ಫ್ರೊ. ಕೆ.ಸ್. ನಿಸಾರ್ ಅಹ್ಮದ್ ರವರಿಗೆ ‘ಅನಿವಾಸಿಯ’ ಶ್ರದ್ಧಾಂಜಲಿ

 

ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಹಿನಲ್ಲಿ,

ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ,

ನಿತ್ಯೋತ್ಸವ ತಾಯೆ ನಿತ್ಯೋತ್ಸವ, ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ”. 

ನಮ್ಮ ಬಹಳಷ್ಟು ಕನ್ನಡ ಸಮಾರಂಭಗಳು ಈ ಕವಿತೆಯಿ೦ದ ಆರ೦ಭ. ಈ ಕವಿತೆಯನ್ನು ಕೇಳದ, ಹಾಡದ ಕನ್ನಡಿಗರಿಲ್ಲ. ”ಕುರಿಗಳು ಸಾರ್ ಕುರಿಗಳು” ಕವಿತೆಯಿ೦ದ ಜನಸಾಮಾನ್ಯರಲ್ಲಿ ಕವಿತೆಗಳ ಬಗ್ಗೆ ಹೊಸ ರೀತಿಯ ಆಸಕ್ತಿ ಹುಟ್ಟುವ೦ತೆ ಮಾಡಿದ ಕೀರ್ತಿ ಇವರದು. ನಿತ್ಯೋತ್ಸವದ ಕವಿಯೆ೦ತೆ ಪ್ರಸಿದ್ಧರಾದ ಶ್ರೀ ನಿಸಾರ್ ಅಹಮದ್ ಅವರ ಮರಣ (3-5-2020) ಕನ್ನಡ ಸಾಹಿತ್ಯಕ್ಕೆ ಅತಿದೊಡ್ಡ ನಷ್ಟವೆ೦ದರೆ ಅತಿಶಿಯೋಕ್ತಿಯೇನಲ್ಲ. ‘ಮನಸ್ಸು ಗಾ೦ಧಿಬಜಾರು‘, ‘ಸ೦ಜೆ ಇದರ ಮಾಲೆ‘ ’ಮನದೊ೦ದಿಗೆ ಮಾತುಕತೆ’ ’ನಿತ್ಯೋತ್ಸವ’ ಇವರ ಕೆಲ ಜನಪ್ರಿಯ ಕವನ ಸ೦ಕಲನಗಳು. ವೃತ್ತಿಯಿ೦ದ ಜಿಯಾಲಜಿ ಉಪನ್ಯಾಸಕರಾದರೂ ಇವರ ನಿಜವಾದ ಆಸಕ್ತಿ ಮತ್ತು ಅನುರಾಗ ಕನ್ನಡ ಸಾಹಿತ್ಯವೆ೦ದು ಹೇಳಬಹುದು. ನಿಸಾರ್ ಅಹಮದ್ ರವರು ೨೦೦೮ರಲ್ಲಿ ಪದ್ಮಶ್ರೀ ಪ್ರಶಸ್ಥಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ಥಿ(೧೯೮೨), ಪ೦ಪ ಪ್ರಶಸ್ಥಿ (೨೦೧೭), ನಾಡೋಜ ಪ್ರಶಸ್ಥಿ(೨೦೦೩), ರಾಜ್ಯೋತ್ಸವ ಪ್ರಶಸ್ಥಿ (೧೯೮೧) ಇನ್ನೂ ಮು೦ತಾದ ಪ್ರಶಸ್ಥಿಗಳಿ೦ದ ಸನ್ಮಾನಿತರು. ಶಿವಮೊಗ್ಗದಲ್ಲಿ ೨೦೦೭ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಪಟ್ಟ, ನ೦ತರ ಮೈಸೂರು ದಸರ ನಾಡುಹಬ್ಬದ ಉದ್ಘಾಟನೆ ಇದೆಲ್ಲ ಈ ಕವಿಯ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಜನತೆಗಿವರ ಮೇಲಿರುವ ಗೌರವವನ್ನು ಸಾರುತ್ತದೆ. ಕನ್ನಡ ಸಾಹಿತ್ಯವನ್ನು ತಮ್ಮ ಕವಿತೆ, ಬರಹಗಳಿ೦ದ ಸ೦ಪನ್ನಗೊಳಿಸಿದ ನಿಸಾರ್ ಅಹಮದ್ ರವರು ತಮ್ಮ ಉತ್ಸಾಹ ಮತ್ತು ಸ್ನೇಹಮಯ ನಡುವಳಿಕೆಯಿ೦ದ ಸಮಸ್ತ ಕನ್ನಡಿಗರ ಮನ ಗೆದ್ದ ಸಾಹಿತಿಗಳು. ಅವರ ದಿವ್ಯ ಚೇತನವನ್ನು ನಾವು ಮತ್ತೊಮ್ಮೆ ನೆನೆಯೋಣ ಮತ್ತು ಅವರ ಆತ್ಮಕ್ಕೆ ಶಾ೦ತಿ ಸಿಗಲೆ೦ದು ಹಾರೈಸೋಣ. ಯು.ಕೆ ಕನ್ನಡ ಬಳಗಕ್ಕೆ ಇವರು ಭೇಟಿಯಿತ್ತಾಗ, ಅವರೂಡನೆ ಮಾತನಾಡಿ, ಒಡನಾಡಿದ ಕೆಲ ಅನಿವಾಸಿ ಸದಸ್ಯರು ತಮ್ಮ ಅನುಭವಗಳನ್ನು, ನಿಮ್ಮೊ೦ದಿಗೆ ಹ೦ಚಿಕೊ೦ಡು ನಮ್ಮೆಲ್ಲರ ನೆಚ್ಚಿನ ಈ ಕವಿಯನ್ನು ಸ್ಮರಿಸಿಕೊ೦ಡಿದ್ದಾರೆ – ಸ೦ (ದಾಕ್ಷಾಯಿಣಿ ಗೌಡ)

1) ಸವಿನೆನಪುಅರವಿಂದ ಕುಲಕರ್ಣಿ

This image has an empty alt attribute; its file name is ksn.jpg
Photo: Basingstoke Ramamurthy
Prof Nisar Ahmed relaxing during his UK visit

ಕನ್ನಡ ಬಳಗ(ಯು.ಕೆ.)ದ ೨೫ ನೆ ವರುಷದ, ಬೆಳ್ಳಿಹಬ್ಬದ ಆಚರಣೆಯಲ್ಲಿ ಶ್ರಿ ಕೆ.ಎಸ್.ನಿಸ್ಸಾರ ಅಹ್ಮೆದರವರನ್ನು ಸನ್ಮಾನ ಮಾಡಿದ್ದು ಇನ್ನೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಬಾಷಣದಲ್ಲಿ ಸೌಜನ್ಯತೆ, ಸರಳ ಜೀವನ,ನಿಸರ್ಗದ ಬಗ್ಗೆಅವರಿಗಿದ್ದ ಅಪಾರ ಆಸಕ್ತಿ ಕಂಡು ಬರುತ್ತಿತ್ತು. ಅಂದು ಎಲ್ಲ ಕಾರ್ಯಕರ್ತರು, ಹಾಗು ಆಗಮಿಸಿದ ಕನ್ನಡ ಮಿತ್ರರೊಂದಿಗೆ ಬೆರತು, ಮಾತನಾಡಿ ಆನಂದ ಪಟ್ಟರು.

2) ನಮ್ಮ ಆತ್ಮೀಯ ಅತಿಥಿಯಾಗಿಬೇಸಿಂಗ್ ಸ್ಟೋಕ್ ರಾಮಮೂರ್ತಿ

 ನಮ್ಮ ನೆಚ್ಚಿನ ನಿಸಾರ್ ಇನ್ನಿಲ್ಲ. ೨೦೦೮ ಆಗಸ್ಟ್ ನಲ್ಲಿ ಅವರು ಕನ್ನಡ ಬಳಗದ ರಜತಮಹೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನಂತರ ನಮ್ಮಗಳ ಜೊತೆ ಕೆಲವು ವಾರಗಳು ಕಳೆದಿದ್ದು ಎಂದಿಗೂ ಮರೆಯುವಹಾಗಿಲ್ಲ.

(Photo credit: Basingstoke Ramamurthy) ನಿಸಾರ್ ಅಹಮದ್ ಅವರೊಡನೆ ಬೇಸಿಂಗಸ್ಟೋಕ್ ರಾಮಮೂರ್ತಿ ದಂಪತಿಗಳು

ಬೆಳಗ್ಗೆ ಚಹಾ ಆದನಂತರ ಹೊರಗೆ ವಾಕಿಂಗ್ ಹೋದಾಗ ಮಧ್ಯೆ,ಮಧ್ಯೆ ನಿಂತು “ಅಹಾ ಎಷ್ಟು ಸುಂದರವಾದ ಪ್ರಕೃತಿ ” ಎಂದು ಉದ್ಘಾರ ಮಾಡಿದ್ದೂ ಉಂಟು. ಒಂದು ಸಂಜೆ ನಮ್ಮಮನೆಯಲ್ಲಿ ಹಲವಾರು ಸ್ನೇಹಿತರನ್ನು ಭೇಟಿಮಾಡಿದಾಗ ಒಬ್ಬರು ಇವರಿಗೆ ಒಂದು ಪ್ರೆಶ್ನೆ ಕೇಳಿದರು.”ನೀವು ಮುಂದಿನ ಜನ್ಮ ದಲ್ಲಿ ಎಲ್ಲಿ ಹುಟ್ಟಬೇಕು ಅಂತ ನಿಮ್ಮ ಅಸೆ? ” ಇವರ ಉತ್ತರ ” ನೋಡಿ ನನಗೆ ಇದರಲ್ಲಿ ನಂಬಿಕೆ ಇಲ್ಲ ಆದರೆ ಪುನಃ ಹುಟ್ಟಿದರೆ, ಭಾರತದಲ್ಲಿ, ಕರ್ನಾಟಕದಲ್ಲೆ ಮತ್ತು ಬೆಂಗಳೂರಿನಲ್ಲಿ ಗಾಂಧಿ ಬಜಾರ್ ಹತ್ತಿರ”!

ಇನ್ನೆರಡು ಮಾತುಗಳು, ಬೆಳಗ್ಗೆ ಉಪಹಾರಕ್ಕೆ ನನ್ನ ಪತ್ನಿ ಸೀತ ಥಾಲಿಪೆಟ್ಟು ಅಂದರೆ ಅಕ್ಕಿ ರೊಟ್ಟಿ ಮಾಡಿದ್ದಳು, ಇದು ನಿಸಾರ್ ಅವರಿಗೆ ಬಹಳ ಇಷ್ಟವಾಯಿತು, ಬೆಂಗಳೂರಿನಲ್ಲಿ ಒಂದು ಸಭೆಯಲ್ಲೂ ತಾವು ಇಂಗ್ಲೆಂಡಿನಲ್ಲಿ ಸೀತಮ್ಮ ಮಾಡಿದ ಥಾಲಿಪೆಟ್ಟು ತಿಂದಿದ್ದು ಹೇಳಿದರಂತೆ!

ಇನ್ನೊಂದು, ನಿಸಾರ್ ಅಷ್ಟು ದೊಡ್ಡ ಕವಿ ಮತ್ತು ಸಾಹಿತಿ ಗಳಾಗಿದ್ದರೂ ಇವರು ನಿಗರ್ವಿ, ಯಾವಾಗಲೂ ಸೂಟ್ ಮತ್ತು ಟೈ ಇಲ್ಲದೆ ಯಾವ ಸಭೆಗೂ ಹೋಗುತ್ತಿರಲಿಲ್ಲ. ಇವರ ನೆನಪು ನಮ್ಮೊಂದಿಗೆ ಶಾಶ್ವತ.

3) “ಜೋಗದ ಸಿರಿ ಬೆಳಕಿನ” ಕವಿ ನಿಸಾರ್ ಅಹಮದ್ ಅವರಿಗೆ ಸನ್ಮಾನ ಡಾ ಉಮಾ ವೆಂಕಟೇಶ್

ಆಗಸ್ಟ್ ೨೨. ೨೦೦೮ರ ಸಂಜೆ, ಇಂಗ್ಲೇಂಡಿನ ಚೆಶೈರಿನಲ್ಲಿರುವ ನ್ಯಾಂಟ್ವಿಚ್ ಎಂಬ ಸಣ್ಣ ಪಟ್ಟಣದ ಅಲ್ವಿಸ್ಟನ್ ಹಾಲ್ ದಲ್ಲಿ ಸಂಭ್ರಮವೋ ಸಂಭ್ರಮ. ಯು.ಕೆ ಕನ್ನಡ ಬಳಗದ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟಿಸಲು ಬರುತ್ತಿದ್ದ ಮುಖ್ಯ ಅತಿಥಿ ಆ ವರ್ಷ ಪದ್ಮಶ್ರಿ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದ ಕನ್ನಡ ಸಾಹಿತ್ಯ ಲೋಕದ ಅನನ್ಯವಾದ ಪ್ರತಿಭೆಯೆನಿಸಿದ್ದ ನಾಡೋಜ ಕವಿ ನಿಸಾರ್ ಅಹಮದ್ ಅವರು. ಅಲ್ಲಿಯವರೆಗೂ ನಾನು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಆದರೆ ೧೯೭೨ರಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ೨೫ ವರ್ಷಗಳ ಮತ್ತೊಂದು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನಿಸಾರ್ ಅವರು ಬರೆದಿದ್ದ “ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ” ಎನ್ನುವ ದೇಶ ಭಕ್ತಿ ಗೀತೆಯನ್ನು ನನ್ನ ಕನ್ನಡ ಉಪಾಧ್ಯಾಯಿನಿ ನಮ್ಮೆಲ್ಲರ ಕೈಯಲ್ಲೂ ಸಮೂಹ ಗಾನದಲ್ಲಿ ಹಾಡಿಸಿದ್ದ ನೆನಪು ನನ್ನ ಮನದಲ್ಲಿ ಇಂದೂ ಹಸಿರಾಗಿದೆ.

ಮುಖ್ಯ ಅತಿಥಿಗಳನ್ನು ಆ ದಿನ ಸನ್ಮಾನಿಸುವ ವಿಶೇಷ ಏರ್ಪಾಡನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡದ ಮಹಾನ್ ಸಾಹಿತಿ ದಿ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮೊಮ್ಮಗಳು ಡಾ ವಸಂತಶ್ರಿ, ನಿಸಾರ್ ಅವರ ಸನ್ಮಾನ ಪತ್ರದ ಬಿನ್ನವತ್ತಳೆಯನ್ನು ಬರೆದಿದ್ದರು.

ಬೆಳ್ಳಿ ಹಬ್ಬದ ಭವ್ಯ ದೀಪವನ್ನು ನಿಸಾರ್ ಬೆಳಗುವುದರ ಮೂಲಕ ಪ್ರಾರಂಭವಾಗಿತ್ತು ಅಂದಿನ ಸಮಾರಂಭ. ಬಳಗದ ಅಧ್ಯಕ್ಷೆ ಡಾ ಭಾನುಮತಿ ಅವರಿಂದ ಶಾಲು, ಮಾಲಾರ್ಪಣೆಯಾದ ನಂತರ ಬಿನ್ನವತ್ತಳೆಯನ್ನು ಓದಬೇಕೆಂದು ನನಗೆ ತಿಳಿಸಿದಾಗ ನನ್ನ ಮನ ಮತ್ತು ದೇಹದಲ್ಲಿ ಮಿಂಚು ಹರಿದ ಅನುಭವ. ನಿಸಾರ್ ಅವರ ಸಮಕ್ಷಮದಲ್ಲಿ ಕನ್ನಡವನ್ನು ಸರಾಗವಾಗಿ ತಪ್ಪಿಲ್ಲದೆ ಓದುವ ಬಗ್ಗೆ ಸಹಜವಾದ ಅಳುಕಿತ್ತು. ಆದರೆ, ಬಿನ್ನವತ್ತಳೆಯಲ್ಲಿ ನಿಸಾರ್ ಜೀವನದ ಅನೇಕ ಮೈಲಿಗಲ್ಲನ್ನು ಡಾ ವಸಂತಶ್ರೀ ಅವರು ದಾಖಲಿಸಿದ್ದ ರೀತಿ ಮತ್ತು ನಿಸಾರ ಅವರ ಸಾಧನೆಯ ಪಟ್ಟಿಯನ್ನು ಓದುತ್ತಿದ್ದ ನನ್ನ ಮನಸ್ಸು ಅದರಲ್ಲೆ ಲೀನವಾಗಿ ಸಂಪೂರ್ಣ ಸಭೆಯನ್ನೇ ಮರೆತಿದ್ದೆ. ನಿಸಾರ್ ಅಲ್ಲಿದ್ದಾರೆ ಎನ್ನುವ ವಿಷಯವೂ ನನ್ನ ತಲೆಯಲ್ಲಿರಲಿಲ್ಲ. ಆ ಬಿನ್ನವತ್ತಳೆಯನ್ನು ಓದಲು ಸುಮಾರು ಹತ್ತು ನಿಮಿಷಗಳೇ ಹಿಡಿದಿತ್ತು. ಕೊನೆಯ ವಾಕ್ಯ ಮುಗಿದು ಸಭಿಕರ ದೀರ್ಘ ಕರತಾಡನವಾದಾಗಲೇ ನನಗೆ ಎಚ್ಚರವಾಗಿದ್ದು. ನಂತರ ಅಲ್ಲಿದ್ದ ಅನೇಕರು ನನ್ನನ್ನು ಅಭಿನಂದಿಸಿದಾಗ, ನಿಸಾರ್ ಅವರ ಕಣ್ಣು ಆ ಹತ್ತು ನಿಮಿಷಗಳಲ್ಲಿ ಬಹಳ ಸಲ ತೇವಗೊಂಡಿದ್ದವು ಎನ್ನುವುದನ್ನು ಕೇಳಿದಾಗ, ವಸಂತಶ್ರೀ ಅವರ ಶ್ರಮ ನಿಜಕ್ಕೂ ಸಾರ್ಥಕ ಎನಿಸಿತ್ತಲ್ಲದೇ, ಅದರಲ್ಲಿ ನನ್ನ ಅಳಿಲು ಸೇವೆಯೂ ಸೇರಿತ್ತು ಎನ್ನುವ ಸಂತೋಷ ಮತ್ತು ತೃಪ್ತಿ. ಕನ್ನಡ ಭಾಷೆಯನ್ನು ಕಲಿತದ್ದಕ್ಕೂ ಸಾರ್ಥಕ ಎನ್ನುವ ಅನುಭವ.

ಅಂದಿನ ಅಧ್ಯಕ್ಷ ಭಾಷಣದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಶ್ರೀಮಂತ ಹಿನ್ನೆಲೆ ಮತ್ತು ಪರಂಪರೆಯ ಜೊತೆಗೆ, ಕುಸಿಯುತ್ತಿರುವ ಭಾಷೆಯ ಮಟ್ಟ ಮತ್ತು ಪ್ರಸಕ್ತ ಪರಿಸ್ಥಿತಿಯ ಬಗ್ಗೆ ನಿರರ್ಗಳವಾಗಿ ಸುಮಾರು ಒಂದು ಘಂಟೆ ಮಾತನಾಡಿದ ಕವಿ ನಿಸಾರ್ ಅವರ ಮಾತನ್ನು ಕೇಳುತ್ತಲೇ ಇರುವ ಹಂಬಲ ನಮ್ಮೆಲ್ಲರಿಗೆ. ಮುಂದಿನ ಮೂರು ದಿನಗಳೂ ಅವರ ಜೊತೆಯಲ್ಲಿ ಕಳೆದ ನಮ್ಮ ಆ ಅನುಭವ ಜೀವನದಲ್ಲಿ ನೆನಪಿಡುವಂತಹದು. ಇಂದು ಬೆಳಿಗ್ಗೆ ನಿಸಾರ್ ಇನ್ನಿಲ್ಲ ಎನ್ನುವ ಆಘಾತಕಾರಿ ಸುದ್ದಿಯನ್ನು ತಿಳಿದಾಗ ಮತ್ತೊಮ್ಮೆ ಬೆಳ್ಳಿ ಹಬ್ಬದ ನೆನಪನ್ನೇ ನಾವಿಬ್ಬರೂ ಮೆಲಕು ಹಾಕಿದೆವು. ಆ ನೆನಪಿನ ಒಂದು ಹಾಳೆಯನ್ನೇ ನಿಮ್ಮ ಮುಂದಿಡುತ್ತಿದ್ದೇನೆ. ತಮ್ಮ ಸುಂದರ ಕವನಗಳಿಂದ ಕನ್ನಡಿಗರ ಮನಗಳಲ್ಲಿ ನೆಲಸಿರುವ ನಿಸಾರ್ ಅವರ ನೆನಪಿನ ಹಣತೆ ಸದಾ ಹೀಗೆ ಪ್ರಜ್ವಲವಾಗಿ ಬೆಳಗುತ್ತಿರಲಿ ಎಂದು ಹಾರೈಸುತ್ತಾ ಅವರ ದಿವ್ಯಾತ್ಮಕ್ಕೆ ಶಾಂತಿ ಕೋರೋಣ. ಯು.ಕೆ ಕನ್ನದ ಬಳಗದ ಬೆಳ್ಳಿ ಹಬ್ಬದಲ್ಲಿ ಅವರ ಕೈಯಲ್ಲಿ ಬಳಗದ ಜ್ಯೋತಿಯನ್ನು ಬೆಳಗಿಸಿದ ನಾವೇ ಧನ್ಯರು. https://anivaasi.com/wp-content/uploads/2020/05/e0b2ace0b2bfe0b2a8e0b38de0b2a8e0b2b5e0b2a4e0b38de0b2a4e0b2b3e0b386rescanned-v3.jpg

 

4)ನಿಸಾರ್ ಅಹಮದ್ ಅವರೊಂದಿಗೆ ಕಳೆದ 24 ಗಂಟೆಗಳು – ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್

    “Pass the parcel!”

ಆಗಸ್ಟ್, 2008. ಕನ್ನಡ ಬಳಗ ಯು. ಕೆ.ದ 3 ದಿನಗಳ ರಜತ ಮಹೋತ್ಸವ ಮುಗಿದು ಗ್ರುಪ್ ಫ಼ೋಟೋ (ಲೇಖನಗಳ ಕೊನೆಯಲ್ಲಿದೆ, ನೋಡಿರಿ) ಕಾರ್ಯಕ್ರಮ ಮುಗಿದಂತೆ ಎಲ್ಲರನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟು ಮಡದಿಯೊಡನೆ ಮನೆಗೆ ಹೊರಟಾಗ ಮೂರನೆಯವರು (ಆಹ್ವಾನಿತರೇ) ನಮ್ಮ ಕಾರಿನಲ್ಲಿ ಸೇರಿಕೋಂಡಿದ್ದರು! ಅವರೇ ’ನಿತ್ಯೋತ್ಸವ ಕವಿ’ ಪ್ರೊ. ನಿಸಾರ್ ಅಹಮದ್. ಚೆಶಾಯರಿನ ಆಲ್ವೆಸ್ಟನ್ ಹಾಲಿನಿಂದ ನ್ಯೂಕಾಸಲ್ ಗೆ ಈ ’ಪಾರ್ಸಲ್’ ಅನ್ನು ತಲುಪಿಸುವದು ನನ್ನ ಜವಾಬ್ದಾರಿಯಾಗಿತ್ತು. ಅದೆಂಥ ಸೌಭಾಗ್ಯ ಅನ್ನುತ್ತೀರಿ? ಡೈರೆಕ್ಟರ್ ಸ್ವಾಮಿ (ರವಿ) ಅವರು ಕೆಲ ವರ್ಷಗಳ ಹಿಂದೆ ಕನ್ನಡಬಳಗದ ಅತಿಥಿಯಾಗಿ ಬಂದಾಗ ಹೇಳಿದಂತೆ ಯು ಕೆ ಕನ್ನಡ ಬಳಗ ಕಾರ್ಯಕ್ರಮಕ್ಕೆ ಭಾರತದಿಂದ ಬಂದ ಅತಿಥಿಗಳನ್ನು “ಪಾಸ್ ದ ಪಾರ್ಸಲ್” ಆಟದ ತರಹ  ಊರಿಂದ ಊರಿಗೆ ಮನೆಯಿಂದ ಮನೆಗೆ ಸಾಗಿಸುವ ಪರಿಪಾಠ ಆಗಿ ಬಿಟ್ಟಿದೆ! ಮೂರು ದಿವಸದ ಕಾರ್ಯಕ್ರಮದಲ್ಲಿ ಪ್ರತಿಸಲ ವೇದಿಕೆಯ ಮೇಲಿಂದ ಮಾತಾಡಿದಾಗಲೆಲ್ಲ ನಿಸಾರ್ ಅಹಮದರ ಮಾತಿನ ಮೋಡಿಯಲ್ಲಿ ತೇಲಿಹೋಗಿದ್ದೆವಾದರೂ ವೈಯಕ್ತಿಕ ಪರಿಚಯ ಆದದ್ದು ಈಗ ಹೊರಡುವ ಮೊದಲು ಕೇವಲ ಒಂದು ಗಂಟೆ ಹಿಂದೆ ಮಾತ್ರ. ಮೂರು ವಾರಗಳಿಂದ ಅವರನ್ನು ನೋಡಿಕೊಂಡಿದ್ದ ರಾಮಮೂರ್ತಿ ದಂಪತಿಗಳು ’ಇವರು ಸಾಲಿಯವರ ಮೊಮ್ಮಗ’ ಅಂತ ಪರಿಚಯಿಸಿದಾಗ ಒಮ್ಮೆಲೆ ಹಿಂದಿನ ತಲೆಮಾರಿನ ನನ್ನ ಅಜ್ಜನ ಕವಿಸಾಲುಗಳನ್ನು ಥಟ್ಟನೆ ನೆನಪಿಗೆ ತಂದು, ”ಕನ್ನಡದ ಪುಲ್ಲೆನಗೆ ಪಾವನ ತುಲಸಿ’ ಅಲ್ಲವೆ?” ಅಂತ ಉದ್ಧರಿಸಿದಾಗ ನನಗೆ ಆಶ್ಚರ್ಯ. ಹೊಸ ಪರಿಚಯ; ಇಬ್ಬರಿಗೂ ಸಂಕೋಚ. ಹಿಂದೆ ಕುಳಿತ ನನ್ನಾಕೆಗಂತೂ ಇನ್ನೂ ಹೊಸತು. ಹೇಗೋ ಏನೋ ಎಂದು ಅವರಿಗೂ ಅನಿಸಿರಲಿಕ್ಕೆ ಸಾಕು. ನಾವು ಆ ರೀತಿ ಚಿಂತಿಸುವ ಕಾರಣವಿರಲಿಲ್ಲ.  ಏಕೆಂದರೆ ಕಾರಿನಲ್ಲಿ ಮಾತನಾಡುತ್ತ ಹೊರಟ ಕೆಲವೇ ಸಮಯದಲ್ಲಿ ಪಕ್ಕದ ಸೀಟಿನಲ್ಲಿ ಕುಳಿತ ಅವರು ತೀರ ಹತ್ತಿರದವರಾಗಿ ಬಿಟ್ಟರು.

ಅವರ ದನಿಯಲ್ಲಿಯ ಆ ಮಾರ್ದವತೆ,  ಅವರ ಮಾತಿನ ಧಾಟಿಯಲ್ಲಿಯ ಆಕರ್ಷಣೆ, ಮಗುವಿನಂತಹ ಉತ್ಸಾಹ; ಇವೆಲ್ಲ, 34 ವರ್ಷಗಳ ಯುಕೆ ವಾಸಿಯಾದ ನಾವು ಕನ್ನಡ ಬಳಗಕ್ಕೆ ಬಂದಾಗಲಷ್ಟೇ ಇಷ್ಟೊಂದು ಭರ್ಪೂರ್ ಕನ್ನಡ ಕೇಳುವ ಅವಕಾಶವಿರುತ್ತಿತ್ತು. ನಮಗೆ ಅದೊಂದು ಅಪೂರ್ವ ಅನುಭವ. ಆಲ್ವೆಸ್ಟನ್‍ ಹಾಲಿನಿಂದ ಪೂರ್ವ ದಿಕ್ಕಿಗೆ ಹೊರಟ ನಾನ ಟೂರಿಸ್ಟ್ ಗೈಡ ನಂತೆ ದಾರಿಯಲ್ಲಿ ಸಿಕ್ಕ ಹಳ್ಳಿ ಊರುಗಳ ಸ್ಥಳ ಪುರಾಣ ಹೇಳಿ ಪರಿಚಯ ಮಾಡಿಸುತ್ತ ಹೊರಟೆ. “ಚೆಶಾಯರ್ ಬಿಟ್ಟು ಲ್ಯಾಂಕಾಶಾಯರ್ ದಾಟಿ ಯಾರ್ಕ್‍ಶಾಯರ‍್ ಕಡೆಗೆ ಹೊರಟಿದ್ದೇವೆ,” ಹೀಗೆ ನಡೆದಿತ್ತು ನನ್ನ ಕಾಮೆಂಟರಿ. ಅವರ ಮಾತಿನ ಮೋಡಿಯಲ್ಲಿ ಮಡುವಿನಲ್ಲಿ ಸಿಕ್ಕ ತರಗೆಲೆಯಂತಿತ್ತು ನನ್ನ ತಲೆ. ಡ್ರೈವ್ ಮಾಡುತ್ತ ನನಗಷ್ಟು ಪರಿಚವಿಲ್ಲದ ಮ್ಯಾಂಚೆಸ್ಟರ್ ಸುತ್ತಲಿನ ಮೋಟರ್ ವೇಗಳ ಚಕ್ರವ್ಯೂಹದಲ್ಲಿ ದಾರಿತಪ್ಪಿಸಿಕೊಂಡು ನಮ್ಮ ಮನೆ ಮುಟ್ಟಲು ಮೂರೋ ನಾಲ್ಕೋ ತಾಸುಗಳಾದರೂ (ಸಾಮಾನ್ಯವಾಗಿ ಎರಡು ಎರಡೂವರೆ ಸಾಕಿತ್ತು) ನನಗೆ ಏನೂ ಹಾನಿಯಾದಂತೆ ತೋಚಲಿಲ್ಲ. ನಾಡಿನ ಪದ್ಮಶ್ರೀಯನ್ನು ದಿನಂಪ್ರತಿ ಭೆಟ್ಟಿಯಾಗುವದಾಗಲಿ, ಅವರ ಸಂದರ್ಶನ ಪಡೆಯುವದಾಗಲಿ ಆಗುತ್ತದೆಯೆ? ಇಂದು ಈ ಸದಾವಕಾಶ ಸಿಕ್ಕದ್ದು ನನ್ನ ಭಾಗ್ಯವಲ್ಲವೆ?

ಹೆಸರಾದ ಕವಿ ಕಂಡ ’ಅನಾಮಿಕ ಆಂಗ್ಲರು’

 ದಾರಿಗುಂಟ ಈ ದೇಶದ ಹಚ್ಚ ಹಸಿರಿನ ಬಯಲುಗಳನ್ನು ಕಂಡು ಅವರ ಕವಿಹೃದಯ ಪುಲಕಿತವಾಗಿರ ಬೇಕು. ರ್ಯಾಕಶೈರ್, ಲ್ಯಾಂಕಶಾಯರ್ ಇತ್ಯಾದಿ ಎಂದ ಕೂಡಲೆ ಅವರಿಗೆ ತಮ್ಮ ಪದ್ಯ ’ಅನಾಮಿಕ ಆಂಗ್ಲರು’ನೆನಪಾಯಿತು. ಅದರಲ್ಲಿ ಇಂಗ್ಲೆಂಡಿನ ಬೇರೆ ಬೇರೆ ಪ್ರಾಂತಗಳಿಂದ ಬಂದ ಆಂಗ್ಲರು ಭಾರತದಲ್ಲಿ ಅಸು ನೀಗಿದಾಗ ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಿಂದ ಸಾವಿರಾರು ಮೈಲು ದೂರದ ಭಾರತದಲ್ಲಿಯೇ ಆಗಿ ಈಗ ಬಿಕೋ ಎನ್ನುವ ಅವರ  ಗೋರಿಗಳನ್ನು ಕಂಡಾಗ ಅವರು ಭಾವುಕರಾಗಿ ತಮ್ಮ ಭಾವನೆಗಳನ್ನು ಆ ಪದ್ಯದಲ್ಲಿ ವ್ಯಕ್ತ ಪಡಿಸಿದ್ದಾರೆ. ವಿಕ್ಟೋರಿಯಾ ರಾಣಿಯ ಸೇವೆ ಸಲ್ಲಿಸುತ್ತ, ಪರದೇಶದಲ್ಲಿ ಮಡಿದು, ಎಲ್ಲೋ ಹೂತು ಹೋಗಿ, ಆಂಗ್ಲ ಕವಿ ರೂಪರ್ಟ್ ಬ್ರುಕ್ ಬರೆದಂತೆ ”’That there’s some corner of a foreign field, that is forever England’’ ಎಂದು ಸಮಾಧಾನ ಪಟ್ಟುಕೊಂಡ ದುರ್ದೈವಿಗಳು. ಆ ನಂತರ ಸ್ವಲ್ಪ ಮುಂದೆ ಹೋದ ಮೇಲೆ “ಕಂಬ್ರಿಯ (Cumbria) ಪ್ರಾಂತದ ಗಡಿ ಅನತಿ ದೂರದಲ್ಲಿದೆ” ಎಂದ ಕೂಡಲೆ ವೃತ್ತಿಯಿಂದ ಜಿಯಾಲೊಗಿಸ್ಟ್ ಆಗಿದ್ದ ಅವರು ಭಿಇಗರ್ಭ ಶಾಸ್ತ್ರದ ಕ್ಯಾಂಬ್ರಿಯನ್ ಪೀರಿಯಡ್ ನನ್ನು ನೆನೆಪಿಸಿಕೊಂಡರು.

ನುಡಿದರೆ ಮುತ್ತಿನ ಹಾರದಂತಿರ ಬೇಕು’

ಈ ಸಂದರ್ಭದಲ್ಲಿ ರಜತ ಮಹೋತ್ಸವದ ಕಾವ್ಯ ಗೋಷ್ಠಿಯ ಸಮಯದಲ್ಲಿ ಅವರು ಮಾಡಿದ ಭಾಷಣವನ್ನು ನೆನಪಿಸಿ ಕೊಂಡೆ. https://soundcloud.com/shrivatsa-desai/prof-k-s-nisar-ahmed-speech-at-kbuk-kavigoshthi-august-2008.

ಬಸವಣ್ಣನವರ ’ನುಡಿದರೆ ಮುತ್ತಿನ ಹಾರದಂತಿರ ಬೇಕು’ ವಚನವನ್ನು ಅದೆಷ್ಟು ಸಲ ಈ ಮೊದಲು ನಾನು ಕೇಳಿರಲಿಕ್ಕಿಲ್ಲ. ಆದರೆ ನಿಸಾರ್ ಅವರು ಅದನ್ನು ಬಿಡಿಸಿ ಹೇಳಿದಂತೆ ಬೇರೆ ಯಾರೂ ಹೇಳಿದ್ದನ್ನು ನಾನು ಕೇಳಿದ್ದು ನೆನಪಿಲ್ಲ. ’ನುಡಿದರೆ ಸ್ಫಟಿಕದ ಸಲಾಕೆಯಂತಿರ ಬೇಕು’ಎನ್ನುವ ಸಾಲನ್ನು ಬಿಡಿಸಿ ಹೇಳಿ ಸ್ಫಟಿಕವೇ ಯಾಕೆ ಬೇಕು ಶಿಲ್ಪಿಗೆ? ”ಶಿಲ್ಪಿ ತನ್ನ ಕೃತಿರತ್ನಕ್ಕೆ ಜೀವ ಕೊಡುವಾಗ ಕೊನೆಯಲ್ಲಿ ಕಣ್ಣನ್ನು ತೀಡುತ್ತಾನೆ. ಅದಕ್ಕೆ ಸ್ಫಟಿಕದ (Alum) ಶಲಾಕೆಯನ್ನೇ ಉಪಯೋಗಿಸುತ್ತಾನೆ.” ಅಂದರು. ಆ ಖನಿಜ ಜ್ಞಾನ ಇನ್ನಾರಿಗುಂಟು? ಆ ಶಿಲ್ಪಿಯ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ನನಗೆ!

ಹಾಗೂ ಹೀಗೂ ಮನೆಯ ಹಾದಿ ಸಿಕ್ಕು ಮನೆಗೆ ಬಂದು ಚಹಾ ಪಾನಿ ಆಯಿತು. ಅವರ ಮಾತಿನ ಶೈಲಿ, ದನಿಯಲ್ಲಿಯ ಸ್ನಿಗ್ಧತೆ, ಸಂಬೋಧನೆಯ ರೀತಿ ಇವೆಲ್ಲ ನನ್ನಾಕೆಗೆ ಅವಳ ತಂದೆಯ ನೆನಪು ತಂದು ಕೊಟ್ಟಿತು. ಪ್ರಯಾಣದ ಸುಸ್ತು, ತನ್ನ ಅಸ್ವಾಸ್ಥ್ಯದ ದಣಿವು ಎಲ್ಲ ಹೋಗಿ ಹೇಗೋ ಚೇತರಿಸಿಕೊಂಡು ಬಿಟ್ಟಳು, ಗಾಲಿಬನ ’ಶೇರ್’ನ ರೋಗಿಯಂತೆ! (“ವೋ ಸಮಝತೇ ಹೈ, ಬೀಮಾರ್ ಕಾ ಹಾಲ್ ಅಚ್ಛಾ ಹೈ!” ಕಾವ್ಯ ಗೋಷ್ಠಿಯಲ್ಲಿ ನಿಸಾರ್ ಅವರೇ ಹೇಳಿದ್ದು ನೆನಪಿದೆ ತಾನೆ?).

ಅವಳು ರಾತ್ರಿಯ ಊಟದ ತಯ್ಯಾರಿ ಶುರು ಮಾಡಿದಂತೆ ನಾವು ಹರಟಲು ಪ್ರಾರಂಭ ಮಾಡಿದೆವು. ನಮ್ಮ ಮನೆಯ ಹಿತ್ತಲದ ಪುಟ್ಟ ಕೈತೋಟ ಅವರಿಗೆ ಹಿಡಿಸಿ ಬಿಟ್ಟಿತು. ಇಲ್ಲಿಯ ಹಸಿರು ಹುಲ್ಲಿನ ಪ್ರಭಾವ ಇರ ಬೇಕು. ಕವಿಯ ಮನಸ್ಸು ಹಗುರಾಗಿರ ಬೇಕು. ನನ್ನ ಬೇಡಿಕೆಗೆ ಮಣಿದು ತಮ್ಮ ಕೆಲವು ಪದ್ಯಗಳನ್ನು ಓದಿದರು; ಅವರ ಅನುಮತಿಯಿಂದ ಧ್ವನಿಮುದ್ರಿಸಿ ವಿಡಿಯೋ ಮಾಡಿದೆ. http://www.youtube.com/watch?v=u2laN3CIjNk (ಲೇಖನದ ಕೊನೆಯಲ್ಲಿಯ ಲಿಂಕ್ 2 ಮತ್ತು ಬಳಗದ ವೆಬ್ ಸೈಟು ನೋಡಿರಿ.)

ನಮ್ಮ ಮನೆಯಲ್ಲಿ ’ನಿತ್ಯೋತ್ಸವ!’

ಕನ್ನಡ ಬಳಗದ ಕಾರ್ಯಕ್ರಮಗಳ ಮಧ್ಯೆ ಪಾಪ, ಉಮಾ ವೆಂಕಟೇಶ್ ಅವರಿಗೆ ಇವರ ಇಂಟರ್ವ್ಯೂ ಮಾಡ ಬೇಕಿತ್ತಂತೆ, ಆಗಲೇ ಇಲ್ಲ ಎಂದು ಹಳಹಳಿಸಿದರಂತೆ. “ನನ್ನ ಕೈಯಲ್ಲಿ ಈಗ ನೀವು ಸಿಕ್ಕಿದ್ದೀರಿ. ಇಲ್ಲಿ ಶಾಂತಿಯಿದೆ;  ಕ್ಷಣಕ್ಕೊಮ್ಮೆ ಮಾತಾಡಿಸುವ, ಹಸ್ತಾಕ್ಷರ ಬೇಡುವ ಜನರ ಕಿರಿಕಿರಿಯಿಲ್ಲ! ಈಗಲೇ ಆ ಸಂದರ್ಶನ ಮಾಡಿ ಬಿಡುವಾ!” ಎಂದೆ. ಏನೂ ಬೇಜಾರಿಲ್ಲದೆ ಮನಸ್ಸು ಬಿಚ್ಚಿ ನಿರರ್ಗಳವಾಗಿ ಕ್ಯಾಮರಾ ಇದಿರು ಮಾತಾಡಿದರು; ತಮ್ಮ ಕವನಗಳನ್ನು ಓದಿದರು. ಒಂದನ್ನು ಈಗಾಗಲೆ ಮೇಲೆ ಉಲ್ಲೇಖ ಮಾಡಿದ್ದೇನೆ. ಎರಡನೆಯದು ಅವರ “ನಿತ್ಯೋತ್ಸವ”. ಅದನ್ನು ಓದಿದ್ದು ಅಷ್ಟೇ ಅಲ್ಲ, ಅದು ಮತ್ತಿತರ ಕವನಗಳು ಹುಟ್ಟಿದ ಹಿನ್ನೆಲೆಯನ್ನೂ ಸವಿಸ್ತಾರವಾಗಿ ಹೇಳಿದರು. ನಾನು ಕಾಲೇಜಿನಲ್ಲಿದ್ದಾಗ ಓದಿ ಮೆಚ್ಚಿಕೊಂಡ “ಕುರಿಗಳು ಸಾರ್, ಕುರಿಗಳು” ಮತ್ತೆ ಅವರ ಬಾಯಿಂದ ಕೇಳಿ ಮನಸ್ಸಿಗೆ ಬಹಳ ತೃಪ್ತಿಯಾಯಿತು.

ಸ್ವಲ್ಪ ಮೊದಲು ನಮ್ಮ ತೋಟದಲ್ಲಿ ಶತಪಥ ಹಾಕಿದ್ದು ಸಾಲದೆಂದು, ವಾಕಿಂಗಿಗೆ ಹೋಗುವಾ ಎಂದು ನನ್ನ ಕರಕೊಂಡು ಹೊರಗೆ ಹೊರಟರು. ಮನೆಯ ಪಕ್ಕದಲ್ಲೇ ಒಂದು ವಿಹಾರದ ಕೆರೆಯಿದೆ. ಅದರ ಸುತ್ತ ಪ್ರದಕ್ಷಿಣೆ ಮಾಡಿ ಬಂದೆವು. ಎಪ್ಪತ್ತರ ಗಡಿ ದಾಟಿದ, ಹೃದಯದ ಬೈಪಾಸು ಮಾಡಿಸಿಕೊಂಡ ಅವರು “ಇನ್ನೂ ವೇಗದಿಂದ ನಡೆಯಿರಿ” ಎಂದು ನನ್ನನ್ನು ಛೇಡೀಸುತ್ತ  ಚಕ ಚಕ ಮುಂದೆ ನಡೆದು ಹೋಗಿಬಿಡುತ್ತಿದ್ದರು! ಕೆರೆಯ ಮಧ್ಯದಲ್ಲಿ ಒಂದು ಕಾರಂಜಿಯುಂಟು. ಇವರ ಸ್ಫೂರ್ತಿ ಅದನ್ನು ಮೀರಿ ಚಿಮ್ಮುತ್ತಿತ್ತು! ಮಾತು ಕತೆಗೆ ರಂಗೇರಿತ್ತು. ಸಮ್ಮೇಲನದ ನೆನಪುಗಳು ಮರುಕಳಿಸಿದವು. ಅಲ್ಲಿ ಚಿಕ್ಕವರು ಅವರನ್ನು ಏನೆಂದು ಕರೆಯ ಬೇಕು? ಅನ್ನುವ ಪ್ರಶ್ನೆ ಬಂತಂತೆ: “ಅಂಕಲ್ ಅನ್ನಿ, ಪರವಾಗಿಲ್ಲ. ಅಜ್ಜ ಅನ್ನ ಬೇಡಿ!” ಇವರ ಬಿನ್ನಹ! ಮುಂದೆ ನಡೆದಾಗ ಹವೆ ಸೇವಿಸುತ್ತ ಇದುರಿಗೆ ಬಂದ ಬಿಗುಮಾನದ ಬಿಳಿಯ ಜೋಡಿಯನ್ನು ಮಾತನಾಡಿಸಿಯೂ ಬಿಟ್ಟರು. ಇವರಾರು ಎಂದು ಆಂಗ್ಲರಿಗೆ ಪರಿಚಯ ಮಾಡಿಕೊಟ್ಟಾಗ ಅವರಿಗೂ ಸಂತೋಷ! ”ಇವರು ಪ್ರೊ ನಿಸಾರ್ ಅಹಮದ್, ಪದ್ಮಶ್ರೀ ಅಂದರೆ ನಿಮ್ಮOBE ತರಹ.” ಅಂದೆ. ಅವರಿಬ್ಬರೂ ಇವರೊಂದಿಗೆ ಫೋಟೋ ತೆಗೆಸಿಕೊಂಡು ಇವರ ಭೆಟ್ಟಿಯಾದುದಕ್ಕೆ ತಾವು ಧನ್ಯರು ಎಂದು ಅನಿಸಿಕೊಂಡು, ಮುಂದೆ ಸಾಗಿದರು. ರಾತ್ರಿ ಊಟ ಮಾಡಿ ಮಲಗಿದೆವು.

 ’Journey’s Friend’

ಫೋಟೋ: ವಿಜಯ ಚಿಲ್ಲಾಳ

ನನ್ನ ಆಸ್ಪತ್ರೆ ಡ್ಯೂಟಿ ಇದ್ದರೂ ಮರುದಿನ ಮನೆಯಲ್ಲೆ ಇದ್ದು ಇವರೊಡನೆ ಕೆಲವು ಗಂಟೆಗಳು ಕಳೆಯಲು ಮನಸ್ಸು ಎಳೆಯುತ್ತಿತ್ತು, ಆದರೂ ನಾನು ಕೆಲಸಕ್ಕೆ ಹೋಗಲೇ ಬೇಕಾಯಿತು. ಈ ದೇಶದಲ್ಲಿ ಅಷ್ಟು ಸುಲಭವಾಗಿ ’ಫ಼್ರೆಂಚ ಲೀವು’ ತೆಗೆದು ಕೊಳ್ಳಲಾಗುತ್ತದೆಯೇ? ಅವರ ದೇಖರೇಖಿಯನ್ನು ಮಡದಿ ವಾಣಿಯ ಕೈಯಲ್ಲಿ ಬಿಟ್ಟು ಆಸ್ಪತ್ರೆಗೆ ಹೋದೆ. ಅಂದು ಸಾಯಂಕಾಲ ಅವರನ್ನು ನ್ಯೂಕ್ಯಾಸಲ್ ಗೆ ಹೋಗುವ ರೇಲು ಗಾಡಿಗೆ ಹತ್ತಿಸಿ ಪುರಾಣಿಕ ದಂಪತಿಗಳ ಮನೆಗೆ ತಲುಪಿಸ ಬೇಕಿತ್ತು. ಮಿತ್ರ ವಿಜಯ ಚಿಲ್ಲಾಳ ಅವರಿಗೆ ನಿಸಾರ್ ಅವರನ್ನು ಸ್ಟೇಶನ್ನಿಗೆ ತಮ್ಮ ಕಾರಿನಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಿದೆ. “ಸಾಯಂಕಾಲ ನಮ್ಮ ನಿಮ್ಮ ಭೇಟಿಯಾಗಲಿಕ್ಕಿಲ್ಲ” ಎಂದು ಬೀಳ್ಕೊಟ್ಟು ಹೋದೆ. ಮನಸ್ಸು ಕೇಳುತ್ತದೆಯೇ? ಭರದಿಂದ ಆ ದಿನದ ಕೆಲಸ ಮುಗಿಸಿ ಹೇಗೋ ಬಿಡುವು ಮಾಡಿಕೊಂಡು ಸಂಜೆಗೆ ಸ್ಟೇಶನ್ನಿಗೆ ಓಡಿದೆ. ಇನ್ನೇನು ಟ್ರೇನು ಬರುವ ಸಮಯ. ಪ್ಲಾಟ್‍ಫ಼ಾರ್ಮಿನ ಮೇಲೆ ಅವರು, ವಾಣಿ ಮತ್ತು ವಿಜಯ ಟ್ರೇನಿಗೆ ಕಾಯುತ್ತ ನಿಂತಾಗ ಎದುರಿಗೆ ಬಂದ ನನ್ನನ್ನು ಕಂಡು ಮಗುವಿನಂತೆ ಕುಣಿದರು: “ಓ ಹೋ, ಬಂದರು ನೋಡಿರಿ, ದೇಸಾಯರು, ಫೋಟೋ, ಫೋಟೋ!” ಎಂದು ಓಡಿ ಬಂದು ಮತ್ತೆರಡು ಫ಼ೋಟೋ ’Journey’s Friend’ ಕಿಯೋಸ್ಕ್ ಮುಂದೆ ತೆಗೆಸುತ್ತಿರುವಾಗಲೇ ರೇಲು ಗಾಡಿ ಬಂದು ಅವರನ್ನು ಎತ್ತಿಕೊಂಡು ಮುಂದೆ ಹೋಯಿತು. ಅವರನ್ನು ಬೀಳ್ಕೊಟ್ಟು ಕೈ ಬೀಸುತ್ತ ನಿಂತೆವು. ಅವರೊಡನೆ ಕಳೆದ ರಸ ನಿಮಿಷಗಳನ್ನು ನೆನೆಯುತ್ತಾ ಅದೆಷ್ಟು ಸಮಯ ನಿಂತಿದ್ದೆವೋ, ನಮಗೇ ತಿಳಿಯಲಿಲ್ಲ. ರೇಲು ಗಾಡಿ ನಮ್ಮ ಪಾರ್ಸಲ್ಲನ್ನು ಹೊತ್ತು ಮುಂದಿನ ತಾಣಕ್ಕೆ ಹೊರಟಿತ್ತು

ಸೀಮೆ ದಾಟಿ ಬಂದ ನಿಸಾರರೊಂದಿಗೆ ಇದು ನನ್ನ ಪ್ರಥಮ ಭೇಟಿಯಾಗಿತ್ತು. ತಮ್ಮ ಸೌಜನ್ಯ, ಆಚಾರ-ವಿಚಾರ, ಮಾತು-ನುಡಿ, ಪಾಂಡಿತ್ಯ, ಪ್ರತಿಭೆಯಿಂದ ಮತ, ದೇಶ, ಪಂಥದ ಸೀಮೆ ದಾಟಿದ ನಿಸ್ಸೀಮ ನಿಸಾರರ ದರ್ಶನವಾಗಿತ್ತು!

ಬೆಂಗಳೂರಿಗೆ ಮರಳಿ ಮನೆಗೆ ಹೋದ ನಂತರ ಸ್ವಹಸ್ತದಿಂದ ಬರೆದ ಅವರ ಪತ್ರವನ್ನು ಮತ್ತು ನನ್ನಾಕೆ ಹೋದಾಗ ಬರೆದ ಸಾಂತ್ವನ ಪತ್ರವನ್ನೂ ಸಹ ಇನ್ನೂ ಕಾಯ್ದಿಟ್ಟಿದ್ದೇನೆ.

ಆ ಮಹಾನ್ ಚೇತನಕ್ಕೆ ಶ್ರದ್ಧಾಂಜಲಿ.

           — ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್

Links:

1)www.youtube.com/watch?v=x1jAH5OQfMg

2)www.youtube.com/watch?v=u2laN3CIjNk

3)https://www.kannadabalaga.org.uk/videos/

ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್

5) Fond memories of Prof Nisar Ahmed BhaiyyaDr Bhanumathi

My indelible impression of his company and the quality time I spent with him and his beloved sister ( hence he became my Bhaiyya too as I addressed him that way) was when I was invited to attend the Vishwa Kannada Sammelana in Belgaum in 2011. We stayed in the same hotel and we 3 always travelled together to and from the venue all 3 days. So we always met up for breakfast and for dinner. He would seek me out at nights before returning from the venue so I would not be lonely. He had requested for a common vehicle and a common escort for all 3 of us. I cannot forget the lovely protective feeling he bestowed upon me. I miss that brotherly love so much now. I had continued to visit him on our annual holidays every year but unfortunately had not managed to meet him yet this year for various reasons.

Prior to 2011, our first meet was when Ramamurthy and I had personally gone to his house in 2007 to invite Prof KSN to be our chief guest for our Rajatamahotsava in 2008. Unfortunately as I was unwell with cancer from early 2008 , I was not able to spend quality time with him during the 3 day celebration but can never forget his depth of knowledge, his simplicity , modesty and humbleness. His letter addressed to me personally in his own handwriting appreciating our Kannada Balaga and the good times he had during that visit demonstrates his simplicity and good nature. Wish that letter could be publicized here. (Post-publication edit: the link will take you to the letter: Ed): https://anivaasi.com/wp-content/uploads/2020/05/nisaarahmadlettertodrbhanumati.jpg

All in all, Appaji and I both miss my beloved Bhaiyya deeply. May his soul Rest In Peace. I will seek out his sister after the lockdown is lifted so I would be able to grieve with his family.

Dr K S Bhanumathi

2008 ರಲ್ಲಿ ಅಲ್ವೆಸ್ಟನ್ ಹಾಲ್ ಎದುರಿನ ಮೈದಾನದಲ್ಲಿ ಕುಳಿತ ಕನ್ನಡ ಬಳಗ ಯು ಕೆ ದ ಸದಸ್ಯರೊಡನೆ ಮುಖ್ಯ ಅತಿಥಿಗಳು. ಮುಂದಿನ ಸಾಲಿನಲ್ಲಿ ಮಧ್ಯದಲ್ಲಿ (ಕರಿಯ ಉಡುಪು ತೊಟ್ಟ) ನಿಸಾರ್ ಅಹ್ಮದ್ ಅವರನ್ನು ಗುರುತಿಸ ಬಹುದು. (ಫೋಟೋ ಕೃಪೆ: ಕನ್ನಡ ಬಳಗ ಯು ಕೆ

 

ಕೃಪೆ:  ಮೊದಲನೆಯ ಫೋಟೋ: ಅಂತರ್ಜಾಲದಿಂದ

Links in text: Srinivasa Mahendrakar

 

 

 

23 thoughts on “ಫ್ರೊ. ಕೆ.ಸ್. ನಿಸಾರ್ ಅಹ್ಮದ್ ರವರಿಗೆ ‘ಅನಿವಾಸಿಯ’ ಶ್ರದ್ಧಾಂಜಲಿ

  1. ಇಂಗ್ಲೆಂಡಿನಲ್ಲಿ ಕನ್ನಡದ ಮೇರು ಕವಿ ನಿಸಾರ್!! ನೀವೆಲ್ಲ ಹಂಚಿಕೊಂಡಿರುವ ನೆನಪುಗಳನ್ನು ಓದಿದಾಗ ಬಲು ಖುಷಿಯಾಯ್ತು. ಆ ನೆನಪುಗಳಲ್ಲಿ ನಿಸಾರರ ಕವಿತ್ವ-ವ್ಯಕ್ತಿತ್ವ – ಕನ್ನಡ ಸತ್ವ ಅಡಕವಾಗಿದೆ. ಒಮ್ಮೊಮ್ಮೆ ಢಾಳಾಗಿ, ಒಮ್ಮೊಮ್ಮೆ ಸೂಕ್ಮವಾಗಿ. ನಿಮ್ಮಗಳ ಪ್ರತಿಯೊಂದು ಬರಹವೂ ಆ ಮೃದು-ಮೆಲು ಮಾತಿನ, ಸಜ್ಜನ ಸ್ವಭಾವದ ಕವಿಗೆ ಸಂದ ಸನ್ಮಾನ ಮತ್ತು ಗೌರವವಾಗಿದೆ. ಅಭಿನಂದನೆಗಳು.
    ವಿನತೆ ಶರ್ಮ

    Like

    • ಧನ್ಯವಾದಗಳು, ವಿನತೆಯವರೇ. ಅವರ ಅಭಿಮಾನಿಗಳು ಓದಿ ಪ್ರತಿಕ್ರಿಯಿಸುವದು ನಮಗೆಲ್ಲ ಸಂತೋಷ ಕೊಟ್ಟಿದೆ.

      Like

  2. ಇಂಗ್ಲೆಂಡಿನಲ್ಲಿ ಕನ್ನಡದ ಮೇರು ಕವಿ ನಿಸಾರ್!! ನೀವೆಲ್ಲ ಹಂಚಿಕೊಂಡಿರುವ ನೆನಪುಗಳನ್ನು ಓದಿದಾಗ ಬಲು ಖುಷಿಯಾಯ್ತು. ಆ ನೆನಪುಗಳಲ್ಲಿ ನಿಸಾರರ ಕವಿತ್ವ-ವ್ಯಕ್ತಿತ್ವ – ಕನ್ನಡ ಸತ್ವ ಅಡಕವಾಗಿದೆ. ಒಮ್ಮೊಮ್ಮೆ ಢಾಳಾಗಿ, ಒಮ್ಮೊಮ್ಮೆ ಸೂಕ್ಮವಾಗಿ. ನಿಮ್ಮಗಳ ಪ್ರತಿಯೊಂದು ಬರಹವೂ ಆ ಮೃದು-ಮೆಲು ಮಾತಿನ, ಸಜ್ಜನ ಸ್ವಭಾವದ ಕವಿಗೆ ಸಂದ ಸನ್ಮಾನ ಮತ್ತು ಗೌರವವಾಗಿದೆ. ಅಭಿನಂದನೆಗಳು.
    ವಿನತೆ ಶರ್ಮ

    Like

  3. ಅದ್ಭುತ , ಮನತುಂಬಿ ಬರುವ, ಎದೆಯಾಳದ ಶ್ರದ್ಧಾಂಜಲಿ ಲೇಖನಗಳ ಮಾಲೆ! ಒಂದೊಂದು ಬರಹವೂ ನಿಸಾರ್ ಅಹ್ಮದ್ ಅವರ ವ್ಯಕ್ತಿತ್ವದ ಒಂದೊಂದು ಮುಖದ ಮೇಲೆ ಬೆಳಕು ಚೆಲ್ಲುತ್ತದೆ ಅಂದರೆ ಅತಿಶಯೋಕ್ತಿ ಖಂಡಿತಾ ಅಲ್ಲ. ಅವರ ಡ್ರೆಸ್,ಅವರ ರುಚಿ, ಅವರ ಆಸಕ್ತಿ, ಆಸ್ಥೆ ಗಳ ತುಂಬು ಬರಹಗಳ ಗೊಂಚಲು ‌. ಕನ್ನಡಿಗರಾಗಿ, ಕರ್ನಾಟಕದಲ್ಲಿಯೇ ಇದ್ದರೂ ಅರಿಯದ ಅನೇಕ ವಿಷಯಗಳ ಹೊಳವು ಇಲ್ಲಿ ಕಂಡೆ ನಾ.ಶ್ರೀವತ್ಸ ದೇಸಾಯಿ ಯವರ ಬರಹ ನಿಜಕ್ಕೂ ಅನೇಕ ವಿಷಯಗಳ ಆಗರ. ನಿಸಾರ್ ಅವರ ಮಗು ಮನದ ಚಿತ್ರಣ ಅಲ್ಲಿ ಸಿಕ್ತು ನನಗೆ, ಅವರ ಕವಿ ಮನದ ಮಿಡಿತ ತುಡಿತ ಗಳ ನೇಯ್ಗೆಯ ಎಳೆಯೊಂದು ಕಂಡ್ತು.ಉಮಾ ವೆಂಕಟೇಶ್ ಅವರ ಬಿನ್ನವತ್ತಳೆ ಓದುವಿಕೆಯ ಬರಹ ಓದಿ ಒಂದು ಕ್ಷಣ ಭಾವುಕಳಾಗಿ ಬಿಟ್ಟೆ ನಾ.ಇನ್ನುಳಿದ ಪ್ರತಿ ಬರಹವೂ ಅಷ್ಟೇ.ಯಾವುದನ್ನ ಹೇಳಲಿ, ಏನು ಬಿಡಲಿ ಎಂಬಂತೆ.ಅಷ್ಟು ಹತ್ತಿರದಿಂದ ಅವರನ್ನು ಕಂಡ ನಿಮ್ಮ ಅನುಭವ ಓದಿ ಒಂದು ಕ್ಷಣ ಅಸೂಯೆ ನನಗೆ. ಅನಿವಾಸಿ ಯ ಈ ಕಂತು ಅತ್ಯಂತ ಅಮೂಲ್ಯ, ಅಪೂರ್ವ! ಸಂಗ್ರಹಯೋಗ್ಯ ! ಇಂಥ ಲೇಖನಗಳನ್ನು ನೀಡಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು.ಹಾಗೇ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Like

  4. ನಿಮ್ಮ ಲೇಖನಗಳ ಗುಚ್ಛದ ಮೂಲಕ ನಿಸಾರ್ ರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದೀರಿ. ಧನ್ಯವಾದಗಳು.

    Like

  5. ನಿಸಾರ್ ಅಹ್ಮದ್ ರವರ ಜೊತೆಗಿನ ವಯಕ್ತಿಕ ಅನುಭವಗಳನ್ನು ಹಂಚಿಕೊಂಡಿರುವ ಎಲ್ಲ ಲೇಖಕರಿಗೂ ಅಭಿನಂದನೆಗಳು. ನಿಜವಾದ ಸ್ಮರಣೆ ಎಂದರೆ ಇದೇ ಅಲ್ಲವೇ. ಅವರೊಡನೆ ಒಡನಾಡಿದ ನೀವೇ ಧನ್ಯರು.
    ಈ ಅನುಭವಗಳನ್ನು ಕಲೆಹಾಕಿ, ಸುಂದರ ಸಂಪಾದಕೀಯದೊಂದಿಗೆ ಪ್ರಸ್ತುತ ಪಡಿಸಿರುವ ಸಂಪಾದಕರಿಗೆ ಧನ್ಯವಾದಗಳು

    Like

    • ಧನ್ಯವಾದಗಳು, ಶ್ರಿನಿವಾಸ ಅವರೆ. ಆ ಎರಡು ಲಿನ್ಕ್ ಗಳನ್ನು ಮಾಡಿಕೊಟ್ಟದ್ದಕ್ಕೆ ತುಂಬಾ ಆಭಾರಿ!

      Like

  6. ಗೌರಿ ಪ್ರಸನ್ನ ಬರೆದ ಕಮೆಂಟ್:
    ಸವಿ ಸವಿ ನೆನಪು…ಸಾವಿರ ನೆನಪು..ನಿಮ್ಮೆಲ್ಲರ ಅಪೂವ೯ ಕ್ಷಣಗಳನ್ನು ನಮ್ಮೆದಿರುಸಾಕಾರಗೊಳಿಸಿದ ಲೇಖನ. ತುಂಬ ಆಪ್ತವೆನ್ನಿಸಿತು.ನಿಜವಾದ ಅಥ೯ದಲ್ಲಿ ಶೃದ್ಧಾಂಜಲಿ.

    Like

  7. ದೇಸಾಯಿ ಅವರೇ, ದಿ. ನಿಸಾರ್ ಅಹಮದ್ ಅವರು ಕನ್ನಡ ಬಳಗ ರಜತ ಮಹೋತ್ಸವದ ಕವಿ-ಗೋಷ್ಠಿಯಲ್ಲಿ ಮಾಡಿದ ಭಾಷಣವನ್ನು ನೀವು ರೆಕಾರ್ಡ್ ಮಾಡಿದ್ದೀರಿ ಅನ್ನುವುದು ನನಗೆ ಮರೆತೇ ಹೋಗಿತ್ತು. ನಿಸಾರ್ ಅವರ ಧ್ವನಿಯನ್ನು ಕೇಳಿ ಮತ್ತೊಮ್ಮೆ ಅಂದಿನ ಕವಿ-ಗೋಷ್ಠಿಯ ಸವಿ ನೆನಪುಗಳು ನನ್ನ ಮನಸ್ಸನ್ನು ಮುದಗೊಳಿಸಿದವು. ಧನ್ಯವಾದಗಳು.
    ಉಮಾ ವೆಂಕಟೇಶ್.

    Like

      • Shrivatsa Desai avare, we are all very grateful for preserving this treasure, listening to it again after 12 years brought back memories of this great man and indeed great a occasion. Please upload this audio clip on KB website, it should never be allowed to fade away.
        Ramamurthy

        Like

        • ರಾಮಮೂರ್ತಿಯವರೇ ಧನ್ಯಯವಾದಗಳು! ನಿಮ್ಮಂತೆಯೇ ಆ ದಿನಗಳನ್ನು ಮತ್ತು ರಸನಿಮಿಷಗಳನ್ನು ಮತ್ತೆ ಮೆಲಕು ಹಾಕಿದವರನೇಕ. ಕನ್ನಡ ಬಳಗದ ಕಾರ್ಯದರ್ಶಿಯವರನ್ನು ಸಂಪರ್ಕಿಸುವೆ. ಈಗಾಗಲೇ ‘Cloud’ನಲ್ಲಿರುವದರಿಂದ – ಅವರ ಶಬ್ದಗಳನ್ನು ಉಪಯೋಗಿಸಿ – ‘ಬಲು ಕಷ್ಟ’ವಾಗಲಿಕ್ಕಿಲ್ಲ! ಇನ್ನೊಂದು ವಿಷಯ: ಬಿನ್ನವತ್ತಳೆಯನ್ನು ಇಲ್ಲಿ. ‘ಅನಿವಾಸಿ’ಗೆ ತರುವ ಪ್ಪಯತ್ನದಲ್ಲಿದ್ದೇವೆ. – ಶ್ರೀವತ್ಸ

          Like

  8. ನಿಸಾರರ ಮೇಲೆ ಐದು ಬರಹಗಳು! `ಅನಿವಾಸಿ`ಗೆ ಬರಹಗಳೇ ಇಲ್ಲ ಎನ್ನುವ ಬರಗಾಲದಲ್ಲಿ, ನಿಸಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಐವರು ಬರೆದದ್ದು, ನಿಸಾರ್ ಅವರು ವ್ಯಕ್ತಿತ್ವವನ್ನು ತೋರಿಸುತ್ತದೆ. ಅಲ್ಲದೇ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಬರಹಗಳನ್ನು ಒಟ್ಟಿಗೆ ಸೇರಿಸಿ ಸುಂದರ ಸಂಪಾದಕೀಯವನ್ನು ಬರೆದ ದಾಕ್ಷಾಯಿಣಿ ಅವರಿಗೆ ಅಭಿನಂದನೆಗಳು.

    ಅರವಿಂದ ಅವರದು ಚಿಕ್ಕ ಬರಹವಾದರೂ ಆಪ್ತ ಬರಹ.

    ನಿಸಾರ್ ಅವ್ವರು ಟೈ ಸೂಟುಗಳಿಲ್ಲದೇ ಯಾವ ಸಮಾರಂಭಗಳಿಗೂ ಹೋಗುತ್ತಿರಲಿಲ್ಲ ಎನ್ನುವ ಸೂಕ್ಷ್ಮ ಅವಲೋಕವನ್ನು ಮಾಡಿದ್ದಾರೆ. ಈ ಒಂದು ವಿಷಯವೇ ಕವನದ ಪ್ರತಿಮೆಯಂತಿದೆ.

    ಉಮಾ ಅವರು ಬರೆದಿರುವ ಲೇಖನ ಕಣ್ಣಿಗೆ ಕಟ್ಟುವಂತಿದೆ. ಉಮಾ ಅವರದು ಅಸ್ಖಲಿತ ಸ್ಪಷ್ಟ ಕನ್ನಡ. ಅವರ ಭಾಷಣದ ಧ್ವನಿ ಮುದ್ರಿಕೆ ಇದ್ದರೆ ಕೇಳಬಹುದೇನೋ? ಉಮಾ ಅವರು ನಿಸಾರ್ ಅವರ ಎದುರು ಭಾಷಣ ಮಾಡುವಾಗ ಆದ ರೋಮಾಂಚನವನ್ನು ಓದಿ ನಮಗೂ ರೋಮಾಂಚನವಾಯಿತು.

    ದೇಸಾಯಿಯವರ ಲೇಖನ ಅದ್ಭುತವಾಗಿದೆ. ದೇಸಾಯಿಯವ ಬರಹ ಇತಿಹಾಸಕಾರನ ಡೈರಿಯಂತೆ. ಸಣ್ಣ ಸಣ್ಣ ವಿಷಯಗಳನ್ನೂ ನೆನಪಿಟ್ಟು ಸಮಂಜಸವಾಗಿ ಬರೆಯುತ್ತಾರೆ. ಸ್ಫಟಿಕದ ಸಲಾಕೆಯ ಬಗ್ಗೆ ನಿಸಾರ್ ಹೇಳಿದ ಮಾತು ಬಹುಷಃ ಇನ್ನೆಲ್ಲೂ ದಾಖಲಾದ ಬಗ್ಗೆ ನನಗೆ ತಿಳಿದಿಲ್ಲ. ನಿಸಾರ್ ಅಂಬ ಶಾಯರ್-ನನ್ನು ಚೆಶಾಯರ್ ಲ್ಯಾಂಕಾಶಾಯರ್ ಎಲ್ಲ ಓಡಾಡಿಸಿ ಅವರ ಸಂದರ್ಶನ ಮಾಡಿ ಅವರ ಕವನಗಳನ್ನು ಅವರ ಬಾಯಿಂದಲೇ ಕೇಳಿದ ಭಾಗ್ಯವಂತರು, ದೇಸಾಯಿ. ವಿಡಿಯೋಗಳನ್ನು ಮಾಡಿ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಭಾನುಮತಿಯವರ್ ಮೆಲುಕು ಕನ್ನಡ ಬಳಗವು ಸಾಹಿತಿಗಳನ್ನು ಅದೆಷ್ಟು ಆದರದಿಂದ ಕಾಳಜಿಯಿಂದ ನೋಡಿಕೊಳ್ಳುತ್ತದೆ ಎನ್ನುವುದನ್ನು ಆಪ್ತವಾಗಿ ಬರೆದಿದ್ದಾರೆ.

    `ಅನಿವಾಸಿ`ಯಿಂದ ನಿಸಾರ್ ಅವರಿಗೆ ಈ ಲೇಖನಗುಚ್ಛದ ಶ್ರದ್ಧಾಂಜಲಿ ಅನನ್ಯ.

    – ಕೇಶವ

    Like

    • ಧನ್ಯವಾದಗಳು, ಕೇಶವ ಅವರೆ. ನಿಮ್ಮ ವಿಶ್ಲೇಶಣೆ ಈ ಗುಚ್ಛದ ಮೇಲೆ ಇನ್ನಷ್ಟು ಬೆಳಕು ಚೆಲ್ಲಿದೆ; ಅದರ ಕಂಪನ್ನು ಹೆಚ್ಚಿಸಿದೆ! ಅವರ ವ್ಯಕ್ತಿತ್ವ, ಮಾತು, ನಡತೆ ಹತ್ತಿರ ಬಂದವರನ್ನು ಆಕರ್ಷಿಸಿ ಮಂತ್ರಮುಗ್ಧರನ್ನಾಗಿ ಮಾಡಿ ಬಿಡುತ್ತಿತ್ತು. ನಿಜ, ಆ ಸ್ಫಟಿಕದ ಸಲಾಕೆಯ ಉಲ್ಲೇಖ ಈ ಮೊದಲು ನಾನಂತೂ, ಕೇಳಿರಲಿಲ್ಲ ನೋಡಿಲ್ಲ. ಅದನ್ನು ಅವರ ಬಾಯಿಯಿಂದಲೇ ಕೇಳುವ ಸುದೈವಿಗಳು ನೀವು ಮತ್ತು ಈ ಕೆಳಗಿನ ಸೌಂಡ್ ಕ್ಲೌಡ್ (SoundCloud) ಕೊಂಡಿಯನ್ನು ಒತ್ತಿದವರು.https://soundcloud.com/shrivatsa-desai/prof-k-s-nisar-ahmed-speech-at-kbuk-kavigoshthi-august-2008 . ಯಾಕಂದರೆ ಇಂದು ಹುಡುಕುತ್ತಿದ್ದಾಗ ಸುದೈವದಿಂದ ಅವರು ಆ ದಿನ ಕವಿಗೋಷ್ಠಿಯಲ್ಲಿ ನಾನು ರೆಕಾರ್ಡ್ ಮಾಡಿದ ಅವರ ಸ್ವಾರಸ್ಯಕರ ಭಾಷಣದ ಧ್ವನಿಮುದ್ರಿಕೆ ಕೈಗೆ ಸಿಕ್ಕಿತು. ಆ ಭಾಷಣ, ಅವರ ಧ್ವನಿ ಕೇಳಿ ರೋಮಾಂಚನ! ಈ ನಲವತ್ತು ನಿಮಿಷದ ಭಾಷಣದ 25ನೆಯ ನಿಮಿಷದಲ್ಲಿ ಆ ಸಲಾಖೆಯ ವರ್ಣನೆಯಿದೆ. 37ನೆಯ ನಿಮಿಷದಲ್ಲಿ ನಾನು ಉಲ್ಲೇಖಿಸಿದ ಗಾಲಿಬನ ಶಾಯರಿಯ ವರ್ಣನೆಯಿದೆ. ಇದಿಷ್ಟೇ ಅಲ್ಲ, ಸಾಕಷ್ಟು ಸಾಹಿತ್ಯದ ಮಾತು ಇದೆ. ರೆಕಾರ್ಡಿಂಗ್ ದ ಗುಣಮಟ್ಟ ಅಷ್ಟಕ್ಕಷ್ಟೇ. Background noise! (ಕನ್ನಡಿಗರ ಉತ್ಸಾಹ, ಮಾತು-ಕತೆ, ನಿಮಗೆ ಗೊತ್ತೇ ಇದೆ!). ಸ್ವಲ್ಪ ತಾಳ್ಮೆಯಿಂದ ಕೇಳ ಬೇಕು. ಕಿವಿಗೆ ಇಯರ್ಫೋನು ಹಾಕಿಕೊಂಡರೆ ಒಳಿತು. ಶ್ರೀವತ್ಸ

      Like

      • ಗೌರಿ ಪ್ರಸನ್ನ ಬರೆಯುತ್ತಾರೆ:
        ತುಂಬ ತುಂಬ ಧನ್ಯವಾದಗಳು ದೇಸಾಯರೇ….ಇಂಥದೊಂದು ಅಮೂಲ್ಯ ಆಸ್ತಿಯನ್ನುಜತನದಿಂದ ಕಾಪಿಟ್ಟುಕೊಂಡು ಇಂದು ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಕ್ಕೆ..೪೦ ನಿಮಿಷಗಳ ಕಾಲನಿಸಾರ್ ರೊಂದಿಗೆ ವಚನ, ಜಾನಪದ,ಗಾಲಿಬ್ ಅಂತ ಭಾವಯಾನದಲ್ಲಿದ್ದೆ.

        Like

  9. ಸೂಕ್ತವಾದ ಶ್ರದ್ಧಾಂಜಲಿ. ಯು ಕೆ ಕನ್ನಡಬಳಗದ ರಜತ ಮಹೋತ್ಸವಕ್ಕೆ ಮೆರುಗು ತಂದವರು ನಿಸಾರ್ ಅಹಮದ್ ಹಾಗು ಜಯಂತ್ ಕಾಯ್ಕಿಣಿ. ನಿಸಾರ್ ಅವರ ಅಧ್ಯಕ್ಷತೆಯಲ್ಲಿ ನಾನು ನನ್ನ ಕವನವನ್ನು ಓದಿದ್ದು ಅವರು ನನ್ನ ಕವನದಲ್ಲಿನ ಭಾಷೆ ಬಳೆಕೆಯ ಬಗ್ಗೆ ಪ್ರಶಂಸಿಸಿದ್ದು ಇನ್ನೂ ನೆನಪಿದೆ.

    Like

  10. ಅನಿವಾಸಿಯ ಹಿರಿಯರು ನಿಸಾರರೊಂದಿಗೆ ಕಳೆದ ಆತ್ಮೀಯ ಕ್ಷಣಗಳನ್ನು ನಮ್ಮೊಡನೆ ಹಂಚಿಕೊಂಡಿದಕ್ಕೆ ಧನ್ಯವಾದಗಳು. ಈ ಚೇತನ ಹಿರಿದಾಗುವುದು ಮುಗ್ಧತೆ ಹಾಗೂ ಸರಳತೆಯನ್ನು ಕೊನೆಯವರೆಗೂ ಉಳಿಸಿಕೊಂಡಾಗ. ನಿಮ್ಮ ಅನುಭವಗಳಲ್ಲಿ ನಿಸಾರರ ಈ ಮುಖದ ಅನುಭಾವವಾಗಿದೆ. ಅಗಲಿದ ಹಿರಿಯ ಚೇತನಕ್ಕೆ ಸೂಕ್ತ ಶೃದ್ಧಾಂಜಲಿ ಈ ಲೇಖನ ಗುಚ್ಛ.
    ನಿಸಾರರಿಗೆ ಅರ್ಪಿಸಿದ ಬಿನ್ನವತ್ತಳೆಯನ್ನು ಪ್ರಕಟಿಸಿದ್ದರೆ ಮೆರಗು ಹೆಚ್ಚುತ್ತಿತ್ತು
    – ರಾಂ

    Like

    • ರಾಮ್ ಅವರೇ,
      ಬಿನ್ನವತ್ತಳೆ ಮತ್ತು ನಿಸಾರ್ ಅವರು ಭಾನುಮತಿ ಅವರಿಗೆ ಬರೆದ ಕಾಗದ ಎರಡು scan ಮಾಡಿದೆ. ಇದನ್ನು ಶ್ರೀವತ್ಸ ದೇಸಾಯ್ ಅವರು ಇಲ್ಲಿ ಲಿಂಕ್ ಕೊಡಬಹುದು
      ರಾಮಮೂರ್ತಿ

      Like

    • ರಾಂ ಅವರೆ,
      ಆ ನಿಸಾರ್ ಅಹಮದ್ ಅವರಿಗೆ ಕೊಟ್ಟ ಬಿನ್ನವತ್ತಳೆಯನ್ನು(ಸನ್ಮಾನ ಪತ್ರ)ಈ ಕೊಂಡಿಯ ಮುಖಾಂತರ ನೋಡಿರಿ:


      ಅಥವಾ ಲೇಖನದಲ್ಲಿ ಈಗ ಕೊಟ್ಟ ಲಿನ್ಕ್ ಮುಖಾಂತರ.
      ಶ್ರೀವತ್ಸ

      Like

  11. ಇನ್ನೆರಡುಮಾತು , ನಮ್ಮ ಗೆಳಯ (ದಿ ) ರಾಜಾರಾಮ್ ಕಾವಳೆ ಮತ್ತು ನಾನು ಅವರನ್ನು ಅನೇಕ ಪ್ರೇಕ್ಷಣೀಯ ಜಾಗಗಳನ್ನು ತೋರಿಸದಾಗ ಅವರ ಆನಂದ ಅಷ್ಟಿಷ್ಟಲ್ಲ. Stratford upon Avon ನಲ್ಲಿ Shakespeare ನ ಸಮಾಧಿ ಮುಂದೆ ಎರಡು ಕೈ ಜೋಡಿಸಿ ನಿಂತಿದ್ದು ಮತ್ತು ಇಲ್ಲಿಯೇ ಹತ್ತಿರದಲ್ಲಿರುವ ಇರುವ ಜೇನ್ ಆಸ್ಟಿನ್ ಇದ್ದ ಮನೆ ಯಲ್ಲಿ ಸಂತೋಷದಿಂದ ಓಡಾಡಿದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ. ನಿಸಾರ್ ಅವರು ಜಿಯಾಲಜಿ ಪ್ರೊಫೆಸರ್, ಆದ್ದರಿಂದ Stone Henge ನ ಶಿಲೆ ಗಳ ಮೇಲೆ ತುಂಬಾ ಆಸಕ್ತಿ ತೋರಿಸದರು.
    Ramamurthy

    Like

    • ಈ ಮಾತು ಮತ್ತು ಮೇಲೆ ನೀವು ಬರೆದ ವಿಷಯಗಳು ಒಬ್ಬ ಆತ್ಮೀಯರ ಬಗ್ಗಿ ನೆನೆದ ಆಪ್ತ ಬರಹವಾಗಿದೆ.ನೀವು ಕಡತಗಳನ್ನು ಸ್ಕ್ಯಾನ್ ಮಾಡಿ ಕಳುಹಿದ್ದಕ್ಕೆ ಧನ್ಯವಾದಗಳು.

      Like

Leave a comment

This site uses Akismet to reduce spam. Learn how your comment data is processed.