ಮೊದಲ ಹಾಳೆ ಮತ್ತು ಬಸಾಕಲ್ಲು ಗುಡ್ಡ

ಓದುಗ ಮಿತ್ರರೆ, ಈ ವಾರದ ಸಂಚಿಕೆಯಲ್ಲಿ ಮತ್ತೆ ಎರಡು ಸಣ್ಣಕತೆಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಬರಹಗಾರರು ರಾಮಶರಣ್ ಮತ್ತು ದಾಕ್ಷಾಯಿಣಿ. ಈ ಎರಡು ಕತೆಗಳ ವಿಶಿಷ್ಟತೆ ಅವುಗಳ ಅಂತ್ಯದಲ್ಲಿದೆ. ಅಂತ್ಯದ ಆರಂಭ ನಿಮ್ಮ ಊಹೆಗೆ ಬಿಟ್ಟದ್ದು.
ಡಾ.ರಾಮಶರಣರ ಕತೆ ಬಾಲ್ಯದ ಸ್ನೇಹ, ಸಂಬಂಧದ ಮತ್ತುಆನಂದಗಳ ಭಾವನೆಗಳು ನಾವು ಪ್ರೌಢಾವಸ್ಥೆಯ ಜೀವನದ ಜಂಜಾಟಗಳಲ್ಲಿ ನಿರತವಾಗಿ ಕ್ಷಣ ಮರೆತರೂ ಅವು ನಮ್ಮಲ್ಲಿ ಆಳವಾಗಿ ಹುದುಗಿ, ಅವಕಾಶ ಸಿಕ್ಕಾಗೆಲ್ಲ ತಲೆಯೆತ್ತಿ, ಮತ್ತೊಮ್ಮೆ ಅದ ಅನುಭವಿಸುವ ಆಸೆಯಿಂದ ತುಡಿಯುವ ಮನಸ್ಸಿನ ಬಗೆಯನ್ನು, ನಿಜವಾದ ಸ್ನೇಹಿತ ಮತ್ತು ಸ್ನೇಹವನ್ನು ಅರಿವು ಮಾಡಿಕೊಡುತ್ತದೆ.
ಮೊದಲ ಹಾಳೆ ಬಿಚ್ಚಿಕೊಳ್ಳುವ ಪರಿಯಲ್ಲಿ ಬಹಳ ವಿಧಗಳಿವೆ. ಸಂಭಾಷಣೆಯ ಅಗಲಕ್ಕಿಂತ ಆಳ ಮುಖ್ಯ. ಕೆಲವೊಮ್ಮೆ ಪದಗಳು, ಪುಟಗಳಿಗಿಂತ ದೊಡ್ಡ ಕತೆಗಳನ್ನು ಹೇಳಬಲ್ಲವು. ಒಬ್ಬ ವ್ಯಕ್ತಿಯ, ವ್ಯಕ್ತಿತ್ವದ ಮತ್ತು ಅವರ ಜೀವನದ ಬಗ್ಗೆ ನಮ್ಮ ಕಣ್ಣು ತೆರೆಸುವ ಶಕ್ತಿ ಒಂದೆರಡು ವಾಕ್ಯಕ್ಕಿರುವ ರೀತಿ ನಿಜಕ್ಕೂ ಆಶ್ಚರ್ಯಕರ. ಓದಿ ಪ್ರತಿಕ್ರಿಯಿಸಿ – ಸಂ

ಮೊದಲ ಹಾಳೆ

ಇಗ್ಲೆ೦ಡಿನ ವಿಶಿಷ್ಟ ಚಳಿಗಾಲದ ಒ೦ದು ದಿನ, ಬೆಳಗಿನ ೧೦ ರ ಸಮಯವಿರಬಹುದು. ನನ್ನ ಅಂದಿನ ಪಟ್ಟಿಯಲ್ಲಿ ಹತ್ತನೆ, ಅಂಕೆಯ ರೋಗಿ ತನ್ನ ಕಾಯಿಲೆಯ ಜೊತೆಗೆ, ಬೆಳಗಿನಿಂದ ಕೋಣೆಯೊಳಗೆ ಕೂತ ನನಗೆ ಹೊರಗಿನ ಹವಾಮಾನವನ್ನು ನನಗೆ ಕ್ರಿಸ್ಪ್ (crisp) ಎ೦ದು ವರ್ಣಿಸಿ ಹೋದ ಪರಿಯನ್ನು ಮನದಲ್ಲೇ ಮೆಲುಕು ಹಾಕುತ್ತಿದ್ದೆ. ಯಾಕೆಂದರೆ ಈ ಛಳಿನಾಡಿಗೆ ಬರುವ ತನಕ ನನಗೆ ಹವಾಮಾನವನ್ನು‘ಗರಿಗರಿ‘ ಯೆಂದು ವರ್ಣಿಸಿದ್ದನ್ನು ಕೇಳಿಯೆ ಇರಲಿಲ್ಲ. ನಮ್ಮ ರಿಸೆಪ್ಶನ್ನಿನ ಹುಡುಗಿ ”ಡಾಕ್ಟ್ರೆ ನಿಮಗೆ ಪೊಲೀಸಿನವರಿ೦ದ ಫೋನ್” ಎ೦ದಳು. ಫೋಲಿಸ್ ಎ೦ದಾಕ್ಷಣ ನನ್ನ ಜೀವ ಕಾರಣವಿಲ್ಲದೆಯೆ ದಢಕ್ಕೆ೦ದಿತು. ಬೆಳೆದು ಬ೦ದ ದೇಶದ/ಜಾಗದ ಪ್ರಭಾವವಿರಬಹುದು. ಇಲ್ಲಿಯ ಪೋಲಿಸಿನವರು ಸಾಮಾನ್ಯವಾಗಿ ವಿನಯಶೀಲತೆಯನ್ನು ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಂಡಿರುವ ಬಗ್ಗೆ ಭರವಸೆ ಮೂಡಿಬಂತು. ಫೋನಿನಲ್ಲಿ ಮಾತಾಡಿದವ ನಮ್ಮ ಲಿಷ್ಟ(list) ನಲ್ಲಿರುವ ೪೫ ರ ವ್ಯಕ್ತಿ ಸ್ಕಾಟ್ ಲ್ಯಾ೦ಡಿ(Scotland)ನಲ್ಲಿರುವ ಪೆಟ್ರೋಲ್ ಎಣ್ಣೆಯ (oil rig)ಬಾವಿಯಲ್ಲಿ ಬಿದ್ದು ಬಹಳ ದುಸ್ಠಿತಿಯಲ್ಲಿದ್ದು, ಸ್ಥಳೀಯ ವೈದ್ಯರಿಗೆ ಅವನ ಮೆಡಿಕಲ್ ರಿಪೋರ್ಟಿನ ವರದಿಯ ಅಗತ್ಯವಿದೆಯೆ೦ದು ಹೇಳಿ, ಅಲ್ಲಿಯ ವೈದ್ಯರೊಡನೆ ಮಾತನಾಡುವಂತೆ ವಿನಂತಿಸಿಕೊಂಡ. ಇಲ್ಲಿನ ನಿಯಮಗಳನ್ನು ಅನುಸರಿಸಿ, ಅಲ್ಲಿನ ವೈದ್ಯರೊ೦ದಿಗೆ ಮಾತನಾಡಿ ಅಗತ್ಯವಾದ ವರದಿ ಹೇಳಿ ಮುಗಿಸಿದೆ. ಸಂಭಾಷಣೆಯನ್ನು ದಾಖಲಿಸಿದ ನಂತರ ’ ಎಂತಹ ಅನ್ಯಾಯ, ಪಾಪ ಚಿಕ್ಕವಯಸ್ಸು’ ಎನ್ನುವ ಅನುಕ೦ಪ ಮನದಲ್ಲಿ ಮೂಡಿ, ಮತ್ತಿತರ ಭಾವನೆಗಳೊ೦ದಿಗೆ ಬೆರೆತು, ಕೆಲಘ೦ಟೆಗಳಲ್ಲಿ ಮಾಯವಾಯಿತು.

ಬಹುಶಃ ೨ ತಿ೦ಗಳುಗಳೆ ಕಳೆದಿರಬಹುದು. ಮಧ್ಯಾನದ ಸಮಯ, ನಲ್ವತ್ತರ, ಸು೦ದರ ತರುಣಿ ನನ್ನ ಕೋಣೆಗೆ ಬ೦ದು ಕೂತವಳೆ ಅಳಲಾರ೦ಭಿಸಿದಳು. ”ಇದು ಮುಕ್ಕಾಲು ಘ೦ಟೆಯ ಸಮಾಲೋಚನೆ” ಎ೦ದು ದೂರಿತ್ತ ನನ್ನ ಸಿನಿಕ ಮೆದುಳನ್ನು ಸುಮ್ಮನಾಗಿಸಿ, ನನ್ನದಲ್ಲದ ಭಾಷೆಯಲ್ಲಿ ಮಾತನಾಡುವ ಕೃತಕತೆ ಆಕೆಗೆ ತಗಲದ೦ತೆ ಸ್ವಾ೦ತನ ನೀಡಲು ನನ್ನ ಹೃದಯ ಸಜ್ಜಾಯಿತು. ಆಕೆ ತನ್ನ ಪತಿಯ ಆಕಸ್ಮಿಕ ದುರ್ಘಟನೆ ಮತ್ತು ಈಗ ಆತ ಸ್ಕಾಟ್ ಲ್ಯಾಂಡಿನಿಂದ ಬಂದು ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆ ವಿವರಿಸಿದಳು. ’‘ ಮನೆಯಲ್ಲಿ ಎರಡು ಚಿಕ್ಕ ಮಕ್ಕಳು, ಮನೆಯ ಮೇಲಿನ ಸಾಲ ಕಟ್ಟಬೇಕು, ಸಧ್ಯಕ್ಕೆ ಅವನ ಕಂಪನಿ ಪೂರ್ತಿ ಸಂಬಳ ಕೂಡುತ್ತಿದ್ದರೂ, ಭವಿಷ್ಯದ ಭಯ, ಅವ ಮುಂದೆ ಕೆಲಸ ಮಾಡಲಾಗದಿರುವ ಸಾಧ್ಯತೆ, ಮತ್ತಿತರ ಕಷ್ಟಗಳನ್ನು ಕೇಳಿ, ಮನ ಮರುಗಿದರೂ, ‘’ಸಧ್ಯ ಈ ದೇಶದಲ್ಲಿ ಮೆಡಿಕಲ್ ಬಿಲ್ ಕೊಡುವ ಕಷ್ಟವಿಲ್ಲ, ನಮ್ಮ ದೇಶದಲ್ಲಾಗಿದ್ದರೆ ಅದೇ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿರುತ್ತಿತ್ತು’’ಎ೦ದುಕೂ೦ಡೆ. ”ಇಲ್ಲಿ ೨೦ ವರ್ಷ ಕೆಲಸ ಮಾಡಿದರೂ ನನ್ನನ್ನು ಈ ಯೋಚನೆಗಳು ಬಿಟ್ಟಿಲ್ಲವಲ್ಲ…” ನಿಟ್ಟುಸಿರನ್ನು ನಿಶ್ಯಬ್ಧವಾಗಿ ಹೊರಬಿಟ್ಟೆ. ಆಕೆಗೆ ವೈದ್ಯಳಾಗಿ ನನ್ನ ಕೈಲಾಗಬಹುದಾದ ಸಹಾಯವನ್ನು ಮಾಡುವುದಾಗಿ ಭರವಸೆಯಿತ್ತೆ.

ಆಕೆ ತಾನು ಕೂತ ಕುರ್ಚಿಯಿ೦ದ ನಿಧಾನವಾಗಿ ಎದ್ದು, ತೇವದ ಕಣ್ಣನ್ನು, ಹರಿಯುತ್ತಿರುವ ಮೇಕಪ್ ಅನ್ನು ನವಿರಾಗಿ ಒರೆಸಿಕೊಂಡು, ರೂಮಿನಲ್ಲಿರುವ ಕನ್ನಡಿಯಲ್ಲಿ, ಕೂದಲು ಮುಖ ಸರಿಪಡಿಸಿಕೊ೦ಡು, ಬಾಗಿಲ ಬಳಿ ಹೊರಟವಳು ಹಿಂದೆ ತಿರುಗಿ ನಿಂತು ” ಡಾಕ್ಟ್ರೆ ನನ್ನ ಗ೦ಡನಿಗೆ ಪೆಟ್ಟಾಗಿರುವುದೆಲ್ಲ ಬಲಭಾಗದಲ್ಲಿ, ತೋಳು ಮತ್ತು ಕೈ ಹೆಚ್ಚುಕಮ್ಮಿ ಜಜ್ಜಿಯೆ ಹೋಗಿದೆ. ಆ ಚ೦ಡಾಲನಿಗೆ ನನ್ನ ಮೇಲೆ ಮತ್ತೆ ಕೈಯೆತ್ತಲು ಸಾಧ್ಯವಾಗುವುದೆ? ಆ ದೇವರ ಪರಿ ಒಂದು ರೀತಿಯ ಸೋಜಿಗವಲ್ಲವೆ?” ಎಂದಳು.

ನನ್ನ ಹೃದಯ ಕ್ಷಣ ನಿಂತು, ಜೋರಾಗಿ ಹೊಡೆದುಕೊಳ್ಳತೊಡಗಿತು. ಆಕೆ ಬಾಗಿಲು ಹಾಕಿಕೊ೦ಡ ಶಭ್ದ ಕಿವಿಗೆ ಬಿತ್ತು, ಭರದಿ೦ದ ಟ್ಯೆಪ್ ಮಾಡುತ್ತಿದ್ದ ನನ್ನ ಬೆರಳುಗಳು ತಟಸ್ಥಗೊ೦ಡವು. ನನ್ನ ಕಾಲುಗಳು ಆಕೆಯನ್ನು ಮತ್ತೆ ಕೋಣೆಯೊಳಗೆ ಕರೆಯಲು ತ್ವರಿತವಾಗಿ ಚಲಿಸಿದವು. ನನ್ನ ಕತೆಯ ಮೊದಲ ಹಾಳೆಯಲ್ಲಿ ಪದಗಳ ಚಿತ್ರ ಮೂಡತೊಡಗಿತು.

ಡಾ. ದಾಕ್ಷಾಯಿಣಿ ಗೌಡ

ಬಸಾಕಲ್ಲು ಗುಡ್ಡ

Man On Hill Pictures | Download Free Images on Unsplash
Courtesy: Unsplash Images

ಊರಿಗೆ ಹೋದಾಗಲೆಲ್ಲ ಬಸಾಕಲ್ಲು ಗುಡ್ಡದ ತುದಿಯ ಬಂಡೆ ಹತ್ತಿ ಸೂರ್ಯಾಸ್ತ ವೀಕ್ಷಿಸದಿದ್ದರೆ; ಗುಡ್ಡದ ಪಾದ ತೊಳೆವ ಸಮುದ್ರದ ಅಲೆಗಳ ತಾಳಕ್ಕೆ ಬಂಡೆಯ ಅಂಚಿನಲ್ಲಿ ಕುಳಿತು ಕಾಲು ತೂಗಿಸುತ್ತ ಮೈಮರೆಯದಿದ್ದರೆ, ಉಮೇಶನಿಗೆ ಊರಿನ ಭೇಟಿ ಅಪೂರ್ಣ ಎಂದೆನಿಸುತ್ತಿತ್ತು. ಅವನಿಗೂ ಗುಡ್ಡಕ್ಕೂ ಅಂಥ ನಂಟು! ಅದಕ್ಕೆ ಕಾರಣ ಪಕ್ಕದ ಮನೆ ಶೆಟ್ಟಿ ಮಾಸ್ತರರ ಮಗ ರೋಹಿದಾಸ. ಇಬ್ಬರಿಗೂ ಬಸಾಕಲ್ಲು ಗುಡ್ಡ ಎಂದರೆ ವಿಚಿತ್ರ ಆಕರ್ಷಣೆ. ಮೇಲಿಂದ ಮೇಲೆ ಜೀವದ ಗೆಳೆಯನ ಮನೆ ಎಂಬಂತೆ ಅಲ್ಲಿಗೆ ಓಡುತ್ತಿದ್ದರು. ದಾರಿಯಲ್ಲಿ ಮರದ ಬುಡದಲ್ಲಿ ಬಿದ್ದ ಬೋರೆ ಹಣ್ಣನ್ನೋ, ಪೊದೆಯಲ್ಲಿ ಬೆಳೆದ ಮುಳ್ಹಣ್ಣನ್ನೋ ಆರಿಸಿ, ಗುಡ್ಡದ ಬುಡದ ತೊರೆಯಲ್ಲಿ ನೀರಾಡಿ ಬಂಡೆ ಹತ್ತುತ್ತಿದ್ದರು. ಬಂಡೆಯ ಇನ್ನೊಂದು ಮಗ್ಗುಲಲ್ಲಿ ಮೆಟ್ಟಿಲಿನಂತೆ ಚಾಚಿದ ಭಾಗ, ಕಣ್ಣು ಹಾಸುವರೆಗೂ ಹದಾರನೆ ಬಿದ್ದ ಸಮುದ್ರವನ್ನು ಆರಾಮವಾಗಿ ಒರಗಿ ಕೂತು ನೋಡಲು ಹೇಳಿ ಮಾಡಿಸಿದಂತಿತ್ತು. ಅಲ್ಲಿ ಕಳೆದ ಎಂದೂ ಮರೆಯಲಾರದ ಮಧುರ ಕ್ಷಣಗಳೇ ಅಲ್ಲವೇ ಅವನ-ರೋಹಿದಾಸನ ಸ್ನೇಹವನ್ನು ಮಜಬೂತಾಗಿಸಿದ್ದು? ಜೀವನದುದ್ದಕ್ಕೂ ಬುತ್ತಿಯಂತೆ ಅವನ ಸಹಾಯಕ್ಕೊದಗಿದ್ದು? ಇದೇ ಗುಡ್ಡವಲ್ಲವೇ ಅವನ ಏಳು-ಬಿಳುಗಳಿಗೆ, ಸುಖ-ದುಃಖಗಳಿಗೆ ಆಸರೆಯಾಗಿ ನಿಂತಿದ್ದು?

ಪಿಯುಸಿ ಮುಗಿಸಿ ಊರು ಬಿಟ್ಟ ಮೇಲೆ ರೋಹಿದಾಸನ ಸಂಪರ್ಕ ತಪ್ಪಿತ್ತು. ಅವನ ಅಪ್ಪನಿಗೆ ವರ್ಗವಾಗಿ ಅವರೆಲ್ಲ ಊರು ಬಿಟ್ಟಿದ್ದರು. ರೋಹಿದಾಸ ಮನದ ಮೂಲೆಯಲ್ಲಿ, ಅಟ್ಟದ ಮೇಲಿಟ್ಟ ಹಳೇ ಆಟಿಕೆಯಂತೆ ಅಡಗಿದ್ದ, ಧೂಳು-ಬಲೆಗಳ ಪರದೆಯ ಹಿಂದೆ. ವರ್ಷಗಳು ಕಳೆದಂತೆ ಬೋರೆ ಮರ ಯಾರದೋ ಮನೆಯ ಒಲೆಯ ಪಾಲಾಗಿತ್ತು; ಮುಳ್ಹಣ್ಣಿನ ಪೊದೆಗಳ ಜಾಗದಲ್ಲಿ ಹೊಸ ಬಡಾವಣೆಯೊಂದು ಬಂದಿತ್ತು; ತೊರೆಗೆ ಮಳೆಗಾಲದಲ್ಲಿ ಮಾತ್ರ ಜೀವ ಬರುತ್ತಿತ್ತು.

ಉಮೇಶನಿಗೆ ಈಗ ಹಿಂದೆ-ಮುಂದೆ ಯಾರೂ ಇಲ್ಲ. ಅಪ್ಪ-ಅಮ್ಮ ಸತ್ತ ಮೇಲೆ ತನ್ನ ಸಮಯವನ್ನೆಲ್ಲ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಕಷ್ಟು ಸಾಧನೆ ಮಾಡಿದ್ದ; ಸಮಾಜಕ್ಕೆ ಕೈಲಾದಷ್ಟು ವಾಪಸು ಕೊಟ್ಟಿದ್ದ. ಇನ್ನೂ ಬದುಕಬೇಕು, ಮತ್ತಷ್ಟು ಸಾಧಿಸಬೇಕು ಎಂಬ ಹಂಬಲ ಅವನಿಗಿರಲಿಲ್ಲ. ತನ್ನ ಜೀವ ಪರಭಾರೆಯಾಗುವ ಮೊದಲು ಇಹಲೋಕ ತ್ಯಜಿಸಬೇಕೆಂಬುದು ಅವನ ಧೋರಣೆ. ತನ್ನ ಕೊನೆಯನ್ನು ತಾನೇ ಕೊನೆಯ ಕ್ಷಣದವರೆಗೆ ನಿರ್ಧರಿಸಬೇಕೆಂಬುದು ಅವನ ಇಚ್ಛೆ. ಅದನ್ನೇ ಕಾರ್ಯರೂಪಕ್ಕೆ ತರಲು ಅವನು ಊರಿಗೆ ಬಂದಿದ್ದ. ಹಾಗೆಂದು ಆತ ಪಲಾಯನವಾದಿಯೇನಲ್ಲ, ಕೇವಲ ಪ್ರಾಯೋಗಿಕವಾಗಿ ಚಿಂತಿಸಿದ್ದನಷ್ಟೆ.

ಎಂದೂ ಕಾಡದ ರೋಹಿದಾಸನ ನೆನಪು ಇಂದು ಉಮೇಶನನ್ನು ಯಾಕೋ ಬಿಟ್ಟಿರಲಿಲ್ಲ. ಬಹು ದಿನದಿಂದ ಕಾಣದ ಗೆಳೆಯನನ್ನು ಕಂಡ ನಾಯಿಯಂತೆ ಮೇಲಕ್ಕೆ ಹಾರುತ್ತ, ಮೈ ನೆಕ್ಕುತ್ತ; ಜೊತೆಬಿಡಲಾರೆ, ಬಿಟ್ಟರೆ ಮತ್ತೆ ನೀ ಸಿಕ್ಕಲಾರೆ ಎಂಬಂತೆ. ಬೇರೆ ದಾರಿ ಕಾಣದೆ ’ಬಾ ಜೊತೆಯಲ್ಲ” ಎಂದು ಉಮೇಶ ಹಳೆ ಗೆಳೆಯನ ನೆನಪನ್ನು ಮೆಲಕು ಹಾಕುತ್ತ ಸಾಗಿದ. ‘ತನಗಿಂತ ಎರಡು ವರ್ಷ ದೊಡ್ಡವನಲ್ಲವೇ ದೋಸ್ತ; ಇಬ್ಬರೂ ಒಬ್ಬರನ್ನೊಬ್ಬರು ದೋಸ್ತ ಎಂದೇ ಕರೆಯುತ್ತಿದ್ದೆವಲ್ಲವೇ? ಎಲ್ಲಿದ್ದನೋ ಪುಣ್ಯಾತ್ಮ? ಆ ಹುಡುಗಾಟಿಕೆಯ ಬುದ್ಧಿ ಇನ್ನೂ ಇದ್ದೀತೇ? ಇರಲಿಕ್ಕಿಲ್ಲ, ಸಂಸಾರದ ಜವಾಬ್ದಾರಿ ಗಾಂಭೀರ್ಯದ ಕವಚಹೊಡೆಸಿರಬಹುದು.. ಹಾಣೆ-ಗಿಂಡಿಯ (ಗಿಲ್ಲಿದಾಂಡು) ಚಾಕಚಕ್ಯತೆಯನ್ನು ತನ್ನ ಮಕ್ಕಳಿಗೂ ದಾಟಿಸಿರಬಹುದೇ? ಛೇ, ಈಗೆಲ್ಲಿ ಆಡುತ್ತಾರೆ ಹಾಣೆ-ಗಿಂಡಿ? ಎಲ್ಲೇ ಇರು ಸುಖವಾಗಿರು,’ ಎಂದು ಹರಸುವಷ್ಟರಲ್ಲಿ ಬಂಡೆಯ ಬುಡ ಸೇರಿದ್ದ. ಬಂಡೆ ಹತ್ತುತ್ತಿದ್ದಂತೇ ಸೂರ್ಯ ಕೆಳಗಿಳಿಯತೊಡಗಿದ್ದ. ತಾನು ಮೆಟ್ಟಿಲು ತಲುಪಿದಾಗ, ಸೂರ್ಯಾಸ್ತವಾಗುವುದು ಖಚಿತ. ಮೆಟ್ಟಿಲ ಮೇಲೆ ಕ್ಷಣ ನಿಂತು, ಅಲೆಗಳ ಗಾನಕ್ಕೆ ಸುಧಾರಿಸಿಕೊಂಡು ಮೆತ್ತನೆ ಜಾರಿದರೆ, ಹಕ್ಕಿಯಂತೆ ತೇಲಿ ಕಾಣದ ಲೋಕಕ್ಕೆ ತೆರಳಲು ತಕ್ಕ ಮುಹೂರ್ತ ಎಂದು ಕನಸಿದ.

ಬಂಡೆಯ ತುದಿಗೆ ಬಂದಂತೆ ಅರಿವಾಯಿತು ಇಂದು ತನಗೊಂದು ಜೊತೆಯಿದೆಯೆಂದು. ಮೆಟ್ಟಿಲ ಮೇಲೆ ಯಾವನೋ ಆಗಂತುಕ ನಿಂತಿದ್ದಾನೆ. ‘ಛೇ, ನನ್ನ ಯೋಜನೆಗೆ ಎಡವಟ್ಟಾಯಿತಲ್ಲ,’ ಎಂದು ಕಸಿವಿಸಿ ಆಯಿತು. ಸೂರ್ಯಾಸ್ತ ಆಸ್ವಾದಿಸಲು ಬಂದವನಿರಬೇಕು. ಸ್ವಲ್ಪ ಕಾದರೆ ಆತ ಹಿಂದಿರುಗುತ್ತಾನೆ. ಹೇಗೂ ಸಾಯಲು ಬಂದಿದ್ದೇನೆ. ಕ್ಷಣವೆರಡು ಕ್ಷಣ ತಡವಾದರೆ ಬಿದ್ದು ಹೋಗುವುದೇನು ಎಂದು ತನ್ನನ್ನು ಸಮಾಧಿನಿಸಿಕೊಂಡ. ಅಷ್ಟರಲ್ಲೇ ಆಗಂತುಕ ಕೈಗಳರೆಡನ್ನು ಮೇಲೆತ್ತುವುದು ಕಂಡಿತು. ‘ಅರೇ, ಇದೇನು? ಈತನೂ ಹಾರಲು ಬಂದಿದ್ದಾನೆಯೇ?’ ಎಂದುಕೊಳ್ಳುತ್ತಲೇ ಆತನೆಡೆ ಧಾವಿಸಿದ. ಬಾಹುಗಳನ್ನು ಆಗಂತುಕನ ಹೊಟ್ಟೆಯ ಸುತ್ತ ಸುತ್ತಿ, ಹಿಂದಕ್ಕೆಳೆದು ಬಂಡೆಯೆಡೆ ಕುಸಿದ. ಆಗಂತುಕ ಕೊಸರಿಕೊಳ್ಳದಂತೆ ಗಟ್ಟಿಯಾಗಿ ಅಪ್ಪಿಕೊಂಡ. ಇಬ್ಬರೂ ಏದುಸಿರು ಬಿಡುತ್ತಿದ್ದರು. ಉಮೇಶನಿಗೆ ಅಪ್ಪುಗೆ ಯಾಕೋ ಅಪರಿಚಿತ ಅನುಭವದಂತೆನಿಸಲಿಲ್ಲ. ಅದರಲ್ಲೇನೋ ಮಾರ್ದವತೆ, ಅಪ್ಯಾಯತೆ, ನೆಮ್ಮದಿ ತುಂಬಿದಂತಿತ್ತು. ಕೊನೆಗೂ ಅಪ್ಪುಗೆ ಸಡಲಿಸಿಕೊಂಡು ಇಬ್ಬರೂ ಮುಖಾಮುಖಿಯಾದಾಗ ಹೊರಡಿತ್ತು ಜೊತೆಗೇ ಉದ್ಗಾರ, “ದೋಸ್ತ!” ಒಂದೆಡೆ ಸೂರ್ಯ ಕಂತಿದ್ದ ಇನ್ನೊಂದೆಡೆ ಮೇಲೇರುತ್ತಿದ್ದ ಚಂದ್ರ. ತೊಟ್ಟಿಕ್ಕುತ್ತಿತ್ತು ಕಣ್ಣೀರು ಗೆಳೆಯರ ಕಂಗಳಿಂದ.

ಡಾ. ರಾಮಶರಣ್

6 thoughts on “ಮೊದಲ ಹಾಳೆ ಮತ್ತು ಬಸಾಕಲ್ಲು ಗುಡ್ಡ

  1. Both the stories develop around a social theme and narrate complexities of interpersonal relationships while highlighting the hidden social evils like domestic violence and depression. In the first story, the author presents the schizophrenic mind of the society that has a certain bias towards towards recognising certain victims. The nuanced narration style and the subtle use of expressions will leave a lasting impression.

    The second story brings out the dynamic and paradoxical nature of relationships and lost true friendships. It’s handling of the unrecognised depression is very factual and the narrative style leaves a lasting impact.

    I hope these two stories will generate some valuable reflective moments in its reader’s mind as well as lead to some discussion and debate on these two significant social evils.

    Murali Hathwar

    Like

  2. ದಾಕ್ಷಾಯಿಣಿಯವರು ಬರೆದಿರುವ ಕತೆಯಲ್ಲಿ ಪಳಗಿದ ಕತೆಗಾರರ ಝಳಕಿದೆ. ಕೆಲವೇ ಪದಗಳಲ್ಲಿ ದೃಶ್ಯವನ್ನು ಕಣ್ಣ ಮುಂದೆ ಕಟ್ಟಿಬಿಡುತ್ತರೆ. ಜಿ ಪಿ ಸರ್ಜರಿ ಬಿಡುವಾಗ ಬರುವ ವರ್ಣನೆ ಮತ್ತು ಹೆಂಗಸು ಹೇಳುವ ಮಾತುಗಳು ಅದ್ಭುತ ತಿರುವನ್ನು ಕೊಡುತ್ತವೆ. ದಾಕ್ಷಾಯಿಣಿಯವರು ಇನ್ನೂ ಹೆಚ್ಚು ಹೆಚ್ಚು ಕತೆ ಬರೆಯಲಿ ಎನ್ನುವುದೇ ನನ್ನ ಹಾರೈಕೆ. ಕೊನೆಯ ಪ್ಯಾರಾಗ್ರಾಫ್ ಇರದಿದ್ದದ್ದರೂ ಕತೆಗೆ ಏನೂ ತೊಂದರೆ ಆಗುತ್ತಿರಲಿಲ್ಲ.

    ರಾಮ ಶರಣ ಬರೆದ ಕತೆ ಕವನದಂತಿದೆ. ರೂಪಕಗಳಿಂದ ತುಂಬಿದೆ. ವರ್ಣನೆಗಳು ಕಣ್ಣು ಕಟ್ತಿಟುವಂತಿದೆ.

    ‘ರೋಹಿದಾಸ ಮನದ ಮೂಲೆಯಲ್ಲಿ, ಅಟ್ಟದ ಮೇಲಿಟ್ಟ ಹಳೇ ಆಟಿಕೆಯಂತೆ ಅಡಗಿದ್ದ, ಧೂಳು-ಬಲೆಗಳ ಪರದೆಯ ಹಿಂದೆ. ವರ್ಷಗಳು ಕಳೆದಂತೆ ಬೋರೆ ಮರ ಯಾರದೋ ಮನೆಯ ಒಲೆಯ ಪಾಲಾಗಿತ್ತು; ಮುಳ್ಹಣ್ಣಿನ ಪೊದೆಗಳ ಜಾಗದಲ್ಲಿ ಹೊಸ ಬಡಾವಣೆಯೊಂದು ಬಂದಿತ್ತು; ತೊರೆಗೆ ಮಳೆಗಾಲದಲ್ಲಿ ಮಾತ್ರ ಜೀವ ಬರುತ್ತಿತ್ತು.’ ಎನ್ನುವುದಂತೂ ಕವಿತೆಯೇ ಆಗಿಬಿಡುತ್ತದೆ.

    – ಕೇಶವ

    Like

  3. ಕೊನೆಯ ಹಾಳೆ,ಕಥೆ ಮುಗಿಯಿತಿನ್ನು ಅಂದುಕೊಳ್ಳುತ್ತಿರುವಾಗಲೇ ಹೊಸ ಕಥೆಯ ಆರಂಭದ ‘ಮೊದಲ ಹಾಳೆ’ ಅನಿರೀಕ್ಷಿತ ತಿರುವಿನೊಂದಿಗೆ ತೆರೆದುಕೊಳ್ಳುವ ಪರಿ ಸೊಗಸಾಗಿದೆ . ದಾಂಪತ್ಯದ ಜೂಜಾಟ ಬಲು ಸೋಜಿಗ. ಬಂಧನ – ಮುಕ್ತಿಗಳೆರಡೂ ಜೊತೆಜೊತೆಯಾಗಿಯೇ ಸಾಗುವಂಥ ವಿಚಿತ್ರ ಪಯಣ. ಅವನ ದುಸ್ಥಿತಿ ಕೇವಲ ಅವನೊಬ್ಬನದಲ್ಲ; ಇಡಿಯ ಸಂಸಾರದ ದಾರುಣತೆ…ಅದರೊಂದಿಗೇ ಅವನ ದೌಜ೯ನ್ಯದಿಂದ ಪಾರಾದ ನಿರಾಳತೆ…ಮಾನವ ಮನವಿದು ಬಲು ಸಂಕೀರ್ಣ ..ಸ್ವಂತಕೇ ದುದ೯ಶ೯. ಚೆನ್ನಾಗಿದೆ ದಾಕ್ಷಾಯಿಣಿ ..ತುಂಬ ಇಷ್ಟವಾಯಿತು. ಅಂತೆಯೇ ಬಸಾನಕಲ್ಲು ಗುಡ್ಡ,ಸಮುದ್ರದ ಅಲೆಗಳ ಮೊರೆತವನ್ನು ಕಣ್ಗೆ ಕಟ್ಟುವಲ್ಲಿ ರಾಂ ಯಶಸ್ವಿಯಾಗಿದ್ದಾರೆ. ಬಾಲ್ಯಕಾಲದ ಸ್ನೇಹ – ಸಂಬಂಧಗಳ ಸೊಗಡೇ ಬೇರೆ. ಯಾವ ದೇಶಕಾಲಾದಿಗಳಿಗೂ ಅದನ್ನು ಮಸುಕಾಗಿಸುವ ಶಕ್ತಿಯಿಲ್ಲ. ಬಾಲ್ಯದ ಗೆಳೆಯರಿಬ್ಬರ ಮನಗಳೂ ಅದೆಷ್ಟು ಸಮಾನಮನಸ್ಕವಾಗಿದ್ದವೆಂದರೆ ಗೊತ್ತಿಲ್ಲದೇ ಮತ್ತೆ ಗುಡ್ಡದ ನೆತ್ತಿಯಲ್ಲಿ ಪುನಮಿ೯ಲನ..ಓದುಗರೆದೆಗೂ ಚಂದ್ರನ ಶೀತಲ ಕಿರಣಗಳ ಸಿಂಚನ.

    Like

  4. ಎರಡು ಭಿನ್ನ ದೇಶಗಳ ಹಿನ್ನೆಲೆಯ ಭಿನ್ನ ಸಂಬಂಧಗಳ ಘಟನೆಗಳನ್ನು ಹೆಣೆಯುವ ಕಥೆಗಳಾದರೂ ಎರಡೂ human psyche ಯನ್ನು ತೆರೆದಿಡುತ್ತವೆ.
    ‘ಮೊದಲ ಹಾಳೆಯಲ್ಲಿ’ ಎಷ್ಟೇ ಆದರೂ ಪಾರ್ಟ್ನರ್ ಅಂದಮೇಲೆ ಅಪಘಾತಕ್ಕೊಳಗಾದವನ ಹೆಂಡತಿ ಬಂದು ತನ್ನ ಅಳಲನ್ನು ತೋಡಿ, ವೈದ್ಯಳ ಸಾಂತ್ವನದಿಂದ ಚೇತರಿಸಿಕೊಂಡು, ಥಟ್ಟಂತೆ ಆತನಿಗೆ ಬೈಗಳು ಕೊಡುವಾಗ ಆ ಸಂಸ್ಕಾರದ ನಿಜಸ್ವರೂಪವನ್ನು ಕಂಡು ಬೆರಗಾಗುತ್ತೇವೆ. ಅದರಿಂದಲೇ ಅದು ‘ಕಥೆ’ಯೆಂದು ಸಫಲವಾಗುವುದು.

    ಎರಡನೆಯ ಕಥೆ ‘ಬಸಾಕಲು ಗುಡ್ಡ’ದಲ್ಲಿ ಉಮೇಶ ಮತ್ತು ರೋಹಿತರು ಸೂರ್ಯ-ಚಂದ್ರರಂಥ ‘ಜಿಗರಿ ದೋಸ್ತ’ ರಿಗಿಂತ ಹೆಚ್ಚಾಗಿ ಅವಳಿ ಜವಳಿಗಳಂತೆ ಬೆಳೆದವರು, ಅದೇ ತರಹದ ವಿಚಾರವುಳ್ಳವರು ಅನ್ನುವದನ್ನು ಕ್ಲೈಮಾಕ್ಸ್ ವರೆಗೆ ಸಾಧಿಸಿಕೊಂಡು ಬರುತ್ತಾರೆ ಕತೆಗಾರರು. ಆ ಕೊನೆಯ ತಿರುವು ಆಕಸ್ಮಿಕವೋ ಕಥೆಯ ಗತಿಯಿಂದ ಉೂಹಿಸಬಲ್ಲದೋ ಓದುಗನಿಗೆ ಬಿಟ್ಟದ್ದು. ಅವರಿಬ್ಬರ ಸುಂದರ ಬಾಂಧವ್ಯವನ್ನು ವರ್ಣಿಸುವಲ್ಲಿ ‘ಪ್ರೀತಿಯ’ ವಿವಿಧ ರೂಪಗಳಲ್ಲಿಯ ಅಂತರವನ್ನು, ಮೊದಲ ಕತೆಗೂ ಇದಕ್ಕೂ ಇರುವ ವೈಷಮ್ಯವನ್ನು ತೆರೆದಿಡುತ್ತಾರೆ.
    ಒಂದು ರೀತಿಯಲ್ಲಿ ಎರಡೂ ಪೂರಕ ಕಥೆಗಳು. ಇಬ್ಬರಿಗೂ ಅಭಿನಂದನೆಗಳು.
    ಶ್ರೀವತ್ಸ ದೇಸಾಯಿ

    Like

  5. May I please suggest the name under the title of the article should be either the name of the author of the article or any other name like Daksha Gowda should be under the heading ‘ Edited By’.
    It is so misleading to think that every article published is by Daksha Gowda or whoever is the editor. You are all doing a great job but just suggesting to correct the anomaly
    Cheers

    Liked by 1 person

    • Thanks for your suggestion Dr Bhanumathi.
      We are currently using ‘WordPress’ to publish our articles and are following the format set by this website.
      We are happy to change or adopt or make any changes that is good for Anivaasi.
      regards

      Dakshayani

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.