ರೇಡಿಯೋ, ಗಿರ್ಮಿಟ್ ಮತ್ತು ಅನಿವಾಸಿ – ಶ್ರೀವತ್ಸ ದೇಸಾಯಿ ಬರೆದ ಲೇಖನ

ಶ್ರೀವತ್ಸ ದೇಸಾಯಿ

‘ಅನಿವಾಸಿ’ ಯ ಕ್ರಿಯಾಶೀಲ ಬರಹಗಾರರೂ ಮತ್ತು ಪೋಷಕರೊಬ್ಬರಲ್ಲಾಗಿರುವ ಶ್ರೀವತ್ಸ ದೇಸಾಯಿಯವರು, ಇತ್ತೀಚಿಗೆ ಧಾರವಾಡಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿರುವ ರೇಡಿಯೋ ಗಿರ್ಮಿಟ್ ಕಚೇರಿಗೆ ಭೇಟಿಯಾಗುವ ಮತ್ತು ಸಂದರ್ಶನವೊಂದನ್ನು ನೀಡುವ ಅವಕಾಶ ಒದಗಿ ಬಂದಾಗ ಅವರು  ‘ಅನಿವಾಸಿಯ’ ಧ್ವಜವನ್ನು ಹಾರಿಸಲು ಮರೆಯಲಿಲ್ಲ. ಸಂದರ್ಶನದ ಧ್ವನಿ ಸುರುಳಿ ವಾಟ್ಸಾಪ್ ನಲ್ಲಿ ನನಗೆ ಕೇಳಲು ದೊರಕಿದಾಗ, ಡಾ ।। ದೇಸಾಯಿ ಯವರ ‘ಅನಿವಾಸಿ’ ಬಗೆಗಿನಪ್ರೀತಿ , ಅದಕ್ಕಾಗಿ ದುಡಿದವರನ್ನು ಅವರು ನೆನೆಸಿದ ಪರಿ ಎಲ್ಲವೂ ಅವರ ‘ಅನಿವಾಸಿ’ ಯ ಬಗೆಗಿನ ಕಾಳಜಿ ಮತ್ತು ಅದರ ಬಗೆಗಿನ ವಿನಮ್ರತೆಯನ್ನು ತೋರಿಸುತ್ತಿತ್ತು. ಈ ಸಂದರ್ಶನವನ್ನೇಕೆ ಒಂದು ಲೇಖನವನ್ನಾಗಿಸಬಾರದು ಎಂದು ಅವರೊಡನೆ ಚರ್ಚಿಸಿದಾಗ, ಅವರು ಸಂದರ್ಶನವನ್ನೇ ವಸ್ತುವಾಗಿರಿಸದೆ, ಅದರ ಅನುಭವವನ್ನು ವಸ್ತುವನ್ನಾಗಿಸಿ ಒಂದು ಲೇಖನ ಬರೆಯಬಹುದು ಎಂದು ಹೇಳಿದರು. ಅದರಂತೆ ಈ ವಾರ ಅನಿವಾಸಿಯಲ್ಲಿ ಒಂದು ಲೇಖನದ ಗಿರ್ಮಿಟ್ ಅನ್ನು ನಮಗೆಲ್ಲ ಬಡಿಸಿದ್ದಾರೆ. ಯು ಕೆ ಯ ಹಲವಾರು ಭಾಗಗಳಲ್ಲಿ ಬರುವ ವಾರಾಂತ್ಯದಲ್ಲಿ ಹಿಮಪಾತವಾಗುವ ಮುನ್ಸೂಚನೆಯಿದ್ದು, ಈ ಲೇಖನವನ್ನು ಓದಿದಮೇಲೆ ಮನೆಯಲ್ಲಿ ಗಿರ್ಮಿಟ್ ಮಂಡಕ್ಕಿ ಮತ್ತು ಮೆಣಸಿನಕಾಯಿ ಬಜ್ಜಿ ಮಾಡಿಕೊಂಡು ತಿನ್ನಲು ಅನೇಕರು ಪ್ರಚೋದಿತರಾಗುವ   ಸಂಭವ ಹೆಚ್ಚಾಗಿದೆ. ತಪ್ಪದೇ  ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 
                                                                                ಸಂ : ಶ್ರೀನಿವಾಸ ಮಹೇಂದ್ರಕರ್ 

ರೇಡಿಯೋ

ನನಗೂ ರೇಡಿಯೋಗೂ ಅಂಟಿದ ನಂಟು ಹುಟ್ಟಿನಿಂದಲೇ ಇರಬೇಕೇನೋ! ನಮ್ಮ ಮನೆ, ಅಂದರೆ ನಾನು ಧಾರವಾಡದ ಸಪ್ತಾಪುರದಲ್ಲಿ ಹುಟ್ಟಿದ ಮನೆ ಆಕಾಶವಾಣಿ ಧಾರವಾಡದ ಒಂದೇ ತರಂಗಾಂತರದಲ್ಲೇ ಇದ್ದಿರಬೇಕು, ಏಕೆ, ಒಂದೇ ಕೂಗಳತೆಯಲ್ಲೇ ಇತ್ತು. ಇನ್ನೊಂದು ರೀತಿಯಲ್ಲಿ ಹೇಳುವದೆಂದರೆ, ಆಗ AIR Dharwad ದಲ್ಲಿ ರೇಡಿಯೋ ಪ್ರೋಗ್ರಾಮ್ಮರ್ ಆಗಿ ಕೆಲಸ ಮಾಡುತ್ತಿದ್ದ ಹೆಸರಾಂತ ಲೇಖಕ ಹೆಚ್ ಕೆ ರಂಗನಾಥರ ಶಬ್ದಗಳಲ್ಲಿ ”ಮಾತು-ಮಾತು-ಮಾತಿನ ಮೋಡಿ ಹಾಕುವ ದ ರಾ ಬೇಂದ್ರೆ”ಯವರು ಆಗ AIR advisor ಆಗಿದ್ದಾಗ ತಮ್ಮ ಕೋಣೆಯಲ್ಲಿ ಕುಳಿತು ಸ್ವಲ್ಪ ಜೋರಾಗಿ ಮಾತಾಡಿದರೆ ಹೊರಗಿನಿಂದಲೇ ನಮ್ಮ ಮನೆಯವರೆಗೂ ಕೇಳುವಷ್ಟು ಸಮೀಪ ಆ ರೇಡಿಯೋ ಸ್ಟೇಷನ್! ನಮ್ಮ ಮನೆಯಲ್ಲಿ ನಮಗಾಗಿ ಒಂದು ರೇಡಿಯೋ ಇರಲಿಲ್ಲ. ನನ್ನ ಅಣ್ಣ ಮತ್ತು ನಾನು ಕೂಡಿ ಒಂದು ಕ್ರಿಸ್ಟಲ್ ರೇಡಿಯೋವನ್ನು (ನೀವಾರೂ ಅದನ್ನು ಕೇಳಿರಲಿಕ್ಕೆ ಅಥವಾ ನೋಡಿಯೂ ಇರಲಿಕ್ಕಿಲ್ಲ) ನಾವೇ ಕಟ್ಟಿ, ಇಯರ್ ಫೋನ್ ಕಿವಿಗೆ ಹಚ್ಚಿ ರೇಡಿಯೋ ಪ್ರಸಾರವನ್ನು ಕೇಳುತ್ತಿದ್ದೆವು.

Crystal Radio

ಆಗ ಧಾರವಾಡ ಆಕಾಶವಾಣಿಯಿಂದ ಹಿಂದುಸ್ತಾನಿ ಸಂಗೀತದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ಅವರ ಸಂಗೀತ, ಶ್ರೀರಂಗರ ನಾಟಕ ಇತ್ಯಾದಿ ಪ್ರಸಾರವಾಗುತ್ತಿದ್ದ ಕಾಲವದು. ಅದು 1950ರ ದಶಕ. ಆಲ್ ಇಂಡಿಯಾ ರೇಡಿಯೋ (AIR) ಆಗ ತಾನೇ ಅಧಿಕೃತವಾಗಿ ‘ಬಹುಜನಹಿತಾಯ, ಬಹುಜನ ಸುಖಾಯ‘ ಆಕಾಶವಾಣಿ ಎಂದು ಕರೆದುಕೊಳ್ಳಲಾರಂಭಿಸಿತು. ಡಾ ಗೋಪಾಲಸ್ವಾಮಿ ಪ್ರಾರಂಭಿಸಿದ ಮೈಸೂರು ಬಾನುಲಿ ಕೇಂದ್ರಕ್ಕೆ ’ಆಕಾಶವಾಣಿ’ ಎಂಬ ಆ ಹೆಸರನ್ನು ಮೊದಲು ಸೂಚಿಸಿದವರು ಸಾಹಿತಿ, ಹಾಸ್ಯಲೇಖಕ ನಾ. ಕಸ್ತೂರಿ ಅಂತ ದಾಖಲೆಯಾಗಿದೆ. ಆಗ ನಾನು ಶಾಲೆಯಲ್ಲಿದ್ದಾಗ ಓದಿದ ’ಗೆಳೆಯರ ಗುಂಪಿನ’ವರೊಲ್ಲೊಬ್ಬರಾದ ವಿನಾಯಕರು (ವಿ ಕೃ ಗೋಕಾಕ) ರಚಿಸಿದ ಕವಿತೆಯ ಆರಂಭ ಹೀಗಿತ್ತು:

”ಕಾಡಿಯೋ ಬೇಡಿಯೋ, ತಂದೆನೊಂದು ರೇಡಿಯೋ!” ರೇಡಿಯೋ ಅಷ್ಟು ಅಪರೂಪ. ಆಗ ರಾಷ್ಟ್ರೀಯ ಬಾನುಲಿ ಪ್ರಸಾರವೊಂದೇ ಇತ್ತು ನಮ್ಮ ಮನರಂಜನೆಗೆ. ಆನಂತರ ರೇಡಿಯೋ ಸಿಲೋನ್ ಗೆ ಪೈಪೋಟಿಯಾಗಿ ’ವಿವಿಧ ಭಾರತಿ” ಪ್ರಾರಂಭವಾಗಿ ಸ್ವಲ್ಪೇ ಸಮಯದಲ್ಲಿ ಜನಪ್ರಿಯವಾಯಿತು. ರೇಡಿಯೋ ಮನೆ ಮನೆಯಲ್ಲೂ ಕಾಣಿಸಿ, ಕೇಳಿಸಿಕೊಳ್ಳಲಾರಂಭಿಸಿತು. ರೇಡಿಯೋದ ರಿಸೆಪ್ಶನ್ ಸ್ಪಷ್ಟವಾಗಿ ಕೇಳಿಸದೆ ಮಧ್ಯ ಮಧ್ಯದಲ್ಲಿ ’ಕರ್ ಕರ್” ಎನ್ನುವ ಕಿವಿಗೆ ತ್ರಾಸ ಕೊಡುತ್ತಿದ್ದ ಕರ್ಕಶ ಸದ್ದುಗಳೊಂದಿಗೆ ಪ್ರಸಾರವಾಗುತ್ತಿದ್ದ ಮೀಡಿಯಂ ವೇವ್ AM (amplitude modulation) ರೇಡಿಯೋ ಮುಂದೆ ಸುಧಾರಿಸಿ FM (frequency modulation) ರೇಡಿಯೋ ಆಗಿ, ಈಗ ಅಂತರ್ಜಾಲದಲ್ಲಿ ಸ್ಟ್ರೀಮ್ ಆಗುವ ಕಾಲ ಬಂದಿದೆ. ಅವುಗಳನ್ನು ಸ್ಮಾರ್ಟ್ ಫೋನಿನ ಆಪ್ ನಲ್ಲಿಯೋ ಕಂಪ್ಯೂಟರಿನಲ್ಲೋ (IP ಪ್ರೋಟೋಕಾಲ್) ಕೇಳಲು ಸಿಗುವ ಸ್ವತಂತ್ರ ರೇಡಿಯೋ ಪ್ರಸಾರಗಳು ಹೇರಳವಾಗಿವೆ. ಅಂಥವುಗಳಲ್ಲೊಂದು ರೇಡಿಯೋ ಗಿರ್ಮಿಟ್ ಆನ್ ಲೈನ್ ರೇಡಿಯೋ.

ಗಿರ್ಮಿಟ್

ಏನಿದು ಗಿರ್ಮಿಟ್? ಈ ಊರಿನ ಎರಡು ಖಾದ್ಯಗಳು ಧಾರವಾಡದ ಕೀರ್ತಿಯನ್ನು ಅಜರಾಮರವನ್ನಾಗಿ ಮಾಡಿವೆ: ಒಂದು ಸಿಹಿಯಾದ ಧಾರವಾಡದ ಫೇಡೆ; ಇನ್ನೊಂದು ಖಾರದ ಗಿರ್ಮಿಟ್. ಅದೊಂದು ತರಹದ ಮಿಕ್ಷ್ಚರ್: ಚುರಮುರಿ, ಉಳ್ಳಾಗಡ್ಡಿ (ಇಲ್ಲಿ ಈರುಳ್ಳಿ, ಅಂದರೆ ತಪ್ಪು!), ಹುಣಸೆ ರಸ, ಅಥವಾ ನಿಂಬೆ, ಹಸಿರು ಮೆಣಸಿನಕಾಯಿ, ಉಪ್ಪು, ಸಕ್ಕರೆ, ಒಗ್ಗರಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣನೆಯ ಶೇವ್ ಇವೆಲ್ಲ ಕೂಡಿ ಪುಟಾಣಿ ಹಿಟ್ಟಿನೊಂದಿಗೆ ಕಲೆಸಿ, ಮೇಲೆ ಗಾರ್ನಿಶ್ ಗೆಂದು ಸ್ವಲ್ಪ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ. ಕರಿದ ಹಸಿ ಮೆಣಸಿನಕಾಯಿಯನ್ನು ಜೊತೆಯಲ್ಲಿ ನಂಜಿಕೊಳ್ಳುತ್ತ, ಹಾಡು ಕೇಳುತ್ತ, ಹಾಡುತ್ತ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ಉತ್ತರ ಕರ್ನಾಟಕದ ತುಂಬೆಲ್ಲ ಇದರ ಖ್ಯಾತಿ ಹರಡಿದೆ, ಈಗ ದಕ್ಷಿಣಕ್ಕೂ ಪಸರಿಸಿದೆ. ವಿಜಾಪುರ, ಬೆಳಗಾಂ ಕಡೆ ಇದಕ್ಕೆ ’ಸಂಗೀತ” ಅಂತ ಕರೆಯುತ್ತಾರಂತೆ. ರಾತ್ರಿಯಿಡೀ ನಾಟಕ ಸಂಗೀತ ನೋಡುತ್ತ ಕೇಳುತ್ತ ಟೆಂಟಿನ ಹೊರಗಡೆ ಬಿಸಿಬಿಸಿ ಬಿಕ್ಕುವ ಈ ಖಾದ್ಯಕ್ಕೆ ಆ ಹೆಸರು ಬಂದಿರಬೇಕೆಂದು ಕೆಲ ರಸಿಕರ ಗ್ರಹಿಕೆ. ಏನೇ ಇರಲಿ, ಹೊಸದೊಂದು ವೈಶಿಷ್ಟ್ಯಪೂರ್ಣ ರೇಡಿಯೋ ಸ್ಟೇಷನ್ ಧಾರವಾಡದಲ್ಲಿ ಶುರು ಮಾಡುವಾಗ ಇದರ ಸ್ಥಾಪಕರು ಇದಕ್ಕಿಂತ ಒಳ್ಳೆಯ ಹೆಸರನ್ನು ಹುಡುಕುವ ಗೋಜಿಗೇ ಹೋಗಿರಲಿಕ್ಕಿಲ್ಲ, ಎಂದು ನನ್ನ ತಿಳುವಳಿಕೆ. ಆ ರೇಡಿಯೋ ಸ್ಟೇಷನ್ನಿನ ವಿಳಾಸ ಗೋಪಾಳಪುರ, ಮಾಳಮಡ್ಡಿ, ಧಾರವಾಡ ಎಂದು ತಿಳಿದ ಮೇಲಂತೂ ಕೂಡಲೆ ಇದೇ ವರ್ಷಾರಂಭದಲ್ಲಿ ಊರಿಗೆ ಹೋಗಿದ್ದ ನಾನು ಅವರ ಆಮಂತ್ರಣಕ್ಕೊಪ್ಪಿ ನಡೆದುಕೊಂಡೇ ಸ್ಟುಡಿಯೋಕ್ಕೆ ಹೊರಟೆ.

ಕ್ಷಣಕ್ಷಣಕ್ಕೆ ಕಾಲ ಮೇಲೆ ಹರಿದು ಬರಬಹುದಾದ ಕಾರು, ದ್ವಿಚಕ್ರಗಳಿಂದ ಬಚಾಯಿಸಿಕೊಳ್ಳುತ್ತ ನಡೆದು, ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಚರಂಡಿ, ನಾಯಿಗಳಿಂದ ತಪ್ಪಿಸಿಕೊಳ್ಳಲು ’ಹಾಪ್ ಸ್ಟೆಪ್ ಅಂಡ್ ಜಂಪ್’ ಮಾಡದೆ ಕೇರ್ ಫ್ರೀ ಕಾಲ್ನಡಿಗೆಯ ಆನಂದವನ್ನು ಇನ್ನೂ ಅನುಭವಿಸಲು ಸಾಧ್ಯವಾಗುವ ಕೆಲವೇ ಪಟ್ಟಣಗಳಲ್ಲಿ ನನ್ನ ಹುಟ್ಟೂರು ಧಾರವಾಡವೂ ಒಂದು. ಈ ರೇಡಿಯೋ ಸ್ಟುಡಿಯೋ ಈಗ ಮನೆಮಾಡಿರುವ ಪವಮಾನ ಅಪಾರ್ಟ್ಮೆಂಟ್ಸ್ ಕಟ್ಟಡದ ಮುಂದಿನ ರಸ್ತೆಯಗುಂಟವೇ ನಾನು ಪ್ರತಿದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದುದನ್ನು ನೆನೆದು ಎದೆಯಲ್ಲಿ ಪುಳಕ. ಆ ಕಟ್ಟಡದ ಎದುರಿಗೇ ’ಆನಂದಕಂದ’ವೆಂಬ ಹೆಸರಿನ ಮನೆ, ಆ ಕಾಲದ ಪ್ರಸಿದ್ಧ ಸಾಹಿತಿ ಬೆಟಗೇರಿ ಶರ್ಮರ ಕುಟುಂಬದ್ದು. ಅವರು ಬದುಕಿದ್ದ ಸಮಯದಲ್ಲಿ ಊರಿನ ವೀಥಿಗಳಲ್ಲಿ ಅಡ್ಡಾಡುವಾಗ ಕನ್ನಡದ ಕೆಲಸ ಮಾಡಿದ ಅದೆಷ್ಟು ಸಾಹಿತಿಗಳು, ಕವಿಗಳು, ಕಲಾಕಾರರು ಕಾಲ್ನಡಿಗೆಯಲ್ಲೋ ಟಾಂಗಾದಲ್ಲೋ ಹೋಗುವದನ್ನು ನೋಡುವದು ಸರ್ವೇ ಸಾಮಾನ್ಯವಾಗಿತ್ತು! ಬೇಂದ್ರೆ, ಆಲೂರು ವೆಂಕಟರಾಯರು, ಶಂ ಭಾ ಜೋಷಿ, ಚೆನ್ನವೀರ ಕಣವಿ, ಕೆ ಕೃಷ್ಣಮೂರ್ತಿ, ಹೀಗೇ ಅನೇಕರನ್ನು ನೋಡಿದ್ದ ನೆನಪು ಇನ್ನೂ ಹಸಿರಾಗಿಯೇ ಇದೆ.

Audacity ಕಾರ್ಯದಲ್ಲಿ ತೊಡಗಿದ ವಿಜಯ ಸತ್ತೂರ

ನಾನು ರೇಡಿಯೋ ಗಿರ್ಮಿಟ್ ಗೆ ಮೊದಲ ಭೇಟಿಕೊಟ್ಟ ದಿನ ಒಂದು ಜಾನೇವರಿ ಮುಂಜಾವಿನ ಎಳೆ ಬಿಸಿಲಿನಲ್ಲಿ ನಡೆಯುತ್ತಾ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಹೋದೆ. ಒಂದು ಹೊಸ ಕಟ್ಟಡದ ಮೂರನೆಯ ಮಹಡಿಯ ಬಾಗಿಲಲ್ಲಿ ನಿಂತು ಕಾಲ್ ಬೆಲ್ ಒತ್ತಿದಾಗ ಹೃತ್ಪೂರ್ವಕವಾಗಿ ಸ್ವಾಗತಿಸಿದವರು ವಿಜಯ ಸತ್ತೂರ್ ಮತ್ತು ಹಸನ್ಮುಖಿಯರಾದ ಅವರ ಸಹೋದ್ಯೋಗಿಗಳು! ಇದಾದ ಕೆಲ ದಿನಗಳ ನಂತರ ಸಂದರ್ಶನ ತೆಗೆದುಕೊಂಡವರು ಇನ್ನೊಬ್ಬ ವಿಜಯರು (ಇನಾಂದಾರ್). ಚಿಕ್ಕಂದಿನಲ್ಲಿ ನಾನು ನೋಡಿದ್ದ ಆಲ್ ಇಂಡಿಯಾ ರೇಡಿಯೋದ ಐವತ್ತರ ದಶಕದ ಆಕಾಶವಾಣಿ ಕೇಂದ್ರಕ್ಕೂ ಇಪ್ಪತ್ತೊಂದನೆಯ ಶತಮಾನದ ಇಂಟರ್ನೆಟ್ ಆಧಾರಿತ ನವಯುಗದ ಒಂದು ಸ್ಟುಡಿಯೋಕ್ಕೂ ಬಹಳ ವ್ಯತ್ಯಾಸವಿರಬಹುದು, ಇಲ್ಲಿ ರೇಡಿಯೋ ಪ್ರಸಾರ ಹೇಗೆ ಆಗುತ್ತದೆ, ಏನು ವ್ಯತ್ಯಾಸ, ಅದರ nuts and bolts ಏನೆಂದು ತಿಳಿದುಕೊಳ್ಳುವ ತವಕ ನನಗೆ. ರೇಡಿಯೋ ಗಿರ್ಮಿಟ್ ಇತ್ತೀಚೆಗಷ್ಟೇ ಪ್ರಾರಂಭವಾದ, ಎರಡು ವರ್ಷಗಳಿಗಿಂತ ಕಡಿಮೆಯ ವಯಸ್ಸಿನ ಹಸುಳೆ, ಎಂದು ಗೊತ್ತಾಯಿತು. ’ವಿವಿಡ್ ಲಿಪಿ’ (VIVIDLIPI)ಮತ್ತು ಈ ರೇಡಿಯೋ ಎರಡೂ ಪ್ರಮೋದ LNS ಅವರ  ಕನಸಿನ ಕೂಸು. ಕೆಲವೇ ಕಾಯಂ ಸಿಬ್ಬಂದಿಗಳು. ಆಡಳಿತಕ್ಕೆ ಆರೇಳು ಜನರಷ್ಟೇ ಫುಲ್ ಟೈಮ್ ಕೆಲಸಮಾಡುವವರು. ಇನ್ನುಳಿದವರೆಲ್ಲ ಪಾರ್ಟ್ ಟೈಮ್. ಅವರ ಕುಟುಂಬದವರನ್ನೇಕರು ಅದರಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಈಗಿನ ಕಾಲದಲ್ಲಿ ಸಾಮಾನ್ಯವೆನ್ನುವ ‘ಮಲ್ಟಿ ಟಾಸ್ಕಿಂಗ್’ ಪಟುಗಳು.

ರೇಡಿಯೋ ಗಿರ್ಮಿಟ್ ಈಗ ಲಾಭೋದ್ದೇಶಬಾಹಿರ (non-profit making) ಸಂಸ್ಥೆ. ಅದರ ಪ್ರಸಾರವನ್ನು ರೇಡಿಯೋ ಜಾರ್ (Jar) ಹೋಸ್ಟ್ ಮಾಡುತ್ತದೆಯಂತೆ. ಅದು 24*7 ಪ್ರಸಾರವಾಗುವ ರೇಡಿಯೋ. ಅದರ ವೆಬ್ ಸೈಟ್ (www.radiogirmit.com) ನಲ್ಲಿ ಅವರ ಪ್ರಸಾರಗಳ ವಿವಿಧ ಅಂಗಗಳನ್ನು ಕೇಳಬಹುದು: ಹರಟೆ ಕಟ್ಟೆ, ಸ್ಪಂದನ, ವಿಷಯಧಾರೆ, ಚಿಣ್ಣರ ಕಥಾಗುಚ್ಛ, ವಿಶೇಷ ಸಂದರ್ಶನ, ಇತ್ಯಾದಿ. ಅವುಗಳಲ್ಲಿ ಕೆಲವು ತಪ್ಪದೆ ನಿಯತ ಕಾಲದಲ್ಲಿ ಪ್ರಸಾರವಾದರೂ ಇನ್ನು ಕೆಲವು ಮಧ್ಯದಲ್ಲಿ ಸ್ಥಗಿತಗೊಂಡಂತೆ ಕಾಣುತ್ತದೆ. ಈ ಕಾರ್ಯಕ್ರಮಗಳು ಪ್ರಸಾರವಾಗದ ಉಳಿದ ಸಮಯದಲ್ಲಿ ಹಾಡು, ಸಂಗೀತವನ್ನು 24/7 ಕೇಳಬಹುದು. ’ಲಹರಿ’ ಯವರು ಕೊಡಮಾಡಿದ ಹಾಡುಗಳ ಲಹರಿ ಸತತವಾಗಿ ಹರಿಯುತ್ತಿರುತ್ತದೆ. ಇಲ್ಲಿಯವರೆಗೆ ತಡೆಯಿಲ್ಲದೆ ಪ್ರಸಾರವಾದ ಹರಟೆಕಟ್ಟೆಯ ಹಲವಾರು ಉತ್ಕೃಷ್ಟ ಹರಟೆಗಳನ್ನು ನಾನು ಸ್ವತ: ಆಲಿಸಿ ಆನಂದಿಸಿರುವೆ. ಅದರಲ್ಲಿ ಪ್ರಸ್ತುತ ಪಡಿಸುತ್ತಿರುವ ಬಲಕುಂದಿಯ ಗೌರಿ ಪ್ರಸನ್ನ (ಈಗ ಯುಕೆ ವಾಸಿ) ಅವರ ’ಧಾರವಾಡಿ’ ಭಾಷೆ ಮತ್ತು ಶೈಲಿ ಹರಟೆಗೆ ಒಗ್ಗುತ್ತದೆ. ಪ್ರತಿಯೊಂದು ಹರಟೆಗಳಲ್ಲಿ ತುಂಬ ವಿಷಯ ವೈವಿಧ್ಯತೆ ಮತ್ತು ಸಾಹಿತ್ಯದ ಉಲ್ಲೇಖ, ಇವು ಬರೀ ಒಣ ಹರಟೆಯಾಗದೆ ಅವನ್ನು ಮುದ್ರಿಸಿದರೆ ಒಳ್ಳೆಯ ಲೇಖನಗಳಾಗುವ ಸಾಧ್ಯತೆಯಿದೆ ಎಂದೆನಿಸುವದು. ಉದ್ಘೋಷಕಿ ಉಮಾ ಭಾತಖಂಡೆಯವರ ಇಂಪಾದ ಧ್ವನಿ ಕೆಲವೊಂದು ಕಾರ್ಯಕ್ರಮಗಳಿಗೆ ಮೆರುಗು ಕೊಟ್ಟಿದೆ. ಈ ರೇಡಿಯೋದ ನಿರ್ವಾಹಕರ ಉದ್ದೇಶಗಳೇನೋ ಮಹತ್ತರವಾದವು; ”ಇದನ್ನು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ತಂಗುದಾಣವನ್ನಾಗಿ ಮಾಡಬೇಕೆಂದು” ಅವರ ಗುರಿ. ಸಮಯ ಕಳೆದಂತೆ, ಕ್ರಮೇಣ ಸಂಸ್ಥೆ ಬೆಳೆದಂತೆ ಅದು ಸಫಲವಾಗಲಿ ಎಂದು ಹಾರೈಸುವೆ.

ನನ್ನ ಸಂದರ್ಶನ

ನಿಗದಿತ ಸಂದರ್ಶನದ ತಾರೀಖು ಬದಲಾಗಿದ್ದರಿಂದ, ಮತ್ತು ತಪ್ಪಿಸಲಾರದ ಬೇರೆ ಅಪಾಯಿಂಟ್ಮೆಂಟ್ ಕಾರಣದಿಂದಾಗಿ ನನ್ನ ಸಂದರ್ಶನ ನಡೆದದ್ದು ಫೆಬ್ರುವರಿ 8, 2020 ರಂದು ಮಧ್ಯಾಹ್ನ. ಬಲಿಪಶುವಿನಂತಿಲ್ಲದಿದ್ದರೂ ಸ್ವಲ್ಪ ’ನರ್ವಸ್’ ಆಗಿಯೇ ಸ್ಟೂಡಿಯೋದಲ್ಲಿ ಕಾಲಿಟ್ಟೆ. ಸಂದರ್ಶಕ -ಸಂದರ್ಶನಾರ್ಥಿಗಳ ಸಂಬಂಧ ವಿಚಿತ್ರ. ಅವರ ಕೆಮಿಸ್ಟ್ರಿ ಸರಿಯಾದರೆ ಇಬ್ಬರಿಗೂ ’ವಿನ್-ವಿನ” ಲಾಭದ ಆಟ. ಸಂದರ್ಶನ ಹರಿತವಾದ ಎರಡಲುಗಗಳ ಕತ್ತಿಯಿದ್ದಂತೆ. ಯಾರು ಘಾಸಿಯಾಗುತ್ತಾರೆ ಎನ್ನುವದು ಭಾಗವಹಿಸುವ ಆಟಗಾರರ ಮೇಲೆ ಅವಲಂಬಿಸಿದ್ದು. ನಾನು ಬಿ.ಬಿ.ಸಿ.ಯ ರೇಡಿಯೊ 4 ರ ನಿಷ್ಠಾವಂತ ಶ್ರೋತೃ ಅನ್ನಿ. ಅದು ಜಗತ್ತಿನ ನಂಬರ್ 1 ರೇಡಿಯೋ ಸ್ಟೇಷನ್ ಆಗಿ ಇನ್ನೂ ಉಳಿದಿದೆಯೋ ಗೊತ್ತಿಲ್ಲ, ಆದರೂ ನಾನು ಕೇಳುತ್ತ ಬಂದ ನಾಲ್ಕು ದಶಕಗಳಲ್ಲಿ ಅದು ಪ್ರಸಾರ ಮಾಡಿದ ಅವಿಸ್ಮರಣೀಯ ಸಂದರ್ಶನಗಳು ಮತ್ತು ವುಗಳನ್ನು ನಡೆಸಿಕೊಟ್ಟ ಅಸಾಧಾರಣ ನಿರೂಪಕರ ಸಾಲೇ ಇದೆ ಬ್ರಾಡ್ಕಾಸ್ಟಿಂಗ್ ಹೌಸ್ ದಲ್ಲಿ. ಅವರಲ್ಲಿ ಸುಪ್ರಸಿದ್ಧರು 30 ವರ್ಷಗಳ ಅಖಂಡ ಸೇವೆಯ ನಂತರ ಇತ್ತೀಚೆಗೆ ದಿನನಿತ್ಯದ ಬೆಳಿಗ್ಗಿನ ರೇಡಿಯೋ ’’ಟುಡೇ” ದಿಂದ ನಿವೃತ್ತರಾದ ’ರಾಟ್ ವೈಲರ್’ ಬಿರುದಿನ ಜಾನ್ ಹಂಫ್ರೀಸ್. ಅವರೆಂಥ ಪ್ರಚಂಡ ಸಂದರ್ಶಕರೆಂದರೆ ಅತಿರಥಿ ಮಹಾರಥಿ ರಾಜಕಾರಣಿಗಳು ಸಹ ಅವರ ಸಮ್ಮುಖದಲ್ಲಿ ಕಿಂಚಿತ್ತಾದರೂ ನಡುಗಿತ್ತಿದ್ದರಂತೆ. ಆದರೂ ಕೆಲವರು ತೋರಗೊಡುತ್ತಿರಲಿಲ್ಲವಂತೆ. ಆದರೆ ನಾನು ರಾಜಕಾರಣಿಯೂ ಅಲ್ಲ ಮತ್ತು ವಿರೋಧಾಭಾಸದ ಮನುಷ್ಯನೂ ಅಲ್ಲವೆಂದ ಮೇಲೆ ಏಕೆ ಅಳುಕು?

ಸಂದರ್ಶಕ ವಿಜಯ ಇನಾಂದಾರ ಮತ್ತು ಲೇಖಕ (Photo: Radio Girmit)

ಅವರು ಹೇಳಿದಂತೆ ಆ ದಿನ ಮಧ್ಯಾಹ್ನ ಮೂರೂವರೆಗೆ ಅದೇ ಅಟ್ಟ ಹತ್ತಿ ಹೋದೆ. ಕೈಯಲ್ಲಿ ’ಅನಿವಾಸಿ’ ಬಗೆಗಿನ ಮಾಹಿತಿಯ ಟಿಪ್ಪಣಿ ಮಾಡಿಕೊಂಡ ನೋಟ್ ಬುಕ್ಕು. ಉಮಾ ಅವರು ಬರಮಾಡಿಕೊಂಡು ಸ್ಟೂಡಿಯೋಕ್ಕೆ ಕರೆದೊಯ್ದರು. ಸ್ಟೂಡಿಯೋ ಅಂದರೆ ಚಿಕ್ಕದಾದರೂ ಬೆಳಕಿನಿಂದ ಕೂಡಿದ ಆ ಕೋಣೆಯಲ್ಲಿ ಒಂದು ಟೇಬಲ್ಲು; ಅದರ ಮೇಲೆ ವಿಜಯ ಸತ್ತೂರ್ ಮತ್ತು ಉಮಾ ಅವರು ಎಡಿಟಿಂಗ್ ಗೆ ಉಪಯೋಗಿಸುವ ಕಂಪ್ಯೂಟರ್; ಅದರಲ್ಲಿ ಲೋಡ್ ಮಾಡಿದ ಮತ್ತು ಈ ಮೊದಲೇ ನನಗೆ ಪ್ರದರ್ಶಿಸಿದ ’ಆಡಾಸಿಟಿ’ ತಂತ್ರಾಂಶ; ಗೋಡೆಯ ಮೇಲೆ ರೇಡಿಯೋ ಗಿರ್ಮಿಟ್ಟಿನ ಲೋಗೋ ಹೊತ್ತ ದೊಡ್ಡ ಪೋಸ್ಟರ್. ಕೋಣೆಯ ಇನ್ನೊಂದು ಭಾಗದಲ್ಲಿ ಇಬ್ಬರಿಗೂ ಕೂಡಲು ಕುರ್ಚಿಗಳು; ಅವರ ಮಧ್ಯದಲ್ಲಿ ಗೋಡೆಯ ಬ್ರಾಕೆಟ್ಟಿನಿಂದ ತೂಗುಬಿಟ್ಟ ಪ್ರೋಫೆಷನಲ್ ಮೈಕ್ರೋಫೋನ್. ಇದನ್ನೆಲ್ಲ ನೋಡುವಷ್ಟರಲ್ಲಿ ಕೋಣೆಯಲ್ಲಿ ಹೊಕ್ಕರು ವಿಜಯ ಇನಂದಾರ್. ಪರಿಚಯ, ಪೀಠಿಕೆಯ ಮಾತುಗಳು ಆದವು. ನಾನು ಈ ಮೊದಲೇ ಕಳಿಸಿದ್ದ ಅನಿವಾಸಿಯ ಲೇಖನಗಳು ಅವರಿಗೆ ತಲುಪಿದೆಯೆಂದು ಖಚಿತ ಪಡಿಸಿಕೊಂಡೆ. ಸಂದರ್ಶನದ ರೂಪರೇಷೆಗಳನ್ನು ಸ್ಪಷ್ಟಪಡಿಸಿಯಾದ ಮೇಲೆ, ಉಮಾ ಅವರು ಸ್ವಿಚ್ಚಾನ್ ಮಾಡಿ (?) ಸೋನಿ ಡಿಜಿಟಲ್ ರೆಕಾರ್ಡರನ್ನು ಅವರ ಕೈಗಿತ್ತರು. ತಡಮಾಡದೇ ಸಂದರ್ಶನ ಪ್ರಾರಂಭವಾಯಿತು. ಸರತಿ ಪ್ರಕಾರ ಮೈಕ್ರೋಫೋನಿನಂತೆ ಅದನ್ನು ಕೈಯಲ್ಲಿ ಹಿಡಿದು ಅದರೊಳಗೆ ನಾವು ಒಬ್ಬೊಬ್ಬರಾಗಿ ಮಾತಾಡ ಬೇಕು, ಮತ್ತು ಇನ್ನೊಬ್ಬರಿಗೆ ವಾಪಾಸ್ ಕೊಡಬೇಕು.

ಸಂದರ್ಶನ ಮುಂದುವರೆದಂತೆ ಅದರಲ್ಲಿ ಪಳಗಿದ ಇನಾಂದಾರರು ನನ್ನ ಮೇಲೆ ಪೂರ್ತಿ ವಿಜಯ ಸಾಧಿಸಲು ಸನ್ನದ್ಧರಾಗಿದ್ದಂತೆ ಕಾಣದೆ ಬಹಳ ಸೌಹಾರ್ದಕರ ವಾತವರಣ ನಿರ್ಮಿಸಿ ರಿಲಾಕ್ಸ್ ಆಗುವಂತೆ ಮಾಡಿದ್ದಕ್ಕೆ ನಾನು ಋಣಿ. ಬರ್ದುಗರಾದ್ದರಿಂದ ಆಗಾಗ ಪ್ರಶ್ನೆಗಳಿಂದಲೇ ಪೇಚು ಹಾಕುತ್ತಿದ್ದರು! ಕನ್ನಡ ಬಳಗ ಯು ಕೆದ ಪ್ರಾರಂಭ, ಮತ್ತು ಅದು ಹೇಗೆ ಅನಿವಾಸಿಯ ಹುಟ್ಟಿಗೆ ನಾಂದಿ ಹಾಡಿತು, ಅದರ ಪ್ರೇರಣೆ, ಬೆಳವಣಿಗೆ ಎಲ್ಲ ಚರ್ಚೆ ಮಾಡಿದೆವು. ಧನ್ಯಾವಾದಗಳೊಂದಿಗೆ ಸಂದರ್ಶನ ಮುಗಿಯಿತು. ರೆಕಾರ್ಡರ್ನಲ್ಲಿ ಹೇಗೆ ಮೂಡಿದೆ ಎಂದು ನೋಡುವಾ ಅಂತ ಉಮಾ ಅವರು ಕಂಪ್ಯೂಟರಿನಲ್ಲಿ ಹಾಕಿದರೆ ಏನೂ ಕೇಳಿಸವಲ್ಲದು. Blank, ಶೂನ್ಯ! ಹಾಂಡ್ ಸೆಟ್ ಸ್ವಿಚ್ ಆನ್ ಆಗಿರಲೇ ಇಲ್ಲ. ಸುಮ್ಮನೆ ಗಾಳಿಯ ಜೊತೆಗೆ ಮಾತಾಡಿದಂತೆ ಆಗಿತ್ತು! ದೀಪವಿಲ್ಲದೆ ಆರತಿಯಂತೆ. ’ತುಪ್ಪದ ಬತ್ತಿ ಹಚ್ಚಿ’ ಎರಡನೆಯ ಸಲ ಮತ್ತೆ ಸಂದರ್ಶನದ ಪುನರಾವೃತ್ತಿ. ಈ ಸಲ ರೆಕಾರ್ಡ್ ಆದದ್ದು ಖಚಿತ ಪಡಿಸಿಕೊಂಡು ಹೊರಬಿದ್ದೆ. ಹೋಗುವಾಗ ರೇಡಿಯೋ ಗಿರ್ಮಿಟ್ಟಿನ ಮೆಮೆಂಟೊ ಹಿಡಿದು de rigueur ಫೋಟೋ ತೆಗೆಸಿಕೊಂಡು ಅವಿಸ್ಮರಣೀಯ ಭೆಟ್ಟಿಗೆ, ಮತ್ತು ‘ಅನಿವಾಸಿ’ಯ ಬಗ್ಗೆ ಚರ್ಚೆ ಮಾಡಲು ಕೊಟ್ಟ ಅವಕಾಶಕ್ಕೆ ಧನ್ಯವಾದಗಳನ್ನರ್ಪಿಸಿ ಮರಳಿದೆ. ಏನೋ, ನನ್ನ ಕರ್ತವ್ಯ ಮಾಡಿದ ಸಮಾಧಾನ.

ಶ್ರೀವತ್ಸ ದೇಸಾಯಿ (ಲೇಖನ ಮತ್ತು ಫೋಟೋಗಳು)

ಕೃಪೆ: ರೇಡಿಯೋ ಗಿರ್ಮಿಟ, ಸರೋಜಿನಿ ಪಡಸಲಗಿ

 

 

22 thoughts on “ರೇಡಿಯೋ, ಗಿರ್ಮಿಟ್ ಮತ್ತು ಅನಿವಾಸಿ – ಶ್ರೀವತ್ಸ ದೇಸಾಯಿ ಬರೆದ ಲೇಖನ

  1. ನಿಮ್ಮ ಅನುಭವ ‌ಮತ್ತು ನೆನಪಿನಾಳದ ವಿಷಯಗಳನ್ನು ಸುಂದರವಾಗಿ ಓದುಗರ ಮುಂದಿಟ್ಟಿದ್ದೀರಿ. ಬೇಂದ್ರೆಯವರನ್ನು ಸ್ವತಃ ನೋಡಿದ್ದೀರಿ ಅನ್ನುವದನ್ನು ಕೇಳಿ ನೀವು ಪುಣ್ಯವಂತರು ಅಂದುಕೊಂಡೆ 😊 ಈ ಸಲವಾದರೂ ಇಂಡಿಯಾಕ್ಕೆ ಹೋದಾಗ ಬೇಂದ್ರೆಯವರ ಮನೆ ನೋಡಿಕೊಂಡು ಬರಬೇಕೆಂದು ಇದೆ…. ಕ್ರಿಸ್ಟಲ್ ರೇಡಿಯೋ ತಂತ್ರಜ್ಞಾನದ ಬಗ್ಗೆ ನಿಮಗೆ ಬಿಡುವಿದ್ದಾಗ ವಿವರವಾಗಿ ಬರೆದರೆ ಮಕ್ಕಳಿಗೆ ರಜಾದಿನಗಳಲ್ಲಿ ಒಂದು ಒಳ್ಳೆಯ ಪ್ರೊಜೆಕ್ಟ್ 😊

    Like

    • ಧನ್ಯವಾದಗಳು, ಅನಿತಾ ಅವರೇ. ದೊಡ್ಡವರ ಸರಳತೆಯನ್ನು ಕಂಡೇ ನಂಬಬೇಕು. ನಿಮಗೆ ಈಗಾಗಲೇ ಪ್ರತ್ಯೇಕವಾಗಿ ತಿಳಿಸಿದಂತೆ ಕ್ರಿಸ್ಟಲ್ ರೇಡಿಯೋ ಮಾಡುವ ವಿಧಾನದ ಬಗ್ಗೆ ಯೂ ಟ್ಯೂಬಿನಲ್ಲಿ ಮಾಹಿತಿ ಸಿಗುತ್ತವೆಅನಿವಾಸಿ ಓದುತ್ತಾ ಇರಿ, ಬರೆಯುತ್ತಾ ಬನ್ನಿ!

      Liked by 1 person

  2. ರೇಡಿಯೋ ಜೊತೆ ಬೆಳೆದವರಲ್ಲಿ ನಾನು ಒಬ್ಬ. ಬೆಳಗ್ಗೆ ಬರುತ್ತಿದ್ದ ವಾರ್ತೆಗಳು, ಭಾವಗೀತೆಗಳು, ಸಂಜೆ ಬರುತ್ತಿದ್ದ ಹಿಂದಿ ಹಾಡುಗಳು ಹವಾ ಮೆಹಲ್, ಮಧ್ಯ ಮಧ್ಯೆ ನಾವು ಕೇಳಿದ ಸಿನಿಮಾ ಹಾಡುಗಳು ಪಿಯಾನೋ, ಮುಂತಾದ ವಾದ್ಯಗಳಲ್ಲಿ ಹೊರಬಂದಾಗ ಇನ್ನಷ್ಷ್ಟು ಖುಷಿ. ಟಿವಿ ಬಂದಮೇಲೆ ಭಾರತದಲ್ಲಿ ರೇಡಿಯೋ ಸ್ವಲ್ಪ ಹಿಂದೆ ಸರಿದಿದೆ. ಇಂಗ್ಲೆಂಡಿನಲ್ಲಿ ನನ್ನ ರೇಡಿಯೋ ಆಸಕ್ತಿ ಕೆರಳಿಸಿದ್ದು ರೇಡಿಯೋ ೪ ಎನ್ನ ಬಹುದು . ಕೆಲಸಕ್ಕೆ ಡ್ರೈವ್ ಮಾಡುತ್ತಿರುವಾಗ, ಕೆಲಸದಿಂದ ಮತ್ತೆ ವಾಪಸ್ಸು ಬರುವಾಗ ರೇಡಿಯೋದಲ್ಲಿನ ವಾರ್ತೆ ಮತ್ತು ಚರ್ಚೆಗಳು ನನ್ನ ದಿನನಿತ್ಯ ಬದುಕಿನ ಅಂಗವಾಗಿದೆ. ಮುಂದೆ ನೋಡಬೇಕು.

    Like

  3. ರಾಮಮೂರ್ತಿಯವರೇ ನಮ್ಮ ತಂದೆಗೆ ಸಂಗೀತದ ಗೀಳು ಬಹಳ ಇತ್ತು.ಹೀಗಾಗಿ ಫಿಲಿಪ್ಸ್ ರೇಡಿಯೋ ಬಂದೇ ಬಿಟ್ಟಿತು ಅಂತ ಕಾಣ್ತದೆ.ನೀವೀಗ ಬೆಂಗಳೂರು ನಲ್ಲೇ ಇದ್ರೆ ಖಂಡಿತಾ ಬನ್ನಿ ನಮ್ಮನೆಗೆ.
    ಸರೋಜಿನಿ ಪಡಸಲಗಿ

    Like

  4. ಗೌರಿ ಪ್ರಸನ್ನ ಅವರು ಬರೆಯುತ್ತಾರೆ :
    ಕಣ್ಣಿಗೆ ಕಟ್ಟುವಂತಹ ವಣ೯ನೆ..ನೀವು ಬರೆದಿದ್ದನ್ನು ಓದುತ್ತ ಓದುತ್ತ ನಾನೂ ಗೋಪಾಳಪುರ ಮಾಳಮಡ್ಡಿಯ ಆ ಏರು-ಇಳಿವಿನ ರಸ್ತೆಯಲ್ಲಿ ಓಡಾಡಿಬಿಟ್ಟೆ..ನಮ್ಮ ನೆಂಟು ಶುರುವಾಗಿದ್ದೂ ಈ ರೇಡಿಯೋದಿಂದಲೇ ಅಲ್ಲವೇ?ಆ ಆಕಾಶವಾಣಿ ,ಬಾನುಲಿ ನೀವಂದಂತೆ ‘ಬಹುಜನ ಹಿತಾಯ ಬಹುಜನ ಸುಖಾಯ ‘ಕ್ಕೆ ತಕ್ಕಂತೆಯೇ ಇದ್ದವು.ನಿಮ್ಮ ಬಾಲ್ಯದ ರೇಡಿಯೋ ಹುಚ್ಚನ್ನು ನೀವು ಇಂದಿಗೂ ಜೀವಂತವಾಗಿಟ್ಟುಕೊಂಡಿರುವುದು ,ಹೊಸ ವಿಷಯಗಳ ಕಲಿಕೆಯ ಆಸಕ್ತಿ ,ಜೀವನೋತ್ಸಾಹ ,ಧನಾತ್ಮಕ ಚಿಂತನೆಗಳು ನಿಜಕ್ಕೂ ಪ್ರಶಂಸನೀಯ.’ಅನಿವಾಸಿ’ಯ ಸ್ಥೂಲ ಪರಿಚಯವನ್ನು ತುಂಬ ಸೂಕ್ಷ್ಮವಾಗಿ ಮಾಡಿಕೊಟ್ಟಿದ್ದೀರಿ….ಮೊದಲ ಸಲ ರೆಕಾಡೆ೯ ಆಗದೇ ಹೋದ ಫಜೀತಿಯನ್ನು ಓದಿ ‘ಆಕಾಶವಾಣಿಯ ಅವಘಡಗಳು’ಎಂದೇನೋ ಬಹಳ ಹಿಂದೆ ಪೇಪರ್ ನಲ್ಲಿ ಓದಿದ ಲೇಖನ ನೆನಪಾಗಿ ನಗು ಸುಳಿಯಿತು.ಮತ್ತೊಮ್ಮೆ ಪುನರಾವರ್ತಿತಸಬೇಕಾದಾಗಲೂ ತಾಳ್ಮೆಗೆಡದ ನಿಮ್ಮ ಸಹನೆ ಮೆಚ್ಚುವಂಥದು. ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂದಂತೆ ರೇಡಿಯೋ ಗಿರಮಿಟ್ ಗೆ ಅನಿವಾಸಿಯಿಂದಲೋ ಅಥವಾ ಅನಿವಾಸಿಗೆ ರೇಡಿಯೋ ಗಿರಮಿಟ್ ನಿಂದಲೋ ಅಲ್ಪಸ್ವಲ್ಪ ಪ್ರಯೋಜನವಾದರೆ ಅಷ್ಟೇ ಸಾಕು.ನನ್ನ ಹರಟೆಯನ್ನು ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು.’ನೂರು ಮತದ ಹೊಟ್ಟ ತೂರಿ ,ಎಲ್ಲ ತತ್ವದೆಲ್ಲೆ ಮೀರಿ ,ದಿಗ್ ದಿಗಂತವಾಗಿ ಏರಿ’ ಅನಿವಾಸಿ ಹಾಗೂ ಗಿರಮಿಟ್ ಗಳು ಬೆಳೆಯಲಿ ಎಂಬ ಹಾರೈಕೆಗಳು.

    Like

    • Ramsharan Lakshminarayan ಬರೆಯುತ್ತಾರೆ:
      ನಿಮ್ಮ ಮತ್ತು ರೇಡಿಯೋ ನಂಟು ಅಂದಿನ ಜಮಾನಾದ ಚಿಣ್ಣರಂತೇ ಆದರೂ ‘ಹೋಮ್ – ಮೇಡ್’ ಕ್ರಿಸ್ಟಲ್ ರೇಡಿಯೋ ಆ ಅನುಭವಕ್ಕೆ ಮುಕುಟವಿಟ್ಟOತಿದೆ.

      Like

      • ಧನ್ಯವಾದಗಳು, ರಾಮ್ ಶರಣ್ ಅವರೆ. ಬಾಲ್ಯದ ಚಿಕ್ಕ ಅನುಭವವೂ ಒಂದು ರೇಡಿಯೋ ಕಟ್ಟಿದ ಸಣ್ಣ ಸಾಧನೆಯೂ ಹಿಮಾಲಯ ಹತ್ತಿದಂತೆ. ಅದಕ್ಕೇ ನನ್ನ ಮನದಲ್ಲಿ ಅದು ಅಳವಾಗಿ ಹೂತು ಬಿಟ್ಟಿತ್ತು. ಆ ಅನುಭವವನ್ನು ಹಂಚ್ಕಿಕೊಳ್ಳಲು ಅವನಿರದಾಗ ಈ ಸಂದರ್ಭವೇ ಒದಗಿ ಬಂದಾಗ ಕಳೆದು ಹೋದ ಅಣ್ಣನಿಗೆ ಇದನ್ನು ಅರ್ಪಿಸಿ ಧನ್ಯನಾಗುವೆ!

        Like

    • ನಿಮ್ಮ ನಲ್ಮೆಯ ಮಾತುಗಳಿಗೆ ಆಭಾರಿ. ಆ ಕವಿವಾಣಿಯೆ ನಮ್ಮ ಧ್ಯೇಯವಾಕ್ಯ, ನಿಮ್ಮ ಆಶಯವೂ ಆತನ ಆಶೀರ್ವಾದದ ಚೇತನವಾಗಲಿ, ಅನಿವಾಸಿ, ಮತ್ತು ಆ ಬಾನುಲಿಗೂ!

      Like

  5. ವಾವ್! ಬಂದಿಳಿದರೆ ಏನು ಹೇಳಲಿ ಹೇಗೆ ಹೇಳಲಿ ಆ ಖುಷಿ!! ಖಂಡಿತಾ ಬನ್ನಿ.ಗಿರ್ಮೀಟ್ಟ ಜೊತೆ ಮಿರ್ಚಿ ನೂ ಮಾಡೋಣ.ಮಸ್ತ ಮಜಾ!
    ದಾರಿ ಕಾಯ್ತೀನಿ.
    ಸರೋಜಿನಿ ಪಡಸಲಗಿ

    Like

  6. ಕ್ರಿಸ್ಟಲ್ ರೇಡಿಯೋ ದಿಂದ ರೇಡಿಯೋ ಗಿರ್ಮೀಟ್ ವರೆಗಿನ ಪಯಣದ ಸುಂದರ ಕಥನದ ಛಂದದ ಮಾಹಿತಿ ಪೂರ್ಣ ಲೇಖನ ಶ್ರೀವತ್ಸ ದೇಸಾಯಿಯವರದು.ಹಿಂದು ಹಿಂದಿನ ನೆನಪುಗಳ ಬಡಿದೆಬ್ಬಿಸಿ ಒಂದು ಗಳಿಗೆ ಮುದ ತಂತು ಮನತುಂಬ.ನಾನು ಬಹುಶಃ ಎರಡನೇ ಕ್ಲಾಸ್ ನಲ್ಲಿ ದ್ದಾಗ ಬಿನಾಕಾ ಗೀತಮಾಲಾದಲ್ಲಿ ” ಬಂಬಯಿಕಾ ಬಾಬೂ ” ಚಿತ್ರದ ” ಮೈ ರಿಕ್ಷಾವಾಲಾ ಮೈ ರಿಕ್ಷಾವಾಲಾ. ಕಂಹಾ ಚಲೋಗೆ ಬಾಬು ಕಂಹಾ ಚಲೋಗೆ ಲಾಲಾ……” ಇದು ಸರ್ತಾಜ್ ಗೀತೆ.ಕೊನೆಗೆ ಬರೋದು ‌‌‌ನಂಗೆ ಸಣ್ಣಗೆ ತೂಕಡಿಕೆ, ಅಲ್ಲೇ ರೇಡಿಯೋ ಮುಂದೆನೇ.ನಮ್ಮಲ್ಲಿ ಆಗ ಹೊಸ ಫಿಲಿಪ್ಸ್ ರೇಡಿಯೋ ಬಂದಿತ್ತು.ನಮ್ಮಣ್ಣನೂ ನನ್ನ ಜೊತೆನೇ ರೇಡಿಯೋ ಮುಂದೇ.ಬಡಿದೆಬ್ಬಿಸೋನು ‘ ಏಳೇ ನಿದ್ದೆಬಡಿಕಿ .ಮೈ ರಿಕ್ಷಾವಾಲಾ … ಬಂತು” ಅಂತ.ಧಡಬಡಿಸೆದ್ದು ಆ ಹಾಡು ಕೇಳಿನೇ ಮಲಗೋದು.ಆ ಸುಂದರ ನೆನಪು ನನಗೀಗ ಗಿರ್ಮಿಟ್ ತಿಂದ ಸವಿ ಅನುಭವವೇ ಕೊಟ್ಟಿತು ಎಂದರೆ ಅತಿಶಯೋಕ್ತಿಯಲ್ಲ.ಕೂಲಂಕೂಷವಾಗಿ, ಎಳೆ ಎಳೆಯಾಗಿ ಬಿಡಿಸಿ ಮಾಹಿತಿ ಒದಗಿಸುವ ಲೇಖನ ನೀಡುವುದು ಶ್ರೀವತ್ಸ ದೇಸಾಯಿಯವರ ವೈಶಿಷ್ಟ್ಯ ಅನಕೋತೀನಿ.ಇಂತಹ ಬರಹ ನೀಡಿದ್ದಕ್ಕೆ ಧನ್ಯವಾದಗಳು.
    ಇನ್ನೊಂದು ವಿಷಯ ಇಲ್ಲಿ ಈಗ.ಅನಿವಾಸಿ ಬಳಗಕ್ಕೆ ನನ್ನ ಸ್ನೇಹದೌತಣದ ಆಮಂತ್ರಣ.ಎಲ್ರೂ ಬನ್ನಿ ಬೆಂಗಳೂರು ಗೆ.ನನ್ನಲ್ಲೇ ಹುಳಿ ಸಿಹಿ ರುಚಿ ರುಚಿಯಾದ ಗಿರ್ಮಿಟ್ ಪಾರ್ಟಿ ಮಾಡೋಣ.ಏನಂತೀರಿ?
    ಸರೋಜಿನಿ ಪಡಸಲಗಿ

    Like

    • ಸರೋಜಿನಿ ಅವರೇ ನಿಮ್ಮ ಮನೆಯಲ್ಲಿ ಫಿಲಿಪ್ಸ್ ರೇಡಿಯೋ ಇತ್ತು ಅಂದರೆ ನೀವು ತುಂಬಾ ಅನಕೂಲಸ್ತ ಮನೆಯವರು ಇರಬೇಕು! ಕ್ರಿಸ್ಟಲ್ ರೇಡಿಯೋ ನಿಮಗೆ ಗೊತ್ತಿರುವುದಿಲ್ಲ. ಅದು ನಮ್ಮಂತ ಸ್ವಲ್ಪ ಹಳೆ ಜೆನರೇಷನ್ ನವರದ್ದು
      ಬೆಂಗಳೂರಿನಲ್ಲಿದ್ದೀರಾ?ಈಗ ನಾವು ಸಹ ಇಲ್ಲಿ ಇದ್ದೇವೆ ಮುಂದಿನ ತಿಂಗಳು ವಾಪಸ್ಸು.

      Like

    • ‘ಮೈ ಗಿರ್ಮಿಟ್ ವಾಲಿ ‘ ಯವರ ಸ್ನೇಹದೌತಣಕ್ಕೆ ಅನಿವಾಸಿಯವರೆಲ್ಲರೂ ತಯಾರಾಗಿದ್ದಾರೆ! ಬಂದಿಳಿದಾರು ಒಂದು ದಿನ! ಲೇಖನ ಎಬ್ಬಿಸಿದ ಅಲೆಗಳಿಂದ ಎದ್ದ ಸುಂದರ ಅನುಭವಗಳನ್ನೂ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

      Like

  7. ದೇಸಾಯಿಯವರ ಈ ಲೇಖನ ನನ್ನನ್ನು ಧಾರವಾಡಕ್ಕೆ ಕರೆದುಕೊಂಡು ಹೋಯಿತು. ಧಾರವಾಡದಲ್ಲಿ ಕೂತು ಗಿರ್ಮಿಟ್ ತಿಂದು ಧಾರವಾಡದ ಆಕಾಶವಾಣಿ ಕೇಳಿದಂತಾಯಿತು. ದೇಸಾಯಿಯವರ ಸೂಕ್ಷ್ಮ ವಿಶ್ಲೇಷಣೆ, ಅವರು ಕೊಡುವ ಚಿಕ್ಕಚಿಕ್ಕ ವಿವರಣೆಗಳು ಓದಲು ಮುದ ನೀಡುತ್ತವೆ. ಸ್ವಲ್ಪವೇ ಸಮಯದಲ್ಲಿ ರೇಡಿಯೋ ಗಿರ್ಮಿಟ್ ನಮ್ಮೆಲ್ಲರ ಅಚ್ಚುಮೆಚ್ಚಿನ ಕನ್ನಡ ರೇಡಿಯೋ ಆಗಿದೆ. ಪ್ರಮೋದ್ ಅವರು ಅನಿವಾಸಿ ಜೊತೆ ನಂಟನ್ನು ಬೆಳೆಸಿರುವುದು ನಮಗೆ ಇನ್ನೂ ಸಂತೋಷ ತಂದಿದೆ. ದೇಸಾಯಿಯವರ ಕೂಸು ಅನಿವಾಸಿ ಬೆಳೆದು ಹೆಮ್ಮರವಾಗಿ ಬೆಳೆಯಲಿ. ರೇಡಿಯೋ ಗಿರ್ಮಿಟ್ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ತರಲಿ.

    ಕೇಶವ

    Like

    • ಕೇಶವ ಅವರ ಸುಂದರವಾದ ಕಮೆಂಟಿಗೆ ಮತ್ತು ಕಳಕಳಿಯ ಆಶಯಕ್ಕೆ ಧನ್ಯವಾದಗಳು. ಇಲ್ಲಿ ಸಹ ನಿಮ್ಮನ್ನೊಳಗೊಂಡು ‘ಕೂಸಿಗೆ’ (ನನ್ನೊಬ್ಬನದೇ ಅಲ್ಲ!) ನೀರೆರದ ಹಲವಾರು ಅನಿವಾಸಿಗಳನ್ನು ನೆನೆಯಬೇಕಲ್ಲವೆ? ಅದಕ್ಕೆ ಗಿರ್ಮಿಟ ತಿನ್ನಿಸುವ ವಯಸ್ಸಿನ ತನಕ ‘ಪಾಲಿಸಿದವರೆಲ್ಲರಿಗೂ’ ಕೈಮುಗಿಯುವೆ.

      Like

  8. I really enjoyed reading Dr Desai’s article … The flutter of his heart as he walks on the familiar road outside the Pavamana apartments .. and especially reminiscing the great poets of Karnataka ಬೆಟಗೇರಿ ಶರ್ಮ , ಬೇಂದ್ರೆ, ಆಲೂರು ವೆಂಕಟರಾಯರು, ಶಂ ಭಾ ಜೋಷಿ, ಚೆನ್ನವೀರ ಕಣವಿ, ಕೆ ಕೃಷ್ಣಮೂರ್ತಿ who walked on those roads was all so interesting. Desai has done a great job taking time to go to Radio Girmit station and talking about ANIVASI and its wonderful efforts to publish stories and perspectives of writers living in England. I am really tempted to go to Dharwar now !

    Like

  9. ಆತ್ಮೀಯವೆನಿಸುವ ನೆನಪುಗಳನ್ನು, ಮುದಗೊಳಿಸುವ ಮಾಹಿತಿಗಳನ್ನು ಹೊತ್ತ ಬರಹ.
    ಉಮಾ ಮತ್ತು ಗೌರಿಯವರದು ಅತ್ಯಂತ ಮಧುರವಾದ ಧ್ವನಿಗಳು. ಪ್ರಮೋದ್ ಅವರ ಆಶಯಗಳಿಗೊಂದು ದೊಡ್ಡ ಪರಾಕು.
    ಬೇಲ್ ಪುರಿ ತಿಂದಿದ್ದರೂ ಮುಂದಿನ ಭಾರಿ ಧಾರವಾಡಕ್ಕೆ ಹೋದಾಗ ಗಿರ್ಮಿಟ್ ಮೆದ್ದೇ ಬರಬೇಕು, ಮಿರ್ಚಿಯ ಜೊತೆಗೆ. ಇಂತ ಚಳಿಯ ದಿನಕ್ಕೊಂದು ಬೆಚ್ಚಗಿನ ಬರಹ !

    Liked by 1 person

    • ಧನ್ಯವಾದಗಳು, ಪ್ರೇಮಲತಾ ಅವರೆ. ಅಂಥ ಚಳಿಯೇನೂ ಬರಲಿಲ್ಲ, ಆದರೆ ತಿನ್ನುವ ಚಪಲ ಬಿಟ್ಟಿಲ್ಲ! ಈಗತಾನೆ ಬೆಂಗಳೂರಿನವರೊಬ್ಬರು ನಮ್ಮೆಲ್ಲರಿಗೂ ಅಲ್ಲೇ ಗಿರ್ಮಿಟ ತಿನ್ನಿಸಲು ಕಾಯುತ್ತಿದ್ದಾರೆ ಅಂತ ಕಾಣುತ್ತದೆ. ಆದರೆ ಧಾರವಾಡದ ಲಾಭವೆಂದರೆ ಕಚೇರಿಗೂ ಭೇಟಿಕೊಡಬಹುದು!

      Like

  10. ರಾಮಮೂರ್ತಿಯವರೇ,
    ನಾವಿಬ್ಬರೂ ಒಂದೇ ತರಂಗಾಂತರದಲ್ಲಿದ್ದೇವೆ! ಅದೇ ಕ್ರಿಸ್ಟಲ್ ವೇವ್ಸ್ ಮೇಲೆ ತೇಲಿದವರು! ‘ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು’ ಅಂದರು ಬಸವಣ್ಣ. ಸ್ಫಟಿಕದ ಮೇಲೆ ಕೇಳಲೂ ಬಹುದೆಂದು ಆತನಿಗೆ ಗೊತ್ತಿರಲಿಕ್ಕಿಲ್ಲ! ನಾವಿಬ್ಬರೂ ನಂತರ R4 ಗೆ ‘graduate’ ಆದವರು. ಅಪರೂಪದ ‘ಕ್ರಿಸ್ಟಲ್ ಕ್ಲಬ್’ ದವರು . ನಿಮ್ಮಿಂದ ಈ ಪ್ರತಿಕ್ರಿಯೆ ಓದಿ ಖುಷಿಯಾಯಿತು. ರೇಡಿಯೋ ಗಿರ್ಮಿಟ್ ಇಂಟರ್ನೆಟ್ ನಲ್ಲಿ ಪ್ರಸಾರವಾಗುವ ಇನ್ನೂ ಹೊಸ ರೇಡಿಯೋ. ೨೪/೭ ಪ್ರಸಾರ. ಅದು ಇನ್ನೂ ಬೆಳೆಯಬೇಕು. ಆಪ್ ನಲ್ಲಿ ಅಥವಾ ಲೇಖನದಲ್ಲಿಯ URLದಲ್ಲಿ ಕೇಳಬಹುದು. ಸಂದರ್ಶನ ಪ್ರಸಾರವಾಗಿಹೋಗಿದೆ. ಅದರ ಧ್ವನಿಮುದ್ರಿಕೆಯನ್ನು. ಲೇಖನದಲ್ಲೇ embed ಮಾಡಿ ಇದೆಯಲ್ಲ, ಕ್ಲಿಕ್ ಮಾಡಿ ಸೌನ್ಡ್ ಕ್ಲೌಡ್ ‘ ನಲ್ಲಿ ಕೇಳಬಹುದು.

    Like

  11. ತುಂಬಾ ಸೊಗಸಾದ ಲೇಖನ.. ಓದಿ ಸಂತೋಷ ಆಯ್ತು.. ಧನ್ಯವಾದಗಳು

    On Fri 28 Feb, 2020, 8:09 AM ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ, wrote:

    > shrivatsadesai posted: ” ಶ್ರೀವತ್ಸ ದೇಸಾಯಿ ‘ಅನಿವಾಸಿ’ ಯ ಕ್ರಿಯಾಶೀಲ ಬರಹಗಾರರೂ
    > ಮತ್ತು ಪೋಷಕರೊಬ್ಬರಲ್ಲಾಗಿರುವ ಶ್ರೀವತ್ಸ ದೇಸಾಯಿಯವರು, ಇತ್ತೀಚಿಗೆ ಧಾರವಾಡಕ್ಕೆ ಪ್ರವಾಸ
    > ಹೋಗಿದ್ದರು. ಅಲ್ಲಿರುವ ರೇಡಿಯೋ ಗಿರ್ಮಿಟ್ ಕಚೇರಿಗೆ ಭೇಟಿಯಾಗುವ ಮತ್ತು ಸಂದರ್ಶನವೊಂದನ್ನು
    > ನೀಡುವ ಅವಕಾಶ ಒದಗಿ ಬಂದಾಗ ಅವರು ‘ಅನಿವಾಸಿಯ’ ಧ್ವಜವನ್ನು ಹಾರ”
    >

    Like

  12. ನಿಮ್ಮಹಾಗೆ ನಾನು ಈ ಕ್ರಿಸ್ಟಲ್ ರೇಡಿಯೋ ಮಾಡಿ ಕೇಳಿದ್ದೆ ನಮ್ಮ ಮನೆಯಲ್ಲ್ಲೂ ರೇಡಿಯೋ ಇರಲಿಲ್ಲ ಪಕ್ಕದಮನೆಯಲ್ಲಿ ರೇಡಿಯೋನಲ್ಲಿ ಬಿನಾಕಾ ಗೀತ್ ಮಾಲಾ ಮತ್ತು ಕ್ರಿಕೆಟ್ ಕಮೆಂಟ್ರಿ ಕೇಳುವ ಹುಚ್ಚು . ಇಲ್ಲಿಗೆ ಬಂದ ಮೇಲೆ ಬಿ ಬಿ ಸಿ ರೇಡಿಯೋ ೨, ಟೆರ್ರಿ ವೊಗನ್ ಮತ್ತು ಜಿಮ್ಮಿ ಯಾಂಗ್ ತಪ್ಪದೆ ಡ್ರೈವ್ ಮಾಡುವಾಗ ನಂತರ ರೇಡಿಯೋ ೪ ನಿಮ್ಮಹಾಗೆ “ರಾಟ್ ವೈಲರ್” ನ ಪ್ರೇಮಿ. ಅವರ ಕಠಿಣ ವಾದ
    ಇಂಟರ್ವ್ಯೂ ಬಿ ಬಿ ಸಿ ನ ಡೈರೆಕ್ಟರ್ ಜನರಲ್ ನ ಜೊತೆ ನಡೆದಿದ್ದು ನನಗೆ ನೆನಪಿದೆ. ನಂತರ ಡಿ ಜಿ ರಾಜೀನಾಮೆ ಕೊಟ್ಟರು. ಬಿ ಬಿ ಸಿ ಬಿಟ್ಟು ಇನ್ನೆಲ್ಲೂ ಇದುನಡೆಯುವುದು ಸಾಧ್ಯವಿಲ್ಲ
    ಕ್ಯಮಿಸಿ ನಾನು ಇನ್ನೂ ಗಿರ್ಮಿಟ್ ರೇಡಿಯೋ ಕೇಳಿಲ್ಲ. ನಿಮ್ಮ ಇಂಟರ್ವ್ಯೂ ಪ್ರಸಾರ ಯಾವಾಗ?
    ಮುಂದಿನ ತಿಂಗಳು ೨೮ ಭೇಟಿ ಆಗೋಣ
    ರಾಮಮೂರ್ತಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.