ಕಾ೦ಬೊಡಿಯಾದ “ಬಾ೦ಟೆ ಸ್ರೈ” (Citadel of Beauty)

ನಾನು ಈ ವರ್ಷದ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಹಳ ಮು೦ಚೆಯೆ ನಿರ್ಣಯಿಸಿದ್ದ ಕಾ೦ಬೋಡಿಯಾ ಮತ್ತು ವಿಯಟ್ನಾಮ್ ಪ್ರಯಾಣಕ್ಕೆ(Cambodia and Vietnam) ಹೊರಡುವೆನೆ೦ದು ಹೇಳಿದಾಗ ಬಹಳ ಮ೦ದಿ ಹುಬ್ಬೇರಿಸಿದರೆ೦ದರೆ ತಪ್ಪಾಗಲಾರದು. ಅವರ ಕಳಕಳಿಗೆ ಕಾರಣ ”ಕರೋನ ವೈರಸ್” ಎ೦ದು ನೀವಾಗಲೆ ಊಹಿಸಿರಬಹುದು. ಈ ದೇಶಗಳ ಪ್ರಯಾಣದ ಬಗ್ಗೆ ಯು.ಕೆ. ಸರ್ಕಾರ ಯಾವ ರೀತಿಯ ಸಲಹೆಯನ್ನು ನೀಡದಿದ್ದ ಕಾರಣ, ನಮ್ಮ ಗ೦ಟುಮೂಟೆಯನ್ನು ಕಟ್ಟಿ ೧೭ ದಿನದ ಈ ಪ್ರವಾಸಕ್ಕೆ ವೀರ ಸೈನಿಕರ೦ತೆ ಹೊರಟೇಬಿಟ್ಟೆವು.

ದೇವಸ್ಥಾನದ ಒಳ ಆವರಣ

ಇಂಗ್ಲೆಂಡಿನಿ೦ದ ಬಹಳ ದೂರದ ಪಯಣ. ಸಿ೦ಗಪೂರ್ ವಿಮಾನ ನಿಲ್ದಾಣದ ಲೌ೦ಜ್ ನಲ್ಲಿ, ಬಿಸಿಬಿಸಿ ಪರೋಟ, ಪಲ್ಯವನ್ನು ಅಸ್ವಾದಿಸುತ್ತಿದ್ದಾಗ, ಅಲ್ಲಿನ ಕೆಲಸಗಾರರು, ”ನೋಡಿ ಈ ಲೌ೦ಜ್ ನಲ್ಲಿ ಇವತ್ತು ೧೦ ಜನರೂ ಇಲ್ಲ, ಸಾಮಾನ್ಯವಾಗಿ ಇದು ತು೦ಬಿ ತುಳುಕುತ್ತದೆ,” ಎ೦ದು ಹೇಳಿದಾಗ ಮತ್ತೊಮ್ಮೆ ನಮ್ಮ ಸ್ಥೈರ್ಯ ಅಥವಾ ಮೂರ್ಖತನದ ಬಗ್ಗೆ ಪ್ರಶ್ನೆ ಕೇಳಿದ೦ತೆ ಭಾಸಯಾಯಿತು. ನನ್ನ ಪತಿ “ನಮಗೆ ಯಾವ ರೀತಿಯ ತೂ೦ದರೆಯಾಗುವುದಿಲ್ಲ, ನಾವು ಬಿಟ್ಟುಬ೦ದ ದೇಶಕ್ಕಿ೦ತ, ಹೋಗುತ್ತಿರುವ ದೇಶಗಳು ವೈರಸ್ ದಾಳಿಯ ಲೆಕ್ಕದಲ್ಲಿ ಸುರಕ್ಷಿತ” ಎ೦ದು ಅತನ ಎ೦ದಿನ ನಿರ್ಲಿಪ್ತ ಭಾವದಲ್ಲಿ ಅ೦ಕಿಅ೦ಶಗಳೊ೦ದಿಗೆ, ಮತ್ತೊಮ್ಮೆ ನನಗೆ ಭರವಸೆ ಕೊಟ್ಟಿದ್ದುದರಿಂದ ಸ್ವಲ್ಪ ಸಮಾಧಾನವಾಯಿತು ಮತ್ತು ’ನೀರಲ್ಲಿ ಮುಳುಗಿದ ಮೇಲೆ ಚಳಿಯೇನು, ಮಳೆಯೇನು’ ಎನ್ನುವ ಹೊಸ ಭಂಡ ಧೈರ್ಯವೂ ಮೂಡಿಬ೦ತು.

ಕರೋನ ವೈರಸ್ ನಿ೦ದ ನಮಗೊಂದು ರೀತಿಯ ಅನುಕೂಲವಾಯಿತೆ೦ದರೆ ಆಶ್ಚರ್ಯವೇನಿಲ್ಲ. ಈ ಸ್ಥಳಗಳಿಗೆ ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಬರುವ ಪ್ರವಾಸಿಗರೆ೦ದರೆ ಚೀನಾ ಮತ್ತು ಕೊರಿಯಾ ದೇಶದವರು. ಅವರುಗಳಿಲ್ಲದೆ ಮತ್ತು ಬೇರೆ ದೇಶಗಳ ಪ್ರವಾಸಿಗರ ಸ೦ಖ್ಯೆಯೂ ಕಡಿಮೆಯಿದ್ದುದರಿ೦ದ, ಈ ಅತ್ಯ೦ತ ಸು೦ದರ, ಅದ್ಭುತ ದೇವಸ್ಥಾನಗಳನ್ನು ಮನದಣಿಯೆ ನೋಡುವ ಸೌಭಾಗ್ಯ ನಮಗೆ ದೊರಕಿತು. ಸುಡುಸುಡುವ ಬಿಸಿಲು, ಮೈಲಿಗಟ್ಟಲೆ ನಡೆದ ಕಾಲುಗಳು ಮೆದುಳಿಗೆ ಕಳಿಸುತ್ತಿರುವ ಸಂದೇಶದ ವರಾತ, ಸುತ್ತಲಿನ ಜನ ಇದ್ಯಾವುದೂ ಈ ಅದ್ಭುತ ಗುಡಿಗಳ ಮುಂದೆ ನಿಂತಾಗ ನಿಮ್ಮ ಗಮನಕ್ಕೆ ಬರುವುದಿಲ್ಲ.

ನಾನು ನಿಮಗೆ ಕ್ಯಾ೦ಬೋಡಿಯಾದ ಎಲ್ಲಾ ದೇವಸ್ಥಾನಗಳ ಬಗ್ಗೆ ಹೇಳಹೊರಟಿಲ್ಲ. ಪ್ರಪ೦ಚದಲ್ಲಿ ಅತಿ ಪ್ರಸಿದ್ಧವಾದ ಅ೦ಗ್ಕರ್ ವಾಟ್,(Angkor Wat) ಅ೦ಗ್ಕರ್ ಥಾಮ್(Angkor Thom) ಬಗ್ಗೆ ನೀವೆಲ್ಲರೂ ಕೇಳಿಯೆ ಇರುತ್ತೀರ. ನಿಮ್ಮೊ೦ದಿಗೆ ನನಗೆ ಅತಿಮೆಚ್ಚುಗೆಯಾದ ಬಾ೦ಟೆ ಸ್ರೈ ಎನ್ನುವ ಗುಡಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಹ೦ಚಿಕೊಳ್ಳುವ ಪ್ರಯತ್ನ ನನ್ನದು.

ಬಾ೦ಟೆ ಸ್ರೈ(Bontey Srei) ಸಿಯಮ್ ರೀಪ್(SiemReap) ನಲ್ಲಿರುವ ಎಲ್ಲಾ ದೇವಸ್ಥಾನಗಳಿಗಿಂತ ಚಿಕ್ಕದೆ೦ದು ಹೇಳಬಹುದು. ಇಲ್ಲಿರುವ ಇತರ ದೇವಸ್ಥಾನಗಳು ಅತಿ ದೊಡ್ಡವು ಎನ್ನುವುದು ಬಹಳ ಜನರಿಗೆ ತಿಳಿದ ವಿಚಾರ. ಬಾಂಟೆ ಸ್ರೈ ಯನ್ನು ಸಿಯಮ್ ರೀಪ್ ನಗರದ ಒಡವೆಯೆ೦ದು ಹೇಳಲಾಗುತ್ತದೆ. ಕೆಂಪು ಮರಳುಗಲ್ಲಿನಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪ್ರತಿ ಗೋಡೆಯಲ್ಲಿ, ಕಂಭದಲ್ಲಿ, ಹಾಸುಗಲ್ಲಿನಲ್ಲಿ ಸುಂದರವಾದ, ಸಂಕೀರ್ಣವಾದ ಕೆತ್ತನೆಯಿದೆ. ಇಂತಹ ಕೆತ್ತನೆ ಸಿಯಮ್ ರೀಪ್ ನ ಇನ್ಯಾವ ದೇವಸ್ಥಾನಗಳಲ್ಲೂ ಕಂಡುಬರುವುದಿಲ್ಲ. ಈ ವಿಶಿಷ್ವತೆಯಿಂದಲೇ ಬಹುಶಃ ಇದಕ್ಕೆ ಸೌಂದರ್ಯದ ಮಹಲು/ ಕೋಟೆಯೆಂಬ ಹೆಸರು ಬಂದಿರಬಹುದು. ಇದನ್ನು ನೋಡಿದಾಗ ನನಗೆ ನೆನಪಿಗೆ ಬಂದದ್ದು ಬೇಲೂರು/ಹಳೇಬೀಡಿನ ಕೆತ್ತನೆಯಾದರೂ, ಇದರ ವೈಶಿಷ್ಟ್ಯತೆಯೆ ಬೇರೆ.

ಎರಡನೆ ಗೋಪುರದ ಮುಂದೆ ನನ್ನ ಪತಿಯೊಂದಿಗೆ

ಇದು ಮೂಲತಃ ಶಿವನ ದೇವಸ್ಥಾನ. ಇಲ್ಲಿನ ಯಾವ ಗುಡಿಗಳಲ್ಲೂ ಮೂಲ ವಿಗ್ರಹವಿಲ್ಲ. ೧೦ ನೇ ಶತಮಾನದಲ್ಲಿ ಕಟ್ಟಿದರೆ೦ದು ಹೇಳಲಾಗುವ ಈ ಗುಡಿ, ಇಲ್ಲಿನ ಇತರ ಗುಡಿಗಳ ಹಾಗೆ, ಚಕ್ರವರ್ತಿಯಿ೦ದ ನಿರ್ಮಾಣವಾಗಿಲ್ಲ, ರಾಜನ ಆಸ್ಥಾನದಲ್ಲಿದ್ದ ವಿಷ್ಣುಕುಮಾರ ಮತ್ತು ಯಜ್ಞವರಹ ಎನ್ನುವ ಅಧಿಕಾರಿಗಳಿ೦ದ ನಿರ್ಮಿತವಾಗಿದ್ದು, ಬಹುಶ ಅದೇ ಕಾರಣಕ್ಕೆ ಇದು ಎಲ್ಲಕ್ಕಿ೦ತ ಚಿಕ್ಕದೆ೦ದು ಹೇಳಲಾಗುತ್ತದೆ. ಈ ಜಾಗವನ್ನು ಹಿ೦ದೆ ಈಶ್ವರಪುರವೆ೦ದು ಕರೆಯುತ್ತಿದ್ದರೆ೦ದು ಪ್ರತೀತಿ. ಈ ದೇವಸ್ಥಾನವನ್ನು ಶಿವನಿಗಾಗಿ ಕಟ್ಟಿದ್ದರೂ, ಉತ್ತರ ಭಾಗದ ಗುಡಿಯನ್ನು ವಿಷ್ಣುವಿನ ಪೊಜೆಗೆ ಮೀಸಲಿಡಲಾಗಿತ್ತು. ಪ್ರಪ೦ಚದ ಅತಿ ಪ್ರಸಿದ್ಧ ಶಿವನ ಗುಡಿಗಳಲ್ಲಿಇದೂ ಒ೦ದೆ೦ದು ಹೇಳುತ್ತಾರೆ. ಈ ದೇವಾಲಯದಲ್ಲಿ ೧೪ನೇ ಶತಮಾನದ ತನಕ, ಹಿಂದು ಧರ್ಮದ ದೊರೆಗಳು ಮತ್ತು ಪ್ರಜೆಗಳು ಶಿವನನ್ನು ಪೂಜಿಸುತ್ತಿದ್ದರೆನ್ನುವ ದಾಖಲೆಯಿದೆ.

ಈ ಗುಡಿಯನ್ನು ೧೯೧೪ ರಲ್ಲಿ ಮರುಶೋಧಿಸಲಾಗಿದೆ. ಇಲ್ಲಿನ ೪ ದೇವರ ವಿಗ್ರಹಗಳನ್ನು ಫ಼್ರೆಂಚ್ ಅಧಿಕಾರಿ, ಮಂತ್ರಿ ಮತ್ತು ಲೇಖಕ ( Andre Malraux) ೧೯೨೩ ರಲ್ಲಿ ಕದ್ದಿದ್ದು, ಮತ್ತವನ ಬಂಧನದ ನಂತರ ಫ್ರಾನ್ಸ್ ದೇಶದಿಂದ ವಿಗ್ರಹಗಳನ್ನು ವಾಪಸ್ಸು ತಂದ ವಿಷಯ ದೊಡ್ಡ ಸುದ್ಧಿಯಾಗಿ, ಈ ದೇವಸ್ಥಾನದ ಬಗೆಗೆ ಆಗಿನ ಜನರ ಕುತೂಹಲ ಹೆಚ್ಚಲು ಕಾರಣವಾಯಿತೆಂದು ಹೇಳುತ್ತಾರೆ. ಈಗ ಈ ವಿಗ್ರಹಗಳು ಇಲ್ಲಿಯ ಸರ್ಕಾರದ ಮ್ಯೂಸಿಯಂ ನಲ್ಲಿವೆ.

ಹೊರಭಾಗದ ಗೋಪುರ, ಒಂದು ಕಾಲದಲ್ಲಿ ೫೦೦ ಸ್ಕ್ವೇರ್ ಮೀಟರ್ ಸುತ್ತಳತೆಯಿದ್ದು, ಈಶ್ವರಪುರದ ಹೊರಗೋಡೆಯನ್ನು ಪ್ರತಿನಿಧಿಸುತ್ತದೆಂದೂ ಮತ್ತು ಇದನ್ನು ಮರದಲ್ಲಿ ಕಟ್ಟಿದ್ದರೆ೦ದೂ ಹೇಳಲಾಗುತ್ತದೆ. ಇದರ ಮೇಲಿನ ಭಾಗದಲ್ಲಿ ಇರಾವತದ ಮೇಲೆ ಕುಳಿತ ಇಂದ್ರನ ಕೆತ್ತನೆಯಿದೆ. ಹೊರಗೋಡೆಯ ನಂತರ ದೇವಸ್ಥಾನವನ್ನು ಮೂರು ಭಾಗಗಳನ್ನಾಗಿ ನೋಡಬಹುದು. ಪ್ರತಿಭಾಗದ ಕಂಭಗಳ ಮೇಲಿರುವ ಹಾಸುಕಲ್ಲುಗಲ್ಲಿ ಸುಂದರವಾದ ಕೆತ್ತನೆಗಳಿವೆ. ಈ ಮೂರು ಭಾಗಗಳಲ್ಲಿ, ರಾಮಾಯಣದ ವಾಲಿ, ಸುಗ್ರೀವ, ಮಹಾಭಾರತದ ಕೃಷ್ಣ, ಅರ್ಜುನರ ಕೆತ್ತನೆಗಳು, ಜೊತೆಜೊತೆಗೆ ಆ ಮಹಾಗ್ರಂಥಗಳಲ್ಲಿ ಬರೆದ ಕೆಲವು ಕತೆಗಳ ಬಗೆಗಿನ ಉಲ್ಲೇಖವಿದೆ. ಇದಲ್ಲದೆ ಯಮರಾಜ, ನರಸಿಂಹ, ಹಿರಣ್ಯಕಶಿಪು, ಅಗ್ನಿ, ವರುಣ, ಅಪ್ಸರೆಯರು, ದ್ವಾರಪಾಲಕರು ಇನ್ನೂ ಮುಂತಾದ ದೇವತೆಗಳ ಕೆತ್ತನೆಗಳಿದ್ದು, ಹಿಂದೂಧರ್ಮದ ವಿವಿಧ ವಿಭಾಗಗಳನ್ನು, ಕತೆಗಳನ್ನು ಇಲ್ಲಿ ನೋಡಬಹುದು. ದೇವಸ್ಥಾನದ ಎರಡೂ ಭಾಗದಲ್ಲಿ ಪಾಳುಬಿದ್ದ ಗ್ರ೦ಥಾಲಯಗಳನ್ನು ಕಾಣಬಹುದು.

ಅಂದಾಜು ೨೦೦ ಮೀಟರ್ ನಡೆದು, ಎರಡು ಗೋಪುರಗಳನ್ನು ದಾಟಿದರೆ ಈ ದೇವಸ್ಥಾನದ ಮೂರನೆ ಹ೦ತ ತಲುಪುತ್ತೇವೆ. ಈ ಭಾಗ ಎಲ್ಲಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದು, ಗೋಡೆಯ ಸುತ್ತಲ ಕೆತ್ತನೆಗಳ ರೂಪಗಳು ಸ್ಪುಟವಾಗಿ ಕಾಣುತ್ತವೆ. ಯಾವ ರೀತಿಯ ಮೂಲ ವಿಗ್ರಹವಿಲ್ಲದೆ, ದೀಪಗಳ ಪ್ರಭೆಯಿಲ್ಲದೆ, ಹೂವು, ಗಂಧಾಕ್ಷತೆಗಳ ಕಂಪಿಲ್ಲದೆ, ತೆರೆದ ಪುಸ್ತಕದಂತೆ ನಿಂತ ಈ ಕಟ್ಟಡವನ್ನು ನೋಡಿದಾಗ ಕಣ್ಣುಗಳು ತೇವವಾದವು. ಬಹುಶಃ ಅದು ನಾನು ಹುಟ್ಟಿ ಬೆಳೆದು ಬಂದ ಸಂಸ್ಕೃತಿಯ ಪರಿಣಾಮವಿರಬಹುದು. ಹಿಂದು ಧರ್ಮದ ಪರಿಚಯವಿರದ ಪ್ರೇಕ್ಷಕನ ಮನ ಯಾವ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಬಹುದೆ೦ದು ನಾನು ಊಹಿಸಲಾರೆ. ಇವೆಲ್ಲ ಭಾವನೆಗಳ ಹಿನ್ನಲೆಯಲ್ಲೂ, ಕೆ೦ಪುಕಲ್ಲಿನಲ್ಲಿ ಕೆತ್ತಿರುವ, ಚಚ್ಚೌಕವಾದ ಈ ಮನ ಮೋಹಕ ಒಳ ಪ್ರಾಕಾರದ ಗರ್ಭಗುಡಿಯ ಮು೦ದೆ ನಿ೦ತಾಗ ನನ್ನ ಮನಸ್ಸು ತ೦ತಾನೆ ಕುವೆ೦ಪುರವರ ”ಗ೦ಟೆಗಳ ಧ್ವನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪುರದಾರತಿಯ ಜ್ಯೋತಿಯಿಲ್ಲ, ಭಗವ೦ತನಾನ೦ದ ರೂಪುಗೊ೦ಡಿಹುದಿಲ್ಲಿ” ಕವಿತೆಯನ್ನು ಮತ್ತೆ, ಮತ್ತೆ ಹಾಡತೊಡಗಿತು.

ಕೆ೦ಪುಕಲ್ಲಿನ ಒಡವೆಯೆ೦ತೆ, ಉರಿ ಬಿಸಿಲಿಗೆ ಶಿವನ ತ್ರಿಶೂಲದ೦ತೆ ಥಳಥಳನೆ ಹೊಳೆಯುವ ಈ ದೇವಸ್ಥಾನದ ಪ್ರತಿ ಇ೦ಚಿನಲ್ಲೂ ಸು೦ದರವಾದ ಕೆತ್ತನೆಯಿದೆ. ಅಪ್ಸರೆಯರ ನಾಟ್ಯಭ೦ಗಿಗಳು ನಮ್ಮ ಶಿಲಾಬಾಲಿಕೆಯರನ್ನು ನೆನಪಿಸುತ್ತವೆ. ಗುಡಿಯ ಮಧ್ಯದ ಆವರಣದಲ್ಲಿ ಕೈಮುಗಿದು ನಿ೦ತ ಆ೦ಜನೇಯನ ಪ್ರತಿಮೆಗಳಿವೆ. ಕಾಂಬೊಡಿಯಾದ ಪ್ರತಿ ದೇವಸ್ಥಾನಗಳಂತೆ ಇಲ್ಲಿಯೂ ಸುತ್ತ ಇದ್ದಿರಬಹುದಾದ ಪುಷ್ಕರಣಿಗಳು ನೀರಿಲ್ಲದೆ ಒಣಗಿವೆ.

ಸಾವಿರಾರು ವರ್ಷಗಳು, ಪೂಜೆಯಿಲ್ಲದೆ, ಮಳೆಬಿಸಿಲಿನ ಹೊಡತಕ್ಕೆ ತುತ್ತಾಗಿದ್ದರೂ, ಜಗ್ಗದೇ ನಿ೦ತ ಈ ಅತ್ಯಮೂಲ್ಯ ಕೃತಿಯನ್ನು ನೋಡುವ ಭಾಗ್ಯ ಇನ್ನೂ ನಮಗಿರುವುದು ನಮ್ಮ ಅದೃಷ್ಟವೆನ್ನಬಹುದು. ಭಾರತದಲ್ಲಿ ಹುಟ್ಟಿದ ಹಿ೦ದೂಧರ್ಮ ಸಾವಿರಾರು ಮೈಲಿ ದೂರದ ಕಾ೦ಬೋಡಿಯದಲ್ಲಿ ವ್ಯಾಪಾರಿಗಳ ಮೂಲಕ ಪಯಣಿಸಿ, ಆಗಿನ ಅರಸರ ಧರ್ಮವಾಗಿ ನೂರಾರು ವರ್ಷಗಳು ಬೆಳೆದು, ಬದುಕಿದ್ದು ಒ೦ದು ರೀತಿಯ ಪವಾಡವೆ ಸರಿ. ನಂತರದ ಶತಕಗಳಲ್ಲಿ ಬೌದ್ಧ ಧರ್ಮ ಇಲ್ಲಿ ಪ್ರಸಿದ್ದಿಯಾಗಿ, ಈ ದೇವಸ್ಥಾನಗಳು ನೂರಾರು ವರ್ಷ ಯಾವ ರೀತಿಯ ಗುರುತಿಲ್ಲದೆ, ಪೂಜೆಯಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದ್ದರೂ ಒಂದು ಕಾಲದಲ್ಲಿ ವಿಜೃ೦ಭಿಸಿ, ವೈಭವದ ಮೇರುಪರ್ವತವನ್ನೇರಿದ ಗುರುತು ಅಳಿಯದೇ ಉಳಿದಿದೆ. ಇದು ನಿಜಕ್ಕೂ ಸೌಂದರ್ಯದ ಕೋಟೆಯೆ ಸರಿ (ಸಿಟಡೆಲ್ ಅಫ್ ಬ್ಯೂಟಿ).

ದಾಕ್ಷಾಯಿಣಿ ಗೌಡ

11 thoughts on “ಕಾ೦ಬೊಡಿಯಾದ “ಬಾ೦ಟೆ ಸ್ರೈ” (Citadel of Beauty)

  1. ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ಅನಿವಾಸಿ ಮಿತ್ರರೆಲ್ಲರಿಗೆ ಧನ್ಯವಾದಗಳು

    Like

  2. I visited Cambodia few years ago. It was beautiful and worth visiting.
    I saw unusual sightings in Cambodia such as fried Cockroaches and flies and live frogs etc. Very little vegetarian food. We were fed up of ToFu. I will never eat Tofu again!
    It was fantastic experience .well written informative article.
    Vathsala

    Like

  3. ದಾಕ್ಷಾಯಿಣಿ
    ನಿಮ್ಮ ಪ್ರವಾಸ ಕಥನ ಚಿಕ್ಕ ದಾಗಿ ಚೊಕ್ಕವಾಗಿದೆ. ಭಾಷೆ ಉತ್ಕೃಷ್ಟವಾಗಿದೆ. ವಿವರಣೆ ಸುಂದರವಾಗಿದೆ.
    ದೇವರ ಪರಿಕಲ್ಪನೆ ಒಬ್ಬಬ್ಬರಿಗೂ ಒಂದೊಂದು ರೀತಿ. ಅರ್ಚನೆ, ಪೂಜೆ, ಪುನಸ್ಕಾರವಿಲ್ಲದೆಯೂ, ಸ್ವಲ್ಪಮಟ್ಟಿಗೆ
    ಶಿಥಿಲ ಗೊಂಡರೂ ಮಧ್ಯವರ್ತಿಯಿಲ್ಲದೆ ಮುಕ್ತವಾಗಿ ನಿಂತ ಈ ದೇವರುಗಳು ವೀಕ್ಷಕರಲ್ಲಿ ಭಕ್ತಿ ಭಾವ ಭಾವಗಳನ್ನೂ
    ಆನಂದವನ್ನು ನೀಡುತ್ತಿರುವುದು ಸರಿಯೇ. ಕೆಲವು ಧರ್ಮದವರಿಗೆ ಒಂದು ಕಲ್ಲೇ ದೇವರು, ಇನ್ನು ಕೆಲವರಿಗೆ ಶಿಲ್ಪಕಲಾಕೃತಿಗಳು ಮತ್ತು
    ಸುಂದರ ಮೂರ್ತಿ ದೇವರಾಗಲು ಅರ್ಹ. ಕೆಲವರಿಗೆ ಆ ಸುಂದರ ಮೂರ್ತಿ ಗುಡಿಯ ಚೌಕ್ಕಟ್ಟಿನಲ್ಲಿದ್ದಾಗ ಮಾತ್ರ ದೇವರು, ದೇವಸ್ಥಾನದ ಹೊರಗೆ ಅದು ಒಂದು ಕಲಾಕೃತಿ !
    ಷಡಕ್ಷರಿ ಹೇಳಿದಂತೆ ಅವರವರ ಭಾವಕ್ಕೆ ತಕ್ಕಂತೆ ಅವರವರಿವಿಗೊಬ್ಬ ದೇವ!
    ಆಗಿನ ಕಾಲಕ್ಕೆ ಹಿಂದೂ ಸಂಸ್ಕೃತಿ ಅಲ್ಲಿಯವರೆಗೆ ಹಬ್ಬಿರುವುದು ಆಶರ್ಯಕರ ಸಂಗತಿ

    Like

  4. ಒಂದು ರೀತಿಯಿಂದ ಬಾಂಟೆ ಸ್ರೈಬಗ್ಗೆ ಬರೆಯಲು ಆರಿಸಿಕೊಂಡದ್ದು ಒಳ್ಳೆಯದೇ ಆಯಿತು. ಕಾಂಬೋಡಿಯಾದ ಇನ್ನುಳಿದ ದೇವಾಲಯಗಳ ಬಗ್ಗೆ (ಆನ್ಕ್ಕೊರ್ ವಾಟ್ ಮತ್ತು ಥಾಮ್ ) ಇತ್ತೀಚಿನ ಪ್ರವಾಸ ಕಥನಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಈ ದೇವಸ್ಥಾನದ ಅಂದದ ಬಗ್ಗೆ ಸುಂದರವಾಗಿ ಬರೆದಿದ್ದೀರಿ. ಪ್ರವಾಸಿಕರ ನೂಕು ನುಗ್ಗಲನ್ನು ತಪ್ಪಿಸಿ ಹೋಗಿ ಬಂದು ಜಯಿಸಿದ್ದೀರಿ. ಅಭಿನಂದನೆಗಳು. ಚೈನಾ ಹೋಗಿ ಬಂದ ಮೇಲೆ ಇನ್ನೂ ಕಾಂಬೋಡಿಯಾ ನನ್ನ ಪ್ರವಾಸದ ಬಕೆಟ್ ಲಿಸ್ಟ್ ನಲ್ಲಿದೆ. ನೋಡಬೇಕು ಎಂದು ಅವಕಾಶ ಬಂದೊದಗುತ್ತದೆಯೋ!

    Like

  5. ಸುಂದರ ಲೇಖನ. ಫೆಬ್ರುವರಿಯಲ್ಲಿ ಹೋಗಿದ್ದು ಭಂಡ ಧೈರ್ಯವೇ ಸರಿ. ಸುರಕ್ಷಿತವಾಗಿ ಬಂದದ್ದು ಬೋನಸ್.
    ಕಾಂಬೋಡಿಯಾ ಯಾತ್ರೆ ಬಹುದಿನದ ಕನಸು. ಇದನ್ನು ನನಸಾಗಿಸಲು ಈ ಕಥಾನಕ ಕಿಡಿ.

    – ರಾಂ

    Like

  6. ಬಹಳ ಚೆನ್ನಾಗಿ ಬರೆದಿದ್ದೀರ, ನಾನು ಸಾಕಷ್ಟು ಸುತ್ತಿ ಅದರ ಬಗ್ಗೆ ಅನಿವಾಸಿಯಲ್ಲಿ ಬರೆದಿದ್ದೇನೆ, ಕಾಂಬೋಡಿಯಗೆ ಹೋಗುವ ಆಸೆ ಬಹಳ ದಿನಗಳಿಂದ ಇದೆ ಆದರೆ ಸದ್ಯೆಕ್ಕೆ ಸಾಧ್ಯವಿಲ್ಲ, ಮುಂದಿನವರ್ಷ ನೋಡಬೇಕು
    ನಿಮ್ಮ ವಿವರಣೆ ಸೊಗಸಾಗಿದೆ
    ರಾಮಮೂರ್ತಿ

    Like

    • ಸುಂದರವಾದ ವಿವರಣೆ ಹಾಗೂ ಮನಮೋಹಕ ಚಿತ್ರಗಳಿಂದ ತುಂಬ ಸೊಗಸಾಗಿ ಮೂಡಿಬಂದಿದೆ ತಮ್ಮ ಪ್ರವಾಸ ಕಥನ ದಕ್ಷಾ ಅವರೇ..ಅಂತೂ ಕೊರೊನಾ ಕಾಲದಲ್ಲಿ ಜೈತ್ರಯಾತ್ರೆ ಮಾಡಿಬಂದಿದ್ದಿರಿ. ಕಾಂಬೋಡಿಯಾ ಕೌಂಡಿನ್ಯ ಋಷಿಯ ಕ್ಷೇತ್ರವಂತೆ. ನಾವೂ ಕೌಂಡಿನ್ಯ ಗೋತ್ರೋದ್ಭವರು. ನಮ್ಮ ಕ್ಷೇತ್ರದ(😀😀) ಬಗ್ಗೆ ಇಷ್ಟೊಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

      Like

  7. Very well written travelogue that brings to light the aspects of our glorious past that we know very little off. You are absolutely right that these temples are now being worshipped for their beauty and architecture. In some sense they have become the idols of Gods with devotees from all over the world following them, studying them and cherishing their past through them. Thank you very much for sharing your brave adventure and this delightful and inspiring write-up in these extraordinary times.

    Murali Hathwar

    Like

    • ಕಾಂಬೋಡಿಯಾ ಹೋಗುವ ಕನಸು ಇನ್ನೂ ಕನಸಾಗಿಯೇ ಇದೆ. ಕೊರೊನಾ ಸಮಯದಲ್ಲಿ ನೀವು ಹೋಗಿ ಸಮಯಕ್ಕೆ ಸರಿಯಾಗಿ ಹಿಂತಿರುಗಿ ಬಂದಿರುವುದು ಒಂದು ಪವಾಡವೇ!

      ಸೊಗಸಾದ ಲೇಖನ

      ಕೇಶವ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.