ತೇಜೋ–ತುಂಗಭದ್ರಾ

ಪ್ರಿಯ ಓದುಗರೆ, ಈ ವಾರದ ಅನಿವಾಸಿಯಲ್ಲಿ ಶ್ರೀಮತಿ ಗೌರಿ ಪ್ರಸನ್ನ ಅವರು, ಕನ್ನಡದ ಪ್ರಸಿದ್ಧ ಲೇಖಕರಲ್ಲೊಬ್ಬರಾದ ವಸುಧೇಂದ್ರರವರು ಬರೆದಿರುವ “ತೇಜೊ ತುಂಗಭದ್ರ“ ಕಾದ೦ಬರಿಯನ್ನು ಓದಿ ಅವರ ವಿಮರ್ಶೆಯನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಕರೋನ ವೈರಸ್ ದಾಳಿಯನ್ನು ಎದುರಿಸುತ್ತಿರುವ ಈ ಕಾಲದಲ್ಲಿ ಗೌರಿಯವರು ಬರೆದಂತೆ ಉತ್ತಮ ಪುಸ್ತಕವು ನಮ್ಮನ್ನು ಕರೆದೂಯ್ಯಬಹುದಾದ ಜಾಗಕ್ಕೆ ಎಲ್ಲೆ, ಅಂತ್ಯಗಳಿಲ್ಲ ಮತ್ತದು ಕೊಡುವ ಆನಂದಕ್ಕೆ ಪಾರವಿಲ್ಲ. ಈ ವಿಮರ್ಶೆ ಕಾದಂಬರಿಯ ಒಟ್ಟಾರೆ ನೋಟವನ್ನು, ಕತೆಯನ್ನು ಬಿಟ್ಟುಕೊಡದೆ, ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಸಫಲವಾಗಿದೆ.
ನಾನು ಸ್ವತಃ ಈ ಪುಸ್ತಕವನ್ನು ಓದಿಲ್ಲದಿದ್ದರೂ, ಪುತಿನರವರ ಅತ್ಯಂತ ಅರ್ಥಪೂರ್ಣ ಕವಿತೆಯಿಂದ ಆರಂಭವಾಗುವ ಈ ವಿಮರ್ಶೆ, ಈ ಕಾದಂಬರಿಯನ್ನು ತಪ್ಪದೇ, ಸಾಧ್ಯವಾದಷ್ಟು ಬೇಗನೆ ಓದಬೇಕೆನ್ನುವ ಬಯಕೆಯನ್ನು ನಮ್ಮಲ್ಲಿ ಮೂಡಿಸುತ್ತದೆ (ಸಂ)

“ಸ್ಥವಿರಗಿರಿಯ ಚಲನದಾಸೆ ಮೂಕವನದ ಗೀತದಾಸೆ

ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ

 ಹೊನಲ ರಾಣಿ ನಾ”

ಪುಸ್ತಕದ ಮುಖಪುಟ

ಪುತಿನ ಅವರ ಈ ಕವನ ನನಗೆ ಅಚ್ಚುಮೆಚ್ಚು. ನಡೆಯಲಾಗದ ಗಿರಿಪವ೯ತದ ಚಲನೆಯ, ಮಾತೇ ಬಾರದ ಮೂಕವನದ ಗೀತೆಯ, ಸೃಷ್ಟಿ ಭಾರ ಹೊತ್ತು ನಗಲಾಗದೇ ನಿಂತ ಭೂಮಿಯ ನಗುವಿನ ಒಟ್ಟಾರೆ ಆಸೆಯೇ ಈ ಹೊನಲು- ನದಿ. ಗಂಗೆ, ಯಮುನೆ, ಕೃಷ್ಣೆ, ಗೋದಾವರಿ, ಕಾವೇರಿ, ತುಂಗಭದ್ರೆ ….ಹೀಗೆ ನದಿಗಳ ಹೆಸರುಗಳನ್ನು ಕೇಳುತ್ತಿದ್ದರೇನೇ ಎಂಥದೋ ರೋಮಾಂಚನ. ಜಗತ್ತಿನ ದೊಡ್ಡದೊಡ್ಡ ನಾಗರೀಕತೆಗಳಿಗೆಲ್ಲ, ಭಿನ್ನ ಭಿನ್ನ ಸಂಸ್ಕೃತಿ ಸಂಸ್ಕಾರಗಳಿಗೆಲ್ಲ ಆಶ್ರಯತಾಣ ಈ ನದೀತಟಗಳು. ಚಿಕ್ಕವಳಿದ್ದಾಗಿನಿಂದಲೂ ಧಡ್ ಧಡ್  ಎನ್ನುವ ಹಿನ್ನೆಲೆಯಲ್ಲಿ ಬ್ರಿಜ್ ಮೇಲೆ ಓಡುವ ಬಸ್ಸು-ರೈಲಿನ ಕಿಟಕಿಯಿಂದ ಕಾಣುವ ಇಷ್ಟುದ್ಫ ಹಾವಿನಂತೆ ಅಂಕುಡೊಂಕಾಗಿ ಅಂತ್ಯವಿಲ್ಲದೇ ಹರಿವ ನದಿಗಳನ್ನು ನೋಡುತ್ತಿದ್ದಾಗ ಅದೇನೋ ಅಥ೯ವಾಗದ ತಾದಾತ್ಮ್ಯತೆ; ದಿವ್ಯಾನುಭೂತಿ. ಒಂದೆರಡು ನಾಣ್ಯಗಳನ್ನು ನೀರಲ್ಲೇ ಬೀಳುವಂತೆ ಎಸೆದುಬಿಟ್ಟರಂತೂ ಗುರಿ ಸಾಧಿಸಿದ ಧನ್ಯತಾಭಾವ.

ತೇಜೋ-ತುಂಗಭದ್ರಾ ನನ್ನ ಮೈದುನ ಪ್ರಮೋದ್ ನಿಂದ ನನ್ನ ಕೈ ಸೇರಿದಾಗ ಮೊದಲ ನೋಟದಲ್ಲೇ ಹೆಸರೇ ಅಚ್ಚರಿ ಹುಟ್ಟಿಸಿದ್ದರೂ ಹಲವಾರು ಕಾರಣಾಂತರಗಳಿಂದ ಓದಲಾಗದೇ ಟೇಬಲ್ ಮೇಲೇ ಕುಳಿತಿತ್ತು. ಲಾಕ್ ಡೌನ್ ನ ಈ ರಜಾದಿನಗಳಲ್ಲಿ ಮೈತುಂಬ ಕೆಲಸವಿದ್ದರೂ ಮನಮಾತ್ರ ಖಾಲಿಖಾಲಿ…ಜಗತ್ತನ್ನೇ ಕಾಡುತ್ತಿರುವ ಕೊರೋನಾದ ಸಾವು-ನೋವುಗಳ ಭಯ -ತಲ್ಲಣಗಳಿಂದ ಹೊರಬರಲು ದಾರಿಗಾಣದೇ ದಿಗಿಲುಪಡುತ್ತಿದ್ದಾಗ ಹೊಳೆದ ಏಕೈಕ ಸುಗಮ ದಾರಿ ಓದು..ಅದಕ್ಕೆಂದೇ ಹೆಚ್ಚುದಿನ ಓದಿನಲ್ಲಿ ವ್ಯಸ್ತವಾಗಲು ಬಯಸಿ ದಪ್ಪಗಾತ್ರದ ಈ ಪುಸ್ತಕವನ್ನೇ ಆಯ್ದುಕೊಂಡೆ.ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಸುಮಾರು ೪‍೧೫ ಪುಟಗಳ ಈ ಪುಸ್ತಕವನ್ನು ಕೇವಲ ಮೂರೇ ದಿನಗಳಲ್ಲಿ ಓದಿ ಮುಗಿಸಿಯಾಯ್ತು.(ಅಡುಗೆ, ತಿಂಡಿ,ಬಟ್ಟೆ,ಪಾತ್ರೆ,ಮಕ್ಕಳು-ಮನೆಯವರೊಡನೆ ಟ.ವಿ….ಯಾವುದನ್ನೂ ಬಿಡದೇ)  ಹಾಗೆ ನೋಡಿದರೆ ಇದರಲ್ಲಿ ನನ್ನ ಹೆಚ್ಚುಗಾರಿಕೆಯೇನೂ ಇಲ್ಲ. ತೇಜೋ-ತುಂಗಭದ್ರೆಯರಿಬ್ಬರೂ ತಮ್ಮ ಸೆಳವಿನೊಡನೆ ನನ್ನ ಸೆಳೆದೊಯ್ದರು ಅಷ್ಟೇ.

ಲೇಖಕ ವಸುಧೇಂದ್ರ

ಈ ಪುಸ್ತಕಗಳಲ್ಲಿ ಎರಡು ವಿಧ. ಒಂದು ನಾವೇ ಓದಬೇಕಾಗುವ ಪುಸ್ತಕಗಳು, ಇನ್ನೊಂದು ಅವುಗಳೇ ತಾವೇ ತಾವಾಗಿ ಓದಿಸಿಕೊಂಡು ಹೋಗುವ ಪುಸ್ತಕಗಳು….ಖಂಡಿತವಾಗಿಯೂ ಇದು ಎರಡನೆಯ ಕೆಟೆಗರಿಗೆ ಸೇರುವ ಪುಸ್ತಕವೆಂದು ಬೇರ ಹೇಳಬೇಕಾಗಿಲ್ಲ. ವಸುಧೇಂದ್ರ ಅವರ ಪುಸ್ತಕಗಳ ಬಗ್ಗೆ ಬಹಳ ಕೇಳಿದ್ದೆನಾದರೂ ಓದಿದ್ದು ಮಾತ್ರ ಇದೇ ಮೊದಲ ಪುಸ್ತಕ. ಈ ಲಿಸ್ಬನ್ , ವಿಜಯನಗರ, ಗೋವಾ ಹೀಗೆ ಒಂದಕ್ಕೊಂದು ಸಂಬಂಧವೇ ಇರದ,ವಿಭಿನ್ನ ಭೌಗೋಳಿಕತೆ ಹಾಗೂ ಸಂಸ್ಕೃತಿಗಳನ್ನು ಹೊಂದಿದ ನಗರಗಳನ್ನು ಅದ್ಹೇಗೆ ಒಂದು ಕತೆಯಲ್ಲಿ ಪೋಣಿಸಿರಬಹುದು ಎಂಬುದು ನನ್ನ ಮೊದಲ ಕುತೂಹಲವಾಗಿತ್ತು. ಪುಸ್ತಕ ತೆರೆದೊಡನೆ ಕೃತಿಯ ಕುರಿತಾದ ಲೇಖಕರ ಮಾತನ್ನೋದುವುದು ನನ್ನ ಚಟ.ಎಷ್ಟೋ ಸಲ ಅದನ್ನಷ್ಟೇ ಓದಿ ಪುಸ್ತಕ ಓದಲೋ ಬೇಡವೋ ಎಂದು ನಿಧ೯ರಿಸಿದ್ದಿದೆ…

ಕುಮಾರವ್ಯಾಸ, ಪುರಂದರ, ಕನಕ, ಇಂಟರ್ ನೆಟ್ – ನಾಲ್ವರು ಗುರುಗಳಿಗೆ ಸಮಾನಪ್ರೀತಿ ಗೌರವದಿಂದ’...ಎಂದು ಚಿಕ್ಕದಾಗಿ, ಚೊಕ್ಕದಾಗಿ ಬರೆದ ರೀತಿಯೇ ನನ್ನನ್ನು ಮರುಳುಗೊಳಿಸಿತು. ಕುಮಾರವ್ಯಾಸ, ಪುರಂದರ, ಕನಕರೆಲ್ಲಿ? ಇಂಟರ್ ನೆಟ್ ಎಲ್ಲಿ? ಆದರೆ ಅವರೆಲ್ಲರ ಮಾಹಿತಿಯನ್ನೂ ಒಂದೆಡೆ ಕಲೆಹಾಕಿ ಕೊಡುವ ಇಂಟರ್ ನೆಟ್ ಕೂಡ ಒಂದು ದೊಡ್ಡ  ಗುರುವೇ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. 

ಪೂರ್ಣ ಕಾದಂಬರಿಯ ಕತೆ ಒಮ್ಮೆ ತೇಜೋಳ ತಟದಲ್ಲಿ ,ಮುಗದೊಮ್ಮೆ ತುಂಗಭದ್ರೆಯ ತಟದಲ್ಲಿ ಸಾಗುತ್ತ ಹೋಗುತ್ತದೆ.  ‘ಪ್ರತಿಯೊಂದು ನದಿಗೂ ದೇವರು ಒಂದು ವಿಶೇಷ ಪರಿಮಳವನ್ನು ಕೊಟ್ಟಿರುತ್ತಾನೆ.ಅದರ ನೀರಿನ ರುಚಿ,ಅದು ಹರಿಯುವ ಮಣ್ಣಿನ ಗುಣ ಅದರೊಳಗಿನ ಜಲಚರಗಳ ಮೈವಾಸನೆ ,ಸುತ್ತಲ ಹಸಿರು …ಎಲ್ಲಾ ಸೇರಿ ಅದು, ಸಂಭವಿಸಿರುತ್ತದೆ.  ಆ ಸಹಜ ಪರಿಮಳವೇ ನದಿಯ ಇರವನ್ನು ನಮಗೆ ಆಪ್ತಗೊಳಿಸುತ್ತದೆ.’ಎಂದು ಬೆಲ್ಲಾಳ ಮೂಲಕ ನುಡಿಸುವ ವಸುಧೇಂದ್ರರ ಮಾತನ್ನುಅಲ್ಲಗಳೆವಂತಿಲ್ಲ.

ದಿನನಿತ್ಯ ನಾ ನನ್ನ ಅಡುಗೆಮನೆಯಲ್ಲಿ ಬೇಕಾಬಿಟ್ಟಿಯಾಗಿ ಬಳಸುವ ಮೆಣಸು, ಜೀರಿಗೆಯಂಥ ಮಸಾಲೆ ಸಾಮಾನುಗಳಿಗೆ ಮಹಾನ್ ಸಾಮ್ರಾಜ್ಯಗಳ ಅಳಿವು-ಉಳಿವನ್ನು ನಿಣ೯ಯಿಸಬಲ್ಲಂಥ ಶಕ್ತಿಯಿತ್ತೇ  ಎಂಬ ಅಚ್ಚರಿ ಮೂಡುತ್ತದೆ. ಓದುತ್ತ ಹೋದಂತೆ ಭಾರತಕ್ಕೆ ಬಂದ ಹಸಿಮೆಣಸಿನಕಾಯಿಯ ಕಥೆ ಓದಿ ರೋಮಾಂಚನವಾಗುತ್ತದೆ.

ಲಿಸ್ಬನ್ ನಗರದ  ತೇಜೋದ ದಡದಲ್ಲಿ ಕುಳಿತ ಯುವಪ್ರೇಮಿಗಳ ಜೋಡಿ   ಬೆಲ್ಲಾ-ಗೇಬ್ರಿಯಲ್ ರಿಂದ ಶುರುವಾಗುವ ಈ ಕಾದಂಬರಿ ಅವರಿಬ್ಬರನ್ನು ಕಾರಣಾಂತರಗಳಿಂದ ಬೇಪ೯ಡುವಂತೆ ಮಾಡಿ ವಿಜಯನಗರದ ತುಂಗೆಯ ಮೂಲಕ ಹಾಯ್ದು ಗೋವಾದ ನಡುಗಡ್ಡೆಯಲ್ಲಿ ಮತ್ತೆ ಅಪರಿಚಿತರಂತೆ ಭೇಟಿ ಮಾಡಿಸುವ ಪರಿ ಅತ್ಯಂತ ಕೌತುಕಮಯವಾದದ್ದು.ಗೇಬ್ರಿಯಲ್ ಹೋಗಿ  ಅಮ್ಮದಕಣ್ಣ ಆದ ಡುಂ ಡುಮಕ್ ..ಕತೆ ರೋಚಕವೂ, ಮನಮಿಡಿಯುವಂಥದೂ ಆಗಿದೆ. ಧಮ೯ ಮಾಡಿದಷ್ಟು ಅನಾಹುತಗಳನ್ನು, ದುರಂತಗಳನ್ನುಬಹುಶಃ ಯಾವ ಯುದ್ಧಗಳಾಗಲೀ, ರಾಜಸತ್ತೆಗಳಾಗಲೀ ಅಥವಾ ಯಾವ ನೈಸಗಿ೯ಕ ವಿಕೋಪಗಳಾಗಲೀ ಮಾಡಿಲ್ಲವೆನ್ನುವುದು ಮನುಕುಲದ ಇತಿಹಾಸವನ್ನೋದಿದರೆ ಅಥ೯ವಾಗುತ್ತದೆ.’ಧಮಾ೯ಧಮದ ಸಂಘಷ೯ಣೆ,ರಕ್ಷಣೆಗಳಲ್ಲಿ ಕೊನೆಗೂ ಸೊರಗುವುದು ಸಮಾಜದ ಸೌಂದರ್ಯವೆಂಬುದು ಯಾರಿಗೂ ಸುಲಭಕ್ಕೆ ಅಥ೯ವಾಗುವುದಿಲ್ಲ.’..ಇಲ್ಲಿಯೂ ಅಷ್ಟೇ …ಧಮ೯ದ ಹೆಸರಿನಲ್ಲಿ ಎಷ್ಟೆಲ್ಲಾ ಅನ್ಯಾಯ..ಎಷ್ಟೆಲ್ಲಾ ಅನಾಹುತಗಳು!! ಆದರೆ ಅದೆಲ್ಲದರ ನಡುವೆಯೂ ಅರಳುವ ಮಾನವೀಯತೆ, ಕರುಣೆ, ಪ್ರೀತಿಗಳ ಮಿಂಚು ಹೊಳೆದಂಥ ಬೆಳಕು ಆಶಾದಾಯಕವಾಗುತ್ತದೆ.ಚಂಪಕ್ಕ, ಅಡವಿಸಾಮಿ, ಮಮ್ತಾಜ್ ರಂಥ ಪುಟ್ಟ ಪಾತ್ರಗಳು ಔದಾರ್ಯತೆ ಮೆರೆಯುತ್ತವೆ.ಇದರಲ್ಲಿನ ಯಾವ ಪಾತ್ರವೂ ಗೌಣ ಎಂದೆನ್ನಿಸುವುದಿಲ್ಲ.ಎಲ್ಲವೂ ಓದುಗರ ಮನಃಪಟಲದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡು ಪಟ್ಟಾಗಿ ಕುಳಿತುಬಿಡುವುದು ಈ ಕಾದಂಬರಿಯ ವೈಶಿಷ್ಟ್ಯ .

ಮಹಾಸತಿ, ಲೆಂಕ ಇತ್ಯಾದಿಗಳ ವಿವರಣೆಗಳು ನಡುಕ ಹುಟ್ಟಿಸುತ್ತವೆ. ಆಗಾಗ ಭೈರಪ್ಪನವರ ಆವರಣ ಮತ್ತು ಕೆ.ವಿ.ಅಯ್ಯರ್ ಅವರ ಶಾಂತಲೆಯನ್ನು ಈ ಕೃತಿ ನೆನಪಿಸುತ್ತದಾದರೂ ತೇಜೋ-ತುಂಗಭದ್ರೆಯ ಹರಿವು, ಆಳಗಳೇ ಬೇರೆ ಎನ್ನುವುದು ನಿವಿ೯ವಾದ.      

ಬೆಲ್ಲಾ ತಮ್ಮ ಪ್ರೇಮದ ಕಾಣಿಕೆಯಾಗಿ ತನ್ನೊಡನೆ ಕಳಿಸಿದ್ದ ಹೊಂಬಣ್ಣದ ಮೀನುಗಳ ಹುಡುಕಾಟವನ್ನು ತುಂಗಭದ್ರೆಯ ತಟದಲ್ಲಿ ಜೀವನವಿಡೀ ನಡೆಸಿದ ಗೇಬ್ರಿಯಲ್ ಗೆ ಅವು ಹಂಪೆಯಲ್ಲಿ ನದಿ ಬದಿಯ ಪುಟ್ಟ ಹೊಂಡವೊಂದರಲ್ಲಿ ದೊರೆತು ಅವುಗಳನ್ನು ಅವನು ನದಿಯ ಮೂಲಪ್ರವಾಹಕ್ಕೆ ಅತಿಕಾಳಜಿಯಿಂದ ಸೇರಿಸುವುದು ಲೇಖಕರ ಸೂಕ್ಷ್ಮ ಸಂವೇದನೆಗೆ ಹಿಡಿದ ಕನ್ನಡಿಯಾಗಿದೆ.

ಇಲ್ಲಿ ನೀವು ಹೈಸ್ಕೂಲಿನ ಇತಿಹಾಸದಲ್ಲಿ ಓದಿದ್ದ ವಾಸ್ಕೋಡಿಗಾಮಾ, ಅಲ್ಬುಕಕ್೯, ಪೋಚು೯ಗೀಸರು….ಎಲ್ಲರೂ ಜೀವತಳೆದು ಕಣ್ಮುಂದೆ ಬರುತ್ತಾರೆ. ಮಾಪಳ-ತೆಂಬಕ್ಕ, ಕೇಶವ-ಹಂಪಮ್ಮರು ತೆಂಬಕಪುರದ ತೆಂಬಕಸಾಮಿಯೊಡನೆ ಸ್ಥಿರವಾಗಿ ಉಳಿದುಬಿಡುತ್ತಾರೆ ಎದೆಯ ಗೂಡಲ್ಲಿ.ವೇಶ್ಯೆಯಾದ ಗುಣಸುಂದರಿಯೊಡನೆ ಮಹಾರಾಜ ಕೃಷ್ಣದೇವರಾಯ ‘ಆಮುಕ್ತ ಮಾಲ್ಯದಾ’ಕೃತಿಯ ಕತೃವಾಗಿ ಚಚಿ೯ಸುವ ಭಾಗ ಬಹಳ ವಿಶಿಷ್ಟವಾಗಿದೆ.’ಕವಿಯಾದವನು ರೂಢಿಯನ್ನು ಮುರಿಯಬೇಕು.ರೂಢಿಯೊಂದಿಗೆ ಕೊಚ್ಚಿಕೊಂಡು ಹೋಗಬಾರದು.ರೂಢಿಗೆ ಹೊಂದಿಕೊಂಡು ಹೋಗಬೇಕಾದ್ದು ರಾಜಧಮ೯ವೇ ಹೊರತು ಕವಿಧಮ೯ವಲ್ಲ’..ಎಂದು ಅವಳಾಡುವ ಮಾತು ಸಾವ೯ಕಾಲಿಕ ಸತ್ಯ.’ಸಾಹಿತ್ಯವೆನ್ನವುದು ಚಕ್ರಾಧಿಪತಿಯನ್ನೂ ವಿನೀತಗೊಳಿಸುವ ಮೋಡಿಗೆ ಪುಳಕಗೊಂಡಳು’…ಎಂದು ಬರೆವ ವಸುಧೇಂದ್ರರು ಸಾಹಿತ್ಯದ ವಿರಾಟ್ ಸ್ವರೂಪವನ್ನು ಬಯಲು ಮಾಡಿ ಓದುಗರನ್ನೂ ಪುಳಕಗೊಳಿಸುತ್ತಾರೆ.’ಕಾಯುವಿಕೆಗಿಂತ ಅನ್ಯ ತಪವು ಇಲ್ಲ’..ಎಂಬ ದಾಸವಾಣಿಯ ಉಲ್ಲೇಖದ ಮೂಲಕ ಗುಣಸುಂದರಿಗಿರುವ ಸಮಕಾಲೀನ ಸಾಹಿತ್ಯ ಜ್ಞಾನವನ್ನೂ ಜೊತೆಗೇ ಜ್ಞಾನವಾಗಲೀ, ಕಲೆ ಸಾಹಿತ್ಯಗಳಾಗಲೀ ಯಾವೊಂದು ವಗ೯ದ ಸ್ವತ್ತೂ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತಾರೆ.

ಪುರಂದರದಾಸರು -ಅಮ್ಮದಕಣ್ಣ ಹಾಗೂ ಹಂಪಮ್ಮನ ಪ್ರಸಂಗ ಅಪರೂಪದ್ದು.’ತುರುಕನವನಾದರೆ ಏನಾಯ್ತು?ತಿನ್ನೋಕೆ ಅವಲಕ್ಕಿ -ಬೆಲ್ಲಾ ಕೊಟ್ಟರೆ ಬೇಡ ಅಂತಾನೇನು?’ಎಂದು ದಾಸರು ಪ್ರಶ್ನಿಸುವ ಪರಿ ಅನನ್ಯವಾಗಿದೆ.ಕಾದಂಬರಿಯಲ್ಲಿ ವಿಜಯನಗರ, ಕೃಷ್ಣದೇವರಾಯ ಬಂದಮೇಲೆ ಪುರಂದರದಾಸರು ಬರದಿದ್ದರೆ ಹೇಗೆ ನಡೆದೀತು?!

ಈ  ಇಡಿಯ ಪುಸ್ತಕವನ್ನು ಕುಳಿತೇ ಓದಿದ್ದು ಇನ್ನೊಂದು ವಿಶೇಷ.ಯಾಕೆಂದರೆ ಓದುವುದರಲ್ಲೂ ಹಲವು ಪರಿ.ಅಡ್ಡಾಗಿ,ಮಲಗಿ, ಹೊರಳಾಡಿ, ಕೆಲವೊಮ್ಮೆ ಓದುತ್ತ ಓದುತ್ತ ಕೈಯಿಂದ ಜಾರಿಸಿ, ಮತ್ತೆ ಕೆಲವೊಮ್ಮೆ ಅದನ್ನು ದಿಂಬಿನಡಿಯೋ, ಎದೆಯಮೇಲೋ ಇಟ್ಟುಕೊಂಡು ನಿದ್ದೆಹೊಡೆದು …ಹೀಗೆ.ಆದರೆ ಇದನ್ನೋದುವಾಗ ಹಾಗೆಲ್ಲ ಮಾಡಲಾಗದು.ಅದರ ದಪ್ಪನೆಯ ಗಾತ್ರವೂ ಅದಕ್ಕೊಂದು ಕಾರಣ.ಅಂಥ ದಪ್ಪನಾದ ಪುಸ್ತಕವನ್ನು ಮಲಗಿ, ಹೊರಳಾಡಿ ಸುಲಭವಾಗಿ ಹಿಡಿಯಲಾಗದು.ಆದರೆ ನಿಜವಾದ ಕಾರಣ ಅದಲ್ಲ; ಇದರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ರೋಚಕ ಕಥನಾವಳಿ ನಿಮ್ಮನ್ನು ಅಡ್ಧಾಗಲು ಬಿಡುವುದೇ ಇಲ್ಲ.

 “ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ .ಕತ್ತಿಯ ಗಾಯ ಮಾಡಲಿಕ್ಕಾಗೋದಿಲ್ಲ.ಅದಕೇ ನದಿಗೆ ನೆನಪಿನ ಹಂಗಿಲ್ಲ”…..ಅದಕ್ಕೆಂದೇ ಚಿರನೂತನೆಯಾಗಿ ತನ್ನೊಡಲಲ್ಲಿರುವ ಎಲ್ಲ ಪಾಪ ಕಲ್ಮಶಗಳನ್ನು ತೊಳೆದುಕೊಂಡು ಹರಿಯುತ್ತಲೇ ಇರುತ್ತಾಳೆ ಪರಮಪಾವನೆಯಾಗಿ.ಆದರೆ ನದಿಯ ದಡದಲ್ಲಿರುವ ಮಾನವ ಕುಲಕ್ಕೆ ಆ ಭಾಗ್ಯವಿಲ್ಲ.ಕೆತ್ತಿದ ಚಿತ್ರಗಳು,ಕತ್ತಿಯ ಗಾಯಗಳು, ನೆನಪಿನ ಹಂಗುಗಳು ಸದಾ ಕಾಡುತ್ತಲೇ ಇರುತ್ತವೆ….ತೇಜೋ-ತುಂಗಭದ್ರಾ  ನನ್ನನ್ನು ಕಾಡಿದಂತೆ  ಇಡಿ ಇಡಿಯಾಗಿ…ಬಿಡಿಬಿಡಿಯಾಗಿ..

ಜೀವನವೆನ್ನವುದು ಭಗವಂತ ಸೃಷ್ಟಿಸಿದ ಕಲಾಕೃತಿ .ಅದು ಇರುವೆಯೇ ಆಗಲಿ, ಹುಳವೇ ಆಗಲಿ, ಹಾವೇ ಆಗಲಿ,ಪಶುವೇ ಆಗಲಿ ಕೊನೆಗೆ ಮನುಷ್ಯನೇ ಆಗಲಿ…..ಎಲ್ಲಾ ಜೀವವೂ ಅಪರೂಪದ ಕಲಾಕೃತಿಗಳೇ ಆಗಿರುತ್ತವೆ.ಅಂತಹ ಕಲಾಕೃತಿಗಳನ್ನು ಮುಕ್ಕುಗೊಳಿಸುವ ಹಕ್ಕು ಯಾವ ಮನುಷ್ಯನಿಗೆ ಇರಲು ಸಾಧ್ಯ? ಅದು ಸ್ಪಷ್ಟವಾಗಿ ಅಕ್ಷಮ್ಯ ಅಪರಾಧ”……ಈ ಕಾದಂಬರಿಯಿಂದ ನಾವೆಲ್ಲರೂ ಅರಿಯಬೇಕಾದ, ಸಕಲ ಜೀವಗಳನ್ನೂ ಪರಸ್ಪರ ಗೌರವಿಸಿ ಸಹಬಾಳ್ವೆ ಮಾಡಬೇಕಾದ ಮಾತಿದು.

ವಸುಧೇಂದ್ರ ಅವರೇ, ನೀವೇ ಹೇಳುವಂತೆ “ಚೆಲುವಿನ ಪ್ರತಿಕೃತಿಗಳಿಗೆ ಆದಿಅಂತ್ಯಗಳಿಲ್ಲ.ಅದಕ್ಕೇ ಈಗಲೂ ಕಲಾವಿದರು ಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ.ಶಿಲ್ಪಗಳನ್ನು ಕಟೆಯುತ್ತಲೇ ಇದ್ದಾರೆ.”  ಅಂತಲೇ ನೀವೂ ಬರೆಯುತ್ತಲೇ ಇರಿ.ಧನ್ಯವಾದಗಳು …ಇಂಥದೊಂದು ಕಾದಂಬರಿಯನ್ನು  ಕನ್ನಡಿಗರಿಗೆ ನೀಡಿದ್ದಕ್ಕಾಗಿ…ಧನ್ಯವಾದ ಪ್ರಮೋದ್, ಈ ಪುಸ್ತಕವನ್ನು ನನಗೆ ದೊರಕಿಸಿದ್ದಕ್ಕಾಗಿ..

ಶ್ರೀಮತಿ ಗೌರಿಪ್ರಸನ್ನ

14 thoughts on “ತೇಜೋ–ತುಂಗಭದ್ರಾ

 1. ನಾನು ಇಲ್ಲಿಯ ವರೆಗೆ ನನ್ನ ಕಮೆಂಟ್ಸ್ ಬರೆದಿದ್ದಿಲ್ಲ, ಯಾಕಂದರೆ ಪುಸ್ತಕವನ್ನು ಓದಿರಲಿಲ್ಲ ಅಂತ. ಗೌರಿಯವರ ವಿಮರ್ಶೆಯನ್ನು ಮೂರು ನಾಲ್ಕು ಸಲ ಓದಿದ್ದೇನೆ. ಒಂದೆರಡು ಸಲ ಪುಸ್ತಕವನ್ನು ಓದುವ ಮೊದಲು, ಎರಡು ಸಲ ಆಮೇಲೆ ಓದಿದ ನಂತರ. ಈ ಸಂದರ್ಭದಲ್ಲಿ ಬಹಳ ವರ್ಷಗಳ ಹಿಂದೆ ನೋಡಿದ ಒಂದು ತಮಿಳಿನ ವ್ಯಂಗಚಿತ್ರ ನೆನಪಾಗುತ್ತದೆ. ಹೋಟೆಲಿನಲ್ಲಿ ಊಟಮಾದಿ ಹೊರಗೆ ಬಂದ ಗಿರಾಕಿ ಬಾಗಿಲ ಬಳಿಯಲ್ಲಿ ನಿಂತು ಮತ್ತೆ ಅದೇ ಡಿಸ್ಪ್ಲೇ ಬೋರ್ಡ್ ನ್ನೇ ಮತ್ತೆ ನೋಡುತ್ತಿದ್ದ ನಿಂತಿದ್ದನಂತೆ.. ಯಾಕೆ ಎಂದು ಪ್ರಶ್ನಿಸಿದ ಹೋಟೆಲ್ ಮಾಲಕನಿಕೆ ಕೊಟ್ಟ ಉತ್ತರ: ”ಒಳಗೆ ಹೋಗಿ ತಿನ್ನುವ ಮೊದಲು ಕಲ್ಪಿಸಿಕೊಂಡಿದ್ದ ಸ್ವಾದ ಈ ಯಾದಿಯ ತಿಂಡಿಯಲ್ಲಿ ಇನ್ನೂ ಉಳಿದಿದೆಯೇ ಎಂದು ನೋಡುತ್ತಿದ್ದೇನೆ” ಅಂತ! ಪುಸ್ತಕವನ್ನು ಈಗ ಓದಿದ ನಂತರದ ನನ್ನ ಉತ್ತರವು: ಸ್ವಾದ ಇನ್ನೂ ಇದೆ!
  ನನಗೂ ಸಹ ಪ್ರಸಿದ್ಧ ಬರಹಗಾರ ವಸುಧೇಂದ್ರರ ಪುಸ್ತಕ ಓದುವ ಕುತೂಹಲ ಕೆರಳಿಸಿದ್ದು ಅದರ ಶೀರ್ಷಿಕೆಯೇ. ಇನ್ನೂ ಕೆಲ ಕಾರಣಗಳೂ ಇವೆ. ನಾನು ಕಳೆದ ಎಷ್ಟೋ ವರ್ಷಗಳ ಅಂತರದಲ್ಲಿ ಭೇಟಿಕೊಟ್ಟ ಜಾಗಗಳಾದ ಲಿಸ್ಬನ್, ಗೋವಾ- (6 ಸಲ) ಮತ್ತು ಹಂಪಿ-ತುಂಗಭದ್ರಾ ಪ್ರದೇಶಗಳು ಕಾದಂಬರಿಯ ವಸ್ತುವೂ ರಂಗಭೂಮಿಯೂ ( ಯುದ್ಧಭೂಮಿ ಸಹ) ಆಗಿರುವದು. ಕಥೆಯನ್ನು ಓದುತ್ತಿದ್ದಂತೆ ಈಗ ಹಾಳುಬಿದ್ದಿದೆಯಾದರೂ ’ಹಾಳು” ಹಂಪೆಯ ಆಗಿನ ವೈಭವದ ಕಾಲವನ್ನೂ ವಿಜಯನಗರದ ಅರಸರ ಮತ್ತು ಸಾಮಾನ್ಯ ಪ್ರಜೆಗಳ ಜೀವನವನ್ನೂ ಹೋಲಿಸಿ ನೋಡಿದೆ. ಗೋವೆಗೆ ಹೋದಾಗ ನೋಡಿದ ಮಾಂಡವಿ ಮತ್ತು ಝುಆರಿ ನದಿಗಳನ್ನೂ ಅವುಗಳ ಸೇತುವೆಗಳನ್ನೂ ಈಗಿನ ತೇಜೋ (ನಾನು ಟೂರಿಸ್ಟ್ ಆಗಿ ಹೋದಾಗ ಟೇಗಸ್-Tagus)) ನದಿಯ ಮೇಲಿನ ಭವ್ಯ ಸೇತುವೆಯನ್ನು ದಾಟುವಾಗ ನೆನಸಿಕೊಂಡೆ. 1498ರಲ್ಲಿ ವಾಸ್ಕೋಡಾ ಗಾಮಾ ಭಾರತ ಪ್ರವಾಸಕ್ಕೆ ಬಂದದ್ದು ರಾಜಧಾನಿಯಾದ ಲಿಸ್ಬನ್ ಶಹರದಿಂದ. ಆತನ ಹಡಗುಗಳು ಹೊರಟ ಜಾಗವಾದ ತೇಜೋ ನದಿಯ ದಂಡೆಯ ಮೇಲಿನ ಬೆಲೆಂ ಗೋಪುರದ ಹತ್ತಿರ ನಿಂತು ನಾನು ಫೋಟೊ-ವಿಡಿಯೋ ಮಾಡುವಾಗ ಆತ ಹೋಗಿ ಮುಟ್ಟಿದ ಗೋವಾದ ವಾಸ್ಕೋ ಬಂದರವನ್ನು ಹಳವು ಸಲ ನೋಡಿದ್ದು ನೆನಪಾಯಿತು. ಕಾದಂಬರಿಯಲ್ಲಿ ಆಗಿನ ಸಮುದ್ರಪಯಾಣದ ವಿವರಗಳು, ಅದರ ಮುಖ್ಯ ಪಾತ್ರಗಳೆನ್ನಬಹುದಾದ ಗೇಬ್ರಿಯಲ್ – ಬೆಲ್ಲಾರ ಪ್ರಣಯದ ಹಿನ್ನೆಲೆಯಲ್ಲಿ ಒಂದುಕಾಲದಲ್ಲಿ ಬಡದೇಶವಾಗಿದ್ದ ಪೋರ್ಚುಗಲ್ಲಿಗೆ ವಲಸೆ ಬಂದ ಯಹೂದಿಗಳು ಮತ್ತು ’ದೇಸ” ಕ್ರಿಸ್ತ ಮತೀಯರಲ್ಲಿಯ ಸೌಹಾರ್ದತೆ ಬಡ ದೇಶಕ್ಕೆ ಹಣ ಬಂದ ಕೂಡಲೆ ದ್ವೇಷಕ್ಕೆ ತಿರುಗಿ ಉಂಟಾದ ನರಮೇಧವನ್ನು ಓದಿ ಮೈ ಝುಮ್ಮೆಂದಿತು. ವಸುಧೇಂದ್ರ ಅವರು ಸತತವಾಗಿ ಮೂರು ವರ್ಷಗಳ ಕಾಲ ಆಳವಾಗೆ ಮಾಡಿದ ಇತಿಹಾಸದ ಅಭ್ಯಾಸ ಬರವಣಿಗೆಯಲ್ಲಿ ಕಾಣುತ್ತದೆ. ಈಗಾಗಲೇ ಗೌರಿ ಪ್ರಸನ್ನ ಅವರು ಮೇಲೆ ಬರೆದಂತೆ 450 ಪುಟಗಳ ದೊಡ್ಡ ಪುಸ್ತಕ ಸುಲಭವಾಗಿ ಓದಿಸಿಕೊಂದು ಹೋಗುತ್ತದೆ. ಅದರಲ್ಲಿಯ ಕೆಲ ಮುಖ್ಯವಾದ ವಾಕ್ಯಗಳನ್ನು ಮೇಲಿನ ಉತ್ತಮ ವಿಮರ್ಶೆಯಲ್ಲಿ ಉದ್ಧರಿಸಲಾಗಿದೆ. ಅವರ ಶೈಲಿ ವಿಮರ್ಶೆ ಹೇಗೆ ಬರೆಯಬಹುದು ಎಂಬುದಕ್ಕೆ ಮಾದರಿಯಾಗಿದೆ. ಕಾದಂಬರಿಕಾರರು ಈಗಾಗಲೇ ಒಂದೆರಡು ಸಂದರ್ಶನಗಳಲ್ಲಿ ಪುಸ್ತಕದಲ್ಲಿಯ ಅನೇಕ ವಿವರಗಳು ಸತ್ಯಾಂಶದಿಂದ ಕೂಡಿದವು ಎಂದು ಧೃಡ ಪಡಿಸಿದ್ದಾರೆ. ಆ ಐತಿಹಾಸಿಕ ಘಟನೆಗಳ ವಿವರಗಳು ಓದುಗನ ಮನವನ್ನು ಕಲುಕಿ ಅನೇಕ ಸಮಯ ಕಾಡುತ್ತಲೇ ಇರುತ್ತಿವೆ, ಇನ್ನೂ. ಇದು ನನ್ನ ಅನುಭವ ಸಹ. ಈಗಾಗಲೇ ನಾಲ್ಕನೆಯ ಮುದ್ರಣದಲ್ಲಿದೆ ಎಂದು ಇತ್ತೀಚೆಗೆ ಓದಿದೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯ ಸ್ಥಾನವೇನೆಂದು ಕಾಲ ನಿರ್ಧರಿಸುತ್ತದೆಯಲ್ಲದೆ ವಿಮರ್ಶಕರಲ್ಲ. ಪುಸ್ತಕದ ಜಾಕೆಟ್ ಹೊದಿಕೆಯಲ್ಲೆ ಎರಡು ಲವಂಗಗಳು ಒಳಗೆ spice war ಬಗ್ಗೆ ವಿಸ್ತೃತ ವಿವರಗಳು ತುಂಬಿದ್ದರ ಸೂಚನೆ ಕೊಟ್ಟಿದ್ದು ನಿಜವಾದರೂ ಎಲ್ಲರೂ ಓದಲೇಬೇಕಾದ ಪುಸ್ತಕ ಅಂತ ನಾನು ಅಂದರೆ ಅದು ಬರೀ ಮಸಾಲೆ ಹಚ್ಚಿ ಮಾತಾಡುತ್ತಿದ್ದೇನೆ ಅಂತ ತಿಳಿಯುವ ಕಾರಣವಿಲ್ಲ!
  ಶ್ರೀವತ್ಸ ದೇಸಾಯಿ

  Like

 2. ಧನ್ಯವಾದಗಳು ಸರೋಜಿನಿ ಅವರೇ..ನಿಮ್ಮ ಅನಿಸಿಕೆ ಸತ್ಯ..ಅದೇ ಮಾನವ ಸಹಜ ಸಂಕುಚಿತತೆ-ಸ್ವಾಥ೯ಗಳು, ಧಮ೯-ವಣ೯-ಜನಾಂಗೀಯ ದ್ವೇಷಗಳು ನಮ್ಮನ್ನಳುತ್ತಿದ್ದರೂ ಎಲ್ಲೋ ಪರರ ಕಷ್ಟಕ್ಕೆ ತುಡಿವ ಮನಗಳು, ಸ್ಪಂದಿಸುವ ಹೃದಯಗಳೂ ಇವೆಯೆನ್ನುವುದೂ ಸುಳ್ಳಲ್ಲ.

  Like

 3. ನಮಸ್ಕಾರ ಗೌರಿ ಪ್ರಸನ್ನ ಅವರೇ. “ತೇಜೋ-ತುಂಗಭದ್ರಾ” ನಾನು ಇತ್ತೀಚಿಗೆ ಓದಿದ ಉತ್ತಮವಾದ ಕನ್ನಡ ಪುಸ್ತಕಗಳಲ್ಲಿ ಒಂದು. ಕಳೆದ ವರ್ಷ ಇಲ್ಲಿ ಅಮೆರಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ವಸುಧೇಂದ್ರ ಅವರನ್ನು ಮುಖತಃ ಭೇಟಿ ಮಾಡಿದ್ದೆ. ಅವರ ಭಾಷಣದ ವೈಖರಿಯೂ ಬಲು ಸೊಗಸು. ಎಲ್ಲ ವಿಚಾರಗಳ ಬಗ್ಗೆ ಅಷ್ಟೊಂದು ನಿಖರವಾಗಿ, ನಿರರ್ಗಳವಾಗಿ ಮಾತನಾಡುವ ವಸುಧೇಂದ್ರ ಅವರ “ತೇಜೋ-ತುಂಗಭದ್ರ” ಪುಸ್ತಕವನ್ನು ಓದಲು ನಾನು ಬಹಳ ಕಾತುರಳಾಗಿದ್ದೆ. ಕೈಗೆ ಸಿಕ್ಕೊಡನೆ ಬಿಡದೆ ಓದಿ ಮುಗಿಸಿದ ನಂತರ, ನನ್ನ ಬಾಯಲ್ಲಿ ಬಂದ ಮೊದಲ ಉದ್ಘಾರ “ಅಬ್ಬಾ ಚರಿತ್ರೆಯನ್ನು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ, ಇಂತಹ ಅದ್ಭುತ ಪತ್ರಗಳನ್ನು ಸೃಷ್ಟಿಸಿ, ಆ ಕಾಲದ ಆಗು-ಹೋಗುಗಳನ್ನು ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೋ ಎನ್ನುವಂತೆ ಬರೆದ ಈ ಚಾರಿತ್ರಿಕ ಕಾದಂಬರಿ ನಿಜಕ್ಕೂ ಸಮಕಾಲೀನ ಸಾಹಿತ್ಯದಲ್ಲಿ ಒಂದು ಉತ್ತಮವಾದ ಪುಸ್ತಕ”. ಆದರೆ, ಅಂದಿನ ಸಮಾಜದಲ್ಲಿ ಮಹಿಳೆಯರು ಪಡುತ್ತಿದ್ದ ಬವಣೆಯನ್ನು ಓದಿದಾಗ “ಸಧ್ಯ ನಾನು ಆ ಸಮಯದಲ್ಲಿ ಹುಟ್ಟಿರಲಿಲ್ಲ” ಎಂದು ಸಮಾಧಾನದ ನಿಟ್ಟಿಸುರು ಬಿಟ್ಟೆ. ನಿಮ್ಮ ವಿಮರ್ಶೆ ಪುಸ್ತಕಕ್ಕೆ ಒಳ್ಳೆಯ ನ್ಯಾಯ ಒದಗಿಸಿದೆ. ಅಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ಅಷ್ಟೊಂದು ಕೂಲಂಕುಷವಾಗಿ ವಿವರಿಸಿ, ಆ ಚಿತ್ರವನ್ನು ಬಹಳ ಚೆನ್ನಾಗಿ ಬಿಡಿಸಿದ್ದಾರೆ ವಸುಧೇಂದ್ರ ಅವರು. ಈಗ ನಾಲ್ಕು ವರ್ಷಗಳ ಹಿಂದೆ ಹಂಪಿಗೆ ಭೇಟಿಯಿತ್ತಾಗ ಇನ್ನು ಆ ಪುಸ್ತಕ ಪ್ರಕಟವಾಗಿರಲಿಲ್ಲ. ಆದರೂ ವಿಜಯನಗರ ಸಾಮ್ರಾಜ್ಯದ ಅಂದಿನ ಚಿತ್ರ ನಮ್ಮ ಮುಂದಿಡುವಲ್ಲಿ ಲೇಖಕ ಯಶಸ್ವಿಯಾಗಿದ್ದಾರೆ. ಜೊತೆಗೆ ಪೋರ್ಚುಗಲ್ಲಿನ ಜೊತೆಗೆ ನಡೆಯುತ್ತಿದ್ದ ಸಾಂಬಾರ ಪದಾರ್ಥಗಳ ವ್ಯಾಪಾರದ ಮಹತ್ವ ನಿಜಕ್ಕೂ ಅಚ್ಚರಿಯ ವಿಷಯ. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯ ಇನ್ನು ಮುಂದುವರೆದಿದೆ. ಮಾನವ ತನ್ನ ಬುದ್ಧಿಮತ್ತೆಯಿಂದ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಿದ್ದರೂ, ತನ್ನ ಮಾನವಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಎಡವಿದ್ದಾನೆ. ಒಟ್ಟಿನಲ್ಲಿ ಓದಿದ ನಂತರವೂ ಸ್ವಲ್ಪ ಕಾಲ ನಮ್ಮ ಮನವನ್ನು ಕಾಡುವ ಪುಸ್ತಕ.
  ಈ ಪುಸ್ತಕಕ್ಕೆ ಉತ್ತಮವಾದ ವಿಮರ್ಶೆ ಬರೆದು ಅದರ ವರ್ಚಸ್ಸನ್ನು ಹೆಚ್ಚಿಸಿದ್ದಿರಿ. ಧನ್ಯವಾದಗಳು.
  ಉಮಾ ವೆಂಕಟೇಶ್

  Liked by 1 person

  • ಧನ್ಯವಾದಗಳು ಉಮಾ ಅವರೇ. ನೀವಂದಂತೆ ಓದಿಯಾದ ಮೇಲೂ ಬಹಳ ದಿನಗಳವರೆಗೆ ನಮ್ಮನ್ನು ಕಾಡುವ ಕಾದಂಬರಿಯಿದು.

   Like

 4. Vinuthe Sharma says

  ಕಾದಂಬರಿ ಇನ್ನೂ ಓದಿಲ್ಲ. ಆದ್ರೂ ಗೌರಿ, ನಿಮ್ಮ ಲೇಖನ ತುಂಬಾ ಇಷ್ಟವಾಯ್ತು.

  Liked by 1 person

 5. ಗೌರಿ ಪ್ರಸನ್ನ ಅವರೇ
  ತೇಜೋ ತುಂಗಭಧ್ರ ಕಾದಂಬರಿಯ ಬಗೆಗಿನ ನಿಮ್ಮ ವಿಮರ್ಶೆ ನಮ್ಮ ಕುತೂಹಲವನ್ನು ಹೆಚ್ಚಿಸಿದೆ.
  ನೀವು ಕಥೆಯ ಎಳೆಯನ್ನು ಸ್ಥೂಲವಾಗಿ ಪರಿಚಯಿಸಿದ್ದೀರಿ ಮತ್ತು ಕೆಲವು ಹಿನ್ನೆಲೆ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೀರಿ.

  ಪುಸ್ತಕ ವಿಮರ್ಶೆಯನ್ನು ಓದಿ ಸ್ಪಂದಿಸಬೇಕಾದರೆ ಮೂಲ ಪುಸ್ತಕವನ್ನು ಓದಿ ತಿಳಿದಿರಬೇಕು
  ನನಗೆ ಆ ಸುಯೋಗ ಇನ್ನು ಬಂದಿಲ್ಲ. ಈ ಲಾಕ್ ಡೌನ್ ಪರಿಸ್ಥಿಯಲ್ಲಿ ಪುಸ್ತಕವನ್ನು ಪಡೆದುಕೊಳ್ಳುವುದು ಸ್ವಲ್ಪ ಕಷ್ಟವೇ
  ಹೀಗಾಗಿ ನಾನು ಅಂತರಜಾಲದಲ್ಲಿ ಈ ಪುಸ್ತಕದ ಬಗ್ಗೆ ಕೆಲವು ವಿಚಾರಗಳನ್ನು ಕೆದಕಿದ್ದೇನೆ. ಈ ಕಾದಂಬರಿಯ ಬಗ್ಗೆ
  Good read ಎಂಬ ಜಾಲತಾಣದಲ್ಲಿ ಹಿರಿಯ ಸಾಹಿತಿ ಸಿ ಏನ್ ರಾಮಚಂದ್ರನ್ ಸೇರಿದಂತೆ ಅನೇಕ ಓದುಗರ ಕಿರು ವಿಮರ್ಶೆಗಳಿವೆ ಮತ್ತು ಉತ್ತಮ ಅಭಿಪ್ರಾಯಗಳಿವೆ.

  ಈ ಪುಸ್ತಕದ ಹಿನ್ನೆಲೆಯನ್ನು ಇನ್ನು ಹೆಚ್ಚಿನ ಮಟ್ಟಿಗೆ ತಿಳಿಯಲು ವಸುಧೇಂದ್ರ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಕೊಟ್ಟ
  ಒಂದು ಸಂದರ್ಶನವನ್ನು ಯು ಟ್ಯೂಬಿನಲ್ಲಿ ಇದೀಗಷ್ಟೇ ನೋಡಿದೆ. ಈ ಸಂದರ್ಶನದಲ್ಲಿ ವಸುಧೇಂದ್ರ ಅವರ ವ್ಯಕ್ತಿಪರಿಚಯ ದೊಂದಿಗೆ ತೇಜೋ ತುಂಗಭದ್ರೆಯ ಬಗ್ಗೆ ಅವರದೇ ಅಭಿಪ್ರಾಯಗಳು ದೊರೆಯುತ್ತವೆ.
  ವಸುಧೇಂದ್ರ ಅವರ ಇತರ ಕಥೆ ಪ್ರಬಂಧಗಳನ್ನು ನಾನು ಓದಿದ್ದೇನೆ. ಅಲ್ಲಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯಿಂದ ಬಂದವರು ಎಂದು ತಿಳಿಯುತ್ತದೆ. ಹಂಪಿಯ ಇತಿಹಾಸ ಅವರಿಗೆ ಪ್ರಸ್ತುತವಾಗಿರುವುದು ಆಶ್ಚರ್ಯವೇನಲ್ಲ.
  ಅವರು ಹಂಪಿಯ ಇತಿಹಾಸವನ್ನು ಅಧ್ಯಯನ ಮಾಡುತ್ತಿರುವಾಗ ಪೋರ್ಚಿಗೀಸ್ ಇತಿಹಾಸ ಕೂಡ ಅವರನ್ನು ಸೆಳೆದಿದ್ದು
  ಅದು ಕಥೆಯ ಹಿನ್ನೆಲೆಯಾಗಿದೆ. ಆ ಕಾಲಘಟ್ಟದಲ್ಲಿ ನಡೆದ ಜನಸಾಮಾನ್ಯರ ಬದುಕನ್ನು ಚಿತ್ರಿಸುವ ಉದ್ದೇಶ ಅವರದಾಗಿದೆ ಎಂದು ಸಂದರ್ಶನದಲ್ಲಿ ವಸುಧೇಂದ್ರ ತಿಳಿಸಿದ್ದಾರೆ. ಈ ಕಾದಂಬರಿ ಬರೆಯುವುದಕ್ಕೆ ಮುನ್ನ ಅವರು ಸಾಕಷ್ಟು ಐತಿಹಾಸಿಕ ಮಾಹಿತಿಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿರುವುದಾಗಿ ತಿಳಿಸಿದ್ದಾರೆ.

  ಸಂದರ್ಶನದ ಕೊನೆಯಲ್ಲಿ ಸಂದರ್ಶಕರು ಅವರ ಎಡ ಬಲ ಪಂಥಗಳ ನಿಲುವನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಅರ್ಥಗರ್ಭಿತ ಉತ್ತರ ಹೀಗಿದೆ;
  “I am neither Left, nor Right, not even Straight”

  Liked by 3 people

  • ಧನ್ಯವಾದಗಳು ಪ್ರಸಾದ ಅವರೇ. ವಸುಧೇಂದ್ರ ಅವರು ನೀಡಿದ ಉತ್ತರ ಮಾಮಿ೯ಕವಾಗಿದೆ. ಈ ಎಡಬಲಗಳ ‘ಈಸ್ಟ್” ಗಳಿಂದ ಸಾಹಿತ್ಯ ಕೊಳೆತುಹೋಗುತ್ತಿದೆ. ಇಂಥ ದಿಟ್ಟ ಲೇಖಕರ ಅವಶ್ಯಕತೆ ಬಹಳವಿದೆಯೆನಿಸುತ್ತದೆ ನನಗೆ. ನಾನೂ good read ಹಾಗೂ ಇಂಟರ್ ವ್ಯೂ ಗಳನ್ನು ನೋಡುವೆ. ನೀವು ಅವುಗಳನ್ನು ಪ್ರಸ್ತಾಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು .

   Like

 6. ತುಂಬ ಸುಂದರ ವಿಮರ್ಶೆ ವಸುಧೇಂದ್ರರ”ತೇಜೋ- ತುಂಗಭದ್ರ” ಕೃತಿಯದು ಗೌರಿಯವರೇ. ನಾ ಎರಡು ಬಾರಿ ಓದಿದೆ ಅದನ್ನು.ಆಯ್ದ ಭಾಗಗಳ ಓದು ಆಗಾಗ ನಡದಿರ್ತದೆ.ನೀವು ಹೇಳುವಂತೆ ಹೊರಳಾಡಿ, ಅಡ್ಡಾಗಿ ಓದಲಾಗದು ಅದನ್ನು. ಮಣಭಾರದ ಭಾವನೆ, ವಿಚಾರಗಳನ್ನುಎದೆಯಲ್ಲಿ ತುಂಬಿಸಿ ಒಂದೇ ನಿಟ್ಟಿನಲ್ಲಿ ಓದ ಹಚ್ಚುವ ಕೃತಿ ಅದು.ಮೌನಿ ಬೆಟ್ಟ ಗಿಡಗಳಂತೆ ಅರಿಯದೇ ಮೌನದ ಹೊದಿಕೆ ಹೊದಿಸಿ ಬಿಡ್ತದೆ.ಈಗಲೂ ಅದೇ ಧರ್ಮಾಂಧತೆ, ಮತಾಂಧತೆ, ರಾಜಕೀಯ ಕಿತ್ತಾಟ, ಸಾಮಾಜಿಕ ಹೋರಾಟ ಒಂದಿಂಚೂ ಕಡಿಮೆಯಾಗದೇ, ಅದೇ ಒಂದು ಸಣ್ಣ ಕಿಡಿ ಸಾಮ್ರಾಜ್ಯ ವನ್ನೇ ಸುಡುವಂತೆ ಸಾಗಿ ಬಂದ ಪರಿಸ್ಥಿತಿ ನೋಡಿದ್ರೆ ಅದು ಅನವರತ ಏನೋ ಅನಿಸ್ತಿದೆ.ಒಂದು ಕ್ಷಣ ಬದಲಾವಣೆ ಜೀವನದ ನಿಯಮ ಅನ್ನೋದು ತಪ್ಪೇನೋ ಎಂಬನಿಸಿಕೆ ಮೂಡ್ತದೆ.ಆ ಸಾಮ್ರಾಟನನ್ನೇ ವಿನೀತನನ್ನಾಗಿಸುವ ಮೋಡಿ ಸಾಹಿತ್ಯ ಕ್ಕಿದೆ ಎಂಬುದು ಸುಳ್ಳಲ್ಲ. ಇಂಥ ನೂರಾರು ವಿಷಯದಲ್ಲಿ ಮುಳುಗಿ ಹೋಗಿ ” ಶಿಶುವಿನಂತೆ ಕಣ್ಣು ಕಿರಿದುಗೊಳಿಸಿ” ಈ ಸಮಾಜವನ್ನು ದೃಷ್ಟಿಸಬೇಕೋ ಏನೋ ಎಂದನಿಸಿದ್ರೆ ಆಶ್ಚರ್ಯ ಪಡಬೇಕಾಗಿಲ್ಲ.”ಎಲ್ಲವನ್ನೂ ನುಂಗಿ ಅದೇ ಪ್ರಶಾಂತತೆಯಲ್ಲಿ ತುಂಗಮ್ಮ ಹರೀವಾಗ” ಅದೇ ತುಂಗಮ್ಮ, ಅದೇ ಸೃಷ್ಟಿಯ ಮಡಿಲಲ್ಲಿರುವ ಮಾನವ ಯಾಕೆ ಆ ವೈಶಾಲ್ಯತೆಯ ಒಂದು ಅಣುವನ್ನಾದ್ರೂ ತನ್ನದಾಗಿಸಿಕೊಳ್ಳಲೊಲ್ಲ ಎಂಬುದು ಒಡೆಯಲಾಗದ ಒಗಟು.ಒಂದೊಂದೂ ನೂರು ಚಿಂತನೆಗಳ ಹುಟ್ಟು ಹಾಕುವ ಕಾದಂಬರಿ ” ತೇಜೋ- ತುಂಗಭದ್ರ” ಅದರ ವಿಮರ್ಶೆ ಬರೆಯೋದು ಅಂದರೆ ಒಟ್ಟು ಪ್ರೌಢ ವೈಚಾರಿಕತೆಯ ನೆಲೆಗಟ್ಟು ಬೇಕು ಅನ್ನೋದ್ರಲ್ಲಿ ಸಂಶಯವಿಲ್ಲ.ಅದನ್ನ ಇಷ್ಟು ಸುಲಲಿತವಾಗಿ ಹರಿಬಿಟ್ಟೀದೀರಿ ಗೌರಿಯವರೇ.ನಿಮಗೆ ಅನಂತ ಅಭಿನಂದನೆಗಳು.ಅದನ್ನ ನೀಡಿದ್ದಕ್ಕೆ ಗೌರಿಯವರಿಗೂ, ಪ್ರಕಟಿಸಿದ ಅನಿವಾಸಿ ಗೂ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 2 people

  • ಧನ್ಯವಾದಗಳು ಪ್ರಸಾದ ಅವರೇ. ವಸುಧೇಂದ್ರ ಅವರು ನೀಡಿದ ಉತ್ತರ ಮಾಮಿ೯ಕವಾಗಿದೆ. ಈ ಎಡಬಲಗಳ ‘ಈಸ್ಟ್” ಗಳಿಂದ ಸಾಹಿತ್ಯ ಕೊಳೆತುಹೋಗುತ್ತಿದೆ. ಇಂಥ ದಿಟ್ಟ ಲೇಖಕರ ಅವಶ್ಯಕತೆ ಬಹಳವಿದೆಯೆನಿಸುತ್ತದೆ ನನಗೆ. ನಾನೂ good read ಹಾಗೂ ಇಂಟರ್ ವ್ಯೂ ಗಳನ್ನು ನೋಡುವೆ. ನೀವು ಅವುಗಳನ್ನು ಪ್ರಸ್ತಾಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು .

   Like

 7. ತೇಜೋ ತುಂಗಭದ್ರಾ ಕಾದಂಬರಿಯ ಆಳ ವಿಸ್ತಾರದ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ. ಕಾದಂಬರಿಯ ವಿಮರ್ಶೆ ಕಾದಂಬರಿಯನ್ನು ಓದದವರಿಗೆ ಓದುವಂತೆ, ಓದಿದವರಿಗೆ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ. ಬಹಳ ಆಪ್ತ ಬರಹ.
  – ಕೇಶವ

  Liked by 1 person

 8. ನಿಮ್ಮ ಶೈಲಿ ನದಿಯಂತೆ ಸರಾಗವಾಗಿ ಹರಿಯುತ್ತಿದೆ ಲೇಖನದಲ್ಲಿ . ಇದು ನನ್ನ ಓದುವ ಪುಸ್ತಕಗಳ ಪಟ್ಟಿಯಲ್ಲಿದೆ. ಆದರೆ ಮೂರು ದಿನಗಳಲ್ಲಿ ಜಯಿಸುವುದು ಕಷ್ಟ.
  ಶುರುವಿನಲ್ಲಿ ಪುತಿನ ಅವರ ಕವನ ಲೇಖನಕ್ಕೆ ಮೆರುಗು ಕೊಟ್ಟಿದೆ. ಅಲ್ಲಲ್ಲಿ ಬರುವ ಕಾದಂಬರಿಯ ವಾಕ್ಯಗಳು ಕೂಲಂಕಷವಾಗಿ ಓದಿದ್ದಕ್ಕೆ ಸಾಕ್ಷಿಯಾಗಿ ನಿಂತಿವೆ.
  ದೈನಂದಿನ ಕೆಲಸ- ಬೊಗಸೆಗಳ ಉಲ್ಲೇಖ , ಓದುವ ಶೈಲಿಗಳು ನವಿರಾದ ಹಾಸ್ಯದ ಸ್ವಾದವನ್ನು ನೀಡುತ್ತ ನಿಮ್ಮದೇ ಅನನ್ಯ ಛಾಪನ್ನು ಒತ್ತಿದ್ದೀರಿ.
  -ರಾ0

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.