ಒಂದು ಚಾರಣದ ಕಥೆ 

ಶ್ರೀನಿವಾಸ ಮಹೇಂದ್ರಕರ್

ಬದುಕಿನ  ಪಯಣದಲ್ಲಿ ಕೆಲವೊಮ್ಮೆ  ಬೇಕು ಬೇಡಗಳ ಹಂಗಿರದೇ,  ಅರಿವು ಪರಿವೆಗಳ ಮುಲಾಜು ನೋಡದೇ, ಕೆಲವು  ಘಟನಾವಳಿಗಳು ಧೊಪ್ಪೆಂದು ನಮ್ಮನ್ನು  ಎದುರಾಗಿ ನಮ್ಮ ದೇಹ, ಮನಸ್ಸು ಎಲ್ಲವನ್ನೂ ಯಾವ  ಮಾಪನವೂ  ಅಳತೆ ಮಾಡಲಾಗದಷ್ಟು  ನಡುಗಿಸಿ ಬಿಡುತ್ತವೆ. ತೀವ್ರತೆಗನುಸಾರವಾಗಿ  ಅಂತಹ ಘಟನೆಗಳು ಹಲವಾರು ವರುಷಗಳು ಮನಸ್ಸಲ್ಲಿ ಮನೆಮಾಡಿ , ಒಮ್ಮೆಮ್ಮೆ ಬೇಡದ ಕನಸಾಗಿ ನಿದ್ದೆಯಿಂದ ಎಬ್ಬಿಸುವಷ್ಟು ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವೊಮ್ಮೆ ಅಂತಹ  ಪರಿಸ್ಥಿತಿಯಿಂದ ಹೊರಬಂದು ಮರುಜನ್ಮ ಪಡೆದಂತಾಯಿತು ಎಂದೆನಿಸಿ  ನಿಟ್ಟುಸಿರು   ಬರಿಸುತ್ತವೆ. ಇಂತಹ ಘಟನಾವಳಿಗಳಲ್ಲಿ ಒಂದು, 2006 ನೇ ಇಸವಿಯಲ್ಲಿ ಬೇಸಿಗೆಗಾಲದ ಒಂದು ವಾರಾಂತ್ಯದಲ್ಲಿ  ನಾನು ಮತ್ತು ನನ್ನ ಏಳು ಜನ ಸ್ನೇಹಿತರು  ಕೈಗೊಂಡ  ಚಾರಣ.

“ಗ್ರೀನ್ ರೂಟ್”  ಎಂಬುದು ಬೆಂಗಳೂರು – ಮಂಗಳೂರು ರೈಲ್ವೆ ಮಾರ್ಗದ, ಪಶ್ಚಿಮ ಘಟ್ಟಗಳಲ್ಲಿ ಹರಿಯುವ ಒಂದು ಭಾಗ. ಈ ಭಾಗವು ಶಕ್ಲೇಶಪುರದಿಂದ ಹಿಡಿದು ಕುಕ್ಕೆ ಸುಬ್ರಮಣ್ಯದ ತನಕ ಸುಮಾರು 52 KM  ನಷ್ಟು ಉದ್ದವಾಗಿದೆ. ಪಶ್ಚಿಮ ಘಟ್ಟಗಳ ಪ್ರಕೃತಿಯ ವಿಹಂಗಮ ನೋಟಗಳಿಗೆ ಸಾಕ್ಷಿಯಾಗಿರುವ ಈ “ಗ್ರೀನ್ ರೂಟ್”,  ಸುಮಾರು 52 ಸುರಂಗಗಳನ್ನು  ಮತ್ತು 109 ಸೇತುವೆಗಳನ್ನು ಒಳಗೊಂಡಿದೆ.  ಪರ್ವತಗಳ ಹೊಟ್ಟೆಯನ್ನು ಸೀಳಿ ನಿರ್ಮಿಸಿರುವ ಸುರಂಗಗಳು ಸುಮಾರು 200 ರಿಂದ 750 ಮೀಟರ್ ಉದ್ದವಾಗಿವೆ.  ಪರ್ವತಗಳನ್ನು ಜೋಡಿಸುವ ಕೆಲವು  ಸೇತುವೆಗಳು ನೆಲದಿಂದ ಸುಮಾರು 200 ಮೀಟರ್ ನಷ್ಟು ಎತ್ತರದಲ್ಲಿದ್ದು,  ಇಣುಕಿ ಕೆಳಗೆ ನೋಡುವವರ ತಲೆ ಸುತ್ತು ಬರಿಸುತ್ತವೆ. 2006 ರಲ್ಲಿ ಈ ರೈಲ್ವೇ  ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಸಲುವಾಗಿ ಜನ ಸಾಗಣೆ ರೈಲುಗಳನ್ನು ನಿಲ್ಲಿಸಲಾಗಿತ್ತು  ಮತ್ತು ಕೇವಲ ಸರಕು ಸಾಗಿಸುವ ರೈಲುಗಳು ಈ ಮಾರ್ಗವಾಗಿ ಚಲಿಸುತ್ತಿದ್ದವು. ಈ ಕಾರಣದಿಂದ, ವಿಹಂಗಮ ನೋಟಗಳಿಗೆ ಪ್ರಸಿದ್ಧಿಯಾಗಿದ್ದ ಈ ಮಾರ್ಗ ಅನೇಕ ಚಾರಣಿಕರನ್ನು ಆಕರ್ಷಿಸುತ್ತಿತ್ತು. 

ಆಗತಾನೆ ಐ ಟಿ ಕಂಪೆನಿಯೊಂದರಲ್ಲಿ ಕೆಲಸ ಪ್ರಾರಂಭಿಸಿದ್ದ ನಾನು ಮತ್ತು ನನ್ನ ಏಳು ಜನ ಸ್ನೇಹಿತರು , ಗ್ರೀನ್ ರೂಟ್ ಅನ್ನು ಚಾರಣ ಮಾಡುವ ಸಾಹಸಕ್ಕೆ ಯೋಜನೆ ಸಿದ್ಧಮಾಡಿದೆವು. ಅಂದು ಶನಿವಾರ  ಬೆಳೆಗ್ಗೆ ಬೆಂಗಳೂರಿನಿಂದ ಶಕ್ಲೇಶಪುರಕ್ಕೆ  ಬಸ್ಸಿನಲ್ಲಿ ಪ್ರಯಾಣ ಮಾಡಿ ನಮ್ಮ ಚಾರಣವನ್ನು ರೈಲ್ವೆ ನಿಲ್ದಾಣದ ತುಸುದೂರದಲ್ಲಿರುವ ಒಂದು ಜಾಗದಿಂದ  ಪ್ರಾರಂಭಿಸಿದೆವು. ಈ ಚಾರಣ ಕೇವಲ ಬೆಟ್ಟ ಗುಡ್ಡಗಳನ್ನು ಹತ್ತುವುದಾಗಿರಲಿಲ್ಲ ಬದಲಾಗಿ ರೈಲ್ವೆ ಮಾರ್ಗದ ಮೇಲೆ ನಡೆದುಕೊಂಡು ಸುರಂಗ ಮತ್ತು ಸೇತುವೆಗಳನ್ನು ದಾಟಿ ನಮ್ಮ ಗುರಿಯನ್ನು ಸೇರುವುದಾಗಿತ್ತು. ೫೨ ಕಿಲೋಮೀಟರ್ ದೂರವನ್ನು ಕೇವಲ ಒಂದೇ ದಿನದಲ್ಲಿ ಮುಗಿಸುವುದು ಸಾಧ್ಯವಿಲ್ಲವಾಗಿದ್ದರಿಂದ  , ಸುಮಾರು ೩೦ km  ದೂರದಲ್ಲಿರುವ ಇಡಕುಮುರಿ ನಿಲ್ದಾಣದ ವರೆಗಿನ ದಾರಿಯನ್ನು ಶನಿವಾರ ಸಂಜೆಯೊಳಗೆ ಮುಗಿಸಿ, ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ತಂಗಿದ್ದು , ಬೆಳೆಗ್ಗೆ ಮತ್ತೆ ಕುಕ್ಕೆ ಸುಬ್ರಮಣ್ಯದ ಕಡೆಗೆ ಹೊರಡುವ ಆಲೋಚನೆಯಿತ್ತು. 

ಬೇಸಿಗೆಯಾದರೂ ಪರ್ವತಶ್ರೇಣಿಯ ರೂಪರಾಶಿಗೆ ಕುಂದುಂಟಾಗದಿರಲೇನೋ ಎಂಬಂತೆ ಸೂರ್ಯನು ಕೇವಲ ತೆಳುಬಿಸಿಲನ್ನು ಸೂಸಿದ್ದು , ಮಳೆ ಮೋಡಗಳ ಯಾವುದೇ ಸುಳಿವು ಇರಲಿಲ್ಲ. ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ವಾತಾವರಣ ವಿದ್ಯುಕ್ತವಾಗಿತ್ತು. ಈ ಹಾದಿಯಲ್ಲಿ ಕೆಲವು ಮೈಲು ದೂರ ನಡೆದಾಗ, ನಮ್ಮ ಸುತ್ತಲೂ ಅವರಿಸಿದ್ದುದೊಂದೇ , ಅದು ಅಘಾದ ಪರ್ವತ ಶ್ರೇಣಿಗಳನ್ನು ಹೊದಿಸಿದ್ದ  ಹಸಿರು. ನಾವೆಲ್ಲರೂ ಮಾತನಾಡುವುದನ್ನು ನಿಲ್ಲಿಸಿದರೆ ಸಾಕು ನಮ್ಮನ್ನಾವರಿಸುತ್ತಿದ್ದುದು   ಆ ವನಸಿರಿಯ ಪ್ರಶಾಂತತೆ , ಪಕ್ಷಿಗಳ  ಟುವಿ ಟುವಿ , ಹರಿಯುತ್ತಿದ್ದ ಝರಿಗಳ ನೀರಿನ ಜುಳು ಜುಳು ಸದ್ದು. ಸ್ನೇಹಿತರಿಂದ ದೂರ ಹೋಗಿ , ಯಾರು ಇಲ್ಲದ ಒಂದು ಸ್ಥಳದಲ್ಲಿ  ಕೇವಲ ನಿಸರ್ಗದ ಸಂಗೀತವನ್ನು ಆಲಿಸುತ್ತ ಕಣ್ಣು ಮುಚ್ಚಿ  ತುಸು ಹೊತ್ತು ಕುಳಿತು , ‘ಜೀವನ ಚೈತ್ರ’  ಚಿತ್ರದಲ್ಲಿ ಡಾ|| ರಾಜ್ ಕುಮಾರ್  ರ ವರಂತೆ ‘ನಾದಮಯ ಈ ಲೋಕವೆಲ್ಲ ನಾದಮಯ’ ಎಂಬ ಹಾಡನ್ನು ಹಾಡಲೇನು ಎಂಬ ಆಸೆ ಹುಟ್ಟುತ್ತಿದ್ದರೂ , ಅದು ಕೂಡುವುದಕ್ಕೂ ಹಾಡುವುದಕ್ಕೂ ಸಮಯವಾಗಿರಲಿಲ್ಲ. ಸ್ನೇಹಿತರೊಂದಿಗೆ ಹರಟುತ್ತಾ ನಡೆಯುತ್ತಾ ಸಾಗಿದೆವು . 

ಕಗ್ಗತ್ತಲೆಯ  ಸುರಂಗಗಳು

ಸುರಂಗವನ್ನು ಹೊಕ್ಕುವ ಮೊದಲು  ಮೈಯಲ್ಲ ಕಣ್ಣಾಗಿಸಿಕೊಂಡು ಎಚ್ಚರವಾಗಿರಲೇಬೇಕಾಗಿದ್ದ ಒಂದು ವಿಷಯವೆಂದರೆ ಅದೇ ಸಮಯಕ್ಕೆ ಬರಬಹುದಾಗಿದ್ದ ಸರಕು ಸಾಗಾಣಿ ರೈಲುಗಳು. ನಿಶ್ಶಭ್ದವಾಗಿದ್ದ ಕಾಡಿನಲ್ಲಿ ರೈಲು ಬರುತ್ತಿರುವುದು ಹಲವು ಕಿಲೋಮೀಟರ್ ಗಳ  ಮುಂಚೆಯೇ ನಮಗೆ ತಿಳಿಯುತ್ತಿತ್ತು.  ಅಷ್ಟಾಗಿಯೂ ನಮ್ಮ ತಂಡದಲ್ಲಿನ ಕೆಲವರು ವಿಶ್ವೇಶ್ವರಯ್ಯನವರ ಮೊಮ್ಮಕ್ಕಳೇನೋ  ಎಂಬಂತೆ ರೈಲಿನ ಕಂಬಿಗಳಿಗೆ ಕಿವಿಕೊಟ್ಟು , ‘ಹಾ ನಾವೆಲ್ಲಾ ಈಗ ಒಳಗೆ ಹೋಗಬಹುದು’ ಎಂದು ವಿಶ್ವಾಸದಿಂದ ಹೇಳುತ್ತಿದ್ದರು. ಅವರ ಮಾತುಗಳಮೇಲೆ ನಮಗೆ ವಿಶ್ವಾಸವಿರದಿದ್ದಾರೂ ಬೇರೆ ದಾರಿಯಿಲ್ಲದೆ  ಒಳ ಹೊಕ್ಕುತ್ತಿದ್ದೆವು. 

ಪ್ರತೀ  ಸುರಂಗವೂ ನಮ್ಮ ಬಾಲ್ಯದ ಸಿಂಹದ ಕಥೆಗಳನ್ನು ನೆನಪಿಸುವ ಕಗ್ಗತ್ತಲಿನ ಗುಹೆಯೇ ಆಗಿತ್ತು.  ಆ ಕಗ್ಗತ್ತಲಲ್ಲಿ ವಿಷಸರ್ಪವೊಂದು ಕಾಲಡಿಯಲ್ಲಿ ಹರಿದಾಡಿದರೇನು ಗತಿ ? ಆ ಕಾನನದ ನಡುವೆ ಯಾವುದೋ ಕಾಡು ಮೃಗವೊಂದು ತನ್ನ ಹಸಿವೆ ನೀಗಿಸಲು ಹೊಂಚುಹಾಕಿ ಕೂತಿದ್ದರೇನು ಗತಿ ಎಂಬ  ಭಯದಲ್ಲೇ , ನೋಕಿಯಾ ಫೋನಿನ ಟಾರ್ಚ್ ಬೆಳಗಿಸಿಕೊಂಡು , ಆ ಭಯವನ್ನು ಮರೆಮಾಚಲು  ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ , ನಗು ಬರದಿದ್ದರೂ, ಪ್ರತಿದ್ವನಿಗೆ ಸ್ಪಂದಿಸಿ ಗಹಗಹಿಸಿ ನಗುತ್ತಾ, ಸುರಂಗಗಳನ್ನು ದಾಟುತ್ತಿದ್ದೆವು.  ಪ್ರತೀ ಸುರಂಗವನ್ನು ದಾಟಿದಾಗ,  ಅಲ್ಲಿಯವರೆಗೂ ರಕ್ತ ನಾಳಗಳಲ್ಲಿ ನುಗ್ಗಾಡಿದ ಅಡ್ರಿನಲಿನ್  ನ  ನಶೆಯ ಜೊತೆಗೆ  ಅದೇನೋ ಅಶ್ವಮೇಧಯಾಗದಲ್ಲಿ ಒಂದೊಂದು ರಾಜ್ಯವನ್ನು   ಗೆದ್ದು ಬಂದಷ್ಟು ಖುಷಿಯಾಗುತ್ತಿತ್ತು. 

ರೋಮಾಂಚಕಾರಿ ಸೇತುವೆಗಳು 

ಸುಮಾರು ೨೦೦ ಮೀಟರ್ ಎತ್ತರದಲ್ಲಿ ಸೇತುವೆಗಳಿದ್ದು ,  ಕಣಿವೆಯಲ್ಲಿ ಹರಿಯುವ  ಝರಿಗಳು , ಸುತ್ತಲಿನ ಹಸಿರು ರಾಶಿ ಎಲ್ಲವೂ ಬೆಳಕಿನಾಟದಲ್ಲಿ ಜೊತೆಗೂಡಿ,  ಸೇತುವೆಯಮೇಲೆ ನಡೆದಾಡುವವರಿಗೆ ಒಂದು ಮನಮೋಹಕ ದೃಶ್ಯವನ್ನು ಕಣ್ಣಮುಂದೆ ತಂದಿಡುತ್ತಿದ್ದವು . ಈಗಿನಂತೆ ನನ್ನ ಬಳಿ ಏನಾದರೂ ಡಿಜಿಟಲ್ ಕ್ಯಾಮರಾ ಅಥವಾ ಸ್ಮಾರ್ಟ್ ಫೋನ್ ಇದ್ದಿದ್ದರೆ , ಅದೆಷ್ಟು ಸಾವಿರ ಚಿತ್ರಗಳನ್ನು ತೆಗೆಯುತಿದ್ದೆನೋ ಗೊತ್ತಿಲ್ಲ. ಕೆಲವು ಸೇತುವೆಗಳ ಮೇಲೆ ನಡೆಯುವಾಗ ಮದ್ಯದಲ್ಲಿ ಉದ್ದನೆಯ ಕಿಂಡಿಗಳಿದ್ದು, ಯಾರಾದರೂ ಅಕ್ರೋಫೋಬಿಕ್ ಆಗಿದ್ದಲ್ಲಿ , ತಲೆಸುತ್ತಿ ಬೀಳುತ್ತಿದ್ದರೇನೋ. ನಮ್ಮ ಗುಂಪಿನಲ್ಲಿ ಯಾರೂ ಹಾಗಿರಲಿಲ್ಲ. ಎಲ್ಲಿಲ್ಲದ ಶೌರ್ಯ ಸಾಬೀತು ಮಾಡಲು ಹಳಿಗಳ ಮೇಲೆ ಓಡುವವರೇ ಹೆಚ್ಚು.

ಹೇಗೋ ನಾವು ಬರುವ ರೈಲುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಒಂದು ಸೇತುವೆಯ ಮೇಲೆ ನಾವಿರುವಾಗ ಒಂದು ರೈಲು ಅದಾವುದೋ ಮಾಯೆಯಲ್ಲಿ ನುಸುಳಿ ಬಂದೇ  ಬಿಟ್ಟಿತ್ತು. ಅದು ದೂರದಲ್ಲಿರುವಾಗಲೇ ಎಲ್ಲರೂ ಓಡಿ , ಸೇತುವೆಗೆ ಆಂಟಿ ಕೊಂಡಿರುವ ಬಾಲ್ಕನಿಯಂತೆ ನೇತಾಡುತ್ತಿರುವ,  ನ್ಯಾಯಾಲಯದ ಕಟಕಟೆಯಂತಿರುವ, ತುಕ್ಕುಹಿಡಿದ ಚೌಕಗಳೆರಡಲ್ಲಿ ನಿಂತೆವು.  ನಮ್ಮಿಂದ ಕೇವಲ ಎರಡರಿಂದ ಮೂರು  ಮೀಟರ್ ಅಂತರದಲ್ಲಿ ಸುಮಾರು ಇಪ್ಪತ್ತಕ್ಕೂ  ಹೆಚ್ಚು  ಭೋಗಿಗಳಿದ್ದ ರೈಲು ಹರಿದು ಹೋದಾಗ, ನಾವಿದ್ದ  ಚೌಕ ಗಡ ಗಡ  ನಡುಗಿ ಇನ್ನೇನು ಕೆಳಗೆ ಮುರಿದು ಬೀಳುವುದೇನೋ ಎನ್ನಿಸುತ್ತಿತ್ತು. 

ಹೊಟ್ಟೆ ಹಸಿದಾಗ ‘ಎಡಕುಮರಿ’ ಯಲ್ಲಿದ್ದೆವು

ಹೀಗೆ ಸುರಂಗಗಳನ್ನು ಮತ್ತು ಸೇತುವೆಗನ್ನು ದಾಟುತ್ತಾ ಸಂಜೆ ಆರುಘಂಟೆಯ ಹೊತ್ತಿಗಾಗಲೇ ಎಡಕುಮರಿ ರೈಲ್ವೆ ನಿಲ್ದಾಣಕ್ಕೆ ಬಂದು ಸೇರಿದ್ದೆವು. ನಮ್ಮ ಬ್ಯಾಕ್ ಪ್ಯಾಕ್  ನಲ್ಲಿ  ಇದ್ದ ಎಲ್ಲ ತಿನಿಸುಗಳೂ ಖಾಲಿಯಾಗಿದ್ದವು. ಬಾಟಲಿಯೊಳಗಿನ ನೀರು ಮುಗಿದು ಹೋಗಿತ್ತು. ಯಾವುದೇ ರೈಲ್ವೆ ನಿಲ್ದಾಣದಂತೆ ಈ ನಿಲ್ದಾಣದಲ್ಲಿಯೂ ಕುಡಿಯಲು ನೀರು ಮತ್ತು ಚಿಕ್ಕದೊಂದು ಕ್ಯಾಂಟೀನು ಇರಬಹುದೇನೋ ಎಂಬ ಆಶಾವಾದ , ಇಲ್ಲಿಗೆ ಬಂದ ನಂತರ ಹತಾಶವಾಗಿತ್ತು. ಹೀಗಾಗಿ ನಾವು ಹಸಿವಿನಲ್ಲೇ ಆ ರಾತ್ರಿ ನಿದ್ರೆಗೆ ಜಾರಬೇಕಿತ್ತು. ಹಸಿವಿನಿಂದ ನಮ್ಮ ಗಮನವನ್ನು ಬೇರೆಕಡೆಗೆ ಹರಿಸಲು ಪ್ರಯತ್ನಿಸುತ್ತಿರುವಾಗ ನಮ್ಮ ಸಹಾಯಕ್ಕೆ ಬಂದಿದ್ದು  ಗುಯ್ ಗುಟ್ಟುತ್ತಿದ್ದ ಸೊಳ್ಳೆಗಳು.  ಹಸಿವಿಗಿಂತಾ  ಸೊಳ್ಳೆಗಳ ಪ್ರಭಾವ ಹೆಚ್ಚಾಗಿ , ಅವುಗಳಿಗಿಂತಲೂ  ೩೦ ಕಿಲೋಮೀಟರ್ ನಡೆದ ದೇಹದ ದಣಿವು ಹೆಚ್ಚಾಗಿ  ಹಾಗೆಯೇ  ನಿದ್ದೆಗೆ ಜಾರಿದೆವು. 

ಬೆಳೆಗ್ಗೆ ಐದು ಘಂಟೆಗೆ ಎದ್ದವರೇ ಮತ್ತೆ ನಮ್ಮ ಚಾರಣವನ್ನು ಪ್ರಾರಂಭ ಮಾಡುವಾಗ ಕೆಲವರು, ಮರಳಿ ಹೋಗೋಣವೆಂದು ಕೇಳಿಕೊಂಡರು. ಮತ್ತೆ ಕೆಲವರು ಬಂದ  ಪ್ರಯಾಣ ಪೂರ್ತಿ ಮಾಡೋಣ ಎಂದು ಹೇಳಿದಾಗ, ಮುಂದಿಟ್ಟ ಹೆಜ್ಜೆ ಹಿಂದಿಡಬಾರದೆಂದು ಮತ್ತೆ ನಡೆದೇ ಸಾಗಿದೆವು.  

ಅಡ್ಡದಾರಿ ಹಿಡಿದಾಗ 

ಎಡಕುಮೇರಿ ಇಂದ ಸುಮಾರು ಐದು ಕಿಲೋಮೀಟರುಗಳ  ವರೆಗೂ ನಡೆದಾಗ, ಕೆಲವರಿಗೆ ಹಸಿವು ಮತ್ತು  ಬಾಯಾರಿಕೆಯಿಂದಾಗಿ ದಣಿವು ಹೆಚ್ಚಾಗತೊಡಗಿತು. ಮುಂದೆಯೂ ಹೋಗಲಾರದೆ, ಹಿಂದೆಯೂ ಹೋಗಲಾಗದೆ, ದಟ್ಟ ಅರಣ್ಯದ ಮಡುವಿನಲ್ಲಿ ಕಂಗೆಟ್ಟಿರುವಾಗ, ಒಂದು ಸೇತುವೆಯ ಕಟ್ಟೆಯ ಮೇಲೆ ಯಾರೂ ಮಾತನಾಡದೇ  ಹಾಗೆಯೇ ಕುಳಿತಿದ್ದೆವು.  ನಮ್ಮಲ್ಲೊಬ್ಬ ಸೇತುವೆ ಕಟ್ಟೆಯ ಮೇಲೆ ನಿಂತುಕೊಂಡು ಬಲಕ್ಕೆ ತಿರುಗಿ ನೋಡಿದ,  ಅಲ್ಲೇ ಹತ್ತಿರದಲ್ಲೇ ಒಂದು ಹೆದ್ದಾರಿ ಇರುವಂತೆ ತೋರಿತು. ಅದರ ಪಕ್ಕದಲ್ಲೇ ಒಂದು ಸಣ್ಣ ಝರಿ  ಇದ್ದು ಅದನ್ನು ದಾಟಿದೊಡನೆ ನಾವು ಹೆದ್ದಾರಿ ಸೇರಿ ಅಲ್ಲಿ ಯಾವುದಾದರೂ ವಾಹನವನ್ನು ಹಿಡಿದು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಬಹುದೆಂದು ಪ್ರಸ್ತಾವ ಮಾಡಿದ. ಅನೇಕರು  ಇಲ್ಲಗಳೆದರು . ತಡವಾದರೂ ಸರಿ ಗೊತ್ತಿರುವ ದಾರಿಯಲ್ಲಿ ಹೋಗೋಣ ಎಂದು ಕೆಲವರು ಹೇಳಿದರು.  ಆದರೆ ಗೆದ್ದದ್ದು ಮಾತ್ರ ಅಡ್ಡ ದಾರಿ ಹಿಡಿಯುವ ಯೋಚನೆ. 

ನಾವು ಇದ್ದದ್ದು ಒಂದು ಪರ್ವತ ಶ್ರೇಣಿಯ ಮೇಲೆ. ಅಲ್ಲಿಂದ ಕೆಳಗೆ ಏನನ್ನು ನೋಡಿದರೂ ಚಿಕ್ಕದಾಗಿ ಇಲ್ಲೇ ಹತ್ತಿರದಲ್ಲೇ ಇದೆ ಏನೋ ಎಂದು ತೋರುತ್ತದೆ. ಇದು ಒಂದು ರೀತಿ ಬ್ರಿಟನ್ನಿನಲ್ಲಿ ಹೊರಗೆ ಕಾಣಸಿಗುವ ಬಿಸಿಲಿದ್ದಂತೆ.  ತುಂಬಾ ಪ್ರಕಾಶಮಾನವಾಗಿದೆ ಎಂದು ಜಾಕೆಟ್ ಬಿಟ್ಟು ಹೊರಗೆ ಕಾಲಿಟ್ಟಿರೋ ಛಳಿಯಲ್ಲಿ ಒದ್ದಾಡುವುದು ಕಟ್ಟಿಟ್ಟ ಬುತ್ತಿ. ಅದಲ್ಲದೆ ನಾವಿದ್ದ ಸ್ಥಳದಿಂದ ಕೆಳಗಿಳಿದು ಹೋಗುವ ಚಿಕ್ಕ ಮಾರ್ಗವನ್ನು ನಾವು ಕಾಣಬಹುದಾಗಿತ್ತು. ಆದರೆ ಕಾಡಿನ ನಡುವಿನಲ್ಲಿ ಇಳಿದಾಗ ಇಂತಹ ಚಿಕ್ಕ ಮಾರ್ಗಗಳು ಕಣ್ಮರೆಯಾಗುತ್ತವೆ.  ನಮಗೂ ಆದದ್ದು ಅದೇ. 

ಸೇತುವೆಯಿಂದ ಕೆಳಗಿಳಿಯುವ ದಾರಿ ಎಷ್ಟು ಕಷ್ಟದಾಯಕವಾಗಿತ್ತೆಂದರೆ,  ಏನಾದರೂ ತೊಂದರೆಯಾದರೆ ಮತ್ತೆ ಮೇಲೆ ಹತ್ತಿ ವಾಪಾಸು ಬರುವುದು ಸಾಧ್ಯವೇ ಇರಲಿಲ್ಲ. ನಾವು ಹೊರಟಿದ್ದುದು ಒಂದು ರೀತಿ ಒನ್ ವೇ  ದಾರಿ. ಸೇರಿದರೆ ಮನೆ ಇಲ್ಲದಿದ್ದರೆ ಯಾವೊದೋ ಒಂದು ಕಾಡು ಮೃಗದ ಗುಹೆ. ನಾವು ಸ್ವಲ್ಪ  ಕೆಳಗಿಳಿದಾಗ ಸುತ್ತಾಲೂ ದಟ್ಟಾದಾದ ಮರಗಳಿದ್ದಿದ್ದರಿಂದ, ನಾವು ಹೋಗಬೇಕಿದ್ದ ದಾರಿ ಕಾಣಿಸದೇ  ಹೋಯಿತು. ಎಲ್ಲರ ಮನದಲ್ಲೂ ಭಯ ಮನೆ ಮಾಡ ತೊಡಗಿತು. ಅಷ್ಟರಲ್ಲಿ ಒಬ್ಭ ಕಾಡಾನೆಯ ಹಸಿ ಲದ್ದಿಯನ್ನು ಕಂಡೆನೆಂದಾಗ ಎಲ್ಲರ ಎದೆಯೂ ಧಸ್ಸೆಂದಿತ್ತು. ನಮ್ಮೆಲ್ಲರ ಹೆಸರು ಹಾಯ್  ಬೆಂಗಳೂರು ಮತ್ತು ಟಿವಿ ಮಾದ್ಯಮಗಳಲ್ಲಿ ಕಾಡಿನಲ್ಲಿ ಕಾಣೆಯಾದವರು ಎಂದು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೆನ್ನಿಸತೊಡಗಿತು.ಈ ಕಾರಣದಿಂದಲಾದರೂ   ನಾವು ಪ್ರಸಿದ್ಧರಾಗಬಹುದು ಎಂದು ತಮಾಷೆ ಮಾಡುತ್ತಲೇ ದಾರಿಯನ್ನು ಹುಡುಕತೊಡಗಿದೆವು. ಸುಮಾರು ಒಂದು ಎರೆಡು ಘಂಟೆಗಳ ಕಾಲ ಹುಡುಕಿದಾಗ, ಮತ್ತೆ ನಾವು ಕಂಡ ನೀರಿನ ಝರಿ ಕಾಣಿಸಿತು. ನಾವು ಸರ ಸರನೆ ಆ ನೀರಿನ ಝರಿಯ ಕಡೆಗೆ ಕೆಳಗಿಳಿದು ನಡೆಯತೊಡಗಿದೆವು. ನಾವು ನಡೆದ ದಾರಿ , ಮಳೆಗಾಲದಲ್ಲಿ ಧುಮ್ಮಿಕ್ಕುತ್ತಿದ್ದ ಒಂದು ಝರಿ ಎಂದು ನಮಗೆ ಮನವರಿಕೆಯಾಯಿತು. ಕೆಳಗೆ ಇಳಿದಾಗ ನಾವು ಕಂಡ ಝರಿ , ಝರಿಯಾಗಿರದೆ  ಹರಿಯುವ ನದಿಯಾಗಿತ್ತು. 

ನದಿ ದಾಟಿಸಿದ ಮಾನವ ಸರಪಳಿ 

ನದಿಯನ್ನು ದಾಟದೇ ಬೇರೆ ದಾರಿಯಿರಲಿಲ್ಲ. ಆದರೆ ನದಿಯ ಆಳ ನಮಗೆ ತಿಳಿದಿರಲಿಲ್ಲ. ಹಲವರಿಗೆ ನದಿಯಲ್ಲಿ ಈಜಲೂ ಬರುತ್ತಿರಲಿಲ್ಲ. ಹಾಗೆಯೇ ನದಿಯ ಮಗ್ಗುಲು ಹಿಡಿದು ಬೇರೆ ದಾರಿಯೇನಾದರೂ ಸಿಗುವುದೇನೋ ಎಂದು ನಡೆಯುತ್ತಾ ಸಾಗಿದೆವು . ಸುಮಾರು ದೂರ ನಡೆದಾಗ ನಮಗೆ ಎದುರು ದಡದಲ್ಲಿ ಕಂಡದ್ದು ಒಂದು ದೇವಸ್ಥಾನ. ಆ ದಡದಲ್ಲಿದ್ದ ಕೆಲವರಿಗೆ ಕೈಮಾಡಿ ಮಾತಾಡಿಸಿದಾಗ, ಅವರು ದಾಟಲು ಯೋಗ್ಯವಾಗಿರುವ ಒಂದು ಜಾಗವನ್ನು ಸನ್ನೆ ಮಾಡಿ ತೋರಿಸಿದರು. ಅಷ್ಟೇನೂ ಅಗಲವಿಲ್ಲದ ನದಿಯಾಗಿದ್ದರೂ ಅದು ಹರಿಯುತಿದ್ದ ರಭಸ ತೀವ್ರವಾಗಿತ್ತು. ಆ ವ್ಯಕ್ತಿಗಳು ಉದ್ದನೆಯ ಮರದ ಕೋಲುಗಳನ್ನು ನಮ್ಮ ಕಡೆಗೆ ಎಸೆಯಲು ಪ್ರಯತ್ನಿಸಿದರು . ಆದರೆ ಅದು ಸಾಧ್ಯವಾಗಲಿಲ್ಲ. 

Image result for human chain to cross the river

ಕೊನೆಗೆ ದಾರಿಯಿಲ್ಲದೆ , ಎಂಟು ಜನರೂ ಕೈ ತೋಳುಗಳನ್ನು ಬಂಧಿಸಿ ಒಂದು ಮಾನವ ಸರಪಳಿಯನ್ನು ನಿರ್ಮಿಸಿದೆವು. ದಡ ಸೇರಿದರೆ ಎಲ್ಲರೂ ಸೇರುವ ಇಲ್ಲದಿದ್ದರೆ ಯಾರೂ  ಬೇಡಾ ಎಂದು ನಿಶ್ಚಯಿಸಿರುವವರಂತೆ, ನದಿ ದಾಟಲು ಪ್ರಾರಂಭಿಸಿದೆವು. ನದಿ ನೋಡಲು ಎಷ್ಟು ಪ್ರಶಾಂತವಾಗಿತ್ತೋ, ಅದರ ಒಡಲಲ್ಲಿ ನೀರು ಅಷ್ಟೇ ರಭಸವಾಗಿ ಹರಿಯುತ್ತಿತ್ತು. ಕೊನೆಗೊ ನಾವು ಪಟ್ಟ ಪ್ರಯತ್ನ ವಿಫಲವಾಗಲಿಲ್ಲ ನಾವೆಲ್ಲರೂ ದಡ ಸೇರಿದ್ದೆವು. ನಮಗೊಂದು ಮರುಜನ್ಮ ಬಂದಂತಾಗಿತ್ತು. 

ನಾವು ದಾಟುವ ವರೆಗೂ ಕಾದಿದ್ದ ಆ ವ್ಯಕ್ತಿಗಳು ನಾವು ಅಡ್ಡದಾರಿ ಹಿಡಿದದ್ದಕ್ಕಾಗಿ ಸ್ವಲ್ಪ ಛಿಮಾರಿ  ಹಾಕಿ , ಇಲ್ಲಿ ಅನೇಕರು ಅರಣ್ಯಗಳಲ್ಲಿ ಕಾಣೆಯಾಗುವ ಉದಾಹರಣೆಗಳಿವೆ ಎಂದು ವಿವರಿಸಿದಾಗ ನಮ್ಮನ್ನು ಕಾಪಾಡಿದ ಅಷ್ಟ ದೇವತೆಗಳಿಗೂ ಕೃತಜ್ಞತೆ  ಸಲ್ಲಿಸಿದೆವು. ಆ ಚೌಡೇಶ್ವರಿ ದೇವಸ್ಥಾನದ ಬಳಿ ಇದ್ದ ಒಂದು ಖಾನಾವಳಿಯಲ್ಲಿ ಹಸಿವು ತೀರಿಸಿಕೊಂಡು, ಮನೆಯ ಕಡೆ ವಾಪಾಸು ಹೊರಟೆವು. ಇಷ್ಟೆಲ್ಲಾ ಆದ ನಂತರ ಕುಕ್ಕೆ ಸುಬ್ರಮಣ್ಯ ನೋಡುವ ಹುಮ್ಮಸ್ಸು ಯಾರಿಗೂ ಇರಲಿಲ್ಲ. ಯಾವಾಗ ಬೆಂಗಳೂರು ಸೇರುತ್ತೇವೋ ನಮ್ಮ ಮನೆಯವರನ್ನು ಯಾವಾಗ ಕಂಡು ಮಾತನಾಡುತ್ತೇವೋ ಎನ್ನುವ ಕಾತುರದಲ್ಲೇ ಬೆಂಗಳೂರಿನ ಬಸ್ಸೊಂದನ್ನು ಹಿಡಿದೆವು. 

ಈ ಘಟನೆ ನಡೆದು ಹಲವು ವರುಷಗಳ ವರೆಗೂ ನಾವಿದ್ದ ಪರಿಸ್ಥಿತಿಯನ್ನು ನೆನೆದರೆ ಎದೆ ಝಲ್ ಎನ್ನುತ್ತಿತ್ತು. ಕನಸಲ್ಲಿ ಈ ಘಟನೆಯ ಅನೇಕ ಆವೃತ್ತಿಗಳು ಬೇರೆ ಬೇರೆ ರೀತಿಯಲ್ಲಿ ಆವರಿಸಿ ಒಮ್ಮೆಮ್ಮೆ ನಿದ್ದೆಯಿಂದ ನನ್ನನು ಎಬ್ಬಿಸುತ್ತಿದ್ದವು. ಗೆಳೆಯರೊಂದಿಗೆ ಮಾತನಾಡಿದಾಗ ಅವರೂ ಈರೀತಿಯ ಅನುಭವವನ್ನು ಹಂಚಿಕೊಂಡಿದ್ದರು. 

ಇತ್ತೀಚಿನ ವರದಿ 

ಇತ್ತೀಚೆಗೆ ನನಗೆ ತಿಳಿದಂತೆ, ಈ ರೈಲು ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರ ಪುನಃ ಪ್ರಾರಂಭವಾಗಿದ್ದು, ಇಲ್ಲಿ ಚಾರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದಾರಿ ಎಷ್ಟೇ ದುರ್ಗಮವಾಗಿದ್ದರೂ ನಾವು ಆನಂದಿಸಿದ ಆ ಪ್ರಕೃತಿಯ ಸೌಂದರ್ಯ ನಮ್ಮ ನೆನಪಿನನಲ್ಲಿ ಅಜರಾಮರವಾಗಿದೆ. ಈ ಪ್ರಕೃತಿ ಸೌಂದರ್ಯದ ಅನುಭವ ರೈಲಿನಲ್ಲಿ ಪ್ರಯಾಣಿಸಿದರೂ ಸಿಗುವುದಂತೆ.

ಲೇಖಕರು : ಶ್ರೀನಿವಾಸ ಮಹೇಂದ್ರಕರ್ 

ಎಲ್ಲ ಫೋಟೋಗಳೂ ಇಂಟರ್ನೆಟ್ ನ ಕೃಪೆ 

10 thoughts on “ಒಂದು ಚಾರಣದ ಕಥೆ 

  1. ವಾವ್! ಶ್ರೀನಿವಾಸ ಅವರೇ ತುಂಬಾ ರೋಚಕ ಚಾರಣದ ಸುಂದರ ಕಥೆ.ಆ ಕತ್ತಲು ತುಂಬಿದ ಸುರಂಗಗಳಲ್ಲಿ ನಾನು ಪ್ರತಿ ವರ್ಷ ಒಂದು ಬಾರಿ ಪಯಣಿಸ್ತೀನಿ, ಬೆಂಗಳೂರು ನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ. ನನಗಂತೂ ಆ ಗುಡ್ಡ ಬೆಟ್ಟ ಹಸಿರು, ಪುಟ್ಟ ಪುಟ್ಟ ಝರಿ ತೊರೆ ಗಳು ,ಕತ್ತೆತ್ತಿದಷ್ಟೂ ಎತ್ತರಕ್ಕೆ ಎದ್ದು ನಿಂತ ಮರಗಳು ಹುಚ್ಚು ಹಿಡಿಸುವಂತೆ. ಕತ್ತಲು ತುಂಬಿದ ರಾತ್ರಿಯಲ್ಲಿ ಆ ದಟ್ಟಡವಿಯಲ್ಲಿ ರೈಲು ನಿಧಾನವಾಗಿ ಹೊರಟಾಗ ಇಳಿದು ಹೊರಟು ಬಿಡಲಾ ನಡೀತಾ ಅನ್ನೋ ವಿಚಿತ್ರ ತುಡಿತ ನಂಗೆ.ತಪ್ಪಿಕೂಡ ಕಣ್ಣು ಮುಚ್ಚೋದಿಲ್ಲ ನಾ.ಅದೆಲ್ಲ ಸರಿ, ಒಂದು ಮಾತು ನಾ ಹೇಳಲೇ ಬೇಕು ಈಗ.ನಿಮ್ಮ ಧೈರ್ಯ ಸಾಹಸ ಕ್ಕೆ ವಾವ್ ಅನಲೇಬೇಕು.ಆ ವಯಸ್ಸೇ ಹಾಗೆ ಅಲ್ವಾ? ನಾನು ಡಿಗ್ರಿ ಕೊನೇ ವರ್ಷದಲ್ಲಿ ದ್ದಾಗ ನಾವು ಎಂಟು ಜನ ಸ್ನೇಹಿತೆಯರು ಮಾಡಿದ ಸಾಹಸ ನೆನಪು ಬಂತು.ನವರಾತ್ರಿ ಅಮಾವಾಸ್ಯೆ ದಿನ ನನ್ನೂರಿನ ಹತ್ರ ಇರೋ ಅಮ್ಮಣಗಿ ಗುಡ್ಡದ ಮಲ್ಲಪ್ಪನ ಗುಡಿಗೆ ಹೋಗಿ ದರ್ಶನ ಪಡೆದು ಆ ಅಡವಿಯಲ್ಲಿ ಬಯಲು ಹುಡುಕಿ ಊಟ ಮಾಡಿ ಸ್ವಲ್ಪ ಉರುಳಿದರೆ ಹತ್ತಿ ಬಂದ ದಣಿವಿಂದ ನಿದ್ದೆ ಎಲ್ರೀಗೂ.ಎಚ್ಚರಾದಾಗ ಹೊತ್ತು ಕಂತುತ್ತಿತ್ತು.ಧಡಬಡಿಸಿ ಗುಡ್ಡ ಇಳಿದು ಬರೋಷ್ಟರಲ್ಲಿ ಇದ್ದೆ ಒಂದೇ ಬಸ್ಸು ಹೊರಟಾಗಿತ್ತು.ಹುಶ್ಯಪ್ಪ ಅಂತ 22 ಕಿ.ಮೀ.ನಡಕೊಂಡು ಬಂದ ಸುಸ್ತು, ಮನೇಲಿ ಆದ ಪೂಜೆ, ಮಂಗಳಾರತಿ ಎಲ್ಲಾ ನೆನಪಾಯಿತು.
    ಈಗ ದಿಗಿಲಾದ್ರೂ ಆ ದಿನಗಳು ಬಾರದಲ್ಲ ಎನಿಸದೇ ಇರದು.ನಿಮ್ಮ ಸಾಹಸಗಾಥೆ ತುಂಬಾ ರೋಮಾಂಚಕ ಅನುಭವ. ಅದರ ಅದ್ಭುತ ‌ ನಿರೂಪಣೆ ಗೆ ಧನ್ಯವಾದಗಳು ಶ್ರೀನಿವಾಸ್ ಅವರೇ.
    ಸರೋಜಿನಿ ಪಡಸಲಗಿ

    Like

  2. ಶ್ರೀನಿವಾಸ್,
    ನಿಮ್ಮ ಚಾರಣದ ಕಥೆ, ವಿವರಣೆ, ದಟ್ಟ ಅನುಭವಗಳು ಇತರ ಓದುಗರು ಹೇಳಿದಂತೆ ನನ್ನಲ್ಲೂ ಕೂಡ ಹಿಂದಿನ ನನ್ನ ಭಾರತದಲ್ಲಿ ಕೈಗೊಂಡ ಚಾರಣಗಳ ಅನುಭವಗಳನ್ನು, ಅದರೊಂದಿಗೆ ಮಿಳಿತವಾದ ಭಾವನೆಗಳನ್ನು ಮೆಲುಕು ಹಾಕುವಂತೆ ಮಾಡಿತು. ಭಾರತ ಬಿಟ್ಟಾದ ನಂತರ ನಾನು ಪುನಃ ಅನೇಕ ಚಾರಣಗಳನ್ನು ಕೈಗೊಂಡಿದ್ದು ಬ್ರಿಟನ್ನಿನಲ್ಲಿ. ಇಂಗ್ಲೆಂಡಿನ ಹಸಿರಿಗೆ ಮೈಮನ ತೆರೆದುಕೊಂಡಾಗ ಸಿಕ್ಕಿದ್ದು ಸಮೂಹ ಬೆಟ್ಟಗಳ ಶ್ರೇಣಿ – Lake District, Yorkshire Moores, Dales, Penines, Shropshire ಹಿಲ್ಸ್ – ಒಂದೇ ಎರಡೇ! ನನ್ನ ಗಂಡನ ತವರಾದ Wales ನಲ್ಲಂತೂ ಮಾತನಾಡುವುದೇ ಬೇಡ – ಮನಬಂದಂತೆಲ್ಲಾ ಬೆಟ್ಟ ಹತ್ತೋದು, ಇಳಿಯೋದೇ ಜೀವನ. ಬ್ರಿಟನ್ನಿನಲ್ಲಿ ಜನ ಸಮಯ ಸಿಕ್ಕಾಗಲೆಲ್ಲಾ ಒಂದು ಮ್ಯಾಪ್, ಹೆಗಲು ಚೀಲದಲ್ಲಿ ಪಾನೀಯ, ನೀರು, ಆಹಾರ ಪ್ಯಾಕ್ ಮಾಡಿಕೊಂಡು waterproof ದಿರಿಸು ಧರಿಸಿ ಹೊರಟುಬಿಡುತ್ತಾರೆ. ಕಾರಣವಿರಲಿ, ಇಲ್ಲದಿರಲಿ ನಾವೂ ಹಾಗೆ ಹೋಗುತ್ತಿದ್ದೆವು. ಒಂದೊಂದು ನಡಿಗೆಯಲ್ಲೂ, ಚಾರಣದಲ್ಲೂ, ಬೆಟ್ಟ ಹತ್ತಿದಾಗಲೆಲ್ಲಾ ಸಿಕ್ಕುವ ಸ್ಥಳೀಯ ಪುರಾಣ, ಕಥೆಗಳು, ತಿಂಡಿತಿನಿಸು, ಉಪಸಂಸ್ಕೃತಿಗಳು ಜೀವನದಲ್ಲಿ ಉತ್ಸಾಹದ ಬುಗ್ಗೆಯನ್ನ ಚಿಮ್ಮಿಸುತ್ತಿದ್ದವು. ಅಲ್ಲಲ್ಲಿನ ಪ್ರಾಣಿಪಕ್ಷಿ ವಿಷಯ, ಮರಗಿಡಗಳ ಪರಿಚಯ, ಚೆಂದದ ಹೂ, ರುಚಿಯಾದ ಹಣ್ಣು, ಅಷ್ಟೇಕೆ ಅನೇಕ ವಿಧದ ಬೇಲಿಗಳು ಕೂಡ ನಮ್ಮಲ್ಲಿ excitement ಉಂಟು ಮಾಡುತ್ತಿದ್ದವು. ನಿಮ್ಮ ಲೇಖನದಿಂದ ಪ್ರಭಾವಿತರಾಗಿ ಅನಿವಾಸಿ ವಾಟ್ಸಪ್ಪ್ ಗುಂಪಿನಲ್ಲಿ ಚಾರಣದ ಬಗ್ಗೆ ನಡೆದ ಮಾತುಕತೆ ಓದಿ ಖುಷಿಯಾಯ್ತು.
    ವಿನತೆ ಶರ್ಮ

    Like

  3. ಶ್ರೀನಿವಾಸ್,
    ನಿಮ್ಮ ಚಾರಣದ ಕಥೆ, ವಿವರಣೆ, ದಟ್ಟ ಅನುಭವಗಳು ಇತರ ಓದುಗರು ಹೇಳಿದಂತೆ ನನ್ನಲ್ಲೂ ಕೂಡ ಹಿಂದಿನ ನನ್ನ ಭಾರತದಲ್ಲಿ ಕೈಗೊಂಡ ಚಾರಣಗಳ ಅನುಭವಗಳನ್ನು, ಅದರೊಂದಿಗೆ ಮಿಳಿತವಾದ ಭಾವನೆಗಳನ್ನು ಮೆಲುಕು ಹಾಕುವಂತೆ ಮಾಡಿತು. ಭಾರತ ಬಿಟ್ಟಾದ ನಂತರ ನಾನು ಪುನಃ ಅನೇಕ ಚಾರಣಗಳನ್ನು ಕೈಗೊಂಡಿದ್ದು ಬ್ರಿಟನ್ನಿನಲ್ಲಿ. ಇಂಗ್ಲೆಂಡಿನ ಹಸಿರಿಗೆ ಮೈಮನ ತೆರೆದುಕೊಂಡಾಗ ಸಿಕ್ಕಿದ್ದು ಸಮೂಹ ಬೆಟ್ಟಗಳ ಶ್ರೇಣಿ – Lake District, Yorkshire Moores, Dales, Penines, Shropshire ಹಿಲ್ಸ್ – ಒಂದೇ ಎರಡೇ! ನನ್ನ ಗಂಡನ ತವರಾದ Wales ನಲ್ಲಂತೂ ಮಾತನಾಡುವುದೇ ಬೇಡ – ಮನಬಂದಂತೆಲ್ಲಾ ಬೆಟ್ಟ ಹತ್ತೋದು, ಇಳಿಯೋದೇ ಜೀವನ. ಬ್ರಿಟನ್ನಿನಲ್ಲಿ ಜನ ಸಮಯ ಸಿಕ್ಕಾಗಲೆಲ್ಲಾ ಒಂದು ಮ್ಯಾಪ್, ಹೆಗಲು ಚೀಲದಲ್ಲಿ ಪಾನೀಯ, ನೀರು, ಆಹಾರ ಪ್ಯಾಕ್ ಮಾಡಿಕೊಂಡು waterproof ದಿರಿಸು ಧರಿಸಿ ಹೊರಟುಬಿಡುತ್ತಾರೆ. ಒಂದೊಂದು ನಡಿಗೆ, ಚಾರಣ, ಬೆಟ್ಟ ಹತ್ತಿದಾಗಲೆಲ್ಲಾ ಸಿಕ್ಕುವ ಸ್ಥಳೀಯ ಪುರಾಣ, ಕಥೆಗಳು, ತಿಂಡಿತಿನಿಸು, ಉಪಸಂಸ್ಕೃತಿಗಳು ಜೀವನದಲ್ಲಿ ಸುಗ್ಗಿ ತರುತ್ತಿತ್ತು.
    ವಿನತೆ ಶರ್ಮ

    Like

  4. ತುಂಬಾ ರೋಮಾಂಚಕಾರಿ ಚಾರಣ. ಉತ್ತಮವಾದ ನಿರೂಪಣೆ. ನಮ್ಮೆಲರ ಬದುಕಿನಲ್ಲಿ ಬಹುಪಾಲು ನಾವು ಯುವಕರಾಗಿದ್ದಾಗ ಈ ರೀತಿಯ ಸಾಹಸಕ್ಕೆ ಕೈ ಹಾಕಿರುವ ಉದಾಹರಣೆ ಗಳನ್ನು ಕಾಣ ಬಹುದು. ನಾನು ಚಿಕ್ಕವನಾಗಿದ್ದಾಗ ನನ್ನ ಅಜ್ಜನ ಮನೆ ತರೀಕೆರೆಯಲ್ಲಿದ್ದು ನಾನು ಬೇಸಿಗೆ ರಜಕ್ಕೆ ಹೋಗುತ್ತಿದ್ದ ಕಾಲ. ಹಿಂದೆ ಯುವಕನಾಗಿದ್ದಾಗ ಒಂದು ಹುಚ್ಚು ಹುಮ್ಮಸ್ಸಿನಲ್ಲಿ ನಾನು ನನ್ನ ಕಸಿನ್ ಇಬ್ಬರು ಮುಂಗಾರು ಮಳೆಯಲ್ಲಿ ಕೆಮ್ಮಣ್ಣು ಗುಂಡಿ ನೋಡಲು ಹೊರಟೆವು. ತರೀಕೆರೆಯಿಂದ ಕೆಮ್ಮಣ್ಣುಗುಂಡಿಗೆ ಆಗ ಒಂದು ಅಥವಾ ಒಂದುವರೆ ಗಂಟೆ ಪ್ರಯಾಣ . ಬಸ್ಸು ಕೆಮ್ಮಣ್ಣು ಗುಂಡಿ ಬುಡದಲ್ಲಿ ಕೆಟ್ಟು ನಿಂತಿತ್ತು. ಹೆಚ್ಚು ಜನವಿಲ್ಲದ ಬಸ್ಸನ್ನು ರಿಪರೆ ಮಾಡಿ ಕೆಮ್ಮಣ್ಣು ಗುಂಡಿ ಗಿರಿಧಾಮವನ್ನು ತಲುಪುವ ಸಾಧ್ಯತೆ ಇಲ್ಲವೆಂದು ನಮ್ಮ ಡ್ರೈವರ್ ಮತ್ತು ಕಂಡಕ್ಟರ್ ನಮಗೆ ವಿದಾಯ ಹೇಳಿ ಹತ್ತಿರದ ಲಿಂಗದಳ್ಳಿ ಕಡೆಗೆ ನಡೆದು ಬಿಟ್ಟರು ! ನಾನು ನನ್ನ ಕಸಿನ್ ನಮ್ಮ ಶೋಲ್ಡರ್ ಬ್ಯಾಗ್ ಗಳನ್ನೂ ಹಿಡಿದು ಧೋ ಎಂದು ಸುರಿಯುವ ಮಳೆಯಲ್ಲಿ ಸುಮಾರು ಹತ್ತು ಕಿಲೋಮೀಟರು ನಡೆದು ಕತ್ತಲಾಗುವುದರ ಮುಂಚೆ ಕೆಮ್ಮಣ ಗುಂಡಿ ಗಿರಿಧಾಮವನ್ನು ತಲುಪಿದೆವು. ನಿರ್ಜನವಾದ ರಸ್ತೆ, ಕಾಡು ಪ್ರಾಣಿಗಳು, ಧೋ ಎಂದು ಸುರಿಯುವ ಮುಂಗಾರು ಮಳೆ, ಮಬ್ಬು ಕವಿದ ವಾತಾವರಣ ಇದಾವುದೂ ನಮಗೆ ಅಡ್ಡಿ ಎನಿಸಲಿಲ್ಲ. ಬಹುಶ ಯುವರಕ್ತವಿರಬಹುದು.

    ಶ್ರೀನಿವಾಸ್ ನಿಮ್ಮ ಲೇಖನ ನಮ್ಮಲ್ಲಿಯ ಹಲವರಿಗೆ ತಮ್ಮ ರೋಮಾಂಚಕ ಚಾರಣವನ್ನು ನೆನಪಿಗೆ ತಂದು ಮೆಲುಕುಹಾಕಲು ಅವಕಾಶ ನೀಡಿದೆ. ಇತರರಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲ್ಲು ಪ್ರೇರೇಪಿಸಿರುವುದು ಒಂದು ಉತ್ತಮ ಲೇಖನದ ಲಕ್ಷಣವು ಹೌದು.

    Like

  5. ತೇಜಸ್ವಿಯವರ ‘ಚಿದಂಬರ ರಹಸ್ಯ’ ದಲ್ಲಿ ಈ ಮಾರ್ಗ, ಸುರಂಗಗಳು ಪಾತ್ರಗಳಂತೆ ಬರುತ್ತವೆ. ನಿಮ್ಮ ಸಾಹಸಗಾಥೆ ಅವನ್ನೆಲ್ಲ ಮತ್ತೆ ಕಣ್ಣ ಮುಂದೆ ತಂದಿತಲ್ಲದೇ ಮಲೆನಾಡಿನ ಗರ್ಭ ದರ್ಶನ ಮಾಡಿಸಿತು.
    ಯವ್ವವನದ ಹುಡುಗಾಟ, ಹುಂಬತನ, ಪ್ರಕೃತಿಯ ಮಧ್ಯೆ ಮಾನವನ ಅಸಹಾಯತೆ ಇವೆಲ್ಲ ಸುಂದರವಾಗಿ ಚಿತ್ರಿತವಾಗಿವೆ.
    – ರಾಂ

    Like

  6. … ದಟ್ಟ ಅರಣ್ಯದುದ್ದಕ್ಕೊ ಹೊಕ್ಕಿ ಓಡುವ ಈ ರೈಲು ಹಳಿಗೆ ಕೇವಲ ಕತ್ತಲೆ , ಸುರಂಗ , ಕಾಡುಮೃಗಗಳ ಕೂಗಾಟ , ಹರಿಯುವ ಹೊಳೆಯ , ಬೀಳುವ ಮಳೆಯ ಸಂಬಂಧ ಮಾತ್ರ; ಬಿಟ್ಟರೆ ಆಗಾಗ ಓಡುವ ರೈಲುಗಳ ಅಬರಾಟ ! ನಿಮ್ಮ ಸಾಹಸದ ಅಂದಿನ ಈ ಪ್ರಯಾಣ .. ‘ಅನುಭವ’ಅಂದರೆ ಹೇಗಿರಬಹುದು, ಎಂಬುದನ್ನಷ್ಟೇ ಅಲ್ಲದೆ,ಈ ಒಂಟಿ ರೈಲು ಹಳಿಯ ಸುಪ್ತ ಬದುಕಿನ ಕಥೆಯನ್ನೂ ಕಣ್ಣಿಗೆ ಸ್ರಷ್ಟಿಸಿಕೊಟ್ಟಿದೆ ಎಂಬ ಆಭಾಸ ನನಗಾಯಿತು . ನಿಮ್ಮ ಅಂದಿನ ಅನುಭವದ ನೆನಪು-ಅದರಿಂದ ಕಂಡ ಕೆಟ್ಟ ಕನಸು, ಮೆಲಕು ಹಾಕಿರುವ ನಿಮ್ಮ ಈಗಿನ ಮನಸು -ಬರಹ, ಅನುಭವದ ಸಾಹಿತ್ಯವೇ ಸರಿ , ಮಹೇಂದ್ರಕರ್ ಅವರೆ 🙏💐

    Like

  7. ಸುಂದರವಾದ ಪ್ರಕೃತಿಯ ನಡುವೆ, ಸಾಹಸದಿಂದ ಕೂಡಿದ, ರೋಚಕವಾದ ಚಾರಣದ ಕಥೆ, ಒಂದು ಕಿರುಚಿತ್ರ ನೋಡಿದಂತೆ ಕಣ್ಣಿಗೆ ಕಟ್ಟುವಂತಿದೆ. ಈ ಮಾರ್ಗದ ರೈಲು ಪ್ರಯಾಣದ ಸುಂದರ ಅನುಭವಗಳನ್ನು ಬಹಳಷ್ಟು ಕೇಳಿ ಕೇಳಿ ಈಗ ಈ ಲೇಖನಿ ಓದಿ ನನಗೂ ಈ ರೈಲಿನಲ್ಲಿ ಪ್ರಯಾಣಿಸುವ ಹಂಬಲ ಇನ್ನೂ ಹೆಚ್ಚಾಗಿದೆ. “I would rather walk with a friend in dark than alone in light ” ಅನ್ನೋ ಹಾಗೆ ಆತ್ಮವಿಶ್ವಾಸ ತುಂಬುವ ಸ್ನೇಹಿತರು ಜೊತೆಗಿರಲು ಕಗ್ಗತ್ತಲ, ಯಾವ ಕ್ಷಣಲ್ಲಾದರೂ ರೈಲು ಬರಬಹುದಾದ ಸುರಂಗದಲ್ಲಿ ನುಸುಳಿದ ನಿಮ್ಮ ಧೈರ್ಯ ಮೆಚ್ಚುವಂತದ್ದು. ನಿಮ್ಮ ಲೇಖನಿ, ಸ್ನೇಹಿತರೊಂದಿಗಿನ ನಾಗರಹೊಳೆ ಪ್ರವಾಸದಲ್ಲಿ ಒಂಟಿ ಸಲಗ ನಮ್ಮ ಕಾರನ್ನು ಅಟ್ಟಿಸಿಕೊಂಡು ಬಂದಾಗ ನಾವು ಓಡಿ ಪಾರಾದ ರೋಚಕ ಘಟನೆಯನ್ನು ನೆನಪಿಸಿತು!

    Like

  8. ಯೌವನದ ಹುಂಬ ಸಾಹಸಗಳು ಮೈ ಜುಮ್ಮೆನಿಸುತ್ತದೆ. ಇಂಗ್ಲೆಂಡಿಗೆ ಬಂದು ಇಷ್ಟು ವರ್ಷವಾದಮೇಲೆ ಮತ್ತೆ ಇಂಥ ಸಾಹಸಕ್ಕೆ ಕೈಹಾಕುವುದು ಸಾಧ್ಯವಾಗದ ಮಾತು. ನಾಳೆಯ ಚಿಂತೆ ಇರದ ಅಂದಿನ ದಿನಗಳು ಹಾಗೆ. ಆದರೂ ನಿಮ್ಮ ಈ ಸಾಹಸ ಅಗಾಧವಾದದ್ದು. ಓದುತ್ತಲೇ ಹೆದರಿಕೆಯಾಗುತ್ತದೆ. ನೀವು ಸುರಂಗದಲ್ಲಿ ಇದ್ದಾಗ ರೈಲು ಬಂದಿದ್ದರೆ ನಿಮ್ಮ ಗತಿ ಏನಾಗುತ್ತಿತ್ತು? ನೀರಿನ ಪ್ರವಾಹದಲ್ಲಿ ಎಲ್ಲರೂ ಕೊಚ್ಚಿ ಹೋಗಿದ್ದರೆ ಏನಾಗುತ್ತಿತ್ತು? ಕಲ್ಪಿಸಿಕೊಂಡರೆ ಹೆದರಿಕೆಯಾಗುತ್ತದೆ.

    ನೀವು ಬರೆದಿರುವ ರೀತಿ ಅದ್ಭುತವಾಗಿದೆ. ಕಣ್ಣಿಗೆ ಕಟ್ಟುವಂತಿದೆ. ಜೋಗಿಯವರು ಕಾದಂಬರಿಯೊಂದು ವ್ಯಾಪಕವಾಯಿತು, ಅದು ಕೂಡ ಚಾರಣದ ಕಥೆ, ಕೊಲೆ ಬೇರೆ ನಡುವೆ. ಆ ಕಾದಂಬರಿಯ ಹೆಸರು ನೆನಪಾಗುತ್ತಿಲ್ಲ.

    ಕೇಶವ

    Like

  9. ಶ್ರೀನಿವಾಸ ಮತ್ತು ಮಿತ್ರರ ಚಾರಣದ ರೋಮಾಂಚಕ ಕಥೆಯನ್ನು ಓದಿ ಮೈ ಝಮ್ಮೆಂದಿತು! ಎಂಥ ಸಾಹಸ, ಅದೇ ಸಮಯದಲ್ಲಿ ಒಂದುರೀತಿಯಲ್ಲಿ foolhardy ಪ್ರಯತ್ನ. Fortune favours the bold ಅಂದಂತೆ ಸತ್ತು ಬದುಕಿ ಬಂದಿರಿ. ಎಲ್ಲರಿಗೂ ಮತ್ತು ಮುಂದೆ ಮೊಮ್ಮಕ್ಕಳಿಗೂ ಹೇಳುವಂಥ ಕಥೆ ಇದು!
    ನಿಮ್ಮ ವರ್ಣನೆ ಕಣ್ಣಿಗೆ ಕಟ್ಟುವಂತಿದೆ. ಆ ರೈಲು ಪ್ರಯಾಣವನ್ನಾದರೂ ಮಾಡಲು ಮನ ತವಕಿಸುತ್ತದೆ!

    Liked by 1 person

Leave a comment

This site uses Akismet to reduce spam. Learn how your comment data is processed.