‘ನಮ್ಮ ನಿಮ್ಮ ನಿಸಾರ್ ಅಹ್ಮದ್‘ ಮತ್ತು ನಾಡೋಜ ನಿಸಾರ್ ಅಹ್ಮದರಿಗೆ ನುಡಿನಮನ

ಪ್ರಿಯ ಓದುಗರೆ,

This image has an empty alt attribute; its file name is na-as-hindu.jpg

ಹೋದವಾರದ ಪ್ರೊ. ನಿಸಾರ್ ಅಹಮದ್ ರವರನ್ನು, ಕವಿಯಾಗಿ ಮತ್ತು ವ್ಯಕ್ತಿಯಾಗಿ ನೆನೆಸಿಕೊ೦ಡು, ಅನಿವಾಸಿ ಬಳಗದ ಕೆಲ ಸದಸ್ಯರು ಬರೆದ ಲೇಖನಗಳನ್ನು ಪ್ರಕಟಿಸಿದೆವು. ಇ೦ತಹ ಅತಿದೊಡ್ದ ಪ್ರತಿಭಾವ೦ತ ಕವಿಯ ಆಳ, ಅಗಾಧತೆಯ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಈ ವಾರದ ಲೇಖನದಲ್ಲಿ ಪ್ರಸಾದ್ ಮತ್ತು ಗೌರಿಯವರು ನಿಸಾರ್ ಅಹ್ಮದರನ್ನು ತಮ್ಮದೇ ವಿಶಿಷ್ಟ  ರೀತಿಯಲ್ಲಿ ಸ್ಮರಿಸಿದ್ದಾರೆ

ನಮ್ಮ ಇ೦ದಿನ ಭಾರತ ಧರ್ಮದ ಹೆಸರಿನಲ್ಲಿ ಅದರದೇ ಅದ ಹೊಸ ಬದಲಾವಣೆಯನ್ನು ಕ೦ಡಿರುವ ಈಗಿನ ವರ್ಷಗಳಲ್ಲಿ ನಾವು ಮತ್ತು ನಮ್ಮ ನ೦ಬಿಕೆಗಳು ನಮ್ಮ ಸುತ್ತಲಿರುವ, ನಮ್ಮನನುಸರಿಸದವರ ಮೇಲೆ ಯಾವ ರೀತಿಯ ಪರಿಣಾಮ ಮಾಡುತ್ತಿರಬಹುದು ಎನ್ನುವುದರ ಬಗ್ಗೆ ನಾವು ಸಾಮಾನ್ಯವಾಗಿ ಯೋಚಿಸುವುದಿಲ್ಲ. ಶಿವಪ್ರಸಾದ್ ರವರು ತಮ್ಮ ಲೇಖನದಲ್ಲಿ, ಕವಿ ನಿಸಾರ್ ಅಹ್ಮದ್ ರವರು ನಮ್ಮೆಲ್ಲರಿಗಿ೦ತ ಅಚ್ಚಕನ್ನಡಿಗನಾಗಿ, ಧರ್ಮದ  ಚೌಕಟ್ಟಿನಲ್ಲಿ ಬ೦ಧಿಯಾಗದೆ, ತನ್ನ ಬರಹದಿ೦ದ ನಮ್ಮನ್ನು ರ೦ಜಿಸಿ ಚಿ೦ತಿಸುವ೦ತೆ ಮಾಡಿದ ಸ್ನೇಹಮಯಿ ತನ್ನ ಕವಿತೆಗಳಲ್ಲಿ ’ಸಮನ್ಮಯಿ ನಾನೆತ್ತ’ ಅಥವಾ ’ನಿಮ್ಮೊಡನಿದ್ದರೂ ನಿಮ್ಮ೦ತಾಗದೆ’ ಎ೦ದು ಕೇಳುವ೦ತೆ ಮಾಡಿರಬಹುದಾದ ತಮ್ಮ/ನಮ್ಮ ಪ್ರಸ್ತುತ ಸಮಾಜದ ಬಗ್ಗೆ ಕೆಲಕ್ಷಣ ಚಿ೦ತಿಸುವ೦ತೆ ಮಾಡಿದ್ದಾರೆ. ಕವಿ ನಿಸಾರರ ಕವನಗಳ೦ತೆ ಇದರಲ್ಲಿ ಚಿ೦ತನೆಯನ್ನು ಪ್ರೇರೆಪಿಸುವ ಉದ್ದೇಶವಿದೆಯೆ ಹೊರತು ಯಾವ ರೀತಿಯ ಅಪಾದನೆಯಿಲ್ಲ.

ಗೌರಿಪ್ರಸನ್ನರವರ ಈ ವಾರದ ಲೇಖನದಲ್ಲಿ ನಿಸಾರ್ ಅಹ್ಮದ್ ರವರ ಕವಿತೆಗಳ ರಸಿಕತೆಯ ಬಗ್ಗೆ ತಿಳಿಸಿರುವುದಲ್ಲದೆ, ಜೊತೆಗೆ ಅವರಿಗಿದ್ದ ಹಾಸ್ಯ ಪ್ರವೃತ್ತಿಯನ್ನು ಅವರ ಚುಟುಕಗಳ ಮೂಲಕ ನಮಗೆ ತಿಳಿಸಿ ಮನಕ್ಕೆ ಮುದವಿತ್ತಿದ್ದಾರೆ. ಈ ಚೇತೊಹಾರಿ ಲೇಖನದಲ್ಲಿ ಮತ್ತೆ ಈ ಕವಿ ಅನುಭವಿಸಿರಬಹುದಾದ ನೋವು, ತುಮಲಗಳ ಮಿಡಿತವಿದೆ, ಮತ್ತೊಮ್ಮೆ ಚಿ೦ತನೆಗೆ ಆಹ್ವಾನವಿದೆ – ಸ೦

ಪರಿಚಯ

ಹೆಸರು ಶ್ರೀಮತಿ ಗೌರಿಪ್ರಸನ್ನ.ಹುಟ್ಟಿ ಬೆಳೆದದ್ದು ವಿಜಯಪುರದಲ್ಲಿ.ಕನಾ೯ಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ.ಸುಗಮಸಂಗೀರ,ಹಿಂದೂಸ್ತಾನಿ ಹಾಗೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ.ರೇಡಿಯೋ ಗಿರಮಿಟ್ ದಲ್ಲಿ ‘ಹರಟೆ ಕಟ್ಟೆ’ಕಾಯ೯ಕ್ರಮ ನಡೆಸಿಕೊಡುತ್ತೇನೆ.ಆಗಾಗ ಕಥೆ, ಲಲಿತಪ್ರಬಂಧಗಳನ್ನು ಬರೆಯುತ್ತಿರುತ್ತೇನೆ.ಕಳೆದೈದು ವರುಷಗಳಿಂದ ಲಂಡನ್ನಿನ ಸ್ಲೋದಲ್ಲಿ ವಾಸ.

 

ನಮ್ಮ – ನಿಮ್ಮ’   ಪ್ರೊಫೆಸರ್ ನಿಸಾರ್ ಅಹಮದ್  – ಡಾ.  ಜಿ.  ಎಸ್.  ಶಿವಪ್ರಸಾದ್

ನಿಸಾರ್ ಅಹಮದ್, ಇಂಗ್ಲೆಂಡಿನ ಚೆಶೈರಿನಲ್ಲಿ ನಡೆದ ಯು.ಕೆ. ಕನ್ನಡ ಬಳಗದ ರಜತಮಹೋತ್ಸವ ಸಮಾರಂಭಕ್ಕೆ ೨೦೦೮ ರಲ್ಲಿ   ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿ ಸಮ್ಮೇಳನದಲ್ಲಿ ನಾನು,  ಜಯಂತ್  ಕಾಯ್ಕಿಣಿ  ಮತ್ತು ಇತರ ಕವಿಗಳು ಭಾಗವಹಿಸಿದ್ದೆವು. ಮೂರು ದಿನಗಳ ಕಾರ್ಯಕ್ರಮದಲ್ಲಿ  ನಿಸಾರ್ ಅವರು ತಮ್ಮ ಅನನ್ಯವಾದ ಹಾಸ್ಯ ಪ್ರಜ್ಞೆಯಿಂದ ನಮ್ಮನ್ನೆಲ್ಲಾ ನಕ್ಕು ನಗಿಸಿದರು. ತಮ್ಮ ಕನ್ನಡ ಭಾಷೆಯ ಮೇಲಿರುವ ಪ್ರೀತಿ ಅಭಿಮಾನಗಳಿಂದ ನಮ್ಮಲ್ಲಿನ ಕನ್ನಡ ಪ್ರಜ್ಞೆಯನ್ನು  ಜಾಗೃತಗೊಳಿಸಿದರು. ಅನಿವಾಸಿ ಕನ್ನಡಿಗರಿಗೆ  ನಿಸಾರ್  ಕೂಡಲೇ ಹತ್ತಿರವಾಗಿ ಬಿಟ್ಟು “ನಮ್ಮ”   ನಿಸಾರ್  ಅಹಮದ್  ಆದರು. ಕಾಲಗಳು ಕಳೆದಂತೆ,  ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾದಂತೆ  ನಿಸಾರ್  ಅಹಮದ್  ನಮ್ಮಲ್ಲಿನ  ಕೆಲವರಿಗೆ ನಮ್ಮವರಾಗದೆ ದೂರ ಉಳಿಯುವ ಶೋಚನೀಯ ಪರಿಸ್ಥಿತಿ ಮೆಲ್ಲಗೆ ಆವರಿಸಿದ್ದು ದುರದೃಷ್ಟಕರ ಎನ್ನಬಹುದು. 

ಮುಸ್ಲಿಂ ಕುಟುಂಬವೆಂಬ “ಪರಕೀಯತೆ”ಯಲ್ಲಿ  ಹುಟ್ಟಿ ಬೆಳೆಯುತ್ತಾ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು   ತಮ್ಮದಾಗಿಸಿಕೊಂಡು ಓಬ್ಬ ಕವಿಯಾಗಿ ಬೆಳೆಯಬೇಕಾದರೆ ಸಮಾಜದಲ್ಲಿ  ತಾನು ಮೊದಲು ಅಂಗೀಕೃತವಾಗ ಬೇಕೆಂಬ  ಅನಿವಾರ್ಯ ಒತ್ತಡ  ನಿಸಾರ್  ಅವರಿಗೆ ಇದ್ದರಬಹುದು. ಈ ಒತ್ತಡ  ಸಮಾಜದ  ಮುಖ್ಯವಾಹಿನಿಯಲ್ಲಿರುವವರಿಗೆ  ಸುಲಭವಾಗಿ ನಿಲುಕುವ ವಿಚಾರವಲ್ಲ. ಬಹುಶ ಈ ಕಾರಣಕ್ಕಾಗಿ ಶುರುವಿನಲ್ಲಿ  ನಿಸಾರ್  ಅವರು ಹಲವಾರು ನಾಡಭಕ್ತಿಗೀತೆಗಳಂತೆ ತೋರುವ   ‘ಜೋಗದ ಸಿರಿ ಬೆಳಕಿನಲ್ಲಿ , ‘ತಾಯಿ ಭೂಮಿ ತಾಯಿ’, ಎಲ್ಲಿ ರಮ್ಯಾ ತಾಣ ಅಲ್ಲಿ ನಿನಗೆ ವಂದನ’ ಈ ರೀತಿಯ ಕವನಗಳನ್ನು ಬರೆದು ನಾಡಿನ ಹಿರಿಮೆ-ಗರಿಮೆಯನ್ನು ಕುವೆಂಪು ನಂತರದ ಸಮಯದಲ್ಲಿ ಕನ್ನಡಕ್ಕೆ ತಂದುಕೊಟ್ಟಿರಬಹುದು. ಇದು ನನ್ನ  ಊಹೆಯಲ್ಲಿನ ಒಂದು ಸಾಧ್ಯತೆ ಅಷ್ಟೇ . ಇದಕ್ಕೆ ಬೇರೆ ಪ್ರೇರಣೆಗಳು ಕೂಡ ಇರಬಹುದು. ಒಂದು  ವಿಚಾರವನ್ನು ಇಲ್ಲಿ ನಾನು ಪ್ರಸ್ತಾಪ ಮಾಡುವುದು ಉಚಿತ;   ಒಂದು  ಸಂದರ್ಶನದಲ್ಲಿ  ನಿಸಾರ್  ಅವರು  ‘ನಾನು ಶುರಿವಿನಲ್ಲಿ ಹೆಸರಿಗಾಗಿ  ಮತ್ತು   ಜನರ ಪ್ರೀತಿಯನ್ನುಗಳಿಸುವ ಉದ್ದೇಶದಿಂದ ಕವಿತೆಗಳನ್ನು ಬರೆದಿದ್ದು ಮುಂದಕ್ಕೆ ನಾನು ಸಮಾಜಕ್ಕೆ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡುವ ಸಲುವಾಗಿ ಬರೆಯಲು ಮೊದಲುಗೊಂಡೆ’ ಎಂದು ಹೇಳಿದ್ದಾರೆ.

ನಿಸಾರ್ ಅವರ ಇನ್ನೊಂದು ಜನಪ್ರಿಯ ಗೀತೆ ” ಬೆಣ್ಣೆ ಕದ್ದ ನಮ್ಮ ಕೃಷ್ಣ, ಬೆಣ್ಣೆ ಕದ್ದನಮ್ಮ’ ಎಂಬ ಸಾಲುಗಳನ್ನು ನೋಡಿದಾಗ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ರೀತಿಯ ಸಾಲುಗಳನ್ನು ಹಿಂದೂ ಧರ್ಮದ ಹೊರಗೆ ಇರುವ ಒಬ್ಬ ಕವಿ ಬಹುಶ ಬರೆಯಲು ಮುಜುಗುರ ಪಡಬಹುದು. ಈ ಕವಿತೆಯಲ್ಲಿನ “ನಮ್ಮ ಕೃಷ್ಣ” ಎಂಬ ಅಭಿವ್ಯಕ್ತಿ  ನಿಸಾರ್  ನಮ್ಮೊಡನಿದ್ದು ನಮ್ಮಂತೆಯೇ ಆದವರು ಎಂಬುದಕ್ಕೆ ಸಾಕ್ಷಿ ಎನ್ನಬಹುದು.  ಈಗ ಆ ಒಂದು ಅನಿಸಿಕೆಗಳಿಲ್ಲ.  ಕಳೆದ ಕೆಲವು ವರ್ಷಗಳಿಂದ ಎದ್ದಿರುವ ಧರ್ಮವೆಂಬ ಗೋಡೆ ನಮ್ಮ ನಿಮ್ಮನ್ನು ವಿಭಜಿಸಿದೆ. ಕೆಲವು ಪ್ರಜ್ಞಾವಂತರು ಈ  ‘ನಾವು-ನೀವು’ ವಿಚಾರವನ್ನು ಇಲ್ಲಿ ನಾನೇಕೆ ಪ್ರಸ್ತಾಪ ಮಾಡುತ್ತಿದ್ದೇನೆ  ಎಂದು ಪ್ರಶ್ನಿಸಬಹುದು ಅದಕ್ಕೆ ಸಮಂಜಸವಾದ  ಉತ್ತರ ಅವರವರೇ ಕಂಡುಕೊಳ್ಳಬೇಕು.

ನಿಸಾರ್ ಅವರು ಒಂದು ಸಂದರ್ಶನದಲ್ಲಿ ‘ಧರ್ಮ ಎಲ್ಲರಿಗೂ ಒಂದು ವೈಯುಕ್ತಿಕವಾದ  ವಿಚಾರವಾಗಿರಬೇಕು. ಒಬ್ಬ ಕವಿ, ಲೇಖಕನ  ಚಿಂತನೆಗಳನ್ನು,  ಬರವಣಿಗೆಯನ್ನು  ಅವನ ಧರ್ಮದ ಹಿನ್ನೆಲೆಯಲ್ಲಿ ಇಟ್ಟು ವಿಶ್ಲೇಷಿಸಬಾರದು. ಅವನು ಅದರಿಂದ  ಮುಕ್ತವಾಗಿರಬೇಕು. ಎಲ್ಲ ಧರ್ಮಗಳಲ್ಲಿ ಧರ್ಮವನ್ನು ಕಾಪಾಡುವುದಕ್ಕೆ ಕೆಲವು  ಸ್ವಯಂ ಪ್ರೇರಿತ, ಸ್ವಯಂ ಸೇವಕ  “ಧಾರ್ಮಿಕ ಪೋಲೀಸರು” ಹುಟ್ಟಿಕೊಂಡಿದ್ದಾರೆ. ಅದರ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಲ್ಲೂ   ನಮ್ಮೊಳಗೇ ಇರುವ ನೈತಿಕ ಜವಾಬ್ದಾರಿ ನಮಗೆ ಮಾರ್ಗದರ್ಶನ ನೀಡಬೇಕು. ಎಲ್ಲರೂ  ಧರ್ಮಗಳ ಸಾರವನ್ನು ಅರಿತು ಸಮನ್ವಯದೆಡೆಗೆ ಶ್ರಮಿಸಬೇಕು.  ಅದನ್ನು ಬಿಟ್ಟು ಧರ್ಮದ ತಿರುಳನ್ನು ತಿರಿಚಿ ವ್ಯಾಖ್ಯಾನಿಸಬಾರದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

This image has an empty alt attribute; its file name is religious-hormony.jpg

ಹಿಂದೂ ಮುಸ್ಲಿಂ ನಡುವಿನ  ಸಾಮಾಜಿಕ ಸಂಬಂಧವನ್ನು ಗಮನಿಸಿದಾಗ ನಿಸಾರ್  ಹೇಳುವಂತೆ  ಕಲೆ ಮತ್ತು ಧರ್ಮ ಇವೆರಡೂ ಬೇರೆ ಬೇರೆಯಾಗಿದ್ದವು. ಹಿಂದೆ ಬಿಸ್ಮಿಲ್ಲಾ ಖಾನ್ ಅವರು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ನುಡಿಸಲು ಅವರಿಗೆ ಆಹ್ವಾನವಿತ್ತು.  ಬಾಲಿವುಡ್ಡಿನ ಶಾರುಕ್ ಖಾನ್, ನಾಸಿರುದ್ದೀನ್ ಷಾ,  ಇರ್ಫಾನ್ ಖಾನ್ ಇವರೆಲ್ಲ  ಭಾರತದ  ಸೆಕ್ಕ್ಯುಲರ್ ದೃಷ್ಟ್ಟಿಯಿಂದ ನಮ್ಮವರೇ ಆದರೂ ಕೆಲವರು ಅವರನ್ನು  ಇಂದಿನ  ‘ಹಿಂದೂ ರಾಷ್ಟ್ರೀಯತೆ’ ಎಂಬ ಧಾರ್ಮಿಕ ಅಳತೆಗೋಲಿನಲ್ಲಿ  ಅಳೆದು ಪರಕೀಯರಾಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ನಿಸಾರ್  ಅವರ ಅರ್ಥಪೂರ್ಣ ಹಾಗು ನೋವಿನ ಎಳೆ ಇರುವ ಕವನವನ್ನು  ನಾನು ಓದುಗರ ಗಮನಕ್ಕೆ ತಂದಿದ್ದೇನೆ.  ಆ ಕವನದ ಆಯ್ದ ಸಾಲುಗಳು ಹೀಗಿವೆ;

ನಿಮ್ಮೊಡನಿದ್ದು ನಿಮ್ಮಂತಾಗದೆ ಜಗ್ಗಿದ ಕಡೆಬಾಗದೇ

ನಾನು ನಾನೇ ಆಗಿ ಈ ನೆಲದಲ್ಲೇ  ಬೇರೊತ್ತಿದ್ದರೂ ಬೀಗಿ

ಪರಕೀಯನಾಗಿ ತಲೆ ಎತ್ತುವುದಿದೆ ನೋಡಿ ಅದು ಬಲು ಕಷ್ಟ

ಒಳಗೊಳಗೇ ಬೇರು ಕುಯ್ದು ಲೋಕದೆದುರುಲಿ ನೀರ ಹುಯ್ದು

ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ

ನಟಿಸಿ ಚಕಾರವೆತ್ತದೆ, ನಿಮ್ಮೊಡನೆ ಕಾಫೀ ಹೀರಿ

ಪೇಪರೋದಿ ಹರಟೆ ಹರಟಿ ಬಾಳು ತಳ್ಳುವುದಿದೆ ನೋಡಿ

ಅದು ಬಹಳ ಕಷ್ಟದ ಕೆಲಸ

ನಾನು ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ ಅನಿವಾಸಿ ಭಾರತೀಯನಾಗಿದ್ದೇನೆ. ಇಲ್ಲಿನ ಭಾಷೆ  ಮತ್ತು ಸಂಸ್ಕೃತಿಯನ್ನು ನನ್ನದಾಗಿಸಿಕೊಂಡಿದ್ದೇನೆ. ಇಲ್ಲಿನ ಪೌರತ್ವವನ್ನು  ಸ್ವೀಕರಿಸಿದ್ದೇನೆ. ಇಂಗ್ಲಿಷಿನಲ್ಲಿ ಪದ್ಯಗಳನ್ನು ಪ್ರಕಟಿಸಿದ್ದೇನೆ. ಇಷ್ಟೆಲ್ಲಾ ಇದ್ದರೂ ನನ್ನಲ್ಲಿ ಒಂದು ಪರಕೀಯತೆಯ ಭಾವನೆಗಳಿವೆ. ಅದನ್ನು ನಿರ್ದಿಷ್ಟವಾಗಿ  ಗುರುತಿಸಲು ಹೆಣಗುತ್ತಿದ್ದೇನೆ. ನಿಸಾರ್  ಅವರ  ಈ ಮೇಲಿನ ಕವಿತೆಯನ್ನು  ನನ್ನ ಅನಿವಾಸಿ ಬದುಕಿನ  ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಓದಿದ್ದೇನೆ.  ಬದುಕಿನ ಕೆಲವು ಅನಿವಾರ್ಯ ಸಂಗತಿಗಳೊಂದಿಗೆ ಹೊಂದಿಕೊಂಡು ಬದುಕಲು ಕಲಿತ್ತಿದ್ದೇನೆ.

ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ  ಮತ್ತು ಲೈಂಗಿಕ ಪ್ರವೃತಿ  ಹೀಗೆ ಅನೇಕ ಅಂಶಗಳು ನಮ್ಮಲಿ ಪರಕೀಯ ಎಂಬ ಭಾವನೆಗಳು ಉದ್ಭವಿಸಲು ಕಾರಣವಾಗಬಹುದು. ನಮ್ಮ ನಮ್ಮೊಳಗೇ ಎಲ್ಲ ಸರಿಸಮಾನವಾಗಿದ್ದೂ ಕೆಲವು  ಸಂದರ್ಭಗಳಲ್ಲಿ   ಒಬ್ಬ ವ್ಯಕ್ತಿಗೆ ತಾನು ಪರಕೀಯ ಎಂಬ ಭಾವನೆಗಳು ಮೂಡುವುದುಂಟು. ಈ ವಿಚಾರಗಳನ್ನು ಇಟ್ಟುಕೊಂಡು ನಿಸಾರ್ ಅವರ ಮೇಲಿನ  ಕವನದಲ್ಲಿನ ಅನಿಸಿಕೆಗಳನ್ನು ಗಮನಿಸಿದಾಗ ಅವರು ಪರಕೀಯರಾಗಿದ್ದರು ಎಂದು ಅವರ ಅಭಿಮಾನಿಗಳಿಗೆ ಅನ್ನಿಸುವುದಿಲ್ಲ.  ಕೆಲವು ಮತಾಂಧ ಗುಂಪಿನ ಜಾತಿವಾದಿಗಳ ವರ್ತನೆಯಿಂದ ನಿಸಾರ್ ಅಹಮದ್ ಅವರಿಗಾದ ನೋವಿನ  ಹಿನ್ನೆಲೆಯಲ್ಲಿ ಈ ಕವಿತೆ ಮೂಡಿಬಂದಿರಬಹುದು. ನಿಸಾರ್ ಅವರು ಪ್ರಜಾವಾಣಿಯ ಒಂದು ಸಂದರ್ಶನದಲ್ಲಿ “ನನ್ನ ಗುರು ಹಿರಿಯರು, ನನ್ನ ಸ್ನೇಹಿತರು  ನನ್ನನ್ನು  ಬೇರೆ ಜಾತಿ ಮತಕ್ಕೆ ಸೇರಿದ ಅನ್ಯವ್ಯಕ್ತಿ ಎಂದು ನೋಡಿಲ್ಲ , ಕನ್ನಡಿಗ ಅಂತ ನೋಡಿದ್ದಾರೆ. ಅದು ನಮ್ಮ ಕನ್ನಡಿಗರ ದೊಡ್ಡಗುಣ” ಎಂದು ಹೇಳಿದ್ದಾರೆ. ಇದು ನಮಗೆಲ್ಲಾ ಸಮಾಧಾನಕರವಾದ ವಿಚಾರ.  ಕನ್ನಡಿಗರ ಆತ್ಮೀಯ ನಿಸಾರ್ ಅಹಮದ್ ಅವರ ಪುತ್ಥಳಿಯನ್ನು ಅವರ ಕಾವ್ಯಕ್ಕೆ ಸ್ಫೂರ್ತಿ ತಂದ  ಲಾಲ್ ಬಾಗಿನಲ್ಲಿ  ಇಟ್ಟು ಅವರನ್ನು ನೆನೆಯುವಂತಾಗಲಿ.  ಅವರ ಅಭಿಮಾನಿಗಳ ಪಾಲಿಗೆ ಅದೇ ನಿತ್ಯೋತ್ಸವ.       

ಡಾ.  ಜಿ.  ಎಸ್.  ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ನಾಡೋಜ ನಿಸಾರ್ ಅಹ್ಮದ್ ನುಡಿನಮನ ಮತ್ತು ಬದುಕಲ್ಲಿ ಸಾರ ತುಂಬಿದ ನಿಸಾರ್ – ಶ್ರೀಮತಿ ಗೌರಿಪ್ರಸನ್ನ

ಗರಿಗರಿ ಶಟ್೯ಪ್ಯಾಂಟು ,ಸೂಟು-ಬೂಟು,ಅದಕ್ಕೊಪ್ಪುವ ಟೈ,ವಾರೆ ಬೈತಲೆ ತೆಗೆದು ಒಪ್ಪವಾಗಿ ಬಾಚಿದ ಕೂದಲು ,ಎತ್ತರದ ನಿಲುವು, ನಗುಮೊಗ….ಒಟ್ಟಿನಲ್ಲಿ  ಸುಂದರಾಂಗ ಈ ನಿಸಾರ್. ಅವರು ಬರೆದ ಕವಿತೆಗಳೋ ಮನೋಹರ…ಈಗಿನ ಮಕ್ಕಳ ಬಾಯಲ್ಲಿ ಹೇಳುವುದಾದರೆ ಅವರು ನಮ್ಮ ಮೊದಲ ‘ಕ್ರಶ್ ‘ಎನ್ನಲಡ್ಡಿಯಿಲ್ಲ.ನಿತ್ಯೋತ್ಸವದ ಗೀತೆಗಳನ್ನು ಅವರದೇ ಗಂಭೀರ ದನಿಯ ಸ್ಪಷ್ಟ ಉಚ್ಚಾರಣೆಯ ಶ್ರೀಮಂತ ಕನ್ನಡದ ವಿವರಣೆಯೊಂದಿಗೆ ಅದೆಷ್ಟು ಸಾವಿರ ಸಲ ಕೇಳಿದ್ದೆವೋ ದೇವರೇ ಬಲ್ಲ.ಅವರ ವಿವರಣೆಯ ಒಂದೊಂದು ಪದವೂ ನನಗೀಗಲೂ ಬಾಯಿಪಾಠ.ಜೋಗದ ಸಿರಿ ,ನಲವಿನ ಬಳ್ಳಿ ,ಎಲ್ಲ ಮರೆತಿರುವಾಗ ,ನೀ ನುಡಿಯದಿರಲೇನು, ಮತ್ತದೇ ಬೇಸರ ಅದೇ ಸಂಜೆ……ಓಹ್! ಒಂದೊಂದು ಹಾಡೂ ನಮ್ಮ ಜೀವನದ ಅವಿಭಾಜ್ಯ ಅಂಗಗಳು.ನಮ್ಮ ಹದಿಹರೆಯದ ಕನಸು-ಕನವರಿಕೆಗಳಿಗೆ ,ಪ್ರೀತಿ-ಪ್ರಣಯಗಳಿಗೆ, ಜಗಳ-ಮುನಿಸುಗಳಿಗೆ, ವಿರಹ-ಬೇಸರಗಳಿಗೆಲ್ಲ ಈ ಹಾಡುಗಳಿಂದಲೇ ಮೂತ೯ರೂಪ.ಅವರ ಹಾಡುಗಳ ಒಂದು ‘ಕೋಟ್ ‘ಆದರೂ ನಮ್ಮ ಪ್ರೇಮಪತ್ರಗಳಲ್ಲಿರಲೇಬೇಕಿತ್ತು.ಹೀಗೆ ನಿಸಾರ್ ಅಹಮದ್ ಅವರು ಒಬ್ಬ ದೊಡ್ಡ ಸಾಹಿತಿಯಾಗಿ ಎಲ್ಲೋ ನಮ್ಮಿಂದ ದೂರವಿರಲಿಲ್ಲ;ನಮ್ಮೊಳಗೊಂದಾಗಿದ್ದರು. ಕಾಣದೆಯೂ ಆಪ್ತರಾಗಿದ್ದರು.ದೂರದ ಬೆಂಗಳೂರು -ಶಿವಮೊಗ್ಗೆಗಳಲ್ಲಿದ್ದೂ ನಮಗೆ ಅತೀ ಸನಿಹವಾಗಿದ್ದರು.

ಅವರ ಭಾಷಾ ಶ್ರೀಮಂತಿಕೆ ,ಪ್ರೌಢ ವಿಷಯಮಂಡನೆ ,ವೈಚಾರಿಕತೆ,ಹಳಿ ತಪ್ಪದ ಭಾವಲಹರಿಗಳು…..ಗದ್ಯ ಪದ್ಯ ಎರಡರಲ್ಲೂ ಸೈ ಎನ್ನಿಸುವಂತಿದ್ದವು.ಪ್ರತಿವಾರ ತರಂಗದಲ್ಲಿ ಪ್ರಕಟವಾಗುತ್ತಿದ್ದ ಅವರ ‘ಅಚ್ಚುಮೆಚ್ಚು’ಬರಹಗಳಿಗಾಗಿ ಹುಚ್ಚಿಯಂತೆ ಕಾಯ್ದು ಎಲ್ಲರೂ ಓದಿಯಾದ ಮೇಲೆ ಅದನ್ನು ಕಟ್ ಮಾಡಿ ಬೈಂಡಿಂಗ್ ಮಾಡಿಟ್ಟ ಸರಣಿಗಳೆಷ್ಟೋ? ಸೀದಾ ನನ್ನ ನೋಟ್ ಬುಕ್ ನಲ್ಲಿ ಭಟ್ಟಿ ಇಳಿಸಿಕೊಂಡ ಲೇಖನಗಳೆಷ್ಟೋ? ಈಗಲೂ ಅವೆಲ್ಲ ನನ್ನೊಡನಿವೆ. ಹಳದಿಯಾದ ಹಾಳೆ, ಮಂಕಾದ ಮಸಿಯೊಡನೆ..ಅದೇ ಭಾವತೀವ್ರತೆಯ ಪರಮಾಪ್ತ ಅನಿಸಿಕೆಯೊಡನೆ. ಅವರೇ ಹೇಳುವಂತೆ ‘ಎಷ್ಟೋ ವೇಳೆ ಕವನ ಸೋಲುವುದು ಕವಿ ತಾನು ಪಡೆದಿರುವುದರಲ್ಲಿ ಜುಗ್ಗತನ ತೋರಿಸಿದ್ದರಿಂದಲ್ಲ; ಬಿಡುವುದರಲ್ಲಿ ಧಾರಾಳ ತೋರಿಸದೇ ಇದ್ದುದರಿಂದ’….ನಿಸಾರ್ ಅವರಿಗೆ ಯಾವುದನ್ನು ಕೊಡಬೇಕು ,ಯಾವುದನ್ನು ಬಿಡಬೇಕು ಎಂಬುದರ ಸ್ಪಷ್ಟ ಅರಿವಿದ್ದರಿಂದಲೇ ಅವರು ‘ಮೌನದಲ್ಲಿ ಗಳಿಸಿದ್ದನ್ನು ಶಬ್ದದಲ್ಲಿ ಉಳಿಸಲು ಸಾಧ್ಯವಾಯ್ತೇನೋ?!

ವಿಭಿನ್ನ ಸಂಸ್ಕೃತಿಯ ಪರಿಸರದಲ್ಲಿ ಹುಟ್ಟಿ ಬೆಳೆದು ,ಸಂಸ್ಕೃತಿ ದ್ವಂದ್ವದ ಬಗ್ಗೆ ಅವರು ಹೇಳುವುದು ಹೀಗೆ… “ ಎರಡೂ ನನ್ನದೆನ್ನುವ ಸುಂದರ ಭ್ರಮೆ ಒಂದು ಕಡೆ;ಎರಡಕ್ಕೂ ಹೊರಗಾದ ಅನಾಥ ಅನಿಸಿಕೆ ಇನ್ನೊಂದು ಕಡೆ.ಅತ್ತ ಹುಟ್ಟಿನಿಂದ ಹೊತ್ತು  ತಂದ ಧಮ೯ ಮತ್ತು ಜೀವನ ವಿಧಾನಗಳಿಗೂ  ಪೂತಾ೯ ತೆರೆದುಕೊಳ್ಳದೇ, ಇತ್ತ ನನ್ನ ಪರಿಸರದ ಸಂಸ್ಕೃತಿ ಹಾಗೂ ಜೀವನ ವಿಧಾನಗಳಿಗೂ ಹಾಯಿಸಿಕೊಳ್ಳದೇ, ಒಮ್ಮೆ ಸ್ವಧಮೇ೯ ನಿಧನಂ ಶ್ರೇಯಃ ಎಂದು, ಮತ್ತೊಮ್ಮೆ ನಾವೆಲ್ಲರೂ ಒಂದೇ ಜಾತಿ , ಒಂದೇ ಮತ, ಒಂದೇ ಕುಲವೆಂದು ಡೋಲಾಯಮಾನವಾಗಿ ಒದ್ದಾಡುವ ತ್ರಿಶಂಕುಸ್ಥಿತಿ. ಆ ತೀವ್ರ ಅಸಹಾಯಕತೆ ಅವರ ‘ಇಬ್ಬಂದಿ’ ಪದ್ಯದಲ್ಲಿ ಹರಳುಗಟ್ಟಿದೆ.

ನನ್ನ ಲೋಕೋದಾರದನ್ಯತೆಯ ಕಾಫರತನಕ್ಕೆದೆ,

ಕುಸಿದು ಅತ್ತರೀಗ,ಸಂತೈಸದು ವಿಗ್ರಹಬಾ ಎನ್ನದು ಕಾಬಾ, ಸತ್ತರಗ್ನಿ ಸಂಸ್ಕಾರವಿತ್ತ, ಗುಣಿಯ ಮಣಭಾರವತ್ತ;

ವಾಮಕ್ಕೆ ಸಂಸ್ಕೃತ , ಬಲಕ್ಕರಬ್ಬೀ -ಸಮನ್ವಯಿ ನಾನೆತ್ತ?

ಪ್ರೌಢ ಗದ್ಯಪದ್ಯಗಳ ಕರ್ತರಾದ ಇವರು ಹನಿಗವನಗಳಂಥ ‘ಮಿಂಚಿಕೆ’ಗಳನ್ನೂ ಬರೆದಿದ್ದಾರೆಂಬುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ…ರಸಾಸ್ವಾದಕ್ಕಾಗಿ ನಾಲ್ಕಾರು ಮಿಂಚಿಕೆಗಳನ್ನು ಹಂಚಿಕೊಂಡಿದ್ದೇನೆ.

. ಮಾತಿನ ಗುಟ್ಟು

‘ಮಯೂರ’ಕ್ಕಿಂತ ‘ಸುಧಾ’ವಾಸಿ

ಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ

ಸಾಹಿತ್ಯಪ್ರೇಮಕ್ಕೆ ಅಚ್ಚರಿಪಟ್ಟು

ಅಂದ್ಕೊಂಡೆ..ಆಸಾಮಿ ಗಟ್ಟಿ

ಆಮೇಲೆ ಅರಿತೆ ಶೆಟ್ರು ಆ ದಿವ್ಸ

ಆಡಿದ ಮಾತಿನ ಗುಟ್ನ

‘ಅನುಭವದ ಮಾತು ನಾನಂದದ್ದು

ಕಟ್ಟಬಹುದು ದೊಡ್ಡ ದೊಡ್ಡ ಪಟ್ನ।।

. ಪರಿಣಾಮ.

ಪಾನಿಪುರಿ ಮಸಾಲೆಪುರಿ ಸೇವ್ ಪುರಿ

ಭೇಲ್ ಪುರಿ ಆಲೂ ಪುರಿ ದಹಿಪುರಿ

ಇನ್ನೂ ಎಷ್ಟೋ ಪುರಿಗಳ ಪಟ್ಟಿ

ಮಾಣಿ ಒದರಿದಾಗ ಹೂಂಗುಟ್ಟಿ

ಅಂದುಕೊಂಡೆ ಇವುಗಳೆಲ್ಲ ಸೇರಿ

ತೋರಿಸುತ್ತವೆ ಯಮಪುರಿ ।।

೩. ಕಾರಣ

“ಯಾಕಪ್ಪ ಅಳ್ತಿದ್ದಿ?”

“ಕೋಟ್ಯಧೀಶ್ವರ ಈಶ್ವರಪ್ಪ ಸತ್ಹೋದ್ನಂತ ಸುದ್ದಿ!”

“ನೆಂಟ್ನ ಅವ್ನು ನಿಂಗೆ?”

“ಅಲ್ಲ ಅಂತ್ಲೆ ಅಳ್ತಿರೋದು,ಗೊತ್ತಾಗೋಲ್ವ ಪೆಂಗೆ?” ।।

೪. ಪ್ರಶ್ನೆ – ಹುತ್ತರ

“ಹಲ್ಪ ಪ್ರಾಣ ಮ ಆ ಪ್ರಾಣ, ಹೇನೆಂಬುದರ ಹರಿವಿಲ್ಲದ

ಹಿವನೊಬ್ಬ ಕೋಣ, ಸಿಸ್ಯನಾಗಿ ಹನುಗ್ರಯಿಸಿ

ನೀಡಿ ಹೊಳ್ಳೆಯ ಸಿಕ್ಸಣ”

“ಆಗೆಯೇ ಹಾಗಲಿ,ಎದರಬೇಡ, ಹೀವೊತ್ತಿನಿಂದಲೇ

ಹೋದು ಹಾರಂಭಿಸೋಣ”

೫. ಹಿತವಾದ

“ಗುರುವೇ ,ಜೀವನದಲ್ಲಿ ನಾನು

ಹಿಡಿಯಬೇಕಾದ್ದು ಯಾವ ದಾರಿ?”

“ಜವಾಬುದಾರಿ”

ಇಂಥ ಲಘುವಾದ ಹನಿಗವನಗಳನ್ನು ನೀಡಿದವರ ನಿಮ್ಮೊಡನಿದ್ದೂ ನಿಮ್ಮಂತಾಗದೆ ,ಅಮ್ಮ ,ಆಚಾರ,ನಾನು ,ಹಕ್ಕು, ನಾನು ಮತ್ತು ರಂಗೋಲಿಗಳಂಥ ಪ್ರಬುದ್ಧ ಕವನಗಳನ್ನು ನೀಡಿ ನಮ್ಮನ್ನು ಚಿಂತನೆಗೆ ತಳ್ಳುತ್ತಾರೆ.’ರಾಮನ್ ಸತ್ತ ಸುದ್ದಿ’ಯಂತೂ ಬದುಕಿನ ಬಗ್ಗೆ ,ನಾನು ,ನನ್ನದು ಎಂಬ ಅಸ್ತಿತ್ವಗಳ ಬಗ್ಗೆ ಜಿಜ್ಞಾಸೆಯನ್ನೇ ಹುಟ್ಟು ಹಾಕುತ್ತದೆ .

“ಎಲ್ಲೋ ಹೇಗೋ ಸಾಯುತ್ತೇನೆ ತಿಳಿಯುವುದಿಲ್ಲ..

ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು – ತಿಳಿಯುವುದಿಲ್ಲ.”

ನಿಸಾರ್ ಅವರೇ ,ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಗಳು ,ಗತಸಾಹಸ ಸಾರುತಿರುವ ಶಾಸನಗಳ ಸಾಲುಗಳು ,ಓಲೆಗರಿಯ ಸಿರಿಗಳು ,ದೇಗುಲಗಳ ಭಿತ್ತಿಗಳು  ಇರುವವರೆಗೂ ನಿಮ್ಮ ಗೀತೆಗಳ ನಿತ್ಯೋತ್ಸವ ನಡೆದೇ ಇರುತ್ತದೆ; ನೀವು ಇಲ್ಲದೆಯೂ ನಮ್ಮೊಡನಿರುತ್ತೀರಿ.ಹಲವೆನ್ನದ ಹಿರಿಮೆಯ ,ಕುಲವೆನ್ನದ ಗರಿಮೆಯ ,ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯ – ಕನ್ನಡಾಂಬೆಯ ಈ ನಿಮ೯ತ್ಸರ ವತ್ಸನಿಗೆ ಗದ್ಗದ ಹೃದಯದ ಶೃದ್ಧಾಂಜಲಿಗಳು.

ಶ್ರೀಮತಿ ಗೌರಿ ಪ್ರಸನ್ನ

 

 

15 thoughts on “‘ನಮ್ಮ ನಿಮ್ಮ ನಿಸಾರ್ ಅಹ್ಮದ್‘ ಮತ್ತು ನಾಡೋಜ ನಿಸಾರ್ ಅಹ್ಮದರಿಗೆ ನುಡಿನಮನ

 1. ಶಿವಪ್ರಸಾದ್ ಮತ್ತು ಗೌರಿ,
  ನಿಮ್ಮಿಬ್ಬರ ಲೇಖನಗಳಲ್ಲಿರುವ ವಿಮರ್ಶೆ, ಒಳನೋಟ, ನೆನಪುಗಳು ಮತ್ತು ಕವಿ ನಿಸ್ಸಾರ್ ಅಹಮದ್ ಅವರ ಬಗ್ಗೆ ಇರುವ ಗೌರವ ನನಗೆ ಇಷ್ಟವಾಯಿತು. ಇಂತಹ ಬರಹಗಳಿಂದ, ನೆನಪುಗಳಿಂದ ನಿಸ್ಸಾರರು ನಮ್ಮೆಲ್ಲರ ಒಳಗೆ ನಮ್ಮ ನಾಡಿನ ನದಿಗಳಂತೆ, ಕಾಡುಗಳಂತೆ ಸದಾ ಎಚ್ಚರವಾಗಿರುತ್ತಾರೆ.
  ವಿನತೆ ಶರ್ಮ

  Like

 2. ದೇಹದಾಚೆಯ ಪಯಣಕ್ಕೆ ಹೋರಾಟ ಹಿರಿಯ ಚೇತನ ನಿಸ್ಸಾರ್ ಅಹಮದರಿಗೆ ಎರಡು ಅರ್ಥಪೂರ್ಣ ನುಡಿತರ್ಪಣಗಳು. 

  ಗೌರಿಪ್ರಸನ್ನರ ಸಾಲುಗಳು ನಿಸ್ಸಾರರು ಬದುಕಿನ ಗಂಭೀರ ದ್ವಂದ್ವಗಳನ್ನ ಕವಿತೆಗಳಲ್ಲಿ ಕಟ್ಟಿ, ಮತ್ತೆ ಅದೇ ಗಾಂಭೀರ್ಯದಲ್ಲಿ ಮತ್ತಷ್ಟು ದ್ವಂದ್ವಗಳನ್ನ – ಆರೋಗ್ಯ, ಜವಾಬುದಾರಿ ಇತ್ಯಾದಿ – ತಿಳಿಹಾಸ್ಯದಲ್ಲಿ ತೇಲಿ ಬಿಟ್ಟಿದ್ದನ್ನು ನವಿರಾಗಿ ನೆನಪಿಸಿವೆ. 

  ಪ್ರಸಾದರ ಸಾಲುಗಳು, ನಿಸ್ಸಾರರ ಒಳಮನಸಿನ ದ್ವಂದ್ವಗಳು: ಧರ್ಮ, ಆಚರಣೆ, ಸಹಿಷ್ಣುತೆ, ಇವುಗಳ ಮಸೂರದಲ್ಲಿ ಅವರ ಜೀವನದ ಶ್ರೇಷ್ಠತೆಯನ್ನ ಮೆಲುಕಿಸಲು ಪ್ರಯತ್ನಿಸಿವೆ.  ಆ ಮಸೂರದಲ್ಲಿ ಪ್ರಸಾದರ ಮನಸಿನ ದ್ವಂದ್ವವೂ ಇಣುಕಿದೆ. 

  ಇವೆರಡೂ ನುಡಿತರ್ಪಣಗಳು ನನ್ನಲ್ಲಿ ಉಳಿಸಿದ ಪ್ರಶ್ನೆಗಳು:

  ೧. ನುಡಿತರ್ಪಣಗಳಲ್ಲಿ ಅಗಲಿದವರ ಜೀವನದ ದ್ವಂದ್ವಗಳನ್ನು ಹಂಚಿಕೊಳ್ಳುವದು ಎಷ್ಟು ಸರಿ?

  ೨. ಪ್ರಸಾದರ ಲೇಖನದಲ್ಲಿ ಅಲ್ಪಸಂಖ್ಯಕರಲ್ಲಿ ಪರಕೀಯತೆಯ ಭಾವನೆಯನ್ನ ಭಾರತದಲ್ಲಿ ಹೊರಗಿನವರು ತುಂಬುತ್ತಾರೆಂದೂ, ಆದರೆ ಇಂಗ್ಲೆಂಡಿನಲ್ಲಿ ಅವರೇ ತಂದುಕೊಳ್ಳುತ್ತಾರೆಂದು ಅರ್ಥ ಮಾಡಿಕೊಳ್ಳುವ ಹಾಗೆ ಪದಗಳು ಜೋಡಿಸಿಕೊಂಡಿವೆ. ಅದು ಉದ್ದೇಶಪೂರ್ವಕವೊ ಅಥವಾ ಉಪಪ್ರಜ್ಞೆಯೋ ಎನ್ನುವದು ನನ್ನೊಳಗುಳಿದ ದ್ವಂದ್ವ. 

  ಮುರಳಿ ಹತ್ವಾರ್ 

  Like

  • ಮುರಳಿ ಅವರೇ
   ನನ್ನ ಈ ಬರವಣಿಗೆ ಪರಕೀಯತೆಯ ವಿವಿಧ ಮುಖಗಳನ್ನು ಭಾವನೆಗಳನ್ನು ಅರ್ಥೈಸಿ ಕೊಳ್ಲಲು ಒಂದು ಪ್ರಯತ್ನ. ನಾನು ನನ್ನ ಬರವಣಿಗೆಯಲ್ಲಿ ಈಗಾಗಲೇ ಸೂಚಿಸಿರುವಂತೆ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಓದುಗರೇ ತಮ್ಮ ಅನುಭವ ಮತ್ತು ಅನಿಸಿಕೆಗಳ ಆಧಾರದ ಮೇಲೆ ಕಂಡುಕೊಳ್ಳಬೇಕು. ಮುಂದಿನ ವಿವರಣೆ ಮತ್ತು ಹೆಚ್ಚಿನ ಚರ್ಚೆ ಅನಗತ್ಯ

   ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು

   Like

 3. ನಿಸಾರ್ ಅಹಮದ್ ಅವರ ಬಗ್ಗೆ ಮೂಡಿಬಂದಿರುವ ಎರಡು ಲೇಖನಗಳೂ ಬಹಳ ವಿಶೇಷವಾಗಿವೆ.
  ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಹಿಂದಿನ ಅವರ ಮನಸ್ಥಿತಿಯನ್ನು ಪ್ರಸಾದ್ ಅವರು
  ಬಹಳ ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ

  ನಿಸಾರ್ ಅವರಬರಹಗಳನ್ನು ಮತ್ತು ಅವರ
  ಬರಹಗಳನ್ನು ಕೆಲವು ಪದ್ಯಗಳನ್ನು, ಮಿಂಚಿಕೆಗಳನ್ನು ಸುಂದರವಾಗಿ ವಿವರಿಸಿದ್ದಾರೆ ಗೌರಿ ಪ್ರಸನ್ನ ಅವರು

  ಇಬ್ಬರಿಗೂ ವಂದನೆಗಳು

  Like

 4. ಅನಿವಾಸಿ ಯಲ್ಲಿಯ ಈ ವಾರದ “ನಿಸಾರ್ ಅಹಮದ್ ಅವರಿಗೆ ನುಡಿ ನಮನ‌” ತುಂಬ ಮನೋಜ್ಞ.ಶಿವಪ್ರಸಾದ ಅವರ ಲೇಖನ ಒಂದು ಚಣ ಮಾತು ಮರೆತು ಗಾಢ ಯೋಚನೆಯತ್ತ ತಳ್ಳಿರುವ ಮಾತನ್ನು ತಳ್ಳಿ ಹಾಕುವಂತಿಲ್ಲ.ನಿಜ ನಿಸಾರ್ ಅವರ ನ್ನ ಕಾಡಿರುವ ಆ ‘ ಪರಕೀಯ ಭಾವನೆ’ ಎಲ್ಲೋ ಒಂದು ಮೂಲೆಯಲ್ಲಿ ನೋವಿನೆಳೆ ಮೀಟೋದು ಖಂಡಿತ.ಈ ಧರ್ಮ, ಪ್ರಾದೇಶಿಕ ಪರಕೀಯತೆ ಒಂದು ಅಸ್ಥಿರತೆ, ಅಸುರಕ್ಷಿತ, ಅಸ್ಪಷ್ಟ ಅಯೋಮಯದಾಟದತ್ತ ನೂಕುತ್ತದೆಯೆನೋ ಅನಿಸ್ತಿದೆ.ಒಂದರ್ಥದಲ್ಲಿ ಎಲ್ಲರಲ್ಲೂ ಈ ಅಸ್ಪಷ್ಟ ಪರಕೀಯ ಭಾವನೆ ಕಾಡ್ತಾನೇ ಇರ್ತದೆ ಕೆಲವು ಸಂದರ್ಭಗಳಲ್ಲಿ ಏನೋ ಅನಕೋತೀನಿ ನಾನು.ನಿಜಕ್ಕೂ ತುಂಬ ಚಿಂತನಶೀಲ ಪ್ರೌಢ ಲೇಖನ ಶಿವಪ್ರಸಾದ್ ಅವರದು.
  ಗೌರಿ ಪ್ರಸನ್ ಅವರ ಲೇಖನ ನಿಸಾರ್ ಅಹಮದ್ ಅವರ ಹಲ ಹೊಸ ಬದಿಗಳ ಪರಿಚಯಿಸುವ ಸುಂದರ ಬರಹ.ಹದಿಹರಯದ ಹೃದಯದ ಬಡಿತಗಳೇ ಹಾಡಾದ ಕವನಗಳು ನಿಸಾರ್ ಅಹಮದ್ ಅವರ ಕೆಲವು ಕವನಗಳು ಎಂಬಲ್ಲಿ ಎರಡು ಮಾತಿಲ್ಲ.ಅವರ ಹನಿಗವನಗಳ ಬಗ್ಗೆ ಗೊತ್ತೇ ಇರಲಿಲ್ಲ.ಅದರಲ್ಲಿಯ ಹಾಸ್ಯಪ್ರಜ್ಞೆ ಮನ ಮುದಗೊಳಿಸುವಂಥದು.ಗೌರಿಯವರೇ ನಿಮ್ಮ ನೋಟ್ ಬುಕ್ಕಿನ ಇನ್ನಷ್ಟು ಪುಟಗಳ ಅನಾವರಣ ಆಗಲಿ.
  ಶಿವ ಪ್ರಸಾದ ಹಾಗೂ ಗೌರಿ ಪ್ರಸನ್ ಅವರ ಮನತಟ್ಟುವ ನುಡಿನಮನಗಳು ಆತ್ಮೀಯ ಶ್ರದ್ಧಾಂಜಲಿ ಆ ಜೀವಕೆ.ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Liked by 1 person

 5. ನಿಸಾರ್ ಅವರ ಇನ್ನೊಂದು ಸಂದರ್ಶನ ಇದು ಉರ್ದು ಭಾಷೆಯಲ್ಲಿ , ನನ್ನಗೆ ಉರ್ದು ಬರುವುದಿಲ್ಲ ಆದರೆ ಇದನ್ನು ಕೇಳಿದರೆ
  I can’t help thinking he was more fluent in Kannada
  than in Urdu!! When he spoke in Kannada there was hardly any English words let alone sentences but watch this interview.

  Like

  • ನಿಸಾರ್ ಅವರ ಇನ್ನೊಂದು ಸಂದರ್ಶನ ಇದು ಉರ್ದು ಭಾಷೆಯಲ್ಲಿ , ನನ್ನಗೆ ಉರ್ದು ಬರುವುದಿಲ್ಲ ಆದರೆ ಇದನ್ನು ಕೇಳಿದರೆ
   I can’t help thinking he was more fluent in Kannada
   than in Urdu!! When he spoke in Kannada there was hardly any English words let alone sentences but
   watch this interview.

   Like

 6. ಶಿವಪ್ರಸಾದ ರ ಲೇಖನ ಮರ್ಮಕ್ಕೆ ಮುಟ್ಟಿದೆ. ಪರಕೀಯತೆಯ ಭಾವ ಬದುಕಿನ ಹಲವು ಮಜಲುಗಳಲ್ಲಿ ಪ್ರತಿಯೊಬ್ಬರೂ ಅನುಭವಿಸಿರಬಹುದು. ಅದಕ್ಕನುಗುಣವಾಗಿ ಬದಲಾಯಿಸಿಕೊಂಡು ಪರಕೀಯತೆಯನ್ನು ದೂರ ಹೋಗಿಸಲು ಹೋಗುವವರೇ ಹೆಚ್ಚಿರುವಾಗ, ತನ್ನತನವನ್ನು ಉಳಿಸಿ, ಬೆಳೆಯುವುದಕ್ಕೆ ಸ್ಫೂರ್ತಿಯಾಗುತ್ತಾರೆ ನಿಸಾರರು.
  ಗೌರಿಯವರು ಹಾಸ್ಯದ ಹಾಸಿನಿಂದ ಗಂಭೀರ ವಿಶ್ಲೇಷಣೆ ಮಾಡುತ್ತ ನಿಸಾರರ ಕಾಣದ ಪ್ರತಿಭೆಯನ್ನು ನಮಗೆ ಅನಾವರಣ ಮಾಡಿದ್ದಾರೆ.

  “ಎಲ್ಲೋ ಹೇಗೋ ಸಾಯುತ್ತೇನೆ ತಿಳಿಯುವುದಿಲ್ಲ..

  ನನ್ನ ಹೆಸರು, ಹುದ್ದೆ, ಪದ್ಯ, ತಳಮಳ, ಬದುಕು – ತಿಳಿಯುವುದಿಲ್ಲ.”

  ನಿಸಾರರೇ ನೀವು ಎಲ್ಲೋ, ಹೇಗೋ ಸಾಯುವುದಿಲ್ಲ. ನೀವು ಕನ್ನಡಿಗರ ಮನಗಳಲ್ಲಿ ಸದಾಕಾಲ ನೆಲೆಸಿರುತ್ತೀರಿ.

  – ರಾಂ

  Like

 7. ಈ ವಾರದ ಮೊದಲನೆಯ ಲೇಖನ:
  ’ನಾನು ಪರಕೀಯ’ ಎನ್ನುವ ಮಾನವ ಸಹಜ ಭಾವನೆಯ ಬಗ್ಗೆ ನಿಸಾರ್ ಅಹಮದರ ಕವಿತೆಗಳ ಹಿನ್ನೆಲೆಯಲ್ಲಿ ಶಿವಪ್ರಸಾದರು ತಮ್ಮ ವೈಚಾರಿಕ ಲೇಖನದಲ್ಲಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ’ಅನಿವಾಸಿ”ಯ ಅನೇಕ ಓದುಗರು ಮತ್ತು ಬರಹಗಾರರೂ ಅದರೊಡನೆ ಸ್ಪಂದಿಸುವದರಲ್ಲಿ ಸಂಶಯವಿಲ್ಲ. ನಾಲ್ಕು ದಶಕಗಳಗಿಂತಲೂ ಹೆಚ್ಚು ಕಾಲ ಈ ದೇಶದಲ್ಲಿ ಬದುಕಿದ ನನ್ನಂಥವನಿಗೂ ಆಗಾಗ ಪರಕೀಯ ಭಾವನೆ ಬಂದು ಹೋಗುತ್ತವೆ ಎಂದರೆ ಅಚ್ಚರಿಯ ಮಾತಲ್ಲ. ನಿಸಾರ್ ಅಹಮದ್ ಅವರು ಈ ’ತ್ರಿಶಂಕು ಸ್ವರ್ಗ’ ಭಾವನೆಯನ್ನು ಎದೆ ಮುಟ್ಟುವಂತೆ, ಮರ್ಮಕ್ಕೆ ತಾಗುವಂತೆ ಬರೆದುದು ಇತ್ತೀಚಿನ ವರ್ಷಗಳಲ್ಲಲ್ಲ, ಐವತ್ತು ವರ್ಷಗಳ ಕೆಳಗೆ ಎಂದು ಅವರೇ ಹಲವು ಸಲ ಹೇಳಿದ್ದುಂಟು -2017ರ ಸಾಹಿತ್ಯ ಸಂಭ್ರಮದ ಉದ್ಘಾಟನೆಯ ಸಮಯದಲ್ಲಿ ಸಹ ಅದನ್ನು ಹೇಳಿದ್ದಾರೆ. ’’ರಂಗೋಲಿ ಮತ್ತು ನನ್ನ ಮಗ” ಪದ್ಯದಲ್ಲಿ ಅವರೇ ಹೇಳಿದಂತೆ ’ಚಾಕ್ ಪೀಸು ಪುಡಿಯಿಂದ ನಮ್ಮ ಪಡಸಾಲೆಯಲ್ಲಿ
  ನಕಲಿಸಲು ಹೋಗಿ ಸಲಸಲವೂ ಸೋತಿದ್ದೆ,
  ಕಾಫರನ ಬಿರುದು ಹೆತ್ತವಳಿಂದ ಹೊತ್ತಿದ್ದ’ ನಿಸಾರ್ ಅವರು ಮುಂದೆ ಅವಳಿಂದ ರಾತ್ರಿಯಿಡೀ ಒಬ್ಬನೇ ಕುಳಿತು ಬರೆಯುತ್ತಿದ್ದವರನ್ನು ” ಯೇ ಬೊಮ್ಮನ್ ಕಾ ಬಚ್ಚಾ ಕ್ಯಾ ಲಿಖಾ?” ಅಂತ ಮೂದಲಿಸಲ್ಪಟ್ಟರೂ (http://www.varthabharati.in/article/43841) ’ನಮ್ಮವರೇ’ ಆಗಿದ್ದರೂ ಇಂಥ ಸನ್ನಿವೇಶಗಳನ್ನು ಒದಗಿಸುವ ಸಮಾಜ ನಮ್ಮದು. ಇತ್ತಿತ್ತಲಾಗಿ ಭಾರತದಲ್ಲಿ ಇಂಥ ಭಾವನೆಗಳ ಬೆಂಕಿಗೆ ಗಾಳಿಹಾಕುವವರೇ ಹೆಚ್ಚಾಗಿದ್ದಾರೇನೋ. ಯಾವುದೇ ದೇಶದಲ್ಲಿ, birds of different feather ಜೊತೆ ಜೊತೆಗೆ ಜೀವಿಸುತ್ತಿರುವಾಗ ಇದು ತಪ್ಪಿದ್ದಲ್ಲವೇನೋ.
  ಎರಡನೆಯ ಲೇಖನ: ತಮ್ಮ ’ಹರಟೆಕಟ್ಟೆ’ಯಿಂದ ನಮಗೆಲ್ಲ ಪರಿಚಿತರಾಗಿರುವ ಗೌರಿ ಪ್ರಸನ್ನ ಅವರ ನಿಸಾರ್ ಅಹಮದ್ ಬಗ್ಗೆ ಬರೆದ (ಹಿಂದೊಮ್ಮೆ ’ಕ್ರಶ್’ ಇದ್ದರೇನಾಯಿತು) ಪ್ರಬುದ್ಧ ಬರಹ ನನಗೆ ಹಿಡಿಸಿತು. ನನಗೂ ಅವರು ’ಮಿಂಚಿಕೆ’ಗಳನ್ನು ಬರೆದದ್ದು ಗೊತ್ತಿರಲಿಲ್ಲ. ಅವುಗಳನ್ನು ಅನಿವಾಸಿ’ಯ ಓದುಗರೊಡನೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ನಿಮ್ಮ ಹಳದಿಯಾದ ಮಾಸಿಕ ಮತ್ತು ವಾರ ಪತ್ರಿಕೆಗಳ ಪುಟಗಳನ್ನು ಮತ್ತು ಕಾಪಿ ಮಾಡಿದ ಹಾಳೆಗಳನ್ನು ಬೈಂಡು ಮಾಡಿಟ್ಟ ಸಂಪುಟಗಳಲ್ಲಿ ಏನೇನು ರತ್ನಗಳು ಹುದುಗಿವೆಯೋ! ಬಿಚ್ಚಿ ಹಂಚುತ್ತಾ ಇರಿ!
  ‘ನಮ್ಮ‘ ಮೆಚ್ಚಿನ ನಿಸಾರ್ ಅಹಮದ್ ಅವರು ತಮ್ಮ ಮಾತು-ಬರಹ -ಕವಿತೆಗಳಿಂದ ಮತ್ತು ತಮ್ಮ ಆಗಮನದಿಂದ ಇಲ್ಲಿಯ ಕನ್ನಡಿಗರ ಮನವನ್ನು ಗೆದ್ದುದನ್ನು ಬರಹಕ್ಕಿಳಿಸಿ ’ಅನಿವಾಸಿ”ಯ ಸದಸ್ಯರು ಈ ಎರಡು ವಾರಗಳಲ್ಲಿ ಅವರ ಸಾಹಿತ್ಯದ ಮತ್ತು ವ್ಯಕ್ತಿತ್ವದ ವಿವಿಧ ಮುಖಗಳ ಪರಿಚಯ ಮಾಡಿಕೊಟ್ಟು ಶ್ರದ್ಧಾಂಜಲಿಯರ್ಪಿಸಲು ಅವಕಾಶ ಮಾಡಿಕೊಟ್ಟ ಸಂಪಾದಕಿ ದಾಕ್ಷಾಯಣಿ ಅವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.
  ಶ್ರೀವತ್ಸ ದೇಸಾಯಿ

  Like

 8. Apologies. Corrected here,

  ಎರಡು ವರ್ಷಗಳ ಹಿಂದೆ ಬೆಂಗಳೂರು ಚಂದನ ವಾಹಿನಿಗೆ ಕೊಟ್ಟ ಸಂದರ್ಶನ. ಇದರಲ್ಲಿ ನಿಸಾರ್ ಅವರು ತಮ್ಮ ಕೆಲವು ಪದ್ಯಗಳನ್ನು ಓದುವುದನ್ನ ಕೇಳಬಹುದು

  Like

 9. ಎರಡು ವರ್ಷಗಳ ಹಿಂದೆ ಬೆಂಗಳೂರು ಚಂದನ ವಾಹಿನಿಗೆ ಕೊಟ್ಟ ಸಂದರ್ಶನ. ಇದರಲ್ಲಿ ನಿಸಾರ್ ಅವರು ತಮ್ಮ ಕೆಲವು ಪದ್ಯಗಳನ್ನು ಓಡುವುದನ್ನ ಕೇಳಬಹುದು

  Like

 10. ಶಿವಪ್ರಸಾದ್ ಅವರು ಬರೆದಿರುವ ಲೇಖನ ವಿಚಾರಾತ್ಮಕ. ಅನಿವಾಸಿಗಳಿಗೆ ಪರಕೀಯತೆಯ ಭಾವನೆ ಮತ್ತು ಭಾರತೀಯ ಮುಸ್ಲಿಮರಿಗೆ ಪರಕೀಯತೆಯ ಭಾವನೆ, ಎರಡನ್ನು ನಿಸಾರ್ ಅಹಮದ್ ಅವರ ಕವನದ ಮೂಲಕ ನಮ್ಮನ್ನು ನಿಸಾರ್ ಅವರನ್ನು ಅರ್ಥಮಾಡಿಕೊಳ್ಳಲು ಸೂಕ್ಷ್ಮವಾಗಿ ಬರೆದಿದ್ದಾರೆ.

  ಗೌರಿ ಪ್ರಸನ್ನ ಅವರು ನಿಸಾರ್ ಅಹಮದ್ ಅವರು ನಮ್ಮ ಬಾಲ್ಯ ಮತ್ತು ಯೌವ್ವನವನ್ನು ಯಾವ ರೀತಿ ಆವರಿಸಿಕೊಂಡಿದ್ದರು ಎನ್ನುವುದನ್ನು ಸುಂದರವಾಗಿ ನಿರೂಪಿಸಿದ್ದಾರೆ. ನಿಸಾರ್ ಅವರು ಹಾಸ್ಯ ಚುಟುಕು ಬರೆದಿರುವುದು ನನಗೆ ಗೊತ್ತೇ ಇರಲಿಲ್ಲ.

  ಕೇಶವ

  Like

 11. Both the articles have really inspired me now to read and revisit the poems and work of Nisar Ahmad all over again. Thank you both for that.
  “ನಿಮ್ಮೊಡನಿದ್ದು ನಿಮ್ಮಂತಾಗದೆ” reading the poem made me think deeply on its permanent resonance in all our daily lives here and issues surrounding “ belonging /acceptance”.
  There are some universal and practical challenges which we face when we try to belong to a particular community that is not our own. We all put endless efforts towards this end. We stay positive and struggle to succeed…Who really wins?
  “Oh Nanna Chetana Agu in Anikethana…?” How can our vision really be expanded ?

  Liked by 1 person

 12. ಡಾ. ಜಿ.ಎಸ್. ಶಿವಪ್ರಸಾದ್ ಅವರೇ, ನಿಮ್ಮ ಲೇಖನ ತುಂಬಾ ಚನ್ನಾಗಿದೆ.

  ನೀವೂ ನಿಮ್ಮ ಲೇಖನದಲ್ಲಿ ಶಾರುಕ್ ಖಾನ್, ನಾಸಿರುದ್ದೀನ್ ಷಾ ಅವರನ್ನು ಜಾತ್ಯಾತೀತರು ಅಂತ ನಮೂದಿಸಿದ್ದೀರಿ. ನಮ್ಮ ದೇಶದ ವಿರುದ್ಧ ಮಾತನಾಡಿದವರು ಜಾತ್ಯಾತೀತರಲ್ಲ, ದೇಶ ವಿರೋಧಿ ಆಗುತ್ತಾರೆ. ನನ್ನ ಅಭಿಪ್ರಾಯದ ಪ್ರಕಾರ ಇಂತಹ ದೇಶದ್ರೊಹಿಗಳನ್ನು ಈ ಲೇಖನದಲ್ಲಿ ಸೇರಿಸಬಾರದಾಕಿತ್ತು.

  ನಾವು ಭಾರತೀಯರು, ಅಬ್ದುಲ್‌ ಕಲಾಮ್, ಶಿಶುನಾಳ ಶರೀಫ, ಇರ್ಫಾನ ಖಾನ, ನಿಸ್ಸಾರ ಸರ್ ಅವರನ್ನು ಮುಸ್ಲಿಮರಾಗಿ ನೋಡಿಯೇ ಇಲ್ಲ. ನಮ್ಮ ಪಾಲಿಗೆ ಇವರೆಲ್ಲಾ ಭಾರತೀಯರು, ಮೇಧಾವಿಗಳು ಮತ್ತು ನಮ್ಮ ದೇಶದ ಕೀರ್ತಿಯನ್ನು ಜಗತ್ತಿಗೆ ತೋರಿಸಿದ ಮಹಾನುಭಾವರು. ಈ ಜಗತ್ತು ಇರುವವರೆಗೂ ಇಂತಹವರ ಹೆಸರು ಅಜರಾಮರ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.