ಓದುಗರೆ, ಈ ವಾರದ ಅನಿವಾಸಿಯಲ್ಲಿ ಎರಡು ಭಿನ್ನವಾದ, ಭಾವನಾತ್ಮಕ ಸಣ್ಣಕತೆಗಳನ್ನು ಓದುವ ಅವಕಾಶ ನಿಮ್ಮದು.
ಈ ಕಥೆಗಳೆರಡೂ ತರುವ ಸಾಹಸದ, ಹೋರಾಟದ ಭಾವಸಂದೇಶ ನಿಜಕ್ಕೂ ಶಕ್ತಿಯುತವಾದದ್ದು. ಈ ವಾರದ ಲೇಖಕರು ಡಾ. ಶ್ರೀವತ್ಸ ದೇಸಾಯಿ ಮತ್ತು ಶ್ರೀಮತಿ ಗೌರಿಪ್ರಸನ್ನ.
‘ಮ್ಯಾಗ್ ಪೈಗಳು’ ಕತೆಯಲ್ಲಿ ಶ್ರೀವತ್ಸ ದೇಸಾಯಿಯವರು, ವಿಧಿ ಕೆಲವೊಮ್ಮೆ ಜೀವನದಲ್ಲಿ ತ೦ದೊಡ್ಡುವ ಕ್ರೂರ ಸವಾಲುಗಳನ್ನು, ಅವನ್ನು ಎದುರಿಸಿ, ಗೆಲ್ಲುವ/ಸೋಲುವ ಮನುಜನ ಅನಿರತ ಹೋರಾಟ, ಈ ನೋವನ್ನು ಹಂಚಿಕೊಳ್ಳುವ, ಭರಿಸುವ, ಸಂಗಾತಿಯ ಭಾವನೆಗಳನ್ನು, ಈ ಹೋರಾಟ ಮನದಲ್ಲಿ ತುಂಬುವ ಶೂನ್ಯತೆಯನ್ನು, ಮನಮಿಡಿಯುವಂತೆ ಬರೆದಿದ್ದಾರೆ.
ಶ್ರೀಮತಿ ಗೌರಿಪ್ರಸನ್ನ ತಮ್ಮ ಲಕ್ಷ್ಮಣರೇಖೆ’ ಯಲ್ಲಿ ಸೀತೆಯ ಸ್ವಗತದ ಮೂಲಕ ಅಂದಿನ ಮತ್ತು ಇಂದಿನ ಪುರುಷಪ್ರಧಾನ ಸಮಾಜ ಹೆಣ್ಣಿನ ಜೀವನದಲ್ಲಿ, ಪುರುಷ ತನ್ನ ಸ್ವಾರ್ಥಕ್ಕಾಗಿ ಎಳೆದ ಬಹುಬಗೆಯ ರೇಖೆಗಳ ಉಲ್ಲೇಖನದ ಜೊತೆಗೆ, ಈ ರೇಖೆಗಳು ರಚಿಸಿದ ನಿರ್ಭಂಧನಗಳು, ಮಿತಿಗಳು, ಆಕೆಯ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೇಲೆ ಶಾಶ್ವತವಾಗಿ ಮಾಡಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ – ಸಂ
ಮ್ಯಾಗ್ ಪೈಗಳು
ಕೈಯಲ್ಲೊಂದು ಪುಸ್ತಕವಿದ್ದರೂ ರಶ್ಮಿ ನೆಟ್ಟ ದೃಷ್ಟಿಯಿಂದ ಒಂದೇ ಸಮನೆ ಕಿಡಕಿಯ ಹೊರಗಿನ ಪ್ರೂನಸ್ ಮರದ ಮೇಲಿನ ಮ್ಯಾಗ್ ಪೈಗಳನ್ನೇ ನೋಡುತ್ತಿದ್ದವಳಿಗೆ, ಸುಧೀರ ಅವಳಿಗಾಗಿ ಒಂದು ಲೋಟದಲ್ಲಿ ಬಿಸಿ ಹಾಲು ಮತ್ತು ಆಪ್ಪಲ್ ಹೋಳುಗಳನ್ನು ತಂದು ಬೆಡ್ಡಿನ ಪಕ್ಕದಲ್ಲಿಟ್ಟದ್ದು ಆಕೆಗೆ ಗೊತ್ತೇ ಆದಂತೆ ಕಾಣಲಿಲ್ಲ. “ಬೇಗ ಇದನ್ನು ತಿಂದು ಹಾಲು ಕುಡಿದು ವಿಶ್ರಾಂತಿ ಮಾಡು, ಆ ಹಕ್ಕಿಗಳು ಎಲ್ಲೂ ಹೋಗುವದಿಲ್ಲ,” ಎಂದು ಆಕೆಯ ಗುಳಿಬಿದ್ದ ಕಣ್ಣುಗಳನ್ನು ನೋಡುತ್ತ ಹಣೆಯಮೇಲೆ ತನ್ನ ತುಟಿಗಳನ್ನು ಮೆಲ್ಲನೆ ಒತ್ತಿ ಹೇಳಿದ. ಕ್ಯಾನ್ಸರ್ ಮರುಕಳಿಸಿದಾಗಿನಿಂದ ಅವಳು ಹೆಚ್ಚು ಸಮಯ ದಿಂಬಿಗೆ ಒರಗಿ ಹಾಸಿಗೆಯಿಂದಲೇ ಕಿಡಕಿಯಿಂದ ಮನೆಯ ಹಿಂದಿನ ತೋಟದ ಬೇಲಿಯ ಪಕ್ಕದ ಮರದ ಮೇಲೆ ವಾಸಿಸುತ್ತಿದ್ದ ಆ ಪಕ್ಷಿಗಳ ಜೋಡಿ, ಅವುಗಳ ಲಲ್ಲೆ, ಅವುಗಳ ಮೇಟಿಂಗ್ ಕಾಲ್, ಅದನ್ನೆ ನೋಡುತ್ತಿರುತ್ತಾಳೆ. ಪುಸ್ತಕವನ್ನು ಮಗುಚಿಟ್ಟು ಸುಧೀರನತ್ತ ದೃಷ್ಟಿ ಹೊರಳಿಸಿ, ’ಥಾಂಕ್ಸ್’ ಅಂದು ಹಣ್ಣನ್ನು ತಿನ್ನುತ್ತ, ’ಆ ಜೋಡಿ ಈ ಸಲ ಬಡತಿಯಾದಂತೆ ಮೇಲಿನ ಟೊಂಗೆಗಳಲ್ಲಿ ಗೂಡು ಕಟ್ಟಿದೆ, ನೋಡಿದೆಯಾ?’ ಎಂದು ನಕ್ಕಳು.

ಕoಬಿಯ ಮೇಲೆ ಕುಳಿತು ಹೊಂಚು ಹಾಕಲು ಹವಣಿಸುತ್ತಿದ್ದ ಕರಿಯ ಬೆಕ್ಕನ್ನು ನೋಡುತ್ತ ಸುಧೀರ ಅಂದ: ‘ಬಡತಿಯಲ್ಲ, ಸೇಫ್ಟಿ; ಸ್ವರಕ್ಷಣೆಗೆ! ಸರಿ ಕತ್ತಲಾಗುತ್ತಿದೆ, ನಿನ್ನ ಓದು ಮುಗಿಸಿ ಮಲಗು ಇನ್ನು.’ ಎಂದು ಪುಸ್ತಕವನ್ನು ತಿರುವಿ ನೋಡಿದ. ತೆರೆದ ಪುಟದಲ್ಲಿ ಓ ಹೆನ್ರಿಯ ’ಕೊನೆಯ ಎಲೆ ‘ ಕಥೆ. ಹೊರಗೆ ಚಳಿಗಾಲ ಪ್ರಾರಂಭವಾಗಿತ್ತು. ಅಕ್ಟೋಬರಿನ ಗಾಳಿ ಜೋರಾದಂತೆ ಇನ್ನು ಕೆಲವು ಎಲೆಗಳು ಆ ಮರದಿಂದ ಉದುರಿದವು. ಸುಧೀರ ಆ ಪುಸ್ತಕದ ಒಂದು ಸಾಲನ್ನು ಜೋರಾಗಿ ಓದಿದ: ’’ಹನ್ನೆರಡು, ಹನ್ನೊಂದು, ಹತ್ತು, ಒಂಬತ್ತು …ಜೋನ್ಸಿ ಮರದ ಮೇಲಿಂದ ಒಂದೊಂದಾಗಿ ಉದುರಿ ಮರದ ಮೇಲೆ ಎಲೆಗಳನ್ನು ಎಣಿಸುತ್ತಿದ್ದಳು..,” ಇದು ಬರೀ ಕಥೆ, ಚಿನ್ನಾ.ಇದನ್ನು ತೊಗೊಂಡು ಏನು ಮಾಡುತ್ತಿ? ನೀನು ಆಶಾವಾದಿ. ಇದು ಸರಿಯಲ್ಲ’ ಎನ್ನುತ್ತ ಸುಧೀರ ಅವಳ ಕೈಯನ್ನು ಅದುಮಿ, ಕಿಡಕಿಯ ಪರದೆಯೆನ್ನೆಳೆದು ದೀಪವನ್ನಾರಿಸಿ ತನ್ನ ಕೋಣೆಗೆ ವಿಶ್ರಮಿಸಲು ಹೋದ.
ಹೊರಗಡೆ ಕತ್ತಲೆ ಆವರಿಸುತ್ತಿದ್ದಂತೆ ನೆನಪಿನ ಪರದೆ ತೆರೆಯಿತು. ಯೋಚಿಸಲಾರಂಭಿಸಿದ. ತಾವಿಬ್ಬರೂ ಮೆಡಿಕಲ್ ಪಾಸಾದ ಕೂಡಲೇ ಇಂಗ್ಲೆಂಡಿಗೆ ಬರಬೇಕೆನ್ನುವ ಕನಸನ್ನು ಸಾಕಾರ ಮಾಡಿದ್ದರು, ಕರಿಯರ್ ನಲ್ಲಿ ಇಬ್ಬರೂ ಯಶಸ್ವಿಯಾಗಿ, ಮುದ್ದಾದ ಎರಡು ಮಕ್ಕಳೊಂದಿಗೆ ಸಂಸಾರ. ಆಮೇಲೆ ಈ ’ಡ್ರೀಮ್ ಹೌಸ” ಕಟ್ಟಿದ್ದು, ಈಗ ಮಕ್ಕಳಿಬ್ಬರೂ ಗೂಡಿನಿಂದ ಹಾರಿಹೋಗಿದ್ದಾರೆ. ತಮ್ಮದೇ ಸುಖ ಸಂಸಾರಗಳನ್ನು ಕಟ್ಟಿದ್ದಾರೆ. ರಿಟೈರ್ಮೆಂಟಿನ ಯೋಚನೆ ಮಾಡುತ್ತಿರುವಾಗಲೇ ಆಘಾತ. ಆಕೆಗೆ ಕ್ಯಾನ್ಸರ್. ಒಂದು ಪುಪ್ಫುಸದ ಆಪರೇಷನ್ ಆಗಿ ಆರು ವರ್ಷಗಳಾಗಿ, ಕ್ಯಾನ್ಸರ್ ಗೆದ್ದಳು ಅಂತ ಸಂತೋಷದಲ್ಲಿರುವಾಗಲೆ ಅದು ಮರುಕಳಿಸಿ ಈಗ ಮೂರು ತಿಂಗಳಿಂದ ಕೀಮೋಥೆರಪಿ ಶುರುವಾಗಿದೆ. ಈಗದು ಸಫಲವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದಕ್ಕೆ ಅವಳ ಮನೋಸ್ಥೈರ್ಯ ಮತ್ತು ಆಶಾವಾದವೇ ಕಾರಣ. ಹೊರಗಡೆ ಪಕ್ಕದ ಮನೆಯ ಬೆಕ್ಕು ಬೇಟೆಯಾಡುತ್ತಿರುವಾಗ ಮಾಡುವ ’ಮಿಯಾಂ” ಸದ್ದು ಅವನನ್ನು ಎಚ್ಚರಿಸಿತು, ಜೊತೆಗೆ ಚಿಂವ್ ಗುಟ್ಟುತ್ತ ’ಪಢ ಪಢ’ವೆಂದು ಹಾರಿ ಪಾರಾದ ಹಕ್ಕಿಗಳ ರೆಕ್ಕೆಯ ಸದ್ದು ಕೇಳಿಸಿತು. ಈ ಹಿಂದೆ ಅದೇ ಮರದಲ್ಲಿ ಗೂಡು ಕಟ್ಟಿದ ಅದೆಷ್ಟೋ ಪುಟ್ಟ ಹಕ್ಕಿಗಳು ಬೇಲಿಯ ಮೇಲೆ ಕಾಯ್ದು ಕುಳಿತಿರುತ್ತಿದ್ದ ಈ ಯಮದೂತ ಬೆಕ್ಕಿನ ಬಾಯಿಗೆ ಸಿಕ್ಕಿಬಿದ್ದುದು ನೆನಪಾಗಿ ಎದೆಯಲ್ಲಿ ಕಸಿವಿಸಿಯಾಯಿತು. ಆದರೆ ಈಗಿನವು ಈ ಮ್ಯಾಗ್ ಪೈಗಳು , ಮಡಿವಾಳ ಹಕ್ಕಿ ಎಂತಲೂ ಹೆಸರು. ಸ್ವಲ್ಪ ದೊಡ್ಡ ಹಕ್ಕಿಗಳು; ಬುದ್ಧಿವಂತ ಹಕ್ಕಿಗಳೆಂದೂ ಪ್ರತೀತಿ. ಅವುಗಳು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತವೆ. ಸಂಘ ಜೀವಿಗಳು. ಒಮ್ಮೊಮ್ಮೆ ತೋಟದ ಹುಲ್ಲಿನ ಮೇಲೆ ಈ ಜೋಡಿ ಹಕ್ಕಿಗಳಲ್ಲದೆ ಬೇರೆ ಮ್ಯಾಗ್ ಪೈಗಳೂ ಬಂದು ಜೊತೆಗೂಡುತ್ತಿದ್ದವು. ಸುಧೀರ ಎಣಿಸಿದ್ದ: ’ಒಂದು, ಎರಡು, ಮೂರು..’ ಈ ಚಳಿಗಾಲ ದಾಟಿ ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಇಬ್ಬರೂ ಭಾರತ ಯಾತ್ರೆಗೆ ಹೋಗುವ ಕನಸು ಕಾಣುತ್ತ, ಆಕೆಯ ಕಣ್ಣುಗಳಲ್ಲಿ ಇಂದು ಕಂಡ ಹೊಳಪನ್ನು ನೆನೆಸುತ್ತ ಅವಳು ಗುಣಮುಖವಾಗುವ ಲಕ್ಷಣಗಳು ಎಂದು ತನ್ನ ಬೆಡ್ರೂಮಿಗೆ ಹೋಗಿ ನಿದ್ದೆ ಹೋದ.
* * * * * * * * * * * *
ಒಂದು ತಿಂಗಳ ನಂತರ —

ಕ್ರೆಮಟೋರಿಯಮ್ ದಿಂದ ವಾಪಸ್ಸಾದ ಆ ಕರಿಯ ಹರ್ಸ್ (hearse) ಕೊನೆಯದು. ಶೋಕಗ್ರಸ್ತ ಮಿತ್ರರನ್ನಿಳಿಸಿ ಆ ಮನೆಯ ಡ್ರೈವ್ ದಿಂದ ಫ್ಯೂನೆರಲ್ ಹೋಮಿಗೆ ಹೊರಟಿತು. ಅದರ ಹಿಂದೆಯೇ ಸುಳಿದ ಗಾಳಿಯ ರಭಸ ಮ್ಯಾಗ್ ಪೈ ಪುಚ್ಚಗಳನ್ನು ಬೀದಿಯತ್ತ ಕೊಂಡೊಯ್ದಿತು. ಸುಧೀರ ’ಓ ಹೆನ್ರಿಯ ಕಥೆಗಳ” ಪುಸ್ತಕವನ್ನು ಕಸದ ಬಿನ್ನಿನಲ್ಲಿ ಒಗೆಯುತ್ತಿದ್ದಂತೆ ಹಿಂದಿನ ತೋಟದ ಆ ಪ್ರೂನಸ್ ಮರದಿಂದ ಒಮೇ ಸವನೆ ಒಂಟಿ ಮ್ಯಾಗ್ ಪೈ ಹಕ್ಕಿಯ ಆರ್ತನಾದ ಕೇಳಿಸುತ್ತಿತ್ತು. ಜೊತೆಗೆ ಕರಿ ಬೆಕ್ಕಿನ ಸಂತೃಪ್ತ ’ಮಿಯಾಂವ’ ಕೂಗು. ಸುಧೀರ ಗಕ್ಕನೆ ಅಲ್ಲೇ ನಿಂತ. ಶಾಲೆ ಮುಗಿಸಿ ತನ್ನ ಮನೆಯ ಡ್ರೈವ್ ದಾಟಿ ತಮ್ಮಮನೆಗೆ ಹೋಗುತ್ತಿದ್ದ ಶಾಲಾ ಬಾಲಕರಲ್ಲಿ ಕೆಲವರು ತಾವು ಕಲಿತಿದ್ದ ‘Magpie Nursery Rhyme’ ದ ಸಾಲುಗಳನ್ನು ಹಾಡುತ್ತ ನಡೆದಿದ್ದರು: ”One for sorrow, two for mirth, three for funeral…”
ಶ್ರೀವತ್ಸ ದೇಸಾಯಿ
ಲಕ್ಷ್ಮಣ ರೇಖೆ……
‘ಭವತಿ ಭಿಕ್ಷಾಂ ದೇಹಿ’..ಹಸಿವಿನ ದೈನ್ಯತೆಯಿರದ ಗಂಭೀರ ದನಿ. ಭಿಕ್ಷಾಪಾತ್ರೆಯನ್ನು ಹಿಡಿದ ಕಾಷಾಯಧಾರಿಯೊಬ್ಬ ನಿಂತಿದ್ದಾನೆ ಬಾಗಿಲಲ್ಲಿ.. ಲಕ್ಷ್ಮಣರೇಖೆಯ ಆಚೆ ಬದಿಯಲ್ಲಿ.ತಳಮಳಗೊಂಡಿದ್ದ ಮನಸ್ಸಿಗೆ ಸ್ವಲ್ಪ ಶಾಂತಿ. ಈ ಕಾಷಾಯಕ್ಕೂ ,ನನಗೂ ಎಂಥದೋ ಆತ್ಮೀಯತೆ. ಈ ದೀಘ೯ಕಠಿಣ ವನವಾಸ ಸಹ್ಯವಾದದ್ದೇ ಈ ಕಾಷಾಯಧಾರಿಗಳಿಂದ. ಅತ್ರಿ-ಅನಸೂಯೆ, ಗೌತಮ-ಅಹಲ್ಯೆ…ಎಷ್ಟೆಲ್ಲ ಅಂತಃಕರಣದ ಜೀವಗಳು!! ರಾಜಷಿ೯ಯಾದ ಅಪ್ಪ ಜನಕಮಹಾರಾಜನ ರಾಜಸಭೆಯಲ್ಲೂ ಅಷ್ಟೇ …ರಾಜಕೀಯಕ್ಕಿಂತ ವೇದಾಂತವೇ ಹೆಚ್ಚು ಚಚೆ೯ಯಾಗುತ್ತಿತ್ತು. ಯಾಜ್ಞವಲ್ಕ್ಯ ,ಅಷ್ಟಾವಕ್ರ, ಶತಾನಂದ…ನನ್ನ ರಾಮಭದ್ರನನ್ನು ನನ್ನೆಡೆ ಕರೆತಂದ ದೈವರೂಪಿ ವಿಶ್ವಾಮಿತ್ರನೂ ಕಾಷಾಯಧಾರಿಯೇ. ಕಾವಿ ಎಂದರೆ ನಂಬುಗೆ ,ಪ್ರೀತಿ, ಧೈರ್ಯ, ಭರವಸೆ… “ಮಗೂ, ಅನ್ನಪೂಣೆ೯ಯ ಪ್ರತಿರೂಪವಾಗಿರಬೇಕು ಗೃಹಿಣಿ. ಹಸಿದ ಹೊಟ್ಟೆ ತಣಿಸುವುದು ಯಾವ ರಾಜಸೂಯ ,ಅಶ್ವಮೇಧಕ್ಕಿಂತ ಕಡಿಮೆಯದಲ್ಲ ಮಗಳೇ”.. ಅಮ್ಮ ಯಾವಾಗಲೂ ಹೇಳುತ್ತಿದ್ದ ಹಿತನುಡಿ. ಅದಕ್ಕೆಂದೇ ಸನ್ಯಾಸಿಯೊಬ್ಬನಿಗೆ ಭಿಕ್ಷೆ ನೀಡಲು ನನಗೆ ಲಕ್ಷ್ಮಣರೇಖೆ ಅಡ್ಡಬರಲಿಲ್ಲ. ಅಲ್ಲದೇ ನಾನಿಲ್ಲಿ ನೀಡಿದ ಅನ್ನಭಿಕ್ಷೆ ತೊಂದರೆಯಲ್ಲಿರುವ ನನ್ನ ನಲ್ಲನಿಗೆ ಪ್ರಾಣಭಿಕ್ಷೆಯ ಅಭಯಪ್ರದಾನ ಮಾಡೀತೇನೋ ಎಂಬ ಒಳಮನದ ಆಶಯ. ಅಪ್ಪನ ಮೌಲ್ಯಗಳ, ಅಮ್ಮನ ಆದಶ೯ಗಳ, ನನ್ನ ನಂಬುಗೆಗಳ ಅಲಿಖಿತ ರೇಖೆಗಳೆದಿರು ಆ ಲಿಖಿತ ಲಕ್ಷ್ಮಣರೇಖೆ ನನಗೆ ಕಾಣಲೇ ಇಲ್ಲ; ದಾಟಿದೆ.. ಘಟಿಸಬಾರದ್ದು ಘಟಿಸಿಯೇ ಹೋಯ್ತು.

ರಾವಣ ಕೇವಲ ಸೀತೆಯನ್ನಲ್ಲ ಹೊತ್ತೊಯ್ದದ್ದು…ಕಾಷಾಯದ ಘನತೆಯನ್ನು, ಒಳ್ಳೆಯದರ ಬಗೆಗಿನ ನಂಬಿಕೆಯನ್ನು, ಶಿವದ ಭರವಸೆಯನ್ನುಹೊತ್ತೊಯ್ದ. ಹೆದರಿಕೆ ದಶಶಿರಗಳನ್ನು ಹೊತ್ತು ಅಟ್ಟಹಾಸಮಾಡುತ್ತ ಬರುವ ಲಂಕಾಧಿಪತಿ ರಾವಣನಿಂದಲ್ಲ; ನಿಸ್ಸಂಗತೆಯ, ಧೀರತೆಯ ಪ್ರತೀಕವಾದ ಕಾವಿವೇಷ ಧರಿಸಿ ಬಂದು ‘ದೇಹಿ’ ಎಂದು ಅನ್ನ ಕೇಳಿ ಎಳೆದೊಯ್ಯುವ ದುರುಳರಿಂದ.
‘ಸೀತೆಯಾದರೇನು? ಲೋಕಮಾತೆಯಾದರೇನು? ಲಕ್ಷ್ಮಣರೇಖೆ ದಾಟಿದರೆ ಹೆಣ್ಣು -ತಿನ್ನಲೇಬೇಕು ಮಣ್ಣು’ ಎಂದಾಡಿಕೊಂಡು ಮಣ್ಣಿನ ಮಗಳಿಗೇ ಮಣ್ಣು ತಿನ್ನಿಸಿತೀ ಲೋಕ. ಹುಟ್ಟಿದಂದಿನಿಂದ ರೇಖೆಗಳು… ನೇಗಿಲೆಳೆದ ರೇಖೆಯಿಂದ ಸೀಳಿದ ನೆಲದಿಂದಲೇ ಹೊರಬಂದ ಅವನಿಜೆ ನಾನು.. ಮುಂದೆ ತಾಯ್ತಂದೆಯರ ಅಂತಃಕರಣದ ಬೆಳ್ಳಿರೇಖೆ, ವಧುವಾಗ ಹೊರಟಾಗ ಶಿವಧನಸ್ಸಿನ ಪರಾಕ್ರಮದ ರೇಖೆ, ಯುವರಾಣಿಯಾಗಲಿರುವಾಗ ಮಂಥರೆ-ಕೈಕೇಯಿಯರ ವಕ್ರ ರೇಖೆ, ಪಂಚವಟಿಯಲ್ಲಿ ಲಕ್ಷ್ಮಣರೇಖೆ, ಅಶೋಕವನದಲ್ಲಿ ಪಾತಿವೃತ್ಯದ ರೇಖೆ, ಅಗ್ನಿಕುಂಡದಲ್ಲಿ ಪಾವಿತ್ರ್ಯದ ರೇಖೆ, ಸ್ತ್ರೀತ್ವದ, ಸತೀತ್ವದ, ಮಾತೃತ್ವದ, ಕುಲಧಮ೯ಗಳ, ವಂಶಮಯಾ೯ದೆಗಳ, ಸಂಸ್ಕ್ರತಿ -ಸಂಸ್ಕಾರಗಳ, ನೀತಿನಿಯಮಗಳ, ಆಚಾರ-ವಿಚಾರಗಳ….ಬರಿಗಣ್ಣಿಗೆ ಕಾಣಿಸದ ಅಸಂಖ್ಯಾತ ರೇಖೆಗಳು….ಅಂದಿಗೂ -ಇಂದಿಗೂ ಎಲ್ಲ ಸೀತೆಯರ ಭವಿಷ್ಯ ರೂಪಿಸುತ್ತಿರುವ ಲಕ್ಷ್ಮಣ ರೇಖೆಗಳು….
ಗೌರಿ ಪ್ರಸನ್ನ
.
ಎರಡೂ ಲೇಖನಗಳು ಮನಸ್ಸಿಗೆ ಬಹಳ ಹಿಡಿಸಿತು. ಬಹಳ thought provoking. Thank you.
LikeLike
ದಿವ್ಯತೇಜ ಅವರೆ,
ಧನ್ಯವಾದಗಳು
LikeLike
I found the Magpies story very moving.
LikeLike
Thank you very much for commenting..
Shrivatsa Desai
LikeLike
ಎರಡು ಕಥೆಗಳು ಗಾಢವಾದ ಚಿಂತನ ದೆಡೆಗೆ ಕರೆದೊಯ್ಯುತ್ತದೆ. ಬದುಕು ಯಾವ ಹಂತದಲ್ಲಿದ್ದ ರೂ ಯಾವ ಸಂಘರ್ಷದ ಲ್ಲೂ ಆಶಯವನ್ನು ಕಳೆದು ಕೊಳ್ಳದಿದ್ದಲ್ಲಿ ಅದು ಆತ್ಮಸ್ಥೈರ್ಯ ವನ್ನು ಹೆಚ್ಚಿಸಿ ಬದುಕೊಡ್ಡುವ ಸವಾಲುಗಳನ್ನು ಎದುರಿಸುವ ಧೈರ್ಯ ನೀಡುತ್ತದೆ ಎಂಬ ಸಂದೇಶವನ್ನು ನೀಡುವುದರೊಂದಿಗೆ ಬಾಳಸಂಗಾತಿ ಯ ಅಗಲಿಕೆಯ ಕೊನೆಯ ಕ್ಷಣಗಳನ್ನು ಮ್ಯಾ ಗ್ ಪೈ ಹಕ್ಕಿಗಳ ಅಗಲಿಕೆ ಯೊಂದಿಗೆ ದೇಸಾಯಿ ಯವರು ಕಥೆಯನ್ನು ಹೆಣೆದಿರುವ ರೀತಿ ಮನೋಜ್ಞವಾಗಿ ಮೂಡಿಬಂದಿದೆ
ಮತ್ತೊಂದು ಕಥೆ ಹೆಣ್ಣಿನ ಸುತ್ತಾ ಎಳೆಯುವ ರೇಖೆಗಳ ವೃತ್ತಾಂತವನ್ನು ಸೀತಾ ಮಾತೆಯ ಬದುಕಿನ ದೃಷ್ಟಾಂತ ದೊಂದಿಗೆ ಗೌರಿಯವರು ವಿವರಿಸಿರುವ ಬಗೆ ಬಹಳ ಅರ್ಥಪೂರ್ಣವಾಗಿದೆ.
ಇಬ್ಬರು ಅನುಭವಿ ಲೇಖಕರು ಕೆಲವೇ ಸಾಲುಗಳಲ್ಲಿ ಗಂಭೀರ ವಿಷಯಗಳ ಬಗ್ಗೆ ಓದುಗರಿಗೆ ಮನವರಿಕೆ ಮಾಡಿಕೊಟ್ಟಿರುವ ಸಾಮರ್ಥ್ಯಕ್ಕೆ ಶರಣು🙏🙏
LikeLike
ಧನ್ಯವಾದಗಳು ರಮ್ಯಾ ಅವರೆ. ನಿಮಗೆ ಹಿಡಿಸಿದೆ ಅಂತ ಸಂತೋಷ!
LikeLike
ಅನಿವಾಸಿ ಯಲ್ಲಿನ ಇಂದಿನ ಎರಡೂ ಕಥೆಗಳು ಒಂದು ಕ್ಷಣದ ಗಾಢ ಮೌನದತ್ತ ಒಯ್ತವೆ.ಶ್ರೀವತ್ಸ ದೇಸಾಯಿ ಯವರ ಕಥೆಯಲ್ಲಿ ಇಣುಕಿದೆ ಆ ಕೊನೆಯ ಎಲೆ ಯಿಂದ ಆರಂಭವಾದ ಮೌನ ಕಣ್ಣೀರು ಆ ಕೊನೆಯ ಅಗಲಿಕೆಯ ಬೇಗೆಯ ಕ್ಷಣಕ್ಕೆ ಆವಿಯಾಗುವಂಥ ಅನುಭವ , ಆ ತಳಮಳ ಕಳವಳಕ್ಕೆ.ಅರಿಯದ ಗಾಢ ಶೂನ್ಯತೆ ಆವರಿಸಿ ಬಿಡುತ್ತದೆ ಎಂದರೆ ತಪ್ಪಾಗಲಾರದು. ತುಂಬ ಮನೋಜ್ಞ ಕಥೆ. ಪರಿಪೂರ್ಣ ಸಫಲತೆ ಕರುಣ, ಶೋಕರಸಪೂರ್ಣ ಕಥೆಯ ಬರವಣಿಗೆಯಲ್ಲಿ.
ಗೌರಿ ಪ್ರಸನ್ ಅವರ ಕಥೆ ಒಂದು ಗಂಭೀರ ಚಿಂತನೆಯ ಮೌನದತ್ತ ಎಳೆಯುತ್ತದೆ ಎನ್ನುವ ಬಗ್ಗೆ ಸಂಶಯವಿಲ್ಲ.ನಿಜ ಹೆಣ್ಣು ಹುಟ್ಟುವಾಗಲೇ ರೇಖೆಗಳಿಂದ ಆವೃತಳಾಗೇ ಹುಟ್ತಾಳೆಯೋ ಏನೋ. ಆ ರೇಖೆಗಳ ಹಿಂದೆ ಮುಂದೆ ಸುಳಿದಾಡುವ ಯೋಚನೆಗಳಲ್ಲಿ ಸಿಲುಕಿ ಒಮ್ಮೊಮ್ಮೆ ‘ ನಾನು ಏನು’ ಎಂಬ ಪ್ರಶ್ನೆ ಧುತ್ತೆಂದು ಬಂದು ನಿಂತರೂ ಆಶ್ಚರ್ಯ ಪಡಬೇಕಾಗಿಲ್ಲ.ಅನಬಹುದು ಎಲ್ಲಾ ಬದಲಾಗಿದೆ ಅಂತ, ಹೋರಾಡಬಹುದು ಆ ರೇಖೆಯ ಆಚೆ ಬರಲು.ಆದರೆ ಎಲ್ಲಾ ಅಲ್ಲೇ ಇದೆ ಬೇರೆ ರೀತಿಯಲ್ಲಿ.ಬಿಡಿಸಲಾಗದ ಒಗಟಿದು.
ಎರಡು ಸುಂದರ ಎದೆ ಹೊಗುವ ಕಥೆ ನೀಡಿದ ಇಬ್ಬರೂ ಲೇಖಕರಿಗೆ- ಶ್ರೀವತ್ಸ ದೇಸಾಯಿಯವರಿಗೆ ಹಾಗೂ ಗೌರಿಯವರಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLiked by 1 person
ಧನ್ಯವಾದಗಳು
LikeLike
ನಿಮ್ಮಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಡದ್ದಕ್ಕೆ ಧನ್ಯವಾದಗಳು. ಎಲ್ಲರೂ ನಗುತ್ತಲೇ ಇರಲು ಇಚ್ಚೆ ಪಟ್ಟರೂ ಶೋಕರಸಪೂರ್ಣ ಬರವಣೆಗೆಯನ್ನೇ ಹೆಚ್ಚು ಮೆಚ್ಚುತ್ತೇವೆ ಏಕೆ ಎಂದು ಅರ್ಥವಾಗುವದಿಲ್ಲ. ಮನಮಿಡಿದು ಬರೆದವರಿಗೆಲ್ಲ ನಾನು ಋಣಿ.
LikeLike
ಎರಡೂ ಕಥೆಗಳು ತುಂಬಾ ಮನೋಜ್ಞವಾಗಿವೆ.
ಎಲ್ಲಾ ಸಮಾಜಗಳಲ್ಲಿ ಹೆಚ್ಚು ಲಕ್ಶ್ಮಣ ರೇಖೆಗಳಿರುವುದು ಹೆಂಗಸಿಗೆ. ಕೆಲವು ಶೋಷಣೆಗಾಗಿ , ಕೆಲವು ರಕ್ಶಣೆಗಾಗಿ ಎಂದು ನನ್ನ ಅನಿಸಿಕೆ.
ಗಂಡಸರೊ ಸಹ ಕೆಲವು ರೇಖೆಗಳನ್ನು ದಾಟಿದರೆ , ಗೌರಿಯವರು ಹೇಳುವಹಾಗೆ ತಿನ್ನಲೇಬೇಕು ಮಣ್ಣು. ಕರಜಗಿಯವರ ‘ committing sin is a deferred punishment’ ಎಂಬ ವಾಕ್ಯ ನೆನಪಿಗೆ ಬರುತ್ತದೆ.
Enjoyed reading both
LikeLiked by 1 person
ನಿಜ ವಿಜಯ ಅವರೇ, ಹೆಣ್ಣಿರಲಿ – ಗಂಡಿರಲಿ ಎಲ್ಲರೂ ಅವರವರ ಮಿತಿಯಲ್ಲೇ ಬದುಕಬೇಕು. ಇಲ್ಲದಿದ್ದರೆ ಮಣ್ಣು ಮುಕ್ಕಲೇಬೇಕು
LikeLike
ಓದಿ ಕಮೆಂಟ್ ಬರೆದ್ದಕ್ಕೆಧನ್ಯವಾದಗಳು.
LikeLike
ಎಷ್ಟೊಂದು ಲಕ್ಷ್ಮಣರೇಖೆಗಳು ಹೆಂಗಸಿಗೆ. ಸೀತೆಯಂಥ ಸೀತೆಗೇ ಲಕ್ಷ್ಮಣರೇಖೆಗಳೇ? ಅದೂ ಒಂದೇ ಎರಡೇ? ಗೌತಿಯವರ ಕತೆ ಪುರಾಣದಿಂದ ಧುತ್ತೆಂದು ಪ್ರಚಲಿತದ ಲಕ್ಷ್ಮಣರೇಖೆಗಳನ್ನು ಪ್ರಶ್ನಿಸುತ್ತದೆ. ಸಾಧುಮುಖದಶಶಿರರು ಹೊಂಚುಹಾಕುತ್ತಾರೆ, ಲಕ್ಷ್ಮಣರು ಗೆರೆಗಳನ್ನು ಹಾಕುತ್ತಾರೆ, ರಾಮರು ಅಗ್ನಿಪರೀಕ್ಷೆಗೆ ಒಡ್ಡುತ್ತಾರೆ, ಅಂದು, ಇಂದು. ಇದಕ್ಕೆಲ್ಲ ಕೊನೆ ಎಂದು ಮತ್ತು ಹೇಗೆ ಎನ್ನುವ ಪ್ರಶ್ನೆ ಎತ್ತುವ ಮಾರ್ಮಿಕ ಕತೆ. ಗೌರಿಯವರಿಗೆ ಅಭಿನಂದನೆಗಳು.
ಕೇಶವ
LikeLiked by 1 person
ಓ ಹೆನ್ರಿ ಬರೆದ ‘ಕೊನೆಯ ಎಲೆ’ ನಾನು ತುಂಬ ಚಿಕ್ಕವನಿದ್ದಾಗ ಕನ್ನಡದಲ್ಲಿ ಓದಿದ್ದೆ. ಯಾರು ಅನುವಾದ ಮಾಡಿದ್ದು, ಯಾವ ವಾರಪತ್ರಿಕೆಯಲ್ಲಿ ಬಂದಿತ್ತು ನೆನಪಿನಲ್ಲಿಲ್ಲ. ಆದರೆ ಈ ಕತೆಯನ್ನು ನಾನು ಅದೆಷ್ಟು ಜನರಿಗೆ ಹೇಳಿದ್ದೇನೋ ನನಗೇ ಗೊತ್ತಿಲ್ಲ. ಈ ಕತೆಯನ್ನು ಹೇಳುವಾಗ ಕತೆ ನನ್ನಲ್ಲಿ ವಿವಿಧ ರೂಪಗಳನ್ನು ಕಂಡಿದೆ. ನಾಕಾರು ವರ್ಷದ ಹಿಂದೆ ಹಿಂದಿ ಭಾಷೆಯಲ್ಲಿದ ‘ಲುಟೆರಾ’ ಎಂಬ ಸಿನೆಮಾ ಕೂಡ ಈ ಕಥೆಯನ್ನು ಆಧರಿಸಿದೆ.
ದೇಸಾಯಿಯವರು ‘ಕೊನೆಯ ಎಲೆ’ಯ ಜಾಡನ್ನು ಹಿಡಿದು, ‘ಕೊನೆಯ ಹಕ್ಕಿ’ಯ ಜಾಡನ್ನು ಹಿಡಿದು ಮನೋಜ್ಞವಾದ ಕತೆ ಹೆಣೆದಿದ್ದಾರೆ. ಈ ಕತೆಯಲ್ಲೂ ‘ಬೆಕ್ಕು’ ಬಂದಿದೆ (ಹಿಂದಿನ ಕತೆಗಳ ತರಹ)!
‘One for sorrow…’ ಎಂಬ ಮ್ಯಾಗ್-ಪೈ ಹಕ್ಕಿಗಳ ನರ್ಸರಿ ರೈಮ್ ಹಿಡಿದು three for funeral ಎಂದು ಓದುವಾಗ ಕತೆ ನಮ್ಮನ್ನು ಕಲುಕುತ್ತದೆ.
ಕತೆಯೊಳಗೊಂದು ಕತೆ. ಕರಣಾಜನಕ ಕತೆ. ಹೊಸ ಶೈಲಿ.
– ಕೇಶವ
LikeLiked by 1 person
‘ಮ್ಯಾಗ್ ಪೈಗಳು’ ಓದಿ ಗಾಢವಾದ ವಿಷಾದ ಮನವನ್ನಾವರಿಸಿತು. ‘ಮಾ ನಿಷಾದ …’ ‘ಯತ್ಕ್ರೌಂಚ ಮಿಥುನಾದೇಕಂ’ ದ ವಾಲ್ಮೀಕಿ ನೆನಪಾದರು. ಬೆಸೆದ ಜೀವಗಳನ್ನು ಅಗಲಿಸುವುದರಲ್ಲಿ ವಿಧಿಗೇನು ಖುಷಿಯೋ ಕಾಣೆ. ಕಥೆ ತನ್ನ ಕರುಣ ರಸಾಭಿವ್ಯಕ್ತಿಯಲ್ಲಿ ಸಂಪೂಣ೯ ಯಶಸ್ವಿಯಾಗಿದೆ. ದೇಸಾಯಿಯವರಿಗೆ ಅಭಿನಂದನೆಗಳು.
LikeLike
ಹರಿತವಾದ ನೇಗಿಲಿನ ರೇಖೆಯೊಳಗಿಂದ ಬಂದ ಸೀತೆಯ ಸ್ವಗತದಲ್ಲಿ ಸ್ತ್ರೀತ್ವವನ್ನು ಪ್ರತಿನಿಧಿಸುವ ಆಕೆಯ ಸುತ್ತಲಿನ ರೇಖೆಗಳ ಚಕ್ರದಲ್ಲಿ ಸಿಕ್ಕ ಹೆಣ್ಣಿನ, ಬಂಧಿಸಲು ಪ್ರಯತ್ನಿಸುವ ಸಮಾಜದ ಕಟ್ಟುಪಾಡುಗಳ ವಿಶ್ಲೇಷಣೆಯಿದೆ, ವಿಮರ್ಶೆಯಿದೆ.ಅದರ ಬಗ್ಗೆ ಯೋಚಿಸಲು ಹಚ್ಚಿಸುತ್ತದೆ. ಅಂದ ಮೇಲೆ ಗೌರಿಯವರ ಈ ’ಕಥ” ಸಫಲವಾಗಿದೆ ಅನ್ನಬೇಕು.ಅವರದು ಪ್ರೌಢ ಬರಹ.
LikeLiked by 1 person