ಈ ವಾರದ ಸಂಚಿಕೆಯಲ್ಲಿ ಲಾಕ್ ಡೌನ್ ಬಗ್ಗೆ ಎರಡು ರೀತಿಯ ವಿಶಿಷ್ಟ ಬರಹಗಳಿವೆ. ಮೊದಲ ಬಾರಿಗೆ ಅನಿವಾಸಿ ಈ-ಜಗುಲಿಯ (ಮೇ ತಿಂಗಳ ೩೦ನೇ ತಾರೀಖು) ಹರಟೆ, ಸಮಾಜಿಕ ಮಾಧ್ಯಮದಲ್ಲಿ ಶುರುವಾಯಿತು. ಇದರಲ್ಲಿ ಲಾಕ್ ಡೌನ್ ಬಗೆಗೆ ನಡೆದ ಹರಟೆಯಲ್ಲಿ ಹಂಚಿಕೊಂಡ ಚಿಂತನೆ ಮತ್ತು ಇದರಿಂದ ಪ್ರೇರೇಪಿತವಾಗಿ ಬರೆದ ಕವಿತೆಯನ್ನು ನಿಮ್ಮ ಮುಂದಿಡಲಾಗಿದೆ.
ಮೊದಲನೆಯದಾಗಿ, ಯೋಗೀಂದ್ರ ಮರವಂತೆಯವರ ಚಿಂತನೆಯ ಲಹರಿ, ನಾವು ಜೀವನದ ಎಲ್ಲಾ ಘಟ್ಟಗಳಲ್ಲೂ ಅತಿ ಎಚ್ಚರಿಕೆಯಿಂದ, ನಮ್ಮ ಸ್ವಾರ್ಥದ ದೃಷ್ಟಿಯಿಂದ ಅಳೆದು, ಸುರಿದು, ನಮ್ಮ ಮುಂದಿರುವ ಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲಿ ನಿಸ್ಸೀಮರಾಗಿದ್ದರೂ, ನಾವೆಂದು ಊಹಿಸದಿದ್ದ, ಪ್ರಪ೦ಚವನ್ನೆ ತಲ್ಲಣಗೊಳಿಸಿದ, ನಮ್ಮ ಅಳತೆಗೆ ಸಿಗಲಾರದ ಸ್ಥಿತಿ ಎದುರಾದಾಗ ನಮ್ಮ ನಿಜವಾದ ಬಣ್ಣ ಬಯಲಾಗುತ್ತದೆಯೆ ಅಥವಾ ನಮಗೇ ಅರಿವಿಲ್ಲದೆ ನಮ್ಮಗಳಲ್ಲಿ ಹುದುಗಿರಬಹುದಾದ ಹೊಸ ಸ್ಥೈರ್ಯ, ಅನುಕಂಪ, ಮಾನವೀಯತೆಯ ಪರಿಚಯವಾಗುತ್ತದೆಯೆ ಎನ್ನುವ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಎರಡನೆಯದಾಗಿ, ರಮ್ಯಾ ಭಾದ್ರಿಯವರ ಕವಿತೆ, ಈ ಅಭೂತಪೂರ್ವ ಲೋಕದಲ್ಲಿ, ನಾವು ಕಾಲದ ಅನುಕೂಲಕ್ಕಾಗಿ ರಚಿಸಿಕೊಂಡ, ಸಾಮಾಜಿಕ ಮಾಧ್ಯಮದ ಹೊಸ ಸಮಾಜ ತ೦ದುಕೊಟ್ಟ ಸ೦ವಹನೆ, ಸಾಂತ್ವನ, ಸಂತೋಷಗಳ ಪರಿಚಯವನ್ನು ಹಾಸ್ಯದ ಸಿಹಿ ಲೇಪಿಸಿ, ಪ್ರಾಸಬದ್ಧವಾಗಿ ನಮ್ಮನ್ನು ರಂಜಿಸುತ್ತದೆ. ಈ ಕವಿತೆಯಲ್ಲಿ ಮುಂದೆ ಎದುರಿಸಬೇಕಾದ ಭವಿಷ್ಯದ ಬಗೆಗಿನ ಕಳಕಳಿ ಮತ್ತು ನಮ್ಮ ಪರಿಚಿತ, ವಾಸ್ತವ ಪ್ರಪ೦ಚಕ್ಕೆ ತೆರಳುವ ಕಾತುರ, ಇದನ್ನು ನಾವೆಲ್ಲರು ಒಟ್ಟಾಗಿ ಎದುರಿಸಿ, ಗುರಿಸೇರಬಲ್ಲೆವೆನ್ನುವ ಆಶಾವಾದವೂ ಸೇರಿದೆ – ಸಂ
ನಮ್ಮ ಅಳತೆಯನ್ನು ತಿಳಿಸುತ್ತಿರುವ ಲಾಕ್ ಡೌನ್
(ಈ-ಜಗುಲಿ, ಅನಿವಾಸಿ ಯು ಕೆ ಕೂಟದ ಮೊದಲ ಹರಟೆಯಲ್ಲಿ ಯೋಗೀಂದ್ರ ಮರವಂತೆ ಹಂಚಿಕೊಂಡ ಕಿರುಲಹರಿ)

ಯಾವ ಕಾಲಕ್ಕೆ ಯಾರನ್ನು ಎದುರು ಹಾಕಿಕೊಳ್ಳಬಾರದು, ಅಂತ ಯೋಚಿಸುತ್ತಲೇ ಘಟನೆಗಳನ್ನು, ಮನುಷ್ಯರನ್ನು ಎದುರಿಸುವವರು ನಾವು. ಪರೀಕ್ಷೆಯೋ “ವೈವಾ”ವೋ ಇದ್ದರೆ ಸಂಬಂಧಪಟ್ಟ ಅಧ್ಯಾಪಕರನ್ನು ಎದುರು ಹಾಕಿಕೊಂಡರೆ ಉತ್ತೀರ್ಣರಾಗುತ್ತೇವೋ ಇಲ್ಲವೋ ಎನ್ನುವ ಭಯ ಇರುತ್ತದಲ್ಲ ಹಾಗೆ ಈ ಕೋವಿಡ್ ಲಾಕ್ ಡೌನ್ ಕಾಲದಲ್ಲಿ ವೈದ್ಯರನ್ನು ಎದುರು ಹಾಕಿಕೊಂಡರೆ ಕಷ್ಟ. ಹಲವು ವೈದ್ಯಮಿತ್ರರೇ ಕೂಡಿ ಸಂಘಟಿಸಿರುವ ಅನಿವಾಸಿ ಬಳಗದ “ಈ -ಜಗುಲಿ” ಕಾರ್ಯಕ್ರಮಕ್ಕೆ ಹಾಗಾಗಿ ಬರುವುದಿಲ್ಲ ಅಂತ ಹೇಳುವ ಹಾಗಿರಲಿಲ್ಲ.
ನಾವೆಲ್ಲರೂ ಈ ” ಲಾಕ್ ಡೌನ್” ಬಂಧನದಲ್ಲಿ ಇರುವವರು. ಈಗಾಗಲೇ ಬಂಧನದಲ್ಲಿ ಇರುವವರನ್ನು “ಈ-ಜಗುಲಿ “ಯಲ್ಲಿ ತಂದು ಮತ್ತೆ ಬಂಧಿಸಿದ್ದು, ಕೈದಿಗಳ ಸಮ್ಮೇಳನದ ತರಹ ಕಾಣಿಸುತ್ತಿದೆ . ಮತ್ತೆ ಜಗುಲಿಯಲ್ಲಿ ಯಾರೊಡನೆ ಕೂತು ಮಾತಾಡಿದರೂ ಅದು ವಿಶಿಷ್ಟ ಅನುಭವವೇ. ಜಗುಲಿಗೆ ಕಿಟಕಿ ,ಬಾಗಿಲು,ಕಂಬಿ, ಬೀಗ, ಅಗುಳಿ ಯಾವುವೂ ಇರುವುದಿಲ್ಲ. ಖುಲ್ಲಂ ಖುಲ್ಲಾ ಮಾತಾಡುವುದಕ್ಕೆ ಬಹಳ ಸೂಕ್ತ ಜಾಗ. ಮನಸಿನ ಆಳದ್ದು, ತೀರ ಒಳಗಿನದು ಜಗುಲಿಯಲ್ಲಿ ಕೂತು ಮಾತಾನಾಡುವಾಗ ಅನಾಯಾಸವಾಗಿ ಹೊರಗೆ ಬಂದು ಬಿಡುತ್ತದೆ. ಅಥವಾ ಒಬ್ಬರೇ ಕೂತು ಯೋಚಿಸಲಿಕ್ಕೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೂ ಈ ಜಗುಲಿ, ಆ ಜಗುಲಿ ಎಲ್ಲ ಜಗುಲಿಗಳೂ ಪ್ರಶಸ್ತ . ಎಲ್ಲರ ಬದುಕಿನಲ್ಲಿ ಏನೋ ಒಂದು ತೀವ್ರವಾದದ್ದು ನಡೀತಾ ಇರುವಾಗ ಹೀಗೆ ಜಗುಲಿ ಮೇಲೆ ನಾವೆಲ್ಲ ಕೂತು ಮಾತಾಡುತ್ತಿರುವುದು ಹಿತ ಅನ್ನಿಸುತ್ತಾ ಇದೆ.
ದಿನ ಬೆಳಗಾದರೆ ಅಳತೆಕೋಲು ಅಥವಾ ಸ್ಕೇಲ್ ಹಿಡಿದುಕೊಂಡು ಓಡಾಡುವವರು ನಾವು. ನಮ್ಮ ಅಳತೆ ಪಕ್ಕದವರದ್ದು ಹೇಗೆ ,ಎದುರು ಸಿಕ್ಕವರದ್ದು ಹೇಗೆ ,ಮತ್ತೊಬ್ಬರದು ಏನು, ಹೇಗೆ ಎಂದು ಅಳೆಯುತ್ತಿರುತ್ತದೆ. ನಮ್ಮ ಅವರ ಇವರ ಹುದ್ದೆ, ಕೌಶಲ ಪ್ರತಿಭೆ, ಜೀವನ ಶೈಲಿ, ಸಂಸಾರ, ಸುಖ ದುಃಖ, ಕಲೆ, ಸಾಹಿತ್ಯ, ಆರೋಗ್ಯ ಎಲ್ಲವೂ ನಿರಂತರವಾಗಿ ನಮ್ಮ ನಮ್ಮ ಕೈಯ ಅಳತೆಕೋಲಿನ ಅಳತೆಯ ವಸ್ತುಗಳು . ಬೆಳಗಿಂದ ರಾತ್ರಿಯ ತನಕ, ಹುಟ್ಟಿನಿಂದ ಸಾವಿನ ತನಕ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಳತೆ ಪ್ರಕ್ರಿಯೆಯಲ್ಲಿ ತಲ್ಲೀನರು ನಾವು. ಈಗಿನ ಲಾಕ್ ಡೌನ್, ಕೊರೊನ ದಾಳಿ ಸ್ವಲ್ಪ ಮಟ್ಟಿಗೆ ನಮ್ಮ ನಿಜವಾದ ಅಳತೆಯನ್ನು ನಾವಿದ್ದಲ್ಲಿಗೆ ತಂದು ಒಪ್ಪಿಸುವ ಕೆಲಸ ಮಾಡಿದೆ. ಈ ಕಾಲಕ್ಕೆ ಆಗಬಾರದ ಅನಾಹುತಗಳು, ಅನಾವಶ್ಯಕ ಸಾವುಗಳು, ಸಂಕಟಗಳು ಸುಮಾರು ಆಗಿದ್ದರೂ ಅವುಗಳ ಎಡೆಯಲ್ಲಿ ನಮ್ಮನ್ನು, ನಮ್ಮ ಸುತ್ತಮುತ್ತಲನ್ನು ಅರಿಯುವ, ತಿಳಿಯುವ ಅವಕಾಶ ಲಾಕ್ ಡೌನ್ ಮಾಡಿಕೊಟ್ಟಿದೆ.
ಮೊನ್ನೆ ಮೊನ್ನೆ ಮೈಸೂರಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೀವು ಕೇಳಿರಬಹುದು. ಅಲ್ಲಿನ ಒಂದು ಸಂಸ್ಥೆ ಕಳೆದ ಒಂದು ತಿಂಗಳಿಂದ ಈ ಕಾಲಕ್ಕೆ ಆಶ್ರಯ ಕಳಕೊಂಡವರಿಗೆ, ಹಸಿದ ಕಾರ್ಮಿಕರಿಗೆ, ಊಟ ನೀಡುವ ವ್ಯವಸ್ಥೆ ಮಾಡಿದೆ. ಇಂತಹ ಅನ್ನದಾನ ಶಿಬಿರಕ್ಕೆ ಕಮಲಮ್ಮ ಎನ್ನುವ ಎಪ್ಪತ್ತು ಪ್ರಾಯದ ಮಹಿಳೆ ನಡೆದು ಬಂದಳು. ಇವಳನ್ನು ನೋಡಿದ ಸಂಘಟಕರು ಈಕೆ ಸಹ ಊಟಕ್ಕೆ ಬಂದಿರಬೇಕು ಅಂದುಕೊಂಡರು. ಅಲ್ಲಿಗೆ ಬಂದ ಈಕೆ ಶಿಬಿರದ ಆಯೋಜಕರನ್ನು ಕಂಡು ಅವರಿಗೆ ಐದುನೂರು ರೊಪಾಯಿಗಳನ್ನು ಕೊಟ್ಟು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸಣ್ಣ ದೇಣಿಗೆ ತೆಗೆದುಕೊಳ್ಳಿ ಎಂದಳು. ತಿಂಗಳಿಗೆ ಆರುನೂರು ರೊಪಾಯಿಯ ಪಿಂಚಣಿ ಪಡೆಯುವವಳು ಕಮಲಮ್ಮ, ಆಕೆಯ ವಯಸ್ಸಿನ ಕಾರಣದಿಂದ ಮಾಡುತ್ತಿದ್ದ ಮನೆಗೆಲಸವೂ ತಪ್ಪಿಹೋಗಿತ್ತು . ಸಂಘಟಕರೂ ಮೊದಲಿಗೆ ಬೇಡವೆಂದರೂ ಇಷ್ಟು ಉದಾತ್ತ ಯೋಚನೆಯ ಸರಳ ಜೀವಿಗೆ ಗೌರವ ಸೂಚಕವಾಗಿ ಹಣವನ್ನು ಸ್ವೀಕರಿಸಿದರು. ಕೋವಿಡ್ ಸಂಧಿಗ್ಧದ ಈ ಕಾಲದಲ್ಲಿ ಹಲವು ದಾನಿಗಳು ಜಗತ್ತಿನ ಮೂಲೆಮೂಲೆಯಲ್ಲಿ ಹಣದ ದೇಣಿಗೆ ನೀಡಿದ್ದಾರೆ. ಟಾಟಾ ,ಪ್ರೇಂಜಿ ,ಗೇಟ್ಸ್ ಇನ್ನಿತರ ಉದ್ಯಮಿಗಳು ನಮ್ಮ ಊಹೆಗೆ ಮೀರಿದ ಮೊತ್ತವನ್ನು ದಾನ ಮಾಡಿದ್ದಾರೆ . ಆದರೆ ಈ ಜಗತ್ತಿನ ಮನುಷ್ಯರನ್ನೆಲ್ಲ ಒಂದೆಡೆ ಅವರ ದುಡಿಮೆಯ ಆಧಾರದ ಮೇಲೆ ಸಾಲಾಗಿ ನಿಲ್ಲಿಸಿದರೆ ಆ ಸಾಲಿನ ಕೊನೆಯ ಕೆಲವು ಜನರ ಪೈಕಿ ಒಬ್ಬಳಾಗಿ ಕಾಣುವ ಕಮಲಮ್ಮ ಕೊಟ್ಟ ದೇಣಿಗೆ ಮುಖಬೆಲೆಯಲ್ಲಿ ಧೂಳಿನ ಕಣದಂತೆ, ದೊಡ್ಡ ಮೊತ್ತಗಳ ದೇಣಿಗೆಯ ಎದುರಿಗೆ ಕಂಡರೂ ಮಾನವೀಯ ಮೌಲ್ಯದ ನೆಲೆಯಲ್ಲಿ ಅತ್ಯಂತ ಶ್ರೇಷ್ಠವಾದುದು. ಕನಿಷ್ಠ ಜೀವನಶೈಲಿ ದುಡಿಮೆಯಲ್ಲಿರುವ ವ್ಯಕ್ತಿಯ ಗರಿಷ್ಠ ಸಹಾಯ, ಸಹಕಾರ, ದಾನ ಮತ್ತು ಹೃದಯ ವೈಶಾಲ್ಯತೆಯ ಉದಾಹರಣೆ ಇದು. ಇಂತಹ ನೂರಾರು ಸೂಕ್ಷ್ಮ ಸಂವೇದನಾಶೀಲ ಕತೆಗಳು ಈ ಕಾಲಕ್ಕೆ ಜಗತ್ತಿನ ಮೂಲೆಮೂಲೆಯಲ್ಲಿ ಕಂಡುಕೇಳಿಬರುತ್ತಿವೆ . ಮತ್ತೆ ಇವೇ ನಮ್ಮನ್ನು ಸರಿಯಾಗಿ ಅಳೆಯಲಿಕ್ಕೆ ತೂಗಲಿಕ್ಕೆ ಸಹಾಯ ಮಾಡುತ್ತಿವೆ . ತನ್ನೊಳಗೆ ಇಂತಹ ಹಲವು ಕಥೆ, ವ್ಯಥೆ, ಕತೆಯ ವ್ಯಥೆ ,ವ್ಯಥೆಯ ಕತೆಗಳನ್ನು ತುಂಬಿಕೊಂಡ ಲಾಕ್ ಡೌನ್ ಮುಂದೊಂದು ದಿನ ಪೂರ್ತಿಯಾಗಿ ಮುಗಿಯಬಹುದು. ಆದರೆ ಈ ಸಮಯ ನಮಗೆ ಕೊಟ್ಟ ಕೊಡುತ್ತಿರುವ ಸ್ಪೂರ್ತಿದಾಯಕ ಘಟನೆಗಳು ಸ್ವಅವಲೋಕನದ ಅವಕಾಶ ಮುಂದುವರಿಯುತ್ತಲೇ ಇರಬೇಕಾಗಿದೆ . ನಿತ್ಯವೂ ಮನೆಯಲ್ಲಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳದೆ ಹೊರಬೀಳದ ನಾವು ಹೀಗೆ ನಮಗೆ ಲಭ್ಯ ಆಗಿರುವ ಮಾನವೀಯತೆಯ ಮನುಷ್ಯತ್ವದ ಕನ್ನಡಿಗಳಲ್ಲಿ ದಿನವೂ ನಮ್ಮನ್ನು ನೋಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಲಾಕ್ ಡೌನ್ ಕಾಲ ನಮ್ಮ ಸರಿಯಾದ ನಿಜವಾದ ಅಳತೆಗಳನ್ನು ನಮಗೆ ಮುಟ್ಟಿಸುವ ಕನ್ನಡಿಯಾಗಲಿ ಎನ್ನುವ ಹಾರೈಕೆಯೊಂದಿಗೆ …. ಅವಕಾಶ ಆಲಿಸುವಿಕೆಗೆ ವಂದನೆಗಳು.
ಯೋಗೀಂದ್ರ ಮರವಂತೆ
Lock down ಕರಾಮತ್ತು

ಪ್ರಪಂಚದ ಮೂಲೆಯೊಂದರಿಂದ ಕೊರೋನಾ ಸುದ್ದಿ ಕೇಳಿ ಬಂತು
ನಮಗ್ಯಾಕೆ ಅದರ ಉಸಾಬರಿಯಂದು ಮನವಂತು
ನೋಡುತ್ತಿದ್ದಂತೆಯೇ ಊರು ಕೇರಿ ಬೀದಿಯವರು ಹರಡಿತು
ಹೇಗೋಎಂತು ಕೊರೋನಾ ಬಂದೆ ಬಂತು ಜೊತೆಗೆ lockdownನು ತಂತು!
ಎಲ್ಲೆಲ್ಲೂ Lock downನದೆ ಕರಾಮತ್ತು
ಇದರರಿಂದ ಬಿತ್ತು ಎಲ್ಲರ ಸ್ವಾತಂತ್ರ್ಯಕ್ಕೂ ಕುತ್ತು
ಸೃಷ್ಟಿಯಾಯ್ತು ಅಂತರ್ಜಾಲದ ಸುತ್ತ ಸುತ್ತುವ ಮನೆಯಂಬ ಹೊಸಜಗತ್ತು
ಇಲ್ಲಿ ದಿನ ವಾರಗಳೇ ತಿಳಿಯದೆ ಕಳೆದಿದೆ ಹೊತ್ತು
ಅಮ್ಮನಿಗೆ ಅಡುಗೆಯ ಚಿಂತೆ
ನಿಲ್ಲದ ಅಪ್ಪನ ಮೀಟಿಂಗ್ಗಳ ಘಂಟೆ
ಬಗೆಹರಿಯದ ಮಕ್ಕಳ ತುಂಟಾಟದ ತಂಟೆ
ಅಜ್ಜ ಅಜ್ಜಿಯರ ಪ್ರತ್ಯೇಕತೆಗೆ ವಿಡಿಯೋ ಕಾಲ್ ಒಂದೇ ಸಂಗಾತಿಯಂತೆ
ಜೊತೆಯಲ್ಲಿದ್ದರು ಇಲ್ಲದ ಹಾಗೆ ಕಳೆದ ಸಮಯವೇ ಹೆಚ್ಚು
ಒಟ್ಟಿಗೆ ಬೆರೆಯಲು ಸಾವಕಾಶವಿದ್ದರೂ social media ಒಡನಾಟವೇಅಚ್ಚುಮೆಚ್ಚು
ಹಿಂದೆಂದೂ ಇರದ ಮುಂದೆಂದೂ ಬಾರದ ಪರಿವಾರದೊಂದಿಗಿನ ಸುಂದರ ಕ್ಷಣಗಳಿವು
ಎಂದೆಂದೂ ಚಂದದ ಸವಿ ನೆನಪುಗಳನ್ನಾಗಿಸುವವರು ನಾವು
ಹಿಂತಿರುಗಿ ನೋಡಲು ಆ ಹಳೆಯ ಬದುಕಿಗೆ ಮರಳಲು ಹಾತೊರೆದಿದೆಮನ
ಭವಿಷ್ಯದ ಅನಿಶ್ಚಿತತೆಗೆ ಕಳವಳಗೊಂಡು ದೂಡುವಂತಾಗಿದೆ ದಿನ
ಏನೇ ಆದರೂ ಪರಿವಾರದ ಒಗ್ಗಟ್ಟು ನೀಡಿಹುದು ಎದುರಿಸುವಧೈರ್ಯವನ್ನ
ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ ನಿರೀಕ್ಷಿಸುವ ಹೊಸಬದುಕನ್ನ.
ರಮ್ಯ ಭಾದ್ರಿ
ಯೋಗೀಂದ್ರ ಮರವಂತೆಯವರ ” ನಮ್ಮ ಅಳತೆ ತಿಳಿಸುತ್ತಿರುವ ಲಾಕ್ ಡೌನ್” ನಿಜಕ್ಕೂ ಒಂದಳತೆಯ ಯೋಚನೆಗೆ ತಳ್ಳುತ್ತದೆ .ಶೀರ್ಷೀಕೆಯಿಂದಲೇ ಶುರು ಆ ಯೋಚನೆ.ನಿಜ ನಮ್ಮೊಳಗನ್ನ ನಾವೇ ನಮ್ಮ ಕಣ್ಣ,ಮನದ ಕಣ್ಣ ಕನ್ನಡಿಯಿಂದ ಅಳೆಯಲು ಈಗೊಂಥರ ವಿರಾಮದ ವೇಳೆ ಸಿಕ್ಕಿದೆ ಈ ಸಮಯದ ಅಭಾವದ ಜೀವನದಲ್ಲಿ. ಬರೀ ಅವರಿವರನ್ನೇ ಅಳೆವ ಜೀವ ಈಗ ತನ್ನೊಳಗನ್ನೇ ಅಳೆಯುತ್ತಿದೆ ಯೋಚನೆಯ ಜಗುಲಿಯೇರಿ.ಹೊರ ಜಗುಲಿಯಂತೇ ಅದೂ ಖುಲ್ಲಂ ಖುಲ್ಲಾ.ಹೊರ ಜಗುಲಿಗೆ ಹೋಗೋದು ಹೇಗೆ?ಲಾಕ್ ಡೌನ್!!
ಯೋಗೀಂದ್ರ ಅವರು ಹೇಳುವಂತೆ ಮೆಲ್ಲಗೆ ನಮ್ಮೊಳಗಣ ಮಾನವತೆ ಕಣ್ತೆರೆಯುತ್ತಿದೆಯೋ ಏನೋ! ನಾವೇ ನಮಗೆ ಹಾಕಿಕೊಂಡ ಪರದೆ ಸರಿಯುತ್ತಿರುವಂತೆ. ತುಂಬ ಯೋಚನೆಗಳ ಹುಟ್ಟು ಹಾಕುವ ಚಿಂತನಶೀಲ ಬರಹ.ಅಭಿನಂದನೆಗಳು ಯೋಗೀಂದ್ರ ಮರವಂತೆಯವರೇ.
ರಮ್ಯಾ ಭಾದ್ರಿಯವರ ಕವನವೂ ತುಂಬ ಸುಂದರ.ಅಲ್ಲೋ ಇಲ್ಲೋ ಎರಗುತ್ತಿರುವ ಕೋರೋನಾ ನಮ್ಮ ಬಾಗಿಲಿಗೇ ಬಂದು ಒರಗಿದಾಗಿನ ಕಠಿಣ ಪರಿಸ್ಥಿತಿಯನ್ನೂ ತಿಳಿಗೊಳಿಸುವ ಸುಂದರ ಆಶಯ ತುಂಬಿದ ಕವನ.ಅಭಿನಂದನೆಗಳು ರಮ್ಯಾ ಅವರೇ.
ಸರೋಜಿನಿ ಪಡಸಲಗಿ
LikeLiked by 1 person
Yogindra Maravanthe says
ಜಗುಲಿ ಪ್ರೀತಿ ಉಪಚಾರಗಳಿಗೆ ವಂದನೆಗಳು.
LikeLike
Laasya Basavarajappa says
ಲೇಖನ ಮತ್ತು ಕವಿತೆ ಎರಡೂ ಬಹಳ ಸಮಯೋಚಿತ, ಅರ್ಥಪೂರ್ಣ.
LikeLike
ಯೋಗಿಂದ್ರ ಅವರೇ ನಿಮ್ಮ ಚಿಂತನೆಗಳು ಆಳವಾಗಿವೆ. ನಮ್ಮ ಜಗುಲಿ ಒಂದು ವಚನಕಾರರ ಅನುಭವ ಮಂಟಪದಂತೆ. ಇಲ್ಲಿ ಎಲ್ಲರು ತಮ್ಮ ಅನುಭವಗಳನನ್ನು ಹಂಚಿಕೊಂಡು ನಾವು ಸ್ವಲ್ಪ ಮಟ್ಟಿಗೆ ಅನುಭಾವಿಗಳಾಗಲು ಸಹಾಯವಾಗಿದೆ. ಒಂದು ಸಣ್ಣ ಹರಟೆ ಅಥವಾ ಪ್ರೌಢ ಸಂವಾದ ನಮ್ಮ ಮನಸ್ಸಿನ ಆರೋಗ್ಯಕ್ಕೆ ಅವಶ್ಯ
‘ ದಿನ ಬೆಳಗಾದರೆ ಅಳತೆಕೋಲು ಅಥವಾ ಸ್ಕೇಲ್ ಹಿಡಿದುಕೊಂಡು ಓಡಾಡುವವರು ನಾವು’ ಎಂಬ ನಿಮ್ಮ ಮಾತು ಸತ್ಯ. ಈ ಮಾತಿನಲ್ಲಿ ಜಗತ್ತಿನ ರೀತಿ ನೀತಿಗಳನ್ನು ಸಂಕ್ಷಿಪ್ತವಾಗಿ ಸ್ಪುಟವಾಗಿ ಸೆರೆ ಹಿಡಿದ್ದಿದ್ದೀರಿ. ನಿಮ್ಮ ಕನ್ನಡಿ analogy ಕೂಡ ಸಮಂಜಸವಾಗಿದೆ. ನೀವು ಪ್ರಸ್ತಾಪಿಸಿರುವಂತೆ “ಮನುಷ್ಯತ್ವದ ಕನ್ನಡಿಗಳಲ್ಲಿ ದಿನವೂ ನಮ್ಮನ್ನು ನೋಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗಿದೆ” . ಈ ವಿಚಾರ ಕೂಡ ಹಲವಾರು Reflective ಚಿಂತನೆಗಳಿಗೆ ಅನುವುಮಾಡಿಕೊಟ್ಟಿದೆ
ರಮ್ಯಾ ಅವರ ಕವಿತೆ ಕರೋನ ಒದಗಿಸಿದ ಅನಾನುಕೂಲದೊಂದಿಗೆ ಮೊದಲುಗೊಂಡು ಅಲ್ಲಿ ಉಂಟಾದ ಬೇಸರವನ್ನು ಒಳಗೊಂಡು ಒಂದು ಭರವಸೆಯ ಎಳೆಯಲ್ಲಿ
“ಏನೇ ಆದರೂ ಪರಿವಾರದ ಒಗ್ಗಟ್ಟು ನೀಡಿಹುದು ಎದುರಿಸುವಧೈರ್ಯವನ್ನ
ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ ನಿರೀಕ್ಷಿಸುವ ಹೊಸಬದುಕನ್ನ”
ಎಂದು ಕೊನೆಗೊಳ್ಳುತ್ತದೆ . ಮನುಷ್ಯ ಬದುಕುವುದೇ ಆ ನಂಬಿಕೆಗಳಲ್ಲಿ!
LikeLiked by 1 person
ಅನಿವಾಸಿಯ ಅನೇಕ ಸದಸ್ಯರನ್ನು ಅವರ ಬರಹಗಳಿಂದ ಪರಿಚಯವಿತ್ತಾದರು ಅವರನ್ನು ನೋಡಿ ಅವರ ಮಾತುಗಳನ್ನು ಕೇಳುವ ಸಂದರ್ಭ ಕೂಡಿ ಬಂದಿರಲಿಲ್ಲ.
ಈ ಜಗುಲಿ ಇದರ ಕೊರತೆಯನ್ನು ನೀಗಿಸಿತು ಅನ್ನುವುದು ಖುಷಿಯ ವಿಷಯ.
ಅಷ್ಟಲ್ಲದೇ ನಿಸಾರ್ ಅವರ ಕವನ ವಾಚನ, ಗಾಯನ ಎಲ್ಲವೂ ಈ-ಜಗುಲಿಯಲ್ಲಿ ಜೀವ ಕಳೆ ಪಡೆದಿತ್ತು,.
ಲಾಕ್ ಡೌನ್ ಕುರಿತಾದ ಅನಿಸಿಕೆಗಳನ್ನು ಅನೇಕರು ಹಂಚಿಕೊಂಡರು. ವಿಶೇಷವಾಗಿ ಯೋಗೀಂದ್ರ ಅವರ ವಿಚಾರಧಾರೆಗಳು , ಅದರಲ್ಲಿ ಅಳತೆಗೋಲಿನ ಸಂಗತಿ ಗಮನ ಸೆಳೆದಿತ್ತು. ‘ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ’ ಎನ್ನುವ ಜಿ.ಎಸ್.ಎಸ್ ಅವರ ಸಾಲುಗಳನ್ನು ನೆನಪಿಸಿತ್ತು.
ರಮ್ಯಾ ಭಾದ್ರಿ ಅವರ ಲಾಕ್ಡೌನ್ ಕರಾಮತ್ತಿನ ಕವನದಲ್ಲಿ ತಮ್ಮ ಬರಹದ ಕರಾಮತ್ತನ್ನು ತೋರಿಸಿದ್ದಾರೆ.
ವಂದನೆಗಳು
LikeLiked by 1 person
ಯೋಗೀಂದ್ರ ಮರವಂತೆಯವರು ಮೊದಲು ಲಘುಹಾಸ್ಯದಿಂದ ’ಕೈದಿಗಳ ಸಮ್ಮೇಳನ’ದಂತಿದ್ದ ಈ ಜಗುಲಿಗೆ ”ವೈವಾ’ ಪರೀಕ್ಷೆಗೆ ಹೋಗುವವರಂತೆ ಬಂದರೂ, ತಾವು ತಂದ ಅಳತೆಕೋಲು (ಸ್ಕೇಲ್) ಮತ್ತು ಕನ್ನಡಿಯಿಂದ ಆತ್ಮಾವವಲೋಕನಕ್ಕೆ ಅವಕಾಶ ಮಾಡಿಸಿ ಗಾಂಭೀರ್ಯವನ್ನು ಮತ್ತು ಜಗುಲಿಯ ’ಹರಟೆ’ಗೆ ’ವಜನ’ವನ್ನು ತಂದಿದ್ದಾರೆ. ಇನ್ನು ಮೇಲೆ ಜಗಲಿಯ ಗೋಡೆಯಮೇಲೊಂದು ಮೊಳೆ ಹೊಡೆದು ಕನ್ನಡಿಯನ್ನು ತೂಗಹಾಕಬೇಕಾಗಿದೆ -ಬಂದ ಮೇಲಾದರೂ ಮುಖವನ್ನು ನೋಡಿಕೊಳ್ಳಲು!
ಜಗುಲಿಯಿಂದ ಹೊರಬಿದ್ದಮೇಲೆ ಬರೆದ ರಮ್ಯಾ ಭಾದ್ರಿಯವರ ಅರ್ಥಪೂರ್ಣ, ಪ್ರಾಸಭರಿತ ಕವನದಲ್ಲಿ ” ಜೊತೆಯಲ್ಲಿದ್ದರು ಇಲ್ಲದ ಹಾಗೆ” ಅನ್ನುವ ಸತ್ಯದ ಮಾತು ಚರ್ಚೆಯ ಪೂರ್ವಾರ್ಧದ ’ನಿಸಾರ್ ಸ್ಮರಣೆ’ ಕವಿಯ ”ನಿಮ್ಮೊಳಗಿದ್ದೂ ನಿಮ್ಮಂತಾಗದೇ” ಮಾತುಗಳನ್ನು ನೆನಪಿಸಿತು. ಅದರ ಮುಂದಿನ ಸಾಲಿನಲ್ಲಿಯೂ ಒಂದು ಸಮಯೋಚಿತ ಎಚ್ಚರಿಕೆ ಕೊಟ್ಟಿದ್ದಾರೆ. ಇಬ್ಬರಿಗೂ ಅಭಿನಂದನೆಗಳು.
ಮತ್ತೊಮ್ಮೆ ಈ-ಜಗಲಿಯಲ್ಲಿ ಅಥವಾ ಇನ್ನೆಲ್ಲಿಯಾದರೂ ಭೇಟಿಯಾಗುವಾ.
ಶ್ರೀವತ್ಸ ದೇಸಾಯಿ
LikeLike
‘ಮನಸಿನ ಆಳದ್ದು, ತೀರ ಒಳಗಿನದು ಜಗುಲಿಯಲ್ಲಿ ಕೂತು ಮಾತಾನಾಡುವಾಗ ಅನಾಯಾಸವಾಗಿ ಹೊರಗೆ ಬಂದು ಬಿಡುತ್ತದೆ. ಅಥವಾ ಒಬ್ಬರೇ ಕೂತು ಯೋಚಿಸಲಿಕ್ಕೂ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೂ ಈ ಜಗುಲಿ, ಆ ಜಗುಲಿ ಎಲ್ಲ ಜಗುಲಿಗಳೂ ಪ್ರಶಸ್ತ…’ ಮಾರ್ಮಿಕವಾದ ಮಾತುಗಳು, ಯೋಗೀಂದ್ರ ಅವರೇ. ಈ-ಜಗುಲಿಯ ಬಗೆಗೆ ಲಾಕ್ಡೌನ್ ಬಗೆಗೆ ಕೆಲವೇ ಮಾತುಗಳಲ್ಲಿ ಗಹನವಾದ ಲೇಖನ.
ರಮ್ಯಾ ಭಾದ್ರಿಯವರ ಪ್ರಾಸಭರಿತ ಕವನ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಲಾಕ್ಢೌನ್ ತಂದಿರುವ ತೊಂದರೆಗಳನ್ನು ಸಮಯವನ್ನು ಮನೆಯಿಂದ ಮಾಡುವ ಕೆಲಸವನ್ನು ಸಮೀಕರಿಸಿದೆ.
– ಕೇಶವ
LikeLiked by 1 person