‘ಕೋವಿಡ್: ಸಿಂಹದ ಬಾಯಿಂದ’ ನೈಜ ಕಥೆ ಮತ್ತು ‘ಕರಾಳ ಕರೋನ’ ಕವಿತೆ

ಕೊರೋನಾ ವೈರಸ್ ಈಗ   ಜಗತ್ತಿನಾದ್ಯಂತ ಒಂದು ಮಿಲಿಯನ್ ಗೂ ಹೆಚ್ಚು ಜನರಿಗೆ ಹರಡಿದ್ದು, ಬಿಲಿಯನ್ ಗಟ್ಟಲೆ ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಅನೇಕ ಕಡೆಗಳಲ್ಲಿ ಇದರ ಪಸರಿಸುವಿಕೆ ಗರಿಷ್ಠ ಮಟ್ಟ ತಲುಪುತ್ತಿರುವಾಗ, ವೈದ್ಯಕೀಯ ಮತ್ತು ಪ್ರಮುಖ ಸೇವಾ ಕ್ಷೇತ್ರಗಳಲ್ಲಿರುವ ನಮ್ಮ ಸ್ನೇಹಿತರು ಹಾಗೂ ಬಂಧುಗಳು ಈ ವೈರಾಣುವಿನ ಸಂಪರ್ಕ ದಲ್ಲಿ ಬರಬಹುದು ಮತ್ತು ಕೋವಿಡ್೧೯ ಖಾಯಲೆಗೆ ಗುರಿಯಾಗಬಹುದು. ಹೀಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗ ವೈದ್ಯರೊಬ್ಬರು  ವೈರಾಣುವಿನ ಕಪಿಮುಷ್ಠಿಗೆ ಸಿಲುಕಿದ ಹಾಗೂ ಅದರಿಂದ ಪಾರಾಗಿಬಂದ ನೈಜ ಕಥೆಯನ್ನು ಈ ವಾರ ಅನಿವಾಸಿಗಾಗಿ ಡಾ|| ರಾಮಶರಣ ಲಕ್ಷ್ಮೀನಾರಾಯಣ ರವರು  ಬರೆದಿದ್ದಾರೆ. 
ಕರೋನ ವೈರಸ್ ನ ಕರಾಳ ಸ್ವರೂಪವನ್ನು ‘ಕರಾಳ ಕರೋನ‘ ಎಂಬ ಕವಿತೆಯಲ್ಲಿ ಡಾ||  ಜಿ.  ಎಸ್.  ಶಿವಪ್ರಸಾದ್ ರವರುಬಣ್ಣಿಸಿದ್ದಾರೆ.  ಡಾ।। ಲಕ್ಷೀನಾರಾಯಣ ಗುಡೂರ್ ರವರು ಈ ಕವಿತೆಯ ಸಾರವನ್ನು ತಮ್ಮ ರೇಖಾಚಿತ್ರದಲ್ಲಿ ಸೆರೆಹಿಡಿದಿದ್ದಾರೆ.  (ಸಂ)

ಕೋವಿಡ್: ಸಿಂಹದ ಬಾಯಿಂದ

ಯು.ಕೆ. ಕನ್ನಡಿಗ ವೈದ್ಯರೊಬ್ಬರು ಕೊರೋನಾ ಸೋಂಕು ತಗಲಿ, ಬಳಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನೈಜ ಕಥಾನಕ ಇದು. ಇಲ್ಲಿ ಬರುವ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ. ಸೋಂಕು ಪೀಡಿತ ವೈದ್ಯರ ರೋಗ ಲಕ್ಷಣಗಳು ಹಾಗೂ ಅವರ ಅನುಭವ ಯಾವುದನ್ನೂ ಕಲ್ಪಿಸಿಕೊಳ್ಳಲಾಗಿಲ್ಲ. ಅವರ ಮನೋಸ್ಥಿತಿಯನ್ನು ಲೇಖಕರು ಕಥೆಗೆ ಬೇಕಂತೆ ಹೊಂದಿಸಿದ್ದಾರೆ.                                                                                        ಲೇಖಕರು: ಡಾ||ರಾಮಶರಣ್ ಲಕ್ಷ್ಮಿನಾರಾಯಣ್

“ನಿನಗೆ ಇಂಗ್ಲೀಷ್ ಅಡುಗೆ ಇಷ್ಟವಾಗಲಿಕ್ಕಿಲ್ಲ ಡಾ. ನಾಗ್ಸ್, ಅದಕ್ಕೇ ಹಲಾಲ್ ವೆಜ್ ಊಟ,” ಎನ್ನುತ್ತಲೇ ಸಿಸ್ಟರ್ ಸೂಸನ್ ಕೋಣೆ ಒಳಗೆ ಬಂದಳು. ನರ್ಸ್ ವಿಶೇಷ ಮುತುವರ್ಜಿಯಿಂದ ತರಿಸಿದ ಅನ್ನ-ದಾಲ್ ಬಾಯಿಗೆ ಹಾಕುವಂತಿರಲಿಲ್ಲ. ಬರೇ  ಕಾಳು ಮೆಣಸಿನ ಖಾರ, ಅರೆ ಬೆಂದ ಅನ್ನ ತಿಂದ ನಾಗೇಂದ್ರ ಅರ್ಧ ಗಂಟೆಯಲ್ಲೇ ಎಲ್ಲವನ್ನು ಕಕ್ಕಿದ.  ಹೊಟ್ಟೆ ಚುರುಗುಟ್ಟುತ್ತಿತ್ತು. ಹಸಿವೆ ಆದರೂ, ನರ್ಸಿಗೆಕರುಣೆ ಇದ್ದರೂ, ಊಟ ತಂದುಕೊಡಲು ಆಸ್ಪತ್ರೆಯೇನು ಹೋಟೆಲ್ಲೇ? ಇಲ್ಲಿ ಸಂಜೆಯ ಊಟದ ಆರ್ಡರ್ ಬೆಳಗ್ಗೆಯೇ ಆಗಿರುತ್ತದೆ. ಇನ್ನು ರಾತ್ರಿಯೆಲ್ಲ ಜ್ಯುಸ್ ಹೀರುತ್ತಲೇ ಕಳೆಯಬೇಕಷ್ಟೆ ಎನ್ನುವ ಸತ್ಯಕ್ಕೆ ಶರಣಾಗಿ ಅಡ್ಡಾದ ನಾಗೇಂದ್ರ. ದಿವಸಗಳಿಂದ ಕಾಡಿದ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಿಂದ ಬಸವಳಿದ ನಾಗೇಂದ್ರನಿಗೆ ತಲೆ ತಿರುಗಿದಂತಾಯ್ತು. ಹಾಗೆಯೇ ಕಳೆದ ಎರಡು ವಾರಗಳಿಂದ ನಡೆದ ವಿದ್ಯಮಾನಗಳೆಲ್ಲ ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗಿದವು.

 ಗುರುವಾರ ಬೆಳಗ್ಗೆ ತಡ ಆಯಿತು ಅಂತ ಸಿಡಿ-ಮಿಡಿಗೊಳ್ಳುತ್ತಲೇ ಎದ್ದ ನಾಗೇಂದ್ರ. ರೈಲಿಗೆ ಇನ್ನು ಕೇವಲ 45 ನಿಮಿಷ ಇತ್ತು. ರಾತ್ರೆಯೇ ಟ್ಯಾಕ್ಸಿಗೆ ಬರಲು ಹೇಳಿದ್ದ. ಸಧ್ಯ ಹಿಂದಿನ ದಿನವೇ ಚೀಲ ತುಂಬಿಟ್ಟದ್ದಕ್ಕೆ ತನ್ನ ಬೆನ್ನು ತಾನೇ ತಟ್ಟಿಕೊಂಡ. ಗಡಿಬಿಡಿಯಲ್ಲಿ ಪ್ರಾತಃವಿಧಿಗಳನ್ನು ಮುಗಿಸಿ ತಯ್ಯಾರಾಗುವಷ್ಟಲ್ಲಿ ಹೊರಗಡೆ ಟ್ಯಾಕ್ಸಿ ಬಂತು. ಮಕ್ಕಳಿನ್ನೂ ಸಕ್ಕರೆ ನಿದ್ರೆಯಲ್ಲಿದ್ದರು. ಅರೆ ನಿದ್ದೆಯಲ್ಲೇ ಕರುಣ ಬೈ ಹೇಳಿದ್ದನ್ನೂ ಕೇಳಿಸಿಕೊಳ್ಳದವನಂತೆ ಹೊರಗೆ ಧಾವಿಸಿದ.  ನಾಗೇಂದ್ರ ರಾಯಲ್ ಕಾಲೇಜಿನ ವಾರ್ಷಿಕ ಮೀಟಿಂಗ್ ಎಂದು ಲಂಡನ್ನಿಗೆ ಹೊರಟಿದ್ದ. ಎರಡು ದಿನದ ಕಾರ್ಯಕ್ರಮ, ಕಾಲೇಜಿನವರೇ ಪಕ್ಕದ ಹೋಟೆಲ್ಲಿನಲ್ಲಿ ವಸತಿ ಸೌಕರ್ಯ ಒದಗಿಸಿದ್ದರು ಎಂದಿನಂತೆ. ನಾಗೇಂದ್ರನಿಗೆ ಈ ಹೋಟೆಲ್ ತುಂಬಾ ಇಷ್ಟ. ಸ್ಪ್ಯಾನಿಷ್ ಕಂಪನಿ ನಡೆಸುವ ಹೋಟೆಲ್ ಐಷಾರಾಮವಾಗಿತ್ತು, ಹಾಸಿಗೆ ಮೃದುವಾಗಿ ಆರಾಮದಾಯಕವಾಗಿರುತ್ತಿತ್ತು; ಬೆಳಗಿನ ಉಪಾಹಾರ ರುಚಿಕಟ್ಟಾಗಿ ಆರೋಗ್ಯಕರವಾಗಿರುತ್ತಿತ್ತು. ಒಂದು ರಾತ್ರಿಯ ವಸತಿಗೆ ಇದಕ್ಕಿಂತೇನೂ ಜಾಸ್ತಿ ಬೇಕಲ್ಲವೇ?

ರಾಬ್ ಆಗಲೇ ಬಂದು ತನ್ನ ಲ್ಯಾಪ್ ಟಾಪ್ ತಯ್ಯಾರಿಟ್ಟಿದ್ದ. ಒಬ್ಬೊಬ್ಬರೇ ಸದಸ್ಯರು ಮುಂದಿನ 20 ನಿಮಿಷಗಳಲ್ಲಿ ಬಂದು ಸೇರಿದರು. ಉಭಯಕುಶಲೋಪರಿ ಮುಗಿಸಿದ ಮೇಲೆ ಎಲ್ಲರ ಬಾಯಲ್ಲೂ ಕೋವಿಡ್ ಮಾತೇ, ಇಟಲಿಯಲ್ಲಿ ಹಾಗೆ- ಹೀಗೆ ಅಂತ. ನಮ್ಮ ಸ್ಪೆಷಲ್ಟಿ ತಮ್ಮ ಮಾರ್ಗದರ್ಶನ ಪ್ರಕಟಿಸಬೇಕಲ್ಲವೇ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎರಡು ದಿನಗಳ ಕೆಲಸ ಸರಾಗವಾಗಿ ಮುಗಿದು ಅಂದುಕೊಂಡಕ್ಕಿಂತಲೂ ಬೇಗನೆ ಶುಕ್ರವಾರ ನಾಗೇಂದ್ರ ಮನೆಗೆ ಬಂದಿದ್ದಕ್ಕೆ ತನ್ನಲೇ ಬೀಗಿಕೊಂಡ. ದೊಡ್ಡ ಮಗಳಿಗಿನ್ನೂ  ಕೆಮ್ಮು ಇತ್ತು. ಎಂದಿನಂತೇ ಮೃದುಲಾ ಎಲ್ಲರ ಮುಂದೇ ಕೆಮ್ಮುತ್ತ ತಿರುಗಿದ್ದಕ್ಕೆ ಕರುಣಾಳ ಹತ್ತಿರ ಬೈಸಿಕೊಂಡಳು. ಅಕ್ಕ ಬೈಸಿಕೊಂಡಳೆಂದು ಚಿಕ್ಕ ಮಗ ಮೃಣಾಲ್ ಅವಳನ್ನು ಅಣಕಿಸಿ, ಬೆನ್ನ ಮೇಲೆ ಗುದ್ದಿಸಿಕೊಂಡು ಸಣ್ಣ ಕುರುಕ್ಷೇತ್ರವನ್ನೇ ಸೃಷ್ಟಿಸಿದರು ಎಂದಿನಂತೇ.

ಸೋಮವಾರ ಏಳುವಾಗ ನಾಗೇಂದ್ರನಿಗೆ ಸಣ್ಣ ತಲೆನೋವು, ಆಲಸ್ಯ. ಕೆಲಸಕ್ಕೆ ಹೋದಾಗ ನಿರುತ್ಸಾಹ. ವಾರ್ಡ್ನಲ್ಲಿ ನರ್ಸ್ ಹತ್ತಿರ ಪ್ಯಾರಾಸಿಟಮೋಲ್ ತೊಕೊಂಡು ಮಧ್ಯಾಹ್ನ ಕ್ಲಿನಿಕ್ ಹೇಗೋ ಮುಗಿಸಿದ. ಮಂಗಳವಾರ ಮತ್ತೆ ಸ್ವಲ್ಪ ಚಳಿ ಎನ್ನಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಮೈ-ಕೈ ನೋವು, ತಲೆ ನೋವು ಜಾಸ್ತಿ ಆಗಿದ್ದಕ್ಕೆ ಸೆಕ್ರೆಟರಿಗೆ ಹೇಳಿ ಮನೆಗೆ ಬಂದುಬಿಟ್ಟ. ರಾತ್ರಿ ಚಳಿ ಜಾಸ್ತಿ ಆಯ್ತು, ಜ್ವರ ಶುರು ಆಯ್ತು, ನಿದ್ದೆಯೂ ಬರಲಿಲ್ಲ. ಸಣ್ಣಗೆ ಒಣ ಕೆಮ್ಮು. ಮಾರನೇ ದಿನ ಡಬಲ್ ಕ್ಲಿನಿಕ್ ಬೇರೆ, ಕೆಮ್ಮು ಜ್ವರ ಕೊಟ್ಟುಬಿಟ್ಟಳಲ್ಲ ಎಂದು ಮಗಳಿಗೆ ಹಿಡಿ ಶಾಪ ಹಾಕಿ ಮುದುರಿ ಡುವೆ ಹೊದ್ದು, ಹಾಸಿಗೆ ಪಕ್ಕದ ವಿದ್ಯುತ್ ಹೀಟರ್ ಹಾಕಿ ಮುದುರಿ ಬಿದ್ದುಕೊಂಡ. ಜ್ವರ-ಕೆಮ್ಮು ಬಂದಾಗೆಲ್ಲ ಕರುಣಾ, ಕರುಣೆಯಿಲ್ಲದೇ ಅತಿಥಿ ಕೋಣೆಗೆ ತಳ್ಳಿ ಬಿಡುತ್ತಾಳೆ. ಬೆಳಗ್ಗೆ ಏಳಲಾಗದಷ್ಟು ನೋವು-ಜ್ವರ. ಪ್ಯಾರಾಸಿಟಮೋಲ್ ತೊಕೊಂಡರೂ ಈ ಸಲ ಯಾಕೋ ಜ್ವರ ಇಳಿಯುತ್ತಲೇ ಇಲ್ಲ. ಬ್ರುಫೆನ್ ಮೊರೆ ಹೋದಾಗಲೇ ಜ್ವರ ಕೆಲವು ಗಂಟೆ ತಹಬಂದಿಗೆ ಬಂದಿತ್ತು.

ಸಾಯಂಕಾಲ ಕರುಣಾಳ ಮುಖ ಕುಂದಿತ್ತು. ಎಂದಿಗಿಂತಲೂ ಹೆಚ್ಚಿನ ಕಕ್ಕುಲತೆಯಿಂದ ವಿಚಾರಿಸಿಕೊಂಡಳು. ಅವಳಕಣ್ಣಲ್ಲಿ ತುಂಬಿದ ನೀರು ಕಂಡು ನಾಗೇಂದ್ರನ ಎದೆಯಲ್ಲೇಕೋ ಸಣ್ಣ ನಡುಕ. ಕರುಣಾ ಹಾಗೆಲ್ಲ ಧೈರ್ಯಗೆಡುವವಳಲ್ಲ. ಅವಳಿಗೆ ಯಾರೋ ಸುದ್ದಿ ಕೊಟ್ಟಿದ್ದರು, ನಾಗೇಂದ್ರನ ಸಹೋದ್ಯೋಗಿ ಮೈಕೆಲ್ ಕರೋನ ಸೋಂಕಿನಿಂದ ತೀವ್ರ ಚಿಕಿತ್ಸಾ ಘಟಕದಲ್ಲಿದ್ದಾನೆಂದು. “ನೀನೇನಾದ್ರೂ ಅವನ ಸಂಪರ್ಕಕ್ಕೆ ಬಂದಿದ್ಯ? ನೀನು ಈ ಕೋಣೆಯಿಂದ ಹೊರಗೆಬರಬೇಡ, ನಾನೇ ಎಲ್ಲಇಲ್ಲಿಗೇ ತಂದುಕೊಡ್ತೇನೆ”, ಅಂತ ತಾಕೀತು ಮಾಡಿ ಹೋದಳು. ಯಾವಾಗಲೂ ಬಂದು ಅಪ್ಪಿಕೊಳ್ಳುವ ಮೃಣಾಲ್ ಕೂಡ ಬಾಗಿಲಲ್ಲೇ ಗುಡ್ ನೈಟ್ ಹೇಳಿ ಓಡಿಬಿಟ್ಟ. ರಾತ್ರೆಯಿಡಿ ಜ್ವರ, ಚಳಿ, ಮೈಕೈ ನೋವು, ಜೊತೆಗೆ ವಿಚಿತ್ರಕನಸುಗಳು.

ಹಗಲಿಡೀ ಮನೆಯಲ್ಲಿಒಬ್ಬನೆ; ಮಕ್ಕಳು ಶಾಲೆಯಲ್ಲಿ, ಕರುಣಾ ಸರ್ಜರಿಯಲ್ಲಿ. ಮನದ ತುಂಬೆಲ್ಲ ದುಗುಡ. ಪ್ರತಿಸಲಬರುವ ಫ್ಲ್ಯೂಗಿಂತ ಈ ಸಲದ ಜ್ವರಕ್ಕೆ ಲಕ್ಷಣವೇ ಬೇರೆ ಅನಿಸುತ್ತಿತ್ತು. ಯಾಕೋ ಅಸಮಾಧಾನ, ಚಡಪಡಿಕೆ. ತನಗೂ ಕೊರೋನ ಹೊಡೆದಿಯೇ ಎಂಬ ಸಂಶಯ. ಹಾಳಾದ ಡಯಾಬಿಟಿಸ್ ಎರಡು ವರ್ಷದಿಂದ ತಗಲು ಹಾಕ್ಕೊಂಡಿದೆ. ಜೊತೆಗೆ ಸ್ವಲ್ಪ ರಕ್ತದೊತ್ತಡ ಬೇರೆ. ಇಂಥವರಿಗೆ ಕೊರೋನ ಹತ್ತೋದು, ಉಸಿರಾಟದ ತೊಂದರೆ ಜಾಸ್ತಿಯಾಗೋದು ಅಂತ ಕೇಳಿದ್ದ. ಇದರ ಜೊತೆಗೆ ಇಡೀ ದಿನ ವಾಟ್ಸ್ಯಾಪ್ ನಲ್ಲಿ ಬರೋ ಸಂದೇಶಗಳೆಲ್ಲ ನಾಗೇಂದ್ರನ ಎದೆಯನ್ನು ತುಸುತುಸುವೇ ಹಿಚುಕುತ್ತಿದ್ದವು. ಬಾಯಿರುಚಿಯೇ ಇರಲಿಲ್ಲ, ನೀರು ಕಂಡರೂ ವಾಕರಿಕೆ ಬರುತ್ತಿತ್ತು. ಮೂಗಿನ ಹೊಳ್ಳೆಯ ಸುತ್ತಲೂ ಹಿಮಪಾತದಲ್ಲಿ ನಿಂತ ತಣ್ಣಗಿನ ಕೊರೆತದ ಅನುಭವ. ಪ್ಯಾರಾಸಿಟಮೋಲ್-ಬ್ರುಫೆನ್ ನಾಲಿಗೆಯ ಮೇಲೆ ದಪ್ಪನೆಯ ಪದರವನ್ನೆ ಕಟ್ಟಿದಂತಾಗಿತ್ತು. ಕರುಣಾಳ ಒತ್ತಾಯಕ್ಕೆ ಎರಡು ಚಮಚ ಟೊಮ್ಯಾಟೋ ಸೂಪ್ ಕುಡಿದ. ರಾತ್ರೆ ಗೆಳೆಯ ವಿವೇಕ ಫೋನ್ ಮಾಡಿದ. ನಾಗೇಂದ್ರನ ಚಡ್ಡಿ ದೋಸ್ತು, ಇಬ್ಬರೂ ಜೊತೆಗೇ ಇಂಗ್ಲೆಂಡಿಗೆ ಬಂದಿದ್ದರು 20 ವರ್ಷಗಳ ಹಿಂದೆ.  ನಾಗೇಂದ್ರನ ಸುದ್ದಿಕೇಳಿ ಅವನ ಮುಖವೂ ಕಪ್ಪಿಟ್ಟಿತೆಂದು ನಾಗೇಂದ್ರನಿಗೆ ಅನಿಸಿತು. ಅಷ್ಟರಲ್ಲೇ ಸಹೋದ್ಯೋಗಿ ಪಾರ್ಥ ಗಂಗೂಲಿ, ಮೈಕೆಲ್ ನ ಸ್ಥಿತಿಗಂಭೀರವಾಗಿ, ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫ್ಟ್ ಮಾಡಿದರೆಂದು ಸಂದೇಶ ಕಳಿಸಿದ. ಇದನ್ನುಓದುತ್ತಲೇ ನಾಗೇಂದ್ರನ ಜಂಘಾಬಲವೇ ಉಡುಗಿದಂತಾಯಿತು. ಕರುಣಾಳನ್ನು ಕರೆದು ತೋರಿಸಿದ. ಅವಳೋ, ಗಳಗಳನೆ ಅಳಲು ಶುರು ಮಾಡಿಬಿಟ್ಟಳು. ಅವಳನ್ನು ಸಮಾಧಾನ ಮಾಡುವಲ್ಲಿ ನಾಗೇಂದ್ರನಿಗೆ ಸಾಕೋಬೇಕಾಯಿತು. ಮಕ್ಕಳಿಬ್ಬರೂ ಬಾಗಿಲಲ್ಲೇ ಗರಬಡಿದವರಂತೆ ನಿಂತಿದ್ದರು. ಕರುಣಾ ಓಡಿ, ಕಾರಿನಲ್ಲಿದ್ದ ತನ್ನ ಹತ್ಯಾರು ತಂದು ಪುಪ್ಪುಸದ ಪರೀಕ್ಷೆ, ಆಮ್ಲಜನಕದ ಮಟ್ಟವನ್ನು ನೋಡಿ ಎಲ್ಲ ಸರಿ ಇದೆಯೆಂದು ಖಚಿತಪಡಿಸಿಕೊಂಡು ತನ್ನ ಶಯನಾಗಾರಕ್ಕೆ ತೆರಳಿದಳು.

ರಾತ್ರೆಗಳನ್ನು ನಾಗೇಂದ್ರ ದ್ವೇಷಿಸತೊಡಗಿದ್ದ. ಬಾರದ ನಿದ್ದೆಯಲ್ಲಿ ಬೇಡದ ಯೋಚನೆಗಳೇ ತಲೆ ತಿನ್ನುತ್ತಿದ್ದವು. ಇದರೆಡೆ ಮೈಕೆಲ್ನ ಸುದ್ದಿ ಅವನ ಬುಡವನ್ನೇ ಅಲ್ಲಾಡಿಸಿತ್ತು. ನನಗೂ  ಅದೇ ಸ್ಥಿತಿ ಬಂದರೆ ಎಂಬ ಕರಾಳ ಚಿಂತನೆಯೇ ತಲೆ ತುಂಬ. ತಮ್ಮ ಗುಂಪಿನ ಅನಧಿಕೃತ ಸಲಹೆಗಾರ ಅಲ್ತಾಫ್ ಹೇಳಿದಂತೆ ವಿಲ್ ಮಾಡಿಸಿಬೇಕಿತ್ತು, ಇಂದು-ನಾಳೆ ಅಂತ ಎಂದಿನಂತೆ  ಕಾಲಹರಣ ಮಾಡಿದೆನಲ್ಲ ಎಂದು ಶಪಿಸಿಕೊಂಡ. ಪ್ರಯಾಣಕ್ಕೆ ಹೋಗುವಾಗಲೆಲ್ಲ ಕರುಣಾ ಎಚ್ಚರಿಸುತ್ತಿದ್ದಳು, ಎಲ್ಲ ಬ್ಯಾಂಕ್ ಖಾತೆಗಳ ವಿವರ ಬರೆದಿಡು; ಎಲ್ಲ ಹಣಕಾಸಿನ ಸೈಟ್, ಪಾಸ್ಸ್ವರ್ಡ್ ಎಲ್ಲ ವಿವರಗಳನ್ನು ಬರೆದು ಎಲ್ಲಿದೆ ಅಂತ ಹೇಳಿಡು  ಅಂತ ಹೇಳುತ್ತಿದ್ದಳು. ಅದನ್ನೂ  ನಾಗೇಂದ್ರ ನಿರ್ಲಕ್ಷ್ಯ ಮಾಡಿದ್ದ. ಇನ್ನು ತಡ ಮಾಡಬಾರದು ಅಂತ ಅವನಿಗೆ ಅನ್ನಿಸ ತೊಡಗಿತು. ಬಸವಳಿಸುವ ಜ್ವರದ ಬೇಗೆಯಲ್ಲೇ ಎಲ್ಲ ಬ್ಯಾಂಕಿಂಗ್ ವಿವರಗಳನ್ನು ಕೈಲಾದಷ್ಟು ಬರೆದಿಟ್ಟ. ಇದು ತನ್ನ ಮರಣ ಶಾಸನವೇ ಎಂದು ಅವನಿಗೆ ಅನಿಸತೊಡಗಿತು. ಹಲವಾರು ಬಾರಿ ಆಮ್ಲಜನಕ ಮಟ್ಟ ನೋಡಿಕೊಂಡ.  ಮೆಲ್ಲನೆ ಅದು ೯೬ ರಿಂದ ೯೪ಕ್ಕೆ ಇಳಿದಿತ್ತು.

ಬೆಳಗ್ಗೆ ಎದ್ದ ಕರುಣಾ ಕೂಡಲೇ ತನಗೆ ಪರಿಚಯವಿದ್ದ ಹತ್ತಿರದ ಆಸ್ಪತ್ರೆಯ ವೈದ್ಯನೊಬ್ಬನಿಗೆ ಫೋನಾಯಿಸಿದರೆ, ಆತ ”NHS111ಗೆ ಫೋನ್ಮಾಡು,” ಅಂತ ಕೈತೊಳಕೊಂಡ. ಅವರೋ ಅರ್ಧಗಂಟೆಕಾಯಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ನಾಗೇಂದ್ರನ ಸಹನೆಯನ್ನು ಪರೀಕ್ಷಿಸಿ, “ಮನೆಯಲ್ಲೇ ತೆಪ್ಪಗಿರು,” ಎಂಬ  ಮಹಾನ್ ಸಲಹೆಕೊಟ್ಟು ಫೋನ್ ಕುಕ್ಕಿದರು. ಮೆಲ್ಲನೆ ಆಮ್ಲಜನಕದ ಮಟ್ಟ 90 ರೆಡೆ ಪುಟ್ಟ ಪುಟ್ಟ ಹೆಜ್ಜೆ ಹಾಕತೊಡಗಿತ್ತು. ತಡೆಯಲಾಗದೇ ನಾಗೇಂದ್ರ ಪಾರ್ಥನಿಗೆ ಸಂದೇಶ ಕಳಿಸಿದ. ಮರುಕ್ಷಣದಲ್ಲಿ ಪಾರ್ಥ ಫೋನ್ಮಾಡಿ, “ನಾಗ್ಸ್. ನನಗ್ಯಾಕೋ ಈ ಕೊರೋನಾ ಪರಿಸ್ಥಿತಿಯಲ್ಲಿ ನಿನ್ನನ್ನು ಯಾವುದೇ ತಪಾಸಣೆಯಿಲ್ಲದೇ ಮನೆಯಲ್ಲೇಕೊಳೆಯಲು ಬಿಡುವುದು ಸರಿ ಕಾಣೋದಿಲ್ಲ, ಈ ಕ್ಷಣ ನೀನು ನಮ್ಮಆಸ್ಪತ್ರೆಗೆ ಬಾ. ನಾನೇ ಬಾಗಿಲಲ್ಲಿ ಕಾಯುತ್ತಿರುತ್ತೇನೆ,” ಅಂತ ಆಜ್ಞೆ ಕೊಟ್ಟ. ಕೂಡಲೇ ಸುದ್ದಿ ತಿಳಿದ ಕರುಣಾ ಸರ್ಜರಿಯಿಂದ ಬಂದು, ನಾಗೇಂದ್ರನನ್ನು ಧಾವಂತದಿಂದ ಆಸ್ಪತ್ರೆಗೆ ಕರೆದೊಯ್ದಳು. ದೇವರೇ ಬಂದರೂ ಈ ದೇಶದಲ್ಲಿ ರೂಲ್ ಪಾಲಿಸಲೇ ಬೇಕು. ಸ್ವಾಗತಕಕ್ಷೆಯ ಹೆಂಗಸಿಗೆ ತನ್ನ ಗೋತ್ರಪ್ರವರಗಳನ್ನೆಲ್ಲ ಒಪ್ಪಿಸಿದ ಮೇಲೆ, ಪಕ್ಕದ ಬಾಗಿಲಿನಿಂದ ಒಬ್ಬನೇ ಒಳಗೆ ಹೋಗಲು ಆಜ್ಞಾಪಿಸಿದಳು. ಇದರ ಮಧ್ಯೆ ಒಬ್ಬಳು ನರ್ಸಮ್ಮ ಪ್ರತ್ಯಕ್ಷಳಾಗಿ “ಹೀಗೆಲ್ಲ ಆಸ್ಪತ್ರೆಗೆ ಬರಬಾರದು, ಇದು ಸದ್ಯದ ಸರ್ಕಾರದ ಆಜ್ಞೆಗೆ ಮೀರಿದ ನಡವಳಿಕೆ,” ಎಂದೆಲ್ಲ ತಗಾದೆ ತೆಗೆದಾಗ ಪಾರ್ಥನೇ ಅವಳನ್ನು ಸಮಜಾಯಿಸಿ ಸಾಗ ಹಾಕಿದ. ಕೂಡಲೇ ಬಂದ ಇನ್ನೊಬ್ಬ ನರ್ಸ್ ತಡಬಡನೇ ನಾಡಿ, ರಕ್ತದೊತ್ತಡ ಆಮ್ಲಜನಕದಮಟ್ಟ ಎಲ್ಲವನ್ನೂ ತಪಾಸಣೆ ಮಾಡಿ, ಮೂಗು-ಗಂಟಲನ್ನು ಕೆರೆದು, ಕ್ಷ-ಕಿರಣದ ವ್ಯವಸ್ಥೆ ಮಾಡಿ, ನರದೊಳಗೆ ಸೂಜಿ ತುರಿಕಿಸಿ ರಕ್ತ ತಪಾಸಣೆಗೆ ಕಳಿಸಿದಳು. ರಾತ್ರೆಯಿಂದ ಏನೂ ತಿಂದಿಲ್ಲವೆಂದು ಟೋಸ್ಟ್-ಚಹಾದ ವ್ಯವಸ್ಥೆಯನ್ನೂ ಮಾಡಿದಳು. ಪಾರ್ಥ ಯಾವಾಗಲೂ ಹಸನ್ಮುಖಿ. ಏನಾದರೂ ತಮಾಷೆ ಮಾಡಿಕೊಂಡೇ ಇರುವಂಥವನು. ಇವತ್ತು ಅವನ ಮುಖ ಗಂಭೀರವಾಗಿತ್ತು. ನಾಗೇಂದ್ರನಿಗೆ ಇದು ಒಳ್ಳೆ ಶಕುನದಂತೆ ಕಾಣಲಿಲ್ಲ. “ನಾಗ್ಸ್, ಕ್ಪ-ಕಿರಣದಲ್ಲಿ ನ್ಯೂಮೋನಿಯಾ ಥರ ಕೆಲವು ಛಾಯೆಗಳಿವೆ, ನಿನ್ನ ಬಿಳಿ ರಕ್ತಕಣ ಸ್ವಲ್ಪ ಕಡಿಮೆ ಇದೆ. ನಿನಗೆ ರಕ್ತ ನಾಳದಲ್ಲೇ ಆಂಟಿಬಯೋಟಿಕ್ಸ್ ಕೊಡೋಣ. ಆಮ್ಲಜನಕಾನೂ ಬೇಕು. ವಾರ್ಡಿಗೆ ಸೇರಿಸ್ತಿದ್ದೀನಿ. ಸದ್ಯಕ್ಕೇನೂ ಒಂಟಿ ಕೊಠಡಿ ಸಿಗೋ ಸಾಧ್ಯತೆ ಇಲ್ಲ,” ಎಂದು ತನ್ನ ಕೆಲಸಕ್ಕೆ ತೆರಳಿದ. ಕರುಣಾ ಹೊರಗೇ ಕಾಯ್ತಾ ಇದ್ದಳು. ಅವಳಿಗೆ ನಾಗೇಂದ್ರನನ್ನು ನೋಡುವ ಅವಕಾಶನೂ ಇರಲಿಲ್ಲ. ಕೊರೋನಾ ಎಂದು ರೋಗಿಗಳನ್ನು ಬಿಟ್ಟರೆ ಯಾರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿರಲಿಲ್ಲ. ಅವಳಿಗೆ “ಅತ್ಯವಶ್ಯಕ ಸಾಮಾನುಗಳನ್ನು ವಾರ್ಡಿಗೆ ತಂದು ನರ್ಸಿನ ಕೈಯಲ್ಲಿ ಕೊಡು,” ಎಂದು ಫೋನಾಯಿಸಿ ಹಾಸಿಗೆಯಲ್ಲೊರಗಿದ. ಒಂದೆಡೆ ಆಸ್ಪತ್ರೆಯಲ್ಲಿದೇನೆ ಎಂಬ ಸಮಾಧಾನ, ಇನ್ನೊಂದೆಡೆ ತನ್ನ ತಲೆಯ ಮೇಲೆ ನೇತಾಡುವ ಕತ್ತಿಯಿನ್ನೂ ಮಾಯವಾಗಿಲ್ಲವೆಂಬ ತಲ್ಲಣ. ವಾರ್ಡಿನಲ್ಲಿ ನಾಲ್ಕೈದು ಜನ ಕೆಮ್ಮುತ್ತಿದ್ದರು. ಪಕ್ಕದ ಹಾಸಿಗೆಯ ಕೆವಿನ್ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾನಂತೆ, ಅವನಿಗೂ ಜ್ವರ ಬಿಡದೇ ಬರುತ್ತಿತ್ತು. ಬೆಳಿಗ್ಗೆ ತಿಂದದ್ದೆಲ್ಲ ನಾಗೇಂದ್ರ ಕಕ್ಕಿದ. ಇವನೇನೂ ತಿನ್ನುತ್ತಿಲ್ಲಅಂತ ನರ್ಸ್ ಸಲೈನ್ ಹಚ್ಚಿಟ್ಟಳು. ವಾಂತಿ ಆಗಬಾರದೆಂದು ಕೊಟ್ಟ ಔಷದಿಗೆ ಮೈಯೆಲ್ಲಾ ಝುಮ್-ಝುಮ್ಗುಟ್ಟಿ, ಇನ್ನು ಅದನ್ನು ಕೇಳಬಾರದು ಅಂತ ನಿಶ್ಚಯಿಸಿದ. ರಾತ್ರಿ ಬಂದ ನರ್ಸ್ ಇನ್ನೊಮ್ಮೆ ಎಲ್ಲರ ಮೂಗು ಗಂಟಲುಗಳನ್ನೆಲ್ಲ ಕೆರೆದು ಇದನ್ನು ಬೇರೆ ಪ್ರಯಾಗಶಾಲೆಗೆ ಕಳಿಸುತ್ತಿದ್ದೇವೆಂದು ಡಂಗುರ ಬೀರಿದಳು. ಯಾಕೆ, ಎಲ್ಲಿಗೆ ಎಂದು ಕೇಳುವ ಶಕ್ತಿ ಯಾರಲ್ಲೂ ಇರಲಿಲ್ಲ.

ಮುಂದಿನ ಇಪ್ಪತ್ನಾಕು ಗಂಟೆ ನಾಗೇಂದ್ರನಿಗೆ  ಯುಗಗಳಾದವು. ಹಾಸಿಗೆಯಲ್ಲಿ ಸತ್ತ ಹಾಗೆ ಬಿದ್ದವನಿಗೆ ಸುತ್ತ ಅಪ್ಪ-ಅಮ್ಮ, ಬಂಧುಗಳು, ಮಿತ್ರರು ಅಂತಿಮ ಪ್ರದಕ್ಷಿಣೆ ಹಾಕುತ್ತಿದ್ದಾರೆಂದೆನಿಸುತ್ತಿತ್ತು. ನಾಗೇಂದ್ರ ಹತಾಶ ಜೀವಿಯೇನಲ್ಲ. ಕೊರೋನದ ಸುದ್ದಿಗಳೆಲ್ಲ ಕರಾಳವಾಗಿರುವಾಗ, ಉದಾತ್ತ ಯೋಚನೆಗಳು ಬರುವುದು ಕಷ್ಟವೇ. ಅದನ್ನೆಲ್ಲ ದೂರವಿಡಲು ಫೋನಿನ ಅಂತರ್ಜಾಲದ ಸಂಪರ್ಕವನ್ನೇ ಕಡಿದುಹಾಕಿದ್ದ. ಆದರೆ ಪಾರ್ಥ ತಂದ ಮೈಕೆಲ್ನ ಮರಣದ ಸುದ್ದಿ ನಾಗೇಂದ್ರನ ಮನೋಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು. ಮೈಕೆಲ್ ಸಾಮಾನ್ಯನೇನಲ್ಲ. ಎವರೆಸ್ಟ್ ಪರ್ವತದ ಬುಡಮುಟ್ಟಿ ಬಂದವನು. ಅಂತಹ ಗಟ್ಟಿ ಮನುಷ್ಯನನ್ನೇ ಈ ಮಾರಿ ಬಲಿ ತೆಗೆದುಕೊಂಡರೆ,  ನನ್ನಂಥ ಹುಲು ಮಾನವನ ಗತಿ ಕೈಲಾಸವೇ ಎಂದು ಹತಾಶನಾಗಿಬಿಟ್ಟ. ರಾತ್ರೆ ನರ್ಸ್ ಬಂದವಳೇ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿ ಎಂದು ಹುಕುಂ ಕೊಟ್ಟಳು. ಇದು, ಯುದ್ಧಕಾಲದಲ್ಲಿ ಕೊಡುವ ಬಾಂಬ್ ಸೈರನ್ ಥರ ಕೇಳಿಸಿತು ನಾಗೇಂದ್ರನಿಗೆ. ಏನೋ ವಿಪತ್ತು ಕಾದಿದೆ ಎಂದು ಖಚಿತವಾದಂತಿತ್ತು. ರಾತ್ರೆ ಪಾಳಿಯ ವೈದ್ಯನೊಬ್ಬ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ತನ್ನೆಡೆಗೆ ಬರುವುದನ್ನುಗಮನಿಸಿದ. ಇವನೇನು ದೇವದೂತನೋ ಯಮದೂತನೋ ಎಂದು ಅವನಿಗರಿಯದಾಯಿತು. ಹಾಸಿಗೆಯ ಬುಡದಲ್ಲಿ ನಿಂತು ಮೃದುವಾದ ಸ್ವರದಲ್ಲಿ, “ನಿನ್ನೆ ಕಳಿಸಿದ ಪರೀಕ್ಷೆಯಲ್ಲಿ ನಿನಗೆ ಕೋವಿಡ್ ರೋಗ ಖಚಿತವಾಗಿದೆ. ನಿನ್ನ ಮನೆಯವರೆಲ್ಲ ಇನ್ನು 14 ದಿವಸ ಮನೆಬಿಟ್ಟು ಹೋಗುವಂತಿಲ್ಲ. ಅವರಿಗೆ ಕೂಡಲೇ ತಿಳಿಸಬೇಕು. ನೀನೇ ತಿಳಿಸುತ್ತೀಯೋ ಇಲ್ಲಾ ನಿನಗೆ ಸುಸ್ತಾಗಿದ್ದಾರೆ ನಾನೇ ನಿನ್ನಹೆಂಡತಿಗೆ ತಿಳಿಸುತ್ತೇನೆಂದು,” ಸಹಾಯ ಹಸ್ತ ಚಾಚಿದ. ಈ ಮಧ್ಯರಾತ್ರಿಯಲ್ಲಿ ಕರುಣಾಳನ್ನು ಫೋನ್ ಮಾಡಿ ಎಬ್ಬಿಸುವುದು ಅಸಾಧ್ಯ ಎಂಬುದನ್ನು ನಾಗೇಂದ್ರ ಬಲ್ಲ. ಆ ವೈದ್ಯನಿಗೆ ಧನ್ಯವಾದಗಳನ್ನರುಹಿ, ತಾನೇ ಸುದ್ದಿ ತಿಳಿಸುವುದಾಗಿ ಹೇಳಿದ. ಪರೀಕ್ಷೆಯ ಫಲಿತಾಂಶ ಕೇಳಿ ಒಂದು ಬಗೆ ಮನ ನಿರುಮ್ಮಳವಾದರೂ, ಬಂದೇನೇ ಈ ಮಾರಿಯ ಬಾಯಿಂದ ಸುರಕ್ಷಿತವಾಗಿ ಎಂಬ ದುಗುಡ ಇನ್ನೊಂದೆಡೆ. ಯೋಚಿಸುತ್ತಿರುವಾಗಲೇ, ಇಬ್ಬರು ದಾಯಿಯರು ಬಂದು ನಾಗೇಂದ್ರನನ್ನು ಒಂಟಿಕೋಣೆಗೆ ಸ್ಥಲಾಂತರಿಸಿದರು.

ಪವಾಡವೆಂಬಂತೆ ಮತ್ತೆರಡು ದಿನಗಳಲ್ಲಿ ಮೈ ಹಗುರವಾಗತೊಡಗಿತು. ಜ್ವರ ಇಳಿದು ಹುರುಪು ಹೆಚ್ಚಾಯಿತು. ಮರುದಿನ ಬಂದ ವೈದ್ಯ ಆಮ್ಲಜನಕದ ಅಗತ್ಯ ಕಡಿಮೆಯಿದೆಯೆಂದು ಇನ್ನೂ ಧೈರ್ಯ ತುಂಬಿದ. ಕಣ್ಮುಂದೆ ಯಮರಾಜನ ಬದಲು ಮೃದುಲಾ-ಮೃಣಾಲ್ ರ ನಗುಮುಖ ಕುಣಿಯತೊಡಗಿತು. ಮಾರನೇ ದಿನ ಬಂದ ಪಾರ್ಥ, “ನಾಡಿ, ರಕ್ತದೊತ್ತಡ, ಆಮ್ಲಜನಕದ ಲೆವೆಲ್ ಎಲ್ಲ ಸರಿಯಾಗಿದೆ. ಇವತ್ತು ಸಾಯಂಕಾಲ ಮನೆಗೆ ಹೋಗಬಹುದು,” ಎಂದು ಮುಗುಳ್ನಕ್ಕ. ನಾಗೇಂದ್ರನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿದವು. ಪಾರ್ಥ ಹತ್ತಿರ ಬಂದು ಸಂತೈಸಲಾರ, ಬಿಡಲಾರ. ದೂರದಿಂದಲೇ, “ರಿಲ್ಯಾಕ್ಸ್ ಯಾರ್ ನಾಗ್ಸ್. ಥ್ಯಾಂಕ್ ದಿ ಗಾಡ್. ಇಟ್ ಆಲ್ ಎಂಡೆಡ್ ವೆಲ್. ಇನ್ನು ಎರಡು ವಾರ ಆಸ್ಪತ್ರೆ ಕಡೆ ಮುಖ ಹಾಕಬೇಡ,” ಎಂದು ಧೈರ್ಯ ಹೇಳಿ ರಜೆ ಚೀಟಿ ಬರೆದು ಕೊಟ್ಟ.

ಕಿಟಕಿಯ ಹೊರಗೆ ಎಂದಿಗೂ ಕವಿದಿರುವ ಕಾರ್ಮೋಡದ ತೆರೆ ಸರಿದು, ಹೊಂಬಿಸಿಲು ಮೂಡಿತ್ತು. ಅಂತರ್ಜಾಲದ ಸಂಪರ್ಕಕ್ಕೆ ಬಂದ ಫೋನ್ ನೂರಾರು ಸಂದೇಶಗಳನ್ನು ಮುಂದೆ ಸುರುವಿ ಹಾಕಿತ್ತು. ಎಲ್ಲದರ ಮೊದಲಿತ್ತು ಗೆಳೆಯನೊಬ್ಬನ ಸಂದೇಶ, “ಸಿಂಹದ ಬಾಯಿಂದ ಹೊರಬಂದಿದದ್ದಕ್ಕೆ ಅಭಿನಂದನೆಗಳು” 

ವಿ.ಸೂ: ಡಾ. ನಾಗೇಂದ್ರ ಗುಣಮುಖರಾಗಿದ್ದು, ಸಾಧ್ಯವೇ ಕೆಲಸಕ್ಕೆ ಹಿಂದಿರುಗಲಿದ್ದಾರೆ. ಕೊರೋನಾ ಸೋಂಕು ಹೆಚ್ಚಿನವರಲ್ಲಿ ಮರಣಕ್ಕೆ ದಾರಿಯಲ್ಲ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಓದುಗರು ಇದನ್ನು ಓದಿ, ರೋಗ ಲಕ್ಷಣಗಳನ್ನು ತಿಳಿದು ಹೆಚ್ಚಿನ ಜಾಗರೂಕತೆ ತೆಗೆದುಕೊಳ್ಳಲಿ, ಸೋಂಕು ಬಂದರೆ ಧೈರ್ಯವಾಗಿ ಎದುರಿಸುವ ಮನೋಭಾವನೆ ಇರಲಿ ಎಂಬುದೇ ಲೇಖಕರ ಆಷಯ.

ಕರಾಳ ಕರೋನ

ಡಾ. ಜಿ. ಎಸ್. ಶಿವಪ್ರಸಾದ್

ಕರೋನ ಬರುವಿಕೆಯ ಭೀತಿಯಲ್ಲಿ
ಕದವ ಮುಚ್ಚಿ ಕುಳಿತ್ತಿದ್ದೇವೆ
ಇಂದು-ಎಂದು , ಹೇಗೆ, ಕಣ್ ತಪ್ಪಿಸಿ
ಬರುವನೆಂಬ ಶಂಕೆಯಲಿ ನಡುಗಿದ್ದೇವೆ

ಕಟ್ಟಾಜ್ಞೆಯ ಹಿಡಿದ ಯಮದೂತ
ಬಾಗಿಲಬಳಿ ನಿಂದು ಕದವ ತಟ್ಟಿದ್ದಾನೆ
ಬಾಗಿಲು ಮುರಿದು ಮುನ್ನುಗ್ಗಿ
ಸೆರೆ ಹಿಡಿವ ಸಂಚು ಹೂಡಿದ್ದಾನೆ

ಮನೆ ಮನೆಗೆ ಲಗ್ಗೆ ಇಟ್ಟು
ಎಲ್ಲರ ಮೈಮನಗಳ ಆವರಿಸಿದ್ದಾನೆ
ಅಮೂರ್ತ ಭೀಕರ ಭಯೋತ್ಪಾದಕ
ಅಲ್ಲಿ-ಇಲ್ಲಿ, ಎಲ್ಲೆಲ್ಲೂ ಅವತರಿಸಿದ್ದಾನೆ

ಜಾತಿ, ಮತ, ಧರ್ಮ
ದೇಶ ಗಡಿಗಳ ಹಂಗಿಲ್ಲ
ಎಲ್ಲರನ್ನೂ ನುಂಗುವ ತವಕ
ಇವನ ದಾಹಕ್ಕೆ ಕೊನೆಯಿಲ್ಲ

ಕಾಣದ ವೈರಿಯ ಬಳಿ
ಖಡ್ಗ, ಕವಚ, ಕಹಳೆಗಳಿಲ್ಲ
ರಣ ರಂಗದಲಿ ರಕ್ತಪಾತಗಳಿಲ್ಲ,
ಸಮರದಲಿ ಒಪ್ಪಂದಕ್ಕೆ ಆಸ್ಪದವಿಲ್ಲ

ಮೊರೆ ಹೋದ ದೇವ ದೇವತೆಗಳು
ತಮ್ಮ ಗುಡಿಗಳ ಮುಚ್ಚಿದ್ದಾರೆ
ಪವಾಡ ಪುರುಷರು, ಬಾಬಾಗಳು
ಅಂಜಿ ಆಶ್ರಮಗಳಲಿ ಅಡಗಿಕೊಂಡಿದ್ದಾರೆ

ಕೆಮ್ಮು ದಮ್ಮುಗಳ ನಡುವೆ
ನಿಶಬ್ದ, ನಿರ್ಜನ ಬೀದಿಗಳು
ಸೆರೆಮನೆಯಾದ ಮನೆ ಮಠಗಳು
ಭುಗಿಲೆದ್ದು ನರ್ತಿಸುವ ಚಿತೆಯುರಿಗಳು

ಹೋರಾಡಿ ನಿಶಕ್ತರಾದ ಹಲವರಿಗೆ
ಸಮರದಲಿ ಸೋಲು ಅನಿವಾರ್ಯ
ಗೆದ್ದು ಬದುಕುಳಿದವರಿಗೆ ನಾಳೆ
ಹೊಸ ಭರವಸೆಯ ಅರುಣೋದಯ

ಕವಿ: ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ರೇಖಾಚಿತ್ರ ಕೃಪೆ : ಲಕ್ಷ್ಮಿನಾರಾಯಣ ಗುಡೂರ್

14 thoughts on “‘ಕೋವಿಡ್: ಸಿಂಹದ ಬಾಯಿಂದ’ ನೈಜ ಕಥೆ ಮತ್ತು ‘ಕರಾಳ ಕರೋನ’ ಕವಿತೆ

  1. ನಮಸ್ಕಾರ ಅನಿವಾಸಿ ಮಿತ್ರ ರಾಮಶರಣ್ ಅವರಿಗೆ. ಈಗ ಸುಮಾರು ೩ ತಿಂಗಳುಗಳಿಂದ ನಾನು ಅನಿವಾಸಿ ಸೈಟಿಗೆ ಲಾಗ್ ಇನ್ ಆಗೇ ಇಲ್ಲ. ಅದು ನನ್ನ ಕೆಲಸದ ಒತ್ತಡ ಮತ್ತು ಈಗಂತೂ ಈ ಕರೋನ ಎಂಬ ಕಾರಿರುಳ ದೆಸೆಯಿಂದ ಎನ್ನಬಹುದು. ಅದೇನೇ ಇರಲಿ, ಕರೋನ ಎಂಬ ಯಮದೂತನ ದವಡೆಯಿಂದ ಪಾರಾಗಿ ಬಂದ ನಿಮ್ಮ ವೈದ್ಯ ಮಿತ್ರರ ಅನುಭವವನ್ನು ನಿಮ್ಮ ಲೇಖನದ ರೂಪದಲ್ಲಿ ಓದಿ ನಾನೆ ಆ ಅನುಭವ ಹೊಂದಿದಂತಾಯಿತು. ಅಮೇರಿಕೆಯಲ್ಲಂತೂ ಅನೇಕ ರಾಜ್ಯಗಳು ಈ ವೈರಾಣುವಿನ ಕಪಿ ಮುಷ್ಟಿಯಲ್ಲಿ ಸಿಲುಕಿ ನಲುಗಾಡುತ್ತಿವೆ ಎನ್ನುವುದು ನಿಮಗೂ ತಿಳಿದಿರಬಹುದು. “ವೈದ್ಯೋ ನಾರಾಯಣೋ ಹರಿ” ಎನ್ನುವ ನಾಣ್ಣುಡಿ ಕೇಳಿ ಬೆಳೆದಿದ್ದೇವೆ. ಆ ನಾರಾಯಣರನ್ನು ಈ ವೈರಸ್ ಬಿಡುತ್ತಿಲ್ಲ! ಏನ್.ಎಚ್.ಎಸ ವೈದ್ಯಕೀಯ ಸಿಬ್ಬಂದಿ ಬಹಳ ಉತ್ತಮ ರೀತಿಯ ಸೇವಾ ಕಾರ್ಯ ನಿರ್ವಹಿಸಿ ಪ್ರಾಣ ಉಳಿಸುವ ಪ್ರಯತ್ನ ನಡೆಸಿದ್ದಾರೆ ಎನ್ನುವುದನ್ನು ದಿನವೂ ಬಿ.ಬಿ.ಸಿಯಲ್ಲಿ ಓದುತ್ತಿದ್ದೇನೆ. ನಮ್ಮ ಯುನಿವರ್ಸಿಟಿ ಕ್ಯಾಂಪಸ್ ಪೂರಾ ಬಂದ್. ಆದರೆ ನನ್ನ ಪ್ರಯೋಗಗಳು ಮಧ್ಯದಲ್ಲಿ ನಿಲ್ಲಸಲು ಸಾಧ್ಯವಾಗದ ಕಾರಣ ವಾರದಲ್ಲಿ ೨ ದಿನ ಹೋಗುತ್ತಿದ್ದೇನೆ. ಹಾಗಾಗಿ ಅನಿವಾಸಿ ವೇದಿಕೆಯಲ್ಲಿ ನನ್ನ ಚಟುವಟಿಕೆ ನಿಂತು ಹೋಗಿದೆ. ಉತ್ತಮವಾದ ಲೇಖನ.
    ಮಾನ್ಯ ಶಿವಪ್ರಸಾದ್ ಅವರ ಕವನವು ಸಹ ಸಮಯೋಚಿತ. ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಬಣ್ಣಿಸಿ ಬರೆದಿದ್ದಾರೆ.
    “ಮೊರೆ ಹೋದ ದೇವ ದೇವತೆಗಳು
    ತಮ್ಮ ಗುಡಿಗಳ ಮುಚ್ಚಿದ್ದಾರೆ
    ಪವಾಡ ಪುರುಷರು, ಬಾಬಾಗಳು
    ಅಂಜಿ ಆಶ್ರಮಗಳಲಿ ಅಡಗಿಕೊಂಡಿದ್ದಾರೆ” ಈ ಸಾಲುಗಳು ನನಗೆ ಬಹಳ ಹಿಡಿಸಿದವು. ಇಂದಿನ ಪರಿಸ್ಥಿತಿಯಲ್ಲಿ ಕೇವಲ ವೈದ್ಯರು, ವಿಜ್ಞಾನಿಗಳೇ ಈ ಸಮಸ್ಯೆಯನ್ನು ಬಿಡಿಸಿ ಪರಿಹಾರ ನೀಡುವ ದೇವ-ದೇವತೆಯರು. ಅವರನ್ನು ಗೌರವಿಸಿ ಮುನ್ನಡೆದರೆ ಒಳ್ಳೆಯದು.
    ಉಮಾ ವೆಂಕಟೇಶ್

    Like

  2. ರಾಮ್ ಬರೆದಿರುವ ಕೊರೊನಾ ಕತೆ ಕಣ್ಣುಕಟ್ಟುವಂತಿದೆ.

    ಸ್ವತಃ ವೈದ್ಯನಾಗಿದ್ದರೂ ಇಂಗ್ಲೆಂಡಿಗೆ ಅದೇ ತಾನೆ ಕಾಲಿಟ್ಟಿದ್ದ ಕೊರೊನಾ ತನಗೆ ಬಂದಿರಬಹುದು ಎನ್ನುವ ಸಣ್ಣ ಕಲ್ಪನೆಯೂ ಇಲ್ಲದೇ, ಬ್ರುಫೆನ್ ತೆಗೆದುಕೊಳ್ಳುವುದು (guidance were released much later), ಆಸ್ಪತ್ರೆಯವರಿಗೂ‌ ಇನ್ನೂ ಏನೂ‌ ಗೊತ್ತಿಲ್ಲದಿರುವುದು, ಕಲೀಗ್ ಐಟಿಯುಗೆ ಅಡ್ಮಿಟ್ ಆಗುವುದು… ಅನುಭವಿಸಿದವರಿಗೇ ಗೊತ್ತು. ಸಾವಿನ ದವಡೆಯ ಹತ್ತಿರ ನಿಂತಂತೆ ಒಮ್ಮೆ ಭಾಸವಾದರೆ ಸಾಕು, ಮನಸಿನ ತುಂಬ ನೂರೆಂಟು ಯೋಚನೆಗಳು ಗೊತ್ತಿಲ್ಲದಂತೆ ಹರಿಯುತ್ತವೆ.

    ಪ್ರಸಾದ್ ಅವರ ಕವನ ಕೊರೊನಾ ಎನ್ನುವ ಯಮರಾಯನ ಧಾಳಿಗೆ ತತ್ತರಿಸುತ್ತಿರುವ ಜಗತ್ತಿನ ಚಿತ್ರವನ್ನು ನಿಲ್ಲಿಸುತ್ತವೆ.

    ಗುಡೂರವರ ಚಿತ್ರ ಅರ್ಥಗರ್ಭಿತವಾಗಿದೆ. ದೇಸಾಯಿಯವರು ಹೇಳಿರುವಂತೆ ಚಿತ್ರದಲ್ಲಿ ಪದರುಗಳಿವೆ.

    Like

  3. ಗುಣ ಮುಖರಾದ ವೈದ್ಯ ನಾಗೇಂದ್ರರ ಕುಟುಂಬಕ್ಕೆ ಅಭಿನಂದನೆಗಳು
    ಕೋವಿಡ್ ಎನ್ನುವ ಶೀರ್ಷಿಕೆ ಒಂದೇ ಆದರೆ ಕಥೆಗಳು ಬಹಳ ಭಿನ್ನ. ರೋಗ ಬಂದು ಹೋಗಿದ್ದರೂ ಗೊತ್ತಿಲ್ಲದೇ ಇರುವ ಜನರಿದ್ದಾರೆ. ಪಾಸಿಟಿವ್ ಆಗಿದ್ದೂ ಒಂದೆರಡು ದಿನಗಳ ನೆಗಡಿಯಂತಹ ಅನುಭವವನ್ನು ಮಾತ್ರ ಪಡೆದವರಿದ್ದಾರೆ. ಅತ್ಯಂತ ಕೆಟ್ಟ ಅನುಭವ ಪಡೆದು ತೀವ್ರ ನಿಘಾ ಘಟಕಗಳಲ್ಲಿ ೨ ವಾರ ಕಳೆದುಬಂದವರ ಅನುಭವದ ಮುಂದೆ ಒಂದು ದಿನ ಅಡ್ಮಿಟ್ ಆಗಿ ಮನೆಗೆ ಬಂದ ನಾಗೇಂದ್ರರದು ಸರಳ ಕಥೆ.

    ಆದರೆ ರಾಂ ರು ಅದನ್ನು ಅತ್ಯಂತ ಭಯಾನಕ ಕಥೆಯಂತೆ ನಿರೂಪಿಸಿರುವುದು ವಿಶಾದಕರ. ಇದು ಕಾಲ್ಪನಿಕ ಅಲ್ಲ. ಹೇಳಿಕೊಂಡವರು ವೈದ್ಯರು. ಬರೆದವರು ವೈದ್ಯರು. ಹಾಗಾಗಿ ಕೆಲವು ನೈತಿಕ ನಿಯಮಗಳನ್ನಾದರೂ ಬರವಣಿಗೆಯಲ್ಲಿ ಪಾಲಿಸಬೇಕಿತ್ತು.
    ಇದನ್ನು ಕಾಳಜಿಯಿಂದಲ್ಲದೆ ಖಂಡಿಸುವ ಸಲುವಾಗಿ ಬರೆಯುತ್ತಿಲ್ಲ. ಇಡೀ ಲೇಖನ ಅತ್ಯಂತ ಘೋರ ಭಾಷೆಯಲ್ಲಿ ನಿರೂಪಿತವಾಗಿದೆ. ಆಳತೆ ಮೀರಿದ ಭಯ ಹುಟ್ಟಿಸಲು ಮಾಡಿದ ಪ್ರಯತ್ನದಂತಿದೆ.
    ಉದಾಹರಣೆಗೆ
    ೧) ” ನರವನ್ನು ಚುಚ್ಚಿ ರಕ್ತ ತಪಾಸಣೆಗೆ ಕಳಿಸುವುದು”?- ರಕ್ತನಾಳ ಎಂದಿರಬೇಕಿತ್ತಲ್ಲವೇ ಅಥವಾ ಪದಗಳನ್ನು ಘೋರ ಮಾಡುವ ಅಗತ್ಯವಿಲ್ಲದೇ ರಕ್ತತಪಾಸಣೆ ಎಂದು ಸರಳವಾಗಿ ಹೇಳಬಹುದಿತ್ತಲ್ಲವೇ? ಯಾಕೆಂದರೆ ರಕ್ತತಪಾಸಣೆ ಅತ್ಯಂತ ಸಾಮಾನ್ಯ ಮತ್ತು ಸರಳ ಪರೀಕ್ಷೆ.
    ೨) ಕಾರಿನಿಂದ ಹತ್ಯಾರಗಳಗಳನ್ನು ತಂದು ಪಪ್ಪುಸ ಪರೀಕ್ಷೆ!- ಉಪಕರಣಗಳು ಎನ್ನುವ ಪದದ ಬದಲು ಹತ್ಯೆ ಮಾಡಲು ಬಳಸುವ ಉಪಕರಣಗಳನ್ನು ಯಾಕೆ ತಂದರು? ಹೆಂಡತಿಯೂ ವೈದ್ಯೆಯಲ್ಲವೇ?
    ೩) ” ಒಳ್ಳೆಯ ಶಕುನದಂತೆ ಕಾಣಲಿಲ್ಲ “- ಒಬ್ಬ ವೈದ್ಯರಿಗೆ ಇದು ’ಸೂಚನೆ/ ಲಕ್ಷಣ ’ದಂತೆ ಕಾಣದೆ ಅವೈಗ್ನಾನಿಕ ಶಕುನದ ನೆನಪುಗಳನ್ನು ಏಕೆ ತರಬೇಕು?
    ೪) ಮುಖದ ಮಾಸ್ಕನ್ನು ಹಾಕಲು ಹೇಳಿದ ಸೂಚನೆ- ನಾಗೇಂದ್ರರಂತ ವೈದ್ಯರಿಗೆ ಅತ್ಯಂತ ಸರಳ ಸೂಚನೆಯಂತೆ ಕಾಣದೆ (ಅದರಲ್ಲೂ ಪ್ರತಿ ಸಾಮಾನ್ಯ ಪ್ರಜೆಯೂ ಇದನ್ನು ಮಾಡುತ್ತಿರುವಾಗ) ಎರಡನೇ ಪ್ರಪಂಚ ಯುದ್ದದ ಸೈರನ್ನಿನಂತೆ ಯಾಕೆ ಕೇಳಿಸಬೇಕು?
    ೫) ಐಬುಪ್ರುಫೆನ್ ಬಗ್ಗೆ ಎಚ್ಚರಿಕೆಯ ಪ್ರಕಟಣೆಗಳು ನಮ್ಮವರೆಗೂ ಬಂದಿವೆ. ಇದಕ್ಕೆ ಪುರಾವೆಯಿಲ್ಲದಿದ್ದರೂ ಆ ಎಚ್ಚರಿಕೆಯನ್ನು ಗಾಳಿಗೆ ತೂರಿದ ವೈದ್ಯರ ಚಿತ್ರಣವಿದೆ. ಲೇಖನ ಇದೀಗ ಬರೆದಿರುವ ಕಾರಣ ಅದನ್ನು ಬರೆಯದೇ ಇರಲು ಕೂಡ ಸಾಧ್ಯವಿತ್ತು.

    ಇಂತವೇ ಇನ್ನೂ ಹಲವು ಉದಾಹರಣೆಗಳನ್ನು ಲೇಖನದ ಉದ್ದಕ್ಕೂ ಕಾಣಬಹುದು. ಬದಲಿಗೆ ಇದೇ ಕಥೆಯ ಸರಳ ನಿರೂಪಣೆಯೊಂದಿಗೆ ಈ ಸೋಂಕಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಬಹುದಿತ್ತು.ಹೀಗೆ ಹೇಳಿದೆ ಅಂಥ ರಾಂ ರವರು ಅನ್ಯಥಾ ಭಾವಿಸದಿರಲಿ. ಆದರೆ, ಸಾವು, ಆತಂಕಗಳೇ ಪ್ರಪಂಚವನ್ನು ಆವರಿಸಿರುವ ಈ ಸಮಯದಲ್ಲಿ ಅನಗತ್ಯ ಭಯ ಮೂಡಿಸುವ ಪ್ರಯತ್ನಗಳು ನಡೆಯದಿರಲಿ.
    ಕಾಲ್ಪನಿಕವಾದ ಪ್ರಸಾದರ ಕವಿತೆ ಚೆನ್ನಾಗಿದೆ.

    Like

    • ಈ ಲೇಖನ ಉದ್ದೇಶ ಏನು? ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯವಿದೆ, ಹಕ್ಕೂ ಇದೆ. ಲೇಖನದ ಪೀಠಿಕೆಯಲ್ಲೆ ”’ಸೋಂಕು ಪೀಡಿತ ವೈದ್ಯರ ರೋಗ ಲಕ್ಷಣಗಳು ಹಾಗೂ ಅವರ ಅನುಭವ ಯಾವುದನ್ನೂ ಕಲ್ಪಿಸಿಕೊಳ್ಳಲಾಗಿಲ್ಲ”’ ಎಂದು ಬರೆದಿರುವಾಗ ಆ ’ಕಥೆ’ಯನ್ನು ಓದುವಾಗ ನಾಗೇಂದ್ರನ ದೃಷ್ಟಿಕೋನದಿಂದಲೇ ಅದನ್ನು ಓದಿದೆ. ಅಂದ ಮೇಲೆ, ನನಗೇನೋ ’ಅನಗತ್ಯ ಭಯ ಮೂಡಿಸುವ ಪ್ರಯತ್ನ’ ಇದು ಎಂದು ಅನಿಸಲಿಲ್ಲ. ಅದಕ್ಕೇ ರಕ್ತನಾಳಕ್ಕೆ ನರ ಅಂತ ಕರೆದದ್ದಾಗಲಿ, ಆ ಮನಸ್ಥಿತಿಯಲ್ಲಿ ಮಾಸ್ಕ್ ಹಾಕಲು ಕೊಟ್ಟ ಸೂಚನೆಗೆ ಆತನ ಮನಸ್ಸಿನಲ್ಲಾದ ಪ್ರತಿಕ್ರಿಯಾಗಲಿ ಅಂಥದೇನೂ ಉತ್ಪ್ರೇಕ್ಷೆಯೆನಿಸಲಿಲ್ಲ. ಹತ್ಯಾರಕ್ಕೆ ಸಾಧನೆ, ಉಪಕರಣ ಎನ್ನುವ ಅರ್ಥಗಳೂ ಉಂಟಲ್ಲ, ಮಾರಕ ಅಷ್ಟೆ ಅಲ್ಲ. ಅನುಭವವನ್ನು ಹೇಳಿದವರು,ಬರೆದವರು ಇಬ್ಬರೂ ವೈದ್ಯರು ಸರಿ. ಪರಿಸ್ಥಿತಿ ಬಂದಾಗ, ಸಾವಿನ ಹೆದರಿಕೆ ಎದುರು ಬಂದಾಗ (ಆಮೇಲೇನೋ ಅದು ಸರಳ ಕಥೆಯಾಯಿತು, ಆ ಮಾತು ಬೇರೆ) ಎಂಥವನೂ ಹುಲುಮಾನವನಾಗಿಯೇ ಚಿಂತಿಸುತ್ತಾನೆ, ವರ್ತಿಸುತ್ತಾನೆ, ವೈದ್ಯನಂತೆ ಯಾ ವಿಜ್ಞಾನಿಯಂತೆ ಅಲ್ಲ. ಅದಕ್ಕೇ ತಕ್ಷಣ ಐಬುಪ್ರುಫ಼ೆನ್ ತೊಗೊಂಡ ಅಂದುಕೊಂಡೆ. ಆ ಕಾಲಘಟ್ಟದಲ್ಲಿ ಆ ಮಾಹಿತಿ ಸರ್ವವಿದಿತವಾಗಿತ್ತೋ?
      ಈಗ 24/7 ಮಾಹಿತಿಗಳ (ಕೆಲವು ಸುಳ್ಳಿರಬಹುದು) ಸುರಿಮಳೆಯಾಗುತ್ತಿರುವಾಗ ಕಥೆಯ ನೆಪದಲ್ಲಿ ’ಇನ್ನೂ ಹೆಚ್ಚಿನ’ ಮಾಹಿತಿಗಳನ್ನು ಸೇರಿಸಬೇಕಾಗಿತ್ತೋ? Where will you draw the line?
      ಇದನ್ನು ಹಂಚಿಕೊಳ್ಳ ಬೇಕಾಗಿತ್ತಾ, ಅಥವಾ ಸಂಪಾದಕರು ಪ್ರಕಟಿಸಬಾರದಿತ್ತಾ ಎನ್ನುವ ನೈತಿಕ ಪ್ರಶ್ನೆಗಳನ್ನು ನಾನು ಇಲ್ಲಿ ಚರ್ಚಿಸುತ್ತಿಲ್ಲ. ಶ್ರೀವತ್ಸ ದೇಸಾಯಿ

      Like

      • ೧) ನನ್ನದು ಅಭಿಪ್ರಾಯವಷ್ಟೇ. ಯಾರೂ ನನ್ನ ‘ಮಧ್ಯಸ್ಥಿಕೆ”ಬೇಡಿಲ್ಲ. ಇದು ಮಧ್ಯಸ್ಥಿಕೆಯೂ. ಅಲ್ಲ.
        ೨) ಪ್ರಕಟಿಸಲೂ ಬಾರದೆಂದು ನಾನು ಸೂಚಿಸಿಲ್ಲ.
        ಯಾವ ಮುತ್ಸದ್ದಿತನ? .

        Like

  4. ಕರೋನ ವೈರಸ್ಸಿನ ಖಾಯಿಲೆಯ ರೋಗಿಯೊಬ್ಬರ ಅನುಭವದ ಲೇಖನ ಸಮಯೋಚಿತವಾಗಿದೆ. ಗುಣಮುಖರಾದ ಆ ವೈದ್ಯರಿಗೆ ಮತ್ತು ಅವರ ಕುಟುಂಬಕ್ಕೆ ಶುಭವಾಗಲಿ.

    ಕರೋನ ಯಾರನ್ನ ಬೇಕಾದರೂ ಮುತ್ತಬಹುದು ಮತ್ತು ಮಟ್ಟ ಹಾಕಬಹುದು; ಎಚ್ಚರಿಕೆಯ ಅಂತರವೊಂದೇ ಅದನ್ನ ತಡೆಯುವ ಉಪಾಯ ಅನ್ನೋದನ್ನ ಈ ಲೇಖನ ಒತ್ತಿ ಹೇಳಿದೆ.

    ಒಂದು ಮಾತು: ಬ್ರುಫೆನ್ ಮಾತ್ರೆ ಕರೋನ ಜ್ವರ ಬಂದವರು ತೆಗೆದುಕೊಳ್ಳದಿದ್ದರೆ ಒಳ್ಳೆಯದು; ಬ್ರುಫೆನ್ ಆ ಜ್ವರವನ್ನ ಉಲ್ಬಣ ಮಾಡುವ ಸಾಧ್ಯತೆ ಇದೆ.

    ಪ್ರಸಾದರ ಕವಿತೆ ನಮ್ಮ ಕೊರತೆ, ಕುಟಿಲತೆಗಳನ್ನ ಊಟವಾಗಿಸಿಕೊಂಡು ಬೆಳೆದಿರುವ ಕರೋನ ರಕ್ಕಸನ ಅಟ್ಟಹಾಸ, ಅಲ್ಲಲ್ಲಿ ಉಳಿದಿರುವ ಒಳಿತನದಲ್ಲಿ ಕರಗುವ ಭರವಸೆಯ ಆಶಾಕಿರಣ ಚೆಲ್ಲಿದೆ

    Murali

    Like

  5. ಡಾ. ಲಕ್ಷ್ಮೀನಾರಾಯಣ್ ಗೂಡೂರ್ ಅವರ ರೇಖಾ ಚಿತ್ರ ನನ್ನ ಕವನಕ್ಕೂ ಮತ್ತು ರಾಮ್ ಅವರ ಕಥನಕ್ಕೂ ನಡುವೆ ಪೂರಕವಾಗಿ ಕುಳಿತಿದೆ. ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಪೂರ್ಣವಾಗಿ ಬಿಂಬಿಸಿದೆ . ಹಾಸಿಗೆಯ ಬದಿಯಲ್ಲಿ ನಿಂತ ಯಮದೂತ ಕರೋನ, ಹಾಸಿಗೆಯಲ್ಲಿ ಮಲಗಿರುವ ರೋಗಿ ಅದರ ಹಿಂದೆ ನಿಂತ ಸೈನಿಕ ನಮ್ಮ ಹೋರಾಟದ ಚಿತ್ರಣವನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ. ಈ ಚಿತ್ರವನ್ನು ಒದಗಿಸಿದ ಲಕ್ಷ್ಮೀನಾರಾಯಣ್ ಅವರಿಗೆ ಧನ್ಯವಾದಗಳು.

    Like

    • ನಾನೂ ಅದನ್ನು ಅನುಮೋದಿಸುತ್ತೇನೆ.ನಿಷ್ಣಾತ ಚಿತ್ರಕಲಾಕಾರ ಗುಡೂರ್ ಅವರ ಸೂಕ್ಷ್ಮ ಅವಲೋಕನಕ್ಕೆ ಸಾಕ್ಷಿಯೆನ್ನುವಂತೆ ‘ಡ್ರಾಗನ್’ ತರ ಕಾಣುವ ಯಮದೂತ,ಶುಶ್ರೂಷಕನ PPE ಧಿರಿಸು,ರೋಮನ್ ಯೋಧನ ಗುರಾಣಿಯ ಮೇಲಿನ staff of Aesclepius, ಇವನ್ನು ಗಮನಿಸಬಹುದು! ಶ್ರೀವತ್ಸ ದೇಸಾಯಿ

      Like

    • ಪ್ರಸಾದ್‌, ನಿಮ್ಮ ಕವನ ಎಂದಿನಂತೆ ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿದೆ. ಕೊನೆಯಲ್ಲಿ ಬರುವ ಆಶಾವಾದ, ಇಂದಿನ ಪರಿಸ್ಥಿತಿಗೆ ಅವಶ್ಯಕವಾಗಿರುವ ಸರುಕು. ಸುರಂಗದ ಕೊನೆಯಲ್ಲಿ ಕಾಣುವ ಬೆಳಕಿನ ರೇಖೆಯಂತೆ ಕರಾಳ ದಿನಗಳಿಗೆ ಬೇಗನೇ ಕೊನೆ ಬರಲೆಂದು ಆಶಿಸೋಣ.
      ಲಕ್ಷ್ಮೀನಾರಾಯಣರ ರೇಖಾಚಿತ್ರ ಕಥೆ – ಕವನಗಳಿಗೆ ಪೂರಕವಾಗಿ ಮೆರುಗು ನೀಡಿದೆ.
      – ರಾಂ

      Like

  6. ಇಂದಿನ ಈ ಪ್ರಸಕ್ತ ಸ್ಥಿತಿಯಲ್ಲಿ ಡಾ.ರಾಮಶರಣ ರವರ ಕಥೆ, ನೈಜ ಕಥೆ ಕತ್ತಲೆಯಲ್ಲಿ ಒಂದು ಬೆಳಕಿನೆಳೆ ಅನಕೋಬಹುದು. ಆ ಭಯಂಕರ ಭೀಭತ್ಸ ರೋಗದ ಕಬಂಧ ಬಾಹುಗಳ ಹಿಡಿತದಲ್ಲಿದ್ದಾಗ ಸ್ವತಃ ನಾಗೇಂದ್ರ ಹಾಗೂ ಅವರ ಕುಟುಂಬದ ಪರಿಸ್ಥಿತಿ ಊಹಾತೀತ.ಆದರೆ ಅದನ್ನು ಮರೆಸುವಂಥ ಬೆಳಕಿನೆಡೆ ಅವರು ಸಾಗಿ ಬಾಳ ತುಂಬ ಬೆಳಕು ಚೆಲ್ಲುವಂತಾದದ್ದು ಇತರರಿಗೆ ಒಂದು ಸಣ್ಣ ಧೈರ್ಯ ತುಂಬುವಲ್ಲಿ ಸಂಶಯವೇ ಇಲ್ಲ.
    ಹಾಗೆಯೇ ಶಿವಪ್ರಸಾದ್ ಅವರ ಕವನವೂ ತುಂಬ ಸಕಾಲಿಕ ಸಹಕಾರೀ ಕವನ.ಒಂದು ಹುಮ್ಮಸ್ಸು ತುಂಬ ಬಲ್ಲದು.ನಿಜ ಈಗ ದೇವರು, ಬಾಬಾ, ಯೋಗಿಗಳೆಲ್ಲ ಮೌನರಾಗಿ ಬಿಟ್ಟಿದ್ದಾರೆ.ನಾವೀಗ ಕಾಯಬೇಕಿದೆ ಅಷ್ಟೇ….
    ” ಶಬರಿ ಅಟ್ಟಡವಿಯಲಿ ರಾಮನಿಗೆ ಕಾದಂತೆ
    ದೇವಕಿ ಸರಳುಗಳ ಹಿಂದೆ ಕೃಷ್ಣ ಜನನಕೆ ಕಾದಂತೆ
    ಕಾಯಬೇಕಿದೆ ಈ ತಾಂಡವ ನೃತ್ಯ ನಿಲ್ಲೋತನಕ
    ಮಹಾ ಪ್ರಳಯದಲೆ ಹಿಮ್ಮೆಟ್ಟೋತನಕ
    ಉಳಿದ ಜೀವ ಜಲವ ಬೊಗಸೆಯಲ್ಲಿ ಕಾಪಿಟ್ಟು
    ಜತನವಾಗಿ ಕಾಪಿಟ್ಟು ಸೋರಿ ಹೋಗದಂತೆ”
    ಅಷ್ಟೇ.
    ಡಾ.ರಾಮಶರಣ ಹಾಗೂ ಡಾ.ಶಿವಪ್ರಸಾದ ಅವರಿಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು
    ಸರೋಜಿನಿ ಪಡಸಲಗಿ
    ಂಂಂಂಂಂಂಂಂಂಂಂಂಂಂಂಂ

    Liked by 1 person

  7. ರಾಮ್ ನಿಮ್ಮ ಕಥೆ ಒಂದು ನಡೆದ ಘಟನೆಯಾದುದರಿಂದ ಅದು ಎಲ್ಲರಿಗೂ ನಿಲುಕುವಂತಹ ಸರಕಾಗಿದೆ. ಅಲ್ಲಿಯ ರೋಗಿ ಎದುರಿಸಿದ ಸಂಕಷ್ಟಗಳು ಯಾತನೆಗಳು ಓದುಗರಲ್ಲಿ ಒಂದು ರೀತಿ ತಲ್ಲಣವನ್ನು ಉಂಟು ಮಾಡಿದೆ. ಕಥೆಯ ಅಂತ್ಯ ಸ್ವಲ್ಪ ನೆಮ್ಮದಿಯನ್ನೂ ತಂದಿದೆ. ಕಥೆ ಸದರಿ ವಾತಾವರಣದ ಮತ್ತು ಸೋಂಕಿನ ಬಗ್ಗೆ ಉತ್ತಮ ಒಳನೋಟವನ್ನು ಒದಗಿಸಿದೆ. ಕರೋನ ನಿರೀಕ್ಷಣೆಯಲ್ಲೇ ಹೆದರಿ ಅರ್ಧ ಜೀವ ಕಳೆದುಕೊಳ್ಳುತ್ತಿರುವವರನ್ನು ನಮ್ಮ ಸುತ್ತ ಕಾಣುತ್ತಿದ್ದೇವೆ. ಅಂತಹವರಿಗೆ ರೋಗಿ ನಾಗೇಂದ್ರನ ಕಥೆ ಸ್ವಲ್ಪಮಟ್ಟಿಗೆ ಎದೆಗಾರಿಕೆ ತಂದುಕೊಟ್ಟಿರಬಹುದು. ನಾಗೇಂದ್ರ ನದಿಯನ್ನು ಈ ಮಾಹಾ ಪೂರದಲ್ಲಿ ತನ್ನ ಸುದೈವದಿಂದ ದಾಟಿ ಆಚೆ ಕಡೆಯ ದಡ ತಲುಪಿದ್ದು ಆತನಿಗೆ ಆತಂಕದಿಂದ ಮುಕ್ತಿ ಸಿಕ್ಕಿದ್ದಿರಬಹುದು. ಮಹಾಪೂರವನ್ನು ದಾಟಲೇಬೇಕೆಂಬ ಪರಿಸ್ಥಿತಿ ಬಂದಾಗ ಎಷ್ಟ್ಟು ಮಂದಿ ಯಶಸ್ವಿಯಾಗುತ್ತಾರೆ ಯಾರು ಪೂರದಲ್ಲಿ ಕೊಚ್ಚಿ ಹೋಗುತ್ತಾರೆ ಎಂಬದು ಕ್ಲಿಷ್ಟವಾದ ಹಾಗು ಗಂಭೀರವಾದ ಪ್ರಶ್ನೆ. ಎಲ್ಲರೂ ಸಹನಶೀಲರಾಗಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸೋಣ
    ಜಿ ಎಸ್ ಎಸ್ ಅವರ ಕವಿತೆಯ ಒಂದು ಸಾಲು ನೆನಪಿಗೆ ಬಂತು ಅದು ಹೀಗಿದೆ;
    ‘ಶೋಕ-ತಾಪ-ಭಯ- ತಲ್ಲಣದಲ್ಲಿಯೂ ಗೆಲ್ಲುವ ಸಹನೆಗೆ ನಮೋ ನಮೋ

    Liked by 1 person

  8. ಕರೊನಾದಿಂದ ಪಾರಾದ ನಿಜವಾದ ಕಥಾನಾಯಕ ನಮ್ಮೆಲ್ಲರಿಗೆ ಸ್ಫೂರ್ತಿಯಾಗಲಿ

    ‘ಕರಾಳ ಕರೊನ’ ದ ಕರಾಳ ವಾಸ್ತವ ದೃಶ್ಯಗಳನ್ನು ಪ್ರಸಾದ್ ಅವರು ನೈಜವಾಗಿ ಬಣ್ಣಿಸಿದ್ದಾರೆ

    ವಿಜಯನರಸಿಂಹ

    Like

  9. ಸಿಂಹದ ಬಾಯಿಯಿಂದಲೋ ಚೀನೀ ಡ್ರಾಗನ್ ದ ಕಬಂಧದಿಂದಲೋ, ಯಮನ ಪಾಶದಿಂದಲೋ ಪಾರಾಗಿ ಬಂದ ಕನ್ನಡದ ಗಂಡುಗಲಿಯ ಕಥೆ ಆತನ ಬಾಯಿಯಿಂದಲೇ ಕೇಳಿ ಮೈನವಿರೇಳಿತು,(ಮೊದಲು ನಡುಕ ಹುಟ್ಟಿ ಥರ್ಮಾಮೀಟರಿಗೆ ಕೈಹಾಕಿದ್ದೆ!). All’s well that ends well ಏನೋ ಸರಿ. ಆದರೆ ಅಲ್ಲಿಯವರೆಗಿನ ರೋಗಿಯ ಮತ್ತು ಆತನ ಕುಟುಂಬದವರು ಸಹಿಸಿದ ಯಾತನೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಕೊನೆಯಲ್ಲಿಯ ಆಶಾವಾದದ ಎಳೆಯನ್ನು ಹೆದರಿ ಕೂತ – ಪ್ರಸಾದರ ಕವನದಲ್ಲಿಯ ಸಾಮಾನ್ಯ, ಅಸಾಮಾನ್ಯಯರನ್ನು ಹಿಡಿದು ಎಲ್ಲರೂ ಗಮನಿಸ ಬೇಕು! ಎರಡನೆಯ ಕವಿತೆಯ ವೈದ್ಯರಾದ
    ಪ್ರಸಾದರ ಭಾವಪೂರ್ಣ ಕವನ ಸಹ ಇಂದಿನ ಇಲ್ಲಿಯ ಮತ್ತು ಎಲ್ಲ ಕಡೆಯ ಜನಜೀವನದ ನಾಡಿ ಹಿಡಿದು ಲಕ್ಷಣ ನೋಡಿ ವರ್ಣಿಸಿದೆ. ಎರಡೂ topical ಪ್ರಕಟನೆಗಳು. ಎಲ್ಲರೂ ಅನಾವಶ್ಯಕವಾಗಿ ಹೊರಗೆ ಹೋಗಬೇಡಿ ಮತ್ತು ಕೈ ತೊಳೆಯುತ್ತಿರಿ, ಆದರೆ ಕೈಚೆಲ್ಲಿ ಕೂತುಕೊಳ್ಳ ಬೇಡಿ!

    Like

Leave a comment

This site uses Akismet to reduce spam. Learn how your comment data is processed.