“ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

ಕನ್ನಡದ ಅತ್ಯಂತ ಜನಪ್ರಿಯ ರಸಪ್ರಜ್ಞೆ ಕಾರ್ಯಕ್ರಮ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಈಗ ಮೊದಲ ಬಾರಿಗೆ ಯು ಕೆ ದಲ್ಲಿ ಕಾಲಿಟ್ಟಿದೆ! ಭಾರತೀಯ ಟೆಲಿವಿಷನ್ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಕ್ವಿಜ್ ಕಾರ್ಯಕ್ರಮವೆಂದು ’ಲಿಮ್ಕ ದಾಖಲೆ’ ಮಾಡಿದ ಹೆಗ್ಗಳಿಕೆ ಅದಕ್ಕೆ. ಈ ಪ್ರಸಾರವನ್ನು ಕಳೆದ ರವಿವಾರದಂದು ಸಾವಿರಾರು ಜನರು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವೀಕ್ಷಿಸಿದ್ದು ಹೆಮ್ಮೆಯ ವಿಷಯ.

(ಚಿತ್ರಕೃಪೆ) ರಮ್ಯ ಭಾದ್ರಿ

ರಮ್ಯ ಭಾದ್ರಿ ಬರೆಯುತ್ತಾರೆ

ಥಟ್ ಅಂತ ಹೇಳಿ! ಎಂದು ಪ್ರಸಿದ್ದಿ ಪಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಯು.ಕೆ. ದಲ್ಲಿಯ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕಳೆದ ರವಿವಾರ ಜುಲೈ 5, 2020 ರಂದು ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಯಿತು.

ಡಾ ನಾ. ಸೋಮೇಶ್ವರ

ಥಟ್ ಅಂತ ಹೇಳಿ ಎಂದಾಕ್ಷಣ ಥಟ್ ಅಂತ ನೆನಪಾಗೋದು ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾ ನಾ. ಸೋಮೇಶ್ವರ ರವರು ನಡೆಸಿಕೊಡುತ್ತಿದ್ದ ಜನಪ್ರಿಯ ರಸ ಪ್ರೆಶ್ನೆ ಕಾರ್ಯಕ್ರಮ. ಪ್ರಾಯಶಃ ಈ ಕಾರ್ಯಕ್ರಮವನ್ನರಿಯದ, ನೋಡದ ಕನ್ನಡಿಗನೇ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಇದು ಕರುನಾಡ  ಜನಮನ ಗೆದ್ದ ಮನೆಮಾತಾದ ಅದ್ಬುತ ರಸ ಪ್ರೆಶ್ನೆ ಕಾರ್ಯಕ್ರಮವೆನ್ನುವುದಕ್ಕೆ ಕಳೆದ 18 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬಂದಿರಿವುದೆ ಸಾಕ್ಷಿ.  ಇದು ಇಂದು 3000ಕ್ಕೂ ಹೆಚ್ಚು ಕಂತುಗಳನ್ನು ಅಮೋಘವಾಗಿ ಪೂರೈಸುತ್ತಾ  ಅಂತರ್ರಾಷ್ಟ್ರೀಯ ಅಲ್ಲದೆ ಅಂತರ ಖಂಡಗಳ ಮಟ್ಟದಲ್ಲಿ ಪ್ರಪಂಚದ ಮೊಲೆಮೂಲೆಯಲ್ಲಿ ನೆಲೆಸಿರುವ ಕನ್ನಡಿಗರನ್ನು ತಂತ್ರಜ್ಞಾನದ ಸಹಯೋಗದಿಂದ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಪ್ರೆಶ್ನೆಯ ಪ್ರತಿಯೊಂದು ಉತ್ತರಕ್ಕೆ ಬಹುಮಾನವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಲಾಗುವುದು. ಪುಸ್ತಕಗಳು  ನಮ್ಮ ಅಂತರಂಗ ಹಾಗು ಬಹಿರಂಗ ಜ್ಞಾನದ ಮಾರ್ಗದರ್ಶಿಗಳು. ’ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯನ್ನು ಆಚರಣೆಗೆ ತರುವಂತ ಹಾಗು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ವೀಕ್ಷಕರಿಗೂ ಪುಸ್ತಕ ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವಂತ ಅದ್ಬುತ ಕಾರ್ಯಕ್ರಮ. 

ಕ್ವಿಜ್ ಮಾಸ್ಟರ್ ಅಪ್ಪಟ ಕನ್ನಡಿಗರಾದ ಡಾ. ನಾ. ಸೋಮೇಶ್ವರ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗೆಗಿನ ಅವರ ಒಲವು ಅಪರಿಮಿತವಾದವು. ಮೂಲತಃ  ಬೆಂಗಳೂರಿನವರು; ವೃತ್ತಿಯಲ್ಲಿ ವೈದ್ಯರು ಹಾಗೂ ಅತ್ಯುತ್ತಮ ಬರಹಗಾರರು ಹೌದು. ಅವರ ‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’, ‘ಅನಂತದೆಡೆಗೆ’, ’ಓ ನನ್ನ ಚೇತನ’ ಕೃತಿಗಳು ಅವರ ಪ್ರಬುದ್ಧತೆ ಹಾಗು ಸಾಹಿತ್ಯದಲ್ಲಿನ ಪ್ರೌಢಿಮೆಯನ್ನು ಮನನ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ 30ಕ್ಕೂ ಹೆಚ್ಚು ಪುಸ್ತಗಳನ್ನು ಬರೆದಿರುವ ಖ್ಯಾತಿ ಅವರದು. ಇವರ ಸಾಹಿತ್ಯದೆಡೆಗಿನ ಮನೋಜ್ಞ  ಸೇವೆಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ್ಟ ಪ್ರಶಸ್ತಿ’, ಗೌರವ ಡಾಕ್ಟರೇಟ್ ಪದವಿ  ಹೀಗೆ ಇನ್ನು ಹಲವು ಗೌರವಗಳು ಸಂದಿವೆ. ಒಟ್ಟಿನಲ್ಲಿ  ಕನ್ನಡಿಗರು ಥಟ್ ಎಂದು ಗುರುತಿಸಿಬಿಡುವ ವಿಶ್ವಮಾನ್ಯತೆಯನ್ನು ಗಳಿಸಿರುವ ಆತ್ಮೀಯ ಗಣ್ಯರು ಸೋಮೇಶ್ವರ ರವರು. 

’ಅನಿವಾಸಿ’ ಬಳಗ

ಇಂತಹ ಪ್ರಸಿದ್ದಿ ಪಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಹೊರ ದೇಶದಲ್ಲಿದ್ದರೂ ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಆಶಯದಲ್ಲಿ ಅಕ್ಟೋಬರ್ 2013ರರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ (KSSVV ) ಎಂಬ ಕನಸಿನ ಕೂಸು ಇಂದು “ಅನಿವಾಸಿ”ಎಂಬ ಹೆಸರಿನಿಂದ ಜನ ಮನ್ನಣೆ ಪಡೆದಿದೆ. 2014ರರಲ್ಲಿ ಚೊಚ್ಚಲ KSSVV ಮ್ಯಾಗಜಿನ್ ಪ್ರಕಟಣೆಯಿಂದ ಪ್ರಾರಂಭವಾದ ಅನಿವಾಸಿಯ ಪಯಣ ಸಾಗಿ  ಅನೇಕ ಸ್ವಯಂ  ಸೇವಕರ ಪರಿಶ್ರಮದಿಂದ  2014 ರಲ್ಲಿ ಅಧಿಕೃತವಾಗಿ ಅಂತರ್ಜಾಲ ಪ್ರವೇಶಿಸಿತು.  ಅನಿವಾಸಿಯ ಚೊಚ್ಚಲ ಕೃತಿ “ಅನಿವಾಸಿಗಳ ಅಂಗಳದಿಂದ” 2016ರಲ್ಲಿ ಲೋಕಾರ್ಪಣೆಯಾಯಿತು  ಅಂದಿನಿಂದ ಇಂದಿನವರೆಗೂ ಪ್ರತಿವಾರವೂ ವೈವಿಧ್ಯಮಯವಾದ ಲೇಖನ, ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನಗಳು anivaasi.com ನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ. ಅಷ್ಟಕ್ಕೇ ಸೀಮಿತಗೊಳ್ಳದೆ ಹೆಸರಾಂತ ಸಾಹಿತಿಗಳು, ಚಿತ್ರ ನಿರ್ದೇಶಕ್ರನ್ನು ಸಂದರ್ಶನಗಳು, ಅವುಗಳ ವಿಡಿಯೋಗಳು ಇಂದಿಗೂ ಅನಿವಾಸಿ ಜಾಲ ಜಗುಲಿಯಲ್ಲಿ, youtube ನಲ್ಲಿ ಕಾಣ ಸಿಗುವುದು. 

ನಮ್ಮ ಈ ಅನಿವಾಸಿ ಬಳಗಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟವರು ವಿವಿಡ್ಲಿಪಿ ಖ್ಯಾತಿಯ ಶ್ರೀಯುತ ಪ್ರಮೋದ್ ಲಕ್ಕುಂಡಿ ಅವರು.

ಪ್ರಮೋದ ಬರೆಯುತ್ತಾರೆ:

ಜಗತ್ತು ತನ್ನ ಹೊರಗಿನ ಕಾರುಬಾರು ನಿಲ್ಲಿಸಿ, ಮನುಷ್ಯ ಜೀವಿ ಬಿಲದಲ್ಲಿ ಸೇರುವಂತೆ ಮಾಡಿದಾಗ ಎಲ್ಲರೂ ಚಿಂತಿತರಾದರು. ಇಂತಹ ಸಮಯದಲ್ಲಿ ವಾಟ್ಸಪ್, ಜೂಮ್, ವೆಬ್ಎಕ್ಷ ಮುಂತಾದವು ಮನುಷ್ಯನಿಗೆ ದೇವರು ಕೊಟ್ಟ ವರವಾಯಿತು. ವಿವಿಡ್ಲಿಪಿ ಕೂಡ ಇಂತಹ ವರವಾದ ಏರ್ ಮೀಟ್ (Airmeet)ಇಂದ ನೇರ ಪ್ರಸಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿತು, ಈ ಕಾರ್ಯಕ್ರಮದಲ್ಲಿ ಒಂದು “ಕ್ವಿಜ್ ನಡೆದು ಬಂದ ದಾರಿ” ಡಾ. ನಾ ಸೋಮೇಶ್ವರ ಅವರಿಂದ. ಆಗ ಹುಟ್ಟಿದ ಮತ್ತೊಂದು ಕನಸು, ಕಿರುತೆರೆಯಿಂದ ಕನ್ನಡ ನಾಡು- ಭಾಷೆ- ಸಂಸ್ಕೃತಿ- ಕಲೆ- ಸಾಹಿತ್ಯ- ವಿಚಾರ- ಆಚಾರ ಇತ್ಯಾದಿ ಜನರಿಗೆ ತಲುಪಿಸಿದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ ಜಗತ್ತಿನ ಕನ್ನಡಿಗರಿಗೆ ತಲುಪಿಸುವುದು. ಅವರೊಡನೆ ಮಾತಾಯಿತು, ಹೊಸ ಪ್ರಯತ್ನಕ್ಕೆ ವೇದಿಕೆ ಸಜ್ಜಾಯಿತು ಆದರೆ ಯಾರೊಡನೆ ಮೊದಲ ಪ್ರಸಾರ ಎನ್ನುವುದು ಪ್ರಶ್ನೆ ಉಳಿಯಿತು.
ಮನದೊಳಗೆ ಯಾರೊಡನೆ ಮಾಡೋಣ ಎಂಬ ವಿಚಾರ ನಡೆದಾಗ ಬಂದ ಹೆಸರು “ಅನಿವಾಸಿ ಬಳಗ”. ಇದೇ ಹೆಸರು ಬರಲು ಕಾರಣ,
೧. ಬಳಗದ ಸದಸ್ಯರೆಲ್ಲರೂ ಸಾಹಿತ್ಯ ಪ್ರೇಮಿಗಳು
೨. ಸಾಹಿತ್ಯಕ ಚಟುವಟಿಕೆಗಳನ್ನು ಮಾಡುತ್ತಾ ಉಳಿದವರಿಗೂ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ
೩. ಇಲ್ಲಿ ನಾಯಕ (ಕಿ) ಎಂಬ ಸ್ಥಾನಕ್ಕೆ ಬೆಲೆಯಿಲ್ಲ, ಬದಲು ಇಲ್ಲಿ ಸಾರಥಿಗಳಿದ್ದಾರೆ ಮತ್ತು ಪ್ರತಿ ಕಾರ್ಯಕ್ಕೂ ಯಾರಾದರೊಬ್ಬರು ಸಾರಥ್ಯವಹಿಸಿ ಕಾರ್ಯದ ಗುರಿ ಮುಟ್ಟಿಸುತ್ತಾರೆ.

5-7-2020 ರ ಕಾರ್ಯಕ್ರಮ



ಇದಕ್ಕಿಂತ ಹೆಚ್ಚಿನ ಅರ್ಹತೆ ಆಯ್ಕೆ ಮಾಡಲು ಅವಶ್ಯಕತೆ ಇರಲಿಲ್ಲ, ನಮ್ಮ “ಥಟ್ ಅಂತ ಹೇಳಿ” ರಥ ಸಿದ್ದವಾಯಿತು ಮತ್ತು ಶ್ರೀವತ್ಸ ದೇಸಾಯಿ ಅವರ ಸಾರಥ್ಯದಲ್ಲಿ ಮೊದಲ ಗುರಿ ಮುಟ್ಟಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಆಸಕ್ತರು ತಮ್ಮ ಹೆಸರುಗಳನ್ನೂ ನೊಂದಾಯಿಸಿದರು. ಮೊದಲು ನೊಂದಾಯಿಸಿದ  12 ಜನರಿಗೆ ಈ ಸದಾವಕಾಶ ದೊರಕಿತು. ಒಟ್ಟು ನಾಲ್ಕು ಕಂತುಗಳು ನಡೆಯಲಿದ್ದು, ಒಂದೊಂದು ಕಂತಿನಲ್ಲಿ ನಾಲ್ವರು ಎಂಬಂತೆ ಈಗಾಗಲೇ (5-7-2020) ಮೊದಲನೆಯ ಕಂತು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮ ಸ್ಪರ್ಧಿಗಳು ಅತ್ಯಂತ ಹುರುಪಿನಿಂದ ಪ್ರೆಶ್ನೆಗಳಿಗೆ ಉತ್ತರಿಸಿ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ಎಂದಿನಂತೆ ೧೦ ಸುತ್ತುಗಳಿದ್ದರೂ ಹೊಸದೊಂದು ಸುತ್ತಿನ ಸೇರ್ಪಡೆ ಮೊದಲ ಕಂತನ್ನು ವಿಶೇಷವನ್ನಾಗಿಸಿತು. ಅದುವೇ ಚಿತ್ರ ಕವನ ಸುತ್ತು. ಇದು ಹೊಸ ಪ್ರಯೋಗವಾದರೂ ಪ್ರತಿಭಾನ್ವಿತರಾದ ನಮ್ಮ ಸ್ಪರ್ಧಿಗಳು ಚಿತ್ರವನ್ನು ನೋಡುತ್ತಿದ್ದಂತೆಯೇ  ಲೀಲಾಜಾಲವಾಗಿ ಆಶು ಕವನಗಳ ಮಳೆಯೇ ಸುರಿಸಿದರು. ಒಬ್ಬರಿಗಿಂದ ಒಬ್ಬರು ಅದ್ಬುತ ಕವನಗಳು. ಇದರಿಂದ ಪ್ರೇರೇಪಿತರಾದ ವೀಕ್ಷಕರೂ ಕೂಡ ಕವನಗಳನ್ನು ಬರೆದು ಕಳಿಸಿದ್ದು ವಿಶೇಷವಾಗಿತ್ತು . ಇಡೀ ಕಾರ್ಯಕ್ರಮದ ರೆಕಾರ್ಡಿಂಗನ್ನು ಕೆಳಗಿನ ಫೇಸ್ ಬುಕ್ ಲಿಂಕ್ನಲ್ಲಿ ನೋಡಬಹುದು:

[facebook url=”https://www.facebook.com/vividlipi/videos/202429907731383″ /ದೆ ಯೂಟ್ಯೂಬ್ ಮತ್ತು ಏರ್ ಮೀಟ್ ವಾಹಿನಿಗಳಲ್ಲೂ ಏಕಕಾಲಕ್ಕೆ ನೋಡಲು ವೀಕ್ಷಕರಿಗೆ ಸಾಧ್ಯವಾಯಿತು.

 

 

ಪ್ರತಿ ಸುತ್ತಿನಿಂದ ಒಬ್ಬ ವಿಜೇತರು ನಾಲ್ಕನೆಯ ಸುತ್ತಿನ ದಿನ (16-8-2020) ಫೈನಲ್ ನಲ್ಲಿ ಸ್ಫರ್ಧಿಸುತ್ತಾರೆ. ಮೊದಲ ಸುತ್ತಿನಲ್ಲಿ ಡಾ ಲಕ್ಷ್ಮಿನಾರಾಯಣ ಗುಡೂರ್ ಎಲ್ಲರಿಗಿಂತ ಹೆಚ್ಚು ಗುಣಗಲನ್ನು ಗಳಿಸಿ ವಿಜೇತರಾಗಿದ್ದಾರೆ. ಅವರಿಗೆ ನಮ್ಮ ಅಭಿನಂದನೆಗಳು. ಈ ಸಲದ ಉಳಿದ ಸ್ಫರ್ಧಿಗಳು ತಮ್ಮ ಅನುಭವವನ್ನು ಈ ಕೆಳಗೆ ಹಂಚಿಕೊಂಡಿದ್ದಾರೆ.

1)ರಾಧಿಕಾ ಜೋಶಿಯವರು ಪದ್ಯದಲ್ಲೇ ಅದನ್ನು ಬರೆದಿದ್ದಾರೆ:

         ”ಜೂಲೈ ೫ ರ ’ಥಟ್ ಅಂತ ಹೇಳಿ’ ಅನುಭವ”

ನುರಿತ ಅರಿತ ನಿಪುಣರೊಂದಿಗೆ(ಸಹ ಸ್ಪರ್ಧಿಗಳು) ಕಳೆದ ಕ್ಷಣ
ದಿಗ್ಗಜರು(ಡಾ. ಸೋಮೇಶ್ವರ್) ಮಾಡಿಸಿದರು ದಿಗಂತದ ದರ್ಶನ

ಮಾತ್ರವಲ್ಲ ಇದು ರಸಪ್ರಶ್ನೆಯ ಆಟ
ಕನ್ನಡವೆಂಬ ಮಹಾಸಾಗರದ ವಿಹಂಗಮ ನೋಟ

ಸುತ್ತಿನ ಸುಳಿಯೊಳಗೆ ಮುಳುಗಿ ಉತ್ತರಿಸದೆ ತಬ್ಬಿಬಾಗಿ
ಚಿತ್ರಕವನಗಳ ಸಾಲುಗಳ ಉತ್ಸಾಹದಿಂದ ಬೀಗಿ

ಸೋಲು ಗೆಲುವಿಗೂ ಮೀರಿದ ಅನುಭವ
ವಿಶ್ವದಾದ್ಯಂತ ಬೀರಿತು ಥಟ್ಟನೆ ಪ್ರಭಾವ.

2) ಗೌರಿ ಪ್ರಸನ್ನ:

ಆಕಸ್ಮಿಕವೋ ಪೂವ೯ನಿಯೋಜಿತವೋ..ಥಟ್ಟಂತ ನನಗೂ ಒಂದು ಅವಕಾಶ ಸಿಕ್ಕೇ ಬಿಟ್ಟಿತು..ಕನ್ನಡ ನಾಡು ಕಂಡ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಥಟ್ಟಂತ ಹೇಳಿ’ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ. ಬದುಕು ಹೀಗೇಯೇ ಅಲ್ಲವೇ ನೀವು ನಿರೀಕ್ಷಿಸಿಯೇ ಇರದ ಸುವಣಾ೯ವಕಾಶವೊಂದನ್ನು ಥಟ್ಟನೇ ನಿಮ್ಮ ಜೋಳಿಗೆಗೆ ಹಾಕಿಬಿಡುವುದು. ಡಾ. ನಾ ಸೋಮೇಶ್ವರರಂಥ ವಿದ್ವಾಂಸರ ಎದಿರು hot seat ನಲ್ಲಿ ಕುಳಿತುಕೊಳ್ಳಲು ಎಂಥವರಿಗೇ ಆದರೂ ಎದೆ ಡವಡವ ಎನ್ನದೇ ಇರದು. ಅವರ ಜ್ಞಾನದ ಬತ್ತಳಿಕೆಯಿಂದ ಅದ್ಯಾವ ಪ್ರಶ್ನೆಯ ಬಾಣ ಸುಯ್ ಎಂದು ಬಂದುಬಿಡುವುದೋ ಊಹಿಸಲಾಸಾಧ್ಯ.  ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳವು.‘ಪುಷ್ಪಮಾಲಾ ಪ್ರಸಂಗೇಣ ಸೂತ್ರಂ ಶಿರಸಿ ಧಾಯ೯ತೇ’ ಅಂದಂತೆ ಅವರಿಂದಾಗಿ ‘ಅನಿವಾಸಿ‘ ಗಳಾದ  ನಾವೂ ಕನ್ನಡಾಭಿಮಾನಿಗಳ ಮನೆ- ಮನ ತಲುಪಿದೆವು.ನಮ್ಮ ರೆಕ್ಕೆಗಳಿಗೆ ಹಾರಲು ಬಾನು ಕಲ್ಪಿಸಿದ ವಿವಿಡ್ಲಿಪಿ, ಡಾ.ಸೋಮೇಶ್ವರ ಅವರಿಗೆ ಹಾಗೂ ಅನಿವಾಸಿ ಬಳಗಕ್ಕೆ ಧನ್ಯವಾದಗಳು .

3) ಅಮಿತಾ ರವಿಕಿರಣ ಬರೆಯುತಾರೆ:

ನಾವೆಲ್ಲ ಚಹ ಎಲೆಯಂಥವರು  ಬಿಸಿನೀರಿನಲ್ಲಿ  ಹಾಕಿದಾಗಲೆ ನಮ್ಮ ನಿಜ ಬಣ್ಣ ತಿಳಿಯುವುದು, ತುಂಬಾ ಹಿಂದೆ ಓದಿದ ಈ  ಮಾತು ಮೊನ್ನೆ ಮತ್ತೊಮ್ಮೆ ನೆನಪಾಯಿತು ಮತ್ತು ಪ್ರಸ್ತುತವೂ ಎನಿಸಿತು.

ಎಲ್ಲಿ ಕನ್ನಡ ನಾಡಿನ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ” ಥಟ್ ಅಂತ ಹೇಳಿ” ಎಲ್ಲಿ ಯುಕೆಯ ನಡುಗಡ್ಡೆಯೊಂದರಲ್ಲಿ ಇರುವ ನಾನು. ಕನಸುಗಳು ನಿಜವಾಗುತ್ತವೆ ಎಂಬ ಮಾತಿಗೆ ಮತ್ತೆ ಪುಷ್ಟಿ ಸಿಕ್ಕಂತಾಯಿತು. ಪಿಯುಸಿ ಓದುತ್ತಿದ್ದಾಗಿನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದ್ದರೂ ಹೋಗುವ ಪ್ರಯತ್ನ ಮಾಡುವ ಧೈರ್ಯ ಕೂಡ ಆಗಿರಲಿಲ್ಲ. ಅನಿವಾಸಿ ಭಾರತೀಯಳಾಗಿರುವಾಗ ಇಂಥ ಒಂದು ಅಪರೂಪದ ಅವಕಾಶ ಬಂದಿದ್ದು ನನಗೆ ತುಂಬಾ ಅಚ್ಚರಿ ಖುಷಿ ಕೊಟ್ಟಿತು ಅಂತೆಯೇ ನನ್ನ ಕನ್ನಡ ದ  ಬಗೆಗಿರುವ ಜ್ಞಾನವನ್ನು ಒರೆಹಚ್ಚಲು ಒಂದು ವೇದಿಕೆಯು ಒದಗಿ ಬಂತು ಅನ್ನೋ ಖುಷಿ ಇತ್ತಾದರೂ, ಹಾಟ್ ಸೀಟ್ ಎಂಬುದು ತಲೆಯಲ್ಲಿರುವ ಉತ್ತರಗಳನ್ನು ಆ ಮಟ್ಟಿಗೆ ಆವಿ ಮಾಡುತ್ತದೆಂದು ಅಂದುಕೊಂಡಿರಲಿಲ್ಲ.

ಡಾ ನಾ ಸೋಮೇಶ್ವರ್ ಅವರ ವಿದ್ವತ್ತು, ವಾಕ್ಚಾತುರ್ಯ , ಪ್ರತಿ ಪುಸ್ತಕದ ಬಗ್ಗೆ ಅವರು ಕೊಡುತ್ತಿದ್ದ ವಿವರಣೆ ಅದನ್ನು ಆಶರ್ಯವೆನಿಸುತ್ತಿತ್ತು. ಜೊತೆಗೆ ಸ್ಪರ್ಧಿಸಿದ 3 ಜನರ ಬುದ್ಧಿಮತ್ತೆಯನ್ನು ನೋಡಿ” ಅಬ್ಬಾ ಎಷ್ಟೆಲ್ಲಾ  ಗೊತ್ತು ಇವರಿಗೆ” ಅಂದು ಕೊಂಡಿದ್ದು ಅದೆಷ್ಟುಬಾರಿಯೋ!!!!! ಚಿತ್ರ ಕವಿತೆಯ ಸುತ್ತು ತುಂಬಾ ಇಷ್ಟವಾಯಿತಾದರೂ ಕಷ್ಟಕರವಾಗಿತ್ತು. ಅತಿ ಸುಲಭ ಎಣಿಸಿದ ಕೆಲ ಪ್ರಶ್ನೆಗಳ ಉತ್ತರವೇ ತಪ್ಪಾಗಿ ಅಯ್ಯೋ ದೇವ್ರೇ ಅನ್ನೋ ಹಾಗೆ ಮಾಡಿದವು. ಮೂರುವರೆ ಘಂಟೆಗಳು ಕಳೆದಿದ್ದು ಗೊತ್ತೇ ಆಗಲಿಲ್ಲ.

ಒಟ್ಟಿನಲ್ಲಿ ಇದೊಂದು ಜೀವನಪರ್ಯಂತ ನೆನಪಿಡುವಂತಹ ಕಾರ್ಯಕ್ರಮ. ತಂತ್ರಜ್ಞಾನದ  ಹೊಸ ಮಜಲನ್ನು ಸಾಹಿತ್ಯದ ಪಡಸಾಲಿಗೆ ತೆರೆದ  ವಿವಿಡ್ಲಿಪಿಯ ಪ್ರಮೋದ್ ಅವರಿಗೂ, ಅಚ್ಚುಕಟ್ಟಾಗಿ ನಿಯಮ, ಸಮಯ, ಹೀಗಿರಬೇಕು ಹೀಗೆ ಬೇಡ ಎಂದು ಹೇಳಿದ ಶ್ರೀವತ್ಸ ದೇಸಾಯಿಯವರಿಗೂ ಧನ್ಯವಾದಗಳು.- ಅಮಿತಾ ರವಿಕಿರಣ

4) ಡಾ ಲಕ್ಷ್ಮಿನಾರಾಯಣ ಗುಡೂರ್ ಬರೆಯುತಾರೆ:

‘ಥಟ್ ಅಂತ ಹೇಳಿ’ಯಂತಹ ಅತ್ತ್ಯುತ್ತಮ ಗುಣಮಟ್ಟದ, ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಬಹಳೇ ಸಂತೋಷದ ವಿಷಯ. ನಡೆಸಿಕೊಡುವ ಶ್ರೀ ನಾ ಸೋಮೇಶ್ವರ ಅವರ ಅಗಾಧ ಜ್ಞಾನ, ಪ್ರಶ್ನೋತ್ತರ ನಡೆಸಿಕೊಡುವ ಪರಿ ಎಲ್ಲ ಮೆಚ್ಚುವಂಥದ್ದು. ಈ ಮರೆಯದ ನೆನಪನ್ನ ಒದಗಿಸಿಕೊಟ್ಟ ಅನಿವಾಸಿ ತಂಡಕ್ಕೂ, ವಿವಿಡ್ಲಿಪಿ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು. – ಲಕ್ಷ್ಮಿನಾರಾಯಣ ಗುಡೂರ್

(ಈ ವರದಿ ಲೇಖನ ಪ್ರಕಟನೆಯ ಹಿಂದೆಯೂ ಅನೇಕರ ಪರಿಶ್ರಮವಿದೆ. ಇವರಿಗೆಲ್ಲ ಋಣಿ: ರಮ್ಯ ಭಾದ್ರಿ, ಸತ್ಯಪ್ರಮೋದ ಲಕ್ಕುಂಡಿ (vividlipi), ಅನಿಸಿಕೆಗಳನ್ನು ಬರೆದ ರಾಧಿಕಾ ಜೋಶಿ, ಅಮಿತಾ ರವಿಕಿರಣ, ಗೌರಿ ಪ್ರಸನ್ನ (ಶೀರ್ಷಿಕೆ ಸೂಚಿಸಿದ್ದಕ್ಕೂ).

          ಶ್ರೀವತ್ಸ ದೇಸಾಯಿ

ಈ ಸುತ್ತಿನ ವೀಕ್ಷಣೆಯ ವಿವರಗಳು (ಇತ್ತೀಚಿನದು): ಕಾರ್ಯಕ್ರಮ 33,116 ಜನರನ್ನು ತಲುಪಿ, 12,000 ಜನರು ಮನಃಪೂರ್ವಕವಾಗಿ ವಿಡಿಯೋ ವೀಕ್ಷಿಸಿ, 1,200 ಜನ ವ್ಯಾಖ್ಯೆ ಬರೆದಿದ್ದಾರೆ. ಜೊತೆಗೆ ಹೊನ್ನಾವರದ ನಾಲ್ಕು ತಾಲೂಕು ಮತ್ತು ಸುತ್ತಲಿನ ಊರಿನವರು ಸೇರಿ 20,000 ವೀಕ್ಷಕರು ತಮ್ಮ ಕೇಬಲ್ ಟಿ ವಿ ಯಲ್ಲಿ ಇದನ್ನು ವೀಕ್ಷಣೆ ಮಾಡಿದ್ದಾರೆ, ಅವರ ಎಣಿಕೆ ಸರಿಯಾಗಿ ಸಿಕ್ಕಿಲ್ಲ. 5,317 ಎಂಗೇಜ್ಮೆಂಟ್ಸ್, YouTube ವೀಕ್ಷಕರು 683. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಇದು ಒಂದು ಸಂತಸ ಕೊಡುವ ವಿಷಯವಾಯಿತು. ವೀಕ್ಷಕರ ಪ್ರಶ್ನೆಗೆ ಸರಿಯಾದ ಉತ್ತರ ನೂರರ ಹತ್ತಿರ ನಿರ್ದಿಷ್ಟ ಸಮಯದಲ್ಲಿ ಬಂದಿವೆ.(ಮಾಹಿತಿ ಕೃಪೆ: ಪ್ರಮೋದ್)

6 thoughts on ““ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

  1. Very beautiful article with collaboration with so many people. I attended the event as audience and it was a great event and looking forward for the next. I would like to thank Pramod and Desai for the hardwork. Dr Someshwara is invaluable and he is so dedicated and selfless. So much to learn from you all three. There is so much know about Kannada and Karnataka. The participants were great and ‘aashukavithe’ section was the one I enjoyed the most. Very happy to know it has reached so many people across the globe. Now ‘Anivaasi’ is more famous, all because of ‘thath antha heLi’.Thank you Dakhsyini, for collaborating another great article.

    – Keshav

    Like

  2. ಥಟ್ಟಂತ ಹೇಳಿ ನಿಜಕ್ಕೂ ಅನಿವಾಸಿ ಗೆ ಗಿಟ್ಟಿದ ರಸಘಟ್ಟಿಯೇ.ಅದೊಂದು ಜ್ಞಾನದ ಖಜಾನೆಯೇ.ನಮ್ಮ ಆಸುಪಾಸಿನಲ್ಲಿ ಇರುವ ಎಷ್ಟೋ ಚಿಕ್ಕ, ದೊಡ್ಡ ವಿಷಯಗಳೇ ನಮಗೆ ಎಟುಕುತ್ತಿಲ್ಲವಲ್ಲ ಅಂತ ಒಂಥರದ ಅಚ್ಚರಿ ಮೂಡಿಸುತ್ತದೆ ಈ ಕಾರ್ಯಕ್ರಮ.ಎಲ್ಲ ಸ್ಪರ್ಧಿಗಳು ಆಳವಾಗಿ ಅಭ್ಯಸಿಸಿ ಬಂದಿದ್ದು ಖುಷಿ ಕೊಡುವ ಸಂಗತಿ.ಚಿತ್ರ ಕವನದ ಸುತ್ತು ನವೀನ ಪ್ರಯೋಗವೇ ಆದರೂ ತುಂಬಾ ಇಷ್ಟ ಆಯ್ತು.ಸಾರಥ್ಯ ವಹಿಸಿ ಚೊಕ್ಕವಾಗಿ ನಿಭಾಯಿಸಿದ ಶ್ರೀವತ್ಸ ದೇಸಾಯಿಯವರಿಗೂ, ಇಂಥ ಒಂದು ಒಳ್ಳೆಯ ಅವಕಾಶ, ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತೂ ನೋಡುವಂತಹ ದನ್ನು ಒದಗಿಸಿ ಕೊಟ್ಟ ವಿವಿಡ್ಲಿಪಿಯ ಪ್ರಮೋದ ಅವರಿಗೂ ಅಭಿನಂದನೆಗಳು ಹಾಗೇ ಧನ್ಯವಾದಗಳು.ಈ ರಸಘಟ್ಟಿಯ ಮುಂದಿನ ಕಂತಿನ ದಾರಿ ಕಾಯ್ತಿದೀನಿ.
    ಸರೋಜಿನಿ ಪಡಸಲಗಿ

    Like

  3. ಸುಮಾರು ಹತ್ತು ವರ್ಷಗಳ ಹಿಂದೆ ನಾನು ಮತ್ತು ಬ್ಲಾಕ್ ಪೂಲ್ ನಲ್ಲಿರುವ ಡಾ ವಾಸುದೇವ್ ಬೆಂಗಳೂರಿನಲ್ಲಿ ಥಟ್ಟನೆ ಹೇಳಿ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ಈಗ ನೆನಪಿಗೆ ಬಂತು. ನಾವು ಇದರ ರೆಕಾರ್ಡಿಂಗ್ ನೋಡುವುದಕ್ಕೆ ಹೋಗಿದ್ದವಿ
    ಅಲ್ಲಿಯ ಮುಖ್ಯಸ್ಥರೊಂದಿಗೆ ವಿರಾಮದಲ್ಲಿ ಮಾತನಾಡುತ್ತಿರಬೇಕಾದರೆ ಆತ ನಮ್ಮನ್ನು ಭಾಗವಹಿಸುವುದಕ್ಕೆ ಕೇಳಿದರು. ನನಗೆ ೪-೫ ಪುಸ್ತಕಗಳು ಬಂತು, ಕೆಲವು ಪ್ರಶ್ನೆಗಳು ಕರ್ನಾಟಕದ ಇತ್ತೀಚಿಗೆ ನಡೆದ ಘಟನೆಗಳ ಬಗ್ಗೆ ಆದ್ದರಿಂದ ಇವು ನಮಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ
    . ನಮಿಬ್ಬರಿಗೂ ಈ ಒಳ್ಳೆಯ ಅವಕಾಶ ಸಿಕ್ಕದ್ದು ಅದೃಷ್ಟ. ಆದರೆ ಈ ಕಾರ್ಯಕ್ರಮ ಪ್ರಸಾರವಾದಾಗ ನಾವು ಇಲ್ಲಿ ಇರಲಿಲ್ಲ
    It was a memorable experience

    Liked by 1 person

    • Lucky you two!ಉಳಿದವರೆಲ್ಲ ಎಷ್ಟು ದಿನಗಳ ಹಿಂದೆ ಅರ್ಜಿ ಹಾಕಿ, ಆಯ್ಕೆಯಾಗಿ ಕಾಯುತ್ತಿದ್ದರೋ, ನಿಮಗೇನೋ ಥಟ್ಟನೆ ಅವಕಾಶ ಸಿಕ್ಕಿ ಬಿಟ್ಟಿತಲ್ಲ! Delayed congratulations.

      Like

  4. ಬಾಲ್ಯದಲ್ಲಿ ಕಂಡ ಕನಸು ನನಸಾಗಿದೆ!
    ಕನ್ನಡದ ಪ್ರಪ್ರಥಮ ಹಾಗು ಏಕೈಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತೋಷವನ್ನು ಕೆಲವೇ ಶಬ್ದಗಳಲ್ಲಿ ವ್ಯಕ್ತಪಡಿಸುದು ಸಾಧ್ಯವಿಲ್ಲ.
    ಕವಿತಾ ರೂಪದಲ್ಲಿ ಈಗಾಗಲೇ ನನ್ನ ಅನುಭವವನ್ನು ಸಂಕ್ಷಿಪ್ತವಾಗಿ ಬರೆದಿದ್ದೇನೆ. ಕನ್ನಡದ ಬಗ್ಗೆ ಎಷ್ಟು ಹೆಮ್ಮೆ ಪಟ್ಟರು ಸಾಲದು ಹಾಗು ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಈ ಸಂಗತಿಯನ್ನು ಸ್ಪಸ್ಪೀಕರಿಸುತ್ತದೆ. ನನ್ನ ಕನ್ನಡದ ಜ್ಞಾನ ಹಾಗು ಅನುಭವ ವೃದ್ಧಿಸಲು ಹೊಸ ದಿಕ್ಕು ತೋರಿಸದಂತಾಯಿತು.
    ಡಾ.ನಾ ಸೋಮೇಶ್ವರ ಅವರ ಅಪಾರ ಕನ್ನಡ ಜ್ಞಾನ ಸಂಪತ್ತು ಹಾಗು ನಮ್ರ ಸ್ವಭಾವದ ಒಂದು ಸಣ್ಣ ನೋಟ ಆ ಕಾರ್ಯಕ್ರಮದ ಮೂಲಕ ಲಭ್ಯವಾಯಿತು. ಕನ್ನಡ ಜ್ಞಾನವನ್ನು ಪರೀಕ್ಷಿಸುವುದಲ್ಲದೆ ಕನ್ನಡದಲ್ಲಿ ಕವಿತೆಯನ್ನು ಬರೆಯುವ ಹೊಸ ಪ್ರಯತ್ನ ಬಹಳ ಸುಂದರವಾಗಿತ್ತು
    ನನ್ನನ್ನು ಸ್ಪರ್ಧಿಯಾಗಲು ಅವಕಾಶ ಮಾಡಿಕೊಟ್ಟ ವಿವಿಡ್ಲಿಪಿಯ ಪ್ರಮೋದ್ರವರಿಗೆ ಹಾಗು ಅನಿವಾಸಿಯ ಶ್ರೀವತ್ಸ ದೇಸಾಯಿಯವರಿಗೆ ನನ್ನ
    ಧನ್ಯವಾದಗಳು.
    ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎನ್ನುವ ಹಾಗೆ ಸಹ ಸ್ಪರ್ಧಿಗಳೊಂದಿಗೆ ಈ ಅನುಭವ ಹಾಗು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೆ ನನ್ನ ಧನ್ಯವಾದಗಳು.

    Liked by 1 person

  5. ಒಪ್ಪವಾದ ಶೀರ್ಷಿಕೆಯೊಂದಿಗೆ ಫಟ್ ಎಂದು ಈ ವಾರದ ಬರಹ ” ಥಟ್ಟಂತ ಹೇಳಿ” ತಯಾರು ಮಾಡಿ, ಪ್ರಕಟಿಸಿದ ಶ್ರೀವತ್ಸ ದೇಸಾಯಿಯವರಿಗೆ ಪ್ರಯತ್ನ ಪ್ರಶಂಸಾರ್ಹ. ಕಾರಣಾಂತರದಿಂದ ಈ ಕಾರ್ಯಕ್ರಮವನ್ನು ನೋಡಲಾಗದಿದ್ದ ನನಗೆ ಇದನ್ನು ”ಯು ಟ್ಯುಬ್ ” ಮೂಲಕ ನೋಡುವ ಸದವಕಾಶವನ್ನು ಒದಗಿಸಿಕೊಟ್ಟಿದ್ದಾರೆ.
    ಭಾಗವಹಿಸಿದ ಕೆಲವು ಅಭ್ಯರ್ಥಿಗಳ ಅನುಭವ, ಅವರ ಮೂಲಕವೆ ತಿಳಿಯುವುವ ಅವಕಾಶವನ್ನು ಈ ಲೇಖನ ಮಾಡಿಕೊಟ್ಟಿದೆ. ಕನ್ನಡ ನಾಡಿನ ಬಗೆಗೆ, ಪ್ರತಿಯೊಂದು ವಿಚಾರದಲ್ಲೂ ತಿಳಿದುಕೊಳ್ಳುವ, ಕಲಿಯುವ ಅವಕಾಶ ಈ ಕಾರ್ಯಕ್ರಮ ಮಾಡಿಕೊಡುತ್ತಲಿದೆ. ಲೇಖನವನ್ನು ತ್ವರಿತವಾಗಿ ಬರೆದು ಹಂಚಿಕೊಂಡ ಗೌರಿ ಪ್ರಸನ್ನ, ರಮ್ಯಭಾಧ್ರಿ ಮತ್ತು ಪ್ರಮೋದ್ ರವರ ಪ್ರಯತ್ನ ಶ್ಲಾಘನೀಯ. ಎಲ್ಲಕ್ಕಿಂತ ಹೆಚ್ಚಾಗಿ, ಅನಿವಾಸಿ ಬಳಗದ ಸದಸ್ಯರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆವಕಾಶ ಮಾಡಿಕೊಟ್ಟ ’ವಿವಿಲ್ಡಿಪಿ’ ಯ ನಿರ್ದೇಶಕ ಪ್ರಮೋದ್ ರವರಿಗೆ ಅಭಿನಂದನೆಗಳು.

    Liked by 1 person

Leave a comment

This site uses Akismet to reduce spam. Learn how your comment data is processed.