ಪರಿಸರದ ಗೀತೆ

ಯುನ್ನೈಟೆಡ್ ನೇಶನ್(United Nations) ಪ್ರತಿವರ್ಷ ” ವಿಶ್ವ ಪರಿಸರ ದಿನ” ವನ್ನು ಜೂನ್ ೫ ನೇ ತಾರೀಖು ೧೯೭೪ ರಿ೦ದ ಆಚರಿಸುತ್ತಿದೆ. ಇತ್ತೀಚಿನ ದಶಕಗಳಲ್ಲಿ ಹೆಚ್ಚಾಗುತ್ತಿರುವ ಜಲ ಮತ್ತು ಭೂಮಾಲಿನ್ಯ, ಜಾಗತಿಕ ತಾಪಮಾನದ ಏರಿಕೆ, ಪ್ರಾಣಿಗಳ ಮತ್ತು ಪ್ರಕೃತಿಯ ಮೇಲೆ ಮಾನವನಿ೦ದಾಗುತ್ತಿರುವ ದುಷ್ಪರಿಣಾಮಗಳು ಇದರೆಲ್ಲದರ ಬಗ್ಗೆ ಪ್ರಪ೦ಚದಾದ್ಯ೦ತ ಜಾಗೃತಿಯನ್ನು ಮೂಡಿಸುವುದು ಈ ಆಚರಣೆಯ ಉದ್ದೇಶ. ಬಹಳಷ್ಟು ಸ೦ಘ, ಸ೦ಸ್ಥೆಗಳು ಈ ವಿಷಯಯನ್ನು ನಮ್ಮೆಲ್ಲರ ಮತ್ತು ಸರ್ಕಾರಗಳ ಗಮನಕ್ಕೆ ತರಲು ಅವಿರತವಾಗಿ ದುಡಿಯುತ್ತಿವೆ. ನಾವುಗಳೆಲ್ಲರೂ ನಮ್ಮ ಈ ಸು೦ದರ ವಿಶ್ವಕ್ಕಾದ ಮಾಲಿನ್ಯವನ್ನು ಹತ್ತಿಕ್ಕಲು, ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಲು ಸಜ್ಜಾಗಿದ್ದೇವೆ೦ದು ನನ್ನ ಭಾವನೆ. ಅದು ಮನೆಯಲ್ಲಿ ಕಸ ವಿ೦ಗಡಿಸುವುದರಿ೦ದ ಶುರುವಾಗಿ, ವಿದ್ಯುತ್ ದೀಪ ಆರಿಸುವುದರಿ೦ದ ವಿದ್ಯತ್ ವಾಹನಗಳನ್ನು ಉಪಯೋಗಿಸುವ ತನಕ ಬೆಳೆಯುತ್ತಿರುವುದು ಸ೦ತಸದ ವಿಷಯ. ಈ ಪ್ರಯತ್ನ ನಮ್ಮ ಮು೦ದಿನ ಪೀಳಿಗೆಗೆ ನ್ಯಾಯವನ್ನು ಸಲ್ಲಿಸುವ ಜವಾಬ್ದಾರಿ ಅಷ್ಟೇ ಅಲ್ಲ, ನಾವುಗಳು ನೋಡಿ ಬೆಳೆದ, ನಮ್ಮನ್ನು ನಲಿಸಿದ ಪ್ರಕೃತಿ, ಪ್ರಾಣಿಗಳಿಗೆ ನಾವು ಸಲ್ಲಿಸಬೇಕಾಗಿರುವ ಋಣ.
ಲ೦ಡನ್ ಎಕ್ಟಿ೦ಕ್ಷನ್ ರೆಬೆಲ್ಲಿಯನ್ (Extinction Rebellion)ಸ೦ಘದ ಮುಷ್ಕರ, ಸ್ವೀಡನ್ ದೇಶದ ಬಾಲೆ ಗ್ರೆಟಾ ತುನ್ಬರ್ಗ್ ( Greta Thunberg) ಪ್ರಕೃತಿ ಮಾಲಿನ್ಯವನ್ನು ತಡೆಗಟ್ಟಲು ಮಾಡಿದ ಕ್ರಾ೦ತಿ ಇವೆಲ್ಲ ಪ್ರಕೃತಿಯನ್ನು ಉಳಿಸಲು ಮಾನವ ಮಾಡುತ್ತಿರುವ ವಿಧವಿಧದ ಹೋರಾಟವನ್ನು ನೆನಪಿಸುತ್ತವೆ.
“People must feel that the natural world is important and valuable and beautiful and wonderful and an amazement and a pleasure” – David Attenbrough
ಡಾ ಪ್ರಸಾದ್ ರವರು ಈ ವಾರ ತಮ್ಮ ಪರಿಸರ ಗೀತೆಯಲ್ಲಿ, ನೂರಾರು ವರ್ಷಗಳು ಬೆಳೆದು, ತನ್ನ ಬೇರನ್ನು ಭದ್ರವಾಗಿ ನಿಲ್ಲಿಸಿ, ಬಿಸಿಲು ಮಳೆ ಗಾಳಿಗಂಜದೆ ನಿಂತು ಉಸಿರು, ಹೂವು, ಹಣ್ಣು ಆಶ್ರಯವನ್ನು ಎಡಬಿಡದೆ ನಮಗಿತ್ತು, ನಮ್ಮನ್ನು ಸಲಹುವ ಮರಗಳನ್ನು ಭಾವನಾತ್ಮಕವಾಗಿ ಬಣ್ಣಿಸಿರುವುದಲ್ಲದೆ, ತನ್ನ ಸ್ವಾರ್ಥಕ್ಕಾಗಿ ಈ ಮರಗಳನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡುವ ಮಾನವನ ಕ್ರೂರತೆಗೆ  ಕಾನನವೆ ಕಂಬನಿ ಮಿಡಿದ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.
ಈ ಪರಿಸರ ಗೀತೆ, ನಮ್ಮ ನಿಮ್ಮ ಮೋಹಕ, ಅಧ್ಬುತ, ಶಾ೦ತಿಯ ಬೀಡಾದ ಈ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಆದ್ಯ ಕರ್ತವ್ಯವನ್ನು ಮತ್ತೊಮ್ಮೆ ನಮಗೆ ಮನವರಿಕೆ ಮಾಡಿಕೊಟ್ಟಿದೆ. ಪರಿಸರ ದಿನಾಚರಣೆಗೆ ಸೂಕ್ತವಾದ ಗೌರವ ಈ ಕವಿತೆ -ಸಂ

ಪರಿಸರದ ಗೀತೆ

ಮರಗಳು, ಮರಗಳು, ಮರಗಳು
ಎಲ್ಲೆಡೆ ಹಸುರಿನ ಮರಗಳು
ಗಿರಿಯನು ತಬ್ಬಿದ ತರುಗಳು
ಕಣಿವೆಯ ತುಂಬಿದ ವನಗಳು

ಉಸಿರನ್ನೀಯುವ ಮರಗಳು
ಸಿಹಿ ಕಹಿಯನ್ನುಣಿಸುವ ಮರಗಳು
ಸ್ಥಾವರ ಹಸುರಿನ ಸಂತಾನಗಳು
ನಿಶ್ಚಲ ಮೌನ ತಪಸ್ವಿಗಳು

ಹೂವನು ತೊಟ್ಟು ಮೆರೆಯುವ ಮರಗಳು
ಹಣ್ಣನು ಕೊಟ್ಟು ಹರಸುವ ಮರಗಳು
ಋತು ಋತುವಿಗು ಬದಲಾಗುವ ಮರಗಳು
ಸಾರ್ಥಕ ಪರಾರ್ಥಕ ಜೀವಿಗಳು

ಬಂದೇ ಬಂದ ಸ್ವಾರ್ಥ ಮಾನವ
ಕೊಡಲಿಯ ಹಿಡಿದ ಧೂರ್ತ ದಾನವ
ಕೊಚ್ಚಿದ, ಚಚ್ಚಿದ ಮರಗಳ ಬುಡವ
ಸ್ತಬ್ಧವಾಯಿತು ಕಾನನ ಕಲರವ

ಉರುಳುತ ಬಿದ್ದವು ಮರಗಳು
ಕಂಬನಿಗರೆದವು ಮಳೆ ಹನಿಗಳು
ನಿಡುಸುಯ್ದವು ಕಾನನ ಸ್ವರಗಳು
ವಿಕಾರ ವಿನಾಶದ ಚಿತ್ತಾರಗಳು

ಕಾಡಿಗೆ ಹಚ್ಚಿದ ಬೆಂಕಿಯ ಕಿಚ್ಚು
ತಾಯಿಯ ಬೆತ್ತಲೆಗೊಳಿಸುವ ಹುಚ್ಚು
ಅಂದಿನ ಸುಂದರ ಸಮೃದ್ಧಿಯ ಕಾಡು
ಇಂದಿನ ದಾರುಣ ಸುಡುಗಾಡು

ಕುಗ್ಗಿವೆ, ತಗ್ಗಿವೆ ಹಸುರಿನ ನೆಲೆಗಳು
ಬತ್ತಿವೆ ನದಿ ಹೊಳೆ ಕೆರೆಗಳು
ಪ್ರಗತಿಯ ಹೆಸರಲಿ ವಿಶ್ವ ವಿನಾಶ
ಬಿಸಿಲು ಮಳೆಗಳ ತೀವ್ರ ಆಕ್ರೋಶ

ಬನ್ನಿರಿ ಚಿಣ್ಣರೆ ಛಲವನು ಹಿಡಿದು
ಹಸುರಿನ ಕ್ರಾಂತಿಯು ನಡೆಯಲಿ ಇಂದು
ತೊಲಗಲಿ ಸ್ವಾರ್ಥ ಪ್ರಲೋಭಗಳು
ಚಿಮ್ಮಲಿ ಹಸುರಿನ ಸಸಿಗಳು

ನಾಳಿನ ನಾಡಿದು ನಿಮ್ಮಯದು
ಇದನುಳಿಸುವ ಹೊಣೆ ನಮ್ಮೆಲ್ಲರದು
ಪರಿಸರ ಪ್ರೇಮವ ಬೆಳೆಸೋಣ
ಮರಗಳ ಹಸಿರನು ಉಳಿಸೋಣ

ಡಾ. ಜಿ. ಎಸ್. ಶಿವಪ್ರಸಾದ್ ಶೆಫೀಲ್ಡ್ , ಯು. ಕೆ .

7 thoughts on “ಪರಿಸರದ ಗೀತೆ

  1. ಪ್ರಸಾದ ಅವರ ‘ಪರಿಸರ ಗೀತೆ ’ ಭಾವಪೂರ್ಣ ಬರವಣಿಗೆ ಎಂಬುದು, ಒಂದು ರೂಪಕದಂತೆ ಮೂಡಿ ಬಂದಿದೆ ಎನ್ನಲೇಬೇಕೆನ್ನಿಸಿತು🙏💐ಈ ಗೀತೆಯಲ್ಲಿ ಭೂತ- ವರ್ತಮಾನ – ಭವಿಷ್ಯದ ಚಿತ್ರಣ ,ಅನುಕ್ರಮವಾಗಿ ಗತವೈಭವದ – ಇಂದಿನ ಧಾರುಣಿಕತೆಯ – ನಾಳೆಗಾಗಿ ಸಾಮೂಹಿಕ ಜವಾಬ್ದಾರಿಯ ಹೊಣೆಯ ಅಂಕಗಳ ಸುಂದರ ನೇಯ್ಗೆಯಂತಿವೆ;ಮನಮುಟ್ಟುವ- ತಟ್ಟುವ ಕರೆ ಖಂಡಿತಾ ಕೇಳಿಬರುತ್ತಿದೆ 🙏🙏

    Liked by 1 person

  2. ಸುಂದರ ಕವನ. ಮಗುವಿನ ಪುಟ್ಟ ಹೆಜ್ಜೆಗಳ0ತೆ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಪದಗಳ ಹಿಂದಿನ ಭಾವ ಮಾತ್ರ ಸಂಕೀರ್ಣ. ಮನ ತಟ್ಟುವ ಕವನ ನಮ್ಮನ್ನು ಎಬ್ಬಿಸಿ ನಿಲ್ಲಿಸುತ್ತಿದೆ. ವಿಶ್ವ ಪರಿಸರ ದಿನಕ್ಕೆ ರನ್ನದಂತಹ ಕವನ.
    -ರಾ೦

    Like

  3. ಸುಂದರ ಪರಿಸರಗೀತೆ
    ಚೆಂದದ ಸಾಲುಗಳು
    ಪರಿಸರ ಕಾಳಜಿಯ ಅನಿವಾರ್ಯತೆಯನ್ನು
    ಅರ್ಥವತ್ತಾಗಿ ಕಟ್ಟುಕೊಟ್ಟಿದ್ದೀರಿ.

    Liked by 1 person

  4. ಕವಿ ಜಿ ಎಸ್ ಪ್ರಸಾದರು ಈ ಪರಿಸರ ಗೀತೆಯಲ್ಲಿ ಅನೇಕ ರೂಪಕಗಳನ್ನು ಮತ್ತು ಚಂದನ್ನ ಸಾಲುಗಳನ್ನು ಕೊಟ್ಟು ಈ ವರ್ಷದ (2020) ಜಾಗತಿಕ ಪರಿಸರ ದಿನದ ’ಥೀಮ್’ ಜೈವಿಕವೈವಿಧ್ಯತೆಗೆ (biodiversity) ಚಾಲನೆ ಕೊಟ್ಟಿದ್ದಾರೆ. ಹಸಿರು ಮರಗಳಷ್ಟೇ ಅಲ್ಲ, ಪಕ್ಕಿಗಳು, ಪ್ರಾಣಿಗಳು, ಕೋರಲ್ ರೀಫ್ ಗಳನ್ನು ಸಹ ರಕ್ಷಿಸಬೇಕು. ಇತ್ತೀಚೆಗೆ ನಾವೆಲ್ಲ ಲಾಕ್ ಡೌನ್ ಮಧ್ಯದಲ್ಲಿ ವಾಹನಗಳ ಗರ್ಜನೆ ನಿಂತಾಗ ವಸಂತ ಋತುವಿನ ಹಕ್ಕಿಗಳ ಕಲರವವನ್ನು ಸ್ಪಷ್ಟವಾಗಿ ಮತ್ತು ಜೋರಾಗಿ ಕೇಳಿ ಆನಂದಿಸಿಲ್ಲವೆ? ಹವೆಯ ಮಾಲಿನ್ಯ ಕಡಿಮೆಯಾಗಿ ಪರಿಸರದ ಬಗ್ಗೆ ನಮಗೆ ಎಚ್ಚರವಾಗುತ್ತಲಿದೆ. ನಮ್ಮ ಹೊಣೆಯನ್ನು ಮರೆತಿರುವಂತೆ ಕಾಣುವ ಎಲ್ಲ ’ಚಿಣ್ಣರನ್ನು’ ಸಕಾಲಿಕವಾಗಿ ಎಚ್ಚರಿಸಿದ್ದಾರೆ. ಈ ಕವನದಲ್ಲಿಯ ಅನೇಕ ಶಕ್ತಿಶಾಲಿ ಪದಪುಂಜಗಳಾದ; ಕಾನನದ ಕಲರವ, ಅವುಗಳ ನಿಟ್ಟುಸಿರು, ’ನಿಶ್ಚಲ ಮೌನ ತಪಸ್ವಿಗಳು’, (ಮಳೆ ನಿಂತಾಗ) ಕಂಬನಿಗರೆಯುವ ಮರಗಳು, ಇವೆಲ್ಲ ಸುಂದರ ರೂಪಕಗಳು, ’ಸಮೃದ್ಧಿಯ ಕಾಡು ಇಂದಿನ ದಾರುಣ ಸುಡುಗಾಡು’ ಇವೆಲ್ಲ ಬಹುಕಾಲ ನಮ್ಮನ್ನು ಕಾಡುತ್ತಿರುತ್ತವೆ. ನಮ್ಮ ಆತ್ಮಸಾಕ್ಷಿಯನ್ನು ಚುಚ್ಚುತ್ತಿರುತ್ತವೆ ಎನ್ನುವದರಲ್ಲಿ ಸಂದೇಹವಿಲ್ಲ. ಪ್ರಸಾದರಿಗೆಅಭಿನಂದನೆಗಳು.

    Like

  5. ‘ಪ್ರಗತಿಯ ಹೆಸರಲಿ ವಿಶ್ವ ವಿನಾಶ
    ಬಿಸಿಲು ಮಳೆಗಳ ತೀವ್ರ ಆಕ್ರೋಶ’

    ಮನುಷ್ಯ ಪ್ರಗತಿಯ ಹೆಸರಿನಲ್ಲಿ ತನ್ನ ಜೀವವಿಕಾಸಕ್ಕೆ ಕಾರಣವಾದ ಪ್ರಕೃತಿಯನ್ನು ಧ್ವಂಸ ಮಾಡುತ್ತ ಜಾಗತಿಕ ತಾಪಮಾನದ ಏರುಪೇರುಗಳ ಇತಿಹಾಸ ಮತ್ತು ಪ್ರಚಲಿತವನ್ನು ಎರಡೇ ಸಾಲಿನಲ್ಲಿ ಹೇಳಿದ್ದಾರೆ. ಕವನದ ಶಕ್ತಿ ಇದು.

    -ಕೇಶವ

    Like

Leave a comment

This site uses Akismet to reduce spam. Learn how your comment data is processed.