ಲಾಸ್ಟ್ ಶಿಫ್ಟ್

ವಿಧಿಯಾಟವನ್ನು ಬಲ್ಲವರಾರು ?’ ಕೆಲವೊಮ್ಮೆ ವಿಧಿಯ ಕ್ರೂರತೆಯನ್ನು ಎದುರಿಸಿ ಹೋರಾಡುವುದು ಎಂತಹ ಬಲವಾದ ಮನುಷ್ಯನನ್ನೂ ಸಹ ಕ್ಷಣದಲ್ಲಿ ಕುಗ್ಗಿಸಬಲ್ಲದು. ಅಂತಹ ಹೋರಾಟದಲ್ಲೂ ಆಶಾಕಿರಣವನ್ನು ನೋಡಬಲ್ಲ ಮಾನವನ ಪ್ರಯಾಸವನ್ನು ಮೆಚ್ಚಲೇಬೇಕು. ಈ ವಾರದ ಕತೆ “ಲಾಸ್ಟ್ ಶಿಫ಼್ಟ” ನ‌ಲ್ಲಿ ಅಂತಹ ಆಶಾವಾದಿಯ, ಮಾನವೀಯತೆಯ ಪರಿಚಯವಿದೆ. ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸ೦ದೇಶವಿದೆ. ಓದಿ ಪ್ರತಿಕ್ರಿಯಿಸಿ – ಸಂ

ಲಾಸ್ಟ್ ಶಿಫ್ಟ್

ಇದೇ ನನ್ನ’ಇದೇ ನನ್ನ ಲಾಸ್ಟ್ ಶಿಫ್ಟ್’. ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ, ಟೈ ಸರಿ ಮಾಡಿಕೊಂಡು ತಲೆಯ ಮೇಲೆ ಹ್ಯಾಟ್ ಏರಿಸಿಕೊಂಡು, ಟ್ಯಾಕ್ಸಿಯತ್ತ ಹೊರಡುವಾಗ ಸುಲೇಮಾನ್ ತನ್ನ ಮನಸಿನಲ್ಲಿ ಗಟ್ಟಿಯಾಗಿ ಹೇಳಿಕೊಂಡ. ಮೂವತ್ತೈದು ವರ್ಷದ ಹಿಂದೆ ಹೆಂಡತಿ ಮತ್ತು ಪುಟ್ಟ ಮಗುವಿನ ಜೊತೆ ದೋಣಿಯೊಂದನ್ನು ಏರಿ ಸೊಮಾಲಿಯಾದಿಂದ ಇಂಗ್ಲೆಂಡಿನವರೆಗೆ ತೇಲಿಬಂದಾಗ, ಬದುಕಿ ಉಳಿದದ್ದೇ ಸಾಕೆನಿಸಿ ಉಳಿದ ಕನಸುಗಳೆಲ್ಲ ಚದುರಿ ಹೋಗಿದ್ದವು. ಇಲ್ಲಿ ಲೀಗಲ್ಲಾಗಿ ಆಶ್ರಯ ಸಿಗುವವರೆಗೆ ಹಾಗೂ-ಹೀಗೂ ಜೀವನ ದೂಡಿದ್ದ. ನಂತರ ಕೈ ಹಿಡಿದ ಟ್ಯಾಕ್ಸಿ ಡ್ರೈವಿಂಗ್ ಅವನ ಬದುಕನ್ನು ಬೆಳೆಸಿತ್ತು. ಎಲ್ಲೋ ನೆನಪಿನ ದೂರದಲ್ಲಿ ಅವನು ಸೊಮಾಲಿಯಾದಲ್ಲಿ ಕಲಿತಿದ್ದರೂ ಇಂಗ್ಲೆಂಡಿನಲ್ಲಿ ಮುಂದುವರಿಸಲಾಗದ ಡಾಕ್ಟರಿಕೆ ನೆರಳಾಗಿ ಆಗಾಗ ಕಾಡುತ್ತಿತ್ತು, ಅಷ್ಟೇ. ಇವೆಲ್ಲ ಮೆಲಕು ಹಾಕುತ್ತ, ಮೂರು ವರ್ಷದ ಹಿಂದೆ ಕ್ಯಾನ್ಸರೊಂದು ದೂರಮಾಡುವವರೆಗೂ ಜೊತೆಗೆ ಬಲವಾಗಿದ್ದ  ಹೆಂಡತಿಯನ್ನು ನೆನೆಯುತ್ತಾ, ಟ್ಯಾಕ್ಸಿಯ ಆಪ್ ತೋರಿಸುತ್ತಿದ್ದ ದಿಕ್ಕಿನೆಡೆಗೆ ಓಡಿಸಿದ. 

ಬೆಳಗಿನ ೫ ಘಂಟೆಯಷ್ಟೇ ಆಗ. ಹೊರಗಿನ್ನೂ ಕತ್ತಲು. ಇನ್ನೂ ಚಳಿಗಾಲದ ಫೆಬ್ರವರಿಯ ಮೊದಲನೇ ವಾರದ ಕೊನೆಯಾದ್ದರಿಂದ  ಬೆಳಕಾಗುವದು ೭ರ ನಂತರವೇ. ಟ್ಯಾಕ್ಸಿ ಹತ್ತಿದ್ದು ೪೦ರ ಆಸುಪಾಸಿನ ಗಂಡಸು ಮತ್ತವನ ವೀಲ್-ಚೇರ್. ಆತ ಮೂಗಿಗೆ ಹಾಕಿದ್ದ ಆಕ್ಸಿಜೆನ್ ನಳಿಗೆ, ಅವನ ನೀರು ತುಂಬಿದ ಮುಖ, ಮತ್ತು ಅವನು ಉಸಿರಾಡುತ್ತಿದ್ದ ರೀತಿ ನೋಡಿ, ಇವನದು ಹಾರ್ಟ್ ಅಥವಾ ಕಿಡ್ನಿ ಫೇಲ್ ಕೇಸು ಇರಬೇಕು ಅನ್ನಿಸಿತು ಸುಲೇಮಾನನಿಗೆ. ಟ್ಯಾಕ್ಸಿ ಆಪ್ ದೊಡ್ಡ ಆಸ್ಪತ್ರೆಯೊಂದರ ದಿಕ್ಕು ತೋರಿಸುತ್ತಿತ್ತು. ತನ್ನ ಗಿರಾಕಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳಲು ನೆನಪಿಸಿ, ಅವನು ಹಾಕಿಕೊಂಡಾಕ್ಷಣ ಟ್ಯಾಕ್ಸಿ ಹೊರಡಿಸಿದ. 

Courtesy ; New York Times

ಮೂವತ್ತು ನಿಮಿಷದ ದಾರಿ ಟ್ರಾಫಿಕ್ಕಿಲ್ಲದ ಕಾರಣ ಬೇಗನೆ ಸರಿದಿತ್ತು. ಆ ಗಿರಾಕಿಯ ಗೊರಕೆ ಮತ್ತು ಆಗಾಗ ಸುಲೇಮಾನನ ಫೋನು ರಿಂಗಾಗಿದ್ದು ಬಿಟ್ಟರೆ ಬೇರಾವ ಶಬ್ದವೂ ಇರಲಿಲ್ಲ. ಎಪ್ಪತ್ತು  ವರ್ಷದಿಂದ ಬಿಡುವಿಲ್ಲದೆ ಉರುಳುತ್ತಿರುವ ಬದುಕಿನ ಚಕ್ರದ ನೆನಪಿನ ಸುರುಳಿ ಎಳೆ-ಎಳೆಯಾಗಿ ತೇಲುತ್ತ ಅವನನ್ನು ಎಚ್ಚರವಿಟ್ಟಿದ್ದವು.  
ಆಸ್ಪತ್ರೆಯ ರಿಸೆಪ್ಷನ್ನಿನಲ್ಲಿ ಆ ಪೇಶಂಟಿಗೆ ಕಾಯುತ್ತಿದ್ದ ಟ್ರಾನ್ಸ್-ಪ್ಲಾಂಟ್ ನರ್ಸಿಗೆ ಅವನನ್ನು ಒಪ್ಪಿಸಿದ.  ಅಲ್ಲಿಂದ  ಹೊರಬರುವಾಗ ಅಲ್ಲಿನ ದೊಡ್ಡ ಗೋಡೆಯೊಂದರ ಮೇಲೆ ಹಾಕಿದ್ದ ಡಾಕ್ಟರಗಳ ಹೆಸರು ಮತ್ತು ಅವರ ಪರಿಣಿತಿಯ ಪಟ್ಟಿಯತ್ತ ಕಣ್ಣು ಹಾಯಿಸಿದ. ಹಿಂದಿನ ನೆನಪುಗಳು ಮತ್ತೆ ತೇಲಿಬಂದವು. ನಮ್ಮ ಕನಸುಗಳೆಲ್ಲ ನಮ್ಮಿಂದಲೇ ಸಾಕಾರವಾಗಬೇಕಂತೇನೂ ಇಲ್ಲವಲ್ಲ ಎಂದು ಸಮಾಧಾನ ತಂದುಕೊಂಡ. 
ಅಷ್ಟರಲ್ಲಿ ಫೋನು ಮತ್ತೆ ರಿಂಗಾಯಿತು. ಅರ್ಧ ಗಂಟೆಯಿಂದ ಮೂರ್ನಾಕು ಬಾರಿ ಬಂದಿದ್ದ ನಂಬರಿನಿಂದ ಮತ್ತೆ ಫೋನ್ ಬಂದಿತ್ತು. ‘ಹಲೋ’ ಎಂದ. ಅದೇ ಆಸ್ಪ್ರತ್ರೆಯಿಂದಲೇ ಬಂದ ಫೋನದು. ಅವರು ಹೇಳುತ್ತಿದ್ದ ಮಾತುಗಳು ಕೇಳಿಸದಷ್ಟು ಕಣ್ಣು ಕತ್ತಲೆ ಕಟ್ಟಿ, ತಲೆಸುತ್ತಿ ಕುಸಿದು ಬಿದ್ದ. ….. 

ಒಂದು ವಾರದ ನಂತರ:

ಶುಕ್ರವಾರದ ನಮಾಜಿಗೆ ಸೇರಿದ್ದ ಜನರಿಗೆ ಸುಲೇಮಾನ್ ಪಾಂಫ್ಲೆಟ್ ಒಂದನ್ನು ಹಂಚುತ್ತಿದ್ದ. ಅದರಲ್ಲಿ ಹೀಗೆ ಬರೆದಿತ್ತು:
I am taxi driver Suleman, proud father of Dr Ali, consultant neurosurgeon (born 10th Jan 1983, died 7th February 2020). I request you to register for organ donation. A heart filled with love never stops beating. 

courtesy ; Facts about Organ Donation/ Get healthy and stay healthy

(ನಾನು ಟ್ಯಾಕ್ಸಿ ಡ್ರೈವರ್ ಸುಲೇಮಾನ್, ಡಾ. ಅಲಿ, ಕನ್ಸಲ್ಟೆಂಟ್ ನ್ಯೂರೊಸರ್ಜನ್ (ಜನನ: ೧೦/೦೧/೧೯೮೩, ಮರಣ: ೦೭/೦೨/೨೦೨೦) ಅವನ ಹೆಮ್ಮೆಯ ಅಪ್ಪ. ದಯವಿಟ್ಟು ಅಂಗಾಂಗ ದಾನಕ್ಕೆ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ. ಪ್ರೀತಿ ತುಂಬಿದ ಹೃದಯ ಎಂದೂ ನಿಲ್ಲದು).

ಅಲ್ಲಿ ಸೇರಿದ್ದ ಜನ ಅವರಲ್ಲೇ ಪಿಸು-ಪಿಸು ಮಾತಾಡಿಕೊಳ್ಳುತ್ತಿದ್ದರು. ವಾರದ ಹಿಂದೆ ಸುಲೇಮಾನನ ಮಗನಿಗೆ ಒಂದು ಅರ್ಜೆಂಟ್ ಶಿಫ್ಟಿಗೆ ಆಸ್ಪತ್ರೆಗೆ ಸರಿರಾತ್ರಿ ಕರೆದರಂತೆ. ಅವನು ಹೋಗುತ್ತಿದ್ದ ಟ್ಯಾಕ್ಸಿ ಆಕ್ಸಿಡೆಂಟಾಗಿ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇವನ ತಲೆಗೆ ಪೆಟ್ಟಾಗಿ, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಉಳಿಯಲಿಲ್ಲವಂತೆ. ಅವನು ಸೀಟ್-ಬೆಲ್ಟ್ ಹಾಕಿದ್ದರೆ ಉಳಿಯುತ್ತಿದ್ದನೇನೋ… ಅವನ ಹಾರ್ಟ್ ಮತ್ತೆ ಕಿಡ್ನಿ ದಾನ ಮಾಡಿದರಂತೆ… ಹೀಗೆ ತಾವೇ ಕಂಡವರಂತೆ ಆಗಿದ್ದನ್ನು ಹೇಳಿಕೊಳ್ಳುತ್ತಿದ್ದರು.

ಹೊರಗಡೆ, ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯುತ್ತಿದ್ದ ಸುಲೇಮಾನನ ಟ್ಯಾಕ್ಸಿ ಮುಂದಿನ ಶಿಫ್ಟಿಗೆ ಕಾಯುತ್ತಿತ್ತು. 

ಡಾ. ಮುರಳಿ ಹತ್ವಾರ


3 thoughts on “ಲಾಸ್ಟ್ ಶಿಫ್ಟ್

  1. ಚಿಕ್ಕ ಕತೆಯಲ್ಲಿ ಏನೆಲ್ಲ ವಿಷಯಗಳು! ಬೇನಾಮಿ ವಲಸೆ, ಬಿಡಬೇಕಾಗಿ ಬಂದ ಕಾಯಕ, ಟ್ರಾನ್ಸ್ ಪ್ಲಾಂಟ್…

    ಈ ಹಿಂದೆ ನಾನು ಬರೆದ ‘ನೀಲು’ ನೆನಪಾಯಿತು.

    ಕಾಯುತ್ತಿದ್ದ ಆತ
    ಕಿಡ್ನಿ ಟ್ರಾನ್ಸಪ್ಲಾಂಟಿಗೆ
    ದಿನವೂ ಪ್ರಾರ್ಥಿಸುತ್ತಿದ್ದ
    ಯುವಕರ ಆಕ್ಸಿಡೆಂಟಿಗೆ

    – ಕೇಶವ

    Like

  2. ಮನವನ್ನು ತಟ್ಟುವ, ಎದೆಯನ್ನು ಕಲಕುವ ’ಮಿನಿ’ ಕಥೆ! ಕೂತು ಕೇಳಿದರೆ ಬೇರೆ ನಾಡಿಗೆ ವಲಸೆ ಹೋದ ಸಮಾಜದ ಜನರಲ್ಲಿ ಒಬ್ಬೊಬ್ಬರ ಕಥೆಯೂ ಒಂದೊಂದು ತರ ಇರುತ್ತದೆ. ಅವರ ಆಸೆ-ಆಕಾಂಕ್ಷೆಗಳು, ಹಸಿವಿ, ನೀರಡಿಕೆ, ಆಶೆ-ನಿರಾಶೆಗಳ ಮಧ್ಯೆ ಸಫಲ ಜೀವನದ ಕಥೆಗಳೂ ಇರುತ್ತವೆ. ಒಬ್ಬೊಬ್ಬರ ಜೀವನದಲ್ಲೂ ವಿಧಿಯ ಕೈವಾಡವನ್ನೂ ಕಾಣುತ್ತೇವೆ. ತನ್ನ ಮಗ ದೊಡ್ಡ ವೈದ್ಯನಾಗುವದರಲ್ಲಿ ತನ್ನ ಕನಸನ್ನು ಸಾಕಾರಮಾಡಿದ ಸುಲೇಮಾನ, ಆತನ ಟ್ಯಾಕ್ಸಿ ಕಂಡಂತೆ ವಿಧಿ ಆತನ ಇಳಿವಯಸ್ಸಿನಲ್ಲಿ ತಂದ ಅನಿರೀಕ್ಷಿತ ತಿರುವು, ಆದರೂ ಅಂಗದಾನದಿಂದ ತನ್ನ ’ಮುಕ್ತಿ’ಯನ್ನು ಕಂಡುಕೊಂಡ ತಂದೆ, ಆತನ ಕರ್ತವ್ಯದಕ್ಷ ಮಗ, ಇವು ಬಹುಕಾಲ ನನ್ನ ಮನದಲ್ಲಿ ಉಳಿದವು. ”A heart filled with love never stops beating.” ಎನ್ನುವ ಉಕ್ತಿ ಅರ್ಥಪೂರ್ಣವಾಗಿದೆ. ಈ ಕಥೆಯನ್ನು ಮುರಳಿ ಹತ್ವಾರ್ ಅವರು ಸುಂದರವಾಗಿ ಹೆಣೆದಿದ್ದಾರೆ. ಕಥೆಯನ್ನು ಹೇಳುವ ಕೌಶಲ್ಯ ಅವರಿಗೆ ಸಾಧಿಸಿದೆ ಅನಿಸಿತು.
    ಶ್ರೀವತ್ಸ ದೇಸಾಯಿ

    Like

  3. ಮಿನಿ ಕಥೆಗಳು ಚೆeಳಿಲ್ಲದ ಕೊಂಡಿಯಂತೆ. ಈ ಕಥೆಯ ಕೊಂಡಿ ಆಘಾತಕ್ಕಿಂತಲೂ ಮೀರಿದ ಭಾವನೆಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಮುರಳಿ ತಮ್ಮ ಕಥೆಯಲ್ಲಿ ಸಾಮಾಜಿಕ ಪಿಡುಗುಗಳನ್ನು ಪ್ರತಿಫಲಿಸಿದ್ದಾರೆ. ವಲಸೆ ಬಂದವರ ನನಸಾಗದ ಕನಸು ನಾವು ಪ್ರತಿ ದಿನ ನೋಡುವಂತಹದು. ತನ್ನ ಅಪೂರ್ಣ ಕನಸನ್ನು ಮಗ ಭವಿಷ್ಯದಲ್ಲಿ ಪೂರ್ತಿಗೊಳಿಸುವ ಸುಲೇಮಾನ್ ಕೊನೆಯಲ್ಲಿ ಪಡುವ ಆಘಾತದಲ್ಲೂ ಇತರರ ಬಾಳಿಗೆ ಬೆಳಕಾಗುತ್ತ ನಮಗೆ ದಾರಿದೀಪವಾಗುತ್ತಾನೆ.

    ಈ ಸಲದ ಕಥಾ ಸರಣಿಯಲ್ಲಿ “ರಿಟೈರ್ ಮೆಂಟ್” ಥೀಮ್ ಒಳಹರಿವಾಗಿರುವುದು ಒಂದು ವಿಶೇಷ.
    – ರಾಂ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.