ಮೌನ ಮತ್ತು ಸಂಭಾಷಣೆ -ಎರಡು ಸಣ್ಣ ಕತೆಗಳು

ಪ್ರಿಯ ಓದುಗರೆ, ಈ ಜುಲೈ ತಿಂಗಳ ಅನಿವಾಸಿ ವಾರಪತ್ರಿಕೆಯಲ್ಲಿ ಸಣ್ಣಕತೆಗಳನ್ನು ಪ್ರಕಟಿಸುತ್ತಿದ್ದೇನೆ. ಕತೆಗಳು ಸಣ್ಣದಾದರೂ, ಹುದುಗಿರುವ ಅರ್ಥ ಮತ್ತು ಸಂದೇಶ ದೊಡ್ಡದು. ಈ ವಾರದ ಕತೆಗಳ ಲೇಖಕರು ಪ್ರಮೋದ್ ಲಕ್ಕುಂಡಿ ಮತ್ತು ಕೇಶವ ಕುಲಕರ್ಣಿ.
ಮಾತು ಚಿನ್ನ ಮತ್ತು ಮೌನ ಬಂಗಾರವೆನ್ನುವ ಹೇಳಿಕೆಯಿದೆ. ಏಕಾಂಗಿತನಕ್ಕೆ ಸಂಭಾಷಣೆಯ, ಸಾಂಗತ್ಯದ ಅಗತ್ಯವಿದೆ, ಆದರೆ ಕೆಲವು ಬಾರಿ ಏಕಾಂತದ ಮೌನದಲ್ಲೂ ಅದರದೇ ಆದ ಸುಖವಿದೆ. ಮೌನ, ಮಾತುಗಳ ಅಗತ್ಯ ಬಹು ವೈಯುಕ್ತಿಕ. ನಮ್ಮ ಸುತ್ತಲ ವಾತಾವರಣಕ್ಕಿಂತ, ನಮ್ಮಗಳ ಅಂತರಿಕ ಶಾಂತಿ ಅಥವಾ ತುಮುಲ, ನಮ್ಮನ್ನು, ನಮಗೆ ಬೇಕಾದ ಜಾಗಕ್ಕೆ ಕರೆದೊಯ್ಯಬಹುದು. ಓದಿ ಪ್ರತಿಕ್ರಿಯಿಸಿ ( ಸಂ)

ಮೌನ

ಬೆಳಗೆದ್ದು ಸುಪ್ರಭಾತ ಕೇಳುತ್ತ ಕಿಟಕಿ ತೆಗೆದೆ… ಬಣ್ಣ, ಬಣ್ಣದ ಚಿತ್ತಾರದ ಆಗಸ, ನಮ್ಮ ಸೂರ್ಯನಿಗಿಂತ ಬೇಕೇ ಬೇರೆ ಚಿತ್ರ ಕಲಾವಿದ. ಸೂರ್ಯನಂತಹ ಕಲಾಕಾರ ಬೇರೊಬ್ಬನಿಲ್ಲ, ಬರುವಾಗ ವಿಧ ವಿಧವಾದ ಬಣ್ಣಗಳ ಚಿತ್ರ ಮೂಡಿಸಿ ನಮ್ಮೆಲ್ಲರ ದಿನ ಸಂತೋಷದಿಂದ ಶುರು ಮಾಡುತ್ತಾನೆ… ಮತ್ತೆ ಸಾಯಂಕಾಲ ಹೋಗುವಾಗ ಬಣ್ಣಗಳ ಜೊತೆ ಆಡುತ್ತ ನಮಗೆ ಶುಭರಾತ್ರಿ ಹೇಳುತ್ತಾನೆ. ಮನ ಸೂರೆಗೊಳ್ಳುವ ದೃಶ್ಯ ನೋಡುತ್ತಾ ಇದ್ದೆ, ರಂಗು ರಂಗಿನ ಗುಂಗಿನಲ್ಲಿ ಇದ್ದೆ, ಇದ್ದಕ್ಕಿದಂತೆಯೇ ಮನಸ್ಸು ತನ್ನ ಪ್ರಯಾಣದ ದಾರಿ ಬದಲಿಸಿತು. ಅಮ್ಮ ಹೇಳಿದ ಮಾತು, ಇರುವ ಸಮಸ್ಯೆ, ಪರಿಹಾರ, ಅಂತೆಲ್ಲ ಮನಸ್ಸು ವಿಚಾರ ಮಾಡತೊಡಗಿದಾಗ ಬಣ್ಣಗಳು ಅಳಿಸಿ, ಆಗಸ ಬಿಳಿ ಹಾಳೆ ಆಯಿತು.

ಸಂತೋಷ ಪಟ್ಟಿದ್ದು ಆಯಿತು…ಇನ್ನು ನನ್ನ ದಿನ ಪ್ರಾರಂಭ.

ಅಮ್ಮಾ  sss … ನನ್ನ ಪುಸ್ತಕ ಎಲ್ಲಿದೆ?…

ಏ… ನನ್ನ ಟವೆಲ್ ಎಲ್ಲಿ?

courtesy – Humanity Healing Network

ಬೆಳಗಾದರೆ ಎಲ್ಲರ ವಿಧ ವಿಧವಾದ ರಾಗ ಕೇಳುವುದು ನನ್ನ ಕರ್ಮ, ಹೀಗಾದರೂ ನನ್ನನ್ನು ನೆನಸುತ್ತಾರಲ್ಲ ಅಂತ ಖುಷಿ. ಒಂದೆರಡು ಗಂಟೆ ಇವರ ಧಾವಂತ ಅನುಭವಿಸಿದರೆ ಆಮೇಲೆ ನಿರಾಳ…

ಮನೆಯ ಹಿರಿಯರು ಯಾವುದೊ ಕಾರ್ಯ ಅಂತ ಸಂಬಂಧಿಕರ ಊರಿಗೆ ಹೋಗಿದ್ದಾರೆ, ಇವರೆಲ್ಲ ಹೋದರೆ ನಾನು ಸ್ವಲ್ಪ ಆರಾಮ ತೊಗೋಬಹುದು… ಆರಾಮ ಮಾಡಬಹುದು ಎಂದು ಮನಸ್ಸಿಗೆ ಅನ್ನಿಸಿದ ಕೂಡಲೇ ಮನಸ್ಸು ಮೋಸ ಹೋಗಿ ಒಳ ಒಳಗೆ ಖುಷಿ ಪಟ್ಟಿತು…   

ಅಂತೂ ಕೊನೆಗೂ ಎಲ್ಲರೂ ಹೊರಟು ನಿಂತರು… ಮಗ ಕೂಗಿದ – ನನ್ನ ಅಂಗಿ ಗುಂಡಿ ಹರಿದು ವಾರ ಆಯಿತು ಇನ್ನೂ ನಿನಗೆ ಸರಿ ಮಾಡ್ಲಿಕ್ಕೆ ಆಗಿಲ್ಲ, ಮೊದಲು ಸರಿ ಮಾಡಿ ಆಮೇಲೆ ನಿನ್ನ ಕೆಲಸ ಮಾಡಮ್ಮ…ಇವತ್ತು ನಂಗದು ಬೇಕು, ನನ್ನ ಗೆಳೆಯನ ಹುಟ್ಟಿದಹಬ್ಬ, ಅವರ ಮನೆಗೆ ಹೋಗಬೇಕು…  ಅವನ ಅಳು ಧ್ವನಿಯ ಕೂಗು ಕೇಳಿ – ಆಯಿತು ಮೊದಲು ಅದನ್ನೇ ಮಾಡ್ತೀನಿ ಅಂತ ಜೋರು ದನಿಯಲ್ಲಿ, ಅವನಿಗೆ ಕೇಳುವ ಹಾಗೆ ಹೇಳಿದೆ.        

ಎಲ್ಲರೂ ಹೋದ ಮೇಲೆ ಮನೆ ಖಾಲಿ, ಖಾಲಿ ಅನಿಸೋಕ್ಕೆ ಸುರು ಆಯಿತು. ಹೊರಗೂ ಯಾರೂ ಇಲ್ಲ, ಪಕ್ಷಿಗಳ ಕಲರವ ಇಲ್ಲ, ಅಕ್ಕ ಪಕ್ಕದಲ್ಲಿ ಹತ್ತಿರ ಯಾವ ಮನೆ ಇಲ್ಲ, ಮಳೆಗಾಲವಾದರೂ ಕಪ್ಪೆಗಳ ಸದ್ದಿಲ್ಲ…ಎಲ್ಲೆಲ್ಲೂ ನಿಶ್ಯಭ್ಧ… ನೀರವತೆ. ಅದೇ ಹೇಳುತ್ತಾರಲ್ಲ ಬೆಕ್ಕಿನ ಹೆಜ್ಜೆ ಕೇಳುವಂಥ ನೀರವತೆ.

ಮನೆಯಲ್ಲಿ ಒಬ್ಬಳೇ…ಕೈಯಲ್ಲಿ ಗುಂಡಿ ಸರಿಮಾಡಬೇಕೆಂದು ಹಿಡಿದ ಅಂಗಿ… ಸೂಜಿ ಪೋಣಿಸಬೇಕೆ0ದು ಸುರು ಮಾಡುವಷ್ಟರಲ್ಲಿ ಸೂಜಿ ಕೈ ಜಾರಿತು… ನೆಲದ ಮೇಲೆ ಬಿದ್ದೆ ಬಿಟ್ಟಿತು… ಇನ್ನು ಸೂಜಿ ಹುಡುಕೋ ಕೆಲಸ ಬೇರೆ ಮಾಡಬೇಕು. 

ಆದರೆ ಒಂದು ಮಾತು ತಿಳಿಯಲಿಲ್ಲ… ಮನೆ ಶಾಂತವಾಗಿದೆ, ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ದ, ಅಂತಹ ಶಾಂತ ಸಮಯ … ಆದರೆ ಸೂಜಿ ಸದ್ದೇ ಕೇಳಿಸಲಿಲ್ಲ! … ಆದರೆ, ಸೂಜಿ ಸದ್ದು ಯಾಕೆ ಕೇಳಿಸಲಿಲ್ಲ? ಅದೂ ಇಂತಹ ಶಾಂತ, ನಿಶಬ್ದತೆಯಲ್ಲಿ. ಸೂಜಿ ಸದ್ದಂತೂ ಕೇಳಲಿಕ್ಕಿಲ್ಲ, ಆದರೆ ಅದರ ಸಣ್ಣ ಡಬ್ಬಿ ಬಿದ್ದ ಸದ್ದೂ ಕೇಳಲಿಲ್ಲ, ಮನಸ್ಸು ಕಾರಣ ಹುಡುಕೋ ಪತ್ತೇದಾರನ ತರಹ ವಿಚಾರ ಸುರು ಮಾಡಿತು.  ಹುಂ… ಅರ್ಥವಾಯಿತು… ಹೊರಗಿನ ನಿಶಬ್ದತೆ ನಮಗೆ ಸದ್ದಿಲ್ಲದ ವಾತಾವರಣ ತರಬಹುದು, ಆದರೆ ಎಲ್ಲಿಯ ತನಕ ನಮ್ಮ ಮನಸ್ಸು ಮೌನವಾಗುವದಿಲ್ಲವೋ ಅಲ್ಲಿಯವರೆಗೆ ನಿಶಬ್ದ,  ನೀರವತೆ ಹೊರಗಿನ ಸ್ಥಿತಿ… ಮನಸ್ಸು ಯಥಾಪ್ರಕಾರ ಗೊಂದಲಮಯ…

ಡಬ್ಬಿ ಎತ್ತಿ ಇಟ್ಟು. ಸೂಜಿ ಹುಡುಕಲು ಸುರು ಮಾಡಿದೆ, ಹೊರಗಿನ ನಿಶಬ್ದತೆಯಲ್ಲಿ ಮನಸ್ಸಿನ ಜೋರು ಜೋರಾಗಿ ಮಾಡುವ ಸದ್ದು ಕೇಳಿಸುತ್ತಿತ್ತು.

ಸತ್ಯಪ್ರಮೋದ್ ಲಕ್ಕುಂಡಿ

ಸಂಭಾಷಣೆ

ಏನೋ ಸೋಂಬೇರಿ! ಇನ್ನು ಮಲಗಿದ್ದೀಯಾ? ನಾನು ಎದ್ದು ಅದೆಷ್ಟು ಹೊತ್ತು ಆಯ್ತು ಗೊತ್ತಾ? ಅರ್ಧ ಗಂಟೆಯಿಂದ ಎಳಿಸ್ತಾ ಇದ್ದೀನಿ. ರಾತ್ರಿಯಲ್ಲಾ ಆದೆಷ್ಟು ಗೊರಕೆ ಹೊಡಿತಿಯ. ರಾತ್ರಿ ಸರಿ ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ. ಏಳ್ತಿಯೊ ಇಲ್ಲ ನಿನ್ನ ಮುಖದ ಮೇಲೆ ನೀರು ಹಾಕಬೇಕೋ?

ಆಯ್ತು ಮಾರಾಯ್ತಿ! ಒಂದೈದು ನಿಮಿಷ ಆರಾಮವಾಗಿ ಮಲಗಲು ಬಿಡಲ್ಲ ನೀನು. ಈ ಬೆಳಗಿನ ಸಿಹಿ ನಿತ್ಯ ಸುಖ ನಿನಗೆ ಹೇಗೆ ಗೊತ್ತಾಗಬೇಕು? ನೀನೋ, ಮಧ್ಯಾಹ್ನದ ಸಾಯಂಕಾಲ ಒಂದು ಒಳ್ಳೆ ನಿದ್ದೆ ಮಾಡ್ತೀಯಾ. ನನಗೆ ಸೋಂಬೇರಿ ಅಂತಿಯೇನೇ? ನೀನು ಸೋಂಬೇರಿ, ನಿಮ್ಮಪ್ಪ ಸೋಂಬೇರಿ, ನಿನ್ನ ತಾತ ಸೋಂಬೇರಿ.

ಏಯ್, ಸಾಕು ಮಾಡು ನಿನ್ನ ವರಾತ. ನಿನ್ನನ್ನು ನೋಡಲ್ವಾ? ಕೈಯಲ್ಲಿ ನ್ಯೂಸ್ಪೇಪರ್ ಹಿಡ್ಕೊಂಡು ಹಾಗೆ ಬಾಯಿ ತಕ್ಕೊಂಡು ಕುರ್ಚಿನಲ್ಲೇ ನಿದ್ದೆ ಹೊಡಿತಾ ಇರ್ತಿಯ? ನಾನು ಎದ್ದು ಆಗಲೇ ಎರಡು ಗಂಟೆ ಆಯಿತು. ಹೊಟ್ಟೆ ಚುರುಚುರು ಅಂತಿದೆ. ಬೇಗ ತಿಂಡಿ ಕೊಡುತ್ತೀಯಾ ಇಲ್ಲ ಇನ್ನು ಹೀಗೆ ಬಿದ್ದುಕೊಂಡಿರ್ತಿಯ?

ಆಯ್ತು ಕಣೆ, ಎದ್ದೆ ಮಾರಾಯ್ತಿ. ಅದೇನು ಒಂದು ವಾರದಿಂದ ಉಪವಾಸವಿರುವ ತರ ಆಡ್ತೀಯ! ನಿನ್ನೆ ರಾತ್ರಿ ಬೇರೆ ಅಷ್ಟೊಂದು ತಿಂದಿದ್ದೀಯಾ! ತಗೋ, ತಿನ್ನು.

ಥ್ಯಾಂಕ್ಯೂ ಡಿಯರ್.

ಅದೇನು ಥ್ಯಾಂಕ್ಯೂನೋ! ಇನ್ನು ಹಾಕಿಲ್ಲ ಎನ್ನುವಷ್ಟರಲ್ಲಿ ಖಾಲಿ ಮಾಡ್ತಿಯಾ? ರುಚಿನಾದ್ರೂ ನೋಡೇ, ಮೂದೇವಿ! ಎಲೆ ಎಲೆ, ಕೋಪ ಮಾಡ್ಕೋಬೇಡವೇ. ಅರ್ಧಕ್ಕೆ ಬಿಟ್ಟು ಏಳಬೇಡ್ವೆ.

ಅದೇನ್ ತಿಂಡಿ ಮಾಡ್ತೀಯೋ? ಸೂಪರ್ ಮಾರ್ಕೆಟ್ ಇಂದ ಎರಡು ಡಬ್ಬಿ ತರ್ತೀಯಾ. ಈ ಡಬ್ಬಿ ಬಿಟ್ಟರೆ ಅದು, ಆ ಡಬ್ಬಿ ಬಿಟ್ಟರೆ ಇದು, ಅದು ಬಿಟ್ಟರೆ ಮನೆಯಲ್ಲಿ ಬೇರೆ ಏನಿದೆ ತಿಂಡಿ ತಿನ್ನಕ್ಕೆ? ಅದೇ ಪಕ್ಕದ ಮನೆ ಷಣ್ಮುಗಂ ನೋಡು, ಒಂದು ದಿನ ಇಡ್ಲಿ ದೋಸೆ, ಇನ್ನೊಂದು ದಿನ ಚಿಕ್ಕನ್, ಮತ್ತೊಂದು ದಿನ ಮಟನ್. ನೀನು ಇದ್ದೀಯ ದಂಡಕ್ಕೆ. ಬರಿ ಅನ್ನ ಸಾರು, ಅನ್ನ ಮೊಸರು. ಸುಮ್ನೆ ನನ್ನ ತಲೆ ತಿನ್ನಬೇಡ. ನಿನಗಂತೂ ಬೇರೆ ಕೆಲಸ ಇಲ್ಲ. ಬಾಯ್ ಬಾಯ್, ಬರ್ತೀನಿ.

ಇಷ್ಟಕ್ಕೆಲ್ಲ ಯಾಕೆ ಅಷ್ಟೊಂದು ಕೋಪ ಮಾಡ್ಕೋತಿಯ? ಇವತ್ತು ಭಾನುವಾರ ಕಣೆ. ಎಲ್ಲಿಗೆ ಹೊರಟೆ?

ನಾನೇನು ಮನೆಬಿಟ್ಟು ಓಡಿ ಹೋಗಲ್ಲ. ಇಲ್ಲೇ ನಮ್ಮ ಕಾಲೋನಿಯಲ್ಲಿ ಫ್ರೆಂಡ್ಸ್ ಎಲ್ಲಾ ಮಾತಾಡಿಸಿಕೊಂಡು ಟೈಂಪಾಸ್ ಮಾಡಿಕೊಂಡು ಬರುತ್ತೇನೆ. ನಿನ್ನ ಜೊತೆ ಏನು ಮಾಡೋಕ್ಕಿದೆ ಈ ಮನೆಯಲ್ಲಿ? ಮಧ್ಯಾಹ್ನ ಊಟಕ್ಕೇನೂ ಕಾಯಬೇಡ. ನಯ್ಯರ್ ಮನೆಯಲ್ಲಿ ಫಿಶ್ ಫ್ರೈ ವಾಸನೆ ಬರ್ತಾ ಇದೆ ಆಗಲೇ.

ಬೇಗ ಬಂದುಬಿಡೆ. ನೀನಿಲ್ದೆ ಸಿಕ್ಕಾಪಟ್ಟೆ ಬೋರಾಗುತ್ತೆ. ಸಿ ಯು ಸೂನ್.

ಸಿ ಯು. ಬಾಯ್.

ಇದು, ಹೆಂಡತಿಯನ್ನು ಕಳೆದುಕೊಂಡ, ಒಬ್ಬ ಮಗಳು ಅಮೆರಿಕಕ್ಕೆ, ಒಬ್ಬ ಮಗ ಇಂಗ್ಲೆಂಡಿಗೆ ಹೋದಮೇಲೆ, 65 ವರ್ಷದ ರಿಟೈರ್ ಆಗಿರುವ ಶಾಮರಾಯರಿಗೂ, ಮತ್ತು ಅವರ 6 ವರ್ಷದ ‘ಪ್ರೀತಿ’ ಎಂಬ ಬೆಕ್ಕಿಗೂ ಬೆಳಗಿನ ಜಾವ ನಡೆಯುವ ಸಂಭಾಷಣೆಯ ತುಣುಕು.

ಕೇಶವ ಕುಲಕರ್ಣಿ.

 

10 thoughts on “ಮೌನ ಮತ್ತು ಸಂಭಾಷಣೆ -ಎರಡು ಸಣ್ಣ ಕತೆಗಳು

  1. ಎರಡು ವಿಭಿನ್ನ ಕತೆಗಳನ್ನು ಜೊತೆಜೊತೆಯಾಗಿ ಹೆಣೆದು ನೀಡಿದ ಸಂಪಾದಕಿಗೆ ಮೊದಲ ಅಭಿನಂದನೆ.ಯಾವ ಕ್ಷಣದಲ್ಲಿ ಮೌನ ಮಾತಾಗುವುದೋ, ಮಾತು ಮೌನವಾಗುವುದೋ ತಿಳಿಯದಲ್ಲವೇ? ಒಂದರಲ್ಲಿ ಮೌನಕ್ಕಾಗಿ, ಏಕಾಂತಕ್ಕಾಗಿ ಹಂಬಲಿಕೆಯಿದ್ದರೆ ಮತ್ತೊಂದರಲ್ಲಿ ಮಾತು,ಸಾಂಗತ್ಯಕ್ಕಾಗಿ ಹಾತೊರೆಯುವಿಕೆ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.’ ಅಭಿನಂದನೆಗಳು ಪ್ರಮೋದ್ ಹಾಗೂ ಕೇಶವ್ ಅವರಿಗೆ.

    Like

  2. Welcome Pramod to Anivaasi. ಬೆಳಗಿನ‌ ಗಿಜಿಬಿಜಿ ಎಲ್ಲ ಮುಗಿದ ಮೇಲೆ ಉಳಿಯುವ ಮೌನ, ನಿಜವಾಗಿಯೂ ಮೌನವಾಗುವುದು ಯಾವಾಗ? ಸುಂದರ ಕಿರುಗತೆ.

    – ಕೇಶವ

    Like

    • ಉತ್ತಮ ಕತೆಗಳು. ಭಾವನೆಗಳನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ ಪ್ರಮೋದ್ . ಕುತೂಹಲಕಾರಿ ಕಥೆ ಬರೆವ ಶೈಲಿ ಕೇಶವ್ ಗೆ ಕರಗತವಾಗಿದೆ. ಸೂಕ್ಷ್ಮ ವಿಷಯವನ್ನು ರೋಚಕ ವಿಧದಲ್ಲಿ ಉಣಬಡಿಸುವಲ್ಲಿ ಯಶಸ್ವಿಯಾಗಿದೆ.
      – ರಾಂ

      Like

  3. ಪ್ರಮೋದ್ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಕದಡಿದ ನೀರು ಕನ್ನಡಿ ಆಗದು .
    ಕೇಶವ್ ನಿಮ್ಮ ಕಥೆ ಬಹಳ ಹಿಡಿಸಿತು ನಾನು ನನ್ನ ನಾಯಿ ಮರಿಯೊಂದಿಗೆ ಮಾಡುವ ಸಂಭಾಷಣೆ ನೆನಪಿಗೆ ಬಂತು .ಎಷ್ಟೋ ವೇಳೆ ಅವನೊಂದಿಗೆ ಹೃದಯ ಬಿಚ್ಚಿ ಮಾತನಾಡಿದ್ದೇನೆ
    ಗಿರಿಧರ ಹಂಪಾಪುರ

    Like

    • ಅನಿವಾಸಿ ಈ ವಾರ ಪ್ರಕಟಿಸಿದ ಎರಡೂ ಕಿರುಗತೆಗಳು ತುಂಬ ಸುಂದರ ಅರ್ಥಪೂರ್ಣ ಕತೆಗಳು ಅನಿಸ್ತು ನಂಗೆ.ನಿಜ ಎರಡೂ ಕಡೆ ಮೌನ ಸಾಮ್ರಾಜ್ಯ ವೇ.ಆ ಸುತ್ತಲೂ ಕವಿದ ನಿಶ್ಯಬ್ದತೆಯನ್ನು ಕದಡುವ ಮನದ ಗುಸು ಗುಸು , ಪಿಸು ಪಿಸು.ಒಂದೆಡೆ ನೀರವತೆಯಲ್ಲಿ ,ನಿಶ್ಯಬ್ದದಲ್ಲಿ ಶಬ್ದವನ್ನರಸುವ ತಹತಹ , ಇನ್ನೊಂದೆಡೆ ಮೌನದಲ್ಲೇ, ನಿಶ್ಯಬ್ದದಲ್ಲೇ ಶಬ್ದಗಳ ಸಂತೆ ,ಬಿಡುಗಡೆಯೇ ಇರದ ಮೌನರಾಗ ದ ಆಲಾಪ.ಇದುವೇ ಅಲ್ವೆ ಜೀವನದ ವೈಚಿತ್ರ್ಯ? ಸುಂದರ ಕತೆಗಳನ್ನು ನೀಡಿದ್ದಕ್ಕೆ ಪ್ರಮೋದ ಲಕ್ಕುಂಡಿ ಹಾಗೂ ಕೇಶವ ಕುಲಕರ್ಣಿಯವರಿಗೂ ಅಭಿನಂದನೆಗಳೊಂದಿಗೆ ಧನ್ಯವಾದಗಳು.
      ಸರೋಜಿನಿ ಪಡಸಲಗಿ

      Like

  4. ಎರಡೂ ಕಥೆಗಳೂ ತುಂಬಾ ಚೆನ್ನಾಗಿ ಮೂಡಿಬಂದಿವೆ.

    ಆಂತರಿಕ ನೀರವತೆ ಇರದೇ , ಜಗತ್ತಿನ ಸೂಕ್ಷ್ಮತೆಗಳನ್ನು ಗಮನಿಸಲಾಗದು ಎಂಬುದನ್ನು ‘ಮೌನ’ ಕಥೆ ಸೊಗಸಾಗಿ ಚಿತ್ರಿಸಿದೆ.

    ಕೊನೆಯ ಸಾಲಿನ ತಿರುವು, ‘ಸಂಭಾಷಣೆ’ ಗೆ ಹೊಸ ಅರ್ಥವನ್ನು ತಂದುಕೊಟ್ಟು ಓದುಗನನ್ನು ಒಂದು ಜಿಗ್ನಾಸೆಗೆ ಒಳ ಪಡಿಸುತ್ತದೆ.

    ‘ಸಂಭಾಷಣೆ’ ನಡೆಯುವುದು ‘ಮೌನ’ ದಲ್ಲೇ. ಕಥೆಗಳು ಒಂದಕ್ಕೊಂದು ಪೂರಕವಾಗಿವೆ. ಇವನ್ನು ಜೊತೆಗೆ ಪ್ರಕಟಿಸಿದ ಸಂಪಾದಕರಿಗೆ ಅಭಿನಂದನೆಗಳು.

    Like

  5. ಈ ವಾರದ ಸಂಚಿಕೆಯಲ್ಲಿ ಮೊದಲ ಬಾರಿ ’ಅನಿವಾಸಿ’ಯಲ್ಲಿ ಎರಡು ಕತೆಗಳು; ಸಣ್ಣ ಕತೆಗಳು, ಜೊತೆಯಾಗಿ. ಅವುಗಳನ್ನು ಆರಿಸಿ ಅದಕ್ಕೆ ಒಪ್ಪವಾದ ಚಿಕ್ಕ ಪೀಠಿಕೆ ಬರೆದ ಸಂಪಾದಕೀಯ. ಎರಡು ಪ್ರಾತಃಕಾಲದ ದೃಶ್ಯಗಳು, ದೈನಂದಿನ ಘಟನೆಗಳು, ಆದರೆ ಭಿನ್ನವಾದವು. ಎರಡರಲ್ಲೂ ಮಾತು ಇದೆ, ಮೌನವೂ ಇದೆ. ಎರಡರಲ್ಲೂ ಬೆಕ್ಕು ಬಂದರೂ ಒಂದರಲ್ಲಿ ಕಾಣುವದಿಲ್ಲ! ಒಂದರಲ್ಲಿ ಕತೆಗಾರರಿಗೆ ಮಾತು, ಸಂಭಾಷಣೆ ಬೇಡವಾಗಿದೆ; ಎರಡನೆಯದರಲ್ಲಿ ಇಲ್ಲದ ಸಂವಾದವನ್ನು ನಾಯಕ ಹುಟ್ಟಿಸುತ್ತಾನೆ. ಇವುಗಳೆರಡರಲ್ಲೂ ಜೀವನದ ಅನುಭವದ ತುಣುಕುಗಳು ಮತ್ತು ಅವುಗಳಿಂದ ಮನನ ಮಾಡುವಂಥ ಸಂದೇಶಗಳು ಇವೆ. ಸಣ್ಣ ಕತೆಯ ತಂತ್ರವನ್ನರಿತು ಬರೆದ ಕತೆಗಾರರಿಬ್ಬರಿಗೂ ಅಭಿನಂದನೆಗಳು. ಒಳ್ಳೆಯ ಬೆಳಗಿನ ಓದು, ಈ ಶುಕ್ರವಾರ. ಶ್ರೀವತ್ಸ ದೇಸಾಯಿ

    Like

    • ಇದು ‘ಅನಿವಾಸಿ’ಯಲ್ಲಿಲಸತ್ಯಪ್ರಮೋದ ಲಕ್ಕುಂಡಿ ಅವರ ಮೊದಲ ಬರೆಹ. ಅವರಿಗೆ ಹಾರ್ದಿಕ ಸ್ವಾಗತ!

      Like

  6. Beautiful snapshots of morning hours. Pramod’s story highlights the morning rush ending in silence. Keshav twists what starts like a gayyaaLi wife’s unending nags in to a comic something else. Enjoyed both.

    Like

Leave a comment

This site uses Akismet to reduce spam. Learn how your comment data is processed.