ಶಾತ್ಮಕ ವಿವರವಿತ್ತೇ ಹೊರತು, ಕೃತಕತೆಯ, ಸ್ವಪ್ರಶಂಸೆಯ ಧ್ವನಿಯ ನುಡಿಗಳಿರಲಿಲ್ಲ. ಆ ಒಳನೋಟದ ಸಾಮರ್ಥ್ಯವೇ ಅವರ ಕಥೆ-ಕವನಗಳಲ್ಲಿ ಹರಿಯುವ ಸಮತೆ-ಮಮತೆಗಳ ಸುಳಿಯ ಅಡಿ ಇರಬಹುದು; ಅದಿದ್ದರಷ್ಟೇ  ಜಗದ ಒಡೆದ ಕನ್ನಡಿಯ ಚೂರುಗಳಲ್ಲಡಗಿದ ಸೌಂದರ್ಯವನ್ನ ನಾವು ಕಾಣಬಹುದೇನೋ?

ಜಯಂತರ ತಂದೆ ಪ್ರಸಿದ್ಧ ಸಾಹಿತಿ ಗೌರೀಶ ಕಾಯ್ಕಿಣಿಯವರು. ಗೋಕರ್ಣದಲ್ಲಿ ಮೇಷ್ಟ್ರಾಗಿದ್ದ ಅವರ ಶಿಸ್ತಿನ ಜೀವನದ ಪ್ರಭಾವ ಮತ್ತು ಅವರಿಂದ ಕಲಿತ ಕೆಲವು ವಿಚಾರಗಳನ್ನು ಮೆಲುಕು ಹಾಕಿದರು. ಅದರಲ್ಲಿ ಮನಸಿಗೆ ಮುಟ್ಟಿದ್ದು, ಅವರು ಯಾವುದೇ ಖಾಲಿ ಹಾಳೆಯನ್ನ – ಬಿಲ್ಲಿರಲಿ, ಟಿಕೆಟ್ಟಿರಲಿ, ಕ್ಯಾಲೆಂಡರ್ ಇರಲಿ – ಎಸೆಯದೆ ಅದರಲ್ಲೇ ಕವನ, ಕಥೆ, ವರದಿಗಳನ್ನ ಬರೆಯುತ್ತಿದ್ದದ್ದು. ಅವರ ಆ ಅಭ್ಯಾಸವನ್ನ ಬಳುವಳಿ ಎಂಬಂತೆ  ಜಯಂತರೂ ಮುಂದುವರೆಸಿದ್ದಾರಂತೆ. ಇದು , ಯೋಚಿಸುವದಕ್ಕೆ ಮುನ್ನ ‘ಪ್ರಿಂಟ್’ ಒತ್ತುವ, ಎಲ್ಲವನ್ನೂ ‘ರೀ-ಸೈಕಲ್’ ಮಾಡುವ ನಮ್ಮ  ‘ತರುಣ’ ಸಮಾಜ ಅವಲೋಕಿಸಬೇಕಾದ ವಿಚಾರ. ಜಯಂತರು ಹಂಚಿಕೊಂಡ ಮತ್ತಷ್ಟು ವಿಚಾರಗಳಲ್ಲಿ ಅವರ ಮೇಲೆ ಅವರು ಬೆಳೆಯುವ ವಯಸ್ಸಿನಲ್ಲಿ ಅವರ ತಂದೆಯ ಪ್ರಭಾವ ತುಂಬಾ ಇತ್ತೆನ್ನುವದು ತಿಳಿಯುತ್ತದೆ. ತನ್ನ ಬೆಳೆಸಿದ ತಂದೆಯ ವಿಚಾರಗಳನ್ನು ನೆನಪಿಟ್ಟುಕೊಳ್ಳುತ್ತ, ಆ ವಿಚಾಗಳನ್ನು ಹರಡುತ್ತಾ ತಂದೆಯವರ ಅಕ್ಷರ-ಶ್ರೀಮಂತಿಕೆಯನ್ನು ಮತ್ತೆ ಹೊಸ ಜನರ ನೆನಪಿನಲ್ಲಿ ಬಿತ್ತಿ ಬೆಳಸುವದಕ್ಕಿಂತ ದೊಡ್ಡ ತರ್ಪಣ ಇನ್ನೊಂದಿಲ್ಲ, ಅಲ್ಲವೇ?

ತಾವು ಬೆಳೆದ ಗೋಕರ್ಣದ ಮೇಲೂ ಅಪಾರ ಪ್ರೀತಿ, ಜಯಂತರಿಗೆ. ಅಲ್ಲಿನ ರಥಬೀದಿ, ಅಲ್ಲಿಂದ ಹೊರಡುವ ಬಸ್ಸುಗಳು, ಅದರ ಯಾತ್ರಾರ್ಥಿಗಳು, ಆ ಮುಕ್ತಿ ಕ್ಷೇತ್ರದ ವೈವಿಧ್ಯಗಳು, ಹಿಡಿತಗಳು ಇವೆಲ್ಲವೂ ಹರಿದವು ಅವರ ಮಾತುಗಳಲ್ಲಿ. ಆ ಊರಿನ ಹಾಗೂ ಅವರ ವೃತ್ತಿ ಜೀವನದ ಮಹಾನಗರ ಮುಂಬೈ ನಡುವಿನ ಸಾಮ್ಯತೆ, ಭಿನ್ನತೆಗಳನ್ನ ನಮ್ಮೊಂದಿಗೆ ಹಂಚಿಕೊಂಡರು. ‘ಕೈಲಾಸವೇ ಕಾಯಕವೆಂಬ ಗೋಕರ್ಣದಿಂದ ನಾನು ಕಾಯಕವೇ ಕೈಲಾಸ’ ಎಂಬ ಮುಂಬೈಗೆ ಹೋದೆ ಎನ್ನುವ ಮಾತಿನಲ್ಲಿ ಮುಂಬೈ ಜೀವನ ಅವರನ್ನ ‘ಲಿಬರೇಟ್’ ಮಾಡಿ ಹೊಸ ಅರ್ಥ ನೀಡಿದ ಸ್ಥಳವೆಂದು ನೆನೆದರು. ಅಲ್ಲಿ ಯಾವ ಕೆಲಸ – ಸಂಬಳ?, ಎಲ್ಲಿ ಮನೆ – ಬಾಡಿಗೆಯೋ, ಸ್ವಂತದ್ದೋ, ಕಾರಿದೆಯೋ? – ಹೊಸತೋ, ಸೆಕೆಂಡ್ ಹ್ಯಾಂಡೊ?… ಹೀಗೆ ಅಳೆಯುವ ಪ್ರಶ್ನೆಗಳಲ್ಲಿ ವ್ಯಕ್ತಿಗಳನ್ನು ಹುಡುಕದ ಮತ್ತು ಆ ಕಾರಣಗಳಲ್ಲಿ ಜರೆಯದ ಸಮಾಜದ ಬಗ್ಗೆ ಅವರಿಗಿರುವ ಗೌರವ ಮತ್ತು ಮೆಚ್ಚುಗೆ ಅವರ ಮೇಲಿರುವ ಮುಂಬೈನ ಪ್ರಭಾವ ಮತ್ತು ಅವರ ಯಾಂತ್ರಿಕತೆಯ ಪದರದ ಕೆಳಗಿಳಿದು ನೋಡುವ ಜೀವನದ ದೃಷ್ಟಿಯ ಆಳವನ್ನ ತೋರಿಸುತ್ತದೆ. ಅವರ ಮುಂಬೈ ಜೀವನದ ಅನುಭವಗಳು ಅವರ ಕಥೆಗಳ ಪಾತ್ರಗಳಲ್ಲಿ ಬೆಳೆದಿವೆ. . ಬಹುಷಃ, ಡಿ.ವಿ.ಜಿ ಹೇಳಿದ:’ಅಸಮದಲಿ ಸಮತೆಯನು…’ ಎನ್ನುವದರ ನಿಜ ಉದಾಹರಣೆ ಇದು ಇರಬಹುದು. 

ಇಪ್ಪತ್ತು ವರ್ಷದ ಹಿಂದೆ ಅವರು ಹೈದ್ರಾಬಾದ್ ‘ಈ-ಟಿವಿ’ ಮಾರ್ಗವಾಗಿ ಬೆಂಗಳೂರಿಗೆ ‘ಮುಂಗಾರು ಮಳೆ’ ಹೊತ್ತುಕೊಂಡು ಬಂದ ಪಯಣವನ್ನ ನಮ್ಮ ಮುಂದೆ ಬಿಚ್ಚಿಟ್ಟು, ಅಲ್ಲಿಂದ ಶುರುವಾದ ಹಾಡು-ಕಟ್ಟುವ ಕಾಮಗಾರಿಯ ಕಷ್ಟ-ಸುಖಗಳನ್ನ ಹೇಳಿಕೊಂಡರು. ಬೆಂಗಳೂರು ಅವರಿಂದ ಹೊರ ತೆಗೆದ ಚಿತ್ರಗೀತೆಗಳು, ಚಿತ್ರ ಕಥೆಗಳು, ಸಂಪಾದಕತ್ವ ಮತ್ತು ಟಿ.ವಿ ಲೋಕದ ಹಲವು ರೀತಿಯ ಕಾರ್ಯಕ್ರಮಗಳು  ಅನಾವರಣಗೊಳಿಸಿದ ಗುಣಾತ್ಮಕ ವಿಮರ್ಶೆ ಮತ್ತು ಪ್ರೋತ್ಸಾಹಿಸುವ ಗುಣ ಅವರನ್ನ ಕರ್ನಾಟಕದ ಜನರಿಗೆ ಹತ್ತಿರವಾಗಿಸಿದೆ. ಮನಸ್ಸು ಹೊರಡಿಸುವ ಕಥೆ, ಕವನಕ್ಕಿಂತ, ಯಾರೋ ಬರೆದ ಮ್ಯೂಸಿಕ್ಕಿಗೆ ಹಾಡು ಕಟ್ಟುವದು ಕಷ್ಟದ ಕೆಲಸ ಎನ್ನುವದು ಅವರ ಅನಿಸಿಕೆ. ಅವರ ಹಾಡುಗಳಿಲ್ಲದೆ ಇದ್ದಿದ್ದರೆ ಈ ಶತಮಾನದ ಕನ್ನಡ ಗೀತೆಗಳ ಸ್ಥಿತಿ ಹೇಗಿರುತ್ತಿತ್ತು ಎನ್ನುವದು ನಾವು ಕೇಳದೆ ಉಳಿದ ಪ್ರಶ್ನೆ. ಆದರ ಉತ್ತರ ಕಷ್ಟದ್ದಲ್ಲ. 

ಮುಂದಿನ ಭಾಗ, ನಾವು ಎಂಟು ‘ವಿದ್ಯಾರ್ಥಿಗಳ’ ಕಥೆಯ ವಿಮರ್ಶೆ. ಅವರು ಅದನ್ನು ವಿಮರ್ಶಕನಂತೆ ಅಲ್ಲದೆ ಒಬ್ಬ ಓದುಗನಂತೆ ಅಭಿಪ್ರಾಯ ತಿಳಿಸುತ್ತೇನೆ ಎಂದದ್ದು ‘ಪರೀಕ್ಷೆಗೆ ಬಂದರೆ ಪಾಸ್’ ಎನ್ನುವಷ್ಟು ಸಮಾಧಾನ ಕೆಲವರಲ್ಲಿ (ಅಂದರೆ ನನ್ನಲ್ಲಿ!). ಎಲ್ಲ ಕಥೆಗಳನ್ನೂ ವಿವರವಾಗಿ ಕ್ರಿಟಿಸಿಸಂ ಮತ್ತು ಕ್ರಿಟಿಕ್ ಎರಡೂ ಅಲ್ಲದ ಪಾಸಿಟಿವ್ ಫೀಡ್ಬ್ಯಾಕ್ ರೀತಿಯಲ್ಲಿ ಕಥೆ ಹಿಡಿದಿಡುವ, ಅವರ ಮನ ಮುಟ್ಟಿದ ಮುಖ್ಯ ಅಂಶಗಳನ್ನ ವಿವರವಾಗಿ ಒಪ್ಪಿಸಿ, ಮತ್ತೆ ಬರೆಯಿರೆಂದು ಪ್ರೋತ್ಸಾಹಿಸಿ ಬೆನ್ನು ತಟ್ಟಿದರು. ನನ್ನ ಮಟ್ಟಿಗಂತೂ ಇದು ಮರೆಯಲಾರದ ಅನುಭವ. ತುಂಬಾ ವರ್ಷಗಳಿಂದ ಆಟೋಗ್ರಾಫ್ ಗೆಂದು ನಿಂತಿದ್ದ ಕ್ಯೂ ಕರಗಿ, ಆಟೋಗ್ರಾಫ್ ಜೊತೆಗೆ ಫೋಟೋ ತೆಗೆಸಿ ಹೆಸರಿಟ್ಟು ಕರೆದ ಅನುಭವ ; ಅದೂ  ಮತ್ತೆ ಮತ್ತೆ ಕೇಳಬಹುದಾದ, ಕೇಳಿಸಬಹುದಾದ ವಿಡಿಯೋ-ಆಟೋಗ್ರಾಫ್! ಜೀವನವೆಂದರೆ ಹೀಗೆಯೇ. ಕೆಲವೊಮ್ಮೆ ಬೆಲೆಕಟ್ಟಲಾಗದ  ಬಹುಮಾನಗಳು ಕೇಳದೆಯೇ ದೊರೆಯುತ್ತವೆ.

(ಆ ಕಥೆಗಳನ್ನ ನೀವು ಅನಿವಾಸಿ.ಕಾಮ್ ನಲ್ಲಿ ಓದಬಹುದು: https://wp.me/p4jn5J-2H0; https://wp.me/p4jn5J-2Ml; https://wp.me/p4jn5J-2G0; https://wp.me/p4jn5J-2IY) (ಮತ್ತು ಧ್ವನಿರೂಪದಲ್ಲಿ ಲೇಖನದ ಕೊನೆಯಲ್ಲಿ ಕೊಟ್ಟ ಕೊಂಡಿಯನ್ನು ಒತ್ತಿ ಆಲಿಸ ಬಹುದು)

ಕೊನೆಯ ಭಾಗ, ಪ್ರಶ್ನೋತ್ತರ: ತಮ್ಮ ಪ್ರಶೆಗಳಿಗೆ ದೊರೆಯುವ ಉತ್ತರದಲ್ಲಿ ಕಾಯ್ಕಿಣಿಯವರನ್ನ ತಿಳಿಯುವ ಪ್ರಯತ್ನ ‘ಅನಿವಾಸಿ’ ಬಳಗದವರಿಂದ. ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದ, ತಿಳಿ ಹಾಸ್ಯ ತುಂಬಿದ ಉತ್ತರ ಗಳನ್ನ ಪ್ರಶ್ನೆಗಳ ಧಾಟಿಗೆ ಸರಿಯಾಗಿ ಉತ್ತರಿಸುತ್ತಾ ತಮ್ಮ ಸ್ವಭಾವದ ಮತ್ತೊಂದು ಪುಟ ಜಯಂತರು ತೆರೆದಿಟ್ಟರು. ರಾಘವೇಂದ್ರ ಖಾಸನೀಸರ ತಬ್ಬಲಿಗಳು ಕಥೆಯನ್ನ ಎಲ್ಲರೂ ಓದಲೇ ಬೇಕಾದ ಕಥೆಯೆಂದೂ, ಅಹೋಬಲ ಶಂಕರರು ಕನ್ನಡಕ್ಕೆ ಅನುವಾದಿಸಿದ ರವೀಂದ್ರನಾಥ ಠಾಗೂರರ ಸಣ್ಣ ಕಥೆಗಳು ಅನುವಾದ ಸಾಹಿತ್ಯದ ಅತ್ಯುತ್ತಮ ನಿದರ್ಶನವೆಂದೂ, ಮತ್ತು ಈಗಿನ ಲೇಖಕರಲ್ಲಿ ಅಬ್ದುಲ್ ರಶೀದರ ಕಥೆಗಳನ್ನು ಅವರು ಓದಲು ಇಷ್ಟಪಡುತ್ತಾರೆಂದೂ ತಿಳಿಸಿದ್ದು, ನಮಗೆಲ್ಲ ಮುಂದೆ ಓದಬೇಕುನ್ನುವ ಪುಸ್ತಕಗಳನ್ನ ಪಟ್ಟಿ ಮಾಡಲು ಅನುಕೂಲವಾಯಿತು.

ಅನುವಾದಗಳ ಚರ್ಚೆಯ ಬಗ್ಗೆ ಬರೆವಾಗ  ನೆನಪಾಗಿದ್ದು, ಜಯಂತರ ಕೃತಿಗಳ ಇಂಗ್ಲಿಷ್ ಅನುವಾದದ ಪುಸ್ತಕ ‘ನೋ ಪ್ರೆಸೆಂಟ್ಸ್ ಪ್ಲೀಸ್’. ೨೦೧೭ರಲ್ಲಿ ಬಿಡುಗಡೆಯಾದ ಈ ಸಂಕಲನದ ಅಮೆರಿಕೆಯ ಆವೃತ್ತಿ ಈ ವರ್ಷದ ಜೂನ್ ನಲ್ಲಿ ಬೆಳಕು ಕಂಡಿತು. ಇನ್ನೆರಡು ತಿಂಗಳಲ್ಲಿ ಅದು ಇಂಗ್ಲೆಂಡಿನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ. ಕನ್ನಡದ ಈ ಆಸ್ತಿ ಇಂಗ್ಲೀಷಷ್ಟೇ ಬಲ್ಲ ಕನ್ನಡಿಗರಿಗೂ, ಮತ್ತೆ ಇಂಗ್ಲಿಷ್ ಓದುವ ಮತ್ತೆಲ್ಲರ ಮನದಲ್ಲೂ ದಗಡೂ ಪರಬನ ಅಶ್ವದಂತೆ ಓಡಲಿ…

ಒಟ್ಟಾರೆ, ಜಯಂತರೊಂದಿಗೆ ಆತ್ಮೀಯವಾಗಿ ಸಮಯವನ್ನು ಮರೆತು ಮಾತನಾಡಿದ, ಅವರ ಮನದ ಮಾತುಗಳನ್ನು ಕೇಳಿದ ನೆನಪುಗಳು ಮೆಲುಕು ಹಾಕಿದಷ್ಟೂ ಬೆಳೆಯುತ್ತವೆ. ಹಾಗೆಯೇ, ಸಮಯ ಕಳೆದಂತೆ ವಿವರಗಳು ಮಾಸಿದರೂ ಏನೋ ಸಾಧಿಸಿದ ಸಮಾಧಾನವನ್ನು ಮಾತ್ರ ನಿರಂತರ ನೀಡುತ್ತಿರುತ್ತವೆ. ಅವರ ಮಾತುಗಳು, ಪಾತ್ರಗಳು, ಕವಿತೆಗಳು ಎಲ್ಲವೂ ಅವರ ನಂಬಿಕೆಯ ಸಾತ್ವಿಕ ಜೀವನ ತತ್ವದ ಜೊತೆಗೆ  ಬೆರೆತುಕೊಂಡಿವೆ. ಸಣ್ಣತಿನಲ್ಲಿ ಕೇಳಿದ್ದ ಶಿವರಾಂ ಕಾರಂತರ: ಮಾಡುವವನಿಂದ ಕಲಿ, ಬರಿ ಮಾತಾಡುವವನಿಂದಲ್ಲ, ಎನ್ನುವ ಅರ್ಥದ  ಮಾತುಗಳು ಜಯಂತ ಕಾಯ್ಕಿಣಿ ಯಂತಹ ಅಕ್ಷರ ಯೋಗಿಯ ಜೀವನವನ್ನ ನೋಡಿ ಕಲಿಯುವದು ಬಹಳಷ್ಟಿದೆ ಎನ್ನುವದನ್ನ ನೆನಪಿಸುತ್ತವೆ. ಅದನ್ನು ಅವರಿಂದಲೇ ತಿಳಿಯುವ ಹಾಗೆ ಆಗಿದ್ದು ನಮ್ಮ ಪುಣ್ಯ.     

ಮುರಳಿ ಹತ್ವಾರ್ 

(ಆ ಏಳೂ ಕಥೆಗಳ ಆಡಿಯೋವನ್ನು ಕೆಳಗಿನ ಕೊಂಡಿಯನ್ನು ಒತ್ತಿದರೆ ಕೇಳಬಹುದು. ಕೃಪೆ: ಮುರಳಿ ಹತ್ವಾರ್ -ಸಂ)

https://w.soundcloud.com/player/?url=https%3A//api.soundcloud.com/tracks/875421283&color=%23ff5500&auto_play=false&hide_related=false&show_comments=true&show_user=true&show_reposts=false&show_teaser=true&visual=true Shrivatsa Desai · Seven Short Stories

6 thoughts on “‘ಕತೆ: ಕಾಯ್ಕಿಣಿ ಜೊತೆ’ ಮತ್ತು ಈ-ಜಗುಲಿಯಲ್ಲೊಂದು ಕಾಯಕದ ಗಣಿ ಜಯಂತರೊಡನೆ ಪಟ್ಟಾಂಗ

  1. ಅನಿವಾಸಿಯ ಈ ಜಗುಲಿಯ ಎರಡನೇ ಸಾಹಿತ್ಯ ಕಾರ್ಯಕ್ರಮವಾದ ಕಥೆ; ಕಾಯ್ಕ್ಕಿಣಿ ಜೊತೆ ಒಂದು ಸ್ಮರಣೀಯವಾದ ಕಾರ್ಯಕ್ರಮ. ಇದನ್ನು ಉತ್ತಮವಾಗಿ ಆಯೋಜಿಸಿ ಸಫಲಗೊಳಿಸಿದ ಕೀರ್ತಿ ರಾಮ್ ಶರಣ್, ಮುರಳಿ ಮತ್ತು ಸಣ್ಣ ಕಥೆ ಬರೆದ ಎಲ್ಲ ಕಥೆಗಾರರಿಗೂ ಸಲ್ಲಬೇಕು. ಮೂಲದಲ್ಲಿ ಕಥೆ ಬರೆಯುವ ಕಮ್ಮಟವೆಂಬ ಪರಿಕಲ್ಪನೆಯಿಂದ ಮೊದಲಾದ ಈ ಕಾರ್ಯಕ್ರಮ ನಮಗೆಲ್ಲ ಜಯಂತ್ ಕಾಯ್ಕ್ಕಿಣಿ ಅವರ ಬದುಕು ಬರಹದ ಬಗ್ಗೆ ಕೆಲವು ಒಳನೋಟವನ್ನು ನೀಡಿತು. ನಿರರ್ಗಳವಾದ , ಸಾಹಿತ್ಯ ಮೌಲಿಕೆಗಳಿಂದ ತುಂಬಿದ ಜಯಂತ್ ಅವರ ಮಾತು ಆಲಿಸುವುದೇ ಒಂದು ಅನುಭವ. ನಮ್ಮ ಅನಿವಾಸಿ ಸದಸ್ಯರು ಬರೆದ ಕಥೆಗಳನ್ನು ಓದಿ ಅದನ್ನು ವಿಶ್ಲೇಷಿಸಿ ಕಥೆ ಬರೆದ ಲೇಖಕ ಲೇಖಕಿಯರಿಗೆ ಅವರು ಕೊಟ್ಟ ಸೂಕ್ತ ವಾದ ಸಲೆಹೆ, ಮಾರ್ಗದರ್ಶನ ಎಲ್ಲರಿಗೂ ಮುಂದೆ ಕಥೆ ಬರೆಯಲು ಸ್ಫೂರ್ತಿ ತಂದುಕೊಟ್ಟಿರಬಹುದು. ಒಂದು ಕಥೆಯನ್ನು ಹೇಗೆ ಹಲವಾರು ದೃಷ್ಟಿ ಕೋನಗಳಿಂದ ಗ್ರಹಿಸಬಹುದು ಎಂಬುದನ್ನು ನಾನು ಈ ಕಮ್ಮಟದಿಂದ ಕಲಿತೆ. ಕಥೆ ಕಥೆಯಾಗಬೇಕಾದರೆ ಯಾವ ಅಂಶಗಳು ಮುಖ್ಯ, ಕಥೆ ಹೇಗೆ ತನ್ನ ಗತಿಯನ್ನು ತಾನೇ ನಿರ್ಧರಿಸುತ್ತದೆ ಈ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು ಒಂದು ವಿದ್ವತ್ಪೂರ್ಣ ವಿಚಾರಗೋಷ್ಠಿಯ ಅನುಭವವಾಯಿತು. ಕಾವ್ಯ, ವಿಮರ್ಶೆ ಮತ್ತು ಪ್ರವಾಸ ಕಥನಗಳ ಬಗ್ಗೆ ವಿಶೇಷ ಆಸಕ್ತಿಯಿರುವ ನನಗೆ ಮುಂದಕ್ಕೆ ಸಣ್ಣ ಕಥೆ ಬರೆಯುವ ಒಂದು ಹಂಬಲವನ್ನು ಈ ಕಾರ್ಯಕ್ರಮ ಮೂಡಿಸಿದೆ.
    ಅನಿವಾಸಿಗಳು ಬರೆದ ಒಂದೊಂದೂ ಕಥೆಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹಲವಾರು ಸಾಮಾಜಿಕ ಚಿಂತನೆಗಳನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಇಷ್ಟು ಮಿತವಾದ ಪದಗಳಲ್ಲಿ, ಬರವಣಿಗೆಯ ಸಾಲುಗಳಲ್ಲಿ, ಭಾಷೆಯಲ್ಲಿ ಎಷ್ಟೇಲ್ಲಾ ಹೇಳಬಹುದು ಎಂಬ ವಿಚಾರ ನನಗೆ ಸೋಜಿಗವೆನಿಸಿದೆ.

    Like

  2. ಕಾಯ್ಕಿಣಿ ಜೊತೆ ಕತೆ, ಜಯಂತರೊಡನೆ ಪಟ್ಟಾಂಗ ಎನ್ನುವ ಕೂತೂಹಲ ಕೆರಳಿಸುವ ಶೀರ್ಶಿಕೆ ಹೊತ್ತು ಹೊರಬಂದ ಈ ವಾರದ ಅನಿವಾಸಿಯ ಲೇಖನ ಆಸಕ್ತಿಯನ್ನು ತಣಿಸುವಲ್ಲಿ ಸಫಲವಾಗಿದೆ. ಕಾರ್ಯಕ್ರಮವನ್ನು ಯೋಜಿಸಿದ್ದರಿಂದ ಹಿಡಿದು, ಕಾರ್ಯಕ್ರಮ ಮುಗಿಯುವವರೆಗೆ ಯಾವ ರೀತಿಯ ಚಿಕ್ಕ ವಿವರವೂ ಇದರಲ್ಲಿ ಬಿಟ್ಟು ಹೋಗಿಲ್ಲ. ಜೊತೆಗೆ ಲಗತ್ತಿಸಿರುವ ಚಿತ್ರಗಳು ಈ ಲೇಖನಕ್ಕೆ ಮೆರುಗು ಕೊಟ್ಟಿವೆ. ಪರೀಕ್ಷೆಗೆ ಬಂದವರೆಲ್ಲ ಪಾಸ್ ಅಂತಾದರೆ, ಈ ಲೇಖನ ಒದಿದವರೆಲ್ಲ ಈ ಸಮಾಲೋಚನೆಯಲ್ಲಿ ಭಾಗವಹಿಸಿದಂತೆ. ಮುರಳಿಯವರ ಹಾಸ್ಯ ಲೇಪನ ಅಲ್ಲಲ್ಲಿ ಓದುಗರ ಮೊಗದಲ್ಲಿ ನಗೆ ತರಿಸುತ್ತದೆ. ಗೌರೀಶ ಕಾಯ್ಕಿಣಿ, ಮುಂಬೈನ ಜೀವನ, ಬರೆಯುವ ಶೈಲಿ, ಗೋಕರ್ಣ,,,, ಯಾವ ಚಿಕ್ಕ ಮಾಹಿತಿಯನ್ನೂ ಮುರಳಿಯವರು ಮರೆತಿಲ್ಲ. ಈ ಪರೀಕ್ಷೆಯಲ್ಲಿ ರಾಮಶರಣ್ ಮತ್ತು ಮುರಳಿ ಹತ್ವಾರ್ ಶೇಕಡಾ ೧೦೦ ಕ್ಕೆ ೧೦೦ ಗಳಿಸಿ ಉತ್ತೀರ್ಣರಾಗಿದ್ದಾರೆಂದರೆ ಅತಿಶಿಯೋಕ್ತಿಯೇನಲ್ಲ.

    Like

  3. E ಜಗುಲಿ (೨) ರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಹೋಯಿತಲ್ಲ ಎಂದು
    ಬೇಸರದಲ್ಲಿದ್ದ ನನಗೆ, ಈ ವಾರದ
    ಲೇಖವನ್ನೋದಿ ಪಾಲ್ಗೊಂಡಷ್ಟೇ ಸಂತೋಷವಾಯಿತು. ಜರುಗಿದ ಕಾರ್ಯಕ್ರಮದ ವಿವರಣೆ, ಕಾಯ್ಕಿಣಿಯರ ಮನದಾಳದ ಮಾತುಗಳನ್ನು ಸಾರಾಂಶ ದೊಂದಿಗೆ ಓದುಗರ ಕಣ್ಣಿಗೆ ಕಟ್ಟುವಂತೆ ಸ್ವಾರಸ್ಯಕರವಾಗಿ ತಮ್ಮ ಪದ ಪುಂಜಗಳಲ್ಲಿ ಹಂಚಿಕೊಂಡಿದ್ದಕ್ಕೆ ರಾಮ್ ಶರಣ್ ಹಾಗೂ ಮುರಳಿಯವರಿಗೆ ಧನ್ಯವಾದಗಳು

    Like

  4. ಮೊದಲನೆಯದಾಗಿ, ಐದೇ ದಿನಗಳಲ್ಲಿ ತಾವು ಏರ್ಪಡಿಸಿ ನಿಭಾಯಿಸಿದ ಎರಡನೆಯ ಈ-ಜಗುಲಿಯ ವರದಿ, ಅನಿಸಿಕೆ, ವಿಮರ್ಶೆ(?)ಯನ್ನು ಸಂಪಾದಕರ ದುಂಬಾಲಿಗೆ ಮಣಿದು ಬರೆದುಕೊಟ್ಟದ್ದಕ್ಕೆ, ಕಾಯ್ಕಿಣಿಯವರಿಂದ ಫೋಟೋ, ಸಲಹೆ-ತಿದ್ದುಪಡೆ ತರಿಸಿದ್ದಕ್ಕೆ ಧನ್ಯವಾದಗಳು. ಎರಡನೆಯದಾಗಿ, ನಾನು ಆ ದಿನದ ಅದ್ಭುತ ಅನುಭವದ ತುಣುಕುಗಳನ್ನು ಮೆಲುಕು ಹಾಕುತ್ತಿದ್ದಾಗಲೇ ಅವೆಲ್ಲವನ್ನೂ ನೆನಪಿಸಿ, ಹಾಸ್ಯ, ವಿಮರ್ಶೆ ಹರಟೆಯ ’ ಚಕ್ಕುಲಿ-ಕೋಡುಬಳೆ, ಮಂಡಾಳ್-ಒಗ್ಗರಣಿ’ ಸರಬರಾಜು ಮಾಡಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಉಣಬಣಿಸಿದ್ದಾರೆ ಮುರಳಿಯವರು. ನಡೆದ ಚರ್ಚೆಯ ಪ್ರತಿಯೊಂದು ವಿಷಯವನ್ನೂ ನೆನಪಿಟ್ಟು ಬರೆದಿಟ್ಟಿದ್ದಾರೆ. ಆ ಮುದ್ರಿಕೆ ತಯಾರಾಗುವವರೆಗಾದರೂ, (ಮತ್ತು ಆದ ಮೇಲೂ) ರಾಂ ಅಂದಂತೆ ”ಮೆಲುಕು ಹಾಕಲು ಈ ಕುರುಕಲು ತಿಂಡಿಯನ್ನು” ಆಸ್ವಾದಿಸಲು ಕೊಟ್ಟಿದ್ದಾರೆ. ನಾನಂತೂ ಎರಡು-ಮೂರು ಸಲ ಬಾಯಾಡಿಸಿದೆ, ಈಗಾಗಲೇ. ಆ ಕಥೆಗಳನ್ನು ಓದಿಸಿ, ಮುದ್ರಿಸಿ, ಸಂಗ್ರಹಿಸಿ, ಪರಿಷ್ಕರಿಸಿ ಧ್ವನಿರೂಪದಲ್ಲಿ ಸೌಂಡ್ ಕ್ಲೌಡ್ ದಲ್ಲಿ ಕೇಳಲು ಅನುವುಮಾಡಿಕೊಟ್ಟವರಿಗೆಲ್ಲವೂ ಪ್ರಣಾಂ. ಶ್ರೀವತ್ಸ ದೇಸಾಯಿ

    Like

  5. Information about this Zoom meeting with Sri J.K held on 9th Aug was perhaps circulated only to those who are on anivaasi WhatsApp group. As I am not a member of this elite Intellectual group I was not aware of this meeting. In future can a circular from KB be sent like it is done for our zoom meetings?.
    Some of us who contribute to anivaasi are also interested in joining such meetings and should not be restricted to just who are on WhatsApp.

    RM

    Like

    • Absolutely agree. Please accept my apologies on behalf of all Anivaasi WhatsApp group. I will make it a point that you will be included in future meetings. You are one of the backbones of ‘Anivaasi’ web platform and you have given us some of the finest articles.

      – Keshav

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.