ದೇವರನಾಡು, ಕಲೆಗಳ ಬೀಡು ಕೇರಳ – ಅರ್ಪಿತ ರಾವ್

ಅರ್ಪಿತ  ರಾವ್

ಅರ್ಪಿತ  ರಾವ್  ಹುಟ್ಟಿ ಬೆಳೆದಿದ್ದು ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೊದಲಿನಿಂದ ಹಸಿರು ತುಂಬಿದ ಕಾಡು , ಧೋ ಎಂದು ಸುರಿಯುವ ಮಳೆ ನೋಡಿ ಅದೇನೋ ಕವನ ಗೀಚುವ , ಕಥೆ ಬರೆಯುವ ಹುಮ್ಮಸ್ಸು ಇದಕ್ಕೆ ಸಾಥ್ ನೀಡಿದ್ದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದ್ದು ಪತ್ರಕರ್ತರಾದ  ಇವರ ಅಪ್ಪ . ಕನಸನ್ನು ನನಸಾಗಿಸಿದ್ದು ಉಜಿರೆಯ ಪತ್ರಿಕೋದ್ಯಮ ವಿಭಾಗ. ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ಶಿಪ್ , ದೂರದರ್ಶನದಲ್ಲಿ ಸ್ವಲ್ಪ ದಿನಗಳ ವೃತ್ತಿ.

ಮದುವೆಯಾಗಿ ಬಂದಿದ್ದು ಲಂಡನ್ ಗೆ. ಕಳೆದ ೮ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ವಾಸ. ಆಕ್ಸಫರ್ಡ್ ನ ಬ್ಯಾನ್ಬರಿಯಲ್ಲಿ  ಪ್ರಸ್ತುತ ವಾಸ. ವಿಜಯ ನೆಕ್ಸ್ಟ್ , ವಿಜಯಕರ್ನಾಟಕ, ಸಖಿ ಪಾಕ್ಷಿಕ ,ಉದಯವಾಣಿ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ ಸಾಕಷ್ಟು ಲೇಖನಗಳು ಪ್ರಕಟಗೊಂಡಿವೆ. ಬೇಸರ ಕಳೆಯಲು ಗೀಚುವ, ಕೆಲವೊಮ್ಮೆ ಪ್ರಕಟಗೊಂಡ ಲೇಖನಗಳನ್ನು  ಇವರದೇ ಸ್ವಂತ ಬ್ಲಾಗ್ http://ibb ani-ibbani.blogspot.co.uk/ ಇಲ್ಲಿ ಓದಬಹುದು.  ಜಾನಪದ ಗೀತೆಗಳನ್ನು ಹಾಡುವುದು, ಹೊಸ ರುಚಿ ಮಾಡುವುದು ಹವ್ಯಾಸ. ಪ್ರಸ್ತುತ ರಿಟೇಲ್ ವಿಭಾಗದಲ್ಲಿ ಉದ್ಯಮದಲ್ಲಿರುವ ಅರ್ಪಿತ ಅನಿವಾಸಿಯಲ್ಲಿ ಹಲವು ನೆನಪುಗಳನ್ನು ಈ ಹಿಂದೆ ಹಂಚಿಕೊಂಡಿದ್ದಾರೆ. ಈ ವಾರ ಅನಿವಾಸಿಯಲ್ಲಿ ‘ಗಾಡ್ಸ್ ಓನ್ ಕಂಟ್ರಿ’ ಎಂದು ಕರೆಯಲ್ಪಡುವ ಕೇರಳದ ಕುರಿತಾದ ಒಂದು ಪ್ರವಾಸ ಕಥನವನ್ನು ಬರೆದಿದ್ದಾರೆ. ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.(ಸಂ)

ಗಾಡ್ಸ್ ಓನ್ ಕಂಟ್ರಿ

ಕಳೆದ ಬಾರಿ ಯುನೈಟೆಡ್ ಕಿಂಗಡಮ್  ಇಂದ ಭಾರತಕ್ಕೆ ಭೇಟಿ ನೀಡಿದಾಗ ಹೊರದೇಶಗಳನ್ನೆಲ್ಲಾ ಆಗಾಗ ಸುತ್ತುವ ನಾವು ನಮ್ಮ ದೇಶದ ಅಲ್ಲೇ ಹತ್ತಿರದಲ್ಲೇ ಇರುವ ವಿದೇಶಿಗರೆಲ್ಲ ವರ್ಷಪೂರ್ತಿ ಬಂದು ನೋಡುವ ಮತ್ತು ಕೊಂಡಾಡುವ ಕೇರಳಕ್ಕೆ ಹೋಗಬೇಕು ಎಂದು ನಿರ್ಧರಿಸಿ, ಅದರಂತೆ ಒಂದು ವಾರದ ಮಟ್ಟಿಗೆ ನಮ್ಮ ಕುಟುಂಬ ಕೇರಳಕ್ಕೆ ಪ್ರಯಾಣ ಬೆಳೆಸಿದ್ದೆವು. ಅದರ ಬಗ್ಗೆ ಹಂಚಿಕೊಳ್ಳದಿದ್ದಲ್ಲಿ ಏನೋ ಒಂದು ರೀತಿಯ ವಿಷಾದತೆ ಕೊನೆಯವರೆಗೂ ಉಳಿದುಬಿಡಬಹುದು ಎಂದು ಇಲ್ಲಿ ನಮ್ಮ ಕೇರಳದ ಪ್ರವಾಸದ ಬಗ್ಗೆ  ಹಂಚಿಕೊಳ್ಳಲು ಈ ಬರಹ.  ನಮ್ಮ ಪ್ರವಾಸ ಒಂದು ವಾರದ ಮಟ್ಟಿಗಾದ್ದರಿಂದ ಆದಷ್ಟು ಕೇರಳದ ಉತ್ತರ ಭಾಗದ ಪ್ರಸಿದ್ಧ ಸ್ಥಳಗಳನ್ನು ನೋಡಿ ಬರಬೇಕು ಎಂದು ಮೊದಲೇ ತಯಾರಿ ನಡೆಸಿದ್ದೆವು. ಅದಕ್ಕಾಗಿ ಏನೆಲ್ಲಾ ಅವಶ್ಯಕತೆ ಇದೆ ಮತ್ತು ಜೊತೆಗೆ ಮೂರು ವರ್ಷದ ಮಗನೂ ಇರುವುದರಿಂದ ಅವನ ಸಂತೋಷಕ್ಕಾಗಿ ಕೂಡ ಏನೆಲ್ಲಾ ಮಾಡಬಹದು ಎಲ್ಲೆಲ್ಲಾ ಸುತ್ತಬಹುದು ಹೀಗೆ ಎಲ್ಲಾ ರೀತಿಯ ಪಟ್ಟಿ ಬೆಳೆಯುತ್ತಲೇ ಹೋಗಿತ್ತು.

ಹಾಗೆ ನಾವು ಒಂದು ವಾರದಲ್ಲಿ ನೋಡಲು ನಿರ್ಧರಿಸಿದ್ದು ಕೊಚ್ಚಿ , ಎರ್ನಾಕುಲಂ ತಾಲೂಕಿನಲ್ಲಿರುವ ಅಲ್ಲೆಪ್ಪಿ , ಅಂಬಾಲಾಪುರ , ಕುಮಾರಕೋಮ್ ಜೊತೆಗೆ ಹಿಂತಿರುಗಿ ಬರುವಾಗ ಮುನ್ನಾರ್ ಮೂಲಕ ಸೇಲಂ ತಲುಪಿ ಬೆಂಗಳೂರು ಸೇರಿಕೊಳ್ಳುವುದು. ಮೊದಲು ನಾವು ಹೊರಟಿದ್ದು ಬೆಂಗಳೂರಿನಿಂದ ಪಾಲಕ್ಕಾಡ್ ಹಾದು ಕೊಚ್ಚಿಯನ್ನು ತಲುಪುವುದು.  ಕಾರಿನಲ್ಲಿ ಸುಮಾರು ಏಳು ತಾಸಿನ ಪ್ರಯಾಣವಾದ್ದರಿಂದ ಬೆಳಗಿನ ಜಾವ ಐದು ಗಂಟೆಗೆಲ್ಲ ಮನೆಯಿಂದ ಹೊರಬಿದ್ದಿದ್ದೆವು.  ಹಾಗೆ ದಾರಿಯಲ್ಲಿ ಹೋಗುವಾಗ ಸಿಗುವ ಶಿವಳ್ಳಿಯಲ್ಲಿ ಬೆಳಗಿನ ರುಚಿಕರವಾದ ತಿಂಡಿಯನ್ನು ಸವಿದು ಪಾಲಕ್ಕಾಡ್ ಕೋಟೆ ತಲುಪುವಷ್ಟರಲ್ಲಿ ಮಟಮಟ ಮಧ್ಯಾನ್ಹ ಒಂದು ಗಂಟೆ . 

ಪಾಲಕ್ಕಾಡ್ ಕೋಟೆ

ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಧಗೆ. ಆದರೆ ಅಲ್ಲಿ ಹೋಗಿ ನೋಡಿದರೆ ಕೋಟೆಯ ಸುತ್ತಲೂ ನೀರು ಒಳಗೆ ಹಸಿರು ಜೊತೆಗೆ ಅಲ್ಲಲ್ಲಿ ಕುಳಿತುಕೊಳ್ಳಲು ನೆರಳು ನೀಡುವ ದೊಡ್ಡ ಆಲದ ಮರಗಳು ಪ್ರಯಾಣದ ಆಯಾಸವನ್ನೇ ಮರೆಸಿ ಹೊಸ ಸ್ಥಳವನ್ನು ನೋಡಬೇಕೆಂಬ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದ್ದವು. ಸುತ್ತಲೂ ನೀರಿನ ಕೊಳ  ಒಳಗೆ ಹೋದರೆ ಎಲ್ಲೆಡೆ ಹಸಿರು ಜೊತೆಗೆ ಈ ಕೋಟೆಯ ಪ್ರವೇಶ ದ್ವಾರದಲ್ಲಿ ಹನುಮಂತನ ದೇವಾಲಯ ಕೂಡ ಇರುವುದು ವಿಶೇಷ. ಪುರಾತನ ಕಾಲದಿಂದಲೂ ಇದ್ದ ಈ ಕೋಟೆ ಹೈದರಾಲಿಯ ಕಾಲದಲ್ಲಿ ಪುನರ್ನಿರ್ಮಾಣ ಪಡೆಯಿತು ಎನ್ನಲಾಗಿದೆ. ಈ ಕೋಟೆಯ ಒಳಭಾಗದಲ್ಲೇ ಮಕ್ಕಳ ಆಡುವ ಸ್ಥಳ ಮತ್ತು ಪಾರ್ಕ್  , ಕ್ರಿಕೆಟ್ ಮೈದಾನ ಮತ್ತು ರಪ್ಪಾಡಿ ಎಂದು ಕರೆಯಲ್ಪಡುವ ಆಡಿಟೋರಿಯಂ ಕೂಡ ಕಂಡುಬರುತ್ತದೆ. 

ಸುಮಾರು ಒಂದು ಗಂಟೆ ಸಮಯದಲ್ಲಿ ಕೋಟೆಯನ್ನು ನೋಡಿ ಅಲ್ಲಿಂದ ನಮ್ಮ ಪ್ರಯಾಣ ನಾವು ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಿದ್ದ ಹೋಮ್ ಸ್ಟೇ ಗೆ.  ಕೇರಳದ ಹೋಮ್ ಸ್ಟೇ ಒಂದು ವಿಶೇಷ ಅನುಭವ ಅಲ್ಲಿನ ರುಚಿರುಚಿಯಾದ ಖಾದ್ಯಗಳನ್ನು ತಿನ್ನಬೇಕೆಂದರೆ ಹೋಟೆಲ್ ಕ್ಕಿಂತ ಹೋಂ ಸ್ಟೇ ಒಳ್ಳೆಯದು ಜೊತೆಗೆ ಪ್ರಕೃತಿಯ ಮಡಿಲಲ್ಲೇ ಸಮಯ ಕಳೆಯಬಹುದಾದ್ದರಿಂದ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ನಾವು ಎರ್ನಾಕುಲಂ  ತಾಲೂಕಿನ ಕೊಚ್ಚಿ ಯಿಂದ ಸುಮಾರು ಅರ್ಧ ಗಂಟೆ ಪ್ರಯಾಣದಲ್ಲಿರುವ ಕಿತೋ ಸ್ ಹೋಂ ಸ್ಟೇ ನಲ್ಲಿ ಉಳಿದುಕೊಂಡಿದ್ದೆವು, ಒಂದು ಸಣ್ಣ ಕುಟುಂಬ ಉಳಿದುಕೊಳ್ಳಲು ಬೇಕಾಗುವ ಎಲ್ಲಾ ವ್ಯಯಸ್ಥೆಯನ್ನು ಒಂದೇ ಪ್ರತ್ಯೇಕ ಮನೆಯ ರೀತಿಯಲ್ಲಿ ಮಾಡಿಟ್ಟು, ಇರುವಷ್ಟು ದಿನವೂ ಬೆಳಗಿನ ಉಪಹಾರ ಮತ್ತು ಊಟದ ವ್ಯವಸ್ಥೆ  ಮಾಡಲಾಗಿತ್ತು. ಆ ದಿನ ರಾತ್ರಿ ಕೇರಳ ಶೈಲಿಯ ಶುದ್ಧ ಸಸ್ಯಾಹಾರಿ ಊಟ ಸವಿದು ಮಲಗಿ ಬೆಳಗ್ಗೆ ಆರು ಗಂಟೆಗೆಲ್ಲ ಏಳುವಾಗ ಪ್ರಯಾಣದ ಸುಸ್ತು ಸ್ವಲ್ಪವೂ ಕಾಣಿಸಿಕೊಳ್ಳದಂತೆ ಮಾಯವಾಗಿತ್ತು. ಬೆಳಗ್ಗಿನ ತಿಂಡಿಗೆ ಕೇರಳದ ಶೈಲಿಯ ಕ್ಯಾರೆಟ್ ಪುಟ್ಟು , ಅದರ ರುಚಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಪ್ಪಟ ಮಲೆಯಾಳಿ ಮನೆಯಲ್ಲಿಯೇ ತಿಂದು ನೋಡಬೇಕು ಅಷ್ಟು ಅದ್ಬುತವಾದ ತಿಂಡಿ ಅದು .  ಅದೊಂದೇ ಅಲ್ಲ ಇದ್ದ ಒಂದು ವಾರವೆಲ್ಲ ತಾರಾನುವಾರಿ ಅಡುಗೆ ಕೊಡುತ್ತಿದ್ದರು ಅದರ ಬಗ್ಗೆ ಪ್ರತ್ಯೇಕವಾಗಿ ಒಂದು ಸರಣಿಯನ್ನೇ ಬರೆದುಬಿಡಬಹುದು ಅಷ್ಟು ಅದ್ಬುತ. ನಂತರ ನಾವು ನಮ್ಮ ಪ್ರಯಾಣವನ್ನು ಆ ದಿನ  ತಯಾರಾಗಿ ಕುಮಾರಕೋಮ್ ನೋಡಲು ಹೊರಟೆವು.

ಕುಮಾರಕೊಂ

ಕೇರಳದ ಪ್ರವಾಸ ಕೈಗೊಳ್ಳುವವರಾರೂ ಕುಮಾರಕೋಮ್ ಅನ್ನು ತಪ್ಪಿಸುವುದೇ ಇಲ್ಲ.  ಅಷ್ಟು ಜಗತ್ಪ್ರಸಿದ್ದಿ ಪಡೆದ ಸ್ಥಳವಿದು. ಕೊಚ್ಚಿ ಯಿಂದ ಎರ್ನಾಕುಲಂ ತಲುಪುತ್ತಿದ್ದಂತೆ ಕೇರಳದ ಹಳ್ಳಿಯ ಸೊಗಡನ್ನು ನೋಡಲು ಪ್ರಾರಂಭಿಸಿದ್ದೆವಾದರೂ ಕುಮಾರಕೋಮ್ ಹೋಗಿ ತಲುಪಿದಾಗಲೇ ನಮಗೆ ಹಳ್ಳಿಯ ನಿಜವಾದ ಅಂದ ಗೋಚರಿಸಿದ್ದು.   ದಾರಿಯಲ್ಲಿ ಸಿಗುವ ಎಳನೀರು ಮತ್ತು ಕಬ್ಬಿನ ಹಾಲನ್ನು ಅಲ್ಲಲ್ಲಿ ಸವಿದು ಹೊರೆಟೆವಾದರೂ ಇನ್ನಷ್ಟು ತಂಪಿನ ಅವಶ್ಯಕತೆ ಇತ್ತು /ಡಿಸೆಂಬರ್ ತಿಂಗಳಾದರೂ ಕೂಡ ಕೇರಳದಲ್ಲಿ ಸುಮಾರು ಮೂವತ್ತು ಡಿಗ್ರಿ ಸೆಲ್ಸಿಯಸ್ ಅಷ್ಟು ಉಷ್ಣಾಂಶವಿತ್ತು, ಆದರೆ ಕುಮಾರ ಕೋಮ್ ಹಳ್ಳಿಯಲ್ಲಿರುವ ವೆಂಬನಾಡ್ ಲೇಕ್ ಗೆ ಪ್ರವೇಶಿಸುತ್ತಿದ್ದಂತೆ ತಂಪು ತಂಗಾಳಿ. 

ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಿ ಆನಂದಿಸಲು ವಿದೇಶಿಗರೂ ಕೂಡ ಹಾತೊರೆಯುತ್ತಾರೆ.  ನಾವು ಹೋದ ಸಮಯದಲ್ಲಿ ಅಲ್ಲಿ ಕಂಡವರಲ್ಲಿ ಹೆಚ್ಚಿನವರೆಲ್ಲ ವಿದೇಶಿಗರೇ ಆಗಿದ್ದರು, ಸೆಪ್ಟೆಂಬರ್ ತಿಂಗಳಿನಲ್ಲಿ ಬಂದ ನೆರೆಯ ಹಾವಳಿಯಿಂದ  ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದಾಗಿಯೂ ಪ್ರತಿ ವರ್ಷ ಡಿಸೆಂಬರ್ ಕ್ರಿಸ್ಮಸ್ ರಜಾ ದಿನಗಳಲ್ಲಿ ವಿದೇಶಿಗರು ದಂಡೆದ್ದು ಬಂದು ಹದಿನೈದು ದಿನ ಬೋಟ್ ಹೌಸಿಂಗ್ ನಲ್ಲಿ ಬೀಡು ಬಿಟ್ಟು ಎಂಜಾಯ್ ಮಾಡಿ ಹೋಗುತ್ತಿದ್ದರು ಆದರೆ ಈ ವರ್ಷ ಪ್ರತಿಭಾರಿಯಂತೆ ಪ್ರವಾಸಿಗರು ಇಲ್ಲದಿರುವುದು ಆರ್ಥಿಕವಾಗಿ ಸಾಕಷ್ಟು ಪೆಟ್ಟು ಎಂದು  ನಮ್ಮನ್ನು ಬೋಟಿಂಗ್ ಗೆ ಕರೆದುಕೊಂಡು ಹೋದ ಕೇರಳದ ನಾವಿಕ ಅವಲತ್ತುಕೊಂಡ. ಬೆಳಗಿನ ಸಮಯವಾದ್ದರಿಂದ ಸೂರ್ಯನ ಎಳೆ ಬಿಸಿಲು ಮೈಮೇಲೆ ಬೀಳುತ್ತಿತ್ತು, ಸುತ್ತಾಲೂ ಮೀನುಗಾರರ ಮನೆಗಳು , ಅದರಾಚೆಗೆ ಹಸಿರು ತುಂಬಿ ಕಂಗೊಳುಸವ ಗದ್ದೆ ಅಲ್ಲೇ ಸಾಕಷ್ಟು ತೆಂಗಿನ ಮರಗಳು , ದೋಣಿ ಮುಂದೆ ಮುಂದೆ ಸಾಗುತ್ತಿದ್ದಂತೆ ಇಂತಹ ವಿಸ್ಮಯ ಈ ಪ್ರಕೃತಿ ಎಂಬ ಅಚ್ಚರಿ ನಮ್ಮೆಲ್ಲರ ಕಣ್ಣಲ್ಲಿ. ನನ್ನ ಮೂರು ವರ್ಷದ ಮಗನಂತು ನಾವೆಲ್ಲಿ ಬಂದು ಬಿಟ್ಟಿದೇವೆ ಎಂದು ಕಣ್ಣು ಮುಚ್ಚದೇ ಎಡಬಿಡದೇ ನೋಡುತ್ತಿದ್ದ ಆಗಾಗ ಬರುವ ಬಾತುಕೋಳಿಗಳು ಮತ್ತು ಮೀನುಗಳು ಅವನಿಗೆ ಇನ್ನಷ್ಟು ಸಂತೋಷ ನೀಡುತ್ತಿತ್ತು. ಅವುಗಳನ್ನು ಎಣಿಸುವ ಪ್ರಯತ್ನ ಮಾಡಿ ಮಾಡಿ ಸೋಲುತ್ತಿದ್ದ. ಅವನ ಸಂತೋಷ ನೋಡಿ ನಮಗೂ ಭಾರತದಲ್ಲೇ ಇರುವ ಇಂತಹ ವಿಸ್ಮಯ ಲೋಕವನ್ನು ನೋಡಿದ್ದು ಸಾರ್ಥಕ ಎನಿಸುತ್ತಿತ್ತು. ವೆಂಬನಾಡ್ ಲೇಕ್ ನಲ್ಲಿ ಒಂದು ಸುತ್ತು ಹಾಕಿಕೊಂಡು ಮೊದಲಿರುವ ಸ್ಥಳಕ್ಕೆ ಬರಲು ನಾಲ್ಕು ಗಂಟೆ ಬೇಕಾಯಿತು ಮತ್ತು ಆ ನಾಲ್ಕು ಗಂಟೆ ಎಷ್ಟು ಅದ್ಬುತವಾಗಿತ್ತೆಂದರೆ ಪ್ರಕೃತಿಯ ಮಡಿಲಲ್ಲೇ ಇರುವ ಅಲ್ಲಿನ ಜನರು ಎಷ್ಟು ಅದೃಷ್ಟವಂತರು ಎಂದೆನಿಸಿತು. 

ವೆಂಬನಾಡ್ ಬ್ಯಾಕ್ ವಾಟರ್ ನ ತಪ್ಪಲಿನಲ್ಲಿ ಪಕ್ಷಿಧಾಮವೂ ಇದ್ದು ಇಲ್ಲಿ ಬೇರೆಬೇರೆ ರೀತಿಯ ಹಕ್ಕಿಗಳು ಬರುತ್ತವೆ ಎನ್ನಲಾಗುತ್ತದೆ ಮತ್ತು ಇದು ಪಕ್ಷಿ ಪ್ರೇಮಿಗಳಿಗೊಂದು ಸದಾವಕಾಶ ಕೂಡ. ಕೊಟ್ಟಾಯಂ ಜಿಲ್ಲೆಗೆ ಸೇರಿರುವ ಈ ಪಕ್ಷಿಧಾಮದಲ್ಲಿ ಪ್ರತಿವರ್ಷ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ ಎನ್ನಲಾಗುತ್ತದೆ.  

ಫೋರ್ಟ್ ಕೊಚ್ಚಿ

ಅದಾಗಲೇ ಮೂರನೇ ದಿನವಾದ್ದರಿಂದ ಸ್ವಲ್ಪ ತಡವಾಗಿ ತಯಾರಾಗಿ ನಾವು ಹೊರಟಿದ್ದು ಕೊಚ್ಚಿ ಫೋರ್ಟ್ ಭಾಗಕ್ಕೆ.  ಇದು ಒಂದು ನಗರ ಹಿಂದಿನ ದಿನ ನೋಡಿದ ಸಂಪೂರ್ಣ ಪ್ರಕೃತಿಯ ಮಡಿಲಿನಲ್ಲಿರುವ ಹಳ್ಳಿಗಿಂತ ಇದು ಭಿನ್ನವಾಗಿದೆ.  ಅಲ್ಲೇ ಇರುವ ಮಟನ್ ಚರಿ ವಸ್ತು ಸಂಗ್ರಹಾಲಯ ಮತ್ತಿತರ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಸುಂದರವಾದ ಹೋಟೆಲ್ ಒಂದರಲ್ಲಿ ಊಟ ಮಾಡಿ ದಿನವಿಡೀ ಅರಬ್ಬೀ ಸಮುದ್ರದ ಸೊಬಗನ್ನು ನೋಡಿದೆವು, ಹದಿನಾಲ್ಕನೇ ಶತಮಾನದಲ್ಲಿ ಚೀನಿಗರು ಇಲ್ಲಿ ಬಂದಾಗ ಇದು ಚೀನಾ ದೇಶದಂತೆ ಕಂಡು ಬಂದದ್ದರಿಂದ ಆ ಪ್ರದೇಶಕ್ಕೆ ಕೋ ಚಿನ್ ಎಂಬ ಹೆಸರನ್ನು ಇಡಲಾಗಿದೆ ಎಂದು ಇಲ್ಲಿನ ವಸ್ತು ಸಂಗ್ರಹಾಲಯದ ಹೊರಭಾಗದಲ್ಲಿ ತಿಳಿಸಲಾಗಿದೆ. ಹಾಗೆಯೇ ಈ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಹೆಸರುವಾಸಿಯಾಗಿದ್ದು ಚೈನೀಸ್ ಫಿಶಿಂಗ್ ನೆಟ್ ಇಲ್ಲಿನ ಪ್ರವಾಸಿ ಪ್ರಸಿದ್ಧಿಗೆ ಕಾರಣವಾಗಿದೆ. 

ಫೋರ್ಟ್ ಕೊಚಿನ್ ಬ್ರಿಟೀಷ್ , ಡಚ್ ಮತ್ತು ಪೋರ್ಚುಗೀಸರು ಬಂದು ನೆಲೆಸಿದ್ದ ಪ್ರದೇಶವಾಗಿದ್ದರಿಂದ ಇಲ್ಲಿ ಇವರ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು. ಅದಲ್ಲದೆ ಶಾಪಿಂಗ್ ಮಾಡಲು ಇದು ಉತ್ತಮ ಸ್ಥಳವಾದ್ದರಿಂದ ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿ ಕೇರಳ ಶೈಲಿಯ ಬಟ್ಟೆಗಳು ಮತ್ತಿತರ ನೆನಪಿನಲ್ಲಿಟ್ಟುಕೊಳ್ಳಬಹುದಾದ ವಸ್ತುಗಳನ್ನು ಕೊಳ್ಳುತ್ತಾರೆ. 

ಇಲ್ಲಿನ ಸುತ್ತಾಟ ಮತ್ತು ಶಾಪಿಂಗ್ ಮುಗಿಸಿ ನಾವು ಹೋಂ ಸ್ಟೇ ಕಡೆಗೆ ತೆರಳುವಾಗ ರಾತ್ರಿಯಾಗಿತ್ತು. ಅದು ಕ್ರಿಸ್ಮಸ್ ಸಮಯವಾದ್ದರಿಂದ ರಸ್ತೆ ಇಕ್ಕೆಲಗಳಲ್ಲಿ ಸಾಲಾಗಿ ಎಲ್ಲೆಡೆ ವಿವಿಧ ರೀತಿಯ ದೀಪಗಳಿಂದ ಅಲಂಕರಿಸಿದ್ದರು.  ಅದನ್ನು ಕಣ್ಣು ತುಂಬಿಸಿಕೊಳ್ಳುವದೇ ಒಂದು ಸಂತೋಷ. ಹಾಗೆಯೇ ಅಲ್ಲಲ್ಲಿ ಮಕ್ಕಳು ಸಂತಾ ಕ್ಲಾಸನಂತೆ ವೇಷ ಧರಿಸಿ ಮನೆ ಮನೆಗಳಿಗೆ ಹೋಗಿ ನೃತ್ಯ ಮಾಡಿ ಬರುವುದನ್ನು ನೋಡಿದೆವು.  ಇಡೀ ಕೊಚಿನ್ ನಗರ ಕ್ರಿಸ್ಮಸ್ ಸಮಯದಲ್ಲಿ ದೀಪಗಳಿಂದ ಜಗಮಗಿಸುತ್ತಿತ್ತು.  ಆ ಸಮಯದಲ್ಲೇ ಕೇರಳಕ್ಕೆ ಹೋದದ್ದು ನಮ್ಮ ಪ್ರವಾಸದ ಮೆರಗನ್ನು ಇನ್ನಷ್ಟು ಹೆಚ್ಚಿಸಿತು. 

ಫೋಕ್ಲೋರ್ ಮ್ಯೂಸಿಯಂ

ನಮ್ಮ ನಾಲ್ಕನೆಯ ದಿನ ಮೊದಲು ನಾವು ಕೇರಳದ ಫೋಕ್ಲೋರ್ ಮ್ಯೂಸಿಯಂ (ಕೇರಳ ಜಾನಪದ ವಸ್ತುಸಂಗ್ರಹಾಲಯ) ಕ್ಕೆ ಹೋದೆವು.  ಸುಮಾರು ಒಂದು ಗಂಟೆ ಕಳೆಯಬಹುದಾದ ಸ್ಥಳ. ಕೇರಳದ ಜಾನಪದ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಏಕೆ ಪ್ರಪಂಚದಾದ್ಯಂತ ಹೆಸರಿದೆ. ಕೇರಳದ ಸಂಸ್ಕೃತಿಯನ್ನು ವಿಸದೇಶಿಗರು ಕೂಡ ಮೆಚ್ಚಿ ಹೊಗಳುತ್ತಾರೆ. ಎರ್ನಾಕುಲಂ ನಿಂದ ಸ್ವಲ್ಪ ಹೊರಭಾಗದಲ್ಲಿ ಕೊಚ್ಚಿ ಗೆ ತಾಗಿಕೊಂಡಂತೆ ಇರುವ ಈ ವಸ್ತು ಸಂಗ್ರಹಾಲಯದಲ್ಲಿ ಸಾವಿರ ವರ್ಷಗಳ ಹಿಂದಿನಿಂದ ಬಳಸಲಾದ ಕೇರಳ ಮತ್ತು ಕರ್ನಾಟಕದ ಇಂದು ಮರೆಯಾಲಾಗುತ್ತಿರುವ ಕೆಲವು ವಿಶೇಷ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. 

ಕೇರಳದ ವಾಸ್ತುಶಿಲ್ಪಗಳು ಕಲ್ಲು ಮತ್ತು ಮರದ ಕಲಾಕೃತಿಗಳು, ನಶಿಸಿ ಹೋಗುತ್ತಿರುವ ಕೆಲವು ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳು, ಕಲಾಚಿತ್ರಗಳು, ಆಭರಣ ಮತ್ತು ಮರದ ಪಾತ್ರೆಗಳು ಹೀಗೆ ವಿಭಿನ್ನ ರೀತಿಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಸಂಗ್ರಹಿಸಿ ಇಟ್ಟಿರುವುದು ವಿಶೇಷ.  ಸಂಶೋಧಕರು , ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಒಲವಿರುವ ಪ್ರವಾಸಿಗರು ಖಂಡಿತ ಇಲ್ಲಿ ಭೇಟಿ ನೀಡಲೇ ಬೇಕು. 

ಮ್ಯೂಸಿಯಂ ಅನ್ನು ಮುಗಿಸಿ ಅಲ್ಲೇ ಹತ್ತಿರದಲ್ಲಿರುವ ಸಂಪ್ರದಾಯ ಶೈಲಿಯ ಹೋಟೆಲ್ ಒಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನಂತರ ನಾವು ಬೀಚ್  ಕಡೆಗೆ ಹೊರಟೆವು. ಸಮುದ್ರದ ತಟದಲ್ಲೇ ಇರುವ ಕೇರಳಕ್ಕೆ ಹೋಗಿ ಬೀಚಿಗೆ ಹೋಗದಿದ್ದರೆ ಆದೀತೆ ? ಇಡೀ ಎರನಾಕುಲಮ್ ತಾಲೂಕಿನಲ್ಲಿ ಸಾಕಷ್ಟು ಬೀಚುಗಳಿವೆ ಆದರೆ ಸ್ವಲ್ಪ ಜನಸಂದಣಿ ಇಲ್ಲದ ಬೀಚ್ ಗೆ ಭೇಟಿ ನೀಡಿದರೆ ಸ್ವಚ್ಛವಾಗಿಯೂ ಇರುತ್ತದೆ ಮತ್ತು ಮನಬಂದಂತೆ ಸಮಯ ಕಳೆಯಬಹುದು , ಹಾಗಾಗಿಯೇ ನಾವು ನಮ್ಮ ಹೋಮ್ ಸ್ಟೇ ಗೆ ಸಮೀಪವಿದ್ದ ಕುಂಬಲಂಗಿ ಬೀಚ್ ಗೆ ಹೋದೆವು. ನಮ್ಮ ಮೂರು ವರ್ಷದ ಮಗನಿಗೆ ಅದೇ ಮೊದಲ ಬಾರಿ ಬೀಚ್ ನೋಡಿದ್ದರಿಂದ ಅಲ್ಲಿನ ಸೂರ್ಯಾಸ್ತವನ್ನು ನೋಡಿ ಸಂತೋಷಕ್ಕೆ ಎಲ್ಲೆ ಇಲ್ಲದಂತೆ ಆಡುತ್ತಿದ್ದ. ನಮ್ಮ ಜೀವನದ ಮರೆಯಲಾರದ ದಿನಕ್ಕೆ ಮತ್ತೊಂದು ಪುಟ ಸೇರಿಕೊಂಡಿತ್ತು.

ಅಲೆಪ್ಪಿ ಅಥವಾ ಅಲಪುರ 

ಕೇರಳ ಪ್ರವಾಸಿಗರ ಪ್ರಾಮುಖ ಸ್ಥಳ ಅಲೆಪ್ಪಿ, ಪ್ರವಾಸಿಗರ ದಂಡು ಯಾವಾಗಲೂ ನೆರೆಯುವ ಬ್ಯುಸಿ ಸ್ಥಳವಿದು. ಅಲ್ಲೆಪ್ಪಿ ಬ್ಯಾಕ್ ವಾಟರ್ ಮತ್ತು ಬೋಟ್ ಸ್ಟೇ ಗೆ ಹೆಸರುವಾಸಿ. ಬೇಕಿದ್ದಲ್ಲಿ ಇಡೀ ರಾತ್ರಿ ಬೋಟ್ ನಲ್ಲೇ ಉಳಿದುಕೊಂಡು ಪ್ರಕೃತಿಯ ಸೊಗಡನ್ನು ಅನುಭವಿಸುವ ಅವಕಾಶವಿಲ್ಲಿದೆ.  ಅದಲ್ಲದೆ ಗಂಟೆ ಗೆ ನಿಗಧಿಪಡಿಸಿದ ದರ ಪಾವತಿಸಿ ಕೂಡ ಬೋಟ್ ನಲ್ಲಿ ಸಮಯ ಕಳೆಯಬಹುದು,  ಇಲ್ಲಿ ಶಿಖಾರ ಬೋಟ್ ಬಹಳ ಬೇಡಿಕೆಯಲ್ಲಿರುತ್ತದೆ.  ನಾವು ಸುಮಾರು ನಾಲ್ಕು ಗಂಟೆಗಳ ಕಾಲ ಶಿಖಾರ ಬೋಟ್ ನಲ್ಲಿ ಪ್ರಯಾಣ ಮಾಡಿ ಹಸಿರು , ಹಕ್ಕಿಗಳ ಚಿಲಿಪಿಲಿ, ತೆಂಗಿನ ಮರಗಳ ಸಾಲು , ಕಣ್ಣು ಕೋರೈಸುವ ಗದ್ದೆ , ಇವುಗಳ ಮಧ್ಯದಲ್ಲೇ ಇರುವ ಮೀನುಗಾರರ ಮನೆ ಅಲ್ಲಲ್ಲಿ ಎದುರಲ್ಲೇ ಮೀನು ಬೇಯಿಸಿಕೊಡುವ ವರ್ತಕರು, ಸೂರ್ಯನ ಹಳದಿ , ಕೆಂಪು ಕಿರಣಗಳು , ಬಾತು ಕೋಳಿ ಗಳು ಮತ್ತು ಆಗಾಗ ಬಂದು ಹೋಗುವ ಮೀನುಗಳು , ವಿದೇಶಿ ಪ್ರವಾಸಿಗರು , ಮಗನ ಮುಗಿಯದ ಪ್ರಶ್ನೆಗಳು ಹೇಗೆ ನಾಲ್ಕು ಗಂಟೆಯಲ್ಲಿ ಮರೆಯಲಾಗದ ಅನುಭವ ಪಡೆದೆವು. ಅಲಪ್ಪಿಯ ಸಮೀಪದಲ್ಲಿರುವ ಪುನ್ನಮಾಡ ಕೆರೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಬೋಟ್ ರೇಸ್ ಪ್ರಸಿದ್ಧಿ ಪಡೆದಿದೆ. 

ಕೇರಳದ ಸಂಸ್ಕೃತಿಯನ್ನು ನೋಡಬೇಕೆಂದರೆ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಲೇ ಬೇಕು ಆದ್ದರಿಂದ ನಾವು ಅಲೆಪ್ಪಿಯಿಂದ ಅಂಬಲಾಪುರದ ಶ್ರೀ ಕೃಷ್ಣ ದೇವಾಲಯಕ್ಕೆ ಹೋದೆವು , ಇಲ್ಲಿನ ಕೃಷ್ಣ ಮಠದ ಹಾಲು ಪಾಯಸ ಜನ ಮೆಚ್ಚುಗೆ ಪಡೆದಿದ್ದು ಇದನ್ನು ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತು ಕಾಯುತ್ತಾರೆ. ದೇವಸ್ಥಾನದ ಹೊರಭಾಗದಲ್ಲಿ ಆನೆ ಕೂಡ ಇದೆ ಜೊತೆಗೆ ಕೊಳ. ಉಡುಪಿಯ ಶ್ರೀ ಕೃಷ್ಣ ಮಠ ಕ್ಕೆ ಸ್ವಲ್ಪ ಹೋಲಿಕೆಯಲ್ಲಿರುವ ಹಂಚಿನ ಮನೆ ಮತ್ತು ಮರದಿಂದ ಮಾಡಿದ ಕೇರಳ ಮಾದರಿಯ ದೇವಸ್ಥಾನ ಇದಾಗಿದ್ದು ಸಾವಿರಾರು ಭಕ್ತರು ಪ್ರತಿದಿನ ಇಲ್ಲಿ ಬಂದು ಭಕ್ತಿ ಸಲ್ಲಿಸಿ ಹೋಗುತ್ತಾರೆ. 

ಸಂಜೆ ನಾವು ನಮ್ಮ ಹೋಂ ಸ್ಟೇ ಗೆ ಹಿಂತಿರುಗುವಾಗ ರಸ್ತೆಯ ಬದಿಯಲ್ಲಿಯೇ ಇರುವ ಮುಳ್ಳಕ್ಕಲ್ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದೆವು. ನಗಾರಿ , ಚಂಡೆ ಗಳ ವಾಧ್ಯಗಳಿಂದ ಜೊತೆಗೆ ಹೆಂಗಳೆಯರ ಭಜನೆಗಳಿಂದ ದೇವಸ್ಥಾನದ ಪೂಜೆಗೊಂದು ವಿಶೇಷ ಕಳೆ ಬಂದಿತ್ತು. ಕೇರಳದ ದೇವಸ್ಥಾನದಲ್ಲಿ ನಡೆಯುವ ಪೂಜೆಯನ್ನು ನೋಡಿದರೆ ಮೈ ರೋಮಾಂಚಗೊಳ್ಳುತ್ತದೆ. ಇಡೀ ದೇವಸ್ಥಾನವನ್ನು ಹೂವು ಮತ್ತು ಹಣತೆಯಲ್ಲಿ ಹಚ್ಚಿದ ಎಣ್ಣೆಯ ದೀಪದಿಂದ ಕೇರಳ ಶೈಲಿಯಲ್ಲಿ ಅಲಂಕರಿಸಿದ್ದರು.  ಸುಮಾರು ಒಂದು ಗಂಟೆ ನಡೆದ ಪೂಜೆಗೆ ನೂರಾರು ಜನರು ಆಗಮಿಸಿದ್ದರು. ಕೇರಳದ ಕ್ರಿಸ್ಮಸ್ ಅಲಂಕಾರವನ್ನು ನೋಡಿದ ನಮಗೆ ಹಿಂದೂಗಳ ದೇವಾಲಯದ ಅಲಂಕಾರ ಮತ್ತು ಪೂಜೆ ಕೂಡ ನೋಡುವ ಅವಕಾಶ ಸಿಕ್ಕಿದ್ದು ಸಂತೋಷವನ್ನು ನೀಡಿತ್ತು.  ಕೇರಳಕ್ಕೆ ಹೋದ ಪ್ರತಿಯೊಬ್ಬ ಪ್ರವಾಸಿಗನೂ ಕೂಡ ಇಲ್ಲಿಯ ದೇವಾಲಯಗಳಲ್ಲಿ ನಡೆಯುವ ಸಂಸ್ಕೃತಿಯ ಶೀಮಂತಿಕೆಯನ್ನು ಎತ್ತಿ ಸಾರುವ ಪೂಜೆಯನ್ನು, ಅಲಂಕಾರವನ್ನು ನೋಡಲೇಬೇಕು. 

ಎಡಪಳ್ಳಿ ಚರ್ಚ್

ಸೈನ್ಟ್ ಜಾರ್ಜ್ ಚರ್ಚ್ ಏಷ್ಯಾದ ಮೊದಲ ಸ್ಥಾನದಲ್ಲಿರುವ ಅತಿ ದೊಡ್ಡ ಚರ್ಚ್ ಆಗಿದ್ದು ಇದು ಎಡಪಳ್ಳಿ  ಚರ್ಚ್ ಎಂದೇ ಪ್ರಸಿದ್ಧವಾಗಿದೆ. ಈ ಚರ್ಚಿಗೆ ಹದಿನಾಲ್ಕನೇ ಶತಮಾನದ ಇತಿಹಾಸವಿದ್ದು ಇಂದು ಇದು ಅತಿ ಹೆಚ್ಚು ಪ್ರವಾಸಿಗರನ್ನು ಹೊಂದಿದ ಕ್ರೈಸ್ತ ಯಾತ್ರಾ ಸ್ಥಳವಾಗಿದೆ.  ಎಡಪಲ್ಲಿಯಲ್ಲಿ  ಎರಡು ವಿಶೇಷವಾದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳಗಳಿವೆ ಅದರಲ್ಲಿ ಎಡಪಳ್ಳಿ  ಚರ್ಚ್ ಒಂದಾದರೆ ಇನ್ನೊಂದು ಲುಲು ಇಂಟರ್ನ್ಯಾಷನಲ್ ಮಾಲ್ .  ಲುಲು ಮಾಲ್ ಭಾರತದ ಅತಿ ದೊಡ್ಡ ಮಾಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ.  ಇಲ್ಲಿ ಬರುವ ಪ್ರವಾಸಿಗರು ಈ ಮಾಲ್ ನಲ್ಲಿ ಶಾಪಿಂಗ್ ಮಾಡದೆ ಹಿಂತಿರುಗುವುದೇ ಇಲ್ಲ.  ಕೇರಳಕ್ಕೆ ಹೋದವರು ಈ ಚರ್ಚ್ ಮತ್ತು ಮಾಲ್ ಇವೆರಡನ್ನೂ ಭೇಟಿ ನೀಡಲೇಬೇಕು. ಲುಲು ಮಾಲ್ ನಿಂದ ಈ ಚರ್ಚ್  ಕಾರಿನಲ್ಲಿ ಕೇವಲ ಐದು ನಿಮಿಷ.  ನಾವು ಬೆಳಗ್ಗಿನಿಂದ ಶಾಪಿಂಗ್ , ಊಟ ಎಲ್ಲವನ್ನೂ ಮುಗಿಸಿ ಎಡಪಳ್ಳಿ ಚರ್ಚ್ ಗೆ ಹೋದಾಗ ಮುಸ್ಸಂಜೆ ಹೊತ್ತು. ಆ ದಿನ ಡಿಸೆಂಬರ್ ೨೪ , ಮಾರನೆಯ ದಿನವೇ ಕ್ರಿಸ್ಮಸ್ . ಸಂಜೆಯಾಗುತ್ತಿದ್ದಂತೆ ಜಗ ಬೆಳಗುವಷ್ಟು ಡೀಪದ ಅಲಂಕಾರ ಒಮ್ಮೆಲೇ ಹೊತ್ತಿಕೊಂಡಿತು. ಅದನ್ನು ನೋಡಲು ಕಣ್ಣುಗಳೆರಡೂ ಸಾಲದು , ನಿಮಿಷಕ್ಕೊಂದು ಬಣ್ಣಕ್ಕೆ ಬದ ಲಾಗುತ್ತಿದ್ದ  ಲೈಟಿಂಗ್ಸ್ ನ ಅಲಂಕಾರವನ್ನು ಇಂಗ್ಲೆಂಡ್ ನಲ್ಲಿ  ಕಳೆದ ಏಳು ವರ್ಷವಿದ್ದರೂ ಎಲ್ಲೂ ಕಂಡಿರಲಿಲ್ಲ. ಸಾವಿರಾರು ಜನರು ಆ ದಿನ ಚರ್ಚಿನಲ್ಲಿ ಬಂದು ಪೂಜೆ ನಡೆಸಿಕೊಂಡು ಹೋಗುತ್ತಿದ್ದರು.  ಪ್ರತಿ ವರ್ಷ ಇಲ್ಲಿ ಕ್ರಿಸ್ಮಸ್ ದಿನಂದ ಹಿಂದಿನ ದಿನ ಪಾದ್ರಿಗಳ ಪ್ರವಚನವಿರುತ್ತದೆ.  ಆ ಪ್ರವಚನದ ಸರಿಯಾದ ಸಮಯಕ್ಕೆ ನಾವು ಚರ್ಚ್ ನ ಒಳಭಾಗಕ್ಕೆ ಹೋದೆವು . ಪ್ರವಚನ ಮಲೆಯಾಳಿ ಭಾಷೆಯಾದ್ದರಿಂದ ಏನೂ ಅರ್ಥವಾಗದಿದ್ದರೂ ಚರ್ಚಿನಲ್ಲೊಂದು ಗಾಂಭೀರ್ಯತೆ, ಭಕ್ತಿ, ಶಾಂತ ವಾತಾವರಣವಿತ್ತು. ಅಲ್ಲಿ ಕುಳಿತಷ್ಟು ಸಮಯ ಮನಸ್ಸಿಗೆ ನೆಮ್ಮದಿ ಇಲ್ಲಿ ಬಂದದ್ದು ಸಾರ್ಥಕ ಎನ್ನಿಸುವಷ್ಟು ಆನಂದವಾಗಿತ್ತು. ಅದೆಲ್ಲಕ್ಕಿಂತ ಡಿಸೆಂಬರ್ ನ ಕ್ರಿಸ್ಮಸ್ ಸಮಯದಲ್ಲಿ ಕೇರಳಕ್ಕೆ ಬರುವ ನಮ್ಮ ಯೋಜನೆ ಸರಿಯಾಗಿತ್ತು ಇಲ್ಲದಿದ್ದಲ್ಲಿ ಇವೆಲ್ಲವನ್ನೂ ನೋಡಲಾಗುತ್ತಿರಲಿಲ್ಲ ಎನಿಸಿತು. ಆ ದಿನ ಹೋಂ ಸ್ಟೇ ಯಲ್ಲಿ ಕೊನೆಯ ದಿನ ಮರುದಿನ ನಾವು ಮುನ್ನಾರ್ ಮಾರ್ಗವಾಗಿ ಬೆಂಗಳೂರಿಗೆ ತೆರಳುವವರಿದ್ದೆವು ಆದ್ದರಿಂದ ಬೇಗ ತಲುಪಿ ವಿಶ್ರಮಿಸಿದೆವು. ಮರುದಿನ ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಮುನ್ನಾರ್ ಗೆ ಹೋರಾಟ ನಮಗೆ ಕಣ್ಣಮಾಳಿ ಸುತ್ತಮುತ್ತಲಿರುವ ಬೆಳಗಿನ ಚುಮುಚುಮು ಚಳಿಯಲ್ಲಿಯ ಪ್ರಕೃತಿಯ ಅದ್ಭುತವನ್ನು ನೋಡುವ ಅವಕಾಶ ಸಿಕ್ಕಿತ್ತು. ಕೇರಳದ ಬಹುತೇಕ ಭಾಗಗಳಲ್ಲಿ ರಸ್ತೆಯ ಅಕ್ಕ ಪಕ್ಕ ಸಂಪೂರ್ಣ ನೀರಿನಿಂದ ತುಂಬಿದ್ದು ಮಧ್ಯ ರಸ್ತೆ ಇದೆ. ಇಕ್ಕೆಲಗಳಲ್ಲಿ ರಸ್ತೆಯ ಮಟ್ಟಕ್ಕೆ ಬರುವ ನೀರು ಜೊತೆಗೆ ತೆಂಗಿನ ಮರಗಳು , ಮೀನುಗಾರರು ಹಾಸಿರುವ ಮೀನಿನ ಬಲೆ . 

ಬೆಳಗಿನ  ಎಳೆ ಬಿಸಿಲು , ಸೂರ್ಯನ ಕಿರಣಗಳು , ಹಕ್ಕಿರಗಳ ಕಲರವ ಬಹಳ ಪ್ರಶಾಂತವಾತಾವರಣ ಅದಾಗಿತ್ತು. ಕೊಚ್ಚಿಯಿಂದ ಮುನ್ನಾರ್ ಅನ್ನು ತಲುಪಲು ಕನಿಷ್ಠ ನಾಲ್ಕರಿಂದ ಐದು ಗಂಟೆಗಳು ಬೇಕು. ದಾರಿ ಮಧ್ಯದಲ್ಲಿ ಅತಿರಪಲ್ಲಿ ವಾಟರ್ ಫಾಲ್ಸ್ , ಚೀಯಪ್ಪರ ಜಲಪಾತ , ವಾಲಾರ ಜಲಪಾತವನ್ನು ನೋಡಿದೆವು , ಇವೆಲ್ಲ ರಸ್ತೆ ಬದಿಯ ಜಲಪಾತಗಳಾದ್ದರಿಂದ ಎಲ್ಲ ಕಡೆಗಳಲ್ಲಿಯೂ ಕಾರಿನಿಂದ ಇಳಿಯಲೇ ಬೇಕು ಎನ್ನುವುದಿರಲಿಲ್ಲ ಕುಳಿತಲ್ಲಿಯೇ ನೋಡಬಹುದಾದ ಜಲಪಾತಗಳು.  ಸುಮಾರು ಹನ್ನೆರಡು ಗಂಟೆಗೆಲ್ಲ ಮುನ್ನಾರ್ ತಲುಪಿ ಹೋಟೆಲ್ ಒಂದರಲ್ಲಿ ಮದ್ಯಾನ್ಹದ ಊಟ ಮಾಡಿ ಎರವಿಕುಲಂ ನ್ಯಾಷನಲ್ ಪಾರ್ಕ್  ತಲುಪಿದೆವು ಸಂಪೂರ್ಣ ಹಚ್ಚ ಹಸಿರು ಬಣ್ಣದ ಟೀ ಪ್ಲಾಂಟೇಷನ್ ಗಳು ಕಣ್ಣು ಕೋರೈಸುತ್ತಿತ್ತು . ಸುಂದರವಾದ ಭಾವಚಿತ್ರ ತೆಗೆಸಿಕೊಳ್ಳಲು  ಇದು ಸರಿಯಾದ ಸ್ಥಳ. ಸ್ವಲ್ಪ ಚಳಿ ಇರುತ್ತದಾದ್ದರಿಂದ ಸ್ವೇಟರ್ ಅಥವಾ ಬೆಚ್ಚಗಿನ ಶಾಲನ್ನು  ಹೋಗುವುದು ಉತ್ತಮ. ಮುನ್ನಾರ್ ಟೀ ಪ್ಲಾಂಟೇಷನ್ ಆದ್ದರಿಂದ ಕಾರಿನಲ್ಲಿ ಪ್ರಯಾಣಿಸುವಾಗ ಮುನ್ನಾರಿನಿಂದ ಬಂಡೀಪುರ  ಅಲ್ಲಿಂದ ಅಣ್ಣ ಮುಡಿ  ಮಾರ್ಗವಾಗಿ ಮರುದಿನ ಬೆಳಗ್ಗಿನ ಜಾವ ಐದು ಗಂಟೆಗೆ ಬೆಂಗಳೂರನ್ನು ತಲುಪಿದೆವು. 

ಒಂದು ವಾರದ ಪ್ರವಾಸ ಮುಗಿಸಿ ಮನೆ ತಲುಪಿದಾಗ ಕೇರಳವನ್ನು ದೇವರ ನಾಡು ಎಂದು ಕರೆಯುವುದರಲ್ಲಿ ಅತಿಶಯೋಕ್ತಿ ಇಲ್ಲ ಎಂಬ ಭಾವನೆ. ಅದೆಷ್ಟು ಸುಂದರ ಮತ್ತು ವಿಸ್ಮಯವಾದ ಪ್ರಕೃತಿ ನಮ್ಮ ದೇಶದಲ್ಲಿ ಹೇರಳವಾಗಿದೆ ಎಂಬುದಕ್ಕೆ ಹೆಮ್ಮೆ. ಇಂಗ್ಲೆಂಡ್ ಗೆ ಹಿಂತಿರುಗಿದ ನಂತರವೂ ಆಫೀಸಿನಲ್ಲಿ ವಿದೇಶಿಗರಿಗೆ ಭಾರತದ ಕೇರಳಕ್ಕೆ ಒಮ್ಮೆ ಭೇಟಿ ನೀಡಿ ಎಂದು ಹೆಮ್ಮೆಯಿಂದ ಸಲಹೆ ಕೊಡುತ್ತಿರುತ್ತೇನೆ.

10 thoughts on “ದೇವರನಾಡು, ಕಲೆಗಳ ಬೀಡು ಕೇರಳ – ಅರ್ಪಿತ ರಾವ್

  1. ಅರ್ಪಿತಾರವರೆ, ನಾನು ನನ್ನ ಮದುವೆಯ ನ೦ತರ ತ್ರಿವೆ೦ಡ್ರಮ್ ನಲ್ಲಿ ಕೆಲ ತಿ೦ಗಳು ಕಳೆದಿದ್ದರೂ, ನೀವು ಬರೆದಿರುವ ಜಾಗಗಳಿಗೆ ಭೇಟಿಯಿತ್ತಿಲ್ಲ. ನೀವು ಹೇಳಿದ ಹಾಗೆ, ವಿದೇಶಗಳನ್ನು ನೋಡುವ ಹುಚ್ಚಿನಲ್ಲಿ, ಸ್ವದೇಶವನ್ನು ನೋಡುವುದನ್ನು ಮು೦ದಕ್ಕೆ ಹಾಕುತ್ತೇವೆ. ನಿಮಗೆ ಭಾಷೆಯ ಮೇಲೆ ಒಳ್ಳೆ ಹಿಡಿತವಿದೆ. ನಿಮ್ಮ ಬರಹ ಚೆನ್ನಾಗಿ ಮೂಡಿಬ೦ದಿದ್ದು ಒದುಗರನ್ನು ಪ್ರೇರೆಪಿಸುತ್ತದೆ.
    ಅನಿವಾಸಿಗೆ ಸ್ವಾಗತ.

    Like

    • ನಿಮ್ಮ ಪ್ರವಾಸಾನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಆರ್ಪಿತಾ. ಕೇರಳ ನೋಡಬೇಕೆನ್ನುವ ತವಕವನ್ನು ಹೆಚ್ಚಿಸಿದ್ದೀರಿ ನಿಮ್ಮ ಕಣ್ಕಟ್ಟುವ ಬರಹದಿಂದ. ನಾನು ಗೆಳೆಯರೊಡನೆ ಅದಿರಂಪಲ್ಲಿ ಜಲಪಾತ ನೋಡಿ ಬಂದ ನೆನಪು ಮರುಕಳಿಸಿತು. – ರಾಂ

      Like

    • Thank you very much 🤗…Yes we are all busy travelling world tour and don’t even know how beautiful our own country. Kerala is really beautiful please visit whenever possible , you won’t be disappointed .

      Like

  2. ತುಂಬಾ ಚೆನ್ನಾಗಿ ಕೇರಳವನ್ನ ವಿವರಿಸಿದ್ದೀರ ಅರ್ಪಿತ ಅವರೆ. ಓದಿ ಖುಶಿ ಆಯಿತು.
    ಆನಂದ್ ಕೇಶವಮೂರ್ತಿ

    Like

  3. ಅರ್ಪಿತಾ ಅವರೆ, ನಿಮ್ಮ ಪ್ರವಾಸ ಕಥನ ಸುಂದರವಾಗಿದೆ, ಕಣ್ಣಿಗೆ ಕಟ್ತುವಂತೆ ವರ್ಣಿಸಿದ್ದೀರಿ. ನಿಮಗೆ ಈ ಕಲೆ ಕರಗತವಾಗಿದೆಯೆನ್ನುವದು ನಾನು ಓದಿದ ನಿಮ್ಮ ಹಿಂದಿನ ಲೇಖನಗಳಲ್ಲೂ ಕಂಡಿದ್ದೆ. ಸರಿಯಾದ ಕ್ರಿಸ್ಮಸ್ ಸಮದಲ್ಲಿ ಹೋಗಿ ಕಂಗೊಳಿಸುವ ಕೇರಳವನ್ನು ನೋಡಿದ್ದನ್ನು ಓದಿ ನನ್ನ ಬಕೆಟ್ ಲಿಸ್ಟ್ ನಲ್ಲಿಅದನ್ನು ಇನ್ನೂ ಮೇಲಕ್ಕೆ ತಳ್ಳಿದ್ದೇನೆ. ಹಿಂದೊಮ್ಮೆ ಮುನ್ನಾರ್ ಗಷ್ಟೇ ಹೋಗಿದ್ದೆ. ಆ ಸೂರ್ಯೋದಯವನ್ನು ನೆನೆದರೆ ಇನ್ನೂರೋಮಾಂಚನವಾಗುತ್ತದೆ. ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ ಅಂತ ನೀವಲ್ಲದೆ ನಾನೂ, ಓದುಗರೂ ಎದುರು ನೋಡುವದರಲ್ಲಿ ಸಂಶಯವಿಲ್ಲ!.ಇನ್ನಷ್ಟು ಡಿಟೇಲಾಗಿ ಬರೆಯಿರಿ! ನಿಮ್ಮ ಲೇಖನ ಓದಿ ಕೋಚಿನ್ ದ ಹೆಸರಿನ ವ್ಯುತ್ಪತ್ತಿಯ ಬಗ್ಗೆ ಕುತೂಹಲವುಂಟಾಯಿತು. ನಾನು ಓದಿದ ಪ್ರಕಾರ ಇನ್ನೂ ಮೂರು ನಾಲ್ಕು ಬೇರೆ ಬೇರೆ ಕಾರಣಗಳನ್ನೂ ಹೇಳುವದನ್ನು ಅರಿತೆ. ಯಾವ ಹೆಸರಾದರೇನು, ಊರು, ದೇಶ ಚಂದವಿರುವಾಗ. ನಿರ್ಮಿಸಿದ ಆ ದೇವ ಒಬ್ಬನೇ ಅಲ್ಲವೆ? ಅಭಿನಂದನೆಗಳು. ಶ್ರೀವತ್ಸ.

    Like

  4. ಅರ್ಪಿತ ರಾವ್ ಬರೆದಿರುವ ಈ ಕೇರಳದ ಕಥಾನಕ ಕಣ್ಣು ಕಟ್ಟುವಂತಿದೆ. ನಾನು ಈಗಾಗಲೇ ನೋಡಿರುವ ಈ ಪ್ರದೇಶಗಳನ್ನು ಇನ್ನೊಮ್ಮೆ ನೋಡಿ ಬಂದಂತಾಯಿತು. ಇನ್ನೂ ಹೆಚ್ಚಿನ ಫೋಟೋಗಳನ್ನು ಹಾಕಬಹುದಿತ್ತು. ಕೇಶವ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.