ಪ್ರತೀ ವರುಷ ಮಾರ್ಚ್ ೮ ನೇ ತಾರಿಖು, ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೂಲಕ, ಜಗತ್ತಿನಾದ್ಯಂತ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸುತ್ತಾ, ಲಿಂಗಭೇದವನ್ನು ತೊಡೆದು ಹಾಕಲು ಆಗ್ರಹಿಸುತ್ತೇವೆ. ೧೯೧೦ ರಲ್ಲಿ ಜರ್ಮನಿಯ ಕ್ಲಾರಾ ಝೆಟ್ಕಿನ್ಸ್ ಎಂಬ ಮಹಿಳೆಯ ತಲೆಗೂಸಾಗಿದ್ದ ಮಹಿಳಾ ದಿನಾಚರಣೆ, ಅಧಿಕೃತವಾಗಿ ವಿಶ್ವ ಸಂಸ್ಥೆಯಲ್ಲಿ ಮಾನ್ಯತೆ ಪಡೆದದ್ದು ೧೯೭೫ರಲ್ಲಿ. ಇಷ್ಟು ವರುಷಗಳು ಕಳೆದರೂ ಗಂಡು ಹೆಣ್ಣಿನ ನಡುವೆ ಆರ್ಥಿಕ ಅಂತರ ಇನ್ನೂ ದೂರವಾಗಿಲ್ಲ. ವಿಶ್ವ ಆರ್ಥಿಕ ಸಂಸ್ಥೆಯ ಪ್ರಕಾರ ಈ ಆರ್ಥಿಕ ಅಂತರ ಸಂಪೂರ್ಣವಾಗಿ ೨೧೮೬ ರ ವರೆಗೂ ಕಣ್ಮರೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಈ ತಾರತಮ್ಯವನ್ನು ಅರಿತು ಅದನ್ನು ಕಿತ್ತೊಗೆಯುವ ಪಣವನ್ನು ಎಲ್ಲರೂ ತೊಡಬೇಕಾಗಿದೆ – #EachForEqual.
ಈ ವಾರ ‘ಅನಿವಾಸಿ’ಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ರಮ್ಯಾ ಭಾದ್ರಿ ಮತ್ತು ಅರವಿಂದ ಕುಲ್ಕರ್ಣಿ ರವರು ಎರಡು ಲೇಖನಗಳನ್ನು ಬರೆದಿದ್ದಾರೆ. ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
(ಸಂ) ಶ್ರೀನಿವಾಸ ಮಹೇಂದ್ರಕರ್
ಯಶಸ್ಸಿನ ಹಾದಿಯಲಿ – ರಮ್ಯಾ ಭಾದ್ರಿ


ಸೃಷ್ಟಿಯ ಆರಂಭದಿಂದಲೂ ಸ್ತ್ರೀಯು ಶಕ್ತಿಯ ಸಂಕೇತವಾಗಿದ್ದು , ಸೃಷ್ಟಿಯಲ್ಲಿ ಬಹು ಮುಖ್ಯವಾದ ಹಾಗು ವಿಶಿಷ್ಠವಾದ ಸ್ಥಾನವನ್ನು ಪಡೆದಿರುವಳು. ಮೇಲ್ನೋಟಕ್ಕೆ ಸುಕೋಮಲೆಯಾಗಿ ಕಂಡುಬಂದರೂ ಆಂತರ್ಯದಲ್ಲಿನ ಸಂಕಲ್ಪಶಕ್ತಿ ದೃಢವಾದದ್ದು. ಅವಳ ಮನೋಬಲ ಎಷ್ಟು ಅಗಾಧವಾದದ್ದೆಂದರೆ ಯಾವ ಕಾರ್ಯವಾಗಲಿ ಅದರ ಅನುಭವವಿಲ್ಲದಿದ್ದರೂ ಬೇಕಾದ ಅಂಶಗಳನ್ನು ರೂಢಿಸಿಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಸಮರ್ಥವಾಗಿ ಕಾರ್ಯ ಸಾಧಿಸುವ ಗುಣವಿರುವುದೇ ವಿಶೇಷ. ಆದ್ದರಿಂದ ಗೃಹಿಣಿಯಾಗಿ, ತಾಯಿಯಾಗಿ , ವೃತ್ತಿಪರ ಮಹಿಳೆಯಾಗಿ ಮಾಡಬೇಕಾದ ಕರ್ತವ್ಯಗಳನ್ನು ನಿಷ್ಠೆಯಿಂದ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಇಂತಹ ಅಪೂರ್ವವಾದ ಗುಣವುಳ್ಳ ಜೀವಕ್ಕೆ ಜನುಮನೀಡಿ ಪ್ರಕೃತಿಯ ಸಮತೋಲನವನ್ನು ಕಾಯುವ ನಾರಿಯೂ ಯುಗ ಯುಗಗಳಿಂದಲೂ ಪೂಜ್ಯನೀಯಳು. ಇದನ್ನು ಪುಷ್ಟಿಕರಿಸುವ ಮನುಸ್ಮೃತಿಯ ಶ್ಲೋಕ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ |ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ||” ,ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ. ಎಲ್ಲಿ ಸ್ತ್ರೀಯರನ್ನು ಅಪಮಾನಿಸಲಾಗುತ್ತದೆಯೋ ಅಲ್ಲಿ ಮಾಡಿದ ಕಾರ್ಯಗಳು ವಿಫಲವಾಗುತ್ತವೆ ಎಂಬುವುದನ್ನು ಓದುತ್ತ ಕೇಳುತ್ತ ಬಂದಿದ್ದೇವೆ. ಆದರೆ ಆಚರಣೆಯಲ್ಲಿ ಕಂಡದ್ದು ಕಥೆಗಳಲ್ಲಿ ಮಾತ್ರ ! ನಿಜ ಜೀವನದಲ್ಲಿ ಅಲ್ಲ ಎಂಬುವುದು ಕಟು ಸತ್ಯ. ನಾವು ಪೂಜಿಸುವ ದೇವರು, ನಮಗೆ ಜೀವ ಜಲ ನೀಡುವ ನದಿಗಳು, ಅನ್ನ ನೀಡುವ ಭೂಮಿ , ಪೋಷಿಸುವ ನಾಡು , ಜನುಮದಾತೆ, ಪ್ರಕೃತಿ ಹೀಗೆ ಸೃಷ್ಟಿಯ ಕಣಕಣದಲ್ಲೂ ಬೆರೆತು ಸಕಲ ಜೀವ ರಾಶಿಯನ್ನು ಸಲಹುವ ಮಾತೆ ಹೆಣ್ಣು. ಹೀಗಿರಲು ನಾರಿಯನ್ನು ಗೌರವಿಸುವುದು ತಮ್ಮ ಪರಮ ಧರ್ಮ ವೆಂದು ಮನಗಂಡ ಪುರುಷರು ಆಕೆಯ ಜೀವನದ ವಿವಿಧ ಹಂತಗಳಲ್ಲಿ ತಂದೆಯಾಗಿ , ಗಂಡನಾಗಿ, ಮಗನಾಗಿ ಸಹಕರಿಸಲು ಜೊತೆ ಯಾದರೇ ಹೊರೆತು ಆಕೆ ಅಸಮರ್ಥಳು , ನಿಸ್ಸಹಾಯಕಳು ಎಂದು ಅಲ್ಲವೇ ಅಲ್ಲ. ಅಷ್ಟಿಲ್ಲದೆ ಪುರಾತನವಾದ ಚದುರಂಗದಾಟದಲ್ಲೂ ಕೂಡ ಸರ್ವ ಶಕ್ತಳು ರಾಣಿಯಾಗುತ್ತಿದ್ದಳೆ?
ಕಾಲ ಕ್ರಮೇಣ ಶತಮಾನಗಳು ಉರುಳಿದಂತೆ ಕೆಲವು ಸಾಮಾಜಘಾತಕರು ಸ್ತ್ರೀಯನ್ನು ಅಬಲೆಯಂದು, ಅವಳ ವೈಶಿಷ್ಠ್ಯವನ್ನು ಕನಿಷ್ಠವೆಂದು ಪರಿಗಣಿಸಿ, ನೀರೇ ನಿಕೃಷ್ಟವೆಂಬ ಬೀಜವನ್ನು ಸಮಾಜದಲ್ಲಿ ಭಿತ್ತ ತೊಡಗಿದರು . ಮೂಡ ಸಮಾಜವು ಇದಕ್ಕೆ ನೀರೆರೆದು ಪೋಶಿಸಿ ನಾರಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡುವ ಪ್ರಯತ್ನಕ್ಕೆ ಕೈಹಾಕಿತು , ಹೇಡಿಯಂತೆ ಅವಳನ್ನು ಶೋಷಿಸತೊಡಗಿತು. ಆದರೂ ಇದನೆಲ್ಲ ಸಹಿಸಿದ ಆಕೆಯ ಸಹನೆಯನ್ನು ಅಸಮರ್ಥತೆಯಂದು ನಿಶ್ಚಯಿಸಿ ತಾತ್ಸಾರದಿಂದ ಕಂಡಿತು. ಪ್ರತಿಯೊಂದು ಘಟ್ಟದಲ್ಲೂ ತಾನು ಅಬಲೆಯಲ್ಲ ಸಬಲೆ ಎಂದು ಸಾಭೀತು ಪಡಿಸಬೇಕಾದ ಪರಿಸ್ಥಿತಿ ಉದ್ಭವಿಸಿತು. ಭ್ರೂಣಾವಸ್ಥೆಯಲ್ಲೇ ಹೆಣ್ಣಿನ ಜೀವನವನ್ನು ಸಂಘರ್ಷಮಯವಾಗಿಸಿತು ಕುರುಡು ಸಮಾಜ.ಅಪ್ಪಿತಪ್ಪಿ ಹುಟ್ಟಿದರೆ ಹೆಣ್ಣೇ ! ಮುಂದೊಂದು ದಿನ ಮಾದುವೆಯಾಗಿ ಹೋಗುವವಳು, ಇವಳಿಗೆ ಶಿಕ್ಷಣವೇಕೆ, ಮನೆ ಕೆಲಸಗಳನ್ನು ಕಲಿತು ಗಂಡನ ಮನೆಯಲ್ಲಿ ತಗ್ಗಿ ಬಗ್ಗಿ ನಡೆದು ಮಕ್ಕಳನ್ನು ಸಾಕುವುದೇ ಅವಳ ಜೀವನದ ಮೂಲ ಉದ್ದೇಶ. ಒಂದು ವೇಳೆ ಅಕ್ಷರಸ್ಥಳಾದರೆ ಉದ್ಯೋಗ ಮಾಡುವುದಕ್ಕೆ, ಉದ್ಯೋಗ ಮಾಡುವ ಸ್ಥಳದಲ್ಲಿ ಟೀಕೆಗೆ ಗುರಿಪಡಿಸುವುದು. ಎಲ್ಲವನ್ನು ನಿರ್ಲಕ್ಷಿಸಿ ಮುನ್ನುಗ್ಗಿದರೆ ನಡುವಳಿಕೆಯನ್ನೇ ತಪ್ಪಾಗಿಸುವುದು, ಹೀಗೆ ಏನೇ ಮಾಡಿದರು ಸಮಾಜದ ಕುಹಕಗಳಿಗೆ, ನಿರ್ಬಂಧಗಳಿಗೆ ತುತ್ತಾಗುತ್ತಾ ತತ್ತರಿಸುತ್ತಿದ್ದ ಕಾಲವದು . ಈ ರೀತಿಯ ತಾತ್ಸಾರವನ್ನು ಹಲವು ಶತಮಾನಗಳಿಂದ ಸಹಿಸುತ್ತ ಬಂದಿರುವುದು ವಿಷಾದನೀಯವಾದರೂ ಇವೆಲ್ಲವನ್ನೂ ಮೀರಿ ಯಾವುದನ್ನೂ ಲೆಕ್ಕಿಸದೆ ಸಾಧಿಸುವ ಧೈರ್ಯ, ಸ್ಥೈರ್ಯ ,ಛಲದಿಂದ ನನ್ನ ಗುರಿಯನ್ನು ತಲುಪುವ ಸಾಮರ್ಥ್ಯ ತಮಗಿದೆಯಂದು, ಈ ಶತಮಾನದ ಮಹಿಳೆಯರು ಸಾಬೀತು ಪಡಿಸಿರುವುದು ನಿಜಕ್ಕೂ ಶ್ಲಾಘನೀಯ.
ತಡವಾಗಿಯಾದರೂ ಕ್ರಮೇಣವಾಗಿ ಸಮಾಜದಲ್ಲಿ ಕಾಣಸಿಗುತ್ತಿರುವ ಈ ಬದಲಾವಣೆಯು ಸ್ವಾಗತಾರ್ಹ ಹಾಗು ಸಂತೋಷದಾಯಕವಾದದ್ದು. ಪ್ರಕೃತಿಯಲ್ಲಿ ಸಮಾನತೆ ಪ್ರಪಂಚ ಸೃಷ್ಟಿಯಾದಾಗಿನಿಂದಲೂ ಉಂಟು. ಅಸಮಾನತೆ, ತಾರತಮ್ಯ , ಮೇಲುಕೀಳು ಇವೆಲ್ಲವೂ ಮಾನವನ ಸ್ವಾರ್ಥದ ಪರಿಣಾಮಗಳು. ಆದ್ದರಿಂದ ಹೆಣ್ಣು ಮೊದಲಿನಿಂದಲೂ ಸಮಾನಳು, ಜೊತೆಗೆ ಆಕೆ ಸಮರ್ಥಳು ಎಂಬುವುದನ್ನು ಸಮಾಜವು ಸ್ವೀಕರಿಸುವ ಕಾಲವು ಬಂದಾಯಿತು. ಇಂದಿನ ಯುಗದಲ್ಲಿ ಕೃಷಿಯಿಂದ ಹಿಡಿದು ಚಂದ್ರಯಾನದ ಮಿಷನ್ವರೆಗೂ ಎಲ್ಲ ರಂಗದಲ್ಲೂ ತೊಡಗಿಸಿಕೊಂಡು ತನ್ನ ಸಾಮರ್ಥ್ಯದಿಂದ ಯಶಸ್ಸನ್ನು ಸಾಧಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಜೊತೆಗೆ ತನ್ನ ಪರಿವಾರದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ವೃತ್ತಿ ಯಲ್ಲೂ ಎಲ್ಲರಿಗೂ ಸರಿಸಮಾನವಾಗಿ ತಾ ಕಂಡ ಕನಸುಗಳನ್ನು ಸಾಕಾರಗೊಳಿಸುತ್ತಿರುವುದು ಬಹಳ ಪ್ರಶಂಸನೀಯ . ಸಮಾಜವು ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡು ಸ್ತ್ರೀಯರಿಗೆ ಸಲ್ಲಬೇಕಾದ ಗೌರವವನ್ನು ನೀಡಿದ್ದಲ್ಲಿ ಮೇಲಿನ ಮನುಸ್ಮೃತಿಯ ಶ್ಲೋಕವು ಆಚರಣೆಗೆ ಬರುವ ಕಾಲವು ಕೂಡಿ ಬಂದು ಆರೋಗ್ಯಕರ ಸಮಾಜವು ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲವೆಂಬ ಆಶಯದೊಂದಿಗೆ ಈ ಸಮಾಜದ ಬದಲಾವಣೆಗೆ ಪಣತೊಟ್ಟು ನಿಂತಿರುವ ಹಾಗು ತಮ್ಮ ಕೊಡುಗೆಯನ್ನು ನೀಡಿರುವ ಪ್ರತಿ ಯೊಬ್ಬ ಹೆಣ್ಣಿನ ಕನಸುಗಳು ನನಸಾಗಲಿ ಎಂಬ ಅಭಿಲಾಷೆಯೊಂದಿಗೆ ಮಹಿಳಾ ದಿನಾಚರಣೆಯ ಶುಭಾಷಯಗಳನ್ನು ಕೋರುತ್ತಾ ಧನ್ಯತಾವಾದದಿಂದ ಸ್ತ್ರೀ ಕುಲಕ್ಕೆ ವಂದಿಸುವೆನು.
ತಾಯಿಯ ತಾಳ್ಮೆ- ಅರವಿಂದ ಕುಲ್ಕರ್ಣಿ


ನನ್ನ ತಾಯಿ ಧಾರವಾಡದ ಶ್ರೀಮಂತ ಮನೆತನದಲ್ಲಿ ೧೯೧೩ ರಲ್ಲಿ ಜನ್ಮ ತಾಳಿ, ಆಗಿನ ಸಾಂಪ್ರದಾಯ ಪದ್ದತಿಗೆ ಅನುಸಾರವಾಗಿ ಕೇವಲ ೧೩ ನೇ ವಯಸ್ಸಿಗೆ ಮದುವೆಯಾದಳು. ತವರುಮನೆಯಲ್ಲಿ ತಂದೆಯ ಹಿರಿಮಗಳಾಗಿ ಪ್ರೀತಿ , ವಿಶ್ವಾಸ, ಧಾರ್ಮಿಕ ಪರಿಸರದಲ್ಲಿ ಬೆಳೆದಳು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ಮನೆಯಲ್ಲಿದ್ದ ಇಬ್ಬರು ಸೋದರ ಅತ್ತೆಯರ ಆಸರೆ, ಪ್ರೀತಿ, ಅಂತಕ್ಕರಣಗಳಿಂದ ಕಿರಿಯ ಇಬ್ಬರೂ ತಂಗಿಯಂದಿರ ಜೊತೆಯಾಗಿ ಬಾಲ್ಯವನ್ನು ಕಳೆದಳು. ತವರಿನಲ್ಲಿ ಬೆಳ್ಳಿ ತಟ್ಟೆಯಲ್ಲಿ ಕೇಸರಿ ಬಾತು, ಬೆಳ್ಳಿಯ ಬಟ್ಟಲಲ್ಲಿ ಶಾವಿಗೆ ಖೀರು, ಹಬ್ಬದ ಸಮಯದಲ್ಲಿ ಹೋಳಿಗೆ, ಕಡಬು ತಿಂದು ಸಂತೋಷವಾಗಿದ್ದಳು. ಆದರೆ ಮದುವೆಯ ನಂತರ ನನ್ನ ತಂದೆಯ ಮನೆಯಲ್ಲಿ ಅತಿಯಾದ ಮಡಿ , ಮೈಲಿಗೆಗಳ, ಧಾರ್ಮಿಕ ಸಂಪ್ರದಾಯಗಳಿಗೆ ಜೀವನವನ್ನು ಒಗ್ಗಿಸಿಕೊಳ್ಳಬೇಕಾಯಿತು. ಮನೆಯಲ್ಲಿ ಅಡುಗೆಗೆ ಬೇಕಾಗುವ ನೀರು ತರಲು ಬರಿಗಾಲಲ್ಲಿ ಒಂದು ಮೈಲು, ಮುಳ್ಳು, ಕಲ್ಲು, ರಾಡಿ ರಸ್ತೆಗಳ ಪರಿವೆಯಿಲ್ಲದೆ ನದಿಗೆ ಹೋಗುತ್ತಿದ್ದಳು. ಉಡಲು ಒದ್ದೆ ಸೀರೆ, ತಲೆಯ ಮೇಲೊಂದು, ಕಂಕಳಲ್ಲೊಂದು ತುಂಬಿದ ಕೊಡಗಳನ್ನು ತರುತ್ತಿದ್ದ ಸನ್ನಿವೇಶಗಳನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಈ ಪರಿ ದಣಿದು ಬಂದರೂ ಅವಳ ಮುಖದ ಮೇಲೆ ಸ್ವಲ್ಪವಾದರೂ ನೋವಿನ ಕುರುಹೇ ಕಾಣುತ್ತಿರಲಿಲ್ಲ. ಮುಖ್ಯವಾಗಿ ನನ್ನ ತಂದೆಯ ಮನೆಯಲ್ಲಿ ಊಟದ ಸಲುವಾಗಿ ಮುತ್ತಲ ಎಲೆ , ದೊನ್ನೆಯಲ್ಲಿ ಮಜ್ಜಿಗೆ, ತಿನ್ನಲು ಕಟುಕಲು ರೊಟ್ಟಿ ಇವುಗಳಿಂದಲೇ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಳು. ಅವಳು ಅನುಭವಿಸಿದ ಕಷ್ಟದ ಪ್ರಸಂಗಗಳನ್ನು ತನ್ನ ಮಕ್ಕಳ ಮುಂದೆಯಾಗಲೀ , ಅತ್ತೆ ಅಥವಾ ಗಂಡನ ಮುಂದೆಯಾಗಲೀ ಎಂದಿಗೂ ಹೇಳಿಕೊಳ್ಳಲಿಲ್ಲ.
ತನ್ನ ಐದು ಮಕ್ಕಳನ್ನೂ ಸರಿಸಮಾನವಾಗಿ ಪ್ರೀತಿಯಿಂದ ನೋಡಿಕೊಂಡು ದಿನ ನಿತ್ಯ ಮಹಾಭಾರತ, ರಾಮಾಯಣ, ತೆನಾಲಿ ರಾಮಕೃಷ್ಣ, ಅಕ್ಬರ್ ಬೀರಬಲ್ಲ ಹೀಗೆ ಇನ್ನೂ ಅನೇಕ ಕಥೆಗಳನ್ನು ಮನ ಮುಟ್ಟುವ ಹಾಗೆ ಹೇಳುತ್ತಿದ್ದಳು. ಹೀಗೆಯೇ ಅವಳು ನಮಗೆಲ್ಲ ಕನ್ನಡ ಭಾಷೆ ಸಂಸ್ಕೃತಿ ಪರಂಪರೆಗಳನ್ನು ಭೋದಿಸಿ , ಕನ್ನಡದ ಅರಿವಿಗೆ ಭದ್ರ ಬುನಾದಿ ಹಾಕಿದಳು. ತನ್ನ ಎಲ್ಲ ಸುಖ ದುಃಖಗಳು ನಾಣ್ಯದ ಎರಡು ಮುಖಗಳೇ ಸರಿ ಎಂದು ಅರಿತು, ದೇವರ ಅನುಗ್ರಹ , ಹಿಂದಿನ ಜನ್ಮದ ಕರ್ಮ ಫಲ ಎಂದು ಮಕ್ಕಳಿಗೆ ತಿಳಿಸಿ ಹೇಳುತ್ತಿದ್ದಳು. ಇಂಥ ತಾಳ್ಮೆ, ಅಂಥಕ್ಕರಣ , ಪ್ರೀತಿಗಳನ್ನು ಒಡಗೂಡಿಸಿದ ನನ್ನ ತಾಯಿಗೆ ಎಷ್ಟು ಬಾರಿ ಕೃತಜ್ಞತೆ ಹಾಗೂ ನೆನಪುಗಳನ್ನು ಸಲ್ಲಿಸಿದರೂ ಕಡಿಮೆಯೇ.
ಇದೇ ಮಾರ್ಚ್ ೮ರಂದು ನಾವೆಲ್ಲರೂ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದೇವೆ, ಈ ಸಂಧರ್ಭದಲ್ಲಿ ನನ್ನ ತಾಯಿಯನ್ನು ನೆನೆದು ಶ್ರಧಾಂಜಲಿ ಅರ್ಪಿಸುತ್ತಿದ್ದೇನೆ. ಇಂತಹ ತಾಯಿಯನ್ನು ಪಡೆದ ನನ್ನ ಜೀವನ ಸಾರ್ಥಕ ಎಂದುಕೊಳ್ಳುತ್ತೇನೆ.
।। ಎಂಥಾ ತಾಳ್ಮೆಯ ಕರುಣಾಮಯಿ ನನ್ನ ತಾಯಿ ।।
ಎಲ್ಲ ಫೋಟೋಗಳೂ ಇಂಟರ್ನೆಟ್ ನ ಕೃಪೆ
ತುಂಬ ಸುಂದರ ಬರಹಗಳು ಮಹಿಳಾ ದಿನಾಚರಣೆ ಸಮಯದಲ್ಲಿ, ಸಕಾಲಿಕ ಲೇಖನಗಳು.ಆದರೆ ಒಂದು ವಿಷಾದದ ಸಂಗತಿಯೆಂದರೆ ಹೆಣ್ಣು ತನ್ನ ಸಾಧನೆ, ಕಷ್ಟ, ದು:ಖ , ಹೆಗ್ಗಳಿಕೆ ಎಲ್ಲಾ ತಾನೇ ಹೇಳಿ ಕೊಂಡು ಅರಿವು ಮೂಡಿಸುವ ಸುಳ್ಳು ಖುಷಿಯಲ್ಲಿ ಗೊತ್ತಿದ್ದೂ ಮುಳುಗುವ ವಿಡಂಬನಾತ್ಮಕ ಸ್ಥಿತಿ ಇನ್ನೂ ದೂರವಾಗಿಲ್ಲ ಎಂಬುದು.ಇದು ಭಾರತೀಯ ಸಮಾಜದಲ್ಲಿ ಅಂತೂ ದೂರ ಆಗಿಲ್ಲ, ಖಾತ್ರಿ ಅದು.ನಾ ಒಂದ್ಸಲ ಬರೆದಿದ್ದೆ ಇನ್ನೊಂದು ಕಡೆ, ” ಎಂದು ಕೈಲಾಗದ ವರನ್ನು ಹೆಣ್ಣಿಗ, ಬಳೆ ತೊಟ್ಟವ ಎಂದು ಮೂದಲಿಸುವುದು ನಿಲ್ತದೋ ಅಂದು ಹೆಣ್ಣಿಗೆ ಸಮಾನತೆ ಸಿಕ್ಕಂತೆ” ಅಂತ. ಎಲ್ಲಾ ಕಡೆಗೂ ಹಾಗೆಯೇ ಅನ್ನಲಾರೆ. ಎಲ್ಲೋ , ಹೃದಯದ ಒಂದು ಮೂಲೆಯಲ್ಲಿ ಗೌರವದ ಭಾವ ಇರದೇ ಇರದು.ಆದರೂ ಇನ್ನೂ ಬಹಳ ದೂರದ ದಾರಿ ಎನಿಸುವುದು ಸುಳ್ಳಲ್ಲವೇನೋ!!
ಮಗು ರಮ್ಯಾ ಹಾಗೂ ಅರವಿಂದ್ ಕುಲಕರ್ಣಿ ಯವರಂಥ ಹಿರಿಯರ ಲೇಖನಗಳು ಅಮೂಲ್ಯ ಈ ನಿಟ್ಟಿನಲ್ಲಿ ಎನ್ನದಿರಲಾಗದು.ಇಬ್ಬರಿಗೂ ಅಭಿನಂದನೆಗಳೊಂದಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLike
Dr Aravind’s embossed his mother is very touching. It is true today, tomorrow and forever!!
LikeLike
ರಮ್ಯಾ ಅವರು ಬರೆದಿರುವ ‘ಹೆಣ್ಣು ನಡೆದುಬಂದ ದಾರಿ’ ಮತ್ತು ಅರವಿಂದ್ ಅವರು ಬರೆದಿರುವ ‘ತಾಯಿಯ ನೆನಪು’ ಒಂದಕ್ಕೊಂದು ಪೂರಕವಾಗಿವೆ. ಹೆಣ್ಣು ಅಬಲೆ, ಹೆಣ್ಣಿನ ಸ್ಥಾನ ಅಡಿಗೆ ಮನೆಯೊಳಗೆ ಎಂದು ಕೇವಲ 1 ಜನರೇಷನ್ ಹಿಂದೆ ಇದ್ದ ಕ್ಷುದ್ರ ನಂಬಿಕೆಗಳು ಇಂದು ಮಾಯವಾಗುತ್ತಿವೆ. ಸಮಾನತೆ ಎಲ್ಲರ ಹಕ್ಕು. ಹೆಣ್ಣು, ಗಂಡಿಗಿಂತ ಹೆಚ್ಚು ಸಮಾನಳು ಎಂದು ಮುಂದಿನ ಜನರೇಶನ್ ಆದರೂ ಒಪ್ಪಿಕೊಳ್ಳುವಂತಾಗಲಿ. ತಾಯಿಯಾಗಿ, ಮನೆ ಯಜಮಾನಿಯಾಗಿ, ಆರ್ಥಿಕವಾಗಿ ಸ್ವಾತಂತ್ರ್ಯವಾಗಿ, ಹೆಣ್ಣು ಗಂಡಿಗಿಂತ ನೂರುಪಟ್ಟು ಹೆಚ್ಚು ಕಷ್ಟಪಡುತ್ತಾರೆ. ಸಕಾಲಿಕ ಲೇಖನ. – ಕೇಶವ
LikeLike
ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಂದ ಎರಡು ಉತ್ತಮ ಬರಹಗಳು, ಒಂದು ಗಂಡಿನಿಂದ, ಇನ್ನೊಂದು ಹೆಣ್ಣಿನ ಕೈಯಿಂದ! ಒಂದರಲ್ಲಿ ಲೇಖಕಿ ಅನಾದಿ ಕಾಲದಿಂದಲೂ ಹೆಣ್ಣು ನಡೆದು ಬಂದ ದಾರಿಯ ಇತಿಹಾಸವನ್ನು -ಆಕೆ ನಡೆದ ಕಲ್ಲು, ಮುಳ್ಳು, ಭಯ, ಇಕ್ಕೆಲಗಳಲ್ಲಿ ದ್ವೇಷ ತುಂಬಿದ್ದು, -ಕೊನೆಗೆ ಇಂದಿನ ಮಲ್ಟಿಟಾಸ್ಕಿಂಗ್, ವೃತ್ತಿ-ಸಂಸಾರ ಎರಡನ್ನೂ ತೂಗಿಸಿಕೊಂಡು ಹೋಗುವ ಮಹಿಳೆಯ ವರ್ಣನೆ; ಇನ್ನೊಂದರಲ್ಲಿ ನಿಜವಾಗಿಯೂ ಆಂಥ ದಾರಿ ಮೆಟ್ಟಿ, ತಲೆಯಮೇಲೆ ಭಾರ, ಮನದಲ್ಲೂ ಸಮತೂಕ ಆಚರಿಸುವ ಮಾತೃ ಸ್ವರೂಪ. ಕೊನೆಯಲ್ಲಿ ಇಬ್ಬರೂ ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸ್ತ್ರೀಗೆ ಧನ್ಯತೆಯನ್ನು ತೋರುಸುವ ಪರಿ ಅನನ್ಯ. ಇಬ್ಬರಿಗೂ ಅಭಿನಂದನೆಗಳು, ಮತ್ತು ಸ್ತ್ರೀಶಕ್ತಿಗೆ ವಂದನೆಗಳು. ಶ್ರೀವತ್ಸ ದೇಸಾಯಿ
LikeLike
ಧನ್ಯವಾದಗಳು ಸರ್🙏
LikeLike
ಎರಡೂ ಲೇಖನಗಳು ಒಂದಕ್ಕೊಂದು ಪೂರಕವಾಗಿವೆ. ರಮ್ಯಾ ಅವರ ಲೇಖನ ಸ್ತ್ರೀ ಸಬಲತೆ ಹಾಗೂ ಅವಳ ಬಹುಮುಖ ಪ್ರತಿಭೆಯನ್ನು ಪ್ರತಿಪಾದಿಸಿದೆ. ಅರವಿಂದರ ತಾಯಿಯ ಚಿತ್ರಣ ಅದೆಲ್ಲವನ್ನೂ ಮೂರ್ತ ರೂಪಕ್ಕೆ ತಂದಿದೆ. ಮಹಿಳಾ ದಿನಕ್ಕೆ ತಕ್ಕುದಾದ ಸಂಚಿಕೆ.
– ರಾ೦
LikeLike